ಅನುವಾದ ಎನ್ನುವುದು ಮುಖ್ಯವಾಗಿ ತೌಲನಿಕ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯ. ಒಂದು ಸಾಂಸ್ಕೃತಿಕ ಸಂದರ್ಭದ ವಿಚಾರಗಳನ್ನು, ಭಾವನೆಗಳನ್ನು ಆಯಾ ಪರಿಸರದ ಭಾಷೆಯಿಂದ, ಇನ್ನೊಂದು ಸಾಂಸ್ಕೃತಿಕ ಸಂದರ್ಭಕ್ಕೆ, ಅದರ ಭಾಷೆಯಲ್ಲಿ ತರುವ ಒಂದು ಪ್ರಯತ್ನ. ಹಾಗೆ ವರ್ಗಾಯಿಸುವ ಈ ಪ್ರಯತ್ನ ಸುಲಭವಾದುದೇನಲ್ಲ.

[1]

ಒಂದು ಭಾಷೆಯಲ್ಲಿ ಅಭಿವ್ಯಕ್ತವಾಗಿರುವ ಭಾವ ಭಾವನೆ ವಿಚಾರಗಳನ್ನು ಅನುವಾದಕನೊಬ್ಬನು ಉದ್ದೇಶಿತ ಭಾಷೆಗೆ ತರುವ ಈ ಪ್ರಯತ್ನದ ಹಿಂದೆ ಇರುವ ಉದ್ದೇಶಗಳನ್ನು ಹೀಗೆ ಗುರುತಿಸಬಹುದು :

೧.   ಅನ್ಯಭಾಷಾ ಸಾಹಿತ್ಯದಲ್ಲಿ, ತನ್ನ ಭಾಷಾ ಸಾಹಿತ್ಯದಿಂದ ಬೇರೆಯಾದ ಹಾಗೂ ಉತ್ತಮವಾದ ಅಂಶಗಳಿವೆ ಎಂಬ ಕಾರಣದಿಂದ, ಅವುಗಳನ್ನು ತನ್ನ ಭಾಷೆಗೆ ತರುವುದರ ಮೂಲಕ ತನ್ನ ಭಾಷಾಸಾಹಿತ್ಯದ ಸಂಪತ್ತನ್ನು ಹೆಚ್ಚಿಸಬೇಕು, ಹೆಚ್ಚಿಸಬಹುದು, ಎಂಬುದು.

೨.   ತನ್ನ ಭಾಷಾಸಾಹಿತ್ಯದಲ್ಲಿರುವ ಅತ್ಯುತ್ತಮವಾದುದನ್ನು ಅನ್ಯಭಾಷೆಗೆ ಅನುವಾದ ಮಾಡುವುದರ ಮೂಲಕ, ತನ್ನ ಸಾಹಿತ್ಯದ ವಿಶಿಷ್ಟತೆಗಳನ್ನು, ಇತರರಿಗೆ ಪರಿಚಯಿಸುವ ಮತ್ತು ಸಾಹಿತ್ಯದ ಬಗ್ಗೆ ಅನ್ಯ ಭಾಷಾಸಾಹಿತ್ಯದವರ ಗಮನ ಹಾಗೂ ಗೌರವಗಳನ್ನು ಗಳಿಸಬಹುದು-ಎಂಬುದು.[2]

೩.   ಒಂದು ಭಾಷಾಸಾಹಿತ್ಯ ಕೇವಲ ಒಂದು ಸಂಪ್ರದಾಯವಾದಾಗ, ಎಂದರೆ, ಸಿದ್ಧ ಮಾದರಿಗಳಲ್ಲಿ ಕಾವ್ಯರಚನೆ ಕಟ್ಟುಗೊಂಡಾಗ, ಮತ್ತು ಆಲೋಚನಾ ಕ್ರಮವೇ ಸ್ಥಗಿತಗೊಂಡಾಗ, ಚಲನಶೀಲತೆಯನ್ನು ತರಲು ಅನ್ಯ ಪ್ರೇರಣೆಗಳನ್ನು ಬರಮಾಡಿಕೊಳ್ಳುವ ಸಂದರ್ಭದಲ್ಲಿ, ಅನುವಾದವೆಂಬುದು, ನೂತನ ಪ್ರಯೋಗಗಳಿಗೆ ಕಾರಣವಾಗಬಲ್ಲದು.

೪. ಮತ್ತು ಕೆಲವು ವಿಶಿಷ್ಟ ಸಾಹಿತ್ಯಪ್ರಕಾರಗಳ ತೌಲನಿಕ ಅಧ್ಯಯನವನ್ನು ಕೈಗೊಳ್ಳುವಾಗಲಂತೂ, ಅನುವಾದಗಳನ್ನೇ ನಾವು ಅವಲಂಬಿಸಬೇಕಾಗುತ್ತದೆ.

ಹೀಗೆ ಭಾಷಾಂತರವಾಗುವ ಬರೆಹಗಳನ್ನು, ವಿಷಯಾನುಸಾರವಾಗಿ ಮೂರೆಂದು ಎಣಿಸಬಹುದು.

೧. ವೈಜ್ಞಾನಿಕ, ೨. ಮಾನವಿಕ, ೩. ಸಾಹಿತ್ಯಕ.

ಮೊದಲನೆಯದಾದ ವೈಜ್ಞಾನಿಕ ಬರೆಹದ ಮುಖ್ಯ ಲಕ್ಷಣ, ಅದು ಖಚಿತಾರ್ಥ ನಿಷ್ಠವಾದ, ಪಾರಿಭಾಷಿಕ ಪದಗಳ ಒಂದು ರಚನೆಯಾಗಿರುತ್ತದೆ,-ಎನ್ನುವುದು. ಇಂಥದ್ದನ್ನು ಉದ್ದೇಶಿತ ಭಾಷೆಯೊಂದಕ್ಕೆ ಅನುವಾದ ಮಾಡುವಾಗ, ಆಯಾ ಪಾರಿಭಾಷಿಕ ಪದಗಳಿಗೆ, ಅದೇ ಅರ್ಥವನ್ನು ಕೊಡುವ ಸಂವಾದಿ ಪಾರಿಭಾಷಿಕ ಪದಗಳನ್ನು ಟಂಕಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ, ಒಂದು ಭಾಷೆಯಲ್ಲಿ ಹಾಗೆ ರೂಪಿಸುವ ಪಾರಿಭಾಷಿಕ ಪದಗಳಲ್ಲಿ ಏಕರೂಪತೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಗಲ್ಲದೆ, ಅನ್ಯಭಾಷೆಯ ಪಾರಿಭಾಷಿಕ ಪದವೊಂದಕ್ಕೆ, ಅನುವಾದಿತ ಭಾಷೆಯ, ವಿವಿಧ ಪರಿಸರದಲ್ಲಿ ಬೇರೆ ಬೇರೆಯ ಪಾರಿಭಾಷಿಕ ಪದಗಳನ್ನು ಮಾಡಿಕೊಳ್ಳುವುದು ವಿಚಾರದ ಗೊಂದಲಕ್ಕೆ ಕಾರಣವಾಗುತ್ತದೆ. ಅದರ ಬದಲು, ಮೂಲದ ಪಾರಿಭಾಷಿಕ ಪದವನ್ನು ಯಥಾವತ್ತಾಗಿ ಅಳವಡಿಸಿಕೊಂಡು ಬಳಸುವುದು, ಒಂದು ಪಾರಿಭಾಷಿಕ ಪದಕ್ಕೆ ಹಲವು ಬಗೆಯ ಅನುವಾದಿತ ಪದಗಳನ್ನಿರಿಸಿಕೊಳ್ಳುವುದಕ್ಕಿಂತ ಹೆಚ್ಚು ಸುರಕ್ಷಿತವಾದ ಮಾರ್ಗವೆಂದು ತೋರುತ್ತದೆ. ಎರಡನೆಯದಾಗಿ, ಅನ್ಯಭಾಷೆಯ ಪಾರಿಭಾಷಿಕ ಪದಕ್ಕೆ, ಸಮರ್ಥವಾದ ಸಂವಾದಿ ಪದಗಳು ನಮ್ಮ ಪರಂಪರೆಯಲ್ಲೇ ಪ್ರಚಲಿತವಾಗಿದ್ದಲ್ಲಿ ಅಂಥದನ್ನು ಬಳಕೆಗೆ ತರುವುದು ಒಳ್ಳೆಯದು-ನಿದರ್ಶನಕ್ಕೆ Aeroplane ಎಂಬುದಕ್ಕೆ ‘ವಿಮಾನ’ ಎಂಬುದನ್ನೂ, Satellite ಎಂಬುದಕ್ಕೆ ‘ಉಪಗ್ರಹ’ ಎಂಬುದನ್ನೂ ಬಳಸುವಂತೆ. ಮೂರನೆಯದಾಗಿ, ಅನ್ಯಭಾಷೆಯ ಪಾರಿಭಾಷಿಕ ಪದಗಳನ್ನು, ಅನುವಾದ ಮಾಡದೆ ಯಥಾವತ್ತಾಗಿ ಬಳಸುವುದು ಇನ್ನೊಂದು ದಾರಿ. ಭಾಷಾ ಶಾಸ್ತ್ರದಲ್ಲಿ ಇವುಗಳನ್ನು ಸ್ವೀಕರಣವೆಂದು ಕರೆಯುತ್ತಾರೆ. ನಾಲ್ಕನೆಯದಾಗಿ, ಅತಿಯಾದ ಸ್ವಭಾಷಾಭಿಮಾನದಿಂದ, ಅನ್ಯಭಾಷೆಗಳ ಪದಗಳಿಗೆ, ವಿಲಕ್ಷಣವಾದ ಸಂವಾದಿ ಪದಗಳನ್ನು ಉದ್ದೇಶಿತ ಭಾಷೆಯಲ್ಲಿ ಮಾಡಿಕೊಳ್ಳುವ ಒಂದು ಅಭ್ಯಾಸವೂ ನಮ್ಮಲ್ಲಿ ಬೆಳೆದಿದೆ. ಅಂಥ ಪದಗಳು, ನಮ್ಮ ಪರಿಸರದ ಸರಳ-ಸಾಧಾರಣ ವಾಚಕವರ್ಗಕ್ಕೂ ಕಕ್ಕಾವಿಕ್ಕಿಯನ್ನುಂಟುಮಾಡುತ್ತದೆ. ಒಟ್ಟಿನಲ್ಲಿ ಅನುವಾದಕರು ಗಮನಿಸಬೇಕಾದ ಅಂಶವೆಂದರೆ, ಯಾವ ಯಾವ ಪದಗಳನ್ನು ಅನುವಾದ ಮಾಡಬಹುದು, ಅನುವಾದ ಮಾಡಬಾರದು; ಮಾಡಿದರೂ ಹೇಗೆ ಅನುವಾದ ಮಾಡಬೇಕು. ಹೇಗೆ ಮಾಡಬಾರದು-ಎಂಬುದು. ಅನುವಾದದ ಮೂಲ ಸೂತ್ರವೆಂದರೆ, ತಾವು ಮಾಡಿದ ಅನುವಾದ, ತಮ್ಮ ಭಾಷೆಯ ಜಾಯಮಾನಕ್ಕೆ ಸಲ್ಲುತ್ತದೆಯೆ-ಎನ್ನುವುದು. ಹಾಗೆ ಒಪ್ಪಿಗೆಯಾಗದೆ ಹೋದರೆ, ಸಲ್ಲದೆ ಹೋದರೆ ಅನುವಾದ ವ್ಯರ್ಥವೆಂದೇ ಹೇಳಬೇಕು.

ಮಾನವಿಕ ಸಾಹಿತ್ಯದ ಅನುವಾದದಲ್ಲಿ ಪಾರಿಭಾಷಿಕಪದಗಳ ಸಮಸ್ಯೆ ಎದುರಾದರೂ, ಇಲ್ಲಿನ ಕಷ್ಟ ವೈಜ್ಞಾನಿಕ ಸಾಹಿತ್ಯದ ಪಾರಿಭಾಷಿಕ ಪದಗಳ ಅನುವಾದಕ್ಕಿಂತ ಕಡಿಮೆಯದೆಂದೆ ಹೇಳಬಹುದು. ಇಲ್ಲಿಯೂ ಒಂದು ಭಾಷೆಯಲ್ಲಿನ ಪದಗಳ ಅರ್ಥದ ಪದರಗಳನ್ನು ಬಿಚ್ಚುವಂಥ, ಉದ್ದೇಶಿತ ಭಾಷೆಯ ಪದಗಳಲ್ಲಿ ಸಮರ್ಪಕವಾಗಿ ಹಿಡಿದಿಡುವುದು ಸುಲಭವಾದದ್ದಲ್ಲ. ನಾವು ಎಷ್ಟೇ ಸಂವಾದಿ ಪದಗಳನ್ನು ನಿರ್ಮಾಣಮಾಡಿಕೊಂಡರೂ. ಉದಾಹರಣೆಗೆ ಬ್ರಹ್ಮ, ಆತ್ಮ, ಶೂನ್ಯ, ರಸ-ಇಂಥ ಪದಗಳು ಬೇರೆ ಯಾವುದೇ ಭಾಷೆಗೆ ಅನುವಾದವಾಗುವುದು ಸಾಧ್ಯವಿಲ್ಲ. ಆದುದರಿಂದ ಅಂಥ ಪದಗಳನ್ನು ಉದ್ದೇಶಿತ ಭಾಷೆಯ ಅನುವಾದಗಳಲ್ಲಿ ಹಾಗೆಯೇ ಬಳಸಬೇಕಾಗುತ್ತದೆ.

ಇನ್ನು ಸಾಹಿತ್ಯಕವಾದದ್ದರ  ಅನುವಾದವಂತೂ ಅನುವಾದಕರಿಗೆ ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಒಡ್ಡುತ್ತದೆ. ಮೊದಲೆರಡು ಪ್ರಕಾರಗಳ ಅನುವಾದಕನಿಗಿಂತ, ಸೃಜನ ಸಾಹಿತ್ಯದ ಅನುವಾದಕನಿಗೆ ವಿಶೇಷವಾದ ಯೋಗ್ಯತೆ ಹಾಗೂ ಸಿದ್ಧತೆಗಳು ಅಗತ್ಯ. ಇಲ್ಲಿನ ಸಾಹಿತ್ಯ ಪ್ರಕಾರ ಗದ್ಯವಾಗಿರಬಹುದು, ಪದ್ಯವಾಗಿರಬಹುದು, ನಾಟಕವಾಗಿರಬಹುದು. ಹಾಗಿದ್ದಾಗ, ಅವುಗಳನ್ನು ಆಯಾ ಸಾಹಿತ್ಯ ಪ್ರಕಾರಗಳಿಗೇ ಅನುವಾದ ಮಾಡಬೇಕಾಗುತ್ತದೆ. ಅಂದರೆ, ಗದ್ಯವನ್ನು ಗದ್ಯಕ್ಕೆ, ಪದ್ಯವನ್ನು ಪದ್ಯಕ್ಕೆ, ನಾಟಕವನ್ನು ನಾಟಕಕ್ಕೆ ಅನುವಾದ ಮಾಡಬೇಕು.

ಆದರೆ ಕೆಲವು ವೇಳೆ ಪದ್ಯವನ್ನು ಗದ್ಯಕ್ಕೆ, ಗದ್ಯವನ್ನು ಪದ್ಯಕ್ಕೆ ಅನುವಾದ ಮಾಡಿರುವುದೂ ಉಂಟು. ಪದ್ಯವನ್ನು ಗದ್ಯರೂಪಕ್ಕೆ ಅನುವಾದಿಸುವುದಕ್ಕಿಂತ, ಪದ್ಯವನ್ನು ಪದ್ಯರೂಪದಲ್ಲೇ ಅನುವಾದ ಮಾಡುವುದು,-ಅದು ಎಷ್ಟೇ ಕಷ್ಟವಾದರೂ- ಸರಿಯಾದದ್ದು. ಗದ್ಯವನ್ನು ಗದ್ಯಕ್ಕೆ ಅನುವಾದಮಾಡುವುದು ತೀರಾ ಸಹಜವಾದುದಾದರೂ, ‘ಗದ್ಯಕಾವ್ಯ’ವನ್ನು ‘ಪದ್ಯಕಾವ್ಯ’ವನ್ನಾಗಿ ಮಾಡುವುದು ತಪ್ಪೇನಲ್ಲ. ನಾಗವರ್ಮನ ‘ಕರ್ನಾಟಕ ಕಾದಂಬರಿ’ ಸಂಸ್ಕೃತ ಗದ್ಯಕಾವ್ಯದ ಪದ್ಯಾನುವಾದವಾಗಿದೆ. ಹಾಗೆ ನೋಡಿದರೆ ಮೂಲದ, ಬಾಣನ ಕಾದಂಬರೀ ಮಹಾಕಾವ್ಯ, ‘ರೂಪ’ದಲ್ಲಿ ಗದ್ಯವಾದರೂ, ಅದು ಸತ್ವದಲ್ಲಿ ಕಾವ್ಯವೇ. ವಾಸ್ತವವಾಗಿ ಅದರ ಭಾಷೆಯನ್ನು ‘ಗದ್ಯ’ವೆಂದು ಕರೆಯುವುದು ಔಪಚಾರಿಕ ಮಾತ್ರ. ಗದ್ಯವನ್ನು, ಗದ್ಯವನ್ನಾಗಿ ಅನುವಾದ ಮಾಡಿದಾಗ ಅದು ಮೂಲಕ್ಕೆ ಹೆಚ್ಚು ಸಮೀಪವೂ, ಮೂಲಾನುಭವವನ್ನು ಸಮರ್ಪಕವಾಗಿ ಹಿಡಿದಿಡಲು ತಕ್ಕದ್ದೂ ಆಗುವುದೆಂಬುದರಲ್ಲಿ ಸಂದೇಹವಿಲ್ಲ. ಪದ್ಯವನ್ನು ಗದ್ಯರೂಪದಲ್ಲಿ ಅನುವಾದ ಮಾಡಿದಾಗ, ಮೂಲದ ಸೊಗಸನ್ನು ತಕ್ಕಮಟ್ಟಿಗೆ ಉಳಿಸಿಕೊಳ್ಳುವುದು ಸಾಧ್ಯವಾದರೂ, ಪದ್ಯದಲ್ಲಿನ ಭಾವತೀವ್ರತೆ ಅದರ ಗದ್ಯಾನುವಾದಗಳಲ್ಲಿ ತಕ್ಕಮಟ್ಟಿಗೆ ತೆಳ್ಳಗಾಗುವ ಅಪಾಯ ತಪ್ಪಿದ್ದಲ್ಲ. ಆದಕಾರಣ ಪದ್ಯವನ್ನು ಪದ್ಯವನ್ನಾಗಿಯೆ ಅನುವಾದಿಸಬೇಕಾದದ್ದು ಅಪೇಕ್ಷಣೀಯವಷ್ಟೇ ಅಲ್ಲ, ಅಗತ್ಯವಾದದ್ದು ಕೂಡಾ. ಆದರೆ, ಪದ್ಯದ ಪದ್ಯಾನುವಾದ, ಈಗಾಗಲೇ ಹೇಳಿದಂತೆ, ವಿಶೇಷವಾದ ಸಿದ್ಧತೆ ಹಾಗೂ ಸಾಮರ್ಥ್ಯಗಳನ್ನು ಆಪೇಕ್ಷಿಸುತ್ತದೆ.

ಸೃಜನಸಾಹಿತ್ಯದ ಅನುವಾದದಲ್ಲಿ ಮುಖ್ಯವಾಗಿ ಎರಡು ವಿಧಗಳನ್ನು ಗುರುತಿಸಬಹುದು :

ಮೊದಲನೆಯದು, ಒಂದೇ ಭಾಷಾವರ್ಗಕ್ಕೆ ಸೇರಿದ ಅಥವಾ ಒಂದು ದೇಶದ ವಿವಿಧ ಭಾಷೆಗಳಿಗೆಲ್ಲ ಮೂಲವಿರಬಹುದೆಂಬಂತಹ ಭಾಷೆಯಿಂದ, ಉದ್ದೇಶಿತ ಭಾಷೆಗೆ ಮಾಡುವ ಅನುವಾದ.

ಎರಡನೆಯದು, ಸಾಂಸ್ಕೃತಿಕವಾಗಿಯೂ ಸಂಪೂರ್ಣ ಭಿನ್ನವಾದ ಭಾಷೆ ಅಥವಾ ಭಾಷೆಗಳಿಂದ ಉದ್ದೇಶಿತ ಭಾಷೆಗೆ ಮಾಡುವ ಅನುವಾದ.[3]

ನಿದರ್ಶನಕ್ಕೆ, ಸಂಸ್ಕೃತದಿಂದ ಕನ್ನಡಕ್ಕೆ ಮಾಡುವಾಗ, ಅಥವಾ ಇತರ ದ್ರಾವಿಡ ಭಾಷೆಗಳಿಂದ ಕನ್ನಡಕ್ಕೆ ಮಾಡುವಾಗ, ಬಹುಮಟ್ಟಿಗೆ ಒಂದೇ ಸಾಂಸ್ಕೃತಿಕ ಪರಿಸರದ ಒಳಗೇ  ಕೈಕೊಳ್ಳುವ ಅನುವಾದಗಳಲ್ಲಿ ಹೆಚ್ಚು ಸಹಜತೆ ಇರುವಂತೆ, ಅನುವಾದಿಸುವುದು ಸಾಧ್ಯ. ಆದರೆ ಭಾರತೀಯೇತರ ಭಾಷೆಗಳಿಂದ, ಯಾವುದೇ ಭಾರತೀಯ ಭಾಷೆಗೆ  ಮಾಡಿಕೊಳ್ಳುವ ಅನುವಾದ, ಅನೇಕ ಬಗೆಯ ತೊಡಕುಗಳನ್ನು ಅನುವಾದಕರಿಗೆ ಒಡ್ಡುತ್ತದೆ. ಈ ಹಂತದಲ್ಲಿರುವ ತೊಡಕು ಕೇವಲ ಭಾಷೆಗೆ ಸಂಬಂಧಿಸಿದ್ದಲ್ಲ. ಆ ಭಾಷೆಯು ರೂಪು ತಾಳಿದ ಸಾಂಸ್ಕೃತಿಕ ಪರಿಸರಕ್ಕೆ ಸಂಬಂಧಪಟ್ಟದ್ದು. ಕನ್ನಡಕ್ಕೆ ತಮಿಳಿನಿಂದ, ತೆಲುಗಿನಿಂದ, ಮಲೆಯಾಳದಿಂದ, ಕಡೆಗೆ ಹಿಂದಿ, ಬಂಗಾಳಿಗಳಿಂದ ಅನುವಾದ ಮಾಡುವಾಗ, ಈ ಅನುವಾದವಾಗುವ ಕೃತಿಗಳು ಒಂದೇ ದೇಶದ, ಬಹುಮಟ್ಟಿಗೆ ಅಪರಿಚಿತವಲ್ಲದ ಪರಿಸರದಲ್ಲೇ ಸಂಭವಿಸುವುದರಿಂದ, ಆಯಾ ಕೃತಿಗಳ ಮೂಲಕ ಅಭಿವ್ಯಕ್ತವಾಗುವ ಪ್ರಾದೇಶಿಕ ಸಾಂಸ್ಕೃತಿಕ ವಿವರಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಮತ್ತು ವೈವಿಧ್ಯತೆಗಳಿದ್ದರೂ, ಅನುವಾದಿತ ಕೃತಿಗಳು, ಅನುವಾದಿತವಾದ ಭಾಷಾಪರಿಸರದವರಿಗೆ ಅಷ್ಟೇನೂ ಅಸಂಗತವೆಂಬಂತೆ ತೋರುವುದಿಲ್ಲ. ಆದರೆ, ಭಾರತೀಯೇತರ ಭಾಷೆಯ ಕೃತಿಗಳ ಅನುವಾದದಲ್ಲಿ ಮಾತ್ರ, ಅನುವಾದಕನಾದವನು ಬೇರೊಂದು ಸಾಂಸ್ಕೃತಿಕ ಪರಿಸರದ ಅನುಭವಗಳನ್ನು, ತನ್ನ ಸಾಂಸ್ಕೃತಿಕ ಮಾಧ್ಯಮವಾದ ಭಾಷೆಗೆ ತರುವುದು ಅಥವಾ ಹಿಡಿದಿಡುವುದು ಕಷ್ಟದ ಕೆಲಸವೇ. ಯಾಕೆಂದರೆ ಒಂದೊಂದು ಸಾಂಸ್ಕೃತಿಕ ಪರಿಸರದ ಭಾಷೆಯ ನುಡಿಗಟ್ಟು ಮತ್ತು ಆಯಾ ಸಾಂಸ್ಕೃತಿಕ ವಿವರಗಳಿಗೆ ಒಡ್ಡಿಕೊಂಡ ಭಾಷಿಕ ರಚನಾಕ್ರಮವೂ, ಒಟ್ಟಿನಲ್ಲಿ ಭಾಷೆಯ ಜಾಯಮಾನವೇ ಬೇರೆಯ ರೀತಿಯಲ್ಲಿರುತ್ತದೆ. ಅಂಥ ಸಂದರ್ಭದಲ್ಲಿ, ಉದ್ದೇಶಿತ ಭಾಷೆಯ ಪರಿಸರಕ್ಕೆ, ಅದನ್ನು ಭಾಷಾಂತರದ ಮೂಲಕ ತರುವಾಗ, ಅನುವಾದಕ ತೀರಾ ಎಚ್ಚರ ವಹಿಸಬೇಕಾಗುತ್ತದೆ.

ಕಾವ್ಯದ ಅನುವಾದ, ಗದ್ಯದ ಅನುವಾದಕ್ಕಿಂತ ಹೆಚ್ಚು ಸಿದ್ಧತೆ ಹಾಗೂ ಸಾಮರ್ಥ್ಯಗಳನ್ನು ಅಪೇಕ್ಷಿಸುತ್ತದೆ ಎಂದು ಈಗಾಗಲೇ ಹೇಳಿದ್ದೇವೆ. ಯಾಕೆಂದರೆ ಕಾವ್ಯ ಮೂಲತಃ ಭಾವತೀವ್ರತೆಯ ಅಭಿವ್ಯಕ್ತಿ. ಭಾವಗಳನ್ನು ಹರಳುಗೊಳಿಸುವ ಕೆಲಸ  ನಿಜವಾದ ಕಾವ್ಯದಲ್ಲಿ ನಡೆದಿರುತ್ತದೆ. ಒಂದು ಭಾಷೆಯ ನಿಶ್ಚಿತವಾದ ಛಂದೋರೂಪದಲ್ಲಿ ಹೀಗೆ ಹರಳುಗೊಂಡ ಭಾವತೀವ್ರತೆಯನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರಬೇಕಾದರೆ ಅನುವಾದಕನೂ ಸ್ವತಃ ಕವಿಯಾಗಿದ್ದರೆ, ಅಥವಾ ಕವಿ ಹೃದಯವುಳ್ಳವನಾಗಿದ್ದರೆ, ಅಂಥ ಅನುವಾದ ಸಾಕಷ್ಟು ಸಫಲವಾಗುತ್ತದೆ. ಮೂಲದ ಕಾವ್ಯಾನುಭವದ ಒಳಹೊಕ್ಕು, ಆ ತೀವ್ರಾನುಭವವನ್ನು ಪುನರನುಭವಿಸಿ, ತಕ್ಕ ಪದಗಳಲ್ಲಿ ಪುನರ್ಭವಗೊಳಿಸುವ ಸಾಮರ್ಥ್ಯವಿದ್ದವನ ಅನುವಾದ ಒಂದು ನಿರ್ದಿಷ್ಟಮಟ್ಟದ ತೃಪ್ತಿಯನ್ನು ತರುತ್ತದೆ. ಈ ಬಗೆಯ ಒಂದು ಪ್ರಯತ್ನ ನಡೆದದ್ದು ಕನ್ನಡ ಕಾವ್ಯದ ಸಂದರ್ಭದಲ್ಲಿ ಆಚಾರ್ಯ ಬಿಎಂಶ್ರೀ ಯವರ ‘ಇಂಗ್ಲಿಷ್ ಗೀತೆಗಳು’ ಕೃತಿಯಲ್ಲಿ. ಹೊಸಗನ್ನಡ ಕಾವ್ಯಕ್ಕೆ ಹೊಸ ಹಾದಿಯನ್ನು ತೆರೆದ ಶ್ರೀಯವರ ಈ ಪ್ರಯತ್ನಗಳು, ಕಾವ್ಯಾನುವಾದದ ಸಮಸ್ಯೆ ಮತ್ತು ಸಾಧನೆಗಳನ್ನು ಬಹು ಸೊಗಸಾಗಿ ದಾಖಲಿಸುತ್ತದೆ. ಕಾವ್ಯಾನುವಾದದ ಬಗ್ಗೆ ವಿಚಾರ ಮಾಡುವವರು ಖಂಡಿತವಾಗಿಯೂ ಇವುಗಳನ್ನು ಗಮನಿಸಬೇಕು.

ಪದ್ಯಾನುವಾದಕ್ಕೆ ತೊಡಗುವವರು, ಅಥವಾ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸಲು ಹೊರಡುವವರು ತಾವು ಅನುವಾದ ಮಾಡಲಿರುವ ಕೃತಿಯ, ಭಾಷೆಯ ಹಾಗೂ ಅನುವಾದಿಸಲಿರುವ ಭಾಷೆಯ ಮೇಲೆ ಸಂಪೂರ್ಣ ಪ್ರಭುತ್ವವನ್ನು ಪಡೆದಿರಬೇಕು. ಎರಡನೆಯದಾಗಿ, ಪದ್ಯಾನುವಾದದ ಸಂದರ್ಭದಲ್ಲಿ, ಮೂಲ ಕೃತಿಯ ಛಂದೋರೂಪಕ್ಕೆ ಆವಿಷ್ಕಾರ ಮಾಡಿಕೊಳ್ಳಬೇಕು. ಹಾಗೆ ಮಾಡದೆ ಸಿದ್ಧ ಸಂಪ್ರದಾಯದ ಹಳೆಯ ಛಂದೋರೂಪಗಳಲ್ಲೆ, ಹೊಸ ಪ್ರಯೋಗದ ಪರಿಣಾಮಗಳಾದ ಅನ್ಯಭಾಷೆಯ ಪದ್ಯಗಳನ್ನು ಅನುವಾದ ಮಾಡತೊಡಗಿದರೆ, ಅವು ಒಂದು ರೀತಿಯಲ್ಲಿ ವಿಲಕ್ಷಣವಾಗಿ ತೋರುತ್ತವೆ.[4] ಮೂರನೆಯದಾಗಿ, ಯಾವುದೇ ಪದ್ಯಾನುವಾದ ನಮ್ಮ ಸಾಂಸ್ಕೃತಿಕ ಪರಿಸರಕ್ಕೆ ಸಂವಾದಿಯಾಗುವಂತೆ ಹಾಗೂ ಸಂವಾದ ಸಾಧ್ಯವಾಗುವಂತೆ, ಮತ್ತು ಆಸ್ವಾದ್ಯವಾಗುವಂತೆ ಇರಬೇಕು. ಹಾಗಿಲ್ಲದೆ ಹೋದರೆ ಎಂಥ ಒಳ್ಳೆಯ ಅನುವಾದವೂ ತೀರಾ ಪರಕೀಯವಾಗಿ, ತಟಸ್ಥವಾಗಿ ನಿಂತುಬಿಡುತ್ತದೆ. ಆದುದರಿಂದ ಪದ್ಯಾನುವಾದದಲ್ಲಿ ಆಚಾರ್ಯ ಶ್ರೀಯವರ ‘ಇಂಗ್ಲಿಷ್ ಗೀತೆಗಳು’ ಕೃತಿಯನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ, ಅನುವಾದಕ ಮೂರು ರೀತಿಗಳನ್ನು ಅನುಸರಿಸಬಹುದೆಂದು ತೋರುತ್ತದೆ. ಮೊದಲನೆಯದಾಗಿ, ಅನುವಾದ ಮಾಡುವ ಭಾಷೆಯ ಪದ್ಯಗಳೊಳಗಿನ ಪರಿಸರ-ಹೆಸರುಗಳು, ಪ್ರದೇಶ, ನಡವಳಿಕೆಗಳು-ಒಂದಷ್ಟು ಅಪರಿಚಿತವೆಂಬಂತೆ ತೋರಿದರೂ, ಸಾಧ್ಯವಾದಷ್ಟು ಸಲ್ಲುವ ಗುಣವುಳ್ಳ ವಸ್ತುಗಳನ್ನೇ ಆರಿಸಿಕೊಳ್ಳುವುದು : ಉದಾಹರಣೆಗೆ ‘ಸರ್ ಜಾನ್ ಮೂರ್‌ನನ್ನು ಹೂಳಿದ್ದು’ (ಪು ೧೯); ‘ರಾಯಲ್ ಜಾರ್ಜ್ ಮುಳುಗಿಹೋದದ್ದು’ (ಪು. ೨೪); ‘ನನ್ನ ಮೇರಿ’ (ಪು. ೮೪) ಇಂಥ ಪದ್ಯಗಳು. ಎರಡನೆಯದಾಗಿ, ಅನುವಾದ ಮಾಡಿದವರು ಬಳಸುವ ಪರಿಸರಗಳಲ್ಲಿ ಅಂತಹ ವ್ಯತ್ಯಾಸಗಳೇನೂ ತೋರದಂತಹ ವಸ್ತುವನ್ನುಳ್ಳ ಪದ್ಯಗಳನ್ನು ಆರಿಸಿಕೊಳ್ಳುವುದು : ಉದಾರಣೆಗೆ, ‘ಬಾನಾಡಿ’ (ಪು. ೧೧); ‘ರಾವುತರ ದಾಳಿ’ (ಪು. ೨೧); ‘ಮುದ್ದಿನ ಕುರಿಮರಿ’ (ಪು. ೮); ‘ಪ್ರಾರ್ಥನೆ’ (ಪು. ೯೭); ‘ಕವಿಶಿಷ್ಯ’ (ಪು. ೯೩) ಇಂಥ ಪದ್ಯಗಳು. ಮೂರನೆಯದಾಗಿ, ಅನುವಾದ ಮಾಡುವಾಗ ಮೂಲದ ಸಾಂಸ್ಕೃತಿಕ ಸತ್ವವನ್ನು ಮಾತ್ರ ಗ್ರಹಿಸಿ, ಅದನ್ನು ನಮ್ಮ ಪರಿಸರದ ಸಾಂಸ್ಕೃತಿಕ ಪರಿಸರಕ್ಕೆ ಅಳವಡಿಸುವುದು (adopt), ಅಥವಾ ಎರಕ ಹೊಯ್ಯುವುದು. ಹೀಗೆ ಸಿದ್ಧವಾದ ಈ ‘ರೂಪ’, ಮೂಲದ ಆ ‘ರೂಪ’ದಿಂದಲೇ ಸಂಭವಿಸಿದ್ದು ಎನ್ನುವುದನ್ನು ಖಚಿತಪಡಿಸುತ್ತದೆ. ಉದಾಹರಣೆಗೆ ‘ಮುದಿಯ ರಾಮೇಗೌಡ’ (ಪು. ೫೨); ‘ಮಾದಮಾದಿ’ (ಪು. ೩೭); ‘ಬಿಂಕದ ಸಿಂಗಾರಿ’ (ಪು. ೪೯); ‘ದುಃಖಸೇತು’ (ಪು.೬೧); ‘ಕಾರಿ ಹೆಗ್ಗಡೆಯ ಮಗಳು’ (ಪು. ೬೬); ‘ಚೋಳ ಕನ್ನೆಯರು’ (ಪು. ೬೯) ಈ ಪದ್ಯಗಳನ್ನು ಗಮನಿಸಬಹುದು.

ಶ್ರೀಯವರು, ಪದ್ಯಾನುವಾದದ ಈ ಪ್ರಯತ್ನಗಳನ್ನು ಮಾಡುವ ವೇಳೆಗೆ ಕನ್ನಡ ಕಾವ್ಯ ನಿಂತ ನೀರಾಗಿತ್ತು.[5] ಕನ್ನಡ ಕಾವ್ಯಕ್ಕೆ, ಪಾಶ್ಚಾತ್ಯ ಕಾವ್ಯ-ನಾಟಕಾದಿಗಳ ಅನುವಾದಗಳ ಮೂಲಕ, ಹೊಸ ಪ್ರೇರಣೆಗಳನ್ನು ಬರಮಾಡಿಕೊಳ್ಳುವ ಆಸೆ ಹಾಗೂ ಪ್ರಯತ್ನಗಳು ಕಾಣಿಸಿಕೊಳ್ಳತೊಡಗಿದ್ದವು.[6] ಈ ಸಂದರ್ಭದಲ್ಲಿ ಇಂಗ್ಲಿಷ್ ಹಾಗೂ ಕನ್ನಡವೆರಡರಲ್ಲೂ ಅಸಾಧಾರಣ ಪ್ರಭುತ್ವವನ್ನು ಪಡೆದ ಶ್ರೀಯವರು, ತಮ್ಮ ‘ಇಂಗ್ಲಿಷ್ ಗೀತೆಗಳು’ ಕೃತಿಯನ್ನು ಪ್ರಕಟಿಸಿ ಕನ್ನಡಕ್ಕೆ ಹೊಸ ಹಾದಿಯನ್ನು ತೆರೆದರು. ಆದರೆ, ಶ್ರೀಯವರ  ಈ ಪ್ರಯತ್ನ ಹಾಗೂ ಪ್ರಯೋಗಗಳನ್ನು, ನಾವು ಕೇವಲ ಅನುವಾದಗಳೆಂದು ಮಾತ್ರ ಪರಿಗಣಿಸುತ್ತ, ಶ್ರೀಯವರೊಬ್ಬರು ಅನುವಾದಕರೆಂದು ಹೇಳಲು ಇಷ್ಟಪಡುವುದಿಲ್ಲ. ಅವರು ಮೂಲತಃ ಅಗಾಧ ಸೃಜನಶೀಲ ವ್ಯಕ್ತಿತ್ವವುಳ್ಳವರು. ಇದರ ಅಭಿವ್ಯಕ್ತಿಗೆ ಇಂಗ್ಲಿಷ್ ಗೀತೆಗಳು, ಒಂದು ನಿಮಿತ್ತ ಮಾತ್ರ. ಅವರಿಗೆ ಪ್ರಧಾನವಾಗಿದ್ದದ್ದು ಇಂಗ್ಲಿಷ್ ಗೀತೆಗಳ ಮೂಲಕ ಒಳ್ಳೆಯ ಅನುವಾದಗಳನ್ನು ಒದಗಿಸಬೇಕೆಂಬುದಲ್ಲ; ಇಂಗ್ಲಿಷ್ ಕಾವ್ಯದಿಂದ ಪಡೆದ ಪ್ರೇರಣೆಯ ಮೂಲಕ, ಕನ್ನಡದಲ್ಲಿ ಹೊಸ ರೂಪಗಳನ್ನು ಆವಿಷ್ಕಾರ ಮಾಡುವ ಪ್ರಯೋಗದ ಹಂಬಲ. ಈ ಪ್ರಯೋಗಕ್ಕೆ ಇಂಗ್ಲಿಷ್ ಕವಿಗಳ ಕಾವ್ಯ ವಸ್ತು, ಕಾವ್ಯ ರೂಪ-ಇವುಗಳು ಪ್ರಮುಖ ಪ್ರೇರಣೆಯಾದದ್ದರಿಂದ, ಇಲ್ಲಿನ ಕವಿತೆಗಳು ಮುಖ್ಯವಾಗಿ ಅನುವಾದ ಮೂಲವಾದ ಪ್ರಯೋಗಗಳು; ಅವುಗಳನ್ನು ಅನುವಾದವೆನ್ನುವುದು ಔಪಚಾರಿಕ. ಅನುವಾದವೆಂದು ಭಾವಿಸಬೇಕೆಂದರೂ ಅವು ಸೃಜನಾತ್ಮಕ ಅನುವಾದಗಳೆನ್ನಬಹುದು. ಈ ಕವಿತೆಗಳು, ಹೊಸಗನ್ನಡ ಕಾವ್ಯಾನುವಾದದ ಸಂದರ್ಭದಲ್ಲಿ ಕಾವ್ಯಾನುವಾದದ ಬಗೆಗೆ ಅನೇಕ ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ. ಕಾವ್ಯಾನುವಾದದ ಬಗ್ಗೆ ಅಧ್ಯಯನ ಮಾಡುವವರು, ಇವುಗಳಿಂದ ಕಲಿಯಬೇಕಾದದ್ದು ಬಹಳ ಇದೆ.

ನಿದರ್ಶನಕ್ಕೆ ‘ಇಂಗ್ಲಿಷ್ ಗೀತೆಗಳು’ದಿಂದ ಕೆಲವು ಅನುವಾದದ ತುಣಕುಗಳನ್ನು ಪರಿಶೀಲಿಸಬಹುದು.[7]

T. Nash ಕವಿಯ Spring, ಎಂಬ ಕವಿತೆಯ ಅನುವಾದ ‘ವಸಂತ’.

ಇಂಗ್ಲಿಷ್  ಮೂಲ ಹೀಗಿದೆ :

Spring the sweet Spring, is the
Year’s pleassent King;
Then blooms each thing, then maids dance in a ring
Cold doth not sting, the pretty birds do sing
Cuckoo, Jug-Jug, pu-we, to-witta-woo !

ಇದರ ಅನುವಾದ :

ವಸಂತ ಬಂದ, ಋತುಗಳ ರಾಜ ತಾ ಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳುಲಿ ಚಂದ
ಕುವೂ, ಜಗ್ ಜಗ್ ಪುವ್ವೀ ಟುವಿಟ್ಟವೂ

ಅನುವಾದದ ಹೊಸತನ ತಟಕ್ಕನೆ ಸೆಳೆಯುವ ಗುಣವಾಗಿದೆ; ಅಂದಿನ ಕಾಲಕ್ಕೆ ನೆಲೆನಿಂತ ಕಾವ್ಯರೂಪಗಳಿಂದ ಇದು ತೀರಾ ಭಿನ್ನವಾಗಿರುವುದೇ ಇದರ ವೈಶಿಷ್ಟ್ಯ.

ಈ ಅನುವಾದದಲ್ಲಿ, ವಾಕ್ಯ ವಾಕ್ಯಗಳ ಪದ ಪದಗಳ ಅರ್ಥವನ್ನು  ಅನುಸರಿಸದಿದ್ದರೂ ಮುಖ್ಯವಾದ ‘ಭಾವ’ವನ್ನು ಶ್ರೀಯವರು ಹಿಡಿದಿದ್ದಾರೆ. ಅನುವಾದದಲ್ಲಿ ‘sweet spring’ ನ ಅರ್ಥ ಬಂದಿಲ್ಲ; ‘year’s pleasent King’ ಎಂಬುದಕ್ಕೆ ‘ಋತುಗಳ ರಾಜ’ ಎಂಬುದಷ್ಟೆ ಸಾಲದು; maids dance in a ring ಎಂಬುದು ಬರೀ ‘ಹೆಣ್ಗಳ ಕುಣಿಸುತ ನಿಂದ’-ಎಂದಾಗಿದೆ;  cold doth not sting ಅನ್ನುವುದಂತೂ ‘ಚಳಿಯನು ಕೊಂದ’ ಎಂದು ಅನುವಾದವಾಗಿ ಮೂಲದಿಂದ  ದೂರಹೋಗಿದೆ.[8] ಹಾಗೆ ನೋಡಿದರೆ ಅನುವಾದದಲ್ಲಿ ಮೂಲದ ಎಲ್ಲವನ್ನೂ ತರಲಾಗುವುದಿಲ್ಲ. ಅನುವಾದದಲ್ಲಿ ಮೂಲದಿಂದ ತರುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚೇನೋ ಅನ್ನಿಸುತ್ತದೆ. ಇದು ಅನುವಾದ ಸಮಸ್ಯೆ ಹಾಗೂ ಮಿತಿ ಕೂಡಾ. ಆದರೆ, ಮೂಲದ ಪದ್ಯವನ್ನು, ಪದ್ಯರೂಪದಲ್ಲೇ ಅನುವಾದ ಮಾಡುವಾಗ, ಮೂಲದ ಛಂದೋರೂಪಕ್ಕೆ ತತ್ ಸದೃಶವಾದ ರೂಪವೊಂದನ್ನು ನಿರ್ಮಾಣ ಮಾಡಿಕೊಳ್ಳಬೇಕು  ಮತ್ತು ಮೂಲದ ಭಾವವನ್ನು, ತನ್ನ ಭಾಷೆಗೆ ಇಳಿಸಿಕೊಳ್ಳಬೇಕು.  ಶ್ರೀಯವರು ಈ ಅನುವಾದದಲ್ಲಿ ಈ ಎರಡೂ ಬಹುಮಟ್ಟಿಗೆ ಸಾಧ್ಯವಾಗಿವೆ ಎಂಬುದೇ ಸಮಾಧಾನದ ಸಂಗತಿ.

ಷೆಲ್ಲಿಯ Skylark ಎಂಬ ಕವಿತೆಯ ಅನುವಾದದ ಇನ್ನೊಂದೆರಡು ತುಣುಕುಗಳನ್ನು ನೋಡೋಣ. ಈ ಪದ್ಯವನ್ನು ಶ್ರೀಯವರಿಗಿಂತ ಮೊದಲೇ ಗೋವಿಂದಪೈಗಳು ಅನುವಾದಿಸಿದ್ದರು. ‘ಬಾನಕ್ಕಿಗೆ’ ಎಂಬ ಪೈಗಳ ಅನುವಾದ ೧೯೦೬ ರಷ್ಟು ಹಿಂದಿನದು; ಶ್ರೀಯವರ ‘ಬಾನಾಡಿ’, ೧೯೨೧ ರಲ್ಲಿ ಪ್ರಕಟವಾದ ‘ಇಂಗ್ಲಿಷ್ ಗೀತೆಗಳು’-ಪುಸ್ತಕದಲ್ಲಿದೆ.

To a Skylark :

Hail to thee blithe spirit
Bird thou never wert,
That from heaven or near it
Pourest thy full heart
In profuse strains of unpremediated art

ಈ ಪದ್ಯ :

ಪೈಯವರಲ್ಲಿ ಶ್ರೀಯವರಲ್ಲಿ
ಸೊಗೆಯಿಸೈ ಸುಖಜೀವಿ ಆರು ನೀನೆಲೆ ಹರುಷಮೂರುತಿ
ನೆಗೆವಕ್ಕಿ ನೀನಲ್ಲ ಹಕ್ಕಿಯೆಂಬರೆ ನಿನ್ನನು!
ಗಗನದಿಂದಲೊ ಗಗನದರುಗಿಂದಲೊ ತೋರಿ ದಿವಿಜರು ಸುಳಿವ ಬಳಿ ಸುಖ-
ಮೊಗೆವೆ ತುಂಬೆದೆಯಮುಂ ವುಕ್ಕಿ ಬಹ ನಿನ್ನೆದೆಯನು
ಬಗೆದಿಲ್ಲದಿಹ ಬಿನ್ನ ಹಾರಿ ನೆನೆಯದ ಕಲೆಯ ಕುಶಲದ
ಣಿಗೆಯುಗವುದಾರಗಾಯನದ ಝರಿಯಿಂ. ಭೂರಿ ಗಾನದೊಳೆರೆಯುವೆ.

ಪೈಗಳದು ಕುಸುಮಷಟ್ಪದಿ. ದ್ವಿತೀಯಾಕ್ಷರಪ್ರಾಸದ ನಿರ್ಬಂಧವಿದೆ (ಈ ವೇಳೆಗೆ ಪೈಗಳಿನ್ನೂ ‘ಪ್ರಾಸತ್ಯಾಗದ ಧೀರನಿರ್ಧಾರ’ವನ್ನು ಕೈಕೊಂಡಿರಲಿಲ್ಲ) ಶ್ರೀಯವರು ೩-೪ ಮಾತ್ರಾಗಣದ, ಮುಕ್ತಓಟದ, ದ್ವಿತೀಯಾಕ್ಷರ ನಿರ್ಬಂಧವಿಲ್ಲದ ರಚನೆ. ಶ್ರೀಯವರದು, ಪೈಗಳದ್ದಕ್ಕಿಂತ ಲವಲವಿಕೆಯನ್ನುಳ್ಳ ಅನುವಾದವಾಗಿದೆ. Bird thou never  wert  ಎಂಬುದು ಪೈಗಳಲ್ಲಿ ‘ನೆಗೆವಕ್ಕಿ ನೀನಲ್ಲ’ ಎಂದು ಇತ್ಯಾತ್ಮಕವಾದ ಹೇಳಿಕೆಯಾದರೆ, ‘ಹಕ್ಕಿಯೆಂಬರೆ ನಿನ್ನನು!’-ಎಂಬ ಆಶ್ಚರ್ಯಾತ್ಮಕವಾದ, ಶ್ರೀಯವರ ಅನುವಾದ ಷೆಲ್ಲಿಗೆ ಹೆಚ್ಚು ಹತ್ತಿರವಾದದ್ದು. That from heaven or near it -ಎಂಬುದು ಪೈಗಳಲ್ಲಿ ‘ಗಗನದಿಂದಲೊ ಗಗನದರುಗಿಂದಲೊ’ ಎಂದು ಕೇವಲ ವಾಚ್ಯಾರ್ಥವನ್ನು ಮಾತ್ರ ಗ್ರಹಿಸಿ ಮಾಡಿದ ಅನುವಾದವಾಗಿದೆ. ‘Heaven’ ಎಂಬುದಕ್ಕೆ, ‘ಆಕಾಶ’ ಎಂಬುದು ಅವರ ನಿಘಂಟಿನ ಅರ್ಥವಷ್ಟೆ. ಆದರೆ ಶ್ರೀಯವರು ‘Heaven’ ಎಂಬುದಕ್ಕೆ ‘ಆಕಾಶ’ ಎಂದು ಮಾಡದೆ, ‘ತೋರಿ ದಿವಿಜರು ಸುಳಿವ ಬಳಿ’-ಎಂದು ಮಾಡಿದ್ದಾರೆ. ಇಡೀ ಪದ್ಯದ ಸಂದರ್ಭದಲ್ಲಿ Skylark ಎಂಬುದು ಕೇವಲ ಒಂದು ಹಕ್ಕಿಯಲ್ಲ;  ಅದೊಂದು ಚೈತನ್ಯ ಎಂದೇ ನಿರೂಪಿತವಾಗಿದೆ.‘Bird thou never wert’-ಎಂಬ   ಪದ್ಯಾರಂಭದ ಎರಡನೆಯ ಪಂಕ್ತಿಯಲ್ಲೇ ಈ ಭಾವನೆ ಖಚಿತಗೊಳಿಸಲ್ಪಟ್ಟಿದೆ. ಅದು ಹಕ್ಕಿ ಮಾತ್ರವಲ್ಲ; ಒಂದು ಚೈತನ್ಯ (Spirit) ಎಂದು ಪರಿಗಣಿತವಾಗಿರುವಾಗ ಅದು ಈ ಲೋಕದ್ದಲ್ಲ; ಅದರ ಸಂಬಂಧವೇನಿದ್ದರೂ, ಊರ್ಧ್ವಲೋಕದೊಂದಿಗೆ ಎಂಬ ಅರ್ಥವೇ ಹೆಚ್ಚು ಸಮಂಜಸ. ಹೀಗಿರುವಾಗ,‘That from Heaven or near it’  ಎಂಬುದು, ಪೈಗಳು ಭಾವಿಸಿದಂತೆ ‘ಗಗನದಿಂದಲೊ, ಗಗನದರುಗಿಂದಲೊ’ ಎಂದಾಗುವುದಿಲ್ಲ. ‘ತೋರಿ ದಿವಿಜರು ಸುಳಿವ ಬಳಿ’ ಎಂಬುದೇ ಇಲ್ಲಿ ಸಮರ್ಪಕ. ಪದ್ಯಾನುವಾದಕ್ಕೆ ಕೇವಲ ನಿಘಂಟನ್ನು ಅವಲಂಬಿಸುವ ಪಾಂಡಿತ್ಯ ಸಹಾಯಕ್ಕೆ ಬಾರದು; ಪದ್ಯದ ಅಂತರಾರ್ಥವನ್ನು ಇಡೀ ಕವಿತೆಯನ್ನು ಒಳಹೊಕ್ಕು ಗ್ರಹಿಸುವಂಥ ಒಂದು ಅಂತರ್‌ದೃಷ್ಟಿ ಅಗತ್ಯ.

ಇನ್ನು ಎರಡನೆಯ ಪದ್ಯ ಹೀಗಿದೆ :

Higher still and Higher
From the earth thou Springest
Like a cloud of fire;
The blue deep thou wingest
And Singing still dost soar and soaring ever Singest

ಇದು ಈ ಇಬ್ಬರ ಅನುವಾದಕರಲ್ಲಿ ಹೀಗಿದೆ :

ಪೈಗಳಲ್ಲಿ ಶ್ರೀಯವರಲ್ಲಿ
ಉನ್ನತಂ ಮೇಣದರಿ ನೆಲವನೊಲ್ಲದೆ ಚಿಗಿದು ಚಿಮ್ಮುತ
ನುನ್ನತಂ ಭುವಿಯಿಂದ ಮೇಲು ಮೇಲಕ್ಕೋಡುವೆ,
ನೀನ್ನೆಗೆವೆ ಕೆಂಡದುರಿಮೋಡದಂತೆ ಒಲೆದು ದಳ್ಳುರಿ ನೆಗೆದು, ಗಗನದ
ಮುನ್ನೆರಕೆ ಬೀಸಿನೀ ನೀಲಿಯಾಳದೊಳಾಡುವೆ
ಲನ್ನನ್ನಗದೊಳೇರು ನಲಿದು ಹಾಡುವೆ, ಹಾಡುತೇರುವೆ
ತಿನ್ನು ಹಾಡುವೆ, ಹಾಡುತಿನ್ನೇರುವೆ. ಏರುತೇರುತ ಹಾಡುವೆ.

ಇಂಗ್ಲಿಷ್ ಮೂಲದ ಮೊದಲರ್ಧದ ಸೊಗಸು, ಪೈಗಳ ಅನುವಾದದಲ್ಲಿ ಚೆನ್ನಾಗಿ ಬಂದಿದೆ ಎಂದು ಒಪ್ಪಬೇಕು. ‘Higher still and Higher’ ಎಂಬ ಪದಗಳ ಅರ್ಥಸ್ವಾರಸ್ಯವೆಲ್ಲವೂ ‘ಉನ್ನತಂ ಮೇಣದರಿನುನ್ನತಂ’-ಎಂಬ ಮಾತಿನಲ್ಲಿ ಭಟ್ಟಿಯಿಳಿದಿದೆ; ಆದರೆ ಶ್ರೀಯವರ ಅನುವಾದದಲ್ಲಿ ಅದಿಲ್ಲ. ‘Like a cloud of fire’ ಎಂಬುದಕ್ಕೆ, ‘ನೀನ್ನೆಗೆವೆ ಕೆಂಡದುರಿ ಮೋಡದಂತೆ’ ಎಂಬುದು ಸಾರ್ಥಕವಾದ ಅನುವಾದ.  ‘ಒಲೆದು ದಳ್ಳುರಿ ನೆಗೆದು’-ಎಂಬ ಶ್ರೀಯವರ ಅನುವಾದ. ‘Like a cloud of fire’ ಎಂಬುದಕ್ಕೆ ಸಂವಾದಿಯಾಗಿಲ್ಲ. ಆದರೂ ಇಲ್ಲೊಂದು ಸ್ವಾರಸ್ಯವಿದೆ. ಅದೆಂದರೆ, ಶ್ರೀಯವರ ಅನುವಾದ ಸೋತು-ಗೆದ್ದಿದೆ. ಸೋತದ್ದು ವಾಚ್ಯಾರ್ಥಕ್ಕೆ ಸರಿಯಾದ ಅನುವಾದವನ್ನೊದಗಿಸಲಾರದೆ; ಗೆದ್ದದ್ದು  ಇಡೀ ಪದ್ಯದಲ್ಲಿ, ಅಡಕವಾಗಿರುವ ಕವಿ ಮನೋಧರ್ಮವನ್ನು ‘ನೆಲವನೊಲ್ಲದೆ ಚಿಗಿದು ಚಿಮ್ಮುತ’ ಎಂಬ ಪಂಕ್ತಿಯ ಮೂಲಕ ಅಭಿವ್ಯಕ್ತಿಸಿರುವುದರಿಂದ. ಷೆಲ್ಲಿಯ ಬದುಕನ್ನು ಬಲ್ಲವರಿಗೆ, ಅವನ ಪದ್ಯಗಳಲ್ಲಿ ಅಭಿವ್ಯಕ್ತಗೊಂಡ ಮನೋಧರ್ಮವನ್ನು ಗುರುತಿಸಿದವರಿಗೆ, ಷೆಲ್ಲಿಯ ವ್ಯಕ್ತಿತ್ವ ಮೂಲತಃ ಈ ಲೋಕದಿಂದಾಚೆಯ ನೆಲೆಗೆ ಸದಾ ಕಾತರಿಸತಕ್ಕದ್ದು-ಎಂಬುದು ಗೊತ್ತಿದೆ. Slylark ಕವಿತೆಯಲ್ಲೇ ಈ ನಿಲುವಿಗೆ ಇನ್ನಷ್ಟು ದಾಖಲೆಗಳಿವೆ. ಷೆಲ್ಲಿಯ ವ್ಯಕ್ತಿತ್ವ, Slylark ಪಕ್ಷಿಯಂತೆ ‘ನೆಲವನೊಲ್ಲದೆ ಚಿಗಿದು ಚಿಮ್ಮುವ’ ಸ್ವಭಾವದ್ದು. ಆದ್ದರಿಂದಲೇ ಶ್ರೀಯವರು ‘Higher still and higher From the earth thou Springest’  -ಎಂಬುದಕ್ಕೆ ‘ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ’-ಎಂದು ಮಾಡಿದ ಅನುವಾದ, ಈ ಕವಿತೆಯ ಸಂದರ್ಭದಲ್ಲಿ ಸರಿಯಾಗಿಯೇ ಇದೆ.

ಅತ್ಯುತ್ತಮವಾದ ರೂಪಾಂತರಾನುವಾದಕ್ಕೆ ಅವರ ‘ಮುದಿಯ ರಾಮೇಗೌಡ’ ‘ಕಾರಿ ಹೆಗ್ಗಡೆಯ ಮಗಳು’ ‘ದುಃಖಸೇತು’ ಒಳ್ಳೆಯ ನಿದರ್ಶನಗಳು.

ಕಾರಿ ಹೆಗ್ಗಡೆಯ ಮಗಳು Lord Ullin’s daughter  ಎಂಬ ಪದ್ಯದ ಅನುವಾದ. ಇದರಲ್ಲಿನ ಒಂದು ಪದ್ಯ-

By this Storm grew loud apace
The water-wrath was Shrieking
And in the Scowl of heaven each face
Grew dark as they were Speaking.

ಇದರ ಅನುವಾದ :

ತೂರುಗಾಳಿಗೆ ಕಡಲು ಕುದಿಯಿತು
ನೀರ ದೆವ್ವಗಳರಚಿಕೊಂಡವು
ಹೆಪ್ಪು ಮೋಡದ ಹುಬ್ಬು ಗಂಟಿಗೆ
ಕಪ್ಪಗಾದವು ಮುಖಗಳು   (ಪು. ೬೭)

ಮಾತಿನ ಹೊಸತನ, ಭಾವದ ಹರಳುಗೊಳಿಸುವಿಕೆಗಳಿಂದ ಇದು ಭಾಷಾಂತರದ ಸಾಧನೆಗೆ ನಿದರ್ಶನ. ಇದಕ್ಕಿಂತ ಚೆನ್ನಾಗಿ ಅನುವಾದಿಸುವುದು ಸಾಧ್ಯವೇ ಇಲ್ಲ ಎಂಬಂತಹ ತೃಪ್ತಿಯ ನೆಲೆಗೆ ನಿಲ್ಲುತ್ತೇವೆ. ಆದರೆ ಕಡೆಯ ಪಂಕ್ತಿಗಳಿಗೆ ಬಂದಾಗ-

The water’s wild went over his Child
And he was left lamenting.

ಈ ಪಂಕ್ತಿಗಳು

ಕರೆಯ ತೆರೆಯಪ್ಪಳಿಸಿ ಹೊಯ್ದು
ಹೊರಳಿ ಹೋದವು ಮಗಳ ಮೇಲೆ
ಕೊರಗಿನಲಿ ಅವನುಳಿದನು-

ಎಂಬಲ್ಲಿ ಅನುವಾದ ಯಾಕೋ ಅಷ್ಟು ಸರಿಯಾಗಲಿಲ್ಲವೆಂಬ ಕೊರಗಿನಲ್ಲಿ ನಾವು ಉಳಿಯುತ್ತೇವೆ!

ಇಂಗ್ಲಿಷಿನ, ಹುಡ್ ಕವಿಯ ‘TheBridge of Sighs’ ಕನ್ನಡದಲ್ಲಿ ‘ದುಃಖ ಸೇತು’ವಾಗಿ ರೂಪಾಂತರಾನುವಾದ ಪಡೆದು ಸುಪ್ರಸಿದ್ಧವಾಗಿದೆ. ಇಡೀ ಪದ್ಯ ಸೃಜನಾತ್ಮಕವಾದದ ಉತ್ತಮ ಉದಾಹರಣೆ. ಶ್ರೀಯವರು

Alas for the rarity
of the christian charity
under the sun

ಎಂಬುದಕ್ಕೆ

ಆಹ ಎಲ್ಲಡಗಿತೋ
ಆರ‍್ಯ ಧರ್ಮದ ಕರುಣ
ಆರ‍್ಯಜನಗಳ ಮರುಕ
ಉರಿಯುವನೆ ಬಲ್ಲ!

ಎಂದು ಅನುವಾದಿಸಿದ್ದಾರೆ. ಒಂದು ಪರಿಸರದ ಭಾವನೆಯನ್ನು ಇನ್ನೊಂದು ಪರಿಸರದ ಭಾವನೆಗೆ, ಭಟ್ಟಿಯಿಳಿಸಿದ್ದು ಇದರ ವಿಶೇಷ. ಹಾಗೆಯೇ ಮೂಲದಲ್ಲಿ ಇಲ್ಲದ-

ನಿರಿಹಿಡಿದು ನಡುವೇರಿ
ತೊದಳು ಮಾತನು ಬೀರಿ
ಕೊರಗಿನ ನಗಿಸಲು ಬಲ್ಲ
ಮಗುವಿಲ್ಲವೇನೋ

ಈ ಪಂಕ್ತಿಗಳನ್ನು ಸೇರಿಸಿ ಈ ಕವಿತೆಯ ಕರುಣರಸಕ್ಕೆ ಕಲಶವಿಟ್ಟಿದ್ದಾರೆ. ಇಲ್ಲಿ   ಒಂದು ಅನುವಾದದ ಸಮಸ್ಯೆ ಇದೆ. ಅನುವಾದ ಮಾಡುವವರು, ಮೂಲವನ್ನು ನಿಷ್ಠೆಯಿಂದ ಅನುಕರಿಸಬೇಕಲ್ಲದೆ, ಅಲ್ಲಿ ಇಲ್ಲದ್ದನ್ನು ಅನುವಾದದಲ್ಲಿ ಸೇರಿಸಬಹುದೆ? ಶ್ರೀಯವರು ಸೇರಿಸಿ, ಮೂಲದ ಪದ್ಯಕ್ಕೆ ಇಲ್ಲದ ಶೋಭೆಯನ್ನು ತಂದು ವಿಮರ್ಶಕರ ಪ್ರಶಂಸೆಯನ್ನು ಗಳಿಸಿಬಿಟ್ಟರು! ವಾಸ್ತವವಾಗಿ ಅನುವಾದಕರು, ಮೂಲದಲ್ಲಿ ಇಲ್ಲದ್ದನ್ನು ಅನುವಾದದಲ್ಲಿ ಸೇರಿಸಬಾರದೆಂಬುದು ಸರಿ; ಆದರೆ ಶ್ರೀಯವರು ಹೀಗೆ ಸೇರಿಸಿದ್ದು ತಪ್ಪು ಎಂದು ಮಾತ್ರ ಹೇಳಲಾರೆವು. ಈಗಾಗಲೇ ಹೇಳಿದಂತೆ ಶ್ರೀಯವರು ಕೇವಲ ಅನುವಾದಕರಲ್ಲ. ಕೇವಲ ಲೆಕ್ಕಾಚಾರದ ಅನುವಾದಕ್ಕೂ ಸೃಜನಾತ್ಮಕ ಅನುವಾದಕ್ಕೂ ವ್ಯತ್ಯಾಸವಿದೆ ಎಂಬುದನ್ನು ತಿಳಿಯಬೇಕು. ಶ್ರೀಯವರು ಕಾರ್ಡಿನಲ್ ನ್ಯೂಮನ್ನನ-

Lead Kindly Light amidt the encircling gloom
Lead thou me on

ಎಂಬುದನ್ನು

ಕರುಣಾಳು ಬಾ  ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು

ಎಂದು ಅನುವಾದ ಮಾಡಿದ್ದಾರೆ. ನಮ್ಮಲ್ಲಿ ಎಷ್ಟೋ ವೇಳೆ  ಈ ಕವಿತೆಯನ್ನು ಸಭೆಗಳಲ್ಲಿ ಪ್ರಾರ್ಥನೆಗೆ ಬಳಸಲಾಗುತ್ತಿದೆ. ಕೇಳಿದವರಿಗೆ ಇದೊಂದು ಅನುವಾದವೆಂದು ಅನ್ನಿಸಿಯೇ ಇಲ್ಲ. ಅದು ಅನುವಾದವೆಂದು ಗೊತ್ತಿದ್ದವರಿಗೂ ಕೂಡಾ, ಓದುವ ಅಥವಾ ಕೇಳುವ ಹೊತ್ತಿನಲ್ಲಿ ಅದು ಅನುವಾದವೆಂಬುದು ಮರೆತುಹೋಗುವಷ್ಟು ಸೊಗಸಾಗಿ ಅನುಭವಕ್ಕೆ ಬರುತ್ತದೆ. ನಿಜವಾದ ಅನುವಾದದ ಲಕ್ಷಣವೇ ಇದು: ಅದು ಅನುವಾದವೆಂದು ಗೊತ್ತಾಗದಷ್ಟು ಸಹಜವಾಗಿರಬೇಕು.

ಪ್ರತಿಕ್ರಿಯೆ-೧೯೮೨


[1] Trans-Latus  ಎಂಬ ಲ್ಯಾಟಿನ್ ಪದದಿಂದ Translation ಎಂಬ ಇಂಗ್ಲಿಷ್ ಪದ ಬಂದಿದೆ. Trans-Latus ಎಂದರೆ carry across ಅಥವಾ ಸ್ಥಳಾಂತರಿಸು, ಬದಲಾಯಿಸು, ಮತ್ತೊಂದು ಕಡೆಗೆ ಸಾಗಿಸು, ಎನ್ನುವ ಅರ್ಥಚ್ಛಾಯೆಗಳಿರುವಂತೆ  ತೋರುತ್ತದೆ. ಇಂಗ್ಲಿಷಿನ Translate ಎಂಬುದಕ್ಕೆ ಘನವಸ್ತುವನ್ನು ಸಾಗಿಸು, ಮನುಷ್ಯನನ್ನು ವರ್ಗಾಯಿಸು, ಸ್ವರ್ಗಕ್ಕಾಗಲಿ ಮತ್ತೊಂದೆಡೆಗಾಗಲಿ ಬದಲಾಯಿಸು, ರೂಪಾಂತರಿಸು, ಮಾರ್ಪಡಿಸು, ವ್ಯಾಖ್ಯಾನಿಸು ಇತ್ಯಾದಿ ಅರ್ಥಗಳಿವೆ.

ಒಟ್ಟಿನಲ್ಲಿ ಇದೊಂದು ಗಡಿ ದಾಟಿಸುವ ಕಲೆಗಾರಿಕೆ; ಗಡಿ ದಾಟಿಸಿ, ಬೇರೆಡೆಯಲ್ಲಿ ಸಲ್ಲುವಂತೆ ಮಾಡುವ ಕೆಲಸ.

[2] ಕವಿ ರವೀಂದ್ರರ ಬಂಗಾಳಿ ಭಾಷೆಯ ‘ಗೀತಾಂಜಲಿ’ ಇಂಗ್ಲಿಷಿಗೆ ಅನುವಾದವಾಗದೆ ಹೋಗಿದ್ದರೆ, ನಮ್ಮ ದೇಶಕ್ಕೆ ನೋಬಲ್ ಬಹುಮಾನದಂಥ ಗೌರವ ತಪ್ಪಿ ಹೋಗುತ್ತಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು.

[3] ಕನ್ನಡಕ್ಕೆ ಅನುವಾದವಾಗಿರುವ ಎಷ್ಟೋ ಪಾಶ್ಚಾತ್ಯ ಕೃತಿಗಳು ಇಂಗ್ಲಿಷ್ ಭಾಷೆಯಿಂದ ಅನುವಾದಿಸಿದವುಗಳಾಗಿವೆ. ಇಂಗ್ಲಿಷ್ ಭಾಷೆಯ ಕೃತಿಗಳನ್ನು ಮಾತ್ರ ಕುರಿತದ್ದಲ್ಲ ಈ ಮಾತು. ಇಂಗ್ಲಿಷೇತರ ಭಾಷೆಯ ಕೃತಿಗಳೂ ಸಹ, ನೇರವಾಗಿ ಆಯಾ ಭಾಷೆಯಿಂದ, ಕನ್ನಡಕ್ಕೆ ಬಂದವಲ್ಲ; ಅವುಗಳ ಇಂಗ್ಲಿಷ್ ಅನುವಾದವನ್ನವಲಂಬಿಸಿ ಕನ್ನಡಕ್ಕೆ ಮಾಡಿಕೊಂಡವುಗಳು. ವಾಸ್ತವವಾಗಿ, ಇಂಗ್ಲಿಷೇತರ ಭಾಷಾಸಾಹಿತ್ಯ ಕೃತಿಗಳನ್ನು, ಆಯಾ ಭಾಷೆಗಳನ್ನು ಕಲಿತವರೆ ಅಲ್ಲಿಂದಲೇ ನೇರವಾಗಿ ತಮ್ಮ ತಮ್ಮ ಭಾಷೆಗಳಿಗೆ ಅನುವಾದಮಾಡಿಕೊಳ್ಳುವುದು ಸರಿಯಾದದ್ದು. ಆದರೆ ಆ ಸಾಮರ್ಥ್ಯವನ್ನು ಪಡೆದವರು ನಮ್ಮಲ್ಲಿ ವಿರಳ.

[4] ಹೊಸಗನ್ನಡ ಆರಂಭಕಾಲದ ಎಷ್ಟೋ ಅನುವಾದಗಳು ಈ ಮಾತಿಗೆ ನಿದರ್ಶನವಾಗಿವೆ. ಹಟ್ಟಿಯಂಗಡಿ ನಾರಾಯಣರಾಯರು, ಎಸ್. ಜಿ. ನರಸಿಂಹಾಚಾರ‍್ಯರು ಮೊದಲಾದವರ ಅನುವಾದಗಳನ್ನು, ‘ಶ್ರೀ’ಯವರ ಅನುವಾದಗಳೊಂದಿಗೆ ಹೋಲಿಸಿ ನೋಡಿದರೆ ಈ ಮಾತು ಇನ್ನೂ ಸ್ಪಷ್ಟವಾಗುತ್ತದೆ. ಇನ್ನೂ, ಕಂದ, ವೃತ್ತ, ಷಟ್ಪದಿ, ಸಾಂಗತ್ಯಗಳಲ್ಲೇ ಪಾಶ್ಚಾತ್ಯ ಕವಿಗಳ ಅನುವಾದಗಳನ್ನು ಕೈಗೊಳ್ಳುತ್ತಿದ್ದ ಹಲವರ ಪ್ರಯತ್ನಗಳ ನಡುವೆ, ಶ್ರೀಯವರು ಹಳೆಯ ಛಂದೋ ರೂಪಗಳಿಂದಲೇ ಹೊಸ ರೂಪಗಳನ್ನು ಆವಿಷ್ಕಾರ ಮಾಡಿಕೊಂಡದ್ದು ಮಹತ್ವದ ಸಂಗತಿಯಾಗಿದೆ.

[5] ‘ಇಂಗ್ಲಿಷ್ ಗೀತೆಗಳು’ ಕೃತಿಯ ೧೯೫೩ನೇ ಇಸವಿಯ ಮುದ್ರಣಕ್ಕೆ ತೀ.ನಂ.ಶ್ರೀ.  ಅವರು ಬರೆದಿರುವ ವಿಸ್ತಾರವಾದ ಪ್ರಸ್ತಾವನೆಯನ್ನು, ಆಸಕ್ತಿಯುಳ್ಳವರು ಗಮನಿಸಬಹುದು.

[6] ‘ಎಲ್ಲಿರುವುದಭಿಮಾನ ಕನ್ನಡಿಗರೇ ಪೇಳಿ
ಸುಳ್ಳೆ ಬಡಬಡಿಸುವಿರಿ ಸಭೆಗಳಲ್ಲಿ     ||ಪ||
ಗುರುಪರಿಶ್ರಮದಿನಾಂಗ್ಲೇಯಭಾಷೆಯ ಕಲಿತು
ಧರಿಸಿ ಪದವಿಗಳನುಪಜೀವಿಸುವಿರೇ
ಹೊರತು, ತದ್ಭಾಷೆಯುದ್ಗ್ರಂಥಗಳ ಕನ್ನಡದಿ
ಪರಿವರ್ತನಂಗೊಳಿಸಲಿಲ್ಲವಲ್ಲಾ?’
-ಶಾಂತಕವಿಗಳು, ಏಪ್ರಿಲ್ ೧೯೧೮ರ ಕನ್ನಡ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟಿಸಿದ ಕವನ!

[7] ಇಂಗ್ಲಿಷ್ ಗೀತೆಗಳು: ಪ್ರ. ಕರ್ನಾಟಕ ಸಂಘ, ಸೆಂಟ್ರಲ್ ಕಾಲೇಜು, ಬೆಂಗಳೂರು

[8] ಮೂಲದ ಕವಿತೆಯಲ್ಲಿ ವಸಂತರಾಜನಿಗೂ ವಸಂತದ ಇತರ ಕ್ರಿಯೆಗಳಾದ ಹೂವುಗಳು ಅರಳುವುದು, ಹೆಣ್ಣುಗಳು ಕುಣಿಯುವುದು ಇತ್ಯಾದಿಗಳಿಗೂ ಸಂಬಂಧವೇ ಇಲ್ಲದಂತೆ ಬೇರೆ ಬೇರೆಯೇ ನಿರೂಪಿತವಾಗಿವೆ. ಆದರೆ ಶ್ರೀಯವರು, ಬಂದ ವಸಂತನೇ ಒಂದು ವ್ಯಕ್ತಿಯಾಗಿ ಉಳಿದೆಲ್ಲ ಕ್ರಿಯೆಗಳಿಗೆ ಕಾರಣವೆಂಬಂತೆ, ಸಾವಯವಗೊಳಿಸಿದ್ದಾರೆ. ಹೀಗಾಗಿ ಮೂಲವೇ ಅನುವಾದವೇ ಬೇರೆ ಎಂಬಂತಿದೆ. ಶ್ರೀಯವರಲ್ಲಿರುವ ಪ್ರತಿಮಾ ಐಕ್ಯತೆ ಮೂಲದಲ್ಲಿರುವಂತೆ ತೋರುವುದಿಲ್ಲ.