ಅತ್ಯಮ್ಮ ಅತ್ಯಮ್ಮ         ಲೈಲೇದುಂಬಿ
ಹಿತ್ತಲಿಗೆ ಹಾವುಬಂತು     ”
ಹಿತ್ತಲಿಗೆ ಹಾವುಬಂತು     ”
ಎಡಗಾಯ ಒಡೆಯಮ್ಮ    ”
ಎಡಗಾಯ ಒಡ್ಹಿದ್ರೆ         ”
ಸೆಡೆಯೆತ್ತಿ ಬರುತಾದೆ      ”
ಸೆಡೆಯೆತ್ತಿ ಬಂದಾರೆ       ”
ನೀ ಹಿಡುಗಲಲ್ಲಿ ಹೊಡೆಯಮ್ಮ       ”
ಹಿಡುಗಲಲ್ಲಿ ಹೊಡೆದಾರೆ   ”
ಅದು ಸೆಡೆಯೆತ್ತಿ ಆಡುತಾದೆ         ”
ಸೆಡೆಯೆತ್ತಿ ಆಡಿದರೆ         ”
ನೀ ಕಡ್ಡೀಲಿ ಬಡಿಯಮ್ಮ    ”
ಕಡ್ಡೀಲಿ ಬಡಿದರೆ  ”
ಅದು ಸತ್ತೋಯ್ತು ಅತ್ಯಮ್ಮ         ”
ಸತ್ತೋಯ್ತು ಅತ್ಯಮ್ಮ      ”
ನೀ ಎಳಕೊಂಡು ಬಾರಮ್ಮ          ”
ಎಳಕೊಂಡು ಬಂದಿನ್ನು     ”
ನೀ ಒಪ್ಪಾಯ ಮಾಡೆಂದ  ”
ಒಪ್ಪಾಯ ಮಾಡಿಬಿಟ್ಟು     ”
ನೀ ಅಡುಗಾಯ ದುಡುಗೆಂದ        ”
ಅಡುಗೇಯ ಮಾಡಕ್ಕೆ      ”
ನನ್ಗೆ ಬರದಿಲ್ಲ ಅತ್ಯಮ್ಮ    ”
ಬರದಿದ್ದರೆ ಅದುಗಾಯ     ”
ನಾ ಹೇಳಿಕೊಟ್ಟೆ ಮಾಡೆಂದ         ಲೈಲೇದುಂಬಿ
ಅದರ ಕಳ್ಳನ್ನು ತೆಗೆಯೆಣ್ಣೆ  ”
ಅದ ಕಜ್ಜಾಯ ಮಾಡೆಂದ  ”
ಅದರ ಹೊಟ್ಟಾಯ ತೆಗೆದಿನ್ನು        ”
ರೊಟ್ಟಿಯ ಸುಡೆಂದ        ಲೈಲೇದುಂಬಿ
ಅದರ ಹಲ್ಲನ್ನು ತೆಗೆದಿನ್ನ   ”
ನೆಲ್ಲಕ್ಕಿ ಅಣ್ಣವೊಂದ        ”
ಅದರ ತಲೆಯನ್ನು ತೆಗೆದಿನ್ನು        ”
ತಾಳ್ದೂವ ಮಾಡೆಂದ      ”
ಅದರ ನಾಲಿಗೆ ತೆಗೆದಿನ್ನು  ”
ನೀ ದ್ವಾಸೇಯ ಮಾಡೆಂದ ”
ಅಂದ ಚೆಂದದ ಅಡಿಗೆಯ  ”
ಅವ ಮಾಡೀಳು ಚಿಕ್ಕೊನ್ನಿ  ”
ಅವ ಅಡುಗಾಯ ದುಡಿಗಿನ್ನು         ”
ಅವ್ರ ಮಾವಿದ್ದ ಅರಮನೆಗೆ ”
ಮಾವಯ್ಯ ಮಾವಯ್ಯ     ”
ನೀವು ಊಟಕ್ಕೆ ಬಣ್ಯಪ್ಪ    ”
ಊಟಕ್ಕೆ ಬರುವಾರೊ      ”
ನಾ ಸ್ವಾಮಾರ ಒಂದೊತ್ತು          ”
ಸ್ವಾಮಾರ ಒಂದೊತ್ತು     ”
ನಿಮ್ಮ ತಾಯಮ್ನ ಕರೆ ಎಂದ        ”
ಅತ್ಯಮ್ಮ ಅತ್ಯಮ್ಮ         ”
ನೀ ಊಟಕ್ಕೆ ಬಣ್ಣ್ಯವ್ವ      ”
ಊಟಕ್ಕೆ ಬರುವಾರೊ      ”
ನಾನು ಮಂಗಳವಾರ ಒಂದೊತ್ತು   ”
ಮಂಗಳವಾರ ಒಂದೊತ್ತು ”
ನೀನು ಮೈದ ಮಲ್ಲಿಗೆ ದೊರೆ        ”
ಅವರು ಚೆಂಡಾಡು ಹೋಗವ್ರೆ       ”
ಅವರನ್ನು ಕರೆಯಮ್ಮ      ”
ಹಾಗಂತ ಹೇಳಿದ ”
ನಾ ಮಾಡಿದಂತಲಡುಗೇಯ        ”
ಇವರು ಒಬ್ಬಾರು ಉಣ್ಣಲ್ಲ  ”
ಒಬ್ಬಾರು ಬರಲಿಲ್ಲ          ”
ನೀ ಮಾಡಿದಂತ ಅಡುಗೇಯ        ”
ನಾನೇಯ ಉಣತೀನ      ”
ಅವ ಅರಮನೆಗೆ ಬಂದಾಳು         ”
ಅವಳು ಗಂಡಿದ್ದ ಅರಮನೆಗೆ         ಲೈಲೇದುಂಬಿ
ಅವಳು ಬಂದಿನ್ನು ಚಿಕ್ಕೊನ್ನಿ          ”
ನನ್ನ ಗಂಡ ರಂಗದ ಸ್ವಾಮಿ         ”
ಅವ್ರು ದಂಡಿಗೆ ಹೋಗವ್ರೆ   ”
ಒಂದು ಚಿತ್ರಪಟವ ಬರದಾಳೊ     ”
ನಮ್ಮ ಅತ್ಯಮ್ಮ ಅಂಬಾಳು          ”
ಹಾವಿನಡುಗೇಯ ”
ಅವ್ಳು ಮಾಡ್ಸೀರು ಅತ್ಯಮ್ಮ          ”
ಒಂದು ಚಿತ್ರಪಟವ ಬರದಾಳೋ    ”
ಚಿತ್ರಪಟವ ಬರದಿನ್ನು      ”
ಚಿಣ್ಣಾದ ಗಿಂಡೀಲಿ ”
ಅವ್ಳು ಪನ್ನೀರು ತುಂಬೀಳು ”
ಅವ್ಳು ಗಾಲೀಯ ಅರವಾಣ ”
ಅವ್ಳು ಕೀಲೀನ ತೇವಟಿಗೆ   ”
ಅವ್ಳು ಊಟಕ್ಕೆ ಬಡಿಸಾಳು ”
ಊಟಕ್ಕೆ ಬಡಿಸಿನ್ನು         ”
ಅವ್ಳು ಊಟಾವ ಮಾಡಿನ್ನು ಲೈಲೇದುಂಬಿ
ನಾ ಮಾಡಿದಂತ ಅಡುಗೇಯ       ”
ನಾನೇಯೆ ಉಣುತೀನಿ     ”
ನಾ ಮಾಡಿದಂತ ಅಡುಗೇಯ       ”
ಇವರು ಒಬ್ಬಾರು ಉಣಲಿಲ್ಲ         ”
ನಾನೇಯೆ ಉಣುತೀನಿ     ”
ಅವ ಒಂದು ತುತ್ತ ಹಾಕುತವ್ಳೆ       ”
ಅವ್ಳು ಇನ್ನೊಂದು ತುತ್ತು ಹಿಡಿದವ್ಳೆ  ”
ಅದು ಹ್ಯಾಗ್ಯಾಗ ಆಯಿತೋ         ”
ಅವಳು ಮುತ್ತಿನ ಮಂಜೆರಗ         ”
ಅವ ಹಾಸೀಳೊ ಚಿಕ್ಕೊನ್ನಿ ”
ಅವ್ಳು ಬಲಮಗ್ಲಾಗೆ ಮಲಗವ್ಳೆ        ”
ಬಲ ಮಗ್ಲಾಗೆ ಮನಗವ್ಳೆ    ”
ಅವ ಸತ್ತೋದ ಚಿಕ್ಕೊನ್ನಿ   ”
ಮೈದ ಮಲ್ಲಿಗೆ ದೊರೆ      ”
ಚೆಂಡಾಡಕ್ಕೋಗಿದ್ದು        ”
ಒಂದು ಲೆಗ್ಗಾಡಕ್ಕೋಗಿದ್ದು  ಲೈಲೇದುಂಬಿ
ಅವ್ನು ಅರಮನೆಗೆ ಬಂದಾನು        ”
ಆ ಚಿತ್ರಪಟವ ನೋಡುತಾನೆ        ”
ಆ ಚಿತ್ರಪಟವ ನೋಡುಬುಟ್ಟು       ”
ಎಡಕ ಬಲಕ ತಿರುಗಿದ     ”
ಅವರತ್ತಿಗೆ ನೋಡಿದ       ”
ಕಣ್ಣಲ್ಲಿ ಕಂಡನಲ್ಲ  ”
ಅವ್ನು ಬಾಳ ಶ್ವಾಕ ಮಾಡುತವ್ನೆ     ”
ಅವ ಬಾಯ್‌ಬಾಯ ಬಡಕೊಂಡ    ”
ನಮ್ಮ ಅಣ್ಣಯ್ಯ ದಂಡಿಗೆ ಹೋದ    ”
ನಮ್ಮತ್ತಿಗೆ ಸತ್ತೋದ       ಲೈಲೇದುಂಬಿ
ಅವರ ತಾಯಿದ್ದ ಅರಮನೆಗೆ         ”
ತಾಯಮ್ಮ ತಾಯಮ್ಮ     ”
ನಮ್ಮತ್ತಿಗೆ ಸತ್ತೋದ       ”
ನಮ್ಮಣ್ಣಯ್ಯ ದಂಡಿಗೆ ಹೋದ       ”
ನಮ್ಮತ್ತಿಗೆ ಕೊಂದಲ್ಲ       ”
ನೀನು ಹಾಳಾದ ಪಾಪಿಮುಂಡೆ      ”
ಚಿಕ್ಕವನೇ ನನಕಂದ       ”
ನೀ ಗಾಲಾಟೆ ಮಾಡುಬೇ  ”
ನೀ ಊರಿಗೆ ಸುದ್ದಿ ಕೊಡಬೇಡ       ”
ನೀ ಸುಮನೀರು ನನಕಂದ ”
ನೀ ಹಿತ್ತಲಿಗೆ ಹೋಗಪ್ಪ    ”
ಒಂದು ಕಳ್ಳಿ ಮರನ ತತ್ತಪ್ಪ         ”
ಕಳ್ಳಿಮರನ ತತ್ತಪ್ಪ         ”
ನೀ ಒಂದು ಕಬ್ಳಿ ಹಂಬ ತತ್ತಪ್ಪ      ”
ನೀ ಚಟ್ಟಾಯ ಕಟ್ಟಯ್ಯ     ”
ಚಟ್ಟಾಯ ಕಟ್ಟುಬುಟ್ಟು      ”
ನೀ ಹೊತ್ತು ಕೊಂಡು ಹೋಗಪ್ಪ     ”
ಹೊತ್ತುಕೊಂಡು ಹೋಗಿನ್ನು          ”
ಅಲ್ಲಿ ಚಟ್ಟಾಯ ಇಳುಕಪ್ಪ  ”
ಬಿಟ್ಟಾಯ ಇಳುಕಬುಟ್ಟು    ”
ನೀ ಸುಟ್ಟು ವಾಮಾಯ ಮಾಡಿ      ”
ನನ್ಗೆ ಬೂದಿಯ ತಂದುಕೊಡು        ಲೈಲೇದುಂಬಿ
ತಾಯಮ್ಮ ತಾಯಮ್ಮ     ”
ಅವಳ ಮೂಗಿನೊಳಗೆ ಮೂರುಕಾಸ ”
ಆ ಮೂರುಕಾಸ ಇದ್ದಾರ   ”
ನಾ ಮುತ್ತುಕ್ವಾಟೆ ಗೆಯಿಸ್ತೀನಿ        ”
ನಮ್ಮ ಸ್ವಂತ ಅತ್ತಿಗಮ್ಮ   ”
ಒಂದು ಕಾಸು ಕೊಡವ್ವ    ”
ಒಂದು ಕಾಸು ಇದ್ದರ       ”
ನಾ ಚಿತ್ರಕೊಳಾನ ತೆಗಿಸ್ತೀನಿ        ”
ಚಿತ್ರಕೂಳನ ತೆಗೆಸೀನು    ”
ಅವ್ಳ ಮೈದ ಮಲ್ಲಿಗೆ ದೊರ ”
ಅವ್ನು ಬಾಳಾ ಶ್ವಾಕ ಮಾಡುಕ್ಕೊಂಡು        ”
ಅವ್ನು ಬಿದ್ದು ಬಿದ್ದು ಹೊರಳೀನು      ”
ಬಿದ್ದು ಬಿದ್ದು ಹೊರಳಿನ್ನು    ”
ಅವ್ನು ಬಂದಾನು ಅರಮನೆಗೆ        ”
ಅವ್ಳು ಪಾದಾಯ ಹಿಡಕ್ಕೊಂಡು      ”
ನಮ್ಮತ್ತಿಗೆ ಸತ್ವಂತ        ”
ನೀ ಸತ್ವಂತಳಾದರೆ       ”
ನಾ ಕಾಸಿನಾಟಕ್ಕೆ ಹೊಯ್ತೀನಿ       ”
ಮೂರು ಕಾಸ ಸಿಕ್ಸವ್ವ      ”
ಇಂವ ಸತ್ತಹೆಣ್ಣ ಮಡಗ್ಬುಟ್ಟು         ”
ಅವ್ನು ಕಾಸೀನ ಮಳುಗೇಲಿ ”
ಅಂವ ಕಾಸಿನಾಟಕ್ಕೊಯ್ತ್ವನೆ        ”
ಅಂವ ಆಡ್ತಾನೆ ಚಿಕ್ಕಂವ   ”
ಕಾಸೀನ ಮಳಿಗೇಲಿ        ”
ಅಲ್ಲಿ ಮೂರು ಕಾಸು ಸಿಕ್ಕೀತು       ”
ಅದ ತಕ್ಕಂಡು ಬಂದಾನು  ”
ಅವಳ ಮೂಗಿನೊಳಗೆ ಹಾಕುತಾನೆ ”
ಮೂಗಿನೊಳಗೆ ಹಾಕುಬುಟ್ಟು        ”
ಅವ್ಳ ಮೈಕೈ ತೊಳೆದಾನೊ         ”
ಅವ್ನು ಚಟ್ಟಾಯ ಕಟ್ಟುತ್ತಾನೆ         ”
ಹಿತ್ತಲಿಗೆ ಹೋಗಿನ್ನು        ”
ಕಳ್ಳಿ ಮರನ ತತ್ತಾನ       ಲೈಲೇದುಂಬಿ
ಕಬ್ಳಿ ಹಂಬ ತಂದಿನ್ನು      ”
ಅವ್ನೂ ಚಟ್ಟಾಯ ಕಟ್ಟುತಾನೆ        ”
ಅವ್ನು ಹೆಣವಿನ್ನು ಹಿಡಿದಾನೊ        ”
ಆ ಚಟ್ಟದ ಮ್ಯಾಕ್ಕೆ ಮಣಗಸ್ತವ್ನೆ      ”
ಚಟ್ಟದ ಮ್ಯಾಲೆ ಮಣಗಸ್ಬುಟ್ಟು       ”
ತನ್ನ ಮೀರಾನೆ ಒಲ್ಲೀಯ   ”
ಅವ್ಳ ಮೊಕದತುಂಬ ಮುಚ್ಚುತವ್ನೆ   ”
ಅಂವ ಮೊದಕತುಂಬ ಮುಚ್ಚುಬುಟ್ಟು          ”
ಹೊತ್ತುಕೊಂಡು ಹೊಯ್ತವ್ನೆ ”
ಹೊತ್ತುಕೊಂಡು ಹೋಗಿನ್ನು          ”
ಆ ಬಲಮಕಾಳ ಗುಡಿಮುಂದೆ        ”
ಚಟ್ಟಾಯ ಇಳಿಕ್ತವ್ನೆ         ”
ಚಟ್ಟಾಯ ಇಳುಕ್ಬುಟ್ಟು     ”
ಅವನು ಕೂತುಕೊಂಡ     ”
ಅವಳ ಪಾದಾಯ ಹಿಡುಕ್ಕೊಂಡು    ”
ಅವ್ನು ಬಾಳ ಶ್ವಾಕ ಮಾಡ್ತಾನೆ       ”
ಅವ್ನು ಬಾಳಾ ಶ್ವಾಕ ಮಾಡ್ಕೊಂಡು ”
ನಮ್ಮತ್ತಿಗೆ ಸತ್ವಂತ        ”
ನೀ ಸತ್ವಂತ ಆದರೆ        ”
ನಾ ಆಡೀದ ಮಾತಿಗ      ”
ನೀ ತಪ್ಪು ಬೇಸ ಅತ್ತಿಗಮ್ಮ ”
ನಿನ್ನ ಕಣ್ಣೆರಡು ಅತ್ತಿಗಮ್ಮ  ”
ಹಾಲುಗೊಳ ನೀರುಗೊಳ  ”
ನಿನ್ನ ತೊಡೆ ಏಡು ಅತ್ತಿಗಮ್ಮ        ”
ತೆಂಗಿನ ಮರ ಆಗಲಿ       ”
ನಿನ್ನ ತೋಳು ಎರಡು ಅತ್ತಿಗಮ್ಮ    ”
ಬಾಳಾಯ ವನವಾಗಲಿ    ”
ನಿನ್ನ ಎದೆಯೆರಡು ಅತ್ತಿಗಮ್ಮ        ”
ಎರಡು ಗಿಣಿಗಾಳು ಆಗುಲೆನ್ನ        ”
ಗಿಣಿಗಳು ಆಗಿನ್ನು ”
ಬಾಳಾಯ ವನದಲ್ಲಿ        ”
ಕೂತಿಕೊಳ್ಳಿ ಅತ್ತಿಗಮ್ಮ     ಲೈಲೇದುಂಬಿ
ನಿನ್ನ ತಲೆ ಎರಡು ಅತ್ತಿಗಮ್ಮ        ”
ಸೂರಾಯಿ ಮರನಾಗಲಿ   ”
ಅವ ಮರಗಮಲ್ಲಿಗೆ ವನ   ”
ನೀ ಆಡಿದ ಮಾತಿಗೆ        ”
ನೀ ತಪ್ಪುಬ್ಯಾಡ ಅತ್ತಿಗಮ್ಮ ”
ಅಂವ ಮರಳಿನ್ನು ಬಗುದಿನ್ನು        ”
ಆ ಹೆಣವಿನ್ನು ಇಡುದಾನೊ ”
ಆ ಹೆಣವಿನ್ನು ಇಡಿದಿನ್ನು    ”
ಸಾಮಾಧಿ ಒಳಕಿನ್ನು       ”
ಅವ್ನು ಮಣಗಸ್ತವ್ನೆ ”
ಹೆಣವಿನ್ನು ಮಣಗಸ್ಬಿಟ್ಟು    ”
ಮರಳನ್ನು ತಳ್ಳುತ್ತಾನೆ     ”
ಅವ್ನು ಸಮಾಧಿ ಕಟ್ಟುತ್ತಾನೆ ”
ಸಾಮಾಧಿ ಕಟ್ಟುಬುಟ್ಟು     ”
ಅಂವ ಪುಟ್ಟೀಗೆ ಮರಳನ್ನು ”
ತುಂಬ್ಕೊಂಡು ಚಿಕ್ಕಂವ    ”
ಅವರ ತಾಯಿ ಇದ್ದ ಅರಮನೆಗೆ     ಲೈಲೇದುಂಬಿ
ಅಂವ ಬಂದಾನೊ ಚಿಕ್ಕಂವ         ”
ತಾಯಮ್ಮ ತಆಯಮ್ಮ    ”
ನಮ್ಮತ್ತಿಗೆ ಸುಟ್ಟೆವ್ವ        ”
ನಾ ಸುಟ್ಟು ಹ್ವಾಮಾಯ ಮಾಡಿ     ”
ನಾ ಬೂದಿಯ ತಂದೆವ್ವ    ”
ಸುಮ್ಮನೀರು ನನ ಕಂದ   ”
ನೀ ಗಾಲಾಟೆ ಮಾಡುಬೇಡ          ”
ನೀ ಊರಿಗೆ ಸುದ್ದಿ ಕೊಡಬೇಡ       ”
ಮೈದ ಮಲ್ಲಿಗೆ ದೊರೆ      ”
ಅಂವ ಆಡಿದ ಮಾತಿಗೆ     ”
ಅವ ತಪ್ಪನಿಲ್ಲ ಅತ್ತಿಗಮ್ಮ  ”
ಅವ್ಳ ಕಣ್ಣೆರಡು ಅತ್ತುಗಮ್ಮ ”
ಅವು ಹಾಲುಗೊಳ ನೀರುಗೊಳ      ”
ಅವ್ಳ ತೊಡೆ ಎರಡು ಅತ್ತುಗಮ್ಮ     ”
ಅವು ತೆಂಗಿನ ವನವಾದೊ ಲೈಲೇದುಂಬಿ
ಅವ್ಳ ತೋಳೆರಡು ಅತ್ತುಗಮ್ಮ       ”
ಬಾಳಾಯ ವನವಾದೊ    ”
ಅವ್ಳ ಎದೆಯೆರಡು ಅಂಬಾವು        ”
ಏಡು ಗಿಣಿಗಾಳು ಆದವಲ್ಲೊ         ”
ಅವು ಬಾಳಾಯ ವನದಲ್ಲಿ  ”
ಏಡು ಗಿಣಿಗಳು ಕೂತಾವೆ  ”
ಅವ್ಳ ತಲೆಯೆರಡು ಅಂಬಾವು        ”
ಸೂರಾಯ ವನವಾದೊ    ”
ಮರಗ ಮಲ್ಲಿಗೆ ಜಾಜಿ      ”
ದಂಡಿಗೆ ಹೋಗಿರುವ       ”
ರಂಗಾದ ಸ್ವಾಮಿಗೆ         ”
ಅವರ‍್ಗೆ ಕೆಟ್ಟಸ್ವಪ್ನ ಬಿತ್ತಲ್ಲೊ ”
ಒಂದು ಕೇಡುಸ್ವಪ್ನ ಬಿತ್ತಲ್ಲೊ         ”
ಅವ್ರು ಮಂಚದ ಮ್ಯಾಗೆ ಮಲಗಿದ್ದು  ”
ಅವ್ರು ದಗ್ಗಾನೆ ಎದ್ದರಲ್ಲೊ   ”
ಅವ್ರು ಜಲುಜಲುನೆ ಬೆವತಾರೊ     ”
ಅವ್ರು ಕಟುಕಟುನೆ ಒದರ‍್ತಾರೆ        ”
ಕಟುಕಟುನೆ ಒದರೀರು     ”
ಅವ್ರು ಆಳುಕಾಳು ಕರದಾರು         ”
ಅವ್ರು ದಂಡುದಾಳಿ ಕರದಾರು       ”
ಅವ್ರು ಏನೆಂದು ಹೇಳೀರು  ”
ನಾ ಊರಿಗೆ ಹೋಗುತೀನಿ ”
ನಂಗೆ ಕೆಟ್ಟ ಸ್ವಪ್ನ ಬಿದ್ದಾದೆ  ”
ನಿಮ್ಮ ದಂಡುದಾಳಿ ಜ್ವಾಕೇಯ      ”
ನಿಮ್ಮ ಆಳುಕಾಳು ಜ್ವಾಕೇಯ       ”
ನಾವು ಊರಿಗೆ ಹೊಯ್ತೀವಿ ”
ಅವ್ರು ಕುದ್ರೆಸಾಲಿಗೆ ಹೋದುರು      ”
ಕುದ್ರ ಸಾಲಿಗೆ ಹೋಗಿನ್ನು  ”
ಕುದುರೇಯ ಹಿಡಕ್ಕೊಂಡು ”
ಕಡುವಾಣ ಹಾಕುತವ್ರೆ     ”
ಕಡುವಾಣ ಹಾಕುಬುಟ್ಟು   ”
ಅವರು ಚಿನ್ನದ ಕತ್ತಿ ತೆಗೆದಾರೊ     ಲೈಲೇದುಂಬಿ
ಚಿನ್ನದ ಕತ್ತಿ ತೆಕ್ಕಂಡು      ”
ಅವ್ರು ದಟ್ಟಿಗೆ ಸುತ್ತುತವ್ರೆ   ”
ದಟ್ಟಿಗೆ ಸುತ್ತುಕೊಂಡು      ”
ಅವ್ರು ಹತ್ತು ವರ್ಷದ ಪಯಣವ      ”
ಅವ್ರು ಐದು ವರ್ಷಕೆ ತುಳುದಾರೊ   ”
ಅವ್ರು ಐದು ವರ್ಷದ ಪಯಣವ      ”
ಅವ್ರು ಮೂರ ವರ್ಷಕೆ ತುಳುದಾರೊ ”
ಅವ್ರು ಒಂದು ವರ್ಷ್ಕೆ ಬರುತಾರೆ     ”
ಅವ್ರು ಎಂಟು ಜಿನ್ಕೆ ತುಳುದಾರೊ   ”
ಎಂಟು ಜಿನದ ಪಯಣವ   ”
ಅವ್ರು ಒಂಜಿನ್ಕೆ ಬಂದಾರೊ          ”
ಒಂಜಿನ್ದ ಪಯಣವ         ”
ಅವ್ರು ಬಂದಾರೊ ರಂಗಯ್ಯ         ”
ಬಂದಿನ್ನು ರಂಗಯ್ಯ        ”
ಬಲಮಕಾಳಿ ಗುಡಿಮುಂದೆ ”
ಪಾದ್ರಾಕ್ಷ ಮರನಯ್ಯ      ”
ಪಾದ್ರಾಕ್ಷ ಮರದಲಿ        ”
ಕುದುರೆಯ ಇಳಿದಾರೊ    ”
ಕುದುರೇಯ ಇಳಿದಿನ್ನು     ”
ಆ ಸೂರಾಯಿ ಮರಕಿನ್ನು   ”
ಕುದುರೆಯ ಕಟ್ಟುಬುಟ್ಟ     ”
ಕುದುರೆಯ ಬುಟ್ಟುಬುಟ್ಟು   ”
ಬಹಳ ಯೋಚನೆ ಮಾಡಿಕ್ಕೊಂಡು   ”
ನಾ ದಂಡಿಗೆ ಹ್ವಾಗಾಗ     ”
ಹಾಲಗೊಳಿಲ್ಲ ನೀರ‍್ಗೊಳಿಲ್ಲ ”
ಸೂರಾಯಿ ಮರನಿಲ್ಲ       ”
ತೆಂಗಿನ ವನವಿಲ್ಲ ”
ಈ ಬಾಳಾಯ ವನವಿಲ್ಲ    ”
ಯೋಚನೆ ಮಾಡಿಕ್ಕೊಂಡು ”
ಆ ಸಾಮಾಧಿ ಮ್ಯಾಗಿನ್ನು   ”
ತನ್ನ ಪಟ್ಟವಸ್ತ್ರ ಹಾಸುಬುಟ್ಟ         ”
ತನ್ನ ಪಟ್ಟವಸ್ತ್ರ ಹಾಸುಬುಟ್ಟು        ಲೈಲೇದುಂಬಿ
ಸಮಾಧಿ ಕಾಣುದಯೆ      ”
ಅವ್ನು ಮಣಗವ್ನೆ ರಂಗಯ್ಯ ”
ಬಾಳಾಯ ವನದಲ್ಲಿ        ”
ಏಡು ಗಿಣಿಗಳು ಕೂತಾವೆ  ”
ಗಿಣಿಗಳು ಕೂತುಕೊಂಡು   ”
ಅವು ಒಂದಕ್ಕೊಂದು ನೆಗನಾಡಿ     ”
ಅವು ಕಿಲಕಿಲನೆ ನೆಗನಾಡಿ ”
ಅಕ್ಕಯ್ಯ ಅಕ್ಕಯ್ಯ         ”
ಒಂದು ಪರಸಂಗ ಹೇಳಕ್ಕ ”
ಹಿಂದ ಹ್ವಾದದ ಹೇಳುಲೆ   ”
ಮುಂದೆ ಬರಾದ ಹೇಳುಲೆ ”
ಮುಂದೆ ಬರುವದ ಯಾರು ಬಲ್ಲರು  ”
ಹಿಮದೆ ಹ್ವಾದದ ಹೇಳುಮಂತೆ      ”
ಪರಸಂಗ ಹೇಳುತೀನಿ     ”
ನೀ ಗ್ಯಾನೇಸಿ ಕೇಳಕ್ಕ      ”
ಹುಚ್ಚಿನ ಬಾವಯ್ಯ         ”
ಬೆಪ್ಪಿನ ಬಾವಯ್ಯ ”
ಅವ್ರು ದಂಡಿಗೆ ಹ್ವಾದರಂತೆ ”
ಅವ್ರು ಅತ್ತಮ್ಮ ಅಂಬವಳು ”
ಹಾವಿನಲಡುಗೇಯ        ”
ಅವ್ ಮಾಡ್ಸೀಳು ಅತ್ಯಮ್ಮ          ”
ಲವ್ ಮಾಡ್ಸಿನ್ನು ಅತ್ಯಮ್ಮ ”
ಲವ್ ಮಾಡ್ಸಿನ್ನು ಅತ್ಯಮ್ಮ ”
ಅಂದ ಚೆಂದದಲಡುಗೆ      ”
ಅವ್ಳು ಮಾಡೀಲೋ ಸತ್ವಂತ        ”
ಅವ್ಳು ಮಡಗ್ಬುಟ್ಟು          ಲೈಲೇದುಂಬಿ
ಅವ್ಳು ಅತ್ತಿದ್ದ ಅರಮನೆಗೆ   ”
ಅವ್ಳು ಹ್ವಾದಳು ಚಿಕ್ಕೊನ್ನಿ  ”
ಹೋಗಿನ್ನು ಚಿಕ್ಕೊನ್ನಿ       ”
ನೀವು ಅತ್ತಮ್ಮ ಅತ್ತಮ್ಮ   ”
ನೀವು ಊಟಕ್ಕೆ ಬಣ್ಣ್ಯೆವ್ವ    ಲೈಲೇದುಂಬಿ
ನಾ ಊಟಕ್ಕೆ ಬರುವಲ್ಲೆ    ”
ಸ್ವಾಮಾರ ಒಂದೊತ್ತು     ”
ನಿಮ್ಮಾವನ ಕರೆಯವ್ವ     ”
ಮಾವಯ್ಯ ಮಾವಯ್ಯ     ”
ನೀವು ಊಟಕ್ಕೆ ಬಣ್ಣ್ಯಪ್ಪ    ”
ನಾ ಊಟಕ್ಕೆ ಬರುವಲ್ನೊ  ”
ನಾ ಮಂಗಳವಾರ ಒಂದೊತ್ತು      ”
ನನ್ನ ಮೈದ ಎಲ್ಲಿಗೆ ಹೋದ          ”
ಚೆಂಡಾಡಕ್ಕೋಗವ್ರೆ        ”
ಅವ್ರನ್ನು ಕರೆಯಮ್ಮ        ”
ನೀ ಹುಚ್ಚಿನ ಬಾವಯ್ಯ     ”
ನೀ ಬೆಪ್ಪಿನ ಬಾವಯ್ಯ      ”
ನಾ ಪರಸಂಗ ಹೇಳುತೀನಿ ”
ನೀ ಗ್ಯಾನೇಸಿ ಕೇಳಪ್ಪ     ”
ಮೈದ ಮಲ್ಲಿಗೆ ದೊರ      ”
ಚೆಂಡಾಡಕ್ಕೋಗಿದ್ದು        ”
ಒಂದು ಲೆಗ್ಗ ಅಡಕ್ಕೋಗಿದ್ದು         ”
ಅವ್ರು ಮನೆಗಿನ್ನು ಬರುತವ್ರೆ          ”
ಮನೆಗಿನ್ನು ಬಂದಿನ್ನು       ”
ಅವ್ರ ಅತ್ತಿಗೆ ಸಾರುತವ್ರೆ    ”
ನಮ್ಮ ಅತ್ತಿಗೆ ಸತ್ವಂತೆ     ಲೈಲೇದುಂಬಿ
ಇವ್ರು ನೀರಿಗೆ ಹೋಗವ್ರೆ    ”
ಅವ್ರು ದಾರಿ ದಆಇ ನೋಡುತವ್ರೆ    ”
ದಾರಿ ದಾರಿ ನೋಡುಬುಟ್ಟು         ”
ಅವ್ರ ತಾಯಿದ್ದು ಅರಮನೆಗೆ         ”
ಹ್ವಾದಾನು ಚಿಕ್ಕಂವ        ”
ಹೋಗಿನ್ನು ಚಿಕ್ಕಂವ        ”
ಬಹಳ ಹೊಟ್ಟಾಯ ಹಸೀತದೆ       ”
ನನ್ಗೆ ಊಟಕ್ಕೆ ಇಕ್ಕವ್ವ      ”
ಆಗಂತ ಸಾರುತವ್ನೆ        ”
ನೀ ಅರಮನೆಗೆ ಹೋಗಪ್ಪ ”
ನಿಮ್ಮತ್ತಿಗೆ ಅಲ್ಲವ್ಳೆ ”
ನಿಮ್ಮತ್ತಿಗೆ ಅವಳಪ್ಪ        ”
ಅರಮನೆಲಿ ಅವಳಪ್ಪ      ”
ನೀ ಊಟಮಾಡು ನನ ಕಂದ        ”
ದಾರುದಾರಿ ನೋಡುತಾನೆ          ”
ಅವನು ಏಡುಕೂಗು ಕೂಗುತಾನೆ    ”
ಏಡುಕೂಗು ಕೂಗಿಬಿಟ್ಟು    ”
ಮನೆಗಿನ್ನು ಬಂದಿನ್ನು       ”
ಅವರಣ್ಣಿದ್ದಲರಮನೆಗೆ      ”
ಅಂವ ಹ್ವಾದನು ಚಿಕ್ಕಂವ  ”
ಹ್ವಾಗಿನ್ನು ಚಿಕ್ಕಂವ         ”
ಚಿತ್ರಪಟವ ನೋಡುತವ್ನೆ   ”
ಚಿತ್ರಪಟವ ನೋಡುಬುಟ್ಟು ”
ಅವ್ನು ಎಡಕೆಬಲಕೆ ತಿರುಗಿಬುಟ್ಟು     ”
ಅವ್ನು ಎಡಕೆಬಲಕೆ ತಿರುಗುನೋಡಿ   ಲೈಲೇದುಂಬಿ
ಅವರತ್ತಿಗೆ ಸತ್ವಂತೆ        ”
ಅವನು ಕಣ್ಣಲ್ಲಿ ಕಂಡನಲ್ಲೊ ”
ಕಣ್ಣಲ್ಲಿ ಕಂಡ್ಕಂಡು ”
ಅವ್ನು ಬಾಯ್ ಬಾಯ ಬಡುತವ್ನೆ    ”
ಬಾಯ್ ಬಾಯ ಬಡುಕ್ಕೊಂಡು      ”
ನಮ್ಮಣ್ಣಯ್ಯ ದಂಡಿಗ್ಹೋದ ”
ನಮ್ಮತ್ತಿಗೆ ಸತ್ತೋದ       ”
ಅಂವ ಹಾಗಂದು ಚಿಕ್ಕಂವ ”
ಬಾಳ ಗಲಾಟೆ ಮಾಡುತಾನೆ        ”
ನೀ ಹುಚ್ಚೀನ ಬಾವಯ್ಯ    ”
ನಾವ್ ಪರಸಂಗ ಹೇಳುತ್ತಿದ್ರೆ        ”
ನೀನು ನಿದ್ದೇಯ ಮಾಡೇಯ        ”
ನೀ ಬೆಪ್ಪೀನ ಬಾವಯ್ಯ    ”
ನೀ ಗ್ಯಾನೇಸಿ ಕೇಳಪ್ಪ     ”
ಹಾವಿನಲಡುಗೇಯ        ”
ಅವರತ್ತಮ್ಮ ಮಾಡ್ಸಿನ್ನು    ”
ಮಾಡಿದಂತೆ ಅಡಗಿನ್ನು    ಲೈಲೇದುಂಬಿ
ಅವರೊಬ್ಬರು ಉಣ್ದೆಹ್ವಾದ್ರು          ”
ಒಬ್ಬಾರು ಬರಲಿಲ್ಲ          ”
ಅವಳೇಯೆ ಉಂಡಾಳೊ   ”
ಅವ್ಳು ಸತ್ತೋದ ಚಿಕ್ಕೊನ್ನಿ  ”
ನೀ ಹುಚ್ಚಿನ ಬಾವಯ್ಯ     ”
ನೀ ಬೆಪ್ಪಿನ ಬಾವಯ್ಯ      ”
ದಂಡಿಗೆ ಹ್ವಾದರಂತೆ       ”
ನೀ ಸಾಮಾಧಿ ಕಾಣದಲೆ   ”
ನೀ ನಿದ್ದೆಯ ಮಾಡೇಯ   ಲೈಲೇದುಂಬಿ
ಅವು ಹಾಗಂದು ಗಿಳಿಗಳು  ”
ಅವು ಒಂದಕ್ಕೊಂದು ಅತ್ತಿನ್ನು        ”
ಅವು ಪಟಪಟನೆ ಕಣ್ಣೀರ   ”
ಅವು ಅತ್ತಂತ ಕಣ್ಣೀರು     ”
ಅವ್ನ ಮ್ಯಾಗೆ ಬಿತ್ತಲ್ಲ        ”
ಅಂತು ನೋಡುತವ್ನೆ       ”
ಅಂತ್ಕಂಡು ನೋಡುಬುಟ್ಟು          ”
ಅವ್ನು ಉಸ್ಸಂತ ಏಳುತವ್ನೆ ”
ಎದ್ದಿನ್ನು ಕೂತುಕ್ಕೊಂಡು   ”
ಬಹಳ ಯೇಚಾನೆ ಮಾಡುತಾನೆ     ”
ಆ ಗಿಣಿಗಳು ಕೂತುಕ್ಕೊಂಡು        ಲೈಲೇದುಂಬಿ
ಸಮಾಧಿ ಮ್ಯಾಗಿನ್ನು       ”
ನೀ ಮಣಗಿದ್ದ ಬಾವಯ್ಯ   ”
ನೀ ಮ್ಯಾಲೀಕೆ ಏಳಪ್ಪ     ”
ಸಮಾಧಿ ನೋಡಯ್ಯ      ”
ಸಮಾಧಿ ನೋಡಿನ್ನು       ”
ರಂಗಯ್ಯ ಎದ್ದಾನು        ”
ಎದ್ದಿನ್ನು ರಂಗಯ್ಯ          ”
ಅವ್ನು ಎಡಕೆ ಬಲಕೆ ನೋಡುತಾನೆ   ”
ಅವ್ನು ಸಾಮಾಧಿ ಕಂಡನಲ್ಲೊ        ”
ಸಾಮಾಧಿ ಕಂಡುಕ್ಕೊಂಡು ”
ಬಾಳ ಶ್ವಾಕಾಯ ಮಾಡುಕೊಂಡು  ”
ಅವ್ನು ಮರಳನ್ನು ಬಗೆದಾನೊ        ಲೈಲೇದುಂಬಿ
ಹೆಣವಿನ್ನು ಕಿತ್ತಾನೊ       ”
ಹೆಣವಿನ್ನು ಕಿತ್ತಿನ್ನು          ”
ಮ್ಯಾಲೀಕಿ ಎತ್ತುತವ್ನೆ       ಲೈಲೇದುಂಬಿ
ಮ್ಯಾಲೀಕಿ ಎತ್ತುಕೊಂಡು   ”
ಅಂವ ತೊಡೆಯ ಮೇಲೆ ಕುಂಡಿಸ್ಕೊಂಡ      ”
ತೊಡೆಮೇಲೆ ಕುಂಡಿಸ್ಕೊಂಡು       ”
ಬಾಳ ಶ್ವಾಕಾಯ ಮಾಡುತವ್ನೆ      ”
ಅವ್ನು ಶೆಖೆಯನ್ನು ಹೂಡೆತವ್ನೆ       ”
ಬಾಳ ಕಿಚ್ಚನ್ನು ಮಾಡುತವ್ನೆ         ”
ಅವ್ನು ಅತ್ತಂತ ಕಿಚ್ಚನ್ನು     ”
ಆ ಪಾರೋತಿಗರುವಾಗಿ    ”
ಪಾರೋತಿ ಪರಮೇಶ್ವರರು ”
ಅವ್ರು ಅಲ್ಲಿಗೆ ಬರುತಾರೆ    ”
ಅವು ಅಲ್ಲಿಗೆ ಬಂದಿನ್ನು      ”
ಅವ್ರು ಮಂತ್ರಿಸಿ ಗುಳಿಗಿನ್ನು ”
ಗುಳಿಗೇಯ ಮಡಗಿದರು   ”
ಅವ್ಳು ಉಸ್ಸಂತ ಎದ್ದಾರೆ   ”
ಅವ್ಳ ಕತ್ತನ್ನು ತಬ್ಬುಕೊಂಡು         ”
ಬಾಳ ಶ್ವಾಕಾಯ ಮಾಡುತವ್ರೆ      ”
ಶ್ವಾಕಾಯ ಮಾಡುಕೊಂಡು         ”
ನಿನ್ನ ಹೊಡೆದವ್ರು ಯಾರೆಣ್ಣ ”
ನಿನ್ನ ಬಡದವ್ರು ಯಾರೆಣ್ಣ   ”
ನೀನು ನನ್ನೊಂದಿಗೆ ಅಡೆಣ್ಣೆ ”
ಯಾರೂವೆ ಹೊಡೆಲಿಲ್ಲ     ”
ಯಾರೂವಿ ಬಡಿನಿಲ್ಲ        ”
ಅವರತ್ತಮ್ಮ ಅಂಬಾರು    ”
ಅವ್ರು ಹಾವಿನಲ್ಲಡುಗೇಯ  ”
ಅವ್ರು ಮಾಡ್ಸೀರು ಅತ್ಯಮ್ಮ          ”
ನಂಗಡುಗೇಯ ಮಾಡಾದು          ”
ನಂಗೆ ಬರದಿಲ್ಲ ಅತ್ಯಮ್ಮ   ”
ಬರದಿದ್ದರೆ ಅಡುಗಾಯ     ”
ನಾ ಹೇಳಿಕೊಟ್ಟ ಮಾಡೆಂದ         ಲೈಲೇದುಂಬಿ
ಅದರ ಕಳ್ಳನ್ನು ತೆಗೆಯೆಣ್ಣೆ  ”
ಆದ ಕಜ್ಜಾಯ ಮಾಡೆಂದ  ”
ರೊಟ್ಟಿಯ ಸುಡೆಂದ        ”
ಅದರ ಹಲ್ಲನ್ನು ತೆಗೆದಿನ್ನು  ”
ನೆಲ್ಲಕ್ಕಿ ಅಣ್ಣವೊಂದ        ”
ಅದರ ತಲೆಯನ್ನು ತೆಗೆದಿನ್ನು        ”
ತಾಳ್ದೂವ ಮಾಡೆಂದ      ”
ಅದರ ನಾಲಿಗೆ ತೆಗೆದಿನ್ನು  ”
ನೀ ದ್ವಾಸೇಯ ಮಾಡೆಂದ ”
ಅಂದಚಂದದ ಅಡಿಗೆಯ   ”
ನಾ ಮಾಡಿಬುಟ್ಟು ಅಡಿಗೇಯ        ”
ನಾ ಊಟಕ್ಕೆ ಕರದಿನ್ನು     ”
ಅವ್ರು ಒಬ್ಬಾರು ಉಣಲಿಲ್ಲ  ”
ಅವ್ರು ಒಬ್ಬಾರು ಬರುನಿಲ್ಲ  ”
ನಾನೇಯೆ ಉಣುತೀನಿ     ”
ಮಾಡಿದಂತ ಅಡುಗೇಯ  ”
ನಾನೇಯ ಉಣುತೀನಿ     ”
ಹಾಗಂತ ಉಂಡೇನೊ     ”
ಉಂಡಿನ್ನು ನಾನಿನ್ನು       ”
ನಮ್ಮೈದಮಲ್ಲಿಗೆ ದೊರೆ    ”
ಚೆಂಡಡಾಡುಕ್ಕೋಗಿದ್ದು    ”
ಅವ್ರು ಲೆಗ್ಗ ಅಡಕ್ಕೋಗಿದ್ದು  ”
ಅವ್ರು ಮನಗಿನ್ನು ಬರುತವ್ರೆ          ”
ಮನೆಗಿನ್ನು ಬಂದಿನ್ನು       ”
ನಾ ಸತ್ತೋಗಿ ಮಣಗಿದ್ದಿ    ”
ಅವ್ರು ಒಂದು ಸಾರಿ ಸಾರುತವ್ರೆ     ”
ಒಂದು ಸಆರಿ ಸಾರಿಬುಟ್ಟು ”
ಇವ್ಳು ನೀರಿಗೆ ಹೋಗವ್ಳೆ    ”
ಅವ್ರು ದಾರಿದಾರಿ ನೋಡುಬುಟ್ಟು    ”
ಅವ್ರು ಏಡು ಕೂಗು ಕೂಗುತವ್ರೆ      ”
ಅವ್ರು ಅರಮನೆಗೆ ಬರುತವ್ರೆ         ”
ಅರಮನೆಗೆ ಬಂದಿನ್ನು      ಲೈಲೇದುಂಬಿ
ಅವ್ರು ಚಿತ್ರಪಟವ ನೋಡುತವ್ರೆ      ”
ಚಿತ್ರ ಪಟವ ನೋಡುಬುಟ್ಟು         ”
ಅವ್ರು ಎಡಕಬಲಕ ತಿರುಗಿನೋಡಿ    ”
ಅವ್ರು ಅತ್ತಿಗೆ ಕಂಡರಲ್ಲ     ”
ಅವ್ರು ಬಾಳ ಶ್ವಾಕ ಮಾಡುತವ್ರೆ     ”
ಅವ್ರು ಬಾಯ್‌ಬಾಯ ಬಡಕ್ಕೊಂಡ್ರು ”
ನಮ್ಮ ಅಣ್ಣಯ್ಯ ದಂಡಿಗೆ ಹೋದ    ”
ನಮ್ಮತ್ತಿಗೆ ಸತ್ತೋದ       ”
ಅವರ ತಾಯಿದ್ದ ಅರಮನೆಗೆ         ”
ತಾಯಮ್ಮ ತಾಯಮ್ಮ     ”
ನಮ್ಮತ್ತಿಗೆ ಸತ್ತೋದ       ”
ನಮ್ಮಣ್ಣಯ್ಯ ದಂಡಿಗೆ ಹೋದ       ”
ನಮ್ಮತ್ತಿಗೆ ಕೊಂದಲ್ಲ       ”
ನೀನು ಹಾಳಾದ ಪಾಪಿಮುಂಡೆ      ”
ಚಿಕ್ಕವನು ನನಕಂದ       ”
ನೀ ಗಾಲಾಟೆ ಮಾಡಬೇಡ ”
ನೀ ಊರಿಗೆ ಸುದ್ದಿ ಕೊಡಬೇಡ       ”
ನೀ ಸುಮನೀರು ನನಕಂದ ”
ನೀ ಹಿತ್ತಲಿಗೆ ಹೋಗಪ್ಪ    ”
ಒಂದು ಕಳ್ಳಿಮರನ ತತ್ತಪ್ಪ ”
ನೀ ಒಂದು ಕಬ್ಳಿ ಹಂಬ ತತ್ತಪ್ಪ      ”
ನೀ ಚಟ್ಟಾಯ ಕಟ್ಟಯ್ಯ     ”
ಚಟ್ಟಾಯ ಕಟ್ಟುಬುಟ್ಟು      ”
ನೀ ಹೊತ್ತುಕೊಂಡು ಹೋಗಪ್ಪ      ”
ಹೊತ್ತುಕೊಂಡು ಹೋಗಿನ್ನು          ”
ಅಲ್ಲಿ ಚಟ್ಟಾಯ ಇಳುಕಪ್ಪ  ”
ಚಟ್ಟಾಯ ಇಳುಕುಬುಟ್ಟು   ”
ನೀ ಸುಟ್ಟು ವಾಮಾಯ ಮಾಡಿ      ”
ನನ್ಗೆ ಬೂದಿಯ ತಂದುಕೊಡು        ”
ಅವ್ರು ಹಾಗಂದ್ರು ಅತ್ಯಮ್ಮ ”
ಅವ್ನು ರಂಗಯ್ಯ ಅಂಬುವನು        ”
ಬಹಳ ಕ್ವಾಪಾಯ ಮಾಡುಕೊಂಡು  ಲೈಲೇದುಂಬಿ
ಹೆಡ್ತಿಯ ಎತ್ತಿನ್ನು  ”
ಹೆಡ್ತಿಯ ಎತ್ತಿಕೊಂಡು      ”
ಕುದ್ರೆಮೇಲೆ ಕುಂಡಸ್ಕೊಂಡು        ”
ತಾ ಮುಂದುಗಡೆ ಕೂತುಕೊಂಡು   ”
ಊರಿಗೆ ಬತ್ತವ್ನೆ   ”
ಅವ್ರ ತಾಯಮ್ಮ ಅಂಬವಳು        ”
ಒಂದಾರತಿ ತಕ್ಕಂಡ       ”
ಒಂದ ಹವಳದಾರತಿ ತತ್ತವ್ಳೆ        ”
ಒಂದು ಮುತ್ತಿನಾರತಿ ತತ್ತವ್ಳೆ        ”
ತಾಯಮ್ಮ ತಾಯಮ್ಮ     ”
ನೀ ಯ್ಯಾಕ ಬಂದ್ಯಮ್ಮ    ”
ನೀ ಯ್ಯಾಕ ಬಂದ್ಯವ್ವ      ”
ನೀ ತಂದ ಸೊಸೆಯೆಲ್ಲಿ     ”
ನಾ ತಂದ ಸೊಸೆಯಯ್ಯ  ”
ಅವ್ಳು ಕವಳುತ್ತ ಮಣಗವ್ಳೆ  ”
ಕಣ್ಣು ಹೂಅದರ   ”
ಮುಚ್ಚಿಕೊಂಡು ಬಾರೇಳು  ”
ಚಿಕ್ಕವ್ನೆ ನನಕಂದ ”
ಅವ್ಳು ಹೊಟ್ಟೆನೋವು ಎತಕೊಂಡು  ”
ಮಣಗವ್ಳೆ ಕಂದಯ್ಯ       ”
ಹೊಟ್ಟನೋವು ಆದರೆ      ”
ಅವ್ಳ ಬೊಕ್ಕಂಡು ಬಾರೇಳು         ”
ಅಯ್ಯಯ್ಯೊ ನನ್ನ ಗಂಗವ್ವ ”
ಅವರಪ್ಪನ ಮನೆಗೋಗಿ    ”
ಎಂಟು ಜಿನ ಆಗೀತು       ”
ಅವನಿಗೆ ಕ್ವಾಪವು ಬಂದೀತು        ”
ಅವನು ದುರುದುರನೆ ನೋಡುತವ್ನೆ ”
ಅವನು ನೊರನೊರನೆ ಹಲ್ಲುಕಡಿದು ”
ಅವನು ಚಿನ್ನದ ಕತ್ತಿ ತೆಗೆದಾನು     ”
ಅವನು ಚಿನ್ನ ಕತ್ತಿ ತೆಗೆದಿನ್ನು         ”
ಅವ್ರ ತಾಯಮ್ಮ ಶಿರಸೀಗೆ ”
ಅವನು ಶಿರಸೀಗೆ ಮಡಗಿದ್ರೆ         ಲೈಲೇದುಂಬಿ
ಅವ ಸತ್ವಂತ ಚಿಕ್ಕೊನ್ನಿ    ”
ಆ ಕುದ್ರೆಯಿಂದ ಇಳಿದಾಳು          ”
ಕುದ್ರೆ ಬುಟ್ಟು ಇಳಿದಾಳು   ”
ಅವ್ಳು ಗಂಡನ ಮುಂಗೈಯ ”
ಅವ ಹಿಡಕೊಂಡ ಸತ್ವಂತ ”
ನಮ್ಮತ್ತಾಯ ಹೊಡಬೇಡಿ  ”
ನನ್ನಾನೆ ಹೊಡೆಯೇರಿ     ”
ಅವ್ರು ಚಿಕ್ಕಂದಿನಲ್ಲಿ ತಂದಾರು       ”
ನನ್ನ ಮೈಕೈಯ ತೊಳೆದಾರು       ”
ನನ್ಗೆ ಸೀರೇಯ ಹಿಂಡೀರು  ”
ನಮ್ಮತ್ತಾಯ ಹೊಡಬೇಡಿ  ”
ನನ್ನಾನೆ ಹೊಡೆಯಾರಿ     ”
ಅವ್ಳು ಹಾಗಂದ ಚಿಕ್ಕೊನ್ನಿ  ”
ಅವ್ಳು ಗಂಡನ ಮುಂಗೈಯ ”
ಹಿಡಕೊಂಡ ಸತ್ವಂತ       ”

 

ಪಾಠಾಂತರಗಳು ಮತ್ತು ಸಮಾನ ಆಶಯದ ಪಠ್ಯಗಳು :

೧) ಮುಳ್ಳು ಬಿದ್ದಾವೆ ಮುಗಲುದ್ದ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಜನಪದ ಸಾಹಿತ್ಯ ಅಕಾಡೆಮಿ ಮೈಸೂರು ೧೯೭೩, ಪು.ಸಂ. ೧೧೫-೧೧೬.

೨) ಹಾವುತಿಂದ ಸೊಸೆ; ಮತಿಘಟ್ಟ ಕೃಷ್ಣಮೂರ್ತಿ, ಕನ್ನಡ ಜನಪದ ಸಾಹಿತ್ಯ ಭಂಡಾರ, ಗುರುಮೂರ್ತಿ ಪ್ರಕಾಶನ ಬೆಂಗಳೂರು ೧೯೭೫, ಪು.ಸಂ. ೭೯೯-೮೦೧.

೩) ಆವಿನ್ನ ಕೊಯ್ದಾಳೆ ಆಮ್ರಾವ ಮಾಡಿದಾಳೆ; ಅಂದನೂರು ಶೋಭ, ಕೊಂಬೆ ರೆಂಬೆಲ್ಲ ಎಳೆಗಾಯಿ ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೮, ಪು.ಸಂ. ೭೧-೭೩.

 


*      ಹಾವಿನ ಪದ; ದೊರೆಸ್ವಾಮಿ ಹೊರೆಯಾಲ ನಾಲಿಗೆ ಅಕ್ಪರತ ಒಡದವ್ವ, ನುಡಿ ಪ್ರಕಾಶನ, ಮೈಸೂರು ೧೯೭೪, ಪು.ಸಂ. ೪೬-೬೭.