ಯಾವಾಗ ಮಹಾತ್ಮಾಗಾಂಧಿಯವರ ಉಜ್ವಲ ವ್ಯಕ್ತಿತ್ವ ಈ ರಾಷ್ಟ್ರದ ಜನತೆಯ ಹೃದಯದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹತ್ತಿಸಿತೋ ಆಗ, ಆಯಾ ರಾಜ್ಯದ ಜನತೆಯ “ರಾಜಭಕ್ತಿ”, ಮೊಟ್ಟಮೊದಲಿಗೆ ನಿಜವಾದ ಅರ್ಥದಲ್ಲಿ ರಾಷ್ಟ್ರಪ್ರೇಮವಾಗಿ ಪರಿವರ್ತಿತವಾಯಿತು. ಅಲ್ಲದೆ, ಆಯಾ ರಾಜ್ಯದ ಆಳರಸರು ಬ್ರಿಟಿಷ್ ಪ್ರಭುತ್ವದ ನಿಯಂತ್ರಣ ಮಾಧ್ಯಮಗಳಾಗಿ ಕಂಡ ಕಾರಣದಿಂದ ಮತ್ತು ಜನತೆಯನ್ನು ಪಾರತಂತ್ರ್ಯದಲ್ಲಿರಿಸಲು ಪ್ರಯತ್ನಿಸಿದ ಕಾರಣದಿಂದ, ಅದುವರೆಗೂ ಅಲ್ಲಲ್ಲಿನ ಜನತೆಗೆ ಆಯಾ ರಾಜ್ಯದ ರಾಜರುಗಳ ಬಗೆಗಿದ್ದ ರಾಜಭಕ್ತಿ ಚೂರುಚೂರಾಯಿತು. ಈ ಅವಕಾಶವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದುಪಯೋಗಪಡಿಸಿಕೊಂಡು, ಜನತೆಯನ್ನು ಸಂಘಟಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಹೂಡಿತು.

ಮಹಾತ್ಮಾಗಾಂಧಿಯವರ ಮುಂದಾಳುತನದಲ್ಲಿ ಈ ನಾಡಿನ ಮಣ್ಣ ಕಣಕಣವೂ ಸಿಡಿಲಾಗಿ, ಹುಲ್ಲುಕಡ್ಡಿಯೂ ಬ್ರಹ್ಮಾಸ್ತ್ರವಾಗಿ ನಿಂತು, ಪರಕೀಯ ಪ್ರಭುತ್ವದ ವಿರುದ್ಧವಾಗಿ, ಸುಮಾರು ಮೂರು ದಶಕಗಳ ಕಾಲ ನಡೆಯಿಸಿದ ಆ ರೋಮಾಂಚ- ಕಾರಿಯಾದ ಸಾಹಸ ಇಂದು ನಮ್ಮ ಪಾಲಿಗೆ ಕೇವಲ ಒಂದು ನೆನಪಾಗಿದೆ; ಮಕ್ಕಳ ಪಾಲಿಗೆ ಕತೆಯಾಗಿದೆ. ಚಾರಿತ್ರಿಕ, ಸಾಹಿತ್ಯಕ ದಾಖಲೆಗಳಲ್ಲಿರುವ, ಕೆದಕಿದರೆ ಇನ್ನೂ ಹೊಗೆಯಾಡುವ ಈ ಹೋರಾಟದ ಸಂಗತಿ ಸಾಹಿತಿಗಳ ಕಲ್ಪನೆಗೆ ಇಂದಿಗೂ ಸ್ಫೂರ್ತಿಯನ್ನೊದಗಿಸುವಷ್ಟಿದೆ. ಈ ಹೋರಾಟದ ಕಾಲದಲ್ಲಿ, ಜನತೆಯನ್ನು ಪ್ರೇರಿಸಿದ ಸಾಹಿತಿಗಳ ಪಾತ್ರವೂ, ಹಾಗೂ ಹೋರಾಟದಿಂದ ಸ್ಫೂರ್ತಿಗೊಂಡ ಸಾಹಿತ್ಯಾಭಿ ವ್ಯಕ್ತಿಯೂ ಗಣನೀಯವಾಗಿದೆ.

ಪಾಶ್ಚಾತ್ಯ ರೋಮ್ಯಾಂಟಿಕ್ ಕವಿಗಳ ಪ್ರೇರಣೆಯಿಂದ ಹೊಸಗನ್ನಡದಲ್ಲಿ “ನವೋದಯ”ವು ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರ ಪ್ರಯೋಗಗಳಲ್ಲಿ ಕಾಣಿಸಿಕೊಂಡಿತು. ಶ್ರೀಯವರು “ರಾಜಸೇವಾಸಕ್ತ” ಎಂಬ ಪ್ರಶಸ್ತಿಯನ್ನು ಮೈಸೂರು ಅರಸರಿಂದ ಪಡೆದವರು. “ನಾಲ್ವಡಿ ಕೃಷ್ಣನ ಮೈಸೂರ”ನ್ನೂ ರಾಜರ ಬಗೆಗಿದ್ದ ತಮ್ಮ ರಾಜಭಕ್ತಿಯನ್ನೂ ಬಿಚ್ಚುಮನಸ್ಸಿನಿಂದ ತಮ್ಮ ಕವಿತೆಗಳಲ್ಲಿ ಪ್ರಕಟಿಸಿಕೊಂಡ ಶ್ರೀಯವರು, ಆಗ ತಾನೆ ಮಹಾತ್ಮಾಗಾಂಧಿಯವರಿಂದ ಸಕ್ರಿಯವಾಗಿ ರೂಪುತಾಳುತ್ತಿದ್ದ ಸ್ವಾತಂತ್ರ್ಯದ ಹಂಬಲಕ್ಕೆ ಯಾವ ಬಗೆಯಾದ ಅಭಿವ್ಯಕ್ತಿಯನ್ನೂ ನೀಡದಿದ್ದುದು ಆಶ್ಚರ್ಯಕರವಾಗಿದೆ. ಅಷ್ಟೆ ಅಲ್ಲ “ಆಳೌ ಬ್ರಿಟಾನಿಯಾ ಆಳುತೆರೆಗಳನು”, “ಏನು ಮಾಡಿದೆ ನಿನಗೆ ಇಂಗ್ಲೆಂಡ್, ನಿನ್ನಿಂಗ್ಲೆಂಡ್” ಎಂಬಂಥ ಕವಿತೆಗಳನ್ನು ಅನುವಾದಿಸಿ “ಇಂಗ್ಲಿಷ್ ಗೀತಗಳು” ಕವನ ಸಂಗ್ರಹದಲ್ಲಿ ಸೇರಿಸಿಕೊಂಡಿದ್ದು ಇನ್ನೂ ಆಶ್ಚರ್ಯಕರವಾಗಿದೆ. ಆದರೆ ಅದೇ ಕವನ ಸಂಗ್ರಹದಲ್ಲಿ “ಭರತಮಾತೆಯೆ, ಭರತಮಾತೆಯೆ ಎಂದು ನೀ ತಲೆಯೆತ್ತುವೆ” ಎಂಬ ಕೊರಗಿನ, ಆಶಯದ ಪದ್ಯವೂ ಇದೆ. ಏನಾದರೂ ಅವರ “ರಾಜಭಕ್ತಿ” ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ಹಾದಿ ನಿರ್ಮಿಸುವ ಕಳಕಳಿ ಇವಿಷ್ಟೆ ಪ್ರಧಾನವಾಗಿದ್ದುಕೊಂಡು, ಶ್ರೀಯವರು ಅಂದಿನ ರಾಜಕೀಯ ಆಂದೋಳನಕ್ಕೆ ಅಭಿವ್ಯಕ್ತಿಕೊಡುವ ಜವಾಬ್ದಾರಿಯಿಂದ ಹೇಗೋ ಪಾರಾದಂತೆ ತೋರುತ್ತದೆ. ಇದರ ಜತೆಗೆ ಮೈಸೂರು ರಾಜ್ಯ ಅಂದು ಇದ್ದ ನೆಮ್ಮದಿಯ ಸ್ಥಿತಿಯೂ ಇದಕ್ಕೆ ಕಾರಣವಾಯಿತೋ ಏನೋ. ಮೈಸೂರಿನ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಮಹಾತ್ಮಾಗಾಂಧಿಯವರಿಂದಲೇ ರಾಜರ್ಷಿ ಎನಿಸಿಕೊಂಡವರು. ಪ್ರಜೆಗಳ  ಹಿತವನ್ನು ಚೆನ್ನಾಗಿಯೇ ನೋಡಿಕೊಂಡು, ಜನತೆಗೆ ಬ್ರಿಟಿಷ್ ಆಳರಸರು ತಮ್ಮನ್ನು ನೇರವಾಗಿ ಶೋಷಿಸುತ್ತಿಲ್ಲವೆಂಬಂಥ ನೆಮ್ಮದಿಯ ಭಾವನೆಯನ್ನು ಬಹುಶಃ ಮೂಡಿಸಿದ್ದರು.

ಆದರೆ ತಮ್ಮ ಒಂದು ರಾಜ್ಯದಲ್ಲಿ ಒಂದಷ್ಟು ನೆಮ್ಮದಿಯ ಸ್ಥಿತಿ ಇದೆ ಎಂದ ಮಾತ್ರಕ್ಕೆ, ಇಡೀ ಭಾರತದ ಪ್ರಜ್ಞೆಯಿದ್ದ ಯಾವ ಎಚ್ಚೆತ್ತ ಚೇತನವೂ ಸುತ್ತ ಹತ್ತಿ ಉರಿಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮದ ಕಾವಿನಲ್ಲಿ ತೆಪ್ಪಗಿರುವುದು ಸಾಧ್ಯವಿರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಕನ್ನಡ ನಾಡಿನ ಸಾಹಿತಿಗಳು, ಈ ಹೋರಾಟದಿಂದ ಸ್ಫೂರ್ತಿಪಡೆದ ಹಾಗೂ ಸ್ಫೂರ್ತಿನೀಡಿದ ವಿಧಾನ ವೈವಿಧ್ಯಮಯವಾಗಿದೆ. ಈ ರಾಷ್ಟ್ರೀಯ ಹೋರಾಟ, ಕತೆ, ಕವಿತೆ, ನಾಟಕ, ಕಾದಂಬರಿ ಇತ್ಯಾದಿ ಪ್ರಕಾರಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಕೆಲವರು ಪೌರಾಣಿಕ, ಐತಿಹಾಸಿಕ ವಸ್ತುಗಳನ್ನಾರಿಸಿಕೊಂಡು ಅವುಗಳನ್ನು ಸಮಕಾಲೀನವಾದ ಈ ಹೋರಾಟದ ಮನೋಧರ್ಮ ಪ್ರಕಟನೆಗೆ ಸಾಧನವನ್ನಾಗಿ ಮಾಡಿಕೊಂಡರು. ಕೆಲವರು ತಾವು ಕಂಡ ಹೋರಾಟಕ್ಕೆ ಕಲಾತ್ಮಕವಾದ ಅಭಿವ್ಯಕ್ತಿಯನ್ನು ಕತೆ, ಕಾದಂಬರಿಗಳ ಮೂಲಕ ನೀಡಿದ್ದಾರೆ; ಕೆಲವರು ಮಹಾತ್ಮಾಗಾಂಧಿಯವರ ವ್ಯಕ್ತಿತ್ವವನ್ನು, ಅವರ ಆದರ್ಶಗಳನ್ನು ಕುರಿತು ಕವನ ಬರೆದಿದ್ದಾರೆ; ಹಾಗೆಯೆ ಅವರ ವಿಚಾರಧಾರೆಯನ್ನು ವಿಶ್ಲೇಷಿಸುವ, ವ್ಯಾಖ್ಯಾನಿಸುವ ವಿಚಾರ ಸಾಹಿತ್ಯವನ್ನು ನಿರ್ಮಿಸಿದ್ದಾರೆ. ಕೆಲವರು ನಮ್ಮ ಜನದ ಹೇಡಿತನ, ದೌರ್ಬಲ್ಯಗಳನ್ನು ವಿಡಂಬಿಸುತ್ತಾ, ಅದೇ ಪರಿಸರದಲ್ಲಿ ಹೋರಾಟದಲ್ಲಿ ಧುಮುಕಿದ ಮಹಾನಾಯಕರ ಮತ್ತು ಹುತಾತ್ಮರ ಚಿತ್ರಗಳನ್ನು ನೀಡಿದ್ದಾರೆ. ಇದರ ಜತೆಗೆ ನೇರವಾಗಿ ದೇಶಪ್ರೇಮವನ್ನು ಕೆರಳಿಸುವ ಮತ್ತು ಬ್ರಿಟಿಷರೊಂದಿಗೆ ಹೋರಾಡಿದ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಬರೆಯುವುದರ ಮೂಲಕ ಜನತೆಯನ್ನು ಎಚ್ಚರಿಸುವ ಲಾವಣಿಗಳು ರಚಿತವಾದದ್ದೂ ಒಂದು ವಿಶೇಷದ ಸಂಗತಿಯಾಗಿದೆ. ಕಿತ್ತೂರು ಚನ್ನಮ್ಮನನ್ನು ಕುರಿತ ಲಾವಣಿ, ಟಿಪ್ಪುಸುಲ್ತಾನನ್ನು ಕುರಿತ ಲಾವಣಿ, ನರಗುಂದದ ಬಂಡಾಯವನ್ನು ಕುರಿತ ಲಾವಣಿ ಇವುಗಳನ್ನು ಹೆಸರಿಸಬಹುದು.

ಕಾವ್ಯದ ಮೂಲಕ ಈ ಸ್ವಾತಂತ್ರ್ಯದ ಹೋರಾಟವನ್ನು ಸೆರೆಹಿಡಿದವರಲ್ಲಿ ಮೊದಲು ನೆನೆಯಬೇಕಾದದ್ದು ಗೋವಿಂದಪೈ ಅವರನ್ನು. ೧೯೩೦ರಷ್ಟು ಹಿಂದೆ ಪ್ರಕಟವಾದ ಅವರ “ಗಿಳಿವಿಂಡು” ಕವನ ಸಂಗ್ರಹದಲ್ಲಿ ಇದಕ್ಕೆ ನಿದರ್ಶನವಾಗಿ ಕೆಲವು ಕವಿತೆಗಳನ್ನು ನೋಡಬಹುದು. ಇದರಲ್ಲಿನ ಕವಿತೆಗಳು ೧೯೦೦ ರಷ್ಟು ಹಿಂದೆಯೇ ರಚಿತವಾದವು ಎಂದು ಪೈ ಅವರೇ ಹೇಳಿಕೊಂಡಿರುವುದನ್ನೂ ಗಮನಿಸಬೇಕು. “ಹೊಲೆಯನು ಯಾರು?” ಎಂಬ ಕವಿತೆಯಲ್ಲಿ “ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ” ಎಂಬ ಮಾತಿದೆ. “ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ” ಎಂಬ ಕವಿತೆಯಲ್ಲಿ –

ನಿರಪರಾಧಿಯ ರಕ್ತ
ದಿಂದ ನೆಲಜಲ ಸಿಕ್ತ
ವಾಗದೊಲು ಕಾಪಾಡು ದೇವ-
ಕೀ ತನಯಾ

ಎಂಬ ಕೋರಿಕೆಯಲ್ಲಿ, ಅನ್ಯದೇಶದ ಸ್ವಾತಂತ್ರ್ಯದ ಪರವಾದ ಕಳಕಳಿಯಲ್ಲಿ ತಾನು ಬಾಳುವ ನೆಲದ ಪಾರತಂತ್ರ್ಯದ ಕಹಿಸತ್ಯವೂ ಕವಿಯ ಮನಸ್ಸಿನಲ್ಲಿರುವಂತೆ ಕಾಣುತ್ತದೆ. ಇನ್ನೊಂದು ಕವಿತೆಯಲ್ಲಿ,

ನಮಗೀ ಪರತಂತ್ರದ ಹೊಲೆ
ಗಲಸಿರಲಿಂತು
ನಿನ್ನಯ ಸಂತಾನರೆಂತು?

ಎಂಬ ಪ್ರಶ್ನೆಯಲ್ಲಿ ಸ್ವಾತ್ಮವಿಡಂಬನೆಯ ವೇದನೆಯಿದೆ. “ಮಹಾತ್ಮರ ಉಪವಾಸ” ಎಂಬ ಇನ್ನೊಂದು ಕವಿತೆ ಗಾಂಧಿಯವರು ೧೯೨೪ ರಂದು ಕೈಕೊಂಡ ಇಪ್ಪತ್ತೊಂದು ದಿನದ ಉಪವಾಸವನ್ನು ಕುರಿತದ್ದಾಗಿದೆ. ಹೀಗೆ ಪೈ ಅವರ ಕವಿತೆಯಲ್ಲಿ, ಸ್ರಾತಂತ್ರ್ಯ ಸಂಗ್ರಾಮದ ಮೊದಲ ದಿನಗಳಲ್ಲೇ ಅದರ ಹಂಬಲ ಕಳಕಳಿಗಳು ಅಭಿವ್ಯಕ್ತಿ ಪಡೆದಿವೆ.

ದ. ರಾ. ಬೇಂದ್ರೆಯವರ ಕವಿತೆಗಳು ಸ್ವಾತಂತ್ರ್ಯ ಸಂಗ್ರಾಮವನ್ನು ಹಾಗೂ ಮನೋಧರ್ಮವನ್ನು ಕುರಿತು, ಸಂಖ್ಯೆಯಲ್ಲಿ ಕೆಲವೇ ಆದರೂ ಸತ್ವದಲ್ಲಿ ಮಿಗಿಲಾಗಿವೆ. “ಮಕ್ಕಳಿವರೇನಮ್ಮ” ಎಂಬ ಅವರ ಕವಿತೆ ನಿಸ್ಸತ್ವರಾದ, ಈ ನಾಡಿನ ಜನರ ಸ್ಥಿತಿಯನ್ನು ವಿಡಂಬಿಸುತ್ತದೆ. “ಹಲ ಕೆಲವು ಕುರುಡು ಕುನ್ನಿ” “ಗಂಡುತನಕೇಸೋ ಸೊನ್ನಿ” ಎಂದಾಗ, “ಉಸಿರಿಡುವೆ ಹಾರಿರೋ ಜಳ್ಳುಗಳಿರಾ” ಎಂದಾಗ, ಈ ಮಕ್ಕಳು “ಸೂಲಗಳು ಮೂವತ್ತು ಮೂರುಕೋಟಿ” ಎಂದಾಗ, ಪಾರತಂತ್ರ್ಯದಲ್ಲಿ ಬದುಕುವ ನಿಸ್ಸತ್ವರಾದ ಮಂದಿಯನ್ನು ಕುರಿತು ಎಂಥ ವಿಡಂಬನೆ, ರೋಷ, ವೇದನೆಗಳು ಪ್ರಕಟವಾಗಿವೆ. ಇನ್ನೊಂದೆಡೆ, “ಕನಸಿನನೊಳಗೊಂದು ಕಣಸು” ಎಂಬ ರೂಪಕ ಕವಿತೆಯಲ್ಲಿ,

“ಚಂಡಿ ಚಾಮುಂಡಿ ಪೇಳ್ ಬೇಕಾದುದೇನು?”
“ಗಂಡುಸಾದರೆ ನಿನ್ನ ಬಲಿಗೊಡುವೆಯೇನು?”

ಎಂಬ ಪ್ರಶ್ನೋತ್ತರ ಅಂದಿನ ಭಾರತೀಯರ ಮುಂದೆ ನಿಂತ ಪ್ರಶ್ನೆಯನ್ನೂ, ಅದಕ್ಕೆ ಜನದ ಅಂತರಂಗ ಕೊಟ್ಟ ಉತ್ತರವನ್ನು ಕಾಣಬಹುದು. ಸ್ವಾತಂತ್ರ್ಯದ ಹಂಬಲ  ಪರೋಕ್ಷವಾಗಿ “ಸಖೀಗೀತ” ಹಾಗೂ ಶ್ರಾವಣವನ್ನು ಕುರಿತು ಕೆಲವು ಕವನಗಳಲ್ಲಿಯೂ ಕಾಣಿಸಿಕೊಂಡಿದೆ.

ಸ್ವಾತಂತ್ರ್ಯದ ಹೋರಾಟಕ್ಕೆ ಕುವೆಂಪು ಅವರ ಕವನಗಳು ನೀಡಿದ ಸ್ಫೂರ್ತಿ ಅತ್ಯಂತ ಗಮನಾರ್ಹವಾದದ್ದು. ಅವರ “ಪಾಂಚಜನ್ಯ” ಕವನ ಸಂಗ್ರಹ ಮತ್ತು “ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ”ದ ಕೆಲವು ಕವನಗಳು ಅಂದಿನ ಹೋರಾಟಗಾರರಿಗೆ ಮಂತ್ರವಾಗಿದ್ದಿರಬೇಕು. ಹೋರಾಟಕ್ಕೆ ಅಗತ್ಯವಾದ ಆವೇಶ, ಧೈರ್ಯ, ಉಜ್ವಲಾದರ್ಶ ಇತ್ಯಾದಿಗಳು ಅಪೂರ್ವವಾದ ರೀತಿಯಲ್ಲಿ ಅವರಲ್ಲಿ ಅಭಿವ್ಯಕ್ತವಾಗಿವೆ. “ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ” ಎಂಬ ದೈವತ್ವದ ಕಲ್ಪನೆ, “ನಡೆಮುಂದೆ ನಡೆಮುಂದೆ ನುಗ್ಗಿ ನಡೆ ಮುಂದೆ” ಎಂಬ ಆವೇಶಪೂರ್ಣವಾದ ನಿರ್ದೇಶನ ತುಂಬ ಶಕ್ತಿಯುತವಾಗಿ ಅಭಿವ್ಯಕ್ತವಾಗಿ, ಜನತೆಯನ್ನು ಜಾಗೃತಗೊಳಿಸಿದವು.

ವಿ. ಸೀ. ಯವರ “ಮೃಗಶಾಲೆಯ ಸಿಂಹಗಳು” ಬಹು ಸೊಗಸಾಗಿ ಪಾರತಂತ್ರ್ಯದ ಪಂಜರದಲ್ಲಿ ಸಿಕ್ಕಿಬಿದ್ದ ಅಸಹಾಯಕ ವಿಷಣ್ಣರಾದ ಜನತೆಯನ್ನು ಪ್ರತಿಮಿಸುತ್ತದೆ. ಅವರ “ಗಡಿದಾಟು” ಮತ್ತು “ವಿದ್ಯಾರ್ಥಿ” ಅಂದಿನ ಹೋರಾಟದ ವಾಸ್ತವ ಚಿತ್ರಗಳನ್ನು ಕೊಡುತ್ತದೆ. ಇದರ ಜತೆಗೆ ಗಾಂಧಿಯವರ ವ್ಯಕ್ತಿತ್ವವನ್ನು ಕುರಿತು ಡಿ. ವಿ. ಜಿ., ಶ್ರೀನಿವಾಸ, ವಿ. ಸೀ., ಕುವೆಂಪು, ಪೈ, ಬೇಂದ್ರೆ, ಅಡಿಗ ಮೊದಲಾದವರು ಬರೆದ ಕವಿತೆಗಳೂ ಪರೋಕ್ಷವಾಗಿ ಸ್ವಾತಂತ್ರ್ಯ ಸಂಗ್ರಾಮದ ಮೂಲ ಶಕ್ತಿಯ ಬಗೆಗೆ ತೋರಿದ ಗೌರವದ ಪ್ರತೀಕಗಳಾಗಿವೆ.

ರಾಜರತ್ನಂ ಅವರ “ಗಂಡುಗೊಡಲಿ” ಎಂಬ ನಾಟಕ ೧೯೩೨ ರಲ್ಲಿ ಪ್ರಕಟವಾದದ್ದು. ಪೌರಾಣಿಕ ವಸ್ತುವಿನ ಮೂಲಕ ಅಂದು ಕುದಿಗೊಂಡ ರಾಷ್ಟ್ರಪ್ರಜ್ಞೆಯನ್ನು ಬ್ರಿಟಿಷರ ಮೇಲಿನ ಆಕ್ರೋಶವನ್ನು ಬಹು ಸೊಗಸಾಗಿ ಅಭಿವ್ಯಕ್ತಪಡಿಸುತ್ತದೆ. ಈ ನಾಟಕದ ಪರಶುರಾಮ-

ನಮ್ಮ ಮನೆಯಲಿ ನಮಗೆ ಸಾತಂತ್ರ್ಯವಿಲ್ಲವೇನು?
ಈ ದಾಸ್ಯದಿಂದೆಮಗೆ ಉದ್ಧಾರವಿಲ್ಲವೇನು?

ಎಂದು ಗುಡುಗುವ ಪ್ರಶ್ನೆ ಇಡೀ ಭರತಖಂಡ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧವಾದಾಗ ಕೇಳಿದ ಪ್ರಶ್ನೆಯೆ ಆಗಿದೆ. ಇನ್ನೊಂದೆಡೆ –

ಕಲ್ಲು ಕಣ್ಣೀರಿಡುವ ನಾಡ ಸಂಕಟ ಕಂಡು
ನನ್ನೆದೆಯಲೆದ್ದಿರುವ ಬೇಗೆಯನು ಬಲ್ಲೆಯಾ?

ಎಂಬ ಪರಶುರಾಮನ ಕೊರಗು ಸಾರ್ಥಕವಾಗಿ ಅಂದಿನ ಅಂತರಂಗದ ವೇದನೆಗೆ ರೂಪುಕೊಡುತ್ತದೆ. ಆಕ್ರಮಣಕಾರಿಯಾದ ಕಾರ್ತವೀರ್ಯಾರ್ಜುನನನ್ನು ಪರಶುರಾಮ ಗಂಡುಗೊಡಲಿಯಿಂದ ಕಡಿದು ರಕ್ತತರ್ಪಣವನ್ನು ಕೊಡುವ ವಸ್ತುವನ್ನುಳ್ಳ ಈ ಕಿರುನಾಟಕ, ಭಾರತೀಯ ಸ್ವಾತಂತ್ರ್ಯ ಸಂಕಲ್ಪದ ಕಿಡಿಮದ್ದಿನ ಪ್ರತೀಕವಾಗಿದೆ. ೧೯೪೮ ರಲ್ಲಿ ಕುವೆಂಪು ಅವರು ಪ್ರಕಟಿಸಿದ “ಬಲಿದಾನ” ಎಂಬ ಪುಟ್ಟರೂಪಕ, ಅವರು ಹಿಂದೆ ಬರೆದ ಎಷ್ಟೋ ಕವಿತೆಗಳನ್ನು ಕೂಡಿಸಿ ಕಟ್ಟಿದ್ದಾಗಿದೆ. ಪು. ತಿ. ನ. ಅವರ “ವಿಕಟಕವಿವಿಜಯ” ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಜನತೆಯ ಹಂಬಲವನ್ನೂ, ದೇಶೀಯ ರಾಜರ ಧರ್ಮಸಂಕಟವನ್ನೂ ಪ್ರಕಟಿಸುವ ಅಪರೂಪದ ಒಂದು ವೈಚಾರಿಕ ನಾಟಕವಾಗಿದೆ.

ಸ್ವಾತಂತ್ರ್ಯದಾಹವನ್ನು ಹಾಗೂ ಹೋರಾಟವನ್ನು ಪ್ರಕಟಿಸುವ ಕಾದಂಬರಿಗಳ ಪಾತ್ರ ವಿಶೇಷವಾಗಿದೆ. ಕನ್ನಡ ಕಾದಂಬರಿಯ ಆರಂಭದ ದಿನಗಳಲ್ಲಿ ಬಂಗಾಳಿ ಮತ್ತು ಮರಾಠಿ ಕಾದಂಬರಿಗಳು, ಬಿ. ವೆಂಕಟಾಚಾರ್ಯ ಹಾಗೂ ಗಳಗನಾಥ ಅವರಿಂದ ಅನುವಾದಿತವಾದವು. ಗಳಗನಾಥರೂ ಸ್ವತಃ ಕೆಲವು ಕಾದಂಬರಿಗಳನ್ನು ಬರೆದಿದ್ದಾರೆ. ಈ ಅನುವಾದಿತ ಹಾಗೂ ಸ್ವತಂತ್ರ ಕಾದಂಬರಿಗಳು ಮುಕ್ಕಾಲು ಪಾಲು ಐತಿಹಾಸಿಕವಾದವು; ಅದರಲ್ಲೂ ಪರಧರ್ಮೀಯ ಹಾಗೂ ಇತರ ಪ್ರಭುತ್ವದ ವಿರುದ್ಧ ಹೋರಾಡಿದ ವೀರಜೀವನವನ್ನು ಕುರಿತದ್ದಾಗಿ, ಆಗ ತಾನೇ ಮೊಳೆಯುತ್ತಿದ್ದ ದೇಶಾಭಿಮಾನ, ಸ್ವಾತಂತ್ರ್ಯದಾಹ-ಇತ್ಯಾದಿಗಳಿಗೆ ನೀರೆರೆಯುವ ಕಾರ್ಯವನ್ನು ಸಾಕಷ್ಟು ಮಾಡಿವೆ. ಕನ್ನಡದಲ್ಲಿ ೧೯೪೦ ರಿಂದ ಮೊದಲಾದ “ಪ್ರಗತಿಶೀಲ ಚಳುವಳಿ” ಕೂಡಾ, ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ಹಾಗೂ ದೇಶದ ಶೋಷಣೆಯ ವಿರುದ್ಧ ಹೋರಾಟವನ್ನು ಪ್ರಕಟಿಸಿತು. ಈ ಕಾಲದ ಕಾದಂಬರಿಕಾರರಲ್ಲಿ ಕೆಲವರು ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನೇ ಕುರಿತು ಕಾದಂಬರಿಗಳನ್ನು ರಚಿಸಿದ್ದಾರೆ. ತ. ರಾ. ಸು. ಅವರ “ರಕ್ತ ತರ್ಪಣ” (೧೯೪೬); ಬಸವರಾಜ ಕಟ್ಟೀಮನಿಯವರ “ಸ್ವಾತಂತ್ರ್ಯದೆಡೆಗೆ” (೧೯೪೬) ಮತ್ತು “ಮಾಡಿಮಡಿದವರು” (೧೯೫೦); ಇನಾಂದರ್ ಅವರ “ಮೂರಾಬಟ್ಟೆ” (೧೯೪೬) ಮತ್ತು “ವಿಜಯಯಾತ್ರೆ” (೧೯೪೮);  ಶಿವರಾಮ ಕಾರಂತರ “ಔದಾರ್ಯದ ಉರುಳಲ್ಲಿ” (೧೯೪೭); ಶ್ರೀರಂಗ ಅವರ “ಪುರುಷಾರ್ಥ” (೧೯೪೭); ಅ. ನ. ಕೃ. ಅವರ “ಅಮರ ಆಗಸ್ಟ್” (೧೯೫೦); ಕೊ. ಚನ್ನಬಸಪ್ಪನವರ “ಹಿಂದಿಂಗಿ ಬರಲಿಲ್ಲ” (೧೯೫೪) ಮತ್ತು “ರಕ್ತತರ್ಪಣ”; ಅನಂತನಾರಾಯಣ ಅವರ “ಪಯಣದ ಹಾದಿಯಲ್ಲಿ”; ನಿರಂಜನ ಅವರ “ಚಿರಸ್ಮರಣೆ”-ಈ ಕೆಲವು ಕಾದಂಬರಿಗಳನ್ನು ಹೆಸರಿಸಬಹುದು.

ಸ್ವಾತಂತ್ರ್ಯ ಚಳುವಳಿಯನ್ನು ವಸ್ತುವನ್ನಾಗಿಸಿಕೊಂಡ ಬಹುಮಟ್ಟಿನ ಕಾದಂಬರಿಗಳು ಚಿತ್ರಿಸುವುದು, ಭಾರತದ ತರುಣ ಜನಾಂಗ ಈ ಹೋರಾಟದಲ್ಲಿ ಹೇಗೆ ಪಾಲುಗೊಂಡಿತು ಎಂಬುದನ್ನು. ಕಾರಂತರ ಕಾದಂಬರಿಯ “ರಾಧಾಕೃಷ್ಣ” ನಂಥವರನ್ನು ಬಿಟ್ಟರೆ, ಇನ್ನು ಮುಕ್ಕಾಲುಪಾಲು ಕಾದಂಬರಿಗಳ ಕಥಾನಾಯಕರೆಲ್ಲ ಬಿಸಿರಕ್ತದ ತರುಣರೇ. ತ. ರಾ. ಸು. ಅವರ ‘ರಕ್ತತರ್ಪಣ’ದ ಚಂದ್ರಶೇಖರ, ಮಿರ್ಜಿ ಅಣ್ಣಾರಾಯರ ‘ರಾಷ್ಟ್ರಪುರುಷ’ದ ಅಜಿತ, ಅ. ನ. ಕೃ. ಅವರ ‘ಅಮರ ಆಗಸ್ಟ್‌ನಲ್ಲಿಯ ಮಾನಪ್ಪ, ಕಟ್ಟೀಮನಿಯವರ ಎರಡೂ ಕಾದಂಬರಿಯಲ್ಲಿನ ಶೇಖರ-ಇವರೆಲ್ಲಾ ಗಾಂಧಿಯವರ ಕರೆಗೆ ಓಗೊಟ್ಟು, ವಿದ್ಯಾಭ್ಯಾಸಕ್ಕೆ ಶರಣುಹೊಡೆದು, ಹೋರಾಟಕ್ಕೆ ಧುಮುಕಿದವರು. ಇವರ ಹೋರಾಟದ ಉದ್ದೇಶ, ಅಹಿಂಸಾತ್ಮಕವಾದದ್ದು ಎಂದು ಅವರು ಅಂದುಕೊಂಡರೂ, ವಾಸ್ತವವಾಗಿ ಕಣಕ್ಕಿಳಿದಾಗ ಅವರವರ ದಾರಿ ಅವರದೇ. ಇವರೆಲ್ಲ ಗ್ರಾಮಾಂತರಗಳಿಗೆ ಹೋಗಿ ವೇಷಮರೆಸಿಕೊಂಡು, ಪೋಲಿಸರ ಕಣ್ಣಿಗೆ ಮಣ್ಣೆರಚುವುದರಲ್ಲಿ, ರೈಲು ಕಂಬಿಗಳನ್ನು ಕಿತ್ತು, ಟೆಲಿಫೋನು ತಂತಿಗಳನ್ನು ಕತ್ತರಿಸಿ ಸಂಚಾರ-ಸಂಪರ್ಕಗಳನ್ನು ಸ್ಥಗಿತಗೊಳಿಸುವುದರಲ್ಲಿ, ಸರ್ಕಾರಿ ಖಜಾನೆ ಲೂಟಿ ಮಾಡುತ್ತ, ಸರ್ಕಾರಿ ಕಛೇರಿಗಳಿಗೆ ಬೆಂಕಿ ಹಚ್ಚುತ್ತ ಆಡಳಿತವನ್ನು ಬುಡಮೇಲು ಮಾಡುವುದರಲ್ಲಿ ಪಳಗಿದವರು. ನಿರ್ಜನವಾದ ಬೆಟ್ಟಗುಡ್ಡಗಳಲ್ಲಿ ಅಡಗಿಕೊಂಡು, ಕರಪತ್ರಗಳನ್ನು ಹೊರಡಿಸುತ್ತಾ, ಸಮಯಬಿದ್ದರೆ ಸಶಸ್ತ್ರರಾಗಿ ಹೋರಾಡುತ್ತಾ, ಕಡೆಗೆ ಪೊಲೀಸರ ಗುಂಡಿಗೆ ಆಹುತಿಯಾಗುವ ದುರಂತ ನಾಯಕರು. ಈ ಪಾತ್ರಗಳ ನಡವಳಿಕೆ, ನಮಗೆ ಹಿಂದಿನ ಕಾಲದ ಸಾಹಸಮಯ ಪತ್ತೇದಾರಿ ಕಾದಂಬರಿಗಳನ್ನು ನೆನಪಿಗೆ ತರುವಂತೆ ತೋರಿದರೂ, ಈ ತರುಣರ ಹೋರಾಟ ಕಾಲ್ಪನಿಕವಾದದ್ದೇನೂ ಅಲ್ಲ ಎಂಬುದನ್ನು ಮರೆಯಬಾರದು. ಈ ತರುಣರಿಗೆ ಸ್ವಾತಂತ್ರ್ಯ ಚಳುವಳಿ ಗಾಂಧಿಯವರು ಹಾಕಿಕೊಟ್ಟ ಅಹಿಂಸಾತ್ಮಕ ವಿಧಾನದಲ್ಲಿರಬೇಕೆಂದು ತಿಳಿಯದ ವಿಷಯವೇನಲ್ಲ; ಆದರೆ ಅಂದಿನ ಬ್ರಿಟಿಷ್ ಸರ್ಕಾರ ಚಳುವಳಿಯನ್ನು ಹತ್ತಿಕ್ಕುವಲ್ಲಿ ತಾಳಿದ ಸಶಸ್ತ್ರಕ್ರಮಗಳು, ಸಹಜವಾಗಿಯೇ ಈ ತರುಣರನ್ನು ಕೆರಳಿಸಿ ಅವರ ಹೋರಾಟದ ವಿಧಾನವನ್ನು, ಹಿಂಸಾತ್ಮಕವನ್ನಾಗಿ ಮಾಡಿದವು. ಈ ವಾಸ್ತವ ಹಿನ್ನೆಲೆಯಿಂದ ನೋಡಿದಾಗ, ದೇಶಾದ್ಯಂತ ವ್ಯಾಪಿಸಿದ ಚಳುವಳಿಯಲ್ಲಿ, ಸ್ವಾತಂತ್ರ್ಯ ಹೋರಾಟದ ಒಂದು ಮುಖ, ಈ ಕಾದಂಬರಿಗಳಲ್ಲಿ ಚಿತ್ರಿಸಿರುವಂತೆಯೇ ಇತ್ತು ಎಂಬುದೂ ಗಮನಿಸಬೇಕಾದ ಸಂಗತಿಯಾಗಿದೆ. ಮೂಲತಃ ಈ ಸ್ವಾತಂತ್ರ್ಯ ಚಳುವಳಿ ಒಂದು ಹೋರಾಟವೆ. ಆದರೆ ಅದು ತಾಳಿದ ರೂಪಗಳು ಬೇರೆ ಬೇರೆಯಾಗಿವೆ. ನಿಜವಾದ ಅಹಿಂಸಾತ್ಮಕವಾದ ಹೋರಾಟದ ಒಂದು ನೋಟ ನಮಗೆ ಕಾಣಸಿಗುವುದು ಇನಾಂದಾರರ “ಮೂರಾಬಟ್ಟೆ”ಯಲ್ಲಿ, ಅದೂ ಮುಂಬೈನಂಥ ಪರಿಸರದಲ್ಲಿ.  ಕಾರಂತರ ಕಾದಂಬರಿ “ಔದಾರ್ಯದ ಉರುಳಲ್ಲಿ” ನಮಗೆ ಬೇರೊಂದು ಬಗೆಯ ಚಿತ್ರವನ್ನು ಕೊಡುತ್ತದೆ. ಈ ಕೃತಿಯ ನಾಯಕ “ರಾಧಾಕೃಷ್ಣ” ಗಾಂಧಿಯವರ ಆದರ್ಶವನ್ನು ಇಳಿಸುವಲ್ಲಿ ತನ್ನ ಸಾಮಾಜಿಕ ಪರಿಸ್ಥಿತಿಯನ್ನು ಹದಗೊಳಿಸುವ ಕಾರ್ಯಕರ್ತನಂತೆ ತೋರುತ್ತಾನೆ. ಬದಲಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾರದ ಜನದ ನಡುವೆ ದುಡಿಯುವ ರಾಧಾಕೃಷ್ಣ ಏಕಾಕಿಯಾಗಿ ಕಾಣಿಸುತ್ತಾನೆ. ಇನಾಂದಾರರ “ವಿಜಯಯಾತ್ರೆ” ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸದಿಂದ ಜರ್ಝರಿತವಾದ ವ್ಯಕ್ತಿಯೊಬ್ಬ ಸ್ವಾತಂತ್ರ್ಯ ಪ್ರಾಪ್ತಿಯಾದ ಸಂದರ್ಭದಲ್ಲಿ ತೋರಿಸಿದ ಮಿಶ್ರಪ್ರತಿಕ್ರಿಯೆಯ ಚಿತ್ರಣವಾಗಿದೆ. ಶ್ರೀರಂಗರ “ಪುರುಷಾರ್ಥ”ದಲ್ಲಿ ಮೂರು ದಶಕಗಳ ಹೋರಾಟ ಕಡೆ ಮುಟ್ಟಿದಾಗ, ನಾಲ್ವರು ವ್ಯಕ್ತಿಗಳ ಪಾಲಿಗೆ ಈ ಹೋರಾಟ ಕಂಡ ರೀತಿ ಅಥವಾ ಅದರಲ್ಲಿ ಅವರು ತೊಡಗಿಕೊಂಡ ರೀತಿಯ ವಿವೇಚನೆ ಚಿತ್ರಿತವಾಗಿದೆ.

ಈ ಎಲ್ಲಾ ಕಾದಂಬರಿಗಳೂ ಪ್ರಕಟವಾದ ಕಾಲವನ್ನು ನೋಡಿದರೆ, ೧೯೪೬ ರಷ್ಟು ಹಿಂದೆ ಬಂದ ಒಂದೆರಡನ್ನು ಬಿಟ್ಟರೆ ಉಳಿದೆಲ್ಲ ಸ್ವಾತಂತ್ರ್ಯೋದಯವಾದ ವರ್ಷದ ಮತ್ತು ಅನಂತರದ ವರ್ಷಗಳಲ್ಲಿ ಪ್ರಕಟವಾಗಿವೆ. ಸ್ವಾತಂತ್ರ್ಯಪೂರ್ವದಲ್ಲಿ ಈ ಬಗೆಯ ಬರವಣಿಗೆ “ಅಪರಾಧ”ವೆಂದು ಪರಿಗಣಿತವಾಗುವ ಆತಂಕ ಪರಿಸ್ಥಿತಿ ಇತ್ತು. ಆದರೂ ಆ ಕಾಲದಲ್ಲಿ ಬಂದ, ಸಾಮಾಜಿಕ ಕಾದಂಬರಿಗಳೂ ಕೂಡ ಬದಲಾದ ಪರಿಸ್ಥಿತಿಯನ್ನು ಧೈರ್ಯದಿಂದ ಚಿತ್ರಿಸಿವೆ; ಕಾವ್ಯಕ್ಷೇತ್ರದಲ್ಲಂತೂ ಕುವೆಂಪು, ಬೇಂದ್ರೆ, ಪೈ ಮೊದಲಾದವರು ವ್ಯಕ್ತಪಡಿಸಿದ ಅನಿರ್ಬಂಧ ರಾಷ್ಟ್ರಪ್ರಜ್ಞೆ ಆಶ್ಚರ್ಯಕರವಾಗಿದೆ. ಕಟ್ಟೀಮನಿಯವರ “ಸ್ವಾತಂತ್ರ್ಯದೆಡೆಗೆ” ಹಾಗೂ “ಮಾಡಿ ಮಡಿದವರು”-ಸ್ವಾತಂತ್ರ್ಯ ಚಳುವಳಿಯನ್ನು ಚಿತ್ರಿಸುವ ಕಾದಂಬರಿಗಳಲ್ಲಿ ವಿಶಿಷ್ಟವಾದವೆಂದು ನಮ್ಮ ಭಾವನೆ.

ಆದರೂ ಸ್ವಾತಂತ್ರ್ಯ ಸಂಗ್ರಾಮವನ್ನು ವಸ್ತುವನ್ನಾಗಿರಿಸಿಕೊಂಡು ಬಂದ ಸಾಹಿತ್ಯಾಭಿವ್ಯಕ್ತಿಗಳನ್ನು ಪರೀಲಿಸಿದರೆ, ಒಂದು ಬಗೆಯ ನಿರಾಸೆಯಾಗುತ್ತದೆ. ಈ ಚಳುವಳಿಯನ್ನು ಕುರಿತು ಬಂದ ಸಾಹಿತ್ಯಕ ಸಾಮಗ್ರಿ ಇನ್ನೂ ವಿಪುಲವಾಗಿರಬೇಕಿತ್ತು ಎಂಬುದಲ್ಲ ಈ ನಿರಾಸೆಗೆ ಕಾರಣ; ಈ ಬಗೆಯ ಐತಿಹಾಸಿಕವಾದ ಸಾಮಗ್ರಿಯನ್ನು ಇರಿಸಿಕೊಂಡು ನಿಜವಾಗಿಯೂ ಮಹತ್ತಾದ ಕೃತಿ ಬರಲಿಲ್ಲವಲ್ಲ ಎಂಬುದೇ ನಮ್ಮ ಕೊರಗು. ಇಂಥ ಸಂದರ್ಭದಲ್ಲಿ ಟಾಲ್‌ಸ್ಟಾಯ್ ಅವರ “ವಾರ್ ಅಂಡ್ ಪೀಸ್” ನೆನಪಾಗುತ್ತದೆ. ಸ್ವಾತಂತ್ರ್ಯ ಬಂದು ಇಷ್ಟೊಂದು ವರ್ಷಗಳಾದರೂ, ಹಲವು ದಶಕಗಳ ಕಾಲ ಸ್ವಾತಂತ್ರ್ಯ ಸಂಪಾದನೆಗೆ ನಡೆದ ಆ ಹೋರಾಟದ ಇತಿಹಾಸದ ಒಂದೊಂದು ಘಟನೆಯನ್ನೂ, ವ್ಯಕ್ತಿಗಳನ್ನೂ, ಸಮಗ್ರವಾಗಿ ಹಾಗೂ ವಸ್ತುನಿಷ್ಠವಾಗಿ ವೀಕ್ಷಿಸಬಲ್ಲ ದೂರದಲ್ಲಿ ನಾವು ನಿಂತಿದ್ದರೂ ಇಂಥಾ ಮಹಾಘಟನೆಯನ್ನು ಕುರಿತ ಮಹತ್ ಕೃತಿ ಇನ್ನೂ ಬಾರದಿರುವುದು ಆಶ್ಚರ್ಯದ ಸಂಗತಿಯಾಗಿದೆ.

ನವೋದಯ-೧೯೭೬