ಹೊಸಗನ್ನಡ ಕಾವ್ಯ ಮತ್ತು ಅರ್ಧ ಶತಮಾನಕ್ಕೂ ಮೀರಿದ ಕಾಲದಲ್ಲಿ ಅತ್ಯಂತ ಸುಪುಷ್ಟವಾಗಿ ಮತ್ತು ವೈವಿಧ್ಯಮಯವಾಗಿ ಬೆಳೆದುದನ್ನು ಗಮನಿಸಿದರೆ, ಹಿಂದೆಂದೂ ಈ ಸಾಹಿತ್ಯ ಇಷ್ಟರಮಟ್ಟಿನ ಚಟುವಟಿಕೆಯನ್ನು ಪ್ರಕಟಿಸಿ ತೋರಲಿಲ್ಲ ಎನ್ನಿಸುತ್ತದೆ. ಯಾಕೆಂದರೆ, ಪಂಪನಿಂದ ಮುದ್ದಣನ ತನಕ ಹರಹಿರುವ ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ, ಕನ್ನಡದಲ್ಲಿ ಕಾವ್ಯ ನಿಜವಾಗಿಯೂ ಹೊಸ ದಾರಿಗಳಲ್ಲಿ ಹೊರಳಿದ್ದು ಶತಶತಮಾನಗಳಿಗೆ ಒಮ್ಮೆ ಎಂಬುದು ಸಾಹಿತ್ಯ ಚರಿತ್ರೆಯನ್ನು ಅಭ್ಯಾಸ ಮಾಡುವ ಯಾರಿಗಾದರೂ ತಿಳಿಯುತ್ತದೆ. ಆದರೆ ಈ ಐವತ್ತು ವರ್ಷಕ್ಕೂ ಮೀರಿದ ಹೊಸಗನ್ನಡ ಕಾವ್ಯ, ಪಶ್ಚಿಮದ ಪ್ರೇರಣೆಯಿಂದ ತನ್ನಲ್ಲಿ ಅಂತರ್ಗತವಾದ ಭಾರತೀಯ ಸತ್ವಕ್ಕೆ ಎಷ್ಟೊಂದು ವೈವಿಧ್ಯಪೂರ್ಣವಾದ ರೂಪಧಾರಣೆ ಮಾಡಿಸಿದೆ ಎಂಬುದು ಆಶ್ಚರ್ಯದ ಹಾಗೂ ಸಂತೋಷದ ವಿಷಯವಾಗಿದೆ.

ಅಭ್ಯಾಸದ ದೃಷ್ಟಿಯಿಂದ, ಈ ಕಾಲದ ಕಾವ್ಯವನ್ನು ನಾಲ್ಕು ಘಟ್ಟಗಳಾಗಿ ವಿಂಗಡಿಸಿ ನೋಡಬಹುದು. ಮುದ್ದಣನಿಂದ ಮೊದಲಾಗಿ, ಆಚಾರ್ಯ ಶ್ರೀಯವರ ‘ಇಂಗ್ಲಿಷ್‌ಗೀತೆ’ಗಳ ಮೂಲಕ, ಕನ್ನಡ ಕಾವ್ಯ ಹೊಸ ರೂಪಗಳನ್ನು ತಾಳಿದ ಮುಂಬೆಳಗಿನ ಕಾಲ ಮೊದಲನೆಯದು. ಎರಡನೆಯದು, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಿಂದ ಪ್ರೇರಣೆಗೊಂಡು, ಶ್ರೀಯವರ ನೂತನ ಹೆದ್ದಾರಿಯಲ್ಲಿ ನಡೆದು ಬಂದ ನವೋದಯ ಕಾವ್ಯ. ಮೂರನೆಯದು, ಯುರೋಪಿನಲ್ಲಿ ನಡೆದ  Progressive movement ಎಂಬುದರಿಂದ ಪ್ರಚೋದಿತವಾಗಿ, ನವೋದಯ ಕಾವ್ಯದೊಳಕ್ಕೆ ಸಮಾವೇಶಗೊಂಡರೂ, ತಕ್ಕಮಟ್ಟಿಗೆ ಗುರುತಿಸಬಹುದಾದ, ಹಾಗೂ ಮುಂದಿನ ‘ನವ್ಯಕಾವ್ಯ’ಕ್ಕೆ ನಾಂದಿಯಾದ ಪ್ರಗತಿಶೀಲ ಕಾವ್ಯ. ನಾಲ್ಕನೆಯದು, ಪಾಶ್ಚಾತ್ಯ ಕವಿಗಳಾದ ಎಲಿಯಟ್, ಆಡೆನ್ ಮೊದಲಾದವರಿಂದ ಸ್ಫೂರ್ತಿಗೊಂಡು ಸ್ವಾತಂತ್ರ್ಯೋತ್ತರ ಸಾಹಿತ್ಯದಲ್ಲಿ ಕಾಣಿಸಿಕೊಂಡು, ಪ್ರಚಲಿತವಾಗಿರುವ ನವ್ಯಕಾವ್ಯ.

ಈ ನಾಲ್ಕೂ ಘಟ್ಟಗಳಲ್ಲಿ ಹರಹಿದ ಹೊಸಗನ್ನಡದ ಕಾವ್ಯದ ಸಾಧನೆ ಸಿದ್ಧಿಗಳನ್ನು ಕುರಿತು ಸಾಕಷ್ಟು ವಿಚಾರ ವಿಮರ್ಶೆ ಕನ್ನಡದಲ್ಲಿ ಆಗಲೇ ಪ್ರಕಟವಾಗಿದೆ. ಅನೇಕ ವಿಚಾರ ವೇದಿಕೆಗಳ ಮೇಲೆ ಈ ವಿಷಯ ಚರ್ಚಿತವಾಗಿದೆ; ವಿಚಾರ-ವಿಮರ್ಶೆಗೆಂದೇ ಮೀಸಲಾದ ಹಲವು ಪತ್ರಿಕೆಗಳಲ್ಲಿ, ಕನ್ನಡ ಕಾವ್ಯವನ್ನು ಕುರಿತು ‘ಅವಲೋಕನ’ ‘ಸಮೀಕ್ಷೆ’ಗಳು ನಡೆದಿವೆ; ನಡೆಯುತ್ತಿವೆ ‘ನಡೆದುಬಂದ ದಾರಿ’ಯಂಥ ಕೃತಿಯಲ್ಲಿ ಸಾಹಸಮಯವಾದ ಈ ಸಮೀಕ್ಷೆ ನಡೆದಿದೆ. ಆದರೂ ಇದುವರೆಗೂ ಬಂದಿರುವ ಈ ಸಾಹಿತ್ಯಾವಲೋಕನ ಸರ್ವ ಸಮರ್ಪಕವಾಗಿದೆ ಎಂದು ಹೇಳುವಂತಿಲ್ಲ; ಜೊತೆಗೆ ಒಬ್ಬೊಬ್ಬ ಕವಿಯ ಕೃತಿಯನ್ನು ಕುರಿತ ಸಮರ್ಪಕವಾದ ವಿಮರ್ಶೆ ಇನ್ನೂ ಬರಬೇಕಾಗಿದೆ. ಒಟ್ಟಿನಲ್ಲಿ ಪುನರಾವಲೋಕನ ರೂಪದ, ಮೌಲ್ಯದ ಪುನರ್ನಿರ್ಧಾರದ ಕಾರ್ಯ ನಡೆಯಬೇಕಾಗಿದೆ. ಆದರೆ, ಈ ಲೇಖನದಲ್ಲಿ ಅಂಥ ಆ ಪುನರಾವಲೋಕನ ಕಾರ್ಯವನ್ನು ಮಾಡುವ ಉದ್ದೇಶವಿಲ್ಲ; ಅಥವಾ ಮತ್ತೆ ಈ ನಾಲ್ಕು ಘಟ್ಟಗಳಲ್ಲಿ ಬಂದ ಕನ್ನಡ ಕಾವ್ಯವನ್ನು ಕುರಿತು, ಹೊಸದಾಗಿ ಹೇಳತಕ್ಕದ್ದು ಏನೂ ಇಲ್ಲ. ಆದಕಾರಣ, ಕವಿಗಳ ಹಾಗೂ ಕಾವ್ಯಗಳ ಹೆಸರುಗಳನ್ನು ಎಣಿಸಿ ಪಟ್ಟಿಹಾಕುವ ಯಾವ ಕಾರ್ಯವನ್ನೂ ಮಾಡದೆ, ಕೆಲವು ಬೇರೆಯ ಮಾತುಗಳನ್ನು ಹೇಳಲಾಗಿದೆ.

ಇಲ್ಲಿ ಮುಖ್ಯವಾಗಿ ನಾವು ಹೇಳಲು ಇಷ್ಟಪಡುವುದು, ಈ ಹೊಸಗನ್ನಡ ಕಾವ್ಯ ಹಂತ ಹಂತದಲ್ಲೂ ಪಾಶ್ಚಾತ್ಯ ಕಾವ್ಯದ ಪ್ರೇರಣೆಯಿಂದಲೇ ಹೊಸರೂಪಗಳನ್ನು ಆವಿಷ್ಕಾರ ಮಾಡಿಕೊಂಡಂತೆ ತೋರುವುದಾದರೂ ಈ ಎಲ್ಲ ಪ್ರಯೋಗಗಳ ಹಿಂದೆ, ಇಡೀ ಕನ್ನಡ ಸಾಹಿತ್ಯದ ಪರಂಪರೆಯೆ ಒಂದು ರೀತಿಯಲ್ಲಿ ಪುನರವತರಣಗೊಂಡಿದೆ ಎನ್ನುವುದು. ಈ ಎಲ್ಲ ಪ್ರಯೋಗಗಳ ಮೂಲ ಉದ್ದೇಶ, ಪರಂಪರೆಯ ಸೆಳೆತದಿಂದ ತಪ್ಪಿಸಿಕೊಂಡು, ಹೊಸತೊಂದನ್ನು ನಿರ್ಮಾಣ ಮಾಡುವ ಪ್ರಯತ್ನವೇ ಆಗಿದ್ದರೂ, ಜ್ಞಾತವಾಗಿಯೋ ಅಜ್ಞಾತವಾಗಿಯೋ ಕನ್ನಡ ಕವಿಗಳು ತಮ್ಮ ಹಿಂದಿರುವ ಕಾವ್ಯ ಪರಂಪರೆಯಿಂದ ಅನೇಕ ಸೂಚನೆಗಳನ್ನೂ ನಿರ್ದೇಶನಗಳನ್ನೂ ಪಡೆದಿದ್ದಾರೆ-ಎನ್ನುವ ಸಂಗತಿ, ನಾವು ಕೇವಲ ಪರಾನುಕರಣೆಯಿಂದಾಗಲಿ ಪರಾನುಸರಣತೆಯಿಂದಾಗಲಿ ಕಾವ್ಯಕ್ಕೆ ಹೊಸತನವನ್ನು ತಂದುಕೊಳ್ಳಲಿಲ್ಲ; ಈ ಪ್ರಯೋಗ ನವೀನ ಹಾಗೂ ಪ್ರಾಚೀನ ಪ್ರಜ್ಞೆಯ ಸಂಘರ್ಷ ಸಮನ್ವಯಗಳಿಂದ ಸ್ಫೂರ್ತಗೊಂಡದ್ದು ಎನ್ನುವುದನ್ನು ದೃಢಪಡಿಸುತ್ತದೆ.

ನವೋದಯ ಕಾವ್ಯದಿಂದ ನವ್ಯಕಾವ್ಯದ ತನಕ ಬಂದ ಕಾವ್ಯಪ್ರಯೋಗಗಳ ಒಳಗೆ, ಕನ್ನಡದಲ್ಲಿ ಹತ್ತನೆಯ ಶತಮಾನದಿಂದ ೧೯ನೆಯ ಶತಮಾನದ ತನಕ ಪ್ರಚಲಿತವಾದ ಎಷ್ಟೋ ಕಾವ್ಯರೂಪಗಳ ಛಾಯೆಯನ್ನು ಪ್ರಚೋದನೆಗಳನ್ನೂ ಗುರುತಿಸಬಹುದಾಗಿದೆ. ಚಂಪೂ, ವಚನ, ರಗಳೆ, ಸಾಂಗತ್ಯ, ಷಟ್ಪದಿ, ತ್ರಿಪದಿ ಇತ್ಯಾದಿ ಕಾವ್ಯ ಪ್ರಕಾರಗಳಲ್ಲಿ ಪ್ರವಹಿಸಿದ ಆ ಪ್ರಾಯೋಗಿಕ ಚೈತನ್ಯ, ಹೊಸಗನ್ನಡ ಕವಿಯಲ್ಲೂ ಪ್ರವಹಿಸದೆ ಇಲ್ಲ; ಅವರಿಗೆ ಪ್ರೇರಣೆಯೋ ಸ್ಫೂರ್ತಿಯೋ ಆಗಿ, ತನ್ನ ಹೊಳಹನ್ನು ತೋರಿಸಿಕೊಳ್ಳದೆ ಇಲ್ಲ. ಹಿಂದಿನ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಸ್ಥಳವನ್ನು ಆಕ್ರಮಿಸಿಕೊಂಡ ಪ್ರಕಾರಗಳೆಂದರೆ ಚಂಪೂ ಷಟ್ಪದೀ ಪ್ರಕಾರಗಳೆ. ಚಂಪೂ ಕಾವ್ಯದ ಮುಖ್ಯ ಲಕ್ಷಣವೆಂದರೆ, ಸಂಸ್ಕೃತ ಭೂಯಿಷ್ಠವಾದ, ಪ್ರೌಢ-ಗಂಭೀರ ಭಾಷೆಯ ಪ್ರಯೋಗ, ಕಂದ-ವೃತ್ತಗಳ ವಿಜೃಂಭಣೆ ಎನ್ನಬಹುದು. ಹೊಸಗನ್ನಡ ಕಾವ್ಯದಲ್ಲಿ ಮುಂಬೆಳಗು ತಲೆದೋರುವ ಕಾಲದಲ್ಲಿ, ಕಂದ-ವೃತ್ತಗಳೂ, ಷಟ್ಪದಿಗಳೂ ಸಾಕಷ್ಟು ವ್ಯಾಪಕವಾದ ಪ್ರಭಾವವನ್ನು ಲೇಖಕರ ಮೇಲೆ ಇರಿಸಿಕೊಂಡಿದ್ದವು. ಮುಂಬೆಳಗಿನ ಕವಿಗಳಿಗೆ ಇದ್ದ ಸಿದ್ಧರೂಪಗಳು, ಚಂಪೂ-ಷಟ್ಪದೀ ಪರಂಪರೆಯಿಂದ ಪ್ರಾಪ್ತವಾದವು. ಆದಕಾರಣದಿಂದಲೇ ಆ ಕಾಲದಲ್ಲಿ ಇಂಗ್ಲಿಷ್ ಕಾವ್ಯಗಳಿಂದ ಪ್ರಚೋದನೆಗೊಂಡು, ಕನ್ನಡದಲ್ಲಿ ಹೊಸತನವನ್ನು ತರಲು ಪ್ರಯತ್ನಿಸಿದವರೆಲ್ಲಾ ಬಹುಮಟ್ಟಿಗೆ, ಕಂದ-ವೃತ್ತಗಳಲ್ಲಿ ಷಟ್ಪದಿಗಳಲ್ಲಿ ಷೇಕ್ಸ್‌ಪಿಯರ್ ಮೊದಲಾದ ಇಂಗ್ಲಿಷ್ ಕವಿಗಳನ್ನು ಅನುವಾದಿಸಲು ಮೊದಲುಮಾಡಿದರು. ದ್ವಿತೀಯಾಕ್ಷರ ಪ್ರಾಸಪರಿಪಾಲನೆ ಮತ್ತು ಗಂಭೀರವಾಗಿಯೂ ಪ್ರೌಢವಾಗಿಯೂ ಹೇಳಬೇಕೆನ್ನುವ ಪ್ರವೃತ್ತಿ ಇವುಗಳಲ್ಲಿ, ಈ ಹಳೆಯ ಬಂಧಗಳ ಪುನರಾವರ್ತನೆಯನ್ನು ಕಾಣಬಹುದಾಗಿದೆ. ಸ್ವಾರಸ್ಯದ ಸಂಗತಿ ಎಂದರೆ, ೧೯೪೦ರ  ತನಕವೂ ಬೇಂದ್ರೆಯವರಲ್ಲಿ ಷಟ್ಪದಿಯನ್ನು ಕುರಿತು ಒಲವಿತ್ತು ಎಂಬುದನ್ನು ಅವರ ಕೃತಿಗಳಲ್ಲಿ ಗುರುತಿಸಬಹುದಾಗಿದೆ; ಅಷ್ಟೇ ಅಲ್ಲ, ನವ್ಯಕಾವ್ಯದ ಅಧ್ವರ್ಯುವಾದ ಗೋಪಾಲಕೃಷ್ಣ ಅಡಿಗರ ಮೊದಲ ಸಂಗ್ರಹದಲ್ಲಿ ಷಟ್ಪದಿಯ ಪ್ರಯೋಗವನ್ನು ಕಾಣಬಹುದು. ಆದರೆ ಯಾವಾಗ ಗೋವಿಂದ ಪೈಗಳು ೧೯೧೧ ರಷ್ಟು ಹಿಂದೆಯೇ ‘ಪ್ರಾಸತ್ಯಾಗದ ಧೀರ ನಿರ್ಧಾರ’ವನ್ನು ಕೈಕೊಂಡರೋ, ಅಂದೇ ಕನ್ನಡಕಾವ್ಯದಲ್ಲಿ ನಿಜವಾದ ನಾವೀನ್ಯತೆ ಕಾಣಿಸಿಕೊಂಡಿತು. ಜೊತೆಗೆ ಯಾವಾಗ ಆಚಾರ‍್ಯಶ್ರೀಯವರು ‘ಇಂಗ್ಲಿಷ್‌ಗೀತೆಗಳ’ ಮೂಲಕ ನೂತನ ಛಂದೋರೂಪಗಳ ನಿರ್ದೇಶನವನ್ನು ನೀಡಿ, ಪೈಗಳು ತೆರೆದ ಕೋಡಿಯನ್ನು ಹಿಗ್ಗಿಸಿ ಹೊಸ ನೀರನ್ನು ನುಗ್ಗಿಸಿದರೋ, ಆಗ ನವೋದಯ ಕಾವ್ಯ ತನ್ನ ಪಾತ್ರವನ್ನು ಕಂಡುಕೊಂಡು ಪ್ರವಹಿಸತೊಡಗಿತು.

ಹೊಸ ಕಾವ್ಯ ತನ್ನ ರೂಪಗಳಲ್ಲಿ ತೀರಾ ಹೊಸತೆಂಬಂತೆ ತೋರಿದರೂ, ಕನ್ನಡದಲ್ಲಿ ಪ್ರಚಲಿತವಾದ ಛಂದೋ ರೂಪಗಳಿಗೆ ಅದು ಒಂದು ಹೊಸ ಮೈಕಟ್ಟನ್ನು ಕೊಟ್ಟುಕೊಂಡಿದೆ ಎಂಬುದನ್ನು ಯಾರಾದರೂ ಕಾಣಬಹುದು. ನಿದರ್ಶನಕ್ಕೆ ಶ್ರೀಯವರೇ ತಮ್ಮ ‘ಇಂಗ್ಲಿಷ್ ಗೀತ’ಗಳಲ್ಲಿ ಬಳಸಿರುವ ಷಟ್ಪದಿ ಹಿಂದಿನ ಷಟ್ಪದಿಯ ಏಕತಾನತೆಯನ್ನೊಡೆದು ನೂತನ ವಿನ್ಯಾಸವನ್ನು ಪಡೆದಿರುವುದನ್ನು ಕಾಣಬಹುದು.

ಹೊಸಗನ್ನಡದಲ್ಲೂ ಶುದ್ಧ ‘ಚಂಪೂ’ವನ್ನು ಪುನರಾವರ್ತಿಸುವ ಕಾರ್ಯ ನಡೆದಿದೆ. ಕೇಶವಭಟ್ಟರ ‘ಸತ್ವಾಲೋಕನಂ’ ಇದಕ್ಕೆ ನಿದರ್ಶನವಾಗಿದೆ. ಈ ಕೃತಿಯ ಪ್ರಾಯೋಗಿಕ ಮಹತ್ವವಷ್ಟನ್ನೇ ಮೆಚ್ಚಬಹುದೆ ಹೊರತು, ಈ ‘ರೂಪ’ಗಳು ಇಂದಿನ ಸಂವೇದನೆಗಳಿಗೆ ಸಮರ್ಪಕವಾದ ಮಾಧ್ಯಮವಾಗಲಾರವು ಎಂದು ಹೇಳಬೇಕಾಗಿದೆ.  ಮತ್ತೆ ಈ ‘ಚಂಪೂ’ ರೂಪವನ್ನು ಹೊಸಗನ್ನಡದಲ್ಲಿ ಬೇರೊಂದು ಬಗೆಯಲ್ಲಿ ತರಲು ಯತ್ನಿಸಿದರು ವಿ.ಕೃ.ಗೋಕಾಕರು. ಅವರ ‘ತ್ರಿವಿಕ್ರಮರ ಆಕಾಶಗಂಗೆ’  ಮತ್ತು ‘ಇಂದಿಲ್ಲ ನಾಳೆ’-ಈ ಕೃತಿಗಳನ್ನು ಗೋಕಾಕರು ‘ಹೊಸಬಗೆಯ ಚಂಪೂ ಕಾವ್ಯ’ ಎಂದು ಕರೆದಿದ್ದಾರೆ. ಗದ್ಯದಲ್ಲಿ ಒಂದಷ್ಟು ಪಕ್ಕ ಪಕ್ಕದಲ್ಲಿ ಬರೆದರೆ ‘ಚಂಪೂ’ವಾಗುತ್ತದೆ ಎಂಬ ಭಾವನೆಯಿಂದ,  ಪದ್ಯದಲ್ಲಿ ಒಂದಷ್ಟು ಗೋಕಾಕರು ಇವನ್ನು ‘ಹೊಸ ಬಗೆಯ ಚಂಪೂ’ ಎಂದು ಕರೆದಿರಬಹುದು. ಆದರೆ ಚಂಪು ಎಂದರೆ ಗದ್ಯ-ಪದ್ಯ ಮಿಶ್ರಿತವಾದುದೆಂಬುದು ನಿಜವಾದರೂ, ಅಲ್ಲಿ ಗದ್ಯ ಪದ್ಯಗಳನ್ನು ಬೇರೆ ಬೇರೆಯಾಗಿ-ಗೋಕಾಕರ ಚಂಪೂಕಾವ್ಯದಲ್ಲಿನ ಹಾಗೆ-ತೆಗೆದಿರಿಸಲು ಬರುವುದಿಲ್ಲ. ಗದ್ಯ-ಪದ್ಯವೆರಡೂ ಒಂದರ ಜತೆಗೊಂದು, ಕಥೆಯ ಉದ್ದೇಶಕ್ಕೆ ಅವಿನಾಭಾವದಿಂದ ಹೊಂದಿಕೊಂಡು ಬರುತ್ತವೆ. ಇಲ್ಲಾದರೆ, ಗದ್ಯವೇ ಬೇರೆಯಾಗಿ, ಪದ್ಯವೇ ಬೇರೆಯಾಗಿ ಬಂದು,ಎಲ್ಲವನ್ನೂ ಪದ್ಯದಲ್ಲೇ ಬರೆಯಬಹುದಾಗಿತ್ತು ಅಥವಾ ಗದ್ಯದಲ್ಲೇ ಬರೆಯಬಹುದಾಗಿತ್ತು ಎನ್ನಿಸುವ ಭಾವನೆಯನ್ನು ಕೊಡುವುದರಿಂದ ಈ ‘ಹೊಸ ಬಗೆಯ ಚಂಪೂ ಕಾವ್ಯ’ ಕೇವಲ ಕುತೂಹಲಕ್ಕೆ ಮಾತ್ರ ಪಾತ್ರವಾಗಬಹುದು.

ಒಟ್ಟಿನಲ್ಲಿ ಹಿಂದೆ ಅತ್ಯಂತ ಪ್ರಭಾವಶಾಲಿಯಾದ ಈ ಚಂಪೂ ಪ್ರಕಾರ, ನವೋದಯ ಕವಿಗಳ ಕಾವ್ಯದ ಮೇಲೆ ತನ್ನ ಪ್ರಭಾವವನ್ನು ಬೀರದೆ ಇಲ್ಲ. ಕುವೆಂಪು, ಪು.ತಿ.ನ. ಇಂತಹ ಕವಿಗಳಲ್ಲಿ ಕಂಡುಬರುವ ಸಂಸ್ಕೃತ ಸಮಾಸ ಭೂಯಿಷ್ಠ ಪದಬಂಧಗಳು ನಮಗೆ ಹಿಂದಿನ ಚಂಪೂ ಕವಿಗಳನ್ನು ಅಲ್ಲಲ್ಲಿ ನೆನಪಿಗೆ ತಾರದೆ ಇರುವುದಿಲ್ಲ.

ಹಾಗೆ ನೋಡಿದರೆ,ನವೋದಯ ಕಾವ್ಯದಿಂದ ನವ್ಯ ಕವಿಗಳ ತನಕವೂ ವಿಶೇಷ ಮೆಚ್ಚಿಗೆಗೆ, ಮತ್ತು ಪ್ರಭಾವವನೊಡ್ಡಿದ್ದು ‘ಮಾರ್ಗ’ ಪರಂಪರೆಗಿಂತ ‘ದೇಸೀ’ ಪರಂಪರೆಯೆ. ಕಾರಣ, ನವೋದಯ ಕವಿಗಳಾಗಲಿ, ನವ್ಯ ಕವಿಗಳಾಗಲಿ ವಿಶೇಷವಾಗಿ ಒತ್ತಿ ಹೇಳಿದ್ದು ಕಾವ್ಯದ ಭಾಷೆ ತನ್ನ ಪ್ರೌಢ ನಿಲುವನ್ನು ವರ್ಜಿಸಿ ಮಾತನಾಡುವ ಭಾಷೆಗೆ ಹತ್ತಿರವಾಗಬೇಕು ಎನ್ನುವುದನ್ನು. ಇದೇ ಉದ್ದೇಶವನ್ನು  ರೂಪಕ್ಕೆ ಇಳಿಸಿದ ನಮ್ಮ ಹಿಂದಿನ ಕಾವ್ಯ ಪ್ರಕಾರಗಳೆಂದರೆ ‘ದೇಸೀ’ಯಲ್ಲಿ ಬಂದ ವಚನ- ರಗಳೆ-ಸಾಂಗತ್ಯ-ತ್ರಿಪದಿ-ಕೀರ್ತನೆ ಇತ್ಯಾದಿಗಳು. ಇವುಗಳಲ್ಲಿ  ರಗಳೆಯ ಪ್ರಭಾವವನ್ನು ಮೊದಲು ಪರಿಶೀಲಿಸೋಣ: ರಗಳೆ-ಹರಿಹರನಿಂದ ಒಂದು ವಿಶಿಷ್ಟತೆಯನ್ನು ಪಡೆದ ರಗಳೆ-ಕಥನ ಕವನಕ್ಕೆ ಅತ್ಯಂತ ಸೊಗಸಾದ ಮಾಧ್ಯಮವಾಯಿತು. ನವೋದಯ ಕಾವ್ಯದಲ್ಲಿ, ಹರಿಹರನನ್ನು ನೆನಪಿಗೆ ತರುವಂತೆ, ಮಂದಾನಿಲ ರಗಳೆಯನ್ನು ಯಥಾವತ್ತಾಗಿ ತಂದವರು ಪು.ತಿ.ನ.-ತಮ್ಮ ಗಣೇಶ ದರ್ಶನದಲ್ಲಿ. ಪು.ತಿ.ನ. ಅವರು ‘ರಗಳೆ’ಯ ಇನ್ನಿತರ ಪ್ರಯೋಗಗಳನ್ನು ಅವರ ಬೇರೆಯ ಬಿಡಿ ಪದ್ಯಗಳಲ್ಲೂ ಮಾಡಿದ್ದಾರೆ.  ಹರಿಹರನ ರಗಳೆಯ ರೂಪ ನಮ್ಮಲ್ಲಿತ್ತು; ಆದರೆ ಅದು ಪಾದಾಂತ್ಯದಲ್ಲಿ ಬಹುಮಟ್ಟಿಗೆ ನಿಂತಹಾಗೆ ತೋರುತ್ತಿತ್ತು. ಇದನ್ನು ಪಾದಾಂತ್ಯದಲ್ಲಿ ನಿಲ್ಲಿಸದೆ, ಮುಂದುವರಿಯುವಂತೆ ಯಾಕೆ ಮಾಡಿಕೊಳ್ಳಬಾರದೆಂಬಯೋಚನೆ ನಮ್ಮವರಿಗೆ ಬಂದದ್ದು ಇಂಗ್ಲಿಷಿನ blank verse ಅನ್ನು ನೋಡಿದಮೇಲೆಯೇ. ಈ ರೀತಿಯ ಪ್ರಯೋಗ ಮಾಡಿದವರು ಮಾಸ್ತಿ, ಕುವೆಂಪು, ಪು.ತಿ.ನ. ಇವರು. ಅದರಲ್ಲೂ ಕುವೆಂಪು ಅವರು ಮೊದಲು ರೂಪಿಸಿಕೊಂಡ ಈ ಸರಳ ರಗಳೆ, ಕ್ರಮೇಣ ‘ರಾಮಾಯಣ ದರ್ಶನಂ’ದಲ್ಲಿ ‘ಮಹಾ ಛಂದಸ್’ ಆಗಿ ಮಾರ್ಪಟ್ಟುದು ವಿಶೇಷವಾದ ಸಂಗತಿಯಾಗಿದೆ. ಈ ದೃಷ್ಟಿಯಿಂದ ನೋಡಿದರೆ, ಹಿಂದಿನ ರಗಳೆಯ ಪರಂಪರೆ ಆಧುನಿಕ ಕಾಲದಲ್ಲಿ, ಹೇಗೆ ಹೊಸ ರೂಪದ ಆವಿಷ್ಕಾರಕ್ಕೆ ಹಿನ್ನೆಲೆಯಾಯಿತೆಂಬ ಸಂಗತಿ ಸ್ಪಷ್ಟವಾಗುತ್ತದೆ.

ಇನ್ನು ವಚನ : ಆಡುಮಾತನ್ನೇ ಕಾವ್ಯದ ನೆಲೆಗೆ ಏರಿಸಿದ, ಮುಕ್ತ ಛಂದದ, ವಿಮರ್ಶನ ಪ್ರಜ್ಞೆಯ ಅಭಿವ್ಯಕ್ತಿಯಾದ ವಚನ ಪ್ರಕಾರ, ಹೊಸಗನ್ನಡ ಕಾವ್ಯ ಪ್ರಯೋಗದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರಿದೆ.  ವಚನ ವಾಙ್ಮಯದ ಈ ಪ್ರಭಾವ ಹೊಸಗನ್ನಡದ ಮೇಲೆ ಎರಡು ರೀತಿಯಲ್ಲಿ ಆಗಿದೆ.  ಒಂದು, ಹಿಂದಿನಂತೆಯೇ ಹೊಸಗನ್ನಡದಲ್ಲೂ ಅದು ಬೇರೊಂದು ನಾವೀನ್ಯತೆಯಿಂದ ಪ್ರಕಟವಾಗಿ ಪುನರಭಿವ್ಯಕ್ತವಾಗಿದೆ ; ಎರಡು, ಕನ್ನಡದಲ್ಲಿ ಮುಕ್ತ ಛಂದೋ ವಿಧಾನಕ್ಕೆ ಪ್ರೇರಣೆಯಾಗಿ, ‘ನವ್ಯಕಾವ್ಯ’ದ ರೂಪಾಂಶವನ್ನು ಸಿದ್ಧಪಡಿಸುವಲ್ಲಿ ಒದಗಿ ಬಂದಿದೆ.

‘ವಚನ’ ತನ್ನ ಪೂರ್ವ ಸ್ಥಿತಿಯಲ್ಲಿ ಕಾಣಿಸಿಕೊಂಡದ್ದು ಎಸ್.ವಿ. ರಂಗಣ್ಣನವರ ‘ರಂಗ ಬಿನ್ನಪ’ದಲ್ಲಿ. ಮೂಲತಃ ಸ್ವವಿಮರ್ಶನ ಪ್ರಜ್ಞೆಯನ್ನು ಹಿನ್ನೆಲೆಯಾಗಿರಿಸಿಕೊಂಡು ಹೊಮ್ಮಿದ ಅಂದಿನ ವಚನಗಳು, ಹೊಸಗನ್ನಡದಲ್ಲಿ ವಿಮರ್ಶನ ಪ್ರಜ್ಞೆಯೊಂದನ್ನು ಮೊಟ್ಟಮೊದಲು ಪ್ರಕಟಿಸಿಕೊಂಡ ರಂಗಣ್ಣನವರ ಕೈಯಲ್ಲಿ ಪುನರಾವರ್ತನೆಗೊಂಡಿವೆ. ಆದರೆ ಒಂದು ವ್ಯತ್ಯಾಸ-ವಚನಕಾರರ ವಚನಾಭಿವ್ಯಕ್ತಿಯ ಉದ್ದೇಶ ಮೂಲತಃ ಧಾರ್ಮಿಕ ಹಾಗೂ ಸಾಮಾಜಿಕ; ಆದರೆ ರಂಗಣ್ಣನವರಲ್ಲಿ ಅದು ವೈಚಾರಿಕ ಹಾಗೂ ಸಾಹಿತ್ಯಕ. ಈಚೆಗೆ ಶ್ರೀ ಎಸ್.ವಿ. ಪರಮೇಶ್ವರ ಭಟ್ಟರ ‘ಉಪ್ಪು ಕಡಲು’ ಮತ್ತೆ ವಚನ ರಚನೆಯ ಪರಂಪರೆಯನ್ನು ಮುಂದುವರಿಸಿದೆ. ಅದರಲ್ಲಿಯೂ ಸಿದ್ಧಯ್ಯ ಪುರಾಣಿಕರ ‘ವಚನೋದ್ಯಾನ’, ‘ವಚನ ನಂದನ’ ದಂತಹ ಕೃತಿಗಳು ವಚನ ಪ್ರಕಾರವನ್ನು ಆಧುನಿಕ ಸಂವೇದನೆಯಲ್ಲಿ ಬಳಸಿದ ಸೃಜನಾತ್ಮಕ ಪ್ರಯೋಗಗಳಾಗಿವೆ. ಇದರ ಜತೆಗೆ ಕುವೆಂಪು ಅವರ ‘ಕಿಂಕಿಣಿ’, ಆನಂದರ ‘ಪಕ್ಷಿಗಾನ’ ಮತ್ತು ರಂಗನಾಥ ದಿವಾಕರ ಅವರ ‘ಅಂತರಾತ್ಮನಿಗೆ’-ಇವುಗಳೂ ರೂಪದಲ್ಲಿ ಹಿಂದಿನ ವಚನಗಳನ್ನೇ ಹೋಲುವಂತೆ ತೋರಿದರೂ, ಇವುಗಳು ಸ್ಪಷ್ಟವಾಗಿ, ಹಿಂದಿನ ಪರಂಪರೆಯಿಂದ ಭಿನ್ನವಾಗಿ, ರವೀಂದ್ರರ ‘ಗೀತಾಂಜಲಿ’, ವಾಲ್ಟ್‌ವಿಟ್‌ಮನ್ನನ Leaves of Grass ಇವುಗಳಿಂದ ಪ್ರೇರಣೆ ಪಡೆದಂತೆ ತೋರುತ್ತವೆ.

ಹೊಸಗನ್ನಡದಲ್ಲಿ ತನ್ನ ಹಿಂದಿನ ರೂಪದಲ್ಲೇ ಕಾಣಿಸಿಕೊಂಡ ವಚನ ವಾಙ್ಮಯ, ಕನ್ನಡದ ಮುಕ್ತ ಛಂದಸ್ಸಿನ ರಚನೆಗೂ ಪ್ರೇರಣೆಯಾಯಿತೆಂಬುದು ಮಹತ್ವದ ವಿಚಾರವಾಗಿದೆ.ಕನ್ನಡದಲ್ಲಿ ಮುಕ್ತ ಛಂದಸ್ಸಿನ ಪ್ರಯೋಗವನ್ನು ಮೊಟ್ಟಮೊದಲು ಗೋಕಾಕರ ‘ಸಮುದ್ರ ಗೀತೆ’ಗಳಲ್ಲಿ ಕಾಣಬಹುದು. (ಬೇಂದ್ರೆಯವರ ಕರುಳಿನ ವಚನಗಳು-‘ಉಯ್ಯಾಲೆ’ ಕವನ ಸಂಗ್ರಹದಲ್ಲಿ-ಇದಕ್ಕೂ ಮುನ್ನ ಬಂದಿದ್ದವೆಂದು ಹೇಳುತ್ತಾರೆ.) ಸಮುದ್ರ ಗೀತೆಗಳು ನೇರವಾಗಿ ‘ವಚನ’ಗಳಿಂದಲೇ ಪ್ರೇರಣೆಗೊಂಡವೆಂದು, ಅವುಗಳ ವಿನ್ಯಾಸವನ್ನು ನೋಡಿದರೆ, ಭಾಷೆಯ ಹಾಸು-ಬೀಸುಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ಗೋಕಾಕರ ಈ ಮುಕ್ತ ಛಂದೋರೂಪಗಳು ಮುಂದೆ ಬಂದ ನವ್ಯಕಾವ್ಯದ ಅಭಿವ್ಯಕ್ತಿಯ ರೂಪಗಳನ್ನು ಪ್ರತಿಬಿಂಬಿಸುವಂತಿವೆ. ಹೀಗೆ ಹೊಸಗನ್ನಡದಲ್ಲಿ, ನವೋದಯ ಕಾವ್ಯದ ನಂತರ ಬಂದ ಪ್ರಮುಖ ಕಾವ್ಯಮಾರ್ಗವಾದ ನವ್ಯಕಾವ್ಯಕ್ಕೆ ವಚನ ವಾಙ್ಮಯ ಪರೋಕ್ಷವಾದ ಪ್ರೇರಣೆಯಾಗಿದೆ. ಅಷ್ಟೇ ಅಲ್ಲ, ನವ್ಯ ಕವಿಗಳಲ್ಲಿ ಕಂಡುಬರುವ ವೈಚಾರಿಕತೆ ಹಾಗೂ ಭಾಷಾ ಪ್ರಜ್ಞೆ, ಹಿಂದೆ ವಚನಕಾರರಲ್ಲಿ ಕಂಡ ವೈಚಾರಿಕತೆ ಹಾಗೂ ಭಾಷಾ ಪ್ರಜ್ಞೆಗೆ ಸಂವಾದಿಯಾಗಿವೆ.

ಇನ್ನು ತ್ರಿಪದಿ, ಸಾಂಗತ್ಯಗಳೂ ಸಹ ಹೊಸಗನ್ನಡ ಕಾವ್ಯದಲ್ಲಿ ಪುನಃ ಕಾಣಿಸಿಕೊಂಡಿವೆ. ಜಯದೇವಿತಾಯಿ ಲಿಗಾಡೆಯವರ ‘ಸಿದ್ಧರಾಮೇಶ್ವರ ಪುರಾಣ’ ತ್ರಿಪದಿಯಲ್ಲಿ ರಚಿತವಾದ ವಿಸ್ತಾರವಾದ ಕೃತಿ. ಸಾಂಗತ್ಯ ಛಂದಸ್ಸನ್ನು ವಿಶೇಷತಃ ಮತ್ತೆ ಬಳಕೆಗೆ ತಂದವರು ಎಸ್.ವಿ. ಪರಮೇಶ್ವರ ಭಟ್ಟರು. ಅವರ ‘ಇಂದ್ರಚಾಪ’, ‘ಚಂದ್ರವೀಧಿ’ ಇದಕ್ಕೆ ಒಳ್ಳೆಯ ನಿದರ್ಶನವಾಗಿದೆ.

ಹೊಸಗನ್ನಡ ಕಾವ್ಯ ಪಡೆದ ಪ್ರಮುಖ ಪ್ರೇರಣೆಗಳಲ್ಲಿ ಜಾನಪದ ಸತ್ವವು ಬಹು ಮುಖ್ಯವಾದದ್ದು. ಬದುಕನ್ನು ಯಾವ ಸಂಕೋಚವೂ ಇಲ್ಲದೆ, ತೀವ್ರವಾಗಿ ಅನುಭವಿಸಿ, ಭಾಷೆಯ ಬಳಕೆಯಲ್ಲಿಯೂ ಯಾವ ಮಡಿವಂತಿಕೆನ್ನೂ ಇರಿಸಿಕೊಳ್ಳದೆ, ಸಹಜವಾಗಿ ತಮ್ಮ ಭಾವನೆಗಳನ್ನು ತೋಡಿಕೊಂಡ ಜಾನಪದ ಕಾವ್ಯ ಎನ್ನುವುದು, ತೀರಾ ಹಿಂದಿನಿಂದಲೂ ಪ್ರವಹಿಸಿ ಬಂದಿದೆ. ಹಿಂದಿನ ಮಾರ್ಗ ಕವಿಗಳು ಅಲ್ಲಲ್ಲಿ ಇದರ ಸ್ಪರ್ಶಕ್ಕೆ ಒಳಗಾಗಿದ್ದರೂ, ಕ್ವಚಿತ್ತಾಗಿ ಜಾನಪದ ಛಂದಸ್ಸುಗಳನ್ನು ನಡುನಡುವೆ ತಂದಿದ್ದರೂ, ಈ ಸತ್ವವನ್ನು ತಮ್ಮ ಕಾವ್ಯದ ಮೂಲಪ್ರೇರಣೆಯನ್ನಾಗಿ ಮಾಡಿಕೊಂಡದ್ದು ಕಡಮೆ. ಆದರೆ ಆಧುನಿಕ ಕಾವ್ಯದಲ್ಲಿ ಮಾತ್ರ ನಾವು ಈ ಜಾನಪದ ಪ್ರೇರಣೆಯನ್ನು ಬೇಂದ್ರೆ, ಕೆ.ಎಸ್.ನ., ರಾಜರತ್ನಂ ಮತ್ತು ಕಂಬಾರ ಅವರ ಕವಿತೆಗಳಲ್ಲಿ ಗುರುತಿಸಬಹುದಾಗಿದೆ. ಬೇಂದ್ರೆಯವರ ಕಾವ್ಯದ ಮೂಲಪ್ರೇರಣೆಯೇ ಜಾನಪದ ಸತ್ವ ಎನ್ನುವಷ್ಟರಮಟ್ಟಿಗೆ, ಅವರ ಕವಿತೆಗಳ ವಸ್ತು-ಭಾಷೆ-ಛಂದಸ್ಸುಗಳು ಸಾಕ್ಷಿ ನುಡಿಯುತ್ತವೆ. ಜಾನಪದ ಕಾವ್ಯದ ಎಲ್ಲಾ ತಿರುವು-ಮುರಿವುಗಳನ್ನೂ, ಗತ್ತು-ಗಮ್ಮತ್ತುಗಳನ್ನೂ ಬೇಂದ್ರೆಯವರ ಕವಿತೆ ಪ್ರಕಟಿಸುತ್ತದೆ. ಕೇವಲ ಕನ್ನಡದ್ದು ಮಾತ್ರವಲ್ಲ, ಕನ್ನಡ ನಾಡಿಗೆ ಒತ್ತಿಕೊಂಡ ಮರಾಠೀ ಜಾನಪದ ಸತ್ವವೂ ಬೇಂದ್ರೆಯವರ ಕಾವ್ಯಜೀವನದಲ್ಲಿ ಬೆರೆತುಕೊಂಡಿದೆ. ಬೇಂದ್ರೆಯವರಷ್ಟು ಅಲ್ಲದಿದ್ದರೂ, ತಕ್ಕಮಟ್ಟಿನ  ಜಾನಪದ ಪ್ರಭಾವವನ್ನು ಕೆ.ಎಸ್.ನ. ಮತ್ತು ರಾಜರತ್ನಂ ಅವರ ಕವಿತೆಗಳಲ್ಲಿ ಕಾಣಬಹುದು. ಇದು ಕೆ.ಎಸ್.ನ. ಅವರ ಸರಳವಾದರೂ ಶಿಷ್ಟವಾದ ಭಾಷೆಯಲ್ಲಿ ಕಾಣಿಸದಿದ್ದರೂ, ಅವರ ಮೊದ ಮೊದಲಿನ ಪ್ರೇಮ ಗೀತೆಗಳ ವಸ್ತುವಿನಲ್ಲಿ, ಪಾತ್ರಗಳಲ್ಲಿ ಮತ್ತು ಆ ಪಾತ್ರಗಳ ನಡವಳಿಕೆಯಲ್ಲಿ ಕಾಣಿಸುತ್ತದೆ. ಅವರ ಕವಿತೆಯಲ್ಲಿ ಬರುವ ಹಳ್ಳಿಗಳ ಹೆಸರುಗಳು, ವ್ಯಕ್ತಿಗಳ ಹೆಸರುಗಳು, ನೈಸರ್ಗಿಕ ಪರಿಸರ ಇವು ಗ್ರಾಮಾಂತರ ಜೀವನವನ್ನು ಪ್ರತಿಬಿಂಬಿಸುತ್ತವೆ. ಈ ಅರ್ಥದಲ್ಲಿ ಕೆ.ಎಸ್.ನ. ಅವರ ಕವಿತೆಗಳ ಪ್ರೇರಣೆ ಜಾನಪದ ಸತ್ವದಿಂದ ಎಂದದ್ದು. ಇನ್ನು ಜಿ.ಪಿ. ರಾಜರತ್ನಂ ಅವರ ‘ರತ್ನನ ಪದ’ಗಳು ಮತ್ತು ‘ನಾಗನ ಪದ’ಗಳು, ಕೆ.ಎಸ್.ನ. ಅವರಲ್ಲಿಗಿಂತ ಮಿಗಿಲಾದ ಮತ್ತು ಬೇರೆಯಾದ ಜಾನಪದ ಸತ್ವದ ಸಾಕ್ಷಿಗಳಾಗಿವೆ. ರಾಜರತ್ನಂ ಅವರ ಈ ಕವಿತೆಗಳು ನಗರಾಂತರ್ಗತ ಅಥವಾ ನಗರಾಂಚಲ ಜಾನಪದ ಜೀವನದ ಮುಖವನ್ನು ಚಿತ್ರಿಸುತ್ತವೆ.  ನಗರ ಭಾಷೆಯ ಪ್ರಭಾವದೊಳಗೆ ಸಿಕ್ಕಿಕೊಂಡೂ ತಮ್ಮ ಜಾನಪದ ಭಾಷೆಯ ಸೊಗಡನ್ನು ತಕ್ಕಮಟ್ಟಿಗೆ ಉಳಿಸಿಕೊಂಡ ವ್ಯಕ್ತಿಗಳಾದ ‘ರತ್ನ’ ಮತ್ತು ‘ನಾಗ’ ಇವರು ಆಡುವ ಮಾತು, ನಡವಳಿಕೆಗಳು ಜಾನಪದ ಪರಿಸರದಿಂದ ಬಂದವುಗಳಾಗಿವೆ. ಈ ದೃಷ್ಟಿಯಿಂದ ನೋಡಿದಾಗ, ಬೇಂದ್ರೆ, ಕೆ.ಎಸ್.ನ. ಮತ್ತು ರಾಜರತ್ನಂ ಅವರ ಕವಿತೆಗಳಲ್ಲಿ ವಿಶಿಷ್ಟವಾದ ಜಾನಪದ ಪ್ರೇರಣೆಯನ್ನು ಗುರುತಿಸಬಹುದಾಗಿದೆ.

ಈ ಜಾನಪದ ಸತ್ವದ ಬಗೆಗೆ ವಿಶೇಷ ಆಸಕ್ತಿಯನ್ನು ನವ್ಯ ಕವಿಗಳೂ ಪ್ರಕಟಿಸಿದ್ದಾರೆನ್ನುವುದು ಗುರುತಿಸಿ ಹೇಳಬೇಕಾದ ಸಂಗತಿಯಾಗಿದೆ. ಜಾನಪದ ಸತ್ವ ಎನ್ನುವುದು ಕೇವಲ ಗೇಯ ರೂಪದ ಪದ್ಯಬಂಧಗಳಲ್ಲಿ ಮಾತ್ರ ತರಲು ಅರ್ಹವಾದುದೆಂಬ ಭಾವನೆಯನ್ನು ಸುಳ್ಳುಮಾಡಿ, ನವ್ಯ ಕವಿಗಳು ತಮ್ಮ ಮುಕ್ತ ಛಂದದ ರಚನೆಗಳಲ್ಲಿಯೂ ಇದನ್ನು ತರಲು ಸಾಧ್ಯವೆಂದು ತೋರಿಸಿದ್ದು ಮತ್ತು ಪ್ರಾಮಾಣಿಕವಾದ, ಜೀವಂತವಾದ ಬದುಕಿನ ತೀವ್ರಾನುಭವಗಳ ಅಭಿವ್ಯಕ್ತಿಗೆ ಜಾನಪದ ಸತ್ವ ಅತ್ಯಂತ ಅವಶ್ಯಕವಾದುದೆಂದು ಪ್ರತಿಪಾದಿಸಿದ್ದು ಗಮನಿಸಬೇಕಾದ ವಿಷಯವಾಗಿದೆ. ಅಡಿಗರ ‘ಚಂಡೆಮದ್ದಳೆ’ಯ ಕವಿತೆಗಳಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಯಕ್ಷಗಾನದ ದಟ್ಟವಾದ ಪ್ರಭಾವಗಳನ್ನು ಗುರುತಿಸಬಹುದು. ನವ್ಯಕಾವ್ಯ ಪ್ರಯೋಗದಲ್ಲಿ ಜಾನಪದ ಸತ್ವವನ್ನು ವಿಶಿಷ್ಟವಾಗಿ ಅಳವಡಿಸಿಕೊಂಡವರಲ್ಲಿ, ಚಂದ್ರಶೇಖರ ಪಾಟೀಲ, ಅವರಿಗೂ ಮಿಗಿಲಾಗಿ ಚಂದ್ರಶೇಖರ ಕಂಬಾರ ಇವರನ್ನು ಹೆಸರಿಸಬಹುದು.

ಹೊಸಗನ್ನಡದ ಪ್ರೇರಣೆಗಳಲ್ಲಿ, ಹಿಂದಿನ ಕಾವ್ಯರೂಪಗಳಾದ ಚಂಪೂ-ರಗಳೆ- ಷಟ್ಪದಿ-ವಚನಗಳ ಹಾಗೆ, ದಾಸರ ಶರಣರ ಕೀರ್ತನೆಗಳೂ ಸೇರುತ್ತವೆ. ಈ ಪ್ರಭಾವ ಮೂಲತಃ ಗೇಯವಾದ ಕವಿತೆಗಳಲ್ಲಿ, ಅದರಲ್ಲೂ ಅನುಭಾವ ಪರವಾದ ಕವಿತೆಗಳ ಮೇಲೆ ಆಗಿದೆ. ಶಿಶುನಾಳ ಶರೀಫರ ಹಾಡುಗಳಲ್ಲಿ ಹಿಂದಿನ ಕೀರ್ತನೆಯ ಪರಂಪರೆ ಪ್ರತ್ಯಕ್ಷವಾದ ಪ್ರಭಾವ ಮೂಡಿದ್ದರೆ, ಮಾಸ್ತಿಯವರ ‘ಬಿನ್ನಪ’, ‘ಅರುಣ’ ಕವನ ಸಂಗ್ರಹ ಕವಿತೆಗಳಲ್ಲಿ, ವಿ.ಸೀ. ಯವರ ಕವಿತೆಗಳಲ್ಲಿ, ಡಿ.ವಿ.ಜಿ. ಯವರ ರಚನೆಗಳಲ್ಲಿ, ಪು.ತಿ.ನ. ಅವರ ಹಲವು ಹಾಡುಗಳಲ್ಲಿ, ಕುವೆಂಪು ಮತ್ತು ಬೇಂದ್ರೆಯವರ ಕೆಲವು ಕವಿತೆಗಳಲ್ಲಿ, ಹಿಂದಿನ ಕೀರ್ತನೆಗಳ ಛಾಯೆಯನ್ನು ಗುರುತಿಸಬಹುದು. ನಿಜಗುಣ ಶಿವಯೋಗಿಗಳ  ಹಾಗೂ ವಚನಗಳ ಪ್ರಭಾವವನ್ನು ‘ಮಧುರ ಚೆನ್ನ’ರ ಕವಿತೆಗಳಲ್ಲಿ , ಅದಕ್ಕೂ ಮಿಗಿಲಾಗಿ ಬೇಂದ್ರೆಯವರ ಕೆಲವು ಕವಿತೆಯ ಛಂದೋವೈವಿಧ್ಯಗಳಲ್ಲಿ ಕಾಣಬಹುದು.

ಇದುವರೆಗೂ ಹೇಳಿದ ಮಾತುಗಳ ಉದ್ದೇಶ, ಹೊಸಗನ್ನಡ ಕಾವ್ಯ ಒಂದಲ್ಲ ಒಂದು ರೀತಿಯಲ್ಲಿ ಹಿಂದಿನ ರೂಪಗಳ ಪ್ರಭಾವವನ್ನು ಉಳಿಸಿಕೊಂಡಿದೆ ಎಂಬಷ್ಟನ್ನು ಹೇಳುವುದಲ್ಲ; ಯಾವ ಸಾಹಿತ್ಯ ಕ್ರಾಂತಿಯಾಗಲಿ, ಅದು ಬೇರೆ ಬೇರೆಯ ಪ್ರೇರಣೆಗಳನ್ನು ಪ್ರಚೋದನೆಗಳನ್ನು ಪಡೆದಿದ್ದರೂ, ಅದು ಮೂಲತಃ ತನ್ನಲ್ಲಿ ಗುಪ್ತಗಾಮಿನಿಯಾಗಿ ಬಂದ ಪರಂಪರೆಯ ಪ್ರಜ್ಞೆಯಿಂದ ಹೊರತಾಗಿರಲು ಸಾಧ್ಯವಿಲ್ಲ ಎನ್ನುವುದು. ಮೂಲದಿಂದ ಇಲ್ಲಿನ ತನಕ ಈ ನದಿ ಆಗಾಗ ತನ್ನ ಪಾತ್ರವನ್ನು ಬದಲಾಯಿಸಿರಬಹುದು; ಆದರೆ ಅದರ ಜಲಸತ್ವ ಮಾತ್ರ ಪರಂಪರಾಗತವಾದದ್ದೇ. ಯಾವ ಯಾವ ರೂಪದಲ್ಲಿ ನಾವು ಸಾಹಿತ್ಯಕ್ಕೆ ನವನವೀನ ರೂಪವನ್ನು ತೊಡಿಸಿದರೂ ತೊಟ್ಟುಕೊಳ್ಳುವ ಮೈ ಒಂದೇ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಕಾವ್ಯದ ಎಲ್ಲಾ ಪ್ರಯೋಗಗಳು ಕೇವಲ ಪರಂಪರಾಗತವಾದುದನ್ನು ಪುನರಾವರ್ತಿಸುವ ಪ್ರಯತ್ನಗಳೇ ಆಗಿವೆ ಎಂಬುದು ನಮ್ಮ ಅಭಿಪ್ರಾಯವಲ್ಲ. ಹೊಸತು ಬರುತ್ತದೆ-ಅಲ್ಲ; ಬಂದುದೆಲ್ಲ ಹೊಸತಾಗಿ ಬರುತ್ತದೆ, ಅಂದಂದಿನ ಮನೋಧರ್ಮ ಹಾಗೂ ಕಾಲಧರ್ಮಕ್ಕೆ ಉಚಿತವಾಗಿ. ಇದರ ಅರ್ಥ, ಪ್ರೇರಣೆಗಳು ಎಲ್ಲಿಂದಲೇ ಬಂದಿರಲಿ, ಅವು ಬೆರೆಯುವ ವ್ಯಕ್ತಿ ಭಾರತೀಯನೆ ಆದಕಾರಣ, ಅವನಿಗೆ ಗೊತ್ತಿರಲಿ, ಗೊತ್ತಿಲ್ಲದಿರಲಿ, ಅವನ ಹಿಂದಿರುವ ಸಾಹಿತ್ಯ ಪರಂಪರೆ ಅವನ ಅಭಿವ್ಯಕ್ತಿಯಲ್ಲಿ ಪುನರಭಿನಯಿತವಾಗುತ್ತದೆ.

ಈ ಹಿನ್ನೆಲೆಯಿಂದ ಹೊಸಗನ್ನಡ ಕಾವ್ಯ ಈ ಐವತ್ತು ವರ್ಷಕ್ಕೂ ಮಿಗಿಲಾದ ಕಾಲದಲ್ಲಿ ಪಡೆದ ಅವಸ್ಥಾಂತರಗಳಲ್ಲಿ ಕೆಲವನ್ನು ಪರಿಶೀಲಿಸಿದರೆ, ಇದುವರೆಗೂ ಹೇಳಿದ ವಿಚಾರಕ್ಕೆ ಒಂದು ಸಮರ್ಥನೆಯನ್ನು ಒದಗಿಸಿದಂತಾಗಬಹುದು.

೧೯೧೫-೨೦ರಲ್ಲಿ ಎಂದರೆ, ಮುಂಬೆಳಗಿನ ಕಾಲದಲ್ಲಿ ಕನ್ನಡ ಕಾವ್ಯ ಇನ್ನೂ ಹಳೆಯ ಬಂಧಗಳ ಬಂಧಿವಾಸದಲ್ಲಿ ಇತ್ತು. ಕನ್ನಡದಲ್ಲಿ ಬರೆಯಲು ಮೊದಲು ಮಾಡಿದ ಹಲವರು ಇಂಗ್ಲಿಷ್ ಕಾವ್ಯವನ್ನೂ ಅದರ ವೈವಿಧ್ಯವನ್ನೂ ನೋಡಿ, ನಮ್ಮಲ್ಲೂ ಕನ್ನಡ ಕಾವ್ಯ ಈ ಬಗೆಯ ಹೊಸ ರೂಪಗಳನ್ನು ಯಾಕೆ ಧರಿಸಬಾರದು ಎಂದು ಆಶಿಸಿದರು. ಈ ಆಶಯ ಎಷ್ಟೇ ಪ್ರಬಲವಾಗಿದ್ದರೂ ಪರಂಪರಾಗತವಾದ ಕೆಲವು ಕಟ್ಟುಪಾಡುಗಳನ್ನು-ದ್ವಿತೀಯಾಕ್ಷರ ಪ್ರಾಸತ್ಯಾಗ, ಕಂದ-ವೃತ್ತ-ಷಟ್ಪದೀ ಪ್ರಭಾವದ ಬಿಡುಗಡೆ-ಕಿತ್ತೆಸೆಯಲಾರದ ಅಧೈರ್ಯದಿಂದ ಷೇಕ್ಸ್‌ಪಿಯರ್, ಷೆಲ್ಲಿ ಮೊದಲಾದ ಕವಿಗಳ ಪದ್ಯಾನುವಾದಗಳಿಗೆ ಕಂದ-ಷಟ್ಪದಿ-ವೃತ್ತಗಳ ತೊಡಿಗೆಯನ್ನು ತೊಡಿಸಿದರು. ಆದರೆ ಇಂಗ್ಲಿಷ್ ಕವಿಗಳ ಭಾವಕ್ಕೆ ನಮ್ಮ ಕಂದ-ವೃತ್ತಾದಿಗಳ ಉಡುಗೊರೆಯನ್ನು ತೊಡಿಸುವುದಲ್ಲ, ಆಗಬೇಕಾದದ್ದು; ನಮ್ಮ ಭಾವನೆಗಳಿಗೆ ಇಂಗ್ಲಿಷ್ ಕಾವ್ಯದ ಉಡುಗೆಯನ್ನು ತೊಡಿಸುವಲ್ಲಿ, ನಮ್ಮ ಉಡುಗೆಗಳನ್ನು ಮಾರ್ಪಡಿಸುವ ಕೆಲಸವೂ ಆಗಬೇಕಾಗಿತ್ತು. ಈ ಕಾರ್ಯವನ್ನು ಮಾಡಿದವರು ಆಚಾರ್ಯ ‘ಶ್ರೀ’ ಯವರು. ‘ಇವಳ ಸೊಬಗನವಳು ತೊಟ್ಟು, ಅವಳ ತೊಡಿಗೆ ಇವಳಿಗಿಟ್ಟು’ ನೋಡಬಯಸಿದ  ‘ಶ್ರೀ’ಯವರ ಪ್ರಯೋಗಗಳಿಂದ ಹೊಸಗನ್ನಡ ಮುಂಬೆಳಗಿನಲ್ಲಿ ಕಿರಣೋದಯ- ವಾಯಿತು. ಹೀಗಾಗಿ, ಹೊಸಗನ್ನಡದಲ್ಲಿ ನವೋದಯ ಬಂದದ್ದು ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಕಾವ್ಯರೂಪಗಳ ಪ್ರೇರಣೆಯಿಂದ. ಈ ಪ್ರೇರಣೆ ‘ಶ್ರೀ’ ಯವರ ಇಂಗ್ಲಿಷ್ ಗೀತಗಳಲ್ಲಿ ಮೊದಲು ಮೈದೋರಿತು. ಇಂಗ್ಲಿಷ್ ಗೀತಗಳನ್ನು  ಏನೆಂದು ಕರೆಯಬೇಕು? ಅನುವಾದವೆನ್ನಬೇಕೆ? ಹೊಸಕಾವ್ಯದ ಮಾದರಿಯೆನ್ನಬೇಕೆ?  ರೂಪಾಂತರಗಳೆನ್ನಬೇಕೆ?-ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಅನೇಕರು ‘ಶ್ರೀ’ ಯವರ ಇಂಗ್ಲಿಷ್ ಗೀತಗಳು ಸಂಪೂರ್ಣ ಅನುವಾದವೆಂದೇ ಭಾವಿಸಿ ಅಕ್ಷೇಪಣೆಗಳನ್ನೆತ್ತಿದ್ದಾರೆ. ‘ಶ್ರೀ’ಯವರು ಮಾಡಿದ್ದೆಲ್ಲಾ ಅನುವಾದವೆಂದೂ, ಅವರು ಅನುವಾದಕ್ಕೆ ಸರಿಯಾದ ಕವಿತೆಗಳನ್ನಾರಿಸಿಕೊಳ್ಳದೆ, ಎಂಥೆಂಥವನ್ನೋ ಆರಿಸಿಕೊಂಡು, ತಮಗೆ ಒಳ್ಳೆಯ ಅಭಿರುಚಿ ಇಲ್ಲವೆಂಬುದನ್ನು ಪ್ರಕಟಿಸಿದ್ದಾರೆ-ಎಂದೂ ಇತ್ತೀಚಿಗೆ  ಒಬ್ಬರು ಕೊಂಕುಮಾತನಾಡಿದ್ದಾರೆ. ಆದರೆ ನಮ್ಮ ಅಭಿಪ್ರಾಯದಲ್ಲಿ, ‘ಶ್ರೀ’ಯವರು ಮೂಲತಃ ಅನುವಾದಕರಲ್ಲ; ಇಂಗ್ಲಿಷಿನ ಕವಿತೆಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕೆಂಬ ಉದ್ದೇಶದಿಂದ ಹೊರಟವರಲ್ಲ. ಅವರ ಇಂಗ್ಲಿಷ್ ಕವನಗಳೆಲ್ಲಾ ಬಹುಮಟ್ಟಿಗೆ ಅನುವಾದಗಳೆ ಅಲ್ಲ; ಆದ್ದರಿಂದ ಅನುವಾದಕ್ಕೆ ಆರಿಸಿಕೊಂಡ ಪದ್ಯಗಳ ಮೆಲಿಂದ ಅವರ ಅಭಿರುಚಿಯನ್ನು ಕುರಿತು ತೀರ್ಪುಕೊಡುವುದು ಸರಿಯಾದುದಲ್ಲ. ಅವರ ಉದ್ದೇಶ, ನಮಗೆ ತೋರುವ ಮಟ್ಟಿಗೆ, ಇಂಗ್ಲಿಷ್ ಕಾವ್ಯದ ಕೆಲವು ಕವಿಗಳ ಪದ್ಯಗಳನ್ನು,-ನಾಳೆ ತಮ್ಮ ಅಭಿರುಚಿಯನ್ನು ಯಾರಾದರೂ ಪ್ರಶ್ನಿಸಿಬಿಟ್ಟಾರು ಎಂಬ ಭಯವಿಲ್ಲದೆ-ತಾವು ಹೊಸಗನ್ನಡದಲ್ಲಿ ಹೊಸ ರೂಪಗಳನ್ನು ಸಿದ್ಧಪಡಿಸುವ ಸಲುವಾಗಿ, ರೂಪಾಂತರಕ್ಕೆ ಒಗ್ಗುವಂಥ ಪದ್ಯಗಳನ್ನು ಆರಿಸಿಕೊಂಡರೇ ಹೊರತಾಗಿ ತಾವು ಅತ್ಯುತ್ತಮವಾದ ಪದ್ಯಗಳನ್ನು ಇಂಗ್ಲಿಷ್‌ನಿಂದ ಆರಿಸಿಕೊಂಡು, ಅತ್ಯುತಮವಾದ ರೀತಿಯಲ್ಲಿ ಅನುವಾದ ಮಾಡಿ, ತಮ್ಮ ಅತ್ಯುತ್ತಮವಾದ ಅಭಿರುಚಿಯನ್ನು ಪ್ರದರ್ಶಿಸುವ ಸಲುವಾಗಿ ಈ ಕಾರ್ಯವನ್ನು ಕೈಗೊಳ್ಳಲಿಲ್ಲ. ಅವರಿಗೆ ಅಂದು ಇದ್ದ ಸಮಸ್ಯೆ ಮುಖ್ಯವಾಗಿ ಕನ್ನಡದಲ್ಲಿ ಹೊಸ ರೂಪಗಳನ್ನು ಆವಿಷ್ಕಾರ  ಮಾಡುವುದೇ ಹೊರತು, ಅತ್ಯುತ್ತಮವಾದ ಅನುವಾದ ಮಾಡುವುದಲ್ಲ. ಮೂಲತಃ ಶ್ರೀಮಂತವಾದ ಸೃಜನಾತ್ಮಕ ಶಕ್ತಿಯುಳ್ಳ ‘ಶ್ರೀ’ಯವರು ಇಂಗ್ಲಿಷ್ ಕವಿಗಳ ಪ್ರೇರಣೆಯಿಂದ ಭಾರತೀಯ ಪರಿಸರದ ಅನುಭವಕ್ಕೆ ಹೊಸ ರೂಪಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಈ ದೃಷ್ಟಿಯಿಂದ ಇಂಗ್ಲಿಷ್ ಗೀತಗಳು ಅನುವಾದವೆನ್ನುವುದಕ್ಕಿಂತ, ಭಾರತೀಯ ಪರಿಸರದಲ್ಲಿ ಕನ್ನಡ ಕಾವ್ಯ ರೂಪುಗೊಳ್ಳಬೇಕಾದ ರೀತಿಯ ನಿರ್ದೇಶನ ಹಾಗೂ ನಿದರ್ಶನಗಳೆಂದು ಭಾವಿಸುವುದು ಹೆಚ್ಚು ಸೂಕ್ತವಾದುದು. ಅವರ ‘ಮುದಿಯ ರಾಮೇಗೌಡ’, ‘ಕಾರಿ ಹೆಗ್ಗಡೆಯ ಮಗಳು’, ‘ಚೋಳ ಕನ್ಯೆಯರು’, ‘ಮಾದಮಾದಿ’, ‘ಕನಕಾಂಗಿ’, ‘ಪದುಮ’ ಇತ್ಯಾದಿ ಪದ್ಯಗಳನ್ನು ಕೇವಲ ಅನುವಾದ ಎಂದು ಹೇಳುವುದು ಅರ್ಥವಿಲ್ಲದ ಮಾತು. ಈ ಕವಿತೆಗಳು ನೂರಕ್ಕೆ ನೂರು ನಮ್ಮ ಪ್ರಾದೇಶಿಕ ಸತ್ವವನ್ನು ಉಸಿರಾಡುತ್ತವೆ-ಪದ್ಯಗಳ ಪರಿಸರ ಹಾಗೂ ಪಾತ್ರಗಳ ಸ್ವಭಾವ ಚಿತ್ರಣದಲ್ಲಿ. ಎಂದರೆ, ಪಾಶ್ಚಾತ್ಯ ಪ್ರೇರಣೆಯಿಂದ ನಮ್ಮ ಅನುಭವಗಳಿಗೆ ಯಾವ ಹೊಸ ರೂಪಗಳನ್ನು ಕೊಡಲು ಸಾಧ್ಯ ಎಂಬುದರ ಸಾಧ್ಯತೆಗಳನ್ನು ಅವು ತೆರೆದು ತೋರುತ್ತವೆ. ‘ಶ್ರೀ’ಯವರು ತೆರೆದ ಹೆದ್ದಾರಿಯಲ್ಲಿ ಅನಂತರ ಬಂದ ಕವಿಗಳು, ಅತ್ಯಂತ ವೈವಿಧ್ಯಮಯವಾದ ಪ್ರಯೋಗಗಳಿಂದ ನವೋದಯ ಕಾವ್ಯವನ್ನು ಶ್ರೀಮಂತಗೊಳಿಸಿದರು.

ಇಲ್ಲಿ ಹೇಳಬೇಕೆಂದಿರುವ ಇನ್ನೊಂದು ಮಾತೆಂದರೆ, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಪ್ರೇರಣೆಯಿಂದ ನಮ್ಮಲ್ಲಿ ರೂಪುಗೊಂಡ ನವೋದಯ ಕಾವ್ಯ, ಆ ರೊಮ್ಯಾಂಟಿಕ್ ಕಾವ್ಯದ ಅನುಸರಣವೂ ಅಲ್ಲ, ಅನುಕರಣವೂ ಅಲ್ಲ ಎನ್ನುವುದು. ಯಾವುದನ್ನು ರೊಮ್ಯಾಂಟಿಕ್ ಮನೋಧರ್ಮ ಎನ್ನುತ್ತೇವೋ-ನಿಸರ್ಗಪ್ರಿಯತೆ, ಆದರ್ಶಪರತೆ, ಆತೀಂದ್ರಿಯ ಶಕ್ತಿಗಳಲ್ಲಿ ಒಲವು, ಜೀವನ ಪ್ರೀತಿ, ಇತ್ಯಾದಿ-ಅದು, ನಮಗೆ ಪಾಶ್ಚಾತ್ಯ ಪ್ರೇರಣೆಯಿಂದಲೇ ಬರಬೇಕಾದ ಅವಶ್ಯಕತೆ ಇರಲಿಲ್ಲ. ರೊಮ್ಯಾಂಟಿಕ್ ಕಾವ್ಯ ನಮ್ಮಲ್ಲಿ ತಂದದ್ದು, ಹಿಂದಿನ ಕವಿಗಳಲ್ಲಿ ಇಲ್ಲದ ಒಂದು ಸ್ವತಂತ್ರ ಪ್ರವೃತ್ತಿಯನ್ನು, ಮತ್ತು ಬದುಕಿನ ಎಲ್ಲ ಅನುಭವಗಳಿಗೂ ಕಾವ್ಯತ್ವವನ್ನು ಕೊಡಬಹುದೆಂಬ ಧೈರ‍್ಯವನ್ನು.

ವಸ್ತುವಿನ ದೃಷ್ಟಿಯಿಂದ ನೋಡುವುದಾದರೆ ಶತಮಾನಗಳ ಕಾಲ ಧರ್ಮವೇ ಸ್ಫೂರ್ತಿಯಾಗಿ, ಇತಿಹಾಸ-ಪುರಾಣಗಳ ಸಿದ್ಧ ಪ್ರಸಿದ್ಧ ವಸ್ತುಗಳೇ ಕಾವ್ಯ ವಿಷಯವಾಗಿ, ಹಳಗನ್ನಡ ಸಾಹಿತ್ಯ ನಿರ್ಮಿತವಾಗಿದೆ. ಕಾವ್ಯಕ್ಕೆ ಏನು ಬೇಕಾದರೂ ವಸ್ತುವಾಗಬಹುದು-ಎಂಬ ಧಾರಾಳವಾದ ಮಾತನ್ನು ನಮ್ಮ ಆಲಂಕಾರಿಕರು ಹೇಳಿದ್ದರೂ, ಅದು ಕೇವಲ ಲಿಖಿತ ಸಿದ್ಧಾಂತದಲ್ಲಿ ಉಳಿಯಿತೇ ಹೊರತು ಕವಿಗಳ ಪ್ರಯೋಗದಲ್ಲಿ ಇಳಿದು ಬರಲಿಲ್ಲ. ಹನ್ನೆರಡನೆಯ ಶತಮಾನದಂದು ಮಾತ್ರ ಬದುಕಿನ ಹಲವು ಸ್ತರಗಳಿಂದ ಬಂದ ಜನ, ತಮ್ಮ ಭಾವಾಭಿವ್ಯಕ್ತಿಯಲ್ಲಿ ತೊಡಗಿದರೂ,ಅದರ ಮೂಲ ಉದ್ದೇಶ ಧಾರ್ಮಿಕವೇ ಆಯಿತು. ಹರಿಹರ ಮೊಟ್ಟ ಮೊದಲಿಗೆ ಸಿದ್ಧ-ಪ್ರಸಿದ್ಧ ವಸ್ತುಗಳನ್ನು ಬಿಟ್ಟು ಜನಸಾಮಾನ್ಯ ಜೀವನದಿಂದ ತನ್ನ ಕಥಾನಾಯಕರನ್ನು (ಅವನ ಗಿರಿಜಾ ಕಲ್ಯಾಣವೊಂದನ್ನು ಬಿಟ್ಟು) ಆರಿಸಿಕೊಂಡರೂ ಅವರೆಲ್ಲರೂ ಶಿವಶರಣರೇ ಆಗಿರಬೇಕೆಂಬ ನಿರ್ಬಂಧದೊಳಗೆ ಈ ಸ್ವತಂತ್ರ ದೃಷ್ಟಿ ಸೀಮಿತವಾಯಿತು. ಕಾವ್ಯದಲ್ಲಿ ಸಾಮಾನ್ಯ ಜೀವನ ಕ್ಷೇತ್ರಗಳಿಂದ ವಸ್ತುವನ್ನೆತ್ತಿಕೊಳ್ಳುವ ಮಾತಿರಲಿ, ಕಾವ್ಯದಲ್ಲಿ, ‘ಮಾವಲ್ಲದೆ, ಕೌಂಗಲ್ಲದೆ, ದಳಿಂಬಮಲ್ಲದೆ ಗಿಡಮರಗಳೆಂಬುವಿಲ್ಲಾ ನಾಡೊಳ್’-ಎಂದು, ಕಾವ್ಯ ಯೋಗ್ಯವಾದ, ಹಾಗೂ ಕಾವ್ಯ ಯೋಗ್ಯವಲ್ಲದ ತರುಮರಗಳೂ ಇವೆ ಎಂಬಂತೆ ನಡೆದುಕೊಂಡದ್ದುಂಟು! ಆದರೆ ನವೋದಯ ಕಾವ್ಯ ಮಾತ್ರ ಕಾವ್ಯಕ್ಕೆ ಏನುಬೇಕಾದರೂ ವಸ್ತುವಾಗಬಹುದೆಂಬ ಧೈರ್ಯವನ್ನು ಪ್ರಕಟಿಸಿತು. ನವೋದಯ ಕಾವ್ಯ, ಕಾವ್ಯವಸ್ತುವನ್ನು ಪ್ರಾಚೀನ ಇತಿಹಾಸ ಪುರಾಣಾದಿಗಳಿಂದ ನಿಸರ್ಗಕ್ಕೆ ಸ್ಥಳಾಂತರಿಸಿತು. ಹಾಗೆಯೆ ಹಿಂದೆ ಇದ್ದ ಮತಧರ್ಮದ ಸ್ಥಾನವನ್ನು ಈ ಕಾಲದಲ್ಲಿ ಸೌಂದರ್ಯಧರ್ಮ ಆಕ್ರಮಿಸಿಕೊಂಡಿತು. ನಿಸರ್ಗವೇ ನವೋದಯ ಕವಿಗಳ ವರ್ಣನೆಯ ಮುಖ್ಯ ವಸ್ತು. ನಿಸರ್ಗ, ಅದರ ಮಡಿಲಲ್ಲಿರುವ ಸಾಮಾನ್ಯ ಜೀವನದಲ್ಲಿರುವ ಮಹತ್ವ-ಇವೇ ಪ್ರಧಾನವಾದವು. ಕಣ್ಣೆದುರಿಗೆ ಕಾಣುವ ಈ ನಿಸರ್ಗವನ್ನು ಪ್ರೀತಿಯಿಂದ ಒಲಿಯುವುದು, ನಿಸರ್ಗದ ಸೊಗಸಿನ ಬಗ್ಗೆ ಒಂದು ರೀತಿಯ ಉಪಾಸನಾ ಮನೋಭಾವವನ್ನು ತಾಳುವುದು ಬದುಕಿನ ಪರಮಾರ್ಥವೆಂಬಂತೆ ಸಾರಲಾಯಿತು. ನಿಸರ್ಗ ಸೌಂದರ್ಯವನ್ನು ಕುರಿತ ಈ ಪ್ರೀತಿ-ಆರಾಧನೆಗಳು, ಉಳಿದ ಯಾವ ಧಾರ್ಮಿಕ ಜಪತಪಾದಿ ಪೂಜಾ ವಿಧಿಗಳಿಗಿಂತ ಕಡಿಮೆ ದರ್ಜೆಯವಲ್ಲ ಎಂಬ ಸೌಂದರ್ಯಧರ್ಮಶ್ರದ್ಧೆ ನವೋದಯ ಕವಿಗಳಲ್ಲಿ ಉದಯವಾಯಿತು. ಹಿಂದಿನ ಆ ಧರ್ಮಶ್ರದ್ಧೆ, ದೇವಾಲಯಗಳಿಂದ ಇಲ್ಲಿ ನಿಸರ್ಗ ರಂಗಕ್ಕೆ ಸ್ಥಳಾಂತರಿತವಾಯಿತು. ಸೌಂದರ್ಯವೇ ದೇವತಾವಿಗ್ರಹದ ಸ್ಥಾನಕ್ಕೆ ಬಂದಿತು. ಆದರೆ ನವ್ಯ ಕಾವ್ಯ, ಕಾವ್ಯವಸ್ತುವನ್ನು, ಈ ನವೋದಯ ಕವಿಗಳ ನಿಸರ್ಗ ಪರಿಸರದಿಂದ ನಗರ ಜೀವನ ಕೇಂದ್ರಕ್ಕೆ ವರ್ಗಾಯಿಸಿ, ನಿಸರ್ಗ ಸೌಂದರ‍್ಯಾರಾಧನೆಯಲ್ಲಿ ಮಗ್ನವಾಗುತ್ತಿದ್ದ ಮನಸ್ಸನ್ನು ವ್ಯಕ್ತಿಯ ಅಂತರಂಗದ ಪಾತಾಳ ಪ್ರಪಂಚಕ್ಕೆ ಇಳಿಸಿತು. ಹಿಂದಿನ ಆ ಸೌಂದರ್ಯಧರ್ಮ, ಇಲ್ಲಿ ಗಾಢವಾದ ಜೀವನಶ್ರದ್ಧೆಯಾಗಿ ಪರಿಣಮಿಸಿತು. ಹಾಗೆಯೇ ನಮ್ಮ ಬದುಕಿನ ಒಂದು ಭಾಗವಾದ ನಿಸರ್ಗ ರಮಣೀಯತೆಗೆ ಬಲವಂತವಾಗಿ ಕಣ್ಣುಮುಚ್ಚಿ, ಸಹಜವಾದ ಭಾವಗೀತಾತ್ಮಕವಾದ ಅಭಿವ್ಯಕ್ತಿಗೆ ಬಾಯಿಬೀಗ-ಹಾಕಿ, ನಗರ ಜೀವನದ, ಯಾಂತ್ರಿಕ ತುಮುಲಗಳ, ಅಂತರಂಗದ ತಾಕಲಾಟಗಳ, ಕಾಮ-ವಿಡಂಬನೆಯ ಚಿತ್ರ-ವಿಚಿತ್ರಗಳಿಗೆ ರೂಪುಗೊಡುವ ಸಾಹಸವೇ ಈ ಕವಿತೆಯಲ್ಲಿ ಮಿಗಿಲಾಯಿತು.

ಭಾಷಾ ಪ್ರಯೋಗದ ದೃಷ್ಟಿಯಿಂದ ಪರಿಶೀಲಿಸಿದರೆ, ಈ ಐವತ್ತು ವರ್ಷಕ್ಕೂ ಮಿಕ್ಕ ಕಾವ್ಯದ ಸಾಧನೆ ಅತ್ಯಂತ ಗಮನಾರ್ಹವಾಗಿದೆ. ಸಂಸ್ಕೃತ ಪದಬಂಧದಿಂದ ಹಿಡಿದು, ನೋಡಲು ಗದ್ಯವೋ ಎಂಬಂತಹ ಬಾಷೆಯವರೆಗೂ ಈ ಕಾಲದ ಭಾಷಾ ಪ್ರಭೇದಗಳನ್ನು ಕಾಣಬಹುದು. ಹೊಸಗನ್ನಡ ಕಾವ್ಯಕ್ಕೆ ಹಿನ್ನೆಲೆಯಾಗಿದ್ದದ್ದು ಸಾವಿರ ವರ್ಷಗಳಲ್ಲಿ ವಿವಿಧ ಅವಸ್ಥಾಂತರಗಳಲ್ಲಿ ಹರಿದುಬಂದ ಭಾಷೆ. ಚಂಪು-ರಗಳೆ- ವಚನ-ಷಟ್ಪದೀ-ಸಾಂಗತ್ಯಾದಿಗಳ ಹಿನ್ನೆಲೆಯಲ್ಲಿ, ನವೋದಯ ಕಾಲದ ಕವಿ, ತನ್ನ ಕಾವ್ಯ ಭಾಷೆಯನ್ನು ಸಿದ್ಧಪಡಿಸುವ ಹೋರಾಟದಲ್ಲಿ ತೊಡಗಬೇಕಾಯಿತು. ಇದರಿಂದಾಗಿ ನವೋದಯ ಕವಿಗಳ ಸಮಸ್ಯೆ, ಹಳೆಯ ಕಂದ-ವೃತ್ತಗಳ ಬಂಧದಿಂದ ಪಾರಾಗುವುದು ಹೇಗೆ ಎನ್ನುವುದು. ‘ಶ್ರೀ’ಯವರಿಗೆ ಮೊದಲ ಹೊಂಬೆಳಗಿನ ಕಾಲದಲ್ಲಿ ಹೊಸ ಕಾವ್ಯವೂ ಸಹ ಹೇಗೆ ಇನ್ನೂ ‘ಹಳೆಯ ಬಂಧಗಳ ಬಂದಿವಾಸ’ದಲ್ಲಿತ್ತೆಂಬುದನ್ನು ಹಿಂದೆಯೇ ಹೇಳಿದ್ದೇವೆ. ‘ಶ್ರೀ’ಯವರ ಪ್ರಯೋಗಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು, ತಿಳಿಯಾದ ಬಿಗಿಯಾದ, ಹದವಾದ ಭಾಷಾಪ್ರಯೋಗ. ಒಂದೆಡೆ ಅವರು ತಮ್ಮ ನಾಟಕದಲ್ಲಿ ಹಳಗನ್ನಡ-ಸಂಸ್ಕೃತಾದಿಗಳಿಂದ ಕಸುವುಗೊಂಡ ಕನ್ನಡವನ್ನು ಪ್ರಯೋಗಿಸಿ ತೋರಿಸಿದರೆ, ‘ಇಂಗ್ಲಿಷ್ ಗೀತ’ಗಳಲ್ಲಿ ಮತ್ತಿತರ ಸ್ವಂತ ಕವನಗಳಲ್ಲಿ, ಸರಳವಾದ, ಲಲಿತವಾದ, ಸಹಜವಾದ ಹೊಸ ಭಾಷೆಯೊಂದನ್ನು ರೂಪಿಸಿದರು.ಅನಂತರ ಬಂದ ನವೋದಯ ಕವಿಗಳ ಸಾಮಗ್ರಿಯಲ್ಲಿ ಸಂಸ್ಕೃತ, ಹಳಗನ್ನಡ, ಜಾನಪದ, ದೈನಂದಿನ ಶಿಷ್ಟಭಾಷೆ ಇತ್ಯಾದಿಗಳನ್ನು ಗುರುತಿಸಬಹುದು.

ಈ ಸಂದರ್ಭದಲ್ಲಿ ಕುವೆಂಪು ಅವರ ಕಾವ್ಯಭಾಷೆಯನ್ನು ಕುರಿತು ಪ್ರತ್ಯೇಕವಾಗಿ, ಆದರೆ ಸಂಕ್ಷೇಪವಾಗಿ ವಿವೇಚಿಸುವ ಅಗತ್ಯವಿದೆ. ಕುವೆಂಪು ಅವರ ಕಾವ್ಯಭಾಷೆಯಲ್ಲಿ, ಸಂಸ್ಕೃತದ ಸಾಣೆಗೆ ಒಡಿದ್ದ ಕನ್ನಡ ಭಾಷೆಯ ತೇಜಸ್ಸನ್ನು ಕಾಣಬಹುದು. ಆದರೆ ಕುವೆಂಪು ಅವರ ಭಾಷೆಯನ್ನು, ಅನಾವಶ್ಯಕವಾದ ಸಂಸ್ಕೃತ ಪದಮಿಶ್ರಣಗಳಿಂದ ಕೃತಕವಾದ ಭಾಷೆ ಎಂದೂ ಕರೆದವರಿದ್ದಾರೆ. ಕುವೆಂಪು ಅವರ ಮುಖ್ಯ ಪ್ರೇರಣೆ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳೆಂಬದು ನಿಜ; ಅದರಲ್ಲೂ ವಡ್ಸ್‌ವರ್ತನನ್ನು ಕನ್ನಡದಲ್ಲಿ ನೆನಪಿಗೆ ತರುವಷ್ಟು ನಿಸರ್ಗ ಪ್ರಿಯತೆಯನ್ನು ಪ್ರಕಟಿಸಿದವರು ಕವಿ ಕುವೆಂಪು. ಆದರೆ ರೊಮ್ಯಾಂಟಿಕ್ ಕಾವ್ಯದ ಮುಖ್ಯವಾದ ಸಾಧನೆ ಇರುವುದು ಜನ ಸಾಮಾನ್ಯ ಜೀವನದಿಂದ ವಸ್ತುವನ್ನಾರಿಸಿಕೊಂಡು, ಅವರದೇ ಆದ ಭಾಷೆಯಲ್ಲಿ ಚಿತ್ರಿಸುವುದರಲ್ಲಿ. ವರ್ಡ್ಸ್‌ವರ್ತ್‌ತನ್ನ ‘ಲಿರಿಕಲ್ ಬ್ಯಾಲೆಡ್ಸ್’ಗೆ ಬರೆದ ಮುನ್ನುಡಿಯಲ್ಲಿ ಕಾವ್ಯಭಾಷೆಯ ಬಗ್ಗೆ   ‘to use the very language of men’ ಎನ್ನುತ್ತಾನೆ. ಆದರೆ ರೊಮ್ಯಾಂಟಿಕ್ ಕವಿಗಳನ್ನು ನೆನಪಿಗೆ ತರುವ ಕುವೆಂಪು ಅವರು, ‘to use the very language of men’ ಎಂಬ ಕಡೆಗೆ ಗಮನಕೊಡದೆ, ತಮ್ಮ ಕಾವ್ಯಾಭಿವ್ಯಕ್ತಿಯನ್ನು ಹಳಗನ್ನಡದ ಹಾಗೂ ಸಂಸ್ಕೃತದ ಸತ್ವದಿಂದ ನಿರ್ಮಿಸಿಕೊಂಡದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಕೊಡುವುದು ಕಷ್ಟ. ಆದರೆ ತಮ್ಮ ಕಾವ್ಯಕ್ಕೆ ಜಾನಪದ ಸತ್ವದಿಂದ ಪ್ರೇರಣೆ ಪಡೆದ ಬೇಂದ್ರೆಯವರಲ್ಲಿ ಸಹಜವಾಗಿಯೆ ‘the very language of men’ ಬಂದಿದೆ. ಈ ಅರ್ಥದಲ್ಲಿ ವಸ್ತು ಹಾಗೂ ಭಾಷೆಯನ್ನು, ರೊಮ್ಯಾಂಟಿಕ್ ಕವಿಗಳ ಕಾವ್ಯ ಸಿದ್ಧಾಂತಕ್ಕೆ ಸಾಕ್ಷಿಯಾಗುವಂತೆ  ಬಳಸಿಕೊಂಡವರು ಬೇಂದ್ರೆಯವರು. ಹಾಗೆ ನೋಡಿದರೆ, ಮಲೆನಾಡಿನಂಥ ಜಾನಪದ ಪರಿಸರದಿಂದ ಮತ್ತು ಅದೇ ‘ಹಿಂದುಳಿದ’ ವರ್ಗದಿಂದ ಬಂದ ಕುವೆಂಪು ಅವರಿಗೆ, ಜಾನಪದ ಸತ್ವವನ್ನು ತಮ್ಮ ಕಾವ್ಯದ ಭಾಷೆಯಲ್ಲಿ ತರಲು ಎಲ್ಲ ಅನುಕೂಲಗಳೂ ಇದ್ದವು ಎಂಬುದನ್ನು ಮರೆಯಬಾರದು. ಆದರೆ ಕುವೆಂಪು ಅವರು ತಮ್ಮ ಕಾವ್ಯದಲ್ಲಿ ಮಲೆನಾಡಿನ ನಿಸರ್ಗಶ್ರೀಗೆ ಮಾತ್ರ (ಜನ ಜೀವನಕ್ಕೆ ಅಲ್ಲ!) ಋಣಿಯಾದಂತೆ ತೋರುತ್ತ, ತಮ್ಮ ಕಾವ್ಯದ ಭಾಷೆಯನ್ನು ಹಳಗನ್ನಡ-ಸಂಸ್ಕೃತ ಪದ ಪರಿಪುಷ್ಟವಾದ ‘ಪ್ರೌಢ ಭಾಷೆ’ಯನ್ನಾಗಿ ಏಕೆ ನಿರ್ಮಿಸಿಕೊಂಡರು ಎಂಬ ಪ್ರಶ್ನೆಗೆ ಉತ್ತರಕೊಡುವುದು ತುಂಬ ಸಂದಿಗ್ಧತೆಯ ಸಂಗತಿಯಾಗಿದೆ. ಕುವೆಂಪು ಅವರಿಗೆ ಮಲೆನಾಡಿನ ಜನಜೀವನವಾಗಲಿ, ಅವರ ಭಾಷೆಯಾಗಲಿ ಅಪರಿಚಿತವಲ್ಲ; ಅವರ ಕಾದಂಬರಿಗಳು ಇದಕ್ಕೆ ಸಮೃದ್ಧವಾದ ಸಾಕ್ಷಿಯಾಗಿವೆ. ಈ ಮಲೆನಾಡಿನ ಜಾನಪದ ಸತ್ವ ಅವರ ಕಾದಂಬರಿಗಳಲ್ಲಿ ಅವರ ಜೀವನಾನುಭವಕ್ಕೂ, ಭಾಷಾಪ್ರಜ್ಞೆಗೂ ದಾಖಲೆಯಾಗಿ, ಅನ್ಯಾದೃಶವಾಗಿ ಅಭಿವ್ಯಕ್ತವಾಗಿದೆ. ನಮಗೆ ತೋರುವುದು, ಕುವೆಂಪು, ಕನ್ನಡದ ಆದಿ ಕವಿಯೂ ಅಗ್ರ ಕವಿಯೂ ಆದ ಪಂಪನನ್ನು ನೆನಪಿಗೆ ತರುವಂಥ ‘ಮಾರ್ಗಕವಿ’ ಎನ್ನುವುದು. ಪಂಪನಂತೆಯೇ ಇವರ ಕಾವ್ಯಪ್ರಜ್ಞೆ ಕವಲೊಡೆದು,  ಒಂದೆಡೆ ಕಾವ್ಯಾಭಿವ್ಯಕ್ತಿಯಲ್ಲಿ ನಿಸರ್ಗ ರಮ್ಯತೆಯನ್ನೂ, ಗದ್ಯಾಭಿವ್ಯಕ್ತಿಯಲ್ಲಿ ತೀವ್ರವಾದ ಜೀವಾನುಭವವನ್ನೂ ಪ್ರಕಟಪಡಿಸಿಕೊಂಡಿದೆ. ಅವರ ಕಾವ್ಯದ ಭಾಷೆ ಉಜ್ವಲವಾಗಿದೆ, ಸತ್ವಯುತವಾಗಿದೆ, ಗಂಭೀರವಾಗಿದೆ; ಅದರಲ್ಲಿ ಜನ ಸಾಮಾನ್ಯದ ಭಾಷೆ ಯಥಾವತ್ತಾದ ಸ್ವರೂಪದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಕಾರಣದಿಂದ ಅದು ಕಾವ್ಯಭಾಷೆಯೆ ಆಗಿಲ್ಲ ಎಂದು ಯಾರೂ ಹೇಳಲಾರರು. ಕವಿ ತನ್ನ ಕಾವ್ಯದ ಭಾಷೆಯನ್ನು ತಾನೇ ರೂಪಿಸಿಕೊಳ್ಳುತ್ತಾನೆ; ಆ ಬಗ್ಗೆ ಯಾರೂ ನಿರ್ದೇಶನ ಕೊಡಬೇಕಾಗಿಲ್ಲ. ಆದರೆ ಅದು ಕಾವ್ಯಾಭಿವ್ಯಕ್ತಿಗೆ ತಕ್ಕ ಮಾಧ್ಯಮವಾಗಿದೆಯೆ ಇಲ್ಲವೆ ಎನ್ನುವುದು ಮುಖ್ಯ. ಈ ದೃಷ್ಟಿಯಿಂದ ನೋಡಿದರೆ ಕುವೆಂಪು ಅವರ ಕಾವ್ಯದ ಭಾಷೆ, ಅವರದೇ ಆದ ಒಂದು ವಿಶಿಷ್ಟ ಶೈಲಿಯನ್ನು ನಿರ್ಮಿಸಿದೆ; ಅದೂ ಕಾವ್ಯಭಾಷೆಯೆ ಆಗಿದೆ. ಆದರೂ ಕುವೆಂಪು ಅವರ ಈ ಭಾಷೆ ಕೃತಕವೆಂದೋ, ಸಂಸ್ಕೃತ ಶಬ್ದಾಡಂಬರದ್ದೆಂದೋ ಆಪಾದಿಸುವ ಜನ, ಅವರೂ ಬೇಂದ್ರೆಯವರ ಹಾಗೆ, ಯಾಕೆ ತಮ್ಮ ಪರಿಸರದ ಮಲೆನಾಡಿನ ಜಾನಪದ ಭಾಷಾ ಸಾಮಗ್ರಿಯನ್ನು ತಮ್ಮ ಕಾವ್ಯದ ಮಾಧ್ಯಮವನ್ನಾಗಿ ಬಳಸಿಕೊಳ್ಳಲಿಲ್ಲ ಎಂಬ ಪ್ರಶ್ನೆಯನ್ನು ಪ್ರಧಾನವಾಗಿ ಮನಸ್ಸಿನಲ್ಲಿರಿಸಿಕೊಂಡಿರುತ್ತಾರೆಂದು ಭಾವಿಸಿದ್ದೇನೆ. ಈ ಪ್ರಶ್ನೆಗೆ ನಾವು ಹುಡುಕುವ ಉತ್ತರದಲ್ಲಿಯೆ ಕುವೆಂಪು ಅವರ ಕಾವ್ಯಭಾಷೆಯ ಬಗ್ಗೆ ವಿವರಣೆ ದೊರೆಯುತ್ತದೆ. ಇದಕ್ಕೆ ಉತ್ತರ, ಕುವೆಂಪು, ಕುವೆಂಪು ಬರೆದ ಹಾಗೆ ಬರೆಯಬಲ್ಲರೆ ಹೊರತು, ಬೇರೆಯವರ ಹಾಗೆ ಬರೆಯಬೇಕಾಗಿಲ್ಲ; ಎರಡನೆಯದಾಗಿ, ಕಾವ್ಯದ ಭಾಷೆಯ ಬಗ್ಗೆ ಇಂದಿನ ಹಾಗೆ ಅನಗತ್ಯವಾದ ಹಾಗೂ ವಿಶೇಷವಾದ ಚರ್ಚೆ ನಡೆದು, ಕಾವ್ಯದ ಭಾಷೆ, ಹಾಗಿರಬೇಕು, ಹೀಗಿರಬೇಕು ಎಂಬ ಪೂರ್ವಸಿದ್ಧಾಂತಗಳು, ಕುವೆಂಪು ಅವರು ಬರೆಯಲು ಆರಂಭ ಮಾಡಿದ ಕಾಲದಲ್ಲಿ ಇರಲಿಲ್ಲ; ಆಗ ಮುಖ್ಯವಾದದ್ದು ನೂತನ ಕಾವ್ಯಮಾರ್ಗವನ್ನು ನಿರ್ಮಿಸುವ ಉತ್ಸಾಹ ಸಾಹಸಗಳು ಮಾತ್ರ. ಹೀಗಾಗಿ ಅಂದಿನವರು ತಮ್ಮ ತಮ್ಮ ಕಾವ್ಯ ಮಾಧ್ಯಮವನ್ನು ತಮ್ಮ ಅಭಿರುಚಿಗೆ ತಕ್ಕ ಹಾಗೆ ರೂಪಿಸಿಕೊಂಡರು. ಕುವೆಂಪು ಅವರು ಆಧುನಿಕ ವಿದ್ಯಾಭ್ಯಾಸ ಪಡೆದು, ಕನ್ನಡ-ಸಂಸ್ಕೃತಗಳಲ್ಲಿ ಪರಿಣತರಾದ್ದರಿಂದ, ಅವರು ಸಹಜವಾಗಿಯೆ ಆ ಭಾಷಾ ಸಾಮಗ್ರಿಯನ್ನೆ ತಮ್ಮ ಕಾವ್ಯದ ಮಾಧ್ಯಮವನ್ನಾಗಿ ಮಾಡಿಕೊಂಡರು ಎಂಬ ಒಂದು ಸಮಾಧಾನವನ್ನು ಯಾರಾದರೂ ಹೇಳಲು ಹೊರಟರೆ, ಅದು ಅಷ್ಟು ಸಮರ್ಪಕವಾಗುವುದಿಲ್ಲ. ಹಾಗೆ ನೋಡಿದರೆ ಬೇಂದ್ರೆಯವರಾದಿಯಾಗಿ ಇನ್ನಿತರ ಪ್ರಮುಖರೂ ಆಧುನಿಕ ಶಿಕ್ಷಣವನ್ನು ಪಡೆದವರೇ. ೧೯೨೦-೨೫ರಷ್ಟು ಹಿಂದೆ ‘ಪ್ರತಿಷ್ಠಿತ ಸಾಮಾಜಿಕಸ್ತರ’ದಿಂದ ಬಂದ ಬೇಂದ್ರೆಯವರು, ಜಾನಪದ ವಲಯದ ಭಾಷಾ ಸಾಮಗ್ರಿಯನ್ನು ತಮ್ಮ ಕಾವ್ಯಮಾಧ್ಯಮವನ್ನಾಗಿ ಮಾಡಿಕೊಂಡು ಪ್ರಶಂಸಾರ್ಹರಾದಂತೆ, ಅದೇ ಕಾಲದಲ್ಲಿ ‘ಪ್ರತಿಷ್ಠಿತ ವರ್ಗ’ದವರಿಂದ ಬಹುಮಟ್ಟಿಗೆ  ತುಳಿಯಲ್ಪಟ್ಟ ಸಾಮಾಜಿಕ ಪರಿಸರವುಳ್ಳ ಮಲೆನಾಡಿನ ‘ಅಪ್ರತಿಷ್ಠಿತ ಸಾಮಾಜಿಕಸ್ತರ’ದಿಂದ ಬಂದ ಕುವೆಂಪು ಅವರಂಥ ಕವಿ, ಮಲೆನಾಡಿನ ಜನ ಸಾಮಾನ್ಯದ ಜಾನಪದ ಭಾಷಾಸಾಮಗ್ರಿಯಿಂದ ಕವಿತೆ ಕಟ್ಟಿದ್ದರೆ, ಅದು ಪ್ರೋತ್ಸಾಹ ಪ್ರಶಂಸೆಗಳಿಗೆ ಪಾತ್ರವಾಗಬಹುದಿತ್ತು ಎಂದು ಹೇಳಲು ಹೆದರಿಕೆಯಾಗುತ್ತದೆ. ಆದಕಾರಣ ಅಂದು ‘ಅಪ್ರತಿಷ್ಠಿತ ವರ್ಗ’ದಿಂದ ಬಂದ ಕವಿ, ‘ಪ್ರತಿಷ್ಠಿತ’ ವರ್ಗದವರೊಂದಿಗೆ ಸೆಣಸಿ, ಅವರಿಗೆ ತಾನು ಹೆಗಲೆಣೆಯಾಗಿ ನಿಲ್ಲಬೇಕಾಗಿದ್ದರೆ, ಪ್ರತಿಷ್ಠಿತ ವರ್ಗದವರ ಪ್ರತಿಷ್ಠೆ ಯಾವ ಪರಂಪರೆಯ ಭಾಷೆಯಿಂದ ಪ್ರಾಪ್ತವಾಗಿತ್ತೋ, ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ ಕಾರಣವೇ ಕುವೆಂಪು ಅವರ ಭಾಷೆ ಹಾಗೂ ವಿಚಾರಗಳು ಸವಾಲಿನ ಹಾಗೂ ಪ್ರೌಢ ರೂಪದ್ದಾಗಲು ಕಾರಣವಾಯಿತೆಂದರೆ ಯಾರೂ ತಪ್ಪು ತಿಳಿಯಲಾರರು. ಈ ದಿನ ಅಂದು ಇದ್ದಂಥ ಪರಿಸರ; ಬದಲಾಗಿದೆ; ಕಾವ್ಯದಲ್ಲಿ  ಆಡುಮಾತನ್ನು ಬಳಸುವುದೇ ಒಂದು ಪಂಥವಾಗಿದೆ; ‘ಶೂದ್ರಪ್ರಜ್ಞೆ’ಗೆ  ವಾಪಸಾಗುವುದೇ ಹೆಮ್ಮೆಯ ಸಂಗತಿಯಾಗಿದೆ. ಕುವೆಂಪು ಅವರ ಕಾವ್ಯದಲ್ಲಿ ಸಂಸ್ಕೃತ ಮಾತುಗಳು ಅಲ್ಲಲ್ಲಿ ವಿಶೇಷವಾಗಿರಬಹುದು; ಆದರೆ ಕುವೆಂಪು ಅವರ ಕಾವ್ಯಭಾಷೆಯನ್ನು, ಯಾವ ಕಾರಣದಿಂದಲೂ ಕಾವ್ಯ ಭಾಷೆ ಅಲ್ಲವೆಂದು ತಳ್ಳಿಹಾಕಲು ಸಾಧ್ಯವಿಲ್ಲ.  ಅದರ ಬದಲು, ಸಂಸ್ಕೃತದ ಹಿನ್ನೆಲೆಯುಳ್ಳ ಅವರ ಕಾವ್ಯ ಭಾಷೆ, ಅತ್ಯಂತ ಸೊಗಸಾಗಿ ಹಾಗೂ ಸುಲಭವಾಗಿ, ಇತರ ಭಾರತೀಯ ಭಾಷೆಗಳಿಗೆ ಅನುವಾದವಾಗುವ ಸಾಧ್ಯತೆಯನ್ನು ಪಡೆದಿದೆ ಎಂಬುದು, ಈಗಾಗಲೆ ಅನ್ಯಭಾಷೆಗಳಿಗೆ ಆಗಿರುವ ಅವರ ಕಾವ್ಯದ ಅನುವಾದಗಳು ಸಮರ್ಥಿಸುತ್ತವೆ. ಆದರೆ ಬೇಂದ್ರೆಯವರ ಭಾಷೆ ಬೇರಾವ ಭಾರತೀಯ ಭಾಷೆಗಳಿಗೂ ಅನುವಾದ ಮಾಡುವುದು ಕಷ್ಟವೆಂಬಷ್ಟು ಪ್ರಾದೇಶಿಕ ಭಾಷಾ ಸತ್ವದಿಂದ ಬದ್ಧವಾಗಿದೆ. ಈ ಮಾತನ್ನು, ಬೇರೆಯ ಭಾಷೆಗಳಿಗೆ ಅನುವಾದವಾಗುವ ಸಾಧ್ಯತೆ ಇರುವ ಅಥವಾ ಸಾಧ್ಯತೆ ಇಲ್ಲದಿರುವ ಕಾವ್ಯಭಾಷೆಯೆ ಉತ್ತಮವಾದ ಕಾವ್ಯಭಾಷೆ ಎಂದು ಪ್ರತಿಪಾದಿಸುವ ಉದ್ದೇಶದಿಂದ ಹೇಳುತ್ತಿಲ್ಲ. ಈ ಮಾತನ್ನು ಎರಡು ಪ್ರಮುಖ ಕವಿಗಳ ಭಾಷಾ ಮಾಧ್ಯಮದ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಹೇಳಲಾಗಿದೆ.

ಹೊಸಗನ್ನಡ ಕಾವ್ಯದ ಭಾಷೆ, ಸಂಸ್ಕೃತದಿಂದ, ಹಳಗನ್ನಡದಿಂದ ಜಾನಪದ ಭಾಷೆಯಿಂದ ಮತ್ತು ಸಮಕಾಲೀನ ಶಿಷ್ಟಭಾಷೆಯಿಂದ ಸಿದ್ಧವಾಗಿ ಒಬ್ಬೊಬ್ಬರಲ್ಲಿ ಒಂದೊಂದರ ಆಧಿಕ್ಯವನ್ನು ಪ್ರಕಟಿಸುತ್ತದೆ.

ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಕಾವ್ಯದ ಭಾಷೆಗಿಂತ, ಅವರ ಕಾವ್ಯ ರೂಪಗಳು, ನವೋದಯ ಕಾವ್ಯದ ಅನೇಕ ಬಗೆಯ ರೂಪನಿರ್ಮಾಣಕ್ಕೆ ಕಾರಣವಾದವು. ಸಾನೆಟ್, ಪ್ರಗಾಥ, ಎಲಿಜಿ, ಕಥನ-ಕಾವ್ಯ, ಮಹಾಕಾವ್ಯ, ಇತ್ಯಾದಿ ಕಾವ್ಯಪ್ರಕಾರಗಳು ಮೊಟ್ಟಮೊದಲಿಗೆ ಕನ್ನಡದಲ್ಲಿ ಕಾಣಿಸಿಕೊಂಡವು. ಜೊತೆಗೆ ನವೋದಯ ಕಾವ್ಯ ಪದ್ಯಪ್ರಕಾರಗಳಲ್ಲಿ ಪ್ರಕಟಿಸಿದ ವೈವಿಧ್ಯತೆ ಅಪೂರ್ವವಾದದ್ದು.

ನವೋದಯ ಕಾವ್ಯರೂಪಗಳು ವೈವಿಧ್ಯಮಯವಾಗಿದ್ದರೂ ಮೂಲತಃ ಭಾವಗೀತಾತ್ಮಕವಾದವುಗಳು. ಅದರಲ್ಲೂ ಗೇಯಾಂಶದ ಕಡೆಗೆ ವಿಶೇಷವಾದ ಗಮನ ಕೊಡುವಂಥವು. ನವ್ಯ ಕವಿಗಳು, ೧೯೫೦ರ ನಂತರ, ಮೊದಲಿಗೆ ಮಾಡಿದ ಕೆಲಸವೆಂದರೆ, ಕಾವ್ಯಭಾಷೆಯನ್ನು ಭಾವಗೀತಾಕ್ಮಕವಾದ ಸಂಗೀತದ ಸಾಹಚರ್ಯದಿಂದ ಹೊರಕ್ಕೆ ಎಳೆದದ್ದು; ಮತ್ತು ಅದಕ್ಕೆ ಗದ್ಯದ ಸತ್ವವನ್ನು ತುಂಬಿ ಬೇರೊಂದು ಪರಿಣಾಮಕಾರಿಯಾದ ನೆಲೆಯಲ್ಲಿ ನಿಲ್ಲಿಸಿದ್ದು. ಸಂಕೀರ್ಣತೆ ಪ್ರತಿಮಾನಿಷ್ಠತೆ ಇವುಗಳನ್ನೊಳಗೊಂಡು ಭಾಷೆ ‘ತನ್ನೆಲ್ಲ ಪಾರಂಪರಿಕ ಸ್ತರ’ಗಳನ್ನು ತೆರೆಯುತ್ತಾ, ಮಾತನಾಡಿದ ಹಾಗೆ ಇರುವ ಕಾವ್ಯಾಭಿವ್ಯಕ್ತಿಯನ್ನು ನವ್ಯ ಕವಿಗಳು ಸಾಧಿಸಿ ತೋರಿಸಿದರು. ನವೋದಯ ಕವಿಗಳಲ್ಲಾದರೋ, ಭಾಷೆಯ ಸೌಂದರ್ಯಾಂಶದ ಕಡೆಗೆ, ಗೇಯಾಂಶದ ಕಡೆಗೆ ವಿಶೇಷಗಮನ ಕೊಡುವ ಪ್ರವೃತ್ತಿ ಆಗಾಗ ತಲೆದೋರುತ್ತಿತ್ತು; ಆದರೆ ನವ್ಯಕವಿಗಳು ಭಾಷೆಯನ್ನು ಈ ಎರಡರಿಂದಲೂ ಬಿಡಿಸಿ, ಗದ್ಯದ ನಿಲುವಿಗೆ ಎಳೆದು ತಂದು ನಿಲ್ಲಿಸಿದ್ದು ಮಾತ್ರವಲ್ಲದೆ, ಯಾವ ಬಗೆಯ ಮಡಿವಂತಿಕೆಯ ಭಯವೂ ಇಲ್ಲದೆ, ಎಗ್ಗಿಲ್ಲದ ಭಾಷಾ ಪ್ರಯೋಗವನ್ನು ಸಾಧಿಸಿದರು. ಇದು ಭಾಷೆಯ ಬಳಕೆಯಲ್ಲಿ ಒಂದು ರೀತಿಯ ಉದ್ದೇಶಪೂರ್ವಕವಾದ ‘ದಂಗೆಕೋರ ಪ್ರವೃತ್ತಿ’ಯಂತೆ ತೋರಬಹುದು.

ಕಾವ್ಯ, ಯಾವ ಕಾಲದ್ದೇ ಆಗಲಿ, ಅದು ಬದುಕಿನೊಂದಿಗೆ ಇರಿಸಿಕೊಳ್ಳುವ ಸಂಬಂಧದ ಮೇಲಿನಿಂದ, ಅಂದಿನ ಕಾವ್ಯೋದ್ದೇಶವನ್ನು ನಾವು ಗುರುತಿಸಬಹುದು. ಸಾವಿರ ವರ್ಷ ಕನ್ನಡದಲ್ಲಿ ಬಂದ ಸಾಹಿತ್ಯವನ್ನು ಗಮನಿಸಿದರೆ, ಈ ದೇಶದಲ್ಲಿ ಧಾರ್ಮಿಕ-ನೈತಿಕ ಶ್ರೇಯಸ್ಸೇ ಕಾವ್ಯದ ಗುರಿ ಎಂಬಂತೆ ಘೋಷಿತವಾಗಿದೆ. ಪ್ರಮುಖವಾದ ಧರ್ಮಗಳ ಪ್ರಸಾರದ ಅವಶ್ಯಕತೆಯೆ ಕಾವ್ಯಸ್ಫೂರ್ತಿಗೆ ಕಾರಣವಾದದ್ದರಿಂದ, ಬದುಕಿನ ಇತರ ಸಂಗತಿಗಳಿಗಿಂತ ಈ ‘ಆಧ್ಯಾತ್ಮಿಕ ಪ್ರಯೋಜನ’ವೇ ಪ್ರಧಾನವಾಗಿ ಬಿಟ್ಟಿತು. ಇದರಿಂದಾಗಿ ಕಾವ್ಯದ ವಸ್ತು ಉದಾತ್ತ ಮಹಾವ್ಯಕ್ತಿಚರಿತವಾಗಿ, ಕಾವ್ಯ ಎಂಬುದು ಪುರುಷಾರ್ಥಸಾಧನೆಯ ಹಾದಿಯಾಗಿ, ಬದುಕಿನ ಕಾವ್ಯಯೋಗ್ಯವಾದ ಮುಖವನ್ನೇ ಎಷ್ಟೋ ವೇಳೆ ಕಡೆಗಣಿಸಿದಂತಾಗಿದೆ. ಧರ್ಮಶ್ರದ್ಧೆಯಿಂದ ಕನ್ನಡ ಕಾವ್ಯ, ತನ್ನ ಕಾವ್ಯತ್ವವನ್ನು ಉಜ್ವಲಗೊಳಿಸಿಕೊಂಡಿತೇ ಅಥವಾ ಕುಂಠಿತಗೊಳಿಸಿಗೊಂಡಿತೇ ಎಂಬುದು ಒಂದು ಭಾರೀ ಪ್ರಬಂಧಕ್ಕೆ ವಸ್ತುವಾಗಿದೆ. ಆದರೆ ಹೊಸಗನ್ನಡ ಕಾವ್ಯದ ಕಾಲಕ್ಕಾಗಲೇ ಕವಿಯ ದೃಷ್ಟಿ, ಹಿಂದಿನಂತೆ ತಾನು ಅಕಸ್ಮಾತ್ತಾಗಿ ಹುಟ್ಟಿಬೆಳೆದ ಮತ-ಧರ್ಮ ಪರಿಸರಕ್ಕೆ ಬದ್ಧವಾಗದೆ ಸಾರ್ವತ್ರಿಕವಾದದ್ದು ಒಂದು ಮಹತ್ತರವಾದ ಬದಲಾವಣೆ ಎನ್ನಬಹುದು. ಇಂದಿನ ಯಾವ ಕವಿಯ ಕಾವ್ಯಾಭಿವ್ಯಕ್ತಿಯ ಆಧಾರದಿಂದಲೂ ಅವನು ಯಾವ ಮತ-ಧರ್ಮಕ್ಕೆ ಸೇರಿದವನೆಂಬುದನ್ನು ಗುರುತಿಸಲು ಸಾಧ್ಯವಾಗುವುದಿಲ್ಲವೆಂಬಷ್ಟರ ಮಟ್ಟಿನ ಸಾರ್ವತ್ರಿಕತೆ ಬಂದದ್ದು ವಿಶೇಷದ ಸಂಗತಿ. ಹೀಗಾಗಿ ಹಿಂದಿನ ‘ಮತ – ಧರ್ಮ’, ಇಂದು ಮಾಯವಾಗಿ ‘ಮಾನವೀಯತೆ’ಯೆ ದೊಡ್ಡ ಧರ್ಮವೆಂಬಭಾವನೆ ಬಂದಿದೆ. ಆದರೂ ನವೋದಯ ಕಾಲದ ಕವಿಗಳು ಹಿಂದಿನವರಂತೆಯೇ ಬದುಕಿನ ಶ್ರೇಯಸ್ಸಿನ ಬಗೆಗೆ ನಂಬಿಕೆ ಉಳ್ಳವರು; ಅವರು ಎಂದೂ ಯಾವ ಕಾರಣಕ್ಕೂ ನಿರಾಶಾವಾದಿಗಳಾಗಲಿಲ್ಲ; ಎಂಥ ದುರ್ಭರ ಪ್ರಸಂಗಗಳಲ್ಲಿಯೂ ಎದೆಗುಂದದ ಆಶಾವಾದಿಗಳು; ಭಾರತೀಯವಾದ ಮೌಲ್ಯಗಳನ್ನು ನಂಬಿದವರು; ಉಜ್ವಲವಾದ ರಾಷ್ಟ್ರೀಯತೆಯನ್ನು ಉಳ್ಳವರು. ಇದಕ್ಕೆ ಕಾರಣ ಈ ನವೋದಯ ಕಾವ್ಯ ಸ್ವಾತಂತ್ರ್ಯಪೂರ್ವ ಭಾರತೀಯ ಜನತೆಯಲ್ಲಿ ರಾಷ್ಟ್ರಪ್ರಜ್ಞೆಯು ಜಾಗೃತಗೊಳ್ಳುತ್ತಿದ್ದ ಕಾಲದಲ್ಲಿ ಮೂಡಿದ್ದು. ಪರಕೀಯ ಪ್ರಭುತ್ವವನ್ನು ಕಿತ್ತೊಗೆಯುವ, ಆತ್ಮತೇಜೋಬಲ ಸಮನ್ವಿತವಾದ ಅಹಿಂಸಾತ್ಮಕ ಹೋರಾಟಕ್ಕೆ ಗಾಂಧಿಯವರು ಈ  ದೇಶವನ್ನು ಸಿದ್ಧಗೊಳಿಸುವ ಕಾಲದಲ್ಲಿ, ಅದಕ್ಕೆ ಉಚಿತವಾದಂಥ ಭಾರತೀಯತೆಯ ಅನುಸಂಧಾನವನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಭಾರತೀಯನು ನಿಜವಾದ ಭಾರತೀಯನಾಗಬೇಕಾದರೆ, ಭಾರತೀಯ ಪರಂಪರೆಯ ಉಜ್ವಲವಾದ ಮೌಲ್ಯಗಳನ್ನು ಎತ್ತಿಹಿಡಿಯುವ ಮನೋಧರ್ಮಕ್ಕೆ ಅಂದಿನ ಯುಗವಿಭೂತಿಗಳಾದ ರಾಮಕೃಷ್ಣ, ವಿವೇಕಾನಂದ, ಅರವಿಂದ, ಗಾಂಧಿ, ರಮಣಮಹರ್ಷಿಗಳ ಸಾಧನೆಯ, ಬೋಧನೆಯ ಹಿನ್ನೆಲೆಯೂ ಒದಗಿಬಂದು, ಧ್ಯೇಯವಾದ ಪೌರುಷವಾದಗಳು ಯುಗಧರ್ಮದಲ್ಲಿ ಸಮಾವೇಶವಾದವು. ಇದರಿಂದಾಗಿ ನವೋದಯ ಕವಿಗಳ ಕಾವ್ಯದಲ್ಲಿ ಆದರ್ಶಪರತೆ, ಆಶಾವಾದ, ಅಚಲವಾದ ಶ್ರದ್ಧೆ ಇವು ಪ್ರಧಾನವಾದವು. ಈ ದೃಷ್ಟಿಯಿಂದ ನೋಡಿದಾಗ ಸ್ವಾತಂತ್ರ್ಯಪೂರ್ವದ ನವೋದಯ ಕಾವ್ಯ ಯಾಕೆ ಆವೇಶ-ಆದರ್ಶಗಳಿಂದ ರಮ್ಯೋಜ್ವಲವಾಗಿತ್ತು ಎಂಬುದಕ್ಕೆ ಕಾರಣ ದೊರೆಯುತ್ತದೆ. ಈ ನಡುವೆ ಯುರೋಪಿನಲ್ಲಿ ಬಂದ Progressive movement ಎಂಬುದೂ ಇದೇ ಕಾಲದಲ್ಲಿ ನವೋದಯ ಕವಿಗಳ ಮೇಲೆ ಪ್ರಭಾವವನ್ನು ಬೀರಿ, ರಾಜಕೀಯ ಸಾಮಾಜಿಕ ಕ್ಷೇತ್ರಗಳಲ್ಲಿ ನಡೆಯುವ ಅನ್ಯಾಯವನ್ನು ಪ್ರತಿಭಟಿಸುವ ಪ್ರವೃತ್ತಿಯನ್ನೂ ಶ್ರೀಸಾಮಾನ್ಯರ ಉದ್ಧಾರದ ಕಳಕಳಿಯನ್ನೂ ತುಂಬಿ, ಕನ್ನಡದಲ್ಲಿ ‘ನವೋದಯ ಕಾವ್ಯ’ದಿಂದ ಕೊಂಚ ಭಿನ್ನವಾದ ‘ಪ್ರಗತಿಶೀಲ’ ಕಾವ್ಯ ನಿರ್ಮಿತಿಗೆ ಕಾರಣವಾಯಿತು. ಆದರೆ ಇದು ಕಾವ್ಯಕ್ಷೇತ್ರಕ್ಕಿಂತ ಕಾದಂಬರಿ ಕ್ಷೇತ್ರದಲ್ಲಿ ತಂದ ಕ್ರಾಂತಿಕಾರಕವಾದ ಬದಲಾವಣೆ ಗಮನಿಸತಕ್ಕದ್ದಾಗಿದೆ. ಅಲ್ಲದೆ ಈ ‘ಪ್ರಗತಿಶೀಲ’ ಮನೋಧರ್ಮ ನಿಸ್ಸಂದೇಹವಾಗಿ ಮುಂದೆ ಬಂದ ನವ್ಯಕಾವ್ಯಕ್ಕೆ ನಾಂದಿಯಾಯಿತು.

ಸ್ವಾತಂತ್ರ್ಯಪೂರ್ವದ ನವೋದಯ ಕಾವ್ಯದಲ್ಲಿ, ಸಕಾರಣವಾಗಿ ಕಂಡು ಬಂದ ಆದರ್ಶಪರತೆ, ಆಶಾವಾದ, ಜೀವನಶ್ರದ್ಧೆ, ನಿಸರ್ಗಪ್ರಿಯತೆ, ಪೌರುಷವಾದ, ರಾಷ್ಟ್ರೀಯತೆ, ಇತ್ಯಾದಿಗಳು ಸ್ವಾತಂತ್ರ್ಯಾನಂತರ ಬಂದ ‘ನವ್ಯಕಾವ್ಯ’ದ ಪಾಲಿಗೆ ಅಪ್ರಸ್ತುತವೆಂಬಂತೆ ಕಂಡುಬಂದವೆನ್ನುವುದೇ ಸ್ವಾತಂತ್ರ್ಯೋತ್ತರ ಕಾಲದ ಕಾವ್ಯ ಮನೋಧರ್ಮದಲ್ಲಾದ ಮುಖ್ಯ ಬದಲಾವಣೆ ಎನ್ನಬಹುದು. ಪಶ್ಚಿಮದ ಟಿ.ಎಸ್. ಎಲಿಯಟ್. ಆಡೆನ್ ಮೊದಲಾದ ಕವಿಗಳ ಕಾವ್ಯದಿಂದ ಪ್ರೇರಣೆ ಪಡೆದ ನಮ್ಮವರ ನವ್ಯಕಾವ್ಯ ಒಂದು ರೀತಿಯಲ್ಲಿ ಸ್ವಾತಂತ್ರ್ಯಪೂರ್ವದ ಕಾವ್ಯಕ್ಕೆ ತೋರಿದ ಪ್ರತಿಭಟನೆಯಂತಿದೆ. ನವೋದಯ ಕವಿಗಳ ಆದರ್ಶಪರತೆ, ಮೌಲ್ಯಪ್ರಜ್ಞೆ, ಇತ್ಯಾದಿಗಳೇನಿದ್ದರೂ ಇಂದಿನ ಬದಲಾದ ಸಂವೇದನೆಗೆ ಅಭಿವ್ಯಕ್ತಿ ಕೊಡಲಾರದ ಸಂಗತಿಗಳೆಂದೂ, ಕಾವ್ಯಕ್ಕೆ ಮತ್ತೆ ವಾಸ್ತವದ ರಕ್ತದಾನವಾಗಿ ‘ಮಣ್ಣಿನ ವಾಸನೆ’ ಹೊಡೆಯಬೇಕೆಂದೂ ಪ್ರತಿಪಾದಿಸಿದರು. ಈ ವಾದದ ತಪ್ಪು ಸರಿಗಳನ್ನು ಚರ್ಚಿಸುವುದೀಗ ಅನಾವಶ್ಯಕ. ಆದರೆ ಕನ್ನಡ ಕಾವ್ಯ, ವಾಸ್ತವವನ್ನು ಅದು ಇದ್ದಂತೆಯೇ ಒಪ್ಪಿಕೊಂಡು, ಅದರ ಸಮಸ್ತಾನುಭವದಲ್ಲಿ ಪಾಲುಗೊಳ್ಳುವುದರಲ್ಲಿಯೆ ಜೀವಂತಿಕೆ ಇದೆ ಎನ್ನುವ ಕಳಕಳಿಯನ್ನು ಪ್ರಕಟಿಸಿದ್ದು ಇದೇ ಮೊದಲು ಎನ್ನುವ ಮಾತು ಸತ್ಯ. ಆಧ್ಯಾತ್ಮವೋ, ಆದರ್ಶವೋ, ಬೇರೆ ಯಾವ ಪರಂಪರಾಗತವಾದ ಅಥವಾ ವ್ಯಕ್ತಿ ನಿರ್ಮಿತ ಪ್ರಭುತ್ವಕ್ಕೆ ತಾನು ಬದ್ಧವಾಗದೆ, ತಾನು ತನ್ನೊಳಗನ್ನೂ, ತನ್ನ ಹೊರಗನ್ನೂ ಮುಖಾಮುಖಿಯಾಗಿ ನೋಡುತ್ತೇನೆಂಬ ಧೈರ್ಯ ಹಾಗೂ ಪ್ರಾಮಾಣಿಕತೆಗಳನ್ನು ಕಾವ್ಯಮುಖೇನ ಪ್ರಕಟಿಸಿದ್ದು ಇದೇ ಮೊದಲು. ಇದರಿಂದಾಗಿ ಒಂದು ಬಗೆಯ ಅಸ್ತಿತ್ವವಾದಿ (Existentialist) ಮನೋಧರ್ಮವೂ, ಜತೆಗೆ ನಮ್ಮ ಬದುಕಿಗೆ ಅಗತ್ಯವಾದ ವಿಮರ್ಶನ ಪ್ರಜ್ಞೆಯೂ ಬೆಳೆದದ್ದು ತುಂಬ ಸ್ವಾಗತಾರ್ಹವಾಗಿದೆ.

ನವೋದಯ-೧೯೭೬