ಚಲನಶೀಲತೆಯನ್ನು  ಕಳೆದುಕೊಂಡು ಸಿದ್ಧರೂಪಗಳ ಪುನರಾವರ್ತನೆಯ ಸ್ಥಾವರ ಸ್ಥಿತಿಗೆ ಒಳಗಾದ ಸಾಹಿತ್ಯಕ ಸಂದರ್ಭಗಳಲ್ಲಿ, ಪ್ರಜ್ಞಾವಂತರಾದ ಸಾಹಿತಿಗಳು, ಅಂದಂದಿನ ಸಾಂಸ್ಕೃತಿಕ ಒತ್ತಡಗಳಿಗೆ ಅನುಗುಣವಾಗಿ ಬದಲಾಗಬೇಕಾದ ಸಾಹಿತ್ಯದ ರೂಪುರೇಖೆಗಳನ್ನೂ, ಅದಕ್ಕೆ ಅಗತ್ಯವಾದ ಸೈದ್ಧಾಂತಿಕ ಹಾಗೂ ತಾತ್ವಿಕ ಹಿನ್ನೆಲೆಗಳನ್ನೂ ಕುರಿತು ಗಂಭೀರವಾಗಿ ವಿಚಾರ ಮಾಡತೊಡಗಿದಾಗ, ಸಾಹಿತ್ಯ ಚಳುವಳಿಗಳು ಹುಟ್ಟಿಕೊಳ್ಳುತ್ತವೆ. ಈ ಬಗೆಯ ಸಾಹಿತ್ಯ ಚಳುವಳಿಗಳಿಂದ ಅಂದಂದಿನ ಸಾಹಿತ್ಯವು ಹೊಸ ಸತ್ವ ಹಾಗೂ ರೂಪಗಳನ್ನು ಪಡೆದು ನಿರಂತರತೆಯ ಪಾತ್ರದಲ್ಲಿ ಮತ್ತೆ ಚಲನಶೀಲವಾಗುತ್ತದೆ.

ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಸಾಹಿತ್ಯವು ಹೀಗೆ ಬದಲಾದದ್ದು, ನವೋದಯ, ಪ್ರಗತಿಶೀಲ, ನವ್ಯ ಹಾಗೂ ನಮ್ಯೋತ್ತರ (ದಲಿತರ-ಬಂಡಾಯ) ಎಂಬ ನಾಲ್ಕು ಹಂತಗಳಲ್ಲಿ. ಹೊಸಗನ್ನಡಕ್ಕೆ ಹಿಂದಿನ ಸಾಹಿತ್ಯವನ್ನು ಚಂಪೂ, ವಚನ, ಷಟ್ಪದೀ, ಸಾಂಗತ್ಯ ಇತ್ಯಾದಿಯಾಗಿ ವಿಭಜಿಸಿ ನೋಡುವ ಕ್ರಮವೊಂದು ರೂಢಿಗೆ ಬಂದಿರುವುದಾದರೂ, ಆ ಬದಲಾವಣೆ ಮುಖ್ಯವಾಗಿ ಬದಲಾದ ಛಂದೋ ರೂಪಗಳಿಗೆ ಸಂಬಂಧಿಸಿದ್ದೇ ಹೊರತು, ಇಂದಿನಂತೆ ಪ್ರಮುಖವಾಗಿ ಧೋರಣೆಗಳಿಗೆ ಅಷ್ಟಾಗಿ ಸಂಬಂಧಿಸಿದ್ದಲ್ಲ. ಧೋರಣೆಯ ಮೂಲಮಾನದಲ್ಲಿ ನೋಡಲು ಹೊರಟರೆ, ಹಿಂದಿನ  ಸಾಹಿತ್ಯವನ್ನು ಮಾರ್ಗ ಮತ್ತು ದೇಸೀ ಎಂದು ವಿಭಾಗಿಸಿ ನೋಡುವುದು ಹೆಚ್ಚು ಉಪಯುಕ್ತವೆನ್ನಬಹುದು.

ಇದೇನೇ ಇರಲಿ, ಸಾಹಿತ್ಯದ ಈ ಬದಲಾವಣೆಯ ಹಂತಗಳನ್ನು ಹೀಗೆ ಚಾರಿತ್ರಿಕವಾಗಿ ಗುರುತಿಸುವುದು ವಿಮರ್ಶೆಯ ದೃಷ್ಟಿಯಿಂದ ತೀರಾ ಅಗತ್ಯವಾದದ್ದು. ಇವು ಒಂದು ಮತ್ತೊಂದನ್ನು  ನಿರಾಕರಿಸುವುದೂ ಇಲ್ಲ ಅಥವಾ ರದ್ದು ಮಾಡುವುದೂ ಇಲ್ಲ; ಇವು ಒಂದು ಮತ್ತೊಂದಕ್ಕೆ ಕಾರಣವಾಗುತ್ತ, ಅವುಗಳ ಪರಸ್ಪರ ಕ್ರಿಯೆ ಪ್ರತಿಕ್ರಿಯೆಗಳಿಂದ ಸಾಹಿತ್ಯದ ನಿರಂತರತೆಯನ್ನು ಉಳಿಸಿಕೊಂಡು ಬಂದಿರುವ ಕ್ರಮವನ್ನು ನಾವು ಗುರುತಿಸಬೇಕಾಗಿದೆ.

ಹೊಸಗನ್ನಡ ಸಾಹಿತ್ಯದ ಈ ನಾಲ್ಕನೆಯ ಆಯಾಮವನ್ನೇ ಇವತ್ತು ಬಂಡಾಯ ಸಾಹಿತ್ಯದ ಸಂದರ್ಭವೆಂದು ಗುರುತಿಸಲಾಗುತ್ತಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ ಬಂಡಾಯ ಅನ್ನುವುದೊಂದು ಮನೋಧರ್ಮ. ಈ ಮನೋಧರ್ಮದ ಮುಖ್ಯ ಲಕ್ಷಣ, ಸಾಮಾಜಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು, ಒಟ್ಟಾರೆಯಾಗಿ ವಸ್ತುಸ್ಥಿತಿಯನ್ನು ಪ್ರಶ್ನಿಸುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಪ್ರತಿಭಟಿಸುವ ಒಂದು ಪ್ರವೃತ್ತಿ.

ಈ ಒಂದು ಮನೋಧರ್ಮ ಎಲ್ಲ ಕಾಲದ ಸಾಹಿತ್ಯದಲ್ಲೂ ಇರುವುದರಿಂದ, ಇರುವುದೆಲ್ಲವೂ ಬಂಡಾಯ ಸಾಹಿತ್ಯ ಅಥವಾ ಪ್ರತಿಭಟನೆಯ ಸಾಹಿತ್ಯ ಎಂದು ಸರಳೀಕರಿಸುವ ಅಪಾಯವಿದೆ. ಆದರೆ ನಾವು ಗುರುತಿಸಿಕೊಳ್ಳಬೇಕು, ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳಿರುವುದೆ ಬೇರೆ ಮತ್ತು ಪ್ರತಿಭಟನೆಯ ಸಾಹಿತ್ಯ ಅನ್ನುವುದೇ ಬೇರೆ. ಇದುವರೆಗಿನ ನಮ್ಮ ಸಾಹಿತ್ಯದಲ್ಲಿ ಪ್ರತಿಭಟನೆಯ ಅಂಶಗಳಿದ್ದುವೇ  ಹೊರತು, ಪ್ರತಿಭಟನೆಯನ್ನೇ ಒಂದು ಮೌಲ್ಯವೆಂದು ಒಪ್ಪಿಕೊಂಡ ಪ್ರತಿಭಟನಾ ಸಾಹಿತ್ಯವೆಂಬುದು ಇರಲಿಲ್ಲ. ಜತೆಗೆ ಪ್ರತಿಭಟನೆಯ ಸಾಹಿತ್ಯದಲ್ಲಿ ಕೂಡಾ, ಯಾರು ಯಾರನ್ನು ಕುರಿತು, ಯಾವುದನ್ನು ಕುರಿತು, ಎಷ್ಟರಮಟ್ಟಿಗೆ ತಮ್ಮ ಪ್ರತಿಭಟನೆಯನ್ನು ಪ್ರಕಟಪಡಿಸಿದ್ದಾರೆ ಅನ್ನುವುದನ್ನು ನಾವು ಪರಿಶೀಲಿಸುವುದು ಅಗತ್ಯವಾಗಿದೆ.

ನಮ್ಮ ಹಿಂದಿನ ಸಾಹಿತ್ಯದಲ್ಲಿ ಒಳ್ಳೆಯ ಪ್ರಶ್ನೆಗಳಿವೆ; ಈ ಪ್ರಶ್ನೆಗಳಲ್ಲಿ ತಕ್ಕಮಟ್ಟಿನ ಪ್ರತಿಭಟನೆಯ ಅಂಶಗಳಿವೆ. ವಸ್ತುನಿಷ್ಠ ಕಾವ್ಯದ ಹಲವಾರು ಸಂದರ್ಭಗಳಲ್ಲಿ ಅಂದಂದಿನ ಸಾಮಾಜಿಕ-ಧಾರ್ಮಿಕ-ವಿಸಂಗತಿಗಳನ್ನು ಪ್ರಶ್ನಿಸುವ ಪ್ರಸಂಗಗಳು ಇದ್ದರೂ, ವಚನಕಾರರು ಮಾತ್ರ ನೇರವಾಗಿ ಹಾಗೂ ವ್ಯಕ್ತಿನಿಷ್ಠವಾಗಿ ತಮ್ಮ ಪರಿಸರವನ್ನು ಪ್ರಶ್ನಿಸಿದರೂ ಒಟ್ಟಾರೆಯಾಗಿ ಅವರ ಧೋರಣೆಗಳು ನೈತಿಕ ಹಾಗೂ ಪಾರಮಾರ್ಥಿಕ ಮನುಷ್ಯನನ್ನು ನಿರ್ಮಾಣ ಮಾಡುವ ಉದ್ದೇಶದ್ದಾಗಿವೆಯೆ ಹೊರತು, ನಿಜವಾದ ಸಾಮಾಜಿಕ ಮನುಷ್ಯನನ್ನು ನಿರ್ಮಿಸುವ ಉದ್ದೇಶದವುಗಳಾಗಿಲ್ಲ. ಅಂದರೆ, ಅವರ ಪ್ರಶ್ನೆಗಳು ಹಾಗೂ ವಿಚಾರಗಳು ಮುಖ್ಯವಾಗಿ ದೇವರು, ಧರ್ಮಗಳ ಕಡೆಯಿಂದ ಮಾನವ ಸಮಾಜವನ್ನು ನೋಡುವಂಥವು. ಈ ನಿಲುವಿಗೆ ಮಾನವ ಸಮಾಜ ಬಹುಮಟ್ಟಿಗೆ ‘ಅಮೂರ್ತ’ವಾದದ್ದು. ಅದು ದುಃಖ-ಸಂಕಟ-ಶೋಷಣೆ ಇತ್ಯಾದಿಗಳಿಗೆ  ಒಳಗಾದ ‘ಮೂರ್ತ’ ವಾಸ್ತವವಲ್ಲ. ಅಲ್ಲಿ ಕಂಡುಬರುವ ನೋವು, ಮುಖ್ಯವಾಗಿ ರಾಜರಿಗೆ ಮಕ್ಕಳಿಲ್ಲದ್ದರಿಂದ ಆದದ್ದೋ, ರಾಣಿಯರಿಗೆ ವಿರಹ ತಾಪದಿಂದ ಆದದ್ದೋ ಭಕ್ತರಿಗೆ ಭಗವಂತನಿಗಾಗಿ ಹಂಬಲಿಸುವ ರೂಪದ್ದೊ ಆಗಿರುವುದೇ ವಿನಾ ಸಮಾಜದ ಬಹುಸಂಖ್ಯಾತರ ನೋವುಗಳನ್ನು ಕುರಿತದ್ದಲ್ಲ. ದೇವರು-ಧರ್ಮಗಳ ಕಡೆಯಿಂದ, ಮೋಕ್ಷವನ್ನೇ ಗುರಿಯಾಗಿರಿಸಿಕೊಂಡ ಉದಾತ್ತ ವ್ಯಕ್ತಿಗಳ ಚಾರಿತ್ರವನ್ನೇ ಸಾಹಿತ್ಯವನ್ನಾಗಿ ಚಿತ್ರಿಸುವ ನಿಲುವು ಅದು. ಹೀಗಾಗಿ ಈ ಸಾಹಿತ್ಯದ ಕಥಾನಾಯಕರು ಸಮಸ್ತ ಭೋಗ ವೈಭವಗಳನ್ನೂ ಕ್ಷಣಾರ್ಧದಲ್ಲಿ ತ್ಯಾಗ  ಮಾಡಿ, ಮೋಕ್ಷಕ್ಕೋ, ಕೈಲಾಸಕ್ಕೋ ಹೋದವರು.  ಇಂಥವರ ಕಣ್ಣಿಗೆ ಶೋಷಣೆ ಎಂಬುದಕ್ಕೆ ಅರ್ಥವಿಲ್ಲ; ಬಡತನಕ್ಕೆ, ದುಃಖಕ್ಕೆ ಅರ್ಥವಿಲ್ಲ. ಒಂದು ವೇಳೆ ಇದ್ದರೂ, ಬಡತನ-ನೋವು-ಸಂಕಟ ಇತ್ಯಾದಿಗಳು ಭಗವಂತನ ಕೃಪಾರೂಪದ ಪರೀಕ್ಷಾ ವಿಧಾನಗಳಾಗುತ್ತವೆ. ಅಥವಾ ಬಡತನ ಪೂರ್ವಜನ್ಮದ ಪಾಪದ ಫಲವಾಗಿ, ಸಿರಿತನ ಪೂರ್ವ ಜನ್ಮದ ಫಲವಾಗಿ ತೋರುತ್ತದೆ. ಒಟ್ಟಾರೆ ಮನುಷ್ಯನು ನೋವು ದುಃಖಗಳಿಗೆ ಆತ ಬದುಕುವ ಸಾಮಾಜಿಕ ವ್ಯವಸ್ಥೆ ಬಹು ಮುಖ್ಯವಾದ ಕಾರಣವೆಂಬಂತೆ ಅವರ ಕಣ್ಣಿಗೆ ಕಾಣುವುದಿಲ್ಲ ; ಹೀಗಾಗಿ ತಾನು ಶೋಷಿತನಾಗಿರುವೆನೆಂಬ ಅರಿವನ್ನಾಗಲೀ ಅದನ್ನು ಪ್ರತಿಭಟಿಸಬೇಕೆಂಬ ಪ್ರವೃತ್ತಿಯನ್ನಾಗಲಿ ಅದು ಚಿತ್ರಿಸೀತು ಹೇಗೆ? ಅದರ ಬದಲು ಸಾಮಾಜಿಕ ಪರಿಸರದ ಲೌಕಿಕ ನೆಲೆಯನ್ನು ಧರ್ಮದ ಹಾಗೂ ಮೋಕ್ಷದ ಹೆಸರಿನಲ್ಲಿ ನಿರಾಕರಿಸುವುದನ್ನೆ ಅದು ವೈಭವಿಸಿತು. ಈ ಕಾರಣದಿಂದ, ಇದುವರೆಗಿನ ಸಾಹಿತ್ಯ ನಮಗೆ ಕಲಿಸಿದ್ದು ನೋವು-ಸಂಕಟ-ಅನ್ಯಾಯಗಳನ್ನು ಸಹಿಸಿಕೊಳ್ಳುವುದು ಹೇಗೆ ಎನ್ನುವುದನ್ನು. ಹಾಗೆಯೆ ಸಮಾಜದ ಬಹು ಸಂಖ್ಯಾತರ ನೋವು-ಸಂಕಟಗಳಿಗೆ ಇರುವ ಸಾಮಾಜಿಕ ಕಾರಣಗಳನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ, ಮತ್ತು ಅದಕ್ಕೆ ಕಾರಣವಾದ ವ್ಯವಸ್ಥೆಯನ್ನು ಪ್ರತಿಭಟಿಸುವ ಮನೋಧರ್ಮವನ್ನು ಅದು ಚಿತ್ರಿಸಲಿಲ್ಲ. ಈ ಮನೋಧರ್ಮ ಕೂಡಾ ಚಾರಿತ್ರಿಕವಾಗಿ ಎಚ್ಚರಗೊಂಡು, ತನ್ನ ಪ್ರಕರ್ಷಾವಸ್ಥೆಯನ್ನು ಪಡೆದದ್ದು, ಆಧುನಿಕ ಸಂದರ್ಭದಲ್ಲಿಯೇ.

ಸಾಹಿತ್ಯ ಎಷ್ಟರ ಮಟ್ಟಿಗೆ ಸಮಾಜದ ವಿವಿಧ ಸ್ತರಗಳ ಸಂವೇದನೆಗಳನ್ನು ಹಾಗೂ ಅನುಭವಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳತೊಡಗುತ್ತದೆಯೋ, ಅಷ್ಟರ ಮಟ್ಟಿಗೆ ಅದು ವಿವಿಧ ಮನೋಧರ್ಮಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುತ್ತದೆ. ಕನ್ನಡ ಸಾಹಿತ್ಯದ ‘ವಸ್ತು’ವಿಗೆ ಇರುವ ಪರಂಪರೆಯನ್ನು ಗಮನವಿಟ್ಟು ನೋಡಿದರೆ ಈ ಮಾತಿನ ಯಥಾರ್ಥತೆ ಗೋಚರವಾಗುತ್ತದೆ. ಕನ್ನಡ ಸಾಹಿತ್ಯದ ಮೊದಲ ಕೆಲವು ಶತಮಾನಗಳ ವಸ್ತು, ಇತಿಹಾಸ-ಪುರಾಣಗಳೇಆಗಿವೆ. ರಾಜ-ಮಹಾರಾಜರ, ದೇವಾನುದೇವತೆಗಳ, ಪುರಾಣಪುರುಷರ ಕಥನಗಳೇ ಅಲ್ಲಿ ಮುಖ್ಯ. ಆನಂತರ, ಹನ್ನೆರಡನೆಯ ಶತಮಾನದ ಹೊತ್ತಿಗೆ, ಕಾವ್ಯದ ವಸ್ತು, ವಾಸ್ತವವಾಗಿ ಬಾಳಿ ಬದುಕಿದ ಧಾರ್ಮಿಕ ನಾಯಕರನ್ನು- ಬಸವ, ಅಲ್ಲಮ, ಅಕ್ಕಮಹಾದೇವಿ ಮತ್ತಿತರ ಶರಣರನ್ನು-ಕುರಿತದ್ದಾಯಿತು; ಮುಂದೆ ಹರಿಹರನ ಕಾವ್ಯದಲ್ಲಿ ಮೊಟ್ಟಮೊದಲಿಗೆ ಸಮಾಜದ ಕೆಳಗಿನ ಸ್ತರದಿಂದ ಬಂದ ಸಾಮಾನ್ಯ ಜನ, ಒಬ್ಬ ಬೆಸ್ತ, ಒಬ್ಬ ಬೇಡ, ಒಬ್ಬ ಒಕ್ಕಲಿಗ, ಒಬ್ಬ ಕುಂಬಾರ-ಇಂಥ ಸಾಮಾನ್ಯ ಜನ ಕಾವ್ಯದ ಕಥಾನಾಯಕರಾದದ್ದು ಮೇಲುನೋಟಕ್ಕೆ ಮಹತ್ವದ್ದೆಂಬಂತೆ ತೋರಿದರೂ, ಅವರು ಯಾರೂ ಅವರವರು ಬಂದ ಸಾಮಾಜಿಕ ಸ್ತರವನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸದೆ, ತಮ್ಮ ಭಕ್ತಿಯಿಂದ ಭಗವತ್ಪರವಾದ ಅಥವಾ ಕೈಲಾಸದ ದಾರಿಯಲ್ಲಿ ಹೊರಟ ಅಸಾಮಾನ್ಯರೇ ಆಗಿದ್ದಾರೆ. ಮತ್ತೆ ಇಪ್ಪತ್ತನೇ ಶತಮಾನದವರೆಗೂ ಕನ್ನಡ ಕಾವ್ಯದ ವಸ್ತುವಿನಲ್ಲಿ ಅಂಥ ಬದಲಾವಣೆಯೇನೂ ಆಗಲಿಲ್ಲ. ಹೊಸಗನ್ನಡ ಅಥವಾ ನವೋದಯ ಸಾಹಿತ್ಯದ ವೇಳೆಗೆ ಕನ್ನಡ ಕಾವ್ಯದ ವಸ್ತು, ಐತಿಹಾಸಿಕ-ಪೌರಾಣಿಕ-ಧಾರ್ಮಿಕ ಮಹಾ ವ್ಯಕ್ತಿಗಳ ಪರಿಸರದಿಂದ ನಮ್ಮ ಸುತ್ತಣ ನಿಸರ್ಗ ಹಾಗೂ ಅದರ ನಡುವಣ ಮನುಷ್ಯರ  ಕಡೆಗೆ ಸ್ಥಳಾಂತರಗೊಂಡಿತು. ಈ ಹಂತದಲ್ಲಿ ನಿಸರ್ಗದ ರಮ್ಯತೆ ಹಾಗೂ ಪರಂಪರಾಗತವಾದ ಮೌಲ್ಯಗಳ ಬಗ್ಗೆ ಮನುಷ್ಯರಿಗೆ ಇರುವ ನಂಬಿಕೆಗಳು ಮುಖ್ಯವಾದರೂ, ಮನುಷ್ಯ ಮನುಷ್ಯನನ್ನು ಶೋಷಣೆಗೆ ಒಳ ಪಡಿಸುವ ತಂತ್ರಗಳನ್ನು ಕುರಿತು ಪ್ರತಿಭಟನೆಯೂ ಪ್ರಜಾಪ್ರಭುತ್ವವಾದೀ ನಿಲುವುಗಳ ಬಗ್ಗೆ ಗಾಢವಾದ ಕಾಳಜಿಗಳೂ ಸಾಂಪ್ರದಾಯಕ ಅಥವಾ ಸಾಂಸ್ಥಿಕ ಧರ್ಮಗಳ ನಿರಾಕರಣೆಯೂ ಸಾಹಿತ್ಯದ ಮೂಲದ್ರವ್ಯಗಳಾದದ್ದು ವಿಶೇಷದ ಸಂಗತಿಯಾಗಿದೆ. ಆನಂತರ ಕೆಲವು ಕಾಲದಲ್ಲಿ ಕಾಣಿಸಿಕೊಂಡ ಪ್ರಗತಿಶೀಲ ಸಾಹಿತ್ಯದ ಧೋರಣೆಗಳು ನವೋದಯಕ್ಕಿಂತ, ಹೆಚ್ಚು ಸಾಮಾಜಿಕ ಕಳಕಳಿಯನ್ನು ಒಳಗೊಂಡದ್ದಕ್ಕೆ ಕಾರಣ, ಅದು ಮಧ್ಯಮವರ್ಗದ ಬದುಕಿನ ಸಂವೇದನೆಗಳನ್ನು ತನ್ನ ವಸ್ತುವನ್ನಾಗಿ ಮಾಡಿಕೊಂಡಿದ್ದರಿಂದ. ಮುಂದೆ ಬಂದ ನವ್ಯ ಸಾಹಿತ್ಯ ಮುಖ್ಯವಾಗಿ  ನಗರಕೇಂದ್ರಿತವಾಗುತ್ತ, ಸ್ವಾತಂತ್ರ್ಯೋತ್ತರ ಭಾರತೀಯ ಪರಿಸರದ ಮೌಲ್ಯಗಳ ಅವನತಿಯನ್ನೂ ಮನುಷ್ಯನ ಅಂತರಾಳದ ವಿಕಾರಗಳನ್ನೂ, ಪ್ರಖರವಾದ ವಿಮರ್ಶನ ಪ್ರಜ್ಞೆಯಲ್ಲಿ ನಮ್ಮ ವಾಸ್ತವವನ್ನು ಒರೆಗಲ್ಲಿಗೆ ಹಚ್ಚಿ ನೋಡುವ ಪ್ರವೃತ್ತಿಯನ್ನೂ ತನ್ನ ವಸ್ತುವನ್ನಾಗಿ ಮಾಡಿಕೊಂಡಿತು. ಈ ಅನುಕ್ರಮವಾದ ಬೆಳವಣಿಗೆಯ ಪರಿಣಾಮವಾಗಿ, ಶತಮಾನಗಳ ಕಾಲ ಅಕ್ಷರಜ್ಞಾನದ ಸವಲತ್ತುಗಳಿಂದ ವಂಚಿತವಾಗಿದ್ದು ಮತ್ತು ಮೇಲಿನ ಎಲ್ಲ ವರ್ಗದವರುಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮಾಜದ ಕೆಳಗಿನ ಸ್ತರವೊಂದು, ಮಾತನಾಡಲು ಕಲಿತು ತನ್ನ ಪ್ರತಿಭಟನೆಯನ್ನು ಅಭಿವ್ಯಕ್ತಪಡಿಸತೊಡಗಿದಾಗ, ಮೂಡಿಬಂದಿತು ಬಂಡಾಯ ಸಾಹಿತ್ಯ. ಈ ದೃಷ್ಟಿಯಿಂದ ಬಂಡಾಯ ಸಾಹಿತ್ಯದ ಉದಯ ಚಾರಿತ್ರಿಕ ಅನಿವಾರ್ಯತೆಯಾಗಿದೆ.

ಹಿಂದಿನ ಎಲ್ಲ ಸಾಹಿತ್ಯ ಚಳುವಳಿಗಳೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳದೆ ಹೋದ, ಸಮಾಜದ ಕೆಳವರ್ಗದವರ ಬದುಕನ್ನು, ನಿರ್ಲಕ್ಷಿತರ ಬದುಕನ್ನು ಬಂಡಾಯ ಸಾಹಿತ್ಯ ತನ್ನ ವಸ್ತುವನ್ನಾಗಿ ಮಾಡಿಕೊಂಡಿದೆ. ನಿಜವಾದ ಇಂಡಿಯಾ, ಕೇವಲ ರಮ್ಯ ನಿಸರ್ಗದಲ್ಲಾಗಲಿ, ನಗರದ ಮಧ್ಯಮ ವರ್ಗದಲ್ಲಾಗಲೀ, ಗೊಂದಲಪುರದ ಬುದ್ಧಿ ಜೀವಿಗಳ ತಾಕಲಾಟಗಳಲ್ಲಾಗಲಿ ಇಲ್ಲ; ಅದು ಇರುವುದು ಬಹುಸಂಖ್ಯಾತ  ಹಳ್ಳಿಗಳ ಬದುಕಿನಲ್ಲಿ ಹಳ್ಳಿಗಳಲ್ಲಿ ಇರುವ ಈ ಅಸಂಖ್ಯಾತ ಜನಸಾಮಾನ್ಯರು, ಒಂದೆಡೆ ತಮಗಿಂತ ಮೇಲಿನ ವರ್ಗದವರಿಂದ, ಮತ್ತೊಂದೆಡೆ ಭ್ರಷ್ಟ ರಾಜಕಾರಣಿಗಳಿಂದ ಹಾಗೂ ಅಧಿಕಾರಶಾಹೀ ಪುರೋಹಿತಶಾಹೀ ಕುತಂತ್ರಗಳಿಂದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾಗಿದ್ದಾರೆ. ಗ್ರಾಮೀಣ ಭಾರತದ ಈ ಶೋಷಿತ ಜನಾಂಗ, ತನ್ನೊಳಗಿನ ಸಂಕಟಗಳಿಗೆ, ತನ್ನೊಳಗಿನ ರೊಚ್ಚಿಗೆ, ತನಗಾಗಿರುವ ಅನ್ಯಾಯಗಳಿಗೆ, ಪ್ರತಿಭಟನೆಯ ದನಿ ಎತ್ತುತ್ತಿರುವುದು ನ್ಯಾಯವಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಒಂದು ಮೌಲ್ಯವಾಗಿ ಉಳ್ಳ, ರಾಜಕೀಯ ಪ್ರಜ್ಞೆಯಿಂದ ಮೂಡಿದ ಈ ಸಾಹಿತ್ಯ, ಸೌಂದರ್ಯದ ತನ್ಮತೆಯನ್ನು ತರುವ, ಉದಾತ್ತ ತತ್ವಗಳನ್ನು ಹೇಳುವ, ಪೌರಾಣಿಕ-ಧಾರ್ಮಿಕ ಅದ್ಭುತಗಳನ್ನು ತೆರೆದು ತೋರುವ, ಬುದ್ಧಿಯ ಕಸರತ್ತುಗಳನ್ನು ಪ್ರದರ್ಶಿಸುವ ಉದ್ದೇಶದ್ದಲ್ಲ; ಅದು ಇರುವ ವಾಸ್ತವವನ್ನು ತೆರೆದು ತೋರುತ್ತ, ವೈಚಾರಿಕ ಎಚ್ಚರವನ್ನು  ಹುಟ್ಟಿಸುತ್ತ, ಪ್ರಶ್ನೆ ಹಾಗೂ ಪ್ರತಿಭಟನೆಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವ ಉದ್ದೇಶದ್ದು. ಬಂಡಾಯ ಸಾಹಿತ್ಯದ ಧೋರಣೆಗಳು, ಈಗ ಬರೆಯುತ್ತಿರುವ, ಎಲ್ಲ ತಲೆಮಾರಿನ, ಅಂದರೆ ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿ ವಿವಿಧ ಮಾರ್ಗದ ಬರಹಗಾರರ ಮೇಲೆ ತನ್ನ ಪ್ರಭಾವಗಳನ್ನು ಬೀರಿವೆ. ಸಮಕಾಲೀನ ಬರಹಗಾರರೆಲ್ಲರಲ್ಲೂ ಕಾಣಿಸಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿ, ಬಹುಶಃ ಈ ಬಂಡಾಯ ಸಾಹಿತ್ಯದ ಪರಿಣಾಮವೇ, ಇನ್ನೊಂದು ವಿಶೇಷವೆಂದರೆ, ಕಳೆದ ಒಂದು-ಒಂದೂವರೆ ದಶಕಗಳ ಕಾಲಮಾನದಲ್ಲಿ ಬಹುಸಂಖ್ಯಾತ ಮಹಿಳೆಯರು ಬರೆಯಲು ಶುರುಮಾಡಿರುವುದೂ, ಮತ್ತು ಅವರ ಬರಹಗಳಲ್ಲಿ ಕಂಡುಬರುತ್ತಿರುವ ವೈಚಾರಿಕ ಎಚ್ಚರಗಳೂ ಹಾಗೂ ದೃಷ್ಟಿಕೋನಗಳೂ, ಖಂಡಿತವಾಗಿಯೂ ಬಂಡಾಯ ಸಾಹಿತ್ಯ ಚಳುವಳಿಯ ಪರಿಣಾಮಗಳಾಗಿವೆ ಎಂದು ನನ್ನ ತಿಳಿವಳಿಕೆ. ಏಕೆಂದರೆ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಎಚ್ಚರಗೊಂಡು ಮಾತನಾಡಲು ತೊಡಗಿದ ಶೋಷಿತ ಸಾಮಾಜಿಕ ವರ್ಗಕ್ಕೆ ಮಹಿಳೆಯರೂ ಸೇರುತ್ತಾರೆ.

ಬಂಡಾಯ ಸಾಹಿತ್ಯವನ್ನು ಕುರಿತು, ಅದರ ಧೋರಣೆಗಳನ್ನು ಕುರಿತು ಸಾಕಷ್ಟು ಚರ್ಚೆ ಪ್ರತಿಚರ್ಚೆಗಳೂ ನಮ್ಮ ಪರಿಸರದಲ್ಲಿ ನಡೆಯುತ್ತಿವೆಯಾದರೂ, ಬಂಡಾಯ ಸಾಹಿತ್ಯವನ್ನು ಪ್ರತಿನಿಧಿಸುವಂಥ ಕೆಲವು ಲೇಖಕರು ನಮ್ಮ ನಡುವೆ ಇದ್ದರೂ, ಇನ್ನೂ ಸಮಕಾಲೀನವಾದ ಇತರ ಬರಹಗಳಿಂದ ತೀರಾ ಸ್ಪಷ್ಟವಾಗಿ ಗುರುತಿಸಬಹುದಾದ ಖಚಿತ ರೂಪಗಳನ್ನೂ, ಪರಿಗಣಿಸಲೇಬೇಕಾದ ಮಹತ್ವದ ಕೃತಿಗಳನ್ನೂ ಈ ಚಳುವಳಿ ಕೊಡಬೇಕಾಗಿದೆ.

ಬೆಡಗು-೧೯೮೯