ನಮ್ಮ ಸಂಸ್ಕೃತಿಯಲ್ಲಿ ಹೋಳಿಯ ಆಚರಣೆಗೆ ವಿಶಿಷ್ಟವಾದ ಮಹತ್ವವಿದೆ. ಹೋಳಿಯ ರಂಗಿನಾಟ ವಸಂತನ ಆಗಮನದ ಮುನ್ಸೂಚನೆಯಾಗಿದೆ. ಕಾಮದಹನ ದುರ್ಗುಣಗಳನ್ನು ಸುಟ್ಟು ಹಾಕುವ ಸಂಕೇತವಾಗಿದೆ. ಹಿಂದುಸ್ತಾನಿ ಸಂಗೀತದಲ್ಲಿ ಹೋಳಿಗೆ ವಿಶಿಷ್ಟವಾದ ಸ್ಥಾನವಿರುವುದು ಗಮನಾರ್ಹ. ಹೋಳಿ ಹಬ್ಬದ ಸಂದರ್ಭದಲ್ಲಿ ಹಾಡಲ್ಪಡುವ ಗೀತ ಪ್ರಕಾರವನ್ನೇ ಹಿಂದುಸ್ತಾನಿ ಸಂಗೀತವು ಒಂದು ಪರಂಪರೆಯನ್ನಾಗಿ ಉಳಿಸಿಕೊಂಡು ಬಂದಿದೆ. ಒಂದು ಕಾಲದಲ್ಲಿ ಹೋಲಿ ಅಥವಾ ಹೋರಿ ಎಂಬ ಗೀತಪ್ರಕಾರವು ಜನಪ್ರಿಯವಾದ ಹಾಡುಗಾರಿಕೆಯಾಗಿತ್ತು.

ಈ ಹೋರಿ (ಹೋಳೀ)ಗೀತೆಗಳಿಗೆ ತನ್ನದೇ ಆದ ಇತಿಹಾಸವಿದೆ. ಗುಪ್ತರ ಆಳ್ವಿಕೆಯ ಕೊನೆಯ ಘಟ್ಟದಲ್ಲಿ (ಕ್ರಿ.ಶ.600) ಹೋರಿಗೀತೆಗಳು ತುಂಬ ಜನಪ್ರಿಯವಾಗಿದ್ದವು. ಹೋಳಿಹಬ್ಬದ ಆಚರಣೆಯ ಸಂಧರ್ಭದಲ್ಲಿ ಸಾಮೂಹಿಕವಾಗಿ ನರ್ತಿಸುವಾಗ ಹೋರಿಗೀತೆಗಳನ್ನು ಹಾಡಲಾಗುತ್ತಿತ್ತು. ಇಂಥ ಸಾಮೂಹಿಕ ಗೀತೆಗಳು ಸಂಸ್ಕೃತ ಭಾಷೆಯಲ್ಲಿರುತ್ತಿದ್ದವು. ಇವುಗಳಲ್ಲಿ ಕೃಷ್ಣನ ರಾಸಲೀಲೆಗಳನ್ನು ವರ್ಣಿಸಲಾಗುತ್ತಿತ್ತು. ಹೋಳಿಹಬ್ಬದಲ್ಲಿ ಹೋರಿಗೀತೆಗಳ ಉತ್ಸವವೇ ಜರುಗುತ್ತಿತ್ತು.

ಹೋರಿಗೀತೆಗಳಿಗೆ ಮತ್ತೊಮ್ಮೆ ಜನಪ್ರಿಯತೆ ಪ್ರಾಪ್ತವಾಗಿ 16ನೇ ಶತಮಾನದಲ್ಲಿ ಮಥುರಾ ಬೃಂದಾವನ, ಗೋಕುಲ, ಯಮುನಾತೀರ ಪ್ರದೇಶವೆಲ್ಲ ಸಂಗೀತಮಯವಾಗಿದ್ದ ಕಾಲವದು. 16ನೇ ಶತಮಾನದಲ್ಲಿ ಆಗಿ ಹೋದ ನಿಂಬಾರ್ಕ ಸಂಪ್ರದಾಯದ ಅನುಯಾಯಿ ಹಾಗೂ ವ್ಯಾಸದೇವರ ಶಿಷ್ಯರಾದ ಘಮಂಡದೇವರು ಹೋರಿ ಗೀತೆಗಳನ್ನು ಪುನರುತ್ಥಾನಗೊಳಿಸಿದರು. ರಾಸಗೀತೆಗಳನ್ನು ರಚಿಸಿ ಜನಪ್ರಿಯಗೊಳಿಸಿದರು. ಇವುಗಳಲ್ಲಿ ಶ್ರೀ ಕೃಷ್ಣನು ಗೋಪಿಕೆಯರೊಡನೆ ವರ್ಣಲೀಲೆಯಾಡಿದ ವೈಭವ ವರ್ಣಿಸಲ್ಪಟ್ಟಿತು. ಘಮಡದೇವರು ಜನರ ಆಡು ಭಾಷೆಯಲ್ಲಿ ಹೋರಿಗೀತೆಗಳನ್ನು ರಚಿಸಿದ್ದು ವಿಶೇಷವಾಗಿತ್ತು. ಇದರಿಂದಾಗಿ ಹೋರಿಗೀತೆಗಳು ಜನರಿಗೆ ತೀರ ಹತ್ತಿರವಾಗಿ, ಕ್ರಮೇಣವಾಗಿ ಜನರ ಹಾಡುಗಳಾಗಿ ಜಾನಪದ ಕಲೆಯ ಸ್ವರೂಪವನ್ನು ಪಡೆದುಕೊಂಡವು.

ಗೋಸ್ವಾಮಿ ಹಾಗೂ ಸ್ವಾಮಿ ಹರಿದಾಸು ಕೂಡ ಹೋರಿ ಗೀತೆಗಳನ್ನು ಪ್ರಚಾರಗೊಳಿಸುವಲ್ಲಿ ಶ್ರಮಿಸಿದ್ದಾರೆ. ಇವರ ಕಾಲವೂ 15-16ನೆಯ ಶತಮಾನವೇ. ಹೋಳಿ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ನೃತ್ಯ ಮಾಡಲು ಅನುವಾಗುವಂಥ ಹೋರಿಗೀತೆಗಳನ್ನು ಇವರು ರಚಿಸಿದರು. ಇವು ಸಹ ತುಂಬ ಜನಪ್ರಿಯವಾದುವು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉಪ ಶಾಸ್ತ್ರೀಯ ಗಾಯನ ಪ್ರಕಾರವೆಂಬ ಸ್ಥಾನಮಾನವನ್ನು ಹೋರಿಗೀತೆಗಳು ಪಡೆಯುವುದಕ್ಕೆ ಇವುಗಳಿಗಿರುವ ವಿಶಿಷ್ಟ ಲಕ್ಷಣಗಳೇ ಕಾರಣವಾಗಿವೆ. ಜಾನಪದ ಹಾಗೂ ಶಾಸ್ತ್ರೀಯ ಸಂಗೀತಗಳೆರಡರಲ್ಲೂ ಸಲ್ಲುವ ಗುಣ ವಿಶೇಷಗಳನ್ನು ಹೊಂದಿರುವುದು ಹೋರಿಗೀತೆಗಳ ಹೆಚ್ಚುಗಾರಿಕೆ.

ಹೋರಿಗೀತೆಗಳು ಧಮಾರ ಎಂಬ ಹಾಡುಗಾರಿಕೆಗೆ ತೀರ ಹತ್ತಿರವಾದವುಗಳು. ಹದಿನಾಲ್ಕು ಮಾತ್ರೆಯ ಧಮಾರಕಾಲಾಲ್ಲಿಯೂ, ದೀಪಚಂದಿ ಎಂಬ ಹದಿನಾಲ್ಕು ಮಾತ್ರೆಯ ಇನ್ನೊಂದು ತಾಲದಲ್ಲಿಯೂ ಹಾಡಲ್ಪಡುತ್ತವೆ.

ಹಮಾರ ತಾಲಾದಲ್ಲಿ ಹಾಡಲ್ಪಡುವ ಗೀತೆಗಳನ್ನು ಪಕ್ಕಿಹೋರಿ ಎಂತಲೂ, ದೀಪಚಂದಿ ತಾಲದಲ್ಲಿ ಹಾಡಲ್ಪಡುವ ಗೀತೆಗಳನ್ನು ಕಚ್ಚಿಹೋರಿ ಎಂತಲೂ ಕರೆಯುತ್ತಾರೆ.

ಲಯ ಚಮತ್ಕಾರ ಹೋರಿಗೀತೆಗಳ ಇನ್ನೊಂದು ವಿಶಿಷ್ಟತೆ. ಸಾಮಾನ್ಯವಾಗಿ ಮಧ್ಯಲಯದಲ್ಲಿ ಪ್ರಾರಂಭಗೊಂಡು ನಂತರ ಲಯವನ್ನು ದುಗುನ (ಎರಡು ಪಟ್ಟು)ತಿಗುನ (ಮೂರುಪಟ್ಟು) ಚೌಗುನಗಳಲ್ಲಿ ವಿಸ್ತರಿಸಲಾಗುತ್ತದೆ. ಮಧ್ಯಲಯದಿಂದ ದುಗುನ, ತಿಗುನ, ಚೌಗುನಗಳಲ್ಲಿ ಸಂಚರಿಸುವ ಪರಿ ತುಬ ಆಕರ್ಷಕವಾಗಿರುತ್ತದೆ. ಹೋರಿಗೀತೆಗಳಲ್ಲಿನ ಈ ಅಂಶವೇ ಅವುಗಳ ಜೀವಂತಿಕೆಯೂ ಹೌದು. ಸಾಮೂಹಿಕ ನೃತ್ಯಕ್ಕೆ ಈ ಲಯ ಚಮತ್ಕಾರ ತುಂಬ ಸಹಕಾರಿಯಾಗುತ್ತದೆ.

ಹಿಂದುಸ್ತಾನಿಯ ಎಲ್ಲ ರಾಗಗಳಲ್ಲೂ ಹೋರಿ ಹಾಡಲ್ಪಡುವುದಿಲ್ಲ. ಶೃಂಗಾರ ಪ್ರಧಾನವಾದ ರಾಗಗಳನ್ನು ಮಾತ್ರ ಇದಕ್ಕಾಗಿ ಆಯ್ದುಕೊಳ್ಳಲಾಗುತ್ತದೆ. ಕಾಫಿ, ಸಾರಂಗ, ದೇಸ್, ಖಮಾಜ್, ಪೀಲುಗಳಂಥ ಸೌಂದರ್ಯಯುಕ್ತ ರಾಗಗಳು ಮಾತ್ರ ಹೋರಿಗೀತೆಗಳಿಗೆ ಹೊಂದಿಕೆಯಾಗುತ್ತವೆ. ಅಪರೂಪಕ್ಕೆ ಗೋರರ್ಖ ಕಲ್ಯಾಣ ಹಾಗೂ ಭೀಮ ಪಲಾಸಿಯಂಥ ಗಂಭೀರ ರಾಗಗಳು ಬಳಕೆಯಾಗುತ್ತವೆ.

ಹೋರಿಗೀತೆಗಳನ್ನು ಹಾಡುವ ಶೈಲಿ ತುಂಬ ಸರಳವಾದದ್ದು. ಇಲ್ಲಿ ಯಾವುದೇ ಮುರ್ಕಿಗಳಿಲ್ಲ. ಆದರೆ ಖಟಕಾದಂಥ ಅಲಂಕಾರಿಕ ಅಂಶಗಳನ್ನು ಅಳವಡಿಸಲಾಗಿದೆ. ತನ್ನೆಲ್ಲ ಆಭರಣಗಳನ್ನು ಮನೆಯಲ್ಲಿ ಬಿಚ್ಚಿಟ್ಟು ನಿರಾಭರಣ ಸುಂದರಿಯಾಗಿ ಬಣ್ಣದೋಕುಳಿ ಆಡಲು ಬಂದ ಸುಂದರ ಯುವಂತಿಯಂತೆ ಈ ಹೋರಿಗೀತೆಗಳು ಒಳಗೊಂಡಿಲ್ಲ. ಅಂತೆಯೇ ಇವು ಉಪಶಾಸ್ತ್ರೀಯ ಗಾಯನ ಪ್ರಕಾರಗಳಾಗಿವೆ.

ಅನೇಕರು ಧಮಾರ ಹಾಗೂ ಹೋರಿಗೀತೆಗಳೆರಡೂ ಒಂದೇ ಎಂದು ಭಾವಿಸುತ್ತಾರೆ. ಈ ಅಭಿಪ್ರಾಯ ಸಮಂಜಸವೆನಿಸುವುದಿಲ್ಲ. ಹೋರಿಗೀತೆಗಳು ಹಮಾರ ತಾಲಾಲ್ಲಿ ಹಾಡಲ್ಪಟ್ಟರೂ ದಮಾರಗಳಿಗಿಂತ ವಸ್ತುವಿಷಯದಲ್ಲಿ ಭಿನ್ನವಾಗಿವೆ ಹಾಗೂ ಇವು ದೀಪಚಂದಿತಾಲದಲ್ಲಿಯೂ ಹಾಡಲ್ಪಡುತ್ತವೆ. ಅಲ್ಲದೆ ಧಮಾರಗೀತೆಗಳ ಸಾಹಿತ್ಯ ಕೇವಲ ಹೋಳಿಯ ವರ್ಣನೆಗೆ ಸೀಮಿತವಾಗಿಲ್ಲ.

ಹೋರಿಗೀತೆಗಳು ಠುಮರಿ ಎಂಬ ಇನ್ನೊಂದು ಉಪಶಾಸ್ತ್ರೀಯ ಗಾಯನ ಪ್ರಕಾರದ ಉಗಮಕ್ಕೆ ಕಾರಣವಾಗಿವೆ. ಠುಮರಿಗಳು 14 ಮಾತ್ರೆಯ ದೀಪಚಂದಿತಾಲದಲ್ಲಿ ಹಾಡಲ್ಪಡುತ್ತವೆ. ಠುಮರಿಗೂ ಹೋರಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಹೋರಿಗಳು ಬಯಲಿನಲ್ಲಿ ಸಾಮೂಹಿಕವಾಗಿ ನೃತ್ಯದೊಂದಿಗೆ ಹಾಡಲ್ಪಟ್ಟರೆ, ಠುಮರಿಗಳು ಮನೆಗಳಲ್ಲಿ ನರ್ತಕಿಯೋರ್ವಳ ಕಥಕ್ಕಿನೊಂದಿಗೆ ಇಲ್ಲವೆ ಮೆಹಫಿಲ್‌ನಲ್ಲಿ ಒಬ್ಬರೇ ಕೂತು ಹಾಡಬಲ್ಲವುಗಳಾಗಿವೆ. ಆದರೆ ಅವರೆಡೂ ಗೀತ ಪ್ರಕಾರಗಳು ಶೃಂಗಾರ ಪ್ರಧಾನವಾಗಿದ್ದರೂ ಅಶ್ಲೀಲತೆಯಿಂದ ದೂರವಾಗಿವೆ.

ಹೋರಿಗೀತೆಗಳಲ್ಲಿ ಶ್ರೀ ಕೃಷ್ಣನ ವರ್ಣಲೀಲೆ ಪ್ರಮುಖವಾಗಿ ವರ್ಣಿಸಲ್ಪಡುತ್ತದೆ. ಗೋಪಿಕೆಯರೊಡನೆ ಶ್ರೀ ಕೃಷ್ಣನು ಆಡುವ ವರ್ಣದಾಟವನ್ನು ವೈವಿಧ್ಯಮಯವಾಗಿ ಹೋರಿಗೀತೆಗಳಲ್ಲಿ ವರ್ಣಿಸಲಾಗಿದೆ. ಕೃಷ್ಣನಿಂದ ತನಗಾಗಿರುವ ವಿರಹವನ್ನು ತೋಡಿಕೊಳ್ಳುವ ಗೋಪಿಕೆಯ ಅಳಲು, ಶ್ರೀ ಕೃಷ್ಣ ತನ್ನನ್ನು ಮರೆತೇಬಿಟ್ಟಿದ್ದಾನೆಂದು ಹಲುಬುವ ಗೋಳು ಒಂದೆಡೆಯಾದರೆ, ಅದೇ ಶ್ರೀ ಕೃಷ್ಣನು ತನ್ನನ್ನು ಚುಡಾಯಿಸುವ ಉಪಟಳವನ್ನು ತಾಳಲಾರೆನೆಂದು ದೂರುವ ಗೋಪಿಕೆ ಇನ್ನೊಂದೆಡೆ. ಮತ್ತೆ ಕೆಲವರು ಆತನ ಪ್ರೀತಿಗೆ ಪಾತ್ರಳಾದವಳನ್ನು ಅಭಿನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವರು ಶ್ರೀ ಕೃಷ್ಣನಿಂದ ಸುರತ ಸುಖವನ್ನು ಅನುಭವಿಸಿದವರಂತೆ ಕನಸು ಕಾಣುತ್ತಿದ್ದಾರೆ. ಹೀಗೆ ಹೋರಿಗೀತೆಗಳನ್ನು ರಚಿಸಿದ ಕವಿಗಳು ತಮಗಿರುವ ಸೀಮಿತ ಅವಕಾಶದಲ್ಲಿಯೇ ವೈವಿಧ್ಯತೆಯನ್ನು ತರಲು ಪ್ರಯತ್ನಿಸಿದ್ದಾರೆ.

ಮಥುರಾ ವೃಂದಾವನ ಹಾಗೂ ಯಮುನಾ ತೀರದ ಜನತೆ ಇಂದಿಗೂ ಹೋರಿ ಗೀತೆಗಳನ್ನು ಹಾಡಿ, ಸಾಮೂಹಿಕವಾಗಿ ನರ್ತಿಸಿ ಆನಂದಿಸುತ್ತಾರೆ. ಆ ಭಾಗದ ಜನರ ಜೀವನದಲ್ಲಿ ಹೋರಿ ಗೀತೆಗಳು ಇಂದಿಗೂ ಹಾಸುಹೊಕ್ಕಾಗಿವೆ. ಫಾಲ್ಗುಣ ಚೈತ್ರ ಮಾಸದ ಕಾಲಾವಧಿಯಲ್ಲಿ, ವಿಶೇಷವಾಗಿ ಹೋಳಿಹುಣ್ಣಿಮೆ ಸಂದರ್ಭದಲ್ಲಿ ಆ ಭಾಗದ ಜನತೆ ಇವುಗಳನ್ನು ಸಾಮೂಹಿಕವಾಗಿ ಹಾಡಿ ಆನಂದಿಸುತ್ತಾರೆ. ಅಂತೆಯೇ ಹೋರಿಗೀತೆಗಳು ಜಾನಪದಗೀತೆಗಳೆಂದು ಸಹ ಗುರುತಿಸಲ್ಪಡುತ್ತವೆ.

ಹಿಂದುಸ್ತಾನಿ ಸಂಗೀತ ಕೇವಲ ಹೋರಿಗೀತೆ ಪ್ರಕಾರದ ಮೂಲಕ ಹೋಳಿಯನ್ನು ವೈಭವಿಕರಿಸುವುದಿಲ್ಲ. ಅನ್ಯ ಪ್ರಕಾರದ ಹಾಡುಗಾರಿಕೆಯಲ್ಲೂ ಹೋಳಿಯ ವರ್ಣನೆಯಿರುವುದು ಗಮನಾರ್ಹವಾಗಿವೆ.

ಧಮಾರವೆಂಬ ಉಪಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಹೋಲಿಯ ವರ್ಣನೆ ಇದ್ದು, ಅವುಗಳನ್ನು ಪಕ್ಕಿ ಹೋರಿಗಳೆಂದು ಕರೆಯುತ್ತಾರೆ. ಠುಮಾರಿಯ ಅನೇಕ ಗೀತೆಗಳು ಹೋಳಿಯ ವರ್ಣನೆಯನ್ನು ಹೊಂದಿವೆ. ಖಯಾಲ್ ಹಾಡುಗಾರಿಕೆಯ ಅನೇಕ ಬಂದಿಶ್‌ಗಳಲ್ಲಿ ಹೋಳಿ ವರ್ಣನೆಯಿರುವುದನ್ನು ಗಮನಿಸಬಹುದು. ಕಾಫಿರಾಗದಲ್ಲಿ ಹಾಡುವ ಗೀತೆಗಳ ಸಾಹಿತ್ಯ ಬಹುತೇಕವಾಗಿ ಹೋಳಿಯ ಪರವಾಗಿದೆ. ಕಾಫಿರಾಗವಲ್ಲದೆ, ಸಾರಂಗ, ದೇಸ್, ಗೋರರ್ಖ, ಕಲ್ಯಾಣ, ಭೀಮಪಲಾಸಿ, ಬಿಹಾಗಡಾಡಳಂಥ ಶೃಂಗಾರ ಪ್ರಧಾನವಾದ ರಾಗಗಳಲ್ಲಿಯ ಅನೇಕ ಬಂದಿಶಗಳು ಹೋಳಿಯನ್ನು ವರ್ಣಿಸುತ್ತವೆ.