ಯಕ್ಷಗಾನವು ಇಂದು ಬಹು ಜನಪ್ರಿಯವಾದ ಒಂದು ರಂಗಭೂಮಿ ಕಲಾ ಪ್ರಕಾರವಾಗಿದ. ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಸಮತೋಲನದಿಂದ ಸಮನ್ವಯಗೊಳಿಸಿ ರಂಗಪ್ರಯೋಗದ ಬಟ್ಟಂದಕ್ಕೆ ಸಹಕಾರಿಯಾಗುವುದು ಯಕ್ಷಗಾನದ ವಿಶೇಷತೆಯಾಗಿದೆ. ಯಕ್ಷಗಾನ ಬಯಲಾಟಗಳ ಬೇರೆ ಬೇರೆ ಪ್ರಕಾರಗಳು ದೊಡ್ಡಾಟ, ಸಣ್ಣಾಟ, ಸೂತ್ರದ ಗೊಂಬೆಯಾಟ, ತೊಗಲುಬೊಂಬೆಯಾಟ ಮುಂತಾದ  ಹೆಸರುಗಳಿಂದ ಕನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಚಾರದಲ್ಲಿವೆ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಲೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಅದರ ಪ್ರಮುಖ ಅಂಗವಾದ ಸಂಗೀತದ ಬಗ್ಗೆ ವಿವೇಚಿಸುವುದು ಈ ಲೇಖನದ ಉದ್ದೇಶವಾಗಿದೆ.

ಯಕ್ಷಗಾನ ಆಟ, ಬಯಲಾಟ, ಮೇಳದಾಟ, ದಶಾವತಾರ ಆಟ, ಭಾಗವತರ ಆಟ ಇತ್ಯಾದಿ ಹೆಸರುಗಳಿದ್ದರೂ ಯಕ್ಷಗಾನ ಇದರ ಮೂಲ ಹೆಸರು. ಇಲ್ಲಿ ಗಾಯನ ಎಂಬುದು ಸಂಗೀತವನ್ನು ಸೂಚಿಸುತ್ತದೆ. ಶ್ರಿ ಕುಕ್ಕಿಲ ಕೃಷ್ಣಭಟ್ಟರು ತಮ್ಮ ‘ಯಕ್ಷಗಾನ ಶಾಸ್ತ್ರೀಯತೆ’ ಎಂಬ ಲೇಖನದಲ್ಲಿ ಹೇಳಿದಂತೆ ‘ಯಕ್ಷ’ ಶಬ್ದವು ‘ಗಾನ’ ಶಬ್ದಕ್ಕೆ ವಿಶೇಷಣವಾಗಿದೆ. ‘ಯಕ್ಷ’ ಧಾತುವಿಗೆ ಪೂಜೆ ಅಥವಾ ಆರಾಧನೆ ಎಂಬರ್ಥವಿದ್ದು, ‘ಯಕ್ಷಗಾನ’ ಸಮಸ್ತ ಪದಕ್ಕೆ ‘ಯಕ್ಷಾರ್ಥಂ ಗಾನಮ್’ ಎಂದರೆ ಪೂಜೆಗಾಗಿ ಇರುವ ಪ್ರಬಂಧ ಎಂಧರ್ಥವಾಗಿದೆ. ಯಕ್ಷ ಎಂದರೆ ಗಂಧರ್ವ ಎಂಬಂತೆ ದೇವತೆಗಳಲ್ಲಿ ಒಂದು ವಿಶಿಷ್ಟ ವರ್ಗ. ಅವರು ಕುಬೇರನ ಅನುಯಾಯಿಗಳು. ಶಿವಭಕ್ತರು, ಯಕ್ಷರು ಪೂಜೆಗಾಗಿ ಬಳಸಿದ ಗಾಯನ ಯಕ್ಷಗಾನ ಎಂಬರ್ಥ ಮಾಡಿದವರಿದ್ದಾರೆ.

ನಮ್ಮ ಪುರಾಣ ಗ್ರಂಥಗಳಲ್ಲಿ ವಿಷ್ಣುವನ್ನು ಭಗವಂತ ಎಂದು ಕರೆದಿದ್ದಾರೆ. ಈ ಭಗವಂತನ ಕಥಾನಕವೇ ಭಾಗವತ. ಭಾಗವತ ಶಬ್ದಕ್ಕೆ ಭವಗಂತನ ಭಕ್ತನೆಂಬ ಅರ್ಥವೂ ಇದ್ದು, ಭಗವದ್ಬಕ್ತರು ಆಡಿಸುವ ಹಾಗೂ ನೋಡುವ ಆಟವಾಗಿ ಇದು ಭಾಗವತರಾಟವಾಗಿದೆ. ಯಕ್ಷಗಾನದಲ್ಲಿ ಸಂಗೀತದ ನಿರ್ವಹಣೆ ಮಾಡುತ್ತಾ ಕಥಾನಕವನ್ನು ರಂಗಸ್ಥಳದ ಮೇಲೆ ತಂದು ತೋರಿಸುವ ವ್ಯಕ್ತಿಗೂ ಭಾಗವತ ಎಂದು ಹೆಸರಿದೆ. ಯಕ್ಷಗಾನ ರಂಗಪ್ರಯೋಗವಾಗಲಿ, ತಾಳಮದ್ದಲೆಯಾಗಲಿ ಗಾನ ಪ್ರಯೋಗದುದ್ದಕ್ಕೂ ಪ್ರಮುಖ ಪಾತ್ರವಹಿಸುತ್ತದೆ.

ಯಕ್ಷಗಾನ ಸಂಗೀತದ ಅಂಗಗಳೆಂದರೆ ಅದರ ಸಾಹಿತ್ಯ ಹಾಗೂ ಹಿಮ್ಮೇಳ, ಸಾಹಿತ್ಯವು ಭಾಗವತರು ಹಾಡುವ ಪದ್ಯಗಳು ಹಾಗೂ ಅದಕ್ಕೆ ಪಾತ್ರಧಾರಿಗಳು ವಿವರಿಸುವ ಗದ್ಯಭಾಗಗಳನ್ನು ಒಳಗೊಂಡಿದೆ. ಹಾಡುವ ಪದ್ಯಗಳು ಕಥಾಭಾಗಕ್ಕನುಸಾರವಾಗಿದ್ದು ಅವುಗಳಲ್ಲಿ ಬದಲಾವಣೆಗಳಿಲ್ಲ. ಆದರೆ ಪದ್ಯವನ್ನು ಕೇಂದ್ರವಾಗಿಟ್ಟುಕೊಂಡು ಪಾತ್ರಧಾರಿಗಳು ನೀಡುವ ವಿವರಣೆ ಕಥಾನಕದ ಬಗ್ಗೆ ಅವರಿಗಿರುವ ಜ್ಞಾನ ಭಾಷಾ ಸಂಪತ್ತನ್ನು ಅವಲಂಬಿಸಿ ಪ್ರತಿಸಲವೂ ಭಿನ್ನವಾಗಿರುತ್ತದೆ. ಒಂದು ಕಥಾನಕವನ್ನು ಜನರಿಗೆ ಸುಲಭವಾಗಿ ಮನದಟ್ಟು ಮಾಡುವುದು ಯಕ್ಷಗಾನದ ಉದ್ದೇಶ. ಈ ಉದ್ದೇಶಕ್ಕಾಗಿ ಪದ್ಯರೂಪದಲ್ಲಿ ರಚಿತಗೊಂಡಿರುವ ಕಥನಕಗಳಿಗೆ ಪ್ರಸಂಗ ಎನ್ನುತ್ತಾರೆ. ೨೦೦ ರಿಂದ ೫೦೦ ವರೆಗೆ ಪದ್ಯಗಳನ್ನು ಹೊಂದಿದ ಈ ಕಥಾನಕಗಳು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡ ಗ್ರಂಥಗಳನ್ನು  ಆಧರಿಸಿದವು. ಯಕ್ಷಗಾನ ಕವಿಗಳು ಭಾಗವತ, ರಾಮಾಯಣ, ಮಹಾಭಾರತ, ಪುರಾಣಗಳಿಂದ ಘಟನೆಯನ್ನು ಆಯ್ದುಕೊಂಡು ಅವುಗಳಿಗೆ ತಮ್ಮ ಪ್ರತಿಭೆಯ ಬೆಳಕಿನಲ್ಲಿ ವಿನೂತನ ರೂಪವನ್ನಿತ್ತು ಸ್ವತಂತ್ರ ಕೃತಿಗಳನ್ನಾಗ ಮಾರ್ಪಡಿಸಿಕೊಂಡರು. ಬಹುತೇಕ ಪ್ರಾಚೀನ ಪ್ರಸಂಗಗಳಿಗೆ ಗದುಗಿನ ಭಾರತ, ಜೈಮಿನಿ ಭಾರತ, ತೊರವೆ ರಾಮಾಯಣಗಳೇ ಆಕರ ಗ್ರಂಥಗಳು. ಹಾಗಾಗಿ ಪೌರಾಣಿಕ ಕಥೆಗಳೇ ಹೆಚ್ಚು ರಂಗದಲ್ಲಿ ಪ್ರಯೋಗಿಸುವಾಗ ಪದ್ಯಗಳ ಸಂಖ್ಯೆ ಅಧಿಕವೆನಿಸಿದಾಗ ಸಮಯದ ಮಿತಿಯನ್ನು ಗಮನಿಸಿ ಭಾಗವತರು ಕೆಲವು ಪದ್ಯಗಳನ್ನು ಬಿಡುವುದುಂಟು.

ಯಕ್ಷಗಾನದಲ್ಲಿ ಗಾನ ಮುಖ್ಯ. ಅದೇ ಇಲ್ಲಿ ಪ್ರಯೋಗಕ್ಕೆ ಮೂಲ. ರಂಗದಲ್ಲಿ ಕಾಣಿಸಿಕೊಳ್ಳುವ ಎಲ್ಲ ಕ್ರಿಯೆಗೂ ಅದರಲ್ಲಿರುವ ಗಾನವೇ ಉಗಮಸ್ಥಾನ. ಈ ಗಾನಕ್ಕೆ ಆಧಾರ ಅದರ ಕಾವ್ಯ ಭಾಗ ‘ಯಕ್ಷಗಾನದಲ್ಲಿ ಕಾವ್ಯ ಕೇಂದ್ರ ಸ್ಥಾನದಲ್ಲಿ ನಿಂತು ಮುಂದೆ ಅದೇ ಸಂಗೀತದ ಒಂದಿಲ್ಲೊಂದು ಬಗೆಯನ್ನು ಒಳಗೊಂಡ ಗೀತವಾಗಿ ಮುದ್ರಾದಿಗಳನ್ನು ಒಳಗೊಂಡ ನೃತ್ಯವಾಗಿ ಅಭಿನಯವನ್ನು  ಒಳಗೊಂಡ ಪದ್ಯ ಸಂಭಾಷಣೆಯಾಗಿ, ನಾಟಕ ಕ್ರಿಯೆಯಾಗಿ ಮೂರ್ತ ಸ್ವರೂಪವನ್ನು ಪಡೆಯುತ್ತದೆ. ಸಂಗೀತ, ನೃತ್ಯಗಳೆಲ್ಲವೂ ಸೇರಿ ಕಾವ್ಯಭಾಗ ಸೂಚಿಸಿದ ಅಥವಾ ವಿವರಿಸಿದ ನಾಟಖಾಂಶವನ್ನು ಎತ್ತಿ ವಿಸ್ತರಿಸುತ್ತದೆ’. (ಯಕ್ಷಗಾನ ಸಂ. ಶ್ರೀ. ವಿ. ಸೀತಾರಾಮಯ್ಯ ಪು. ೮)

ಹಿಮ್ಮೇಳವಂತೂ ಯಕ್ಷಗಾನದಲ್ಲಿ ಅತಿ ಪ್ರಮುಖ ಅಂಗವಾಗಿದೆ. ಅದು ರಂಗಕ್ರಿಯೆಯ ಆಧಾರ. ಹಿಮ್ಮೇಳದಲ್ಲಿ ಪದ್ಯ ಸಾಹಿತ್ಯದ ಹಾಡುಗಾರಿಕೆಯನ್ನು ನಿಭಾಯಿಸುವ ಭಾಗವತ ಅಲ್ಲಿ ಬಳಕೆಯಾಗುವ ಶೃತಿವಾದ್ಯ, ಲಯವಾದ್ಯಗಳಾದ ಚಂಡೆ, ಮದ್ದಳೆ ಹಾಗೂ ವಾದಕರಿರುತ್ತಾರೆ. ಭಾಗವತ ಕಥಾನಿರೂಪಕನೂ, ನಿರ್ದೇಶಕನೂ ಆಗಿರುತ್ತಾನೆ. ಕಲಾವಿದರ ತಂಡಕ್ಕೆ ಅವನೇ ನಾಯಕ. ಸೂತ್ರಧಾರ. ಕಥೆಯನ್ನು ಓಡಿಸುವ ಅಥವಾ ಸೀಮಿತಗೊಳಿಸುವ, ಕಥಾ ಪಾತ್ರಗಳನ್ನು ಕುಣಿಸುವ ಹೀಗೆ ಇಡೀ ರಂಗಕ್ರಿಯೆಯು ಈತನ ಜವಾಬ್ದಾರಿಯಲ್ಲಿ ನಡೆಯುತ್ತಿರುತ್ತದೆ. ಈ ಪ್ರಾಮುಖ್ಯತೆಯನ್ನು ಲಕ್ಷಿಸಿಯೇ ಮೇಳ ಸಂಪ್ರದಾಯದಲ್ಲಿ ಭಾಗವತನನ್ನು ಪ್ರಥಮ ವೇಷ ಎಮದು ಕರೆಯಲಾಗಿದೆ. ಹಿಮ್ಮೇಳದ ವಾದ್ಯಗಳು ಹಾಡುಗಾರಿಕೆಗೂ, ಕುಣಿತಕ್ಕೂ ಸೂಕ್ತ ಸಹಕಾರವನ್ನು ನೀಡುತ್ತವೆ. ರಂಗದಲ್ಲಿ ಪಾತ್ರಧಾರಿಗಳು ಕುಣಿದು, ಅಭಿನಯಿಸಿ, ಅರ್ಥೈಸಿ, ವಿವರಿಸಿ, ಹಿಮ್ಮೇಳವನ್ನು ವಿಸ್ತರಿಸುತ್ತಾರೆ. ಯಕ್ಷಗಾನದಲ್ಲಿ ಮದ್ದಳೆ ಕೇವಲ ಲಯವಾದ್ಯವಾಗಿರದೆ ಪದ್ಯದ ಭಾವಾಭಿವ್ಯಕ್ತಿಗೆ ಮತ್ತು ಅದಕ್ಕೆ ಸರಿಯಾದ ಅಭಿನಯ ಚಲನೆಗೆ ಸರಿಹೊಂದುವಂತೆ ನುಡಿಸಲ್ಪಡುತ್ತದೆ. ಅಬ್ಬರದ ವಾದ್ಯವಾದ ಚಂಡೆಯನ್ನು ಕೂಡಾ ಸಮಂಜಸವಾಗಿ ಬಳಸುವ ಪ್ರಯೋಗಗಳನ್ನು ಮಾಡಲಾಗುತ್ತದೆ.

ಯಕ್ಷಗಾನ ಸಂಗೀತವನ್ನು ಭಾರತೀಯ ಸಂಗೀತದ ಪರಿಭಾಷೆ ಹಾಗೂ ಸಂಗೀತದ ಪರಂಪರೆಯಲ್ಲಿಯೇ ಗುರುತಿಸಬೇಕಾಗುತ್ತದೆ. ಸಂಗೀತದ ಮುಖ್ಯ ಶಾಸ್ತ್ರಗ್ರಂಥವಾದ ಶಾರ್ಙದೇವನ ‘ಸಂಗೀತರತ್ನಾಕರ’ದಲ್ಲಿ ಹೇಳಿದ ಸಂಗೀತದ ವ್ಯಾಖ್ಯೆ ‘ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತ ಮುಚ್ಯತೇ’ ಎಂದರೆ ಗೀತ, ವಾದ್ಯ ಮತ್ತು ನೃತ್ಯ ಈ ಮೂರರ ಸಂಗಮವೇ ಸಂಗೀತ. ಇದು ಯಕ್ಷಗಾನಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಗೀತ, ವಾದ್ಯ (ಚಂಡೆ, ಮದ್ದಳೆ, ಶೃತಿವಾದ್ಯ) ಮತ್ತು ನೃತ್ಯ ಈ ಮುಖ್ಯ ಅಂಗಗಳನ್ನು ಹೊಂದಿದ ಯಕ್ಷಗಾನ ಆ ದೃಷ್ಟಿಯಿಂದ ನೋಡಿದರೆ ಒಂದು ಪರಿಫೂರ್ಣ ಸಂಗೀತ ಪದ್ಧತಿಯಾಗಿದೆ.

ನಮ್ಮ ಪ್ರಾಚೀನ ಸಂಗೀತ ಶಾಸ್ತ್ರಜ್ಞರು ಎರಡು ಪ್ರಕಾರದ ಸಂಗೀತದ ಬಗ್ಗೆ ಹೇಳಿದ್ದಾರೆ.  ) ಮಾರ್ಗೀ ಸಂಗೀತ      ) ದೇಶೀ ಸಂಗೀತ

ಮಾರ್ಗೀ ಸಂಗೀತ :

ಯೋ ಮಾರ್ಗಿತೊ, ವಿರಿಂಚಾದೈಃ ಪ್ರಯುಕ್ತೋ ಭರತಾದಿಭೀಃ
ದೇವಸ್ಯ
ಪ್ರರತಃ ಶಂಭೋರ್ನಿಯ ತಾಭ್ಯುದಯ ಪ್ರದಃ
ಸಂಗೀತ ರತ್ನಾಕರ

ಎಂದರೆ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟು, ಭರತಾದಿಗಳಿಂದ ಶಿವನೆದುರು ಪ್ರಸ್ತುತಪಡಿಸಲ್ಪಟ್ಟ ಮತ್ತು ಮೋಕ್ಷ ಸಾಧಕ (ಕಲ್ಯಾಣಪ್ರದ)ವಾದದ್ದು ಮಾರ್ಗೀ ಸಂಗೀತ. ಹೀಗೆ ವೈದಿಕ ಋಕ್‌ಗಳನ್ನು ಒಳಗೊಂಡ ಮತ್ತು ಕಟ್ಟುನಿಟಾದ ಗಾನ ನಿಯಮಗಳನ್ನು ಹೊಂದಿದ ಸಾಮಗಾನ ಅಥವಾ ಮಾರ್ಗೀ ಸಂಗೀತವು ಅನಾದಿಯೂ, ಅಪೌರುಷೇಯವೂ, ಅತ್ಯಂತ ಪವಿತ್ರವೂ ವ್ಯವಸ್ಥಿತ ನಿಯಮಬದ್ಧ ಹಾಗೂ ಅಪರಿವರ್ತನೀಯವೂ ಆಗಿತ್ತು. ಗಂಧರ್ವರು, ಋಷಿಮುನಿಗಳಿಗೆ ಸಂಬಂದಿಸಿದ ಈ ಮಾರ್ಗೀ ಸಂಗೀತ ಈಗ ಲುಪ್ತವಾಗಿದೆ ಎಂದು ಶಾಸ್ತ್ರಗಳು ತಿಳಿಸುತ್ತವೆ. ಇಂದು ಪ್ರಚಲಿತವಿರುವ ಸಂಗೀತ ಪದ್ಧತಿಗಳಿಗೆ ಮೂಲವೆಂದರೆ ದೇಶಿ ಸಂಗೀತ. ಪ್ರಥಮಬಾರಿಗೆ ಈ ಸಂಗೀತದ ವರ್ಣನೆಯನ್ನು ಮಾಡಿದ ಮತಂಗ ಮುನಿಯ ಬೃಹದ್ದೇಶಿ ಗ್ರಂಥದ ಪ್ರಕಾರ ಮಾರ್ಗೀಯ ಸಂಗೀತದಿಂದ ಭಿನ್ನವಾಗಿ ಈ ದೇಶಿಯ ಸಂಗೀತದ ಪರಂಪರೆ ಬೆಳೆದುಬಂದಿತು. ಮುಖ್ಯವಾಗಿ ಜನಮನರಂಜನೆ ಉದ್ದೇಶವಾಗುಳ್ಳ ಲೋಕರುಚಿಗೆ ಅನುಕೂಲವಾಗಿ ಬೆಳೆಯುತ್ತ ಜನಪ್ರಿಯಾದ ಲೌಕಿಕ ಸಂಗೀತವಿದು. ಬೃಹದ್ದೇಶೀ ಸಂಗೀತ ಗ್ರಂಥದಲ್ಲಿ ಹೇಳಿದಂತೆ.

ಅಬಾಲ ಗೋಪಾಲೈಃ ಕ್ಷಿತಿ ಪಾಲೈರ್ನಿಜೇಚ್ಛಯಾ |
ಗೀಯತೆ
ಸಾನುರಾಗೇನ ಸ್ವದೇಶೆ ದೇಶಿರುಚ್ಚತೇ’||

ಚಿಕ್ಕ ಚಿಕ್ಕಮಕ್ಕಳು, ದನಗಾಹಿಗಳಿಂದ  ಅರಸನವರೆಗೆ ಎಲ್ಲರೂ ಮುಕ್ತಕಂಠದಿಂದ ತಮ್ಮ ಭಾಷೆಯಲ್ಲಿ ಹಾಡುವ ಗೀತ, ಧಾಟಿಯೇ ದೇಶಿ.

ಹೀಗೆ ಸಾಮಾನ್ಯ ಜನರಲ್ಲಿ ಲೋಕಪ್ರಿಯವಾದ ದೇಶಿಯ ಸಂಗೀತಕ್ಕೆ ಕಾಲಕ್ರಮದಲ್ಲಿ ಎರಡು ರೂಪಗಳು ದೊರೆತವು.

1) ಶಾಸ್ತ್ರದ ಆಧಾರದ ಮೇಲೆ ಪ್ರಚಲಿತವಾದ ಮತ್ತು ವಿದ್ವಾಂಸರು ಮತ್ತು ಕಲಾಕಾರರ ಸಾಧನೆಯ ವಿಷಯವಾದ ಶಾಶ್ತ್ರೀಯ ಸಂಗೀತ ಇದರಲ್ಲಿ ಕರ್ನಾಟಕಿ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತಗಳೆಂಬ ಎರಡು ಪ್ರಕಾರಗಳಿವೆ.

2) ಕಾಲ ಮತ್ತು ದೇಶದ ಅನುರೂಪ ಪ್ರಕೃತಿಯು ಸ್ವಚ್ಛಂದ ವಾತಾವರಣದಲ್ಲಿ ವಿಕಸಿತವಾದ ಲೋಕಸಂಗೀತ. (ಜಾನಪದ ಸಂಗೀತ)

ಶಾಸ್ತ್ರೀಯ ಮತ್ತು ಜನಪದ ಸಂಗೀತಗಳು ಒಂದಕ್ಕೊಂದು ಪೂರಕವಾಗಿಯೇ ಬೆಳವಣಿಗೆ ಹೊಂದಿವೆ. ಶಾಸ್ತ್ರೀಯ ಸಂಗೀತವು ಲೋಕ ಸಂಗೀತದಿಂದ ಅನೇಕ ವಿಷಯಗಳನ್ನು ಗ್ರಹಣ ಮಾಡಿ ಶಾಸ್ತ್ರೀಯ ರೂಪಗೊಳಿಸಿ ಅಳವಡಿಸಿಕೊಂಡಿರುವ ಉದಾಹರಣೆ ಸಿಗುತ್ತದೆ.

ಯಕ್ಷಗಾನ ಸಂಗೀತದ ದೃಷ್ಟಿಯಿಂದ ಶಾಸ್ತ್ರೀಯ ಸಂಗೀತದಂತೆಯೇ ದೇಶೀ ಸಂಗೀತದ ಒಂದು ಪ್ರಕಾರವೇ ಹೊರತು ಶುದ್ಧ ಜಾನಪದವಲ್ಲ. ಶುದ್ಧ ಜಾನಪದವೆಂದರೆ ಗ್ರಂಥಸ್ಥವಲ್ಲದ ಮತ್ತು ಕೇವಲ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಸಾಗಿಸಬಹುದಾದಂತುಹುದು ಎಂದರ್ಥ. ಯಕ್ಷಗಾನವು ಈ ರಿತಿಯ ಶುದ್ಧ ಜಾನಪದವಂತು ಅಲ್ಲ. ಸಂಗೀತಶಾಸ್ತ್ರ ಪ್ರಮಾಣಭೂತರಾದ ತಂಜಾವೂರಿನ ಅರಸರ, ಮೈಸೂರಿನ ಮುಮ್ಮುಡಿ ಕೃಷ್ಣರಾಜರು, ಅಳಿಯ ಲಿಂಗರಾಜರು, ಸಾಹಿತ್ಯದಲ್ಲಿ ಗಣ್ಯಸ್ಥಾನ ಗಳಿಸಿದ ಮುದ್ದಣಾದಿಗಳು ಇದರಲ್ಲಿ ಆಸ್ಥೆ ವಹಿಸಿ ಕೃಷಿ ಮಾಡಿರುವ ಆಧಾರವಿದೆ.

ಡಾ. ಶಿವರಾಮ ಕಾರಂತರು ಯಕ್ಷಗಾನದ ಬಗ್ಗೆ ಮಾತನಾಡುವಾಗ ಜಾನಪದ ಕಲೆ ಎಂಬ ಶಬ್ದ ಬಳಸಿದ್ದರೂ ಕೂಡಾ ಅದಕ್ಕೆ ಕಾರಣ ಅದು ಜನಪದ ಪೋಷಣೆಯಿಂದ ಬೆಳೆದು ಬಂದಿತ್ತು ಎನ್ನುವ ದೃಷ್ಟಿಯನ್ನು ಸ್ಪಷ್ಟಪಡಿಸಿದ್ದಾರೆ. ಯಕ್ಷಗಾನದ ಅಂಗಗಳಾದ ಕುಣಿತ, ಸಂಗೀತ, ಉಡುಗೆ, ಅಲಂಕಾರಗಳು ವಿಶೇಷ ರೀತಿಯ ವಿಕಾಸ ಹೊಂದಿದ್ದು, ದೀರ್ಘಕಾಲದ ಅಭ್ಯಾಸ, ಪರಿಶ್ರಮದಿಂದ ಬರುವಂತವುಗಳಾಗಿವೆ. ಅಂತೆಯೇ ಅವು ಶಾಸ್ತ್ರೀಯ ಎನಿಸಿಕೊಳ್ಳುವ ಭರತನಾಟ್ಯದಂಗೆ ಹಾಗೇ ಕರ್ನಾಟಕೀ ಮತ್ತು ಹಿಂದುಸ್ತಾನಿ ಸಂಗೀತದಂತೆ ವಿಕಾಸ ಪಡೆದಿರುವ ಅಂಶಗಳೆಂದು ಅಭಿಪ್ರಾಯಪಟ್ಟಿದ್ದಾರೆ.

ಯಕ್ಷಗಾನವು ಸಂಗೀತಕ್ಕೆ ನಿಕಟವಾಗಿದೆ ಎನ್ನುವುದಕ್ಕೆ ಇನ್ನೂ ಆಧಾರವೆಂದರೆ ಅದರಲ್ಲಿ ಬಳಕೆಯಾಗುವ ರಾಗ-ತಾಳಗಳೆಲ್ಲ ಶಾಸ್ತ್ರೀಯ ಸಂಗೀತದವುಗಳೇ. ೧೫೦ ಕ್ಕೂ ಮಿಕ್ಕಿ ರಾಗಗಳ ಬಳಕೆ ಯಕ್ಷಗಾನದಲ್ಲಿ ಆಗಿದೆ ಎಂಬ ಉಲ್ಲೇಖವಿದ್ದರೂ ಇಂದು ಬಳಕೆಯಲ್ಲಿ ಇರುವವು ಕೆಲವು ಮಾತ್ರ. ರಾಗ-ತಾಳಗಳ ವಿಷಯದಲ್ಲಿ ಇದು ಕರ್ನಾಟಕೀ ಸಂಗೀತಕ್ಕೆ ಸಮೀಪವಿದ್ದರೂ ತನ್ನದೇ ಆದ ವಿಶಿಷ್ಟ ಗಮಕ ಹಾಗೂ ಆಲಾಪನಾ ಕ್ರಮದಿಂದಾಗಿ ಹಿಂದುಸ್ತಾನಿ ಹಾಗೂ ಕರ್ನಾಟಕೀ ಸಂಗೀತದಿಂದ ಭಿನ್ನವಾಗಿದೆ. ರಾಗ ಸಂಗೀತದಮತೆ ಯಕ್ಷಗಾನ ಹಾಡುಗಾರಿಕೆಗೆ ಶೃತಿವಾದ್ಯ ಬಳಕೆ ಇದೆ. ಯಕ್ಷಗಾನದ ಛಂದಸ್ಸು, ರಾಗ, ತಾಳ, ಇವಾವೂ ಜಾನಪದವಲ್. ಯಕ್ಷಗಾನದಲ್ಲಿ ಹಾಡಷ್ಟೇ ಅಲ್ಲ, ಮಾತುಗಾರಿಕೆಗೆ ಕೂಡಾ ಶೃತಿಗೆ ಹೊಂದಿಕೊಂಡೇ ಇರುವುದರಿಂದ ಅಲ್ಲಿ ಶೃತಿಯ ಆವರಣಕ್ಕೆ ತುಂಬಾ ಮಹತ್ವವಿದೆ.

ಶ್ರೀ ಶ್ರೀನಿವಾಸ ಉಡುಪ ಅವರು ತಮ್ಮ ‘ಯಕ್ಷಗಾನ ಗಾನ ವಿಧಾನ’ ಎಂಬ ಲೇಖನದಲ್ಲಿ ಮಾರ್ಗಿ ಮತ್ತು ದೇಶಿಗಳ ಬಗ್ಗೆ ಹೇಳುತ್ತ ಯಾವುದೇ ಕಲೆ ಹುಟ್ಟಿನಿಂದಲೇ ಮಾರ್ಗಿ ಪದ್ಧತಿಯಾಗಿರಲು ಸಾಧ್ಯವಿಲ್ಲ. ಅಸಂಸ್ಕೃತ ಮಾನವನೊಂದಿಗೆ ಅಸಂಸ್ಕೃತವಾದಿ ಸ್ಥಿತಿಯಲ್ಲಿಯೇ ಅವು ಇದ್ದವು. ಜಾನಪದವಾಗಿಯೇ ಇದ್ದವು. ಇವು ಸಂಸ್ಕೃತಿಯ ವಿಕಾಸದ ಜೊತೆಗೆ ಬೆಳೆದು ವಿದ್ವಾಂಸರಿಂದ ಶಾಸ್ತ್ರಕ್ಕೆ ಅಲವಡಿಸಲ್ಪಟ್ಟವು. ಕಲೆಗೆ ಶಾಸ್ತ್ರವು ಅಡ್ಡಿಯುಂಟು ಮಾಡಿದಾಗ ಅದು ಶಾಸ್ತ್ರದ ಮೇರೆಯನ್ನು ದಾಟಿ ಸಾಗುವುದು ಮತ್ತೆ ಇವು ಹೊಸ ಶಾಸ್ತ್ರಗಳಲ್ಲಿ ಅಳವಡುವುದು. ಹೀಗೆ ಪರಂಪರೆ ಬೆಳೆದು ಬಂದದ್ದು ಎನ್ನುತ್ತಾರೆ.

ಆದ್ದರಿಂದ ತಿರಾ ಹಳೆಯದಾದ, ಪ್ರಚಾರದಲ್ಲಿ ಇಲ್ಲದ ಸಿದ್ಧಾಂತ ಉದಾಹರಣೆಗಳನ್ನು ‘ಮಾರ್ಗ’ವೆಂದೂ ಶಾಸ್ತ್ರದ ಚೌಕಟ್ಟಿನಲ್ಲಿಯೇ ಬದಲಾಗುತ್ತ ಬಂದು ಪ್ರಚಾರದಲ್ಲಿ ಇದ್ದುದನ್ನು ‘ದೇಶಿ’ ಎಂದು ಹೇಳಲಾಗಿದೆ. ಹಾಗಾಗಿ ಈಗ ಶಾಸ್ತ್ರೀಯ ಎನ್ನುವುದೆಲ್ಲ ದೇಶೀಯ ಶಾಸ್ತ್ರದ ಚೌಕಟ್ಟಿನೊಳಗೆ ಬಾರದ ಕೇವಲ ಜನಜೀವನದಲ್ಲೇ ಬೆಳೆದು ಬಂದಿರುವ ಗ್ರಾಮೀಣ ಕಲೆ, ಸಾಹಿತ್ಯಗಳನ್ನು ಜಾನಪದ ಎನ್ನಲಾಗಿದೆ. ಹಾಗಾಗಿ ‘ಮಾರ್ಗ’ಕ್ಕೆ ಲಕ್ಷಣ ಮಾತ್ರ ದೊರೆಯುತ್ತದೆ. ಶಾಸ್ತ್ರೀಯಕ್ಕೆ ಲಕ್ಷ್ಯ-ಲಕ್ಷಣಗಳೆರಡೂ ದೊರೆಯುತ್ತದೆ. ಜಾನಪದಕ್ಕೆ ಲಕ್ಷ್ಯ ಮಾತ್ರ ಲಭ್ಯ ಎನ್ನಬಹುದು. ಈ ದೃಷ್ಟಿಯಿಂದ ಯಕ್ಷಗಾನವು ಲಕ್ಷ್ಯ-ಲಕ್ಷಣಗಳೆರಡೂ ಇರುವ ದೇಶಿ ಪ್ರಕಾರವೇ ಎಂದು ಹೇಳಬೇಕಾಗುತ್ತದೆ.

ಯಕ್ಷಗಾನವು ರಂಗ ಸಂಪ್ರದಾಯವಾಗುವ ಮೊದಲು ಒಂದು ಗಾಯನ ವಿಧಾನವಾಗಿತ್ತು ಎಂಬುದಕ್ಕೆ ಗ್ರಂಥಗಳಲ್ಲಿ ಸಾಕಷ್ಟು ಆಧಾರಗಳು ಸಿಗುತ್ತವೆ. ‘ಹಲವಾರು ಶತಮಾನಗಳ ಹಿಂದೆ ಅದು ಇಂದಿನ ಹಿಂದುಸ್ತಾನಿ ಮತ್ತು ಕರ್ನಾಟಕಿ ಪದ್ಧತಿಯ ಗಾನ ಶೈಲಿಗಳಂತೆಯೇ ಪ್ರತ್ಯೇಕವಾದ ಒಂದು ಗಾನ ಶೈಲಿ ಎನಿಸಿಕೊಂಡಿತ್ತು. ಈ ಶೈಲಿಯಲ್ಲಿ ಬರೆದಂತ ಗೀತ ನಾಟಕಗಳನ್ನು ಯಕ್ಷಗಾನ ಪ್ರಸಂಗಗಳೆಂದು ಕರೆಯುತ್ತ ಬಂದರು ಎಂಬ ಕಾರಂತರ ಹೇಳಿಕೆ ಅಲ್ಲದೆ ಅವರು ತಮ್ಮ ಯಕ್ಷಗಾನ ಬಯಲಾಟಗಳು ಗ್ರಂಥದಲ್ಲಿ (ಪು.೮) ಹೇಳಿದೆ. ‘ಮೋಹಕವಾದ ಸಂಗೀತ ಸಂಪ್ರದಾಯಕ್ಕೆ ಗಂಧರ್ವಗಾನ ಎಂದು ಒಂದು ಸಮಾಜ ಕರೆಯಿತಾದರೆ, ಅದಕ್ಕಿಂತ ಭಿನ್ನವಾದ ಶೈಲಿಯುಳ್ಳ ಮತ್ತೊಂದು ಗಾನ ಸಂಪ್ರದಾಯವನ್ನು ಯಕ್ಷಗಾನ ಎಂದು ನಮ್ಮ ನಾಡಿನ ಜನರು ಕರೆದಿರಬೇಕೆಂದು ನನಗನ್ನಿಸುತ್ತದೆ. ಅದು ಈ ಪ್ರಾಂತ್ಯದ ಒಂದು ಸಂಗೀತ ಶೈಲಿ’ ಎಂಬ ಮಾತು ಯಕ್ಷಗಾನವು ಪೂರ್ವದಲ್ಲಿ ಒಂದು ಗಾಯನ ವಿಧಾನವೇ ಆಗಿತ್ತು ಎಂಬುದನ್ನು  ಪುಷ್ಟಿಕರಿಸುತ್ತದೆ.

೧೭ನೇ ಶತಮಾನದಷ್ಟೊತ್ತಿಗೆ ಇದು ಶಾಸ್ತ್ರೀಯ ಸಂಗೀತದ ಗೌರವ ಪಡೆದುಕೊಂಡಿತ್ತೆಂದು ಹೇಳಲು ತೆಲಗು ಯಕ್ಷಗಾನ ಕವಿಯಾದ ಅದಿಭಟ್ಟ ನಾರಾಯಣ ದಾಸನೆಂಬುವನು ಬರೆದ ಯಕ್ಷಗಾನದ ಲಕ್ಷಣದ ಬಗೆಗಿನ ಈ ಹೇಳಿಕೆ ಆಧಾರವಾಗಿದೆ.

ಯಕ್ಷಗಾನವು ಗೂಡಾವಾಗ್ಗೆಯಕಾರ ಪ್ರಣೀತಮುಲೆ, ಶೃತಿಯಾತ್ಮಕಮೈ
ರಾಗವೈವಿಧ್ಯಮು
, ಜಾತಿ, ಮೂರ್ಚನಾಯುತಮೈನ ಸ್ವೆರಲಾಪಮುಗಿಲಿನ ಗೇಯರಚನಾಃ

ಯಕ್ಷಗಾನವು ಕೂಡಾ ವಾಗ್ಗೇಯಕಾರರಿಂದ ರಚಿಸಲ್ಪಟ್ಟ ಮತ್ತು ಜಾತಿಮೂರ್ಚನಾದಿ ಶಾಸ್ತ್ರೋಕ್ತ ಕ್ರಮದ ಸ್ವರೂಪ ಸಹಿತವಾಗಿ ವಿವಿಧ ರಾಗಗಳಲ್ಲಿ ಹಾಡತಕ್ಕ ಗೇಯ ರಚನೆ’ ಎಂದು ಇದರ ಅಥ.

ತಂಜಾವೂರಿನ ನಾಯಕರ ಕಾಲಕ್ಕೆ ಯಕ್ಷಗಾನ ಸಂಗೀತ ಶೈಲಿ ಪರಣಿತಾವಸ್ಥೆಯನ್ನು ಹೊಂದಿದ್ದಾಗಿ ತಿಳಿದುಬರುತ್ತದೆ. ತಂಜಾವೂರಿನ ರಘುನಾಥ ನಾಯಕನ ಉಪಪತ್ನಿ ರಮಭದ್ರಾಂಬೆ ರಚಿಸಿದ ‘ರಘುನಾಥಾಭ್ಯುದಯ’ ಗ್ರಂಥದಲ್ಲಿ ಒಮ್ಮೆ ರಘುನಾಥನು ಅಂತಃಪುರಕ್ಕೆ ಭೇಟಿಯಿತ್ತಾಗ ಅಲ್ಲಿ ಯಕ್ಷಗಾನವನ್ನು ಹಾಡುತ್ತಿದ್ದ ಸ್ತ್ರೀಯರನ್ನು ಕಂಡ ಸಂದರ್ಭವು ವರ್ಣಿಸಲ್ಪಟ್ಟಿದೆ.

ಅನೇಕಧಾರಾವಣಹಸ್ತ ಪೂರ್ವಕ ಪ್ರಸಿದ್ಧ ಯಂತ್ರ ಸ್ವನರಕ್ಕತಿ ಪಾಟವಂ
ಯಥಾಕ್ರಮ
ಪ್ರಾಂಚಿತ ಯಕ್ಷಗಾನ ಸತತ್ವದಾದ್ಯದ್ವೀಪದ ಪ್ರಪಮಚಂ|’.

ಅಂದರೆ ದ್ವಿಪದಿಗಳಿಂದ ಕೂಡಿದ ಯಕ್ಷಗಾನಗಳನ್ನು ರಾವಣಹಸ್ತವೆಂಬ ವೀಣೆಗೆ ಹೊಂದಿಸಿಕೊಂಡು ಆ ಸ್ತ್ರೀಯರು ಹಾಡುತ್ತಿದ್ದುದಾಗಿ ತಿಳಿದುಬರುತ್ತದೆ. ಶೃತಿಗೆ ಹೊಂದಿಸಿಕೊಂಡು ಹಾಡುವ ಕ್ರಮವು ಶಾಸ್ತ್ರೀಯ ಸಂಗೀತದ ಲಕ್ಷಣವೇ ಎಂಬುದು ಗಮನಿಸಬೇಕಾದ ಅಂಶ.

ಯಕ್ಷಗಾನವೆಂದರೆ ಪೂಜಾ ಪ್ರಬಂಧ. ಕುಕ್ಕಿಲ ಕೃಷ್ಣಭಟ್ಟರ ಪ್ರಕಾರ ಯಕ್ಷಗಾನ ಕವಿಗಳು ರಚಿಸಿದ್ದು ಇಂತಹ ಪ್ರಬಂಧಗಳನ್ನೇ ರಚನೆ ಎಂಬುದು ಕೃತಿಗೆ ಸಂಬಂಧಿಸಿಯೇ ಹೊರತು ಹಾಡುವಿಕೆಗೆ ಅಲ್ಲ. ಸಂಗೀತ ಶಾಸ್ತ್ರಕ್ಕೂ ಈ ಹೆಸರನ್ನು ಪ್ರಬಂಧ ವಿಶೇಷವೆಂಬ ಅರ್ಥದಲ್ಲಿಯೇ ಬಳಸಿದ್ದಾರೆ. ಉದಾಹರಣೆಗೆ ೧೬-೧೭ನೇ ಶತಮಾನದಲ್ಲಿ ತಂಜಾವೂರನ್ನಾಳಿದ ರಘುನಾಥ ನಾಯಕನ ಆಸ್ಥಾನ ವಿದ್ವಾಂಸನಾಗಿದ್ದ ಗೋವಿಂದ ದಿಕ್ಷಿತನು ‘ಸಂಗೀತ ಸುಧಾ’ ಎಂಬ ಶಾಸ್ತ್ರಗ್ರಂಥದಲ್ಲಿ ರಘುನಾಥ ನಾಯಕನ ಗ್ರಂಥರಚನೆಗಳನ್ನು ಹೊಗಳುತ್ತ,

ಶ್ರೀ ರುಕ್ಮಿಣಿ ಕೃಷ್ಣ ವಿವಾಹ ಯಕ್ಷಗಾನಂ ಪರಬಂಧಾನಪಿ ನೈಕಭೇದಾನ
ನಿರ್ವಾಯ
ವಾಗ್ಬಿಃ ಪ್ರಣು ತಾರ್ಥಭಾಗ್ಭಿರ್ವಿದ್ವತ್ ಕವಿನಾಂ ವಿಧದಾಸಿ ಹರ್ಷಂ|’

ಎಂದಿದ್ದಾನೆ. ಸಂಗೀತದಲ್ಲಿ ಇಂತಹ ಪ್ರಬಂಧ ರಚನೆಗಳಿಗೆ ರಾಗ-ತಾಳಯುಕ್ತ ಹಾಡುಗಾರಿಕೆ ಇದ್ದಂತೆ ಯಕ್ಷಗಾನ ಪ್ರಸಂಗಗಳು ರಾಗ-ತಾಳ ನಿರ್ದೇಶಿತವಾಗಿದ್ದು ಸಂಗೀತ ಪದ್ಧತಿಯಲ್ಲಿ ಹಾಡಲ್ಪಡುತ್ತ ಬಂದಿವೆ.

ಯಕ್ಷಗಾನದ ಇಂತಹ ಪ್ರಬಂಧ ರಚನೆಗಳು ಎಂದಿನಿಂದ ಪ್ರಾರಂಭವಾಗಿರಬೇಕೆಂಬುದನ್ನು ಹೇಳುತ್ತ ಕುಕ್ಕಲ ಭಟ್ಟರು ‘ವಿಜಯನಗರ  ಸಾಮ್ರಾಜ್ಯದ ಅಭ್ಯುದಯ ಕಾಲದಲ್ಲಿ ನಮ್ಮ ವ್ಯಾಸಕೂಟ-ದಾಸಕೂಟಗಳ ಹಾಗೂ ವೀರಶೈವ-ಹರಿದಾಸ ಕೂಟಗಳ ಪ್ರಭಾವದಿಂದ ಆಂದ್ರ-ಕರ್ನಾಟಕ ದೇವಾಲಯಗಳಲ್ಲಿ ನಡೆಯುತ್ತಿದ್ದ ಸಂಗೀತ ನಾಟ್ಯ  ಸೇವೆಗಳು ಸಂಸ್ಕೃತ ಪೂಜಾ ಪ್ರಬಂಧಗಳ ಬದಲು ದೇಶಭಾಷಾ ರಚನೆಗಳಲ್ಲಿ ನಡೆಯುವ ಸಂಪ್ರದಾಯ ಉಂಟಾಗಿತ್ತು. ಹಾಗೆ ದೇವರ ಕಥೆಗಳಲ್ಲಿ ನೂತನವಾಗಿ ರಚನೆಗೆ ಬಂದ ಪೂಜಾ ಪ್ರಬಂಧಗಳೇ ಯಕ್ಷಗಾನಗಳು’ ಎಂದು ತಮ್ ‘ಪಾರ್ತಿಸುಬ್ಬನ ಯಕ್ಷಗಾನಗಳು’ (ಪು.೧೬) ಗ್ರಂಥದಲ್ಲಿ ಉಲ್ಲೇಖಿಸುತ್ತಾರೆ. ಅಂತೆಯೇ ೧೫ನೇ ಶತಮಾನದ ಮೊದಲ ಭಾಗದಲ್ಲಿದ್ದವನಾದ ಆಂಧ್ರದ ಮಹಾಕವಿ ಶ್ರೀನಾಥನು ತನ್ನ ಭೀಮೇಶ್ವರ ಪುರಾಣ ಎಂಬ ಕಾವ್ಯದಲ್ಲಿ ‘ದ್ರಾಕ್ಷಾರಾಮ’ ಶಿವಕ್ಷೇತ್ರದ ಭೀಮೇಶ್ವರ ದೇವರ ಮುಂದೆ ಯಕ್ಷಗಾನ ಸಂಗೀತಾರಾಧನೆ ನಡೆಯುತ್ತಿತ್ತೆಂದ ವರ್ಣಿಸಿದ್ದಾರೆ ಎಂದು ಕುಕ್ಕಿಲ ಕೃಷ್ಣಭಟ್ಟರು ‘ಪಾರ್ವತಿಸುಬ್ಬನ ಯಕ್ಷಗಾನಗಳು’ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. (ಪು.೧೬).

ಈ ಎಲ್ಲ ಉದಾಹರಣೆಗಳನ್ನು ಗಮನಿಸಿದಾಗ ಯಕ್ಷಗಾನವನ್ನು ಶ್ರೀಮಂತ ಗಾನ ಪರಂಪರೆಯಾಗಿ ಬೆಳೆದಿತ್ತೆಂದು ತಿಳಿದುಬರುತ್ತದೆ. ‘ಅದು ಬರಿಯ ಗಾನವಾಗಿದ್ದಾಗ ಒಂದೊಂದು ರಾಗವನ್ನು ಇಂದಿನ ಮಾರ್ಗಪದ್ಧತಿ (ಶಾಸ್ತ್ರೀಯ ಸಂಗೀತ) ಗಾಯಕರಂತೆ ಚಮತ್ಕಾರಿಕವಾಗಿ ಹಾಡಿ ಮೆರೆಸಿದ ಕಾಲವಿತ್ತೋ ಏನೋ’ ಎಂದು ಕಾರಂತರು ತಮ್ಮ ‘ಯಕ್ಷಗಾನ ಬಯಲಾಟ’ (ಪು.೭೭) ರಲ್ಲಿ ಅಭಿಪ್ರಾಯಪಡುತ್ತಾರೆ. ಹಳೆಯ ಯಕ್ಷಗಾನ ಪ್ರಸಂಗ ಕೃತಿಗಳನ್ನು ಗಮನಿಸಿದರೆ ಅವು ಹಾಡಲಿಕ್ಕೆಂದೇ ರಚಿಸಿದ ಪದ್ಯಗಳಿಂದ ಕೂಡಿರುವುದು ಕಂಡು ಬರುತ್ತದೆ. ಅಲ್ಲಿ ಗದ್ಯವು ಇಲ್ಲ ರಂಗ ನಿರ್ದೇಶನಗಳೂ ಇಲ್ಲ, ಕೇವಲ ಭಾಗವತರೊಬ್ಬರೇ ಪಕ್ಕವಾದ್ಯದೊಂದಿಗೆ ಹಾಡಿ ಕಥೆ ಹೇಳುವ ಸಾಧ್ಯತೆಯನ್ನು ಹೊಂದಿದೆ ಮತ್ತು ಅದು ಸಾಧ್ಯ ಎಂಬುದಕ್ಕೆ ಇತ್ತೀಚೆಗೆ ನಡೆಯುತ್ತಿರುವ ಅಂತಹ ಪ್ರಯೋಗಗಳು ಪುಷ್ಠಿ ನೀಡುತ್ತವೆ.

ಇಂದು ಯಕ್ಷಗಾನವು ಪ್ರಚಲಿತವಿರುವ ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ ಶತಮಾನದ ಆದಿಭಾಗದಲ್ಲಿ ಹೀಂದುಸ್ತಾನಿ ಅಥವಾ ಕರ್ನಾಟಕೀ ಶಾಸ್ತ್ರೀಯ ಸಂಗೀತದ ಕಚೇರಿ ಸಂಗೀತ ಪದ್ಧತಿ ಪ್ರಚಾರದಲ್ಲಿ ಇರಲಿಲ್ಲ. ಆಗ ಹಳ್ಳಿಗಳ ಮನೆಮನೆಗಳಲ್ಲಿ ಪುರಾಣ, ಭಾಗವತ ವಾಚನ, ಯಕ್ಷಗಾನ ಪದಗಳನ್ನು ಬಿಡುವಿನ ವೇಳೆಯಲ್ಲಿ  ಹಾಡಿಕೊಳ್ಳುವುದು ರೂಢಿಯಲ್ಲಿತ್ತು. ಆಗ ಹಳ್ಳಿಯ ವಾದ್ಯಗಾರರೂ ಕೂಡಾ ಯಕ್ಷಗಾನ ಶೈಲಿಯನ್ನೇ ತಮ್ಮ ಸಂಗೀತಕ್ಕೆ ರೂಢಿಸಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ ಊರಿನ ಐಗಳ ಮಠದಲ್ಲಿಯೂ ಯಕ್ಷಗಾನ ಪ್ರಸಂಗಗಳು ಪಠ್ಯಕ್ರಮದ ಅಂಗಗಳಾಗಿದ್ದವು. ಇದರಿಂದ  ಯಕ್ಷಗಾನದ ತನ್ನದೇ ಶೈಲಿ ಪ್ರಚಲಿತವಿತ್ತು. ನಂತರ ಕನ್ನಡ ನಾಟಕ ಕಂಪನಿಗಳು ಇಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿ ನಂತರ ನಿಧಾನವಾಗಿ ಕರ್ನಾಟಕೀ ಹಾಘೂ ಹಿಂದುಸ್ತಾನಿ ಸಂಗೀತದ ಪ್ರಚಾರವಾಯಿತು. ಕಾಲಕ್ರಮದಲ್ಲಿ ಯಕ್ಷಗಾನ ಸಂಗೀತದ ವಿಶಿಷ್ಠ ಗಮಕಗಳ ಮೇಲೆ ಸಂಗೀತ ಪದ್ಧತಿಗಳ ಪ್ರಭಾವಾಯಿತು ಎಂಬುದು ವಿದ್ವಾಂಸರ ಅಭಿಪ್ರಾಯ. ಹೀಗಾಗಿ ತನ್ನದೇ ಆದ ಗೀತ ವೈಶಿಷ್ಟ್ಯ ಆಲಾಪ, ಗಮಕಗಳನ್ನು ಹೊಂದಿದ ಯಕ್ಷಗಾನ ಸಂಗೀತವನ್ನು ಸ್ವತಂತ್ರ ಸಂಗೀತ ಶೈಲಿಯಾಗಿ ಗುರು ಮುಖೇನ ಕಲಿಯುತ್ತಿದ್ದ ಕಾಲ ಬಹಳ ಹಿಂದೆಯೇ ಸಂದಿರಬೇಕೆಂದು ಡಾ. ಕಾರಂತರು ಅಭಿಪ್ರಾಯಪಡುತ್ತಾರೆ.

ಯಕ್ಷಗಾನ  ಕೃತಿಗಳು ರಂಗದ ಮೇಲೆ ಪ್ರದರ್ಶನಗೊಳ್ಳಲು ತೊಡಗಿದ ಮೇಲೆ ಅದರ ಅಂಗೀತದಲ್ಲಿ ಅನೇಕ ಬದಲಾವಣೆಗಳಾಗಿದ್ದು ಸಹಜ. ಯಕ್ಷಗಾನವು ದೃಶ್ಯ ಶ್ರವ್ಯ ಮಾದ್ಯಮವಾಗಿ ಬೆಳೆದಿದ್ದರಿಂದ ಜನರಿಗೆ ಪ್ರಸಂಗದ ಕಥೆಗಳನ್ನು ತಿಳಿದುಕೊಳ್ಳಲು ಪಾತ್ರಧಾರಿಗಳು ಪದ್ಯಗಳಿಗೆ ಮಾತಿನ ಮೂಲಕ ವಿವರಿಸುತ್ತಿದ್ದ ಅರ್ಥ ಮತ್ತು ನೃತ್ಯಾಭಿನಯ ಸಹಾಯವಾದವು. ಪೌರಾಣಿಕ ಕಥಾ ಸನ್ನಿವೇಶಗಳಿಗೆ ಪೂರಕವಾದ ವೇಷಭೂಷಣಗಳಿಂದ ನಿರ್ಮಾನವಾಗುತ್ತಿದ್ದ ಅದ್ಭುತ ದೃಶ್ಯ ಓಲಕವು ಜನರಿಗೆ ಕಥೆಯಲ್ಲಿ ಹೆಚ್ಚಿನ ತಾದಾತ್ಮ್ಯವನ್ನು ಒದಗಿಸಿತು. ಇನ್ನು ಪಾತ್ರಧಾರಿಗಳಿಗೆ ಕುಣಿತಕ್ಕೆ ಬೇಕಾದ ಲಯ-ತಾಲಗಳ ಹಿಡಿತ, ಮಾತುಗಾರಿಕೆ ಬಗೆಗಿನ ತಿಳುವಳಿಕೆ ಅವಶ್ಯವಾಗಿತ್ತೇ ವಿನಃ ಸ್ವರ, ರಾಗಗಳ ಜ್ಞಾನ ಅನಿವಾರ್ಯವಾಗಿರಲಿಲ್ಲ. ಹೀಗಾಗಿ ಸಂಗೀತದ ಬಗೆಗಿನ ಕಾಳಜಿ ಭಾಗವತನೊಬ್ಬನ ಜವಾಬ್ದಾರಿಯಾಯಿತು. ಆಟಗಳು ಬಯಲಿನಲ್ಲಿ ನಡೆಯುತ್ತಿದ್ದುದರಿಂದ ಹಾಗೂ ಧ್ವನಿವರ್ಧಕಗಳಿಲ್ಲದೆ ಭಾಗವತರ ಹಾಡು ದೂರದವರೆಗೆ ಕೇಳಬೇಕಾದ್ದರಿಂದ ಪರಮಾವಧಿ ಧ್ವನಿಶಕ್ತಿಯನ್ನು ಬೆಳೆಸಿಕೊಳ್ಳುವುದು ಭಾಗವತನಿಗೆ ಅನಿವಾರ್ಯವಾಯಿತು. ವೀರ, ಅದ್ಭುತ, ರಸಗಳ ಪ್ರಾಧಾನ್ಯತೆಗೆ ಸರಿಯಾಗಿ ತಾರಸ್ಥಾಯಿ ಸ್ವರಸಮಚಾರ ಅನಿವಾರ್ಯವಾಯಿತು. ಭಾಗವತರಿಗೆ ಸ್ವರಶುದ್ಧಿ, ಧ್ವನಿ ಮಾಧುರ್ಯ, ರಾಗ ಜ್ಞಾನಕ್ಕಿಮತ ಸ್ವರಸಾಮರ್ಥ್ಯ, ಲಯ, ತಾಲದ ಮೇಲಿನ ಹಿಡಿತ, ಪ್ರಚೋದಕ ಗುಣ, ಕುಣಿಸುವ ಸಾಮರ್ಥ್ಯ ಪ್ರಾಮುಖ್ಯವಾದವು. ವಿವಿಧ ರಾಗಗಳ ಸ್ವರಸಂಚಾರವನ್ನು ಉದ್ದೇಶವಿಟ್ಟು ಕಲಿಯುವುದು ಕಡಿಮೆಯಾಗಿ ಕೇವಲ ಅನುಕರಣೆಯಿಂದ ಕಲಿತ ದಾಟಿಗಳೇ ಪ್ರಸಂಗ ನಡೆಸಲು ಸಾಕಾದವು. ಹೀಗಾಘಿ ಅನೇಕ ರಾಗಗಳು ಬಳಕೆಯಿಂದ ದೂರವಾದವು. ಹಾಡನ್ನು ಅರ್ಥವತ್ತಾಗಿ, ಭಾವ ಬಂಧುರವಾಗಿ ಹಾಡುವ ಸಂಪ್ರದಾಯ ಹಿಂದೆ ಬಿತ್ತು. ಯಕ್ಷಗಾನ ಎಂದರೆ ವೇಷಭೂಷಣ, ಕುಣಿತ ಮತ್ತು ಅರ್ಥಗಾರಿಕೆ ಇವು ಮುಖ್ಯ. ಗಾನವು ಗೌಣ ಎಂಬ ಭಾವನೆ ಬಲಿಯಿತು.

ಗಾಯನದಲ್ಲಿ ಉಂಟಾದ ಇನ್ನೊಂದು ದೋಷವೆಂದರೆ ಭಾಗವತಿಕೆ ಕಲಿಯುವವರು ಮೊದಲು ಕಂಠಸಂಸ್ಕಾರ, ಸ್ವರಜ್ಞಾನ ಸಿದ್ಧಿ, ರಾಗ-ತಾಲಗಳ ಪರಿಚಯವನ್ನು ಸರಿಯಾಗಿ ಮಾಡಿಕೊಳ್ಳದೆ ನೇರವಾಗಿ ಗುರುಗಳು ಹಾಡುವ ರೀತಿಯನ್ನು ಅನುಸರಿಸಿ ಹಾಡುಗಳನ್ನು ಕಲಿತಿದ್ದರಿಂದ ರಾಗಜ್ಞಾನವು  ಸ್ಥೂಲವಾಗಿ ಆಯಿತೇ ವಿನಃ ವಿವಿಧ ರಾಗಗಳ ಸ್ವರ ಸಂಚಾರ ವ್ಯತ್ಯಾಸವು ಅವರಿಗೆ ತಿಳಿಯದಂತಾಯಿತು. ರಾಗಗಳನ್ನು ಹಾಡುವ ಧಾಟಿಗಳ ಮೂಲಕ ಗುರುತಿಸುವುದು ರೂಢಿಯಾಯಿತು. ಇದರಿಂದ ಗಾಯನದಲ್ಲಿ ಖಚಿತತೆ ಕೊರತೆ ಕಂಡುಬಂತು.

ಶ್ರೀನಿವಾಸ ಉಡುಪರು ತಮ್ಮ ‘ಯಕ್ಷಗಾನ-ಗಾನವಿಧಾನ’ ಎಂಬ ಲೇಖನದಲ್ಲಿ ಹೇಳುವಂತೆ ಈ ಮೇಲಿನ ತೊಂದರೆಯನ್ನು ಅರಿತ ಕೆಲವು ಯಕ್ಷಗಾನ ಅಭ್ಯಾಸಿಗರು ಮೊದಲಿಗೆ ಸಂಗೀತ ಅಬ್ಯಾಸವನ್ನು ಮಾಡಿ ಬಳಿಕ ಯಕ್ಷಗಾನದ ಹಾಡುಗಳನ್ನು ಕಲಿತರು. ಅವರು ಇದರಿಂದ ರಾಗಶುದ್ಧತೆ, ಭೇದಗಳನ್ನು ಸರಿಯಾಗಿ ಕಾಣಿಸಲು ಶಕ್ಯವಾದರೂ ಸಂಗೀತ ಶೈಲಿಗಳ ಪ್ರಭಾವದಿಂದಾಗಿ ಅವರ ಹಾಡುಗಾರಿಕೆಯಲ್ಲಿ ಯಕ್ಷಗಾನದ ವಿಶಿಷ್ಟ ಶೈಲಿಯ ಕೊರತೆ ಕಾಣತೊಡಗಿತು.

ಹಾಗಾದರೆ ಯಕ್ಷಗಾನ ಸಂಗೀತ ಸ್ವರ ರಾಗಗಳ ಪರಿಶುದ್ಧತೆ ಬೇಡವೇ? ಎಂಬ ಪ್ರಶ್ನೆ ವಿದ್ವಾಂಸರನ್ನು ಕಾಡಿದ್ದಿದೆ. ಇದು ಅವಶ್ಯವಾಗಿ ಬೇಕೆಂಬುದೇ ಡಾ. ಕಾರಂತರು, ಶ್ರೀ ಮಹಾಬಲ ಹೆಗಡೆಯವರಾದಿಯಾಗಿ ಬಹಳಷ್ಟು ಭಾಗವತರ ಹಾಗೂ ವಿದ್ವಾಂಸರ ಅಭಿಪ್ರಾಯವಾಗಿದೆ. ಮತ್ತು ಇದು ಸರ್ವ ಸಮ್ಮತವಾಗಬೇಕಾದ ಅಭಿಪ್ರಾಯವಾಗಿದೆ. ಇದನ್ನು ಪುಷ್ಟೀಕರಿಸುತ್ತ ಶ್ರೀನಿವಾಸ ಉಡುಪರು ಈ ರೀತಿ ವ್ಯಕ್ತಪಡಿಸುತ್ತಾರೆ.

‘ಯಕ್ಷಗಾನ ಸಂಗೀತವನ್ನು ರಾಗಶುದ್ಧ-ಸ್ವರಶುದ್ಧವಾಗಿ ಮಾಡಲು ಆ ಶೈಲಿಗೆ ಅನುಗುಣವಾದ ಅಭ್ಯಾಸಗಳ ರಚನೆಯಾಗಬೇಕು. ಶುದ್ಧ ಶೈಲಿಗಳನ್ನುಳಿಸಲು, ಬೆಳೆಸಲು ಸಹಾಯವಾಗಬಲ್ಲ ಅಭ್ಯಾಸಗಳನ್ನು ಸಂಗೀತದಲ್ಲಿ ಚೆನ್ನಾಗಿ ಪಾಂಡಿತ್ಯವಿರುವಾತ, ಆದರೆ ಯಕ್ಷಗಾನ ಶೈಲಿಯ ವಿಶೀಷ್ಟತೆ, ಪ್ರತ್ಯೇಕತೆಗಳನ್ನು ಮನಗಂಡಾತ ರಚಿಸಿ ಅವುಗಳನ್ನು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಪರಿಣಾಮವನ್ನು ಲಕ್ಷಿಸಿ, ಅವಶ್ಯಕತೆಯಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿ, ಸಂಸ್ಕರಿಸಬೇಕು. ಆಗ ಮಾತ್ರ ಶೈಲಿಯ ವೈಶಿಷ್ಟ್ಯವೂ ಉಳಿದೀತು. ಅಭ್ಯಾಸ ಕ್ರಮಕ್ಕೂ ಎಲ್ಲೆಡೆಗಳಲ್ಲಿಯೂ ಒಂದೇ ನಿಶ್ಚಿತ ಕ್ರಮ ಒದಗೀತು. ಯಕ್ಷಗಾನ ಸಂಗೀತ ಕ್ರಮಬದ್ಧವಾಗಿ ಬೆಳೆದೀತು.

ಯಕ್ಷಗಾನ ಸಂಗೀತವು ಮೊದಲಿನಿಂದಲೂ ಒಂದು ಭಿನ್ನವಾದ ಶೈಲಿಯಾಗಿ ಬೆಳೆದುಬಂದಂತೆ, ಇಂದು ಕೂಡಾ ತನ್ನ ವಿಶಿಷ್ಟ ಉದ್ದೇಶಗಳಿಂದಾಗಿ ಕಚೇರಿ ಸಂಗೀತ(ಶಾಸ್ತ್ರೀಯ ಸಂಗೀತ)ಕ್ಕಿಂತ ಭಿನ್ನವಾಗಿಯೇ ಇದೆ. ಉದಾಹರಣೆಗೆ ಹಿಂದುಸ್ತಾನಿ ಸಂಗೀತವಿರಲಿ, ಅತವಾ ಕರ್ನಾಟಕೀ ಸಂಗೀತವಿರಲಿ, ಅವು ಮುಖ್ಯವಾಗಿ ಸ್ವರ ಮಾಧ್ಯಮದಿಂದ ಭಾವಾಭಿವ್ಯಕ್ತಗೊಳಿಸುವ ಕಲಾಪ್ರಕಾರಗಳಾಗಿದ್ದು ಅಲ್ಲಿ ಬರುವ ಸಾಹಿತ್ಯವು ಸಹಕಾರಿಯಾಗುವ ಅಂಶವಷ್ಟೇ ಆಗಿದೆ. ಒಬ್ಬ ಸಂಗೀತಗಾರನಿಗೆ ಕೃತಿಯೊಂದನ್ನು ಹಾಡುವಾಗ ರಾಗದ ಸ್ವರ ಸಂಚಾರಕ್ಕೆ, ರಾಗ ವಿಸ್ತಾರಕ್ಕೆ ಸಾಕಷ್ಟು ಅವಕಾಶವಿರುತ್ತದೆ. ಆದರೆ, ಯಕ್ಷಗಾನ ಸಂಗೀತದಲ್ಲಿ ಈ ಸಾಧ್ಯತೆಯಿಲ್ಲ. ಅಲ್ಲಿ ಸಾಹಿತ್ಯವು ಹೊರಹೊಮ್ಮಿಸಬೇಕಾದ ವಿವಿಧ ರಸಗಳಿಗೆ ಪೂರಕವಾಗಿ ಗಾನವಿಧಾನವಿರುತ್ತದೆ. ಮತ್ತು ಕುಣಿತಕ್ಕೆ ಒದಗುವಂತಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಯಕ್ಷಗಾನ ಸಂಗೀತವು ಭಾರತೀಯ ಸಂಗೀತದ ಒಂದು ವಿಶಿಷ್ಟ ಪ್ರಕಾರವಾಗಿ ಬೆಳೆದು ಬಂದಿರುವುದು ತಿಳಿಯುತ್ತದೆ.