ಹುಟ್ಟಿಬಂದಿ ಎಲ್ಲಮ್ಮನಾಗಿ
ನಿನ ಲಗ್ಗನಮಾಡಿ
ಕೊಟ್ಟಾರವ್ವ ಜಮದಗ್ನಿಗೆ             ಪಲ್ಲ

ರೇಣುಕಾಪತಿ ನಿಮ್ಮ ತಂದಿ
ಭೋಗವತಿ ನಿಮ್ಮ ತಾಯಿ
ಅವರ ಹೊಟ್ಟಿಲಿ ಹುಟ್ಟಿಬಂದಿ
ಆಕಿ ತೂಗಿರೆ ತೊಟ್ಟಿಲಲ್ಲಿ   ೧

ಹಾವಿನ ಸಿಂಬಿ ತಲಿಯ ಮ್ಯಾಲ
ಮಳಲಿನ ಕೊಡ ಅದರ ಮ್ಯಾಲ
ಪತಿಸೇವೆ ಮಾಡುತಲಿ
ನೀರ ತರುದು ಅದರಲ್ಲಿ    ೨

ನೀರತರುವ ನದಿಯಲ್ಲಿ
ಜೋಡಮೀನ ಅದರಲ್ಲಿ
ದೃಷ್ಟಿ ಹೋತ್ರಿ ಅದರ ಮ್ಯಾಲ
ಕೊಡ ಬಿತ್ತರಿ ಧರಣಿ ಮ್ಯಾಲ         ೩

ತಪವಿದ್ದ ಮುನಿಯಲ್ಲಿ
ಸಿಟ್ಟಿಗೆದ್ದ ಅಕಿಮ್ಯಾಲ
ಋಷಿ ಶ್ರಾಪಕೊಟ್ಟಿನಲ್ಲಿ
ಕೆಟ್ಟು ಹೋಗ ಭೂಮಿಯಲ್ಲಿ          ೪

ಕುಷ್ಟರೋಗ ಬಂತು ಮೈಯಲ್ಲಿ
ತಿರಗತಿದ್ದಿ ಅವನದಲ್ಲಿ
ಎಕ್ಕಯ್ಯ ಜೋಗಯ್ಯ ಬಂದಾರಲ್ಲಿ
ಜನ್ಮ ಉದ್ಧಾರಾದೀತಗಲ್ಲಿ  ೫

ವಿಜಾಪುರ ಜಿಲ್ಹಾದಲ್ಲಿ
ಇಂಡಿ ತಾಲೂಕಿನಲ್ಲಿ
ಕಾಸರಗೊಂಡ್ಯಾನಳ್ಳಿಯಲ್ಲಿ
ಪದಾ ಹುಟ್ಟಿತಾವ್ರಿ ಅಲ್ಲಿ    ೬