ಠುಮರಿ ಹಾಡುಗಾರಿಕೆಯ ಭಾರತೀಯ ಖ್ಯಾಲ ಹಾಡುಗಾರಿಕೆಯ ತಳಹದಿಯ ಮೇಲೆಯೇ ಬೆಳೆದು ಬಂದಂತಹ ಲಘು ಶಾಸ್ತ್ರೀಯ ಸಂಗೀತದ ಪ್ರಕಾರವಾಗಿದೆ. ಮುಖ್ಯವಾಗಿ ಇದು ಭಾವಪ್ರದಾನವಾದ ಹಾಡುಗಾರಿಕೆ. ಶಬ್ದಗಳಿಗೆ ಹಾಗೂ ಅದನ್ನು ಉಚ್ಚರಿಸುವ ರೀತಿಗೆ ಕೂಡ ಠುಮರಿ ಹಾಡುಗಾರಿಕೆಯಲ್ಲಿ ಅತ್ಯಂತ ಮಹತ್ವದ ಸ್ಥಾನಗಳಿವೆ. ಗೀತೆಯ ಅರ್ಥವನ್ನು ಸ್ವರಗಳ ಮೂಲಕ ಖಟ್ಕ, ಮುರಕಿ ಮುಂತಾದ, ಅಲಂಕಾರಿಕ ಸ್ವರಗಳೊಂದಿಗೆ ಶ್ರೋತೃ ಮನಮುಟ್ಟುವಂತೆ ತಿಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಾಕಾರದ ಲಘು ಶಾಸ್ತ್ರೀಯ ಸಂಗೀತವು ಶ್ರೋತೃಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಸಂಗೀತದ ವಿವಿಧ ಪ್ರಕಾರಗಳಾದ ದ್ರುಪದ, ಖ್ಯಾಲ, ಠುಮರಿ, ದಾದ್ರಾ, ಟಪ್ಪಾ, ತರಾನಾ, ಮುಂತಾದವುಗಳು ರಂಜಕತೆಯನ್ನು ಹೊಂದಿದ್ದು ಸಂಗೀತ ಪ್ರಪಂಚದಲ್ಲಿ ಉಚ್ಚ ಮಟ್ಟದ ಸ್ಥಾನ-ಮಾನಗಳನ್ನು ಪಡೆದಿವೆ.

ಭಾರತೀಯ ಸಂಗೀತ ಪರಂಪರೆಯಲ್ಲಿ ಅಕ್ಷರ ಬಾದಶಹನ ಕಾಲಾಲ್ಲಿ ದೃಪದ ಹಾಡುಗಾರಿಕೆಯು ಪ್ರಾಚಾರದಲ್ಲಿತ್ತು. ದ್ರುಪದ ಎಂದರೆ ಧ್ರುವಪದ-ಎಂದರೆ ಪದಗಳನ್ನು ಛೇದಿಸಿ ಲಯವನ್ನು ದುಪ್ಪಟ್ಟು-ನಾಲ್ಕುಪಟ್ಟು ಮಾಡಿ ಹಾಡುವುದು.ಈ ಗಾಯನದಲ್ಲಿ ಲೆಕ್ಕಾಚಾರವೇ ಹೆಚ್ಚಾಗಿದ್ದು, ರಂಜಕತೆಯ ಪ್ರಮಾಣವು ಕಡಿಮೆಯಾಗಿರುತ್ತಿತ್ತು. ದ್ರುಪದ ಗೀತೆಗಳಲ್ಲಿ ಹೆಚ್ಚಾಗಿ ರಾಜನ ಗುಣಗಾನ, ಶೌರ್ಯದ ವರ್ಣನೆ ಮುಂತಾದವುಗಳು ಇರುತ್ತಿದ್ದವು.

ಔರಂಗಜೇಬನ ಕಾಲದಲ್ಲಿ ರಾಜಾಶ್ರಯ ಕಳೆದುಕೊಂಡ ಕಲಾವಿದರು ಸಾಮಾನ್ಯ ಜನರ ಮನರಂಜನೆಗಾಗಿ ಹಾಡುವ ಪ್ರಸಂಗ ಬಂದಿತು. ದ್ರುಪದ ಹಾಡುಗಾರಿಕೆಯ ಲೆಕ್ಕಾಚಾರಗಳು ಸಾಮಾನ್ಯ ಜನರಿಗೆ ತಿಳಿಯುತ್ತಿರಲಿಲ್ಲ. ಇಂತಹ ವಾತವರಣದಲ್ಲಿ ಖ್ಯಾಲ ಹಾಡುಗಾರಿಕೆಯು ಹುಟ್ಟಿಕೊಂಡಿತು. ಖ್ಯಾಲ ಇದರ ಅರ್ಥ-‘ಖಯಾಲ ಸೇ ಗಾನಾ’ ಅಂದರೆ ರಾಗ ವಿಸ್ತಾರವನ್ನು ಸ್ವತಂತ್ರವಾದ ರೀತಿಯಲ್ಲಿ ವ್ಯಕ್ತಪಡಿಸುವುದು. ರಂಜಕತೆಯ ಖ್ಯಾಲ ಹಾಡುಗಾರಿಕೆಯ ನಂತರ ಲಘು ಶಾಸ್ತ್ರೀಯ ಸಂಗೀತದ ಪ್ರಕಾರಗಳು ಹುಟ್ಟಿಕೊಂಡವು. ಸಂಗೀತವು ಯಾವುದೇ ಆಗಿರಲಿ, ಅದರ ಮೂಲ ಉದ್ದೇಶ ರಂಜಕತೆ. ರಂಜಕತೆ ಇಲ್ಲದ ಸಂಗೀತವು ಯಾವುದೇ ಇದ್ದರೂ ಅದು ಜನರಿಗೆ ಹಿಡಿಸುವುದಿಲ್ಲ. ಶ್ರೋತೃಗಳ ಮನಮುಟ್ಟುವಂತೆ ಹಾಡುವುದೇ ಕಲಾವಿದನ ಮುಖ್ಯ ಸಾಧನೆ.

ಲಘು ಶಾಸ್ತ್ರೀಯ ಸಣ್ಗೀತ ಎಂದರೆ ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆಯೇ ಲಗು ಸಂಗೀತವನ್ನು ಹಾಡುವದು. ಇದರಲ್ಲಿ ಮುಖ್ಯವಾಗಿ ಠುಮರಿ, ದಾದ್ರಾ, ಟಪ್ಪಾ, ಗಝುಲ್, ಮುಂತಾದವುಗಳು ಬರುತ್ತವೆ.

ಠುಮರಿ :

ಠುಮರಿ ಹಾಡುಗಾರಿಕೆಯು ಭಾವ ಪ್ರಧಾನವಾಗಿದ್ದು ಶೃಂಗಾರ ರಸ ಪ್ರಧಾನವಾದ ಹಾಡುಗಾರಿಕೆಯಾಗಿದೆ. ಹದಿನೇಳನೆಯ ಶತಮಾನದ ರಾಗದರ್ಪನ ಎಂಬ ಗ್ರಂಥದಲ್ಲಿ ಠುಮರಿ ಹಾಡುಗಾರಿಕೆಯು ಇತ್ತು ಎಂಬ ಉಲ್ಲೇಖವಿದೆ. 18ನೇಯ ಶತಮಾನದಲ್ಲಿ ಲಖನೌ ನವಾಬ ವಾಜೀದಲಿ ಶಹಾ ಅವರ ಕಾಲದಲ್ಲಿ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ ಅಲ್ಲದೆ ಕಥಕ ನೃತ್ಯ ಮುಂತಾದ ಲಲಿತ ಕಲೆಗಳಿಗೆ ಪ್ರೋತ್ಸಾಹ ದೊರೆಯಿತು.ವಜೀದಲಿ ಶಹಾ ಅವರ ಕಾಲದ್ದಲಿಯೇ ಠುಮರಿ ಹಾಡುಗಾರಿಕೆಯು ವೈಭವದ ಶಿಖರವನ್ನು ಮುಟ್ಟಿತು. ಇವರು ಸ್ವತಃ ಹಾಡುತ್ತಿದ್ದರಲ್ಲದೇ ಸಂಗೀತದಲ್ಲಿ ಅನುಪಮವಾದ ರಚನೆಗಳನ್ನು ಮಾಡಿದ್ದಾರೆ. ಸಂಗೀತದ ವಿಭಿನ್ನ ಶೈಲಿಗಳಿಗೆ ವಾಜೀದಲಿ ಶಹಾ  ಅವರ ದರ್ಬಾರದಲ್ಲಿ ಹೆಚ್ಚಿನ ಪ್ರಚಾರ ದೊರೆಯಿತು.

ಠುಮರಿ ಹಾಗೂ ಅಥಕ್ ನೃತ್ಯಕ್ಕೂ ಅತ್ಯಂತ ನಿಕಟವಾದ ಸಂಬಂದವಿದೆ.

ಗೀತಂ ವಾದ್ಯ ತಥಾ ನೃತ್ಯಂ ತ್ರಯಂ ಸಂಗೀತಮುಚ್ಯತೆ

ಗೀತ ವಾದ್ಯ ನೃತ್ಯ ಈ ಮೂರು ಸಂಗೀತ ಕಲೆಗಳು ಎನಿಸಿಕೊಳ್ಳುತ್ತವೆ. ಪುರಾತನ ಕಾಲದಿಂದಲೂ ದೇವಾದಿದೇವತೆಗಳಿಗೆ ಈ ಮೂರು ಕಲೆಗಳು ಅತ್ಯಂತ ಪ್ರೀತಿಕರವಾಗಿದ್ದವು.

ನಾಹಂ ವಸಾಮಿ ವೈಕುಂಠೇ
ಯೋಗಿ ಹೃದಯೇ ರಮೌ
ಮದ್ಭಕ್ತಾ
ಯತ್ರ ಗಾಯಂತಿ
ತತ್ರ
ತಿಷ್ಟಾಮಿ ನಾರದಾ

‘ನಾನು ವೈಕುಂಠದಲ್ಲಿ ಇರುವುದಿಲ್ಲ. ಯೋಗಿಗಳ  ಹೃದಯದಲ್ಲಿ ಇರುವುದಿಲ್ಲ. ಸೂರ್ಯ ಮಂಡಲ ಮಧ್ಯದಲ್ಲಿ ಇರುವುದಿಲ್ಲ. ನನ್ನ ಭಕ್ತರು ಎಲ್ಲಿ ಗಾನ ಮಾಡುತ್ತಾರೋ ಅಲ್ಲಿ ನಾನು ಸಿದ್ಧನಾಗಿರುತ್ತೇನೆ’ ಎಂದು ನಾರದರು ಹೇಳಿದ್ದಾರೆ. ಈಶ್ವರನು ಗಾನಪ್ರಿಯನೂ, ತಾಂಡವಪ್ರಿಯನೂ ಆಗಿದ್ದನು.ಆತನ ಕೈಯಲ್ಲಿಯ ಡಮರು ವಾದ್ಯದಿಂದ ತಬಲಾ ವಾದ್ಯದ ಸೃಷ್ಟಿಯಾಗಿದೆ. ಈ ಎಲ್ಲ ವಿಷಯಗಳನ್ನು ಪರಿಶೀಲಿಸಿದಾಗ ಸಂಗೀತ, ವಾದನ-ನರ್ತನ, ಕಲೆಗಳು ಪುರಾತನ ಕಾಲದಿಂದಲೂ ಜನಪ್ರಿಯವಾಗಿದ್ದವು ಎಂಬುದು ತಿಳಿಯುತ್ತದೆ.

ಲಘು ಶಾಸ್ತ್ರೀಯ ಸಂಗೀತದ ಮುಖ್ಯ ಪ್ರಕಾರವಾದ ಠುಮರಿ ಹಾಡುಗಾರಿಕೆಯು ಲಖನೌ ದರಬಾರದ ಗಾಯಕರಾದ ಉಸ್ತಾದ ಸಾದಿಕ್ ಅಲಿ ಅವರಿಂದ ಪ್ರಚಾರದಲ್ಲಿ ಬಂದಿತು. ಅವರನ್ನು ಠುಮರಿ ಹಾಡುಗಾರಿಕೆಯ ಪ್ರವರ್ತಕರು ಎಂದು ಹೇಳುತ್ತಾರೆ. ಕ್ರಿ.ಶ.1800 ರಲ್ಲಿ ಜನ್ಮವೆತ್ತ ಉಸ್ತಾದ ಸಾದಿ ಅಲಿ ಅವರು ಆಗಿನ ಕಾಲದ ಶ್ರೇಷ್ಠ ಠುಮರಿ ಗಾಯಕರಾಗಿದ್ದರು.ಇವರಲ್ಲದೆ ವಾಜಿದಲಿ ಶಹಾ ಅವರ ದರ್ಬಾರದಲ್ಲಿ ಬಿಂದಾಧೀನ್ ಕದರ ಪಿಯಾ ಮುಂತಾದವರು ಶ್ರೇಷ್ಠ ಗಾಯಕರಾಗಿದರು. ಇವೆಲ್ಲವನ್ನು ಪರಿಶೀಲಿಸಿದಾಗ ಲಘು ಶಾಸ್ತ್ರೀಯ ಸಂಗೀತವು ಅನೇಕ ವರ್ಷಗಳಿಂದ ಬೆಳೆದು ಬಂದಿದೆ ಎಂಬುದು ಗೊತ್ತಾಗುತ್ತದೆ.

ಠುಮರಿ ಎಂಬ ಶಬ್ದವು ಮೂಲತಃ ಹಿಂದೀ ಭಾಷೆಯಾಗಿದ್ದು ಇದರ ಪ್ರಸಾರವು ಹೆಚ್ಚಾಗಿ ಉತ್ತರ ಪ್ರದೇಶದಲ್ಲಿ ಆಗಿದೆ. ಬ್ರಿಜ, ಅವಧಿ, ಭೋಜಪುರಿ ಮುಂತಾದ ಭಾಷೆಗಳು ಹಿಂದಿಯ ಉಪಭಾಷೆಗಳು ಅಲ್ಲಿಯ ಜನರು ಅವುಗಳಿಗೆ ಭಾಷೆ ಎನ್ನದೇ ಬೋಲಿ ಎಂದು ಕರೆಯುತ್ತಾರೆ. ಈ ಭಾಷೆಯ ಉಪಯೋಗವು ಠುಮರಿ ಹಾಡುಗಾರಿಕೆಯಲ್ಲಿ ಹೆಚ್ಚಾಗಿ ಇದ್ದುದು ಕಂಡುಬರುತ್ತದೆ. ಇದರಲ್ಲಿ ಭಾವ ಪ್ರದಾನತೆ ಇದ್ದು ಗೀತೆಯ ಶಬ್ದಗಳಿಗೆ ಅತ್ಯಂತ ಮಹತ್ವವಾದ ಸ್ಥಾನ ಇರುತ್ತದೆ. ಭಾಷೆಯಲ್ಲಿ ಭಾವವನ್ನು ಸ್ವರದ ಮುಖಾಂತರ ಶ್ರೋತೃಗಳ ಮನ ಮುಟ್ಟುವಂತೆ ಹಾಡುವುದೇ ಇದರ ಉದ್ದೇಶ.

ಗೀತ, ವಾದ್ಯ, ನೃತ್ಯ, ಈ ಮೂರು ಕಲೆಗಳು ಸುಂದರ ರೀತಿಯಲ್ಲಿ ಸಮನ್ವಯಗೊಂಡು ಆಕರ್ಷಕವಾಗಿ ಕೇಳಿ ಬರುತ್ತದೆ.

ಠುಮರಿ ಈ ಶಬ್ದದ ಉತ್ಪತ್ತಿಯು ಸುಂದರ ಸ್ತ್ರೀಯ ವಿಶಿಷ್ಟ ನಡಿಗೆಯ ಸೂಚಕವಾಗಿದೆ. ಠುಮಕ ಚಲತ ರಾಮಚಂದ್ರ ಎಂಬುದನ್ನು ಹಿಂದೀ ಭಜನ್ ದಲ್ಲಿ ನಾವು ಮೇಲಿಂದ ಮೇಲೆ ಕೇಳುತ್ತೇವೆ. ಇನ್ನೂ ಎಲವು ಗ್ರಂಥಗಳಲ್ಲಿ ಠುಮರಿ ಎಂಬ ಶಬ್ದದ ಅರ್ಥವನ್ನು ಠುಮ ಮತ್ತು ರೀ ಎಂಬ ಪ್ರಕಾರದಿಂದ ಹೇಳುತ್ತಾರೆ.ಠುಮ್ ಅಂದರೆ ಠುಮಕ ಚಾಲ ಎಂಬ ಅರ್ಥಕೊಟ್ಟು ರೀ ಎಂದರೆ ನಾಯಕಿಯು ತನ್ನ ಅಂತರಂಗದ ಭಾವನೆಗಳನ್ನು ರೀ ಅರೀ ಏರೀ ಮುಂತಾದ ಆಡುಭಾಷೆಗಳನ್ನು ಉಪಯೋಗಿಸಿ ಹೇಳುವುದು. ಶೃಂಗಾರ ರಸದಲ್ಲಿ ಮುಖ್ಯವಾಗಿ ಎರಡು ರಸಗಳಿವೆ. 1. ಸಂಯೋಗ ರಸ ಹಾಗೂ 2. ವಿಯೋಗ ರಸ. ಈ ಎರಡೂ ರಸಗಳ ಪ್ರಯೋಗವು ಠುಮರಿ ಹಾಡುಗಾರಿಕೆಯಲ್ಲಿ. ಅತ್ಯಧಿಕವಾಗಿ ಕೇಳಲು ಸಿಗುತ್ತದೆ.

ಲಖನೌ ನವಾಬ ವಾಜಿದಲಿ ಶಹಾ ಅವರ ದರ್ಬಾರದಲ್ಲಿ ಠುಮರಿ ಗಾಯನವು ಹುಟ್ಟಿ ಹೆಚ್ಚಿನ ಪ್ರಚಾರ ಪಡೆಯಿತು. ಆದ್ದರಿಂದ ಲಖನೌ ಅನ್ನು ಠುಮರಿಯ ಜನ್ಮಸ್ಥಳ ಎಂದು ಕರೆಯುತ್ತಾರೆ. ಭಾವನೆಗಳ ದೃಷ್ಟಿಯಲ್ಲಿ ಪ್ರೇಮ, ಭಕ್ತಿ, ಹರ್ಷ, ನಿರಾಶೆ, ಶೃಂಗಾರ ರಸದೊಡನೆ ಕರುನ ರಸ ಮುಂತಾದವುಗಳು ಇದರಲ್ಲಿ ಹೇರಳವಾಗಿ ಕೇಳಲು ಸಿಗುತ್ತವೆ.

ಲೋಕಗೀತೆಗೂ ಠುಮರಿ ಹಾಡುಗಾರಿಕೆಗೂ ಅತ್ಯಂತ ನಿಕಟವಾದ ಸಂಬಂಧವಿದೆ. ಲಘುಶಾಸ್ತ್ರೀಯ ಸಂಗೀತ ಶೈಲಿಗಳಲ್ಲಿ ಲೋಕಗೀತೆಗಳು ಅಂತರ್ಗತವಾಗಿವೆ. ಲೋಕಗೀತೆಗಳಲ್ಲಿ ಬಳಸುವ ರಾಗ, ತಾಳ, ಭಾಷೆಗಳಲ್ಲಿ ಸಾಮ್ಯತೆ ಕಂಡುಬರುತ್ತವೆ. ಎರಡರಲ್ಲಿಯೂ ಕಾಫಿ, ಬರವಾ, ಸಿಂಧೂರಾ, ಪೀಲೂ, ಮಾಂಡ, ಬಿಹಾರಿ, ಪಹಾಡಿ, ಖಮಾಜ, ತಿಲಕಾಮೋದ, ಝಿಂಜೋಟಿ, ಸಿಂಧು ಬೈರವಿ ಮುಂತಾದ ರಾಗಗಳ ಪ್ರಯೋಗವನ್ನು ನಾವು ಗಮನಿಸಬಹುದು. ಹಾಗೆಯೇ ದೀಪಚಂದಿ, ಕಹರವಾ, ದಾದರಾ, ರೂಪಕ ಮೊದಲಾದ ತಾಳಗಳ ಪ್ರಯೋಗ ಅಲ್ಲದೇ ಎರಡರಲ್ಲಿಯೂ ಬ್ರಿಜ, ಅವಧಿ, ಬೋಜಪುರಿ, ಭಾಷೆಗಳನ್ನು ಬಳಸುವುದರಿಂದ ಭಾಷಾ ಸಾಮ್ಯತೆ ಇರುವುದು ಸಹ ಕಂಡುಬರುತ್ತದೆ.

ನೃತ್ಯ ಹಾಗೂ ಠುಮರಿಯೊಂದಿಗೂ ಅತ್ಯಂತ ನಿಕಟವಾದ ಸಂಬಂಧವಿದೆ.ಕಥಕ,ನೃತ್ಯ ಹಾಗೂ ಠುಮರಿ ಹಾಡುಗಾರಿಕೆಗೆ ಅತ್ಯಂತ ನಿಕಟವಾದ ಸಂಬಂದವಿದೆ. ಕಥಕ ಎಂಬ ಶಬ್ದದ ಉತ್ಪತ್ತಿಯು ಸಂಸ್ಕೃತದಿಂದ ಆಗಿದೆ. ‘ ಹಥನ ಕರೆ ಸೋ ಕಥಕ್ ಕಹಿಯೆ’ ಎಂದರೆ ಕಥೆಯನ್ನು ಹೇಳುವುದೇ ಕಥಕ ಎಂದು ಕರೆಯುತ್ತಾರೆ. ನೈಋತ್ಯ ಕಾರ್ಯಕ್ರಮಗಳಲ್ಲಿ ಕಲಾವಿದರು ಠುಮರಿ ಹಾಡುತ್ತಾ ನೃತ್ಯ ಮಾಡುವುದು ಪ್ರಚಾರದಲ್ಲಿದೆ. ಠುಮರಿ ಗಾಯನ ಹಾಗೂ ಕಥಕ ನೃತ್ಯ ಎರಡೂ ಲಖನೌದಲ್ಲಿ  ಏಕಕಾಲಕ್ಕೆ ಬೆಳೆದು ಬಂದಿವೆ. ಗೀತೆಯಲ್ಲಿ ಅಡಗಿದ ಭಾವನೆಗಳನ್ನು ನೃತ್ಯ ಅಭಿನಯ ಮೂಲಕ ತಿಳಿಸುವುದು ಈ ನೃತ್ಯ ಶೈಲಿಯ ಉದೇಶ.

ಕಥಕ ನೃತ್ಯದಲ್ಲಿ ಎರಡು ಪ್ರಾಕಾರಗಳಿವೆ. ಒಂದು ಕುಳಿತುಕೊಂಡು ಆಂಗಿಕಾಭಿನಯ ಮಾಡುವುದು. ಇನ್ನೊಂದು ನಿಂತು ನೃತ್ಯ ಮಾಡುವುದು. ಕುಳಿತುಕೊಂಡು ಮಾಡುವ ಆಂಗಿಕ ಅಭಿನಯದಲ್ಲಿ ಟುಮರಿಯ ಹಾಡುಗಾರಿಕೆಯು ಹೆಚ್ಚಾಗಿ ಇರುತ್ತದೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅಂಉಬರುವ ಘರಾಣಾ ಪದ್ದತಿಯಲ್ಲಿ ಠುಮರಿ ಹಾಡುಗಾರಿಕೆಯಲ್ಲಿ ಕಂಡುಬರುವುದಿಲ್ಲ. ಪೂರಬ ಅಂಗ-ಪಂಜಾಬ ಅಂಗ ಎಂಬ ಎರಡು ಪ್ರಕಾರದಿಂದ ಠುಮರಿ ಪ್ರಸ್ತುತಪಡಿಸುತ್ತಾರೆ. ಪೂರಬ ಅಂಗದ ಹಾಡುಗಾರಿಕೆಯು ಲಖನೌ ಕ್ಷೇತ್ರದಲ್ಲಿ ಬೆಳೆದುಬಂದ ಕಾರಣ ಇದಕ್ಕೆ ಲಖನೌವಿಶೈಲಿ ಎಂದು ಕರೆಯುತ್ತಾರೆ. ಪಂಜಾಬ ಅಂಗವು ಬನಾರಸದಲ್ಲಿ ಬೆಳೆದುಬಂದ ಕಾರಣ ಇದಕ್ಕೆ ಬನಾರಸೀ ಶೈಲಿಯ ಠುಮರಿ ಎಂದು ಕರೆಯುತ್ತಾರೆ.

ಪೂರಬ ಅಂಗದ ಶೈಲಿಯ ಪರಂಪರಾಗತವಾಗಿ ಬಂದಿರುವ ಹಾಡುಗಾರಿಕೆ. ಇದರಲ್ಲಿ ಭಾವಪ್ರಧಾನ್ಯತೆ ಹೆಚ್ಚು ಇದಕ್ಕೆ ಬೋಲ್ ಬನಾವ ಠುಮರಿ ಎಂದು ಕರೆಯುತ್ತಾರೆ. ಇದರಲ್ಲಿ ತಾನ್, ಖಟಕಾ ಮುರಕಿಗಳ ಪ್ರಯೋಗ ಕಡಿಮೆ ಇದ್ದು ಗೀತೆ ಶಬ್ದಗಳಿಗೆ ಮಹತ್ವ ಇರುತ್ತದೆ. ಪ್ರಸಿದ್ಧ ಠುಮರಿ ಗಾಯಕಿಯರಾದ ಸಿದ್ದೇಶ್ವರಿದೇವಿ, ರಸೂಲನ್ ಬಾಯಿ, ಮುಂತಾದವರು ಪೂರಬ ಅಂಗದಿಂದಲೇ ಠುಮರಿ ಗಾಯನ ಪ್ರಸ್ತುತಪಡಿಸುತ್ತಿದ್ದರು. ಬೇಗಂ ಅಖ್ತರ ಅವರು ಠುಮರಿಗಾಯನದಲ್ಲಿ ಎರಡೂ ಅಂಗಗಳ ಮಿಶ್ರಣ ಮಾಡಿ ಆಕರ್ಷಕವಾಗಿ ಹಾಡುತ್ತಿದ್ದರು.

ಪಂಜಾಬ ಅಂಗ: ‘ಬನಾರಸ ಶೈಲಿಬೋಲ್ ಬಾಟ ಠುಮರಿ 

ಬನಾರಸ ಸುತ್ತಲೂ ಹಾಡಲ್ಪಡುವ ಲೋಕ ಗೀತೆಗಳ ಪ್ರಭಾವವು ಅಲ್ಲದೆ ಚೈತಿ, ಕಜರಿ, ಸಾವನ ಮುಂತಾದ ಗೀತೆಗಳ ಪ್ರಭಾವ ಇದರ ಮೇಲೆ ಆಗಿದೆ. ಇದೊಂದು ಚಂಚಲ ಹಾಡುಗಾರಿಕೆ. ಖಟಾಕಾ, ಮುರಕಿ, ಚಿಕ್ಕಚಿಕ್ಕ ತಾನುಗಳು ಲಯದೊಂದಿಗೆ ಇರುವುದು ಕಂಡುಬರುತ್ತದೆ. ಲಯವು ದೃತ್ ಗತಿಯಲ್ಲಿ ಇರುತ್ತದೆ. ಉದಾ: ದಾದರಾ, ದೀಪಚಂದಿ, ಪಂಜಾಬಿ, ಕಹರವಾ ಮುಂತಾದ ತಾಲಗಳಲ್ಲಿ ಹಾಡುತ್ತಾರೆ.

ಈ ಶೈಲಿಯಲ್ಲಿ ಉಸ್ತಾದ ಬಡೇಗುಲಾಮ ಅಲಿ ಖಾನ ಅವರು ಅಮರವಾದ ಹೆಸರನ್ನು ಗಳಿಸಿದ್ದಾರೆ. ಸ್ವರದ ವೈಚಿತ್ರ್ಯವನ್ನು ತೋರಿಸುವುದೇ ಈ ಶೈಲಿ ವಿಶೇಷತೆ. ಈ ಎಲ್ಲಾ ವಿಶೇಷತೆಗಳಿಂದ ಪಂಜಾಬ ಶೈಲಿಯ ಠುಮರಿಯು ಹೆಚ್ಚು ಜನಪ್ರಿಯವಾಗಿದೆ.

ಲಘು ಶಾಸ್ತ್ರೀಯ ಸಂಗೀತದಲ್ಲಿ ಸೌಂದರ್ಯ ದೃಷ್ಟಿಯಿಂದ ಕೆಲವು ಮಹತ್ವದ ಅಂಶಗಳಿಗೆ.

1) ಲಘು ಶಾಸ್ತ್ರೀಯ ಸಂಗೀತ ಹಾಡುವ ರಾಗಗಳಲ್ಲಿ ರಂಜಕತೆಗೆ ಪ್ರಾಧಾನ್ಯತೆ ಇರಬೇಕು.

2) ಠುಮರಿ ಚಪಲ ಲಯಾ ಮುರಕಿ ಪ್ರಧಾನ ಗಾಯನ ಶೈಲಿಯಿರಬೇಕು.

3) ಆವಿರ್ಭಾವ,ತಿರೋಭಾವದ ಸ್ವತಂತ್ರ ಉಪಯೋಗ ಬರಬೇಕು.

4) ಶ್ರುತಿ ಮಧುರವಾದ ಸ್ವರಗಳನ್ನು ಹೆಚ್ಚಾಗಿ ಉಪಯೋಗಿಸಬೇಕು.

5) ಒಂದೇ ಆವರ್ತನದಲ್ಲಿ ಆಲಾಪ ಚಿಕ್ಕ ತಾನ ಮುಂತಾದ ಎಲ್ಲ ಅಲಂಕಾರಿಕ ಖಟ್ಕಾ ಮುರ್ಕಿಗಳ ಪ್ರಯೋಗ ಲಘು ಶಾಸ್ತ್ರೀಯ ಸಂಗೀತವನ್ನು ಹಾಡುವಾಗ ಉಪಯೋಗಿಸಬೇಕು.

6) ಶೃಂಗಾರ ಪ್ರಧಾನ ಸುಂದರ ಮತ್ತು ಮಧುರ ರಚನೆಗಳನ್ನು ಆಕಷಕವಾಗಿ ಹಾಡಬೇಕು, ಹಾಗೂ

7) ಲಘು ಶಾಸ್ತ್ರೀಯ ಸಂಗೀತ ಶೈಲಿ ಭಾವ ಪ್ರಧಾನ ಹೃದಯಸ್ಪರ್ಶಿಯಾಗಿರಬೇಕಲ್ಲದೆ ಅಲಾ ಪೂರ್ಣತೆಯ ರಸದೌತಣ ಆಗಿರಬೇಕು. ಈ ಎಲ್ಲ ಅಂಶಗಳು ಲಘು ಶಾಸ್ತ್ರೀಯ ಸಂಗೀತದಲ್ಲಿ ಇದಾಗ ಮಾತ್ರ ಅಂತಹ ಗಾಯನದಲ್ಲಿ ಸೌಂದರ್ಯವು ಅಧಿಕವಾಗಿರುತ್ತದೆ.

ಲಘು ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಪ್ರಮುಖವಾದ ಠುಮರಿಯೊಂದಿಗೆ ಇನ್ನೂ ಹಲವಾರು ಪ್ರಕಾರಗಳು ಪ್ರಚಾರದಲ್ಲಿವೆ. ಆದರೆ ಅವೆಲ್ಲವೂ ಠುಮರಿ ಹಾಡುಗಾರಿಕೆಯಲ್ಲಿ ಅಂತರ್ಗತವಾಗಿವೆ. ಅವುಗಳೆಂದರೆ ಅರಾ, ಹೋರಿ, ಕಜರಿ, ಸಾವನ, ಚೈತಿ, ಟಪ್ಪಾ, ಗಜಲ್ ಮುಂತಾದವುಗಳು.

ಗಜಲ್ :

ಗಜಲ್ ಇದು ಮೂಲತ: ಫಾರ್ಸಿ ಶಬ್ದವಾಗಿದ್ದು, ಇದರ ಅರ್ಥ ಪ್ರಣಯ ಪ್ರಧಾನ ಗೀತೆ ಎಂದಾಗುತ್ತದೆ. ಗಜಲ ಇದರ ಶಾಬ್ದಿಕ ಅರ್ಥವು ಪ್ರೇಮದ ಮಾತುಗಳನ್ನು ವ್ಯಕ್ತಪಡಿಸುವುದು. ಲೌಕಿಕ ಪ್ರೇಮದ ಮಾತುಗಳನ್ನು ವ್ಯಕ್ತಪಡಿಸುವುದಕ್ಕೆ ಗಜಲ ಎನ್ನುತ್ತಾರೆ. ಇದರಲ್ಲಿ ಶಬ್ದ ಮತ್ತು ಶೃಂಗಾರ ರಸ ಪ್ರಧಾನವಾಗಿರುತ್ತದೆ. ಆಶುಕೋ ಎಂದರೆ ಪ್ರೇಮಿ ಹಾಗೂ ಮಾಶುಕೋ ಎಂದರೆ ಪ್ರೇಮಿಕಾ. ಇದರಲ್ಲಿಯ ಪ್ರೇಮ ಸಂಭಾಷಣೆ ಗಜಲದ ಮುಖ್ಯ ವಿಷಯ

ಎಲ್ಲ ತರಹದ ಲಲಿತ ಕಲೆಗಳಿಗೆ ಆಶ್ರಯದಾತನಾದ ಹಾಗೂ ಸ್ವತಃ ವಿವಿಧ ರೀತಿಯ ಸಂಗೀತದಲ್ಲಿಯ ರಚನೆಗಳನ್ನು ಮಾಡಿದ ಲಖನೌ ನವಾಬ ವಾಜಿದ ಅಲಿ ಶಹಾ ಅವರಿಗೆ ರಾಜ್ಯವನ್ನು ಆಳುವ ಕಡೆಗೆ ಲಕ್ಷ್ಯವಿರಲಿಲ್ಲ. ಸದಾ ಲಲಿತ ಕಲೆಗಳಲ್ಲಿ ಮಗ್ನನಾದ ಇವರನ್ನು ಬ್ರಿಟಿಷರು ಸೆರೆ ಹಿಡಿದು ಕಲಕತ್ತಾದ ಸೆರೆಮನೆಯಲ್ಲಿ ಇಟ್ಟರು. ಲಖನೌದಿಂದ ಕಲಕತ್ತಾಕ್ಕೆ ಸೆರೆ ಹಿಡಿದು ಬರುವಾಗ ವಾಜಿದ ಅಲಿ ಶಹಾ ಅವರು ಈ ಠುಮರಿಯನ್ನು ಹಾಡುತ್ತಾ ಹೋದರು ಎಂಬ ಉಲ್ಲೇಖವಿದೆ. ಬಾಬುಲ ಮೋರಾ ನೈಹರ ಫೋಟೋಹಿ ಚಾಯೆ.

ಇಂತಹ ದುಃಖದ ಸಂಗತಿಯಲ್ಲಿಯೂ ಭೈರವಿ ರಾಗಾ ಅನುಪಮವಾದ ರಚನೆಯನ್ನು ಹಾಡುತ್ತಾ ಹೋದದ್ದನ್ನು ಕಂಡಾಗ ಎಂತಹ ಸಂಗೀತ ಪ್ರೇಮಿಗಳಿದ್ದರೆಂಬುದು ಗೊತ್ತಾಗುತ್ತದೆ.

ಮದುವೆಯಾಗಿ ಹೋಗುವಾಗ ನನ್ನ ತವರು ಮನೆ ವಾಸ ಮುಗಿಯಿತು. ಇಲ್ಲಿ ಜನರೆಲ್ಲ ನನಗೆ ಬೇರೆಯವರು ಎಂದು ಲಖನೌ ನಗರವು ನನಗೆ ತವರುಮನೆ ಇದ್ದಂತೆ ಎಂಬುದಾಗಿ ಹೋಲಿಸಿದ್ದಾರೆ. ಇಂತಹ ಅನುಪಮವಾದ ರಚನೆಯನ್ನು ಕಲಾವಿದರು ಇಂದಿಗೂ ಹಾಡುತ್ತಾರೆ.

ಟಪ್ಪಾ :

ಶೋರಿಮಿಯಾ ಎಂಬುವರು ಟಪ್ಪಾ ಶೈಲಿಯ ಆವಿಷ್ಕಾರ ಮಾಡಿದ್ದಾರೆ. ಹೀರ ರಾಂಝಾ ಅವರ ಪ್ರಣಯ ಪ್ರಸಂಗದ ವರ್ಣನೆಯು ಇದರಲ್ಲಿ ಅಧಿಕವಾಗಿರುತ್ತದೆ. ಇದೊಂದು ಕ್ಲಿಷ್ಟವಾದ ಹಾಡುಗಾರಿಕೆ ಆಗಿದೆ. ಶಬ್ದಗಳ ನಡುವೆ, ವೇಗವಾದ ತಾನಗಳ ಪ್ರಯೋಗವು ಇದರಲ್ಲಿ ಆಕರ್ಷಕವಾದ ಸೌಂದರ್ಯವನ್ನು ಹುಟ್ಟಿಸುತ್ತದೆ. ಯೋಗ್ಯವಾದ ಧ್ವನಿಯನ್ನು ಪಡೆದು ಕಲಾವಿದರು ಮಾತ್ರ ಟಪ್ಪಾ ಮಾಡುತ್ತಾರೆ. ಠಮರಿಯನ್ನು ಹಾಡುವ ರಾಗಗಳಲ್ಲಿ ಎಂದರೆ ಖಾಫಿ, ಭೈರವಿ, ಸಿಂಧೂರಾ, ಖಮಾಜ ಪೀಲೂ ಮುಂತಾದ ರಾಗಗಳಲ್ಲಿ ಟಪ್ಪಾ ಹಾಡಲ್ಪಡುತ್ತದೆ.