ಭಾರತೀಯ ಜನಜೀವನದಲ್ಲಿ ಸಂಗೀತವು ಸಂಸ್ಕೃತಿಯ ಪ್ರಾಣ ಸಂಚಾರದಂತೆ. ಕಾಲಕ್ರಮದಲ್ಲಿ ನಿರಂತರ ಹರಿದು ಬಂದಿದೆ. ಹಳ್ಳಿಗಳಲ್ಲಿ ಕೃಷಿಗೆ ಸಂಬಂಧಿಸಿದ ದೈನಿಕ ಜೀವನ ಚಿತ್ರ, ಋತು ವಿಲಾಸ, ಕಾಯಕ ವೈವಿಧ್ಯತೆಗಳ ವೃತನಿಷ್ಠ ಆಚರಣೆಯ ಜೊತೆಗೆ ಸಂಗೀತವು ಅನುಷಂಗಿಕವಾಗಿ ಬಳಕೆ ಆಗುತ್ತ ಬಂದಿದೆ. ಪಟ್ಟಣದವರ ಜೀವನ ಕ್ರಮದಲ್ಲಿ ಸಂಗೀತವು ಶೋಕಿಯ, ಅಂತಸ್ತಿನ ಕಲಾತ್ಮಕ ಅಭಿವ್ಯಕ್ತಿ ಮಾಧ್ಯಮವಾಗಿದೆ. ಈ ನಡುವೆ ಸಂಗೀತವು ಸಂಕೀರ್ಣತೆಗೆ ಜೀವಂತ ಸಾಕ್ಷಿಯಾಗಿದೆ.

ಕ್ರಿ.ಶ. ೨ನೇ ಶತಮಾನದಷ್ಟು ಹಿಂದೆಯೇ ಶಾಸ್ತ್ರೀಯ ಸಂಗೀತದ ಉಗಮವನ್ನು ಗುರುತಿಸಲಾಗಿದೆ. ಭರತನ ನಾಟ್ಯ ಶಾಸ್ತ್ರದಲ್ಲಿ ಮೊಟ್ಟಮೊದಲ ಸಲ ರಂಗಭೂಮಿಗೆ ಸಂಬಂಧಿಸಿದಂತೆ ಸಾಂದರ್ಭಿಕವಾಗಿ ಸಂಗೀತದ ಉಪಯೋಗವನ್ನು ಉಲ್ಲೇಖಿಸಿರುವುದನ್ನು ಗಮನಿಸಬಹುದು. ಉತ್ತರಭಾರತದಲ್ಲಿ ಸಂಗೀತವು ಹಿಂದುಸ್ತಾನ ಸಂಗೀತ ಪರಂಪರೆಯ ರೂಪದಲ್ಲಿಯೂ, ದಕ್ಷಿಣಭಾರತದಲ್ಲಿ ಕರ್ನಾಟಕೀ ಸಂಗೀತ ರೂಪದಲ್ಲಿಯೂ  ಸತತ ಬೆಳೆದು ಬಂದಿರುವುದು ಕುತೂಹಲಕಾರಿಯಾದ ಸಂಗತಿಯಾಗಿದೆ. ಈ ಎರಡೂ ಸಂಗೀತ ಪರಂಪರೆಗಳು ಧಾರ್ಮಿಕ ಆಚರಣೆಯಿಂದಲೋ ಭಕ್ತಿಪಂಥದ ಬಳುವಳಿಯಿಂದಲೋ ಸ್ಫೂರ್ತಿ ಪಡೆದಿವೆ. ಸಂಗೀತವು ಕಾಲಾಂತರದಲ್ಲಿ ರಾಜಾಶ್ರಯದಿಂದ ನಿಧಾನವಾಗಿ ಲೋಕಾಶ್ರಯದತ್ತ ಸಾಗಿರುವುದು ಗಮನಾರ್ಹವಾಗಿದೆ.

ಸಂಗೀತದ ಹುಟ್ಟಿಗೆ ಕಾರಣವೆಂದು ಊಹಿಸಲ್ಪಟ್ಟ ಸಂಗತಿಗಳು ಜೀವನವನ್ನು ಅರಿಯುವ ಹಾಗೂ ಹೆಚ್ಚು ಸುಂದರಗೊಳಿಸಿ ಅಭಿವ್ಯಕ್ತಗೊಳಿಸುವ ಯತ್ನಗಳು ಆಗಿವೆ. ಮನುಷ್ಯನನ್ನು ವಾಸ್ತವ ಮತ್ತು ಕಾಲ್ಪನಿಕ ಜಗತ್ತುಗಳಿಗೆ ಲೌಕಿಕ ಮತ್ತು ಅಲೌಕಿಕ ಸೆಳೆತಗಳಿಂದ ನಂಟು ಬೆಸೆಯುವ ಸಂಕೀರ್ಣವಾದುದು. ಆದ್ದರಿಂದ ಸಂಗೀತ ಸ್ವರೂಪವನ್ನು ಅರಿಯುವ ಮತ್ತು ವಿಶ್ಲೇಷಿಸುವ ಕ್ರಮ ಸಮಗ್ರವೂ ಅಂತರ್ ಕ್ರಿಯಾತ್ಮಕವೂ ಆಗಿರಬೇಕು. ಮನುಷ್ಯ ಸಮುದಾಯದ ಪಾರಲೌಕಿಕವು ಅಮೂಲ್ಯವೂ ಆದ ಆಶೋತ್ತರಗಳನ್ನು ಕಟ್ಟಿದ ಮಹತ್ವಾಕಾಂಕ್ಷೆ ಕಾರ್ಯದಲ್ಲಿ ತೊಡಗಿರುವ ಹಲವು ಕಲೆಗಳಲ್ಲಿ ಸಂಗೀತವೂ ಒಂದು ಎಂಬುದು ನಿರ್ವಿವಾದ. ಸಂಗೀತವು ವ್ಯಕ್ತಿಯೋರ್ವನ ವಯಸ್ಸಿನ ಪ್ರತಿಭೆ, ಕಲ್ಪನೆ, ಸೃಜನಶೀಲತೆ ಮತ್ತು ಆದರ್ಶಗಳ ಅಭಿವ್ಯಕ್ತಿಯಾಗಿರುವಂತೆ ಒಂದು ಸಮೂಹ ಜೀವನ ಶೈಲಿಯ ಅಭಿವ್ಯಕ್ತಿಯೂ ಹೌದು. ಸಂಗೀತವು ಒಂದು ಪ್ರದೇಶದ ನಂಬಿಕೆ, ಧಾರ್ಮಿಕ ಆಚರಣೆ, ರಾಜಕೀಯ ಸ್ಥಿತಿ, ಆರ್ಥಿಕ ಹಿನ್ನೆಲೆ, ವಾಸ್ತುಶಿಲ್ಪ, ದೈನಿಕ ಕಾರ್ಯಕ್ರಮಗಳನ್ನು ಅವಲಂಬಿಸಿದೆ.

ಸಂಗೀತದ ಬಹುರೂಪತೆಗೆ ಅದು ಉಳಿದು ಬೆಳೆದು ಬಂದ ಆಯಾ ಪ್ರದೇಶದ ಸಾಂಸ್ಕೃತಿಕ ಆಚರಣೆಗಳು ಕಾರಣಗಳಾಗಿವೆ. ಒಂದು ಪ್ರದೇಶದ ವಾಸ್ತುಶಿಲ್ಪಗಳು, ಅಲ್ಲಿ  ವರ್ಷದುದ್ದಕ್ಕೂ ನಡೆಯುವ ಉತ್ಸವಗಳು ವಾರ್ಷಿಕ ಹಬ್ಬಗಳು, ಅಲ್ಲಿಯ ಜನರು ಪ್ರಕೃತಿಯೊಂದಿಗೆ ಇಟ್ಟುಕೊಂಡಿರುವ ಜನಪದೀಯ ಸಂಬಂಧ ದುಡಿಮೆಯೊಂದಿಗೆ ಹಾಸುಹೊಕ್ಕಾಗಿರುವ ಹಾಡುಗಳು, ಊರಿನ ಸಂಪರ್ಕಕ್ಕೆ ಬಂದಿರುವ ಕಲಾವಿದರು, ಜನಸಾಮಾನ್ಯರ ಅಭಿರುಚಿ, ಸಂಗೀತ ಪರಿಚಾರಕರು ಮುಂತಾದ ವಿಷಯಗಳ  ಅಂತರ್ ಸಂಬಂಧ ಜಾಲದಲ್ಲಿ ಸಂಗೀತವು ವಿಶ್ಲೇಷಿಸಿದಾಗ ಅದಕ್ಕೊಂದು ಮಾನವೀಯ ಸ್ವರೂಪ ಪ್ರಾಪ್ತವಾಗುತ್ತದೆ.

ಸಂಗೀತಕ್ಕೆ ಸಹೃದಯ ಆಶ್ರಯದಾತರು ಬೇಕು. ಮನುಷ್ಯರು ಮಾತಿನ ಮೊದಲು ಸಂಗೀತ ನಿರ್ಮಿತಿಯನ್ನು ಮಾಡಿದರು. ಅದರ ನಿರ್ಮಿತಿಯ ಸಂಬಂಧದಲ್ಲಿ ಅದು ನೀಡುವ ಆನಂದ ಹಾಗೂ ಅರ್ಥಗಳನ್ನು ಕಂಡುಕೊಂಡರು. ಸಂಗೀತವೇ ನಿರ್ಗಮಿಸಿದರೆ ಜೀವನ ಕ್ರಮದ ಪರಿಸ್ಥಿತಿಯಲ್ಲಿ ಬದುಕನ್ನು ಗ್ರಹಿಸುವ  ಸೃಷ್ಟಿಸುವ ವಿಧಾನಗಳು ಏನಾಗಬಲ್ಲವು. ಏಕೆಂದರೆ  ಸಂಗೀತವು ಇರುವುದು ಇತರರು ಕೇಳಲು ಮಾತ್ರವೇ ಅಲ್ಲ, ಇದರಲ್ಲಿ ತಾತ್ದವಿಕ ಅಂಗಗಳು ಸೇರಿಕೊಂಡಿವೆ. ಕುತೂಹಲಕಾರಿ ಅಂಶವೆನೆಂದರೆ ಅದೆಷ್ಟೋ ಸಂದರ್ಭದಲ್ಲಿ ನಮ್ಮೊಂದಿಗೆ ನಾವೇ ಮಾತನಾಡಿಕೊಳ್ಳುತ್ತಿರುತ್ತೇವೆ, ಹಾಡಿಕೊಳ್ಳುತ್ತಿರುತ್ತೇವೆ. ಇದರ ಬಗ್ಗೆ ತತ್ವಜ್ಞಾನಿಗಳು ಅಚ್ಚರಿಪಡುತ್ತಾರೆ. ಸಂಗೀತ ಸೃಷ್ಟಿ ಮುಖಾಂತರ ನಾವು ಜಗತ್ತಿನಲ್ಲಿ ನಮ್ಮ ಅಸ್ತಿತ್ವದ ಸ್ವರೂಪವೇನು ಎಂದು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸುತ್ತಲಿನ ಜಗತ್ತು ನಮ್ಮನ್ನು ಅರಿಯುವಂತೆ ಮಾಡಲು ನಮ್ಮನ್ನು ನಡೆಸುವ ಪ್ರಯತ್ನವೆನ್ನಬಹುದು.

ಸಂಗೀತ ವಾದ್ಯವನ್ನು ಮರೆಸಿ ನಾದಾನುಸಂಧಾನದಿಂದ ಕಲಾವಿದನನ್ನು ಶ್ರೋತೃಗಳನ್ನು ಭಾವನಾ ಪ್ರಪಂಚಕ್ಕೆ ಒಯ್ಯುವ ಸಾದನವಾಗಿದೆ. ಆತ್ಮವಿಕಾಸವನ್ನು ಉಂಟು ಮಾಡುವ ಪರಮಶ್ರೇಷ್ಠ ಮಂತ್ರವೆಂದು ಪ್ರಾಚೀನ ಕಾಲದಿಂದಲೂ ಸಂಗೀತವನ್ನು ವ್ಯಾಖ್ಯಾನಿಸುತ್ತ ಬಂದಿದ್ದಾರೆ. ಸತ್ಯಸಾಧನೆಯಿಂದ ಭಾವ ಸಮಾಧಿಗೊಯ್ಯುವ ಪರಿಪೂರ್ಣತೆಯ ಸೌಂದರ್ಯವನ್ನು ಎತ್ತಿ ತೋರಿಸುವ ರಸಗನ್ನಡಿಯಲ್ಲಿ ಇಹಪರ ನೋಟಗಳು ಸಂಗಮಿಸುತ್ತವೆ. ಗಾನಕಲೆ ಜನರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮಗು ನಿದ್ರೆ ಹೋಗಲು ಗಾನರೂಪದ ಮಧುರ ಜೋಗುಳವೇ ಬೇಕು. ಮದುವೆ ಮುಂತಾದ ಶುಭ ಕಾರ್ಯದಲ್ಲಿ ಸಂಗೀತದ ಹಿನ್ನೆಲೆ ಅಗತ್ಯವಾಗಿದೆ. ಹೀಗೆ ಭಾರತೀಯರ ಸಮಾಜದಲ್ಲಿ ಸಂಗೀತವಿಲ್ಲದ ಸಮುದಾಯಗಳಲ್ಲಿ, ಸಮಾರಂಭಗಳಲ್ಲಿ, ಆಧುನಿಕ ಯುಗದ ವೈದ್ಯಕೀಯ ರಂಗದಲ್ಲಿ ಸಂಗೀತ ಚಿಕಿತ್ಸೆ ಪ್ರಯೋಗದಲ್ಲಿದೆ. ಇದು ಸಂಗೀತದ ಲೌಕಿಕ ಪ್ರಯೋಜನವಾದರೆ ನಾದೋಪಾಸನೆಯಿಂದ ಜೀವನ್ಮುಕ್ತಿ ಪಡೆಯಲು ಜನತೆಯನ್ನು ಸನ್ಮಾರ್ಗಿಗಳಾಗಿಸಲು ಅನುಸರಿಸುವ ವಿಧಾನವು ಅಲೌಕಿಕವಾಗಿದೆ.

ಹಿಂದುಸ್ತಾನಿ ಸಂಗೀತ ಬೆಳೆಯಲು ಸಂಗೀತೋತ್ಸವಗಳು ಮಹತ್ತರ ಪಾತ್ರವನ್ನು ವಹಿಸಿವೆ. ಈ ಸಂಗೀತೋತ್ಸವಗಳು  ನಿರಂತರವಾಗಿ ನಡೆಯಲು ಹಿನ್ನೆಲೆಯಾಗಿ ಅನೇಕ ಅಂಶಗಳು ಕಾರ್ಯನಿರ್ವಹಿಸಿವೆ ಹಾಗೂ ನಿರ್ವಹಿಸುತ್ತಿವೆ.  ಉದಾ : ರಂಗಭೂಮಿ, ರಾಜಾಶ್ರಯ, ದೇವಸ್ಥಾನಗಳ ವಾಸ್ತುಶಿಲ್ಪಗಳು, ಧಾರ್ಮಿಕ ಆಚರಣೆಗಳು, ಪ್ರಾದೇಶಿಕ ಹಬ್ಬಗಳು, ಸಂಗೀತ ಪರಿಚಾರಕರು, ವೈದ್ಯಕೀಯ ಕ್ಷೇತ್ರದಲ್ಲಿ ಚಿಕಿತ್ಸೆ, ಪುಣ್ಯತಿಥಿಗಳ ಸಮಾರಂಭ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಸಂಗೀತ ಅಕಾಡೆಮಿಗಳು.

ರಂಗಭೂಮಿ : ವೃತ್ತಿ ರಂಗಭೂಮಿಗಳಲ್ಲಿ ರಸ ಸಂಗೀತವು ಇಂದಿಗೂ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ. ಉತ್ತರ ಕರ್ನಾಟಕ ರಂಗಭೂಮಿಯಲ್ಲಿ ಹಿಂದುಸ್ತಾನಿ ಸಂಗೀತ ಮಹತ್ವದ ಪಾತ್ರ ವಹಿಸಿದೆ. ಹಿಂದಿನ ಗಾಯಕರಿಗೆ ರಂಗಭೂಮಿಯಲ್ಲಿ ಆಕರ್ಷಣೆ ಇತ್ತು. ಪ್ರಸಿದ್ಧಗಾಯಕರು ನಾಟಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದರು. ಇದಕ್ಕೆ ಮುಖ್ಯವಾಗಿ ೩ ಕಾರಣಗಳಿವೆ. ಪ್ರೇಕ್ಷಕರು ಹೆಚ್ಚಾಗಿ ನಾಟಕ ನೋಡಲು ಗಾಯನ ಕೇಳಲೆಂದೇ ಬರುತ್ತಿದ್ದರು. ಪ್ರೇಕ್ಷಕರ ಸಂಗೀತದ ಕುರಿತಾದ ಅಭಿರುಚಿಯನ್ನು ಗಮನಿಸಿ ಹಾಡುವುದು ಅತ್ಯಂತ ಸಹಜವಾದ ರೂಢಿಯಾಗಿತ್ತು. ರಂಗಭೂಮಿಯಲ್ಲಿ ಗಾಯಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರೋತೃಗಳು ಸಿಗುತ್ತಿದ್ದರು. ವೃತ್ತಿರಂಗಭೂಮಿಗಳು ಸಂಗೀತ ಪ್ರಧಾನವಾದ ನಾಟ್ಯವನ್ನು ಪ್ರದರ್ಶಿಸುತ್ತಿದ್ದವು. ನಾಟಕದ ಕಥೆ ಪಾತ್ರಗಳ ರಸಾವೇಷಗಳು ಅಭಿನಯ ಎಲ್ಲವೂ ಸಂಗೀತಮಯವಾಗಿರುತ್ತಿದ್ದವು. ಆದುದರಿಂದ ಗಾಯಕರು ಮಾತ್ರ ನಟರಾಗಬಲ್ಲವರಾಗಿದ್ದರು. ಉದಾ : ಡಾ. ಮಲ್ಲಿಕಾರ್ಜುನ ಮನ್ಸೂರ,  ಪಂ. ಲಿಂಗರಾಜ ಬುವಾ ಯರಗುಪ್ಪಿ, ಡಾ, ಬಸವರಾಜ ರಾಜಗುರು, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಸವಾಯಿಗಂಧರ್ವ ಉಲ್ಲೇಖನೀಯರು.

ಗಾಯಕನ ಆರ್ಥಿಕ ಸ್ಥಿತಿ ಸುಧಾರಿಸಲು ರಂಗಭೂಮಿಯ ಆಶ್ರಯ ಅನಿವಾರ್ಯವಾಗಿತ್ತು. ಅಂದಿನ ದಿನಗಳಲ್ಲಿ ಅನೇಕ ಸಂಗೀತ ನಾಟಕ ಕಂಪನಿಗಳಾದ ಶಿರಹಟ್ಟಿಯ ಲಕ್ಷ್ಮೀ ಪ್ರಾಸಾದಿಕ ಮಂಡಳಿ, ವಾಮನ್ ರಾವ್ ಮಾಸ್ತರ‍್ರ ವಿಶ್ವಗುಣಾದರ್ಶ ಮಂಡಳಿ, ಎರಾಶಿ ಭರಮಪ್ಪನವರ ವಾಣಿವಿಲಾಸ ಕಂಪನಿ, ಗರುಡ ಸದಾಶಿವರಾಯರ ನಾಟಕ ಕಂಪನಿ, ಶಿವಮೂರ್ತಿ ಕಾನಬುರ್ಕಿಮಠ ಅವರ ಕೊಣ್ಣೂರ ಕಾಡಸಿದ್ಧೇಶ್ವರ ಸಂಗೀತ ನಾಟಕ ಮಂಡಳಿ, ಹಲಗೇರಿ ಬೆಟ್ಟಪ್ಪನವರ ಶ್ರಿ ಹಾಲಸಿದ್ಧೇಶ್ವರ ಪ್ರಾಸಾದಿಕ ನಾಟಕ ಮಂಡಳಿ, ಈ ಎಲ್ಲ ವೃತ್ತಿರಂಗಭೂಮಿಯ ಹಿನ್ನೆಲೆಯಲ್ಲಿ ಹಲವು ಕುತೂಹಲಕರ ಅಂಶಗಳು ಗೋಚರಿಸುತ್ತವೆ. ಕಂಪನಿ ರಂಗಭೂಮಿಗಳು ಶ್ರೀಮಂತರಿಂದ ಪೋಷಿಸಲ್ಪಟ್ಟು ಹಿಂದುಸ್ತಾನಿ ಹಾಡುಗಾರರಿಂದ ಪ್ರದರ್ಶಿಸಲ್ಪಟ್ಟ ಪ್ರೇಕ್ಷಕರಲ್ಲಿ ನಾಟಕ ಮತ್ತು ಸಂಗೀತದ ಕುರಿತು ಅಭಿರುಚಿಯನ್ನು ಹುಟ್ಟುಹಾಕಿತು. ಹೆಸರೇ ಸೂಚಿಸುವಂತೆ ಈ ನಾಟಕಗಳ ಜೀವಾಳ ಸಂಗೀತವಾಯಿತು. ರಂಗಭೂಮಿ ಮತ್ತು  ಹಿಂದುಸ್ತಾನಿ ಸಂಗೀತದ ನಡುವೆ ಅನ್ಯೋನ್ಯ ಸಂಬಂಧವನ್ನು ಪೋಷಿಸಿದ ಕೀರ್ತಿ ಶ್ರೀ ಎರಾಶಿ ಭರಮಪ್ಪನವರಿಗೆ ಸಲ್ಲುತ್ತದೆ.

ಕನ್ನಡ ರಂಗಗೀತೆಗಳಾಗಲಿ, ಮರಾಠಿ ನಾಟ್ಯಗೀತೆಗಳಾಗಲಿ ಹಿಂದುಸ್ತಾನಿ ಸಂಗೀತದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿರುವುದು ಇರುತ್ತದೆ. ಸಂಗಿತೋತ್ಸವಗಳಲ್ಲಿ ಅನೇಕ ಕನ್ನಡ ರಂಗಗೀತೆಗಳಾದ ಅಕ್ಷಯಾಂಬರ ನಾಟಕದ ‘ಶ್ಯಾಮನಿ ಪ್ರೇಮಲೆ’, ಚಿತ್ರಾನಂದ ನಾಟಕದ ‘ಸದಾಪಾಡಲಿ ಅಂಗನಾ ಪ್ರೀಯಗಾನ’, ಹೇಮರಡ್ಡಿ ಮಲ್ಲಮ್ಮ ನಾಟಕದ ‘ಅಹಾ ಮಮತೆ’, ಸತಿ ಸತ್ವ ಪರೀಕ್ಷೆ ನಾಟಕದ ‘ಗೌರಿ ರಮಣ’ ಈ ರಂಗಗೀತೆಗಳು ಪ್ರೇಕ್ಷಕರ ಮನಸೂರೆಗೊಂಡಿವೆ.

ರಂಗಭೂಮಿಯ ಹಿನ್ನೆಲೆ ಗಮನಿಸಿದಾಗ ಸಂಗೀತ ಬೆಳೆಯಲು ಹಾಗೂ ಕಲಾವಿದರನ್ನು ಪರಿಚಯಿಸಲು ಇದು ಒಂದು ಉತ್ಕೃಷ್ಟವಾದ ಮಾಧ್ಯಮವಾಗಿದೆ.

ಆಶ್ರಯದಾತರು : ಪ್ರಾಚೀನ ಕಾಲದಲ್ಲಿ ಭಾರತೀಯ ಸಂಗೀತಕ್ಕೆ ಆಶ್ರಯ ನೀಡಿದವರೆಂದು ರಾಜಮಹಾರಾಜರು, ಮಾಂಡಲೀಕರು, ಪಾಳೆಗಾರರು.

ಮೈಸೂರಿನ ದೊರೆಗಳು : ಮೈಸೂರ ಆಸ್ಥಾನದ ದೊರೆ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು, ಶ್ರೀ ಜಯಚಾಮರಾಜೇಂದ್ರ ಒಡೆಯರು ಇವರು ಕೇವಲ ಕರ್ನಾಟಕೀ ಸಂಗೀತ ವಿದ್ವಾಂಸರಿಗಷ್ಟೇ ಅಲ್ಲದೆ ಹಿಂದುಸ್ತಾನಿ ಸಂಗೀತದ ವಿದ್ವಾಂಸರನ್ನೂ ಆಮಂತ್ರಿಸಿ ಸಂಗಿತೋತ್ಸವಗಳನ್ನು ನಡೆಸುತ್ತಿದ್ದರು. ಇದರಿಂದಾಗಿ ಉತ್ತರ ಭಾರತದಲ್ಲಿಯ ಹೆಸರುವಾಸಿಯಾದ ಹಿಂದುಸ್ತಾನಿ ಸಂಗೀತಗಾರರು ಆಗಾಗ್ಗೆ ಕರ್ನಾಟಕಕ್ಕೆ ಭೇಟಿಯನ್ನು ನೀಡುತ್ತಿದ್ದರು. ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ನಥನ್ ಖಾನ್, ಮೌಲಾಭಕ್ಷ, ಕೇಶವ ಬುವಾ ಇಂಗಳೆ ಮುಂತಾದ ಗಾಯಕರು ಆಶ್ರಯ ಪಡೆದಿದ್ದರು. ಮೈಸೂರಿನ ಸಂಸ್ಥಾನದಲ್ಲಿ ಬಹುವರ್ಷಗಳಿಂದ ದಸರಾ ಉತ್ಸವದಲ್ಲಿ ಅನೇಕ ಸಂಗೀತಗಾರರಿಗೆ ಆಮಂತ್ರಣವಿರುತ್ತಿತ್ತು. ಈ ಪ್ರಕಾರ ಉತ್ತರಭಾರತದ ಅನೇಕ ಹಿಂದುಸ್ತಾನಿ ಸಂಗೀತ  ವಿದ್ವಾಂಸರು ಮೈಸೂರಿಗೆ ಆಗಮಿಸಿ ತಮ್ಮ ಕಲೆ ಪ್ರದರ್ಶನ ಮಾಡುತ್ತಿದ್ದರು. ಈ ರೀತಿಯಾಗಿ ಮೈಸೂರಿನ ಸಂಗೀತೋತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದವರೆಂದರೆ ಉಸ್ತಾದ್  ಅಬ್ದುಲ್ ಕರೀಂಖಾನ್. ಇವರ ಪಾಂಡಿತ್ಯಕ್ಕೆ ಮಾರುಹೋದ ಕರ್ನಾಟಕದಲ್ಲಿ ಅನೇಕ ಜನರು ಹಿಂದುಸ್ತಾನಿ ಸಂಗೀತ ಪಡೆಯಲು ಪ್ರಾರಂಭಿಸಿದರು. ಈ ಹಿನ್ನೆಲೆಯಿಂದ ಇಂದಿಗೂ ಕೂಡಾ ಜಗತ್ ಪ್ರಸಿದ್ಧ ಮೈಸೂರಿನ ದಸರಾ ಉತ್ಸವದಲ್ಲಿ ಪ್ರಮುಖವಾಗಿ ಸಂಗೀತ ಉತ್ಸವ ಅದ್ಧೂರಿಯಾಗಿ ನಡೆಯುತ್ತಲಿದ್ದ ನಿಮಿತ್ತ ಅನೇಕ ಸಂಗೀತ ಕಲಾವಿದರಿಗೆ ವೇದಿಕೆ ಕಲ್ಪಿಸುವುದಲ್ಲದೆ, ಹಿಂದುಸ್ತಾನಿ ಸಂಗೀತದಲ್ಲಿ ಪ್ರೇಕ್ಷಕರು ಇನ್ನಷ್ಟು ಅಭಿರುಚಿ ಹೆಚ್ಚಿಸಿಕೊಳ್ಳುವುದಕ್ಕೆ ಪ್ರೇರೇಪಿಸುತ್ತದೆ.

ಕುಂದಗೋಳ ನಾಡಿಗೇರ ಮನೆತನ : ಕುಂದಗೋಳ ಹುಬ್ಬಳ್ಳಿಯ ದಕ್ಷಿಣಕ್ಕೆ ೧೯ ಕಿ.ಮೀ. ದೂರದಲ್ಲಿರುವ ಭೌಗೋಳೀಕವಾಗಿ ಅದು ಚಿಕ್ಕ ಪ್ರದೇಶವಾದರೂ ಭಾರತದ ಸಂಗೀತ ನಕ್ಷೆಯಲ್ಲಿ ಅದಕ್ಕೆ ಸಂಗೀತದ ಮಹತ್ವದ ಸ್ಥಾನವುಂಟು.  ಈ ಮಹತ್ವದ ಸ್ಥಾನ ಪ್ರಾಪ್ತವಾಗಲು ಸ್ಥಳೀಯ ನಾಡಿಗೇರ ಮನೆತನವು ಬಹಳ ಮುಖ್ಯಪಾತ್ರ ವಹಿಸಿದೆ. ನಾಡಿಗೇರ ಧನಿಗಳಾದ ರಂಗನಗೌಡರು ನಂತರದ ತಲೆಮಾರಿನ ಧನಿಗಳಾದ ಅತ್ಯಂತ ಸಾಹಸದಿಂದ ಸಂಗೀತ ಯಜ್ಞಕ್ಕೆ ತೊಡಗಿದರು. ತಮಗಿರುವ ಸಂಪತ್ತಿನ ಆಶ್ರಯದಲ್ಲಿ ಸಂಗೀತವನ್ನು ಬೆಳೆಯಲು ಬಿಟ್ಟರು. ಅಬ್ದುಲ್ ಕರೀಂ ಖಾನ್‌ರನ್ನು ಉಳಿಸಿಕೊಂಡು ಸಂಗೀತದ ತೊಟ್ಟಿಲನ್ನು ತುಗಲು ವ್ಯವಸ್ಥೆ ಮಾಡಿದವರು ಈ ತೊಟ್ಟಿಲಲ್ಲಿ ಸವಾಯಿ ಗಂಧರ್ವರು ಮೊದಲು ಬೆಳೆದರು. ನಂತರ ಡಾ. ಗಂಗೂಬಾಯಿ ಹಾನಗಲ್ಲ, ಪಂ. ಭೀಮಸೇವಜೋಶಿ ಮುಂತಾದವರು ಸಂಗೀತ ಗಂಗೋತ್ರಿಯನ್ನು ಕುಂದಗೋಳದಲ್ಲಿ ಕಂಡುಕೊಂಡರು.

ಉದಾರ ಪರಂಪರೆಯ ನಾಡಿಗೇರ ಮನೆತನದ ಧನಿಗಳಾದ ನಾನಾ ಬಸಾಬರು ಸ್ವತಃ ಜಮೀನ್‌ದಾರರಾಗಿದ್ದರೂ ಕೂಡಾ ಸಂಗೀತದ ಪ್ರೀತಿಯಿಂದ ಬಡವ ಶ್ರೀಮಂತ ಭೇದವನ್ನು ದಾಟಿ ಜೀತಕ್ಕಿದ್ದವರನ್ನೂ ಸಂಗೀತಕ್ಕೆ ಸೆಳೆದುಕೊಂಡಿದ್ದು ಮಾನವೀಯ ಪ್ರಸಂಗವಾಗಿದೆ.

ಸವಾಯಿ ಗಂಧರ್ವರ ಚಿರಸ್ಮರಣೀಯ ಅಂಗವಾಗಿ ಕುಂದಗೋಳದಲ್ಲಿ ಪ್ರತಿವರ್ಷವೂ ಸಂಗಿತೋತ್ಸವ ನಡೆಯುವ ಸತ್ ಸಂಪ್ರದಾಯವನ್ನು ಹಾಕಿದರು. ನಾನಾ ಸಾಹೇಬರು ಸ್ವತಃ ಸಂಗೀತಗಾರರಾಗಿದ್ದ ಅವರು ಸವಾಯಿ ಗಂಧರ್ವರಲ್ಲಿ ಹಾಗೂ ಫಕ್ಕೀರಪ್ಪ ಹೂಗಾರ ಇವರಲ್ಲಿ ಸಂಗೀತ ಕಲಿತವರು. ಈ ಹಿನ್ನೆಲೆಯಲ್ಲಿ ಸವಾಯಿ ಗಂಧರ್ವರ ಪುಣ್ಯತಿಥಿಯನ್ನ ಆಚರಿಸುವದನ್ನು ಪ್ರಾರಂಭಿಸಿದರು. ಇಂಥ ಪರಂಪರೆ ಅವಿರತ ಮುಂದುವರಿಕೆಗಾಗಿ ವಿಶ್ವಸ್ಥ ಮಂಡಳಿಯನ್ನು ಸ್ಥಾಪಿಸಲಾಯಿತು. ಇದರಿಂದ ಕುಂದಗೋಳದ ಸವಾಯಿ ಗಂಧರ್ವ ಸಂಗಿತೋತ್ಸವಕ್ಕೆ ದೇಶದ ನಾನಾ ಭಾಗಗಳಿಂದ ಸಂಗೀತ ದಿಗ್ಗಜರು ಆಗಮಿಸಿ ಸಂಗೀತ ಸೇವೆಯನ್ನು ನೀಡಿ ಹೋಗುವಂತಾಯಿತು. ಹೀಗೆ ನಾನಾ ಸಾಹೇಬರಿಂದ ಪೋಷಿಸಲ್ಪಟ್ಟ ಕುಂದಗೋಳ ಸಂಗೀತ ಪರಂಪರೆಗೆ ಭಾವೈಕ್ಯತೆ ಅಷ್ಟೇ ಸೇರಿಕೊಳ್ಳುವುದಲ್ಲದೆ ಹಿಂದುಸ್ತಾನಿ ಸಂಗೀತ ದೇಶದ ವಿವಿಧೆಡೆಗೆ ಪ್ರಸಾರವಾಗಲು ಕಾರಣವಾಯಿತು.

ಗದಗ ವೀರೇಶ್ವರ ಪುಣ್ಯಾಶ್ರಮ : ಹಾನಗಲ್ಲ ಕುಮಾರ ಸ್ವಾಮಿಗಳು ೧೯೧೪ರಲ್ಲಿ ಕುಮಾರೇಶ್ವರ ಕೃಪಾಪೋಷಿತ ಸಂಗೀತ ಸಾಹಿತ್ಯ ಮಹಾವಿದ್ಯಾಲಯ ಸ್ಥಾಪಿಸಿದರು. ಪಂಚಾಕ್ಷರಿ ಗವಾಯಿಗಳನ್ನು ಅದರ ಮುಖ್ಯಸ್ಥರನ್ನಾಗಿ ಮಾಡಿದರು. ಈ ವಿದ್ಯಾಲಯ  ೧೯೩೦ರಲ್ಲಿ ರಜತ ಮಹೋತ್ಸವ ನಡೆಸಿಕೊಂಡಿತು. ಅಲ್ಲಿ ಅನೇಕ ಸಂಗೀತಗಾರರು ತಮ್ಮ ಸಂಗೀತದ ಮೂಲಕ ಪ್ರೇಕ್ಷಕರ ಮನ ರಂಜಿಸಿದರು.

ಪಂ. ಪಂಚಾಕ್ಷರಿ ಗವಾಯಿಗಳ ಲಿಂಗೈಕ್ಯದ ನಂತರ ವೀರೇಶ್ವರ ಪುಣ್ಯಾಶ್ರಮದಲ್ಲಿ ಅವರ ಗದ್ದುಗೆ ಸ್ಥಾಪಿಸಿ ಇಲ್ಲಿ ಪ್ರತಿವರ್ಷ ಗವಾಯಿಗಳ ಪುಣ್ಯತಿಥಿ ನಿಮಿತ್ತ ಹಿರಿಕಿರಿ ಸಂಗೀತಗಾರರು ಗಾನಯೋಗಿಗೆ ನಾದ ಶೃದ್ಧಾಂಜಲಿ ಅರ್ಪಿಸುತ್ತಾರೆ. ಈ ಆಸ್ರಮದ ಹಿನ್ನೆಲೆಯಿಂದ ಪಂ. ಪುಟ್ಟರಾಜಗವಾಯಿಗಳು, ಪಂ. ಪಂಚಾಕ್ಷರಿ ಮತ್ತುಗಟ್ಟಿ, ಸಿದ್ಧರಾಮ ಚಂಬಲದನ್ನಿ, ಪಂ. ಅರ್ಜುನಸಾ ನಾಕೋಡ ಇಂಥ ಘನ ಸಂಗೀತಗಾರರನ್ನು ಈ ನಾಡಿಗೆ ನೀಡಿದೆ.

ಧಾರ್ಮಿಕ ಹಿನ್ನೆಲೆ ಹಾಗೂ ಐತಿಹಾಸಿಕ ಸ್ಥಳಗಳು : ಧಾರ್ಮಿಕ ಹಿನ್ನೆಲೆಯಲ್ಲಿ ಅನೇಕ ಸಂಗೀತ ಮಹೋತ್ಸವಗಳು ನಡೆಯುತ್ತಲಿದ್ದು, ಪ್ರೇಕ್ಷಕರಿಗೆ ಅಲೌಕಿಕ ಅನುಭವಗಳನ್ನು ನೀಡುತ್ತಿವೆ. ಹಬ್ಬ-ಹರಿದಿನಗಳು, ಮದುವೆ-ಮುಂಜಿಗಳು ಇವೆಲ್ಲವೂ ಸಂಗೀತ ಬೆಳವಣಿಗೆಗೆ ಪೂರಕವಾಗಿವೆ. ಏಕೆಂದರೆ ಪ್ರತಿ ಸಂದರ್ಭದಲ್ಲಿಯೂ ಪ್ರತ್ಯೇಕವಾದಂತ ಸಂಪ್ರದಾಯ ಹಾಡುಗಳೊಂದಿಗೆ ಇವೆಲ್ಲವನ್ನು ಆಚರಿಸಲಾಗುತ್ತದೆ. ಗಣೇಶೋತ್ಸವ, ಯುಗಾದಿ, ನವರಾತ್ರಿ ಇಂಥಹ  ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಐತಿಹಾಸಿಕ ಸ್ಥಳಗಳಾದ ಹಂಪೆ, ಬನವಾಸಿ, ಲಕ್ಕುಂಡಿ, ಪಟ್ಟದಕಲ್ಲು, ನವರಸಪುರ, ಮುಂತಾದ ಸ್ಥಳಗಳಲ್ಲಿ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಹಾಗು ಸಂಗೀತ ಅಕಾಡೆಮಿಯವರು ಅನೇಕ ಸಂಗಿತೋತ್ಸವಗಳನ್ನು ಏರ್ಪಡಿಸಿ ಕಲಾವಿದರಿಗೆ ವೇದಿಕೆ ಒದಗಿಸಿಕೊಟ್ಟು ಈ ಮೂಲಕ ಕಲಾವಿದರ ಬೆಳವಣಿಗೆಗೆ ಹಾಗೂ ಸಂಗೀತದ ಬೆಳವಣಿಗೆಗೆ ಪೂರಕವಾಗಿ ಕೆಲಸವನ್ನು ಮಾಡುತ್ತಿವೆ.

ಇದರಂತೆ ಕರಾವಲಿ ಉತ್ಸವ ಮತ್ತು ವಿವಿಧ ಸ್ಥಳಗಳಲ್ಲಿ ಸಂಗೀತ ಸಂಸ್ಥೆಗಳು ಹುಟ್ಟಿಕೊಂಡಿವೆ. ಉದಾ : ಧಾರವಾಡದಲ್ಲಿ ರೆಹೆಮತ್ ಖಾನ್ ಅವರ ಪುಣ್ಯತಿಥಿ ಅಂಗವಾಗಿ ಇವರ ಮನೆತನದ ಪ್ರಸಿದ್ಧ ಸಿತಾರವಾದಕರಾದ ಉಸ್ತಾದ್ ಬಾಲೇಖಾನ್  ಸಾಹೇಬರ ನೇತೃತ್ವದಲ್ಲಿ ಸಂಸ್ಥೆಯವರು ಪ್ರತಿವರ್ಷ ಎರಡು ದಿನಗಳ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡು ನಾಡಿನ ಸಂಗೀತಗಾರರಿಗೆ ಸಂಗೀತ ಸೇವೆಗೈಯಲು ವೇದಿಕೆ ಕಲ್ಪಿಸಿದೆ. ಬಹುಜನ ಕಲಾವಿದರನ್ನು ಪರಿಚಯಿಸುತ್ತಿರುವದು ಹಾಗೂ ಜನರಿಗೆ ಸಂಗೀತದ ರಸದೌತಣ ಉಣಿಸುವಲ್ಲಿ ಮುಖ್ಯಪಾತ್ರವಹಿಸಿರುವುದು ಶ್ಲಾಘನೀಯ. ಸಂಗೀತ ಸಂಸ್ಥೆಗಳಿಂದ ಹಮ್ಮಿಕೊಳ್ಳಲಾದ ಸಂಗೀತೋತ್ಸವಗಳಿಂದ ಸಂಗೀತ ಬೆಳೆಯಲು ಅನುಕೂಲಕರವಾಗಿದೆ.

ಇಂಥಹ ಸಂಸ್ಥಗಳಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಪರಿಣಾಮವಾಗಿ ಪ್ರಾಚೀನ ಕಾಲದಲ್ಲಿ ಹಿಂದುಸ್ತಾನಿ ಸಂಗೀತಕ್ಕೆ ಯಾವ ಒಂದು ಸ್ಥಾನವಿತ್ತೋ ಈ ಆಧುನಿಕ ಸಂಗೀತದ ನಡುವೆಯೂ ಅದು ಅಸ್ತಿತ್ವವನ್ನು ಉಳಿಸಿಕೊಂಡು ಮುಂದುವರೆದಿದೆ. ಇದರಿಂದ ನಾಡಿನ ಪ್ರಸಿದ್ಧ ಸರೋದ ವಾದಕರಾದ ಪಂ. ರಾಜೀವ ತಾರಾನಾಥ ಅಂಥವರು, ಇಂಗ್ಲೀಷ್ ಪ್ರಾಧ್ಯಾಪಕ ವೃತ್ತಿ ತೊರೆದು ಸರೋದ ವಾದಕರಾಗಿ ಹೊರಹೊಮ್ಮಲು ಪ್ರೇರೇಪಣೆ ನೀಡಿದೆ. ಇದರಂತೆ ಡಾ. ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಷಿ, ಡಾ. ಬಸವರಾಜ ರಾಜಗುರು, ಪಂ. ಸಂಗಮೇಶ್ವರ ಗುರವ, ಡಾ. ಮಲ್ಲಿಕಾರ್ಜುನ ಮನ್ಸೂರ, ಪಂ. ಅರ್ಜುನ ನಾಕೋಡ, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಪಂ. ಪುರಾಣಿಕ ಮಠ, ಪಂ. ಲಿಂಗರಾಜ ಬುವಾ ಯರಗುಪ್ಪಿ ಇವರೆಲ್ಲರೂ ಇಂಥಹ ಸಂಗೀತ ಉತ್ಸವಗಳ ಮೂಲಕ ಚಿರಪರಿಚಿತರಾಗಿದ್ದಾರೆ.

‘ಹಾಡಿದವನಿಗೆ ಹಾದಿ ಸಿಗಲಿಲ್ಲ, ಓದಿದವನಿಗೆ ಓಣಿ ಸಿಗಲಿಲ್ಲ’ ಎಂಬ ಗಾದೆಮಾತನ್ನು  ಇಂಥಹ ಸಂಗೀತ ಮಹೋತ್ಸವಗಳು ಹುಸಿಗೊಳಿಸಿವೆ.