ಸಂಗೊಳ್ಳಿಯಲ್ಲಿ ರಾಯಣ್ಣನಿಗೆ ಶೇತ್‌ಸನದಿ ಮನೆತನದವನೆಂದು ಕರೆಯಲಾಗಿದೆ. ‘ಇವನ ಅಜ್ಜನ ಕಾಲದಲ್ಲಿಯೇ ಎರಡು ರಕ್ತಮಾನ್ಯಗಳು ಇದ್ದವು ಎಂದು ಜಾನಪದ ಸಾಹಿತ್ಯದಿಂದ ತಿಳಿಯುತ್ತದೆ. ಎಂದರೆ ಇವರದು ಖ್ಯಾತ ಯೋಧರ ವಂಶ. ವಿಜಾಪೂರ ಆದಿಲ್‌ಷಾರ ಕಾಲದಲ್ಲೆ ಎರಡು ರಕ್ತಮಾನ್ಯಗಳು ಮನೆತನದ ಯೋರೋ ಇಬ್ಬರು ವೀರರು ಯುದ್ಧದಲ್ಲಿ ತೀರಿಕೊಂಡಾಗ ಸಿಕ್ಕಿದವುಗಳಾಗಿರಬೇಕು’. (೮) ಸಂಗೊಳ್ಳಿಯಲ್ಲಿ ಕುಲಕರ್ಣಿ-ಬಾಳಪ್ಪ ಎಂಬುವನು ವಾಸವಾಗಿದ್ದನು. ಇವನದು ಕುಲಕರ್ಣಿ ಮನೆತನ ಒಕ್ಕಲುತನ ಉದ್ಯೋಗವಿತ್ತು. ಇವನು ರಾಯಣ್ಣನ ಹುಡುಕಾಟದಿಂದ ದನಗಳ ಕೊಟ್ಟಿಗೆಯ ಕಣಿಕೆಯ ಚಿಪ್ಪಾಡಿಯಲ್ಲಿ ಮುಚ್ಚಿಕೊಂಡಿದ್ದನು. ಇವನ ಜಮೀನಕ್ಕಿಂತ ರೋಗಣ್ಣವರ ಮನೆತನದ ಜಮೀನ ಹೆಚ್ಚಿಗಿದ್ದುದರಿಂದ, ಸಹಜವಾಗಿಯೇ ಮತ್ಸರ ಪಡುತ್ತಿದ್ದನು. ರಾಯಣ್ಣನ ಸಗತಿ ಕಟ್ಟೆಯಲ್ಲಿಯ ಶಕ್ತಿ ಪ್ರದರ್ಶನ, ಅವನ ಗುಣ, ಗಾಂಭೀರ್ಯದ ವರ್ಣನೆ ಕೇಳುವುದು ಕುಲಕರ್ಣಿ ಬಾಳಪ್ಪನಿಗೆ ಆಗುತ್ತಿರಲಿಲ್ಲ! ಎಷ್ಟಾದರೂ ರಾಯಪ್ಪನು ಅವನ ಕೈಕೆಳಗಿನ ಶೇತ್‌ಸನದಿ (ವಾಲೀಕಾರ) ಎಂಬುದಾಗಿ ತಿಳಿದುಕೊಂಡಿದ್ದನು.

ಕುಲಕರ್ಣಿ ಬಾಳಪ್ಪನು ರಾಯಣ್ಣನನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂದು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದವು. ತನ್ನ ಒಲ್ಲಿ (ಧೋತರ) ಒಗೆದುಕೊಂಡು ಬರಲು ರಾಯಣ್ಣಿನಿಗೆ ಬಾಳಪ್ಪ ಹೇಳಿದಾಗ, ರಾಯಣ್ಣನಿಗೆ ಕಡುಕೋಪ ಬಂದಿತ್ತು. ಆ ವಿವರಗಳನ್ನು ಲಾವಣಿಗಳಲ್ಲಿ ಕಾಣಬೇಕು.

ಲಾವಣಿ:

ಪೂರ್ವದ ಮಾತ ಹೇಳತೀಜನಿ ನಿಮಗ, ಸರ್ವರು ಕುಂತ ಕೇಳಿರಿ|
ಗರ್ವಬಂತೋ ಸಂಗೊಳ್ಳಿ ಕುಲಕರ್ಣಿಗಿ

ಚಂದದಿಂದ ರಾಯನಾಯಕ ಹೊಂದಿಕೊಡ ಇದ್ದ ಅವರ |
ಮುಂದ ಹುಟ್ಟೀತ ಕದನದ ಬ್ಯಾಗಿ
||
ಕುಲಕರ್ಣಿ ಬಾಳಪ್ಪ ರಾಯಣ್ಣ ಜಳಕಾ ಮಾಡು ಹೊತ್ತಿನಾಗ

ಧೋತ್ರಾ ಸಳತಾ ಅಂತ ಕೊಟ್ಟ ಅವನ ಕೈಯಿಗಿ|
ಇಷ್ಟ ಮಟ್ಟಿಗಿ ಸಿಟ್ಟ ಮಾಡಿ ದಿಟ್ಟತನ ಹಿಡದ ರಾಯಣ್ಣ

ಮುಟ್ಟಾಕಿಲ್ಲ ಅರಿವಿ ಎಂದಿಂದಿಗೆ ||
ಯಾಕಲೆ ಹಳಬಾ ಜೊತ್ಯಾಗಿದ್ದಿ ಸೊಕ್ಕ ಬಂತ ಏನೋ ಈಗ
|
ದಿಗರ ಆಡತಿಯೋ ನಿಂತ ಇದರೀಗಿ
||
ಒಳ್ಳೆದ ಬಾಳಣ್ಣ ನನ್ನ ತಳ್ಳಿ ಮಾತ್ರ ಹಿಡಿಯೋ ಇನ್ನ
||
ದಾಳಿ ಬಂಟ ತಿಳಿಯೋ ಸುತ್ತಿನ ಹಳ್ಳಿಗಿ

ಒತ್ತರದಿಂದ ರಾಯ ನಾಯಕ ಹೆತ್ತ ತಾಯಿ ಪಾದಕ ಬಿದ್ದು
ಮತ್ತೆ ಕಟ್ಟಿಕೊಂಡ ಹತ್ತೀತ ಬ್ಯಾಗಿ

[1] ||[2]

ಇದೇ ಘಟನೆಯನ್ನು ಶಾಹೀರ ಶ್ಯಾಮರಾವ (ಇವನು ಬ್ರಾಹ್ಮಣ ಕವಿ ತನ್ನ ಲಾವಣಿಯಲ್ಲಿ, ‘ಎಲೆ ಬಾಳಣ್ಣ ಎಂಥಹ ಕೆಲಸ ಹೇಳಿದಿ, ಇಂತಹ ಕೆಲಸ ನಾನು ಮಾಡುವನಲ್ಲ| ಕಡಿ ಅಂದ್ರ ನೂರ ಮಂದಿನ ಕಡಿಯಾಂವ, ಹೂಡಿ ಅಂದ್ರ ನೂರ ಮುಂದಿನ ಹೊಡಿಯಾವ, ಇಂತಹ ಕೆಲಸ ನನಗೆ ಹೇಳಬಾರದಿತ್ತು’ ಎಂದು ರಾಯಣ್ಣ ಹಲ್ಲು ಕಡಿಯುತ್ತ ವೀರಾವೇಷದಿಂದ ನಡೆದು ಹೋಗುತ್ತಾನೆ. ಬ್ರಾಹ್ಮಣ ಬಾಳಪ್ಪ ಈ ಖುನಸಾ ಮನಸ್ಸಿನಲ್ಲಿ ಇಟ್ಟನು. ಮತ್ತು ರಾಯಣ್ಣನನ್ನು ಮೋಸ ಮಾಡುವ ಮತ್ಸರ (ಉರಿಬೆಂಕಿ)ವನ್ನು ಹೊಟ್ಟೆಯಲ್ಲಿಟ್ಟುಕೊಂಡನು. ಕನ್ನಡದಲ್ಲಿ ಬಂದಿರುವ ೩-೪ ನಾಟಕಗಳಲ್ಲಿ ಈ ಪ್ರಸಂಗ ವೀರರಸ ನಿರೂಪಕವಾಗಿ ತೋರುವದು.

ಇದಾದ ಕೆಲವು ದಿನಗಳ ನಂತರ ಹೊಲದ ಪಾಳ್ಯ (ಹಫ್ತೆ) ಕೇಳಲು, ರಾಯಣ್ಣ ನಿಲ್ಲದಾಗ ಫಕೀರನನ್ನು ಮನಗೆ ಕಳಿಸುತ್ತಾನೆ ಬಾಳಪ್ಪ, ಕೆಲವರ ಹೇಳಿಕೆಯಂತೆ ತಂದೆ ತಾಯಿಗಳನ್ನು ಕರೆಕಳುಹಿಸಿ, ಹಫ್ತೆ (ಹೊಲಿಪಾಳೆ) ತುಂಬುವಂಕೆ ಕೇಳಿದನೆಂದೂ ತಿಳಿಯುತ್ತದೆ. ತಂದೆ ಭರಮಪ್ಪ ಇದ್ದಿರಲಿಲ್ಲವಾದ್ದರಿಂದ ತಾಯಿ ಕೆಂಚವ್ವನನ್ನು ಕರೆ ಕಳುಹಿಸಿ, ಹೊಲದ ಹಫ್ತೆ ತುಂಬುವುದಕ್ಕೆ ಪ್ರಸ್ತಾಪಿಸುತ್ತಾನೆ. ಆಕೆ ನನ್ನ ಕಷ್ಟ ತೋಡಿಕೊಂಡಾಗ, ಬಾಳಣ್ಣ ಕೆಂಚವ್ವನ ಬೆನ್ನ ಮೇಲೆ (ಡುಬ್ಬದಲ್ಲಿ) ಕಲ್ಲು ಹೇರಿಸುತ್ತಾನೆ. ಇದಕ್ಕೂ ಪೂರ್ವ ರಾಯಣ್ಣನನ್ನು ರಮಿಸಿ, ಲಕೋಟಿಯೊಂದನ್ನು ಕೊಟ್ಟು ಸಂಪಗಾವಿಗೆ ಕಳಸಿದ್ದನು. ಕಾಗದವನ್ನು ಓದಿದ ಸುಬೇದಾರ ೪-೫ ಜನರಿಂದ ಹಿಡಿದು ಜೈಲುಖಾನೆಗೆ ರಾಯಣ್ಣನನ್ನು ಕಳಿಸಿದನು.

ಇಷ್ಟೊಂದು ಸಣ್ಣ ಕುಲಕರ್ಣಿ ಅನ್ಯಾಯ ಮಾಡಬೇಕಾದರೆ, ಈ ಬ್ರಿಟೀಶ ಸರಕಾರದಲ್ಲಿ ನಮ್ಮ ದೇಶದಮ್ಯಾಗ ಎಷ್ಟ ಅನ್ಯಾಯ ನಡೆದಿರಬೇಕೆಂದು ವಿಚಾರ ಜ್ವಾಲೆ ರಾಯಣ್ಣನಲ್ಲಿ ಒಂದೇ ಸಮನೆ ಉರಿಯತೊಡಗಿತು. ತಾಯಿ ಹೇಳಿದ ಮಾತು ಮನದಲ್ಲಿ ಮೂಡಿ ನಿಂತಿತು. ಜ್ವಾಕಿ ಮಗನೇ! ಹುಷಾರ ಮಗನೆ!! ಎಂಬ ಧ್ವನಿ ರಾಯಣ್ಣನಲ್ಲಿ ಗುಣಗುಡತೊಡಗಿತು.

ಅತ್ತ ಕಡೆಗೆ ಸಂಗೊಳ್ಳಿಯಲ್ಲಿ ಹೊಲದ ಹಪ್ತೆ ಮೂವತ್ತೈದು ರೂಪಾಯಿಗಳಿಗಾಗಿ, ರಾಯಣ್ಣ ಬಂದು ಕೊಡುತ್ತಾನೆಂದರೂ ಕಟುಕ ಹೃದಯದ ಬಾಳಪ್ಪ ಕೆಂಚವ್ವನನ್ನು ಕರುಣೆಯಿಂದ ಕಾಣಲಿಲ್ಲ!

ಸಂಗೊಳ್ಳಿಯಲ್ಲಿ ಮ್ಯಾದಾರ ಹನುಮ ಮತ್ತು ಊರಿನ ಇತರ ಹುಡುಗರು ಈ ದೃಶ್ಯ ನೋಡಿದರು. ರಾಯಣ್ಣನ ತಾಯಿಗೆ ಒದಗಿದ ಕಷ್ಟಕಂಡು ಮನಸ್ಸು ನಿಲ್ಲಲಿಲ್ಲ. ಆದರೆ ಸಣ್ಣ ಹುಡುಗರು  ಪ್ರಬಲ ಸರಕಾರಿ ಅಧಿಕಾರಿಗಳ ಮುಂದೆ ಏನು ಮಾಡಿಯಾರು? ಊರಿನ ಹಿರಿಯರೆಲ್ಲ ಗೆದ್ದೆತ್ತಿನ ಬಾಲ ಹಿಡಿಯುವವರು.  ಹುಡುಗರು ಕೂಡಲೇ ಅಮಟೂರಿಗೆ ಓಡಿದರು. ಬಿಚ್ಚಗತ್ತಿ ಚನಬಸಪ್ಪನಿಗೆ ಕೆಂಚವ್ವನ ಕಷ್ಟ ತಿಳಿಸಿದರು. ಚೆನ್ನಬಸಪ್ಪ ಸಂಗೊಳ್ಳಿಯ ಚಾವಡಿಗೆ ಧಾವಿಸಿ ಬಂದ ‘ಕಂದಾಯದ ರೊಕ್ಕಕ್ಕೆ ನಾನು ಜಾಮೀನು ನಿಲ್ತೀನಿ’ ಎಂದು ಹೇಳಿ ಕಲ್ಲು ತೆಗೆಸಿದನು.[3]

ಕೆಂಚವ್ವ ಚಾವಡಿ ಕಟ್ಟಿ ಇಳಿಯುತ್ತಲೇ ವೀರಾವೇಷದಿಂದ ನುಡಿದಳು. ಎಲೋ ಬಾಳ್ಯಾs, ರಾಯಣ್ಣ ಬರಲಿ, ನಿನ ಚೆಂಡ ತಗಸ್ತೀನಿ’ ಎಂದು ಹೇಳಿದಳು.

ರಾಯಣ್ಣ ಮನೆಗೆ ಬರುತ್ತಲೇ ತಾಯಿ ಕೆಂಚವ್ವನಿಗೆ ಒದಿಗದ ಸಂಗತಿಯು ತಿಳಿಯಿತು. ತಾಯಿಯನ್ನು ಒಂದು ಕ್ಷಣ ಸಮಾಧಾನ ಮಾಡಿ, ಕುಲಕರ್ಣಿ ಬಾಳ್ಯಾನ ಮನೆಗೆ ಬಂದನು. ರಾಯಣ್ಣ ಬಂದಿದ್ದಾನೆ ಎಂಬ ಸುದ್ದಿ ತಿಳಿದೊಡನೆ ಕುಲಕರ್ಣಿ ಗಟ್ಟಿಯಾಗಿ ತನ್ನ ಮನೆಯ ಬಾಗಿಲು ಮುಚ್ಚಿಕೊಂಡನು. ರಾಯಣ್ಣ ಖಡ್ಗದಾರಿಯಾಗಿ ಅವನ ಮನೆಯ ಹಿತ್ತಲಿನಿಂದ ಜಿಗಿದು, ಒಳಹೊಕ್ಕನು, ಕಣಕಿಯ ಚಿಪ್ಪಾಡಿಯಲ್ಲಿ ಹೂತುಕೊಂಡಿದ್ದ ಬಾಳ್ಯಾನನ್ನು ರಾಯಣ್ಣ ಎಡಗೈಯಿಂದ ಎಳೆದು ಈ ಸಂದರ್ಭದ ಸ್ಥಿತಿಯನ್ನು ನಾಟಕಕಾರ ಬಿ. ಕಲ್ಯಾಣ ಶರ್ಮಾ ಅವರು ಬರೆದ ಕನ್ನಡ ಕೇಸರಿ ಸಂಗೊಳ್ಳಿ ರಾಯಣ್ಣ ಕೃತಿಯಿಂದಲೇ ಅರಿದು ತಿಳಿದುಕೊಳ್ಳುವದು- ಚಿತವಾದೀತು!

ರಾಯಣ್ಣ ಎಲಾ ಕಳ್ಳಾ ಎಲ್ಲಿ ಅಡಗಿರಿವಿಯೋ? ಎಳು ಬಾ
ಮುಂದೆ, ಹಾವಿನ ಹೆಡೆಯ ಮೇಲೆ ಕಾಲಿಟ್ಟರೆ,
ಅದು ಕಚ್ಚದೆ ಬಿಟ್ಟೀತೆ
? ನಿನ್ನ ಜೀವಾ ತಗೊಳ್ಳದೆ ನನ್ನ
ಸಮಾಧಾನ ಆಗುವುದಿಲ್ಲ! ನನ್ನ ತಾಯಿ ಗೋಳಾಡಿಸಿದ
ನಿನ್ನುನ್ನು ಬಿಟ್ಟೀನೇ? ಬಾ ನನ್ನ ಕತ್ತಲಿಯ ಕಡತ ತಾಳು!
ವೀರಾವೇಷದ ಹಾಡು.

ಬಾಳಪ್ಪ:

ರಾಯಣ್ಣ ನಾನು ಹೇಳುವ ಮಾತನ್ನಾದರೂ ಕೇಳು
ನನ್ನಿಂದ ತಪ್ಪಾಯಿತು. ನಾನು ನಿನಗೆ ಶರಣು ಬಂದಿದ್ದೇನೆ.
ನನ್ನ ಹೆಂಡತಿಯ ಕುಂಕುಮ ಅಳಿಸಬೇಡ.
ಅವಳ ಮಂಗಳ ಸೂತ್ರ ಹರಿಯಬೇಡ! ಶರಣ ಬಂದವರಿಗೆ ಮರಣಕೊಡುವುದು ನಿನ್ನಂತಹ ವೀರರಿಗೆ ಯೋಗ್ಯವಲ್ಲ! ನನಗೆ ಜೀವದಾನ ಕೊಟ್ಟು ಕೀರ್ತಿವಂತನಾಗು.

ರಾಯಣ್ಣ:

(ಕತ್ತಿ ಒರೆಗಾಣಿಸಿ) ಹೋಗು; ಹಾಳಾಗಿ ಹೋಗು.
ರೈತರನ್ನು ಕಾಡಬೇಡ, ಹೆಂಗಸರ ಅಬ್ರು ಕಳೆಯಬೇಡ
ಬಡವರ ಅನುವು ಆಪತ್ತು ನೋಡಿಕೊಂಡು ಹೋಗು.

ಬಾಳಪ್ಪ:

ನಾನಾದರೂ ಏನು ಮಾಡಬೇಕು? ಬಿರಾಡ ವಸೂಲ
ಮಾಡದಿದ್ದರೆ
, ಮೇಲಿನವರು ಒದೆಯುತ್ತಾರೆ.

ಅಷ್ಟರಲ್ಲಿ ಬಾಳಪ್ಪನ ಹೆಂಡತಿ ಗೋದಾಬಾಯಿ ತನ್ನ ಮಾಂಗಲ್ಯವನ್ನು ಕಾಪಾಡಬೇಕೆಂದು, ತನ್ನ ಮಕ್ಕಳನ್ನು ಕರೆದುಕೊಂಡು ರಾಯಣ್ಣನ ತಾಯಿ ಕೆಂಚವ್ವನಲ್ಲಿ ಕ್ಷಮೆ ಯಾಚನೆ ಮಾಡುತ್ತ, ಒಂದೇ ಸವನೆ ಹಲಬುತ್ತಿರುತ್ತಾಳೆ. ಆಗ ರಾಯಣ್ಣನು ಮನೆಗೆ ಬರುತ್ತಲೇ ಅಂಗಲಾಚಿಸಿ ತನ್ನ ಗಂಡನ ಪ್ರಾಣ ಭಿಕ್ಷೆ ಬೇಡುತ್ತ ಗೋದಾಬಾಯಿ ಬಾಗಿ ನಿಂತಳು. ೨-೩ ಮಕ್ಕಳು ಗಡಗಡ ನಡುಗತ್ತ ನಿಂತುಕೊಂಡಿದ್ದವು. ತಾಯಿ ಕೆಂಚಮ್ಮನಿಗೆ ಮತ್ತೆ ಕ್ರೋಧ, ಮತ್ತೆ ಕರುಣಿ ಏನು ಹೇಳಬೇಕು ತಿಳಿಯದಾಯಿತು. ಬಾಳಪ್ಪನ ಹೆಂಡತಿ ಮಾಂಗಲ್ಯವನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಬಾಗಿರುವ ದೃಶ್ಯ, ರಾಯಣ್ಣನನ್ನೂ, ತಾಯಿ ಕೆಂಚಮ್ಮನನ್ನೂ ಕರುಣೆಯ ಕಡೆಗೆ ತಿರುಗಿಸಿದವು. ಕೆಂಚಮ್ಮನೇ ಮಾತೆತ್ತಿ ‘ರಾಯಣ್ಣಾ ಇದೊಂದು ಸಲ ಬಿಟ್ಟು ಬಿಡು. ಆ ಕುಲಕರ್ಣಿಯನ್ನು ಏನೂ ಮಾಡಬೇಡ. ಈ ಹೆಣ್ಣುಮಗಳನ್ನು, ಈ ಮಕ್ಕಳನ್ನು ನೋಡಿ ಸಮ್ಮನಿರಪ್ಪಾ, ಅವನು ಮಾಡಿದ ಪಾಪದ ಫಲ ಅವನೇ ಉಣ್ಣುತ್ತಾನೆ. ಅವನು ಬಿತ್ತಿದ್ದೆಲ್ಲ ವಿಷ. ಅದನ್ನೇ ಅವನು ಬೆಳೆದು ಕೊಳ್ಳಲಿ. ತಾನೇನು ಮಾಡುವನೋ ಅದನ್ನೇ ಉಣ್ಣಲಿ. ಈ ಹೆಣ್ಣುಬಾಲಿಯನ್ನು ನೋಡು. ಅದರಲ್ಲೂ ನಮ್ಮ ಮನೆಗೆ ಬಂದು ಗಂಡನ ಜೀವಾ ಉಳಿಸಲು ಕೇಳಿಕೊಳ್ಳುತ್ತಿದ್ದಾಳೆ’.

ತಾಯಿ ಕೆಂಚಮ್ಮನ ಮಾತುಗಳು ಮಗನ ಹೃದಯವನ್ನು ಸೇರಿದವು. ಅಳುವ ಮಕ್ಕಳ ರೋಧನ ನಿಂತಿತು. ಆದರೆ ಪ್ರಾಣ ಭಿಕ್ಷೆ ಬೇಡಿದ ಗೋದಾಬಾಯಿಯ ಬಿಕ್ಕಳಿಕೆ ಹಾಗೇ ಇತ್ತು!

ರಾಯಣ್ಣ ಹೇಳಿದ ‘ಹೋಗವ್ವ ಹೋಗು ನೀನು ತಾಯಿಯಾಗಿರುವಿ. ಮಕ್ಕಳನ್ನು ಕರೆತಂದಿರುವಿ. ಆ ನೀಚನಿಗೆ ಹೇಳು ಇನ್ನು ಮೇಲೆ ಯಾರಿಗೂ ಪೀಡಸಬೇಡೆಂದು. ಯಾರಿಗೂ ಮೋಸ ಮಾಡಬಾರದೆಂದು, ಹಾಗೆ ಮಾಡಿದರೆ ಅವನ ಚಂಡ ಮಲಪುರಿಯಲ್ಲಿ ಮುಳಗುವುದು.

ಸಂಪಗಾವಿಯ ಜೈಲಿನಲ್ಲಿ ಚಡಪಡಿಸುತ್ತಿರುವಾಗ, ಮೇಲಗಿರಿ ರಂಗನ ಗೌಡರು ಬಂದರು. ರಾಯಣ್ಣನ ಕಡೆಗೆ ಕಣ್ಣು ಚಿವುಟಿದುದು ತಿಳಿದು ರಾಯಣ್ಣ ‘ನನಗಾಗಿ ರಂಗನಗೌಡರು ಜಾಮೀನ ಕೊಡತಾರು’ ಎಂದವನೇ ಜೇಲು ಜಿಗಿದು, ‘ಹಾಡಹಗಲಿನಲ್ಲಿ ಈ ಕಛೇರಿಗೆ ಬೆಂಕಿ ಉಗ್ಗತೀನಿ. ಬೆಂಕಿ ಹಚ್ಚದಿದ್ದರೆ, ಕಿತ್ತೂರ ರಾಣಿಯ ಬಂಟ ನಾನಲ್ಲಲೇ? ಮಲ್ಲಸರ್ಜನ ಹುಲಿ ಎಂದು ಕರೆಯಿಸಿಕೊಂಡ ರಾಯಣ್ಣ ನಾನಲ್ಲವೇ? ಸಂಗೊಳ್ಳಿ ಭರಮಣ್ಣನ ಮಗ ರಾಯನಾಯಕ ನಾನಲ್ಲಲೇ!! ನೆನಪಿರಲಿ ನೆನಪಿರಲಿ ಎಂದು ಗುಡುಗಿನಂತೆ ಗುಡುಗಿ ಬಂದಿದ್ದನು.

ಊರಲ್ಲಿ ಈಗ ಬಾಳಪ್ಪನ ಸಲುವಾಗಿ ಗುಡುಗಿನಂತೆ ಗುಡುಗಿ, ಸಿಂಹದಂತೆ ಗರ್ಜಿಸಿದನು.

ಎಲ್ಲಿ ಹೋದಲೆಲ್ಲ ಅನ್ಯಾಯದ ಸಂಗತಿಗಳನ್ನೇ ಕಂಡನು. ಕುಲಕರ್ಣಿಗೆ ಅಂಜಿಕೆ ಇರಲಿ ಎಂದು ಮತ್ತೆ ಫಕೀರನಿಗೆ ಕರೆದು ತಾಕೀತು ಮಾಡಿದನು ರಾಯಣ್ಣ.

ಫಕೀರನಿಗೆ ಬಾಳಪ್ಪನ ಹೆಂಡಿ ಅಣ್ಣ ರಾಯಣ್ಣನಿಗೆ ಕ್ಷಮಾ ಮಾಡೆಂದು ಬೇಡಿಕೊಂಡಿದ್ದೇನೆ ಎಂದು ಹೇಳಿದಳು. ದಯಾ-ಮಾಯಾ ರಾಯಣ್ಣಗಿರಲಲಿ, ತಾಯಿ ಕೆಂಚವ್ವಗಿರಲಿ ಎಂದು ಓಣಿ ಓಣಿಗೆ ಹೋಗಿ ರಾಯಣ್ಣನನ್ನೂ, ತಾಯಿ ಕೆಂಚವ್ವನನ್ನು ಸೆರಗೊಡ್ಡಿ ಬೇಡಿಕೊಳ್ಳತೊಡಗಿದಳು.

ನಾಡಿಗಾಗಿ ಕಡುವ ಆಂಗ್ಲರು ಒಂದೆಡೆಯಾದರೆ, ಒಳಒಳಗೆ ಬೆಂಕಿ ಹೊತ್ತಿಸಿದ ಊರಲ್ಲಿಯ ಬಾಳಪ್ಪ ಮತ್ಸರದ ಮೂಟೆಯಾಗಿ ಪರಿಣಮಿಸಿದನು. ಸಂಪಗಾವಿಯ ಸುಬೇದಾರ ಬಾಳಪ್ಪ ಹೊತ್ತಿಸಿದ ಅಗ್ನಿಗೆ ಎಣ್ಣೆ ಸುರವಿದಂತೆ ಮಾಡಿದನು.

ಕಿತ್ತೂರ ಸಂಸ್ಥಾನದಿಂದ ವೀರರಿಗೆಲ್ಲ ರಾಣಿ ಚೆನ್ನಮ್ಮ ಬರಲು ಕರೆ ಕೊಟ್ಟಳು.

ರಾಯನಾಯಕ ಊರಿಂದ ಹೊರಡುವುದಕ್ಕೂ ಅದೇ ರಾತ್ರಿ ಬಾಳಪ್ಪನ ಹೊಲದಲ್ಲಿರುವ ದೊಡ್ಡ ಬಣವಿಗೆ ಬೆಂಕಿ ಬೀಳುವುದಕ್ಕೂ ಕಂಡಂತೆ. ನೋಡಿದ ಜನರೆಲ್ಲರೂ ರಾಯಣ್ಣನ ತಾಯಿ ಕೆಂಚವ್ವನ ಪಾಪಕ್ಕೆ ಶಾಪ ತಟ್ಟಿ ಹೀಗಾಯಿತೆಂದು ನೊಂದುಕೊಂಡು ನುಡಿಯ ಹತ್ತಿದರು.

ರಾಯಣ್ಣ ತನ್ನ ಮುಂಡಾಸನವನ್ನು ಅಂದವಾಗಿ ಸುತ್ತಿಕೊಂಡು (ಕಟ್ಟಿಕೊಂಡು) ಗಟ್ಟಿಯಾದ ಚಲ್ಲಣವನ್ನು ತೊಟ್ಟುಕೊಂಡು, ಕ್ರಾಂತಿಯ ಕಿಡಿಯಾಗಿ, ಪ್ರಳಯದ ಅಗ್ನಿಯಾಗಿ, ನಾಡ ರಕ್ಷಣೆಗೆ ನಾ ಹೋಗತಿನಿ ಎಂದು ಪ್ರತಿಜ್ಞೆಮಾಡಿ ಹೊರಟೇ ಹೋದನು.[1]     ಬ್ಯಾಗಿ=ಬೆಂಕಿ; ಅಗ್ನಿ, ಹತ್ತೀತ ಬ್ಯಾಗಿ=ಹತ್ತಿತ್ತು ಅಗ್ನಿ

[2]     ಡಾ. ನಿಂಗಣ್ಣ ಸಣ್ಣಕ್ಕಿ ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ, ಪುಟ-೬೦.

[3]     ಸಂಗೊಳ್ಳಿರಾಯಣ್ಣ-ಶಿವರಾಮು, ಐ.ಬಿ.ಎಚ್‌. ಪ್ರಕಾಶನ ಬೆಂಗಳೂರು, ೧೭೭೫ (ಪುಟ ೩೩)