ಈರವ್ವ ಮಲಕವ್ವ ನೀರಿಗಿ ಹೋದಾರ  || ತಂದನ್ನನ ||
ಈರವ್ವ ಬರಲಿಲ್ಲ ಮಲಕವ್ವ ಬಂದಾಳ  || ಕೋಲು ಕೋಲಿ ||
ಎಲೆ ಮಲಕಿ ಎಲೆ ಮಲಕಿ ಎರಡು ಬಾರಿ ನೀರ ತಂದಿ || ತಂದನ್ನಾನ ||
ನನ ಮಗಳ ಈರಮ್ಮ ಬರಲಿಲ್ಲ ಮಲಕವ್ವ  || ಕೋಲು ಕೋಲೆ ||
ಅಂಗಿನವರೊಂದಾರ ಮಂದಿ ಚುಂಗಿನವರೊಂದಾರ ಮಂದಿ | ೧
ಸಿಂಗಾರದ ಬಿಲ್ಲಿನ ತೋರೋರೊಂದೈದ ಮಂದಿ
ಸಿಂಗಾರದ ಬಿಲ್ಲಿನ ತೋರೋರೊಂದೈದ ಮಂದಿ ಕೂಟ
ಸಂಗವ ಮಾಡ್ಯಾಳ ನಿನ ಮಗಳ ಈರಮ್ಮ
ಹೊಲಕೋದ ದ್ಯಾಮಣ್ಣ ಮನಿಗ್ಯಾವರ ಬಂದಾನ
ಎತ್ತುಗಳ ಕಟ್ಯಾನ ಮೇವುಗಳ ಹಾಕ್ಯಾನ
ಕಾಲಿಗಿ ನೀರ ಕೊಡಬಾರದೇನೆ
ಈಗ ತಗೋನ ನೀರ ಆಗ ತಗೋವಂತೆ
ಊರ ಮುಂದಲ ಸುದ್ದಿ ಕೇಳಿ ಬರುಬಾರದ
ಮುಂಜೇಲಿ ಹೋಗೇನಿ ಚಂಜೀಕೆ ಬಂದೀನಿ
ಊರ ಮುಂದಲ ಸುದ್ದಿ ನಾನೇನ ಬಲ್ಲೇನೆ
ಅಂಗಿನವರೊಂದಾರ ಮಂದಿ ಚುಂಗಿನವರೊಂದಾರ ಮಂದಿ
ಸಿಂಗಾರದ ಬಿಲ್ಲಿನ ತರೋರೊಂದೈದ ಮಂದಿ
ಸಿಂಗಾರದ ಬಿಲ್ಲಿನ ತರೋರೊಂದೈದ ಮಂದಿ ಕೂಟ
ಸಂಗವ ಮಾಡ್ಯಾಳ ನಿಮ ತಂಗಿ ಈರಮ್ಮ
ಹತ್ತೆತ್ತಿನ ಬಾರಕೋಲ ಎತ್ತಿ ಹಿಡಿದ ದ್ಯಾವಣ್ಣ
ನನ್ನೇನ ಹೊಡದೀಯೊ ನನ್ನೇನ ಬಡದೀಯೋ
ನಿಮ ತಂಗಿ ಈರಮ್ಮನ ರೊಕ್ಕಾವ ಎತ್ತೋಗ
ಏ ಯವ್ವ ಏ ಯವ್ವ ಏ ನನ್ನ ಹಡದವ್ವ
ರೊಟ್ಟಿಯ ಬುತ್ತಿಯ ಮಾಡೆ ನನ ಹಡದವ್ವ
ಕರಿಯ ಬಂದಿಲ್ಲ ಕಳಸ ತೀನಂಬತೀದಿ
ಬ್ಯಾಸರಾದಳೇನೊ ನನ ಮಗಳ ಈರಮ್ಮ
ಜೋಳದ ಹೊಲದಾಗ ಅವರ ಮಾವ ಬಂದಿದ್ದನವ್ವ
ಕರಕೊಂಡ ಬಾ ಅಂದ ಹೇಳ್ಯಾರ ಹಡದವ್ವ
ಹತ್ತಿಯ ಹೊಲದಾಗ ಅವರತ್ತಿ ಬಂದಿದ್ದಲವ್ವ ||
ಕರಕೊಂಡ ಬಾ ಅಂತ ಹೇಳ್ಯಾರ ಹಡದವ್ವ ||
ಅಲ್ಲಿದ್ದ ದ್ಯಾಮಣ್ಣ ನೆವ್ವಾರ ಮನಿಗೋದ ||
ಕುಂದುವಾರನೆಂದು ಕುರಜೀಯನಾಕ್ಯಾರ ||
ಕುಂದ್ರಕ ಬಂದಿಲ್ಲ ನಿಂದ್ರಕ ಬಂದಿಲ್ಲ ||
ನಮ ತಂಗಿ ಈರಮ್ಮಗ ಸೀರೆಗಳು ಬೇಕೆಂದ ||
ಅಲ್ಲಿಂದ ದ್ಯಾಮಣ್ಣ ಬಳಿಗಾರ ಮನಿಗೋದ ||
ಕುಂದರಬಾರೆಂದು ಕುರಜೀಯನಾಕ್ಯಾರೆ ||
ಕುಂದ್ರಕ ಬಂದಿಲ್ಲ ನಿಂದ್ರಕ ಬಂದಿಲ್ಲ ||
ನಮ್ಮ ತಂಗಿ ಈರಮ್ಮಗ ಬಳಿಗಳು ಬೇಕಂದ ||
ಅಲ್ಲಿದ್ದ ದ್ಯಾಮಣ್ಣ ಹೂಗಾರ ಮನಿಗೋದ ||
ಕುಂದ್ರಕ ಬಾರೆಂದು ಕುರಜೀಯನಾಕ್ಯಾರ ||
ಕುಂದ್ರಕ ಬಂದಿಲ್ಲ ನಿಂದ್ರಕ ಬಂದಿಲ್ಲ ||
ನಮ ತಂಗಿ ಈರಮ್ಮಗ ಹೂಗಳು ಬೇಕೆಂದ ||
ಅಲ್ಲಿಂದ ದ್ಯಾಮಣ್ಣ ಸಿಂಪಿಗರ ಮನಿಗೋದ ||
ಕುಂದರನಾಕ್ಯಾರ ಕುರಜೀಯ ||
ಕುಂದ್ರಕ ಬಂದಿಲ್ಲ ನಿಂದ್ರಕ ಬಂದಿಲ್ಲ ||
ನಮ ತಂಗಿ ಈರಮ್ಮಗ ಕುಬಸಗಳು ಬೇಕೆಂದ ||
ಅಲ್ಲಿಂದ ದ್ಯಾಮಣ್ಣ ಮನಿಗ್ಯಾದರು ಹೋದಾನ ||
ಸೀರಿನೆ ಕುಬಸಕ ಹೇಳಿ ಬಂದೆನೆ ತಂಗಿ ||
ಅಲ್ಲಿಂದ ಈರಮ್ಮ ನೆವ್ವಾರ ಮನಿಗೋದ್ಲು ||
ಕುಂದುವಾರನೆಂದು ಕುರಜೀಯನಾಕ್ಯಾರ ||
ಕುಂದ್ರಕ ಬಂದಿಲ್ಲ ನಿಂದ್ರಕ ಬಂದಿಲ್ಲ ||
ನಮ್ಮಣ್ಣ ದ್ಯಾಮಣ್ಣ ಸೀರಿಗಿ ಹೇಳ್ಯಾನಂತೆ ||
ಹೋಗಿ ಬಾರ ಈರಮ್ಮ ಬಾಗಿ ಬಾ ಈರಮ್ಮ ||
ಬರತ ಗಂಡು ಮಗನ ಎತ್ತಿ ಬಾ ಈರಮ್ಮ ||
ಅಲ್ಲಿಂದ ಈರಮ್ಮ ಬಳಿಗಾರ ಮನಿಗೋದ್ಲು ||

ಗಂಗ ಗಾಳ್ಯಾಗಲೆ ಹೆಣ್ಣ ಮಣ್ಣಾಗಲೆ ||
ನನ್ನ ಕೊಲ್ಲಾ ವೈರಿ ನನ ಹಿಂದೆ ಬರತಾನ್ರವ್ವ ||
ಸೀರೇನ ಕುಬುಸಗಳ ತಗೊಂಡು ಈರಮ್ಮ ||
ಬಂದಾಳ ತನ್ನ ಅರಮನಿಗಿ ಈರಮ್ಮ ||
ಕಂಚಿನ ಬಟಲಾಗ ಮಿಂಚೆಣ್ಣೆ ತಗೊಂಡು ||
ಕೆಂಚಿ ಈರಮ್ಮನ ತೆಲಗೆರಿಯೆ ಹಡದವ್ವ ||
ಕರಿಸೀರೆ ಉಟ್ಟಾಳ ಹೊಸ ಕುಬಸ ಹೊಟ್ಟಾಳ ||
ಉಡಿಯಾಗ ಉಡಿಯಕ್ಕಿ ಹಾಕ್ಯಾರ ಈರಮ್ಮಗ ||
ಬುತ್ತಿಯ ಕಟ್ಟೊತ್ತಿಗೆ ಬೆಕ್ಕ ಅಡ್ಡ ಬಂದಾವ ||
ಬಾಡ್ಯಪ್ಪ ನನ ಮಗನ ಅಪಸಕುನ ಆಗ್ಯಾವ ||
ಅಪಸಕುನ ಇವಸಕುನ ಅವ ನಮ್ಮ ತೆಲಿಮ್ಯಾಲೆ ||
ಸುಮ್ಮನೇ ಬುತ್ತೀಕಟ್ಟಿ ನನ್ನ ಹಡದವ್ವ ||
ರೊಟ್ಟಿಯ ಕಟ್ಟೊತ್ತಿಗೆ ನಾಯಿ ಅಡ್ಡ ಬಂದಾವ ||
ಬ್ಯಾಡಪ್ಪ ನನ ಮಗನ ಅಪಸಕುಲ ಆಗ್ಯಾವ ||
ಅವಸಕುನ ಇನಸಕುನ ಆದ ನಮ್ಮ ತೆಲಿಮ್ಯಾಲಿ ||
ಉಡಿಯಾಗ ಉಡಿಯಿಕ್ಕಿ ಹಾಕ್ಯಾರ ಈರವ್ವಗ ||
ಹೊಸಲಿಯ ಬಿಟ್ಟು ಹೊರ ಹೊಂಟಾಳ ಈರಮ್ಮ ||
ಓಣ್ಯಾಳ ಅವ್ವನರ ಒಣ್ಯಾಳ ಅಕ್ಕನರ ||
ನಾನು ಹೋಗತೀನಿ ಬರ‍್ಯೆ ನನ ಗಂಡನ ಮನಿಗೆ ||
ಮಕ್ಕಳ ಇದ್ದರ ಎಲ್ಲಿ ತನ ಬಂದೀರಿ ||
ಮಕ್ಕಳ ಅತ್ತಾರು ಹೋಗ್ರೆವ್ವ ಮನಿಯಾಗ ||
ಊರ ದಆರಿ ಬಿಟ್ಟೆಲ್ಲೊ ಕೆರಿ ದಾರಿ ಬಿಟ್ಟೆಲ್ಲೊ ||
ಅಡವಿಯ ದಾರಿಯ ಹಿಡಿದೆಲ್ಲೊ ಹಿರಿಯಣ್ಣ ||
ಊರೇನೆ ದಾರಿಗಿ ಹವಳೀಕಿ ಬಾಳವ್ವ ||
ಅಡವಿಯ ದಾರಿಲೆ ಹೋಗಾನ ನಮ ತಂಗಿ ||
ಅತ್ತತ್ತ ಹೋಗ್ಯಾನ ಬಾವಿಯ ಕಂಡಾನೆ ||
ಈ ಬಾ ಬಾವಿತಲೆ ಉಣ್ಣೋನ ನಮ ತಂಗಿ ||
ಬಾವ್ಯಾಕ ಇಳಿದಾರ ಕೈ ಕಾಲ ತೊಳೆದಾರ ||
ಬುತ್ತಿಯ ಮೂರ ಭಾಗ ಆಗ್ಯಾವ ಹಿರಿಯಣ್ಣ ||
ನಿನಗೊಂದು ಬಾಗವ್ವ ನನಿಗೊಂದು ಬಾಗವ್ವ ||
ಬಾವಿ ಗಂಗವ್ವಗ ಬಾಗೊಂದು ಆಗ್ಯಾವ ನಮ ತಂಗಿ ||
ಒಂದ ತುತ್ತ ಉಣ್ಣಲಿ ಬಿಟ್ಟ ಎರಡ ತುತ್ತ ಉಣ್ಣಲಿ ಬಿಟ್ಟ ||
ಮೂರನೇ ತುತ್ತಿಗಿ ಚಟ್ಟನೆ ಕಡದಾನ ||
ಚಟ್ಟನ ಕಡದಾನೆ ಮಟ್ಟಿಯ ಕಟ್ಯಾನೆ ||
ಬಾವಿ ಗಂಗಮ್ಮಗೆ ಒಗದಾನ ಈರಮ್ಮನ ||

ಈರಮ್ಮನ ಕಡದಲ್ಲಿ ಹೂವಿನ ವನವಾಗಿ ||
ಈರಮ್ಮನ ಕಡದಲ್ಲಿ ಮಲ್ಲಿಗಿ ವನವಾಗಿ ||
ರೆಂಬಿಯ ಕಡದಲ್ಲಿ ನಿಂಬಿಯ ವನವಾಗಿ ||

ಸಾಲುಗಳ ಕೊನೆಗೆ ತಂದನ್ನಾನ ಕೋಲು ಕೋಲೆ ಎಂದು ಹೇಳಬೇಕು.

ಸಮಾನ ಆಶಯ ಪಠ್ಯ

೧) ರಡ್ಡೇರ ಸಾವಿತ್ರಿ; ಸುಂಕಾಪೂರ ಎಂ.ಎಸ್. ಜೀವನ ಜೋಕಾಲಿ ಕೋಲುಪದ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ೧೯೭೬ ಪು.ಸಂ. ೧೦೯-೧೧೯.*      ಸಂಗವ ಮಾಡ್ಯಾಳ ನಿಮ ತಂಗಿ; ಹಕಾರಿ ದೇವೇಂದ್ರಕುಮಾರ, ಜಾನಪದ, ಸಾಮಾಜಿಕ ಕಥನಗೀತೆಗಳಲ್ಲಿ ದುಃಖಾಂತ ನಿರೂಪಣೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೮೫ ಪು.ಸಂ. ೪೦೫-೪೦೮.