ಅಂಗಳದ ಬಾವಿಗೆ ಅರಗೀನ ಮುಚ್ಚಳ
ಅರಗರಗಿ ನೀರಾ ಮಗಿಯೋಳುತ್ತರದೇವಿ
ಅಲ್ಲೊಬ್ಬ ಜಾಣ ಕಂಡೂ ತಡುದಾನೆ || ಸುವ್ವಿ ||

ತಡೆದೇನ್ಹೆಳಾನೆ ಬಾಯಾರಿಗೆ ನೀರಾ ಕೊಡುವೇನೆ
ನಿನಗೆ ನೀರು ಕೊಡುವಾಕೆ
ನಿನಗಿಂತ ಚೆಲುವಾರು ಹೋಗಯ್ಯ ಜಲಧೀಗೆ || ಸುವ್ವಿ ||

ಹರಿವ ನೀರು ಹಾಸಿಂಬೆ ಗುಮ್ಮಿ ನೀರು ಕೆಂಗಣಕು
ನಿನ್ನ ಕೈಯಾನ ನೀರೇ ಸವಿರುಚಿ
ಎಲೆ ಹೆಣ್ಣೆ ಬಾಯಾರಿಗೆ ನೀರಾ ಕೊಡು ಹೆಣ್ಣೆ || ಸುವ್ವಿ ||

ನೀರಿಗೆ ಹೋದಾಳು ನೀರ್ಗಲ್ಲ ದುರ್ಗಕ್ಕೆ
ತಡವಾದರತ್ತೆ ಬಯ್ದಾಳು ಬಯ್ನಕಡೆಗೆ
ಗಿಳಿಬಂದು ನೀರ ಕಣಿಕ್ಯಾವು
ಜಾರುಗಲ್ಲು ಹತ್ತಿ ಜಾರ‍್ಬಿದ್ದು ಕೊಡ ಒಡದ್ಹೋಯ್ತು || ಸುವ್ವಿ ||

ಮಳೆ ಬರುತಿದೆಯೆಂದು ಮರನಾ ಬಳಿ ನಾ ಪೋದೆ
ಕಾಯ್ದಿದ್ದು ಕಡಗ ಒಡೆದೋಯ್ತು ಅತ್ತಮ್ಮ
ಜೊಂಕಲಿ ಬಿದ್ದು ಸೀರೆ ಹರಿದೋಯ್ತು || ಸುವ್ವಿ ||

ಅತ್ತೆಯ ಕಾಲದ ಕೊಡ ಮಾವನ ಕಾಲದ ಕೊಡ
ಎತ್ತಿ ಹಾಕಿ ಬಂದೇನೆ ಸೊಸಿಮುಂಡೆ || ಸುವ್ವಿ ||

ಚಿನ್ನಾದ ಕೊಡವಲ್ಲ ರನ್ನಾದ ಕೊಡವಲ್ಲ
ಮಣ್ಣೀನ ಕೊಡಕೇನ ಮಿಟಗೇರಿ ಅತ್ತೆಮ್ಮ
ಅಣ್ಣಯ್ಯನ ಕೈಲಿ ಕೊಡತಾನು ತರಸೀನು || ಸುವ್ವಿ ||

ಕೊಡ ಹೋದಾರೆ ಹೋಗಾಲಿ ಬಳೆ ಹೆಂಗೆ ಒಡೆದೀತು
ಮಾವನ ಮನೆಯ ಸರಳೆಮ್ಮೆ ಬಿಡುತ್ತಿದ್ದೆ
ಕೋಡು ಹೊಡೆದು ಬಳೆಯು ಒಡೆದೊಯ್ತು || ಸುವ್ವಿ ||

ಬಳೆ ಹೋದಾರೆ ಹೋಗಲಿ ಸೀರೆಂಗೆ ಹರಿದೋಯ್ತು
ಮಾವನ ಮನೆಯ ತೋಟಕೆ ಹೋಗಿದ್ದೆ
ಬಾಳೆಮುಳ್ಳು ಹೊಡೆದು ಸೀರೆ ಹರಿದೋಯ್ತು || ಸುವ್ವಿ ||

ಬಾಳೆಗೆ ಮುಳ್ಳುಂಟೆ ಬಸವಳೀಗೆ ಕೆಂಚುಂಟೆ
ಸೊಸೆಯೇ ನಿನಮಾತು ನಿಜವುಂಟೆ || ಸುವ್ವಿ ||

ನೀರಿಗೆ ಹೋದಾಳು ನೀರ್ಗಲ್ಲ ದುರ್ಗಕೆ
ತಡವಾದರತ್ತೆ ಬಯ್ದಾರು ಬಯ್ನಕಡೆಗೆ || ಸುವ್ವಿ ||

ಗಿಳಿ ಬಂದು ನೀರ ಕಣಿಕ್ಯಾವು
ಜಾರುಗಲ್ಲು ಹತ್ತಿ ಜಾರ‍್ಬಿದ್ದು ಕೊಡ ಒಡೆದೋಯ್ತು || ಸುವ್ವಿ ||

ಅತ್ತೇಗೂ ಸೊಸೀಗೂ ಹತ್ತೀತು ಎಲೆಕದನಾ
ಹಿತ್ತಲ ಹೊರಗೆ ಒಲೆ ಹೂಡಿ
ಹಿತ್ತಲ ಹೊರಗೆ ಉತ್ತೇಯ ಮರನಡಿ ಒಲೆಹೂಡಿ || ಸುವ್ವಿ ||

ಉಕ್ಕೇಬಿಟ್ಟ ಮಗನೀಗ ಹಗಲೂಟ ಬಡಿಸಾಗ
ಒಂದೊಂದು ಚಾಡಿ ಹೇಳ್ಯಾಳು || ಸುವ್ವಿ ||

ಮಾತಿಗುತ್ತರ ಪ್ರತಿಯುತ್ತರ ಕೊಡುತಾಳೆ
ಉತ್ತರದೇವೆಂಬ ಸೊಸಿ ಬ್ಯಾಡ || ಸುವ್ವಿ ||

ಕುತ್ಕು ಕುಟ್ಟೀನು ಕುಡ್ಕ್ಯಾಗೆ ನೀರು ಹೊತ್ತೀನು
ಉತ್ತರದೇವೆಂಬ ಸೊಸಿಬ್ಯಾಡ
ಕಳ್ಸಿ ಬಾರವಳ್ನ ತವರೀಗಿ || ಸುವ್ವಿ ||

ಕಳ್ಸಿ ಬರುವುದಕೇನು ಸುಮ್ಮನೆ ಬಂದೋಳಲ್ಲ
ಸಾವಿರಕೊಡಿ ಸಭೆಕೊಡಿ
ಸಾವಿರೆಂಬುದು ನಮ್ಮ ಹಾಲಿನ ಬೆಲೆ ಇಲ್ಲ
ಹಾಲು ಮಾರವಳ್ನ ತರಬೋದು || ಸುವ್ವಿ ||

ಉತ್ತರಕುತ್ತರ ಪ್ರತಿಯುತ್ತರ ಕೊಡುತಾಳೆ
ಉತ್ತರದೇವೆಂಬ ಸೊಸಿಬ್ಯಾಡ – ಎಲೆಮಗನೆ
ಬಿಟ್ಟರೆ ಬಿಡುಮಗನೆ ಮಡದೀಯಾ || ಸುವ್ವಿ ||

ಮಡದಿ ಬಿಡುವೋಕೆ ಎಪ್ಪತ್ತು ಕೊಟ್ಟಿದೀನಿ
ಹೆತ್ತಮ್ಮನಿಗೆ ನಾ ಮರುಳಾದೆ
ಎಪ್ಪತ್ತು ಕೊಟ್ಟರೂ ನನ್ನ ಕೊಪ್ಪೀನಾ ಬೆಲೆ ಇಲ್ಲ
ಬಿಟ್ಟರೂ ಬಿಡುಮಗನೆ ಮಡದೀಯಾ || ಸುವ್ವಿ ||

ಕೊಪ್ಪು ಮಾಡೆಣ್ಣಾ ತರುತೀನಿ
ಅತ್ತೇಗೂ ಸೊಸೀಗೂ ಹತ್ತೀತು ಕದನಾ
ಹಿತ್ತಾಲ ಹೊರಗೆ ಒಲಿಹೂಡಿ ಅಡಗಿಮಾಡಿ || ಸುವ್ವಿ ||

ಹರಗಾಕ್ಹೋಗ ಮಗನೀಗೆ ಹಗಲೂಟ
ಹಗಲೂಟ ನಿಕ್ಕಿಕೊಂಡು ಹೇಳ್ಯಾಳು
ಬಿಟ್ಟರು ಬಿಡುಮಗನೆ ಮಡದೀಯಾ || ಸುವ್ವಿ ||

ಮಡದಿ ಬಿಡುವೋಕೆ ಎಂಬತ್ತು ಕೊಟ್ಟಿದೀನಿ
ಹಡೆದಮ್ಮನಿಗೆ ನಾ ಮರುಳಾದೆ
ಎಂಬತ್ತು ಕೊಟ್ಟರೂ ನನ್ನ ಬಂದಿಯಾ ಬೆಲೆ ಇಲ್ಲ
ಬಂದಿ ಮಾರಿ ಹೆಣ್ಣಾ ತರುತೀನಿ || ಸುವ್ವಿ ||

ನಾನು ತರುವಾಗ ಇಷ್ಟು ದೊಡ್ಡಾನ ಮಾತಿರ‍್ಲ
ಈಗೆಲ್ಲಿ ಕಲಿತೆ ತಿಪುರಾವ || ಸುವ್ವಿ ||

ನಟ್ಟಾ ಮಲ್ಲಿಗೆ ನಟ್ಟಂತೆ ಇರುವೂದೆ
ಚಪ್ಪರಕೊಂದು ಜೋಲು ನಸೆದಾವು
ಗಣ್ಣು ಗಣ್ಣಿಗೂ ಮೊಗ್ಗೆ ಅರಳ್ಯಾವು || ಸುವ್ವಿ ||

ಉತ್ತರಕುತ್ತರ ಪ್ರತಿಯುತ್ತರ ಕೊಡುತಾಳೆ
ಉತ್ತರದೇವೆಂಬ ಸೊಸಿಬ್ಯಾಡ
ಕಳ್ಸಿ ಬಾರವಳ್ನ ತವರೀಗಿ || ಸುವ್ವಿ ||

ಕಳ್ಸಿ ಬರುವುದಕೇನು ಸುಮ್ಮನೆ ಬಂದವಳಲ್ಲ
ಸಾವಿರಕೂಡಿ ಸಭೆಕೂಡಿ ಬಂದವಳ
ಕಳ್ಸಿ ಬರಲಾರೆ ತವರೀಗಿ || ಸುವ್ವಿ ||

ನೆರೆಮನೆ ಅಕ್ಕಾ ಕೇಳಿ ನೆರೆಮನೆ ಬಾವ್ನಾ ಕೇಳಿ
ನನ್ನತ್ತೆ ನನ್ನ ಉರಿಸಿದ್ದು
ಬೆಂಕ್ಟಿಮ್ಯಾಲೆ ಬಾನ ಬಸಿಯಂದ್ರು ನಮ್ಮತ್ತೆ
ಆ ಕೆಲ್ಸ ನನಗೆ ತಿಳಿದಿಲ್ಲ || ಸುವ್ವಿ ||

ಸಣ್ಣೇಲಿ ಸಾಸುವೆ ಮೊಗೆಯಂದ್ರು ನಮ್ಮತ್ತೆ
ಆ ಕೆಲ್ಸ ನನಗೆ ತಿಳಿದಿಲ್ಲ
ನಡು ಹೊಳೆಯಾಲಿ ಮೊಸರ ಕಡೆಯೆಂದಾರು ನಮ್ಮತ್ತೆ
ಆ ಕೆಲ್ಸ ನನಗೆ ತಿಳಿದಿಲ್ಲ || ಸುವ್ವಿ ||

ಆ ಕೆಲ್ಸ ನಿನಗೆ ತಿಳಿದಿದ್ರೆ ಉತ್ತರದೇವಿ
ಓಡ್ಹೋಗೆ ನಿನ ತವರೀಗಿ || ಸುವ್ವಿ ||

ಓಡಿಹೋಗುವುದಕೇನು ಓಡಿಬಂದವಳಲ್ಲ
ಹೇಳ್ಹೋಗುವೆ ನನ್ನಾ ಪುರುಷಾಗೆ || ಸುವ್ವಿ ||

ಒಂಟೇ ಸಾಲೆಗೆ ಹೋದಳುತ್ತರದೇವಿ
ಒಂಟೇ ನೂರೊಂಟೆ ಮರಿನೂರು
ಮರಿಗಳಿರಾ ನಾ ಹೋತೀನಿ ನನ್ನ ತವರೀಗೆ || ಸುವ್ವಿ ||

ನೀ ಹೋದ್ಯಾರೆ ನೀರು ಹೊಯ್ಯುವರ‍್ಯಾರೆ
ಹುಲ್ಲು ಹಾಕುವರ‍್ಯಾರೆ ನಾವು ಬರ‍್ತೀವಿ ನಿನಹಿಂದೆ
ನೀರು ಹೊಯ್ಯೋರು ಮಾವ ಹುಲ್ಲು ಹಾಕೋರತ್ತ್ಯಮ್ಮ
ನಾ ಹೋಗುವೆ ನನ ತವರೀಗೆ || ಸುವ್ವಿ ||

ಆನೆ ಸಾಲೆಗೆ ಹೋದಳುತ್ತರದೇವಿ
ಆನೆ ನೂರಾನೆ ಮರಿನೂರು
ಮರಿಗಳಿರಾ ನಾ ಹೋತೀನಿ ನನ್ನ ತವರೀಗೆ || ಸುವ್ವಿ ||

ನೀ ಹೋದಾರೆ ನೀರು ಹೊಯ್ಯುವರ‍್ಯಾರೆ
ಹುಲ್ಲು ಹಾಕುವರ‍್ಯಾರೆ ನಾವು ಬರ‍್ತೀವಿ ನಿನಹಿಂದೆ
ನೀರು ಹೊಯ್ಯೋರು ಮಾವ ಹುಲ್ಲು ಹಾಕೋರತ್ತಮ್ಮ
ನಾ ಹೋಗುವೆ ನನ ತವರೀಗೆ || ಸುವ್ವಿ ||

ಕುದುರೆ ಸಾಲೆಗೆ ಹೋದಳುತ್ತರದೇವಿ
ಕುದುರೆ ನೂರು ಕುದುರೆ ಮರಿನೂರು
ಮರಿಗಳಿರಾ ನಾ ಹೋತೀನಿ ನನ್ನ ತವರೀಗೆ || ಸುವ್ವಿ ||

ನೀ ಹೋದಾರೆ ನೀರು ಹೊಯ್ಯುವರ‍್ಯಾರೆ
ಹುಲ್ಲು ಹಾಕುವರ‍್ಯಾರೆ ನಾವು ಬರ‍್ತೀವಿ ನಿನಹಿಂದೆ
ನೀರು ಹೊಯ್ಯೋರು ಮಾವ ಹುಲ್ಲುಹಾಕೋರತ್ತ್ಯಮ್ಮ
ನಾ ಹೋಗುವೆ ನನ ತವರೀಗೆ || ಸುವ್ವಿ ||

ಕವುಲಿ ಕೊಟ್ಟಗೆಗೆ ಹೋದಳುತ್ತರದೇವಿ
ಕವುಲಿ ನೂರು ಕವುಲಿ ಕರುನೂರು
ಕರುಗಳಿರಾ ನಾ ಹೋತೀನಿ ನನ್ನ ತವರೀಗೆ || ಸುವ್ವಿ ||
ನೀ ಹೋದಾರೆ ಮುರುವಾ ಹಾಕುವರ‍್ಯಾರು

ಕರುವ ಬಿಡುವರ‍್ಯಾರು ನಾವು ಬರ‍್ತೀವಿ ನಿನಹಿಂದೆ
ಮುರುವಾ ಹಾಕೋರು ಮಾವ ಕರುವ ಬಿಡೋರತ್ತ್ಯಮ್ಮ
ನಾ ಹೋಗುವೆ ನನ ತವರೀಗೆ || ಸುವ್ವಿ ||

ಹೂವಿನ ವನಕೆ ಹೋದಳುತ್ತರದೇವಿ
ಹೂವು ನೂರೂವು ಮೊಗ್ನೂರು
ಗಿಡಗಳಿರಾ ನಾ ಹೋಗುವೆ ನನ ತವರೀಗೆ || ಸುವ್ವಿ ||

ನೀ ಹೋದಾರೆ ನೀರು ಹಾಕುವರ‍್ಯಾರೆ
ಹೂ ಕೊಯ್ಯುವರ‍್ಯಾರೆ ಹೂ ಮುಡಿಯುವವರು ಇನ್ಯಾರೆ
ಹೂ ಕೂಯ್ಯೋರು ಮಾವ ಮುಡಿಯೋಳತ್ತ್ಯಮ್ಮ
ನಾ ಹೋಗುವೆ ನನ ತವರೀಗೆ || ಸುವ್ವಿ ||

ಕಂಚೀಯ ವನಕೆ ಹೋದಳುತ್ತರದೇವಿ
ಕಂಚಿ ನೂರ‍್ಕಂಚಿ ಗಿಡನೂರು
ಗಿಡಗಳಿರಾ ನಾ ಹೋತೀನಿ ನನ ತವರೀಗೆ || ಸುವ್ವಿ ||

ನೀ ಹೋದಾರೆ ಕಾಯು ಕೊಯ್ಯುವರಾರು
ನೀರು ಹೊಯ್ಯುವರಾರು ನಾವು ಬರುತೀವಿ ನಿನಹಿಂದೆ
ಕಾಯು ಕೊಯ್ಯೋರು ಮಾವಯ್ಯ ನೀರು ಹೊಯ್ಯೊರತ್ನಮ್ಮ
ನಾ ಹೋತೀನಿ ನನ ತವರೀಗೆ || ಸುವ್ವಿ ||

ನಿಂಬೀಯ ವನಕೆ ಹೋದಳುತ್ತರದೇವಿ
ನಿಂಬೆ ನೂರ‍್ನಿಂಬೆ ಗಿಡನೂರು
ಗಿಡಗಳಿರಾ ನಾ ಹೋತೀನಿ ನನ ತವರೀಗ || ಸುವ್ವಿ ||

ನೀ ಹೋದಾರೆ ಕಾಯು ಕುಯ್ಯುವರಾರು
ನೀರು ಹೊಯ್ಯುವರಾರು ನಾವು ಬರುತೀವಿ ನಿನಹಿಂದೆ
ಕಾಯು ಕೊಯ್ಯೋರು ಮಾವಯ್ಯ ನೀರು ಹೊಯ್ಯೊರತ್ನಮ್ಮ
ನಾ ಹೋತೀನಿ ನನ ತವರೀಗೆ || ಸುವ್ವಿ ||

ದೊಡಲೀಯ ವನಕೆ ಹೋದಳುತ್ತರದೇವಿ
ದೊಡಲಿನೂರು ಗಿಡನೂರು
ಗಿಡಗಳಿರಾ ನಾ ಹೋತೀನಿ ನನ ತವರೀಗೆ || ಸುವ್ವಿ ||

ನೀ ಹೋದಾರೆ ಕಾಯು ಕೊಯ್ಯುವರಾರು
ನೀರು ಹೊಯ್ಯವರಾರು ನಾವು ಬರುತೀವಿ ನಿನಹಿಂದೆ
ಕಾಯು ಕೊಯ್ಯೋರು ಮಾವಯ್ಯ ನೀರು ಹೊಯ್ಯೋರತ್ಯಮ್ಮ
ನಾ ಹೋತೀನಿ ನನ ತವರೀಗೆ || ಸುವ್ವಿ ||

ಉಪ್ಪರಿಯೊಳಗೆ ಹೋದಳುತ್ತರದೇವಿ
ಮಾವಯ್ನ ಸಿರಿಪಾದಕೆ ಶರಣೆಂದಾಳು
ಮಾವಯ್ನ ಸಿರಿಪಾದಕೆ ಶರಣೆಂದೇನು ಹೇಳ್ಯಾಳು
ನಾ ಹೋತೀನಿ ನನ ತವರೀಗೆ || ಸುವ್ವಿ ||

ನಾನೇನು ಹೊಡಿದೆನೆ ನಾನೇನು ಬಡಿದೇನೆ
ನೀವು ಹೊಡೆಯಲಿಲ್ಲ ನೀವೇನು ಬಡಿಯಲಿಲ್ಲ
ನಿಮ ಮಡದಿ ಕೂಡಿ ಇರಲಾರೆ
ನಾ ಹೋಗುವೆ ನನ್ನ ತವರೀಗೆ || ಸುವ್ವಿ ||

ಅಡಗಿ ಮಾಡರ‍್ಯಾರೆ ನನಗಿಕ್ಕಾರ‍್ಯಾರೆ
ನಾನು ಬರ್ತೀನಿ ನಿನಹಿಂದೆ
ಅಡಗಿ ಮಾಡೋರತ್ಯಮ್ಮ ನಿನಗಿಕ್ಕೋರತ್ತ್ಯಮ್ಮ
ನಾ ಹೋತೀನಿ ನನ ತವರೀಗೆ || ಸುವ್ವಿ ||

ಉಪ್ಪರಿಯೊಳಗೆ ಹೋದುಳುತ್ತರದೇವಿ
ಬಾವಯ್ನ ಸಿರಪಾದಾಕೆ ಸರಣೆಂದಾಳು
ಸರಣೆಂದೇನು ಹೇಳ್ಯಾಳು
ನಾ ಹೋತೀನಿ ನನ ತವರೀಗೆ || ಸುವ್ವಿ ||

ಅಡಗೀ ಮಾಡರ‍್ಯಾರೆ ನನಗಿಕ್ಕಾರ‍್ಯಾರೆ
ನಾನು ಬಿರ್ತೀನಿ ನಿನ ಹಿಂದೆ
ಅಡಗಿ ಮಾಡೋರತ್ತ್ಯಮ್ಮ ನಿಮಗಿಕ್ಕೋರತ್ಯಮ್ಮ
ನಾ ಹೋತೀನಿ ನನ ತವರೀಗೆ || ಸುವ್ವಿ ||

ಉತ್ತರದೇವಿ ದಂಡು ಕಿತ್ತೆದ್ದು ಹೋಗಾಗ
ಮುತ್ತೂರು ದೊರೆ ಕಂಡು ತಡುದಾನೆ
ತಡದೂ ಏನೆಂದು ಹೇಳ್ಯಾನೆ ಬಾ ತಂಗಿ ನಮ್ಮರಮನೆಗೆ
ಅಂದೇಳಿ ಮುತ್ತೂರ ಏರೀಲಿ ಕೊಟ್ಟಾರೆ ಉಡುಗೋರೆ
ಎಂತಾವ ಉಡುಗೋರೆ ಕಂಠೀಯ ಸರವೇ ಉಡುಗೊರೆ || ಸುವ್ವಿ ||

ಉತ್ತರದೇವಿನಾ ಮಾಳೂರ ದೊರೆ ಕಂಡ ತಡುದಾನೆ
ತಡೆದೂ ಏನೆಂದು ಹೇಳ್ಯಾನೆ ಬಾ ತಂಗಿ ನಮ್ಮರಮನೆಗೆ
ಉತ್ತರದೇವಿ ಅದಕೇನೆಂದು ಹೇಳ್ಯಾಳೆ
ನಿಮ್ಮರಮನೆಗೆ ಬರೋಕೆ ಅಣ್ಣಲ್ಲ ತಮ್ಮಲ್ಲ
ನಾ ಹೋಗುವೆ ನನ್ನ ತವರೀಗೆ || ಸುವ್ವಿ ||

ಇರುಳು ಚಂದ್ರನ ಬೆಳಕಲ್ಲಿ-ಉತ್ತರದೇವಿ
ಗೋಳೆಂದು ಹೊರಟಾಳು ಅಪ್ಪಯ್ಯನರಮನಿಗೆ || ಸುವ್ವಿ ||

ಅಪ್ಪಯ್ಯ ಕದ ತೆರಿಯೊ ಅಪ್ಪಾಜಿ ಕದ ತೆರಿಯೊ
ನನ್ನಪ್ಪ ನನಗೆ ಕದ ತೆರಿಯೊ-ಹೊಸಲಲ್ಲಿ
ನಾನು ನಿಲಲಾರೆ ಸೋತು ಬಂದೇನು || ಸುವ್ವಿ ||

ಚಾಪೆ ಚೆನ್ನಾಗಿ ದೀಪ ದಿವ್ನಾಗಿ
ನಿಮ್ಮಮ್ಮ ಹೊರಗ್ಯವಳೆ-ಉತ್ತರದೇವಿ
ನೀ ಹೊಗವ್ವ ನಿಮ್ಮಮ್ಮನರಮನಿಗೆ || ಸುವ್ವಿ ||

ಹೊತ್ತಾಳು ಪುತ್ರಯ್ನ ಎತ್ಯಾಳು ಪಿಟಾರಿಯ
ಇರುಳು ಚಂದ್ರನ ಬೆಳಕಲ್ಲಿ-ಉತ್ತರದೇವಿ
ದಂಡು ಕಿತ್ತೆದ್ದು ಹೊರಟಾವೆ ಅಮ್ಮನರಮನಿಗೆ || ಸುವ್ವಿ ||

ಅಮ್ಮ ಕದ ತೆರಿಯೆ ಅವ್ವ ಕದ ತೆರಿಯೆ
ನನ್ನವ್ವ ನನಗೆ ಕದ ತೆರಿಯೇ-ಹೊಸಲಲ್ಲಿ
ನಾನು ನಿಲಲಾರೆ ಸೋತು ಬಂದೇನು || ಸುವ್ವಿ ||

ಒಂದಿರಿವೆ ತುಂಡು ಹಾಸಿದೆ ಒಂದಿರಿವೆ ತುಂಡು ಹೊಚ್ಚೀದೆ
ಒಂದೊರುಷ ನಿನ್ನ ಸಲುಹೀದೆ-ಉತ್ತರದೇವಿ
ನನ್ಪಾಡು ನಿನಗೆ ಬಂದೀತೆ || ಸುವ್ವಿ ||

ಮಿಳ್ಳೇಯ ಹಾಲಿಗೆ ಬೆಳ್ಳಷ್ಟು ತುಪ್ಪಹಾಕಿ
ಹತ್ವರ್ಷ ಸಲುಹೀದೆ-ಉತ್ತರದೇವಿ
ನನ್ಪಾಡು ನಿನಗೆ ಬಂದೀತೆ || ಸುವ್ವಿ ||

ಮಿಳ್ಳೇಯ ಹಾಲಿಗೆ ಬೆಳ್ಳಷ್ಟು ತುಪ್ಪಹಾಕಿ
ಹತ್ವರ್ಷ ಸಲುಹೀದೆ-ಉತ್ತರದೇವಿ
ನನ್ಪಾಡು ನಿನಗೆ ಬಂದೀತೆ || ಸುವ್ವಿ ||

ಇಷ್ಟೆಂಬ ಸುದ್ದಿ ಕೇಂಡಾಳು ತಾಯವ್ವ
ಗೋಳೆಂದು ಅತ್ತಾಳು-ಉತ್ತರದೇವಿ
ಇದು ಏನೆಂದು ಕೇಳ್ಯಾಳು || ಸುವ್ವಿ ||

ನನ್ಗಂಡ ನನಗೆ ಈ ಗೋಳಿಟ್ಟಾನು
ನನ್ನತ್ತೆ ನನ್ನ ಒಡಲು ಉರಿಸ್ಯಾಳು-ನಮ್ಮವ್ವ
ಹೊಸಿಲ ಹೊರಗೆ ದೂಡ್ಯಾರು || ಸುವ್ವಿ ||

ಅವರೊಟ್ಟಿ ಉರಿಯಾಲಿ ಕಣ್ಣೆರಡು ಸೀಯಾಲಿ
ಸುಣ್ಣ ಸುರಿದಂಗೆ ಬೇಯಾಲಿ-ಉತ್ತರದೇವಿ
ದೀಪದೆಣ್ಣೆಯಾಗಿ ಉರಿಯಾಲಿ

ಅಮ್ಮನ ಕೂಡಿಕೊಂಡುತ್ತರದೇವಿ
ಗಂಗೇಯ ಬದಿಗೆ ನಡೆದಾಳು-ಏನೆಂದುಕೊಂಡಾಳು
ಗಂಗಮ್ಮ ತಾಯಿ ಸೆಳೆಕೊಳ್ಳೆ

ತಾವರೇಯ ಹೂವಿನ ಮೇಲೆ ಕೂತುಕೊಂಡು
ಬೋ ತಪಸ್ಸು ಮಾಡ್ಯಾಳು ಶಿವನಿಗೆ-ಉತ್ತರದೇವಿ
ನಾಡ ಮೇಲುತ್ತರೆ ಮಳೆಯಾಗಿ ಹರಿದಾಳು

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು :

೧) ಉತ್ತರದೇವಿ; ರಂಗಸ್ವಾಮಿ ಬಿ.ಎನ್. ಹಳ್ಳಿಯ ಪದಗಳು, ಸರಸ್ವತೀ ಪುಸ್ತಕ ಭಂಡಾರ, ಮಂಡ್ಯ ೧೯೪೦ ಪು.ಸಂ. ೮೪-೮೬.

೨) ಉತ್ತರದೇವಿ; ಗಂಡಪ್ಪ ಎಲ್. ನಾಡಪದಗಳು, ಬೆಂಗಳೂರು, ೧೯೪೭ ಪು.ಸಂ. ೯೧-೯೬.

೩) ಉತ್ತರದೇವಿ; ಕ.ರಾ.ಕೃ. ಜಾನಪದ ಗೀತೆಗಳು, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು ೧೯೫೮, ಪು.ಸಂ. ೪೨-೫೦.

೪) ಉತ್ತರದೇವಿ ಹಾಡು; ಮಹದೇವ ನಾಯಕ ಸ.ಚ., ಸಂಪೀಗೆ ಅರಳೀವೆ, ಕಾವ್ಯಾಲಯ ಪ್ರಕಾಶನ ಮೈಸೂರು ೧೯೬೧, ಪು.ಸಂ. ೭೫-೭೭.

೫) ಉತ್ತರದೇವಿ; ಪರಮಶಿವಯ್ಯ, ಜೀ.ಶಂ. ಜಾನಪದ ಖಂಡಕಾವ್ಯಗಳು, ಶಾರದಾಮಂದಿರ ಮೈಸೂರು ೧೯೬೮, ಪು.ಸಂ. ೩-೧೦.

೬) ಉತ್ತರದೇವಿ; ಹೆಗಡೆ ಎಲ್.ಆರ್. ತಿಮ್ಮಕ್ಕನ ಪದಗಳು ಮೈಸೂರು ವಿಶ್ವವಿದ್ಯಾಲಯ ಮೈಸೂರು ೧೯೬೯ ಪು.ಸಂ. ೮೭-೯೯.

೭) ಉತ್ತರಾದೇವಿಯ ಕತೆ; ಐತಾಳ ಚಂದ್ರಶೇಖರ ಗುಂಡ್ಮಿ, ಕೈಲಿಯ ಕರೆದ ನೊರೆಹಾಲು ಮೈಸೂರು ವಿಶ್ವವಿದ್ಯಾಲಯ ಮೈಸೂರು, ೧೯೭೦ ಪು.ಸಂ. ೬೯-೭೧.

೮) ಉತ್ತರದೇವಿ; ಹೆಗಡೆ ಎಲ್.ಆರ್. ಕೆಲವು ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೩ ಪು.ಸಂ. ೧೫೪-೧೫೭.

೯) ಉತ್ತರದೇವಿ; ರಾಜಪ್ಪ ಟಿ.ಎಸ್. ಕೆರೆಹೊನ್ನಮ್ಮ ಮತ್ತು ಇತರ ಲಾವಣಿಗಳು, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೪, ಪು.ಸಂ. ೨೨೫-೨೩೪.

೧೦) ಉತ್ತರಾದೇವಿ; ಮತಿಘಟ್ಟ ಕೃಷ್ಣಮೂರ್ತಿ, ಕನ್ನಡ ಜನಪದ ಸಾಹಿತ್ಯ ಭಂಡಾರ. ಗುರುಮೂರ್ತಿ ಪ್ರಕಾಶನ ಬೆಂಗಳೂರು ೧೯೭೫, ಪು.ಸಂ. ೭೮೫-೭೮೯.

೧೧) ಉತ್ತರದೇವಿ; ಲಿಂಗಯ್ಯ ಡಿ. ಕರ್ನಾಟಕ ಜನಪದ ಕಾವ್ಯಗಳು, ದಿನಕರ ಪ್ರಕಾಶನ ಬೆಂಗಳೂರು, ೧೯೭೬ ಪು.ಸಂ. ೧೧೫-೧೨೦.

೧೨) ಉತ್ತರಾದೇವಿ; ಹಿರಿಯಣ್ಣ ಅಂಬಳಿಕೆ, ಕಾಡುಗೊಲ್ಲರ ಜನಪದ ಗೀತೆಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೭೮, ಪು.ಸಂ. ೩೭೪-೩೭೮.

೧೩) ಉತ್ತರದೇವಿ; ನೆಲ್ಲಿಸರ ಬಸವರಾಜ, ಜನಪದ ಕಾವ್ಯ ಸಂಚಯ, ಕನ್ನಡ ಅಧಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೮೪, ಪು.ಸಂ. ೯೫-೧೦೧.

೧೪) ಅತ್ತೆ ಸೊಸೆ ಜಗಳ; ಪಾಂಡುರಂಗ ಡಿ.ಆರ್. ದಕ್ಷಿಣ ಕನ್ನಡ ಜಿಲ್ಲೆಯ ಭೈರರು ಮೈಸೂರು ವಿಶ್ವವಿದ್ಯಾಲಯ, ಮೈಸೂರು ೧೯೮೪ ಪು.ಸಂ. ೧೯೫-೧೯೬.

೧೫) ಉತ್ತುರದೇವಿ; ನಾಯಕ ಎನ್.ಆರ್. ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ೧೯೯೭ ಪು.ಸಂ. ೮೧-೧೦೭.*      ಉತ್ತರದೇವಿ ಹಾಡು; ಕೂಡಿಗೆ ಶ್ರೀಕಂಠ, ಅಂಟಿಗೆ ಪಂಟಿಗೆ ಪದಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೩, ಪು.ಸಂ. ೫೬-೬೬