ಹಿಂದ ಯೋಳ ಗುಡಿಯ ಕಟ್ಟಿ
ಮುಂದೆ ಯೋಳ ಗುಡಿಯ ಕಟ್ಟಿ
ಹೊಂಟಾಳ ಯಲ್ಲವ್ವ, ಮುಂದ ಮುಂದ       ಪಲ್ಲ

ಕಾರಿ ತೊಪ್ಲಾ, ಬಾರಿ ತೊಪ್ಲಾ
ಕಂಡ ಕಂಡ ತೊಪ್ಲಾ ಹರದಾಳ
ಕಲ್ಲನ್ನ ಕಡಬು ಮಾಡಿ
ಮುಲ್ನಾದ್ರು ಶ್ಯಾವಗಿ ಮಾಡಿ
ಹೇಳಿದಂತ ಅಡಗಿ ಮಾಡ್ಯಾಳ
ಹಿಂದ ಯೋಳ….         ೧

ಉಸಕಿನ ಬಿಂದಿಗಿ ಮಾಡಿ
ಹಾವಿನ ಸಿಂಬಿಗಿ ಕಟ್ಟಿ
ಗಂಗಿಗೆ ಕೈಮುಗಿದು
ಗರತಿಯ ಶಕುತಿ ತೋರಿ
ಪಾರ್ವತಿಹಂಗ ದೇವಿ ಹೊಂಟಾಳ
ಹಿಂದ ಯೋಳ… ೨

ತಾಯಿ ಶಕುತಿ ಮುಂದಾದ ಶಕುತಿ
ಗರತಿಯ ಬಕುತಿ ಮುಂದಾದ ಭಕುತಿ
ಶಿವನು ಸೋತಾನ ಪಾರ್ವತಿ ಮುಂದ
ಜಮದಗ್ನಿ ನಾಚ್ಯಾನ ಯಲ್ಲಮ್ಮನ ಹಿಂದ
ಇವಳ ಮಹಿಮೆ ನೋಡಿ ನಾವು ಮೆಚ್ಚೇವಿ
ಹಿಂದ ಯೋಳ ಗುಡ್ಡವ ಕಟ್ಟಿ ೩