ಮಳೆರಾಯ ಹುಟ್ಟಾಲಿ ಕೆರೆರಾಯ ತುಂಬಾಲಿ
ಸಾಲಕೋಡಿಗಳೆ ಹರಿಯಾಲಿ | ಮಳೆರಾಯ
ಬತ್ತಾದ ಕೋಡಿ ಹರಿಯಾಲಿ

ಮುದ್ದು ಮಳೆರಾಯ ಇದ್ದಾನೊ ಇಲ್ಲಾವೊ
ಜಗ್ಗೀಸಿ ಹುಯ್ಯೊ ಮಳೆರಾಯ | ಲೋಕದಮ್ಯಾಲೆ
ನಮ್ಮ ಮಕ್ಕಳ ಗೋಳು ಬಲುಗೋಳು

ನಾಯಿ ತಿನ್ನು ತವಡು ನಾರೀರು ತಿನ್ನುತಾರೆ
ನಮ್ಮಪ್ಪ ಮಳೆರಾಯ ಕರುಣೀಸೊ
ಹಂದಿ ತಿನ್ನು ತವಡು ರಂಬೇರು ಮೆಲ್ಲುತಾರೆ
ನಮ್ಮಣ್ಣ ಮಳೆರಾಯ ಕರುಣೀಸೊ

ಅಣ್ಣ ಕರುಣೀಸೊ ಅಣ್ಣಾಜಿ ಕರುಣೀಸೊ
ನಮ್ಮಣ್ಣ ಮಳೆರಾಯ ಕರುಣೀಸೊ | ಲೋಕದಮ್ಯಾಲೆ
ಅರಗೀದ ಪೈರು ಒಣಗ್ಹೋದೊ

ಅಪ್ಪ ಕರುಣೀಸೊ ಅಪ್ಪಾಜಿ ಕರುಣೀಸೊ
ನಮ್ಮಪ್ಪ ಮಳೆರಾಯ ಕರುಣೀಸೊ | ಲೋಕದಮ್ಯಾಲೆ
ಕಪ್ಪತ್ತಿದ ಪೈರು ಒಣಗೀದೊ

ಅನ್ನೆಕಾರ ಮಳೆರಾಯ ಹನ್ನೆರಡು ಮಕ್ಕಳೋನು
ಸೂಳೇಯ ಮನೆಗೆ ಹೋದಾನೆ | ದೇವೀಂದ್ರ
ಲೋಕ ಲೋಕೆಲ್ಲ ಉರಿದೋದೊ

ಬಂಜೆ ಸೂಳೆಮನೆಯಾಗೆ ಬಂಗಾರಿದ್ದರೇನು
ನನ್ನ ಮಕ್ಕಳ ಬಿಟ್ಟು ಹೋಗಬೋದೆ | ಅಂದಿನ್ನ
ಹೆಂಡ್ರು ದೇವಮ್ಮ ಸಿಂತೆ ಮಾಡುತಾಳೆ
ಭಿಕ್ಷೆ ಮಾಡುತಾಳೆ ಊರೊಳಗೆ

ಹನ್ನೆರಡು ಮಕ್ಕಾಳು ಅತ್ತಾವೊ ಸುರದಾವೊ
ಸೂಳೆಮನೆಯಾಗೆ ಸುಖನಿದ್ರೆ | ಮಾಡುವಾಗ
ಮಡದಿ ಮಕ್ಕಳ ಗೋಳು ನಿರುವಾದೆ

ಅತ್ತು ಸುರದಾಳೊ ಮಾಡಾಳೊ ಭಿಕ್ಷಾವ
ಹನ್ನೆರಡೆ ಮಕ್ಕಳಿಗೆ ಅನ್ನಾವ | ಕೊಡುವಾಗ
ಬಾಳ ಕಷ್ಟವೆ ಮಡದೀಗೆ |

ಹಂಡೆ ನೀರೆರೆದು ಗಿಂಡ್ಯಾಗೆಣ್ಣೆ ಒತ್ತಿ
ತೂಗು ಮಂಚದ ಮ್ಯಾಲೆ ಮನಗ್ಯವನೆ | ದೇವೀಂದ್ರ
ಹಾಲು ಸಕ್ಕರೆ ಅಡಿಗೇಯ

ಕೇಳೆ ಎನ್ನರಸಿ ನನ್ನೊವೆರಡೆ ಮಾತು
ನನ್ನ ಮಡದಿ ಮಕ್ಕಳು ದುಕ್ಕಾವೆ | ಮಾಡುತಾರೆ
ನಾ ಹೋಗಿ ಬತ್ತೀನಿ ನನ್ನ ಅರಮನೆಗೆ

ಹೋಗಿ ಬರುವಾಕೆ ಇಂಗೆ ಬುಡೋಳಲ್ಲ
ಬಾಸೆ ಕೊಟ್ಹೋಗಿ ಬಲಗೈಯ

ಕೆರೆವೊಣಗ್ಯಾವಲ್ಲೆ ಲೋಕ ಉರಿದ್ಯಾವಲ್ಲೆ
ಹಾಕೀದ ಪೈರು ಒಣಗ್ಹೋದೊ | ಎನ್ನರಸಿ
ನಾ ಹೋಗಿ ಬತ್ತೀನಿ ನನ್ನ ಅರಮನೆಗೆ

ಎಷ್ಟು ಹೇಳಿದರೂ ನಾನು ಕೇಳೂಳಲ್ಲ
ಬಾಸೆ ಕೊಟ್ಹೋಗಿ ಬಲಗೈಯ

ಬಾಸೆ ಕೊಡುವೇನು ನಿನಗಿನ್ನ ಎನ್ನರಸಿ
ನಾ ಈಗ್ಹೋಗಿ ಈಗ ಬರುವೇನು

ಸುಳ್ಳು ಹೇಳ್ಯಾನೆ ಹತ್ತೆ ಮಾತನಾಗ
ಅರಳಿಗೆನಿದ್ದು ಬರುವೇನು
ಚಿಟುಕೊಂಡು ಬಂದಾನು ದೇವೀಂದ್ರ ಅರಮನೆಗೆ
ಮಕ್ಕಳು ಆಗ ಮಲಿಗ್ಯಾವೆ

ಆನ್ನೆಕಾರ ಮಳೆರಾಯ ಹನ್ನೆರಡೆ ಮಕ್ಕಳೋನು
ಸರಿಯಲ್ಲ ನಿಮಗೆ ತರವಲ್ಲ | ದೇವೀಂದ್ರ
ಲೋಕ ಲೋಕೆಲ್ಲ ಉರಿದ್ಹೋದೊ

ಆ ಬಂಜೆ ಮನೆಗ್ಹೋಗಿ ಬಂಗವಾಗಲೆ ಬೇಕ ?
ಲೋಕ ಲೋಕೆಲ್ಲ ಉರಿದ್ಹೋದೊ | ದೇವೀಂದ್ರ
ಈ ಲೋಕಾದ ಗೋಳು ಇರಿಸಿಲ್ವ ?

ಹತ್ಯಾನುಪ್ಪುರಿಗೆ ಸೂತ್ಯಾಲು ನೋಡಾನೊ
ಬೆಳ್ಳ ಸಿಳ್ಳೇಯ ಹೊಡದಾನೂ | ದೇವೀಂದ್ರ
ಸಾಲಕೋಡಿಗಳೆ ಹರಿದಾವೊ | ಆಗಿನ್ನ
ಬಂದಾನೆ ಮಡದೀಯ ಅರಮನೆಗೆ

ಬಂಜೆಯ ಸಂಗ ತರವಲ್ಲ ನಿಮಗೀಗ
ನನ್ನ ಮಕ್ಕಾಳ ಗೋಳು ಇರಿಸಾಲಿ | ದೇವೀಂದ್ರ
ನಿನ್ಹೋಗಿ ಸೂಳೇಯ ಅರಮ (ನೆ) | – ನ್ಯಾಗಿದ್ದರೆ
ಮಕ್ಕಳಿಗನ್ನ ಉಂಟಾಯ್ತ ?

ಆಗೋದಾಗಾಲಿ ಅಂದಾನೆ ದೇವೀಂದ್ರ
ಹೊರಟಾನೆ ಸೂಳೆ ಅರಮನೆಗೆ
ಬಾಕಲಾಕ್ಯವಳೆ ಭಾಗ್ಯದ ಎಲೆಲಕ್ಷ್ಮಿ
ಬ್ಯಾಗನೆ ಬಾಗಲ ತಗಿಯೇಳೆ

ಬಾಕಲ ತಗಿಯಾಕೆ ಬಂದಂತ ರಾಯರಿಲ್ಲ
ನಾನ್ಯಾಕ್ಹೋಗಿ ಕದವ ತಗಿಯಾಲಿ

ಆಕಾಶದ ಮಳೆ ಹೊಯ್ದು ಅಂಗಾಲೆ ವದ್ಯಾದೊ
ನಾನ್ಹೊದ್ದಿರುವ ಮಡಿಯೆ ನೆನೆದ್ಹೋದೊ | ಎನ್ನರಸಿ
ಬ್ಯಾಗ ಬಂದು ಕದವ ತಗಿಬಾರೆ

ಮಾಯಕಾರ ಮಳೆರಾಯ ಮಡದೀಯ ಮನೆಗ್ಹೋಗಿ
ಮಾಯವಾಗಿ ನೀವು ಹೇಳ್ತೀರ | ನೀವಿನ್ನ
ಮಾಯಾದ ಮಾತ ಹೇಳ್ತೀರ

ಮಡದೀಯ ಮನೆಗ್ಹೋಗಿ ಹಾಲು ಅನ್ನಾ ಉಂಡು
ಆನಂದವಾಗಿ ಇದ್ದು ಬಂದು | ದೇವೀಂದ್ರ
ಮಳೆ ಹುಯ್ಯಿತೆಂದು ಹೇಳ್ತೀರ ?

ಕದವ ತಗುದಾಳೊ ಹಾಸಿಗೆ ಬಿಟ್ಟಾಳೊ
ತೂಗು ಮಂಚಾವ ವದರ‍್ಹಾಸಿ | ಎನ್ನರಸಿ

ಹಾಲು ಸಕ್ಕರೆ ಅಡಿಗೇಯ | ಉಣಲಿಕ್ಕಿ
ಬಾಸೆ ಕೇಳುತಾಳೆ ಆಗಿನ್ನ

ಮಡದೀಯ ಮನೆಗೆ ಹೋಗಲಿಲ್ಲವೆಂದು
ಬಾಸೆ ಕೊಡಿ ನನಗೆ ಬಲಗೈಯ

ಮಡದೀಯ ಮನೆಗೆ ಹೋಗಲಿಲ್ಲ ನಾನು
ನಡುದಾರಿಂದ ಹಿಂದಕೆ ಬಂದೇನೊ | ಎನ್ನರಸಿ
ಮಾಯಾದ ಮಳೆಯೆ ಸುರಿದಾವೊ

ಮಾಯದ ಮಳೆಯೆ ಸುರಿದೊ ಸಾಲಕೋಡಿಗಳಾದೊ
ನಾನ್ಹೋಗಲಿಲ್ಲನ್ನರಸಿ ಅರಮನೆಗೆ
ನನ್ನ ಮಕ್ಕಳ ನಾನು ನೋಡಲಿಲ್ಲ

ಮಾಯಕಾರ ಮಳೆರಾಯ್ರೆ ಮಾಯತನವ ತಾಳಿ
ಮಾಯಾದ ಮಾತ ಹೇಳುತೀರ

ನನ್ನಾಣೆ ಎನ್ನರಸಿ ನಿನ್ನಾಣೆ ಎನ್ನರಸಿ
ನನ್ನ ಮಕ್ಕಳಾಣೆ ನಾನು ಹೋಗಲಿಲ್ಲಿ | ಎನ್ನರಸಿ
ಇರುವಾದದ ಮಾತ ಹೇಳಬ್ಯಾಡ

ಅಕ್ಕ ತಂಗೇರಾಣಿ ಅಣ್ಣ ತಂಗೀರಾಣಿ
ನನ್ನ ತಂದೀಯ ಆಣೆ ಹೋಗಲಿಲ್ಲ | ಅಂದಿನ್ನ
ಹಸಕೊಂಡೆ ದೇವೇಂದು ಮನಿಗ್ಯಾನೆ

ಹಾಲು ಚಕ್ಕರೆ ಅಡಿಗೆ ಹದವಾದೊ
ಹಂಡೇಯ ನೀರು ಕಾದ್ಹೋದೊ

ಹಂಡೆ ನೀರು ಕಾದೊ ಗಿಂಡ್ಯಾಗೆಣ್ಣೆ ಬಂದೊ
ನಾ ಕಾಲ ಹಿಡದೇನು ಉಂಡ್ಹೋಗಿ

ಕಾಲು ಹಿಡಿಯಲು ಬ್ಯಾಡ ಕಯ್ಯಿಜೋಡಿಸಬ್ಯಾಡ
ನನ್ನ ಪಾದವ ನೀನು ಹಿಡಿಬ್ಯಾಡ | ಎನ್ನರಸಿ
ನನ್ಹೊಟ್ಟೆಗೀಗ ಹಸವಿಲ್ಲ

ಹಸವಿಲ್ಲ ಮ್ಯಾಲೆ ಅಂಗೇ ಮಲಗಬ್ಯಾಡಿ
ಅಗ್ಗಣಿ ಎರದೇನು ಬನ್ನೀರಿ | ಎಂದಿನ್ನ
ಎರಡು ಪಾದವ ಹಿಡಿದಾಳೊ

ಆಗ ಅಗ್ಗಣಿಯ ಎರದಾಳೊ ಎನ್ನರಸಿ
ಒಂದೇಯ ತುತ್ತ ಉಣಬನ್ನಿ

ಪಾಲು ಪಂಚಾಮೋರ‍್ತದಡಿಗೆ ತಟ್ಟೇಲಿ ಇಟ್ಟುಕೊಂಡು
ತೂಗೊ ಮಂಚದ ಮ್ಯಾಲೆ ತೂಗೂತ | ಆಗಿನ್ನ
ಈವ್ಹಣ್ಣಾನೆ ನೀವು ಊಟಮಾಡಿ

ಕಯ್ಯಾಗೆ ಮುಟ್ಟೋನಲ್ಲ ಬಾಯಾಗೆ ತಿನ್ನೋನಲ್ಲ
ನಿನ್ನ ಪಾಲು ಪಂಚಾಮೋರ‍್ತದಡಿಗೆ ನನಗೆ ಬ್ಯಾಡ

ಚಾಕದೇಲಿ ಸೀಳಿ ಉಗುರೇಲಿ ಬಿಡಿಸಾಳೊ
ಒಂದೊಂದೆ ತೊಳೆಯ ಬಾಯಲಿಟ್ಟು | ಎನ್ನರಸಿ
ಸಾಕಾಯ್ತು ನನಗೆ ಊಟೀಗ

ಸಾಕಾಯ್ತೂಟೆಂದು ಮಲಗ್ಯಾನೆ ದೇವೀಂದ್ರ
ಬೆಳ್ಹುಟ್ಟಿ ಬೆಳಕು ಹರಿಯೀತು

ಮಾಡಿದ ರಾಜುಣವ ನೀರ‍್ಹರವಿ ತುಳುಕ್ಹುಯ್ದು
ಮ್ಯಾಗೆ ನೀರಾನೆ ಹುಯ್ದಾಳೆ | ಆಗಿನ್ನ
ದೇವೀಂದ್ರಗೆ ಸಿಂತೆ ಬಂದಾವೊ

ಮಡದೀಯ ಮಾತ ನಾನು ಕೇಳದೆ ಬಂದೆ
ಈ ಸೂಳೆಯ ಕೈಲಿ ಇನವಂದ | ಆಡೋದಕಿನ್ನ
ನನಗೆ ಯಾಕಪ್ಪ ಈ ಬುದ್ಧಿ

ಸೂರೀದ್ಹುಟ್ಟೀದ ಸೂರೀದ ಬೆಳಗ್ಹೋದ
ನಿಮಗೆ ನಿದ್ದಿನ್ನ ತಿಳಿದಿಲ್ವ
ಆದಡಿಗಾರೋದೊ ಕಾದನೀರು ಕಲ್ಲಾದೊ
ಊಟಮಾಡಬನ್ನಿ ನೀವೀಗ | ದೇವೀಂದ್ರ
ಪಾದಕೆ ಬಿದ್ದೇನು ನಿಮಗಿನ್ನ

ಪಾದಕೆ ಬೀಳಾಕೆ ನಿನಗೇನೆ ಎನ್ನರಸಿ
ಮಂಡೆನೋವು ಬಂದು ಮಲಗಿದ್ದೆ | ನನಗೀಗ
ಮಂಡೆನೋವೀಗ ಸಾನ್ಯಾದೊ

ಮಂಡೆನೋವು ಬಂದರೆ ಮಂಡಿಗೆಣ್ಣೆ ಒತ್ತಿ
ಹಂಡೇಯ ನೀರ ಎರದೇನು | ಗಿಂಡ್ಯಾಗೆಣ್ಣೆ ಒತ್ತಿ
ಮಂಡೇಯ ನೋವಾಗ ಬಿಡುತಾವೆ

ತೂಗು ಮಂಚಾ ಬಿಟ್ಟು ಎದ್ದಾನೆ ದೇವೀಂದ್ರ
ಹಂಡೇಯ ನೀರ ಎರದಾಳೊ

ಹಂಡೇ ನೀರೆರೆದು ಗಿಂಡ್ಯಾಗೆಣ್ಣೆ ಒತ್ತಿ
ಹಾಲು ಸಕ್ಕರೆ ಅಡಿಗೇಯ

ಕೋಳಿ ಕೂಗುವಾಗ ಸೂರೀದ ಮೂಡುವಾಗ
ಆಗ ಮಾಡಿದಡಿಗೆ ಆರೋದೊ | ದೇವೀಂದ್ರ
ನೀವು ಬ್ಯಾಗ ಊಟಾವ ಮಾಡಬನ್ನಿ

ಹೋದಾನೊ ದೇವೀಂದ್ರ ಊಟಾಕೆ ಕುಂತಾನೊ
ಮೂರೇಯ ತುತ್ತ ಉಂಡಾನೊ

ಏನು ಬ್ಯಾಡಾವೆ ಎನ್ನರಸಿ ಅಂದಿನ್ನ
ತೂಗು ಮಂಚದ ಮ್ಯಾಲೆ ಮನಿಗ್ಯಾನೆ | ದೇವೀಂದ್ರ
ನಾವು ದಾಯನಾಡಬೇಕು ಅಂದಾಳೆ

ದಾಯನಾಡಬೇಕು ಪಗಡೆಯ ನಾಡಬೇಕು
ನಿದ್ರೆ ಬಿಟ್ಹೋಗಲಿ ನಿಮಗೀಗ | ದೇವೀಂದ್ರ
ನಾವು ದಾಯ ಪಗಡೇಯ ಆಡಬೇಕು

ದಾಯ ಪಗಡೇಯ ನನಗೆ ಬ್ಯಾಡವೆಂದು
ಎಷ್ಟು ಹೇಳಿದರೂ ಕೇಳಲಿಲ್ಲ | ಎನ್ನರಸಿ
ನಾವು ಆಡಬೇಕು ದಾಯ ಪಗಡೇಯ | ಅಂದಿನ್ನ
ತೂಗು ಮಂಚದ ಮ್ಯಾಲೆ ಕೂತುಗೊಂಡು | ಪಗಡೆನಾಡಿ
ಏನೆಂದೆನ್ನರಸಿ ಹೇಳುತಾಳೆ

ಲೋಕಾದ ಮ್ಯಾಲೆ ದೇವೀಂದ್ರ ಹುಯ್ದಿನ್ನ
ಲೋಕೆಲ್ಲ ಹಿಂಗೆ ಬೆಳದಾವೆ | ಅಂದಾಗ
ಮೊಳಕೇಯ ತಂದು ತೋರುತ | ಎನ್ನರಸಿ
ನಿನಗಿನ್ನ ಉಂಟು ಮಳೆರಾಯ

ಯಾವ ಸೀಮೆಯ ದೇವೀಂದ್ರ ಹುಯ್ದಿನ್ನ
ಲೋಕೆಲ್ಲ ಹಿಂಗೆ ಇರಬೋದು | ಎನ್ನರಸಿ
ಈ ಮೊಳಕೆಲ್ಲ ಬೆಳೆದು ಬಂದಾದೆ

ಹೆಂಗಸೀನ ಮಾಯ ಎಂದೂ ತಿಳಿದೋನಲ್ಲ
ನನಗಿನ್ನ ದೇವೀಂದ್ರ ಇರಬೋದು | ಎನ್ನರಸಿ
ಯಾವಗೊ ದೇವೀಂದ್ರ ಹುಯ್ದವನೆ

ಅಡಗಿನಿಂದ ಬಂದೊ ಹನ್ನೆರಡೆ ಸಾಲಕೋಡಿ
ಆಕೋಡ್ಯಾಗೆ ಬಂದೊ ಈ ಮೊಳಕೆ | ದೇವೀಂದ್ರ
ಲೋಕೆಲ್ಲ ಹಿಂಗೆ ಇರಬೋದು

ಹೆಂಗಸೀನ ಮಾಯ ಎಂದೂ ತಿಳಿಯಾಕಿಲ್ಲ
ನನಗಿನ್ನ ಧೀರರಿರಬವುದ | ಲೋಕದ ಮ್ಯಾಲೆ
ಹೆಂಗಸೀನ ಮಾಯ ತಿಳಿಬೇಕು

ನೀರ‍್ಹರವಿ ತಳಕೆ ರಾಜುಣವ ಹೂದಿ
ಹೊಳೆಯುಕ್ಕಿ ಹರದಿ ಬಂದಾ(ವೆ) | ವೆಂದ್ಹೇಳುತೀಯ
ಹೆಂಗಸೀನ ಮಾಯ ತಿಳಿಲಿಲ್ಲ

ನನಗಿನ್ನ ಧೀರರಿಲ್ಲ ಲೋಕದ ಮ್ಯಾಲೆ
ಧೀರ ದೇವೀಂದ್ರಗೆ ಮಾಯತನವ್ಹೇಳಿ
ಸಮುದ್ರಾದ ಮಳೆ ಹೂದು ಮೊಳಕೆ ಬಂದಾದೆಂದು
ಸುಳ್ಳು ಮಾತುಗಳ ಹೇಳ್ತೀಯ

ದಾಯ ಪಗಡೇಯ ಆಡುವಾಗ ಎನ್ನರಸಿ
ಏನೆಂದ್ಹೇಳುತಾಳೆ ಆಗಿನ್ನ
ನಿಮ್ಮ ಬುದ್ದಿಲ್ಲಿಗೆ ಎಲ್ಲ ಮಟ್ಟವಾದೊ
ಬಾಸೆ ಕೊಡಿ ನನಗೆ ಬಾಲಗೈಯ | ದೇವೀಂದ್ರ
ನಿನ್ಹೋಗುಬ್ಯಾಡ ನಿಮ್ಮ ಅರಮನೆಗೆ

ಮಳೆದೇವರ ಮಾಡಿ ಮಕ್ಕಳೆ ಬರುತಾವೆ
ನಿಮ್ಮ ಕೃಷ್ಣ ಕಾಂತಿ ಮಗನ ಕೊಡಬೇಕು | ದೇವೀಂದ್ರ
ಬಾಸೆ ಕೊಡು ನನಗೆ ಬಲಗೈಯ

ಬಾಸೆ ಕೊಡುವಾಕೆ ಬಾಲನ ಪಡೆದಿರುವೋಳು
ಕೊಟ್ಟಾಳೇನರಸಿ ನಿನಗೀಗ | ಎನ್ನರಸಿ
ನಾನ್ಹೆಂಗೆ ಕೊಡುವಾಲಿ ಬಾಸೇಯ

ಅನ್ನ ನೀರೀಗೆ ಹನ್ನೆರಡು ಊರ ತಿರುಗಿ
ಕಂದಾನ ಸಾಕಿರುವೋಳು ಕೊಡುತಾಳ

ಹತ್ತು ತಿಂಗಳು ಮತ್ತೆ ಊರಿಗೆ ಹೋಗಬ್ಯಾಡಿ
ನಿಮ್ಮ ಮಕ್ಕಳಿಲ್ಲಿಗೆ ಬರುತಾರೆ | ದೇವೀಂದ್ರ
ನಿಮ್ಮ ಬಾಲರಿಲ್ಲೀಗೆ ಬರುತಾರೆ

ಹಾಲು ನೀರೀಗೆ ಆರೂರ ತಿರುಗವಳೆ
ಬಾಲನ ಸಾಕಿರುವೋಳು ಕೊಡುವಾಳ | ಎನ್ನರಸಿ
ಮಕ್ಕಾಳ ತಾಯಿ ಕೊಡುವೊಲ್ಲ

ನನ್ನ ನಿನ್ನಿಷ್ಟ ಏನಂದ್ರು ಇರಲಂದ
ನನ್ನ ಬಾಲಾರ ಸುದ್ದಿ ನಿನಗೊಳೊ

ಹತ್ತು ತಿಂಗಾಳು ಹೋಗಬ್ಯಾಡಿ ಮತ್ತೂರಿಗೆ
ಮಳೆದೇವರ ಮಾಡಿ ಮಕ್ಕಾಳೆ | ಬರುತಾರೆ
ನಿಮ್ಮ ಬಾಲಾರನಾಗ ಕರಕೊಂಡು | ದೇವೀಂದ್ರ
ಇರಿಸಿಕೊಳ್ಳೂನ ನಾವಿನ್ನ

ಆರು ತಿಂಗಳಾದೊ ಅರಗಿಣಿ ಮೊಕನೋಡಿ
ನಾನೇನು ಇದವಾಗಿ ಹೋಗಲಂದ ! ದೇವೀಂದ್ರ
ಲೋಕ ಲೋಕೆಲ್ಲ ಉರಿದಾವೆ ! ಭಗವಂತ
ಮಡದೀಯ ಮಾತ ಕೇಳಲಿಲ್ಲ

ಮಂಚಕೆ ಮಕಾಡೆ ಮಲಗ್ಯಾನೊ ದೇವೀಂದ್ರ
ಸಿಂತೆ ಮಾಡುತಲೆ ಮನದಾಗೆ

ಮಾಯದ ನಿದ್ದೆ ಬಂದು ಮನಗಿದ್ದರೆ ಸಾಕಪ್ಪ
ಆಚಿಗ್ಹೋದೇನು ನಾನೆಂದು | ದೇವೀಂದ್ರ
ಸಿಂತೆ ಮಾಡುತಲೆ ಮನದಾಗೆ

ಉಂಡಾಳುಟ್ಟಾಳು ದಿಂಬು ತಂದಾಳಾಗ
ನಿದ್ರೆ ಬಂದಾವು ದೇವೀಂದ್ರನಿಗೆ

ಮಾಯದ ನಿದ್ದೆ ನನಗೆ ಬಂದಿರುವೂದು
ನಿದ್ರೆ ಭಂಗಾವ ಮಾಡಬ್ಯಾಡ | ಎನ್ನರಸಿ
ಈಗ ನೀನ್ಹೋಗಿ ಮಲಗ್ಹೋಗು

ತಟ್ಟೆಲಿಳ್ಳೇವು ಮುತ್ತೀನ ಕೆನೆಸುಣ್ಣ
ಚಂದಾಕೊಂದಿಳ್ಳೆ ಹಾಕಬೇಕು | ಅಂದಿನ್ನ
ತಲೆ ಹಿಡದು ಆಗ ಎತ್ಯಾಳೊ

ನಿನ್ನ ಇಳ್ಳೇವು ನನಗೆ ಬ್ಯಾಡವೆಂದು
ಮಂಚಕೆ ಮಕಾಡೆ ಮನಗ್ಯಾನೆ | ದೇವೀಂದ್ರ
ಎಂದಿಲ್ಲದ ನಿದ್ದೆ ಕವುದಾವೊ

ನಿದ್ದೆ ಮಾಡುವಾಗ ಹೊರಟಾನೊ ದೇವೀಂದ್ರ
ಇರಬಿಗ್ಹೆಚ್ಚಾಗಿ ಬಂದಾನು

ಬಂದಾನೆ ಮಡದಿ ಅರಮನೆಗೆ ದೇವೀಂದ್ರ
ದೀವೀಗೆ ಮೊದಲೆ ಇಲ್ಲಾವೊ

ದೀವೀಗೆ ಮೊದಲಿಲ್ಲ ಅನ್ನ ನೀರಿಲ್ಲ
ಹನ್ನೆರಡೆ ಮಕ್ಕಳು (ಮನಿಗ್ಯಾವೆ) | ಮನೆಗಿರುವ ಹೊತ್ತಿನಲ್ಲಿ
ಬಂದ ದೇವೀಂದ್ರ ಆಗಿನ್ನ

ದೀವೀಗೇನಾದೊ ಮಕ್ಕಾಳೆ ಎತ್ಹೋದೊ
ಮಕ್ಕಳೆಲ್ಲೀಗೆ ಹೋಗ್ಯವರೆ

ಅನ್ನೆಕಾರ ಮಳೆರಾಯ ಹನ್ನೆರಡೆ ಮಕ್ಕಳು
ನಮ್ಮನ್ನ ನೀರೆಲ್ಲ ನಿಮಗಿರಲಿ
ಬಂಜೆ ಮನೆಗ್ಹೋಗಿ ಅಂಗಭಂಗ ಆಗಿ

ಹನ್ನೆರಡೆ ಮಕ್ಕಳು ಗೇಪುನ (ವೆ) I-ಕೆ ಬರಲಿಲ್ಲ
ಮಕ್ಕಳೆಲ್ಲೆಂದೆ ಬಂದಿರುವೆ | ದೇವೀಂದ್ರ
ಆ ಮುಂಡೆ ಮನೆಗ್ಹೋಗಿ ಮರತಿದ್ರ ?

ಬೆಳ್ಳಿ ಹುಟ್ಟಿದೊ ಶಿವನೆ ಬೆಳಕೆ ಹರಿದೊ ಶಿವನೆ
ಓಡಾಗಳ ರಾಗಿ ತಂದಾಳೊ | ಆ ಮಡದಿ
ಲೋಕ ಲೋಕೆಲ್ಲ ಉರಿದಾವೆ

ಸರಿಯಲ್ಲ ನಿಮಗೆ ತರವಲ್ಲ ದೇವೀಂದ್ರ
ಒಕ್ಕಾಲಗೋಳು ಇರಸಲ್ವ | ನಿಮಗಿನ್ನ
ಲೋಕಾದ ಗೋಳು ಇರಸಲ್ವ

ಲೋಕ ಲೋಕೆಲ್ಲ ಉರಿದಾವೆ ಬೆಂದಾವೆ
ಸರಿಯಲ್ಲ ನಿಮಗೆ ಸಮವಲ್ಲ

ಹತ್ಯಾನುಪ್ಪರಿಗೆ ನೋಡ್ಯಾನು ಸುತ್ತಾಲೆ
ಅರಗೀದ ಪೈರು ಒಣಗ್ಯಾವೆ

ಬೆಳ್ಳ ಸಿಳ್ಳೇಯ ಹೊಡದಾನೊ ದೇವೀಂದ್ರ
ಸಾಲಕೋಡಿಗಳೆ ಹರಿದಾವೊ

ಸೂಳೆಯ ಸಂಗ ತರವಲ್ಲ ನನಗೀದು
ನನ್ನ ಮಕ್ಕಾಳು ನನಗೆ ಸಮವಾಗಿ | ಬೆಳೆದವರೆ
ಸೂಳೇಯ ಮನೆಯು ತರವಲ್ಲ

ಬಂಜೇಯ ಮನೆಗೆ ಹೋಗಬ್ಯಾಡ ಎಂದಿನ್ನ
ಎಲ್ಲ ಹೇಳ್ಯಾಳೊ ಮಡದೀಯು

ಬಂಜೆ ಮನೆಗ್ಹೋಗಿ ಅಂಗಭಂಗವೇ ಆಗಿ
ನಿಮ್ಮ ದೊರೆತನ ನಿಮಗೆ ಸರಿಯಾದೊ | ದೇವೀಂದ್ರ
ಸೂಳೆಯ ಸಂಗ ತರವಲ್ಲ

ನನ್ನ ಮಕ್ಕಳಾಣೆ ನೀವು ಬಿಟ್ಟುಬಿಡಿ ಮಳೆರಾಯ
ಲೋಕ ಲೋಕೆಲ್ಲ ಉರಿದ್ಹೋದೊ

ಅಂಬರದ ಮಳೆ ಹೂದು ಭೂಮಿತಾಯಿ ಬೆಳೆಯಾಗಿ
ಆರಾಳಿಗನ್ನ ದೊರೆತಾವೊ | ದೇವೀಂದ್ರ
ಮುಂಡೇಯ ಮನೆಗೆ ಹೋಗಬವುದ

ಬಂಜೆ ಮನೆಗ್ಹೋಗಿ ಭಂಗವೆ ಆಗಬ್ಯಾಡಿ
ನನ್ನ ಮಕ್ಕಳಾ ನೋಡಿಕೊಂಡಿರಬನ್ನಿ | ದೇವೀಂದ್ರ
ಲೋಕಾದ ಗೋಳು ಇರಿಸಾವು

ಅಕ್ಕ ತಂಗೀಗಿನ್ನ ಹೆಚ್ಚಾಗಿ ಇರುವೋಳು
ನಾ ಹೆಂಗೆ ಬಿಟ್ಟೆನ್ನ ಇರುವೇನು

ಮಡದಿ ಮಕ್ಕಳನು ಬಿಟ್ಟರೂ ಸಿಂತಿಲ್ಲ
ನಾನೀಗ್ಹೋಗಿ ಈಗ ಬರುವೇನು | ಎಲೆನಾರಿ
ಚಿಟ್ಟುಮಾಡುಬ್ಯಾಡ ಮನದಾಗೆ

ಹೋದಾನು ದೇವೀಂದ್ರ ಆಗಾಲೆ ಅವನಿನ್ನ
ಸಿಂತೆ ಮಾಡುತಲೆ ಅವಳೀಗ | ಎನ್ನರಸಿ
ಮಂಚಕೆ ಮಕಾಡೆ ಮನಗ್ಯಾಳೆ | ಏನಂದು
ಎಂಟೇಯ ದಿನವೊ ಬರಲಿಲ್ಲ

ಆರೆ ದಿನವಾದೊ ಬರಲಿಲ್ಲ ದೊರೆಮಗ
ನನ್ನ ಹಂಬಲವ ಮರತಾರೊ

ದೇವೀಂದ್ರ ದೊರೆಯ ಬರಲಿಲ್ಲ ಅಂದಿನ್ನ
ಸಿಂತೆ ಮಾಡುತಲೆ ಮನಿಗ್ಯವಳೆ

ಲೋಲು ಹಚ್ಚವಳೆ ಲಾಲು ಮಂಚವನ್ಹಾಸಿ
ಆನಂದಕೆ ದೀವಿಗೆ ಉರಿವಾಗ | ಎನ್ನರಸಿ
ಮಂಚಾದ ಮ್ಯಾಲೆ ಮನಗ್ಯಾಳೆ

ಮಿಂಚಾಗಿ ಮಿಂಚಿದ ದೇವ ಗುಡುಗಾಗಿ ಗುಡುಗೀದ
ಅಂಗಾನ ನಿದ್ದೆ ಹರಿಯಾಲಿ | ಅಂದಿನ್ನ
ಮಿಂಚಾಗಿ ಮಿಂಚಿ ಗುಡುಗಾನೆ

ಮೂಡಲ ಮಳೆ ಹುಯ್ದು ಮೇಲು ಕೋಡಿಗಳ್ಹರಿದು
ಎನ್ನರಸಿ ಕದವ ತಗಿಯೇಳೆ | ಬ್ಯಾಗಿನ್ನ
ನಾ ಹೊದ್ದಿರುವ ವಲ್ಲಿ ಮಡಿಯಾದೊ

ಗಕ್ಕಾನೆದ್ದಾಳೊ ಬಾಕಲ ತಗುದಾಳೊ
ಬಾಳ ನಿದ್ದಿದ್ದೊ ದೇವೀಂದ್ರ

ಬಾಳ ನಿದ್ದಿದ್ದೊ ದೇವೀಂದ್ರ ಬಾಳ ಸಿಂತಿದ್ದೊ
ಆ ನಿದ್ರಾಗೆ ನನಗೆ ತಿಳುದಾವು | ಮಳೆರಾಯ
ನನ್ನ ಹಂಬಲವ ಮರೆತಿದ್ರ ?

ಮೂಡಲ ಮಳೆಹೂದು ಮೇಲ ಕೋಡಿಗಳ್ಹರಿದು
ನಾನ್ಹೊದಿದ್ದ ವಲ್ಲಿ ಮಡಿಯಾದೊ | ಎನ್ನರಸಿ
ಗಕ್ಕನೆ ಕೂಗೀದೆ ನಾನೀಗ

ಮಾಯಾದ ಮಳೆ ಹುಯ್ದು ಮನೆಯೆಲ್ಲ ಸುರಿದಾವೆ
ದೇವೀಂದ್ರ ನನ್ನ ಮರತವರೆ

ಅಕ್ಕಾನ ಮನೆಗ್ಹೋದ್ರೊ ಅಣ್ಣಾನ ಮನೆಗ್ಹೋದ್ರೊ
ನನ್ನ ಹಂಬಲವ ಮರತಿದ್ರ | ದೇವೀಂದ್ರ
ಎಂಟುದಿಸದಿಂದ ಬರಲಿಲ್ಲ

ಅಣ್ಣುಂಟ ನಿನಗೆ ಅಕ್ಕುಂಟ ದೇವೀಂದ್ರ
ಮಡದೀಯ ಮನೆಗೆ ಹೋಗಿದ್ರ | ಮಳೆರಾಯ
ನಿಮ್ಮ ಮಗನು ಹಿಂದೇನೆ ಬರಲಿಲ್ವ ?

ಅಣ್ಣೆಲ್ಲಿ ನನಗುಂಟು ಅಕ್ಕೆಲ್ಲಿ ನನಗುಂಟು
ಮಡದೀಯ ಮನೆಗೆ ಹೋಗಿದ್ದೆ | ಎನ್ನರಸಿ
ಮಗನು ಹಿಂದೇಲೆ ಬರಲಿಲ್ಲ

ಕಣ್ಣಿಗೆ ನೋಡವನ ಕರ್ಮಾವ ಕಳಿವೇನು
ನಿನ್ನ ಮಗನು ಹಿಂದೇನೆ ಬರಲಿಲ್ವ

ಹನ್ನೆರಡೂರಾಗೆ ಅನ್ನಕೆ ಭಿಕ್ಷಾವಮಾಡಿ
ಸಾಕಿರುವ ಬಾಲೆ ಕಲಿಸಾಳ

ಕಳಿಸೂದು ಬ್ಯಾಡಿ ಹೋಗೂದು ನೀವು ಬ್ಯಾಡಿ
ನನ್ನ ಅರಮನೆ ಬಿಟ್ಟು ಹೋಗಬ್ಯಾಡಿ | ದೇವೀಂದ್ರ
ನಿಮ್ಮ ನೋಡಾಕೆ ಬರುತಾರೆ

ಮಾತನಾಡ್ಯಾಳೂ ಮಾಣಿಕವ ಕೊಟ್ಟಾಳೊ
ಹಾಲು ಚಕ್ಕರೆ ಅಡಿಗೇಯ | ಮಾಡಿನ್ನ
ಹಂಡೇಯ ನೀರ ಎರೆದಾಳೆ

ಹಂಡೆ ನೀರೆರೆದು ಗಿಂಡ್ಯಾಗೆಣ್ಣೇ ಒತ್ತಿ
ಹಾಲು ಚಕ್ಕರೆ ಅಡಿಗೇಯ | ಮಾಡುಣಲಿಕ್ಕಿ
ಏನೆಂದ್ಹೇಳುತಾಳೆ ಆಗಿನ್ನ

ಒಂದೆ ವರುಷಾವೆ ನೀವು ಹೋಗಲುಬ್ಯಾಡಿ
ಮಳೆದೇವರ ಮಾಡಿ ಬರುತಾರೆ

ಮಳೆದೇವರ ಮಾಡಿ ಊರ ಮಕ್ಕಳು ಸೇರಿ
ನಿನ್ನ ಹುಡಿಕೊಂಡು ಬರುತಾರೆ | ದೇವೀಂದ್ರ
ಹೋಗಬ್ಯಾಡ ನಿಮ್ಮ ಅರಮನೆಗೆ

ಅಂಗೆ ಆಗಲಿ ನಿನ್ನ ಮಾತನ ಕೇಳಿ
ನಿನ್ನ ಪಟ್ಟಣ ಬಿಟ್ಟು ಹೋಗಲ್ಲ
ನೀನು ಹೇಳಿದ ಮಾತ ಕೇಳೇನು ಎನ್ನರಸಿ
ನಿನ್ನಾಜ್ಞೆಯಂತೆ ಇರುವೇನು

ಕಂಡೋರ ಮಗ ಗಂಡನಾಗಲಾರ
ನಿನಗ್ಯಾಕೆ ನನ್ನ ಸಿಂತಿನ್ನ | ದೇವೀಂದ್ರ
ನಿನ್ನ ಮಕ್ಕಳ ಕರಸಂದು | ಎನ್ನರಸಿ
ಬಲಗೈಯ ಬಾಸೆ ಕೊಡು ನನಗೆ

ಹೊನ್ನೆ ಕೊಟ್ಟೇನು ನಾರಿ ವರವೆ ಕೊಟ್ಟೇನು ನಾರಿ
ಬಾಸೆ ಕೊಡಲಾರೆ ಬಲಗೈಯ

ಹಾಲು ಕೊಟ್ಟೇನು ನಾರಿ ಹಡಗೆ ನಾರಿ
ಬಾಸೆ ಕೊಡಲಾರೆ ಬಲಗೈಯ
ನನ್ನ ಮಕ್ಕಳ ಕರಿಲಾರೆ ಎನ್ನರಸಿ
ನನ್ನ ಆಸೇಯ ಮರಿ ಅಂದ

ಅನ್ನ ನೀರೆಲ್ಲ ಬಿಟಬಿಟ್ಟಿ ದೇವೀಂದ್ರ
ನನ್ನಾಸೆ ಇಲ್ಲೀಗೆ ಬಿಟಬಿಡು | ಅಂದಿನ್ನ
ಬಾಕಲ ಬಿಟ್ಟಾಗ ಬಂದಾನು

ಅರಮನೆಯಾಗಿರುವ ಅರಗಿಣಿ ನನಮಡದಿ
ಸೂಳೇಯ ಸಂಗ ಬಿಟುಬಂದೆ ! ಎಲ ಮಡದಿ
ಸೂಳೇಯ ಸಂಗ ತರವಲ್ಲ

ನನ್ನ ಮಕ್ಕಾಳು ನನ್ನ ಸಮನಾಗಿರುವೋರು
ಸೂಳೇಯ ಸಂಗ ಬುಟ್ಟೇನು