ಅತ್ತುಗಾವುದರಿಂದ ನಿಸ್ತ್ರೇಗೆ ಮನವರುದ
ಲೆತ್ತನಾಡೋಳೆ ದೊರೆಮಗಳೆ | ನಿನಗಾಗಿ
ಜೊತ್ತಾಗಿ ನಿಂತ ದೊರೆಮನಗೆ ||

ಆರುಗಾವುದರಿಂದ ನಾರೀಗೆ ಮನೆವರುದ
ದಾಯನಾಡೋಳೆ ದೊರೆಮಗಳೆ | ನಿನಗಾಗಿ
ಮೋವಾಗಿ ನಿಂತ ಮಳೆರಾಯ ||

ಗಂಜೀಯಚ್ಯಡದೋನೆ ಗಂಭೀರ ಮಳೆರಾಯ
ಎಂಡೀರ ಮನೆ ಬಿಟ್ಟು ಹೊರಡಾನೆ | ಲೋಕದಮ್ಯಾಲೆ
ನಿಂಬೇಹಣ್ಣಿಗೆ ಬಾಯ ಬಿಡತಾವೆ ||

ಸಾಲ್ಯದಚ್ಚಡದೋನೆ ಸಳಿಗಾಳಿಯ ಮಳೆರಾಯ
ಸೂಳೆಮನೆ ಬಿಟ್ಟು ಹೊರಡಾನೆ | ಲೋಕದಮ್ಯಾಲೆ
ಬಾಳೊಣಗಿ ಬಾಯ ಬಿಡುತಾವೆ ||

ಉಜ್ಜೀನಿರಾಯ ವುದಿಯ ಮುಟ್ಟುದ್ಯಾವ
ರುದ್ದರನೆ ಮಳೆಯ ತರಿಸಯ್ಯ | ನರಲೋಕ
ಮಜ್ಜಿಗ್ಗೆ ಬಾಯ ಬಿಡುತಾದೆ ||

ಪರಪಂಚಗಾರ ಪರವತಿರಮಣ
ನನ್ನಯ್ಯ ಮಳೆತರಿಸಯ್ಯ | ನರಲೋಕ
ಅನ್ನಾಕೆ ಬಾಯ ಬಿಡುತಾದೆ ||

ತಾಯಮ್ಮ ನೀನೋಡೆ ಮ್ಯಾಡದಾಗಳ ಮಂಜ
ಬಾಣತಿಗೆ ಮಸಿಯ ಬಳಿದಂಗೆ | ಲೋಕದಮ್ಯಾಲೆ
ಲೋಲಿಸುವಾನೆ ಮಳೆರಾಯ ||

ಅಕ್ಕಯ್ಯ ನೀನೋಡೆ ಬೆಟ್ಟದಾಗಳ ಮಂಜ
ಮಕ್ಕಳಿಗೆ ಮಸಿಯ ಬಳದಂಗೆ | ಲೋಕದಮ್ಯಾಲೆ
ಲೋಲಿಸುವಾನೆ ಮಳೆರಾಯ ||

ನಾಯಿ ತಿಂಬೋ ತೌಡು ನಾರೇರು ತಿಂದಾರೆ
ಮ್ಯಾಗಳ ದೇವ ಕರುಣಿಸೊ | ಲೋಕದಮ್ಯಾಲೆ
ನಾರೇರ ಸೋಕ ಗವುದಾವೆ ||

ಅಂತಿ ತಿಂಬೋ ತೌಡು ರೆಂಬೇರು ತಿಂದಾರೆ
ಇಂದಾಲದೇವ ಕರುಣಿಸೊ | ಲೋಕದಮ್ಯಾಲೆ
ರೆಂಬೇರ ಸೋಕ ಸಿವನೀಗೆ ||

ಸ್ವಾಮಿ ಮಳಿದೇವ ಸಾಲ್ಯದೊಸ್ತ್ರವನೊದ್ದು
ಸಾಮಸಾಲ್ಯಾಗ ಮನಗವನೆ | ಮಳಿದೇವ
ಸಾಲ್ಯೇದಸ್ವಾಮಿ ಕರುಣಿಸೋ ||

ಗಂಭೀರ ಮಳೆರಾಯ ಗೊಂಬೇದೊಸ್ತ್ರವನೊದ್ದು
ಗಂದಸಾಲ್ಯಾಗ ಮನಗವನೆ | ಮಳೆದೇವ
ಇಂದಾಲಸ್ವಾಮಿ ಕರುಣೀಸೊ ||

ಒಕ್ಕಲಗೇರ‍್ಯಾಗ ಟೊಕ್ಕಂಬವೇನಮ್ಮ
ಇಪ್ಪತ್ತು ಚಮಟಿಗೆ ಮೊಳೆಗಾಳು | ಒಕ್ಕಲುಮಗ
ಪುತ್ರಮ್ಮ ಕೂರಿಗ್ಗೆ ಮೊಳೆಬಡುದ ||

ಕಮ್ಮಾರ ಕೇರ‍್ಯಾಗೆ ಡಮ್ಮಂಬಾವೇನಮ್ಮ
ಎಂಬತ್ತು ಚಿಮ್ಮಟಿಗೆ ಮೊಳೆಗಾಳು | ಒಕ್ಕಲುಮಗ
ಕಂದಮ್ಮ ಕೂರಿಗ್ಗೆ ಮೊಳೆಬಡುದ ||

ಗುಡುಗೆಲ್ಲಿ ಗುಡುಗ್ಯಾವೆ ಸಿಡಿಲೆಲ್ಲಿ ಸಿಡಿದಾವೆ
ದುರುಗದರಾಯನ ಕಡಲೇಯ | ಕಂಬದಮ್ಯಾಲೆ
ಪಗಡೆಯ ನಾಡ್ಯಾನೆ ಮಳೆದೇವ ||

ಅರುಗಾಕೋದಣ್ಣ ಅಲಗೇಯ ಇಡಿದವನೆ
ಅರುಗಿಬಂದೆ ತಾಯಿ ಮಳೆಯಿಲ್ಲ | ಲೋಕದಮ್ಯಾಲೆ
ಅವಳಾದ ವೋಟೆ ಮಳಿಮ್ವಾಡ ||

ಬಿತ್ತಕೋದಣ್ಣ ವತ್ತಿಗೆಯ ಇಡಿದವನೆ
ಬತ್ತಿ ಬಂದೆ ತಾಯಿ ಮಳೆಯಿಲ್ಲ | ಲೋಕದಮ್ಯಾಲೆ
ಮುತ್ತಿನವೋಟೆ ಮಳಿಮ್ವಾಡ ||

ಮುತ್ತೀನ ಕೂರಿಗ್ಗೆ ಅಟ್ಯಾಗೆ ಪೂಜ್ಯಾಗಿ
ಎತ್ತ ತುಪ್ಪದಲ್ಲಿ ಮೊಕ ತೊಳೆದು | ಒಕ್ಕಲುಮಗ
ಪುತ್ರಮ್ಮ ಕೂರಿಗ್ಗೆ ನಡೆದಾನೆ ||

ಅವಳಾದ ಕೂರಿಗ್ಗೆ ವೋಣ್ಯಾಗೆ ಪೂಜ್ಯಾಗಿ
ಹಾಲು ತುಪ್ಪದಲಿ ಮೊಕ ತೊಳೆದು | ಒಕ್ಕಲುಮಗ
ಬಾಲಮ್ಮ ಕೂರಿಗ್ಗೆ ನಡೆದಾನೆ ||

ಮುತ್ತೀನ ಕೂರಿಗೆ ನೆತ್ತಿ ಮ್ಯಾಲಿಕ್ಕಂಡು
ಉತ್ತುಮರ ಮಗಳ ಕರಕಂಡು | ಒಕ್ಕಲುಮಗ
ನಿಸ್ತ್ರೇಗೆ ಬಿತ್ತ ಕಲಸ್ಯಾನೆ ||

ಚಿನ್ನಾದ ಕೂರಿಗೆ ಕೆನ್ನೆಮ್ಯಾಲಿಕ್ಕಂಡು
ಉತ್ತುಮರ ಮಗಳ ಕರಕಂಡು | ಒಕ್ಕಲುಮಗ
ಅರುದೇಗ ಬಿತ್ತ ಕಲಸ್ಯಾನೆ |

ಬಿತ್ತ ಕೂರಿಗೆ ಮುಂದೆ ಬೀಜದೆಡಿಗೆ ಹಿಂದೆ
ಹಟ್ಟಿಮಾದಿಗನ ಮಿಣಿ ಮುಂದೆ | ಒಕ್ಕಲುಮಗ
ಸುತ್ತಲ ಮಾನ್ಯೇಕ ನಡೆದಾನೆ ||

ಹರಿವ ಕೂರಿಗೆ ಮುಂದೆ ಹವಳದ ಎಡಿಗೆ ಹಿಂದೆ
ಬಡವ ಮಾದಿಗನ ಮಿಣಿಮುಂದೆ | ಒಕ್ಕಲುಮಗ
ದೂರದ ಮಾನ್ಯೇಕ ನಡೆದಾನೆ ||

ಅರಸಿಬೂಮ್ಯಮ್ಮ ಪುರುಸನ ಬ್ರಮಿಸುವಳೆ
ಹರಿಚಂದ್ರರಾಯ ಕರುಣಿಸೊ | ಕೂರಿಗೆಯೆಂಬ
ಪುರುಸಸನನ ಬೂಮ್ಯಮ್ಮ ಬ್ರಮಿಸುವಳೆ ||

ಕೂರಿಗೆ ನಿನ್ನೆಸರು ಕುಂಬೂಟರಾಯನೆ
ಸಡ್ಡೆ ನಿನ್ನೆಸರು ಸರಸತಿಯೆ | ಒಕ್ಕಲುಮಗನ
ಎತ್ತೀನ ಹೆಸರು ರಗುರಾಮ ||

ಆರೆತ್ತು ಆರಾಳು ಆರು ಕೂರಿಗದಾಳು
ದೇವ ಪಾಂಡವರೆ ಸಮನಾಗಿ | ವಲದಾಗ
ವೋಗಿ ಕರುಣಿಸೊ ಮಳೆದೇವ ||

ಎಂಟೆತ್ತು ಎಂಟಾಳು ಎಂಟು ಕೂರಿಗದಾಳು
ಕೆಂಚೆ ಪಾಂಡವರ ಮಾಸಮಾಗಿ | ವೊಲದಾಗೆ
ನಾಂಟ್ಯವನಾಡಾನೆ ಮಳೆದೇವ ||

ಅಸನಾದಳು ಬೂಮ್ಯಮ್ಮ ಎಸಳು ಪಿಲ್ಲಿನಿಟ್ಟು
ಅಸುರೊಲದಾಗ ಅಡ್ಡಸುಳುದಾಳೆ | ಒಕ್ಕಲು ಮಗನೆ
ದಸಲೀಯ ಹಾಸಿ ಶರಣೆನ್ನು ||

ಒಳ್ಯೋಳು ಬೂಮ್ಯಮ್ಮ ಬೆಳ್ಳಿಪಿಲ್ಲೆನಿಟ್ಟು
ಎಳ್ಳೊಲದಾಗ ಅಡ್ಡಸುಳುದಾಳೆ | ಒಕ್ಕಲುಮಗನೆ
ಮಲ್ಲೀಯ ಹಾಸಿ ಶರಣೆನ್ನು ||

ಕಾಗೇಯ ಸಲುವೋನೆ ಗೋಗೇಯ ಸಲುವೋನೆ
ಎರುವೆಂಬತ್ತು ಕೋಟಿ ಸಲುವೋನೆ | ಒಕ್ಕಲುಮಗನೆ
ಮತ್ತೊಂದೇ ವೀಲ್ಯ ಬರಲಂದ ||