ಅಂಬುಕೊಡುವವನೆ ಗೊಂಬೆ ಹಚ್ಚಡದವನೆ
ರಂಬೆ ತೊಡೆ ಮೇಲಿರುವನೆ | ಮಳೆದೇವ
ಅಂಬರದಿಂದ ಕರುಣಿಸೋ

ಗುಡುಗುಡು ಹುಟ್ಟೀತು ನಡು ಬಾನ ಮಿಂಚಿತು
ಮೂಡಾದ್ರಿ ಅಂಬು ದಂಡೀನ ಕುದುರೆ ! ಮೇಲೆ
ಚಂಡಾಡಿ ಸುರಿಯೋ ಮಳೆದೇವ

ಸ್ವಾತಿಯ ಮಳೆ ಹುಯ್ದು ಸೀತೆ ಕೆರೆ ತುಂಬಿ
ಜೋಡಾಡತೈತೆ ನಮ್ಮೂರು ಕೆರೆ | ಮೀನು
ಆಡಾಡಿ ನೋಡಿ ನಗತಯತ

ಹೊಳೆಯ ಆಚೀನ ತಂಗಿ ಮಳೆಯ ಸುದ್ದಿ ಹೇಳ
ಹೊಳಿ ಭಾಳ ಅಕ್ಕ ಮಳಿ ಭಾಳ ಈ ವರುಷ
ಬಿಳಿ ಮುತ್ತಿನಂತಹ ಬಿಳಿಜೋಳ

ಸ್ವಾತಿಯ ಮಳೆಯಾಗಿ ಭೂತಾಳ ಹಸಿಯಾಗಿ
ಪಾತಾಳ ಎಲ್ಲ ತುಳಿಕ್ಯಾವು | ಭೂಮ್ಯಾಲ
ಫಲವೆದ್ದು ಕೈಯ ಮುಗಿದಾವು

ಮಳೆಯಪ್ಪ ಮಳೆರಾಜ ಕರೆಯತಾರೋ ನಿನ್ನ
ಮೊದಲು ಕೂರಿಗೆಯ ರೈತರೊ | ಹೊಲದಾಗ
ಬೆಳೆ ಎದ್ದು ಕೈ ಮುಗಿದಾವ

ಬಿತ್ತಿ ಬಂದಣ್ಣ ಮುತ್ತಿನ ಕಂಬ ಸೇರಿ
ಬಿತ್ತಿ ಬಂದ ಶಿವನೆ ಮಳೆಯಿಲ್ಲ | ಅಂದಾಗ
ಮುತ್ತಿನ ಮಂಜು ಹರಿದಾವ

ಕಂಚು ಮಿಂಚಿತು ಕಾಳಸ್ತ್ರ ಗುಡಗೀತು
ಶಿವಗಂಗ್ಯಾಗಿಂದು ಹನಿ ಬಿದ್ದು | ಪರ್ವತದ
ಗಿರಿ ಮ್ಯಾಲ ಕೋಡಿ ಹರಿದೀತ

ಮೂಡಲಸೀಮೆಗೆ ಹೋಗಿ ಬಾರೋ ಮಳೆರಾಯ
ಕಗ್ಗಲ್ಲ ನನ್ನ ತವರೂರಿಗೆ | ಹೋಗಿ
ಜಗ್ಗಿಸಿ ಹುಯ್ಯೋ ಮಳೆರಾಯ

ಪಡವಲ ಸೀಮೆಗೆ ಬಡ ಬಡ ಹೋಗಯ್ಯ
ಪಡವಲಕ ನನ್ನ ಪಡೆದವರ | ಮಳೆರಾಯ
ಪಡೆದು ಬಂದೇವ ಪುಣ್ಯವ

ತೆಂಕಣ ಸೀಮೆಯಲಿ ತಂಗಿಯ ಮನೆಯುಂಟ
ತಂಗಿ ಬಳಗ ನೋಡುದ ನಿನದಾರಿ | ಮಳೆರಾಜ
ಮನತುಂಬಿ ಸುರಿಯೋ ಸರವರಿಗೂ

ಬಡಗಣ ಸೀಮೆಗೆ ಗಡಬಿಡಿಲಿ ಹೋಗಯ್ಯ
ಬಡವರ ಭಾವ ತುಂಬುತ ! ಮಳೆರಾಜ
ಬಂದ ಸಂಕಟವ ಸರಿಸೋಗ

ಹತ್ತೇರು ಕಟ್ಟಿಗೆ ಮತ್ತೆ ಮಳೆರಾಯ ಬಂದ
ಮುತ್ತು ಚೆಲ್ಲಯ್ಯ ಹೊಲಕೆಲ್ಲ | ಅಣ್ಣಯ್ಯನ
ಮತ್ತೆ ಧಾನ್ಯವು ಬೆಳೆಯಲಿ

ಮಳೆರಾಯನ ಕರುಣೆಗೆ ಕರ್ಮೆಲ್ಲ ಬಯಲಾಗಿ
ಸಂದು ಸಂದಿಗೆ ಸಮಸುಖ | ಮಳೆರಾಜ
ಜಗಕೆಲ್ಲ ದಾರಿ ಸುಖವಾಗೆ