ಹಿಂದುಸ್ತಾನಿ ಲಘು ಶಾಸ್ತ್ರೀಯ ಹಾಡುಗಾರಿಕೆಯ ಒಂದು ಶೈಲಿಯಾಗಿರುವ ‘ಕಜರಿ’ ವರ್ಷಾ ಋತುವಿನಲ್ಲಿ ಹಾಡುವ ಒಂದು ಗೀತ ಪ್ರಕಾರವಾಗಿದೆ. ಗ್ರೀಷ್ಮ ಋತು ಕಳೆದು ವರ್ಷಾಋತು ಕಾಲಿಟ್ಟು ಪ್ರಕೃತಿಯಲ್ಲಿ ಮಳೆಗಾಲದ ಮುನ್ಸೂಚನೆಯನ್ನು ತರುವ ಸಂದರ್ಭದಲ್ಲಿ ಕಜರಿ ಗೀತೆಗಳನ್ನು ಹಾಡಲಾಗುತ್ತದೆ.  ಜುಲೈ ತಿಂಗಳ ಆಷಾಢ ಮಾಸದ ನಂತರ ಬರುವ ಆಗಸ್ಟ್ ತಿಂಗಳ ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರಕೃತಿ ದೇವಿ ಹಚ್ಚ ಹಸಿರು ಸೀರೆ ಉಟ್ಟಂತೆ – ಕಂಗೊಳಿಸುವ ಸಮಯದಲ್ಲಿ ಈ ಗೀತ ಪ್ರಕಾರಗಳನ್ನು ಪ್ರಸ್ತುತಪಡಿಸುತ್ತಾರೆ.

ಪೃಥ್ವಿಯ ಮೇಲೆ ವರ್ಷಾಋತು ಹಚ್ಚಹಸುರಿನ ಹೊದಿಕೆ ಹಾಕಿದಂತೆ ಭಾಸವಾಗುವ ಹಸುರಿನ ರಾಶಿ-ರಾಶಿ ಕಣ್ಣಿಗೆ ಆನಂದ, ಮನಕ್ಕೆ ಶಾಂತಿ ನೀಡುವ ಆ ಸಂದರ್ಭ ನೋಡಿಯೇ ಆನಂದಿಸಬೇಕು. ಆಕಾಶದಲ್ಲಿ ಕಂದುಬಣ್ಣದ ಮೋಡಗಳ ಹೊಯ್‌ದಾಟ, ಗುಡುಗು, ಸಿಡಿಲಿನ ಆರ್ಭಟ, ತುಂತುರು ಹನಿಗೆ ಮೈಯೊಡ್ಡಿ ನಿಂತ ಗೋವುಗಳು, ಪ್ರಕೃತಿಯ ಈ ಸೊಬಗಿಗೆ ಸೌಂದರ್ಯದ ಸರಮಾಲೆಯನ್ನು ಹೊತ್ತು ತಂದಂತೆ ಚಿಗುರೊಡೆದ ಮಾಂದಳಿರು, ಸೃಷ್ಟಿಯ ಈ ಸೊಬಗನ್ನು ಸವಿಯಲೋ ಅಥವಾ ಆ ಸೌಂದರ್ಯವನ್ನು ಇಮ್ಮಡಿಗೊಳಿಸಲೋ ಎಂಬಂತೆ ಕಾಡಿನ ಮಧ್ಯೆ ಗರಿಬಿಚ್ಚಿ ಕುಣಿದಾಡುವ ನವಿಲು ಹಿಂಡು – ಇವೆಲ್ಲ ವಷಾ ಋತುವಿನ ವೈಭವ. ಇಂಥ ಸಂದರ್ಭವನ್ನು ಕುರಿತು ರಚನೆಗೊಂಡ ಶೃಂಗಾರ, ವಿರಹ, ಸಂಯೋಗ, ವಿಯೋಗ ಪರ ಗೀತೆಗಳು ಕಜರಿ ಗಾನಶೈಲಿಯ ಭಂಡಾರದಲ್ಲಿ ಸಮೃದ್ಧವಾಗಿವೆ.

ಒಂದೆಡೆ ಮೋಡಗಳ ಆರ್ಭಟ, ಆ ಮಧ್ಯೆ ಧೋ ಧೋ ಎಂದು ಸುರಿವ ಮಳೆಯ ಗಾಂಭೀರ್ಯ. ಇವುಗಳನ್ನೆಲ್ಲ ನೋಡುತ್ತ ಮಳೆಯಲ್ಲಿ ಮಿಂದು ಆನಂದವನ್ನು  ತಮ್ಮ ಕಜರಿ ಹಾಡುಗಳ ಮೂಲಕ ಸಾಮೂಹಿಕವಾಗಿ ಸ್ತ್ರೀ – ಪುರುಷರು ಹಾಡುವ ವೃಂದ ಗಾನ ಪ್ರಸ್ತುತ ಸನ್ನಿವೇಶಕ್ಕೆ ಮೆರಗು ತಂದುಕೊಡುತ್ತದೆ. ವರ್ಷಕಾಲದ ವಿರಹದುರಿಯ ಮತ್ತು ರಾಧಾಕೃಷ್ಣರ ಲೀಲಾ ವಿನೋದ ಪ್ರಸಂಗಗಳ ವಿಶೇಷ ವರ್ಣನೆ ಈ ಕಜರಿ ಗೀತೆಗಳಲ್ಲಿ ವ್ಯಕ್ತವಾಗುತ್ತದೆ.

‘ಕಜರಿ’ ಗಾಯನ ಶೈಲಿಯಲ್ಲಿ ‘ಮಿರ್ಜಾಪುರ ಕಜರಿ’ ಮತ್ತು ‘ಬನಾರಸ ಕಜರಿ’ ಎಂಬ ಎರಡು ಪ್ರಕಾರಗಳಿವೆ. ಈ ಗೀತಗಳನ್ನು ಸಾಮೂಹಿಕವಾಗಿ ಹಾಡುತ್ತಾ, ಕುಣಿಯುತ್ತಾ ಆನಂದಪಡಲಾಗುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ ‘ಮಿರ್ಜಾಪುರ ಉತ್ಸವ’ದಲ್ಲಿ ಭಾಗವಹಿಸಿ ರಾತ್ರಿಯಿಡೀ ಕಜರಿ ಗೀತೆಗಳನ್ನು ಹಾಡುತ್ತಾರೆ. ‘ಮಲ್ಹಾರ ಉತ್ಸವ’ ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ಶ್ರಾವಣ ಮಾಸದ ವರ್ಷಾಋತು ಸಂದರ್ಭದಲ್ಲಿ ಕಜರಿ ಗೀತೆಗಳ ಗಾಯನ ನಡೆಸಲಾಗುತ್ತದೆ. ಬೃಜ ಭೂಮಿಯ ‘ಮಲ್ಹಾರ ಉತ್ಸವ’ ಬುಂದೇಲ ಖಂಡದ ‘ದಾದರಾ ಉತ್ಸವ’ ಮತ್ತು ಮಿರ್ಜಾಪೂರ ಮತ್ತು ಬನಾರಸದ ಕಜರಿ ಉತ್ಸವ ಇಂದಿಗೂ ಸಹ ತನ್ನ ಗತವೈಭವದ ಪರಂಪರೆಯನ್ನು ಎತ್ತಿ ಹಿಡಿದಿವೆ.

ವೇದಕಾಲದಲ್ಲಿಯೂ ಸಹ ಕಜರಿ ಗೀತೆಗಳನ್ನು ಹಾಡುತ್ತಿದ್ದರೆಂಬ ಉಲ್ಲೇಖ ವೈದಿಕ ವಾಙ್ಮಯದಲ್ಲಿ ದೊರೆಯುತ್ತದೆ. ವೈದಿಕ ಛಂದದ ‘ವಾರ್ಷಿ’ ಅದಕ್ಕೆ ‘ಜಗತಿ’ ಎಂದು ಕರೆದಿದ್ದಾರೆ. ಶತಪಥ, ಏಕರೇಯ, ಭವಿಷ್ಯೋತ್ತರ, ಸ್ಕಂದ, ಮಾರ್ಕಂಡೇಯ ಪುರಾಣ ಗ್ರಂಥಗಳಲ್ಲಿ ; ದೇವಿದಾಸ, ಆರ್ಷ, ನಿರ್ಣಯ ಸಿಂಧು ಬೃಹದ್ಗ್ರಂಥಗಳಲ್ಲಿ ಕಜರಿ ಗೀತೆಗಳ ವರ್ಣನೆ ದೊರೆಯುತ್ತದೆ. ವಾಲ್ಮೀಕಿ ರಾಮಾಯಣದ ಅಯೋಧ್ಯಾಕಾಂಡದಲ್ಲಿ ‘ನಗಾಡಾ’(ನಗಾರಿ) ವಾದ್ಯ ನುಡಿಸುತ್ತ ಸಾಮೂಹಿಕವಾಗಿ ಕಜರಿ ಗೀತೆಗಳನ್ನು ಹಾಡುವ ಉಲ್ಲೇಖ ದೊರೆಯುತ್ತದೆ.

ಹಿಂದಿ ಸಾಹಿತ್ಯ ಲೋಕದಲ್ಲಿ ‘ಕಜರಿ’ ಗೀತ ಸಾಹಿತ್ಯ ತುಂಬ ಸಮೃದ್ಧವಾಗಿದೆ. ಅನೇಕ ಜನ ಹಿಂದಿ, ಬ್ರಿಜ್ ಭಾಷೆಯ ವಿದ್ವಾಂಸರು ಕಜರಿ ಕುರಿತು ಗ್ರಂಥಗಳನ್ನು ರಚಿಸಿ ಕಜರಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.  ಲಾಲ ಖಡಗ ಬಹಾದ್ದೂರ ರವರ ‘ವರ್ಷಾಬಿಂದು’ ಕಿಶೋರಿ ಲಾಲ ಗೋಸ್ವಾಮಿ ಅವರ ‘ರಸೀಲಿ ಕಜರಿ’, ಅಂಬಿಕಾ ದತ್ತ ವ್ಯಾಸ ಅವರ ‘ರಸಮಾತಿ ಕಜರಿ’ ಶ್ರೀಧರ ಪಾಠಕ ಅವರ ಕಜಲಿ, ಕತೂಹಲ, ಮನೋಹರ ದಾಸ ರಸ್ತೋಗಿ ಅವರ ‘ಮಿರ್ಜಾಪುರಿ ಛವಿ’ ವಾಮನಾಚಾರ್ಯ ಗಿರಿ ಅವರ ’ವರ್ಷಾವಿನೋದ’ ಮುಂತಾದ ಕಜರಿ ಗೀತ ಸಾಹಿತ್ಯ ಕುರಿತ ಗ್ರಂಥಗಳು ಪ್ರಕಾಶಗೊಂಡಿವೆ. ‘ಭರತೆಂದು’ ಕಾಲಾವಧಿಯನ್ನು ಕಜಲಿ ಸಾಹಿತ್ಯ – ಸಂಗೀತದ ಸುವರ್ಣ ಉಗವೆಂದು ಕರೆಯಲಾಗುತ್ತದೆ. ಪರೇಮಧನ ಅವರು ತಮ್ಮ ಗ್ರಂಥ ‘ಕಜಲಿ-ಕಾದಂಬಿನಿ’ಯಲ್ಲಿ ಅನೇಕ ಸ್ವರಚಿತ ಕಜಲಿ ಗೀತ ಸಾಹಿತ್ಯ ರಚಿಸಿ ಕಜರಿ ಗೀತ ಪ್ರಕಾರದ ಪರಿಭಾಷೆ, ನಾಮಕರಣ, ಉತ್ಪತ್ತಿ, ವರ್ಗೀಕರಣ, ಭೇದೋಪಭೇದ ಮುಂತಾದ ವಿಷಯ ವಿಸ್ತೃತವಾಗಿ ಚರ್ಚಿಸಿದ್ದಾರೆ.

ಕಜರಿ ಅಥವಾ ಕಜಲಿಯನ್ನು ಸಾವನ, ಸಾವನಿ, ಸೈರ, ಹಿಂಡೋಲಾ ಮುಂತಾದ ಹೆಸರಿನಲ್ಲಿ ಇಂದು ಕರೆಯಲ್ಪಡುತ್ತದೆ. ಭೋಜಪುರಿ, ಬ್ರಿಜ್, ಅವಧಿ, ಬುಂದೇಲ ಮತ್ತು ಬಘೇಲಿ ಭಾಷೆಯಲ್ಲಿಯೂ ಸಹ ಕಜರಿ ಗಾಐನ ಪ್ರಸ್ತುತಪಡಿಸುವ ಪರಂಪರೆ ಇದೆ. ಇತ್ತೀಚಿನ ದಿನಗಳಲ್ಲಿ ಕಜರಿ ಗೀತಗಳನ್ನು ಹಾಡುವ ಸಂಗೀತಗಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಸಂಗೀತ ಲೋಕದ ಕಳವಳಕಾರಿ ಸಂಗತಿಯಾಗಿದೆ. ಕಜರಿ ಗೀತೆಗಳನ್ನು ಮತ್ತು ಈ ಗೀತೆಗಳನ್ನು  ಹಾಡುವ ಸಂಗೀತಗಾರರಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ‘ಕಜರಿ ಗೀತ-ಸಂಗೀತದ ರಾಷ್ಟ್ರೀಯ ಟ್ರಸ್ಟ್’ ಸ್ಥಾಪಿಸಿ ಅದರ ಪುನಶ್ಚೇತನಕ್ಕೆ ಕೇಂದ್ರ ಹಾಗೂ ಪ್ರಾದೇಶಿಕ ಸರಕಾರಗಳು ಉತ್ತೇಜನ ನೀಡಬೇಕಾದುದು ಅತ್ಯಗತ್ಯ.