ಗುರು-ಶಿಷ್ಯ ಪರಂಪರೆ, ಎಂದಾಕ್ಷಣ ನಮ್ಮ ವಿಚಾರಧಾರೆ ಸಹಸ್ರ  ಸಹಸ್ರ ವರ್ಷಗಳ ಹಿಂದೆ ಸರಿದು ವೇದ ಮತ್ತು ಅದರ ಪೂರ್ವದ ಸಮಯದಲ್ಲಿ ಜ್ಞಾನಾರ್ಜನೆಯ ಪದ್ಧತಿಯತ್ತ ಚಿಂತಿಸಲು ಪ್ರಾರಂಭಿಸುತ್ತದೆ. ಅಂದು ಸದಾ ಹಸಿರಿನಿಂದ ತುಂಬಿ ತುಳುಕುವ ವನಗಳು, ತನ್ನ ಜನರಿಗೆ ಕಿಂಚಿತ್ತೂ ತೊಂದರೆ ಕೊಡದೆ ದಡಸೂಸಿ ಹರಿಯುವ ನದಿಗಳು, ನಿರ್ಮಲ ಜಲದಿಂದ ತುಂಬಿ ತುಳುಕುವ ಕೆರೆ, ಸರೋವರಗಳು, ಹಕ್ಕಿಗಳ ಹಾಡು, ಇಡೀ ವಾತಾವರಣವನ್ನು ನಾದಮಯಗೊಳಿಸಿದ್ದರೆ, ಪರಿಮಳ ತುಂಬಿದ ಕುಸುಮಗಳಿಂದ ಸುವಾಸಿತಗೊಂಡ ಪರಿಶುದ್ಧ ವಾಯುಮಂಡಲ, ತೇಲುವ ಗಾಲಿಯಲ್ಲಿ ಜೀವಸಂಕುಲಕ್ಕೆ ಬೇಕಾಗುವ ಪ್ರಾಣವಿದೆ, ಜ್ಞಾನವಿದೆ. ಸೂರ್ಯನಲ್ಲಿ ತನ್ನ ತಂಪಾದ ಕಿರಣಗಳನ್ನು ಚೆಲ್ಲಿ, ಜೀವಿಗಳಿಗೆ ತೊಂದರೆಯಾಗದಂತೆ ನೋಡಿಕೊಂಡರೆ, ಶಶಿ ಆ ತಂಪನ್ನು ಇಮ್ಮಡಿಗೊಳಿಸಿ ತನ್ನ ಕಾರ್ಯದಲ್ಲಿ ಧನ್ಯತೆಯನ್ನು ಕಂಡುಕೊಳ್ಳುತ್ತಾನೆ. ಹೀಗೆ ಸುಸಜ್ಜಿತವಾದ ನಿಸರ್ಗದ ಮಡಿಲಲ್ಲಿ ಮಾನವ ತನ್ನ ಅಂತರ್ ಚಕ್ಷು ತೆರೆದು ತನ್ನ ಹಾಗೂ ತನ್ನ ಮೂಲಕ ರಹಸ್ಯವನ್ನರಿಯಲು ಅಹರ್ನಿಶ ಪ್ರಯತ್ನ ಮಾಡುತ್ತಿದ್ದಾನೆ. ಬೆಳಕಿನಲ್ಲಿ ಬೆಳಕು ಕಾಣುವ ಯತ್ನ ಹೀಗೆಯೇ ಅಲ್ಲವೇ ಮೊದಲಗೊಂಡದ್ದು?

ಹೀಗೆ ಯೋಚನಾಲಹರಿ ಮುಂದುವರೆಯುತ್ತಿದ್ದಂತೆ ಅಲ್ಲ್ಲಿ ಕಂಡುಬರುವ ಕಟೀರಗಳು, ಅವುಗಳ ಮುಂದೆ ಯಜ್ಞಕುಂಡಗಳು ಯಾವುದೋ ಪವಿತ್ರ ಕಾರ್ಯ ನೆರವೇರಿಸಲು ಸಿದ್ಧರಾಗಿ ಕಾರ್ಯಪ್ರವೃತ್ತರಾದ ಅಲ್ಲಿನ ನಿವಾಸಿಗಳು ಹಿರಿಯರು, ಯುವಕರು, ಮಕ್ಕಳು, ಸ್ತ್ರೀಯರು, ಗೋವುಗಳು, ಜಿಂಕೆಗಳು, ಮೊಲಗಳು ಹೀಗೆ ಇಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ವರ್ಣಿಸಲಸಾಧ್ಯ. ಅವರಲ್ಲಿಯೇ ತುಂಬಾ ವಯಸ್ಕರಂತೆ, ಆದರೆ ಗಂಭೀರ ವದನರಾದ, ಅತ್ಯಂತ ತೇಜೋಮಯರಾದ, ತಪಸ್ವಿಯೊಬ್ಬರು ಕೇಂದ್ರ ವ್ಯಕ್ತಿಯಾಗಿ ಕುಳಿತಿರುತ್ತಾರೆ. ಮೃಗದ ಚರ್ಮ ಹಾಸಾಗಿದ್ದರೆ ತ್ಯಾಗ ಸೂಕ ಕಾಷಾಯವಸ್ತ್ರ ಈತನ ಹೊದಿಕೆ. ಈತ ನಿಸರ್ಗವನ್ನು ತಿಳಿದುಕೊಂಡಾತ, ಆತನಿಗೆ ಬಾರದ ವಿದ್ಯೆ ಇಲ್ಲ, ಆ ಸಮಯದ ಬ್ರಹ್ಮಜ್ಞಾನ ಪಡೆಯುವ ಮುಮುಕ್ಷುಗಳು ಈತನ ಶಿಷ್ಯರಾಗಿದ್ದಂತೆ, ಸಾಮ್ರಾಟನ ಮಕ್ಕಳು ಸಕಲ ವಿದ್ಯಾ ಪಾರಂಗತರಾಗಲು ಬಂದವರಾಗಿದ್ದರು. ಬ್ರಾಹ್ಮೀ ಮುಹೂರ್ತದಿಂದ ಪ್ರಾರಂಭವಾಗುವ ದಿನಚರ್ಯೆಗೆ ಮುಕ್ತಾಯ ಮಾತಿಲ್ಲ. ಸಾಮಾನ್ಯ ವಟುವಿಗೂ ಅರಸನ ಮಗನಿಗೂ ಇಲ್ಲಿ ತಾರತಮ್ಯವಿಲ್ಲ. ಯಾರು ಇಲ್ಲಿ ಸಾಧಿಸುತ್ದತಾರೋ ಅವರು ಶುದ್ಧರಾಗುತ್ತಾರೆ. ಸಿದ್ಧರಾಗುತ್ತಾರೆ, ಬುದ್ಧರಾಗುತ್ತಾರೆ. ಅರಸುಗುವರ ಹಸುವಿನ ಸಗಣಿ ಬಳಿಯುತ್ತಿದ್ದರೆ ಅದೊಂದು ವಿಶೇಷವಾಗಿರಲಿಲ್ಲ. ಪ್ರತಿಯೊಂದು ಸರ್ವೇ ಸಾಮಾನ್ಯವಾಗಿತ್ತು. ಕಂದ ಮೂಲಾದಿಗಳೇ ಇವರ ಜೀವರಸವಾಗಿದ್ದವು. ಅಂದರೆ ಭ್ರಾಮಕ ಸುಖಕ್ಕಿಲ್ಲಿ ತಿಲಾಂಜಲಿ ನೀಡಲಾಗಿತ್ತೆನ್ನಬಹುದೇನೋ.

ಇಂತಹ ನಿಸರ್ಗದ ಮಡಿಲಲ್ಲೇ ಕುಳಿತಿಲ್ಲವೆ, ಗುರು ನಮಗೆ, ರಾಮ ಕೃಷ್ಣ, ಬುದ್ಧ, ಜನಕ ಮಹಾರಾಜರಂತಹ ಯುಗ ಪ್ರವರ್ತಕರನ್ನು, ಯೋಗಿಗಳನ್ನು ನೀಡಿದ್ದು, ವಾಯುಮಮಡಲ, ಜಲಮಂಡಲ, ಅಗ್ನಿ ಮಂಡಲ,, ಆಕಾಶ ಮಂಡಲ, ಪೃಥ್ವಿ ಮಂಡಲಗಳ ನಿಸರ್ಗ ಸಂಯೋಜನೆಯ ರಹಸ್ಯ ಭೇದಿಸಿ ಆತ್ಮ ಪರಮಾತ್ಮಗಳ ಯೋಗವನ್ನು ಹೇಳಿದವರು ಇದೇ ನಮ್ಮ ಪೂರ್ವಜರಾದ ವಶಿಷ್ಟ, ವಿಶ್ವಾಮಿತ್ರ, ರಾಮಕೃಷ್ಣ, ಚೇತನ, ತುಳಸೀದಾಸ, ಕಬೀರದಾಸ, ಶಂಕರಾಚಾರ್ಯ, ಮಾಧ್ವಾಚಾರ್ಯ, ರಾಮಾನುಜಾಚಾರ್ಯ, ವಿವೇಕಾನಂದರು ಹೀಗೆ ಹೇಳುತ್ತಾ ಹೋದರೆ ಅದು ಮುಗಿಯದ ಕೆಲಸವಾದೀತು. ಇವರು ಮೊದಲು ಶಿಷ್ಯರಾಗಿದ್ದರು, ನಂತರ ಗುರುಗಳಾದರು, ಮೊದಲು ಕಲಿತರು, ನಂತರ ಕಲಿಸಿದರು.

ಈ ಪವಿತ್ರ ಭೂಮಿಯ ಅಂಗುಲಂಗುಲದಲ್ಲಿ ಇಂತಹ ಮಹಾನ್ ಗುರು-ಶಿಷ್ಯರು ಜನ್ಮ ತಾಳಿದ್ದಾರೆ. ಮತ್ತು ಇನ್ನೂ ಜನ್ಮವೆತ್ತುತ್ತಿದ್ದಾರೆ. ಇಂತಹದೇ ವಾತಾವರಣದಲ್ಲಿ ಪ್ರಕೃತಿಯನ್ನು ಸಂಶೋಧಿಸಿ ವೇದಗಳನ್ನು, ಉಪನಿಷತ್ತುಗಳನ್ನು ಮತ್ತು ಅನೇಕಾನೇಕ ಜ್ಞಾನ ಭಂಡಾರದ ಪವಿತ್ರ ಗ್ರಂಥಗಳನ್ನು ತಮ್ಮ ಮುಂದಿನ ಜನಾಂಗಕ್ಕೆ ನಿಡಿದ್ದಾರೆ. ಈ ಗ್ರಂಥಗಳಲ್ಲಿ ಆತ್ಮ ಪರಮಾತ್ಮರ ಜ್ಞಾನವಿದೆ, ವಿಜ್ಞಾನವಿದೆ, ಕಲೆ ಇದೆ, ಔಷಧಿಗಳ ತಿಳುವಳಿಕೆ ಇದೆ, ಮಂತ್ರ ತಂತ್ರಗಳ ವಿವರವಿದೆ. ಇಲ್ಲಿ ಇದು ಇಲ್ಲವಲ್ಲಾ ಎಂಬ ಕಳವಳ ಪಡಬೇಕಾದ ಅವಶ್ಯಕತೆ ಇಲ್ಲ.

ನಾವು ರಾಮಾಯಣವನ್ನು ನೆನಪಿಸಿಕೊಂಡಾಗ ರಾಮ ಮತ್ತು ಆತನ ಸಹೋದರರಿಗೆ ಗುರುವಾಗಿ ವಶಿಷ್ಠರು, ಮಹಾಭಾರತವನ್ನು ನೆನಪಿಸಿಕೊಂಆಗ ಒಂದೊಂದು ವಿದ್ಯೆಯನ್ನು ಕಲಿಸಲು ಪ್ರತ್ಯೇಕ ಗುರುಗಳ ಹತ್ತಿರ ಕೌರವ ಪಾಂಡವರು ಹೋಗಿದ್ದು ತಿಳಿದುಬರುತ್ತದೆ. ಕರ್ಣ ಪರಶುರಾಮರ ಗುರುಶಿಷ್ಯ ಸಂಬಂಧದ ಕಥೆಯಂತೂ ಬೆರಳು ಕಚ್ಚುವಂತಹದ್ದು, ಹಾಗೆಯೇ ಶಿಷ್ಯನೆಂದರೆ ಏಕಲವ್ಯನೆಂಬ ಅಡವಿಯ ವೀರನು ನೆನಪು ಬರುತ್ತದೆ. ಆತನಿಗೆ ಬಿಲ್ವಿದ್ಯೆ ಕಲಿಯಲು ತನ್ನ ಗುರುವಾದ ದ್ರೋಣರ ಮೂರ್ತಿಯೊಂದೇ ಸಾಕಿತ್ತೆನ್ನಬಹುದೇನೋ!

ಹಾಗೆಯೇ ತನ್ನ ಸಖನಾದ ಅರ್ಜುನನಿಗೆ ಯುದ್ಧ ಸಮಯದಲ್ಲಿ ಭಗವದ್ಗೀತೆಯನ್ನು ಹೇಳಬೇಕಾದರೆ ಯುದ್ಧ ಭೂಮಿಯಲ್ಲಿ ಆ ಧನುರ್ಧಾರಿ ಕೃಷ್ಣನ ಶಿಷ್ಯತ್ವ ಸ್ವೀಕರಿಸಿದ್ದು ಕಂಡು ಬರುತ್ತದೆ. ಇಲ್ಲದಿದ್ದರೆ ವಿಶ್ವರೂಪ ದರ್ಶನಕ್ಕೆ ಅರ್ಜುನನು ಪಾತ್ರನಾಗುತ್ತಿದ್ದನೆ? ಎಂಬ ಯೋಜನೆ ಬರುತ್ತದೆ.

ರಾಮಕೃಷ್ಣ ಪರಮಹಂಸರು ವಿವೇಕಾನಂದರ ಬರುವಿಕೆಗಾಗಿ ಕಾಯುತ್ತಿದ್ದರು ಎಂಬ ವಿಷಯವನ್ನು ನಾವು ಹಿರಿಯರಿಂದ ಕೇಳಿ ತಿಳಿದಿದ್ದೇವೆ. ಗೋವಿಂದ ಭಟ್ಟ ಹಾಗೂ ಷರೀಫ ಸಾಹೇಬರ ಗುರು-ಶಿಷ್ಯ ಸಂಬಂಧವನ್ನು ನಾವು ಬಲ್ಲೆವು,  ಹೀಗೆ ಈ ತೆರನಾದ ನಿಸರ್ಗದ ಕೆಲಸ ಇಡೀ ಪ್ರಪಂಚದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ನಡೆದು ಬಂದಿದೆ. ಏಸುಕ್ರಿಸ್ತ ಹಾಗೂ ಆತನ ಶಿಷ್ಯಗಣ, ಮೊಹಮ್ಮದ್ ಪೈಗಂಬರ್ ಮತ್ತು ಅವರ ಅನುಯಾಯಿಗಳು ಇವೆಲ್ಲ ಉದಾಹರಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮಗನಿಸುತ್ತದೆ, ಗುರುಶಿಷ್ಯ ಪರಂಪರೆ ಇಮದು ನಿನ್ನೆಯದಲ್ಲ. ಇದು ಬಹುಕಾಲದಿಂದ ನಡೆದು ಬಂದ ಸಾಮಾಜಿಕ ಪ್ರಕ್ರಿಯೆ. ಇದು ಎಲ್ಲಾ ಜನಾಂಗಗಳಲ್ಲಿ ಎಲ್ಲಾ ಕಾಲದಲ್ಲಿ ನಡೆದು ಬಂದದ್ದು ಕಂಡುಬರುತ್ತದೆ.

ಈ ಗುರುಶಿಷ್ಯ ಪರಂಪರೆ  ಕೇವಲ ಕಲೆಯ ಸಂಬಂಧಗಳಲ್ಲಿ ನಾವು ನೋಡಲಿಕ್ಕೆ ಬಾರದು. ಹಿಂದಿನ ಕಾಲದಲ್ಲಿ ಚೌಷಷ್ಠಿ ವಿದ್ಯೆಗಳನ್ನು ಹೇಳಿಕೊಡುವ ಗುರುಗಳು ಇದ್ದರು. ಅಂತಹ ಗುರುವಿನ ಹತ್ತಿರ ಹೋಗಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಶಿಷ್ಯ ಸಕಲ ವಿದ್ಯಾಪಾರಂಗತನಾಗಿ ಸ್ವಯಂ ಗುರುವಾಗಿ ಹೊರಬರುತ್ತಿದ್ದ. ಅದಕ್ಕಾಗಿ ಆತ ಏಕಾಗ್ರತೆ, ನಿರಂತರ ಶ್ರಮ ಹಾಗೂ ಸಾಧನೆ ಮಾಡಬೇಕಾಗಿತ್ತು. ಇದು ಸರ್ವಕಾಲಿಕ ಸತ್ಯ. ಈ ಮೂರು ಇಲ್ಲದಿದ್ದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ನಮ್ಮ ಪೂರ್ವಜರು ತಮ್ಮ ಮಕ್ಕಳನ್ನು ಗುರುವಿನ ಸಮರ್ಪಿಸಿ ನಿಶ್ಚಿಂತರಾಗುತ್ತಿದ್ದರು.

ಗು = ಅಂಧಕಾರವನ್ನು, ರು = ನಾಶ ಮಾಡುವವನು ಗುರವೆನಿಸುತ್ತಾನೆ. ಮುಂದುವರೆಯುತ್ತ ಶಿಷ್ಯನೆನ್ನುತ್ತಾನೆ :

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ |
ಚಕ್ಷುರುನ್ಮಿಲಿತಂ
ಯೇನ್ ತಸ್ಮೈ ಶ್ರೀ ಗುರುವೇ ನಮಃ ||

ಅರ್ಥ :

ನಾನು ಅಜ್ಞಾನಾಂಧಕಾರದಲ್ಲಿ ಜನಿಸಿದ್ದೆ, ನನ್ನ ಗುರು ಜ್ಞಾನಜ್ಯೋತಿಯಿಂದ ಕಣ್ಣು ತೆರೆಸಿದನು, ನಾನು ಅವರಿಗೆ ವಿನೀತನಾಗಿ ನಮಿಸುತ್ತೇನೆ. ಹೀಗೆ ಅಂಧಕಾರದಿಂದ ಬೆಳಕಿನ ಕಡೆಗೆ ಗುರುಶಿಷ್ಯರಿಬ್ಬರು ಪಯಣಿಸುತ್ತಾರೆ. ಇದೇ ಗುರುಶಿಷ್ಯ ಪರಂಪರೆ.

ಗುರು-ಶಿಷ್ಯ ಪರಂಪರೆ ಯಾವುದೇ ಸೀಮಿತ ವಿಷಯಕ್ಕೆ ಮಾತ್ರ ಸಂಬಂಧಪಟ್ಟಿಲ್ಲ. ಅದು ಸಮಾಜದ ಎಲ್ಲಾ ವಿಷಯಗಳನ್ನು ತನ್ನ ವ್ಯಾಪ್ತಿಯೊಳಕ್ಕೆ ತೆಗೆದುಕೊಳ್ಳುತ್ತದೆ. ಇದರಲ್ಲಿ ನೃತ್ಯ, ಚಿತ್ರಕಲೆ, ಸಂಗೀತ ಕಲೆ ಮುಂತಾದವುಗಳು. ಇಲ್ಲಿ ನಾವು ನೆನಪಿಸಿಕೊಳ್ಳುವಂತಹ ಅದ್ಭುತ ಸಂಗತಿ ಎಂದರೆ ನಾದವನ್ನು ನಮ್ಮ ಋಷಿಗಳು ಬ್ರಹ್ಮವೆಂದು ಕಂಡು ಹಿಡಿದದ್ದು. ನಾದವನ್ನು ಅವರು ಅಹತ ಮತ್ತು ಅನಾಹರ ನಾದ ಎಂಬುದಾಗಿ ವಿಂಗಡಿಸಿದರು. ಆಹತ ನಾದ ನಮ್ಮ ಸಾಮಾನ್ಯ ಕವಿಗಳಿಗೆ ಕೇಳಿ ಬರುವ ಧ್ವನಿ ಎನ್ನಬಹುದು. ಅನಾಹತ ಎಂದರೆ ಯೋಗಸಾಧನೆಯಿಂದ ಅರಿಯುವಂತಹದು.

‘ಸಂಗೀತ ಅಂದ್ರೆ ಭಾರಿ ಹುಚ್ಚು ಅದಕ್ಕೆ ಬೆನ್ನುಹತ್ತಿದ್ರ ಮುಗ್ದ ಹೋತು’ ಎನ್ನುವ ಒಂದು ವಿಪರೀತಾರ್ಥದ ಅಭಿಪ್ರಾಯದಲ್ಲಿಯೇ ಅದರ ಪ್ರಶಂಸೆ ಅಡಗಿದೆ. ತನ್ನ ಆತ್ಮ ಸಂಗಾತಿ ಕೃಷ್ಣಗಾಗಿ ಅರಮನೆಯ ಹೊಸ್ತಿಲನ್ನು ದಾಟಿ, ಕೈಯಲ್ಲಿ ತಂಬೂರಿಯನ್ನು ಹಿಡಿದು ಹಾಡುತ್ತ ಹಾಡುತ್ತಾ ತನ್ನನ್ನೇ ಮರೆತ ಮೀರಾನ ಹುಚ್ಚು ಹುಚ್ಚೆ ! …… ಹಾಡುತ್ತಲೇ ಪಡೆಯಲಿಲ್ಲವೇ ಆಕೆ ತನ್ನ ಗುರಿಯನ್ನು.

ನಾದವೆಂಬ ಬ್ರಹ್ಮನ ಪ್ರಾಪ್ತಿಗಾಗಿ ಪ್ರಯತ್ನಿಸುವುದು ಹುಚ್ಚೆ? ಸಂಗೀತ ಲೋಕದ ಅನುಪಮ ಆನಂದಕ್ಕೆ ಮರುಳಾಗಿ ಎಳೆತನದಲ್ಲಿಯೇ ಮನೆಮಾರುಗಳನ್ನು ತ್ಯಜಿಸಿ ಹೋಗಿ, ಜಗದ್ವಿಖ್ಯಾತರಾಗಿರುವ ಕಲಾವಿದರ ಸಂಖ್ಯೆಗೆ ನಮ್ಮಲ್ಲಿ ಕೊರತೆ ಇದೆಯೇ? ಇಂತಹ ಮಹನೀಯರೇ ಇಂದು ರಾಷ್ಟ್ರದ ಪರಮೋಚ್ಛ ಪದವಿಗಳನ್ನು ಪಡೆದಿದ್ದಾರೆ. ಇದು ಹುಚ್ಚಲ್ಲ, ಸಂಗೀತದ ಮೇಲಿರುವ ಅಧಮ್ಯ ತೃಷೆ. ಈ ತೃಷೆ  ಹಿಂಗಿಸುವುದಕ್ಕಾಗಿಯೇ ಗುರುವನ್ನು ಹುಡುಕುತ್ತ ಸಾಧಕ ಎಲ್ಲೆಂದರಲ್ಲಿ ತಿರುಗುತ್ತಾನೆ. ಒಂದು ಸಲ ಆತನಿಗೆ ಮಾರ್ಗದರ್ಶಕ ಸಿಕ್ಕರೆ ಸಾಕು, ಹಗಲು ರಾತ್ರಿಗಳ ಪರಿವೆ ಇಲ್ಲದೆ ನಾದದ ಆಳಕ್ಕಿಳಿದು, ಅಲ್ಲಿರುವ ಅನರ್ಘ್ಯ ಕಲ್ಪನೆಗಳ ಸವಿಯುಣ್ಣುತ್ತ, ಸಾಮಾನ್ಯರ ಅರಿವಿಗೆ ಮೀರಿದ ಪರಮ ಸುಖದಲ್ಲಿ ಲಯವಾಗುತ್ತಾನೆ. ಸಾಧಕನ ಮನಸೆಂಬ ನೈಸರ್ಗಿಕ ಶಕ್ತಿಯನ್ನು ಒಂದೇ ಮಾರ್ಗದಲ್ಲಿ ಹರಿಸಿ ಆತನನ್ನು ನಾದಯೋಗಿಯಾಗಿಸಲು ಗುರು ಅನಿವಾರ್ಯವಾಗಿ ಬಿಡುತ್ತಾನೆ.

ಶಿಷ್ಯ ತನಗೆ ಬೇಕಾಗುವ ಗುರುವನ್ನು ತುಂಬಾ ಪರಿಶ್ರಮಪಟ್ಟು ಪಡೆಯಬೇಕಾಗುವುದು. ಯಾಕೆಂದರೆ ಆತನ ಧ್ವನಿ ಗುಣಧರ್ಮಕ್ಕೆ ಅನುಗುಣವಾದ ಮತ್ತು ಆತನಲ್ಲಡಗಿದ ಅಭಿರುಚಿಯನ್ನು ಅರಿತು ಅವುಗಳಿಗೆ ಆಕಾರ ಕೊಡುವಂತಹ ಶಿಲ್ಪಿಯನ್ನು ಹುಡುಕಿ ಪಡೆಯಬೇಕಾಗುತ್ತದೆ. ಇದು ವಾದ್ಯಗಳನ್ನು ಕಲಿಯುವ ಅಭಿರುಚಿಯುಳ್ಳವರಿಗೂ ಅನ್ವಯಿಸುತ್ತದೆ. ಆದರೆ ಇಲ್ಲಿಗೆ ಮುಗಿಯಲಿಲ್ಲ ಕಲಿಯುವಿಕೆ. ಇದು ಆರಂಭ ಮಾತ್ರ. ‘ಷಡ್ಜ್’ ಸಾದನೆಯಿಂದಲೇ ಕಲಿಯುವ ಮತ್ತು ಕಲಿಸುವವರ ತಾಳ್ಮೆಯ ಪರೀಕ್ಷೆ ಪ್ರಾರಂಭವಾಗಿ ಬಿಡುತ್ತದೆ. ಅಪಾರ ತಾಳ್ಮೆ, ಸಂಶೋಧನಾತ್ಮಕ ಬುದ್ಧಿ ನಿರಂತರ ‘ರಿಯಾಜ್’ಗಳಿಂದ  ಸಾಧಕನ ಕೆಲಸ ಪ್ರಗತಿಯತ್ತ ಸಾಗುವುದು.

‘ಗುರಿ ತಲುಪುವವರಿಗೆ ವಿಶ್ರಾಂತಿ ಬೇಡ’ ಎಂದು ಈ ಅಂತ್ಯರಹಿತ ಸಾಧನೆ ಮಾಡಿದಾಗ ಒಂದು ತೃಪ್ತಿಕರ ಸ್ಥಿತಿಯನ್ನು  ತಲುಪಬಹುದು. ಶಿಷ್ಯನ ತಾಳ್ಮೆ, ವಿಧೇಯತೆ ಹಾಗೂ ಸಂಗೀತದ ಬಗೆಗಿನ ಆತನ ಅಭಿರುಚಿಯನ್ನು ಕಂಡು ಸಂಪರೀತನಾದ ಗುರು ಮೆಲ್ಲಮೆಲ್ಲನೆ ಆತ, ತನ್ನ ಅಂತರಂಗದ ಅಮೂಲ್ಯ ಸಂಪತ್ತನ್ನು ಹದವರಿತು ಆತನಿಗೆ ಕಲಿಸಲು ಪ್ರಾರಂಭಿಸುತ್ತಾನೆ. ಸಂಗೀತದ ಬೆಗಗಿನ ಸಾಹಿತ್ಯ, ರಾಗ-ರಾಗಿಣಿಗಳು, ಸ್ಥಾಯಿ-ಅಂತರಾ, ಸಂಚಾರಿ, ಅಭೋಗಗಳಂತಹವು ಸಂಗೀತದಲ್ಲಿ ಎಷ್ಟು ಮುಖ್ಯ ಎಂಬುದನ್ನು ಕೂಲಂಕುಷವಾಗಿ ಪ್ರಾಯೋಗಿಕವಾಗಿ ಧಾರೆ ಎರೆಯುತ್ತಾರೆ.

ರಾಗಗಳನ್ನು ವಿಸ್ತರಿಸುವುದು ಹೇಗೆ ? ಅದರ ಕಲ್ಪನೆಗಳು ಭಿನ್ನವಾಗಿದ್ದರೂ  ಒಂದಕ್ಕೊಂದು ಹೆಗೆ ಸಂಬಂಧಪಡುತ್ತವೆ? ಬೆರೆ ಬೇರೆ ಕಲ್ಪನೆಗಳು ಒಂದಕ್ಕೊಂದು ಬೆರೆತು ಅಖಂಡ ಸ್ವರೂಪ ಹೆಗೆ ಆಗುತ್ತದೆ ಮತ್ತು ಜೀವನಾಡಿ ಎಲ್ಲಿದೆ? ಅಲಂಕಾರಗಳೆಂದರೇನು? ಮುರ್ಕಿ, ಫಿರತ್, ಲಯಕಾರಿ, ಅಲ್ಲದೆ ಹಲವಾರು ಭಿನ್ನ ಭಿನ್ನ ಪ್ರಕಾರದ ತಾನ್ ಗಳೆಂದರೆ ಏನು? ಮಿಂಡ ಯಾವುದಕ್ಕೆನ್ನುತ್ತಾರೆ? ಭಡತ್ ಎಂದರೇನು? ಹೀಗೆ ರಾಗಕ್ಕೆ ಸಂಬಂಧಪಟ್ಟ ಹಲವಾರು ವಿಷಯಗಳನ್ನು ಶಿಷ್ಯಗುರುವಿನಿಂದ ಮಾತ್ರ ಪಡೆಯಲು ಸಾಧ್ಯವಿದೆ. ಅನ್ಯಥಾ ಇದೆಲ್ಲವನ್ನೂ ಕಲ್ಪನೆ ಮಾಡುವುದು ಅಸಾಧ್ಯ.

ಇಷ್ಟಾದರೆ ಸಾಲದು, ಇನ್ನು ಮುಂದೆ ಕಲಿವಾತ ಮಾಡಬೇಕಾದ ಕೆಲಸ ಅಪಾರ ಕ್ರಮಿಸಬೇಕಾದ ಹಾದಿ ನಿರಂತರ. ಅದು ಸುಗಮವಾಗಬಹುದೆಂದು ಬೀಗುವಂತಿಲ್ಲ. ಯಾರೋ ಒಬ್ಬ ಶಾಯರ್ ಹೇಳಿರುವಂತೆ.

ಸಫರ್ ಮೆ ಧೂಪ ತೊ ಹೋಗಿ ಸಮಲ್ ಸಕೇ ತೊ ಚಲೋ

ಹೀಗೆ ಈ ಅನಂತದೆಡೆಗಿನ ಪಯಣದಲ್ಲಿ ಗುರುವಿನಿಂದ ಕಲಿತ ಪಾಠವನ್ನು ಅಪಾರ ಶೇದ್ಧೆಯಿಂದ ನಿರಂತರವಾಗಿ ಬೇಸರವಿರದ ‘ರಿಯಾಜ್’ ಮಾಡಿ ಕರಗತ ಮಾಡಿಕೊಳ್ಳಬೇಕಾದುದು ಅವಶ್ಯಕತೆ ಇರುತ್ತದೆ. ಎಲ್ಲಿಯೂ ಶಾಸ್ತ್ರೀಯ ಚೌಕಟ್ಟನ್ನು ಮೀರುವಂತಿಲ್ಲ. ಗುರು ಹೇಳಿದ ಪ್ರತಿಯೊಂದು ಎಚ್ಚರಿಕೆಯನ್ನು ಮರೆಯದೆ ಯಾರು ಸಾಧನೆಯ ಆಳಕ್ಕಿಳಿದು ವೀರಯೋಧರಂತೆ ಮುಂದುವರೆಯುತ್ತಾರೋ, ಅವರು ಮಾತ್ರ ಯಶಸ್ವಿಯಾಗಲು ಸಾಧ್ಯವಾಗಬಹುದು.

ಮೀಯಾ ತಾನ್‌ಸೇನ್‌ನಿಂದ ಮೊದಲು ಮಾಡಿ ಇತ್ತೀಚಿನ ಮಹಾಸಂಗೀತಗಾರರೆಲ್ಲ ಈ ಪರಂಪರೆಯ ಸುಧೆಯನ್ನು ಸೇವಿಸಿಯೇ ಅಸಾಧಾರಣರಾದದ್ದು, ಅಮರರಾದದ್ದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಅಮೃತವಾಣಿ ಕೇವಲ ಆಧ್ಯಾತ್ಮಿಕಕ್ಕಷ್ಟೇ ಅಲ್ಲ, ಅದು ಉಳಿದೆಲ್ಲ ಸಾಧನೆಗಳಿಗೆ ಅನಿವಾರ್ಯ ಎಂಬುದನ್ನು ಎತ್ತಿ ಹೇಳುತ್ತದೆ. ಉದಾಹರಣೆಗೆ ಒಂದು ರಾಗದ ಆರೋಹ, ಅವರೋಹ ಹೇಳಿ, ಇದನ್ನು ಹಾಡು ಎಂದು ವಿದ್ಯಾರ್ಥಿಗೆ ಹೇಳಿದರೆ ಅದನ್ನು ವಿದ್ಯಾರ್ಥಿ ವಿಸ್ತಾರ ಮಾಡಿ ಹಾಡಲಿಕ್ಕಾಗದೆ ಕಂಗಾಲಾಗಬೇಕಾಗುತ್ತದೆ. ಇಲ್ಲಿ ರಾಗಜ್ಞಾನ, ಸ್ವರಜ್ಞಾನ, ತಾಳಜ್ಞಾನ ಮತ್ತು ರಾಗದ ಜೀವರಸವನ್ನು ಸಾಧಿಸಲು ಗುರುವಿನ ಹತ್ತಿರ ವರ್ಷಗಟ್ಟಲೆ ಇದ್ದು ಸಾಧಿಸಬೇಕಾಗುತ್ತದೆ. ಎಲ್ಲಿ ಕಲ್ಪನೆ ತನ್ನ ಆಳವನ್ನು ಹೆಚ್ಚಿಸುತ್ತದೆ, ಮಾಧುರ್ಯದ ಅವಶ್ಯಕತೆ ಏಕೆ, ನಾದದ ಉಚ್ಚತೆ ಅಥವಾ ನೀಚತೆ ಎಂದರೇನು? ರಾಗದ ಕುಸುರಿ ಕೆಲಸ ಹೇಗೆ? ಹೀಗೆ ರಾಗವನ್ನು ಸರ್ವಾಂಗೀಣವಾಗಿ ಸಹಜವಾಗಿ ಸಾಧಿಸಬೇಕಾದರೆ ಶಿಷ್ಯನಿಗೆ ಗುರುವಿನ ಆಶ್ರಯ ಅನಿವಾರ್ಯ. ಇಲ್ಲಿ ಶಿಷ್ಯ ತನ್ನ ಸಾಧನಾವಧಿಯಲ್ಲಿ ತನ್ನ ಹೌದು ಅಲ್ಲಗಳನ್ನೆಲ್ಲ ಮರೆತು ತನ್ನನ್ನು ಗುರುವಿನ ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕಾಗುತ್ತದೆ. ಆತನ ಕಲ್ಪನಾವಿಲಾಸದಲ್ಲಿ ಮುಳುಗಿ ತನ್ನನ್ನು ತಾನು ಮರೆಯಬೇಕಾಗುತ್ತದೆ. ಇಲ್ಲದಿದ್ದರೆ ‘ಹರ ಮುನಿಯಲು ಗುರು ಕಾಯುವನು, ಗುರು ಮುನಿಯಲು?’ ಎಂಬ ಆದ್ಯರ ಮಾತು ನೆನಪಿಸಿಕೊಳ್ಳಬೇಕಾಗುತ್ತದೆ. ಗುರು ಕರುಣೆಗಾಗಿ ಗುಲಾಮನಾಗುವುದರಲ್ಲಿ ಏನೂ ತಪ್ಪಿಲ್ಲ ಏಕೆಂದರೆ ‘ಗುರುವಾಗಿ ಹೊರಹೊಮ್ಮಲು ಗುಲಾಮನಾಗುವುದರಲ್ಲಿ ತಪ್ಪೇನಿಲ್ಲ’?

ಹಾಗೆ ನೋಡಿದರೆ ಗುರುಶಿಷ್ಯ ಎಂಬುವವರು ಬೇರೆ ಬೇರೆ ಅಲ್ಲವೇ ಅಲ್ಲ. ಒಬ್ಬರನ್ನಗಲಿ ಒಬ್ಬರಿಲ್ಲ. ಬ್ರಹ್ಮಜ್ಞಾನಿಯಾದ ಗುರುವಿದ್ದಾನೆ ಆದರೆ ಆತನ ಜ್ಞಾನ ಪಡೆಯಲು ಶಿಷ್ಯರೇ ಇಲ್ಲದಿದ್ದರೆ? ಹಾಗೆಯೇ ಗುರುವಿಲ್ಲದೆ ಶಿಷ್ಯನಿಲ್ಲ. ಕೊಡುವಾತ ಮತ್ತು ತೆಗೆದುಕೊಳ್ಳುವಾತ ಇದ್ದಾಗಲೇ ಈ ಕ್ರಿಯೆಯ ಚಲನೆಗೆ ಅರ್ಥವಿದೆ. ಶರಣ ಆದಯ್ಯನವರ ವಚನ ಹೀಗಿದೆ : ‘ಗುರುವಿನಂತರಂಗದೊಳಗೆ ಶಿಷ್ಯ, ಶಿಷ್ಯನಂತರಂಗದೊಳಗೆ ಗುರು ಈ ಗುರು-ಶಿಷ್ಯ ಸಂಬಂಧ ಶರೀರ ಪ್ರಾಣದಂತೆ ಭಿನ್ನವಿಲ್ಲ’ ಎಂದಾಗ ಒಬ್ಬರಿಗೊಬ್ಬರು ಎಷ್ಟೊಂದು ಅನ್ಯೋನ್ಯವಾಗಿ ಒಂದಾಗಿಬಿಡುತ್ತಾರೆ ಎಂದು ತಿಳಿದುಬರುತ್ತದೆ. ಗುರು ತನ್ನ ಜೀವಿತದ ಅತ್ಯಮೂಲ್ಯ ಸಾಧನೆಯನ್ನು ಸತ್ಪಾತ್ರರಿಗೆ ಮಾತ್ರ ಧಾರೆಯೆರೆಯುತ್ತಾನೆ. ಅಪಾತ್ರರಿಗಲ್ಲ. ಏಕೆಂದರೆ, ತನ್ನ ಹೃದಯಾಂತರಾಳದ ಸಾಧನೆಯ ಫಲವನ್ನುಂಡ ಶಿಷ್ಯ, ತನ್ನಂತೆ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಲೆಂದು ತನ್ನ ಅಮೂಲ್ಯ ಸಮಯವನ್ನು ಧಾರೆಯೆರೆದು ಶಿಷ್ಯನಿಗೆ ತನ್ನನ್ನೇ ನೀಡುತ್ತಾನೆ. ಈ ಅಮೂಲ್ಯ ಕಾರ್ಯ ಕೇವಲ ಗುರು-ಶಿಷ್ಯ ಪರಂಪರೆಯಲ್ಲಿ ಮಾತ್ರ ಆಗಲಿಕ್ಕೆ ಸಾಧ್ಯವಿದೆ. ಏಕೆಂದರೆ ಗರು ತನ್ನ ಶಿಷ್ಯನ ಸಾಧನೆಯಲ್ಲಿ ಬರುವ ಧ್ವನಿಯಲ್ಲಿ ತೊಡಕು, ರಾಗದ ತೊಡಕು ಮುಂತಾದವುಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಅಕ್ಕಸಾಲಿಗನೊಬ್ಬ ಆಭರಣಗಳ ಸೂಕ್ಷ್ಮತೆಯನ್ನು ತಿದ್ದಿ ಸಿದ್ಧಗೊಳಿಸುವಂತೆ ಶಿಷ್ಯನಲ್ಲಿರುವ ಓರೆ ಕೋರೆಗಳನ್ನು ತಿದ್ದಿ, ತೀಡಿ ಒಮದು ಹದಕ್ಕೆ ತರುತ್ತಾನೆ. ಸಂಗೀತವನ್ನು ನಾವು ಬ್ರಹ್ಮವಿದ್ಯೆಯೆಂದು ಸ್ವೀಕರಿಸಿ ಅದರ ಸಾಧನೆಯೂ ಕೂಡ ಅದೇ ಮಟ್ಟದಲ್ಲಿ ನಡೆಯಬೇಕಾಗುತ್ತದೆ. ಅಂದಾಗ ಮಾತ್ರ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ಹಲವಾರು  ಪ್ರಮುಖ ಕೇಂದ್ರಗಳಾದ ಐಟಿಸಿ ಕೋಲಕತ್ತಾ, ಸ್ಪಿಕ್ ಮೈಕೆ ಮತ್ತು ಕರ್ನಾಟಕದ ಹೆಸರಾಂತ ಸಂಗೀತ ವಿದ್ಯಾಸಂಸ್ಥೆಯಾದ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಮಕ್ಕಳನ್ನು ಗುರುಶಿಷ್ಯ ಪರಂಪರೆಯಂತೆ ಗಿರಿಯ ಕಲಾವಿದರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ವೀರೇಶ್ವರ ಪುಣ್ಯಾಶ್ರಮವು ಕೂಡಾ ಡಾ. ಪಂಡಿತ್ ಪುಟ್ಟರಾಜ ಗವಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು ಇಲ್ಲಿ ಅಭ್ಯಾಸ ಮಾಡಿರುವ ಹಲವಾರು ವಿದ್ಯಾರ್ಥಿಗಳು ಸುವಿಖ್ಯಾತ ಕಲಾವಿದರಾಗಿ ಹೊರಹೊಮ್ಮಿದ್ದಾರೆ.

ನಮ್ಮ ಪೂರ್ವಜರು ಗುರು-ಶಿಷ್ಯ ಪರಂಪರೆ ಮಹತ್ವವನ್ನು ಅರಿತು ಅದನ್ನು ಅತ್ಯಂತ ವ್ಯವಸ್ಥಿತ   ರೀತಿಯಲ್ಲಿ ಮುನ್ನಡೆಸಿಕೊಂಡು ಬಂದ ಕಾರಣ ನಮಗೆ ಸಕಲ ವಿದ್ಯೆಗಳು ಇಂದು ಪ್ರಾಪ್ತವಾಗಿವೆ. ಇದೊಂದು ಭಾವನಾತ್ಮಕ ವ್ಯವಸ್ಥೆ. ಇದನ್ನು ವ್ಯಾಪಾರಿಯ ಮನೋಭಾವದಿಂದ ಕಂಡಾಗ ಸರ್ವನಾಶ ಖಂಡಿತ. ಇದರಿಂದಾಗಿ ಸಂಗೀತದ ಗಾಂಭಿರ್ಯ ಅದರ ಆಳ, ಸೂಕ್ಷಮತೆ, ವಿಶಾಲತೆ ಕಳೆದುಕೊಳ್ಳುತ್ತಿವೆ ಎಂದು ಇಂದಿನ ನಮ್ಮ  ಹಿರಿಯ ಕಲಾವಿದರು ಅತ್ಯಂತ ನೋವಿನಿಂದ ಹೇಳುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ. ವ್ಯಾಪಾರಿ ಮನೋಭಾವದಿಂದ ಮುಂಬರಬಹುದಾದ ಅಪಾಯಕಾರಿ ಬೆಳವಣಿಗೆಯನ್ನು ಕೂಡಾ ಕೆಲ ಹಿರಿಯರು ಭವಿಷ್ಯದ ರೂಪದಲ್ಲಿ ನುಡಿದಿದ್ದಾರೆ. ಈ ಅಪಾಯದ ಘಂಟೆಯನ್ನು ತಿಳಿದು ನಮ್ಮ ಋಷಿ-ಮುನಿಗಳು  ಹಾಕಿದ ನೈಸರ್ಗಿಕ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಸರಿಯಲ್ಲವೆ?

ಗುರುಶಿಷ್ಯ ಪರಂಪರೆ ಎಷ್ಟೊಂದು ಅನಿವಾರ್ಯವೆಂದರೆ ಅದೊಂದು ಬಿಡಿಸಲಾಗದ ಸುಭದ್ರ ನಂಟು. ಪ್ರಪಂಚದ ಯಾವ ಧರ್ಮವಿರಲಿ, ಯಾವುದೇ ಜನಾಂಗವಿರಲಿ, ಏಕ ವ್ಯಕ್ತಿರೂಪದಲ್ಲಾಗಲಿ ಅಥವಾ ಸಂಸ್ಥೆಯ ರೂಪದಲ್ಲಾಗಲಿ ವಿದ್ಯೆಯನ್ನು ದಾನ ಮಾಡಬೇಕಾದರೆ ಅದರ ಸಂಪೂರ್ಣ ಆಗು-ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಾಗುತ್ತದೆ. ಏಕೆಂದರೆ ಅಮೂಲ್ಯವಾದ ಕಲೆ ನಮ್ಮ ಜಾಗರೂಕತೆಯಿಂದ ಮುಂದಿನ ಜನಾಂಗಕ್ಕಿಲ್ಲದಂತಾಗುವ ಅಪಾಯವಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ದೃಪದ್-ಧಮಾರ್ ಗಾಯಕಿಯ ಶುದ್ಧವಾದ ಪದ್ಧತಿ ಇಂದು ದೇಶದ ಕೆಲವೇ ಕೆಲವು ಗಾಯಕರಿಗೆ ಮಾತ್ರ ತಿಳಿದಿದೆ. ಅದರಂತೆ ಸಾರಮಗಿ ವಾದನ, ಪಖಾವಜ್ ಮುಂತಾದವುಗಳನ್ನು ಲುಪ್ತವಾಗಿ ಹೋಗುವ ಅಪಾಯಕಾರಿ ಸ್ತಿತಿಯಲ್ಲಿವೆ. ಇದಕ್ಕೆ ನಾವೇ ಕಾರಣರಲ್ಲವೆ? ಇದಕ್ಕೆ ಕಲಿಯುವ ಹಾಗೂ ಕಲಿಸುವವರಿಬ್ಬರೂ ಜವಾಬ್ದಾರರಾಗುತ್ತಾರೆ. ಅತ್ಯಂತ ಯಾಂತ್ರಿಕವಾಗಿರುವ ಇತ್ತೀಚಿನ ದಿನಗಳಲ್ಲಿ ಗುರು-ಶಿಷ್ಯ ಸಂಬಂಧಗಳು ಕೇವಲ ವ್ಯವಹಾರಿಕ ಎಂಬುವ ಮಟ್ಟಕಕು ಬಂದಿವೆ. ಇಲ್ಲಿ ಚನ್ನಬಸವಣ್ಣನವರ ಒಂದು ವಚನ ಪ್ರಸ್ತುತವೆನಿಸುತ್ತದೆ.

ಗುರುಶಿಷ್ಯ ಸಂಬಂಧವೆನೆಂದುಪಮಿಸುವೆ?
ಜ್ಯೋತಿಯಲೊದಗಿದ
ಜ್ಯೋತಿಯಂತಿರಬೇಕು
ದರ್ಪಣದೊಳಡಗಿದ
ಪ್ರತಿಬಿಂಬದಂತಿರಬೇಕು
ಸ್ಫಟಿಕದೊಳಗಿರಿಸಿದ
ರತ್ನದಂತಿರಬೇಕು
ರೂಪಿನ
ನೆಳಲಿನ ಅಂತರಂಗದಂತಿರಬೇಕು
ಕೂಡಲ
ಚನ್ನಸಂಗಯ್ಯಾ ಇದು ಕಾರಣ ದರ್ಪಣವು
ದರ್ಪಣಕೆ
ತೋರಿದಂತಿರಬೇಕು.