ಸಂಘ ಜೀವನದ ಪ್ರಜ್ಞೆ ಮಾನವನಲ್ಲಿ ಮೂಡಿದಾಗಿನಿಂದ ಅವನು ವಾಸಿಸಲಿಕ್ಕೆ ನದಿಯ ದಂಡೆಯ ಮೇಲಿರುವ ವಿಶಾಲವಾದ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಂಡ. ಇಂತಹ ಫಲವತ್ತಾದ ಭೂಮಿ ಹಾಗೂ ನೀರು ದೊರೆಯುವಂಥ ಪ್ರದೇಶದಲ್ಲಿ, ಮಾನವನು ಮನೆಗಳನ್ನು ಕಟ್ಟಿಕೊಂಡು ನಿರಾತಂಕವಾಗಿ ಜೀವನವನ್ನು ಕಳೆಯಲು ಪ್ರಾರಂಭಿಸಿದ. ಬರುಬರುತ್ತ ಮಾನವ ಜನಾಂಗವು ವೃದ್ಧಿಯಾಗುತ್ತ ನಡೆಯಿತು. ಆಗ ಒಂದು ಕುಟುಂಬಕ್ಕೆ ಬದಲಾಗಿ ಹತ್ತೆಂಟು ಕುಟುಂಬಗಳು ಬೆಳೆದವು. ಹೀಗೆ ಕುಟುಂಬಗಳು ವೃದ್ಧಿಯಾಗುತ್ತ ಹೋದಂತೆ ಆ ಪ್ರದೇಶವು ಗ್ರಾಮಗಳ ಉಗಮಕ್ಕೆ ಕಾರಣವಾಯಿತು. ಆಗ ಮನುಷ್ಯ ಮನುಷ್ಯರಲ್ಲಿ ಸಂಪರ್ಕ ಸಂಬಂಧಗಳು ವೃದ್ಧಿಯಾಗತೊಡಗಿದುದರ ಪರಿಣಾಮವಾಗಿ ಅವರಲ್ಲಿ ಅನೇಕ ಬಗೆಯ ಸಂಸ್ಕಾರಗಳು ಮೂಡಿಕೊಂಡು ಬಂದವು.

ಮಾನವ ತನ್ನ ರಕ್ಷಣೆಗಾಗಿ ಹಾಗೂ ತನ್ನವರ ಸಂರಕ್ಷಣೆಗಾಗಿ ತಾನು ನೆಲೆಸಿದ ಪ್ರದೇಶದಲ್ಲಿ ಇರುವ ಪ್ರಕೃತಿದೇವತೆಗಳಿಗೆ ಮಾರುಹೋದನು. ತನ್ನ ಕಲ್ಪನೆಯ ಆಳದಲ್ಲಿ ತನಗೆ ಇಷ್ಟ ಬಂದಂತಹ ದೇವತೆಗಳ ನಾಮಕರಣ ಮಾಡಿದನು. ಅವುಗಳನ್ನು ಭಕ್ತಿ ಗೌರವ, ಶ್ರದ್ಧೆಯಿಂದ ಆರಾಧನೆಯನ್ನೂ ಮಾಡತೊಡಗಿದನು. ಈ ಪರಂಪರೆಯಿಂದ ಜನರಲ್ಲಿ ನಂಬಿಕೆ, ಭಕ್ತಿ, ಶ್ರದ್ಧೆಗಳು ವ್ಯಾಪಕವಾಗುತ್ತ ನಡೆದವು. ಆಗ ಮೂರ್ತಿಗಳಿಗೆ ಒಂದು ಸ್ವರೂಪ ಬಂದಿರಬೇಕು. ತಾನು ಆರಾಧಿಸುವಂಥ ದೇವತೆಗಳಿಂದ ಪ್ರತಿಫಲ ದೊರೆಯದಿದ್ದಾಗ ಮತ್ತೊಂದು ಹೆಸರಿನಲ್ಲಿ ಮೂರ್ತಿಯನ್ನು ತಯಾರಿಸಿ ಅದಕ್ಕೆ ಆರಾಧನೆ ಮಾಡಲು ಪ್ರಾರಂಭಿಸಿದನು. ಕ್ರಮೇಣ ಮಾನವನಲ್ಲಿ ಜ್ಞಾನವು  ವಿಕಾಸವಾದಂತೆ ಅವನಲ್ಲಿ ಕಲ್ಪನೆಗಳು ಬೆಳೆಯತೊಡಗಿದವು. ಅದರೊಂದಿಗೆ ದೇವತೆಗಳ ಪೂಜೆ ಪ್ರಮಾಣವು ಅಧಿಕವಾಗತೊಡಗಿದವು. ಅವರು ವಾಸಿಸುವ ಪ್ರದೇಶದಲ್ಲಿ ಕಟ್ಟಿಕೊಂಡಂತಹ ಗ್ರಾಮಗಳಲ್ಲಿ ದೇವತೆಗಳ ಸಂಖ್ಯೆಯು ಬೆಳೆಯತೊಡಗಿತು. ಇದರಿಂದ “ಗ್ರಾಮದೇವತೆಗಳು” ಎಂಬ ಕಲ್ಪನೆಯೂ ಮೂಡಿಕೊಂಡು ಬಂದಿರಲು ಸಾಧ್ಯವಿದೆ.

ಪ್ರಕೃತಿಯಲ್ಲಿ ಬದಲಾವಣೆಯಾದಂತೆ ಮಾನವನಲ್ಲಿ ಬದಾಲಾವಣೆಯಾಗುವದು ಸಹಜ, ಆಗ ಅವನಲ್ಲಿ ವಿಕಾಸಶೀಲ ಮನೋಭಾವನೆ ಬೆಳೆಯಿತು. ಇದರಂತೆಯೇ ಗ್ರಾಮಗಳು ವಿಕಾಸಶೀಲತೆಯ ಪ್ರಯೋಗಕ್ಕೆ ಒಳಗಾದವು. ಬರುಬರುತ್ತ ಪಟ್ಟಣಗಳಲ್ಲಿಯೂ ಈ ದೇವತೆಗಳು ಆವರಿಸಿಕೊಂಡವು. ಇದರಿಂದಾಗಿ ಗ್ರಾಮದೇವತೆಗಳು ಪಟ್ಟಣದ ದೇವತೆಗಳೂ ಆದವೆಂದು ಹೇಳಬಹುದು. ಕ್ರಮೇಣ ಮನುಷ್ಯನ ಬದುಕಿನಲ್ಲಿ ಅನೇಕ ವ್ಯತ್ಯಾಸಗಳಾದವು. ಆದರೆ ದೇವರ ಕಲ್ಪನೆಯ ಅಂಶಗಳ ಹಿನ್ನೆಲೆಯಲ್ಲಿ ವ್ಯತ್ಯಾಸ ಕಾಣಲಿಲ್ಲ. ಅವರಲ್ಲಿ ದೇವತೆಗಳ ಬಗೆಗೆ ನಂಬಿಕೆಯೂ ಶಾಶ್ವತವಾಗಿ ಮುಂದುವರಿಯತೆಂದು ಹೇಳಬಹುದು. ದೇವರ ಬಗೆಗೆ ಆರಾಧನೆ, ಪೂಜೆಗಳು ಮುಂತಾದ ಕ್ರಿಯಾವಿಧಾನಗಳು ಕ್ರಮೇಣ ಮೊದಲಿನಕ್ಕಿಂತಲೂ ಅಧಿಕವಾದವು ಹೊರತು ಕಡಿಮೆಯಾಗಲಿಲ್ಲ. ಆದುದರಿಂದ ದೇವತಾರಾಧನೆಯು ಅಂದಿನಿಂದ ಇಂದಿನವರೆಗೂ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ ಎಂದು ಹೇಳಬಹುದು.

ನಮ್ಮ ಸಂಸ್ಕೃತಿಯ ಆಳವನ್ನು ಅವಲೋಕಿಸಿದಾಗ ಅಲ್ಲಿ ಸ್ತ್ರೀಯು ತನ್ನ ಪವಾಡವನ್ನು ಬೀರಿದ್ದು ಅರಿವಾಗದಿರದು . ಅನೇಕ ಸ್ತ್ರೀಯರ ತಮ್ಮ ಪತಿಯ ಮರಣದ ನಂತರ ಸತಿಹೋದರು. ಅಲ್ಲದೆ ಬೇರೆ ಬೇರೆ ವಿಧಾನಗಳಲ್ಲಿ ಸಿಲುಕಿ ಶಿಕ್ಷೆಗೆ ಗುರಿಯಾದವರು ಇರುವರು. ಅಲ್ಲದೆ ಆತ್ಮಹತ್ಯೆ ಮಾಡಿಕೊಂಡವರು, ಆಘಾತಕ್ಕೆ ಒಳಗಾದವರು, ಅನೇಕ ಸ್ತ್ರೀಯರು ತಮ್ಮನ್ನೇ ತಾವು ಬಲಿಕೊಟ್ಟ ಸಂಗತಿಗಳೂ ಉಂಟು. ಇವರೆಲ್ಲರೂ ಚರಿತ್ರೆಯ ಹಾಗೂ ಧರ್ಮದ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮದೇವತೆಗಳಾಗಿ ರೂಪಗೊಂಡಿರಲಿಕ್ಕೆ ಸಾಧ್ಯವಿದೆ. ವ್ಯಕ್ತಿಗಳ ಸುತ್ತ ಹರಡಿಕೊಂಡಿರುವ ಐತಿಹ್ಯ ಮತ್ತು ಸ್ಥಳದ ಮೇಲಿಂದ ಹುಟ್ಟಿದಂತಹ ಐತಿಹ್ಯಗಳ ಮೇಲೆ ಕೆಲವೊಂದು ದೇವತೆಗಳು ಹುಟ್ಟಿಕೊಂಡವು. ವೀರಪುರುಷರು, ಜನೋಪಕಾರ ಮಾಡಿದ ಮನುಷ್ಯರು, ಚಾರಿತ್ರಿಕ ವ್ಯಕ್ತಿ, ಮಹಾತ್ಮರು, ಪವಾಡಪುರುಷರು ಈ ಹಿನ್ನೆಲೆಯಲ್ಲಿಯೇ ದೇವತೆಗಳು ಹುಟ್ಟುಕೊಂಡು ಬಂದವು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಗ್ರಾಮದೇವರು ಹಾಗೂ ದೇವತೆಗಳಾಗಿರಬಹುದು. ತದನಂತರ ಜನರಿಗೆ ಸಣ್ಣ ಪುಟ್ಟ ತೊಂದರೆಗಳಾದಾಗ ಅವುಗಳ ನಿವಾರಣೆಗಾಗಿ ಕೆಲವು ಸಣ್ಣ ಪುಟ್ಟ ದೇವತೆಗಳೂ ಹುಟ್ಟಿಕೊಂಡು ಬಂದವು.

ಮಾನವನಿಗೆ ಕಾಯಿಲೆಯಾದಾಗ, ಆ ಕಾಯಿಲೆಯನ್ನು ದೂರ ಮಾಡುವಂತಹ ದೇವತೆಗಳು ಹುಟ್ಟಿಕೊಂಡು ಬಂದವು. ಇಂಥ ದೇವತೆಗಳನ್ನು ಆರಾಧಿಸಿ ಅಭಿಷೇಕಮಾಡಿಸಿ ಪ್ರಸಾದವನ್ನು ಸ್ವೀಕಾರ ಮಾಡಿದರೆ ಗುಣವಾಗುತ್ತದೆ ಎಂಬ ಕಲ್ಪನೆಯಲ್ಲಿ ಹಲವು ದೇವತೆಗಳ ಉಗಮ ಕಂಡಿರಬೇಕು.

[1] ಹಾವು ಕಚ್ಚಿದರೆ ಗುಡಿಗೆ ಹೋಗಿ ಪೂಜೆಯನ್ನು ಸಲ್ಲಿಸಿ, ಪೂಜಾರಿ ಕೊಟ್ಟ ಗಂಧವನ್ನು ಹಾವು ಕಚ್ಚಿದ ಭಾಗಕ್ಕೆ ಹಚ್ಚಿದರೆ ಪರಿಹಾರವಾಗುತ್ತದೆ ಅನ್ನುವಂಥ ನಂಬಿಕೆ ಅಲ್ಲದೆ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಒಳಗಾಗಿ ಬಳಲುತ್ತಿರುವ ವ್ಯಕ್ತಿ ತನಗೆ ಬಂದಂತಹ ತೊಂದರೆಗಳನ್ನು ನಿವಾರಿಸಿಕೊಳ್ಳಲು ಈ ದೇವತೆಗಳು ಹುಟ್ಟಿಕೊಂಡು ಬಂದರು. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಮಾನವನಲ್ಲಿ ಈ ಅಂಶಗಳು ಮೂಢನಂಬಿಕೆಯಿಂದ ಇಲ್ಲವೆ ತನ್ನ ಬಯಕೆಯ ಅನುಗುಣವಾಗುವಂತೆ ಸೃಷ್ಟಿಸಿಕೊಂಡಿರುವನು. ಜನತೆಯ ಸಂಪ್ರದಾಯಕ್ಕೆ ಅನುಗುಣವಾಗಿ ಹಾಗೂ ಗ್ರಾಮದ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರತಿಯೊಂದು ಗ್ರಾಮದವರು ತಮ್ಮದೇ ಆದಂತಹ ವಿಶಿಷ್ಟ ದೇವತೆಗಳನ್ನು ಸೃಷ್ಟಿಸಿಕೊಂಡರು. ಅವುಗಳನ್ನು ತಮ್ಮ ಗ್ರಾಮದ ದೇವತೆಗಳೆಂದು ಕರೆಯತೊಡಗಿದರು. ದಕ್ಷಿಣ ಭಾರತದಲ್ಲಿ ‘ಗ್ರಾಮಧೆವತೆಗಳು’ ಎಂಬ ಹೆಸರಿನಲ್ಲಿಯೇ ಕರೆದರು. ಉತ್ತರ ಭಾರತದಲ್ಲಿ ‘ಠಾಕುಣಿ’ ಎಂದು ಕರೆಯುವರು. ಇನ್ನು ಕೆಲವು ಕಡೆಗೆ ‘ಊರಿನ ಅಮ್ಮ’ ಎಂದೂ ಕರೆಯುವರು. ಈ ದೇವತೆಗಳು ಊರನ್ನು ಹಾಗೂ ಊರಿನ ಜನರನ್ನು ಕಾಪಾಡುವವು ಎಂಬ ನಂಬಿಕೆ ಬೇರೂರಿತು. ಒಂದು ವೇಳೆ ಮಾರಕಶಕ್ತಿಗಳು ಊರನ್ನು ಪ್ರವೇಶಿಸಿದರೆ ಆ ಮಾರಕಶಕ್ತಿಗಳನ್ನು ಈ ದೇವತೆಗಳೇ ಹೊಡೆದೂಡಿಸುತ್ತಾರೆ. ಎಂಬ ನಂಬಿಕೆ ಜನರಲ್ಲಿ ಬೆಳೆದುಬಂದಿವೆ. ಈ ದೇವತೆಗಳನ್ನು ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಮಾರಿಯಮ್ಮ ಮಧ್ಯ ಭಾರತದಲ್ಲಿ (ಮಾರಿ, ಭವಾನಿ, ಪ್ಲೇಗ) ಗಯಾ ಜಿಲ್ಲೆಯಲ್ಲಿ ಮತ್ತು ಮುಂಬಯಿಯಲ್ಲಿ ಮಾಯಿ, ಬಂಗಾಳದಲ್ಲಿ, ಓಲಾಯ್‌, ಚಂಡಿ, ದಕ್ಷಿಣ ದೇಶದಲ್ಲಿ ಪೆದ್ದಮ್ಮ, ಅಣ್ಣಮ್ಮ, ನೂಕಲಮ್ಮ, ಕೊಕ್ಕಲಮ್ಮ, ಸಿಡಬು, ಮುತ್ಯಾಲಮ್ಮ, ಉತ್ತರಕರ್ನಾಟಕದಲ್ಲಿ ಕರಿಯಮ್ಮ ದುರುಗಮ್ಮ ಕಾಳಮ್ಮ, ಮಾರೆಮ್ಮ, ಚೌಡಮ್ಮ ಹೀಗೆ ಹಲವಾರು ಹೆಸರುಗಳಿಂದ ಕರೆಯುವದು ಕಂಡುಬರುತ್ತದೆ.

ಈ ದೇವತೆಗಳ ದೇವಾಲಯಗಳು ಊರಿನ ಪ್ರಮುಖವಾದ ಸ್ಥಳದಲ್ಲಿ ಅಥವಾ ಊರಿನ ಹೊರಭಾಗದಲ್ಲಿ, ಊರಿನ ಮಧ್ಯಭಾಗದಲ್ಲಿ ಸ್ಥಾಪಿತವಾಗಿರುವವು. ಯಾಕೆಂದರೆ ಊರಲ್ಲಿ ಪೀಡೆಗಳು ಪ್ರವೇಶ ಮಾಡಿದರೆ ಅವುಗಳನ್ನು ಹೊರಗಿನಿಂದಲೇ ಓಡಿಸಬೇಕೆಂಬ ನಂಬಿಕೆ, ಪ್ರಬಲವಾಗಿರಬೇಕು. ಊರಿನ ಮಧ್ಯ ನೆಲೆಸಿದಂತಹ ಗ್ರಾಮದೇವತೆಯು ಊರಿನಜನರ ರಕ್ಷಣೆಯ ಭಾರಹೊತ್ತು ಅವರನ್ನು ಸಂರಕ್ಷಣೆ ಮಾಡುವಂತಹವು. ಅಲ್ಲದೆ ಊರಿನ ಹೊರ ಭಾಗದಲ್ಲಿ, ಬಯಲು ಪ್ರದೇಶದಲ್ಲಿ, ಮರದ ಕೆಳಗೆ, ಹಳ್ಳಗಳ ದಂಡೆಯಲ್ಲಿ, ನದಿ ಮತ್ತು ಕೆರೆಯ ದಂಡೆಯ ಮೇಲೆ ಕೆಲವು ದೇವತೆಗಳು ಸ್ಥಾಪಿತಗೊಂಡಿರುವವು. ಈ ದೇವತೆಗಳನ್ನು ಊರಿನ ಜನರು ಪೂಜಿಸುವ ಅವಕಾಶಗಳು ಇವೆ. ಹೀಗೆ ಅನೇಕ ವಿಧಗಳಲ್ಲಿ ಜನಪದರ ಜೀವನದಲ್ಲಿ ಗ್ರಾಮದೇವತೆಗಳು ಹಾಸುಹೊಕ್ಕಾಗಿ ಬೆರೆತುಕೊಂಡಿರುವುದನ್ನು ಸಹಜವಾಗಿ ಕಾಣುತ್ತೇವೆ. ಹೆಣ್ಣು ದೇವತೆಯ ಕೂಡ ಬಹು ಸಂಖ್ಯೆಯಲ್ಲಿ ಗಂಡು ದೇವತೆಗಳು ಬೆಳೆದುಕೊಂಡು ಬಂದು ಅವುಗಳು ಕೂಡ ಗ್ರಾಮದೇವರೆಂದು ಕರೆಸಿಕೊಂಡವು.

ಗ್ರಾಮದೇವತೆಗಳು ಹುಟ್ಟಿಕೊಂಡು ಬಂದ ತರುವಾಯದಲ್ಲಿ ಆ ದೇವತೆಗಳ ಬಗೆಗೆ ಅನೇಕ ದಂತಕಥೆಗಳು, ಐತಿಹ್ಯಗಳು ಅವುಗಳ ಸುತ್ತ ಹೆಣೆದುಕೊಂಡು ಬಂದಿರುವುದನ್ನು ಸಹಜವಾಗಿ ಕಾಣುತ್ತೇವೆ. ಇಂತಹುಗಳ ಬಗೆಗೆ ಉಲ್ಲೇಖಗಳನ್ನು ಸಹ ಕೊಡಬಹುದು. ಗ್ರಾಮದೇವತೆಯ ಸೃಷ್ಟಿಯ ಬಗೆಗೆ ಒಂದು ದಂತ ಕಥೆ: ಪರಶುರಾಮ ತನ್ನ ತಂದೆ ಜಮದಗ್ನಿಯ ಆಜ್ಞೆಯ ಪ್ರಕಾರ ಸ್ವತಃ ತಾಯಿ ರೇಣುಕೆಯ ತಲೆಯನ್ನು ಕಡಿದು ಹಾಕುವ ಪ್ರಸಂಗ ಬಂದಿತು. ತಂದೆಯ ಅಪ್ಪಣೆಯನ್ನು ಮೀರುವಂತಿಲ್ಲ. ತಾಯಿಯನ್ನು ಉಳುಸುವಂತಿಲ್ಲ. ಇಂತಹ ಇಕ್ಕಟ್ಟಿನ ಸಮಯದಲ್ಲಿ ಕೊಡಲಿ ತೆಗೆದುಕೊಂಡು ತಾಯಿ ರೇಣುಕೆಯ ತಲೆಯನ್ನು ಕಡಿದು ಹಾಕಿದ ರೇಣುಕೆಯ ರುಂಡ ಬಿದ್ದಕಡೆ ಒಂದಕ್ಕೆ ಎರಡರಂತೆ ಹೊಸ ತಲೆಗಳು ಹುಟ್ಟಿದವು. ಅವುಗಳನ್ನು ಕಡಿದು ಹಾಕಿದನು. ಅವು ಬಿದ್ದಕಡೆ ಎರಡಕ್ಕೆ ನಾಲ್ಕು ತಲೆಗಳು ಹುಟ್ಟಿದವು. ಹೀಗೆ ಅಸಂಖ್ಯಾತ ತಲೆಗಳು ಹುಟ್ಟಿಕೊಂಡವು. ಕೊನೆಗೆ ಜಮದಗ್ನಿಯ ಅನುಗ್ರಹದಿಂದ ರೇಣುಕೆಗೆ ಜೀವದಾನವಾಯಿತು. ಆದರೆ ಉಳಿದ ಅಸಂಖ್ಯಾತ ತಲೆಗಳ ಗತಿ ಏನು? ಅವು ಗ್ರಾಮದೇವತೆಗಳಾಗಲಿ ಎಂದು ಪರಶುರಾಮ ವರ ನೀಡಿದ. ಅದರಂತೆ ರೇಣುಕೆಯ ತಲೆಯಿಂದ ಹುಟ್ಟಿದ ಅಸಂಖ್ಯಾತ ತಲೆಗಳು ಗ್ರಾಮದೇವತೆಗಳಾದವು. ಅವುಗಳು ರೇಣುಕೆಯ ರುಂಡದ ಸಂಕೇತಗಳು ಕೇವಲ ರುಂಡವಾದ್ದರಿಂದಲೇ ಇಡಿ ದೇಹ ಕಾಣದೆ ರುಂಡದ ಭಾಗವನ್ನು ಮಾತ್ರ ಪೂಜಿಸುವದು ಎಂದು ಕೆಲವರಲ್ಲಿ ನಂಬಿಕೆ.

ಇಂತಹ ಕಟ್ಟು ಕಥೆಯನ್ನು ಜನಪದ ನಂಬಿಕೆಯ ಪ್ರಕಾರ ಹೆಣ್ಣು ದೇವತೆಗಳಿಗೆ ಅನ್ವಯಿಸುವುದಾದರೆ ಗಂಡು ದೇವತೆಗಳಿಗೆ ಹೇಗೆ ಅನ್ವಯಿಸುವದು? ಗ್ರಾಮದೇವತೆಗಳಲ್ಲಿ ಹೆಣ್ಣು ದೇವತೆಗಳು ಹೆಚ್ಚಿನ ಪ್ರಮಾಣದಲ್ಲಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ಗಂಡುದೇವತೆಗಳೂ ಇರುವವು. ರುಂಡದ ಭಾಗವನ್ನು ಪೂಜಿಸುವ ದೇವತೆಗಳು ಹೆಚ್ಚಾಗಿದ್ದರೂ ಇಡೀ ದೇಹದ ಆಕಾರದ ಪೂಜಿಸುವ ದೇವತೆಗಳೂ ಇವೆ. ಗ್ರಾಮದೇವತೆಗಳ ಸೃಷ್ಟಿಯ ಬಗೆಗೆ ಕಾಲಾಂತರದಲ್ಲಿ ಹುಟ್ಟುಕೊಂಡಿರುವ ಕಲೆಗಳಲ್ಲಿ ಇದು ಒಂದು ಎಂದು ಹೇಳಬಹುದು. ಆದಿ ಮಾನವರು ಶಕ್ತಿಯ ಆರಾಧಕರಾಗಿದ್ದರು. ಈ ಶಕ್ತಿಗಳೇ ಗ್ರಾಮದೇವತೆಗಳಾದರು ಎಂಬ ಅಭಿಪ್ರಾಯವಿದೆ.[2]

ಈ ದೇವತೆಗಳು ದ್ರಾವಿಡರ ಮಾತೃಪ್ರಧಾನ ಸಮಾಜದ ಸೃಷ್ಟಿಗಳಾಗಿರಬಹುದು.[3]

ಮಾದೇಶ್ವರರು ಮಾರಿಯರನ್ನು ಕಟ್ಟಿ ಅಳುತ್ತಿದ್ದರಂತೆ. ಅವರ ಆಜ್ಞೆಯಂತೆ ಇವರೆಲ್ಲರನ್ನು ಬೇರೆ ಬೇರೆ ಗ್ರಾಮಗಳಿಗೆ ಸೇರಿಸಿದ್ದಾರೆ. ಅನ್ನುವ ಪ್ರತೀತಿ ಸಹ ಹರಡಿಕೊಂಡಿದೆ. ಈ ಮಾದರಿಯ ಉತ್ತರದಿಂದ ಇತ್ತ ಬಂದವರೆಂದು ಹೇಳುವರು.[1] ಕರ್ನಾಟಕದ ಗ್ರಾಮದೇವತೆಗಳು-ಡಿ. ಲಿಂಗಯ್ಯ ಪು.೭

[2] ಕರ್ನಾಟಕ ಗ್ರಾಮದೇವತೆಗಳು-ಡಿ. ಲಿಂಗಯ್ಯ ಪು.೮-೯

[3] ಗ್ರಾಮವ್ಯಾಸಂಗ ಲೇಖನ, ನಮ್ಮ ಗ್ರಾಮದೇವತೆಗಳು ಎಚ್‌.ವ್ಹಿ. ನಾಗೇಶ ಪು. ೧೪