ಯಾವುದೇ ಒಂದು ನಾಟಕ ಪರಿಪೂರ್ಣ ನಾಟಕವೆನಿಸುವಲ್ಲಿ ಉತ್ತಮ ಕಥಾವಸ್ತು, ಶ್ರೇಷ್ಠ ಅಭಿನಯ, ಆಹ್ಲಾದಕರವಾದ ಸಂಗೀತ ಹಾಗೂ ಆಕರ್ಷಕ ರಂಗಮಂಚದ ಮೇಲೆ ಅವಲಂಬಿತವಾಗಿರುತ್ತದೆ. ಇವುಗಳಲ್ಲಿ ಯಾವುದಾದರೊಂದು ಕಳಪೆಯೆನಿಸಿದಲ್ಲಿ ನಾಟಕ ಕಳೆ ಕಟ್ಟುವುದಿಲ್ಲ. ಅಂಥ ನಾಟಕ ಕಳಾಹೀನವೆನಿಸುತ್ತದೆ. ನಾಟಕದಲ್ಲಿ ಕಥಾವಸ್ತು, ಅಭಿನಯ ಮತ್ತು ರಂಗಮಂಚಗಳ ಜೊತೆಗೆ ಅಷ್ಟೇ ಮಹತ್ವದ ಕಲಾ ಮಾಧ್ಯಮವೆಂದರೆ ಸಂಗೀತ. ನಾಟಕವೆಂದಾಕ್ಷಣ ಅಲ್ಲಿ ಸಂಗೀತದ ಪಾತ್ರ ಗಮನಾರ್ಹ. ಯಾವುದೇ ನಾಟಕ ಸಂಗೀತವಿಲ್ಲದೆ ಪರಿಪೂರ್ಣವೆನಿಸುವುದಿಲ್ಲ. ಸಂಗೀತ ನಾಟಕದ ಜೀವನಾಡಿ; ಅದರ ಅವಿಭಾಜ್ಯ ಅಂಗ.

ಸಂಗೀತದಲ್ಲಿ ಸಮ್ಮೋಹನ ಶಕ್ತಿಯಿದೆ. ಎಲ್ಲ ವಸ್ತುವನ್ನು ಎಲ್ಲ ಜೀವರಾಶಿಯನ್ನು ಆಕರ್ಷಿಸುವ ಶಕ್ತಿ ಸಂಗೀತದಲ್ಲಡಗಿದೆ. ಭಾವನೆಗಳ ಅಭಿವ್ಯಕ್ತಿಗೆ ಸಂಗೀತವು ಪ್ರಬಲ ಮಾಧ್ಯಮವೆನಿಸಿದೆ. ಸಂಗೀತದ ಸಪ್ತಸ್ವರಗಳು ಒಂದು ರಸಭಾವವನ್ನು ವ್ಯಕ್ತಪಡಿಸುತ್ತವೆ. ಆ ಕಾರಣದಿಂದಲೆ ನಾಟಕದ ‘ಅಭಿನಯ ಕಲೆ’ ಸಂಗೀತದ ಸಹಾದಿಂದ ಇನ್ನಷ್ಟು ಪ್ರಭಾವಪೂರ್ಣವಾಗಬಲ್ಲದು. ಪಾತ್ರಧಾರಿಯ ವಿವಿಧ ಭಾವನೆಗಳ ಸಂಗೀತದ ಸಹಾಯದಿಂದ ಭಾವಾಭಿವ್ಯಕ್ತಿ ಪಡೆದು ಪರಿಣಾಮಕಾರಿಯಾಗುತ್ತದೆ. ಮಾತಿಗೆ ನಿಲುಕದ, ಅಭಿನಯಕ್ಕೆ ಸಿಗದ ಅನೇಕ ಭಾವನೆಗಳು ಸಂಗೀತ ಕಲೆಯಿಂದ ಸುಲಭವಾಗಿ ಪ್ರತಿಬಿಂಬಿಸುತ್ತವೆ, ಪ್ರತಿಧ್ವನಿಸುತ್ತವೆ. ಅಂತಹ ಸಂಗೀತ ಕಲೆ ನಾಟಕದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ರಂಗಭೂಮಿ ಹಾಗೂ ಸಂಗೀತ ಒಂದಕ್ಕೊಂದು ಅನ್ಯೋನ್ಯವಾಗಿ ಬೆಳೆದುಬಂದಿವೆ. ಅವೆರಡನ್ನೂ ಬೇರ್ಪಡಿಸಲಿಕ್ಕಾಗುವುದಿಲ್ಲ. ಏಕೆಂದರೆ ಅವೆರಡರಲ್ಲಿ ಒಂದು ಜೀವ, ಇನ್ನೊಂದು ದೇಹ. ಹಾಗಾಗಿ ಅವು ಒಂದನ್ನೊಂದು ಬಿಟ್ಟಿರಲಾರವು.

ರಂಗಭೂಮಿಯಲ್ಲಿ ಜಾಣಪದ ರಂಗಭೂಮಿ, ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ-ಇತ್ಯಾದಿ ಪ್ರಕಾರಗಳುಂಟು. ಒಟ್ಟಾರೆ ಅರ್ಥದಲ್ಲಿ ರಂಗಭೂಮಿ ಒಂದೇ ಇದ್ದರೂ ಸಹ ಅಧ್ಯಯನದ ದೃಷ್ಟಿಯಿಂದ ಅವುಗಳಲ್ಲಿ ಮೇಲ್ಕಾಣಿಸಿದ ವಿಭಾಗ ಮಾಡಲಾಗಿದೆ. ರಂಗಭೂಮಿಯ ಯಾವುದೇ ಪ್ರಕಾರಕ್ಕೆ ಸಂಗೀತ ಬೇಕೆ ಬೇಕು. ಮೇಲ್ಕಾಣಿಸಿದ ಪ್ರತಿಯೊಂದು ರಂಗಭೂಮಿಗೆ ಸಂಗೀತದ ಸಂಬಂಧ, ಮಹತ್ವ ಸ್ಥಾನಮಾನಗಳನ್ನು ಈ ಮುಂದೆ ಚರ್ಚಿಸಲಾಗಿದೆ.

ಜನಪದ ರಂಗಭೂಮಿ

ಗ್ರಾಮೀಣ ಪ್ರದೇಶದ ಜನರು ಸುಖ-ಸಂತೋಷದ ಸಂಭ್ರಮದಲ್ಲಿ ಸುಗ್ಗಿಯ ದಿನಗಳಲ್ಲಿ ತಾವೇ ರಚಿಸಿಕೊಂಡ ತಮ್ಮ ಪ್ರಾದೇಶಿಕ ಭಾಷೆಯಿಂದ, ಪ್ರಾದೇಶಿಕ ವಾದ್ಯಗಳಿಂದ ಸಂಯೋಜಿಸಿದ ಸಂಗೀತದೊಂದಿಗೆ ಪ್ರದರ್ಶಿಸಲ್ಪಡುವ ನಾಟಕದ ಪ್ರಯೋಗಗಳಿಗೆ ಜನಪದರ ನಾಟಕಗಳು ಅರ್ಥಾತ್ ಜನಪದ ರಂಗಭೂಮಿ ಎಂದು ಕರೆಯಲಾಗುತ್ತದೆ. ಹಳ್ಳಿಗಳ ನಾಡಾದ ಭಾರತದಲ್ಲಿ ಅದರಲ್ಲೂ ಕರ್ನಾಟಕದ ವಿವಿಧ ಹಳ್ಳಿಗಳಲ್ಲಿ ಈ ಪ್ರಕಾರದ ಜನಪದ ನಾಟಕ ಪ್ರಯೋಗಗಳು ನಮ್ಮ ಕಣ್ಣಿಗೆ ಕಾಣುತ್ತವೆ. ಸುಗ್ಗಿ ಮುಗಿದು, ಮಳೆಯಾಗುವವರೆಗೆ ದೊರೆಯುವ ವಿಶ್ರಾಂತಿ ಕಾಲದಲ್ಲಿ ಹಳ್ಳಿಗರು ತಮ್ಮ ಕಲೆಯ ಅಭಿವ್ಯಕ್ತಿಗಾಗಿ, ಇತರ ಹಳ್ಳಿಗರ ಮನರಂಜನೆಗಾಗಿ ಇಂತಹ ಜನಪದ ಪ್ರಕಾರಗಳನ್ನು ರಂಗಕ್ಕೆ ತಂದು ಪ್ರಯೋಗಿಸುವುದುಂಟು.

ಜನಪದ ರಂಗಭೂಮಿಯನ್ನು ಪ್ರತಿನಿಧಿಸುವ ಕಲಾವಿದರು ಸಾಮಾನ್ಯವಾಗಿ ಅನಕ್ಷರಸ್ಥರಾಗಿರುತ್ತಾರೆ. ಆದಾಗ್ಯೂ ಕೂಡಾ ಅವರ ಅನುಭವ ಜನ್ಯವಾದ ಸಂಗೀತ ಪ್ರಭೆಯಾಘಲಿ, ಕಥಾ ಸಾಹಿತ್ಯವಾಗಲಿ, ನಟನಾ ಕೌಶಲ್ಯವಾಗಲಿ ಕಡಿಮೆ ಮಟ್ಟದಲ್ಲಿರುವುದಿಲ್ಲ. ತಾವೇ ಕಥೆಯನ್ನು ಹೆಣೆದು, ಅದಕ್ಕೆ ಪೂರಕವಾದ ಸಂಗೀತವನ್ನು ತಾವೇ ರಚನೆ ಮಾಡಿಕೊಂಡು ಜನಸಾಮಾನ್ಯರಾದಿಯಾಗಿ ಬುದ್ಧಿಜೀವಿಗಳನ್ನು ಸಹ ಸುಲಭವಾಗಿ ಆಕರ್ಷಿಸುವ ಕಲೆಗಾರಿಕೆ ಜನಪದರಲ್ಲಿದೆ.

ಜನಪದ ರಂಗಭೂಮಿಯಲ್ಲಿ ಸಂಗೀತವೇ ಅದರ ಜೀವಜೀವಾಳ. ಸಂಗೀತವೇ ಪ್ರಧಾನ. ಅಭಿನಯ, ಸಾಹಿತ್ಯ ಗೌಣವೆನ್ನುವಷ್ಟರಮಟ್ಟಿಗೆ ಅದರ ಉಪಯುಕ್ತತೆ ವಿಶೇಷವೆನಿಸುತ್ತದೆ. ಜನಪದ ನಾಟಕಗಳಲ್ಲಿ ಹಾರ್ಮೋನಿಯಂ (ಪೇಟಿ ಅಥವಾ ಪೆಟಗಿ) ಮಾಸ್ತರನೇ ನಿರ್ದೇಶಕ. ನಟನೆ, ನಟರ ಆಯ್ಕೆ, ಸಂಗೀತ, ಸಂಗೀತ ನಿರ್ದೇಶನ, ಒಟ್ಟಾರೆ ನಾಟಕದ ನಿರ್ದೇಶನ ಜವಾಬ್ದಾರಿ ‘ಸಂಗೀತದ ಮಾಸ್ತರ’ನ ಮೇಲೆಯೇ ಇರುತ್ತದೆ.  ಸಂಗೀತದ ಮಾಸ್ತರನೇ ಇಲ್ಲಿ ಪ್ರಧಾನ ಪಾತ್ರಧಾರಿ. ನಾಟಕದ ಸೂತ್ರಧಾರ.

ಜನಪದ ರಂಗಭೂಮಿಯ ಪ್ರಮುಖ ರಂಗ ಪ್ರಕಾರಗಳಾದ ಪಾರಿಜಾತ, ಯಕ್ಷಗಾನ, ಬಯಲಾಟ – ಮುಂತಾದವುಗಳು ಸಂಗೀತದ ಪ್ರಾಧಾನ್ಯತೆಯನ್ನೇ ಹೊಂದಿದವುಗಳೆಂಬುದು ಸರ್ವವಿಧಿತ. ಜನಪದ ಪ್ರಕಾರಗಳಲ್ಲಿ ಮಾತು ಮಾತಿಗೂ ಸಂಗೀತ, ಹೆಜ್ಜೆ ಹೆಜ್ಜೆಗೂ ಹಾಡು. ನಾಟಕದ ಆರಂಭದಿಂದ ಅಂತ್ಯದವರೆಗೂ ಸಂಗೀತ ನಾಟಕದ ಜೀವನಾಡಿಯಾಗಿರುತ್ತದೆ. ಸಂಗೀತಗಾರನ ನಿರ್ದೇಶನದಂತೆ ಸಹಗಾಯಕರು ಜನಪದರ ವಿಶಿಷ್ಟ ಧಾಟಿಯೊಂದಿಗೆ ನಿರರ್ಗಳವಾಗಿ ರಂಗಗೀತೆಗಳನ್ನು ಹಿಮ್ಮೇಳದಲ್ಲಿ ಹಾಡುತ್ತಾ ರಂಜಿಸುವುದು ಇಲ್ಲಿಯ ವೈಶಿಷ್ಟ್ಯ.

ಜನಪದ ರಂಗಕಲಾವಿದರು ಶಾಸ್ತ್ರಬದ್ಧ ಸಂಗೀತ ಅಭ್ಯಾಸ ಮಾಡಿದವರಲ್ಲ. ಆದರೆ, ಸ್ವರ-ಲಯದ ಗತಿ ಗಮ್ಮತ್ತು ಅವರಿಗೆ ರಕ್ತಗತವಾಗಿಯೇ ಬಂದಿರುತ್ತವೆ. ತಮ್ಮ ಬದುಕಿನ ಕೆಲಸ ಕಾರ್ಯಗಳ ಜೊತೆಗೆ ತಾವೇ ಸಂಯೋಜಿಸಿದ ವಿಶಿಷ್ಟ ಧಾಟಿಯ ಮೂಲಕ ಜನಪದರೇ ರಚಿಸಿದ ಸಾಹಿತ್ಯವನ್ನು ಸರಾಗವಾಗಿ ಹಾಡಿ ನಾಟಕಕ್ಕೆ ಕಳೆ ಕಟ್ಟುತ್ತಾರೆ. ತನ್ಮೂಲಕ ಶ್ರೋತೃಗಳನ್ನು ಮುಗ್ಧರನ್ನಾಗಿಸುತ್ತಾರೆ.

ಉತ್ತರ ಕರ್ನಾಟಕದ ಪ್ರಮುಖ ಜನಪದ ರಂಗ ಪ್ರಕಾರವಾದ ‘ಶ್ರೀ ಕೃಷ್ಣ ಪಾರಿಜಾತ’ ದಲ್ಲಿ ಆರಂಭದಿಂದ ಅಂತ್ಯದವರೆಗೆ ಸಂಗೀತ ನಮ್ಮನ್ನು ತೇಲಿಸಿಕೊಂಡು ಹೋಗುವುದು. ಮಾತಿಗಿಂತ ಗೀತವೇ ಇಲ್ಲಿ ಪ್ರಧಾನ. ಇಲ್ಲಿ ಗೀತ ಮಾತು. ಗೀತೆ ಪ್ರಧಾನವಾಗಿದ್ದರೂ ಸಹ ನಾಟಕದ ರಂಜಕತೆಗೆ ಅದು ಯಾವ ಕಾರಣಕ್ಕೂ ಬಾಧೆಯೆನಿಸುವುದಿಲ್ಲ. ಕೇವಲ ಸಂಗೀತದ ಬಲದಿಂದ ಜನಪದ ರಂಗ ಪ್ರಕಾರಗಳು ಜೀವ ತುಂಬಿವೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯೆನಿಲ್ಲ. ಪ್ರತಿ ಕಲಾವಿದನು ಸಂಗೀತದ ತಾಲೀಮು ಪಡೆದಿರುತ್ತಾನೆ. ಪ್ರತಿಯೊಬ್ಬನಿಗೆ ಸಹಜವಾದ ಏರುಧ್ವನಿ ಇರುತ್ತದೆ. ಒಂದು ಪೂರ್ತಿಯಾದ ಪಾರಿಜಾತ ವಿಕ್ಷಿಸಬೇಕಾದಲ್ಲಿ ಮೂರು ರಾತ್ರಿ ನಾಟಕ ನೋಡಬೇಕಾಗುತ್ತದೆ. ಮೂರು ರಾತ್ರಿಯುದ್ದಕ್ಕೂ ಶೋತೃಗಳನ್ನು ಸುಲಭವಾಗಿ ಆಕರ್ಷಿಸುವಲ್ಲಿ, ಅದರಲ್ಲಿ ಆಸಕ್ತಿಯನ್ನು ವೃದ್ಧಿಸುವಲ್ಲಿ ಸಂಗೀತದ ಪಾತ್ರ ಗಮನಾರ್ಹವೆಂಬುದು ಗಮನಿಸಬೇಕಾದ ಮಾತು.

ಕರಾವಳಿಯ ಜನಪದ ರಂಗಪ್ರಕಾರವಾದ ‘ಯಕ್ಷಗಾನ’ ಸಂಪೂರ್ಣ ಸಂಗೀತಮಯವಾಗಿದೆಯೆಂದೇ ಹೇಳಬೇಕು. ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿತವೇ ಪ್ರಧಾನವಾಗಿಟ್ಟುಕೊಂಡು ಪ್ರದರ್ಶನ ನೀಡುವ ‘ಯಕ್ಷಗಾನ’ ಅಪ್ಪಟ ಜನಪದದ ಜೀವನಾಡಿಯಾಗಿದೆ. ಯಕ್ಷ ಮತ್ತು ಗಾನ ಈ ಎರಡು ಪದಗಳು ಸೇರಿ ಯಕ್ಷಗಾನವಾಗಿರುವ ಈ ಜನಪದ ರಂಗಕಲೆ ‘ಗಾನ’ ದ ವಿಶಿಷ್ಟ ಪ್ರಕಾರದ ಸಂಗೀತದ ಶಬ್ದವನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದೆ. ಸಂಗೀತದ ವಿಶೇಷ ಪರಿಣತ ಕಲಾವಿದರ ಹಿನ್ನೆಲೆ ಹಾಡುಗಾರಿಕೆ, ವಾದ್ಯ ನುಡಿಸುವಿಕೆಯಿಂದಾಗಿ ಯಕ್ಷಗಾನ ಇನ್ನಷ್ಟು ಪ್ರಖರವಾಗಿ ಜನಸಾಮಾನ್ಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ವಿವಿಧ ವೇಷಭೂಷಣದೊಂದಿಗೆ, ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ವಿಶಿಷ್ಟ ಭಂಗಿಯಲ್ಲಿ ನಟನೆ ಮಾಡುತ್ತಾ, ಸಂಗೀತವನ್ನು ಪ್ರಚುರಪಡಿಸುವ ಯಕ್ಷಗಾನ ಕಲೆ ಕೇಳಿಯೇ ಆನಂದಿಸಬೇಕು.

ಹೈದ್ರಾಬಾದ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರಸಾರದಲ್ಲಿರುವ ‘ಬಯಲಾಟ’, ಜನಪದ ರಂಗ ಪ್ರಕಾರದ ಪ್ರಮುಖ ಹಾಗೂ ವಿಶೇಷ ಆಕರ್ಷಣೆಯ ರಂಗ ಮಾಧ್ಯಮವಾಗಿದೆ. ಬಯಲಾಟದಲ್ಲಿ ಬರುವ ಸಣ್ಣಾಟ ಮತ್ತು ದೊಡ್ಡಾಟದ ರಂಗ ಪ್ರಯೋಗಗಳಲ್ಲಿಯೂ ಸಹ ಸಂಗೀತವೇ ಪ್ರಧಾನವಾಗಿರುವ ಅಂಶವನ್ನು ನಾವು ಕಾಣುತ್ತೇವೆ. ಪ್ರತಿ ಪಾತ್ರವು ಸಂಗೀತಮಯವಾಗಿರುತ್ತದೆ. ಹಾಡಿನ ಮೂಲಕವೇ ಕಥೆ ಮುಂದುವರೆಯುತ್ತದೆ. ಇಲ್ಲಿ ಸಹ ಮುಖ್ಯ ಗಾಯಕನೊಂದಿಗೆ ಸಹ ಗಾಯಕರು ವಾದ್ಯ ಸಮೇತರಾಗಿ ಹಿಮ್ಮೇಳದಲ್ಲಿ ಹಾಡುವರು. ಹಾಡಿನ ಮೂಲಕ ನಾಟಕ ಕಳೆ ಕಟ್ಟುತ್ತದೆ. ಸುಲಭವಾಗಿ ಶ್ರೋತೃಗಳನ್ನು ಆಕರ್ಷಿಸುತ್ತದೆ. ಇಲ್ಲಿ ಸಹ ಸಂಗೀತ ನಿರ್ದೇಶಕನೇ ನಾಟಕದ ಸೂತ್ರದಾರ. ಅವನದೇ ಪ್ರಧಾನ ಪಾತ್ರ.

ಜನಪದ ರಂಗ ಪ್ರಕಾರಗಳಲ್ಲಿ ಅನೇಕ ವಿಧದ ವಾದ್ಯಗಳನ್ನು ಬಳಸುವುದುಂಟು. ಶ್ರೀ ಕೃಷ್ಣ ಪಾರಿಜಾತದಲ್ಲಿ ಕಾಲಪೆಟಗಿ (ಕಾಲಿನಿಂದ ಭಾರಹಾಕಿ ನುಡಿಸುವ ಹಾರ್ಮೋನಿಯಂ) ದಪ್ಪವಾದ ತಾಳ, ಡಗ್ಗಾಗಳನ್ನು ಮಾತ್ರ ಉಪಯೋಗಿಸುತ್ತಾರೆ. ಯಕ್ಷಗಾನದಲ್ಲಿ ಕೇವಲ ಹೆಚ್ಚಾಗಿ ಸೂರ್ ಪೆಟ್ಟಿಗಿ, ಮದ್ದಳೆ ಮತ್ತು ತಾಳಗಳನ್ನು ಉಪಯೋಗಿಸುವುದುಂಟು. ಬಯಲಾಟಗಳಲ್ಲಿ ಹಾರ್ಮೋನಿಯಂ, ತಬಲಾಗಳನ್ನು,  ಗೆಜ್ಜೆಗಳನ್ನು ಉಪಯೋಗಿಸುವುದುಂಟು. ರಾಧಾ ನಾಟಕದಲ್ಲಿ ಹಾರ್ಮೋನಿಯಂ ಮತ್ತು ಡಗ್ಗಾಗಳನ್ನು, ಡಪ್ಪಿನಾಟದಲ್ಲಿ ಅದರ ಹೆಸರೇ ಹೇಳುವಂತೆ ‘ಡಪ್ಪು’ (ಚರ್ಮದಿಂದ ಮಾಡಿದ ಒಂದು ಜನಪದ ವಾದ್ಯ) ಇದರ ಸಹಾಯದಿಂದ ಇಡೀ ನಾಟಕವನ್ನು ಪ್ರದರ್ಶಿಸುತ್ತಾರೆ.

ಜನಪದ ರಂಗಭೂಮಿಯಲ್ಲಿಯ ರಂಗ ಸಂಗೀತ ಕಲಾವಿದರು ಸಾಮಾನ್ಯವಾಗಿ ಎತ್ತರದ ದನಿಯಲ್ಲಿ ಅಂದರೆ ಹಾರ್ಮೋನಿಯಂದ ಬಿಳಿ ನಾಲ್ಕು, ಕರೇ ಮೂರು ಅಥವಾ ಕರೇ ನಾಲ್ಕನೇ  ಪಟ್ಟಿಗೆ ಹಾಡುತ್ತಾರೆ.  ನಿರರ್ಗಳವಾಗಿ ಮೂರು ರಾತ್ರಿ ಸತತವಾಗಿ ಜನಪದ ರಂಗಕಲಾವಿದರು ಹಾಡುವುದನ್ನು ಕೇಳಿದರೆ ಯಾರಿಗಾದರೂ ಅಚ್ಚರಿಯಾಗದಿರದು. ಆದರೆ, ಅವರ ಧ್ವನಿ ಮಾತ್ರ ಕೊಂಚ ಮಟ್ಟವೂ ಕೊರ್ರ‍್ ಎನ್ನದೇ ನಿರಾಯಾಸವಾಗಿ ಮೂರು ಸಪ್ತಕದಲ್ಲಿ ಲೀಲಾಜಾಲವಾಗಿ ಹರಿಯುವುದನ್ನು ನೋಡಿದರೆ ಜನಸಾಮಾನ್ಯರಷ್ಟೇ ಏಕೆ ಬಹುದೊಡ್ಡ ಸಂಗೀತವಾದರೂ ಸಹ ಆಶ್ಚರ್ಯ ಪಡಬಲ್ಲರು.

ಜನಪದ ರಂಗಭೂಮಿಯ ರಂಗ ಸಂಗೀತ ಕಲಾವಿದರಿಗೆ ರಂಗದ ಮೇಲೆಯೇ ಸ್ಥಾನವಿರುವುದು ಒಂದು ವಿಶೇಷತೆ ಎನ್ನಬೇಕು. ಅಭಿನಯಕ್ಕೆ ಸರಿಸಮಾನವಾಗಿ ಸಂಗೀತಕ್ಕೆ ಸ್ಥಾನ ಇದೆ ಎನ್ನುವುದನ್ನು ನಾವು ಇಲ್ಲಿ ಕಂಡುಕೊಳ್ಳಬಹುದು. ಪ್ರತಿಯೊಬ್ಬ ನಟ ಹಾಗೂ ಸಹಗಾಯಕ ಆರಂಭದಲ್ಲಿ ಮುಖ್ಯ ಸಂಗೀತಗಾರ ಹಾಗೂ ವಾದ್ಯಗಳಿಗೆ ನಮಸ್ಕಾರ ಮಾಡಿಯೇ ರಂಗಕ್ಕೆ ಸಜ್ಜಾಗುತ್ತಾನೆ. ಅದು ಅವರ ಸಂಗೀತ ಕಲೆಯ ಗೌರವಕ್ಕೆ ಸಾಕ್ಷಿ.

ವೃತ್ತಿ ರಂಗಭೂಮಿ

ವೃತ್ತಿ ರಂಗಭೂಮಿಯ ಮೂಲಕ ರಂಗಭೂಮಿಗೆ ಹೆಚ್ಚಿನ ಘನತೆ, ಗೌರವ ಬಂದಿದೆ ಎಂದು ಹೇಳಬೇಕು. ಗ್ರಾಮೀಣ ಜನರು ತಮ್ಮ ತಮ್ಮ ಗ್ರಾಮದಲ್ಲಿ, ಜಾತ್ರೆ ಹಬ್ಬ ಹರಿದಿನಗಳಲ್ಲಿ ಜನಪದರಂಗ ಪ್ರದರ್ಶನ ಮಾಡುತ್ತ ತಮ್ಮ  ಗ್ರಾಮಕ್ಕೆ, ಗ್ರಾಮದ ಜನರಿಗೆ ಮಾತ್ರ ಮನರಂಜನೆ ಕೊಡಬಲ್ಲರು. ಆದರೆ ವೃತ್ತಿರಂಗಭೂಮಿ ಪ್ರತಿ ಗ್ರಾಮಕ್ಕೆ, ಹಳ್ಳಿ ಹಳ್ಳಿಗೆ, ನಗರ, ಪಟ್ಟಣ, ಪ್ರದೇಶಗಳಿಗೆ ಹೋಗಿ ರಂಗ ಪ್ರಯೋಗಗಳನ್ನು ಮಾಡಿ ಜನರಲ್ಲಿ ಕಲಾಭಿರುಚಿ ಹಾಗೂ ಕಲಾವೃದ್ಧಿಗಾಗಿ ತುಂಬ ಮಹತ್ವದ ಕಾರ್ಯ ಮಾಡಿದೆ. ನಾಟಕ ಪ್ರಯೋಗವೇ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತ ತನ್ಮೂಲಕ ಕಲಾ ಬದುಕಿಗೆ ತಮ್ಮ ಕಲಾಸೇವೆಯನ್ನು ನೀಡುವ ಮೂಲಕ ವೃತ್ತಿ ನಡೆಸುವ ‘ನಾಟಕ ಕಂಪನಿ’ ಗಳಿಗೆ ವೃತ್ತಿ ರಂಗಭೂಮಿಯೆಂದು ಕರೆಯಲಾಗುತ್ತದೆ.

ವೃತ್ತಿ ರಂಗಭೂಮಿಗೂ ಮತ್ತು ಸಂಗೀತಕ್ಕೂ ತುಂಬ ನಂಟು. ಜನಪದ ರಂಗಭೂಮಿ ಜನಪದ ದಾಟಿಯ ಹಾಡುಗಳಿಗೆ ಅಲಂಕೃತವಾಗಿದ್ದರೆ, ವೃತ್ತಿರಂಗಭೂಮಿ ಶಾಸ್ತ್ರೀಯ ಸಂಗೀತದಿಂದ ತುಂಬಿಕೊಂಡುಬಿಟ್ಟಿದೆ. ಪ್ರತಿಯೊಂದು ನಾಟಕ ಅದು ಕೇವಲ ನಾಟಕವೆಂದು ಕರೆಯದೆ ‘ಸಂಗೀತನಾಟಕ’ ವೆಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದಿದ್ದವು. ಸಂಗೀತವೇ ಪ್ರಧಾನ ಸ್ಥಾನ ಹೊಂದಿದ ವೃತ್ತಿರಂಗಭೂಮಿಯಲ್ಲಿ ನಟರೆಲ್ಲ ಗಾಯಕನಟರೆನಿಸಿದ್ದರು.

ವೃತ್ತಿ ರಂಗ (ಕಂಪನಿ ನಾಟಕ) ಭೂಮಿಯಲ್ಲಿ ಪಾತ್ರ ಮಾಡುವ ಪ್ರತಿ ನಟನೂ ಸಂಗೀತದ ಪ್ರಾಥಮಿಕ ಜ್ಞಾನ ಉಳ್ಳವನಾಗಿರುತ್ತಿದ್ದನು. ಒಳ್ಳೆಯ ಹಾಡಿನ ಸಾಹಿತ್ಯವನ್ನು ರಚಿಸಲು ನಾಟಕ ಕಂಪನಿಯಲ್ಲಿ ಕವಿಗಳಿಗೆ ಅವಕಾಶ ಕೊಡಲಾಗುತ್ತಿತ್ತು. ಅವರಿಗೆ ಯೋಗ್ಯ ಮರ್ಯಾದೆ ಮಾಡಲಾಗುತ್ತಿತ್ತು. ನಟರೊಟ್ಟಿಗೆ ಅವರಿಗೂ ಸಹ ಸಂಬಳ ಕೊಡಲಾಗುತ್ತಿತ್ತು. ಒಳ್ಳೆಯ ಸಾಹಿತ್ಯಕ್ಕೆ ಪರಿಣಾಮಕಾರಿಯಾಗಿ ಸಂಗೀತ ಸಂಯೋಜಿಸಬಲ್ಲ ಸಂಗೀತ ವಿದ್ವಾಂಸನನ್ನು ನಾಟಕ ಕಂಪನಿಯಲ್ಲಿ ಗೌರವಯುತ ಸ್ಥಾನ ನೀಡಿ, ಅವರಿಗೂ ಸಂಬಳ ನೀಡಲಾಗುತ್ತಿತ್ತು.

ಹಗಲು ವೇಳೆಯಲ್ಲಿ ನಟರಿಗೆ ಸಂಗೀತದ ತಾಲೀಮು ನೀಡುವುದು, ರಾತ್ರಿ ನಾಟಕದಲ್ಲಿ ಹಾರ್ಮೋನಿಯಂ ಸಾಥ ನೀಡಿ, ಅವರಿಗೆ ಸಂಗೀತ ನಿರ್ದೇಶನ ನೀಡುವುದು, ಸಂಗೀತಗಾರರ ಕೆಲಸವಾಗಿತ್ತು. ಹೆಸರಾಂತ ಸಂಗೀತಗಾರರ ಹಾಗೂ ಗಾಯಕನಟರ ಹೆಸರಿನಿಂದ ನಾಟಕ ಕಂಪನಿಗಳಿಗೆ ವಿಶೇಷ ಗೌರವ ದೊರೆಯುತ್ತಿತ್ತು.

ಕನ್ನಡ ವೃತ್ತಿ ರಂಗಭೂಮಿ ಒಂದರ್ಥದಲ್ಲಿ ಸಂಗೀತದ ಗರಡಿ ಮನೆಯೆನಿಸಿತ್ತು. ಆಗಿನ ದಿನಗಳಲ್ಲಿ ಸಂಗೀತ ಕಲೆಗೆ ಸಮಾಜದಲ್ಲಿ ಪ್ರತ್ಯೇಕ ಅಸ್ತಿತ್ವವಿರಲಿಲ್ಲ. ಸಂಗೀತ ಸಾರ್ವಜನಿಕ ಕಲಾ ಮಾಧ್ಯಮವಾಗಿ ಬೆಳೆದಿರಲಿಲ್ಲ. ನಾಟಕ ಕ್ಷೇತ್ರವೇ (ರಂಗಭೂಮಿ) ಸಂಗೀತದ ವೇದಿಕೆಯಾಗಿತ್ತು. ಯೋಗ್ಯ ಸಂಗೀತ ಗುರುವಿನ ಗರಡಿಯಲ್ಲಿ ತಾಲೀಮು ಪಡೆದ ನಟ ಗಾಯಕರು ಉತ್ತಮ ಸಂಗೀತ ಕಚೇರಿಗಳನ್ನು ಕೊಡುತ್ತಿದ್ದರು. ನಾಟಕದ ಮಧ್ಯದಲ್ಲಿಯೇ ಸಂಗೀತ ಕಚೇರಿಗಾಗಿ ಸನ್ನಿವೇಶವನ್ನು ತಯಾರಿಸಿ ‘ಸಂಗೀತ ಬೈಠಕ್’ ಏರ್ಪಡಿಸಲಾಗುತ್ತಿತ್ತು. ಕಂಪನಿಯ ಸಂಗೀತಗಾರರಿಗೆ ಒಂದು-ಒಂದುವರೆ ತಾಸು ಸಂಗೀತ ಕಚೇರಿ ನಡೆಯುತ್ತಿತ್ತು. ವೃತ್ತಿರಂಗಭೂಮಿಯಲ್ಲಿಯ ಸಂಗೀತ ಕಚೇರಿ ಸಂಗೀತ ಕಲಾವಿದನ ಒಂದು ಸಂಗೀತ ವೇದಿಕೆ ಎನಿಸಿತ್ತು.

ವೃತ್ತಿ ರಂಗ ಪ್ರಯೋಗದಲ್ಲಿ ಹಾಡುವ ಹಾಡುಗಳು ‘ರಂಗಗೀತೆ’ಗಳು. ಅವುಗಳು ಹಿಂದುಸ್ತಾನಿ ಶಾಶ್ತ್ರೀಯ ಖ್ಯಾಲ ಹಾಡುಗಾರಿಕೆಯ ಖೋಟಾಖ್ಯಾಲ ಮಾದರಿಯ ಗೀತೆಗಳು. ಅವುಗಳಲ್ಲಿ ಆಲಾಪ, ತಾನ, ಬೋಲ್ತಾನ, ಫೀರತ್, ಖಟ್ಕಾ ಮುರ್ಕಿ ಮುಂತಾದ ಶಾಸ್ತ್ರೀಯ ಗಾನ ಪ್ರಕಾರದ ಅಂಶಗಳು ಅದರಲ್ಲಿ ಸಮ್ಮಿಳಿತವಾಗಿವೆ. ರಂಗಗೀತೆಗಳಿಗೆ ನಾಟ್ಯಗೀತೆಗಳೆಂದು ರಂಗ ಸಂಗೀತವೆಂದು ಕರೆಯುವುದುಂಟು.

ರಂಗ ಗೀತೆಗಳನ್ನು ಕೇಳುತ್ತ ಮೈ ಮರೆಯುವ ಶೋತೃ ವರ್ಗ ‘ಒನ್ಸ್ ಮೋರ್’ಗಳ ಸುರಿಮಳೆಗರೆಯುತ್ತಿದ್ದರು. ಶೋತೃಗಳೇ ದೇವರೆಂದು ಭಾವಿಸಿದ್ದ ಅಂದಿನ ಕಲಾವಿದರು ಅವರ ಕೋರಿಕೆಗೆ ಭಂಗ ತರದಂತೆ ಅವರು ಇಷ್ಟಪಟ್ಟ ಹಾಡನ್ನೇ ಮತ್ತೆ ಮತ್ತೆ ಹಾಡುತ್ತಿದ್ದರು. ರಸಿಕ ಶೋತೃಗಳು ಬಹುಮಾನಗಳ ರೂಪದಲ್ಲಿ ಹಣವನ್ನು ಕಲಾವಿದರಿಗೆ ಕೊಡುತ್ತಿದ್ದರು. ಶೋತೃಗಳ ಮೇಲೆ ಗಾಢವಾದ ಪರಿಣಾಮ ಬೀಳುವಷ್ಟು ಅವು ಮಧುರತೆಯ ಸಂಗೀತ ಮೋಡಿಯಿಂದ ಕೂಡಿರುತ್ತಿದ್ದವು.

ಹೆಸರಾಂತ ಸಂಗೀತಗಾರರಿಂದ ನಾಟಕ ಕಂಪನಿಗೆ ವಿಶೇಷ ಮನ್ನಣೆ ದೊರೆಯುತ್ತಿತ್ತು. ಕಂಪನಿ ಹೋದ ಹೋದಲ್ಲೆಲ್ಲಾ ಜಯಭೇರಿ ಮೊಳಗುತ್ತಿತ್ತು. ಆ ಕಂಪನಿ ಆ ಸಂಗೀತ ಕಲಾವಿದನಿಂದ ಅಧಿಕ ಆದಾಯ ದೊರೆಯುತ್ತಿತ್ತು. ಹಾಗಾಗಿ ಅನೇಕ ವೃತ್ತಿ ನಾಟಕ ಕಂಪನಿ ಮಾಲೀಕರು ತಮ್ಮ ತಮ್ಮ ಕಂಪನಿಯಲ್ಲಿ ದೊಡ್ಡ ದೊಡ್ಡ ಸಂಗೀತಗಾರರನ್ನು, ಉಸ್ತಾದರನ್ನು ಇಟ್ಟುಕೊಂಡು ಅವರಿಗೆ ಸೂಕ್ತ ಉಪಚಾರ, ಯೋಗ್ಯ ಸಂಭಾವನೆ ನೀಡುತ್ತಿದ್ದರು. ‘ಈ ದಿನ ಇಂತಹ ಉಸ್ತಾದ್ (ಸಂಗೀತಗಾರ) ಸಂಗೀತ್ ಬೈಠಕ್ ಇದೆ’ ಎಂಬ ಕಂಪನಿಯ ವಿಶೇಷ ಪ್ರಚಾರದಿಂದ ಅಂದು ಕಂಪನಿಗೆ ಅತ್ಯಧಿಕ ಆದಾಯ ಬರುತ್ತಿತ್ತು.

ಉತ್ತರ ಕರ್ನಾಟಕವು ವೃತ್ತಿರಂಗ ಭೂಮಿಯ ತವರು ಮನೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಕಂಪನಿ ನಾಟಕಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಉತ್ತರ ಕರ್ನಾಟಕಕ್ಕೆ ಸಲ್ಲುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಈ ಭಾಗದಲ್ಲಿ ಅನೇಕ ಕಂಪನಿ ನಾಟಕಗಳು ತಲೆಯೆತ್ತಿದ್ದವು. ಆಗಿನ ದಿನಗಳಲ್ಲಿ ದೂರದರ್ಶನ ಮತ್ತು ಚಲನಚಿತ್ರ ಸಂಗೀತದ ಹಾವಳಿ ಇಲ್ಲದ್ದರಿಂದ ಅಂದಿನ ರಸಿಕ ಜನರಿಗೆ ನಾಟಕ ಕಂಪನಿಗಳೇ ಮನರಂಜನೆಯ ಮಾಧ್ಯಮವಾಗಿದ್ದವು.

ಆಗಿನ ಕಾಲದ ಕಂಪನಿ ನಾಟಕಗಳಲ್ಲಿ ಕಂಪನಿಯ ಮಾಲೀಕರು ದೊಡ್ಡ ದೊಡ್ಡ ಸಂಗೀತಗಾರರನ್ನು ತಮ್ಮ ಕಂಪನಿಯಲ್ಲಿ ಇಟ್ಟುಕೊಂಡಿದ್ದರು. ಕಂಪನಿ ಮಾಲೀಕರು ಸ್ವತಃ ಸಂಗೀತಾರಾಧಕರಾಗಿದ್ದರು. ತಮ್ಮ ಕಂಪನಿಯಲ್ಲಿ ಸಂಗೀತಕ್ಕೆ ಆಶ್ರಯ ನೀಡಿ ಅದನ್ನು ಸಮಾಜದಲ್ಲಿ ಬೆಳೆಯಲು ಪ್ರೋತ್ಸಾಹ ನೀಡಿದರು. ಅಂಥವರಲ್ಲಿ ವಾಮನ್ ರಾವ್  ಮಾಸ್ತರರ ‘ವಿಶ್ವಗುಣಾದರ್ಶ ನಾಟಕ ಮಂಡಳಿ’ ಹೊಂಬಳ ಶಂಕರಗೌಡರ ‘ಹೊಂಬಳ ನಾಟಕ ಮಂಡಳಿ’ಯ ರಾಶಿ ಭೈರಪ್ಪನವರ ‘ವಾಣಿವಿಲಾಸ ನಾಟಕ ಮಂಡಳಿ’ ಶಿರಹಟ್ಟಿ ವೆಂಕೋಬರಾಯರ ‘ನಾಟಕ ಮಂಡಳಿ’ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ‘ಶ್ರೀ ಕುಮಾರೇಶ್ವರ ಕೃಪಾಪೋಷಿತ ಸಂಗೀತ ನಾಟಕ ಮಂಡಳಿ’, ಸೋನಬಾಯಿ ದೊಡ್ಡಮನಿಯವರ ನಾಟಕ ಕಂಪನಿ, ಏಣಗಿ ಬಾಳಪ್ಪನವರ ನಾಟಕ ಕಂಪನಿ, ಚಿತ್ತರಗಿ ಗಂಗಾಧರ ಶಾಶ್ತ್ರಿಗಳ ‘ಶ್ರೀ ಕುಮಾರ ವಿಜಯ ನಾಟ್ಯ ಸಂಘ’ ಚಿಕ್ಕೋಡಿಯ ಶ್ರೀ ಶಿವಲಿಂಗ ಸ್ವಾಮಿಗಳ  ‘ಶ್ರೀ ಸಿರಸಂಗಿ ಲಿಂಗರಾಜ ಸಂಗೀತ ನಾಟಕ ಮಂಡಳಿ’ ಹಾಗೂ ‘ಶ್ರೀ ಶಿರಸಿ ಮಾರಿಕಾಂಬಾ ಪ್ರಾಸಾದಿಕ ನಾಟಕ ಮಂಡಳಿ’, ಹಲಗೇರಿಯ ‘ಶ್ರೀ ಹಾಲಸಿದ್ದೇಶ್ವರ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ’-ಇತ್ಯಾದಿ ನಾಟಕ ಕಂಪನಿಗಗಳು, ಅವೆಲ್ಲವುಗಳು ಒಂದು ಕಾಲದಲ್ಲಿ ಸಂಗೀತದ ಪಾಠಶಾಲೆಗಳಾಗಿದ್ದವು.

ಕನ್ನಡ ವೃತ್ತಿ ನಾಟಕ ಕಂಪನಿಗಳ ಮೇಲೆ ಮರಾಠಿ ರಂಗಭೂಮಿಯ ಪ್ರಭಾವ ಅಧಿಕವಾಗಿದೆ. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮಹಾರಾಷ್ಟ್ರದ ನಾಟಕ ಕಂಪನಿಗಳು ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳೆನಿಸಿದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ವಿಜಾಪುರಗಳಲ್ಲಿ ಬೀಡುಬಿಟ್ಟು ನಾಟಕ ಆಡಲು ಪ್ರಾರಂಭಿಸಿದಂದಿನಿಂದಲೇ ಉತ್ತರ ಕರ್ನಾಟಕದಲ್ಲಿ ಕಂಪನಿ ನಾಟಕಗಳು ಹುಟ್ಟಿಕೊಂಡವು. ‘ಕನ್ನಡ ನಾಟಕದ ಪ್ರಥಮ ಗುರು’ ಎಂಬ ಅಭಿದಾನಕ್ಕೆ ಪಾತ್ರರಾದ ಶಾಂತಕವಿಗಳು ಉತ್ತರ ಕರ್ನಾಟಕದಲ್ಲಿ ವೃತ್ತಿ ರಂಗಭೂಮಿಯನ್ನು ಹುಟ್ಟುಹಾಕಿದರು. ಅಂದಿನಿಂದ ಕರ್ನಾಟಕದ ನಾಟಕಕಲಾಪ್ರೇಮಿಗಳು, ಕಲಾಸಕ್ತರು, ಹವ್ಯಾಸಿಗಳು ಮಂಡಳಿಗಳನ್ನು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸಿ, ತಮ್ಮದೇ ಆದ ಕೊಡುಗೆಗಳನ್ನು ನೀಡಿದರು.

ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯ ಭದ್ರವಾದ ಅಡಿಪಾಯವನ್ನು ಹಾಕಿದವರೆಂದರೆ ರಾವಬಹಾದ್ದೂರ ಶಿವಮೂರ್ತಿಸ್ವಾಮಿ ಕಣಬರ್ಗಿಮಠ ೧೮೯೯ರಷ್ಟು ಹಿಂದೆಯೇ ಅವರು ‘ಶ್ರೀ ಕಾಡಸಿದ್ದೇಶ್ವರ ನಾಟಕ ಮಂಡಳಿ’ಯನ್ನು ಸ್ಥಾಪಿಸಿ, ಮರಾಠಿಗರ ಆರ್ಭಟದ ಆಹ್ವಾನವನ್ನು ಸ್ವೀಕರಿಸಿ, ಕನ್ನಡ ನಾಟಕ ಕಲೆಯ ಪುನರುದ್ಧಾರಕ್ಕೆ ಟೊಂಕಕಟ್ಟಿ ನಿಂತರು.

ಬಣ್ಣದ ಬದುಕಿಗೆ ಮರುಳಾಗಿ ಜೀವನ ರಂಗವನ್ನು ಅಸಡ್ಡೆಗೆ ಈಡು ಮಾಡಿದ ಕಲಾವಿದರು ಉಂಟು. ಆದರೆ ಆ ಬಣ್ಣದ ಬದುಕಿನಲ್ಲಿದ್ದುಕೊಂಡು ಬಣ್ಣದ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ತಮ್ಮ ಬದುಕನ್ನು ಬಂಗಾರಗೊಳಿಸಿಕೊಂಡ ಕಲಾವಿದರು ಅನೇಕರಿದ್ದಾರೆ. ಅಂಥ ಸಂಗೀತಕಲಾವಿದರಲ್ಲಿ ಹಿಂದುಸ್ತಾನಿ ಸಂಗೀತದ ಮಹಾನ್ ಗಾಯನಾಚಾರ್ಯರೆನಿಸಿದ ಸವಾಯಿ ಗಂಧರ್ವ, ಪಂ. ನೀಲಕಂಠ ಬುವಾ ಆಲೂರಮಠ (ಮಿರಜ್ಕರ್), ಪಂ. ಮಲ್ಲಿಕಾರ್ಜುನ ಮನಸೂರ, ಬಸವರಾಜ ಮನಸೂರ, ಪಂ. ಬಸವರಾಜ ರಾಜಗುರು, ಗುರುರಾವ ದೇಶಪಾಂಡೆ, ಪಂ. ಭೀಮಸೇನ ಜೋಶಿ, ಗಂಗೂಬಾಯಿ ಗುಳೆದಗುಡ್ಡ, ಸೋನುಬಾಯಿ ದೊಡ್ಮನಿ, ಲಿಂಗರಾಜಬುವಾ ಯರಗುಪ್ಪಿ, ಬೇವೂರ  ಬಾದಶಹಾ, ಪಂ.  ಸಿದ್ಧರಾಮ ಜಂಬಲದಿನ್ನಿ, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಅರ್ಜುನಸಾ ನಾಕೋಡ, ಚಂದ್ರಶೇಖರ ಪುರಾಣಿಕಮಠ, ಗಂಗಾಧರಪ್ಪ ಮುರಗೋಡ ಮತ್ತು ಚನ್ನಬಸಪ್ಪ ಕವಲಿ ಇನ್ನೂ ಅನೇಕರು ಉಲ್ಲೇಖನೀಯರಾಗಿದ್ದಾರೆ. ಈ ಎಲ್ಲ ಸಂಗೀತ ಕಲಾವಿದರು ನಾದಕ್ಕೆ ಮನಸೋತು ನಾಟಕ ಕಂಪನಿ ಸೇರಿ ಶಿಕ್ಷಣ ಪಡೆದು ರಂಗಭೂಮಿ ಹಾಗೂ ಸಂಗೀತ ಎರಡೂ ಕ್ಷೇತ್ರಕ್ಕೆ ಹೆಸರು ತಂದವರಾಗಿದ್ದಾರೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಇಂದು ಅಖಿಲ ಭಾರತ ಗಾಹೂ ಅಂತರಾಷ್ಟ್ರೀಯ ಖ್ಯಾತಿ ಪಡೆದಿರುವ ಭಾರತದ ಸರ್ವೊತ್ತಮ ಸಂಗೀತಗಾರರೆನಿಸಿದ ಪಂ. ಮಲ್ಲಿಕಾರ್ಜೂನ ಮನ್ಸೂರ, ಸವಾಯಿ ಗಂಧರ್ವ, ಪಂ. ಬಸವರಾಜ ರಾಜಗುರು, ಪಂ. ಭೀಮಸೇನ ಜೋಶಿ, ಪಂ. ಗುರುರಾವ ದೇಶಪಾಂಡೆ ಮುಂತಾದವರೆಲ್ಲ ಒಂದು ಕಾಲದಲ್ಲಿ ತಮ್ಮ ಬದುಕಿನ ಅರ್ಧ ಜೀವಮಾನವನ್ನು ನಾಟಕ ಕಂಪನಿಗಳಲ್ಲಿಯೇ ಕಳೆದವರಾಗಿದ್ದಾರೆ. ನಾಟಕ ಕ್ಷೇತ್ರ ಅವರ ಪಾಲಿಗೆ ಸಂಗೀತದ ಗರಡಿಮನೆ. ನಾಟಕ ಕಂಪನಿಯಲ್ಲಿ ಪಾತ್ರ ಮಾಡುತ್ತ, ಸಂಗೀತ ಕಲಿಯುತ್ತ ತಮ್ಮ ಬದುಕನ್ನೇ ಕಲೆಗಾಗಿ ಅರ್ಪಿಸಿಕೊಂಡವರಾಗಿದ್ದಾರೆ. ಇಂತಹ ಮಹಾಣ್ ಸಂಗೀತಗಾರರನ್ನು ತಯಾರಿಸಿಕೊಟ್ಟ ರಂಗಭೂಮಿಯು ಸಂಗೀತ ರಂಗಕ್ಕೆ ಮಹದುಪಕಾರ ಮಾಡಿದೆಯೆಂದು ಹೇಳಬೇಕು. ಆ ಮಹಾನ್ ಕಲಾವಿದರುಗಳೆಲ್ಲ ಸಂಗೀತ ಕ್ಷೇತ್ರದಲ್ಲಿ ಅಪಾರ ಖ್ಯಾತಿಯನ್ನು ಪಡೆಯಲು, ಅಸಂಖ್ಯ ರಸಿಕರ ಮನವನ್ನು ಸೂರೆಗೊಳ್ಳಲು ಮುಖ್ಯ ಕಾರಣವೆಂದರೆ ರಂಗಭೂಮಿಯೆ.

ಕನ್ನಡದ ವೃತ್ತಿರಂಗಭೂಮಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ನೆರೆಯ ಮಹಾರಾಷ್ಟ್ರದಲ್ಲಿ ಸಂಗೀತವೇ ಪ್ರಧಾನವಾದ ನಾಟಕ ಕಂಪನಿಗಳೇ ತಲೆ ಎತ್ತಿ ನಿಂತಿದ್ದವು. ‘ಬಾಲಗಂಧರ್ವ’ ಎಂಬ ಹೆಸರಿನಿಂದ ಖ್ಯಾತನಾಮರೆನಿಸಿದ್ದ ನಾರಾಯಣ ರಾಜಹಂಸ ಅವರು ತಮ್ಮದೇ ಆದ ಮರಾಠಿ ನಾಟಕ ಕಂಪನಿಯನ್ನು ಕಟ್ಟಿ ರಂಗಭೂಮಿಯಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸೂಕ್ತ ಸ್ಥಾನ ಕಲ್ಪಿಸಿ ಕ್ರಾಂತಿಯನ್ನೇ ಮಾಡಿದರು. ಬಾಲಗಂಧರ್ವರ ಶರೀರ ಹಾಗೂ ಶರೀರ ಅಷ್ಟೇ ಸಮೃದ್ಧ. ಪುರುಷರೇ ಸ್ತ್ರೀ ಪಾತ್ರ ವಹಿಸುತ್ತಿದ್ದ ದಿನಗಳವು. ಆ ದಿನಗಳಲ್ಲಿ ಸ್ವತಃ ಬಾಲಗಂಧರ್ವರು ಸ್ತ್ರೀ ಪಾತ್ರಧಾರಿಗಳಾಗಿ ನಟನೆ ಮಾಡುತ್ತಿದ್ದರು. ರೂಪದಲ್ಲಿ, ಕಂಠದಲ್ಲಿ, ಸ್ಪೂರದ್ರೂಪಿ ಮಹಿಳಾ ಕಲಾವಿದೆಯರನ್ನೂ ನಾಚಿಸುವಂತಹ ಪಾತ್ರ ಅವರದಾಗಿತ್ತು. ಸ್ವತಃ ಸಂಗೀತ  ಕಲಾವಿದರಾಗಿದ್ದ ಬಾಲಗಂಧರ್ವ ರಂಗಭೂಮಿಯಲ್ಲಿ ಸಂಗೀತದ ಕ್ರಾಂತಿಯನ್ನೇ ಮಾಡಿದ್ದಾರೆ.

ಬಾಲಗಂಧರ್ವರ ನಾಟಕ ಕಂಪನಿಯಲ್ಲಿ ಹೆಸರಾಂತ ಸಂಗೀತಕಾರರೆನಿಸಿದ್ದ ಗಾಯಕಿ ಶ್ರೀಮತಿ ಹೀರಾಬಾಯಿ ಬಡೋದೆಕರ ಹಾಘೂ ಪ್ರಸಿದ್ಧ ತಬಲಾವಾದಕ ಉಸ್ತಾದ್ ಅಹಮದ್ ಜಾನ್ ತಿರಖವಾ ಮುಂತಾದವರು ಇದ್ದರು. ಇಂತಹ ಮಹಾನ್ ಸಂಗೀತಗಾರರ ಉಪಸ್ಥಿತಿ ಹಾಗೂ ಅಭಿನಯ ಹಾಗೂ ಸಂಗೀತಗಳೆರಡರಲ್ಲೂ  ಖ್ಯಾತಿ  ಪಡೆದಿದ್ದ ಬಾಲಗಂಧರ್ವ ಮುಂತಾದವರಿಂದ ಮರಾಠಿ ರಂಗಭೂಮಿ ಜನಪ್ರಿಯತೆಯ ಉತ್ತುಂಗ ಶಿಖರಕ್ಕೆ ಏರಿತು. ಮಹಾನ್ ಸಂಗೀತಗಾರರೆನಿಸಿದ್ದ ಭಾಸ್ಕರಬುವಾ ಬಖಲೆ, ಮಾಸ್ಟರ್ ದೀನಾನಾಥ ಮಂಗೇಶ್ವರ, ಮಾಸ್ಟರ ಕೃಷ್ಣರಾವ, ಗೋವಿಂದ ರಾವ್ ಟೇಂಬೆ – ಮುಂತಾದ ಮಹಾನ್ ಸಂಗೀತ ರಸ ಋಷಿಗಳ ಸಮಾವೇಶದಿಂದಾಗಿ ಮರಾಠಿ ರಂಗಭೂಮಿ ಅಪಾರ ಖ್ಯಾತಿ ಗಳಿಸಲು ಸಾಧ್ಯವಾಯಿತು.

ಬಾಲಗಂಧರ್ವರು ಮರಾಠಿ ರಂಗಭೂಮಿಯಲ್ಲಿ ಜನಪ್ರಿಯತೆ ಗಿಟ್ಟಿಸಿದ ದಿನಗಳಲ್ಲಿ ಕನ್ನಡದ ಖ್ಯಾತ ರಂಗಭೂಮಿಯ ಸಂಗೀತ ಕಲಾವಿದ ‘ಸವಾಯಿ ಗಂಧರ್ವ’ ಎಂಬ ಅಭಿದಾನದಿಂದ ಖ್ಯಾತರಾಗಿದ್ದ ರಾಮಭಾವು ಕುಂದಗೋಳಕರ ಅವರು ಹಿಂದುಸ್ತಾನಿ ಸಂಗೀತದ ವಿಖ್ಯಾತ ಗಾಯಕರು. ಅವರು ಮಹಾರಾಷ್ಟ್ರದಲ್ಲಿ ಸ್ವತಂತ್ರ ನಾಟಕ ಕಂಪನಿ ಸ್ಥಾಪಿಸಿ ತನ್ಮೂಲಕ ಮಹಾರಾಷ್ಟ್ರದಲ್ಲಿ ಕನ್ನಡ ಹಾಗೂ ಮರಾಠಿ ನಾಟಕಗಳನ್ನು ಪ್ರದರ್ಶಿಸಿ ಮಹಾರಾಷ್ಟ್ರದ ಕಲಾಪ್ರೇಮಿಗಳಿಂದ ‘ಸವಾಯಿ ಗಂಧರ್ವ’ ಎಂಬ ಬಿರುದನ್ನು ಪಡೆದದ್ದು ಸಾಮಾನ್ಯ ಮಾತಲ್ಲ. ಈ ಬಿರುದು ಪಡೆದುದು ರಂಗಭೂಮಿಯಲ್ಲಿ ಎಂಬುದು ಗಮನಾರ್ಹ. ಎಂತಹ ಅದ್ಭುತ ಗಾಯನ ಕಚೇರಿ ನಾಟಕದಲ್ಲಿ ನಡೆಯುತ್ತಿದ್ದಾಗ ಮಹಾರಾಷ್ಟ್ರದ ಕಲಾರಸಿಕರು ರಾಮಭಾವು. ಅವರಿಗೆ ಈ ಬಿರುದು ಕೊಟ್ಟದ್ದನ್ನು ಗಮನಿಸಿದರೆ ರಂಗಭೂಮಿಯಲ್ಲಿ ಸಂಗೀತ ಕಲೆಗಿರುವ ಸ್ಥಾನದ ಬಗೆಗೆ ನಮಗೆ ಸ್ಪಷ್ಟವಾಗುವುದರಲ್ಲಿ ಸಂದೇಹವಿಲ್ಲ.

ಮಹಾರಾಷ್ಟ್ರದ ರಾಜ್ಯದಲ್ಲಿ ಕನ್ನಡದ ಕಲಾವಿದ ಮಹಾರಾಷ್ಟ್ರೀಯರಿಂದಲೇ ಬಿರುದು ಪಡೆದುದು ಸಣ್ಣ ಮಾತೇನಲ್ಲ. ಅಂತಹ ಬಿರುದು ಪ್ರಾಪ್ತಿಗೆ ಕಾರಣವಾದುದು ರಂಗಭೂಮಿಯೇ ಎಂಬುದು ಇಲ್ಲಿ ಗಮನಿಸಬೇಕಾದ ಮಾತು.

ಉತ್ತರ ಕರ್ನಾಟಕದ ವೃತ್ತಿ ನಾಟಕ ಕಂಪನಿಗಳ ಮೇಲೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಭಾವ ಬೀರಲು ಕಾರಣವಾದುದು ನೆರೆಯ ಮಹಾರಾಷ್ಟ್ರದ ಮರಾಠಿ ರಂಗಭೂಮಿ ಹಾಗೂ ಮೈಸೂರು ಮಹಾರಾಜರ ಆಸ್ಥಾನ ಸಂಗೀತಗಾರರಾಗಿದ್ದ ಸುಪ್ರಸಿದ್ಧ ಸಂಗೀತಗಾರರಾದ ಆಗ್ರಾ ಘರಾಣೆಯ ಉಸ್ತಾದ್ ನತ್ಥನ್ ಖಾನರ ಪ್ರಭಾವಗಳೆಂದು ಹೇಳಬೇಕು. ಕರ್ನಾಟಕದ ಉತ್ತರದಲ್ಲಿ ಮರಾಠಿ ರಂಗಭೂಮಿ ದಕ್ಷಿಣದಲ್ಲಿ ಮೈಸೂರು ಮಹಾರಾಜರ ಹಿಂದುಸ್ತಾನಿ ಸಂಗೀತದ ಪ್ರಭಾವ – ಇವುಗಳ ಪರಿಣಾಮವಾಗಿ ಉತ್ತರ ಕರ್ನಾಟಕದಲ್ಲಿ ವೃತ್ತಿ ನಾಟಕ ಕಂಪನಿಗಳಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬೆಳೆದು ಬಂದಿತು.

ಮೂಲದಿಂದ ಕರ್ನಾಟಕದ ಗುರ್ಲಹೊಸೂರಿನವರಾಗಿದ್ದು, ನಿವಾಸದಿಂದ ಮಹಾರಾಷ್ಟ್ರದವರಾಗಿದ್ದ ಅಣ್ಣಾಸಾಹೇಬ ಕಿರ್ಲೋಸ್ಕರ ಮರಾಠಿ ರಂಗಭೂಮಿಯ ಬಹುದೊಡ್ಡ ಹೆಸರು. ರಂಗಭೂಮಿ ಹಾಘೂ ಸಂಗೀತ ಕಲೆಯ ಬಗೆಗೆ ಅಪಾರ ಪ್ರೀತಿ ಅಭಿಮಾನವುಳ್ಳವರಾಗಿದ್ದ ಅವರು ತಾವೇ ಸ್ವತಃ ‘ಕಿರ್ಲೋಸ್ಕರ ನಾಟಕ ಕಂಪನಿ’ ಸ್ಥಾಪಿಸಿ, ತನ್ಮೂಲಕ ಅನೇಕ ಸಂಗೀತಗಾರರಿಗೆ ತಮ್ಮ ನಾಟಕ ಕಂಪನಿಯಲ್ಲಿ ಆಶ್ರಯ ನೀಡಿ ಮಹಾರಾಷ್ಟ್ರದ ತುಂಬೆಲ್ಲ ಹೆಸರು ಮಾಡಿದರು. ಅವರ ಕಂಪನಿ ನಾಟಕದ ಪ್ರಭಾವದಿಂದಾಗಿ ಕನ್ನಡ ವೃತ್ತಿರಂಗಭೂಮಿಯ ಮೇಲೆ ಗಾಢ ಪ್ರಭಾವ ಬೀರಿತು. ಸ್ವಾತಂರ್ತ್ಯ ಪೂರ್ವದ ಕನ್ನಡ ನಾಟಕ ಕಂಪನಿ ಹಾಗೂ ನೆರೆಯ ಮಹಾರಾಷ್ಟ್ರದ ಮರಾಠಿ ನಾಟಕ ಕಂಪನಿಯ ಪ್ರಭಾವದಿಂದಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ವೃತ್ತಿ ನಾಟಕ ಕಂಪನಿಗಳಲ್ಲಿ ಸಂಗೀತ ವಿಶೇಷ ಸ್ಥಾನವನ್ನು ಪಡೆಯಿತೆಂದು ಹೇಳಬೇಕು.

ಮೈಸೂರು ಭಾಗದಲ್ಲಿ ಎ.ವಿ. ವರದಾಚಾರ್ಯರು ತಮ್ಮ ಕಂಪನಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಧಾನವಾಗಿರಿಸಿಕೊಂಡು ಶಾಸ್ತ್ರೀಯ ಸಂಗೀತವನ್ನು ಬೆಳೆಸಿದರೆ ಉತ್ತರ ಕರ್ನಾಟಕ ಭಾಗದಲ್ಲಿ ವಾಮನ ರಾವ್ ಮಾಸ್ತರ್ ಮೊದಲಾದವರು ತಮ್ಮ ವಿಶ್ವಗುಣಾದರ್ಶ ನಾಟಕ ಕಂಪನಿಯ ಮೂಳಕ ಹಿಂದುಸ್ತಾನಿ ಸಂಗೀತಕ್ಕೆ ತುಂಬ ಪ್ರಚಾರ ಹಾಗೂ ಪ್ರಸಾರ ನೀಡಿದರು.

ಇಂದಿನ ವೃತ್ತಿ ನಾಟಕ ಕಂಪನಿಗಳು ‘ಪ್ರವೃತ್ತಿ ನಾಟಕ ಕಂಪನಿ’ಗಳೆನಿಸಿಬಿಟ್ಟಿವೆ. ಅವುಗಳು ತಮ್ಮ ವೃತ್ತಿಧರ್ಮವನ್ನೇ ಮರೆತು ಪ್ರವೃತ್ತಿಯತ್ತ ದಾಪುಗಾಲಿಡುತ್ತಿರುವುದು ತುಂಬ ಖೇದದಿಂದ ಹೇಳುವ ಮಾತಾಗಿದೆ. ಬದುಕಿನ ಮೌಲ್ಯಗಳನ್ನು ಪ್ರತಿಬಿಂಬಿಸುವ ಧ್ಯೇಯವನ್ನಿಟ್ಟುಕೊಂಡು ಸಮಾಜದ ಡೊಂಕನ್ನು ಅಭಿನಯದ ಮೂಳಕ ತಿದ್ದುವ ಪ್ರಯತ್ನದಲ್ಲಿ ವೃತ್ತಿ ನಾಟಕ ಕಂಪನಿಗಳು ಹುಟ್ಟಿಕೊಂಡು  ಬೆಳೆದು ಬಂದಿದ್ದರೆ, ಇಂದಿನ ವೃತ್ತಿ ಕಂಪನಿ ನಾಟಕಗಳು ಅಶ್ಲೀಲ ಸಾಹಿತ್ಯದ, ಕಳಪೆ ಭಾಷೆಯ, ನಿರಸ ಪ್ರಯೋಗದ ತಾಣವಾಗಿದೆ. ಶಾಸ್ತ್ರೀಯ ಸಂಗೀತದ ಸ್ಥಾನವನ್ನು ಚಲನಚಿತ್ರ ಸಂಗೀತ ಆಕ್ರಮಿಸಿಬಿಟ್ಟಿದೆ. ಜೀವನದ ಮುಖ್ಯ ಧ್ಯೇಯವೇ ಕಲಾ ಪ್ರಪಂಚಕ್ಕೆ ಮುಡುಪಾಗಿಟ್ಟಿದ್ದ ಅಂದಿನ ನಟರ ಸ್ಥಾನದಲ್ಲಿ ಅಸಹ್ಯ ವರ್ತನೆಯ, ಕಲಾಹೀನ ಪಾತ್ರಧಾರಿಗಳು ಇಂದಿನ ರಂಗಭೂಮಿಯನ್ನು ಆವರಿಸಿಬಿಟ್ಟಿದ್ದಾರೆ.

ಈ ಬೆಳವಣಿಗೆ ಇಂದಿನ ವೃತ್ತಿರಂಗಭೂಮಿಗೆ ಆರೋಗ್ಯಕರ ಲಕ್ಷಣವೇನಲ್ಲ. ಒಂದು ಕಾಲದಲ್ಲಿ ಮಾನವೀಯ ಮೌಲ್ಯಗಳ ಸಾಕ್ಷಾತ್ಕಾರವನ್ನು ಪ್ರತಿಬಿಂಬಿಸುವ ಧ್ಯೇಯಗಳನ್ನು ಅಂದಿನ ವೃತ್ತಿ ನಾಟಕ ಕಂಪನಿಗಳು ಪಡೆದಿದ್ದರೆ ಇಂದಿನ ವೃತ್ತಿ ನಾಟಕ ಕಂಪನಿಗಳು ಅದಕ್ಕೆ ವ್ಯತಿರಿಕ್ತವಾದ ವಾತಾವರಣವನ್ನು ಸಮಾಜದಲ್ಲಿ ನಿರ್ಮಿಸಿರುವುದು ತುಂಬ ಕಳವಳಕಾರಿಯಾದ ವಿಷಯವಾಗಿದೆ. ಇದಕ್ಕೆಲ್ಲ ಯಾರು ಕಾರಣರೆಂದು ವೃತ್ತಿನಾಟಕ ಕಂಪನಿ ಹಾಗೂ ಶ್ರೋತೃವರ್ಗವೆಂದು ಹೇಳಬೇಖು. ಶ್ರೋತೃಗಳ ಮನಸ್ಥಿತಿಯನ್ನು ಬದಲಾಯಿಸಿ ಮೊದಲಿನ ವೃತ್ತಿ ನಾಟಕ ಕಂಪನಿಯ ಸ್ಥಿತಿಯನ್ನು ತಂದು ಕೊಡುವಲ್ಲಿ ಇಂದಿನ ನಾಟಕ ಕಂಪನಿಗಳಿಗೆ ಅಸಾಧ್ಯವೆಂದೇನಿಲ್ಲ. ಆದರೆ, ಅವರು ಮನಸ್ಸು ಮಾಡಬೇಕಷ್ಟೇ.

ಮರಾಠಿ ರಂಗಭೂಮಿಯಲ್ಲಿ ಇಂದಿಗೂ ಸಹ ನಾವು ಅಂದಿನ ವೃತ್ತಿರಂಗಭೂಮಿಯ ಶುದ್ಧ ಶಾಸ್ತ್ರೀಯ ಸಂಗೀತವನ್ನು ಕಾಣುತ್ತೇವೆ. ‘ನಾಟ್ಯ ಸಂಗೀತ’ ಮಹಾರಾಷ್ಟ್ರದಲ್ಲಿ ಜನಪ್ರಿಯ ಗಾಯನ ಶೈಲಿಯೆನಿಸಿದೆ. ಮಹಾರಾಷ್ಟ್ರದ ‘ತಮಾಶಾ ಕಂಪನಿ’ಗಳು ಇಂದಿಗೂ ಸಹ ಶಾಸ್ತ್ರೀಯ ಸಂಗೀತದ ಮೂಲ ಸತ್ವವನ್ನು ಮುಂದುವರೆಸಿಕೊಂಡು ಬಂದಿವೆ. ಮಹಾರಾಷ್ಟ್ರದ ರಂಗಭೂಮಿಯಲ್ಲಿ ಶಾಸ್ತ್ರೀಯ ಸಂಗೀತ ಜೀವಂತವಾಗಿಡಲು ಸಾಧ್ಯವಿದ್ದರೆ ಕನ್ನಡ ವೃತ್ತಿ ನಾಟಕ ಕಂಪನಿಗಳಿಗೇಕೆ ಅದು ಸಾಧ್ಯವಾಗುತ್ತಿಲ್ಲ? ಇದರ ಚಿಂತನೆಯತ್ತ ವೃತ್ತಿ ನಾಟಕ ಕಂಪನಿಯ ಕಲಾ ಬಂಧುಗಳು ಗಮನಹರಿಸುವುದು ಅಗತ್ಯವಾಗಿದೆ.

ಒಂದು ಕಾಲದಲ್ಲಿ ರಂಗಭೂಮಿಯ ಅವಿಭಾಜ್ಯ ಅಂಗವೆನಿಸಿದ್ದ ‘ರಂಗ ಸಂಗೀತ’ ಇಂದು ಸಾರ್ವಜನಿಕ ಸಂಗೀತ ಕಚೇರಿಗಳಲ್ಲಿ ಕೇಳುವ ಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯ. ಒಂದು ಕಾಲದಲ್ಲಿ ಶಾಸ್ತ್ರೀಯ ಸಂಗೀತವನ್ನು ಹೊರದೂಡಿ ಆ ಸ್ಥಾನದಲ್ಲಿ ಚಲನಚಿತ್ರದ ಸಂಗೀತವನ್ನು ತಂದುಕೊಂಡು ತನ್ನ ಮನೆಗೆ ತಾನೇ ಅಪಚಾರವೆಸಗಿದಂತಾಗಿದೆ. ಈ ಸ್ಥೀತಿಯನ್ನು ಹೋಗಲಾಡಿಸಿ ಹೊರದೂಡಲ್ಪಟ್ಟ ಮನೆಯ ಮಗನನ್ನು ಮನೆಗೆ ಕರೆತಂದು ಆಶ್ರಯ ನೀಡಿದಲ್ಲಿ  ಮನೆಯ ಮಗ ಮನೆಗೆ ಬಂದ ಸಂತಸ ಆಗುವುದರಲ್ಲಿ ಸಂದೇಹವಿಲ್ಲ. ಆದರೆ ಈ ಕೆಲಸ ಸುಲಭವಾದುದಲ್ಲ. ಆದರೆ ಇದರತ್ತ ಚಿಂತನೆಯಿದ್ದಲ್ಲಿ ಖಂಡಿತ ಆ ದಿನಗಳು ಬಂದೇ ಬರುತ್ತವೆಂಬುದು ನಿರ್ವಿವಾದ.

ವೃತ್ತಿ ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ, ತಂಬೂರಿ, ಸಾರಂಗಿ, ತಬಲಾ ಹಾಘೂ ಕ್ಲರಿಯೋನಿಟ್ ವಾದ್ಯಗಳನ್ನು ಬಳಸಲಾಗುತ್ತಿದೆ. ಸಂಗೀತ ನಿರ್ದೇಶಕರು ಹಾಗೂ ವಾದ್ಯ ವಾದಕರು ವೇದಿಕೆಯ ಮುಂಭಾಗದಲ್ಲಿ ಪಾತ್ರಧಾರಿಗಳಿಗೆ ಮುಖ ಮಾಡಿ ಕುಳಿತುಕೊಳ್ಳುತ್ತಾರೆ. ಜನಪದ ರಂಗಭೂಮಿಯಲ್ಲಿ ರಂಗದ ಮೇಲೆ ಸ್ಥಾನ ಪಡೆದಿದ್ದ ಸಂಗೀತ ವೃಂದ ವೃತ್ತಿರಂಗಭೂಮಿಯಲ್ಲಿ ರಂಗದ ಮುಂದೆ, ಕೆಳಭಾಗದಲ್ಲಿ ಸ್ಥಾನ ಪಡೆದಿರುವುದು ಗಮನಿಸಬೇಖಾದ ಮಾತಾಗಿದೆ.

ಹವ್ಯಾಸಿ ರಂಗಭೂಮಿ

ಶಹರದ ಬುದ್ಧಿಜೀವಿಗಳು ತಮ್ಮ ವೃತ್ತಿಯ ಬೇಸರವನ್ನು ಕಳೆದುಕೊಳ್ಳಲು ಅಥವಾ ನಾಲ್ಕು ಜನ ಬುದ್ಧಿಜೀವಿ ಗೆಳೆಯರು ಕೂಡಿಕೊಂಡು ಮನೋರಂಜನೆಗಾಗಿ ಗುಂಪುಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುವುದು ‘ಹವ್ಯಾಸಿ ರಂಗಭೂಮಿ’ ಎಂದು ಕರೆಸಿಕೊಂಡಿತು. ಹವ್ಯಾಸಿ ರಂಗಭೂಮಿಗೆ ವಿಲಾಸೀ ರಂಗಭೂಮಿ ಎಂದೂ ಕರೆಯುವುದುಂಟು. ಒಂದರ್ಥದಲ್ಲಿ ವಿಲಾಸಿಗಳು ಕೂಡಿಕೊಂಡು ಆಟವಾಡುವ ಗೆಳೆಯರ ಒಂದು ಗುಂಪು ಎಂದೇ ಹೇಳಬೇಕು. ಇಂದಿನ ಆಧುನಿಕ ಕಾಲದಲ್ಲಿ ಹವ್ಯಾಸಿ ರಂಗಭೂಮಿ ತುಂಬ ಪ್ರಚಾರಕ್ಕೆ ಬಂದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಈಚೀಚೆಗೆ ವೃತ್ತಿರಂಗಭೂಮಿ ಒಂದು ಹಂತವನ್ನು ತಲುಪಿ ಅದರ ಬೆಳವಣಿಗೆ ಸ್ಥಗಿತಗೊಂಡಿದ್ದರೆ, ಹವ್ಯಾಸಿ ರಂಗಭೂಮಿ ಈಚೆಗೆ ಭರದಿಂದ ಬೆಳೆಯುತ್ತಿರುವುದು ಗಮನಾರ್ಹ. ಹವ್ಯಾಸಿ ರಂಗಭೂಮಿ ತಂತ್ರ, ನೆರಳು-ಬೆಳಕು ಮುಂತಾದ ವ್ಯವಸ್ಥೆಗಳಿಂದಾಗಿ ಬೆಳೆಯುತ್ತಲಿದೆ. ಈ ದೃಷ್ಟಿಯಿಂದ ಹವ್ಯಾಸಿ ರಂಗಭೂಮಿಯಲ್ಲಿ ಎಷ್ಟೇ ಹೊಸ ಮಾರ್ಪಾಡುಗಳಿದ್ದರೂ ಸಹ ಅದು ಸಂಗೀತದಿಂದ ದೂರವಾಗಿ ಉಳಿದಿಲ್ಲವೆಂದೇ ಹೇಳಬೇಕು.

ಹೊಸ ಹೊಸ ತಂತ್ರಗಾರಿಕೆ, ಧ್ವನಿವರ್ಧಕದ ವಿಶೇಷತೆ, ನೆರಳು-ಬೆಳಕಿನ ಸಂಯೋಜನೆ ವಿನೂತನ ದೃಶ್ಯಾವಳಿ, ತಿಳಿಹಾಸ್ಯ, ಗಂಭೀರ ರೂಪದ ನಾಟಕದ ಕಥಾವಸ್ತು ಮುಂತಾದ ಪ್ರಯೋಗಗಳಿಂದ ಹವ್ಯಾಸಿ ರಂಗಭೂಮಿಯಲ್ಲಿ ಹೊಸ ಅಲೆಯನ್ನೇ ಬೀಸಿದರೂ ಸಹ ಅದು ಸಂಗೀತದ ಕಕ್ಷೆಯಿಂದ ದೂರ ಸರಿದಿಲ್ಲವೆಂದೇ ಹೇಳಬೇಕು. ಆದರೆ ಮೊದಲಿದ್ದ ಅದರ ಸ್ಥಾನ ಕಡಿಮೆಯಾಗಿದೆ.

ವೃತ್ತಿರಂಗಭೂಮಿಯಲ್ಲಿ ಸಂಗೀತ ಕಲಾವಿದನಿಗೆ ಇದ್ದ ಸ್ವಾತಂರ್ತ್ಯ ಹವ್ಯಾಸಿ ರಂಗದಲ್ಲಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಿರ್ದೇಶಕನ ಮಾರ್ಗದರ್ಶನದಂತೆ ಸಂಗೀತ ಪ್ರಯೋಗಿಸಬೇಕಾಗಿರುವುದು ಇಲ್ಲಿ ವಿಶೇಷತೆಯೆನಿಸಿದೆ. ನಾಟಕದ ನಿರ್ದೇಶನಕ್ಕೆ ತಕ್ಕಂತೆ ಸಂಗೀತಗಾರ ಸಂಗೀತವನ್ನು ಪ್ರದರ್ಶಿಸಬೇಕಾಗುತ್ತದೆ. ಸಂಗೀತ ಇಲ್ಲಿ ಗೌಣವಾಗಿಬಿಡುತ್ತದೆ. ವೃತ್ತಿರಂಗಭೂಮಿಯಲ್ಲಿ ಅದುವೇ ಪ್ರದಾನವಾಗಿರುತ್ತದೆ.

ಹವ್ಯಾಸಿ ನಾಟಕಗಳಲ್ಲಿ ನೆರಳು-ಬೆಳಕಿನ ಪ್ರಭಾವ ಅಧಿಕವಾದರೂ ಸಂಗೀತವೇ ಪ್ರಧಾನವಾಗಿದ್ದ ಹವ್ಯಾಸಿ ನಾಟಕಗಳು ಹಲವಾರು. ಅಂಥವುಗಳಲ್ಲಿ ಸತ್ತವರ ನೆರಳು, ಸಂಗ್ಯಾ-ಬಾಳ್ಯಾ, ದೊಡ್ಡಪ್ಪ, ಮುಂತಾದ ನಾಟಕ ಪ್ರಯೋಗಗಳು ಉಲ್ಲೇಖನೀಯವೆನಿಸಿವೆ. ಕೆಲವು ಹವ್ಯಾಸಿ ನಾಟಕಗಳ ಆಧಾರಸ್ತಂಭವೇ ಸಂಗೀತ ಎನ್ನುವಂತಿದೆ. ಹವ್ಯಾಸಿ ರಂಗದ ಮಕ್ಕಳ ನಾಟಕಗಳಲ್ಲಿಯೂ ಸಂಗೀತ ವಿಶೇಷವಾಗಿ ಮಕ್ಕಳ ಮನಸ್ಸನ್ನು ಆಕರ್ಷಿಸಬಲ್ಲ ಒಂದು ಸಹಜ ಕಲೆ. ಸಂಗೀತದ ಸಹಾಯದಿಂದ ನಿರ್ಮಾಣಗೊಂಡ ಮಕ್ಕಳ ನಾಟಕಗಳು ‘ಬಾಲಜಗತ್ತಿಗೆ’ ಒಂದು ವಿಶೇಷ ಕೊಡುಗೆ ಎಂದು ಹೇಳಬಹುದು.

ರಂಗ ಶಿಕ್ಷಣದಲ್ಲಿ ತರಬೇತಿ ಪಡೆದ ಅನೇಕ ಹವ್ಯಾಸಿ ಕಲಾವಿದರು ಇದು ಹವ್ಯಾಸಿ ರಂಗಭೂಮಿಯನ್ನು ಸಂಪದ್ಭರಿತವನ್ನಾಗಿ ಮಾಡಿರುವುದು ಸ್ತುತ್ಯಾರ್ಹವಾದ ಸಂಗತಿ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ, ರಂಗಮಂಡಲ, ಹೆಗ್ಗೋಡಿನ ನೀನಾಸಂ ಮುಂತಾದ ರಂಗ ತರಬೇತಿ ಸಂಸ್ಥೆಗಳು ಉತ್ತಮ ರಂಗ ಕಲಾವಿದರನ್ನು, ರಂಗನಟರನ್ನು, ರಂಗನಿರ್ದೇಶಕರನ್ನು, ರಂಗಕರ್ಮಿಗಳನ್ನು ತಯಾರಿಸುತ್ತಿರುವುದು ರಂಗಭೂಮಿಯ ಶುಭ ಸಂಕೇತವೆಂದೇ ಹೇಳಬೇಕು. ಕಾಲಕ್ಕೆ ತಕ್ಕಂತೆ ಹೊಸ ಹೊಸ ಆಯಾಮ ರಂಗಭೂಮಿ ಹೊಂದಲನುಕೂಲವಾಗಲು ಇಂತಹ ರಂಗ ಸಂಸ್ಥೆಗಳು ಹಮ್ಮಿಕೊಂಡ ಕಾರ್ಯ ಸ್ತುತ್ಯರ್ಹ. ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್ ಮುಂತಾದ ಪ್ರಖ್ಯಾತ ರಂಗ ತಜ್ಞರು ಹವ್ಯಾಸಿ ರಂಗಭೂಮಿಯಲ್ಲಿ ಸಂಗೀತಕ್ಕೆ ಹೊಸ ಹೊಸ ದಿಸೆಯನ್ನು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದೇ ಹೇಳಬೇಕು.

ಹವ್ಯಾಸಿ ರಂಗ ಪ್ರಯೋಗದಲ್ಲಿ ಸಂಗೀತ ಮೇಳದವರು ರಂಗದ ಮೇಲೆಯೇ ಪ್ರತ್ಯೇಕವಾದ ಮಂಟಪವನ್ನು ಕಟ್ಟಿ ಮುಖ್ಯ ಗಾಯಕನ ಜೊತೆಯಲ್ಲಿ ಸಹಗಾಯಕರಾಗಿ ಸಂಗೀತ ನೀಡುತ್ತಾರೆ. ಇಲ್ಲಿಯೂ ಸಹ ಹಾರ್ಮೋನಿಯಂ, ತಬಲಾ, ತಂಬೂರಿ ವಾದ್ಯಗಳನ್ನು ಉಪಯೋಗಿಸುವುದುಂಟು. ಹವ್ಯಾಸಿ ರಂಗಪ್ರಯೋಗದಲ್ಲಿ ಸಿತಾರ, ಹಾಗೂ ಕೊಳಲು ವಾದ್ಯಗಳನ್ನು ಪ್ರಯೋಗಿಸುತ್ತಿರುವುದು ರಂಗ ಸಂಗೀತದ ವಿಶೇಷ ಆಕರ್ಷಣೆಯೆಂದು ಹೇಳಬಹುದು.

ಜನಪದ ರಂಗಭೂಮಿಯಲ್ಲಿ ಜನಪದ ಸಂಗೀತವಾಗಿ, ವೃತ್ತಿರಂಗಭೂಮಿಯಲ್ಲಿ ಶಾಸ್ತ್ರೀಯ ಸಂಗೀತದ ಸ್ಥಾನ ಪಡೆದು, ಹವ್ಯಾಸಿ ರಂಗಭೂಮಿಯಲ್ಲಿ ಹೊಸತನ ತಳೆದು ಕಾಲ ಕಾಲಕ್ಕೆ ಬದಲಾವಣೆಯ ಮಾರ್ಗವನ್ನನುಸರಿಸುತ್ತ ಬಂದಿರುವ ಸಂಗೀತ ಕಲೆ ಇಂದಿನ ದಿನಗಳಲ್ಲಿ ನಾಟಕ ಕಂಪನಿಗಳಲ್ಲಿ ಸಿಕ್ಕಿಕೊಂಡು ಒದ್ದಾಡುವ ಸ್ಥಿತಿಯಲ್ಲಿ ಬಂದು ನಿಂತಿರುವುದು ಖೇದಕರ. ಒಂದು ಕಾಲದಲ್ಲಿ ಸಂಗೀತಕ್ಕೆ ಆಶ್ರಯ ನೀಡಿದ ರಂಗಭೂಮಿ ಇಂದು ಸಂಗೀತವನ್ನೇ ಹೊರದೂಡಿ ಚಲನಚಿತ್ರ ಸಂಗೀತದ ಆರ್ಭಟ ಸಪ್ಪಳ, ಅನಗತ್ಯ ವಾದ್ಯ ಬಾರಿಸುವಿಕೆಯಿಂದ ವಿಕಾರ ಮನೋಭೂಮಿಕೆಯನ್ನು ಪಡೆದುಕೊಂಡಿದೆ. ಸಂಗೀತಕ್ಕೆ ರಂಗಭೂಮಿಯಲ್ಲಿ ಮೊದಲಿನ ಸ್ಥಿತಿ ಬರಲಿಕ್ಕೆ ಮತ್ತೆಷ್ಟು ದಿನ ಕಾಯಬೇಕೋ ಏನೋ ಹೇಳಲಿಕ್ಕಾಗದು.

ಏನೇ ಇದ್ದರೂ ಸಹ ರಂಗಭೂಮಿಯ ಯಾವುದೇ ರಂಗ ಪ್ರಕಾರವನ್ನು ಗಮನಿಸಿದರೂ ಅದರ ಹಿಂದೆ ಸಂಗೀತದ ಪ್ರಭಾವ ಸಂಪೂರ್ಣ ಇದೆ ಎಂಬುದು ಗಮನಿಸಬೇಕಾದ ಮಾತು. ಆಧುನಿಕ ಮಾನವನ ಬುದ್ಧಿಶಕ್ತಿ ಹೆಚ್ಚು ಹೆಚ್ಚು ಬೆಳೆದಂತೆಲ್ಲಾ ವೃತ್ತಿ, ಹವ್ಯಾಸಿ, ಜನಪದರಂಗ, ಚಿತ್ರರಂಗಗಳಲ್ಲಿ ಹಲವಾರು ಬದಲಾವಣೆಗಳಾದರೂ ಸಹ ಅವು ಸಂಗೀತದ ಪ್ರೇರಣೆಯಿಂದ ಮರೆಯಾಗಿಲ್ಲವೆಂಬುದು ನಿರ್ವಿವಾದ. ರಂಗಭೂಮಿಯಲ್ಲಿ ಎಷ್ಟೋ ಹೊಸ ಹೊಸ ತಂತ್ರ, ಪ್ರಯೋಗಗಳು ನಡೆಯುತ್ತಿದ್ದರೂ ಸಂಗೀತವನ್ನು ಬಿಡಲಿಕ್ಕಾಗದೆನಿಸುತ್ತದೆ. ಏಕೆಂದರೆ ರಂಗಭೂಮಿ ಮತ್ತು ಸಂಗೀತ ಒಂದಕ್ಕೊಂದು ಪೂರಕವಾದವುಗಳಾಗಿವೆ.