ಕೊರ್ರ ಕಂಚಿ ಎಂಬುವಳೀಗ ಡಂಗೇ ಡಿಂಗೇ
ಹೊತ್ತಾರ್ ಮಂಚದಳೆದ್ದಳೀಗ ಡಂಗೇ ಡಿಂಗೇ

ಹಳೆಯ ಬುಟ್ಟಿ ತೊಳ್ದಳೀಗ ಡಂಗೇ ಡಿಂಗೇ*
ಕೂಸಾಳಿಗೆಲ್ಲ ತೆಳಿಯೆರಿದು
ಈ ಚಂಡಿಯಾದ್ರೂ ಸುತ್ತಿದಳೊ
ನೆತ್ತಿಮ್ಯಾಲೆ ಬೆಚ್ಚಿದಳೋ
ಮುಟ್ಟಿ ಕುಕ್ಕಿ ಹೊತ್ತಳೋ
ಈ ಗುಡ್ಡಿಂದಾಚೀಗೆ
ಮಾಗುಡ್ಡೀ ಮರುಕೀಲೇ
ಮುಟ್ಟಿ ಕುಕ್ಕಿ ಇಳ್ಸಿದಳೋ
ಈ ಗಿಡೀನೆಡ್ಕೆ ನೆಡೆದಳೋ
ಅಲ್ಲಿ ಮಿಳಿನಾರೂ ಕಡಿದಳೋ
ಈ ನಾರಾಯ್ಣ್ ಸ್ವಾಮಿ ಎಂಬರು
ಈ ಕಂಚೀ ಕಾಂತ ಬಂದರೋ
“”ಇಲ್ಲು ಬಾರೆ ಕಂಚೀ ನೀನು
ಒಂದ್ ಎಲೀನಾರೂ ತಿನ್ವನಾ”
“”ನೀವ್ ನಾರಾಯ್ಣ್ ಸ್ವಾಮಿ ಎಂಬರು
ನಾ ಕೊರ್ರ ಕಂಚಿ ಎಂಬಳು
ನಾ ಕೊಟ್ಟ್ ಸುಣ್ಣವ
ನೀವಾರೂ ತಿನ್ನ್‌ಬಾರ‍್ದು !”
“”ಚಿಪ್ಪಿಯ ಸುಣ್ಣವೂ
ಚಪ್ಪ್ರದ ಬೆಳೆಯೆಲಿ
ವಾಜಿಲ್ಲೆ ಕಂಚಿ ತಿಂಬೊ ಬಾ !”
ಮ್ಯಾಲ್ ಮುಕ್ನಾಯ್ ಕಂಡೆಳೋ
“”ನನ್ನ್ ಕೊರ‍್ಗ ಬಪ್ಪ್ ಹೊತ್ತಾಯ್ತ್
ಅವನೀಗ್ ಗಂಜಿ ಹಾಕೀಕಿ ಬತ್ತೀ
ನಿಮ್ಮ್ ಬರ‍್ವಸೊ ನಂಗಿಲ್ಲೆ
ನಿಮ್ಮುದ್ರಿಯುಂಗ್ರು ಕೊಡಿ
ನಾ ಕಂಡಿತವಾಯ್ ಬರುವೆನು”
ಮುದ್ರಿಯುಂಗ್ರ ಕೊಟ್ಟರು
ಅವ್ಳ್ ಕೈ ಬೆಟ್ಟಗ್ಹಾಯ್ಕಂಡ್
“”ನೀವಿಲ್ಲ್ಯಾರೂ ಕೂಕಣ್ಣಿ

ನನ್ನ್ ಹಳಿಮುಟ್ಟೆ ಬೆಚ್ಚೀಕ್ಹೋತಿ
ನೀವಿಲ್ಲ್ಯಾರೂ ಕೂಕಣ್ಣಿ”
ಈ ಕೊರ್ರ ಕಂಚಿ ಎಂಬಳು
ಈ ನಾರಾಯ್ಣ್ ಸ್ವಾಮಿ ಮನೀಗ್ಹೋದಳೊ
ಈ ಮಾಲಕ್ಷ್ಮಿಅಮ್ನರು
“”ನೀಂವ್ ಹೆರಗಾರೂ ಬನಿ ಕಾಂಬೋ
ಈ ಮುದ್ರಿಯುಂಗ್ರೊ ಕೈಗ್ಹಾಯ್ಕಣಿ
ನನ್ನ್ ವಸ್ತ್ರು ನೀವುಡಿ
ನನ್ನ್ ಸರಬಾರೊ ನೀವ್ಹಾಯ್ಕಣಿ
ಈ ಚಂಡಿ ಮುಟ್ಟಿ ಮಂಡಿಗಿಡಿ

ಈ ಗುಡ್ಡಿಂದಾಚೀಕೆ
ಮಾಗುಡ್ಡಿ ಮರುಕೀಲೆ
ನಿಮ್ಮ್ ಗಂಡ್ನಾರೂ ಕೂತೀರೊ
ಅಲ್ಲ್ಹೊಯ್ ಸೇರೀನಿ
ನಾನ್ ಕೊಪ್ಪಕ್ಕಾರೂ ಹ್ವಾತ್ನಲೇ
ಅಷ್ಟೊಂದ್ನ್ ಹೇಳ್ಯಾಳೋ
ಈ ಮಾಲಕ್ಷ್ಮಿಯಮ್ನರ್
ಅಲ್ಲಿಗಾರೂ ಹೋದರೋ
ನಾರಾಯ್ಣ್ ಸ್ವಾಮಿ ಎಂಬರು
ಕಂಬ್ಳಿ ಹಾಂಸಿ ಕೂತೀರೋ
“”ತಡವಾಯ್ತೇನಿದು”
“”ನನ್ನ್ ಕೊರ‍್ಗ ಬಪ್ಡು ತಡವಾಯ್ತ್”
ಈ ನಾರಾಯ್ಣ್ ಸ್ವಾಮಿ ಎಂಬರು
ಈ ಕೊರ್ರ ಕಂಚಿ ಎಂಬಳು
ಕೂಡಿ ಒಡನಾಡಿದರೋ
ಬೈಯಾರಲಾಯಿತೋ
“”ನನ್ನ್ ಕೊರ‍್ಗ ಬಪ್ಪು ಹೊತ್ತಾಯ್ತೊ
ನಾ ಕೂಪ್ಕಾರೂ ಹೋತೀನೀಗ
ನೀಂವ್ ಮನಿಗಾರೂ ಹೋಗೀನೀಗ”
ಅಷ್ಟೊಂದ್ನ್ ಹೇಳ್ದಳೋ
ಕೊಪ್ಕಾರೂ ನಡ್ದಳೋ
ಈ ನಾರಾಯ್ಣ್ ಸ್ವಾಮಿ ಎಂಬರು
ಹೊಲ್ನ ಗಂಟಿ ಹೊಡ್ಕಂಡ್
ಮನೀಗಾರು ಬಂದರೀಗ
ಮನಿ ಮಡ್ದಿ ಮಾಲಕ್ಷ್ಮೀ
ಒಳ್ಗ್ ಹೊಗ್ಗೂಕ್ ಬಿಡ್ಲಿಲ್ಲೆ
“”ಇದೇನೇ ಮಾಲಕ್ಷ್ಮೀ
ನನ್ನ್ ಒಳ್ಗ್ ಬಪ್ಪೊಕ್ ಬಿಡುದಿಲ್ಲೆ”
“”ನೀಂವ್ ಹೊಲತೀನ್ ಸೇರೀರಿ”
“”ನೀನೆಲ್ಲಿ ಕಂಡೀದೆ ಲಕ್ಷ್ಮಿಯೇ
ನಿಂಗ್ಯಾರೇ ಹೇಳಿದ್ದು”
“”ನಂಗ್ ಕಂಚಿಯೇ ಹೇಳಿದ್ದು
ಸುಳ್ಳಂದ್ ಕಳಿಲಾರಿ
ನಿಮ್ಮ್ ಮುದ್ರಿಯಂಗ್ರೊ ಏನಾಯ್ತ್
ನಿಮ್ಮ್ ಮುದ್ರಿಯುಂಗ್ರೊ ತೋರ‍್ಸಿರೇ
ನಾ ಸುಳ್ಳಂದೇ ಕಳ್ವೆನೋ
ಹೊತ್ತಾರ್ ಮುಂಚಿ ಹ್ವಾದವ್ರ್
ಈಗ ಸೂರ‍್ಯ ಅಸ್ತ್‌ಮಾನ್ಕ್ಹೋದ
ಏಳ್ ಹಳ್ಳಿ ಕಟ್ಬೇಕು
ಏಳ್ ಹಳ್ಳಿ ಸುಡ್ಬೇಕು
ಹತ್ತಿ ನುಗ್ಲ್ ಇರ‍್ಬಾರ‍್ದು
ಮಾಯ್ನ್ ಸಪ್ಪು ಹಲ್ಸ್ನ್ ಸಪ್ಪು
ನುಕ್ಕಿ ಸಪ್ಪು ನೇಳಿನ್ ಸಪ್ಪು
ಏಳ್ ಜಾತಿ ಸಪ್ಪು ಸೋರೆ
ಏಳ್ ಬಟ್ಟ್ರು ಬ್ರಾಂಬ್ರ್ ಬೇಕು
ಇದೆಲ್ಲಾ ಆಗ್ಬೇಕು
ಏಳ್ ಮುಳ್ಕು ಕಂತಬೇಕು
ಇಷ್ಟ್ ಮಾಡೀರೂ
ಅರಜಾತಿ ಲೆಕ್ಕು ಆಯ್ತು

* ಪ್ರತಿ ಪಾದದ ಕೊನೆಯಲ್ಲಿಯೂ “ಡಂಗೇ ಡಿಂಗೇ’ ಎಂದು ಹೇಳಿಕೊಳ್ಳಬೇಕು.

 

ಪಾಠಾಂತರಗಳು

೧) ಸೊಪ್ಪಿನ ಸೋಮು; ಕೆದ್ಲಾಯ ಕುಂಜಿಬೆಟ್ಟು ಸುಬ್ರಹ್ಮಣ್ಯ, ಹಾಡಿಗೆ ಹನ್ನೆರಡು ಕಬರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩, ಪು.ಸಂ. ೯೫-೧೦೩.

೨) ಕೊರಾತಿ ಕಂಚಿಯಕತೆ; ಹನೂರು ಕೃಷ್ಣಮೂರ್ತಿ, ಜನಪದ ಮತ್ತು ಬುಡಕಟ್ಟು ಗೀತೆಗಳು, ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೮, ಪು.ಸಂ. ೧೪೦-೧೪೩.

೩) ಬತಿಗೇಡಿರಾಜ; ನಾವಲಗಿ ಸಿ.ಕೆ. ಮತ್ತು ಶಕುಂತಲ ಚೆನ್ನಬಸವ, ಜನಪದ ಕಥನಗೀತ ಸಂಚಯ ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು ೨೦೦೨, ಪು.ಸಂ. ೩೨-೩೪.

೪) ಬೆಳ್ಳಿದೇವರು; ಹೆಗಡೆ ಎಲ್.ಆರ್. ಮಾಚಿಯ ಕಥನಗೀತೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೨, ಪು.ಸಂ. ೪೯-೫೩.*      ಕೊರಾತಿ ಕಂಚಿಯ ಕತೆ; ಐತಾಳ ಚಂದ್ರಶೇಖರ ಗುಂಡ್ಮಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೦, ಪು.ಸಂ. ೭೯-೮೨.