ತಾಯಿ ತಂದಿ ಹೊಟ್ಟಿಲೆ ಮಗ ಒಬ್ಬಿದ್ದನೇಳ್ರೀ ಒಟ್ಟsನ |
ಮಾಲಗಾರ ಚಾಕರಿಗ್ಹೋಗಬೇಕಂತ ಹಟಾತೊಟ್ಟಾನ || ಪ ||
ತಾಯಿ ಒಬ್ಬಕಿ ಜಲಮಕ ಹೆಚ್ಚs ಹೇಳತಾಳ್ರೀ ಮಗsನ |
ದೂರದೇಶ ಪರನಾಡ ಜಗs ಬ್ಯಾಡಪ್ಪ ಹೊರಗsನ || ೧ ||

ಎಷ್ಟು ಹೇಳಿದರ ಕೇಳವಲ್ಲ ಹೊಂಟಾನರಿ ಹೊರಗsನ |
ಗುಂಜಿ ಗಂಜಿ ಕೈವಶದ ಗಂಟ ಕಟಗೊಂಡಾನ ಮತ್ತೇನ || ೨ ||

ಗುಂಜಿ ಗಂಜಿ ಕೈವಶದ ಗಂಟ ಕಟಗೊಂಡಾನ ಮತ್ತೇನ |
ಹೋಗ ಹೋಗತ ಅವರಕ್ಕನ ಮನಿಗೆ ಹೋದನಲ್ಲ ನಗತsನ || ೩ ||

ಹೋಗಹೋಗತ ಅವರಕ್ಕನ ಮನಿಗಿ ಹೋದನಲ್ಲ ನಗತsನ |
ತವರ ಮನಿsದು ಪ್ರೀತಿ ಕೇಳತಾಳ ಕುಂತ ಎಲ್ಲಾ ಒಟ್ಟೇನ || ೪ ||

ತವರ ಮನಿsದು ಪ್ರೀತಿ ಕೇಳತಾಳ ಕುಂತ ಎಲ್ಲಾ ಒಟ್ಟಿsನ |
ತಮ್ಮ ಬಂದಾನಂತ ಅಡಗಿ ಮಾಡ್ಯಾಳವ್ವ ದಿನಸ ದಿನಸ ಎಲ್ಲsನ || ೫ ||

ತಮ್ಮ ಬಂದಾನಂತ ಅಡಗಿ ಮಾಡ್ಯಾಳವ್ವ ದಿನಸ ದಿನಸ ಎಲ್ಲsನ |
ತಮ್ಮಗೆಬ್ಬಿಸಿ ಜಳಕ ಮಾಡಿಸಿ ಊಟಾ ಮಾಡ್ಸ್ಯಾಳಲ್ಲsನ || ೬ ||

ತಮ್ಮಗೆಬ್ಬಿಸಿ ಜಳಕ ಮಾಡಿಸಿ ಊಟಾ ಮಾಡ್ಸ್ಯಾಳಲ್ಲsನ |
ದೇವರ ಮನಿಯಾಗ ಹಾಸಿಗಿ ಮಾಡೀನಿ ಮಲಗಪ್ಪsಹೋಗಿನ್ನ || ೭ ||

ದೇವರ ಮನಿಯಾಗ ಹಾಸಿಗಿ ಮಾಡೀನಿ ಮಲಗಪ್ಪsಹೋಗಿನ್ನ |
ಓಡಿ ಹೋಗಿ ಗಂಡನ ಕರಿsತಾಳ ಬಾರsಮನಿಕಡಿs ಇನ್ನ || ೮ ||

ಓಡಿ ಹೋಗಿ ಗಂಡನ ಕರಿsತಾಳ ಬಾರsಮನಿಕಡಿs ಇನ್ನ |
ಗುಂಜಿ ಗಂಜಿ ಕೈವಶದ ಗಂಟಾ ಕೊಲ್ಲಬೇಕ ಇವನನ್ನ || ೯ ||

ಈ ಮಾತ ನನ್ನ ಕೈಲಾಗದಂತ ಹೊಂಟಾನ್ರಿ ಹೊರಗsನ |
ಬಾಳನ ಜೀವಕ ಭಾಗ್ಯದ ರಂಡಿ ಮಾಡ್ಯಾಳ ಮೋಸsನ || ೧೦ ||

ಮಾಳಿಗಿ ಏರಿ ಹೊತ್ತ ನೋಡತಾಳ ಐತಿ ಇನ್ನಾ ಎಷ್ಟೇನ |
ಮುರು ಧಡೇದ ಕಲ್ಲು ತೆಗೊಂಡು ಜಜ್ಜಾಳ್ರಿ ಎದಿಗೇನ || ೧೧ ||

ಶಿವಶಿವಾ ಹರಾಹರ ಹರಹರಾ ಶಿವಶಿವsನ |
ಏನ ತಂದೆಪ್ಪಾ ಮರಣ ಏನsನ ಏನ ಕೊಟ್ಟೆಪ್ಪ ಮರಣsನ || ೧೨ ||

ಅಂವಾ ಬಿಟ್ಟನಲ್ಲಾ ಪ್ರಾಣs ಅವಂದು ಹಾರಿತಲ್ಲ ಪ್ರಾಣsನ |
ದೇವರ ಮನಿಯಾಗ ನಡಮಟ ತಗ್ಗಾ ಹೊಡೆದಾಳ್ರಿ ಬಾಲೆsನ || ೧೩ ||

ಕಡದ ಕಡದು ನುಚ್ಚುನುಚ್ಚು ಮಾಡಿ ತುಂಬತಾಳ್ರಿ ಒಳಗsನ |
ಕರಕಡದs ಮಾಡಟಿಗಾಯ್ತವ್ವ ಹ್ಯಾಂಗರೇ ಏನs || ೧೪ ||

ಮಾಯದ ಕೊರಳ ಸಿಡದ ಬಿದ್ದಾದವ್ವ ಅಡಕಲ ಸಂದ್ಯಾಗೆsನ |
ರಾತರಾತರಿ ತಾಯಿ ಕನಸಿನಾಗ ಮಗಾ ಹೋಗಿ ನಿಂತಾsನ || ೧೫ ||

ಮಾಲಗಾರ ಚಾಕರಿಗ್ಹೋಗಬೇಕಂತ ಹಟಾತೊಟ್ಟಾsನ |
ನಿನಕ್ಕನ ಮನಿಮುಂದs ಬೇವಿನ ಹಂದರ ಹಾಕಿದರೇನ || ೧೬ ||

ಕೈಯಲ್ಲಿ ಕಂಕಣs ಮೈಯಲ್ಲಿ ಅರಿಷಿಣsಯನ |
ಮದಿs ಆಗತಿದ್ದಿ ಜಾಣಾ ಮದಿs ಆಗತಿದ್ದಿ ಏನ || ೧೭ ||

ರಾತರಾತರಿ ಮಗಳ ಮನೀಗಿ ಬಂದಾಳ್ರಿ ಅಳತುನ |
ಕನಸಿನ ಅರ್ಥಕುಂತ ಕೇಳತಾಳ ಯಾಕವ್ವ ಹೀಂಗsವ || ೧೮ ||

ಕನಸಿನ ಅರ್ಥಕುಂತ ಕೇಳತಾಳ ಯಾಕವ್ವ ಹೀಂಗsವ |
ತಮ್ಮ ಇದ್ದವ ನನಗೊಬ್ಬsವ ನಾಕೊಂದೇನ್ಹ್ವಾಂಗsನ || ೧೯ ||

ದೇವರ ಮನಿಯಾಗ ನೀರ ಕುಡಿಯಲಾಕ ಹೋದಳಲ್ರಿ ತಾನೇsನ |
ಮಾಯದ ಕೊರಳsನಡೆದ ಬಿದ್ದಾದವ್ವ ತಾಯೀ ಬಡಿರ್ಯಾರ || ೨೦ ||

ನೋಡಿ ಹಣಿ ಹಣಿ ಬಡಕೋತಾಳ್ರಿ ನೋಡಿ ಅಳತಾಳ್ರಿ ಮಗನ |
ಏನು ತಂದೆಪ್ಪ ಮರಣs ಏನು ಕೊಟ್ಟೆಪ್ನ ಮರಣsನ || ೨೧ ||

ಈ ಸುದ್ದಿ ಕೇಳಿ ಪರಂಗಿ ಸಾಯಬಾ ಇದ ಏನ ಒಬ್ಬಾಟಂದನ |
ಪಾಪದ ರಂಡಿಗಿ ತೋಪಿನ ಬಾಯಿಗಿ ಹಚ್ಚಿಕೊಳ್ಳಿರೊಭಾsನ || ೨೨ ||

ಪಾಠಾಂತರಗಳು

೧) ಅಕ್ಕ ತಮ್ಮ; ನಾಯಕ ಎನ್.ಆರ್., ಮುಕ್ರಿಗಳ ಗೀತ ಮತ್ತು ಕಥೆಗಳು, ಜಾನಪದ ಪ್ರಕಾಶನ, ಹೊನ್ನಾವರ, ೨೦೦೦, ಪು. ೯೮-೧೦೦.*      ತಾಯಿ ತಂದಿ ಹೊಟ್ಟಿಲೆ ಮಗ ಒಬ್ಬಿದ್ದನೇಳ್ರಿ, ಒಬ್ಬsನ್; ನಾಗೇಗೌಡ ಎಚ್.ಎಲ್., ದುಂಡು ಮಲ್ಲಿಗಿ ಹೂವ ಬುಟ್ಟಿಲಿ ಬಂದಾವ, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ೧೯೯೫ ಪ್ರ.ಸಂ. ೧೫೦-೧೫೧.