‘ದಾದ್ರಾ’ ಹಿಂದುಸ್ತಾನಿ ಲಘು ಶಾಸ್ತ್ರೀಯ ಹಾಡುಗಾರಿಕೆಯ ಒಂದು ಗಾನಶೈಲಿ. ಇದು ಉತ್ತರಭಾರತದಲ್ಲಿ ವಿಶೇಷವಾಗಿ ಪ್ರಚಾರದಲ್ಲಿರುವ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಒಂದು ಗಾನಪ್ರಕಾರವಾಗಿದೆ. ಈ ಗಾನ ಶೈಲಿಯು ವಿಶೇಷವಾಗಿ ಠುಮ್ರಿ ಮತ್ತು ಗಜಲ್ ಶೈಲಿಗಳನ್ನು ಹೋಲುತ್ತದೆ. ‘ಠುಮರಿ-ದಾದ್ರಾ’ ಎಂದೇ ಸಂಬೋಧಿಸಲಾಗುತ್ತಿದ್ದರೂ ಅವೆರಡರ ಪ್ರಕೃತಿ ಭಿನ್ನವಾಗಿವೆ. ಮೇಲ್ನೋಟಕ್ಕೆ ಭಿನ್ನವಾಗಿ ಕಂಡರೂ ಅವು ಒಂದನ್ನೊಂದು ಪರಸ್ಪರ ಹೋಲುತ್ತವೆ.

ಠುಮ್ರಿ ಮತ್ತು ದಾದ್ರಾಗಳ ಸಂಬಂಧ ಬಡಾಖ್ಯಾಲ ಮತ್ತು ಛೋಟಾ ಖ್ಯಾಲಗಳ ಸಂಬಂಧದಂತಿದೆ ಎಂದು ಪ್ರಸಿದ್ಧ ಠುಮರಿ ಗಾಯಕಿ ಶ್ರೀಮತಿ ನೈನಾದೇವಿ ಆಕಾಶವಾಣಿಯ ಸಂದರ್ಶನವೊಂದರಲ್ಲಿ ಹೇಳಿರುವ ಮಾತು ಮೇಲಿನಕ್ಕೆ ಪುಷ್ಠಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಠುಮರಿ ಹಾಡುವ ಕಲಾವಿದರು ದಾದ್ರಾ ಹಾಡಿಯೇ ತಮ್ಮ ಸಂಗೀತ ಕಚೇರಿಯನ್ನು ಮುಗಿಸುತ್ತಾರೆ. ಶೃಂಗಾರ ರಸ ಪ್ರಧಾನ ಈ ಗಾನಶಲಿಯ ವೈಶಿಷ್ಟ್ಯ. ದಾದ್ರಾ ತಾಲದಲ್ಲಿ ಈ ಗಾನಶೈಲಿಯನ್ನು ಹಾಡಲ್ಪಡುವುದರಿಂದ ಇದಕ್ಕೆ ‘ದಾದ್ರಾ’ ಎಂಬ ಹೆಸರು ಬಂದಿದೆ ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ಆದರೆ, ಬೇರೆ ಬೇರೆ ತಾಲಗಳಲ್ಲಿಯೂ ಸಹ ‘ದಾದ್ರಾ’ ಹಾಡುತ್ತಾರೆಂದು ಹಲವರ ವಿಚಾರ.

‘ದಾದ್ರಾ’ ಹಾಡುಗಾರಿಕೆಯನ್ನು ವಿಶೇಷವಾಗಿ ಪೀಲೂ, ಖಮಾಜ, ತಿಲಂಗ, ಗಾರಾ, ಮತ್ತು ಭೈರವಿ ರಾಗಗಳಲ್ಲಿ ಮತ್ತು ದಾದರಾ, ದೀಪಚಂದಿ, ಜತ್, ಚಾಚರ ಕೇರವಾ ಮುಂತಾದ ತಾಲಗಳಲ್ಲಿ ಹಾಡಲ್ಪಡುತ್ತದೆ. ‘ದಾದ್ರಾ’ ಹಾಡುಗಾರಿಕೆಯು ಪಂಜಾಬ, ಬನಾರಸ ಮತ್ತು ಲಖನೌಗಳಲ್ಲಿ ವಿಶೇಷವಾಗಿ ಹಾಡಲ್ಪಡುತ್ತದೆ. ಮಧ್ಯಲಯದಲ್ಲಿ ಠುಮರಿ ಹಾಡುವಾಗ ಸಣ್ಣ ಪ್ರಮಾಣದಲ್ಲಿ ಹರಕತ್‌ಗಳನ್ನು ಮಾಡುವ ಮೂಲಕ ದಾದ್ರಾ ಶೈಲಿ ಸ್ಪಷ್ಟವಾಗುತ್ತದೆ.

ದೇಶದ ಅನೇಕ ಮಹಾನ್ ಸಂಗೀತಗಾರರು ತಮ್ಮ ಕಂಠ ಸಿರಿಯಿಂದ ಠುಮರಿಯ ಜೊತೆಗೆ ‘ದಾದ್ರಾ’ ಹಾಡುಗಾರಿಕೆಯನ್ನು ಹಾಡಿ ಸಂಗೀತಲೋಕದಲ್ಲಿ ದಾದ್ರಾ ಗಾಐನಕ್ಕೆ ವಿಶಿಷ್ಟ ಮೆರಗನ್ನು ತಂದುಕೊಟ್ಟಿದ್ದಾರೆ. ಅಂಥವರಲ್ಲಿ ಉಸ್ತರಾದ್ ಬಡೇಗುಲಾಮ್ ಅಲಿಖಾನ್, ಶ್ರೀಮತಿಯರಾದ ನೈನಾದೇವಿ, ಗಿರಿಜಾದೇವಿ, ಸಿದ್ಧೇಶ್ವರಿ ದೇವಿ, ರಸೂಲನ ಬಾಯಿ, ನಿರ್ಮಲಾ ಅರುಣ, ಲಕ್ಷ್ಮೀಶಂಕರ ಮತ್ತು ಬೇಗಂ ಆಖ್ತರ್ ವಿಶೇಷ ನಾಮಾಂಕಿತರಾಗಿದ್ದಾರೆ. ಆಧುನಿಕ ಕಾಲದಲ್ಲಿ ಕೋಲ್ಕತ್ತಾದ ಪಂ. ಅಜಯ ಚಕ್ರವರ್ತಿ ಮತ್ತು ಉಸ್ತಾದ್ ಬಡೇ ಗುಲಾಮ್ ಅಲಿಖಾನ್ ಅವರ ಸುಪುತ್ರ ಉಸ್ತಾದ್ ಬರ್ಕತುಲ್ಲಾ ಖಾನ್‌ರು ದಾದ್ರಾ ಹಾಡುಗಾರಿಕೆಯಲ್ಲಿ ವಿಶೇಷ ಪ್ರಾವಿಣ್ಯತೆಯನ್ನು ಪಡೆದಿದ್ದಾರೆ.

ದಾದ್ರಾ ಹಾಡುಗಾರಿಕೆಯು ಚಂಚಲ, ಕ್ರೀಡಾಶೀಲ ಮತ್ತು ಶೃಂಗಾರಯುಕ್ತ ಕಾವ್ಯವಾಗಿರುವ ಜೊತೆಗೆ ಗತಿಶೀಲ ಖಟ್ಕಾ-ಮುರ್ಕಿ ಸಹಿತ ಸೌಂದರ್ಯಯುಕ್ತ, ಭಾವಮಯ ಗಾನಶೈಲಿಯಾಗಿದೆ. ಭಾವುಕ ಶಬ್ದ ಮತ್ತು ಕೋಂಲ ಕಲ್ಪನಾ ಶಕ್ತಿಯ ಸಾಕಾರ ರೂಪವಾಗಿದೆ. ಇದರ ಗತಿಯು ಮಧ್ಯ ಮತ್ತು ಧೃತ್  ಲಯದಲ್ಲಿರುತ್ತದೆ. ಶಬ್ದೋಚ್ಛಾರಣೆ, ಹೃದಯಸ್ಪರ್ಶಿ ಸ್ವರಗಳ ಆಲಾಪ ಮತ್ತು ಲಯದ ಭಿನ್ನತೆಯಿಂದಾಗಿ ದಾದ್ರಾ ಹಾಡುಗಾರಿಕೆಯು ಠುಮರಿಗಿಂತ ಭಿನ್ನವಾಗಿ ನಿಲ್ಲುತ್ತದೆ. ದಾದ್ರಾದ ಶಬ್ದಗಳು ಮಧುರ ಮತ್ತು ಭಾವುಕತೆಯಿಂದ ಕೂಡಿರುತ್ತವೆ. ಇದರಲ್ಲಿ ಚಂಚಲತೆಯ ಭಾವವು ಅಧಿಕವಾಗಿದೆ. ದಾದ್ರಾ ಹಾಡುಗಾರಿಕೆಯ ಮೇಲೆ ಲೋಕಗೀತದ ಪ್ರಭಾವ ಸ್ಪಷ್ಟವಾಗಿ ಗೋಚರವಾಗುತ್ತದೆ. ಲೋಕಸಂಗೀತದ ಕೆಲವು ಧುನ್‌ಗಳನ್ನು ದಾದ್ರಾ ಶೈಲಿಯಲ್ಲಿ ಹಾಡಲ್ಪಡುತ್ತದೆ. ‘ಆಂಧೇರಿಯಾ ಹೈ ರಾತ, ಸಜನ ರಹಿಹೈ ಜಯಿ ಹೈ’ ! ದಾದ್ರಾದ ಈ ಹಾಡು ಲೋಕಗೀತದ ‘ಝುಮರ’ದಂತಿದೆ.