ರಾಗದ ಮೊದಲನೆಯ ಮುಖ್ಯ ಸ್ವರವೇ ‘ವಾದಿ’ ಎಂದು ಕರೆಯಲಾಗುತ್ತದೆ. ಅದಕ್ಕೆ ‘ಜೀವಸ್ವರ’ ಎಂದು ಗುರುತಿಸಿದ್ದಾರೆ. ವಾದಿ ಸ್ವರ ಪ್ರಯೋಗವಿಲ್ಲದ ರಾಗ ನಿರಸವಾಗಿರುತ್ತದೆ. ಅದು ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುತ್ತದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಾದಿ ಸ್ವರಕ್ಕೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ.

ಸಂಗೀತೋದ್ಧಾರಕ ಪಂ. ವಿಷ್ಣು ನಾರಾಯಣ ಭಾತಖಂಡೆಯವರು ತಮ್ಮ ಕಾಲದ ಸಂಗೀತ ಶಾಸ್ತ್ರಕಾರರನ್ನೊಡಗೂಡಿ ಪ್ರಾಚೀನ, ಮಧ್ಯ ಮತ್ತು ಅರ್ವಾಚೀನ ಶಾಸ್ತ್ರಗ್ರಂಥಗಳನ್ನು  ಪರಿಶೀಲಿಸಿ ಹಿಂದುಸ್ತಾನಿ ಸಂಗೀತಕ್ಕೆ ೪೦ ಸಿದ್ಧಾಂತಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅವುಗಳು ಇಂದಿಗೂ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಪ್ರಯೋಗದಲ್ಲಿವೆ. ಅಂತಹ ೪೦ ಸಿದ್ಧಾಂತಗಳಲ್ಲಿ ‘ವಾದಿ’ ಸ್ವರವೂ  ಒಂದಾಗಿದೆ.

ನಮ್ಮ ಪ್ರಾಚೀನ ಸಂಗೀತ ಪರಂಪರೆಯಲ್ಲಿಯೂ ಸಹ ವಾದಿ ಸ್ವರದ ಕಲ್ಪನೆ ಇದ್ದುದು ತಿಳಿದು ಬರುತ್ತದೆ. ವಾದಿ ಸ್ವರಕ್ಕೆ ‘ಜೀವಸ್ವರ’ ಎಂಬ ಹೆಸರಿನಲ್ಲಿ ಕರೆದಿರುವುದನ್ನು  ಕಾಣುತ್ತೇವೆ. ಭರತನ ನಾಟ್ಯ ಶಾಸ್ತ್ರದಲ್ಲಿ ‘ಸಜೀವ ಸ್ವರ ಇತ್ಯುಕ್ತೋಹ್ಯಂ ಸೋವಾ ದೀತಿ ಕಥ್ಯತೇ| ಪ್ರಯೋಗೇ ಬಹುಥಾ ವೃತಃ ಸ್ವರೋ ವಾದಿತಿನಾಮಕಃ || ಅಂದರೆ ನಮ್ಮ ಪ್ರಾಚೀನ ಸಂಗೀತ ಪರಂಪರೆಯಲ್ಲಿಯೂ ಸಹ ವಾದಿ ಸ್ವರದ ಬಳಕೆ ಇತ್ತೆಂದು ಮೇಲಿನ ಉಕ್ತಿಯಿಂದ ತಿಳಿದುಬರುತ್ತದೆ.

‘ಸಂಗೀತ ಸಾರಕಲಿಕಾ’ ಎಂಬ ಗ್ರಂಥದಲ್ಲಿ ವಾದಿ ಮತ್ತು ವಾದಿತ್ರಯಗಳ ಬಗ್ಗೆ ‘ರಾಗಾನುರಾಗ ಸಂಪತ್ತಿಂ ವಾದಿವದತಿ ರಾಜವತ್| ಸಂವಾದಿ ಸ್ವರಃ ಸಂವಾದಾತ್ ಮಮ್ರತ್ರಿವತ್ ರಾಗ ಸಂಪತ್ತಿಂವದತಿ| ಅನುವಾದ್ವೀತು ಬೃತ್ಯವತ್ ವಿನಂವಾಗಾಯ ರಾಗೇಷು ಶತೃತುಲ್ಯ ವಿವಾದಿನಃ’ ಎಂದು ಹೇಳಿದ್ದಾರೆ. ಅಂದರೆ, ರಾಗವೆಂಬ ರಾಜ್ಯಕ್ಕೆ ‘ವಾದಿ’ ರಾಜನೆಂದು ‘ಸಂವಾದಿ’ ಮಂತ್ರಿಯೆಂದು ‘ಅನುವಾದಿ’ ಸೇವಕರೆಂದು ಮತ್ತು ‘ವಿವಾದಿ’ ಶತೃವೆಂದು ಕರೆದಿದ್ದಾರೆ. ರಾಗದ ಸೌಂದರ್ಯ ಶಾಸ್ತ್ರದ ಶುದ್ಧತೆ ಮತ್ತು ರಾಗದ ರಂಜಕತೆಗಳೆಲ್ಲ ‘ವಾದಿ’ ಸ್ವರಧಾಂತವಾಗಿವೆ. ರಾಗದ ಇತರ ಸ್ವರಗಳಿಗಿಂತ ವಾದಿ ಸ್ವರ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.

ಗಾಯನದಲ್ಲಾಗಲಿ ಅಥವಾ ಯಾವುದೇ ಸ್ವರವಾದ್ಯದಲ್ಲಾಗಲಿ ಕಲಾವಿದರು ರಾಗ ನಿರೂಪಿಸುವಾಗ ವಾದಿ ಸ್ವರಕ್ಕೆ ಇತರ ಸ್ವರಗಳಿಗಿಂತ ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ. ವಾದಿ ಸ್ವರದಿಂದಲೇ ರಾಗವನ್ನು ಪ್ರಾರಂಭಿಸಿ ವಾದಿ ಸ್ವರದಿಂದಲೇ ರಾಗ ಮುಕ್ತಾಯಗೊಳಿಸುತ್ತಾರೆ. ರಾಗದ ಭಿನ್ನಸ್ವರಗಳ ಜೊತೆಗೆ ವಾದಿ ಸ್ವರವನ್ನು ಸೇರಿಸಿ, ಚಮತ್ಕಾರಿಕವಾಗಿ ಉಳಿದ ಸ್ವರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿಸುತ್ತಾರೆ.

ಅನೇಕ  ಬಂದಿಶ್‌ಗಳ ‘ಸಮ್’ ಆಯಾರಾಗದ ವಾದಿ ಸ್ವರದ ಮೇಲೆಯೇ ಇರುತ್ತದೆ. ವಾದಿ ಸ್ವರ ‘ಸಮ್’ ಮೇಲೆ ಬರುವಂತೆ ಬಂದಿಶ್ ರಚನೆ ಮಾಡುತ್ತಾರೆ. ವಾದಿ ಸ್ವರದ ಪ್ರಯೋಗದ ಮೇಲೆಯೇ ರಾಗದ ಗಾನಸಮಯ. ರಾಗದ ರಸಭಾವ ವ್ಯಕ್ತವಾಗುತ್ತದೆ. ವಾದಿ ಸ್ವರದ ಮಲಕ ರಾಗದ ರಸಭಾವ ನಿಖರವಾಗಿ ಗೋಚರಿಸುತ್ತದೆ. ಇದಕ್ಕೊಂದು ಉದಾಹರಣೆಯೆಂದರೆ : ಭೈರವಿ ರಾಗದಲ್ಲಿ ವಾದಿ ಸ್ವರವು ಕೋಮಲ ಧೈವತವಾಗಿದ್ದು, ಧೈವತ ಸ್ವರದ ರಸ ಶಾಂತರಸವೆಂದಾದ್ದರಿಂದ ಭೈರವ ರಾಗವು ‘ಶಾಂತರಸ ಪ್ರಧಾನ ರಾಗ’ ವೆಂದು ಕರೆಯಲ್ಪಡುತ್ತವೆ.

ವಾದಿ ಸ್ವರದ ಮೂಲಕ ‘ರಾಗ ಸಮಯ’ ನಿರ್ಧರಿತವಾಗುತ್ತದೆ. ಯಾವುದೇ ರಾಗದ ವಾದಿ ಸ್ವರವು ಸಪ್ತಕದ ಪೂರ್ವಾರ್ಧದಲ್ಲಿದ್ದರೆ ಆ ರಾಗಕ್ಕೆ ಪೂರ್ವಾಂಗವಾದಿ ರಾಗವೆಂದು : ವಾದಿ ಸ್ವರವು ಸಪ್ತಕದ ಉತ್ತರಾರ್ಧದಲ್ಲಿದ್ದರೆ ಆ ರಾಗಕ್ಕೆ ಉತ್ತರಾಂಗವಾದಿ ರಾಗವೆಮದು ಕರೆಯಲಾಗುತ್ತದೆ.

ರಾಗದ ಸ್ವರಗಳು ಒಂದೇ ತೆರನಾಗಿದ್ದರು ಸಹ ವಾದಿ ಸ್ವರದ ವ್ಯಾಸದಿಂದಾಗಿ ಹೆಸರು, ಥಾಟ ಭಿನ್ನವೆನಿಸಿಕೊಳ್ಳುತ್ತವೆ. ಭೂಪ ಮತ್ತು ದೇಶಕಾರ ರಾಗದ ಆರೋಹ ಮತ್ತು ಅವರೋಹದ ಸ್ವರಗಳು ಒಂದೇ ತೆರನಾಗಿದ್ದರೂ ಸಹ ಅವುಗಳ ವಾದಿ ಭಿನ್ನತೆಯಿಂದಾಗಿ ಅವುಗಳ ಹೆಸರು, ಥಾಟ ಭಿನ್ನ ಭಿನ್ನವಾಗಿವೆ. ಭೂಪರಾಗದ ವಾದಿ ಸ್ವರವು ಗಾಂಧಾರವಾಗಿದ್ದರೆ ದೇಶಕಾರ ರಾಘದ ವಾದಿಸ್ವರ ಧೈವತವಾಗಿದೆ.

ವಾದಿ ಸ್ವರದ ಸ್ಥಾನಮಾನದ ಮೇಲೆ ರಾಗದ ಗಾನ ಸಮಯ ನಿರ್ಧರಿಸಲಾಗುತ್ತದೆ. ಯಾವುದೇ ರಾಗದ ವಾದಿ ಸ್ವರವು ಸಪ್ತಕದ ಪೂರ್ವಾಂಗದಲ್ಲಿದ್ದರೆ (ಸಾರೆಗಮಪ) ಆ ರಾಗದ ಸಮಯವು ದಿನದ ಪೂರ್ವಾಂಗ (ಅಂದರೆ ದಿನದ ೧೨ ಗಂಟೆಯಿಂದ ರಾತ್ರಿ ೧೨ ಗಂಟೆಯ ಕಾಲಾವಧಿಯಲ್ಲಿ)ವೆಂದೂ, ಇದಕ್ಕೆ ವ್ಯತಿರಿಕ್ತವಾಗಿ ರಾಗದ ವಾದಿ ಸ್ವರವು (ಮಪಧನಿ) ಸಪ್ತಕದ ಉತರಾಂಗದಲ್ಲಿದ್ದರೆ ಆ ರಾಗದ ಹಾಡತಕ್ಕ ಸಮಯ ದಿನದ ಉತ್ತರಾಂಗ (ಅಂದರೆ, ರಾತ್ರಿಯ ೧೨ ಗಂಟೆಯಿಂದ ದಿನದ ೧೨ ಗಂಟೆಯವರೆಗಿನ ಕಾಲಾವಧಿ)ವೆಂದೂ ಕರೆಯಲಾಗುತ್ತದೆ.

ಸ್ವರಗಳಲ್ಲಿ ಒಂದೇ ಬಗೆಯ ಆರೋಹ- ಅವರೋಹಣ ಕ್ರಮವಿದ್ದಾಗಲು ವಾದಿಸ್ವರದ ಭಿನ್ನತೆಯಿಂದ ಒಮದು ರಾಗವು ಇನ್ನೊಂದು ರಾಗದಿಂದ ಪ್ರತ್ಯೇಕಿಸಲ್ಪಟ್ಟಿದೆ. ಭುಪಾಳಿ, ಧನಾಶ್ರೀ, ಭೀಮಪಲಾಸಿ, ದೇಶಕಾರ, ಇವು ಪ್ರತ್ಯೇಕ ರಾಗಗಳಾಗಿವೆ. …

ಒಂದೇ ಬಗೆಯಾಗಿದ್ದರೂ ಅವುಗಳಲ್ಲಿನ ವಾದಿ ಸ್ವರದ ಪ್ರಾಮುಖ್ಯತೆಯಿಂದಾಗಿ ಅವು ಪ್ರತ್ಯೇಕ ರಾಗಗಳಾಗಿರುವುದು ಸರ್ವಪೂರ್ಣವಾಗಿದೆ.

‘ವಾದಿ’ ಸ್ವರದ ಬಗ್ಗೆ ಈ ಕೆಳಗಿನ ಮುಖ್ಯ ಅಂಶಗಳನ್ನು ನೆನಪಿನಲ್ಲಿಡುವುದು ಒಳಿತು.

  • ವಾದಿ ಸ್ವರವು ರಾಗದಲ್ಲಿ ಪ್ರಧಾನ ಸ್ವರವಾಗಿದ್ದು, ಉಳಿದ ಸ್ವರಗಳಿಗಿಂತ ಹೆಚ್ಚು ಪ್ರಾಮುಖ್ಯವಾಗಿದೆ.
  • ವಾದಿ ಸ್ವರದಿಂದ ರಾಗದ ಸೌಂದರ್ಯ ಹೆಚ್ಚುತ್ತದೆ.
  • ವಾದಿ ಸ್ವರದ ಮೂಲಕ ರಾಗದ ಥಾಟ, ಗಾನಸಮಯ, ರಸಭಾವ ಸ್ಪಷ್ಟವಾಗುತ್ತದೆ.
  • ವಾದಿ ಸ್ವರದಿಂದ ರಾಗ ಪ್ರಾರಂಭವಾಗಿ ವಾದಿ ಸ್ವರದಿಂದಲೇ ರಾಗ ಮುಕ್ತಾಯವಾಗುತ್ತದೆ.
  • ರಾಗದ ಸಮ್  ವಾದಿ ಸ್ವರದ ಮೇಲೆ ಇರುತ್ತದೆ ಅಥವಾ ಇರಬೇಕು.
  • ವಾದಿ ಸ್ವರದ ಪ್ರಯೋಗದಿಂದ ರಾಗ ಗುರುತಿಸಲು ಸಾಧ್ಯ.