ವಬ್ಬಳ್ಳ ತಾಯಿಗೆ
ಏಳು ಜನ ಗಂಡು ಮಕ್ಳು
ಏಳು ಜನಿವ್ ನೆಡಗೀಗೆ
ವಬ್ಬುಳೆ ತಂಗಿ ಮಾದಿ

ಅವ್ಳು ಹಾಲುಂಬ ಯೇಳಿದಲ್ಲಿ
ತಾಯಾದ್ರು ಸಂದೋಳೆ
ಕೂಳುಂಬಾ ಯೇಳಿದಲ್ಲಿ
ತಂದೀಯೂ ಸಂದ್ ಹೋದ

ಯೇಳಜನ ರಣುದೀರೂ
ಸಾಕೂರೂ ಸಲುಗೀರೂ
ಹೆರಿಯಣ್ಣ ಲಂಬಾನ
“”ಕೇಳೆ ಕೇಳೆ, ತಂಗಿ ಮಾದಿ,

ನಿಂಗ್ ಯೇನು ಚಿನ್ನಾ ಬೇಕೆ ತಂಗಿ ?”
ನಂಗೆ ಸರು ಚಿನ್ನಾ ವಿದ್ದವಣ್ಣ,
ನನ್ ವಾಲಿಗ್ ಮಾಗಾಯ್ ಇಲ್ಲಂದ”

ಅಷ್ಟು ಮಾತು ಕೇಳೀದ
ತಮುದೀರ ಕರುದೀದಿ
“”ನಾವ್ ಹೇಳು ಜನ ಕೂಡುಕೀ
ನಮು ತಂಗಿ ಮಾದಿಗೆ

ವಾಲಿ ಮಾಗಾಯ್ ಗೈಸುವೋ
ನಾವ್ ಯೇಳ್ ಹಡ್ಗಾ ಕಡಸೂವೋ
ಮುತ್ತು ರತನಾ ತುಂಬೂವೋ
ಪರು ಬಂದರಕ್ ಹೋಗಬೇಕು

ಲಷ್ಟು ಮಾತಾ ಹೇಳುವಾಗೇ
ಯೇಳು ಜನ ಲಣದೀರು
ಯೇಳ್ ಹಡ್ಗಿನ್ ಕಡುಸೀರು
ಮುತು ರತ್ನಾ ತುಂಬೀದೋ

ಯೇಳು ಜನ ಅಣದೀರೂ
“”ಕೇಳಿ ಕೇಳಿ ಮಡ್ಡಿ, ಕೇಳಿ
ನಾವೆ ಹೇಳು ಜನ ಅಣದೀರು
ನನು ತಂಗಿ ಮಾದಿಗೆ

ನಾವ್ ವಾಲೆ ಮಾಗಾಯ್ ತರುತೇವೆ
ನೀನೀಗ ನನು ತಂಗಿ
ನಾನುಂಬಾಲೂಟವಿಕ್ಕೆ
ನಾನೊರಗೂ ಸದುರೀಲಿ

ಪಗಡಿ; ಆಡಾತಿರಲಂದಾ
“”ಬೆಂಕೀಗೇ ಕಳ್ಗಬೇಡೀ
ನೀರೀಗೆ ಕಳ್ಗಬೇಡೀ”
ಅಂದ್ ಬುದ್ಧಿ ವರುದೀನು

“”ಪರ್ ಬಂದರಕೆ ಹೋಗಿ ಬತ್ತೊ”
ಅಷ್ಟು ಮಾತಾ ಹೇಳುರಾಗೆ
ಪರು ಬಂದರಕೆ ಹಡುಗೋದ
ಪರು ಬಂದರಕೆ ಹೋಗುವಾಕೂ

ಅಣ್ ಹೋಗೀ ಮೂರು ದಿವ್ಸಾ
ಹೆರಿಯಣ್ಣಾನ್ ಹಿಂಡುತಿ
“”ಕೇಳೇ ಕೇಳೆ ತಂಗಿ ಮಾದಿ
ಊಟಕೆ ಬಾರ್ ಹೆಣ್ಣಿ”

ಊಟಕೇ ಬಂದಾಳು
ಮೂರು ದಿನದಾ ಹುಳಿ ಅನ್ನ
ಆರು ದಿನದಾ ಹುಳಿ ಮಜ್ಗಿ
ಮುಕ್ಕಾದ ಬಟಲಾಗೆ

ಮಾದಿಗುಂಬಾಕಿಕವಾರೋ
ಹುಳುವಾದುಪ್ಪಿನ ಕಾಯಿ
“”ಉಣ್ಣಾಕೆ ನಡಿ, ಯೆಂದೋ
ಹುಳಿ ಬಾಳ ಲತ್ತೀಗೇ”

“”ಬೇಕಾದಾರುಣೆ ಹೆಣ್ಣೀ
ಬೇಡುದೀರೇ ಬಿಡೆ ಹೆಣ್ಣೇ”
ಲಷ್ಟುಮಾತಾ ಹೇಳುರಾಗೆ
“”ಕೇಳೆ ಕೇಳೆ ತಂಗಿ ಮಾದಿ,

ನೀ ಉಂಡುಂಡು ಕುಳುಬೇಡಾ
ಹುಂಡೆಮ್ಮಿಗೆ ಹುಲ್ ಕೊಯ ಬಾರೆ
ಜೊಡ್ಡು ಕತ್ತಿ ಕೊಡುವಾರೋ
ಹರ‍್ಕ ಹೆಡ್ಗಿ ಕೊಡುವಾಳೋ

“”ಹುಂಡುಮ್ಮಿಗ್ ಹುಲ್ ಕೊಯ್ಯಾಕೆ ಹೋಗೆ”
ಹರ್ಕ್ ಹೆಡ್ಗಿಲಿಡುಕಂಡ
ಬೊಡ್ಡು ಕತ್ತಿ ತಕ್ಕಂಡು
ಹುಲ್ ಕೊಯ್ವಲ್ ಹೋದಳೆ

ಹುಲು ಕೊಯ್ವಲ್ ತೆಳಿಲಿಲ್ಲ
ನಡುಕ್ಕೆಯ ಕ್ಯೊಕಂಡು
ಗೋಳಗುಟ್ಟಿ ಆಳುತಾಳೇ
ಬೇಡು ತಿಂಬಾ ಬೇಡಜ್ಜೀ

ಅವ್ಳು ಬೇಡೂಕೆ ಹ್ಯೊ ಟೀಳು
ಲಾ ಹಾದಿಲ್ ಹೋಗುವಜ್ಜಿ
ಅವ್ಳ ಈ ಹಾದಿಲಿ ಬರುವಾಳೊ

“”ಯೇನಾಯ್ತೇ ಮೊಮ್ಮಗಳೇ ?”
ಅಂದಾರೂ ಕೇಳ್ಳಜ್ಜೀ
“”ನನ್ಗ್ ಯೇಳು ಜನ ಲಣುದೀರೇ
ಹಾಲುಂಬಾ ಯೇಳಿದಲ್ಲಿ
ನನ್ ತಾಯಾರೂ ಸಂದೋಳೂ

ಕೂಳುಂಬಾ ಯೇಳಿದಲ್ಲಿ
ತಂದೀಯೂ ಸಂದ್ ಹೋದ
ನನ್ ಯೇಳು ಜನ ಲಣುದೀರು
ನನ್ ಸಾಕೀರೂ ಸಲುಗೀರು

ನಾ ಬುದ್ದಿಪರಕಾರ ಇದೆನಜ್ಜಿ
ನನ್ ಹೆರಿಯಣ್ಣ ಲಂಬನು
“”ಕೇಳೆ ಕೇಳೆ ತಂಗಿ,” ಯಂದ
“”ನಿಂಗ್ ಯೇನು ಚಿನ್ನವಿದ್ದೊ ತಂಗೀ ?”

ಅಷ್ಟು ಮಾತಾಲೇಳುರಾಗೆ
ನನ್ಗೆ ವಾಲೆ ಮಾಗಾಯಾಗುಬೇಕು
ಅಣ್ಣದೀರೂ ಯೇಳು ಜನ
ನಾವ್ ಕೂಡ ಹುಟ್ಟಿದ ಪಾಶಿಗೆ

ಅವ್ಳಿಗೆ ವಾಲಿಗೆ ಮಾಗಾಯ್‌ಗೈಸೂವೋ
ನಾವ್ ಯೇಳ್ ಹಡ್ಗಾ ಕಡಸೂವೋ
ಮುತ್ತೂ ರತ್ನಾ ತುಂಬೂವೋ
ನಾವ್ ಪರುಬಂದರಕ್ ಹೋಗುಬೇಕು

ಅವ್ರೆ ಮುತ್ತು ರತ್ನಾ ತುಂಬಿರು
ಅಣುದೀರು ಯೇಳು ಜನ
ನಾವ್ ಪರು ಬಂದರಕೆ ಹೋತಂದೊ
ತಮ್ ಹಿಂಡಾರ ಕರುಕಂಡು

ನನು ತಂಗೀ ಬಲು ಜೋಕೆ
ಪರು ಬಂದರಕ್ಕೆ ಹೋದ ಹುಡುಗರು
ಈ ಯಣುದೀರು ಹೇಳಿ ಹೋಗಿರು
ಅಣ್ಣದೀರೂ ಹಿಂಡಾರೂ

ಹುಲ್ ಕೊಯ್ಯಾಕ್ ಹೇಳೀರೂ
ನಂಗ್ ಹುಲ್ ಕೊಯ್ಯಲ್ ತೆಳಿಲಿಲ್ಲ
ನಾ ನಡುಕ್ಕೆಯ ಕೊಯ್ಕಂಡೆ
ಅಜ್ ಮುದ್ಕಿ ಲಂಬಳೂ
ಹುಲ್ಲಾರು ಕೊಯ್ದೀಳೂ

ಅಜಿ ಮುದ್ಕಿ ಹೇಳೀಳು
ನೀ ಮನಿಗೋಗೆ “”ಲಂದಾಳು
ನಾ ನಿನ್ನಾ ಪಡೆದ ಮಗಳು

ನೀ ನನ್ನಾ ಪಡ್ಡೆ ತಾಯಿ
ನಿನ್ನ ಸಂಗಡ ಬರುತ್ತೇನೆ
ಅಜ್ಜಿ ಕೂಡೆ ನೆಡುದಾಳು
ಗುಬ್ಬಿಯ ಗೂಡಜ್ಜಿ

ಅವಳ್ ಹೋದಾ ಮೂರ್ತಾಕೆ
ಏಳು ನೆಲಿ ಮನಿಯಾದೊ
“”ಕೇಳೆ ಕೇಳೆ ಮೊಮ್ಮಗಳೇ
ಇದು ನನ ಮನಿ ಅಲ್ಲಂದ್ಲು”

“”ಕೇಳೆ ಕೇಳೆ ತಾಯಿ, ಕೇಳೇ
ನಿನ್ನ ಪುಣ್ಯದಲ್ಲಾದುಮನೆ
ಗಜ್ಜೀನಾ ಗಡುಮನೆ
ಏಳು ನೆಲಿ ಮೆತ್ತಿನ ಮೇನೆ

ಚಿನ್ನಾದಾ ತೊಟ್ಟಿಲು
ಆ ತೊಟ್ಟಿಲಾಗೆ ವರಗೂಳು
ಅಣದೀರು ಹೋಗಿಯೇ
ಏಳೂರುಸಾದ ಮದ್ದಿಯಾದೊ

ಅವ್ರು ಹಿಂತಿರ‍್ಗಿ ಬರುಸಮಯ
ಮನಿಗಾರೂ ಬರುವಾರೊ
ಮನಿಗಾರೂ ಬರುವಂಗೇ
ಹೆರಿಯಣ್ಣ ಲಂಬಾನೂ

ಮನೆ ಮೆತ್ನ ಮೇನೆ ನೆಡುದಾನು
ಅವ್ಳ ಚಿನ್ನಾದ ತೊಟ್ಲ ನೋಡಿ
ತನ ಮಡುದೀಯಾ ಕರುದನು

“”ತಂಗೈಲ್ಲಿ ಹೋಳಂದ”
“”ಕೈ ಬಳೆ ಜಗುದೀತು
ಬಳ್ಗಾರ ಮನಿಗ್ ಹೋಗೀಳೂ”
ಲಷ್ಟು ಮಾತಾ ಹೇಳುರಾಗಿ

ಬಳ್ಗಾರ್ ಮನಿಗ್ ಓಡಿ ಹೋದ
“”ಕೇಳು ಕೇಳೂ ಬಳುಗಾರಾ
ನನ ತಂಗಿ ಬಂದೀಳೇನೋ ?”
“”ನಿಮು ತಂಗಿ ಕಾನಾದೇ
ವರಸಾ ಮೂರಾದವೊ

ಅಷ್ಟು ಮಾತಾ ಹೇಳುರಾಗೆ
ತಿರಗೊಮ್ಮೆ ಮನಿಗ್ ಬಂದ
ನನ “”ತಂಗೈಲ್ಲಿಗೆ ಹೋಳ್ ಹೇಳಿ
“”ಮೂಗಿನ್ ಬೊಟ್ಟು ಮುರಿದೀತು
ಅಕ್ಕಸಾಲ್ ಮನೀಗ್ ಹೋಗೀಳು”

ಹಾರಿ ಬದ್ದೆ ವೋಡಿ ಹೋದ
“”ಅಗುಸಾಲೀ, ಲಗುಸಾಲೀ
ನನ ತಂಗಿ ಬಂದೀಳೇನೋ ?”
ನಿಮು ತಂಗಿ ಕಾನಾದ
ವರುಸಾ ಮೂರಾದವೇ”

ಅಲ್ ಅಷ್ಟು ಮಾತಾ ಕೆಳುಕಂಡು
ಹಿಂತಿರುಗಿ ಮನಿಗೆ ಬಂದ
“”ಕೇಳಿ ಕೇಳಿ ತಮುದೀರೇ
ನಮಗ್ ಈ ಬೀದೀ ಬೆಡಕಾಣಿ

ನಾವು ದೇಸಂತಾರೆ ಹೋಗುವಾನೊ
ಪರಬಂದರಕೆ ಹೋದ ಹಡಗ
ಹಡ್ಗನಾರು ಬಿಟ್ ಹೋರು
ಅವರ್ ದೇಸಾವರಿ ಹೋದರು

ದೇಸಾವರೀ ಹೋರು
ತಂಗೀಯ ಮನಿಗ್ ಹೋರು
ಅವ್ಳ್ ಯೇಳು ಜನ ಲಣದೀರು
ಹಾದಿ ಕೂಡಿ ಹೋಗುವಾಗೇ

ಅಜ್ಜಿ ಮುದ್ಕಿ ಕರುದೀಳೂ
“”ಆ ಹಾದಿಲಿ ಹೋಗುವರಾ
ನನ್ನಣುದೀರೇ ಕಂಡಾಗಿದ್ರು”

ಅವ್ಳ್ “”ಮುಂದಿದ್ದರು ಕಂಡಾರೆ
ನನ ಹೆರಿಯಣ್ಣ” ಲಂದಾಳೇ
ಆ ಮಾತೆ ಹೇಳುಗುಂಟು
ಹೆಬ್ಬಾಗ್ಲಲ್ಲಿ ಬಂದಾರೂ

“”ಬಿಗಶೀಯೂ ಕೂಡಿ ತಾಯೇ”
“”ಬಿಗಶೀಯಾ ಕೊಡುತಾರೇ
ಹಸವೀಗೇ ಹಣು ತೀನಿ
ಆಸೂರಿಗ್ ಹಾಲು ಕುಡಿರಿ

ಕಣುನೀರಾ ಶಡಿತಿದ್ರು
“”ನನ್ನ ತಾಯ್ ಹೇಳಿದ ಹಾಗಾಯ್ತು
ಹಸವೀಗ್ ಹಣ್ಣನು ಮೆದ್ರು

ಆಸೂರೀಗೆ ಹಾಲು ಕುಡಿದು
“”ನಮಗೆ ಬಿಗಸೀಯ ನೀಡಿ ತಾಯೆ,
ನಾವ್ ದೇಸಂತರಕೆ ಹೋಗುವಾರೊ””

“”ಕೇಳಿ ಕೇಳಿ ಮಕ್ಕಳೆ
ನಿವ್ಗ್ ಈ ಬೀದಿ ಯಾಕಂದ್ರೂ
“”ನಾ ವೊಬ್ಬುಳಾ ತಾಯಿಗೇ
ನಾವ್ ಯೇಳು ಜನ ಗಂಡುಮಕ್ಳು

ಯೇಳು ಜನಿನೆ ನೆಡುಗೀಗೇ
ವಬ್ಬುಳೇ ತಂಗಿ ಮಾದಿ
ಅವ್ಳ್ ಹಾಲುಂಬಾ ಯೇಳಿದಾಗೆ
ತಾಯಾರೂ ಸಂದ್ ಹೋಳು

ಕೂಳುಂಬಾ ಯೆಳಿದಲ್ಲಿ
ತಂದೀಯೂ ಸಂದ್ ಹೋರು
ನಾವೆ ಯೇಳು ಜನ ಲಣದೀರ
ಅವ್ಳ ಸಾಕೀದೊ ಸಲುಗೀದೊ

ಅವ್ಳ ಬುದ್ದಿ ಪಕಾರಾಗೀದು
“”ಕೇಳೆ ಕೇಳೆ ತಂಗಿ,” ಯಂದೊ
ನಿಂಗೆ ಯೇನು ಚಿನ್ನಾವಿದ್ದವಂದೊ
ನಂಗೆ ಸರುಚಿನ್ನಾವಿದ್ದವಣ್ಣಾ

ನನ್ಗೆ ವಾಲ್ಗ್ ಮಾಗಾಯ್ ಇಲ್ಲದೆ
ನನ ತಮ್ಮುದೀರಾ ಲೆಳುಜನ
ನಾವ್ ಯೇಳು ಜನ ಲಣುದೀರು
ನಾವೆ ಯೇಳೆ ಹಡಗಾ ಕಡಸೂವೊ

ಮುತ್ತು ರತ್ನಾ ತುಂಬೂವೋ
ನಾವ್ ಪರುಬಂದಾರಕೆ ಹೋಗುಬೇಕೊ
ವಾಲ್ಗ್ ಮಾಗಾಯ್ ತರುಬೇಕೊ
ಪರು ಬಂದರ‍್ಗೆ ಹಡ್ಗು ಹೋಯಿ

ಮುತ್ತು ರತ್ನಾ ತುಂಬಿ ಬಂದೊ
ಅವಳ ವಾಲ್ಗ್ ಮಾಗಾಯ್ ಗೆಯ್ಸ್ಯಕಂಡೊ
ಬರುವಾನೊ ಅನುತೇಳಿ
ಪರು ಬಂದರಕೆ ಹೋರಜ್ಜಿ

ನಮ್/ಯೇಳು ಜನ ಹಿಂಡರು
ನಾವೊರಗೂ ಸದುರೀಲಿ
ನನ್ ತಂಗಿ ವರುಗಾಲಿ
ನಾ ಕೂಡೂ ಹಾಲ ಕೊಡೀ

ನನ ಉಂಬಾ ಊಟ ಇಕ್ಕಿ
ಪಗ್ಡಿ ಆಡಾತಿರಲಂದೊ
ನಾವ್ ಪರುಬಂದರಕೆ ಹೋದೊವಜ್ಜಿ
ನಾವ್ ಹೋಗೀ ಬರ‍್ವರುಗಂಟೆ

ನನು ತಂಗಿ ಮಾದಿಯೇ
ಮನಿಯಲ್ಲೇ ಇಲ್ಲ ಅಮ್ಮ
ನಮಗಿಂತಾ ಬೀದಿಯೆ ಯಾಕೆ ?
ನಾವ್ ಮನಿ ಬಿಟ್ಟಿ ಹೊಯ್ವಿದೊ”

ಅಷ್ಟು ಮಾತಾ ಹೇಳುರಾಗೆ
ಗಿಜ್ಜೀ ಕಾಲಿನ ಮಾದಿ
ಮೆತ್ನ ಮೇನಿಂದಿಳುದೀಳು
ಹಾರಿ ಬಿದ್ದಿ ವೋಡಿ ಬಂದ್ಲು

ಹೆರಿಯಾಣ್ಣಾ ಮಡುಲಲ್ಲಿ
ಅವ್ಳ ತಕ್ ಹಾಕಿ ಕೂಡಿಕಂಡೂ
ಕಳಕಳ ಕಣುನೀರು
ಶಡುದೀ ಕಂಡಾಳಾಗೆ

ಅಣದೀರೂ ಲೇಳು ಜನ
ಗುಟಗುಟ್ಟಿಲಳುತಾರೆ
“”ಕೇಳಿ ಕೇಳಿ ಲಣುದೀರೆ,
ಈ ಅಜ್ಜಿ ಮುದ್ಕಿ ನಮ ತಾಯಿ

ಲಷ್ಟು ಮಾತೆ ಹೇಳೂಕೂ
ಲಜ್ ಮುದ್ಕಿ ಕರುದೀಳೂ
“”ಹಾಲೂ ಬೋಜಣದಡುಗೀ
ನನ್ನಣುದೀರಿಗೆ ಅನುಮಾಡೆ

ಅಣ್ಣಗೂ ತಂಗೀಗೂ
ನಾ ವೊಡನೂಟ ಉಣಬೇಕು”
ಲಂದೊಮ್ಮೆ ಹೇಳೂರೂ
“”ಕೇಳ ಕೇಳೋ, ಲಣ್ಣ, ಕೇಳೊ

ನೀ ಹೋಗಿ ಮೂರು ದಿನ
ಮೂರು ದಿನದಾ ಹುಳಿಯನ್ನ
ಆರು ದಿನದಾ ಹುಳು ಮಜ್ಗಿ
ಹುಳುವಾದುಪ್ಪಿನ ಕಾಯಿ

ಬದ್ದಿ ಹೋದ ಬಟುಲಾಗೆ
ನನಗೊಂದ್ ಹಾಕಿಕಿರಣ್ಣ
ಹೆರಿಯಣ್ಣಾ ನಾ ಹಿಂಡುತಿ
ನಾ ಉಣುವಾರೆ ಲತ್ತೀಗೆ”

“”ನೀ ಬೇಕಾದಾರುಣ್ಣಂದ್ಲು
ಬೇಡುದೀರೇ ಬಿಡಂದ್ಲು
ಉಣಲಾರೆ” ಲನುತೇಳಿ
ನಾ ಕೈ ಕುಡ್ಗೀ ಯೆದ್ದೆಲಣ್ಣ

ಮೆತ್ತಿನ ಮೇನ್ ಹೋಯಿ ಕುಂತೆ
ಯೇ ಹೆಣ್ಣೆ, ತಂಗಿ ಮಾದಿ,
ನೀ ಉಂಡುಂಡು ಕುಳುಬೇಡಾ
ನನ್ ಹುಂಡೆಮ್ಮಿಗೆ ಹುಲ್ ಕೊಯ್‌ತಾರೆ”

ಅಷ್ಟು ಮಾತಾ ಹೇಳುರಾಗಿ
ನನ್ಗ್ ಹರುಕ್ ಹೆಡ್ಗಿ ಕೊಡುವಾಳೊ
ಬೊಡು ಕತ್ತಿ ಕೊಟ್ಟಾರೊ
ಮಲುಗೆದ್ದಿಗೆ ಹೋದೆನಣ್ಣ

ಹುಲು ಕೊಯ್ವಲ್ ತೆಳಿಲಿಲ್ಲ
ನಡು ಕೈಯಾ ಕೊಯ್‌ಕಂಡೆ
ಬೇಡು ತಿಂಬಾ ಬೇಡಜ್ಜಿ
ಆ ಹಾದಿಲ್ ಹೊರಡುವಾಳೊ

ಅವ್ಳ ಈ ಹಾದಿಲಿ ಬಂದಾಳೊ
“ಯೇನಾಯ್ತೆ ಮೊಮ್ಮಗಳೇ,’
ನಾ ಹುಲ್ ಕೊವೈ ಬಂದೆನಜ್ಜಿ,
ಹುಲ್ ಕೊವ್ವಲ್ ತೆಳಿಲಿಲ್ಲೆ

ನಾ ನಡಕೈಯಾ ಕೊಯ್ ಕಂಡೆ””
ಉಟ್ಟ ಪಟ್ಟೆ ಹರದೀಳು
ನನ ಕಯ್ಯಾ ಕಟ್ಟೀಳು

“”ಮನಿಗೆ ಹೋಗೆ” ಲಂದಾಳೇ
ನಾ ಮನಿಗಾರೂ ಹೋತಿಲ್ಲ
ನೀ ನನ್ನಾ ಪಡ್ಡ ತಾಯಿ

ನಾ ನಿನ್ನಾ ಪಡ್ಡ ಮಗಳು
ನಿನ ಜೊತ್ಯಲಿ ಬರುತೆಲಜ್ಜಿ
ಅಜ್ಜೀಯೂ ಮುಂದಾಗೀ
ನನು ಕರುಕಂಡೇ ಬಂದಳಜ್ಜಿ

ಅಜ್ಜಿ ಮನೆ ಲಂಬಾದೂ
ಗುಬ್ಬಿಯಾ ಗೂಡಜ್ಜಿ
ನಾ ನವ್ಳ ಮನಿಗ್ ಬರುವಾಗೆ

ಯೇಳು ನೆಲಿ ಉಪ್ಪರುಗಿಯೇ
ಯೇಳು ನೆಲಿ ಮೆತ್ನ ಮೇನೇ
ಚಿನ್ನದಾ ತೊಟ್ಟಿಲಾದೊ
ತೊಟ್ಟಿಲಾಗೆ ವರ್ಗಿನಣ್ಣ

ನೀ ಹೇಳುಮಾತಾ ಕೇಳಿನಣ್ಣ
ನಾ ಮೆತ್ನ ಕೆಳಗೆ ಇಳುದೀನೊ
ನಿಮ್ ಮಡುದ್ಯರೆ ಮಾಡದ್ದಣ್ಣ

ಅಷ್ಟು ಮಾತ ಕೇಳುರಾಗೆ
“”ಕೇಳೆ ಕೇಳೆ ತಂಗಿ, ಕೇಳೇ
ನಾವ್ ನಮ್ಮನಿಗೇ ಹೋವಪೋ

ಲಜ್ಜಿ ಮುದ್ಕಿ ಕರದ್ ಹೋಪೋ
ಲವ್ರ್ ಮನಿಗಾರು ಹೋದರೂ
ಯೇಳು ಜನ ಲಣದೀರೂ
ತಮ್ಮಿಂಡಾರಾ ಕರುದೀರೂ

ತರುದಲ್ಲಿ ನಿಲ್‌ಸೀರೂ
ದಂಡೀನಾ ಕತ್ತಿಯಲ್
ಹಿಂಡ್ರ ರುಂಡಾ ಹೊಡದೀರು

ಪ್ರತಿ ಸಾಲಿನ ಕೊನೆಗೂ ’ತಂದನಾನಾ’ ಎನ್ನಬೇಕು

 

ಪಾಠಾಂತರಗಳು ಮತ್ತು ಸಮಾನ ಆಶಯ ಪಠ್ಯಗಳು

೧) ಸಂಪನ್ನೆ; ಪರಮಶಿವಯ್ಯ, ಜೀ.ಶಂ. ಜಾನಪದ ಖಂಡ ಕಾವ್ಯಗಳು, ಶಾರದಾ ಮಂದಿರ, ಮೈಸೂರು, ೧೯೬೮, ಪು.ಸಂ. ೬೧-೭೫

೨) ಕೇದಿಗೆ ಎಂಬ ಸೊಸೆ; ಹೆಗಡೆ ಎಲ್.ಆರ್., ತಿಮ್ಮಕ್ಕನ ಪದಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೬೯, ಪು.ಸಂ. ೨೧೩-೨೧೯

೩) ಪುಟ್ಟಿಗಂಗಿ, ಕೆದ್ಲಾಯ ಕುಂಜಿಬೆಟ್ಟು ಸುಬ್ರಹ್ಮಣ್ಯ, ಹಾಡಿಗೆ ಹನ್ನೆರಡು ಕಬರು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೩, ಪು.ಸಂ. ೫೯-೭೫

೪) ತಬ್ಬಲಿರಾಯ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು, ೧೯೭೩, ಪು.ಸಂ. ೨೫-೪೧

೫) ಜಾಗಾಲೆ; ಕಾಳೇಗೌಡ ನಾಗವಾರ, ಬಯಲುಸೀಮೆಯ ಲಾವಣಿಗಳು, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು, ೧೯೭೩, ಪು.ಸಂ. ೯೬-೧೧೦

೬) ಹೊನ್ನಮ್ಮ-ಹೊಳಲಮ್ಮ; ಹಿರಿಯಣ್ಣ ಅಂಬಳಿಕೆ, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೬, ಪು.ಸಂ. ೧೭೩-೧೭೬.

೭) ಯಾಮರೆಡ್ಡಿ ಸೊಸೆ ಮಲ್ಲಮ್ಮ; ಚಂದ್ರಯ್ಯ ಬಿ.ಎನ್., ಜಾನಪದ ಕಥನಗೀತೆಗಳು, ಶರತ್ ಪ್ರಕಾಶನ, ಮೈಸೂರು,೧೯೭೯, ಪು.ಸಂ. ೩೭-೪೮

೮) ಹೊನ್ನಮ್ಮ; ಜಯಲಕ್ಷ್ಮಿ ಸೀತಾಪುರ, ನಮ್ಮ ಸುತ್ತಿನ ಜನಪದ ಕಥನಗೀತೆಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೪, ಪು.ಸಂ. ೧-೧೭

೯) ತಂಗಿಯ ಹಾಡು; ಜಗನ್ನಾಥ ಹೆಬ್ಬಾಳೆ, ಬುಲಾಯಿ ಹಾಡುಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೭, ಪು. ೨೪-೩೦

೧೦) ಕಾನ್ ಕಾನ್ ಕನ್ನಡಿ, ನಾಯಕ ಎನ್.ಆರ್., ಪಾಠಾಂತರ ಕಥನ ಕವನಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, ೧೯೯೭ ಪು.ಸಂ. ೧೮೮-೨೦೫.

೧೩) ಏಳುಮಂದಿ ಅಣ್ಣತಮ್ಮಂದಿರು, ಒಬ್ಬ ತಂಗಿ; ನಾವಲಗಿ ಸಿ.ಕೆ. ಮತ್ತು ಶಕುಂತಲ ಚನ್ನಬಸವ, ಜನಪದ ಕಥನಗೀತ ಸಂಚಯ, ಕನಕ ಸಾಹಿತ್ಯ ಪ್ರತಿಷ್ಠಾನ, ಬೆಂಗಳೂರು, ೨೦೦೩, ಪು.ಸಂ. ೨೩-೨೫

೧೪) ಕುಸುಮಾಲೆ; ನಾಗೇಗೌಡ ಎಚ್.ಎಲ್., ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೬, ಪು. ೨೪೭-೨೫೫*      ತಂಗಿ ಮಾದಿ; ಹೆಗಡೆ ಎಲ್.ಆರ್. ಮಾಚಿಯ ಕಥನಗೀತೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೨, ಪು.ಸಂ. ೮೪-೯೩.