ಕೊಂಬು ಕೊಳಗ ಶುದ್ಧ ಇಂಬುಳ್ಳ ಇಣಿ ಶುದ್ಧ
ಬಂಗಾರದಿಣೆಯ ಬಸವಣ್ಣೊ | ಬರುವಾಗ
ತುಂಬೀದ ಗಂಗಾ ತುಳಿಕ್ಯಾಳೋ ||

ಕೋಡ ಚಿಮ್ಮಾಡುತ ಕೊಳಗನಲ್ಲಾಡುತ
ಜಂಡೇದ ಬಾಲ ಎಳವೂತ | ಬರುವಾಗ
ರಂಬೇರಾರುತಿ ಬೆಳ್ಗಾರೊ ||

ಊರ ಮುಂದಿನ ಗಾಳಿ ಏನಂತ ಬೀಸ್ಯಾವೋ
ಆಲೂಸಿ ಕೇಳೇ ಹಡೆದವ್ವ || ನಿನ್ನ ಮಗ
ಆಡ್ಯಾಡಿ ಹಂತಿ ಹೊಡೆದಾನೋ ||

ಹಂಡಾಗೆ ಹಣೆಕಟ್ಟು ಗುಂಡಾಗೆ ಹುಲಿಹೆಜ್ಜೆ
ಜಾಲಹೋರಿಗೆ ಜಗಜಂಪು | ಹಾಕೊಂಡು
ಜಾಲೇಗೆ ಹಾದು ಬರುತಾರೊ ||

ಹಂಡೆತ್ತ ಹಣಿರಾಮ ಗುಂಡೆತ್ತ ಗಿಣಿರಾಮ
ಮುಂದೈತೊ ಮಗನೆ ನಿನ ಎಳತಾ | ಸವದತ್ತಿ
ಸಣ್ಣ ಮಳಲಾಗೇ ಸವ ಎಳತಾ ||

ಬಸವ ಬಂಡಿಯನೇರಿ ಶಿವನು ನಂದಿಯನೇರಿ
ಪಾರ್ವತಾದೇವಿ ರಥವೇರಿ | ಬರುವಾಗ
ಬಂದಂಥ ಮಾಡ ಬಯಲಾಗಿ ||

ಜಾಣ ನನ ಅಣಿಗೇರಿ ಜಾರಗಲ್ಲಿನ ಮ್ಯಾಲೆ
ಜಾಣ ಕಮ್ಮಾರ ತಿದಿಹೂಡಿ | ಮಾಡ್ಯಾಗ
ಜಾಣ ಬಸವಾನ ಹಳಿಬಂಡ್ಕೋ ||

ಗಂಗಾ ಮಾರದೆ ಎತ್ತು ಗಂಗಾಳ ನುಡಿದಂತೆ
ಭಂಗಾರ ಹೇರಿ ಬರತಾವೆ | ನಂಬಸವ
ಮಂಗಳಾರತಿ ಬೆಳಗ್ಯಾರೆ ||

ಹೋರಿಗೆ ಮುಗಡಾವು ಪೋರಿಗೆ ಹುರಿಗೆಜ್ಜೆ
ಏರಿನ ಮ್ಯಾಗೆ ಜಗಜಂಪು | ನಂಬಸವ
ಬೋರಾಡುತಾನೆ ಕಣದಾಗೆ ||

ಗುಡಗಂಟಿದಾರ‍್ಯಾಗೆ ಗಿಡಸಣ್ಣ ಮಲ್ಲೀಗಿ
ಕಡಿಗೇಡಿ ನಮ್ಮ ಬಸವಣ್ಣ | ಬರುವಾಗ
ಗಿಡದೈವ ಹೂವ ಮುಡುದಾನೋ ||

ಬಸವಣ್ಣ ಹುಟ್ಯಾಲಿ ಹೊಸಪ್ಯಾಟಿ ಕಟ್ಯಾಲಿ
ರಸಬಾಳಿ ಕಬ್ಬು ಚಿಗಿಯಾಲಿ | ಈ ಊರ
ಬಸವಣ್ಣನ ತೇರ ಎಳೆಯಾಲಿ ||

ಯಾಕೋ ಬಸವಾ ಮೆಲ್ಲಕ ನೆಡುತೀ
ಕಣಕಾಲ ರಾಶಿ ಮಣಕಾಲಿಗೆ ಬಂತೋ ||

ಮೂಡಲ ದಿಕ್ಕಿಗೆ ಮೂಡ್ಯಾನೋ ರಾಮ
ಮೂಡಿಮೂಡಿ ಬಾ ಎನ್ನ ಎಳಿಚಂದಿರಾಮ ||

ಬಾಳೀಯ ಕಾಯ್ಹಾಂಗೆ ಬಾಗ್ಯವೋ ಕೋಡು
ಬಾಗಿ ಬಾ ಬಸವ, ಬಾಗಿಲಿಗೇ ||

ನುಗ್ಗೀಯ ಕಾಯ್ಹಾಂಗೆ ಬಾಗ್ಯವೋ ಕೋಡು
ಬಾಗಿ ಬಾ ಬಸವಾ, ಬಾಗಿಲಿಗೇ ||

ಬೂದ ನಿಮ್ಮವ್ಬ ಬುತ್ತೀಯ ತಂದಳೋ
ಯಾಲಕ್ಕಿ ಶುಂಠೀ ಮರತಾ ಬಂದಾಳೋ ||

ಬಸವಣ್ಣನೇಣತಿ ಹಸುಮಗಳು ನೀಲಮ್ಮ
ಬಸುರಾದರ‍್ಹ್ಯಾಂಗೇ ನಡದಾಳೋ | ಗೋದಿಯ
ಸರಿಯಾಂಗೆ ನವಿಲು ಕುಣಿದಾಂಗೆ ||

ಕರ್ರನ್ನ ಕರಿಬಸವ ಕಡ್ಡೀರಲಿಬತ್ತಿ ಬರೆದು
ಮಡ್ಡಿಗಾಲೂರಿ ನೆಡೆದಾನೊ | ಬಸವಂಗೆ
ಮಂಗಳಾರತಿ ಪಾಡೀರೆ ||

ಬಿತ್ತೂವ ದಿನಬಂತು ಎತ್ತ ತಯಾರ್ ಮಾಡೊ
ಮುತ್ತೀನ ಕೂರ‍್ಗಿ ಹೊರಗಿಡೋ | ನಂಬಸವಗೆ
ಎತ್ತಿ ಆರುತಿ ಬೆಳಗೀರೇ ||

ಏರಬಾರದ ಗುಡ್ಡ ಏರಾನೋ ನಂಬಸವ
ಸೇರಿನ ಗಂಟೀ ಶಿರದಾಗೆ | ಹಾಕಿಕೊಂಡು
ಏರಿ ಮೇದಾನೋ ಎಳೆಹುಲ್ಲು | ನಂಬಸವ
ಮೀರಿ ಮೆರೆದಾನೋ ಜಗದೊಳಗೆ ||

ಆರುಸಾವಿರ ಗೆಜ್ಜೆ ಮೂರುಸಾವಿರ ಗಂಟಿ
ದೂರ ಕೇಳ್ಯಾವೋ ದುರುಗಕ್ಕೆ | ನಂಬಸವ ಬರುವಾಗ
ದೂಳ ಹಾರೀತೋ ಗಗನಕ್ಕೆ ||

ಬಸವಣ್ಣನ ಕೊರಳೀಗೆ ಹಸನುಳ್ಳ ಹುರಿಗೆಜ್ಜೆ
ದೇಶಕ್ಕೆ ಭೋರಿಡುವ ಶಿವಶಂಕಿನ | ಶಬ್ದಾವು
ಹಸನೇಳು ನಮ್ಮ ಕಣದಾಗೆ ||

ಬಾದಾಮಿ ಎಂಬೋದು ಬಾವೇರಿ ಪಟ್ಟಣ
ಬಾಲೆ ಚೆನ್ನಮ್ಮನ ಅರಮನಿ | ಬಾಗಿಲೊಳು
ಬಾಗಿ ಬಂದನು ನಮ್ಮ ಬಸವಣ್ಣ ||

ಮುಂಗಾರಿ ಮಳಿರಾಜ ಸಿಂಗಾರಾಗ್ಯಾನ
ಭಂಗಾರ ಕಣ್ಣತೆರೆದಾನ | ಒಕ್ಕಲುಮಗನ
ಕೋಲಿಯ ಕುಂಟಿ ಹರಗ್ಯಾನ ||

ಬಡಿಗೇರ ಮನಿಮುಂದ ಕೂರ‍್ಗಿ ಪೂಜಾಗಾವ
ಬಿಳಿಯಂಗಿ ಬೆಳ್ಳಿ ಉಡದಾರ | ಒಕ್ಕಲುಮಗನ
ಶರಣೆಂದು ಷಡ್ಡಿ ಹಿಡದಾನ ||

ಬನ್ನಿಮರದ ಹೊಲಕ ನಿನ್ನೆ ಕೂರಗಿ ಹಾಕಿ
ಸಣ್ಣ ಶಲ್ಲೇವು ಉಡಿಕಟ್ಟಿ | ಒಕ್ಕಲುಮಗನ
ಹೊನ್ನ ಬಿತ್ತಾನ ಹಗಲೆಲ್ಲ ||

ಬಾರಪ್ಪ ಮಳಿರಾಜ ಬಾರದೆಲ್ಲ ಹೋಗಿದ್ದಿ
ಬಡವಾರ ಬಾಯಿ ಬಿಡ್ತಾರ | ಅಡಿಯನ್ನ
ಫಲವೆದ್ದು ಕೈಯ್ಯಾ ಮುಗಿದಾವ ||

ರೋಣಿ ಮಿರಗನ ಮಳಿಯ ಆದಾವೊ ಭೂಮೀಗೆ
ಬೀಗಿ ಬೆಳೆಯ ಕಂಡಾವೊ | ಒಕ್ಕಲುಮಗನ
ಬಾಗಿ ಕುಡಗೋಲ ಹಾಕ್ಯಾನೊ ||

ಮದಲಿಗಿ ಮಿಣಿಯಿಲ್ಲ ಜತ್ತಿಗೆ ಬಾರ‍್ಕೊಲಿಲ್ಲ
ಹೆಚ್ಚಿನ ಮಿಣಿಕಣ್ಣಿ ನಮಗೆಲ್ಲ | ಹೊಲೆಯನ ಮಾರು
ನೆಚ್ಚಿಗಿ ಮೊದಲು ನಮಗಿಲ್ಲ ||

ಉತ್ತರಿ ಮಳಿಯಾಗಿ ಉತ್ತಮರಿಗೆ ತಿಳಿಯಾಗಿ
ಉತ್ತತ್ತಿ ಫಲವು ಘನವಾಗಿ | ಕಣದಾಗೆ
ಉತ್ರಾಣಿ ಶಳ್ಳ ಮೇಲಾಗಿ ||

ಕಲ್ಲಾಪುರದ ಬಸವಣ್ಣ ಕಡ್ಡೀಲಿ ಬರದಾಂಗೆ
ಮಡ್ಡೀ ಗಾಲಚ್ಚೀ ಮನಿಗ್ಯಾನ | ಬಸವಣ್ಣನ
ನಿದ್ದೀ ಯಾರಿಗೆ ತಿಳಿಯಾವ ||

ಉತ್ತ ಕಾವುವಣ್ಣ ನಮ್ಮೆತ್ತ ಕಂಡೀರ
ಮುತ್ತೀನ ಹಗ್ಗ ಮುಗಿದಾಣ | ಹಾಕಿಕೊಂಡು
ತಪ್ಪೀಸಿಕೊಂಡೈತೊ ಪಾಳಾಗೆ ||

ಹೂಗಾರ ಮನಿಮುಂದೆ ಹೂವಿನ ತೋಟದ ಮುಂದೆ
ಭಂಗಾರ ಬಸವಣ್ಣ ಮನಿಗ್ಯಾನ | ನಾ ಬಂದು
ಮಂಗಳಾರತಿ ಮಾಡೇನ ||

ಹತ್ತಿ ಮತ್ತುರು ಬಸವ ಕಿತ್ತುರು ಚನಬಸವ
ಗುತ್ತಲ ಬಸವ ಶಿವಲಿಂಗ | ಬರುವಾಗ
ರಿತ್ತೀಯ ತೇರ ಎಳಿದಾಂಗೆ ||

ಗಂಡ ಹೆಂಡಿರ ಜಗಳ ಗಂಧ ತೀಡಿದಾಂಗೆ
ಲಿಂಗಕ್ಕೆ ನೀರ ಎಳೆದಾಂಗೆ | ವಡವೀಯ
ಮಾನಯ್ಯ ನಿನ ತೇರ ಎಳೆದಾಂಗೆ ||

ಅಂಗಿ ಮೂಲಂಗಿ ನೀ ಬಾರೆ ಮಾತಂಗಿ
ಸಾಲ ಮೂಲಂಗಿ ಸಿರಸಂಗಿ | ಕಾಳವ್ವನ
ಮಾಲಿನಾಗೈತೋ ಮಧುರಂಗಿ ||

ಉಳಿಯ ಮುಟ್ಟಾದ ನಿಂಗ ಫಳಿಯ ಹೊಂದದ ನಿಂಗ
ಬೆಳಗಾಗಿ ಬಂದ ಕಾಳಿಂಗ | ತೇಲಿಂಗ

ಕಾರಂಜಿ ನಿಂಗ ಕರನಿಂಗ ||

ಹರಿದಾಳೋ ತಗಣವ್ವ ಸರದಾಳಿ ಗುಂಡಿನ ಟೀಕಿ
ಮೂವತ್ತೊಂದು ಮರದಮೂಗುತಿ | ಇಟಕೊಂಡು
ಮುದಕವಿ ಸಂತ್ಯಾಗೆ ಬೆರದಾಳೊ |

ಮೂರು ಕಣ್ಣಿನ ಎತ್ತು ಸೇರುನೀರು ಕುಡಿದಿತ್ತು
ನಾರಮಡಿ ಅದು ಉಟ್ಟಿತ್ತು | ಈ ಊರ
ತೇರಿನ ಮುಂದೆ ಮೆರದಿತ್ತು ||

ಬ್ಯಾಸೀಗಿ ಬಿಸಿಲೀಗಿ ಬೇವಿನ ಮರತನುವ
ಭೀಮರಥಿ ಎಂಬೋ ಹೊಳಿ ತನುವೋ | ಹನುಮಂತ
ತಾ ತನುವೋ ತನ್ನ ಗುಡಿಯಾಗ ||

ಪತ್ತಾರ ಮನಿ ಮುಂದೆ ಅತ್ತತ್ತ ಹೇಳುವಳೆ
ನತ್ತ ಮಾಡಿಸಿ ಕೊಡೆ ನನಗೆ | ಲಕ್ಕುಂಡಿ
ಅತ್ತಿಮನೆಗೆ ಹೋಗಿ ಬರುವೆನ ||

ಹುಬ್ಬಳ್ಳಿ ದಾರಾಗೆ ಇಬ್ಬರು ಬರುತಾರ
ಕಬ್ಬು ಸಾಲದಂತಾ ಕಸಿ ಅಂಗೋ | ತುಟಿಗೊಂದು
ಒಬ್ಬಾಗಿಂತೊಬ್ಬ ಚಲುವಾರ ||

ಮಾವಿನಮರ ಬಾಡ ಕಮನಗಿರು ಸ್ವಪ ನಿದ್ದಿ
ಮಾರುದ್ದ ಜಲುಪಿ ಸಾಲಹಲ್ಲ | ಅತ್ತೆವ್ವ
ನೋಡು ಬಾ ಇವರ ಚಲುವಿಕೆಯಾ ||

ಧಾರವಾಡದ ತೇರ ಯಾವಣ್ಣ ಕಟ್ಯಾನೋ
ಉಣಕಲ್ಲ ಬಡಗಿ ಲಚಮಣ್ಣ | ಕಟ್ಟಿದ ತೇರ
ಮುರಿವಾಳ ಇಲ್ಲದಲೆ ಮುಗಿದೈತೋ ||