ಅಯ್ಯಾ ವರ್ಷಕೊಂದು ದೀವಳಿಗೆ
ನಾಡಿಗೆಲ್ಲ ದೊಡ್ಡಬ್ಬ

ಅಂತೋ ಹಬ್ಬಕೆ ಹೋಗಿ ಬಾರೊ
ನಿನ್ನ ತಂಗೆ ಕರತಾರೊ !

ಅಯ್ಯಾ ತಂಗೆ ಮನೆಗೆ
ಅಣ್ಣಯ್ಯ ಬರುತಾನೆ

ಅಯ್ಯಾ ಅಣ್ಣನಾದರೆ ಬಂದವನೆ
ನಡುಮಲ್ಲಾದರೆ ಕೂತವನೆ

ಅಯ್ಯಾ ಸತ್ಯವಂತ ನಾಗಾಮಣಿಯು
ಓಡಿ ಇನ್ನ ಬರುತಾಳೆ

ಅಯ್ಯಾ ಅಣ್ಣನ ಮಕವೇನಾದುರೆ
ಬೇಗದಿಂದ ನೋಡುತಾಳೆ

ಅಯ್ಯಾ ಹಸ್ತು ಬಂದಾವನಂತಹೇಳಿ
ಆಡುಗೆನಾದರೆ ಮಾಡುತಾಳೆ

ಅಮ್ಮ ಅಡುಗೆ ಮಾಡಿ ಮನೆಯಲ್ಲಿರಿಸಿ
ನೀರುನಾದರೆ ಕೊಡುತಾಳೆ

ಅಯ್ಯಾ ಅಣ್ಣ ಅಣ್ಣ ಬಾರಣ್ಣ
ಊಟವಾದರೆ ಮಾಡೋಣ

ಆಯ್ಯಾ ನೀನು ನಾನು ಜೊತೆಯಲ್ಲಿ
ಊಟವಾದರೆ ಮಾಡೋಣ

ಅಯ್ಯಾ ಅಣ್ಣತಂಗೇರು ಜೊತೆಯಲ್ಲಿ
ಊಟವಾದರೆ ಮಾಡುತಾರೆ

ಅಮ್ಮಾ ಊಟಮಾಡೋ ಸಮಯದಲ್ಲಿ
ಏನಂದ ತಂಗಿ ಕೇಳತಾಳೆ

ಅಯ್ಯಾ ಅಣ್ಣ ಅಣ್ಣ ಕೇಳಣ್ಣ
ನನ್ನ ಮಾತು ನೀ ಕೇಳೊ

ಅಯ್ಯಾ ನೀನು ಬಂದ ಮಾತೇಳೊ
ನೀನು ಬಂದ ಮಾತೇಳೊ

ಅಮ್ಮಾ ವರ್ಷಕೊಂದು ದೀವಳಿಗೆ
ನಾಡಿಗೆಲ್ಲ ದೊಡ್ಡಬ್ಬ

ಅಮ್ಮಾ ಕರೆಯೋಕಾದರೆ ಬಂದೆನಮ್ಮಾ
ಕರೆಯೋಕಾದರೆ ಬಂದೆನಮ್ಮ

ಅಮ್ಮಾ ಅತ್ತೆ ಮಾವದೀರ ಕೇಳಿಕೊಂಡು
ಬೇಗದಿಂದ ಹೊರಡಮ್ಮ

ಅಯ್ಯೊ ಸತ್ಯವಂತ ನಾಗಾಮಣಿಯು
ಓಡಿ ಇನ್ನ ಬರುತಾಳೆ

ಅಮ್ಮ ಪಾವಿನಲ್ಲಿ ಒಂದು ಪಾವು
ತುಂಬೆ ಹೂವ ಕುಯ್ದಾಳು

ಅಯ್ಯೊ ಸೇರಿನಲ್ಲಿ ಒಂದು ಸೇರು
ಮಲ್ಲಿಗೂವ ಕುಯ್ದಾಳು

ಅಯ್ಯಾ ಅತ್ತೆ ಮಾವದಿರ ಪಾದಪೂಜೆ
ಭಕ್ತಿಯಿಂದ ಮಾಡುತಾಳೆ

ಅಮ್ಮಾ ಅತ್ತೆ ಅತ್ತೆ ಕೇಳಮ್ಮ
ನನ್ನ ಮಾತು ನೀ ಕೇಳು

ಅಮ್ಮ ಅಣ್ಣನಾದರೆ ಬಂದವನೆ
ಗೌರಿಗಾದರೆ ಕಳಿಸಮ್ಮ

ಅಮ್ಮ ಅಣ್ಣ ಜೊತಿಲ್ಲಾದರೆ
ತೌರಿಗಾದರೆ ಹೋಗುತೀನಿ

ಅಮ್ಮ ಸತ್ಯವಂತ ನಾಗಾಮಣಿಯೆ
ನನ್ನ ಮಾತು ಕೇಳಮ್ಮ

ಅಮ್ಮ ಆರು ತಿಂಗಳು ಬಿಮ್ಮನಿಸೆ
ಅಣ್ಣ ಜೊತಿಲ್ಲಿ ಹೋಗುಬ್ಯಾಡ

ಅಮ್ಮ ಬಾಳ ಕಷ್ಟ ಬರುತೈತೆ
ಬಾಳ ಕಷ್ಟ ಬರುತೈತೆ

ಅಯ್ಯೊ ಸತ್ಯವಂತ ನಾಗಮಣಿಯು
ಗೋಳುದುಃಖ ಮಾಡುತಾಳೆ

ಅಮ್ಮ ಗೋಳುದುಃಖ ಮಾಡುತಾಳೆ
ಧರಣಿ ಶೋಕ ಮಾಡುತಾಳೆ

ಅಮ್ಮ ಅತ್ತೆ ಅತ್ತೆ ಕೇಳಮ್ಮ
ನನ್ನ ಮಾಡು ನೀ ಕೇಳೆ

ಅಮ್ಮ ಈವತ್ತಿನ್ನ ಹೋಗುತೀನಿ
ನಾಳಿಕಾದರೆ ಬರುತೀನಿ

ಅಮ್ಮ ನನ್ನ ಸೊಸೆಯೆ ಕೇಳಮ್ಮ
ನಾಗಾಮಣಿಯೆ ಕೇಳಮ್ಮ

ಅಟ್ಟದ ಮೇಗಲ ಸಾವಿರಾರು ರೂಪಾಯಿ
ಒಡವೆ ಸೀರೆನಾದರು ಧರಿಸಮ್ಮಾ

ಅಮ್ಮ, ಸತ್ಯವಂತ ನಾಗಾಮನಿಯು
ಓಡಿ ಇನ್ನ ಬರುತಾಳೆ

ಅಮ್ಮ ಅಟ್ಟದ ಮೇಗಳ ಸಾವಿರಾರು ರೂಪಾಯಿ
ಒಡವೆ ಸೀರೆ ಬೇಗನೆ ಧರಿಸ್ಯಾಳು

ಅಯ್ಯಾ ಅಣ್ಣ ಅಣ್ಣ ಕೇಳಣ್ಣ
ನನ್ನ ಮಾತು ನೀ ಕೇಳೊ

ಅಯ್ಯಾ ಅತ್ತೆ ಮಾವ್ದೀರ ಆಜ್ಞೆಯ
ಬೇಗದಿಂದ ಪಡೆದಿವ್ನಿ

ಅಯ್ಯಾ ತಾಯಿ ತಂದೆ ಮಕವನ್ನೆ
ಬೇಗದಿಂದ ನೋಡುಬೇಕು

ಅಯ್ಯಾ ತೌರಿಗಾದರೆ ಹೋಗಾನ
ಬೇಗದಿಂದ ನಡಿಯಣ್ಣ

ಅಯ್ಯಾ ಅಣ್ಣ ತಂಗಿ ಜತಿಯಲ್ಲಿ
ತೌರಿಗಾದರು ಬರುತಾರೆ

ಅಯ್ಯಾ ಊರು ಬುಟ್ಟು ಮೂರು ಮೈಲಿ
ಬೇಗದಿಂದ ಕರೆತಂದ

ಅಯ್ಯಾ ಕೇಡುಗಾರ ಅಣ್ಣಯ್ಯ
ತಂಗೆ ಮಕವೇ ನೋಡುತಾನೆ

ಅಯ್ಯೊ ಇಂತೊ ಸೀರಿ ಇಂತೊ ಒಡವೆ
ನನ್ನ ಹೆಂಡ್ತಿಗೆ ಇಲ್ಲವಲ್ಲೊ

ಅಯ್ಯಾ ಒಡವೆ ಸೀರೆ ಕೀಳಾಕೆ
ಯಾವ ತಂತ್ರ ಮಾಡಲಿ ?

ಅಯ್ಯಾ ಕೇಡುಗಾರ ಅಣ್ಣಯ್ಯ
ಮನಸಿನಲ್ಲಿ ಇಟುಕೊಂಡ

ಅಯ್ಯಾ ಊರು ಬುಟ್ಟು ಆರು ಮೈಲಿ
ಬೇಗದಿಂದ ಕರತಂದ

ಅಯಾ ಊರು ಬುಟ್ಟು ಆರು ಮೈಲಿ
ಕಾಡಿಗಾದರೆ ಕರತಂದ

ಅಯ್ಯಾ ಕಾಡಿನಲ್ಲಿ ನಾದುರೆ
ದೊಡ್ಡದೊಂದು ಕಟ್ಟೆಯು

ಅಯ್ಯಾ ಕಟ್ಟೆ ಏರಿಮ್ಯಾಲೆ ನಿಂತುಕೊಂಡು
ಸುತ್ತು ಮುತ್ತಲು ನೋಡುತಾನೆ

ಅಯ್ಯಾ ಕಾಡಿನಲ್ಲಿ ನಾದುರೆ
ಒಡವೆನಾದರೆ ಕೀಲಬೇಕು

ಅಯ್ಯಾ ಒಡವೆನಾದರೆ ಕೀಳಬೇಕು
ನನ್ನ ಹೆಂಡ್ತೀಗೆ ಕೊಡಬೇಕು

ಅಯ್ಯಾ ಕೇಡುಗಾರ ಅಣ್ಣಯ್ಯ
ಮನಸಿನಲ್ಲಿ ಇಟುಕೊಂಡು

ಅಯ್ಯಾ ದೂರದಲ್ಲಿ ಇದ್ದಂತ
ತಂಗಿನಾದರೆ ಕರದಾನು

ಅಯ್ಯೊ ಸತ್ಯವಂತ ನಾಗಾಮಣಿಯು
ಓಡಿ ಇನ್ನ ಬರುತಾಳೆ

ಅಯ್ಯಾ ಕಳ್ಳರು ಕಾಕರು ಬಂದಾರೆಂದು
ಓಡಿ ಇನ್ನ ಬರುತಾಳೆ

ಅಯ್ಯಾ ಓಡಿ ಬಂದು ತಂಗಮ್ಮ
ಅಣ್ಣನ್ನಾದರೆ ತಬ್ಯಾಳು

ಅಯ್ಯಾ ಅಣ್ಣ ಅಣ್ಣ ಕೇಳಣ್ಣ
ನನ್ನ ಮಾತು ನೀ ಕೇಳೊ

ಅಯ್ಯಾ ತೌರು ದಾರಿ ಬುಟ್ಯಲ್ಲೊ ?
ಕಾಡು ದಾರಿಗೆ ಕರತಂದ್ಯ

ಅಮ್ಮ ಕಾಡಿನಲ್ಲಿನಾದರೆ
ಕಳ್ಳರು ಕಾಕರು ಬಂದಾರು

ಅಮ್ಮ ಕಳ್ಳರಿಗಿಂತ ಹೆಚ್ಚಿನ ಕಳ್ಳ
ನಾನೇ ಕಾಣೆ ಎಲೆ ರಂಡೆ

ಅಯ್ಯೊ ನಿನ್ನ ವಡವೆ ಕೀಳಬೇಕು
ನಿನ್ನ ಜೀವ ಕಳೀಬೇಕು

ಅಯ್ಯೋ ಸತ್ಯವಂತ ನಾಗಾಮಣಿಯು
ಭೂಮಿಗಾದುರು ಇಳುದಾಳು

ಅಯ್ಯೋ ಅಣ್ಣ ಅಣ್ಣ ಕೇಳಣ್ಣ
ನಿನಗೇನನ್ಯಾಯ ಮಾಡಿದ್ದೆ

ಅಯ್ಯಾ ಒಂದು ತಾಯಿ ಹೊಟ್ಯಲ್ಲಿ
ನಾವು ಈಗ ಹುಟ್ಟಲಿಲ್ಲವೆ ?

ಅಯ್ಯಾ ನೀನು ಉಂಡ ಹಾಲು ಅನ್ನ
ನಾನು ಈಗ ಉಣಲಿಲ್ಲವ

ಅಯ್ಯಾ ನೀನು ನಾನು ಜತೆಯಲ್ಲಿ
ನಾವು ಈಗ ಬೆಳೆಲಿಲ್ಲವ

ಅಯ್ಯಾ ಒಡವೆನಾದರೆ ಕೀಳಬೇಡ
ತೌರಿಗಾದರೆ ಹೋಗಾನ

ಅಯ್ಯಾ ಆರು ತಿಂಗಳು ಬಿಮ್ಮನಿಸೆ
ತಾಯಿ ತಂದೆ ಮಕವನ್ನೆ

ಅಯ್ಯಾ ತಾಯಿ ತಂದೆ ಮಕವನ್ನೆ
ಬೇಗದಿಂದ ನೋಡಬೇಕು

ಅಯ್ಯೋ ತಾಯಿ ತಂದೆ ಆಸೆಯು
ಇಲ್ಲಿನಾದರೆ ಬಿಟ್ಟುಬುಡೆ

ಅಯ್ಯೋ ಅತ್ತೆ ಮಾವದೀರ ಆಸೆಯು
ಇಲ್ಲಿನಾದರೆ ಬಿಟ್ಟುಬುಡೆ

ಅಯ್ಯೋ ಅಣ್ಣ ಅಣ್ಣ ಕೇಳಣ್ಣ
ನನ್ನ ಮಾಡು ನೀ ಕೇಳು

ಅಯ್ಯಾ ಕೈಯೆತ್ತಿನ್ನ ಮುಗದೇನು
ಕಾಲನಾದರೆ ಹಿಡದೇನು

ಅಯ್ಯಾ ಹಿಂಸೆನಾದರೆ ಮಾಡಬೇಡ
ತೊಂದರೆನಾದರೆ ಮಾಡಬೇಡ

ಅಯ್ಯಾ ನಿನಗೇನನ್ನಾಯ ಮಾಡಿದ್ದೆ
ನಿನಗೇನು ಪಾಪ ಮಾಡಿದ್ದೆ

ಅಮ್ಮ ಅಣ್ಣನು ನಾನಲ್ಲ
ನಿನ್ನ ಮಿಂಡನು ಕಾಣೆಣ್ಣೆ

ಅಯ್ಯೊ ಸತ್ಯವಂತ ನಾಗಾಮಣಿಯು
ಗೋಳು ದುಃಖ ಮಾಡುತಾಳೆ

ಅಯ್ಯೊ ಒಡವೆ ಸೀರೆ ಕೊಡದಿದ್ರೆ
ನಿನ್ನ ಜೀವ ಕಳಿತೀನಿ

ಅಯ್ಯಾ ದೂರದಲ್ಲಿ ಇದ್ದಂತ
ಉಗಣಿಹಮಬೆ ನೋಡುತಾನೆ

ಅಯ್ಯಾ ಉಗಣಿ ಹಂಬೆ ತರುತಾಣೆ
ತಂಗಿ ಕೈಕಾಲು ಕಟ್ಟುತಾನೆ

ಅಯ್ಯಾ ತಂಗಿ ಕೈಕಾಲು ಕಟ್ಟೆನ್ನ
ಏರಿಮ್ಯಾಲೆ ಹಾಕ್ಯವನೆ

ಅಯ್ಯಾ ಬಾಳ ಹಿಂಸೆ ಮಾಡುತಾನೆ
ಬಾಳ ತೊಂದ್ರೆ ಮಾಡುತಾನೆ

ಅಯ್ಯಾ ತಂಗೆ ಎದೆ ಮ್ಯಾಲೆ ಕೂತುಗಂಡು
ಒಡವೆನಾದರೆ ಬಿಚ್ಚುತಾನೆ

ಅಯ್ಯಾ ಒಡವೆ ಸೀರೆ ಬಿಚ್ಚಿಕೊಂಡು
ಗಂಟುನಾದರೆ ಕಟ್ಟುತಾನೆ

ಅಯ್ಯಾ ಬಾಳ ಚಿಂತೆ ಮಾಡುತಾನೆ
ಬಾಳ ಯೋಚನೆ ಮಾಡುತಾನೆ

ಅಯ್ಯಾ ಇವಳ ಜೀವ ಕಳಿಬೇಕು
ನನ್ನ ಊರಿಗೋಗಬೇಕು

ಅಯ್ಯಾ ಸೊಂಟದಲ್ಲಿ ಇದ್ದಂತ
ಬಾಕುನಾದರೆ ತಗದಾನು

ಅಯ್ಯಾ ಕೇಡುಗಾರ ಅಣ್ಣಯ್ಯ
ತಂಗೆ ಕುತಿಗೆ ಕುಯಿತಾನೆ

ಅಯ್ಯಾ ತಂಗೆ ಕುತಿಗೆ ಕುಯಿವಾಗ
ಬಾಕುನಾದರೆ ಈಗಲೇ

ಅಯ್ಯಾ ಬಾಕುನಾದರೆ ಈಗಲೇ
ಮಾಯವನ್ನೆ ಆಯಿತು

ಅಯ್ಯೋ ಮಂತ್ರವನ್ನು ಕಲಿತವಳೆ
ತಂತ್ರವನ್ನೆ ಕಲಿತವಳೆ

ಅಮ್ಮ ತಂತ್ರವನ್ನೆ ಕಲಿತೀಯ
ಮಾಯಕಾರಿ ಚಾಂಡಾಳಿ

ಅಯ್ಯಾ ದೂರದಲ್ಲಿ ಇದ್ದಂತ
ಈಚಲು ಮುಳ್ಳೆ ತರುತಾನೆ

ಅಯ್ಯಾ ಈಚಲುಮುಳ್ಳೆ ತರುತಾಣ
ತಂಗೆ ಕಣ್ಣಿಗೆ ಚುಚ್ಚುತಾನೆ

ಅಯ್ಯೋ ಗೋಳುದುಃಕ ಮಾಡುತಾಳೆ
ಧರಣಿ ಶೋಕ ಮಾಡುತಾಳೆ

ಅಯ್ಯಾ ಆರು ತಿಂಗಳು ಬಿಮ್ಮನಿಸೆ
ಬೇಗದಿಂದ ಆಳುತಾಳೆ

ಅಯ್ಯಾ ತಂಗೆ ಎದೆ ಮೇಲೆ ನಿಂತುಕೊಂಡ
ಜಗ್ಗಿಸಿನ್ನ ತುಳುದಾನು

ಅಯ್ಯಾ ಸತ್ಯವಂತ ನಾಗಾಮಣಿಯು
ಜೀವನಾದರು ಬುಡಲಿಲ್ಲ

ಅಯ್ಯೊ ದೂರದಲ್ಲಿ ಇದ್ದಂತ
ಕಲ್ಲುನಾದರೆ ನೋಡುತಾನೆ

ಅಯ್ಯ ಕಲ್ಲುನಾದರೆ ತರಬೇಕು
ಇವಳ ಮ್ಯಾಲೆ ಹಾಕಬೇಕು

ಅಯ್ಯಾ ಇವಳ ಮ್ಯೇಲೆ ಹಾಕಬೇಕು
ಇನ್ನು ಜೀವ ಕಳಿಬೇಕು

ಅಯ್ಯಾ ಕೇಡುಗಾರ ಅಣ್ಣನು
ಕಲ್ಲಿನತಾಕೆ ಹೋಗುತಾನೆ

ಅಯ್ಯಾ ಪರಮೇಶ್ವರ ಈಗಲೇ
ಬೇಗದಿಂದ ನೋಡುತಾನೆ

ಅಯ್ಯೋ ಕೇಡುಗಾರ ಅಣ್ಣ
ತಂಗಿ ಜೀವ ಕಳಿತಾನೆ

ಅಯ್ಯಾ ಕೊಳ್ಳಿನಲ್ಲಿ ಇದ್ದಂತ
ಸರುಪನಾದರೆ ಬಿಡುತಾನೆ

ಅಯ್ಯಾ ಸರುಪನಾದರೆ ಬಂದೀತು
ಕಲ್ಲಿನಡಿ ಸೇರಿತು

ಅಯ್ಯಾ ಕಲ್ಲನಾದುರೆ ಎತ್ತುತಾನೆ
ಕೇಡುಗಾರ ಅಣ್ಣಯ್ಯ

ಅಯ್ಯಾ ಕಲ್ಲಿನಡಿ ಇದ್ದಂತ
ಸರಪವನ್ನೆ ಕಂಡನು

ಅಯ್ಯಾ ಕಲ್ಲನಾದರೆ ಎತ್ಯಾನು
ಹೆಗಲು ಮ್ಯಾಲೆ ಮಡಿಗ್ಯಾನು

ಅಯ್ಯೋ ಕಲ್ಲಿನಡಿ ಇದ್ದಂತ
ಸರುಪನಾದರೆ ಬಂದೀತು

ಅಯ್ಯಾ ಅಣ್ಣನ ಪಾದನಾದರೆ
ಬೇಗದಿಂದ ಕಚ್ಚೀತು

ಅಯ್ಯಾ ಹೊತ್ತಿರೋ ಕಲ್ಲನ್ನ
ನೆಲಕೆನಾದರೆ ಬಿಟ್ಟನು

ಅಯ್ಯೊ ತಂಗೆ ತಂಗೆ ಎನುತಾನೆ
ಬೇಗದಿಂದ ಕರಿತಾನೆ

ಅಯ್ಯೊ ತಂಗೆ ತಂಗೆ ಕೇಳಮ್ಮ
ನನ್ನ ಮಾತು ಕೇಳಮ್ಮ

ಅಮ್ಮ ಸರಪ ನನ್ನ ಕಚ್ಚಿತು
ನೀರನ್ನಾದರೆ ಕೊಡಮ್ಮ

ಅಯ್ಯೊ ಗೋಳುದುಃಕ ಮಾಡುತಾನೆ
ಧರಣಿಶೋಕ ಮಾಡುತಾನೆ

ಅಯ್ಯೋ ನೀರು ನೀರು ಎಂದಾನು
ಜೀವನಾದರು ಬಿಡುತಾನೆ

ಅಯ್ಯೊ ಸತ್ಯವಂತ ನಾಗಾಮಣಿಯು
ಕಾಡಿನಲ್ಲಾದರೆ

ಅಯ್ಯೋ ಕಾಡಿನಲ್ಲಾದರೆ
ಗೋಳು ದುಃಖ ಮಾಡುತಾಳೆ

ಅಯ್ಯೋ ಗೋಳು ದುಃಖ ಮಾಡುತಾಳೆ
ಧರಣಿಶೋಕ ಮಾಡುತಾಳೆ

ಅಯ್ಯಾ ಸತ್ಯವಂತ ಪಾರ್ವತಿ
ಬೇಗದಿಂದ ಬರುತಾಳೆ

ಅಮ್ಮ ನಾಗಮ್ಮ ತಾಯಿ ಕೈಕಾಲ
ಬೇಗದಿಂದ ಬಿಚ್ಚುತಾಳೆ

ಅಮ್ಮ ನಾಗಮ್ಮ ತಾಯಿ ಕೇಳಮ್ಮ
ನಾಗಮ್ಮ ತಾಯಿ ಕೇಳಮ್ಮ

ಅಮ್ಮ ಕಾಡಿನಲ್ಲಿನಾದರೆ
ಯಾರಿನ್ನ ಕರತಂದ್ರು

ಅಮ್ಮ ಕೇಡುಗಾರ ಅಣ್ಣಯ್ಯ
ತೋರಿಸಾದರೆ ಕರತಂದ

ಅಯ್ಯೊ ಒಡವೆ ಸೀರೆ ಬಿಚ್ಚಿಕೊಂಡು
ಕಯ್ಯಿ ಕಾಲು ಕಟ್ಟಿದಾನು

ಅಮ್ಮ ಕಯ್ಯಿ ಕಾಲ ಕಟ್ಟೆನ್ನ
ಕಲ್ಲನಾದರೆ ಈಗಲೆ

ಅಮ್ಮ ಕಲ್ಲನಾದರೆ ತಂದಾನು
ತಲೆ ಮ್ಯಾಲೆ ಹಾಕೋಕೆ

ಅಮ್ಮ ಕಲ್ಲಿನಡಿ ಇದ್ದಂತ
ಸರಪವು ಈಗಲೇ

ಅಮ್ಮ ಸರಪವು ಈಗಲೇ
ಬೇಗದಿಂದ ಕಚ್ಚಿತು

ಅಮ್ಮ ಅಣ್ಣನಾದರೆ ಈಗಲೆ
ಜೀವನಾದರೆ ಬಿಟ್ಟವನೆ

ಪಾಠಾಂತರಗಳು ಮತ್ತು ಸಮೂಹ ಆಶಯದ ಪಠ್ಯಗಳು

೧) ಅಣ್ಣತಂಗಿ; ಹೆಗಡೆ ಎಲ್.ಆರ್., ಸುವ್ವಿ ಸುವ್ವಿ ಸುವ್ವಾಲೆ, ಸಮಾಜ ಪುಸ್ತಕಾಲಯ, ಧಾರವಾಡ, ೧೯೭೧, ಪು.ಸಂ. ೧೧೩-೧೧೬

೨) ಅಣ್ಣ ನಾಗೇಂದ್ರ ತಂಗಿ ದೆಮಕ್ಕಾ; ಹೆಗಡೆ ಎಲ್.ಆರ್., ಪರಮೇಶ್ವರಿಯ ಪದಗಳು, ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೨, ಪು.ಸಂ. ೧-೨೪

೩) ನಾಗರ ಪಂಚಮಿ; ರಾಜಪ್ಪ ಟಿ.ಎಸ್. ರಾಯಚೂರ ಜಿಲ್ಲೆಯ ಜನಪದ ಗೀತೆಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೪, ಪು.ಸಂ. ೬೩-೬೫

೪) ಪಾಪಿಗೇಡಿ ಅಣ್ಣಯ್ಯ ನಾಗೇಗೌಡ, ಎಚ್.ಎಲ್., ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೬, ಪು.ಸಂ. ೧೯೦-೨೦೦

೫) ನಾನು ಒಬ್ಬಳೆ ಬಂದೆ ತಾಯಿಮನೆಗಿನ್ನು ಅಂದನೂರು ಶೋಭ, ಕೊಂಬೆ ರೆಂಬೆಲ್ಲ ಎಳಗಾಯಿ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೭೮, ಪು.ಸಂ. ೭೪-೭೫

೬) ಅಣ್ಣ ತಂಗಿ; ಕಾಳೇಗೌಡ ನಾಗವಾರ, ಬೇಕಾದ ಸಂಗಾತಿ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೮೦, ಪು.ಸಂ. ೩೩೮-೩೪೭

೭) ಅಣ್ಣ ತಂಗಿ; ಭಾನುಮತಿ ವೈ.ಸಿ., ಪುಟ್ಟಮಲ್ಲಿಗೆ ಹಿಡಿತುಂಬ, ತಾರಾ ಪ್ರಿಂಟಿಂಗ್ ಪ್ರೆಸ್, ಮೈಸೂರು, ೨೦೦೧, ಪು.ಸಂ. ೮೧-೯೦.*      ಸತ್ಯವಂತ ನಾಗಾಮಣಿ; ನಾಗೇಗೌಡ ಎಚ್.ಎಲ್., ಪದವವೆ ನಮ್ಮ ಎದೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೬, ಪು.ಸಂ. ೨೪೭-೨೫೫