ಅನ್ನಿಸುವುದು. ಚೌಕಟ್ಟಿನೊಳಗೆ ಬಾಳುವುದನ್ನು ಒಲ್ಲೆ ಎಂದು ಹೊರಬಂದ ಅಕ್ಕ ಮಹಾದೇವಿಯ ಹುಡುಕಾಟದ ಪಯಣ, ಸಮುದಾಯದ ಬೆಂಕಿಯೊಳಗಿಂದ ಎದ್ದು ಬಂದು ಎಲ್ಲವನ್ನು ಕವಿತೆಯ ಮೂಲಕ ಬಸಿದುಕೊಡುತ್ತಿರುವ ಪಯಣವು ಅಭೇದವಾದದ್ದು ಕವಿಗೆ. ಒಳಹೊರಗಿನ ಸೀಮೆಯಿಲ್ಲದೆ ಅನುಭವ ತೊಡಿಸಿದ್ದೆಲ್ಲವನ್ನು ಕಳಚಿಡುವ ಅಗ್ನಿದಿವ್ಯದ ಈ ಹಾದಿಯಲ್ಲಿ:

ಭಯವ ತರುವುದಿದೆ
ಬಸಿರ ಕಿವುಚದಿರು
ಹೊಸತು ಬರುವುದಿದೆ ಭೂಮಿಗೆ (ಸಮಾಧಿ ಗೀತೆ)

ಎಂಬ ನಂಬುಗೆಯ ಆಳದಲ್ಲಿ ಸಮುದಾಯವೊಂದು ಸ್ವಾತಂತ್ರ್ಯವಾಗಲು ಸಜ್ಜಾಗುತ್ತಿರುವುದನ್ನು ಕಂಡುಕೊಳ್ಳಬಹುದು.

ಮುಸ್ಲಿಂ ಸಂವೇದನೆಯ ಮೂಲಕ ಮನುಷ್ಯನ ಕೇಡನ್ನು ಕುರಿತು ಮಾತನಾಡುತ್ತಿರುವ ಕವಿ ಆರಿಫ್ ರಾಜಾ. ‘ಜಂಗಮ ಫಕೀರನ ಜೋಳಿಗೆ’ (೨೦೦೯) ಇವರ ಪ್ರಕಟಿತ ಕವನ ಸಂಕಲನವಾಗಿದೆ. ಕಳೆದ ಶತಮಾನದ ಕಡೆಯ ಭಾಗದಲ್ಲಿ ಧಾರ್ಮಿಕ ಕೇಂದ್ರಗಳ ರಾಜಕೀಯ ಹಿತಾಸಕ್ತಿಯು ಹಲವು ಸಮುದಾಯದ ಅಸಂಖ್ಯಾತ ಜನರ ಪ್ರಾಣವನ್ನು ಬಲಿತೆಗೆದುಕೊಂಡಿತು. ಈ ಕಹಿ ನೆನಪು ಕವಿಯಿಂದ ನುಡಿಸುತ್ತಿರುವುದು :

ಮಸೀದಿ ಮಂದಿರ ಕೆಡವಿ ತಾಜ್ಮಹಲು ಕಟ್ಟಬೇಕಾಗಿದೆ
ವಸಂತನನು ಕರೆತರಲು ಕಲಿಗಾಲದಲಿ
ಮಲ್ಲಿಗೆತೋಟ ಬೆಳೆಸಬೇಕಾಗಿದೆ
ಮಲಗಿದಮಸಣ ಹುಚ್ಚೆದ್ದು ಕುಣಿಯುತ್ತದೆ
ಹೊಸಹಾಡು ಹಾಡಬೇಕಾಗಿದೆ (ಜಂಗಮ ಫಕೀರನ ಜೋಳಿಗೆ)

ಧರ್ಮದ ಅಫೀಮು ತಿನ್ನುತ್ತಿರುವವರು ಕೇವಲ ನಿರ್ಜೀವವಾದ ಸಂಕೇತಗಳಿಗಾಗಿ ಬಡಿದಾಡುತ್ತಿರುವುದನ್ನು ನೋಡಿರುವ ಕವಿಗೆ ಪ್ರೀತಿಗೆ ಅನ್ವರ್ಥವಾಗಿರುವ ತಾಜ್‍ಮಹಲ್ ಕಟ್ಟುವ ಹಂಬಲ ಆದರೆ ವರ್ತಮಾನದಲ್ಲಿ ಕವಿ ಎದುರಿಸುತ್ತಿರುವ ಕಷ್ಟವಿದು.

ನಮಗೆ ಮನೆ ಕೊಡುವುದಿಲ್ಲವಂತೆ
ನಗರದಲ್ಲಿ ನಮಗೆ ಬಾಡಿಗೆ ಮನೆ ಸಿಗುವುದಿಲ್ಲವಂತೆ
ಏಕೆಂದರೆ ನಾವು
ಗಡ್ಡಬಿಟ್ಟಿರುತ್ತೇವೆ, ದನದ ಮಾಂಸ ತಿನ್ನುತ್ತಿರುತ್ತೇವೆ
ಕರ್ಪ್ಯೂ ಹೇರಿದಂತಿರುವ ತುರ್ತುಪರಿಸ್ಥಿತಿಯ ನಡಾವಳಿಗಳು ನಮ್ಮನ್ನು ಅನುಮಾನದಿಂದಾ ಕಾಡುತ್ತದೆ
ಕ್ರೀಡೆಗಳಲ್ಲಿ ಸೇನೆಗಳಲ್ಲಿ ಸೌಹರ್ದಸಂಬಂಧಗಳಲ್ಲಿ
(ನಮಗೆ ಮನೆ ಕೊಡುವುದಿಲ್ಲವೆಂತೆ)

ಈ ಇಕ್ಕಟ್ಟಿನ ಮಧ್ಯೆಯೂ ಕೇಳಿಕೊಳ್ಳುತ್ತಿರುವ ಪ್ರಶ್ನೆ :

ಹೇಳು
ನದಿಯೇ ಹರಿಯದ ದೇಶದಲಿ
ದ್ರಾಕ್ಷಾರಸ ಅರಸುವುದು ಎಷ್ಟು ನ್ಯಾಯ? (ಚರಿತ್ರೆಯ ಮಹಾಕುಡುಕರು ನಾವು)

ಇಂತ ಪ್ರಶ್ನೆಯೇ ವಿಷಾದದಲ್ಲಿ ರೂಪಾಂತರವಾಗಿರುವುದು:

ಮಣ್ಣಿನಗೊಂಬೆ ಮಾಡಿ ಜೀವ ಊದಿದವನೇ ಶರಣು ಎನ್ನುವೆ
ಪಾಪದ ಮನೆಯ ಸಿಂಹಾಸನ ಉರಿಯುತಿದೆ ನೀತಿ ಇಲ್ಲದೆ
ನಾಕು ಹನಿ ಕಣ್ಣೀರಾದರೂ ಸುರಿಸು
ನರಕದ ಬೆಂಕಿ ಆರಿಹೋಗಲಿ (ಕರ್ಬಲಾ ಕುಣಿತ)

ಎಂದು ಪ್ರಾರ್ಥಿಸುತ್ತಿರುವ ಕವಿ ಅರಸುತ್ತಿರುವುದು ತಾಯ್ತನವನ್ನು; ಇವೆಲ್ಲವನ್ನೂ ಸರಿದಾರಿಗೆ ತರಲು, ಪೊರೆಯಲು ಹೆಂಗರುಳಿನ ಅಗತ್ಯತೆಯನ್ನು ಒತ್ತಿ ಹೇಳುವ ಕವಿ ಅದನ್ನು ತನ್ನ ಕೌಟುಂಬಿಕ ನೆಲೆಯಲ್ಲಿ ನಿಂತು ಹೊಲಿಗೆಯಂತ್ರದ ಹೋಲಿಕೆಯೊಂದಿಗೆ ಕಟ್ಟಿಕೊಡುತ್ತಿರುವುದು :

ರೊಟ್ಟಿ ಪಾಲು ಮಾಡಿದಂತೆ ಬಟ್ಟೆ ಗಡಿಕೊರೆದು
ಕತ್ತರಿಸುವ ಅಮ್ಮಿ ತುಂಡು ತುಂಡು ಸೇರಿಸಿ
ಹೊಲಿದು ಒಂದು ಮಾಡುತ್ತಾಳೆ
ಒಂದು ಕೈಯಲ್ಲಿ ಕತ್ತರಿ :
ಮುಖವಾಡ ಒಡೆದು ಬಯಲಾಗಲು
ಮತ್ತೊಂದು ಕೈಯಲ್ಲಿ ಸೂಜಿ :
ಲೋಕದ ಮಾನ ಕಾಪಾಡಲು
ಚಂದಿಮನಸುಗಳ ಜೋಡಿಸಲು ಸೂಜಿ ಇದೆ
ಗೋಲವಿಶ್ವ ದಾರಿ ಸಾಗಲು ರಾಟೆ ಇದೆ
ಲೋಕವಿಕಾರಗಳನು ಕಡಿದು ಹಾಕಲೆಂದೇ
ಕೈಯಲ್ಲಿ ಕತ್ತರಿ (ಹೊಲಿಕೆಯಂತ್ರದ ಅಮ್ಮಿಯ ಕವಿತೆಗಳು)

ಒಟ್ಟುಗೂಡಿಸುವ ಸೂಜಿಯೂ ವಿಕಾರಗಳನ್ನು ಕತ್ತರಿಸಿಹಾಕುವ ಕತ್ತರಿಯ ಗುಣವನ್ನೂ ಅಳವಡಿಸಿಕೊಳ್ಳಬೇಕಿದೆ ನಾವು.

. ಆಧುನಿಕ ಜೀವಲಯದ ನಿರೂಪವಾಗಿ ಕಾವ್ಯ

ವರ್ತಮಾನ ಯಾವಾಗಲೂ ಭೂತಕಾಲದ ಫಲಿತವಾಗಿ ಅಂಗೈಯಲ್ಲಿ ಇರುತ್ತದೆಯಾದರಿಂದ ಆಧುನಿಕ ಜೀವನವನ್ನು ಅದರೆಲ್ಲಾ ಪರಿಣಾಮವನ್ನು ಅನುಭವದಲ್ಲಿ, ದೈನಿಕದ ವಿವರಗಳಲ್ಲಿ ಕಾಲಸೂಚಕ ವಾಚನೆಗಳಲ್ಲಿ ಕಂಡುಕೊಳ್ಳುತ್ತಿರುವ ಪ್ರಯತ್ನ ಹೊಸ ಶತಮಾನದ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಮುಖ್ಯವಾಗಿ ಈ ದಶಕ ಹಲವು ರೂಪಗಳಲ್ಲಿ ಹಿಂಸೆಯನ್ನು ಅನುಭವಿಸಿರುವುದರಿಂದ ಇದರ ಕುರಿತು ಹೆಚ್ಚಾಗಿ ಮಾತನಾಡುವ ಕವಿಗಳು ಸಹಜವಾಗಿಯೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪ್ರಕ್ರಿಯೆಯನ್ನು ಗಮನಿಸಿದರೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಹೇಳಿದ್ದ ಮಾತು ನೆನಪಿಗೆ ಬರುತ್ತದೆ.

ಶತಮಾನದ ಬಹುಪಾಲನ್ನು ಕಾಡಿದ ರಾಜಕೀಯ
ಮೂಲಭೂತವಾದದ ಯುಗವೇನೋ ಕೊನೆಯಾಗುತ್ತಿದೆ
ಆದರೆ, ಅವರ ಜಾಗವನ್ನು ಧಾರ್ಮಿಕ ಮೂಲಭೂತವಾದ
ಆಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ
(ಮಹಾಪಲಾಯನ; ಹಾವಾನುವಾದ, ಲೇಖಕನ ಮಾತು)

ಇದು ನಿಜವಾಗುತ್ತಿದೆಯೇನೊ ಅನ್ನಿಸುವಂತೆ ಗುಜರಾತ, ಮೈಸೂರಿನ ಕ್ಯಾತಮಾರನ ಹಳ್ಳಿ, ಹಿನಕಲ್ ಈ ಉತ್ತರ ಕರ್ನಾಟಕದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ, ಹಳ್ಳೀಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಮುಕ್ಕಾಗಿಸುವ ಮೂಲಕ ಮನಸು ಮುರಿಯುವ ಪ್ರಕರಣಗಳಾಗುತ್ತಿವೆ. ಸಂದರ್ಭ ಹೀಗಿರುವಾಗ ಹೃದಯದ ಬಿಂಬವೂ ಆಗಿರುವ ಕಾವ್ಯ ‘ಇಂತಹ ಅನೇಕ ಪ್ರಕರಣ’ಗಳನ್ನು ಒಳಗೊಳ್ಳುತ್ತಾ ಮಾತನಾಡುತ್ತಿರುವುದು. ಈ ಸಾಲಿನಲ್ಲಿ ಕವಿ ವಸಂತ ಬನ್ನಾಡಿ ಇದ್ದಾರೆ. ‘ಕಡಲಧ್ಯಾನ’ (೨೦೦೨), ‘ನೀಲಿ ಹೂ’ (೨೦೦೩), ‘ನಿಜದ ನೆಲೆ’ (೨೦೦೪), ‘ಮೀನಿನ ಹೊಳಪನ್ನು ನೀರಿಗೇ ಬಿಟ್ಟು’ (೨೦೦೮) ಇವರ ಪ್ರಕಟಿತ ಕವನ ಸಂಕಲನಗಳು.

ಎಲ್ಲಿರುವಿ ನೀನು?
ಎಚ್ಚರವೋ
ಅರೆ ನಿದ್ದೆಯೋ (ಕವಲೊಡೆದ ದಾರಿ)

ಹೀಗೆ ತನ್ನ ಎದುರಿಗಿರುವ ವ್ಯಕ್ತಿ ಅಥವಾ ಸಹೃದಯನನ್ನು ಅಲ್ಲಾಡಿಸಿ ಕೇಳುವ ಇಚ್ಛೆ ಕವಿಗೆ. ಮೊದಲು ಇದನ್ನೇ ಖಾತ್ರಿಪಡಿಸುತ್ತಿರುವುದಕ್ಕೆ ಕಾರಣ :

ಸಿನಿಮಾ ನೋಡುವಾಗ
ಈಗಷ್ಟೇ ಚಲಿಸಿದ
ಚಿತ್ರಿಕೆಯ ನೆನಪೆ
ನೋಡುವವರಿಗೆ ಇರುವುದಿಲ್ಲ
ಆದುದರಿಂದ ಅವರು
ಸಿನಿಮಾ ನೋಡುತ್ತಾರೆ (ಎಲ್ಲವೂ ಚಲಿಸುತ್ತಿದೆ)

ಬದುಕಾಗಲಿ ಸಮಕಾಲೀನ ಸಂದಿಗ್ಧತೆಗಳನ್ನಾಗಲಿ ಸಿನಿಮಾ ನೋಡುವಂತೆ ನೋಡಿ ಸುಮ್ಮನಿರುವುದಕ್ಕಾಗಲಿ ಅಥವಾ ಮರೆತು ಮುಂದಕ್ಕೆ ಹೋಗುವುದಾಗಲಿ ಮನುಷ್ಯರಾದವರಿಗೆ ಆಗದು. ಆದರೆ ಎಲ್ಲವನ್ನೂ ಸಿನಿಮಾದಂತೆ ಭಾವಿಸುತ್ತಿರುವ ಜನಸಮುದಾಯವೊಂದು ತಲೆ ಎನ್ನುತ್ತಿದೆ ಅಂತವರ ನಮೂನೆ :

ಬದಲಾಗಿದೆ ಎಲ್ಲ
ನೆಲ ಹವೆ ಗಾಳಿ ಕಣ್ಣಿನ ಕಾತರ
ಇಸ್ತ್ರಿ ಮಾಡಿದಂತೆ ವಿವೇಚನೆ (ಉರಿವ ನಾಲಗೆಯಾಗಿ ಕಾಡಿದರೂ)

ಈ ವಿವೇಚನೆಗೆ ಉದಾಹರಣೆಯಂತಿದೆ ಕವಿ ಕೊಡುತ್ತಿರುವ ಚಿತ್ರ :

ಖೇದ ತುಂಬಿ ನೋಡುತ್ತೇನೆ
ನಿನ್ನೆ
ನನ್ನ ನಾಟಕದಲ್ಲಿ
ದೇವಸ್ಥಾನ ಯಾರೇ ಕೆಡವಿದರೂ ತಪ್ಪು ಎಂದು
ನುಡಿವ ಬಸವಣ್ಣನ ಪಾತ್ರ ವಹಿಸಿದ ಗೆಳೆಯ
ಇಂದು
ಕೆಡವಲು ಕಚ್ಚೆಬಿಗಿದು ಹೊರಟವ ಗುಂಪಿನ
ಮುಂಚೂಣಿಯಲ್ಲಿ
ಕತ್ತಿ ಝಳಪಿಸಿ ರಣಕೇಕೆ ಹಾಕುತ್ತಿರುವುದ
(ಕೆಡವಲು ಹೊರಟವರು)

ದಯವೇ ಧರ್ಮದ ಮೂಲವೆಂದು ನಂಬಿದ್ದ ಬಸವಣ್ಣ ಈ ಕಾಲದ ಧರ್ಮಾಂಧತೆಗೆ ಪರ್ಯಾಯ ಆದರ್ಶವೂ ಆಗಿದ್ದಾನೆ. ಆದರೆ ಬಸವಣ್ಣನ ಪಾತ್ರವಹಿಸಿದ ನಟನಿಗೆ ಆ ಗುಣ ಕಿಂಚಿತ್ತೂ ಸೇರಿಕೊಳ್ಳದೆ ಹೋಗಿರುವುದು ಮತದ ಮರುಳುಗಳು ಹೆಚ್ಚುತ್ತಿರುವುದನ್ನೆ ಸೂಚಿಸುತ್ತಿದೆ. ಇಂಥದ್ದೆ ವೈಚಿತ್ರ್ಯ ಇನ್ನೊಂದರಲ್ಲಿದೆ :

ಪತ್ರಿಕೆಗಳಲ್ಲಿ
ಕೊಲ್ಲಲು ಸಂಜ್ಞೆ ನೀಡಿ
ಸುಮ್ಮನೆ ನೋಡುತ್ತಿರುವವರ
ಪೆಪ್ಪರಮಿಂಟು ಹೇಳಿಕೆಗಳಿದ್ದವು (ಕಡಲು ಮೊರೆಯುತ್ತಿದೆ)

ಈ ಎಲ್ಲವೂ ಮಹಾತ್ಮರ ಆದರ್ಶಗಳನ್ನು ಕಂಡ ಕನಸುಗಳನ್ನು ಭಗ್ನಗೊಳಿಸುತ್ತಿರುವುದನ್ನೆ ಸಾರುತ್ತಿದೆ. ಹೀಗಿದ್ದರೂ ಮಹಾತ್ಮರ ಭಾವಚಿತ್ರಗಳು ನಮ್ಮ ಕೈ ಅಳತೆಯಲ್ಲಿಯೇ ಸಿಗುತ್ತಿರುತ್ತವೆ. ಇವೆಲ್ಲಕ್ಕೂ ಸಾಕ್ಷಿರೂಪವಾಗಿರುವ ಮಹಾತ್ಮನ ಭಾವಚಿತ್ರವು ಕವಿಯಿಂದ ಹೀಗೆ ನುಡಿಸುತ್ತದೆ :

ತೂಗು ಬಿದ್ದಿದ್ದಾನೆ ಅವನು
ಗೋಡೆಯ ಮೇಳೆ
ಅದೆಷ್ಟೋ ವರ್ಷಗಳಿಂದ
ಚಿನ್ನದ ಕಟ್ಟಿನ ಒಳಗೆ
ನೋಡುತ್ತೇನೆ :
ಸ್ನಾಯುಗಳ ಬಿಗಿದು ಬೀಣೆ
ನಗೆಯ ಅಂಟಿಸಿದಂತಿದೆ
ಒಳ್ಳೆಯವನಾಗುವುದು
ಎಷ್ಟು ಕಷ್ಟ ! (ಒಳ್ಳೆಯವನ ಮೊಗವಾಡ)

ರಾಜಕಾರಣ ಮತ್ತು ಧಾರ್ಮಿಕ ಕೇಂದ್ರಗಳು ರೂಪಿಸುವ ಮತೀಯ ಹಿಂಸೆಯಷ್ಟೇ ಆಧುನಿಕ ಜೀವನಶೈಲಿಯೂ ಒಂದು ಮಹಾಸಂಗ್ರಾಮದಂತೆ ಕಾಣಿಸುತ್ತಿದೆ. ಬದಲಾಗಿರುವ ಜೀವನ ಕ್ರಮದಲ್ಲಿ ನಗರವಾಸಿಗಳ ಆಯ್ಕೆ – ಆಸಕ್ತಿಗಳು ಬಣ್ಣಗಳಲ್ಲಿ ನಳನಳಿಸುತ್ತಿದೆ ಎನ್ನಲು ಅವಕಾಶವಿದೆಯಾದರೂ ನಗರದವರ ಆಳದಲ್ಲಿನ ಮಹಾತ್ವಾಕಾಂಕ್ಷೆ ಹಾಗೂ ಸ್ವಮಗ್ನತೆಯೇ ದೊಡ್ಡ ಮಾರುಕಟ್ಟೆಯಾಗಿ, ಸುಲಭಕ್ಕೆ ದೊರೆಯುವ ಸಾಮಾನುಗಳಾಗಿ ಹಲವು ಬಗೆಯ ರಿಯಾಯಿತಿಗಳನ್ನು ತೆರೆಯುವಂತೆ ಮಾಡಿದೆ. ಪಂಚೇಂದ್ರಿಯಗಳನ್ನು ಸದಾಕಾಲ ಕಾರ್ಯನಿರತವಾಗಿಡುವಲ್ಲಿ ಯಶಸ್ವಿಯಾಗಿರುವ ಬಂಡವಾಳಿಗರ ಕಂಪನಿ – ಸ್ಟಾಲುಗಳಲ್ಲಿ ಕೇವಲ ಪದಾರ್ಥವಾಗಿ ಕುಂತ ಮನುಷ್ಯನ ಅವಸ್ಥೆಯನ್ನು ಸಾಹಿತ್ಯದ ಇತರ ಪ್ರಕಾರಗಳಂತೆ ಕಾವ್ಯವೂ ಹಿಡಿದಿಡಲು ಪ್ರಯತ್ನಿಸುತ್ತಿದೆ. ಕವಿ ಚೀಮನಹಳ್ಳಿ ರಮೇಶಬಾಬುರವರ ‘ಪ್ರಶ್ನೆ ಮತ್ತು ದೇವರು’ (೨೦೦೭) ಕವನ ಸಂಕಲನ ಅಂತಹ ಒಂದು ಪ್ರಯತ್ನದ ಭಾಗವಾಗಿದೆ.

ಬುಡ್ಡಿ ದೀಪದ ಮಬ್ಬು ಬೆಳಕಿನಡಿ
ಪುಸ್ತಕ ಹಿಡಿದು ಅಕ್ಷರಕ್ಷರ ಕೂಡಿಸಿ
ನಾವು ಓದಿನಲ್ಲಿ ಮಗ್ನರಾದರೆ
ನಮ್ಮ ಹರಿದ ಅಂಗಿಗೆ ರೂಪ ಕೊಡಲು
ಸೂಜಿದಾರ ಹಿಡಿದು ಕೂರುತ್ತಾಳೆ ಅಜ್ಜಿ
ಬುಡ್ಡಿದೀಪ ಅವಳ ಒಕ್ಕಣ್ಣು
ಪ್ರೀತಿಯ ಬೆಳಕಿನಲ್ಲೇ ನಾವು ಬೆಳೆದದ್ದು (ಸಮಾಧಿ)

ಎಂದು ನೆನಪನ್ನು ದಾಟಿಸುತ್ತಿರುವ ಕವಿ ಹಾಗೆ ಬೆಳೆದು ನಗರಕ್ಕೆ ಬಂದ ಮೇಲೆ ಹಳ್ಳಿಯಲ್ಲಿ ಈಗ :

ಕೋಳಿ ಫಾರ್ಮ್ ಆದ ಕಣ
ಪ್ರಾಚ್ಯ ವಸ್ತು ಸಂಗ್ರಹಾಲಯ ಸೇರಿದ ರೋಣಗಲ್ಲು
ಈಗ ಎಲ್ಲವೂ ಇತಿಹಾಸ;
ಇವನ್ನೆಲ್ಲಾ ಅಪ್ಪ ಅಷ್ಟು ಬೇಗೆ ಹೇಗೆ ಮರೆತ!?
ಅಮ್ಮ ಬುತ್ತಿ ಎತ್ತಿಕೊಂಡು ಹೋಗುವುದಿಲ್ಲ
ಅಪ್ಪನ ಮೈಯಲ್ಲಿ ಎಂದೂ ಬೆವರು ಮೂಡುವುದಿಲ್ಲ
ಪ್ರತಿದಿನವೂ ಸ್ನಾನ ಮಾಡುತ್ತಾನೆ;
ಫಳ ಫಳ ಹೊಳೆವೆ ಬಟ್ಟೆ ಧರಿಸಿ
ಸ್ಕೂಟರನ್ನೇರಿ ಪೇಟೆಗೆ ಹೊರಡುತ್ತಾನೆ (ಒಂದು ನೆನಪಿನ ಮಾರುದ್ದ ಸಾಲು)

ಇದು ಆಧುನಿಕತೆಯ ಗಾಳಿ ಹಳ್ಳಿಯವರೆಗೂ ಹೋಗಿ ತನ್ನದೆಯಾದ ಛಾಪನ್ನು ಮೂಡಿಸಿರುವುದಕ್ಕೆ ಪುರಾವೆ. ಬದಲಾದ ನಗರದಲ್ಲಿ ಇಲ್ಲಿ ಒಡೆಯರು ಬದಲಾದವರು:

ನಮ್ಮ ಬಾಸ್ ತಲೆ ಬಾಚುವುದಿಲ್ಲ
ಸದಾ ಕೆದರಿದ ಕೂದಲು ಮನಸಿನ ಪ್ರತೀಕವೆಂಬಂತೆ
ಅವರೊಂದು ಕಾವಿಗೆ ಕುಳಿತ ಕೋಳಿ;
ಆದರೂ ಅವರೊಂದು ಎರೆಹುಳ
ನಮ್ಮನ್ನೆ ಕೊರೆದು ನಮ್ಮನ್ನೆ ತಿಂದು ಗೊಬ್ಬರವನ್ನಾಗಿಸುತ್ತಾರೆ (ನಮ್ಮ ಬಾಸ್)

ಈ ರೀತಿಯಾದ ನಗರದೊಳಗಿನ ಅನೇಕ ವಿಕ್ಷಿಪ್ತ ಚಹರೆಗಳನ್ನು ಕವಿ ಮಲ್ಲಿಕಾರ್ಜುನಗೌಡ ತೂಲಹಳ್ಳೀ ಅವರ ‘ಶರೀಫನ ಬೊಗಸೆ’ (೨೦೦೬)ಯಲ್ಲಿಯೂ ಕಾಣಬಹುದಾಗಿದೆ.

ಅರೆ!
ಕನೆಕ್ಷನ್ನು ಕತ್ತರಿಸಿದರೂ
ಕರೆಂಟು ಬಂದೇಬಿಡ್ತು!
ಟೀವಿಯೂ ಆನಾಯ್ತು
ಎಫ್.ಟೀವಿ ಫ್ಯಾಶನ್ನು ಪಹರೆ
ಸ್ಟಾರ್ ಮೂವೀಸಲ್ಲೂ
ಕುಣಿಯುತ್ತಾಳೆ ಐಶ್ವರ್ಯ
ವಾಷಿಂಗ್ಟನ್ ಸುಟ್ಟರೇನು!
ತಾಲಿಬಾನ್ ಸತ್ತರೇನು!
ತಾಲ್ ಸೆ ತಾಲ್ ಮಿಲಾ (ತಾಲ್ ಸೆ ತಾಲ್ ಮಿಲಾ)

ಉನ್ಮತ್ತದಲ್ಲಿ ಮುಳುಗಿರುವ ಸಮೂಹವನ್ನು ಆಂಶಿಕ ವಿವರಗಳಲ್ಲಿ ಹೇಳುತ್ತಲಿರುವ ಕವಿಗೆ ಇಲ್ಲಿನ ಸಂಬಂಧಗಳ ಸ್ವರೂಪವೂ ಕಾಡುತ್ತದೆ ಬಹಳವಾಗಿ :

ಎಷ್ಟೇ ಗುಡಿಸಿದ್ದರೂ
ನಂಟಿನ ಅಂಟುಬಿಡದ ಸಗಣಿ
ಈಗ ಬಂಡೆಯ ಮೇಲೆ ಒಣಗಿ
ಮೈಯೆಲ್ಲ ಬರಲ ಗೀರುಗೀರು (ಗೀರುಗಳು)

ಕರಗಲಾರದ ಭಾವ ನಂಟನ್ನು ಬಿಡಿಸಿಕೊಂಡು ಒಣಗುತ್ತಿರುವ ಕ್ಷಣವನ್ನೇ ಕವಿ ಹೀಗೆ ದಾಖಲು ಮಾಡುವರು. ಸನಿಹಕ್ಕೆ ಬಂದಾಗಲೇ ದೂರಾಗುವ, ದೂರ ಉಳಿದರೆ ಹತ್ತಿರಕ್ಕೆ ಚಡಪಡಿಸುವುದು ಇಲ್ಲಿನ ನಿಯಮವೆ? ಅಥವಾ ಶಾಪವೆ? ಡೈವೋರ್ಸ್ ಕೇಸುಗಳು ಏಕೆ ಹೆಚ್ಚುತ್ತಲೇ ಹೋಗುತ್ತಿದೆ? ಇದರ ತೊಡಕನ್ನು ಕಾಣಿಸುತ್ತಿರುವುದು :

ಬೆವರೊಡೆದು ಕಂಪಿಸುವ ಬೆರಳು
ಕಣ್ಣೆದುರಿಗೇ ದೂರ ನಿಂತಿದ್ದಾಳೆ ಅವಳು
ಹಗಲೂ ರಾತ್ರಿ ಬಿಡದೆ ನೋಡಿ
ಆಕಾಶ
ಒಂದೂ ಮೋಡಗಳು ಕೂಡುವುದೇ ಇಲ್ಲ
(ಒಂದು ಮೋಡಗಳು ಕೂಡುವುದೇ ಇಲ್ಲ)

ವಿಭಜನೆಯ ನೆರಳು ಆಧುನಿಕ ಜೀವನದಲ್ಲಿ ದಿನ ಕಳೆದಂತೆಲ್ಲಾ ಉದ್ದವಾಗುತ್ತಲೇ ಹೋಗುತ್ತಿದೆ. ಹೆಚ್ಚು ಸೂಕ್ಷ್ಮವಾದಂತೆಲ್ಲಾ ಮನುಷ್ಯ ಸಂಬಂಧಗಳು ನಾಜೂಕಾಗುತ್ತಿದೆಯೆ? ಇರಬಹುದು :

ಸಾಸಿವೆಗೆ ಸಿಡಿಯುವುದೆ ಸುಖ
ಸಿಡಿಯುವುದೆಂದರೆ ಸಾವು
ನೆಲದೊಳಗಿದ್ದು ನೆಲವನರಿಯದ
ಮನೆಯೊಳಗಿದ್ದು ಹತ್ತಿರವಿರದ
ಒಡೆದ ಕನ್ನಡಿಬಾಳ
ಕೂಡಿಸುವ ಗುಟ್ಟ ಹೇಳಿಕೊಡು (ನಿಯಮ)

ಇದು ಸಾಕಾರಗೊಳ್ಳಬೇಕಾದರೆ ಗಂಡು – ಹೆಣ್ಣು ತಮ್ಮ ಸ್ವಯಾವೃತ್ತವನ್ನು ಕಳೆದುಕೊಂಡೇ ಅಥವಾ ಕೆಳಕ್ಕೆ ಬೀಳಿಸಿಯೇ ಸಾಗಬೇಕಾದ ಅನಿವಾರ್ಯವಿದೆ. ತರ್ಕವಿಲ್ಲದ ಹೃದಯಸಂಬಂಧಿಯಾದ ಹಾದಿ ಮಾತ್ರವೆ ಬಹುಶಃ ಈ ಸಹಚರ್ಯಕೆ ಬೆಳಕ ಹಾಯಿಸಬಲ್ಲುದು :

ಎರಡು ಒಂದಾಗಿ
ಭೂಮಧ್ಯದ ಬಿಂದಾಗಿ
ಕೊಳಲಿನುಲಿ ತುಂಬುವುದು ಎದೆಯ
ಎಲ್ಲ ಗಂಡಸುತನಕೆ ಸೊನ್ನೆ ಸುತ್ತಿ
ಅರಳಿ ನಿಲ್ಲುವುದು ಪುಷ್ಪಹೃದಯ (ಪುಷ್ಪಹೃದಯ)

ಮತ್ತೊರ್ವ ಕವಿ ಎಚ್.ಆರ್. ರಮೇಶ್ ಅವರ ಕವಿತೆಗಳು ನಗರದ ವೇಗವನ್ನು ಇಲ್ಲಿನ ಬಾಳಾಟವನ್ನು ವಿಡಂಬನೆಯ ಮೊನಚಿನಲ್ಲಿ ಬಿಂಬಿಸುತ್ತವೆ. ‘ಎಡವಟ್ಟು ಬದುಕಿನ ಲಯಗಳು’ (೨೦೦೫), ‘ಸಾಸಿವೆ ಹೂವ ಚರಿತ’ (೨೦೦೯) ಇವರ ಪ್ರಕಟಿತ ಕವನ ಸಂಕಲನಗಳು.

ನ್ಯೂಟನ್ನನ ಕಾಲದಲ್ಲಿ
ತಲೆ ಮೇಲೆ ಬೀಳುತ್ತಿದ್ದವು ಸೇಬು
ಸೇಬಿಗೂ ಭೂಮಿಗೂ
ಕರುಳ ಬಳ್ಳಿಯ ಅನುಬಂಧ
ಕಾಲದಲ್ಲಿ
ಸೇಬು ಸೇಬಲ್ಲ ಭೂಮಿ ಭೂಮಿಯಲ್ಲ
ಕರುಳಿಗೂ ಪ್ಲಾಸ್ಟಿಕ್ ಸರ್ಜರಿ (ಪೊಯಟ್ರಿ ಗ್ಯಾರೇಜು)

ಜೀವದ ಜೊತೆಗೆ ಜೀವನ ಮೌಲ್ಯಗಳ ಕುಸಿತವನ್ನು ಸಂವೇದನೆಯ ಎತ್ತರದಲ್ಲಿ ಅಥವಾ ಸ್ಪರ್ಶದಲಿ ಕಾಣಬಯಸುತ್ತಿರುವ ಕವಿಗೆ ಇಲ್ಲಿನ ವಿಷಾದ ಮತ್ತು ಬೆರಗನ್ನು ಒಂದೇ ಬಿಂದುವಿನಲ್ಲಿ ಕೂಡಿಸಿ ನೋಡಲು ಸಾಧ್ಯವಾಗಿದೆ:

ಜನರಲ್ ವಾರ್ಡಿನ
P.W.D ರಸ್ತೆಯಂತಿರುವ ಹಾಸಿಗೆ
ಮೇಲೆ
ಅಮ್ಮನ ನರತಂತುಗಳು
ಇಂಜಕ್ಷನ್ನಿನ ಹನಿಗಳಲಿ
ಜೀವಕೆ ಚಡಪಡಿಸುವಾಗ
ಚುಕ್ಕಿಗಳು
ನಗುತ್ತಿವೆ ನಗುತ್ತಲೇ ಇವೆ (ಜೀವದ ಸಾವಿನ ಮ್ಯೂಸಿಕಲ್ ಕನ್ಸರ್ಟೂ)

ಕವಿ ತೋರುತ್ತಿರುವ ಇನ್ನೊಂದು ಚಿತ್ರದಲ್ಲಿ ಸಂಕೇತಗಳು ಕೊಲಾಜ್‍ನಲ್ಲಿದ್ದು ಒಂದು ರೂಪಕವಾಗಿ ಬೆಳೆಯುವ ಶಕ್ತಿಯನ್ನು ಪ್ರಕಟಿಸುತ್ತದೆ:

ಬಿದಿರ ಹೂವಿಗೆ ಬೆದರಿ ಹಳ್ಳಿ ಹಳ್ಳಿಯೇ ಗುಳೆ
ಪಾರ್ಲಿಮೆಂಟಿನಲಿ ಮಹಾಕಾವ್ಯ
ಸಿನಿಮಾ ಮಾಡಿದರೆ ಸ್ವರ್ಣಕಮಲ!
ಅಪ್ಪನ ಮಣ್ಣ ಮಾಡಿದ ಮಣ್ಣಲ್ಲಿ ಮಕ್ಕಳ ನಿರಾತಂಕ
ಆಟ
ಬಸವನ ಹುಳು ಬುಲ್ಡೋಜರ್ ಅಡಿಯಲ್ಲಿ
ಮೆಲ್ಲಮೆಲ್ಲನೆ ಸರಿಯುತ್ತಿದೆ (ಅವ್ಯವಸ್ಥಿತ ಕವನ)

ಇಂತ ‘ಸಿನಿಮಾ ಸವಾರಿ’ಗಳ ಅಂಗಳದಲ್ಲಿ ಭರವಸೆಯೊಂದು ಸ್ವಂತ ನೆಲೆಯಲ್ಲಿ ಈ ರೂಪದಲ್ಲಿದೆ:

ಎಂಜಲ ನೀರಿನಿಂದ ಬೆಳೆದ ಅಂಗಳದ
ಹೂವು
ದೇವಲೋಕದ ರೂಪಿಸುತಿದೆ (ಪದ್ಯವೊಂದಕ್ಕೆ ಸಿಕ್ಕಿದ ಸಾಲುಗಳು)

ನಗರ – ಗ್ರಾಮೀಣ, ದೇಶಿ – ಜಾಗತೀಕರಣ, ಇತಿಹಾಸ – ವರ್ತಮಾನ, ಹೀಗೆ ವಿಭಾಗಿಸಿಕೊಂಡು ಈ ಕಾಲವನ್ನು ಅರಿಯುವ ಕ್ರಮ ಇರುವಾಗಲೂ ಈ ಕಣ್ಕಟ್ಟುಗಳ ಆಚೆಗೂ ನಿಜವ ಕಾಣುವ ಹಂಬಲ ತೋರುತ್ತಿರುವ ಕವಿ ಅಂಕುರ್ ಬೆಟಗೇರಿ‘ಹಿಡಿದ ಉಸಿರು’ (೨೦೦೪), ‘ಇವರ ಹೆಸರು’ (೨೦೦೬) ಇವರ ಪ್ರಕಟಿತ ಕವನ ಸಂಕಲನಗಳು.

ನಾನು ಬಿಟ್ಟ ಉಸಿರು ಯಾರು
ತೆಗೆದುಕೊಳ್ಳುತ್ತಾರೋ, ನಾನು ಯಾರು ಬಿಟ್ಟ
ಉಸಿರು ತೆಗೆದುಕೊಂಡಿದ್ದೀನೋ
ಗೊತ್ತಿಲ್ಲ
ಉಸಿರಲ್ಲೇ ನಮ್ಮ ಜೀವದ ಬಣ್ಣವನ್ನು
ಎಲ್ಲೆಲ್ಲೂ ಚೆಲ್ಲಿಬಿಡುವ ನಾವು
ನೆಲದ ಮೇಲೆ ಗೆರೆ ಕೊರೆದುಕೊಂಡು
ನಮ್ಮ ಅಸ್ತಿತ್ವವನ್ನು ಅದರಲ್ಲಿ ಮುದುಡಿ ಮಡಚಿಟ್ಟು
ನಿದ್ದೆಗೆಟ್ಟು ಕಾವಲು ಕಾಯುವುದೇಕೆ? (ಹರಡು)