ಕೃಷಿ ಉತ್ಪಾದನೆಗೆ ನೀರು ಅತ್ಯವಶ್ಯ ಮತ್ತು ಅನಿವಾರ್ಯ, ಭಾರತದ ಒಟ್ಟು ಕೃಷಿ ಭೂಮಿಯ ಸುಮಾರು ಮೂರರಲ್ಲಿ ಎರಡರಷ್ಟು ಪ್ರದೇಶವು ಮಳೆಯನ್ನೇ ಆಶ್ರಯಿಸಿದೆ. ನೀರಾವರಿಯ ವಿಸ್ತರಣೆಯು ಮುಂದುವರಿದರೂ ಒಟ್ಟು ಕೃಷಿ ಕ್ಷೇತ್ರದ ಅರ್ಧಕ್ಕಿಂತ ಹೆಚ್ಚು ಭೂಮಿಯು ಮಳೆಯನ್ನೇ ಅವಲಂಬಿಸಬೇಕಾಗುತ್ತದೆ.

ಭಾರತದ ವಿವಿಧ ಪ್ರದೇಶದ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಎದ್ದು ಕಾಣುವಷ್ಟು ವೈಪರೀತ್ಯವಿದೆ. ಉದಾಹರಣೆಗೆ, ರಾಜಸ್ಥಾನದ ಪಶ್ಚಿಮಕ್ಕಿರುವ ಕೆಲವು ಪ್ರದೇಶಗಳಲ್ಲಿ ವರ್ಷದ ಸರಾಸರಿ ಮಳೆಯು ಕೇವಲ ೧೦ ಸೆಂ.ಮೀ. ಇದ್ದರೆ ಮೇಘಾಲಯದಲ್ಲಿರುವ ಚಿರಾಪುಂಜಿಯ ವಾರ್ಷಿಕ ಮಳೆಯ ಸರಾಸರಿ ಪ್ರಮಾಣವು ೧೦೦೦ ಸೆಂ.ಮೀ. ನಷ್ಟಿದೆ. ಅದರಂತೆಯೇ ಅತಿ ಶುಷ್ಕ, ಶುಷ್ಕ, ಆರ್ದ್ರ ಮತ್ತು ಅತಿ ಆರ್ದ್ರ ಪ್ರದೇಶಗಳಲ್ಲಿಯ ಬೇಸಾಯ ಪದ್ಧತಿಗಳಲ್ಲಿಯೂ ಬಹಳ ಅಂತರವಿರುವುದು ಸ್ವಾಭಾವಿಕ. ಶುಷ್ಕ ಪ್ರದೇಶದಲ್ಲಿ ಅನುಸರಿಸಬಹುದಾದ ಕೃಷಿ ಪದ್ಧತಿಯ ಪ್ರಮುಖ ವಿವರಗಳು ಕೆಳಗಿನಂತಿವೆ.

ಜಲಚಕ್ರ

ಭೂಮಿಯ ಮೇಲೆ ವಾಸಿಸುವ ಸಕಲ ಜೀವಿಗಳ ಅಸ್ತಿತ್ವಕ್ಕೆ ಆಧಾರವಾದ ನೀರು ವಿವಿಧ ರೂಪಗಳನ್ನು ತಾಳುತ್ತ ನೆಲ, ಸಾಗರ ಮತ್ತು ವಾಯುಮಂಡಲದಲ್ಲಿ ಅವಿರತವಾಗಿ ಸುತ್ತುತ್ತಿರುತ್ತದೆ. ಈ ವ್ಯವಸ್ಥೆಗೆ ಜಲಚಕ್ರ ಎಂಬ ಹೆಸರಿದೆ. ಜಲಚಕ್ರಕ್ಕೆ ಆರಂಭ ಅಥವಾ ಅಂತ್ಯ ಎಂಬುದಿಲ್ಲ. ಆದರೆ ಭೂಮಿಯ ಮುಕ್ಕಾಲು ಭಾಗ (ಪ್ರದೇಶ)ವನ್ನು ನೀರೇ ಆವರಿಸಿರುವುದರಿಂದ, ಚರ್ಚೆಯ ಅನುಕೂಲತೆಗಾಗಿ, ಈ ಜಲಚಕ್ರದ ವರ್ಣನೆಯನ್ನು ಸಮುದ್ರದಿಂದಲೇ ಆರಂಭಿಸುವುದು ವಾಡಿಕೆ. ಸಮುದ್ರದಿಂದ ಹೊರಟ ನೀರಿನ ಪ್ರಯಾಣದಲ್ಲಿನ ವಿವಿಧ ಹಂತಗಳ ಸಂಕ್ಷಿಪ್ತ ವರ್ಣನೆಯು ಕೆಳಗಿನಂತಿದೆ:

 • ಸೂರ್ಯ ರಶ್ಮಿಯ ಉಷ್ಣತೆಯಿಂದ ಸಮುದ್ರದ ನೀರು ಆವಿಯಾಗಿ ವಾಯು ಮಂಡಲವನ್ನು ಸೇರುತ್ತದೆ.
 • ಆವಿಯು ಊರ್ಧ್ವ ದಿಕ್ಕಿನತ್ತ ಸಾಗುತ್ತ ಸಂಗ್ರಹಗೊಂಡು ಮೋಡವಾಗುತ್ತದೆ.
 • ಮೋಡಗಳು ಕೆಲವು ವಿಶಿಷ್ಟ ಪರಿಸರಗಳಿಗೊಳಗಾಗಿ, ಘನೀಭವಿಸಿ, ಮಳೆ, ಆಲಿಕಲ್ಲು, ಹಿಮ ಇತ್ಯಾದಿ ರೂಪಗಳಲ್ಲಿ ಕೆಳಗೆ ಬಂದು ತಲುಪುತ್ತವೆ.
 • ಮಾರ್ಗದಲ್ಲಿ ಗಿಡಮರಗಳು ಮಳೆ ಮತ್ತು ಹಿಮವನ್ನು ತಡೆಯುವುದರಿಂದ, ನೀರಿನ ಸ್ವಲ್ಪ ಭಾಗವು ಅವುಗಳಿಗೆ ಅಂಟಿಕೊಳ್ಳುತ್ತದೆ. ಈ ನೀರನ್ನು ಸಸ್ಯಗಳು ಭಾಗಶಃ ಹೀರಿಕೊಳ್ಳುತ್ತವೆ. ಉಳಿದ ಭಾಗವು ಆವಿಯಾಗಿ ವಾಯುಮಂಡಲವನ್ನು ಸೇರುತ್ತದೆ.
 • ಭೂಮಿಯನ್ನು ತಲುಪಿದ ನೀರಿನಲ್ಲಿ ಸ್ವಲ್ಪಭಾಗವು ಮಣ್ಣನ್ನು ಪ್ರವೇಶಿಸಿ ಅಲ್ಲಿ ಸಂಗ್ರಹಗೊಳ್ಳುತ್ತದೆ ಇಲ್ಲವೇ ಹೆಚ್ಚು ಆಳಕ್ಕೆ ಬಸಿದು ಹೋಗಿ ಅಲ್ಲಿ ನೆಲಸುತ್ತದೆ ಅಥವಾ ಅಂತರ್ಜಲವನ್ನು ಸೇರಿಕೊಳ್ಳುತ್ತದೆ. ನೀರಿನ ಉಳಿದ ಭಾಗವು ಭೂಮಿಯ ಮೇಲ್ಭಾಗದಲ್ಲಿ ಹರಿದು ಹೋಗಿ ಹಳ್ಳ, ಕೊಳ್ಳ, ನದಿ, ಸರೋವರ ಇತ್ಯಾದಿಗಳನ್ನು ಸೇರುತ್ತದೆ.
 • ಮಣ್ಣಿನ ಮೇಲ್ಭಾಗದಲ್ಲಿ ಉಳಿದುಕೊಂಡ ನೀರು ಆವಿಯ ರೂಪದಲ್ಲಿ ಹೋರ ಬಂದು ವಾಯುಮಂಡಲವನ್ನು ಪ್ರವೇಶಿಸುತ್ತದೆ.
 • ಭೂಮಿಯ ಆಳಕ್ಕೆ ಬಸಿದು ಹೋದ ನೀರು, ಭೂಮಿಯೊಳಗೆ ಚಲಿಸಿ ತಗ್ಗಿನ ಪ್ರದೇಶದಲ್ಲಿ ಹೊರಬರಬಹುದು. ಇಲ್ಲವೇ ಚಿಲುಮೆಯ ರೂಪದಲ್ಲಿಯೂ ಹೊರಚಿಮ್ಮಬಹುದು.
 • ಹಳ್ಳ, ಕೆರೆ, ಸರೋವರಗಳಲ್ಲಿ ಸಂಗ್ರಹಗೊಂಡ ನೀರಿನ ಮೇಲ್ಭಾಗದಿಂದಲೂ ನೀರು ಆವಿಯ ರೂಪದಲ್ಲಿ ಹೊರಬಂದು ವಾಯು ಮಂಡಲವನ್ನು ಸೇರುತ್ತದೆ.

ಭೂ ಪ್ರದೇಶದಲ್ಲಿ ಬೆಳೆಯುತ್ತಿರುವ ಗಿಡಮರಗಳಿಂದ, ಅದರಲ್ಲಿಯೂ ಪ್ರಮುಖವಾಗಿ ಅವುಗಳ ಎಲೆಗಳ ಮುಖಾಂತರ ನೀರು ಬಾಷ್ಪದ ರೂಪದಲ್ಲಿ ಹೊರಬಂದು ಗಾಳಿಯಲ್ಲಿ ಲೀನವಾಗಬಹುದು. ಇದರಂತೆಯೇ ನೀರಿನ ಮೇಲ್ಭಾಗದಲ್ಲಿ ಬೆಳೆಯುವ ಜಲ ಸಸ್ಯಗಳೂ (ಕಳೆಗಳು) ತಮ್ಮ ಎಲೆಗಳ ಮೂಲಕ ನೀರನ್ನು ಬಾಷ್ಪ ರೂಪದಲ್ಲಿ ಹೊರ ಹಾಕುತ್ತವೆ.

 • ಪರ್ವತಗಳ ಉನ್ನತ ಶಿಖರಗಳಲ್ಲಿ ನೀರು ಬರ್ಫದ ರೂಪದಲ್ಲಿ ಸಂಗ್ರಹಗೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಬರ್ಫವು ಕರಗಿ ನೀರಿನ ರೂಪದಲ್ಲಿ ಹರಿದು ಕೆಳಗಿರುವ ಭೂ ಪ್ರದೇಶವನ್ನು ಸೇರಬಹುದು.
 • ಉತ್ತರ ಮತ್ತು ದಕ್ಷಿಣ ಧೃವ ಪ್ರದೇಶಗಳಲ್ಲಿಯೂ ನೀರು ಬರ್ಫದ ರೂಪದಲ್ಲಿ ಸಂಗ್ರಹವಾಗಿರುತ್ತದೆ.

ಭಾರತದಲ್ಲಿ ವಾರ್ಷಿಕ ಮಳೆ ಮತ್ತು ಮಳೆ ನೀರಿನ ವಿಂಗಡಣೆ

ನಮ್ಮ ದೇಶದಲ್ಲಿ ಪ್ರತಿ ವರ್ಷ ಬರುವ ಮಳೆಯಿಂದ ಸರಾಸರಿ ಸುಮಾರು ೪೦೦ ದಶಲಕ್ಷ ಹೆಕ್ಟೇರು ಮೀಟರು (ದ.ಲ.ಹೆ.ಮೀ) ನೀರು ದೊರೆಯುತ್ತದೆಂದು ಅಂದಾಜು ಮಾಡಲಾಗಿದೆಯಲ್ಲದೇ ಈ ನೀರಿನ ವಿಂಗಡಣೆಯು ಮುಂದಿನಂತೆ ಆಗುತ್ತದೆಯೆಂದೂ ಕಂಡುಬಂದಿದೆ.

ಭಾರತದಲ್ಲಿ ವಾರ್ಷಿಕ ಮಳೆಯಿಂದ ದೊರೆಯುವ ಒಟ್ಟು ನೀರು ೪೦೦ ದ.ಲ.ಹೆ.ಮೀ.

ಇಡೀ ದೇಶವನ್ನು ಗಣನೆಗೆ ತೆಗೆದುಕೊಂಡಾಗ ಮಳೆಯ ನೀರು ಮೇಲೆ ತೋರಿಸಿದಂತೆ ಹಂಚಿಹೋಗುತ್ತದೆಯೆಂದು ಕಂಡುಬರುತ್ತದೆ. ವಿಶಾಲವಾದ ಕ್ಷೇತ್ರದ ಭೂ ಪ್ರದೇಶದಲ್ಲಿ ವಿಭಿನ್ನವಾದ ಹವಾಮಾನ ಮತ್ತು ಭೂ ರಚನೆಯಿರುವುದು ಸ್ವಾಭಾವಿಕ. ಆದರೆ ಸಣ್ಣ ಕ್ಷೇತ್ರದಲ್ಲಿ ಕಂಡು ಬರುವ ಭೂ ರಚನೆಯಲ್ಲಿ ಮತ್ತು ಹವಾಮಾನದಲ್ಲಿ ಹೆಚ್ಚು ಸಾಮ್ಯತೆಯಿರುವ ಸಾಧ್ಯತೆಗಳು ಇರುತ್ತವೆಯಾದ್ದರಿಂದ ಇಂತಹ ಪ್ರದೇಶದಲ್ಲಿ ಬಂದ ಮಳೆಯ ನೀರಿನ ಹಂಚಿಕೆಯು ಬೇರೆ ರೀತಿಯದಾಗಿರಬಹುದು.

ಮಹಾರಾಷ್ಟ್ರ ರಾಜ್ಯದಲ್ಲಿರುವ ಸೊಲ್ಲಾಪುರ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಾಡಿದ ಪ್ರಯೋಗಗಳ ಅಂದಾಜಿನ ಪ್ರಕಾರ, ಅಲ್ಲಿ ಬರುವ ವಾರ್ಷಿಕ ಮಳೆಯ ನೀರು ಯಾವ ರೀತಿ ವಿಂಗಡಣೆಯಾಗುತ್ತದೆಂಬುದನ್ನು ಕೆಳಗಿನ ವಿವರಗಳಿಂದ ತಿಳಿಯಬಹುದು.

ಇಡೀ ದೇಶದ ಭೂ ಪ್ರದೇಶವನ್ನು ಪರಿಗಣಿಸಿದಾಗಿನ ಅಂದಾಜಿಗೂ ಸಾಗುವಳಿಯಲ್ಲಿರುವ ಸಣ್ಣ ಕ್ಷೇತ್ರದಲ್ಲಿ ಮಾಡಿದ ಅಂದಾಜಿಗೂ ಅಂತರವಿದೆಯಾದರೂ ಇಂತಹ ವಿವರಗಳಿಂದ ಕೆಲವು ಸಾಮಾನ್ಯ ಸಂಗತಿಗಳ ಅರಿವು ಮೂಡಿ ಬರುತ್ತದೆ.

 • ಮಳೆಯ ನೀರಿನ ಗಣನೀಯ ಭಾಗವು ಹರಿದು ಹೋಗಿ ನದಿಯ ಮೂಲಕ ಸಮುದ್ರವನ್ನು ಸೇರುತ್ತದೆ.
 • ಮಣ್ಣಿನಲ್ಲಿ ಇಂಗಿದ ನೀರಿನ ಬಹುಭಾಗವು ಭೂಮಿಯಾಳಕ್ಕೆ ಇಳಿಯುತ್ತದೆ. ಇಲ್ಲವೇ ಆವಿಯ ರೂಪದಲ್ಲಿ ಹೊರಬಂದು ವಾಯುಮಂಡಲವನ್ನು ಸೇರುತ್ತದೆ.
 • ಮಣ್ಣನ್ನು ಪ್ರವೇಶಿಸಿದ ನೀರಿನ ಒಂದು ಭಾಗವು ಬೆಳೆಗೆ ಲಭ್ಯವಾಗದೇ, ಮಣ್ಣಿನಲ್ಲಿಯೇ ಉಳಿದುಕೊಳ್ಳುತ್ತದೆ.

ಒಣ ಭೂಮಿ ಪ್ರದೇಶಗಳ ವೈಶಿಷ್ಟ್ಯ: ವಾರ್ಷಿಕವಾಗಿ ಬರುವ ಸರಾಸರಿ ಮಳೆಯಾಧಾರದ ಮೇಲಿಂದ ಭೂ ಪ್ರದೇಶಗಳನ್ನು ಮುಂದಿನಂತೆ ವರ್ಗೀಕರಿಸಬಹುದು.

ಕೋಷ್ಟಕ : ವಾರ್ಷಿಕ ಮಳೆಯಾಧಾರದ ಮೇಲೆ ಭೂ ಪ್ರದೇಶದ ವರ್ಗೀಕರಣ

ಕ್ರ. ಸಂ.

ವಾರ್ಷಿಕ ಸರಾಸರಿ ಮಳೆಯ ಪ್ರಮಾಣ (ಮಿ.ಮೀ)

ಪ್ರದೇಶದ ಹೆಸರು

೧. ೫೦೦ಕ್ಕಿಂತ ಕಡಿಮೆ ಶುಷ್ಕ (Arid)
೨. ೫೦೦-೭೫೦ ಅರೆ ಶುಷ್ಕ (Semiarid)
೩. ೭೫೦-೧೧೫೦ ಅರೆ ಆರ್ದ್ರ (Semi humid)
೪. ೧೧೫೦ ಕ್ಕಿಂತ ಅಧಿಕ ಆರ್ದ್ರ (Humid)

ಅಲ್ಪ ಮತ್ತು ಅನಿಶ್ಚಿತ ವಾರ್ಷಿಕ ಮಳೆ ಬೀಳುವ ಪ್ರದೇಶದಲ್ಲಿ ನದಿ, ಕೆರೆ, ಬಾವಿ ಇತ್ಯಾದಿ ಜಲ ಮೂಲಗಳಿಂದ ನೀರಿನ ಪೂರೈಕೆಯಿಲ್ಲದೆ ನೆಲ, ಜಲ ಮತ್ತು ಬೆಳೆಗಳ ಸರಿಯಾದ ನಿರ್ವಹಣೆಯಿಂದ ಉತ್ತಮ ಇಳುವಳಿಯನ್ನು ಪಡೆಯುವ ವಿಧಾನಕ್ಕೆ ಒಣ ಭೂಮಿ ಬೇಸಾಯ ಪದ್ಧತಿಯೆಂದೂ ಇಂತಹ ಪ್ರದೇಶಗಳಿಗೆ ಒಣಭೂಮಿ ಬೇಸಾಯ ಪ್ರದೇಶಗಳೆಂದೂ ಹೆಸರು.

ಮೇಲಿನ ಕೋಷ್ಟಕದಲ್ಲಿರುವ ಅರೆಶುಷ್ಕ ಪ್ರದೇಶದಲ್ಲಿ ಅನುಸರಿಸಬೇಕಾದ ಒಣಭೂಮಿ ಬೇಸಾಯ ಪದ್ಧತಿಗಳ ವಿವರಗಳು ಈ ಅಧ್ಯಾಯದಲ್ಲಿವೆ. ಈ ಭೂ ಪ್ರದೇಶದ ವೈಶಿಷ್ಟಗಳು ಕೆಳಗಿನಂತಿವೆ.

ಮಳೆ: ಒಣಭೂಮಿ ಬೇಸಾಯ ಪ್ರದೇಶದಲ್ಲಿ ಬರುವ ಮಳೆಯು ಕೆಲವು ವೈಶಿಷ್ಟಗಳಿಂದ ಕೂಡಿದೆ.

 • ಈಗಾಗಲೇ ಸೂಚಿಸಿದಂತೆ, ವಾರ್ಷಿಕ ಮಳೆಯು ಪ್ರಮಾಣವು ಕಡಿಮೆ.
 • ಶೇಕಡಾ ಸುಮಾರು ೮೦ ರಷ್ಟು ಮಳೆಯು ಜೂನ್‌ತಿಂಗಳಿನಿಂದ ಸೆಪ್ಟೆಂಬರ್ ತಿಂಗಳುಗಳ ಮಧ್ಯದ ಅವಧಿಯಲ್ಲಿ ಆಗುತ್ತದೆ. ಇದಕ್ಕೆ ಕೆಲವು ಅಪವಾದಗಳಿವೆ. ಬೆಂಗಳೂರು ಪ್ರದೇಶದಲ್ಲಿ ಏಪ್ರಿಲ್‌ಮೇ ತಿಂಗಳುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮಳೆಯಾಗಿ ಪುನಃ ಜುಲೈ ತಿಂಗಳಿಂದ ಆರಂಭವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳವರೆಗೆ ಮಳೆಯು ಬೀಳುತ್ತದೆ.
 • ಮಳೆಯು ಆರಂಭವಾಗುವ ಸಮಯ ಮತ್ತು ನಂತರ ಮಳೆಯು ಬೀಳುವ ಸಮಯ ಇವು ವರ್ಷದಿಂದ ವರ್ಷಕ್ಕೆ ಅನಿಶ್ಚಿತವಾಗಿವೆ. ನಿರೀಕ್ಷಿಸಿದಾಗ ಮಳೆಯು ಬರದೇ ಅನಿರೀಕ್ಷಿತ ಸಮಯದಲ್ಲಿ ಮಳೆಯು ಬೀಳುವುದು ಸಾಮಾನ್ಯ.
 • ಹಂಗಾಮಿನಲ್ಲಿ ಬರುವ ಮಳೆಯ ಹಂಚಿಕೆಯೂ ಅನಿಶ್ಚಿತವೆ. ಕೆಲವು ದಿನ ಅತಿ ಹೆಚ್ಚು ಮಳೆ ಬಂದು ನಂತರದ ಹಲವು ದಿನಗಳವರೆಗೆ ಮಳೆಯೇ ಬಾರದಿರಬಹುದು.
 • ಹಲವು ವರ್ಷಗಳಲ್ಲಿ ಬಂದ ಮಳೆಯ ಪ್ರಮಾಣ, ಹಂಚಿಕೆ, ರಭಸ ಇತ್ಯಾದಿಗಳನ್ನು ಅಧ್ಯಯನ ಮಾಡಿದಾಗ ವರ್ಷದಿಂದ ವರ್ಷಕ್ಕೆ ಇರುವ ಅಂತರವು ಅತ್ಯಧಿಕವೆಂದೂ ಯಾವುದೇ ರೀತಿಯ ನಿಯಮ ಬದ್ಧತೆ ಇಲ್ಲವೆಂದೂ ಕಂಡುಬರುತ್ತದೆ.

ಮಣ್ಣಿನ ಗುಣಧರ್ಮಗಳು: ಎರಡು ಗಣಗಳಿಗೆ (Orders) ಸೇರಿದ ಮಣ್ಣುಗಳು ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ವರ್ಟಿಸೋಲ್‌ಮತ್ತು ಸಂಬಂಧಿಸಿದ ಕಪ್ಪು ಮಣ್ಣುಗಳು

 • ಈ ಗಣಕ್ಕೆ ಸೇರಿದ ಮಣ್ಣಿರುವ ಪ್ರದೇಶವು ರಾಜಸ್ಥಾನ, ಮಹಾರಾಷ್ಟ್ರದ ಪೂರ್ವಭಾಗ, ಮಧ್ಯಪ್ರದೇಶ, ಕರ್ನಾಟಕದ ಉತ್ತರಭಾಗ ಮತ್ತು ಆಂಧ್ರಪ್ರದೇಶ ಪಶ್ಚಿಮಭಾಗಗಳಲ್ಲಿ ಕಂಡುಬರುತ್ತದೆ.
 • ಮೇಲಿನ ಪ್ರದೇಶಗಳಲ್ಲಿ ಸಸ್ಯಗಳಿಗೆ ನೀರು ಲಭ್ಯವಾಗುವ ಅವಧಿಯು ೧೩೪ ರಿಂದ ೧೩೮ ದಿನಗಳೆಂದು ಅಂದಾಜು ಮಾಡಲಾಗಿದೆ.
 • ಮಣ್ಣಿನಲ್ಲಿ ಎರೆಕಣಗಳ ಪ್ರಮಾಣವು ಶೇಕಡಾ ೩೦ ರಿಂದ ೭೦ರ ವರೆಗೆ ಇರುತ್ತದೆ. ಮೊಂಟ್‌ಮೊರಿಲ್ಲೋನೈಟ್‌ಖನಿಜದ ಪ್ರಾಬಲ್ಯವನ್ನು ಮಣ್ಣಿನಲ್ಲಿ ಕಾಣಬಹುದು. ಜಲಧಾರಣಾ ಶಕ್ತಿಯೂ ಅಧಿಕ.
 • ಮಣ್ಣು ಒಣಗಿದೊಡನೆ, ಅಗಲವಾದ ಮತ್ತು ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತವೆ.
 • ಸಾರಜನಕ ಮತ್ತು ರಂಜಕ ಪೋಷಕಾಂಶಗಳ ಕೊರತೆಯ ಈ ಮಣ್ಣಿನಲ್ಲಿ ಸಾಮಾನ್ಯ.
 • ದೊಡ್ಡ ಮತ್ತು ಬಿರುಸಿನ ಮಳೆಗಳು ಬರುತ್ತವೆ. ನೀರು ಮಣ್ಣಿನಲ್ಲಿ ನಿಧಾನವಾಗಿ ಇಂಗುವುದರಿಂದ ನೀರು ಭೂಮಿಯ ಮೇಲೆ ಹರಿದು ಹೋಗಿ ತನ್ನೊಡನೆ ಫಲವತ್ತಾದ ಮೇಲ್ಮಣ್ಣನ್ನೂ ಕೊಚ್ಚಿಕೊಂಡು ಹೋಗುತ್ತದೆ.

ಅಲ್ಫಿಸೋಲ್‌ಮತ್ತು ಸಂಬಂಧಿಸಿದ ಕೆಂಪು ಮಣ್ಣು

ಅಲ್ಫಿಸೋಲ್‌ಗಣಕ್ಕೆ ಸೇರಿದ ಮಣ್ಣು ಕರ್ನಾಟಕದ ದಕ್ಷಿಣಭಾಗ ಮತ್ತು ಆಂಧ್ರಪ್ರದೇಶದ ಪಶ್ಚಿಮಭಾಗಗಳಲ್ಲಿ ಕಂಡು ಬರುತ್ತದೆ. ಮಣ್ಣಿನಲ್ಲಿ ಎರೆಕಣಗಳ ಪ್ರಮಾಣವು ಕಡಿಮೆ (ಶೇಕಡಾ ೧೫-೨೦) ಪರಳಿನದೇ ಪ್ರಾಬಲ್ಯವಿದೆ. ಕೆಲವು ಭಾಗಗಳಲ್ಲಿ ಕೆಳಗಿನ ಸ್ತರವು ಗಟ್ಟಿಯಾಗಿರುವುದರಿಂದ ಮೇಲ್ಮಣ್ಣು ಕೊಚ್ಚಿ ಹೋಗುವ ಅಪಾಯವಿದೆ. ಮಳೆಯ ನಂತರ ಮಣ್ಣಿನ ಮೇಲ್ಭಾಗವು ಹೆಪ್ಪುಗಟ್ಟುತ್ತದೆ.

ಮಣ್ಣಿನ ಜಲಧಾರಣಾ ಶಕ್ತಿಯು ಕಡಿಮೆ. ಫಲವತ್ತತೆಯೂ ಅತಿ ಕಡಿಮೆ. ಸಾರಜನಕ, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಗಂಧಕ ಇತ್ಯಾದಿ ಪೋಷಕಾಂಶಗಳ ಕೊರತೆಯು ಎದು ಕಾಣುತ್ತದೆ.

ಪ್ರಮುಖ ಬೆಳೆಗಳು: ಒಣ ಭೂಮಿ ಪ್ರದೇಶದ ಪ್ರಮುಖ ಬೆಳೆಗಳು ಕೆಳಗಿನಂತಿವೆ.

 • ಧಾನ್ಯದ ಬೆಳೆಗಳು: ಜೋಳ, ಗೋಧಿ, ಸಜ್ಜೆ, ಮುಸುಕಿನ ಜೋಳ, ರಾಗಿ
 • ಬೇಳೆ ಕಾಳು ವರ್ಗದ ಬೆಳೆಗಳು: ತೊಗರಿ, ಕಡಲೆ, ಅವರೆ, ಉದ್ದು, ಹೆಸರು, ಅಲಸಂದಿ
 • ಎಣ್ಣೆಕಾಳು ಬೆಳೆಗಳು: ಸೇಂಗಾ, ಕುಸುಬೆ (ಕುಸುಮೆ), ಎಳ್ಳು
 • ವಾಣಿಜ್ಯ ಬೆಳೆಗಳು: ಹತ್ತಿ, ತಂಬಾಕು

ಸಾಂಪ್ರದಾಯಕವಾಗಿ ಬೆಳೆಯುತ್ತಿರುವ ಮೇಲಿನ ಬೆಳೆಗಳನ್ನಷ್ಟೇ ಅಲ್ಲದೇ ಕೆಲವು ಹೊಸ ಬೆಳೆಗಳನ್ನೂ (ಉದಾಹರಣೆಗೆ ಸೂರ್ಯಕಾಂತಿ) ಬೆಳೆಯಲಾಗುತ್ತಿದೆ.

ಒಣ ಬೇಸಾಯ ಪದ್ಧತಿಯ ಬಗ್ಗೆ ನಡೆಸಿದ ಸಂಶೋಧನೆಗಳ ಪರಿಣಾಮಗಳು

ದೇಶದ ಹೆಚ್ಚಿನ ಪ್ರದೇಶವು ಒಣ ಭೂಮಿ ಪ್ರದೇಶ. ಇಲ್ಲಿ ಪರಂಪರಾಗತವಾಗಿ ನಡೆದು ಬಂದ ಬೇಸಾಯ ಪದ್ಧತಿಗಳನ್ನು ಉತ್ತಮಗೊಳಿಸಿ, ಮಣ್ಣಿನ ಉತ್ಪಾದಕತೆಯನ್ನು ಉನ್ನತಗೊಳಿಸಿ ಆ ಭಾಗದಲ್ಲಿಯ ಕೃಷಿಯು ಸುಸ್ಥಿರಗೊಂಡು ಲಾಭದಾಯಕವಾಗುವಂತೆ ಮಾಡುವ ಸದುದ್ದೇಶದಿಂದ ಭಾರತದಲ್ಲಿ ಹಲವು ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ ಮತ್ತು ಕೈಗೊಳ್ಳಲಾಗುತ್ತಿದೆ. ಈ ಸಂಶೋಧನೆಗಳು ನಡೆದು ಬಂದ ದಾರಿಯ ಸೂಕ್ಷ್ಮ ಪರಿಚಯವು ಮುಂದಿನಂತಿದೆ:

ಕಳೆದ ಶತಮಾನದ ೬೦ನೆಯ ದಶಕದವರೆಗೆ: ಒಣ ಭೂಮಿಯ ಬೇಸಾಯದಲ್ಲಿ ಸುಧಾರಣೆಯನ್ನು ತರುವ ಉದ್ದೇಶದಿಂದ ಕಳೆದ ಶತಮಾನದ ೩೦ರ ದಶಕದಲ್ಲಿಯೇ ಆರಂಭಗೊಂಡವು. ಈ ಕಾರ್ಯಕ್ಕೆಂದು ದೇಶದಲ್ಲಿ ಕೆಲವು ಸಂಶೋಧನಾ ಕೇಂದ್ರಗಳು ಸ್ಥಾಪಿತವಾದವು. ಈ ಕೇಂದ್ರಗಳಲ್ಲಿ ೧೯೪೪ ರವರೆಗೆ ಸಂಶೋಧನೆಗಳು ನಡೆದು ದೊರೆತ ಪರಿಣಾಮಗಳ ಆಧಾರದ ಮೇಲೆ ಕೆಲವು ಹೊಸ ಬೇಸಾಯ ಪದ್ಧತಿಗಳನ್ನು ರೈತರ ಉಪಯೋಗಕ್ಕೆಂದು ಬಿಡುಗಡೆ ಮಾಡಲಾಯಿತು. ಇವು ಮುಂಬಯಿ ಒಣಬೇಸಾಯ ಪದ್ಧತಿ, ಹೈದರಾಬಾದ್‌ಒಣ ಬೇಸಾಯ ಪದ್ಧತಿ ಮತ್ತು ಮದರಾಸು ಒಣ ಬೇಸಾಯ ಪದ್ಧತಿ ಎಂದೇ ಪ್ರಚಲಿತವಾದವು. ಈ ಪದ್ಧತಿಗಳ ಪ್ರಮುಖ ಅಂಶಗಳು ಕೆಳಗಿನಂತಿವೆ:

 • ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಬದುಗಳ ನಿರ್ಮಾಣ.
 • ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಭೂಮಿಯನ್ನು ನೇಗಿಲಿನಿಂದ ಉಳುಮೆ ಮಾಡುವುದು.
 • ಉಳಿದ ವರ್ಷಗಳಲ್ಲಿ ಕುಂಟೆಯನ್ನು ಉಪಯೋಗಿಸಿ ಭೂಮಿಯನ್ನು ಸಿದ್ಧಗೊಳಿಸುವುದು.
 • ಪೋಷಕಾಂಶಗಳ ಪೂರೈಕೆಗೆ ಸಾವಯವ ಗೊಬ್ಬರಗಳ (ಸಗಣಿ ಗೊಬ್ಬರ ಅಥವಾ ಕಾಂಪೋಸ್ಟ್‌) ಉಪಯೋಗ ಮಾಡುವುದು.
 • ಪ್ರತಿ ಎಕರೆಗೆ ಉಪಯೋಗಿಸುವ ಬೀಜದ ಪ್ರಮಾಣವನ್ನು ಕಡಿಮೆ ಮಾಡಿ ಸಾಲುಗಳ ಅಂತರವನ್ನು ಹೆಚ್ಚಿಸುವುದು.
 • ಬೆಳೆಯ ಸಾಲುಗಳ ಮಧ್ಯದಲ್ಲಿ ಮೇಲಿಂದ ಮೇಲೆ ಎಡೆಕುಂಟೆಯನ್ನು ಉಪಯೋಗಿಸುವುದು.

ರೈತರು ಆ ಸಮಯದಲ್ಲಿ ಪ್ರತಿ ಹೆಕ್ಟೇರಿಗೆ ಪಡೆಯುತ್ತಿದ್ದ ೩೦೦ರಿಂದ ೪೦೦ ಕಿ.ಗ್ರಾಂ. ಧಾನ್ಯದ ಇಳುವರಿಗಿಂತ ಶೇಕಡಾ ೧೫-೨೦ರಷ್ಟು ಅಧಿಕ ಇಳುವರಿಯನ್ನು ಹೊಸ ಪದ್ಧತಿಯ ಬಳಕೆಯಿಂದ ದೊರೆಯುತ್ತಿದೆಯೆಂದು ಹೇಳಲಾಯಿತು. ಆದರೆ ಈ ಬೇಸಾಯ ಪದ್ಧತಿಗಳು ರೈತರಲ್ಲಿ ಅಷ್ಟು ಪ್ರಚಲಿತವಾಗಲಿಲ್ಲ. ನಿರೀಕ್ಷಿತ ಯಶಸ್ಸು ದೊರೆಯದಿರಲು ಕೆಳಗಿನ ಕಾರಣಗಳನ್ನು ಮುಂದಿಡಲಾಯಿತು. ಈ ಹೊಸ ಬೇಸಾಯ ಕ್ರಮಕ್ಕೆ

 • ಹೆಚ್ಚು ಖರ್ಚು
 • ಅಧಿಕ ಶ್ರಮ
 • ಇಳುವರಿಯಲ್ಲಿ ಅತಿ ಕಡಿಮೆ ಹೆಚ್ಚಳ
 • ಇಳುವರಿಯ ಹೆಚ್ಚಳವು ಅನಿಶ್ಚಿತ

ಒಣ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಇಳುವರಿಯನ್ನು ಗಣನೀಯವಾಗಿ ಅಧಿಕಗೊಳಿಸುವ ದೃಷ್ಟಿಯಿಂದ ಕಳೆದ ಶತಮಾನದ ೫೦ರ ದಶಕದಲ್ಲಿ, ಪ್ರಯತ್ನವನ್ನು ಪುನಃ ಆರಂಭಿಸಲಾಯಿತು. ಮಣ್ಣಿನ ಸಂರಕ್ಷಣೆಯ ಬಗ್ಗೆ ಸಂಶೋಧನೆಗಳನ್ನು ನಡೆಸಲು, ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲು ಮತ್ತು ತರಬೇತಿಯನ್ನು ನೀಡಲು ದೇಶದ ವಿವಿಧ ಭಾಗಗಳಲ್ಲಿ ಒಟ್ಟು ೮ ಕೇಂದ್ರಗಳನ್ನು ತೆರೆಯಲಾಯಿತು. ಮಣ್ಣು ಮತ್ತು ನೀರು ಸಂರಕ್ಷಿಸುವುದರ ಮೂಲಕ ಇಳುವರಿಯನ್ನು ಉನ್ನತ ಮಟ್ಟಕ್ಕೆ ಏರಿಸುವ ಉದ್ದೇಶದಿಂದ ಸಮಪಾತಳಿ ಬದುಗಳು, ಇಳಿಜಾರು ಬದುಗಳು (Graded bunds), ಮೆಟ್ಟಲು ಪದ್ಧತಿಯ ಭೂರಚನೆ, (Bench terracing) ಸಮ ಪಾತಳಿಗುಂಟ ಪಟ್ಟ ಬೆಳೆಗಳು ಇತ್ಯಾದಿಗಳು ಪರೀಕ್ಷಿಸಿ ನೋಡಲಾಯಿತು. ಆದರೆ ದುರ್ದೈವದಿಂದ ಈ ಪ್ರಯತ್ನವೂ ನಿರೀಕ್ಷಿಸಿದ ಫಲವನ್ನು ಕೊಡಲಿಲ್ಲ. ಇದಕ್ಕೆ ಮುಂದಿನ ಕಾರಣಗಳಿದ್ದವೆನ್ನಬಹುದು.

 • ಆ ಸಮಯದಲ್ಲಿ ಅಲ್ಪಾವಧಿ ತಳಿಗಳಿರಲಿಲ್ಲ. ಆಗ ಬಳಕೆಯಲ್ಲಿದ್ದ ತಳಿಗಳು ಮಾಗಲು ದೀರ್ಘ ಸಮಯ ಬೇಕಾಗುತ್ತಿತ್ತು. ಹೀಗಾಗಿ ಮಣ್ಣಿನಲ್ಲಿ ಆರ್ದ್ರತೆ ಇರುವ ಸಮಯಕ್ಕೂ ದೀರ್ಘಾವಧಿ ತಳಿಗಳ ಬೆಳವಣಿಗೆಯ ವಿವಿಧ ಹಂತಗಳಿಗೂ ಹೊಂದಾಣಿಕಾಗುತ್ತಿರಲಿಲ್ಲ.
 • ಆಗ ಬಳಕೆಯಲ್ಲಿರುವ ತಳಿಗಳ ಉತ್ಪಾದನಾ ಸಾಮರ್ಥ್ಯವು ಕೆಳಮಟ್ಟದ್ದಾಗಿತ್ತು. ಉತ್ತಮ ನಿರ್ವಹಣೆಗೆ ಇಳುವರಿಯ ರೂಪದಲ್ಲಿ ನಿರೀಕ್ಷಿದ ಪ್ರತಿಕ್ರಿಯೆಯು ಈ ತಳಿಗಳಿಂದ ಬರುತ್ತಿರಲಿಲ್ಲ.

ಹೀಗಾಗಿ ಬದುಗಳ ನಿರ್ಮಾಣದಿಂದಾದ ನೀರು ಮತ್ತು ಮಣ್ಣಿನ ಸಂರಕ್ಷಣೆಗಳೆರಡನ್ನು ಬಿಟ್ಟರೆ ಈ ಮೇಲಿನ ಪ್ರಯತ್ನದಿಂದ ನಿರೀಕ್ಷಿಸಿದ ಪ್ರಯೋಜನವು ದೊರೆಯಲಿಲ್ಲವೆನ್ನಬಹುದು.

೧೯೬೦ರಿಂದೀಚೆಗೆ ನಡೆದ ಸಂಶೋಧನೆಗಳು: ಕಳೆದ ಶತಮಾನದ ೬೦ರ ಒಣ ಬೇಸಾಯದ ಬೆಳೆಗಳಾದ ಜೋಳ, ಸಜ್ಜೆ, ರಾಗಿ, ಹತ್ತಿ ಬೆಳೆಗಳಲ್ಲಿ ಅಲ್ಪಾವಧಿಯಲ್ಲಿ ಮಾಗುವ ಹವಾಮಾನಕ್ಕೆ ಸ್ಪಂದಿಸದ, ಪೋಷಕಗಳ ಪೂರೈಕೆಗೆ ಉತ್ತಮ ಪ್ರತಿಕ್ರಿಯೆಯನ್ನು ತೋರಿಸುವ, ಅಧಿಕ ಇಳುವರಿಯನ್ನು ಕೊಡುವ, ಉತ್ತಮ ನಿರ್ವಹಣೆಗೆ ಸೂಕ್ತ ಪ್ರತಿಫಲವನ್ನು ನೀಡಬಲ್ಲ ಹೊಸ ತಳಿಗಳ ಬಿಡುಗಡೆಯಾಯಿತು. ಈ ತಳಿಗಳು, ಮಣ್ಣಿನಲ್ಲಿ ಲಭ್ಯವಿರುವ ಆರ್ದ್ರತೆಯ ಸದುಪಯೋಗವನ್ನು ಮಾಡಿಕೊಂಡು ಉತ್ತಮ ಇಳುವರಿಯನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದ್ದವು. ಈ ಬೆಳವಣಿಗೆಯಿಂದ ಉತ್ಪಾದಕತೆಯಲ್ಲಿರುವ ಅನಿಶ್ಚಿತತೆಯು ಬಹುಮಟ್ಟಿಗೆ ದೂರವಾಯಿತು. ಹೊಸತಳಿಗಳಲ್ಲಿ ಮೇವಿನ ಪ್ರಮಾಣವು ಕಡಿಮೆ ಇದ್ದರೂ ಮತ್ತು ಕೀಟ-ರೋಗಗಳಿಗೆ ಇವು ತುಲನ್ಮಾಕವಾಗಿ ಅಧಿಕ ಪ್ರಮಾಣದಲ್ಲಿ ತುತ್ತಾಗುತ್ತಿದ್ದಾಗ್ಯೂ ಕಾಳಿನ ಇಳುವರಿಯು ಮೂರು ನಾಲ್ಕು ಪಟ್ಟು ಅಧಿಕಗೊಂಡದ್ದರಿಂದ ಒಣಭೂಮಿ ಪ್ರದೇಶದ ರೈತರು ಈ ತಳಿಗಳನ್ನು ಬೇಗನೆ ಸ್ವೀಕರಿಸಿದರು.

ಅಧಿಕ ಇಳುವರಿಯನ್ನು ಕೊಡುವ ತಳಿಗಳ ಅವಿಷ್ಕಾರದಿಂದ ಉತ್ತೇಜಿತರಾಗಿ ಹಾಗೂ ಹಲವು ವಿಷಯಗಳಿಗೆ ಸಂಬಂಧಿಸಿದ ವಿಷಯ ತಜ್ಞರ ಏಕತ್ರಿತ ಮತ್ತು ಸಂಯೋಜಿತ ಪ್ರಯತ್ನದ ಮಹತ್ವವನ್ನರಿತು ಒಣಭೂಮಿ ಕೃಷಿಯ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಯು (All India CO-ordinated Research Project on Dry Lands) ೨೩  ಕೇಂದ್ರಗಳನ್ನು ೧೯೭೦ರಲ್ಲಿ ಆರಂಭಿಸಲಾಯಿತು. ಅದೇ ಸಮಯದಲ್ಲಿ ಜೋಳ, ಸಜ್ಜೆ, ರಾಗಿ, ಬೇಳೆಕಾಳು ಬೆಳೆಗಳು, ಎಣ್ಣೆಕಾಳು ಬೆಳೆಗಳು ಇತ್ಯಾದಿಗಳ ಬಗ್ಗೆ ಪ್ರತ್ಯೇಕವಾದ ಅಖಿಲ ಭಾರತ ಸಮನ್ವಯ ಯೋಜನೆಗಳೂ ಅಸ್ತಿತ್ವಕ್ಕೆ ಬಂದವು. ಇವೆಲ್ಲ ಒಣಭೂಮಿ ಪ್ರದೇಶದ ಪ್ರಮುಖ ಬೆಳೆಗಳೆಂಬುದನ್ನು ಗಮನಿಸಬೇಕಾದ ಸಂಗತಿ.

ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಒಣಭೂಮಿ ಬೇಸಾಯದ ಬಗ್ಗೆ ಆಸ್ಥೆಯುಂಟಾಗಿ ೧೯೭೦ರಲ್ಲಿ ಉಷ್ಣವಲಯದಲ್ಲಿಯ ಅರೆಶುಷ್ಕ ಪ್ರದೇಶ ಬೆಳೆಗಳ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಯು (International Research Institute for the Semi Arid Tropics-ICRISAT) ಆಂಧ್ರಪ್ರದೇಶದ ಪಟನಚೇರು ಎಂಬಲ್ಲಿ ಕಾರ್ಯ ಪ್ರವೃತ್ತವಾಯಿತು. ಇವೆಲ್ಲ ಪ್ರಯತ್ನಗಳಿಗೆ ಪೂರಕವೆಂಬಂತೆ ೧೯೮೫ರಲ್ಲಿ ಒಣಭೂಮಿ ಕೃಷಿಯ ಕೇಂದ್ರೀಯ ಸಂಶೋಧನಾ ಸಂಸ್ಥೆಯು ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ತನ್ನ ಕಾರ್ಯವನ್ನು ಆರಂಭಿಸಿತು. ಮಳೆ ನೀರಿನ ಸಮರ್ಥ ಬಳಕೆ, ಮಣ್ಣಿನ ಸೂಕ್ತ ನಿರ್ವಹಣೆ ಮತ್ತು ವಿಭಿನ್ನ ಪರಿಸ್ಥಿತಿಗಳಿಗೆ ಸಮಂಜಸವಾಗುವ ಬೇಸಾಯ ಕ್ರಮಗಳಲ್ಲಿ ಸೂಕ್ತ ಹೊಂದಾಣಿಕೆ ಇವುಗಳ ಬಗ್ಗೆ ಒತ್ತು ಕೊಡಲಾಯಿತು.

ಕರ್ನಾಟಕ ರಾಜ್ಯದಲ್ಲಿ ಒಣ ಭೂಮಿಯ ಕೃಷಿ

ಮೇಲೆ ಸೂಚಿಸಿದ ೨೩ ಸಂಶೋಧನಾ ಕೇಂದ್ರಗಳಲ್ಲಿ ಎರಡು ಕೇಂದ್ರಗಳು ಕರ್ನಾಟಕದಲ್ಲಿವೆ. ವರ್ಟಿಸೋಲ್‌ಗಣಕ್ಕೆ ಸೇರಿದ ಮಣ್ಣಿನಲ್ಲಿ ಸಂಶೋಧನೆಯನ್ನು ಕೈಗೊಳ್ಳಲು ಒಂದು ಕೇಂದ್ರವನ್ನು ವಿಜಾಪುರದಲ್ಲಿಯೂ, ಆಲ್ಫಿಸೋಲ್‌ಗಣಕ್ಕೆ ಸೇರಿದ ಮಣ್ಣಿನಲ್ಲಿ ಸಂಶೋಧನೆಗಳನ್ನು ನಡೆಸಲು ಇನ್ನೊಂದು ಕೇಂದ್ರವನ್ನು ಬೆಂಗಳೂರಿನಲ್ಲಿಯೂ ಸ್ಥಾಪಿಸಲಾಗಿದೆ. ಇವೆರಡು ಕೇಂದ್ರಗಳಲ್ಲಿ ಕಳೆದ ಮೂರು ದಶಕಗಳಲ್ಲಿ ನಡೆಸಿದ ಸಂಶೋಧನೆಗಳಿಂದ ಹೊರಬಂದಿರುವ ಪ್ರಮುಖ ಸಂಗತಿಗಳ ಒಳನೋಟವು ಕೆಳನಂತಿದೆ.

ವಿಜಾಪುರ ಕೇಂದ್ರ: ರಾಯಚೂರು, ಬಳ್ಳಾರಿ, ವಿಜಾಪುರ ಜಿಲ್ಲೆಗಳು ಹಾಗೂ ಚಿತ್ರದುರ್ಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಪೂರ್ವಭಾಗ ಇವು ಈ ಕೇಂದ್ರದ ಪರಿಧಿಯಲ್ಲಿವೆ. ಈ ಪ್ರದೇಶವು ಉತ್ತರ ಆಕ್ಷಾಂಶ ೧೪ ಯಿಂದ ೧೭ ಯವರೆಗೆ ಮತ್ತು ಪೂರ್ವ ರೇಖಾಂಶ ೭೫ ಯಿಂದ ೭೭ ಯವರೆಗೆ ಹಬ್ಬಿದೆ. ಈ ಭಾಗದಲ್ಲಿಯ ಹವಾಮಾನ, ಮಣ್ಣು ಮತ್ತು ಬೆಳೆಗಳ ವಿವರಗಳನ್ನು ಈ ಮುಂದೆ ಕೊಡಲಾಗಿದೆ.

ಹವಾಮಾನ

i) ಮಳೆ: ಬಿಜಾಪುರ ಕೇಂದ್ರವು ಕರ್ನಾಟಕ ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಈ ಭಾಗದಲ್ಲಿಯ ವಿವಿಧ ಸ್ಥಳಗಳನ್ನು ಪರಿಗಣಿಸಿದರೆ ವಾರ್ಷಿಕ ಮಳೆಯ ಪ್ರಮಾಣವು ಸರಾಸರಿ ೪೬೦ರಿಂದ ೬೩೦ ಮಿ.ಮೀ.ನಷ್ಟಿದೆ. ಇಡೀ ಪ್ರದೇಶದ ಸರಾಸರಿ ಮಳೆಯು ವರ್ಷದಲ್ಲಿ ೫೭೪ ಮಿ.ಮೀ. ನಷ್ಟಾಗುತ್ತದೆ. ವರ್ಷದಲ್ಲಿ ಮಳೆ ಬೀಳುವ ಒಟ್ಟು ದಿನಗಳು ಸರಾಸರಿ ೩೦ ಮಾತ್ರ. ವಾರ್ಷಿಕ ಮಳೆಯು ಮಳೆಗಾಲದ ಪೂರ್ವದಲ್ಲಿ, ಮಳೆಗಾಲದಲ್ಲಿ ಮತ್ತು ಮಳೆಗಾಲದ ನಂತರ ಯಾವ ರೀತಿ ಹಂಚಿ ಬೀಳುತ್ತದೆಂಬುದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಕೋಷ್ಟಕ : ವಾರ್ಷಿಕ ಮಳೆಯ ಹಂಚಿಕೆ

ಕ್ರ. ಸಂ.

ಸಮಯ

ಹಂಗಾಮು

ಒಟ್ಟು ಮಳೆಯ ಶೇಕಡಾ

೧. ಏಪ್ರಿಲ್‌ ಮೇ ಮಳೆಗಾಲದ ಪೂರ್ವದಲ್ಲಿ ೧೩
೨. ಜೂನ್‌ ಸೆಪ್ಟೆಂಬರ್ ಮಳೆಗಾಲದಲ್ಲಿ ೬೨
೩. ಅಕ್ಟೋಬರ್ ನವೆಂಬರ್ ಮಳೆಗಾಲದ ನಂತರ ೨೨
೪. ಇತರ ಸಮಯದಲ್ಲಿ

ii) ಉಷ್ಣತಾಮಾನ: ಈ ಪ್ರದೇಶದ ವಾರ್ಷಿಕ ಗರಿಷ್ಠ ಸರಾಸರಿ ಉಷ್ಣತಾಮಾನವು ಡಿಸೆಂಬರ್‌ಜನವರಿ ತಿಂಗಳುಗಳಲ್ಲಿ ೨೯.೬ ಸೆ. ಇದ್ದರೆ, ಏಪ್ರಿಲ್‌ಮೇ ತಿಂಗಳುಗಳಲ್ಲಿ ೩೮.೫ ಸೆ.ಗೆ ಏರುತ್ತದೆ. ಅದರಂತೆಯೇ ಕನಿಷ್ಠ ಸರಾಸರಿ ಉಷ್ಣತಾಮಾನವು ಡಿಸೆಂಬರ್ ಜನವರಿ ಸಮಯದಲ್ಲಿ ೧೫ ಸೆ. ಇದ್ದದ್ದು, ಏಪ್ರಿಲ್‌ಮೇ ತಿಂಗಳುಗಲಲ್ಲಿ ೨೪ ಸೆ. ನಷ್ಟಾಗುತ್ತದೆ.

iii) ಸಾಪೇಕ್ಷ ಆರ್ದ್ರತೆ: ಫೆಬ್ರವರಿ-ಏಪ್ರಿಲ್‌ತಿಂಗಳ ಅವಧಿಯಲ್ಲಿ ಹವೆಯ ಸಾಪೇಕ್ಷ ಆರ್ದ್ರತೆಯು ಕೇವಲ ಶೇಕಡಾ ೩೫ ಇರುತ್ತದೆಯಾದರೆ ಜುಲೈ-ಸೆಪ್ಟೆಂಬರ್ ತಿಂಗಳ ಸಮಯದಲ್ಲಿ ಶೇಕಡಾ ೭೦ ತಲುಪುತ್ತದೆ.

iv) ಗಾಳಿಯ ವೇಗ: ಈ ಪ್ರದೇಶದಲ್ಲಿ ಗಾಳಿಯು ಬಹು ವೇಗದಿಂದ ಬೀಸುತ್ತದೆ. ಅಕ್ಟೋಬರ್-ಫೆಬ್ರವರಿ ತಿಂಗಳವರೆಗೆ ಗಾಳಿಯ ವೇಗವು ಪ್ರತಿ ಗಂಟೆಗೆ ೬-೭ ಕಿ.ಮೀ. ಇರುತ್ತದೆಯಾದರೂ ಮಾರ್ಚ್‌ತಿಂಗಳಿನಿಂದ ವೇಗವು ಹೆಚ್ಚುತ್ತಾ ಹೋಗಿ ಮೇ ತಿಂಗಳಿನಿಂದ ಆಗಸ್ಟ್‌ತಿಂಗಳವರೆಗೆ, ಪ್ರತಿ ಗಂಟೆಗೆ ೨೦ ಕಿ.ಮೀ. ವೇಗದಿಂದ ಬೀಸುತ್ತಿರುತ್ತದೆ.

v) ತೆರೆದ ಪಾತ್ರೆಯ ಆವಿ ಮಾಪಕದಿಂದ ಆವಿಯಾಗುವ ನೀರು: ವರ್ಷದ ವಿವಿಧ ಸಮಯಗಳಲ್ಲಿ, ಆವಿ ಮಾಪಕದಿಂದ ಆವಿಯಾಗಿ ಹೋಗುವ ನೀರಿನ ಪ್ರಮಾಣಗಳು ಕೆಳಗಿನಂತಿವೆ.

ವರ್ಷದ ಅವಧಿ ಪ್ರತಿದಿನ ಆವಿಯಾಗುವ ನೀರಿನ
ತಿಂಗಳು ಸರಾಸರಿ ಪ್ರಮಾಣ (ಮಿ.ಮೀ.)
ಜುಲೈ-ಅಕ್ಟೋಬರ್ ೬.೩ ರಿಂದ ೬.೮
ಡಿಸೆಂಬರ್ ೫.೨
ಏಪ್ರಿಲ್‌ಮೇ ೧೨.೫

ಬೆಳೆಗೆ ನೀರಿನ ಕೊರತೆ ಸಮಯ: ಮಳೆಯ ನೀರಿನಿಂದ ಮಣ್ಣಿನ ಆರ್ದ್ರತೆಯು ಅಧಿಕಗೊಳ್ಳುತ್ತದೆ. ಮಣ್ಣಿನಿಂದ ಆವಿಯ ಮತ್ತು ಸಸ್ಯಗಳಿಂದ ಬಾಷ್ಪದ ರೂಪಗಳಲ್ಲಿ ಆರ್ದ್ರತೆಯು ಕಡಿಮೆಯಾಗುತ್ತದೆ. ಮಳೆಯ ಪ್ರಮಾಣವು ಅಧಿಕವಾಗಿರುವ ತಿಂಗಳಲ್ಲಿ, ಮಣ್ಣಿನಲ್ಲಿ ಆರ್ದ್ರತೆಯು ಉಳಿದುಕೊಳ್ಳುತ್ತದೆ. ಆದರೆ ವ್ಯಯದ ಪ್ರಮಾಣವೇ ಮಳೆಯ ನೀರಿಗಿಂತ ಅಧಿಕವಾಯಿತೆಂದರೆ ನೀರಿನ ಕೊರತೆಯುಂಟಾಗುತ್ತದೆ. ಒಣಭೂಮಿಯ ಪ್ರದೇಶದಲ್ಲಿ ಸೆಪ್ಟೆಂಬರ್ ತಿಂಗಳೊಂದನ್ನು ಬಿಟ್ಟರೆ ಇತರ ೧೧ ತಿಂಗಳಲ್ಲಿಯೂ ನೀರಿನ ಕೊರತೆಯಾಗುತ್ತದೆ ಎಂಬುದನ್ನು ಕೆಳಗಿನ ವಿವರಗಳಿಂದ ತಿಳಿದುಬರುತ್ತದೆ.

ತಿಂಗಳು ಮಣ್ಣಿನಲ್ಲಿ ಆರ್ದ್ರತೆಯ ಕೊರತೆ (ಮಿ.ಮೀ.)
ಜೂನ್‌ ೮೬.೭
ಜುಲೈ ೫೭.೭
ಆಗಸ್ಟ್‌ ೫೧.೬
ಸೆಪ್ಟೆಂಬರ್ ಕೊರತೆ ಇಲ್ಲ
ಅಕ್ಟೋಬರ್ ೨೫.೭
ನವೆಂಬರ್ ಹೆಚ್ಚುತ್ತಾ ಸಾಗುತ್ತದೆ
ಡಿಸೆಂಬರ್ ಹೆಚ್ಚುತ್ತಾ ಸಾಗುತ್ತದೆ
ಜನವರಿ ೫೯.೧
ಫೆಬ್ರವರಿ ೭೭.೧