ಅಪ್ಪ ಈರೈಜುಂಜ ದಿಟ್ಟವರಣಕಾಣೆ
ಕಟ್ಯಾಗನಿಂದು ಮಕತೊಳೆದು ಮಜ್ಜಣಮಾಡಿ
ಮುಕ್ಕಣ್ಣಗ್ವಾಲೆ ಬರೆದಾರೆ

ಮುಕ್ಕಣ್ಣಗ್ವಾಲೆ ಏನಂದು ಬರೆದಾರೆ
ಅಕ್ಕವ್ವನ ಕೆರೆಗೆ ಅದವಿಲ್ಲ ಮುಕ್ಕಣ್ಣ
ವಾಲೆ ಬರೆದಾರೆ ………..

ಸ್ವಾಮಿ ಈರೈಜುಂಜ ನೀಲವರಣಕಾಣೆ
ನೀರಾಗ ನಿಂದು ಮಕ ತೊಳೆದು ಮಜ್ಜಣ್ಣಮಾಡಿ
ರೇವಣ್ಣಗ್ವಾಲೆ ಬರೆದಾರೆ

ರೇವಣ್ಣಗ್ವಾಲೆ ಏನಂದು ಬರೆದಾರೆ
ತಾಯವ್ನ ಕೆರೆಗೆ ಅದವಿಲ್ಲ
ತಾಯವ್ನ ಕೆರೆಗೆ ಅದವಿಲ್ಲ ಅದವಿಲ್ಲವಂದು
ತಾಯವ್ನ ಕೆರೆಗೆ ನಡೆದಾರೆ

ಅಪ್ಪ ಈರೈಜುಂಜ ತುಪ್ಪದೊರ‍್ಣ ಕಾಣೆ
ತುಪ್ಪದಲಿ ಮೈಯ್ಯ ತೊಳುದಾನೆ ಮಜ್ಜಣಮಾಡಿ

ಮುಕ್ಕಣಗ್ವಾಲೆ ಬರದಾನೆ
ಮುಕ್ಕಣಗ್ವಾಲೆ ಏನಂದು ಬರೆದಾನೆ
ಉತ್ತರೆ ಮಳೆಗಳ ಕಳುವಯ್ಯ

ಸ್ವಾಮಿ ಜುಂಜಯ್ಯ ಆಲಿನೊರುಣ ಕಾಣೆ
ಆಲೀಲಿ ಮೈಯ್ಯ ತೊಳುದಾನೆ ಮಜ್ಜಣಮಾಡಿ

ರೇವಣಗ್ವಾಲೆ ಬರೆದಾನೆ
ರೇವಣ್ಣಗ್ವಾಲೆ ಏನಂದು ಬರೆದಾನೆ
ಆದ್ರಿ ಮಳೆಗಾಳ ಕಳುವಯ್ಯ

ಮಟ್ಟಮದ್ಯನದಾಗ ಬೆಟ್ಟಿನೋಟು ಮ್ವಾಡ ಆಗಿ
ಅಪ್ಪ ಈರ‍್ಕೆ ಜುಂಜ ಮಳೆಗಾಳು ತರಿಸಿಕಂಡು
ಅಕ್ಕವ್ನ ಕೆರೆಗೆ ನಡೆದಾನೆ

ಮಾರ ಮದ್ಯನದಾಗ ವೊವಿನೋಟು ಮ್ವಾಡ ಆಗಿ
ಮಾರಗಾನಿ ಈರ ಮಳೆಗಾಳು ತರಸಿಕಂಡು
ತಾಯವ್ನ ಕೆರೆಗೆ ನಡೆದಾರೆ

ಗುಡ್ಡಾವು ಗುಡಿಗಟ್ಟಿ ದೊಡ್ಡಳ್ಳ ಬೋರ‍್ಯಾಡಿ
ಮದ್ದಗಿರಿ ಮ್ಯಾಲೆ ಮಳೆಮ್ವಾಡ ತರಿಸಿಕಂಡು
ತಾಯವ್ನ ಕೆರೆಗೆ ನಡೆದಾಳೆ

ದುರುಗಾವು ಗುಡಿಗಟ್ಟಿ ಹಿರಿಯಳ್ಳ ಬೋರ‍್ಯಾಡಿ
ಇರಿಯೂರ ಮ್ಯಾಲೆ ಮಳೆಮ್ವಾಡ ತರಿಸಿಕಂಡು
ತಾಯವ್ನ ಕೆರೆಗೆ ನಡೆದಾರೆ

ಅಕ್ಕವ್ನ ಕೆರೆಯಾಗೆ ಮತ್ತಿನೋಟೇರಿಮ್ಯಾಲೆ
ಅತ್ತಿಂಡಿನಾವು ಮನಿಗ್ಯಾವು ಈರಣ್ಣಾನ
ಬುತ್ತೀಗಾಲ ಕರೆದಾವು

ತಾಯವ್ನ ಕೆರೆಯಾಗ ವೂವಿನೋಟೀರಿ ಮ್ಯಾಲೆ
ಆರಿಂಡಿನಾವು ಮನಿಗ್ಯಾವು ಈರಣ್ಣಾನ
ಬಾನಕ ಆಲ ಕರೆದಾವು

ಆಕಾಸದ ಮಳೆಯ ತೋತುರಿಸಿ ಕರೆದಾರೆ
ತೋಪೆ ಅಚ್ಚಡದ ಸೆರಣಾರು ಈರೆತ್ತಾರು
ತೋತುರಿಸಿ ಮಳೆಯ ಕರೆದಾರು

ಅಂಬಾರದ ಮಳೆಯ ನೆಂಬುಸಿ ಕರೆದಾರು
ಗೊಂಬೆ ಅಚ್ಚಡದ ಸೆರಣಾರು ಈರೆತ್ತಾರು
ನೆಂಬುಸಿ ಮಳೆಯ ಕರೆದಾರು

ಎತ್ತಯ್ಯ ಬರುವಾಗ ಬತ್ತೀದ ಕೆರೆತುಂಬಿ
ಸುತ್ತು ಕೋಗುಲಿ ಸೆಲಿವೊಯ್ಯು ವೊತ್ತೀಗೆ
ಎತ್ತಯ್ಯ ಮಜ್ಜಣಕೆ ಇಳಿದಾನೆ

ಈರಣ್ಣ ಬರುವಾಗ ಜೋಡಂಬ ಕೆರೆತುಂಬಿ
ವೋದಕೋಗುಲಿ ನೆಲೆವೊಯ್ವ ವೊತ್ತೀಗೆ
ಈರಣ್ಣ ಮಜ್ಜಣಕೆ ಇಳಿದಾನೆ

ಜುಂಜಣ್ಣ ಬರುವಾಗ ಬಂಜೆಂಬ ಕೆರೆತುಂಬಿ
ಸಂಜೆ ಕೋಗುಲಿ ಸೆಲೆವೊಯ್ವ ವೊತ್ತೀಗೆ
ಜುಂಜಣ್ಣ ಮಜ್ಜಣಕೆ ಇಳಿದಾನೆ

ತೇಲಿ ತೆರೆವೊಯ್ಯೆ ತೇಲುದಲೆ ತೆರೆವೊಯ್ಯೆ
ಬಾಳೆ ಕುಂಕುಮವೆ ತೆರೆವೊಯ್ಯೆ ಗಂಗಮ್ಮ
ನಾಳೆ ಈರಣ್ಣ ಬರುತಾನೆ

ತುಂಬಿ ತೆರೆವೊಯ್ಯೆ ತುಂಬದಲೆ ತೆರೆವೊಯ್ಯೆ
ನಿಂಬೆ ಕುಕುಮದಲೆ ತೆರೆವೊಯ್ಯೆ ಗಂಗಮ್ಮ
ಇಂದೆ ಜುಂಜಣ್ಣ ಬರುತಾನೆ

ಆಸೆ ಕೋಡಿಗಂಗೆ ಈಸೆ ಕೋಡಿಗೆ ಬಾರೆ
ಬಾಸೇಯ ಕೊಡೆಬಲಗೈಯ್ಯ ಗಂಗಮ್ಮ
ಬಾಸೆಗೆ ತಪ್ಪವರ ಮಗನಲ್ಲ

ಇಂದಲದಡದ ಗಂಗೆ ಮುಂದಲದಡಕೆ ಬಾರೆ
ನೆಂಬಿಗೆ ಕೊಡೆ ಬಲಗೈಯ್ಯ ಗಂಗಮ್ಮ
ನೆಂಬಿಕೆ ತಪ್ಪೋರ ಮಗನಲ್ಲ

ತುಂಬಿ ತೆರಿವೊಯ್ಯೆ ತುಂಬದಲೆ ತೆರೆವೊಯ್ಯೆ
ತಂಬಟ ಮಾವು ಕಿರಿನೆಲ್ಲಿ ಈರೈಜುಂಜ
ತುಂಬಿದ ಪರುಷವನೆ ಕೆರಿಯಾಗೆ

ತೇಲಿ ತೆರಿವೊಯ್ಯೆ ತುಂಬದಲೆ ತೆರೆವೊಯ್ಯೆ
ಯಾಲಕ್ಕಿ ಮಾವು ಕಿರಿನೆಲ್ಲಿ ಈರೈಜುಂಜ
ತೇಲಿದ ಪುರುಸವನೆ ಕೆರಿಯಾಗೆ

ತುರುಕರು ದಂಡುಬಂದು ತುರುಮುಂದೆಯಾಗೈದಾವೆ
ಕೊಂಡೋಗನು ಬನ್ನಿ ಕೆರೆಯಾಕೆ ಅಕ್ಕನ ಕೆರೆ
ಮರಳೀಗೆ ಈರಾನ ಮಡಗಾನ

ಬ್ಯಾಡಾರ ದಂಡು ಬಂದು ಬೇಲಿ ವರಗೈದಾವೆ
ಕೊಂಡೋಗನು ಬನ್ನಿ ಕೆರೆಯಾಕೆ ಅಕ್ಕನ ಕೆರೆ
ಮರಳಾಗೆ ಈರಾನೆ ಮಡಗಾನ

ಕಾದಮಳ್ಳ ತಂದು ಕಣ್ಣಾಗ ವೊಯ್‌ಬ್ಯಾಡ
ಕಲ್ಲಿಸಿಕ್‌ದಾಗಾ ಮಡಗಪ್ಪ ಸಿತ್ತಯ್ಯ
ಅಲ್ಲಿ ಮರಿಯಾಗಿ ಬರುತೀನಿ

ಉಕ್ಕೊ ಮರಳ ತಂದು ನೆತ್ತಿಮ್ಯಾಲೊಯ್ಯೊಬ್ಯಾಡ
ಒತ್ತಿ ಅರಿವ್ಯಾಗ ಮಡಗಪ್ಪ ಸಿತ್ತಯ್ಯ
ಪಕ್ಸಿ ಮರಿಯಾಗಿ ಬರುತೀನಿ

ಮುಂದಾಲ ಅಳ್ಳಕ ಬನ್ನಿ ಮುನ್ನೂರು ಚಲಿಕೆ ತನ್ನಿ
ಮರಳಾಗೀರಾನ ಮಡಗಾನ

ಮ್ಯಾಗಳಳ್ಳಾಕ ಬನ್ನಿ ನಾನ್ನೂರು ಸೆಲಿಕೆ ತನ್ನಿ
ಮರಳಾಗೀರಾನ ಮಡಗಾನ

ಆಸೆ ಕೋಡಿಗಂಗೆ ಈಸೆ ಕೋಡಿಗೆಬಾರೆ
ಆಕಾಸಗಂಗೆ ತೆರೆವೊಯ್ಯೆ ಕಲ್ಲರಳ್ಳಿ
ಜ್ಯೋತಿ ಮಜ್ಜಣಕೆ ಇಳುದಾನೆ

ಇಂದಲಕೋಡಿಗಂಗೆ ಮುಂದಲ ಕೋಡಿಗೆ ಬಾರೆ
ಅಂಬಾರದ ಗಂಗೆ ತೆರೆವೊಯ್ಯೆ ಕಲ್ಲರಳ್ಳಿ
ಲಿಂಗ ಮಜ್ಜಣಕೆ ಇಳುದಾನೆ

ಅಕ್ಸಿಪಕ್ಸಿಗಳೆಲ್ಲ ವೊಕ್ಕಳ್ಳಿರೊನಗಾಳ
ಅಪ್ಪ ಈರಣ್ಣ ದಳಲೊಡ್ಡಿ ವೋಗಲುವಾಗ
ಮಕ್ಕಳತಾಯಿ ಮರವೇರೆ

ಕಾಗೆ ಗೂಗೆಗಳೆಲ್ಲ ಸೇರಿಕಳ್ಳಿವನಗಾಳ
ಸ್ವಾಮಿ ಈರಣ್ಣ ದಳಲೊಡ್ಡಿ ವೋಗಲುವಾಗ
ಬಾಲಾನ ತಾಯಿ ಮರವೇರೆ

ವೊಡ್ಡೀನ ನೀರು ವೊಡ್ಡೀಗೆ ಬಿದ್ದಾರೆ
ವೊಡ್ಡುಗಟ್ಟಿ ಕಾಣೆ ಅಕ್ಕನಕೆರೆ ಗಂಗಮ್ಮ
ದೊಡ್ಡೋನ ಸೆರೆಯ ಇಡಿದಾಳೆ

ಅಳ್ಳಾದ ನೀರು ಅಳ್ಳಾಕ ಬಿದ್ದಾರೆ
ಬಳ್ಳಿಗಟ್ಟಿ ಕಾಣೆ ಅಕ್ಕನ ಕೆರೆ ಗಂಗಮ್ಮ
ಬಲದೋನ ಸೆರೆಯ ಇಡಿದಾಳೆ

ಗಂಗಮ್ನ ಮಲಿಯಾಲು ತೆಂಗಿನ ತಿಳಿನೀರು
ಗಂಗಯ್ನ ನಿನ್ನ ಮಲಿಯಾಲು ತನುವೀಗೆ
ತಂದೆ ಈರಣ್ಣ ಮನಜೋತ

ಆಕೇಯ ಮಲಿಯಾಲು ಸೀತಾಳಪಾತಾಳ
ಆಕೆ ಗಂಗಮ್ಮ ಮಲಿಯಾಲು ತನವೀಗೆ
ಆತ ಈರಣ್ಣ ಮನಜೋತ

ಅಂಬಾರದ ಮಳಿಬಂದು ಮುಂಬಾರದ ಕೆರೆತುಂಬಿ
ದುಂಡರಳಿ ಮುತ್ತು ತೆರೆವೊಯ್ದು ಕಲ್ಲರಳ್ಳಿ
ಲಿಂಗ ಮಜ್ಜಣಕೆ ಇಳಿದಾನೆ

ಆಕಾಸದ ಮೆಳೆ ಬಂದು ಭೂಪಾಲದ ಕೆರೆತುಂಬಿ
ಜಾತೆರಡೆಮುತ್ತಿ ತೆರೆವೊಯ್ದು ಕಲ್ಲರಳ್ಳೀ
ಜ್ಯೋತಿ ಮಜ್ಜಣಕೆ ಇಳಿದಾನೆ

ಚಿಕ್ಕ ಮಾವುಗಳ ಸಿಟ್ಟೀಲಿ ಕೊಂಡೋನು
ಅಪ್ಪಯ್ಯ ನಮಕೆರಿಯ ವೋಗದೀರೋ ಗಂಗಮ್ನ
ಜೊತ್ತೆರಡು ಕೈಯ್ಯಾ ಮುಗುದಾಳೆ

ಸ್ವಾಮಾರ ಮಾವುಗಳ ಸಿಟ್ಟೀಲಿ ಕೊಂಡೋನು
ಈರಣ್ಣನಮ ಕೆರಿಯ ವೋಗದೀರೋ ಗಂಗಮ್ನ
ಜೋಡೆರಡು ಕೈಯ್ಯಾ ಮುಗುದಾಳೆ

ಏರಿ ಮ್ಯಾಲೋಗೋರು ರಾಯರೆಣುಮಕ್ಕಳು
ಕಾಲಿಟ್ಟೆ ನೀರ ಮೊಗದೀರಾ ಚನ್ನಮ್ಮಾನ
ಬಾಲರೈದಾರೆ ಕೆರೆಯಾಗೆ

ಅಕ್ಕವ್ವ ಕೆರೆಯಾಗ ಪಟ್ಟೆಮಂಚದ ಮ್ಯಾಲೆ
ರೆಟ್ಟೆ ಒತ್ತೆವೆಂದು ಮನಗ್ಯಾರು ಈರೈಜುಂಜ
ಅಕ್ಕ ನಾಗತಿಯ ಕೆರಿಯಾಗೆ

ತಾಯವ್ನ ಕೆರೆಯಾಗ ತೂಗುಮಂಚದ ಮ್ಯಾಲೆ
ತೋಲೊತ್ತೆವೆಂದು ಮನಗ್ಯಾರು ಈರೈಜುಂಜ
ತಾಯಿ ನಾಗತಿಯ ಕೆರಿಯಾಗೆ

ಅಕ್ಕವ್ನ ಕೆರೆಯಾಗ ಸುತ್ತ ಸಂಪಿಗೆ ಮರ
ನೆಟ್ಟಾಗ ಬೆಳೆದು ಅರಳ್ಯಾವೆ ವೂವಮುಡುದು
ಅಪ್ಪ ಐದಾರೆ ಕೆರೆಯಾಗೆ

ತಾಯವ್ನ ಕೆರೆಯಾಗ ತೇಲಂತೆ ಮುಳುಗಂತೆ
ಬಾಳೆ ಮೀನಂತೆ ಗರಿಯೆ ಈರೈಜುಂಜ
ತಾನಂತೆ ಕೆರೆಯ ಒಳಗೆಲ್ಲ

ಅಕ್ಕವ್ನ ಕೆರೆಯಾಗ ವೊಕ್ಕುಮೂರು ತಿಂಗಾಳು
ಪಟ್ಟೇಯದಟ್ಟಿ ನೆನೆಯಾವು ಬಂದಮ್ಯಾಗೆ
ಮುತ್ತಿನಾರುತಿ ಬೆಳಗೇವು

ತಾಯವ್ನ ಕೆರೆಯಾಗ ವೋಗಿಮೂರು ತಿಂಗಳು
ಸಾಲೀಯದಟ್ಟಿ ನೆನೆಯಾವು ಬಂದಯ್ಯಾಗೆ
ವೂವೀನಾರುತಿಯ ಬೆಳಗೇರಿ

ಮುಂದಲಳ್ಳಾಕಬನ್ನಿ ಮುನ್ನೂರು ಸಲಿಕೆ ತನ್ನಿ
ಮುನ್ನೂರು ಸೆಲಿಕೆ ಕಲಿಯೂರ ಕಲ್ಲಣ್ಣ
ಅಣ್ಣನಳ್ಳಾದ ನೆಲಿಯೇಳೋ

ಮುದುಕದಳ್ಳಾಕಬನ್ನಿ ಮುನ್ನೂರು ಸೆಲಿಕೆ ತನ್ನಿ
ಮುನ್ನೂರು ಸೆಲಿಕೆ ಕಲಿಯೂರ ಕಲ್ಲಣ್ಣ
ಅಪ್ಪನಳ್ಳಾದ ನೆಲಿಯೇಳೋ

ಉತ್ರೆ ಮಳೆಬಂದು ಸುತ್ತ ಕಾವುಸಿ ಬೆಳೆದು
ಎತ್ತಾಲ ವೊಲಬು ತಿಳಿಯಾವು ಕಲ್ಲಣ್ಣ
ಅಪ್ಪನಳ್ಳಾದ ನೆಲಿಯೇಳೋ

ಆದ್ರಿ ಮಳೆಬಂದು ಮ್ಯಾಲೆ ಕಾವುಲಿ ಬೆಳೆದು
ಯಾವಲ್ಲಿ ವೊಲಬು ತಿಳಿಯಾವು ಕಲ್ಲಣ್ಣ
ದೇವರಳ್ಳಾದ ನೆಲೆಯೇಳೋ

ಉತ್ರೆ ಮಳೆಬಂದು ಸುತ್ತ ಕಾವುಡಿ ಬೆಳೆದು
ಎತ್ತಾಲ ವೊಲಬು ತಿಳಿಯಾವು ಕಲ್ಲಣ್ಣ
ಕೊಕ್ಕಸಿ ಬೆಳದ ಬಯಲಾಗೆ

ಆದ್ರಿಮಳೆಬಂದು ದೂರ ಕಾವುಸಿ ಬೆಳೆದು
ಯಾವಲ್ಲಿ ವೊಲಬು ತಿಳಿದಾವು ಅಕಟಕೆರೆ
ಮಾನಂಗಿ ಬೆಳೆವ ಬಯಲಾಗೆ

ಆರು ಕೂರಿಗಳಲಿ ಸುತ್ತ ಪಾರಿಬೇಲಿ
ಆಯವುಳ್ಳ ಪಾಂಡವರು ವಸಮಾಗಿ ವಲದಾಗ
ದಾಯನಾಡಾನೆ ಮಳೆರಾಯ

ನಕ್ಕಾರೆ ಬರಾನು ಸಕ್ಕಂದಗಾರಾನೆ
ಅಕ್ಕನೀನೋಗಿ ಕರೆತಾರೆ ಸೂರಿದನ
ಅತ್ತಿರದಲೈದಾನೆ ಮಳೆರಾಯ

ಕರೆದಾರೆ ಬರಾನು ಕೈಸನ್ನೆಗಾರಾನೆ
ತಾಯಿ ನೀನೋಗಿ ಕರೆತಾರೆ ಸೂರಿದನ
ವಾರಿಲೈದಾನೆ ಮಳೆರಾಯ

ಬಿತ್ತಿ ಬಂದಣ್ಣ ವೊತ್ತಿಗ್ಗೆ ವೋದಾನೆ
ಬಿತ್ತಿ ಬಂದೆ ಸಿವನೆ ಮಳೆಯಿಲ್ಲ ರಾಜ್ಯದ ಮ್ಯಾಲೆ
ಮುತ್ತಿನ ಸ್ವಾನೆ ಸುರುದಾವೆ

ಅರುಗಿ ಬಂದಣ್ಣ ವೊತ್ತಿಗ್ಗೆ ವೋದಾನೆ
ಅರುಗಿ ಬಂದೆ ಸಿವನೆ ಮಳೆಯಿಲ್ಲ ರಾಜ್ಯದ ಮ್ಯಾಲೆ
ಅವಳಾದ ಸ್ವಾನೆ ಸುರುದಾವೆ

ಅತ್ತು ಕೂರಿಗೆ ವಲದೂರ ಪಾರಿಬೇಲಿ
ಆಯವುಳ್ಳ ಪಾಂಡವರು ವೊಸಮಾಗಿ
ವಲದಾಗ ದಾಯನಾಡ್ಯಾನೆ ಮಳೆರಾಯ

ಆನೆಗಡತರ ನೀರು ಆಕರಿಸಿ ಅರುದಾವು
ಬೂಪ ಈರಣ್ಣ ವರಡಾನು ಗಂಗಮ್ಮ
ಮಾತಾಡಿ ಮಗನ ಕಳುವಮ್ಮ

ಕುದುರೆಗಡತರ ನೀರು ಆಕರಿಸಿ ಅರುದಾವು
ಅಪ್ಪಯ್ಯ ಕೆರಿಯವರಡಾನೆ ಗಂಗಮ್ಮ
ಮದನಾರಿ ಮಗನ ಕಳುವಮ್ಮ

ಗುಡ್ಡಾದ ಅರಿಬಂದು ವಬ್ಬೇಲಿ ಐದಾವೆ
ಗುಡ್ಡಾದ ಮಲ್ಲಾನ ಅರಿಬಂದು ಕಲ್ಲರಳ್ಳಿ
ದೊಡ್ಡೋನ ಸಾಗಿ ಬರ ಏಳೆ

ದುರುಗಾದ ಅರಿಬಂದು ಕೆರೆಯಾಗೆ ಐದಾವೆ
ದುರುಗಾದ ಮಲ್ಲಾನ ಅರಿಬಂದು ಕಲ್ಲರಳಿ
ದೊರಿಮಗನೆ ಸಾಗಿ ಬರ ಏಳೆ

ಆಕೆ ಬೂಮ್ಮಮ್ಮ ಆತಾನ ಬ್ರಮಿಸ್ಯಾಳೆ
ಬೂಪಾಲದರನೆ ಕರುಣಿಸೊ ಸೂರಿದನ
ಅತ್ತಿರದಲೈದಾನೆ ಮಳೆರಾಯ

ರೆಂಬೆ ಬೂಮ್ಯಮ್ಮ ಗಂಡಾನ ಬ್ರಮಿಸ್ಯಾಳೆ
ಮಂದಾಲದರನೆ ಕರುಣಿಸೋ ಸೂರಿದನ
ಅರುಗಿಲೈದಾನೆ ಮಳೆರಾಯ

ಸತಿ ಕೇಳಿ ಸಂಗಾತಿ ಮಾಡಿದಿರುಳಬ್ಬ
ರತ್ನಗಂಬಳಿ ಮುಸುಕಿಟ್ಟು ಮಳೆರಾಯ
ಕತಿ ಮಾಡಿ ವೋದ ಇರುಳೆಲ್ಲ

ಸತಿ ಕೇಳಿ ಸಂಗಾತಿ ಅಬ್ಬ ಮಾಡಿದಿರುಳೆಲ್ಲ
ಮೊಬ್ಬು ಗಂಬಳಿ ಮುಸುಕಿಟ್ಟು ಮಳೆರಾಯ
ಅಬ್ಬ ಮಾಡಿ ವೋದ ಇರುಳೆಲ್ಲ

ನಾಯಿ ತಿಂಬ ತೌಡು ನಾರೇರು ತಿಂದಾರು
ಮ್ಯಾಗಳರಾಯ ಕರುಣಿಸೋ ರಾಜ್ಯಾದಮ್ಯಾಲೆ
ಬಾಲಾರು ಬಾಯ ಬಿಡುತಾರೆ

ಅಂದಿ ತಿಂಬ ತೌಡು ರೆಂಬೇರು ತಿಂದಾರು
ಮುಂದಾಲರಾಯ ಕರುಣಿಸೋ ರಾಜ್ಯಾದ ಮ್ಯಾಲೆ
ಕಂದಾರು ಬಾಯ ಬಿಡುತಾರೆ

ಅಣ್ಣ ಕರುಣಿಸೋ ಅಣ್ಣಯ್ಯ ಕರುಣಿಸೋ
ಅಣ್ಣ ಮಳೆರಾಯ ಕರುಣಿಸೋ ರಾಜ್ಯಾದ ಮ್ಯಾಲೆ
ಬಾಲಾರು ಬಾಯ ಬಿಡುತಾರೆ

ಅಪ್ಪ ಕರುಣಿಸೋ ಅಪ್ಪಯ್ಯ ಕರುಣಿಸೋ
ಅಪ್ಪ ಮಳೆರಾಯ ಕರುಣಿಸೋ ರಾಜ್ಯಾದ ಮ್ಯಾಲೆ
ಮಕ್ಕಳು ಬಾಯ ಬಿಡುತ್ತಾರೆ

ಅತ್ತಿ ವಲಗಳು ಬಾಡಿಬತ್ತಿ ವೋಗುತಾವೆ
ಅಪ್ಪ ಕರುಣಿಸೋ ಮಳೆರಾಯ ರಾಜ್ಯದ ಮ್ಯಾಲೆ
ಮಕ್ಕಳು ಬಾಯ ಬಿಡುತಾರೆ

ಜ್ವಾಳದ ವಲಗಳು ಬಾಡಿಬತ್ತಿ ವೋಗುತಾವೆ
ಸ್ವಾಮಿ ಕರುಣೀಸೋ ಮಳೆರಾಯ ರಾಜ್ಯದ ಮ್ಯಾಲೆ
ಬಾಲಾರು ಬಾಯ ಬಿಡುತಾರೆ

ಹತ್ತು ಗಾವುದದಿಂದ ನಿಸ್ತ್ರೇಗೆ ಮನುವರುದ
ಲೆತ್ತನಾಡೋಳೆ ದೊರೆಮಗಳೆ ನಿನಗಾಗಿ
ಜೊತ್ತಾಗಿ ನಿಂತ ದೊರೆಮಗನೆ

ಆರುಗಾವುದದಿಂದ ನಾರೀಗೆ ಮನೆವರುದ
ದಾಯನಾಡೋಳೆ ದೊರೆಮಗಳೆ ನಿನಗಾಗಿ
ಮೋವಾಗಿ ನಿಂತ ಮಳೆರಾಯ

ಗಂಜಿಯಚ್ಚಡದೋನೆ ಗಂಭೀರ ಮಳೆರಾಯ
ಎಂಡೀರಮನೆಬಿಟ್ಟು ವೊರಡಾನೆ ಲೋಕದಮ್ಯಾಲೆ
ನಿಂಬೇಣ್ಣಿಗೆ ಬಾಯಬಿಡುತಾನೆ

ಸಾಲ್ಯದಚ್ಚಡದೋನೆ ಸಳಿಗಾಳಿಯ ಮಳೆರಾಯ
ಸೂಳೆಮನೆ ಬಿಟ್ಟು ವೊರಡಾನೆ ಲೋಕದಮ್ಯಾಲೆ
ಬಾಳೊಣಗಿ ಬಾಯ ಬಿಡುತಾವೆ

ಉಜ್ಜೀನಿರಾಯ ವುದಿಯ ಮುಟ್ಟದ್ಯಾವ
ರುದ್ದರನೆ ಮಳೆಯ ತರಿಸಯ್ಯ ನರಲೋಕ
ಮಜ್ಜಿಗ್ಗೆ ಬಾಯ ಬಿಡುತಾವೆ

ಪರುಪಂಚಗಾರ ಪಾರುವತಿರಮಣ
ನನ್ನಯ್ಯ ಮಳೆಯ ತರಿಸಯ್ಯ ನರಲೋಕ
ಅನ್ನಾಕೆ ಬಾಯ ಬಿಡುತಾದೆ

ತಾಯಮ್ಮ ನೀ ನೋಡೆ ಮ್ವಾಡದಾಗಳ ಮಂಜ
ಬಾಣತಿಗೆ ಮಸಿಯ ಬಳಿದಂಗೆ ಲೋಕದ ಮ್ಯಾಲೆ
ಲೋಲಿಸುವಾನೆ ಮಳೆರಾಯ

ಅಕ್ಕಯ್ಯ ನೀನೋಡೆ ಬೆಟ್ಟದಾಗಳ ಮಂಜ
ಮಕ್ಕಳ್ಳಿಗೆ ಮಸಿಯಬಳುದಂತೆ ಲೋಕದಮ್ಯಾಲೆ
ಲೋಲಿಸುವಾನೆ ಮಳೆರಾಯ

ನಾಯಿತಿಂಬ ತೌಡನಾರೇರು ತಿಂದಾರೆ
ಮ್ಯಾಗಳ ದೇವ ಕರುಣಿಸೊ ಲೋಕದಮ್ಯಾಲೆ
ನಾರೇರ ಸೋಕ ಗವುದಾವೆ

ಅಂದಿತಿಂಬ ತೌಡುರೆಂಬೇರು ತಿಂದಾರೆ
ಇಂದಾಲ ದೇವ ಕರುಣೀಸೊ ಲೋಕದಮ್ಯಾಲೆ
ರೆಂಬೇರ ಸೋಕ ಸಿವನೀಗೆ

ಸ್ವಾಮಿ ಮಳಿದೇವ ಸಾಲ್ಯದೊಸ್ತ್ರವನೊದ್ದು
ಸಾಮಸಾಲ್ಯಾಗ ಮನಗವನೇ ಮಳಿದೇವ
ಸಾಲ್ಯೇದ ಸ್ವಾಮಿ ಕರುಣೀಸೋ

ಗಂಭೀರಮಳೆರಾಯ ಗೊಂಬೇದೊಸ್ತ್ರವನೊದ್ದು
ಗಂದಸಾಲ್ಯಾಗ ಮನಗವನೆ ಮಳೆದೇವ
ಇಂದಾಲ ಸ್ವಾಮಿ ಕರುಣೀಸೊ

ಒಕ್ಕಲ ಕೇರ‍್ಯಾಗ ಟೂಕ್ಕಂಬವೇನಮ್ಮ
ಇಪ್ಪತ್ತು ಚಮಟಿಗೆ ಮೊಳೆಗಾಳು ಒಕ್ಕಲುಮಗ
ಪುತ್ರಮ್ಮ ಕೂರಗ್ಗೆ ಮೊಳೆಬಡುವ

ಕಮ್ಮಾರ ಕೇರ‍್ಯಾಗ ಡಮ್ಮಂಬಾವೇನಮ್ಮ
ಎಂಬತ್ತು ಚಮ್ಮಟಿಗೆ ಮೊಳೆಗಾಲು ಒಕ್ಕಲುಮಗ
ಕಂದಮ್ಮ ಕೂರಿಗ್ಗೆ ಮೊಳಿಬಡುದ

ಗಡುಗೆಲ್ಲ ಗುಡುಗ್ಯಾವೆ ಸಿಡಿಲೆಲ್ಲಿ ಸಿಡಿದಾವೆ
ದುರುಗದ ರಾಯನ ಕದಲೇಯ ಕಂಬದಮ್ಯಾಲೆ
ಪಗಡೆಯನಾಡ್ಯಾನೆ ಮಳೆದೇವ

ಅರುಗಾಕೋದಣ್ಣ ಅಲಗೇಯ ಇಡದವನೆ
ಅರುಗಿಬಂದೆ ತಾಯಿ ಮಳೆಯಿಲ್ಲ ಲೋಕದಮ್ಯಾಲೆ
ಅವಳಾದ ವೋಟೆ ಮಳಿ ಮ್ವಾಡ

ಬಿತ್ತಕೋದಣ್ಣ ವತ್ತಿಗೆಯ ಇಡಿದಮನೆ
ಬಿತ್ತಿಬಂದೆ ತಾಯಿ ಮಳೆಯಿಲ್ಲ ಲೋಕದಮ್ಯಾಲೆ
ಮುತ್ತಿನ ವೋಟೆಮಳಿಮ್ಯಾಡ

ಮುತ್ತೀನಕೂರಿಗ್ಗೆ ಅಟ್ಯಾಗೆ ಪೂಜ್ಯಾಗಿ
ಎತ್ತ ತುಪ್ಪದಲಿ ಮೊಕತೊಳೆದು ಒಕ್ಕಲುಮಗ
ಪುತ್ರಮ್ಮ ಕೂರಿಗ್ಗೆ ನಡೆದಾನೆ

ಅವಳಾದ ಕೂರಿಗ್ಗೆ ವೋಣ್ಯಾಗ ಪೂಜಾಗಿ
ಆಲುತುಪ್ಪದಲಿ ಮೊಕತೊಳದೆ ಒಕ್ಕಲುಮಗ
ಬಾಲಮ್ಮ ಕೂರಿಗ್ಗೆ ನಡೆದಾನೆ

ಮುತ್ತೀನ ಕೂರಿಗೆ ನೆತ್ತಿ ಮ್ಯಾಲಿಕ್ಕಂಡು
ಉತ್ತಮರ ಮಗಳ ಕರಕಂಡು ಒಕ್ಕಲುಮಗ
ನಿಸ್ತ್ರೇಗೆ ಬಿತ್ತ ಕಲಿಸ್ಯಾರೆ

ಚಿನ್ನಾದ ಕೂರೀಗೆ ಕೆನ್ನೆ ಮ್ಯಾಲಿಕ್ಕಂಡು
ಮಾನ್ಯೇರ ಮಗಳ ಕರಕಂಡು ಒಕ್ಕಲುಮಗ
ಅರುವೇಗೆ ಬಿತ್ತ ಕಲಿಸ್ಯಾನೆ

ಬಿತ್ತ ಕೂರಿಗೆ ಮುಂದೆ ಬೀಜದೆಡಿಗೆ ಇಂದೆ
ಅಟ್ಟಿ ಮಾದಿಗನ ಮಿಣಿಮುಂದೆ ಒಕ್ಕಲುಮಗ
ಸುತ್ತಲ ಮಾನ್ಹೇಕ ನಡೆದಾನೆ

ಅರುವ ಕೂರಿಗೆ ಮುಂದೆ ಅವಳದ ಎಡಿಗೆ ಇಂದೆ
ಬಡವ ಮಾದಿಗ ಮಿಣಿಮುಂದೆ ಒಕ್ಕಲುಮಗ
ದೂರದ ಮಾನ್ಯಕ ನಡೆದಾನೆ

ಅರಸಿ ಬೂಮ್ಯಮ್ಮ ಪುರಸನ ಬ್ರಮಿಸುವಳೆ
ಅರಿಚ್ಚಂದ್ರರಾಯಕರುಣಿಸೊ ಕೂರಿಗೆಯೆಂಬ
ಪುರುಸನ ಬೂಮ್ಯಮ್ಮ ಬ್ರಮಿಸುವಳೆ

ರೆಂಬೆ ಬೂಮ್ಯಮ್ಮ ಗಂಡನ ಬ್ರಮಿಸುವಳೇ
ಇಂದಾಲದೇವ ಕರುಣೀಸೊ ಕೂರಿಗೆಯೆಂಬ
ಗಂಡನ ಬೂಮ್ಯಮ್ಮ ಬ್ರಮಿಸುವಳೆ

ಕೂರಿಗೆನಿನ್ನೆಸರು ಕುಂಬೂಟರಾಯನೆ
ಸಡ್ಡೆನಿನ್ನೆಸರು ಸರಸತಿಯ ಒಕ್ಕಲುಮಗನ
ಎತ್ತೀನ ಎಸರು ರಗುರಾಮ

ಮುತ್ತೀನ ಕೂರೀಗೆ ಯಾಗಲುಮಟ್ಟ ಸಡ್ಡೆ
ಮುಕ್ಕಣ್ಣನಂಬೋವು ಎರಡೆತ್ತು ಕಟ್ಟುಕಂಡು
ಮುತ್ತು ಬಿತ್ತಾನೆ ವಲಕೆಲ್ಲ

ಅವಳಾದ ಕೂರಿಗ್ಗೆ ದನ ಮಟ್ಟಸಡ್ಡೆ
ರಗುರಾಮನೆಂಬೊ ಎರಡೆತ್ತು ಕಟ್ಟಿಕಂಡು
ಅವಳಾಬಿತ್ತಾನೆ ವಲಕೆಲ್ಲ

ಆರೆತ್ತು ಆರಾಳು ಆರುಕೂರಿಗದಾಳು
ದೇವಪಾಂಡುವರೆ ಸಮನಾಗಿ ವಲದಾಗ
ವೋಗಿ ಕರುಣಿಸೋ ಮಳೆದೇವ

ಎಂಟೆತ್ತು ಎಂಟಾಳು ಎಂಟು ಕೂರಿಗದಾಳು
ಕೆಂಚೆಪಾಂಡವರ ವೊಸಮಾಗಿ ವೊಲದಾಗೆ
ನಾಂಟ್ಯವನಾಡಾನೆ ಮಳೆದೇವ

ಆರುಕೂರಿಗೆ ನೆಲದೂರ ಪಾರಿಬೇಲಿ
ದೇವ ಪಾಂಡವರ ವೊಸಮಾಗಿ ವಲದಾಗೆ
ಲೋಲಿಸುವಾನೆ ಮಳೆದೇವ

ಅತ್ತು ಕೂರಿಗೆ ನೆಲ ಸುತ್ತ ಬಾರಿಬೇಲಿ
ಚತ್ರಿ ಪಾಂಡವರ ವೊಸಮಾಗಿ ವಲದಾಗ
ವೊಕ್ಕು ಕರುಣೀಸೊ ಮಳೆದೇವ

ಮಳಿಬಂದು ತನುವೆದ್ದು ಗಿಡವೆಲ್ಲತನುವಾಗಿ
ಬಡವಾಗುಮ್ಮಾಯಿ ಗನವಾಗಿ ಬಕುತರಳ್ಳಿ
ಕರಿಮೀಗೆ ಚಿಂತೆಗವುದಾವೆ

ಅಣ್ಣ ಬಿತ್ತೀದೊಲ ತಮ್ಮ ನೋಡಲೋಗಿ
ಗಿಣ್ಣುಂಟೆನಾರಿಗರಿಮುಂದು ಮೂಡಾಲ
ಎಣ್ಣೀನ ಬೈತಲೆಯ ತಗುದಂಗೆ

ಬಿತ್ತೀದೇಳುದಿನಕ ವೊಕ್ಕು ನೋಡನಲ್ಲೆ
ಸೊಕ್ಕಷ್ಟೇ ಇವ್ನ ಮರವೆಸ್ಟೆ ಒಕ್ಕಲುಮಗ
ವೊಕ್ಕಾನು ಭೂಮ್ಯಮ್ನ ವಲದಾಗೆ

ಅಸನಾದಳು ಬೂಮ್ಯಮ್ಮ ಎಸಳು ಪಿಲ್ಲೆನಿಟ್ಟು
ಅಸುರೊಲದಾಗ  ಅಡ್ಡಸುಳುದಾಳೆ ಒಕ್ಕಲುಮಗನೆ
ದಸಲೀಯ ಆಸಿ ಸರಣೆನ್ನು

ಒಳ್ಳೋಳು ಬೂಮ್ಯಮ್ಮ ಬೆಳ್ಳಿಪಿಲ್ಲೆನಿಟ್ಟು
ಎಳ್ಳೊಲದಾಗ ಅಡ್ಡ ಸುಳದಾಳೆ ಒಕ್ಕಲುಮಗನೆ
ವಲ್ಲೀಯ ಆಸಿ ಸರಣೆನ್ನೂ

ಕಾಗೇಯ ಸಲುವೋನೆ ಗೋಗೇಯ ಸಲುವೋನೆ
ಎರುವೆಂಬತ್ತು ಕೋಟಿ ಸಲುವೋನೆ ಒಕ್ಕಲುಮಗನೆ
ತಿರುಗೊಂದೀಳ್ಯವೇ ಬರಲಣ್ಣ

ಅಕ್ಕೀಯ ಸಲುವೋನು ಪಕ್ಕೀಯಸಲುವೋನು
ಸುತ್ತೇಳು ಲೋಕ ಸಲುವೋನು ಒಕ್ಕಲುಮಗನೆ
ಮತ್ತೊಂದೇ ವೀಳ್ಯ ಬಳಲಂದ

ಆನೆಮ್ಯಾಲೊಸಗೆ ಬಾಲಾನಕೈಯ್ಯಾಗೂವು
ರಾಯಸೀರ‍್ಯಾದ ಗೌಡಾರು
ರಾಯಸೀರ‍್ಯಾದ ಗೌಡಾರು ಮನೆವಸಗೆ
ಆನೆಯಮ್ಯಾಲೆ ಬರುತಾವೆ

ಎತ್ತಿನ ಮ್ಯಾಲೊಸಗೆ ಮಕ್ಕಳಕೈಯ್ಯಾಗೂವು
ಚಿಕ್ಕಸೀರ‍್ಯಾದ ದೊರೆಗಾಳ
ಚಿಕ್ಕಾಸೀರ‍್ಯಾದ ದೊರೆಗಾಳ ಮನೆವಸಗೆ
ಎತ್ತಿನಮ್ಯಾಲೆ ಬರುತಾವೆ

ಒಂದೊಂದನಿಯಾಗ ಸಂಜೆಗತ್ತಲಾಗೆ
ತಂದಿರುವರ‍್ಯಾರೆ ವಸಗೀಯ
ತಂದಿರುವರ‍್ಯಾರೆ ವಸಗೀಯ ತಿಪ್ಪಮ್ಮ ನಿನ್ನ
ತಂದೆ ಕಡಿಯಾಗಳ ಬಳಗಾವೆ

ಆಡ ಆನಿಯಾಗ ಮೂಡ ಕತ್ತಲಾಗ
ಮಾಡಿರುವಾರ‍್ಯಾರೆ ವಸಗೀಯ
ಮಾಡಿರುವಾರ‍್ಯಾರೆ ವಸಗೀಯ ಸಣ್ಣಮ್ಮ ನಿನ್ನ
ತಾಯಿ ಕಡೆಯ ಬಳಗಾವೆ

ಅರಿಸಿಣ ಅರಿಯೆಂದ ಬಟ್ಟಲಿಗೆ ತುಂಬೆಂದ
ಆರತಿಗೆ ನಾಲುವರನ ಕರಿಯೆಂದ
ಆರತಿಗೆ ನಾಲುವರನ ಕರೆಯೆಂದ ಈರಣ್ಣ
ರೆಂಬೆಗೆ ಮಾಡೆಂದ ವಸಗೀಯ

ಗಂದ ಅರಿಯೆಂದ ಗಂದಾದ ಬಟ್ಟಲಿಗೆ ತುಂಬೆಂದ
ಅಂದಾಕನಾಲ್ವರನ ಕರಿಯೆಂದ
ಅಂದಾಕನಾಲ್ವರನ ಕರಿಯೆಂದ ಈರಣ್ಣ
ರೆಂಬೆಗೆ ಮಾಡೆಂದ ವಸಗೀಯ

ಕುಟ್ಟೀದ ಎಳ್ಳು ಪುಟ್ಟಿಗೆ ತುಂಬಿಕಂಡು
ಅತ್ತಿಗೇರ ಮಕ್ಕಳ್ನ ವಡಗೊಂಡು
ಅತ್ತಿಗೇರ ಮಕ್ಕಳ್ನ ವಡಗೊಂಡು ಈರಣ್ಣಾನ
ನಿಸ್ತ್ರೆ ಮಾಡವಳೆ ವಸಗೀಯ

ಮಾಡೀದ ಎಳ್ಳು ಮರಕ ತುಂಬಿಕಂಡು
ನಾದಿನೇರಮಕ್ಕಳ್ನ ವಡಗೊಂಡು
ನಾದಿನೇರಮಕ್ಕಳ್ನ ವಡಗೊಂಡು ಈರಣ್ಣಾನ
ನಾರಿಮಾಡ್ಯಾಳ ವಸಗೀಯ

ಎಣ್ಣೆ ಕಳುವೆಂದಾರೆ ಕಮ್ಮೆಣ್ಣೆ ಕಳುವ್ಯಾರೆ
ವುಮ್ಮಳಗಾತಿ ಅವರತ್ತೆ
ವುಮ್ಮಳಗಾತಿ ಅವರತ್ತೆ ಇರಿಯತ್ತೆ
ಕಮ್ಮೆಣ್ಣೆ ಕಸ್ತೂರಿ ಕಳುವ್ಯಾಳೆ

ತುಪ್ಪ ಕಳುವೆಂದಾದರೆ ಬಟ್ಟಿಣ್ಣೆ ಕಳುವ್ಯಾರೆ
ಎಚ್ಚಳಗಾತಿ ಅವರತ್ತೆ
ಎಚ್ಚಳಗಾತಿ ಅವರತ್ತೆ ಸಿರಿಯಮ್ಮ
ಬಟ್ಟಿಣ್ಣೆ ಕುಂಕುಮ ಕಳಿವ್ಯಾಳೆ

ಗಂದ ಕಳುವೆಂದಾರೆ ಗಂದದೆಣ್ಣೆ ಕಳುವ್ಯಾರೆ
ಅಂದಗಾತಿ ಅವರ ಇರಿಯತ್ತೆ
ಅಂದಾಗತಿ ಅವರ ಇರಿಯತ್ತೆ ಸಿರಿಯಮ್ಮ
ಗಂದದೆಣ್ಣೆ ಕಸ್ತೂರಿ ಕಳುವ್ಯಾರೆ

ಅತ್ತು ನಾಡಿನಾಗ ಅವರಪ್ಪನ ಬಳಗಾವೈತೆ
ಅವರತ್ತೆಗೊಂದಾಳ ಕಳುವೀರಿ
ಅವರತ್ತೆಗೊಂದಾಳ ಕಳುವೀರಿ ಸೀರ‍್ಯಾದ
ಪಟ್ಟಣವ ತೆರಳಿ ಬರುತಾರೆ

ಪಟ್ಟಣವ ತೆರಳಿ ಮತ್ಯಾಕ ಬರುತಾರೆ
ಸೆಟ್ಟ್ಯೋರ ಮಗಳು ಮೈನೆರೆತು
ಸೆಟ್ಟ್ಯೋರ ಮಗಳು ಮೈನೆರೆತು ಅಂಬುದ ಕೇಳಿ
ಪಟ್ಟಣವ ತೆರಳಿ ಬರುತಾರೆ

ಆ ನಾಡಿನಾಗ ತಾಯಿ ಬಳಗವೈತೆ
ಆ ತಾಯಿಗೊಂದಾಳ ಕಳುವೀರಿ
ಆ ತಾಯಿಗೊಂದಾಳ ಕಳುವೀರಿ ಸೀರ‍್ಯಾದ
ರಾಣ್ಯಾವೇ ತೆರಳಿ ಬರುತಾವೆ?

ರಾಣ್ಯಾವೇ ತೆರಳಿ ತಾವ್ಯಾಕ ಬರುವಾರೆ
ರಾಯಾರ ಮಗಳು ಮೈನೆರೆತು
ರಾಯಾರ ಮಗಳು ಮೈನೆರೆತು ಅಂಬುದ ಕೇಳಿ
ರಾಣ್ಯಾವೆ ತೆರಳಿ ಬರುತಾವೆ?

ಕಟ್ಟೀಯ ಇಂದೆ ಸೆಕ್ಕುರಿಗೋಗೋನೆ
ಸೆಟ್ಟಿ ನಿನಮಗಳು ಮೈನೆರೆತು
ಸೆಟ್ಟಿ ನಿನಮಗಳು ಮೈನೆರೆತು ಸಿರಿಯಣ್ಣ
ಸೆಕ್ಕುರಿಯತಿದ್ದೂ ಪ್ರಜೆಗೆಲ್ಲ

ಏರೀಯ ಇಂದೆ ವೋಳಡಕೆಗೋಗೋನೆ
ಗೇನಿನತಂಗಿ ಮೈನೆರೆತು
ಗೇನಿನನತಂಗಿ ಮೈನೆರೆತು ಈರಣ್ಣ
ವೋಳಡಕೆ ತಿದ್ದೂ ಪ್ರಜೆಗೆಲ್ಲ

ಅಂಗಡಿಯಾಗಿರುವೋನೆ ತಂಗಿ ಮೈನೆರೆತಾರೆ
ಎಂಬತ್ತು ಸೇರೀನ ಕೊಬರೀಯ
ಎಂಬತ್ತು ಸೇರೀನ ಕೊಬರೀಯ ತೆಂಗಿನಕಾಯಿ
ತಂಗೀಗೀರಣ್ಣ ಕಳುವ್ಯಾನೆ

ಮಾಳಿಗ್ಯಾಗಿರುವೋನೆ ತಂಗಿ ಮೈನೆರೆತಾರೆ
ನಲವತ್ತು ಸೇರೀನ ಕೊಬರೀಯ
ನಲವತ್ತು ಸೇರೀನ ಕೊಬರೀಯ ಅಚ್ಚಿನಬೆಲ್ಲ
ಮಗಳೀಗೆ ಅವರಣ್ಣ ಕಳುವ್ಯಾನೆ

ಒಂದಂಗಡಿ ಮಲ್ಲಿಗೆ ಒಂದಂಗಡಿ ಕೇದೀಗೆ
ಮುಂದೇಳು ಅಂಗಡಿ ಮುಡಿದಂಡೆ
ಮುಂದೇಳು ಅಂಗಡಿ ಮುಡಿದಂಡೆ ಬೆಲೆಮಾಡೋನು
ರೆಂಬೆ ತಿಪ್ಪಯ್ನ ಇರಿಯಣ್ಣ

ಆಯಂಗಡಿ ಮಲ್ಲಿಗೆ ಈಯಂಗಡಿ ಕೇದೀಗೆ
ಮ್ಯಾಲೇಳು ಅಂಗಡಿಮುಡಿದಂಡೆ
ಮ್ಯಾಲೇಳು ಅಂಗಡಿಮುಡಿದಂಡೆ ಬೆಲೆಮಾಡೋನು
ನಾರಿ ಸಣ್ಣಮ್ಮ ಸಿರಿಯಣ್ಣ

ಎಸರಿಗೆ ದೊಡ್ಡೋರು ಸೊಸೆಯಮೈನೆರೆತಾರು
ರಸ್ತಾಳಿ ಕಬ್ಬು ಸಿಗಳೀಯ
ರಸ್ತಾಳಿ ಕಬ್ಬು ಸಿಗಳೀಯ ತಂಬಿಟದುಂಡೆ
ಎಸ್ತಾಡೆ ಪ್ಯಾಟೆವಳಗೆಲ್ಲ

ಸಿಬ್ಲಿಲೂವ ತನ್ನಿ ಇದ್ದ ಬಂಗಾರ ತನ್ನಿ
ಎದ್ದೆ ಬನ್ನಿಯವರ ಮನೆತಂಕ
ಎದ್ದೆ ಬನ್ನಿಯವರ ಮನೆತಂಕ ಸಿರಯಣ್ಣಾನ
ಬದ್ರೆಗೆ ವೂವ ಮುಡಿಸಾನೆ

ಎಡೆಗೆಲೂವ ತನ್ನಿ ವಡವೆ ಬಂಗಾರತನ್ನಿ
ನಡದೇ ಬನ್ನಿ ಅವರ ಮನೆತಂಕ
ನಡದೇ ಬನ್ನಿ ಅವರ ಮನೆತಂಕ ಸಿರಿಯಣ್ಣಾನ
ಬದ್ರೆಗೆ ವೂವ ಮುಡಿಸಾನೆ

ಎಡೆಗೆಲೂವ ತನ್ನಿ ವಡವೆ ಬಂಗಾರತನ್ನಿ
ನಡೆದೇ ಬನ್ನಿ ಅವರ ಮನೆತಂಕ
ನಡದೇ ಬನ್ನಿ ಅವರ ಮನೆತಂಕ ಈರಣ್ಣಾನ
ಮಡದೀಗೆ ವೂವು ಮುಡಿಸಾನ

ವಾಲೆ ವಳವೀಗೆ ಸಿರೀಯ ತಿಳಿವೀಗೆ
ಜ್ಯಾಣ ಸಿರಿಯಣ್ಣನ ಡವಲೀಗೆ
ಜ್ಯಾಣ ಸಿರಿಯಣ್ಣನ ಡವಲೀಗೆ ಈರಣ್ಣ
ಆನೆಯಮ್ಯಾಲೊಸಗೆ ಕಳಿವ್ಯಾನೆ

ಕಪ್ಪಿನೊಳಗೆ ಕುಪ್ಪಸದ ತಿಳಿವೀಗೆ
ಸೆಟ್ಟಿದ್ಯಾವರಣ್ಣನ ಡೌಲೀಗೆ
ಸೆಟ್ಟಿದ್ಯಾವರಣ್ಣನ ಡೌಲೀಗೆ ಈರಣ್ಣ
ಎತ್ತೀನ ಮ್ಯಾಲೊಸಗೆ ಕಳಿವ್ಯಾರೆ