ಕವಿ ತಾನು ಜೀವಿಸುತ್ತಿರುವ ಕಾಲವು ಇಂತ ಪ್ರಶ್ನೆಯೊಂದನ್ನು ಕೇಳುಕೊಳ್ಳುವಂತೆ ಉದ್ದೀಪಿಸಿದೆ. ಭೂಮಿ – ರಾಜ್ಯ – ನೀರು ಎಲ್ಲವನ್ನು ಪಾಲುಮಾಡಿಕೊಳ್ಳುವ ಲೆಕ್ಕಾಚಾರ ಸುತ್ತಮುತ್ತ ಜಾರಿಯಲ್ಲಿದೆ. ಇದರೊಂದಿಗೆ ಜಾತಿ – ಧರ್ಮ – ಪ್ರತಿಷ್ಠೆ – ಗಂಡು – ಹೆಣ್ಣು ಇವುಗಳ ಅಹಂಭಾವದ ಗೆರೆಗಳು ಕೊರಡಾಗಿಸುತ್ತಿದೆ. ಇವು ಕವಿ ಕೇಳುತ್ತಿರುವ ಪ್ರಶ್ನೆಗೆ ಹಿನ್ನೆಲೆ ಒದಗಿಸುತ್ತಿದೆ. ಹಗುರವು ಮತ್ತು ಬೆರೆಯುವ ಗುಣವನ್ನು ಹೊಂದಿಯೂ ತನ್ನ ಕುರುಹನ್ನು ಬಿಟ್ಟುಕೊಡದ ಈ ಉಸಿರನ್ನು ಪ್ರತಿಮೆಯಾಗಿ ಸ್ವೀಕರಿಸಿಯೇ ಎಲ್ಲೆಗಳನ್ನು ಮೀರಬೇಕು ನಾವು. ಹರಡು ಉಸಿರಿನಂತೆ ಇಲ್ಲಿ ಚಲಿಸುತ್ತಿರುವ ಕಾಲವು ಇರುವುದನ್ನು :

ಬಣ್ಣ ಸುಲಿಯುತ್ತಿರುವ ನನ್ನ ರೂಮಿನ ಗೋಡೆಯೊಳಗೆ
ಕುಡಿಯುವ ನೀರಿನ ಪೈಪೊಂದು ಒಡೆದುಹೋಗಿದೆ
ಮಧ್ಯರಾತ್ರಿ ೩ರ ನಿಶ್ಯಬ್ದದಿಂದ ಅದು
ನನ್ನ ಕಿವಿಯೊಳಕ್ಕೆ ಜುಳು ಜುಳು ಎಂದು
ಹರಿಯಲು ಶುರುಮಾಡಿದಾಗ
ಒದ್ದೆಯಾದ ಗೋಡೆಯ ಮೇಲೆ ನನ್ನ ಕೈ ಇಡುತ್ತೇನೆ
ಗೋಡೆಯೊಳಗೆ ನೀರು ಹರಿಯುತ್ತಿರುವಂತೆ
ಕಾಲ ನನ್ನಲ್ಲಿ ಹರಿಯುತ್ತಿರುವುದು
ನನಗಾಗ ಕೇಳಿಸುತ್ತದೆ (ಮಧ್ಯರಾತ್ರಿ ೩)

ಹೀಗೆ ಒಳದನಿಗೆ ನಿಷ್ಠೆಯನ್ನು ತೋರಿರುವುದರಿಂದ ತನ್ನ ಕಾಲದ ಹರಿವನ್ನು ಅನುಭವದಲ್ಲಿ ಕಂಡುಕೊಳ್ಳಲು ಕವಿಗೆ ಸಾಧ್ಯವೂ ಆಗಿದೆ. ಈ ಅನುಭವದ ಆವರಣದಲ್ಲಿ ನಿಂತು ಬರೆಯುತ್ತಿರುವ ಕವಿ ನಾಗಣ್ಣ ಕಿಲಾರಿ. ‘ನಿಂತ ಮಳೆ ಹನಿ’ (೨೦೦೫) ಇವರ ಪ್ರಕಟಿತ ಕವನ ಸಂಕಲನ.

ಬೀದಿ ಬೀದಿಯಲಿ ನಿಂತ ದೀಪದ ಕಂಬ
ಇನ್ನು ಬೆಳಗುವ ಸಮಯ
ಪ್ರೇಮಿಗಳು ಭಿಕ್ಷುಕರು ದರ್ವೇಸಿಗಳು
ಮನುಷ್ಯರು ಇಲ್ಲದವರು ಇರುವವರ
ಕನಸಿದ ತೊಟ್ಟಿ ತೂಗುವ ಗಾಳಿಗೆ
ಜಾತ್ರೆಯಲಿ ಕಳೆದ ಬಾಲಕ
ಪ್ರಶ್ನಿಸಿದ್ದಾನೆ ಪೋಲಿಸರನ್ನು
ಸಂಜೆಯಾಗುವುದೆಂದಿಗೆ? (ಸಂಜೆಯಾಗುವುದೆಂದಿಗೆ)

ಇಂಥ ಸಂತೆಯ ನಡುವೆಯೆ ಇರುವ ಅಮಾಯಕ ಚಿತ್ರವನ್ನು ಕೊಡುತ್ತಿರುವ ಕವಿಗೆ ವಾಸ್ತವವೂ ಕಾಣಿಸುತ್ತಿದೆ:

ಮುಖ ತೊಳೆದು ಕನ್ನಡಿ ಎದುರು ನಿಂತಾಗ
ಬಿಚ್ಚಿಕೊಳ್ಳುತ್ತದೆ ರಾತ್ರಿ ಗಂಟು
ಪೌಡರ್ ಸ್ನೋ ಕೆನ್ನೆರೋಜು ಗಾಜುಗನ್ನಡಿ
ಎಲ್ಲೋ ಬಿದ್ದಿರುತ್ತದೆ ಜಡೆಯ
ಹೇರ್ ಪಿನ್ ಎಳೆದು ಬಿಸಾಕಿದ ಕೈ
ಬಾಚಣಿಗೆ ನಿಧಾನಕೆತ್ತಿ ನೀಳ ಜಡೆ ಬಾಚಿದಂತೆ
ಬಾಚಿಕೊಳ್ಳುವ ಬೆಳಗು
ಕಪ್ಪು ಕುರಿಗಳೆದ್ದು ಮೈ ನಡ್ಡರಿಸಿ ಕಾಲಾಕಿದಂತೆ ಎತ್ತಲೋ ದಾರಿ
ಬಿಚ್ಚಿಕೊಳ್ಳುತ್ತದೆ ಕನ್ನಡಿ ಎದುರು ಬದುಕು (ಬಿಚ್ಚಿಕೊಳ್ಳುವ ಬದುಕು)

ಬಿಚ್ಚಿಕೊಳ್ಳುವುದು – ಕಟ್ಟಿಕೊಳ್ಳುವುದು ಇಲ್ಲಿನ ನಿರಂತರ ಪಾಡಾಡರೂ ಬಾಡಿ ಹೋಗುತ್ತಿರುವ ಜೀವಗಳು ಇಲ್ಲಿದ್ದಾವೆ:

ರಂಗೋಲಿ ಬಿಡಿಸುತ್ತಿರುವ ಹುಡುಗಿ
ರಂಗೋಲಿಯ ರಂಗು
ಹಿಡಿಯರ ಪಾದದಡಿ ಕಳೆದು ಹೋಗುತ್ತಿದೆ (ರಂಗೋಲಿ)

ಇಂತಹ ಬದುಕಿಗಿರುವ ಹಲವು ಮುಖಗಳನ್ನು ಕವಿ ಸಂದೀಪ ನಾಯಕ ಅವರ ‘ಅಗಣಿತ ಚಹರೆ’ (೨೦೦೫) ಯಲ್ಲಿನ ಕವಿತೆಗಳು ಪರಿಚಯಿಸುತ್ತವೆ.

ಹಸ್ತದಷ್ಟು ಅಗಲ ಎಲೆ
ಗಾಳಿಗೆ ಹಾರಿ ಪುಸ್ತದ ಬದಿಗೆ
ಬಂದು ಕೂತಿದೆ
ಕೈಯಲ್ಲಿ ಎತ್ತಿಕೊ ಎನ್ನುವಂತೆ
ಗಾಳಿಗೆ ಮೆಲ್ಲಗೆ ಹರಿದಾಡುವ
ಪುರಾತನ ವೃಕ್ಷ ಪ್ರತಿನಿಧಿಯ
ಹೆಸರನ್ನು ಕಾರಣವೇ ಇರದ ಅವಸರದಲ್ಲಿ
ಸುಮ್ಮ ಮೆರೆತಿದ್ದೇವೆ (ಎಲೆಯ ವಿಳಾಸ)

ಆದ ಅನುಭವದಿಂದ ತಪ್ಪಿಸಿಕೊಂಡು ಬೇರೇನನ್ನೋ ಆಗಿಸಿಕೊಳ್ಳಲು ಒದ್ದಾಡುವ ಹುಲುಮಾನವರಿಗೆ ಎಲೆ ಅಲ್ಲಾಡುವುದು, ತರಗೆಲೆಯಾಗುವುದು, ಗಾಳಿಗೆ ಗಿರ್ರನೆ ತಿರುಗುವುದು ಹಾಗೆ ತಿರುಗಿದ್ದು ಯಾರದೋ ಜಡೆಯಲ್ಲೋ ಅಥವಾ ತಾರಸಿಯ ಮೇಲೆ ಸೇರಿಕೊಳ್ಳುವ ಬೆರಗನ್ನು ಕಾಣುವುದು, ಅನುಭವಿಸುವುದು ವರ್ಜ್ಯ. ಇರುವುದಷ್ಟನ್ನೆ ಕಾಣುತ್ತಾ ಎದೆತುಂಬಿಕೊಳ್ಳುವ ಕವಿಗೆ ಎಲೆಯೊಂದಿಗೂ ಮಧುರ ಸಂಪರ್ಕ ಏರ್ಪಡುತ್ತದೆ. ಕಣ್ಣಲ್ಲಿ ಯಾವುದೇ ಚಿತ್ರಗಳನ್ನು ತುಂಬಿಕೊಂಡು ಜೀವಿಸುವ ಕವಿಗೆ ಆಗತಾನೆ ಸುರಿವ ಮಳೆಯೂ ಹೊಸತಾಗುವುದು ಹೀಗೆ:

ತೇವದ ಗಾಳಿ ಮರದ ಎಲೆಗಳನ್ನು
ಹಸ್ತದಿಂದ ಆಡಿಸುವುದು
ಅದ ನೋಡುತ್ತ ನಾವು
ಆರಿದ ಚಹ ಕುಡಿಯುತ್ತಿದ್ದೆವು (ಇಲ್ಲದೆಯೂ)

ಯಾವುದು ಸಣ್ಣ ಸಂಗತಿಯಲ್ಲ ಎಂದು ಸಾಬೀತು ಮಾಡುತ್ತಿದ್ದರೂ ಬದುಕು ಇಷ್ಟು ಸಲೀಸೆ?

ಇಸ್ಪೀಟು ಎಲೆಗಳ ಮನೆಯನ್ನು
ಉರುಳಿಸಲು ಸಣ್ಣ
ಉಸಿರು ಸಾಕು
ಮಾತಿನ ಮನೆಯ ಕೆಡಿಸಲು
ಒಂದು ಮಾತು
ಎಲ್ಲ ಆದ ಮೇಲೆ ಅನ್ನಿಸುತ್ತದೆ
ತಪ್ಪಿಸಬಹುದಿತ್ತೆಂದು
ಮುಖಾಮುಖಿಯಲ್ಲಿನ
ಮುಜುಗರವನ್ನು (ಕುರುಹುಗಳು)

ತುಟಿ ಮೀರಿ ಹೊರ ಬಂದ ಮಾತಿಗೆ ಇರುವ ವಿಚಿತ್ರ ಶಕ್ತಿಯನ್ನು ಅದು ನಿರ್ಮಿಸುವ ಸೂತಕದ ವಾತಾವರಣವನ್ನು ಧ್ವನಿಪೂರ್ಣವಾಗಿ ಹೇಳುತ್ತಿರುವಕವಿ ಇಲ್ಲಿ ಕಂಡುಕೊಂಡ ಸತ್ಯವಿದು:

ಚಣದವರೆಗೆ
ಯಾವ ಸೈನಿಕನೂ ನೆತ್ತರಿಂದ ತೋಯಿಸದೇ
ಕತ್ತಿಯನು ಇಟ್ಟಿಲ್ಲ ಒರೆಗೆ
ಕಾಯದ ಪೂರ ಗಾಯಗಳಿರುವ
ಸಂತರು ಮಾತ್ರ ತನಕ
ಕೊಟ್ಟರು ಬೆಳಕ (ಮಾಯದ ಗಾಯಗಳ ಗುರುತ ಅರಸಿ)

ಇಂತ ಬೆಳಕೆ ಅಲ್ಲವೆ ಮನುಕುಲವನ್ನು ಕಾಪಿಟ್ಟಿದ್ದು ಅದೇ ಅಲ್ಲವೆ ಹೀಗೆ ಕವಿತೆಯ ರೂಪದಲ್ಲಿ ನಮ್ಮವರೆಗೂ ತಲುಪಿರುವುದು.

. ಸ್ತ್ರೀಸಂವೇದನೆಯ ಆಯಾಮವಾಗಿ ಕಾವ್ಯ

ಹೊಸ ಶತಮಾನದ ಈ ಆರಂಭದಲ್ಲಿ ಸ್ತ್ರೀ ಸಂವೇದನೆಯು ಮುಖ್ಯವಾಗಿ ಎರಡು ಧಾರೆಗಳಲ್ಲಿ ವ್ಯಕ್ತವಾಗುತ್ತದೆ.

೧. ತನ್ನ ಸ್ವಾತಂತ್ರ್ಯವನ್ನು ತಡೆಗಟ್ಟುತ್ತಿರುವ ಎಲ್ಲಾ ಶಕ್ತಿಗಳ ಕುರಿತು ಪ್ರತಿಕ್ರಿಯೆ – ಪ್ರತಿಭಟನೆ ರೂಪದಲ್ಲಿ ವ್ಯಕ್ತವಾಗಿತ್ತಿರುವುದು.

೨. ಸ್ವಂತಲೋಕದೊಳಗೆ ತನ್ನ ಸ್ವಾತಂತ್ರ್ಯವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ವ್ಯಕ್ತವಾಗುತ್ತಿರುವುದು.

ಈ ಎರಡು ಪ್ರಕ್ರಿಯೆಗಳು ಜಾಗೃತಿಗೊಂಡ ಸ್ತ್ರೀಯರ ಮನೋವಿಕಾಸದ ಪ್ರತೀಕವೇ ಆಗಿದೆ. ಇದು ಕಾವ್ಯದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಲಿದೆ ಎನ್ನುವುದನ್ನು ಅವಶ್ಯ ಗಮನಿಸಬೇಕು. ಕವಯತ್ರಿ ಕೆ.ಅಕ್ಷತಾ ಅವರ ‘ರೆಕ್ಕೆಬಿಚ್ಚಿ ಆಕಾಶನೆಚ್ಚಿ’ (೨೦೦೮) ಸಂಕಲನದ ಕವಿತೆಗಳು ಸದ್ಯದ ಸ್ತ್ರೀಕಾವ್ಯ ಮತ್ತಷ್ಟು ಗಮ್ಯಕ್ಕೆ ಹೋಗುತ್ತಿರುವುದನ್ನೆ ಸೂಚಿಸುತ್ತಿದೆ.

ಅಮ್ಮ ಆಸ್ಥೆಯಿಂದ ಮಾಡಿದ
ಉಪ್ಪಿಟ್ಟು ಕೇಸರಿಬಾತು
ತಿಂದು ಎಲ್ಲ ತೊಲಗಿದರು
ಮತ್ತೊಂದು ವಧು ಪರೀಕ್ಷೆಗೆ
ತಯಾರಾಗಿ ನಿಲ್ಲುವಂತೆ
ಅಪ್ಪ ಸೂಚನೆ ನೀಡಿದ್ದಾರೆ
ಪಾಲಿಸುತ್ತಿದ್ದೇನೆ (ಸೂಚನೆಯ ಪಾಲನೆ)

ಇಲ್ಲಿ ಅಪ್ಪ ಅಮ್ಮಂದಿರು ಅವರ ತಂದೆ ತಾಯಿಯ ಸೂಚನೆಯನ್ನು ಪಾಲಿಸಿಕೊಂಡು ಬೆಳೆದು ಬಂದವರಾದ್ದರಿಂದ ಈಗ ಮಗಳಿಗೂ ಅದೇ ಸೂಚನೆ ಪಾಲಿಸುವಂತೆ ನೋಡಿಕೊಳ್ಳುತ್ತಿರುವರು. ಆದರೆ ಈ ಹೊಸ ಕಾಲದ ಹುಡುಗಿ ಆಕೆಯ ದನಿಯನ್ನು ಅಡಗಿಸಿಡುವುದು ಅಷ್ಟು ಸುಲಭವೇನಲ್ಲ. ಆಕೆ ತನ್ನ ಅತ್ತೆಯಲ್ಲಿ ಸಲ್ಲಿಸುವ ಮನವಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ:

ನಿನ್ನಂತೆಯೇ ಎಲ್ಲ ಬಿಟ್ಟುಕೊಡಲಾರೆ
ಒಳಗೊಳಗೆ ಜಿಡ್ದುಗಟ್ಟಲಾರೆ
ರಾತ್ರಿ ನಕ್ಷತ್ರ ಎಣಿಸುತ್ತಾ
ಕಾದಂಬರಿ ಓದುತ್ತಾ
ಕವನ ಕಟ್ಟುವಷ್ಟು
ಚೇತನ ಉಳಿಸಿಕೊಳ್ಳಲು
ಮನೆಯೊಳಗಿದ್ದೆ ಸಾಧಿಸಲು
ಅತ್ತೆ ನನಗೆ ಅನುವು ಮಾಡಿಕೊಡು (ಅತ್ತೆಯಲ್ಲಿ ಮನವಿ)

ಇರುವ ಅವಕಾಶದೊಳಗೆ ಆದಷ್ಟೂ ಸ್ವಾತಂತ್ರ್ಯಗೊಳ್ಳಬೇಕೆಂಬ ಈ ಅಪೇಕ್ಷೆ ಕಟ್ಟುಬಿಚ್ಚಿಕೊಂಡು ಮುನ್ನಡೆಯುವುದಕ್ಕೆ ಎಂಬುದು ಇಲ್ಲಿ ಮುಖ್ಯ.

ಮನಸು ಬಿಚ್ಚಿದೆ ದೇಹ ಬಿಚ್ಚಿದೆ
ಅಂಜಿಕೆ ನಾಚಿಕೆ ಗಾಂಭೀರ್ಯಗಳನ್ನೆಲ್ಲ
ಒಮ್ಮೆಗೇ ಬಿಚ್ಚಿಟ್ಟೆ
ತ್ಯಾಗಿಯಂತೆ ಭೋಗಿಯಂತೆ ಲೋಭಿಯಂತೆ
ಕುಡುವಿಯಂತೆ ಎಲ್ಲವ ಹೀರಿದೆ
ಹಕ್ಕಿಯಾಗಿ ಕೀಟವಾಗಿ ಮರವಾಗಿ
ಬದುಕ ಸ್ಪರ್ಶಿಸುವುದ ಅರಿತೆ (ಕಟ್ಟು – ಬಿಚ್ಚು)

ಹೀಗೆ ತಾನು ಅರಿತ ಮೇಲೆ ಇತರ ಹೆಣ್ಣುಗಳು ಸ್ವಾತಂತ್ರ್ಯಗೊಳಿಸಲು ಕವಯತ್ರಿಯ ಕಿವಿಮಾತು:

ಮಗಳೆ ಸ್ಕೂಟಿ ಹಿಡಿದು ಹೊರಡು
ನಡೆವ ದಾರಿಯಲ್ಲಿ ತಿರುತಿರುಗಿ ಅತ್ತಿತ್ತ
ಕಣ್ಣಾಡಿಸುವುದ ಬಿಟ್ಟುಬಿಡು
ನಿನ್ನ ಜೊತೆ ಜೊತೆಗೆ ಕಾಲು ಹಾಕುತ್ತಿರುವ
ದನ ಕುರಿ ಕತ್ತೆಗಳ ನಡಿಗೆಯಲ್ಲಿನ
ಸಹಜತೆ ಸರಾಗತೆಗಳನ್ನು ವೀಕ್ಷಿಸು (ದಿನಚರಿಯಲ್ಲಿ ಸ್ವಲ್ಪ ಮಾರ್ಪಾಡು)

ಮತ್ತೋರ್ವ ಕವಯತ್ರಿ ಹೇಮಾ ವೆಂಕಟ್ ಹೆಣ್ಣಿನ ತುಮುಲಗಳನ್ನು ಬದುಕಿನ ಲಯದಲ್ಲಿ ಕಟ್ಟಿಕೊಡುತ್ತಿರುವರು. ‘ಹುಡುಕುವ ಆಟ’ (೨೦೦೮) ಇವರ ಪ್ರಕಟಿತ ಕವನ ಸಂಕಲನ.

ಅಕ್ಕಸಾಲಿಯ ಕೈಯಲ್ಲಿ
ಅಸ್ತ್ರವಾಗುವ ಅದಿರು
ಸೃಷ್ಟಿಯಾದದ್ದು ಮಣ್ಣಿನ ಕಣವಾಗಿ (ಬಯಕೆ)

ಹೆಣ್ಣು ಮತ್ತು ಆಕೆಯ ಬಯಕೆಗೆ ಅವಿನಾಭಾವ ಸಂಬಂಧವಿರುವುದನ್ನು ಕನ್ನಡ ಕಾವ್ಯ ನಿರೂಪಿಸುತ್ತಾ ಬಂದಿದೆಯಾದರೂ ಇಂಥ ಬಯಕೆಯ ನಮೂನೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿವೆ. ಆದರೆ ಬಯಕೆ ಎಂಬುದು ಉಳಿದಿದೆ ಇಂಥ ಬಯಕೆ ಕಣವಾಗಿ ಶುರುವಾಗಿ ಇಡಿಯಾಗಿ ಮನುಷ್ಯನನ್ನೆ ಆಕ್ರಮಿಸಿಕೊಳ್ಳುವಂತದ್ದು. ಆ ಒಂದು ಬಯಕೆ ಮೂರ್ತರೂಪ ಹೀಗಿದೆ:

ತರಕಾರಿ ಅಂಗಡಿಗೆ ಹೋಗಿ
ಚೆನ್ನಾಗಿರುವುದನ್ನೇ ಹೆಕ್ಕಿ
ತರಹೇವಾರಿ ತರಕಾರಿ
ಚೀಲ ತುಂಬಿ ಚೌಕಾಸಿ ಮಾಡಿ
ಹುಳಿ ಪಲ್ಯ ಗೊಜ್ಜು ಸಾರು
ನಾನಾ ಬಗೆ ನಾಲಿಗೆ ರುಚಿ
ಆಗೆಲ್ಲಾ ನೆನೆಯುತ್ತೇನೆ,
ಬದುಕಿನಲ್ಲೂ ಹೀಗೆ
ಬೇಕಾದಲ್ಲವನ್ನೂ
ಆಯ್ದು ಪಡೆಯುವಂತಿದ್ದರೆ
ಎಷ್ಟು ಚೆನ್ನಾ…..(ಎಷ್ಟು ಚೆನ್ನಾ)

ಇಂದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದನ್ನೆ ಈ ನೆಲದ ಮದುವೆಗಳು ಜಗದ ಅಪ್ಪ ಅಮ್ಮಂದಿರು ಸಾರುತ್ತಾ ಬಂದಿದ್ದಾರೆ. ಆದ್ದರಿಂದ ಇಲ್ಲಿನ ಪ್ರತಿ ಹೆಣ್ಣಿಗೂ ಅನ್ನಿಸುವುದು:

ನಾವು ಪೂರ್ತಿ ಬದಲಾಗುತ್ತೇವೆ
ಮೂರುಗಂಟಿನ ನಂಟಿಗೆ
ಜನ್ಮಜಾತಕದ ಹೆಸರನ್ನೂ
ಮೆಚ್ಚಿನ ಬದುಕು
ನೆಚ್ಚಿನ ತಿನಿಸು
ಎಲ್ಲವನ್ನೂ ಬಿಟ್ಟು
ಬೇರೆಯೇ ವ್ಯಕ್ತಿಗಳಾಗುತ್ತೇವೆ (ಎಲ್ಲ ಬಿಟ್ಟು)

ಒಂದು ದಡದಿಂದ ಇನ್ನೊಂದು ದಡಕ್ಕೆ ದಾಟುವ ಮದುವೆಯ ಪರಿಣಾಮವಿದು. ಇಲ್ಲಿಂದ ಶುರುವಾಗುವುದೆ ಮುಖವಾಡ ಧರಿಸಿಕೊಂಡು ಜೀವಿಸುವ ಆಟ? ಕವಿತೆಯೊಂದು ಹೌದು ಎಂದು ತಲೆಯಲ್ಲಾಡಿಸುತ್ತಿದೆ ಹೀಗೆ:

ಯಾರ ಕಣ್ಣಿನಲ್ಲಿ
ನಾನು ಹೇಗೆ
ಚಿತ್ರವಾಗಿದ್ದೆನೋ
ಅದು ಹಾಗೆ ಇರಲಿ ಬಿಡು
ಅದರ ಮೇಲೆ
ಮತ್ತೊಂದು ಚಿತ್ರ ಮೂಡಿ
ಅಸ್ಪಷ್ಟವಾಗುವುದು ಬೇಡ
ಎನ್ನುತ್ತದೆ, ಮನಸು (ಮುಖವಾಡ)

ಸದಾ ಇನ್ನೊಬ್ಬರ ಕಣ್ಣಿನಿಂದ ತನ್ನನ್ನು ನೋಡಿಕೊಳ್ಳುವುದು ಇಲ್ಲಿ ಎಲ್ಲರ ಕರ್ತವ್ಯವೇ ಆಗಿಬಿಟ್ಟಿದೆ. ಇದು ಮುಖವಾಡವನ್ನೇ ಮುಖವೆಂದುಕೊಂಡಂತೆ ಆದರೂ ಮುಖವಾಡವೇ ಇರಲಿ ಅನ್ನಿಸಬೇಕಾದರೆ ಅದು ಈ ಸಮಾಜದ ಸಂದಿಗ್ಧತೆಯೇ. ಹೀಗೆ ಹೆಣ್ಣಿನ ಸಂಕಟ ಮಾತ್ರವೇ ಆಗದೆ ಒಟ್ಟು ಮನುಷ್ಯನ ಬಗೆಯೆ ಮಾತನಾಡುತ್ತಿದ್ದಾರೆ ಎಂಬಾ ಭಾವ ಹುಟ್ಟುವ ಇಲ್ಲಿನ ಕವಿತೆಗೂ ಹೀಗೂ ಅನ್ನಿಸಿಬಿಡುತ್ತದೆ:

ಎಲ್ಲ ನೋವುಗಳೂ ಒಂದೇ
ಬಗೆದಿರುವ ಬಗೆ ಮಾತ್ರ
ಬೇರೆಯಷ್ಟೇ (ಪುನರ್ಜನ್ಮ)

ಬಹುರೂಪದಲ್ಲಿ ವ್ಯಕ್ತವಾಗುತ್ತಿರುವ ಈ ದಶಕದ ಕನ್ನಡ ಕಾವ್ಯವು ಕವಿ ಡಿ.ವಿ. ಪ್ರಹ್ಲಾದ್ ದವರು ಅಭಿಪ್ರಾಯಪಡುವಂತೆ

ಹೊಸಬರ ಕಾವ್ಯ ತನ್ನ ಸುತ್ತಲ ಬದುಕಿನ ಎಲ್ಲವನ್ನೂ
ಒಳಗೊಂಡಿದೆ. ಚಳುವಳಿಯಿಂದ ರೂಪುಗೊಂಡ
ತಾತ್ವಿಕ ಎಚ್ಚರ ಒಂದು ಕಡೆಯಾದರೆ, ಅವುಗಳ
ಮಿತಿಗಳ ಬಗೆಗಿನ ತಿಳುವಳಿಕೆ ಮೌನವಾಗಿ
ತನ್ನ ಕೆಲಸ ಮಾಡತೊಡಗಿದೆ ಎಂಬುದು ನಿಜವೆನಿಸುತ್ತದೆ.
(ಸಂಚಯ, ೭೫, ಸಂಪಾದಕೀಯ)

ಇದರ ಇನ್ನೊಂದು ಮುಖವನ್ನು ಚಿಂತಕರಾದ ಡಾ. ರಹಮತ್ ತರೀಕೆರೆ ಅವರು ಪರಿಶೀಲಿಸಿರುವಂತೆ

ತಲ್ಲಣ, ಅಸ್ಪಷ್ಟತೆ, ಹುಡುಕಾಟ, ಉತ್ಸಾಹ ಉಮೇದುಗಳೆಲ್ಲವೂ
ಸೇರಿದಂತಹ ಒಂದು ಸಂಕೀರ್ಣ ಸನ್ನಿವೇಶದಲ್ಲಿ
ಬರೆಯುತ್ತಿರುವ ಹೊಸತಲೆಮಾರಿನ ಲೇಖಕರ ಬರೆಹದ ಮೂಲಕ,
ಕನ್ನಡ ಸಾಹಿತ್ಯವೂ ೨೧ನೇ ಶತಮಾನದ ಮೊದಲ
ಪಾದದಲ್ಲಿ, ಹೊಸ ಹೊರಳಿಕೆಯನ್ನು ಪಡೆಯಲು ಯತ್ನಿಸುತ್ತಿದೆ
(ಹೊಸ ತಲೆಮಾರಿನ ತಲ್ಲಣ, ೧೮೬)

ಇಪ್ಪತ್ತೊಂದನೆ ಶತಮಾನದ ಕನ್ನಡ ಕಾವ್ಯದಲ್ಲಿ ಸಮುದಾಯಗಳು ತಮ್ಮ ನೆನಪನ್ನು ವಿವರಗಳಲ್ಲಿ ದಾಖಲಿಸಲು ಮಾತ್ರವೆ ಆಸಕ್ತವಾಗಿರುವುದು, ಹಳೆಯ ವಸ್ತು ವಿಷಯಗಳೇ ಕಾವ್ಯದಲ್ಲಿ ಪರಿಭ್ರಮಣವಾಗುತ್ತಾ ಅನುಭವಲೋಕ ವಿಸ್ತರಿಸಿಕೊಳ್ಳದೆ ಉಳಿದಿರುವುದು, ನಿಖರವಾಗಿ ರಾಜಕೀಯ ನಿಲುವನ್ನು ಪ್ರಕಟಿಸುವುದಷ್ಟೇ ಮುಂಚೂಣಿಗೆ ಬರುತ್ತಿವೆ. ಈ ಕಾಲಕ್ಕೆ ಮತ್ತು ಸಮಾಜಕ್ಕೆ ಕಾವ್ಯದ ಸಂದರ್ಭದಲ್ಲಿ ಇವೆಲ್ಲವನ್ನು ಒಳಗೊಳ್ಳುವುದು ಅನಿವಾರ್ಯವೂ ಆಗಿದೆ. ಆದರೆ ಇದಷ್ಟೆ ಕಾವ್ಯವಾಗಲಾರರು ಎಂಬ ಎಚ್ಚರ ಈ ತಲೆಮಾರಿನ ಕವಿಗಳಿಗಿದೆ ಹಾಗಾಗಿಯೇ ಅವರು ಅಲ್ಲಲ್ಲಿ ಮೀರುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.