ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಡಕ್ಕಲಿಗರನ್ನು ಕುರಿತು ಈವರೆಗೆ ನಡೆದ ಕೆಲವು ಅಧ್ಯಯನಗಳ ಸಮೀಕ್ಷೆಯನ್ನು (ನನ್ನ ಗಮನಕ್ಕೆ ಬಂದಂತೆ) ಈ ಕೆಳಗಿನಂತೆ ಮಾಡಲಾಗಿದೆ.

೧೮೯೧ರಲ್ಲಿ ಸಂಪಾದಿಸಿದ ಮೈಸೂರು ಜನಗಣತಿಯ ವರದಿಯಲ್ಲಿ ಮಾದಿಗರಲ್ಲಿನ ಉಪಜಾತಿಯಲ್ಲಿ ಡಕ್ಕಲರೂ ಒಬ್ಬರಾಗಿದ್ದರೆಂಬ ಮಾಹಿತಿ ದೊರಕುತ್ತದೆ.

೧೯೩೫ರಲ್ಲಿ ಹಯವದನರಾವ ಅವರು ಸಂಪಾದಿಸಿರುವ ‘ದಿ ಮೈಸೂರು ಟ್ರೈಬ್ಸ್ ಯಾಂಡ್ ಕ್ಯಾಸ್ಟ’ದ ನಾಲ್ಕನೇ ಸಂಪುಟದಲ್ಲಿ ಮಾದಿಗರ ಬಗೆಗೆ ವಿವಿರವಾದ ಮಾಹಿತಿ ಸಿಗುತ್ತದೆ. ಮಾದಿಗರ ಹುಟ್ಟಿನ ಬಗೆಗೆ ಹೇಳುವಾಗ ದಕ್ಕಲರ ಹಟ್ಟಿನ ಜಾಂಬಋಷಿ ಆದಿಶಕ್ತಿಯ ಪೌರಾಣಿಕ ಕಥೆ ಹೇಳುತ್ತ, ಡಕ್ಕಲರು ಜಾಂಬ ಋಷಿಗಳ ಹಳೇ ತಲೆಮಾರಿನವರಾದ್ದರಿಂದ ಮಾದಿಗರ ಹಳೆಮಕ್ಕಳಾದರು. ಹೀಗಾಗಿ ಇಂದಿಗೂ ಮಾದಿಗರ ಹಾಗೂ ದಕ್ಕಲರ ನಡುವಣ ಸಂಬಂಧ ಅನ್ಯೋನ್ಯವಾಗಿದೆ ಎಂದು ಹೇಳಲಾಗಿದೆ.

೧೯೬೧ರಲ್ಲಿ ಕೇಂದ್ರ ಸರ್ಕಾರದ, ‘ಅಂತ್ರೊಪೊ ಲೋಜಿಕಲ್‌ ಸರ್ವೆ ಆಫ್‌ ಇಂಡಿಯಾ’ದವರು ಹೊರತಂದಿರುವ ‘ಎಥನೋಗ್ರಾಫಿಕ್‌’ ನೋಟ್ಸ ಆನ್‌ಎಸ್‌.ಸಿ.ದ ಎಂಬ ಪುಸಕದಲ್ಲಿ ದಕ್ಕಲೋರ್, ದಕ್ಕಲಗಾರ ಅಥವಾ ವಜಂತ್ರಿ,ಮಾಂಗ ಜಾತಿಯ ಉಪಜಾತಿ ಎಂದು ಹೇಳಲಾಗಿದೆ.

೧೯೭೨ರ ಹಾವನೂರ ವರದಿಯ ಪ್ರಕಾರ ಕರ್ನಾಟಕದಲ್ಲಿ ಡಕ್ಕಲಿಗರ ಒಟ್ಟು ಜನಸಂಖ್ಯೆ ೪೦೬ ಇರುತ್ತದೆ. ಇವರಿಗೆ ಕರ್ನಾಟಕ ಸರ್ಕಾರವು ಮೀಸಲಾತಿ ಸೌಲಭ್ಯವನ್ನು ಒದಗಿಸಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ ಹೆಚ್ಚಿನ ಸಹಾಯ ಸೌಲಭ್ಯ ಸಿಗುವಂತೆ ಮಾಡಿದೆ.

“ದಿ ಟ್ರೈಬ್ಸ್ ಆಯಾಂಡ್‌ ಕಾಸ್ಟ್ ಆಫ್‌ ದಿ ಬಾಂಬೆ” ಪ್ರೆಸಿಡೆನ್ಸಿ ೧೯೭೪ ರಲ್ಲಿ ಹೊರತಂದ ಎರಡನೆ ಸಂಪುಟದಲ್ಲಿ ದಕ್ಕಲರು ಮಾಂಗಜಾತಿಯಲ್ಲಿನ ಉಪಪಂಗಡ. ಇವರು ಮಾಂಗರಿಂದ ಆಹಾರ, ಬಟ್ಟೆ, ಕಾಳು-ಕಡಿಗಳನ್ನು ಪಡೆದು ತಮ್ಮ ಪುರಾತನ ದಾಯಾದಿ ಸಂಬಮಧ ಹೇಳುತ್ತ ಜೀವನ ಸಾಗಿಸುತ್ತಾರೆ ಎಂಬ ವಿವರಣೆ ಕೊಡಲಾಗಿದೆ.

ಇ ಥರ್ಸ್ಟನ್‌ ಅವರು “ಕಾಸ್ಟ ಹ್ಯಾಂಡ್‌ ಟ್ರೈಬ್ಸ್ ಆಫ್‌ ಸದರ್ನ ಇಂಡಿಯಾ ೧೯೭೫” ಗೆಜೆಟಿಯರದಲ್ಲಿ ಡಕ್ಕಲ ಅಥವಾ ಡಕ್ಕಲಿ ಅನ್ನುವುದು ಒಂದು ವರ್ಗವಾಗಿದೆ. ಅವರು ಮಾದಿಗರಿಂದ ಮಾತ್ರ ಭಿಕ್ಷೆ ಬೇಡುತ್ತಾರೆ. ಕರ್ನೂಲ ಜಿಲ್ಲೆಯಲ್ಲಿ ಡಕ್ಕಲಿಗರು ಮುಕ್ತಿಗಳೊಡನೆ ತಮ್ಮ ಪ್ರದೇಶಗಳನ್ನು ಹಂಚಿ ಕೊಡಿದ್ದಾರೆ. ಅವರು ತಮ್ಮ ಪ್ರದೇಶದಲ್ಲಿ ಮಾತ್ರ ಭಿಕ್ಷೆ ಬೇಡುತ್ತಾರೆ ಎಂದು ಸೂಚಿಸಿದ್ದಾರೆ.

ಆರ್. ಇ. ಎಂಥೋವನ್‌ ಅವರು ಸಂಪಾದಿಸಿದ “ದಿ ಟ್ರೈಬ್ಸ್‌ ಹ್ಯಾಂಡ್‌ ಕಾಸ್ಟ್‌ ಆಫ್‌ ಬಾಂಬೆ” ಸಂಪುಟ -೧-೧೯೭೫ರ ಗೆಜೆಟಿಯರದಲ್ಲಿ ಪರಿಶಿಷ್ಟ ಜಾತಿಗಳ ಬಗೆಗೆ ವಿವರಣೆ ನೀಡುತ್ತ ಮಾಂಗ ಮತ್ತು ಮಹರ ಗುಂಪಿನವರಲ್ಲಿ ದಕ್ಕಲರದು ಒಂದು ಉಪಜಾತಿ ಇದ್ದು, ಇವರು ಮಾಂಗ ಮತ್ತು ಮಹರರಿಂದ ಅನ್ನ ನೀರು ಪಡೆದು ಜೀವನ ಸಾಗಿಸುತ್ತಾರೆ ಎಂಬ ವಿವರಣೆ ನೀಡಿದ್ದಾರೆ.

ಡಾ. ಅರವಿಂದ ಮಾಲಗತ್ತಿ ಅವರು “ಜಾನಪದ ವ್ಯಾಸಂಗ” ೧೯೮೫ ರಲ್ಲಿ “ಉತ್ತರ ಕರ್ನಾಟಕದ ಅಲೆಮಾರಿ ಜನಾಂಗ ಡಕ್ಕಲಿಗರು” ಎಂಬ ಲೇಖನದಲ್ಲಿ ವಿವರಣೆ ನೀಡುತ್ತ ಕೀಳಗರು, ಬೀಳಗರು, ನಿಜಚುಕ್ಕರು, ಚಪ್ಪಲಿಚೇರಕರು, ಸೊರಬ ಚಂಡಾಳಿಯರು, ಡಕ್ಕಲಿಗರ ಜಾತಿಗಿಂತಲೂ ಕೀಳುಜಾತಿಯವರೆಂದು ವಿವರಣೆ ನೀಡಿದ್ದಾರೆ.

ಡಾ. ಹರಿಲಾಲ ಪವಾರ (ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭ ೨೭.೬.೧೯೯೧) ಇವರ “ಡಕ್ಕಲಿಗರು: ಪುರಾತನ ಬದುಕಿನ ಪಳೆಯುಳಿಕೆಗಳು” ಎಂಬ ಲೇಖನದಲ್ಲಿ ನೂರಾರು ಜಾತಿಗಳ ಈ ನಾಡಿನಲ್ಲಿ ಒಂದೊಂದು ಜಾತಿಗೆ ಒಂದೊಂದು ವೈಶಿಷ್ಟ್ಯ. ಅಲೆಮಾರಿಗಳಾದ ಡಕ್ಕಲಿಗರಿಗೆ ಹೊಗೆ ಇಲ್ಲದ ಊಟ ಮಾಡುವರು ಎಂಬ ಬಿರುದು. ಅಲ್ಲದೆ ಅವರ ಹುಟ್ಟಿನಿಂದ ಮಸಣದವರೆಗಿನ ಹಲವಾರು ಕುತೂಹಲಕಾರಿಯಾದ ವಿಷಯಗಳನ್ನು ಕ್ಷೇತ್ರಕಾರ್ಯದ ಅಧ್ಯಯನದಿಂದ ದತ್ತ – ಸಂಗ್ರಹಣೆ ಮಾಡಿ, ವೈಜ್ಞಾನಿಕ ದೃಷ್ಟಿಯಿಂದ ವರ್ಗೀಕರಿಸಿದ್ದಾರೆ.

ಕೇಂದ್ರ ಸರ್ಕಾರದ ಎ.ಎಸ್‌. ಆಯ್‌. ಸಂಸ್ಥೆಯು ೧೯೭೨ ರಲ್ಲಿ ಹೊರತಂದಿರುವ ಕೆ.ಎಫ್‌. ಸಿಂಗ ಅವರು ಸಂಪಾದಿಸಿರುವ “ಪಿಪಲ್ಸ್‌ ಆಫ್‌ ಇಂಡಿಯಾ” ದ ಪ್ರಥಮ ಸಂಪುಟದಲ್ಲಿ ಡಕ್ಕಲರ ವಿವರಣೆ ನೀಡುತ್ತ ಇವರು ಆಂಧ್ರಮೂಲದವರೆಂದು ಹೇಳಿದ್ದಾರೆ.

೧೯೯೨ರ ಜನವರಿ ೧೨ ರ ಪ್ರಜಾವಾಣಿ ‘ಸಾಪ್ತಾಹಿಕ ಸೌರಭ’ದಲ್ಲಿ ಶ್ರೀ ಎಲ್ಲ ಕೆಕೆಪುರ ಅವರು ‘ದೊಕ್ಕಲಿಗರ ಸಂಸ್ಕೃತಿ’ ಎಂಬ ಲೇಖನದಲ್ಲಿ ಡಕ್ಕಲಿಗರ ಸಂಸ್ಕೃತಿಯ ಮೂಲ ಪರಂಪರೆಗಳ ಬಗೆಗೆ ಮಾಹಿತಿ ಒದಗಿಸಲು ಪ್ರಯತ್ನಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದವರು ಸಂಪಾದಿಸಿರುವ ಜಾನಪದ ಸಾಹಿತ್ಯದರ್ಶನ ಬಾಗ-೧೭, ೧೯೯೩ ಇದರಲ್ಲಿ ಡಾ.ಎಸ್‌.ಆರ್. ಸಿಂಗೆ ಅವರ ‘ಡಕ್ಕಲಿಗರು’ ಎಂಬ ಪ್ರಬಂಧ ಪ್ರಕಟವಾಗಿದೆ. ಹತ್ತು ಪುಟಗಳ ಹರವನ್ನು ಪಡೆದಿರುವ ಈ ಪ್ರಬಂಧದಲ್ಲಿ ಡಕ್ಕಲಿಗರ ಬದುಕಿನ ಕೆಲವು ವಿಷಯಗಳನ್ನು ಪರಿಚಯಿಸುತ್ತಾ. ಸವರ್ಣೀಯರಿಂದ ಶೋಷಣೆಗೊಳಗಾದ ಹೊಲೆ – ಮಾದಿಗರಿಗಿಂತಲೂ ಕೀಳಾದ ಡಕ್ಕಲಿಗರ ಜಾತಿ ಇರುವುದು ಕಂಡು ಬರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರು ಪ್ರಕಟಿಸಿರುವ “ಡಕ್ಕಲರ ಸಂಸ್ಕೃತಿ” ಗ್ರಂಥವು ಕ್ಷೇತ್ರಕಾರ್ಯ ಮಾಡಿ ಅಧ್ಯಯನ ಕೈಕೊಂಡಿರುವ ಚೆಲುವರಾಜು ಅವರ ಕೃತಿ. ಇದು ಕನ್ನಡದಲ್ಲಿ ಡಕ್ಕಲಿಗರನ್ನು ಕುರಿತು ಪ್ರಥಮ ಕೃತಿ ಎನ್ನಬಹುದು.

ಇಲ್ಲಿಯವರೆಗೆ ಡಕ್ಕಲಿಗರನ್ನು ಕುರಿತು ಗೆಜೆಟಿಯರುಗಳಲ್ಲಿ ಸೆನ್ಸಸ್‌ ರಿಪೋರ್ಟುಗಳಲ್ಲಿ, ಕೃತಿಗಳಲ್ಲಿ, ಜರ್ನಲ್‌ಗಳಲ್ಲಿ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಗಮನಿಸಲಾಯಿತು. ಆದರೆ ಇವುಗಳು ಡಕ್ಕಲಿಗರ ಸಂಸ್ಕೃತಿಯ ಸಮಗ್ರವಾದ ಅಧ್ಯಯನವಲ್ಲ. ಇವು ಅವರ ಸಂಸ್ಕೃತಿಯ ವಿವಿಧ ಅಂಶಗಳನ್ನು ಎತ್ತಿಕೊಂಡು ಬರೆದವುಗಳು. ನಾನು ಸಂಶೋಧನ ಅಧ್ಯಯನಕ್ಕಾಗಿ ಕರ್ನಾಟಕದ ಯುದ್ಧಕ್ಕೂ ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಆಕಸ್ಮಾತ್‌ ಈ ಜನಪದ ವೃಂದ ನನ್ನ ಗಮನ ಸೆಳೆಯಿತು. ಆಗ ಡಕ್ಕಲಿಗರ ಹಿರಿಯರ ಜೊತೆಗೆ ಸಮಾಲೋಚಿಸಿದಾಗ ಅವರು ತಮ್ಮ ಸಂಸ್ಕೃತಿಯ ಸಾರವನ್ನೇ ಧಾರೆಯೆರೆದರು. ಇಂಥ ಕುತೂಹಲಕಾರಿ ವಿಷಯಗಳನ್ನು ಕಲೆ ಹಾಕಿ ಕೃತಿಯ ರೂಪದಲ್ಲಿ ತರಬೇಕೆಂದು ದತ್ತ-ಸಂಗ್ರಹಣೆ ಮಾಡಿದೆ. ಆದರೆ ಇಂಥ ಕೊರತೆ ಕೇವಲ ಏಕಮುಖದ ಅಧ್ಯಯನದಿಂದ ಎಂಬುವಂಥದಲ್ಲ ಎನ್ನುವುದು ಈ ಪುಸ್ತಿಕೆ ರಚನೆಯ ಕಾಲದಲ್ಲಿ ಬಂದ ಅನುಭವ.