ಉದಯಾಳೇದಲ್ಲಿ ಎದ್ದೆವ್ವಾ ರೇಣುಕಾ
ಶಿವನ ಕೈಯಲ್ಲಿ ವರವ ಬೇಡೀದೆಮ್ಮಾ
ಶಿವನ ಕೈಯಲ್ಲಿ ವರವರ ಬೇಡಿದೆ ರೇಣುಕಾ
ಉಡಿಯಲ್ಲಿ ಜೋಗ ಕೊಂಡಾಡಿದೆಮ್ಮಾ ೧
ಕಂಚೀನ ಚಾವುಟಿಗಿ ಮಿಂಚುವ ಝಾಂಗಟಿ
ಪಂಚಾಳ ಕೋಟೆಯ ಶಬುದವಮ್ಮಾ
ಪಂಚಾಳಕೋಟೆಯ ಶಬುದ ನನ್ನ ರೇಣುಕಾ
ಕೆಂಚೆ ಜೋಗಾಡಾಕ ಬಂದಾಳಮ್ಮಾ ೨
ಓರಗಲ್ಲನೆಂಬೂದು ಓಗೇದ ಪಟ್ಟಣ
ಯಾರ್ಯಾರು ಹೋಗೈವರು ಬರಲಿಲ್ಲ
ಯಾರ್ಯಾರು ಹೋಗೈವರು ಬರಲಿಲ್ಲ ನನ ರೇಣುಕಾ
ನಾರೇ ಒಬ್ಬಳ ಹೋಗಿ ಬರತಾಳ ೩
ಯಾವೂರ ಎನ ಮಗಳ
ಯಾವೂರ ಎನ ಸೊಸಿಯ
ಎಲ್ಲಿಂದ ಬಂದಿ ದೇವಿ ಹೇಳಂದಾನ
ಎಲ್ಲಿಂದ ಬಂದಿ ತಾಯಿ ಹೇಳಂದಾನ ೪
ಎಂದಿಲ್ದ ಶಿವರಾಯಾ ಇಂದ್ಯಾಕ ಕೇಳ್ಯಾನ
ತಾಯೀ ತಂದಿಯ ಹೆಸರ ಹೇಳೆಂದಾನ
ತಾಯೀ ಸಡಗರ ದೇವಿ ತಂದೀ ಉತ್ತಾರ್ರಾಯಾ
ಗೌತೂಮ ಮುನಿಸೊಸಿ ರೇಣುಕಾನ ೫
ಏಳು ಹೊಳೆಯ ದಾಟಿ ಕಾಲ ಹೊಳೆಯ ದಾಟಿ
ದಾಳಿ ಬಗೆದಿದ್ದೆಮ್ಮ ನಡುನಾಡು
ದಾಳೀ ಬಗೆದಿದ್ದೆಮ್ಮ ನಡುನಾಡ ನನ ರೇಣುಕಾ
ಪುಣ್ಯೇದ ವಸ್ತುಗೊಳ ಆಯ್ದಾವಮ್ಮಾ ೬
ಕಂಚೀನ ಚವುಟಿಗಿ ಮತ್ತೆಲ್ಲಿ ನುಡದಾವು
ಮತ್ತ ಹಿರೇಗುಡ್ಡದೇವಿ ಬಯಲಾಗೊ
ಮತ್ತ ಹಿರೇಗುಡ್ಡದೇವಿ ಬಯಲಾಗೊ ಬಸನಗೌಡ
ಹೋಮ ತುಳದು ಗುಡಿಯ ಹೊಗತಾನ ೭
Leave A Comment