ಉತ್ತರೆ ನೀರಿಗೋಗಿ ಮತ್ತೇಕೆ ಬರಲಿಲ್ಲ
ಉತ್ತರ ದೇಸೆಂಬೂ ಮಳೆ ಹುಯ್ದು-ಕೆರೆ ತುಂಬಿ
ಹನಿ ಬಿದ್ದು ಹರಬಿ ಒಡೆದಾವು

ಅಳ್ಳಡಸಗಾರೆಣ್ಣೆ ಮೇಲಕ್ಕೆ ನೀರಿಗೋಗಿ
ಮುಳ್ಳು ಸಿಕ್ಕಿ ಸೀರೆ ಸೆರಗೆರಿದೊ-ದಾಳಿಂಬೆ
ಹನಿಬಿದ್ದು ಹರಬಿ ಒಡೆದಾವು

ನೀರೇಕೆ ಕಲಕಿದವು ನರಿಗೇಕೆ ಮಾಸಿದವು
ಮಾವನ ತೋಟಾದ ಮರುಗಾವು-ಕುಯ್ಯುಕೋಗಿ
ಬಾಳೆಯ ಮುಳ್ಳು ಸೆಣೆದಾವು

ಬಾಳೇಗೆ ಮುಳ್ಳುಂಟೆ ಬದನೀಗೆ ಚಪ್ಪರುಂಟೆ
ಹಸಿನಾಲಿಗೆ ಇಸವುಂಟೇ-ಸೊಸಿ ಬಾಲೆ
ಸೊಸಿ ಬಾಲೆ ನಿನ ಮಾತು ನಿಜವೇನೇ

ಎತ್ತಿಗೆ ಮಾತುಂಟೆ ಕತ್ತೇಗೆ ಕೋಡುಂಟೆ
ಋಷಿಯಾಡಿದ ಮಾತೀಗೆ ಹುಸಿಯುಂಟೆ-ಅತ್ತ್ಯೆಮ್ಮ
ಅತ್ತ್ಮಮ್ಮ ನಿಮ್ಮ ಮಾತು ನಿಜವುಂಟೇ

ಅತ್ತೆಗೂ ಸೊಸಿಗೂ ಹತ್ತ್ಯಾವೆ ಕಾಳಗಿ
ಉತ್ತರದೇವೆಂಬಾ ಸೊಸಿ ಬ್ಯಾಡ

ಉತ್ತು ಬಂದ ಮಗನಿಗೆ ತುಪ್ಪ ಅನ್ನ ಇಕ್ಕ್ಯವಳೆ
ಉತ್ತರದೇವೆಂಬ ಸೊಸಿಬ್ಯಾಡ-ಕಂದಯ್ಯ
ಬಿಟ್ಟು ಬಿಡವಳ ತವರೀಗೆ

ಬಿಟ್ಟು ಬಿಡಲಿಕ್ಕೆ ಎತ್ತಲ್ಲ ಎಮ್ಮೆಲ್ಲ
ಹತ್ತುವರ ಮುಟ್ಟಿ ತೆರಮುಟ್ಟಿ ಬಂದವಳ
ಬಿಟ್ಟಿರುನಾರೆ ಹಡದವ್ವಾ

ಅವಳ ಕೊರಳಲ್ಲಿರುವ ಸಲಿಕೆ ಸರಪಳಿ ಮಾರಿ
ನಿನ್ನ ಮಂಚಾಕೆ ರಾಣಿಯ ತರಬಲ್ಲೆ ಕಂದಯ್ಯ
ಉತ್ತರದೇವೆಂಬ ಸೊಸಿ ಬ್ಯಾಡಾ

ಅರಗಿ ಬಂದ ಮಗನೀಗೆ ಹಾಲನ್ನ ಇಕ್ಕ್ಯವಳೆ
ಬೇಡತಿಯೆಂಬ ಸೊಸಿ ಬ್ಯಾಡ-ಕಂದಯ್ಯ
ಬಿಟ್ಟು ಬಿಡವಳ ತವರೀಗೆ

ತವರೀಗೆ ಬಿಡುವಾಕೆ ಎತ್ತಲ್ಲ ಎಮ್ಮೆಲ್ಲ
ಆರು ವರ ಮುಟ್ಟಿ-ಬಂದವಳ
ನೋಡದಿರುನಾರೆ ಹಡದವ್ವಾ

ಮೂಗುತಿ ಮುರಿದಾರೆ ಮಾಡಿಸಬಹುದು
ಮಡದಿ ಸತ್ತಾರೆ ತರಬಹುದು – ಕಂದಯ್ಯ
ನಿನ್ನ ಹೆತ್ತವ್ವನೆಲ್ಲಿ ಪಡೆದಿಯೇ

ಅವಳ ಕಾಲಲ್ಲಿರುವ ಪಿಲ್ಲಿ ಸರಪಣಿ ಮಾರಿ
ನಿನ್ನ ಮಂಚಾಕೆ ರಾಣಿಯ ತರಬಲ್ಲೆ – ಕಂದಯ್ಯ
ಬಿಟ್ಟು ಬಿಡವಳ ತವರೀಗೆ

ಮಡದೀಯ ಕರದವನು ಮತ್ತೇನ ಹೇಳ್ಯಾನು
ಇತ್ತ ಕೇಳೆ ಮಡದಿ ನನ್ನ ಮಾತಾ

ಆಗ ತಂದವನಲ್ಲ ಈಗ ಕಳಗವನಲ್ಲ
ಹೋಗಿರು ನಿನ್ನ ತವರೀಗೆ

ತಂದ ರಾಯರಿಗೆ ಘಟ್ಟದ ಮಡದೊಪ್ಪಿಲ್ಲವ
ನಾ ಹೋತಿನಿ ರಾಯ ತವರೀಗೆ
ನಾ ಹೋದಳು ಎಂದು ಚಿಂತಿ ಮಾಡಲು ಬ್ಯಾಡ
ನೀ ನನಗಿಂತ ಚೆಲುವೇ ತರಬೇಕು

ತಂದಾರು ತತ್ತನ್ನಿ ನನಗಿಂತಲು ಚೆಲುವೆಯಾ
ನಾ ಮುಡಿದು ನನ್ನ ಶಿರ ಮುಡಿದು – ಮಿಕ್ಕಿದ್ದ ಹೂವ

ಯಾವ ರಾಣ್ಯಾರೇ ಮುಡಿಯಾಲಿ
ಆಗ ಉತ್ತರದೇವಿ ಮತ್ತೆಲ್ಲಿಗೆ ಹೋಗುತಾಳೆ
ಕಿತ್ತಲಿ ವನಕೆ ನಡೆದವಳೆ

ಕಿತ್ತಲಿ ನೀವು ಕೇಳಿ ಕಿತ್ತಲಿಯ ವನಕೇಳಿ
ನಾನು ಬಂದಾಗ ಸಸಿಗೋಳು
ಗೊಬ್ಬರವಾ ಹಾಕಿ ಸಲುವಿದೇನು ವನಗಳಿರಾ
ಹೋತೀನ ನನ್ನ ತವರೀಗೆ

ನೀರ ಹುಯ್ಯವರ‍್ಯಾರೆ ಗೊಬ್ಬರ ಹಾಕವರ‍್ಯಾರೆ
ಹಣ್ಣಾದರ‍್ಯಾರೆ ಮೆಲ್ಲುವರೂ

ಅತ್ತ್ಯೆಮ್ಮ ನೀರು ಹುಯ್ಯುತಾರೆ
ಅತ್ತ್ಯೆಮ್ಮ ಗೊಬ್ಬರ ಹಾಕುತ್ತಾರೆ
ಹಣ್ಣಾದರಾಕೆ ಮೆಲ್ಲುತಾರೆ

ಅಲ್ಲಿಂದುತ್ತರದೇವಿ ಬಾಳೆ ವನಕೋಗಿ
ನಾನು ಬಂದಾಗ ಎಳೆ ಕಂದು
ಬೂದಿಹಾಕಿ ಸಲುವಿದೇನು ವನಗಳಿರಾ
ಹೋತೀನಿ ನನ್ನ ತವರೀಗೆ

ಬೂದಿ ಹಾಕವರ‍್ಯಾರೆ ನೀರ ಹುಯ್ಯುವರ‍್ಯಾರೆ
ನಾ ಹಣ್ಣಾದರೆ ಮೆಲ್ಲುವರ‍್ಯಾರೆ

ಅತ್ತ್ಯೆಮ್ಮ ನೀರು ಹುಯ್ಯುತಾರೆ
ಅತ್ತ್ಯೆಮ್ಮ ಬೂದಿ ಹಾಕುತಾರೆ
ಹಣ್ಣಾದರಾಕೆ ಮೆಲ್ಲುತಾರೆ

ಅಲ್ಲಿಂದ ಹಿಂದಿರುಗಿ ಅರಮನೆಗೆ ಬರುತಾಳೆ
ಅಡಿಗೆಯ ಮಾಡಿದಳು ನೀರಾನೆ ತಂದಾಳು
ಮಾವನಿಗೆ ನೀರಾ ಕೊಟ್ಟಳು ಉತ್ತರದೇವಿ

ಮಾಳಿಗೆಯ ಮೇಲೆ ಮಲಗಿರುವ ಮಾವಯ್ಯ
ಊಟಕ್ಕಪ್ಪಣೆ ದಯಮಾಡಿ

ನೆನ್ನೆ ಉಂಡಾ ಊಟ ಇನ್ನು ನಂಗೆ ಅರಿಗಿಲ್ಲಾ
ನಿನ್ನಾಣೆಗು ನಂಗೆ ಹಸಿವಿಲ್ಲಾ

ಮಾಳಿಗೆಯ ಮೇಲೆ ಮಲಗಿರುವ ಮಾವಯ್ಯ
ನಾ ಹೋಗಿ ಬತ್ತೀನಿ ತವರೀಗೆ

ತೌರೀಗೆ ಹೋದಾರೆ ತೌರಲ್ಲಿರಬ್ಯಾಡ
ತೌರೊಳ್ಳೆದಂತ ಇರಬ್ಯಾಡ – ಉತ್ತರದೇವಿ
ನಾಳೆ ಬುಧುವಾರ ಬರಬೇಕು

ಅಲ್ಲಿಂದ ಉತ್ತರದೇವಿ ಅಂಗಳಾವ ಇಳಿದಾಳು
ಅವರ ಭಾವನ ಪಾದಕೆ ಶರಣೆಂದು – ಏನಂದಳು
ಹೋತೀನಿ ಭಾವಯ್ಯ ತವರೀಗೆ

ಹೋಗಿ ಬಾರೆ ಹೋಗಿ ಬಾರೆ ಹೊನ್ನೋಲೆ ಕಿವಿಯೊಳೆ
ನಾಗಭೂಷಣದ ನರಿಗ್ಯವಳೇ – ಉತ್ತರದೇವಿ
ತೌರೊಳ್ಳೆದಂತ ಇರಬ್ಯಾಡ – ಉತ್ತರದೇವಿ
ನಾಳೆ ಬುಧವಾರ ಬರಬೇಕು

ಅತ್ತೆಗೆ ಶರಣೆಂದು ಮತ್ತೇನ ಹೇಳ್ಯಾಳು
ಹೋತಿನತ್ತಮ್ಮ ತವರೀಗೆ

ಹೋಗಿ ಬಾರೆ ಹೋಗಿ ಬಾರೆ ಹೊನ್ನೋಲೆ ಕಿವಿಯೋಳೆ
ನಾಗಭೂಷಣದ ನರಿಗ್ಯವಳೇ – ಉತ್ತರದೇವಿ
ಮಳ್ಳ ಮಗುಚಿ ಮನೆಗೆ ಬರಬ್ಯಾಡ

ಅತ್ತಿಗೆಗೆ ಶರಣೆಂದಾಳು ಮತ್ತೇನ ಹೇಳ್ಯಾಳು
ಹೋತ್ತಿನತ್ತಿಗ್ಯಮ್ಮ ತವರೀಗೆ

ಹೋಗಿ ಬನ್ನಿ ಹೋಗಿ ಬನ್ನಿ ಹೊನ್ನೋಲೆ ಕಿವಿಯವರೆ
ನಾಗಭೂಷಣದ ನರಿಗ್ಯವರೆ – ಅತಿಗ್ಯಮ್ಮ
ನೀವು ಮಳ್ಳ ಮಗುಚಿ ಮನೆಗೆ ಬರಬ್ಯಾಡಿ

ಒಂದಾನೆತ್ತಿಕೊಂಡು ಕಂದಾನ ಕೈಲಿಹಿಡಕೊಂಡು
ಹಟ್ಟಿ ಮೆಟ್ಟಿಗೆ ಇಳಿದಾಳು
ಮೆಟ್ಟಿಗೆ ಇಳಿದಾಳು ಅತ್ತಿಗೆ ಏನ ಹೇಳ್ಯಾಳು

ಅತ್ತೆಮ್ಮ ಅತ್ತೆಮ್ಮ ಇತ್ತ ಕೇಳಮ್ಮಾ
ನಾ ಹೋಗಿ ಬತ್ತೇನಿ ತವರೀಗೆ

ಎಮ್ಮೆ ಎಮ್ಮೆ ನೂರು ಎಮ್ಮೆಯ ಕರು ನೂರು
ನಮ್ಮಪ್ಪ ಕೊಟ್ಟ ಐನೂರು – ಎಮ್ಮೆಯ
ಬಿಟ್ಟೊಡೆಯತ್ತಮ್ಮ ನನ್ನ ಕುಟೆ

ಹಸು ಹಸುವೇ ನೂರು ಹಸೀನ ಕರು ನೂರು
ನಮ್ಮಪ್ಪ ಕೊಟ್ಟ ಐನೂರು – ಹಸುಗಳಾ
ಬಿಟ್ಟೊಡೆಯತ್ತಮ್ಮ ನನ್ನ ಕುಟೆ

ಆಡು ಆಡೇ ನೂರು ಆಡಿನ ಮರಿ ನೂರು
ನಮ್ಮಪ್ಪ ಕೊಟ್ಟ ಐನೂರು – ಆಡುಗಳ
ಬಿಟ್ಟೊಡೆಯತ್ತಮ್ಮ ನನ್ನ ಕುಟಿ

ಒಂದಾನೆತ್ತಿಕೊಂಡು ಕಂದಾನ ಕೈಲಿಡ್ಕಂಡು
ಅಂಗಳಾವ ಬಿಟ್ಟು ಇಳಿವಾಗ
ಅವರತ್ತೇನಂತಾ ನುಡದಾಳು
ಅಟ್ಟದ ಮೇಲೆ ಪಟ್ಟೆಯಸೀರೈಯ್ತೆ
ಉಟ್ಟು ಹೋಗೆ ಸೊಸೆ ಬಾಲಿ

ನಾನು ಉಟ್ಟಾರೆ ನನ್ಯಾರು ನೋಡೋರು
ನೀವುಟ್ಟು ನಿಮ್ಮ ಮಗ ನೋಡಿ ಅತ್ತಮ್ಮ
ಮುಂದೆ ಬಳೋಳಿಗೆ ಮಡಗೀರಿ

ಮಾಳಿಗೆಯ ಮೇಲೆ ಮಾಡಿಸಿದ ಓಲೆ ಅವೆ
ಇಕ್ಕೊಂಡ್ಹೋಗೆ ಸೊಸೆ ಬಾಲೆ

ನಾನು ಇಕ್ಕಿದರೆ ನನ್ಯಾರ ನೋಡೋರು
ನೀವು ಇಕ್ಕಿ ನಿಮ್ಮ ಮಗ ನೋಡಿ – ಅತ್ತಮ್ಮ
ಮುಂದೆ ಬರೋಳಿಗೆ ಮಡಗೀರಿ

ಒಂದಾನೆತ್ತಿಕೊಂಡು ಕಂದಾನ ಕೈಲಿಡ್ಕಂಡು
ಮುಂದಲ ಚಿಕ್ಕೆ ಬೆಳಕಲಿ – ಉತ್ತರದೇವಿ
ಕುಂದೂರಿಗ್ಯಾಗಿ ನಡೆದಾಳು

ಕುಂದೂರಿಗ್ಯಾಗಿ ನಡೆದು ಹೋಗಾಗ
ಕುಂದೂರು ಗೌಡಾರು ತಡೆದು – ಏನಾಂದರು
ನಾವು ಒಂದು ವರ ಕೊಡುತೀನಿ ಇರುಬಾರೆ

ಒಂದು ವರ ಎಂಬುದು ನನ್ನ ಕಂದಾಗೆ ಬೆಲೆ ಇಲ್ಲಾ
ನಾ ಮುಂದಕೆ ಕಂದಾನ ನಡಿಸೇನು

ಒಂದಾನೆತ್ತಿಕೊಂಡು ಕಂದಾನ ಕೈಲಿ ಹಿಡ್ಕಂಡು
ಮುಂದಲ ಚಿಕ್ಕೆ ಬೆಳಕಲಿ – ಉತ್ತರದೇವಿ
ಭಾಗೂರಿಗಾಗಿ ನಡೆದಾಳು
ಭಾಗೂರಿಗಾಗಿ ನಡೆದು ಹೋಗಾಗ
ಭಾಗೂರು ಗೌಡಾರು ತಡೆದು – ಏನಾಂದರು
ಆರು ವರ ಕೊಡತೀವಿ ಇರುಬಾರೆ

ಆರು ವರ ಎಂಬುದು ಆಡಿನ ಬೆಲೆ ಇಲ್ಲಾ
ನಾ ಮುಂದಾಕೆ ಕಂದಾನ ನಡಿಸೇನು

ಒಂದಾನೆತ್ತಿಕೊಂಡು ಕಂದಾನ ಕೈಲಿ ಹಿಡ್ಕಂಡು
ಮುಂದಾಲ ಚೆಕ್ಕೆ ಬೆಳಕಿನಲ್ಲಿ – ಉತ್ತರದೇವಿ
ತಾಳೂರಿಗಾಗಿ ನಡೆದಾಳು

ತಾಳೂರಿಗಾಗಿ ನಡೆದು ಹೋಗಾಗ
ಈ ತಾಳೂರ ಗೌಡಾರು ತಡೆದು ಕೇಳಿದರಲ್ಲಾ
ಎಂಟು ವರ ಕೊಡುತಿನಿ ಇರುಬಾರೆ

ಎಂಟು ವರ ಎಂಬುದು ನನ್ನ ದಟ್ಟಿಯ ಬೆಲೆ ಇಲ್ಲಾ
ನಾ ಮುಂದಕೆ ಕಂದಾನ ನಡೆಸೇನು

ಒಂದಾನೆತ್ತಿಕೊಂಡು ಕಂದಾನ ಕೈಲಿ ಹಿಡ್ಕಂಡು
ಮುಂದಲ ಚಿಕಿ ಬೆಳಕಲಿ-ಉತ್ತರದೇವಿ
ಹೆತ್ತೂರಿಗಾಗಿ ನಡೆದಾಳು

ಹೆತ್ತೂರಿಗಾಗಿ ನಡೆದು ಹೋಗಾಗ
ಹೆತ್ತೂರಿಗೌಡರು ತಡೆದು-ಏನಾಂದರು
ಹತ್ತುವರ ಕೊಡುತಿನಿ ಇರುಬಾರೆ

ಹತ್ತವರ ಎಂಬುದು ನನ್ನ ಎತ್ತಿನ ಬೆಲೆ ಇಲ್ಲಾ
ನಾ ಮುಂದಾಕೆ ಕಂದಾನ ನಡಿಸೇನು

ಒಂದಾನೆತ್ತಿಕೊಂಡು ಕಂದಾನ ಕೈಲಿ ಹಿಡ್ಕಂಡು
ಹ್ವಾದಳು ತಾಯವ್ವನ ಅರಮನೆಗೇ

ತಾಯಿ ಬಾಗಿಲಾ ತೆಗೆ ತಾಯವ್ವ ಬಾಗಿಲಾ ತೆಗೆಯೇ
ನಾ ಬಂದನೇ ತಾಯಿ ತೆಗಿ ಬಾಗಿಲವಾ
ಬಾಗಿಲಾ ತೆಗೆಯುವುದಕ್ಕೆ ನಾ ಹೆಂಗೆ ತೆಗೆಯಾಲಿ
ನಿಮ್ಮಪ್ಪ ತೋಳಲ್ಲಿ ವರಗವರೇ-ಉತ್ತರದೇವಿ
ಹೋಗೇ ಅಣ್ಣಯ್ಯನರಮನೆಗೇ

ಅಣ್ಣಾ ಬಾಗಿಲ ತೆಗಿ ಅಣ್ಣಯ್ಯ ಬಾಗಿಲಾ ತೆರೆ
ನನ್ನ ಮಕ್ಕಳು ಬಾಯಾರಿ ಬಳಲಿದೊ-ಅಣ್ಣಯ್ಯ
ನಾ ಬಂದೇನು ಕದಾವ ತೆಗಿರಣ್ಣ

ಕದವಾ ತೆಗೆಯಾಕೆ ತಂಗಿ ನಾ ಹೇಗೆ ತೆಗೆಯಾಲಿ
ನಿಮ್ಮತ್ತಿಗೆ ತೋಳಲ್ಲಿ ವರಗವಳೆ-ಉತ್ತರದೇವಿ
ಹೋಗೇ ತಮ್ಮಯ್ಯನರಮನೆಗೆ

ತಮ್ಮಯ್ಯಾ ಬಾಗಿಲಾ ತೆರೆಯೊ ತಮ್ಮ ಬಾಗಿಲಾತೆಗೆ
ನನ್ನ ಮಕ್ಕಳು ಬಾಯಾರಿ ಬಳಲಿವೊ-ತಮ್ಮಯ್ಯ
ನಾ ಬಂದೇ ತಮ್ಮ ತೆಗೆ ಬಾಗಿಲು

ಬಾಗಿಲಾ ತೆಗೆಯಾಕೆ ನಾ ಹೆಂಗೆ ತೆಗೆಯಲಕ್ಕ
ನಿನ್ನ ನಾದಿನಿ ತೋಳಲ್ಲಿ ವರಗವಳೆ-ಅಕ್ಕಯ್ಯ
ಹೋಗೇ ಅಕ್ಕಯ್ಯನರಮನೆಗೆ

ಅಕ್ಕ ಬಾಗಿಲ ತೆಗೆಯೇ ಅಕ್ಕಯ್ಯ ಬಾಗಿಲ ತೆಗೆ
ನನ್ನ ಮಕ್ಕಳು ಬಾಯಾರಿ ಬಳಲಿದೋ-ಅಕ್ಕಯ್ಯ
ನಾ ಬಂದೆ ಕದಾವ ತೆಗೆ ಅಕ್ಕಯ್ಯ

ಕದಾವ ತೆಗೆಯಾಕೆ ತಂಗಿ ನಾನೆಂಗೆ ತೆಗೆಯಾಲಿ
ನಿಮ್ಮ ಭಾವ ತೋಳಲ್ಲಿ ವರಗವರೆ-ತಂಗ್ಯಮ್ಮ
ಹೋಗೇ ತಂಗ್ಯಮ್ಮನರಮನೆಗೆ

ತಂಗಿ ಬಾಗಿಲಾ ತೆಗೆ ತಂಗಮ್ಮಾ ಬಾಗಿಲಾ ತೆಗೆಯೇ
ನನ್ನ ಮಕ್ಕಳು ಬಾಯಾರಿ ಬಳಲಿದೋ-ತಂಗಮ್ಮ
ನಾ ಬಂದೆನು ತಂಗಿ ತೆಗಿ ಕದವಾ

ಕದಾವ ತೆಗೆಯಾಕೆ ತಂಗಿ ನಾನೆಂಗೆ ತೆಗೆಯಾಲಿ
ನಿನ್ನ ಮೈದುನ ತೋಳಲ್ಲಿ ವರಗವರೆ-ಅಕ್ಕಯ್ಯ
ಹೋಗೇ ಅಪ್ಪಾಜಿಯರ ಮನೆಗೆ

ಅಪ್ಪಾ ಬಾಗಿಲು ತೆಗೆ ಅಪ್ಪಾಜಿ ಬಾಗಿಲು ತೆರೆ
ನನ್ನ ಮಕ್ಕಳು ಬಾಯಾರಿ ಬಳಲಿದೊ-ನನ್ನ ತಂದೆ
ತಂದೆ ನೀವು ಕದಾವ ತೆಗಿರಿ ತಂದೆ

ಕದಾವ ತೆಗೆಯ್ಯಾಕೆ ಮಗಳೆ ನಾನೆಂಗೆ ತೆಗೆಯಾಲಿ
ನಿಮ್ಮ ತಾಯಿ ತೋಳಲ್ಲಿ ವರಗವಳೆ-ಉತ್ತರದೇವಿ

ಎದ್ದೆಂಗೆ ಕದಾವ ತೆಗೆಯಾಲಿ

ಹತ್ತೂರು ತಿರುಗಿದರೂ ನೆತ್ತೀಗೆ ಎಣ್ಣೆಯಿಲ್ಲಾ
ಒಬ್ಬಾರು ಕದಾವ ತೆಗಿನಿಲ್ಲಾ

ಮಗಳ ಸಂಕಟ ನೋಡಿ ತಾಯಿ ಏನು ಹೇಳುತಾರೆ
ಇತ್ತಾ ಕೇಳೇ ಕಂದಾ ನನ್ನ ಮಾತು

ಹಿಂದಾಲ ಕಾಲದಲ್ಲಿ ನನಗೂ ಈ ಸಾಗಿತ್ತು
ನಿಮ್ಮಪ್ಪಾ ನನ್ನ ಉರಿಸಿದಾರು-ಉತ್ತರದೇವಿ
ನನ್ನ ಸಾಗು ನಿನಗೇ ಒದಗೀತು-ಉತ್ತರದೇವಿ
ಹೋಗವ್ವ ಹಂಪೆ ಹೊಳೆಗಾಗಿ

ಒಂದಾನೆತ್ತಿಕೊಂಡು ಕಂದಾನ ಕೈಲಿ ಹಿಡ್ಕಂಡು
ಮಕ್ಕಳಾ ಸಂಕಟಾವ ಮಾಡತಾಳೆ-ಉತ್ತರದೇವಿ
ಹ್ವಾದಾಳೂ ಹಂಪೆ ಹೊಳೆಗಾಗಿ

ಹಂಪೆ ಹೊಳೆಗ್ಹೋಗಿ ಕಂದಾನ ಇಳಿಸ್ಯಾಳು
ಅಡ್ಡ ಬಿದ್ದು ಉದ್ದಾಕೆ ಏಳುತಾಳೆ-ಉತ್ತರದೇವಿ
ಪೂಜೆ ಮಾಡೋಣಾಂದರೆ ಹಣ್ಣಿಲ್ಲ ಕಾಯಿಲ್ಲಾ

ಇತ್ತ ಕೇಳೇ ಗಂಗವ್ವ ನನ ಮಾತು
ನನ್ನಂತ ಪಾಪಿಗೆ ಯಾರೂ ಇಲ್ಲಾ
ಯಾರು ಇಲ್ಲದವರಿಗೆ ನೀವೇ ತಂದೆ ತಾಯಿ
ನಾನು ನನ್ನ ಬಳಗಾವ ಒಳಕಳ್ಳಿ

ಅಡ್ಡ ಬೀಳುತಾಳೆ ಕೈಮುಗೀತಾಳೆ
ಪಟ್ಟೆ ಕಂಬಿಸೀರೆ ಜಳದಾಳೂ-ಉತ್ತರದೇವಿ
ಮಕ್ಕಳ ಕಣ್ಣಾ ಕಟ್ಟುತಾಳೆ

ಮಕ್ಕಳು ದುಃಖವಾ ಮಾಡುತ್ತವೆ
ಇದುವೇನೆ ತಾಯಿ ಅಪಸಕುನವು

ಈ ರೀತಿ ಮಾಡುವಕೆ ನಮ್ಮೇಕೆ ಸಾಕಿದಿರಿ
ಮುದ್ದು ಕೊಟ್ಟು ನಮ್ಮ ಕೊಲ್ಲಬಾರದೂ

ಮಕ್ಕಳ ನೋಡುತಾಳೆ ವಕ್ಕಳ ಸಂಕಟವ ಮಾಡಿ
ನೀವೆಲ್ಲಿ ಹೋತಿರೊ ನನ್ನ ಕಂದಾ-ಮಕ್ಕಳಿರಾ
ನನ್ನ ಜೊತೇಲಿ ಇರಬನ್ನಿ

ಹಂಗಂತಾವ ಹೇಳುತಾಳೆ ಮಕ್ಕಳಾ ಕಂಕಳಲ್ಲಿ ಎತ್ತಿ
ಒಂದೊಂದು ಮೆಟ್ಟಗಿ ಇಳಿದಾಳು-ಉತ್ತರದೇವಿ
ಗಂಗಮ್ಮ ತಾಯಿ ಒಳ್ಕಂಡರು

ಅತ್ತ ಹರಿಯಾಗಂಗೆ ಇತ್ತ ಹರಿಯವ್ವ
ಒತ್ತಿ ಹರಿಯವ್ವ ಸಿವಗಂಗೆ

ಎತ್ತ ಹರಿಯಾ ಗಂಗೆ ಇತ್ತ ಹರಿಯವ್ವ
ದಡ ಸೂಸಿ ಹರಿಯವ್ವ ಸಿವಗಂಗೆ

ಅತ್ತು ಹರಿಯಾ ಗಂಗೆ ಇತ್ತಾವು ಹರಿದಾಳು
ತುಂಬಿ ಹರಿದಾಳು ಸಿವಗಂಗೆ