ಏಳು ಕೊಳ್ಳದೆಲ್ಲಮ್ಮಾ ಉಧೋ
ಮಾಯಕಾರ್ತಿ ಜಗದಂಬಾ ಉಧೋ          ಪಲ್ಲ

ಕರಗತಾಯಿಗವತಾರ ತಾಳಿದಿ
ಕಾಶ್ಮೀರರಸನ ಮಗಳಾದಿ
ಜಮದಗ್ನಿಯ ಹೆಂಡತ್ಯಾಗಿ
ಪರಸರಾಮನ್ನ ಹಡದಿ      ೧

ಕಾರ್ತಿಕರ್ಜುನನ  ಗರುವ ಮುರದಿ
ಕೈರಟ್ಟಿಗೆ ಹಗ್ಗ ಹತ್ತಿಸಿದಿ
ಸಿಡೀಮುಳ್ಳ ಬೆನ್ನಾಗ ಚುಚ್ಚಿ
ನಡವ ಸಿಡೀ ಹೊಡದೀ     ೨

ಪಂಜ್ಹಡಿಸಿ ಮಾರೀ ಸುಡ್ಸಿದಿ
ಅಂಜಿ ಪಾದಕ ಬಿತ್ತ ಮಂದಿ
ಹಿಂಜರಿಯದ ಕಾಮಧೇನು ತರ್ಸಿದಿ
ಸೊಕ್ಕಿನವ್ರ ದಿಕ್ ತೆಪ್ಪಸೀದಿ         ೩

ಯಕ್ಕೈನ ಜೋಗೈನ ಹಿಡತಂದಿ
ಕವಡಿ ಸರಾಹಾಕ್ಸಿ ಚಂಡ ಕಳದಿ
ಬೇವಿನ ತೊಪ್ಲಾ ಹುಟಿಗಿಉಡ್ಸಿದಿ
ತೆಲಿಮ್ಯಾಲ ಹಡ್ಲಿಗಿ ಹೊರ‍್ಸೀದಿ      ೪

ಕನ್ನಡ ನಾಡ ರೇಣುಕಾ ತಾಯಿ
ಸುಕರಾರ ಹುಣಿವಿಗಿ ಜಾತ್ರಿ ಗರದಿ
ಕಣವಿ ಜೋಗುಳ ಬಾಂವಿ ಸಂದಿಗ್ಹೊಂದಿ
ಹುಲಕುಂದ ಭೀಮೇಶ ಕಂದಾ ಉಧೋ       ೫