ಮಳೆಹೊಯ್ತು ಎಂತಾ ಮಳೆರಾಯನ ಬೈ ಬೇಡ
ಒಕ್ಕಾಳ ಹೊನ್ನ ಸೆರಗಲಿ | ಕಟ್ಕೊಂಡು
ಸಾಲಕ್ಕೆ ಹೋಗವ್ನೆ ಮಳೆರಾಯ

ಕಾವೀನ ಉಟ್ಟಾನ ಕಾವೀನ ತೊಟ್ಟಾನ
ಮಾವಿನ ಗಿಡಕ ಮನಗ್ಯಾನ | ಮಳೆರಾಜ
ಮಾಯವಾಗ್ಯಾನ ಮಟದಾಗ

ಮಳೆರಾಯನ ಹೆಂಡತಿ ಮಕ್ಕಳೊಂದಿಗಿತ್ತಿ
ಮಳೆಬಂದರೆಲ್ಲಿ ತಳಗ್ಯಾಳೊ | ನೆಂದಾರೆ
ಸಣ್ಣಾನೆ ಬಾಳೆ ಸುಳಿಯಲ್ಲಿ

ತಂಗೀ ಮನೇಗ್ಹೋಗಿ ತಂಗಾದೆ ಹೋಗುತವನೆ
ತಂಗೀಸಿ ಕೊಡು ಮಳೆದೇವ | ಅಣ್ಣಯ್ಯ
ಗೊಂಬೆ ಹಚ್ಚಡವು ಗೊರೆಯಾದೊ

ಅಂಬೂ ಕೊಡುವವನೆ ಗೊಂಬೆ ಹಚ್ಚಡದವನೆ
ರಂಭೆ ತೊಡೆ ಮೇಲೆ ಮಲಗಿರುವ | ಮಳೆದೇವ
ಅಂಬಾರದಿಂದ ಕರುಣೀಸು

ಉತ್ತು ಬಂದಣ್ಣ ಮುತ್ತಿನ್ಕಂಭಾ ಸೇರಿ
ಉತ್ತು ಬಂದೆ ಶಿವನೆ ಮಳೆಯಿಲ್ಲ | ಎಂದಾರೆ
ಮುತ್ತೀನ ಮಂಜು ಸುರಿದಾವೊ

ರೋಣಿಯ ಮಳೆಯಾಗಿ ಓಣೆಲ್ಲ ಬೇರಾಗಿ
ಕಾಣಾದ ಹುಲುಸು ಕುಡಿಯಾಗಿ | ಹೊಲದಾಗ
ಕಣ ತುಂಬಿ ರಾಗಿ ಹೊಳೆಯಾಗಿ

ಊರೀಗೆ ಮಳೆ ಹೂದೊ ಏರು ಕಟ್ಟೋ ಕಂದಯ್ಯ
ಊರು ಮುಂದಿರುವ ಬಸವಣ್ಗೆ | ಕೈಮುಗಿದು
ಏರ‍್ಕಟ್ಟೋ ಮುದ್ದು ಮೊಕದವನೆ

ಕಾರೆಂಬೊ ಕತ್ತಲೆ ಭೋರೆಂಬ ಮಳೆರಾಯ
ಭೋರಿಟ್ಟು ಬಂದ ಮಳೆರಾಯ | ರೆಂಬೆ ನಿನ್ನ
ಕಂಬೀಯ ಸೆರಗ ಮರಮಾಡೆ

ಗುಡುಗುಡುಗುಟ್ಟೀತು ನಡುಬಾಣ ಮಿಂಚೀತು
ಮಂಡಾದ್ರಿ ಅಂಬು ದಂಡೀನ | ಕುದುರೆ ಮೇಲೆ
ಚಂಡಾಡ್ತ ಹುಯ್ಯೊ ಮಳೆದೇವ

ಕಂಚು ಮಿಂಚೀತು ಕಾಳಾಸ್ತ್ರ ಗುಡುಗೀತು
ಶಿವಗಂಗೆಲೇಳು ಹನಿಬಿದ್ದೊ | ಪರ್ವತದ
ಗಿರಿ ಮೇಲೆ ಕೋಡಿ ಹರಿಯಿತು

ಮೂಡ ಮುಂದಾಗಿ ಹೊಡೆಯಿತು ಮಳೆರಾಯ
ಗೊಂಬೆತೇರೀಗೆ ಹನಿಬಿದ್ದೊ | ರಂಭೆಯುಟ್ಟ
ಪಟ್ಟಸೀರೆ ಸೆರಗ್ಗೆ ಹರಿದಾವು

ಸ್ವಾತೀಯ ಮಳೆಹೂದು ಸೀತೇಯ ಕೆರೆ ತುಂಬಿ
ಜೋತಾಡುತೈತೆ ಕುಣಿಗಾಲ | ಕುಚ್ಚಿನ ಮೀನು
ಮುಂಗೈಯ ನೋಡಿ ನಗುತೈತೆ

ಸ್ವಾತೀಯ ಮಳೆಯಾಗಿ ಭೂತಾಳ ಹಸಿಯಾಗಿ
ಪಾತಾಳ ಎಲ್ಲ ತುಳಕ್ಯಾವು | ಭೂಮ್ಯಾಕಾಶ
ಫಲವೆದ್ದು ಕೈಯ ಮುಗಿದಾವು

ಹೇರು ಕಟ್ಟಾಲಿ ಯಾವ್ಹೇರು ಕಟ್ಟಾಲಿ
ಈರಣ್ಣನೊಬ್ಬ ಉರಿಲ್ಹೋರಿ | ಕಟ್ಕೊಂಡು
ಯಾಲಕ್ಕಿ ಸಾಲು ಹೊಡೆದಾನೊ

ಮುತ್ತೀನ ಹರಕೋಲು ಮುಗಿಲು ಬಣ್ಣದ ಕುಂಟೆ
ಸಣ್ಣ ಕೊಂಬೀನ ನವರತ್ನ | ಕಟ್ಕೊಂಡು
ಜಾಣ ಹರಗಿದನು ಜವನಾವ

ಮುತ್ತಿನೊಂಟೆಯನಿಟ್ಟು ಮುತ್ತು ಹಾರವ ತೊಟ್ಟು
ಮುತ್ತು ರುಮಾಲು ತಲೆಗಿಟ್ಟು | ನಮ್ಮಣ್ಣ
ಮುತ್ತಿನಂಥ ಕದಿರ ತರಹೋದ

ಹತ್ತೇರು ಕಟ್ಟೀ ಸೆಟ್ಟಿ ಬೀದಿಗೆ ಬಂದ
ಮುತ್ತು ಚೆಲ್ಲಯ್ಯ ಹೊಲಕೆಲ್ಲ | ಅಣ್ಣಯ್ಯ
ಮತ್ತೆ ಧಾನ್ಯಾವು ಬೆಳೆಯಾಲಿ

ಹತ್ತೇರು ಹಿಂದೇ ಬಿತ್ತಾನೆ ಎಡಗಿಂದೆ
ಶೆಟ್ಟಿ ಅಪ್ಪಯ್ನ ಮಗ ಮುಂದೆ | ಅಣ್ಣಯ್ನ
ಹತ್ತೇರ‍್ಗೆ ಸಾಲು ಹೊಡೆದಾನೊ

ಜೋಳದಾ ಹೊಲದಲ್ಲಿ ಜೋಡಟ್ಣೆ ಹಾಕ್ಕೊಂಡು
ಕಾಯುವವನ ಕವಣೀಯ | ಕಂಚಿನ್ಗುಂಡು
ಸಾರಿ ಹೊಡೆದನು ನವಲ್ಹಿಂಡು

ಒನ್ನೇರು ಬಂದೊ ಹೊಲಕೆ ಬಿತ್ತನೆ ಬಂದೊ
ಚೆನ್ನ ಮಾದಿಗನ ಮಿನಿ ಬಂದೊ | ಅಣ್ಣಯ್ಯ
ಹೊನ್ನು ಚೆಲ್ಲೀವೆ ಹೊಲಕೆಲ್ಲ

ಹನ್ನೆರಡೆತ್ತಿನ ಬಾರಿ ಹೊನ್ನ ಮೇಟೀ ಕಂಬ
ಬಾಸಿಂಗ್ದ ಕೊಳಗ ಬಲಗೈಯ | ಕಂದಯ್ಯ
ರಾಶಿ ಅಳೆಯೋದೆ ಬೆಳಗಾಯ್ತು