ಆಕಾಶದೊಳಗೆ ಆರ್ಭಟವೇನಿರೆ
ದೇವೆಂದರು ರಾಯ ಹೊರಪಯ್ಣ – ಹೋಗುವಾಗ
ಸಿಡಿಲು ಮಿಂಚಿನ ಐಭೋಗ

ಕೆಂಧೊಳು ಎದ್ದೋ ಮುಗಿಲ ಮೋಡsಕವಿದೋ
ಹಗಲೆ ಇರುಳಾದೋ ಜಗಕೆಲ್ಲ – ಮಳೆರಾಯ
ಮುಗಿಲಿಳಿದು ಬರುವೊ ಸಡಗರ

ಕಾಮನ ಬಿಲ್ಲಿಗೆ ಚಿನ್ನದ ಹಿಡಿಕಟ್ಟು
ವಜ್ರ ಮಾಣಿಕದ ಸರಳಂಬು – ತಕ್ಕೊಂಡು
ಮಳೆರಾಯ ಮುಗಿಲ ಇಳಿದಾನೆ

ಎತ್ತ ಹೋಗಿದ್ದಯ್ಯ ಇತ್ತ ಬಾ ಮಳೆರಾಯ
ಬತ್ತದ ಬೈಲಿಗೆ ನೀರಿಲ್ಲ – ದೆ ಬಾಡ್ಯಾವೆ
ಜಗ್ಗಿಸಿ ಹುಯ್ಯೋ ಮಳೆರಾಯ

ಬಾರೆಂದರೆ ಬಾರನು ಹೋಗೆಂದರೆ ಹೋಗನು
ಯಾರಿಚ್ಚೆ ಹೇಳು ಮಳೆರಾಯ – ಶಿವರಾಯ
ತನ್ನಿಚ್ಚೆ ಬಂದಲ್ಲಿ ಸುರಿವೋನು

ಹಸ್ತದ ಮಳೆ ಹುಯ್ದು ಚಿತ್ತದ ಬಿಸಲು ಕಾದು
ಮುತ್ತಿನ ಸ್ವಾತಿಯ ಮರೆಮಳೆ – ಹುಯ್ದsರೆ
ಬತ್ತಕೆ ಮುತ್ತು ಕವಿದಾವೆ

ಸ್ವಾತಿಯಾ ಮಳೆಯಾಗಿ ನೂತನದ ಕೆರೆ ತುಂಬಿ
ತೇಪಾಡುತಾವೆ ಕುಣಿಗಲು – ಕುಚ್ಚಲು ಮೀನು
ಮಾತುಗಾರಣ್ಣಯ್ಯ ಬಲೆ ಬೀಸೋ

ಕೆಮ್ಮುಗಿಲೆದ್ದಿತು ಕೆರೆಗೆ ನೀರು ಬಂತು
ಅಣ್ಣಯ್ನ ಹೊಲಕೆ ಹದವಾಯ್ತು – ಅಣ್ಣಯ್ಯ
ಹೊನ್ನಿನ ಕೂರಿಗೆಯ ಹದಮಾಡು

ಅಣ್ಣ ತಮ್ಮದಿsರು ಹೊನ್ನೇರ ಕಟ್ಟಿಕೊಂಡು
ಹೊನ್ನ ಬಿತ್ಯಾರೇ ಹೊಲಕೆಲ್ಲ
ಆಕಾಶದೊಳಗೆ ಯಾಕಿದ್ದೆ ಮಳೆರಾಯ

ಹೊಂಬಾಳೆ ಹಂಗೆ ಹೊಡೆ ಬಂದೆ – ರಾಗಿ ಪೈರು
ಕಾಚಕ್ಕಿ ಬಾಯ ಬಿಡುತಾವೆ
ಭೀಮ ಇಲ್ಲದೆ ಬೀದ್ಯೆಲ್ಲ ಬಿಮ್ಮಂದೋ

ರಾಜ್ಯಿಕ್ಕೆ ಒಬ್ಬ ಮಳೆರಾಯ – ನಿಲ್ಲದೆ
ಬಿತ್ತಿದ ಪೈರೆಲ್ಲ ಒಣಗೀದೋ
ಹಸುರು ಸೀರ ಉಟ್ಟು ಬಸುರಾದಳು ಭೂಮೀ ತಾಯಿ

ಬಸುರಾದರವಳ ನಡು ಚೆಂದ – ರಾಮರ ಬೈಲ
ಸೂಸು ಬತ್ತದ್ಹಂಗೆ ಬಳುಕಾಳು
ಊರ ಮುಂದಿರ ಹೊಲಕೆ ಉದ್ಹಾಕೋ ಅಣ್ಣಯ್ಯ

ಕಡೆ ಕಡೆ ಬಿತ್ತು ಕಡಲೆ[ಯ] – ಶಾವಂತಗೆಯ
ಮೊಗ್ಗು ಬಿಟ್ಟರೆ ನಮ್ಮ ತುರುಬಿಗೆ
ಮುದ್ದು ಮಳೆರಾಯ ಮದನಾಡಿ ಹುಯ್ಯಯ್ಯ

ಹೆಗ್ಗೆಯಿ ಕುಂತಿ ತವರೂರು – ಊರ ಮೇಲೆ
ಜಗ್ಗಿಸಿ ಹುಯ್ಯೋ ಮಳೆರಾಯ
ರಾಗು ದೇವರಿಗೆ ಬೇರೆಲ್ಲ ಬೆಳ್ಳೀದೆ

ತಾಳು ತುದಿಯೆಲ್ಲಿ ನವರತ್ನ – ರಾಗುದೇವ
ಓಲಾಡುತಾರ ಹೊಲದಲ್ಲಿ
ನಿಸ್ತ್ರೀಯ ಮನೆಯಲ್ಲಿ ಇಂಬಾಗಿ ಇರುವೋನೆ

ಗೊಂಬೆ ಹಚ್ಚಡದ ಮಳೆರಾಯ – ನೀನಿಲ್ಲದೆ
ಹಿಂಗೆ ಗಿಡವೆಲ್ಲ ಒಣಗ್ವೋದೋ – ದೇವೇಂದ್ರ
ಸ್ವಾಮಿ ನೀ ಬಂದು ಕರುಣಿಸೋ

ಅಣ್ಣಾ ನೀನಿಲ್ಲದೇ ಒಣಗ್ಹೋಯ್ತು ರಾಜ್ಯವು
ಅಣ್ಣೆ ಸಪ್ಪಿನ್ಹಂಗೆ ಒಣಗ್ಹೋದೋ – ದನ ಕುರಿ
ಅಣ್ಣ ನೀ ಬಂದು ಕರುಣಿಸೋ

ಅಪ್ಪಾ ನೀನಿಲ್ಲದೆ ಸೊಕ್ಹೋಯ್ತು ರಾಜ್ಯವು
ಸೆಪ್ಪೆ ದಂಟಾಯ್ತು ದನಗsಳು – ದೇವೇಂದ್ರ
ಅಪ್ಪಾ ನೀ ಬಂದು ಕರುಣಿಸೋ