ಬೆಳೆ ಮತ್ತು ಬೆಳೆ ಪದ್ಧತಿಗಳು

) ಬೆಳೆಗಳು ಮತ್ತು ಬಿತ್ತುವ ಸಮಯ: ಮಣ್ಣಿನ ಗುಣ ಧರ್ಮಗಳು, ಮಳೆಯ ಆರಂಭದ ಸಮಯ, ಮಣ್ಣಿನಲ್ಲಿ ಸಂಗ್ರಹಗೊಂಡ ಆರ್ದ್ರತೆಯ ಪ್ರಮಾಣ ಇತ್ಯಾದಿಗಳನ್ನು ಪರಿಗಣಿಸಿ, ಬಿತ್ತಬೇಕೆಂದಿರುವ ಬೆಳೆಗಳು, ಅವುಗಳ ತಳಿ ಮತ್ತು ಬಿತ್ತುವ ಸಮಯ ಇತ್ಯಾದಿಗಳನ್ನು ನಿರ್ಧರಿಸಬೇಕು. ಕೋಷ್ಟಕ ೩ರಲ್ಲಿ ಇದರ ಬಗ್ಗೆ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ : ಮಣ್ಣಿನ ಗುಣಧರ್ಮಗಳನ್ನು ಮತ್ತು ಬಿತ್ತುವ ಹಂಗಾಮುಗಳಿಗೆ ಅನುಗುಣವಾದ ಬೆಳೆಗಳು.

ಬಿತ್ತುವ ತಿಂಗಳು ಕಡಿಮೆ ಆಳದ ಕಪ್ಪು ಮಣ್ಣು ಮಧ್ಯಮ ಆಳದ ಮಣ್ಣು ಆಳವಾದ ಮಣ್ಣು
ಜೂನ್ ಮಿಶ್ರತಳಿ ಸಜ್ಜೆ ತೊಗರಿ ಹಬ್ಬು ಸೇಂಗಾ ಜೋಳ, ಮಿಶ್ರಗಳಿ ಸಜ್ಜೆ, ಸೇಂಗಾ, ತೊಗರಿ, ಹೆಸರು ಉದ್ದು  
ಜುಲೈ ಮಿಶ್ರತಳಿ ಸಜ್ಜೆ, ತೊಗರಿ ಸೇಂಗಾ (ಜುಲೈ ತಿಂಗಳ ಮಧ್ಯದವರೆಗೆ, ಸೂಯ್ಯಕಾಂತಿ, ನವಣೆ ಎಳ್ಳು, ಗೂರೆಳ್ಳು, ಔಡಲ ಮಿಶ್ರತಳಿ ಸಜ್ಜೆ, ಹಬ್ಬು ಸೇಂಗಾ ಮತ್ತು ತೊಗರಿ (ಜುಲೈ ತಿಂಗಳ ಮಧ್ಯದವರೆಗೆ), ಸೂರ್ಯಕಾಂತಿ  
ಆಗಸ್ಟ್ ಸೂರ್ಯಕಾಂತಿ, ಔಡಲ, ಗೂರೆಳ್ಳು, ಹುರುಳಿ, ಎಳ್ಳು ಹತ್ತಿ, ಸೂರ್ಯಕಾಂತಿ ಹತ್ತಿ, ಸೂರ್ಯಕಾಂತಿ
ಸೆಪ್ಟೆಂಬರ್ ಸೂಯ್ಯಕಾಂತಿ ಸೂರ್ಯಕಾಂತಿ (ಸೆಪ್ಟೆಂಬರ್ ತಿಂಗಳ ಮಧ್ಯದವರೆಗೆ), ಕುಸುಬೆ, ಹಿಂಗಾರಿ ಜೋಳ  
  ಸೂರ್ಯಕಾಂತಿ (ಸೆಪ್ಟೆಂಬರ್ ತಿಂಗಳ ಮಧ್ಯದವರೆಗೆ), ಕುಸುಬೆ, ಹಿಂಗಾರಿ ಜೋಳ    
ಅಕ್ಟೋಬರ್   ಹಿಂಗಾರಿ ಜೋಳ ಹಿಂಗಾರಿ ಜೋಳ ಮತ್ತು ಕುಸುಬೆ (ಅಕ್ಟೋಬರ್ ತಿಂಗಳ ಮಧ್ಯದವರೆಗೆ), ಗೋಧಿ, ಕಡಲೆ.

) ಬೆಳೆಗಳ ಬೇಸಾಯಕ್ಕೆ ಕೆಲವು ಉಪಯುಕ್ತ ಸಲಹೆಗಳು

 •  ಹಿಂಗಾರಿ ಜೋಳವನ್ನು ಸೆಪ್ಟೆಂಬರ್ ತಿಂಗಳ ಕೊನೆ ಇಲ್ಲವೇ ಅಕ್ಟೋಬರ್ ತಿಂಗಳಿನಲ್ಲಿ ಬಿತ್ತುವುದು ವಾಡಿಕೆ. ಬಿತ್ತುವ ಕಾರ್ಯವನ್ನು ಈಗಿನ ಸಮಯಕ್ಕಿಂತ ೨-೩ ವಾರಗಳ ಮೊದಲೆ ಮುಗಿಸಿದರೆ ಈ ಬೆಳೆಯ ಇಳುವರಿಯು ಅಧಿಕಗೊಳ್ಳುತ್ತದೆ.
 • ಸೂಕ್ತ ಸಂಖ್ಯೆಯಲ್ಲಿ ಸಸಿಗಳು ಇರುವಂತೆ ನೋಡಿಕೊಂಡು ಹೆಚ್ಚು ಅಂತರದ ಸಾಲುಗಳಲ್ಲಿ ಬೆಳೆಗಳನ್ನು ಬಿತ್ತುವುದು ಪ್ರಶಸ್ತ. ಮಣ್ಣಿನಲ್ಲಿ ಸಂಗ್ರಹಗೊಂಡ ಆರ್ದ್ರತೆಯ ಆಧಾರದ ಮೇಲೆ ಬೆಳೆಯುವ ಬೆಳೆಗಳಿಗೆ ಈ ನಿಯಮವು ಹೆಚ್ಚು ಅನ್ವಯವಾಗುತ್ತದೆ.
 • ಮೇಲಿಂದ ಮೇಲೆ ಮಧ್ಯಂತರ ಬೇಸಾಯವನ್ನು ಮಾಡಬೇಕು.
 • ಆಳವಾದ ಕಪ್ಪು ಮಣ್ಣಿನಲ್ಲಿ ಹಿಂಗಾರಿ ಜೋಳ, ಕುಸುಬೆ ಅಥವಾ ಗೋಧಿ ಬೆಳೆಯೊಂದಿಗೆ ಕಡಲೆ ಬೆಳೆಯ ಪರಿವರ್ತನೆಯನ್ನು ಮಾಡಬಹುದು.
 • ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ ಹಿಂಗಾರಿ ಜೋಳವನ್ನು ಕುಸುವೆಯೊಡನೆ ಪರಿವರ್ತನೆ ಬೆಳೆಯನ್ನಾಗಿ ಬೆಳೆಯಬಹುದು ಅಥವಾ ಒಂದು ಸಾಲು ಕುಸುಬೆ ಮತ್ತು ೩ ಸಾಲು ಕಡಲೆ ಮಿಶ್ರ ಬೆಳೆಯ ಪದ್ಧತಿಯನ್ನು ಅನುಸರಿಸಬೇಕು.

) ಅಂತರ ಬೆಳೆ ಪದ್ಧತಿಗಳು: ಈ ಭಾಗಕ್ಕೆ ಸೂಕ್ತವೆಂದು ಕಂಡು ಬಂದ ಕೆಲವು ಪದ್ಧತಿಗಳನ್ನು ಕೋಷ್ಟಕ ೪ರಲ್ಲಿ ಕೊಡಲಾಗಿದೆ.

ಕೋಷ್ಟಕ : ವಿಜಾಪುರ ವಿಭಾಗಕ್ಕೆ ಯೋಗ್ಯವೆನಿಸುವ ಕೆಲವು ಪ್ರಮುಖ ಅಂತರ ಬೆಳೆ ಪದ್ಧತಿಗಳು

ಅ.ಸ. ಅಂತರಬೆಳೆ ಪದ್ಧತಿಗಳು ಸಾಲುಗಳ ಪ್ರಮಾಣ
೧. ಮಿಶ್ರತಳಿ ಸಜ್ಜೆ + ತೊಗರಿ ೨ : ೧
೨. ಮಿಶ್ರತಳಿ ಸಜ್ಜೆ + ಗೆಜ್ಜೆ ಸೇಂಗಾ ೨ : ೪
೩. ಗೆಜ್ಜೆ ಸೇಂಗಾ + ತೊಗರಿ ೩ : ೪
೪. ಮುಂಗಾರಿ ಜೋಳ + ತೊಗರಿ ೨ : ೧
೫. ಕುಸುಬೆ + ಕಡಲೆ ೧ : ೩ ಅಥವಾ ೨ : ೪
೬. ಕುಸುಬೆ + ಹವೀಜ ೧ : ೩ ಅಥವಾ ೨ : ೪
೭. ಹಿಂಗಾರಿ ಜೋಳ + ಕಡಲೆ ೨ : ೧

ಒಂದೇ ಬೆಳೆಯನ್ನು ಬೆಳೆಯುವುದಕ್ಕಿಂತ ಸೂಕ್ತವಾದ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಮುಂದಿನಂತೆ ಲಾಭಗಳಿವೆ:

 • ಅಂತರ ಬೆಳೆಯ ಪದ್ಧತಿಯಲ್ಲಿರುವ ಎಲ್ಲ ಬೆಳೆಗಳು ಯಾವುದೇ ಹಂಗಾಮಿನಲ್ಲಿ ನಷ್ಟಕ್ಕೊಳಗಾಗುವ ಸಂಭವವು ಅತಿ ಕಡಿಮೆ. ಒಂದು ಬೆಳೆಯು ನಷ್ಟವಾದರೆ ಇನ್ನೊಂದು ಬೆಳೆಯಿಂದ ಸ್ವಲ್ಪವಾದರೂ ಆದಾಯ ದೊರೆಯುವ ಸಾಧ್ಯತೆಯೇ ಹೆಚ್ಚು.
 • ಒಂದೊಮ್ಮೆ ಈ ಪದ್ಧತಿಯಲ್ಲಿರುವ ಎಲ್ಲ ಬೆಳೆಗಳೂ ಸರಿಯಾಗಿ ಬೆಳೆದರೆ ಆದಾಯವು ಅಧಿಕಗೊಳ್ಳುತ್ತದೆ.

ಹವಾಮಾನಾದ ವೈಪರೀತ್ಯವನ್ನು ಎದುರಿಸಲು ಸಹಾಯಕವಾಗಬಲ್ಲ ಕೆಲವು ಸಲಹೆಗಳು

ಈ ಭಾಗದಲ್ಲಿಯ ಮಳೆಯು ಅನಿಶ್ಚತತೆಯಿಂದ ಕೂಡಿದೆ. ಮಳೆಯು ನಿರೀಕ್ಷಿತ ಸಮಯಕ್ಕೆ ಆರಂಭವಾಗಲಿಕ್ಕಿಲ್ಲ. ಒಂದೊಮ್ಮೆ ಆರಂಭವಾದರೂ ಮಧ್ಯದಲ್ಲಿ ಹಲವು ದಿನಗಳವರೆಗೆ ಮಳೆಯು ಬಾರದೇ ಇರಬಹುದು. ಕೆಲವು ಬಾರಿ ನಿರೀಕ್ಷೆಗಿಂತ ಹೆಚ್ಚು ದಿನಗಳವರೆಗೆ ಮಳೆಗಾಲವು ಮುಂದುವರೆಯಬಹುದು. ಈ ಬಗೆಯ ಸಾಧ್ಯಾಸಾಧ್ಯತೆ ಗಳಿರುವುದರಿಂದ ಯಾವುದೇ ಹಂಗಾಮಿನಲ್ಲಿ ಎದುರಾಗುವ ಹವಾಮಾನಕ್ಕನುಗುಣವಾಗಿ ಕೃಷಿ ಪದ್ಧತಿಗಳ ಬದಲಾವಣೆಗಳನ್ನು ಮಾಡಿಕೊಂಡು ಸಾಧ್ಯವಾದಷ್ಟೂ ಅಧಿಕ ಇಳುವರಿಯನ್ನು ಪಡೆಯುವುದರಲ್ಲಿಯೇ ಕೃಷಿಕನ ಜಾಣ್ಮೆಯಡಗಿದೆ. ಹವಾಮಾನಕ್ಕನುಗುಣವಾಗಿ ಕೃಷಿ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಕೆಳಗಿನ ಸಲಹೆಗಳು ಪ್ರಯೋಜನಕಾರಿಗಬಲ್ಲವು.

i) ಮುಂಗಾರಿ ಬೆಳೆಗಳಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ಮಳೆಯು ಆರಂಭವಾದರೆ.

 • ಹಗುರ ಮಣ್ಣಿನಲ್ಲಿ: ಕೆಳಗಿನ ಬೆಳೆಗಳನ್ನು ಜೂನ್‌ತಿಂಗಳಿನಲ್ಲಿ ಬಿತ್ತಬಹುದು. ಗೆಜ್ಜೆ ಸೇಂಗಾ, ಹಬ್ಬು ಸೇಂಗಾ, ಸಜ್ಜೆ, ತೊಗರಿ, ಮುಂಗಾರಿ ಜೋಳ, ನವಣೆ, ಮಿಶ್ರತಳಿ ಜೋಳ, ಇವಲ್ಲದೇ ಕೆಳಗೆ ಹೇಳಿದ ಅಂತರ ಬೆಳೆಗಳನ್ನೂ ಬಿತ್ತಬಹುದು. ಮುಂಗಾರಿ ಜೋಳ+ತೊಗರಿ (೨:೧), ಸೇಂಗಾ +ತೊಗರಿ (೩ :೧), ನವಣೆ +ತೊಗರಿ (೨:೧), ಸಜ್ಜೆ +ತೊಗರಿ (೨:೧).
 • ಹಿಂಗಾರಿ ಬೆಳೆ ಪ್ರದೇಶದ ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ: ಮುಂಗಾರಿ ಹಂಗಾಮಿನಲ್ಲಿ, ಹೆಸರು ಅಥವಾ ಉದ್ದನ್ನು ಮೊದಲು ಬೆಳೆಯಾಗಿ ಬೆಳೆದು ಹಿಂಗಾರಿನಲ್ಲಿ ಕುಸುಬೆ, ಹಿಂಗಾರಿ ಜೋಳ, ಕಡಲೆ ಇಲ್ಲವೇ ಗೋಧಿಯನ್ನು ಬಿತ್ತಬಹುದು.
 •  ಆಳವಾದ ಕಪ್ಪು ಮಣ್ಣಿನಲ್ಲಿ: ಮುಂಗಾರಿ ಹಂಗಾಮಿನಲ್ಲಿ ಯಾವುದೇ ಬೆಳೆಯನ್ನು ಬಿತ್ತದೆ, ಭೂ ಪ್ರದೇಶವನ್ನು ಹಿಂಗಾರಿ ಬೆಳೆಗೆಂದೇ ಮೀಸಲಿಡುವುದಾದರೆ ಅತ್ಯಧಿಕ ನೀರು ಮಣ್ಣಿನಲ್ಲಿಯೇ ಇಂಗಲು ಆಸ್ಪದವುಂಟಾಗಲು ಚೌಕು ಮಡಿಗಳನ್ನಾಗಲೀ, ತಟ್ಟೆಯಾಕಾರದ ಗುಣಿಗಳನ್ನಾಗಲೀ ಅಥವಾ ಬೋದು ಕಾಲುವೆಗಳನ್ನಾಗಲೀ ನಿರ್ಮಿಸಬೇಕು. ಭೂಮಿಯಲ್ಲಿ ಕಳೆಗಳು ಬೆಳೆಯದಂತೆ ಮಾಡಲು ಆಗಾಗ ಕುಂಟೆಯನ್ನು ಹಾಯಿಸುತ್ತಿರಬೇಕು.

ii) ಮುಂಗಾರು ಮಳೆಯ ಸಕಾಲದಲ್ಲಿ ಆರಂಭವಾಗಿ, ಬೀಜಗಳು ಮೊಳಕೆ ಬಂದ ಕೆಲದಿನಗಳ ನಂತರ ಮಳೆ ಬಾರದಿದ್ದರೆ.

 • ಸಾಧ್ಯವಿದ್ದಲ್ಲಿ ಬೆಳೆಗೆ ತೆಳುವಾಗಿ ನೀರನ್ನು ಪೂರೈಸಬೇಕು.
 • ಸಜ್ಜೆ ಅಥವಾ ಜೋಳವಾದರೆ ಮಳೆ ಬಂದ ನಂತರ ಕೂಳೆಯೆಂದು ಬೆಳೆಯಲು ಬಿಡಬಹುದು.
 • ಪುನಃ ಮಳೆಯು ಬಂದೊಡನೆ ಯೂರಿಯಾ ಗೊಬ್ಬರವನ್ನು ನೀರಿನಲ್ಲಿ ಕರಗಿಸಿ ತಯಾರಿಸಿದ ದ್ರಾವಣವನ್ನು (ಶೇಕಡಾ ೨ರ ದ್ರಾವಣವನ್ನು) ಸೇಂಗಾದಂತಹ ಬೆಳೆಯ ಮೇಲೆ ಸಿಂಪಡಿಸಿದರೆ, ಬೆಳೆಯು ಬೇಗನೆ ಚೇತರಿಸಿಕೊಳ್ಳುತ್ತದೆ.
 • ಒಮ್ಮೆ ಬಿತ್ತಿದ ಬೆಳೆ ಸಂಪೂರ್ಣವಾಗಿ ಒಣಗಿದರೆ ಮಳೆಯು ಪುನಃ ಬಂದನಂತರ ನವಣೆ, ಅವರೆ, ಹುರುಳಿ, ಮಟಕಿ, ಅಲಸಂದೆ ಅಥವಾ ಸೂರ್ಯಕಾಂತಿ ಬೆಳೆಯನ್ನು ಬಿತ್ತಬೇಕು.

iii) ಜೂನ್‌ತಿಂಗಳಿನಲ್ಲಿ ಮಳೆ ಬಾರದೇ ಜುಲೈ ತಿಂಗಳಿನಲ್ಲಿ ಮಳೆ ಬಂದರೆ

 • ಮುಂಗಾರಿ ಬೆಳೆಗಳ ಪ್ರದೇಶದಲ್ಲಿ ಹಬ್ಬು ಸೇಂಗಾ, ಸೂರ್ಯಕಾಂತಿ ಇಲ್ಲವೇ ನವಣೆಯನ್ನು ಬಿತ್ತಬೇಕು.
 • ಹಗುರುಮಣ್ಣಿನಲ್ಲಿ ತೊಗರಿ, ಎಳ್ಳು, ಆಲಸಂದೆ ಇಲ್ಲವೆ ಹುರಳಿಯನ್ನು ಬಿತ್ತಬೇಕು.
 • ಹಿಂಗಾರು ಬೆಳೆಯ ಪ್ರದೇಶದಲ್ಲಿ, ಹೆಸರು ಅಥವಾ ಉದ್ದು ಇತ್ಯಾದಿ ಬೆಳೆಗಳನ್ನು ಮುಂಗಾರಿನಲ್ಲಿ ಬಿತ್ತಿದರೆ ಹಿಂಗಾರು ಬೆಳೆಗಳನ್ನು ಸಕಾಲದಲ್ಲಿ ಬಿತ್ತಲು ಸಾಧ್ಯವಾಗುವುದಿಲ್ಲ. ಇಂತಹ ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಯಾವುದೇ ಬೆಳೆಯನ್ನು ಬಿತ್ತದೆ ಮೇಲಿಂದ ಮೇಲೆ ಕುಂಟೆಯನ್ನಾಡಿಸಿ ಕಳೆಗಳು ಬೆಳೆಯದಂತೆ ನೋಡಿಕೊಳ್ಳಬೇಕು.
 • ಜುಲೈ ತಿಂಗಳ ಕೊನೆಯೊಳಗೆ ಹತ್ತಿಯನ್ನು ಬಿತ್ತಬೇಕು.

iv) ಆಗಸ್ಟ್‌ತಿಂಗಳಿನಲ್ಲಿ ಎಂದಿನಂತೆ ಮಳೆಯು ಬಂದರೆ-

 • ದತ್ತಿಯ ಬಿತ್ತನೆಯನ್ನು ಮುಗಿಸಬೇಕು. ಹಿರ್ಸುಟಂ (Hirsutum) ಗುಂಪಿನ  ಹತ್ತಿಯ ಬದಲು ಹರ್ಬೇಸಿಯಂ (Herbacium) ಗುಂಪಿನ ಹತ್ತಿಯನ್ನು ಬಿತ್ತಬೇಕು.
 • ಹಗುರ ಮಣ್ಣಿನಲ್ಲಿ ಸೂರ್ಯಕಾಂತಿ, ಎಳ್ಳು, ತೊಗರಿ, ನವಣೆ ಮತ್ತು ಹುರುಳಿ ಬೆಳೆಗಳನ್ನು ಬಿತ್ತಿ ಮುಗಿಸಬೇಕು.
 • ಬದುವಿನ ಮೇಲೆ ಔಡಲದ ಬೀಜಗಳನ್ನು ಬಿತ್ತಬೇಕು.
 • ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ ಸೇಂಗಾ ಬೆಳೆಯನ್ನು ಕೀಳುವುದಕ್ಕಿಂತ ಕೆಲವು ದಿನಗಳ ಮೊದಲೇ ಹತ್ತಿಯ ಬೀಜಗಳನ್ನು ಸಾಲಿನ ಮಧ್ಯದಲ್ಲಿ ಬಿತ್ತಬೇಕು.

v) ಸೆಪ್ಟೆಂಬರ್ ತಿಂಗಳಿನಲ್ಲಿ ಎಂದಿನಂತೆ ಮಳೆ ಬಂದರೆ-

 • ವಿಜಾಪುರ ಜಿಲ್ಲೆಯ ಉತ್ತರ ಭಾಗದ ತಾಲೂಕುಗಳಲ್ಲಿ, ಹಿಂಗಾರು ಜೋಳವನ್ನು ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ ಸೆಪ್ಟೆಂಬರ್ ತಿಂಗಳ ಮಧ್ಯದೊಳಗೆ ಬಿತ್ತಿ ಮುಗಿಸಬೇಕು.
 • ಬಾಗಲಕೋಟೆ, ಹುನಗುಂದ, ಬೀಳಗಿ, ಮುಧೋಳ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಹಿಂಗಾರಿ ಜೋಳದ ಬಿತ್ತನೆಯನ್ನು ಅಕ್ಟೋಬರ್ ತಿಂಗಳ ಮೊದಲವಾರದಲ್ಲಿ ಮುಗಿಸಬೇಕು.
 • ಇತರ ಪ್ರದೇಶಗಳಲ್ಲಿ ಬಿತ್ತನೆ ರೂಢಿಯಲ್ಲಿರುವ ಸಮಯಕ್ಕಿಂತ ೨-೩ ವಾರಗಳ ಮೊದಲು ಬಿತ್ತುವುದು ಅಧಿಕ ಇಳುವರಿಯನ್ನು ಪಡೆಯುವ ದೃಷ್ಟಿಯಿಂದ ಪ್ರಶಸ್ತ.
 • ಸೂರ್ಯಕಾಂತಿ ಬೀಜಗಳನ್ನು ಸೆಪ್ಟೆಂಬರ್ ತಿಂಗಳ ಮೂರನೆಯ ವಾರದವರೆಗೆ ಬಿತ್ತಬಹುದು.
 • ಕುಸುಬೆಯನ್ನು ಸೆಪ್ಟೆಂಬರ್ ತಿಂಗಳ ಕೊನೆಯೊಳಗೆ ಬಿತ್ತಿ ಮುಗಿಸಬೇಕು.

vi) ಅಕ್ಟೋಬರ್ ತಿಂಗಳಿನಲ್ಲಿ ಬಿತ್ತನೆ

 • ಹಿಂಗಾರಿ ಜೋಳವನ್ನು ಬಿತ್ತುವ ಕಾರ್ಯವನ್ನು ಅಕ್ಟೋಬರ್ ತಿಂಗಳ ೧೫ರ ವರೆಗೂ ಮುಂದುವರಿಸಬಹುದು. ಬೆಳೆಗೆ ಪೂರೈಸಬೇಕೆಂದಿರುವ ರಾಸಾಯನಿಕ ಗೊಬ್ಬರಗಳ ಅರ್ಧದಷ್ಟನ್ನು ಬಿತ್ತುವಾಗ ಪೂರೈಸಬೇಕು.
 • ವಿಜಾಪುರ ಪ್ರದೇಶದಲ್ಲಿ, ಹಿಂಗಾರಿಜೋಳ ಮತ್ತು ಕಡಲೆಗಳನ್ನು ೨:೧ ಪ್ರಮಾಣದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು.
 • ಕುಸುಬೆ ಮತ್ತು ಕಡಲೆಗಳನ್ನೂ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಮೂರು ಸಾಲು ಕಡಲೆ ಮತ್ತು ೧ ಸಾಲು ಕುಸುಬೆ ಮಿಶ್ರ ಬೆಳೆಯಿಂದ ಅಧಿಕ ಆದಾಯವನ್ನು ಪಡೆಯಬಹುದು. ಕುಸುಬೆ ಬೆಳೆಯ ಪ್ರದೇಶವನ್ನು ಹೆಚ್ಚಿಸುವುದು ಮೇಲು.
 • ಆರ್ದ್ರತೆಯ ಸಂಗ್ರಹವು ಸಾಕಷ್ಟಿರುವ ಮಣ್ಣಿನಲ್ಲಿ ಗೋಧಿಯನ್ನು ಅಕ್ಟೋಬರ್ ತಿಂಗಳ ಕೊನೆಯವರೆಗೂ ಬಿತ್ತಬಹುದು.
 • ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ ಇದ್ದರೆ ಹಿಂಗಾರಿ ಜೋಳಕ್ಕೆ ಹೆಕ್ಟೇರಿಗೆ ೧೫ ರಿಮದ ೨೦ ಕಿ.ಗ್ರಾಂ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು.

vii) ಮಳೆಗಾಲವು ಬೇಗನೆ ಕೊನೆಗೊಂಡರೆ

 • ಹಿಂಗಾರಿ ಜೋಳವನ್ನು ಬಿತ್ತಿ ೪೦ರಿಂದ ೪೫ ದಿನಗಳಾಗುವುದರೊಳಗೆ ಪ್ರತಿ ಮೂರನೆಯ ಅಥವಾ ಎರಡನೆಯ ಸಾಲನ್ನು ಕೀಳಬೇಕು.
 • ಹಿಂಗಾರಿ ಜೋಳ ಮತ್ತು ಕುಸುಬೆಯ ಮಿಶ್ರ ಬೆಳೆಯಾಗಿದ್ದಲ್ಲಿ ಕುಸುಬೆಯನ್ನು ಇರಗೊಟ್ಟು ಜೋಳವನ್ನು ಕೀಳಬೇಕು.
 • ಮಣ್ಣಿನಲ್ಲಿ ಕಾಣಿಸಿಕೊಳ್ಳುವ ಬಿರುಕುಗಳನ್ನು ಮುಚ್ಚಲು ಮೇಲಿಂದ ಮೇಲೆ ಅಂತರ ಬೇಸಾಯವನ್ನು ಮಾಡುತ್ತಿರಬೇಕು.
 • ಕೃಷಿ ಹೊಂಡದಲ್ಲಿ ನೀರು ಸಂಗ್ರಹವಾಗಿದ್ದರೆ ಬೆಳೆಗೆ ನೀರನ್ನು ಪೂರೈಸಬೇಕು. ಈ ರೀತಿ ಒಂದು ಅಥವಾ ಎರಡು ಬಾರಿ ನೀರನ್ನು ಒದಗಿಸಿದರೆ ಹಿಂಗಾರಿ ಜೋಳ, ಕುಸುಬೆ ಮತ್ತು ಕಡಲೆಗಳ ಇಳುವಿಯು ಶೇಕಡಾ ೫೦ರಿಂದ ೬೦ರಷ್ಟು ಅಧಿಕಗೊಳ್ಳುತ್ತದೆ ಎಂದು ಕಂಡು ಬಂದಿದೆ.
 • ಸಾಧ್ಯವಿರುವಲ್ಲಿ ಕೂಳೆ, ರವದಿ ಇತ್ಯಾದಿ ಸಾವಯವ ವಸ್ತುಗಳನ್ನು ಮಣ್ಣಿನ ಮೇಲ್ಭಾಗದಲ್ಲಿ ಹರಡಬೇಕು. ಸಾಯವಯ ವಸ್ತುಗಳು ದೊರೆಯದಿದ್ದಲ್ಲಿ ಎಡೆಕುಂಟೆಯ ಸಹಾಯದಿಂದ ಸಡಿಲ ಮಣ್ಣಿನ ಆಚ್ಛಾದನೆಯನ್ನು ನಿರ್ಮಿಸಬೇಕು.

ಮಣ್ಣಿನ ಫಲವತ್ತತೆಯ ನಿರ್ವಹಣೆ: ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ಮತ್ತು ಸಾಧ್ಯವಿದ್ದಲ್ಲೆಲ್ಲ ಅದನ್ನು ಉತ್ತಮಗೊಳಿಸಲು ಕೆಳಗಿನ ಕ್ರಮಗಳು ಪ್ರಯೋಜನಕಾರಿ ಎನ್ನಬಹುದು.

i) ಲಭ್ಯವಿರುವ ಸಾವಯವ ಗೊಬ್ಬರವನ್ನು ಮಣ್ಣಿಗೆ ಪೂರೈಸಬೇಕು. ಇದರಿಂದ, ಮಣ್ಣಿಗೆ ಪೋಷಕಗಳ ಪೂರೈಕೆಯಾಗುವುದಲ್ಲದೇ, ಮಣ್ಣಿನ ರಚನೆಯು ಉತ್ತಮಗೊಳ್ಳುತ್ತದೆ ಮತ್ತು ಜಲಧಾರಣಾ ಶಕ್ತಿಯೂ ಅಧಿಕಗೊಳ್ಳುತ್ತದೆ.

ii) ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಬೆಳೆಗಳ ಇಳುವರಿಯು ಅಧಿಕಗೊಂಡು ನೀರಿನ ಸಮರ್ಥ ಬಳಕೆಯಾಗುತ್ತದೆ. ಈ ಭಾಗದ ಮಣ್ಣಿನಲ್ಲಿ ರಂಜಕದ ಕೊರತೆಯಿರುವುದರಿಂದ ಈ ಪೋಷಕವನ್ನು ಪೂರೈಸುವುದರಿಂದ ಬೆಳೆಯ ಇಳುವಿಯು ಗಣನೀಯವಾಗಿ ಏರುತ್ತದೆ.

iii) ರಾಸಾಯನಿಕ ಗೊಬ್ಬರಗಳನ್ನು ೧೦ ಸೆಂ.ಮೀ. ಆಳದಲ್ಲಿ ಹಾಕುವುದರಿಂದ ಬೆಳೆಗೆ ಹೆಚ್ಚು ಪ್ರಯೋಜನವಾಗುತ್ತದೆಂದು ಕಂಡು ಬಂದಿದೆ. ರಾಸಾಯನಿಕ ಗೊಬ್ಬರಗಳನ್ನು ಹಿಂಗಾರಿ ಬೆಳೆಗಳಿಗೂ ಆಳಕ್ಕೆ ಪೂರೈಸುವುದು ಪ್ರಯೋಜನಕಾರಿ ಎಂದು ಹೇಳಬಹುದು. ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತಬಲ್ಲ ಕೂರಿಗೆಯನ್ನು ಬಳಸುವುದು ಉತ್ತಮ.

iv) ಹಿಂಗಾರಿ ಬೆಳೆಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸುವಾಗ, ಬಿತ್ತುವ ಸಮಯದಲ್ಲಿ ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾನವನ್ನು ಪರಿಗಣಿಸಬೇಕು.

v) ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳನ್ನು ಬಿತ್ತನೆಗೆ ಮೊದಲು, ಸೂಕ್ತ ರೈಝೋಬಿಯಂ ಜೈವಿಕ ಗೊಬ್ಬರವನ್ನು ಬೀಜಗಳಿಗೆ ಲೇಪಿಸಬೇಕು.

ಬೆಂಗಳೂರು ಕೇಂದ್ರ: ಬೆಂಗಳೂರು ಕೇಂದ್ರದ ವ್ಯಾಪ್ತಿಯಲ್ಲಿ ಕೋಲಾರ, ಬೆಂಗಳೂರು, ತುಮಕೂರು, ಮೈಸೂರು ಜಿಲ್ಲೆಗಳಲ್ಲದೆ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಪೂರ್ವ ಭಾಗವು ಒಳಗೊಂಡಿದೆ. ಈ ಪ್ರದೇಶವು ೧೧-೩೦” ಗಳಿಂದ ೧೪-೧೫” ಉತ್ತರ ಅಕ್ಷಾಂಶ ಹಾಗೂ ೭೫-೪೮” ಗಳಿಂದ ೭೮-೧೫” ಪೂರ್ವ ರೇಖಾಂಶ ಇವುಗಳ ಮಧ್ಯದಲ್ಲಿದೆ.

ಹವಾಮಾನ

i) ಮಳೆ: ಈ ಪ್ರದೇಶದ ವಾರ್ಷಿಕ ಸರಾಸರಿ ಮಳೆಯು ೬೦೦ ಮಿ.ಮೀ. ನಿಂದ ೮೦೦ ಮಿ.ಮೀ.ನಷ್ಟಿದೆ. ಮಳೆಯ ಅವಧಿಯು ೬ರಿಂದ ೭ ತಿಂಗಳುಗಳು. ಮಳೆಯ ನೀರಿನ ಹಂಚಿಕೆಯು ಕೆಳಗಿನಂತಿದೆ.

ಅವಧಿ

ಮಳೆಯ ಪ್ರಮಾಣ (ಮಿ.ಮೀ)

೧. ಏಪ್ರಿಲ್ ಮೇ ತಿಂಗಳಿನಲ್ಲಿ ೧೫೦
೨. ಜೂನ್‌ನಿಂದ ಆಗಸ್ಟ್‌ತಿಂಗಳವರೆಗೆ ೨೮೦
೩. ಸೆಪ್ಟೆಂಬರ್‌ನಿಂದ ಅಕ್ಟೋಬರ್‌ತಿಂಗಳವರೆಗೆ ೩೫೦
  ಒಟ್ಟು ಮಿ.ಮೀ. ೭೮೦

ಮೇ ತಿಂಗಳಿನಲ್ಲಿ ಸುಮಾರು ೧೦೦ ಮಿ.ಮೀ. ಮಳೆಯು ಆಗುತ್ತಿರುವುದು ಈ ಪ್ರದೇಶದ ಒಂದು ವೈಶಿಷ್ಟ್ಯ.

ii) ಉಷ್ಣತಾಮಾನ: ಈ ಪ್ರದೇಶದ ಉಷ್ಣತಾಮಾನದ ವಿವರಗಳು ಕೆಳಗಿನಂತಿವೆ.

 • ವಾರ್ಷಿಕ ಸರಾಸರಿ ಗರಿಷ್ಠ ಉಷ್ಣತಾಮಾನ ೨೯.೬ ಸೆ.
 • ವಾರ್ಷಿಕ ಸರಾಸರಿ ಕನಿಷ್ಠ ಉಷ್ಣತಾಮಾನ ೧೭.೬ ಸೆ.
 • ಮಾಸಿಕ ಸರಾಸರಿ ಗರಿಷ್ಠ ಉಷ್ಣತಾಮಾನ

ಅತಿ ಹೆಚ್ಚು        ೩೩-೩೪ ಸೆ.ಮಾರ್ಚ್‌ಏಪ್ರಿಲ್‌ತಿಂಗಳ ಅವಧಿಯಲ್ಲಿ

ಅತಿ ಕಡಿಮೆ       ೨೬ ಸೆ. ನವೆಂಬರ್ ಡಿಸೆಂಬರ್ ತಿಂಗಳು ಅವಧಿಯಲ್ಲಿ

 • ಮಾಸಿಕ ಸರಾಸರಿ ಕನಿಷ್ಠ ಉಷ್ಣತಾಮಾನ

ಅತಿ ಹೆಚ್ಚು        ೨೦-೨ ಸೆ. ಏಪ್ರಿಲ್‌ಮೇ ತಿಂಗಳುಗಳಲ್ಲಿ

ಅತಿ ಕಡಿಮೆ       ೧೩.೮-೧೪.೯ ಸೆ. ಡಿಸೆಂಬರ್ ಜನವರಿ ತಿಂಗಳುಗಳಲ್ಲಿ.

iii) ಸಾಪೇಕ್ಷ ಆರ್ದ್ರತೆ: ಅತಿ ಕಡಿಮೆ ಸಾಪೇಕ್ಷ ಆರ್ದ್ರತೆಯು ಮಾರ್ಚ್‌ತಿಂಗಳಿನಲ್ಲಿ (೭೪%) ಕಂಡು ಬಂದರೆ, ಅತಿ ಹೆಚ್ಚು ಆರ್ದ್ರತೆಯು (೯೧%) ಆಗಸ್ಟ್‌ತಿಂಗಳಿನಲ್ಲಿರುತ್ತದೆ.

ಮಣ್ಣಿನ ಗುಣ ಧರ್ಮಗಳು: ಈ ಪ್ರದೇಶದ ಮಣ್ಣಿನ ಬಣ್ಣ ಕೆಂಪು, ಹೆಮೆಟೈಟ್‌ಮತ್ತು ಲಿಮೋನೈಟ್‌ಗಳಂತಹ ಕಬ್ಬಿಣದ ಆಕ್ಸೈಡ್‌ಗಳು ಮಣ್ಣಿನಲ್ಲಿರುವುದರಿಂದ ಹಳದಿ ಛಾಯೆಯಿರುವ ಕೆಂಪುಬಣ್ಣ ಮಣ್ಣಿಗೆ ಬಂದಿದೆ. ಮಣ್ಣಿನ ನಿರ್ಮಾಣಕ್ಕೆ ಮೂಲ ಶಿಲಾದ್ರವ್ಯವು ಗ್ರಾನೈಟ್‌ಮತ್ತು ನಿಸ್‌.

ಮರಳಿನ ಪ್ರಾಬಲ್ಯವಿರುವ ಗೋಡು ವರ್ಗಕ್ಕೆ ಸೇರಿದ ಈ ಮಣ್ಣಿನಲ್ಲಿ ಶೇಕಡಾ ೭೦ರಷ್ಟು ಮರಳು ಮತ್ತು ಶೇಕಡಾ ೧೫ರಿಂದ ೨೦ ಎರೆಯಿದೆ. ಎರೆ ಕಣಗಳಲ್ಲಿ ಕೆಓಲಿನೈಟ್‌ಗುಂಪಿಗೆ ಸೇರಿದ ಖನಿಜಗಳಿರುವದರಿಂದ

 • ಮಣ್ಣು ದಸಿಯಾದಾಗ ಜಿಗುಟಾಗುವುದಿಲ್ಲ.
 • ಮಣ್ಣಿನಲ್ಲಿ ನೀರು ಸುಲಭವಾಗಿ ಇಂಗುತ್ತದೆ.
 • ಮಳೆಯ ನಂತರ ಮಣ್ಣು ಒಣಗಿತೆಂದರೆ ಮೇಲಿನ ಮಣ್ಣು ಹೆಪ್ಪುಗಟ್ಟುತ್ತದೆ.

ಮೇಲ್ಮಣ್ಣಿನ ರಸಸಾರ (pH) ವು ೫ರಿಂದ ೭ರ ಸಮೀಪದಲ್ಲಿರುತ್ತದೆ. ಸಾವಯವ ಪದಾರ್ಥದ ಪ್ರಮಾಣವು ಕಡಿಮೆ (೧%). ರಂಜಕ ಮತ್ತು ಸಾರಜನಕ ಕೊರತೆಯು ಸಾಮಾನ್ಯ ಆದರೆ ಪೊಟ್ಯಾಸಿಯಂ ಸಾಕಷ್ಟು ಪ್ರಮಾಣದಲ್ಲಿ ಮಣ್ಣಿನಲ್ಲಿ ಕಂಡು ಬರುತ್ತದೆ.

ಹರಿಯುವ ನೀರಿಗೆ ಮತ್ತು ಅದರೊಡನೆ ಕೊಚ್ಚಿ ಹೋಗುವ ಮಣ್ಣಿಗೆ ತಡೆ

 • ವಾರ್ಷಿಕ ಮಳೆಯ ಪ್ರಮಾಣವು ೬೦೦ ಮಿ.ಮೀ.ಗಿಂತ ಕಡಿಮೆ ಇರುವ ಮತ್ತು ಮಣ್ಣಿನ ಆಳವೂ ಕಡಿಮೆ ಇರುವ ಪ್ರದೇಶಗಳಲ್ಲಿ ೦.೪ರಿಂದ ೦.೫ ಚ.ಮೀ. ಗಾತ್ರದ ಸಮಪಾತಳಿ ಒಡ್ಡುಗಳನ್ನು ನಿರ್ಮಿಸಬೇಕು.
 • ಮಳೆಯ ಪ್ರಮಾಣವು ೬೦೦ ಮಿ.ಮೀ. ಗಿಂತ ಅಧಿಕವಾಗಿರುವ ಮಳು ಆಳವಾದ ಭೂಮಿಯಲ್ಲಿ ಇಳಿಜಾರು ಬದುಗಳನ್ನು ನಿರ್ಮಿಸಬೇಕು.

ಬದುಗಳ ಮಧ್ಯದಲ್ಲಿರುವ ಭೂಮಿಯ ನಿರ್ವಹಣೆ: ಈ ಮೊದಲೇ ಸೂಚಿಸಿದಂತೆ ಮಣ್ಣು ಮತ್ತು ನೀರುಗಳ ಸಂರಕ್ಷಣೆಯು ಸಮರ್ಥ ರೀತಿಯಿಂದ ಆಗಬೇಕೆಂದರೆ ಮಳೆಯ ನೀರಿನ ಅತಿ ಹೆಚ್ಚಿನ ಭಾಗವು ಮಣ್ಣಿನಲ್ಲಿ ಇಂಗಬೇಕು ಮತ್ತು ಮಣ್ಣಿನೊಳಗೆ ಇಂಗಲು ಅವಕಾಶ ಸಿಗದೆ ನೀರು ಕಡಿಮೆ ವೇಗದುಣದ ಹರಿದುಹೋಗಬೇಕು. ಈ ಉದ್ದೇಶಗಳು ಸಾಧ್ಯವಾಗಬೇಕಾದರೆ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:

 • ಎರಡು ಬದುಗಳ ಮಧ್ಯದಲ್ಲಿರುವ ಭೂಮಿಯಲ್ಲಿ ಕಂಡು ಬರುವ ಸಣ್ಣಪುಟ್ಟ ತಗ್ಗು ದಿಣ್ಣೆಗಳನ್ನು ಸರಿಪಡಿಸಿ ಸ್ವಲ್ಪಮಟ್ಟಿಗೆ ನೆಲವನ್ನು ಭೂಮಿಗೆ ಅಡ್ಡಲಾಗಿ ಮಟ್ಟ ಮಾಡಬೇಕು. ಈ ಕ್ರಮದಿಂದ ಮಳೆಯ ನೀರು ಎಲ್ಲಡೆಗೆ ಸಮನಾಗಿ ಹರಿಯಲು ಅನುಕೂಲವಾಗಿ ಕೊರಕಲುಗಳು ಉಂಟಾಗುವುದಿಲ್ಲ.
 • ಉಳುಮೆ ಮಾಡುವ, ಕುಂಟೆಯನ್ನು ಹಾಯಿಸುವ, ಬಿತ್ತುವ ಮತ್ತು ಇತರ ಬೇಸಾಯ ಕ್ರಮಗಳನ್ನು ಸಮ ಪಾತಳಿಗುಂಟ ಮಾಡಬೇಕು. ಇದರಿಂದ ಇಳಿಜಾರಿನ ಕಡೆಗೆ ಹರಿಯುವ ನೀರಿಗೆ ಅಸಂಖ್ಯಾತ ಸಣ್ಣ ಸಣ್ಣ ತಡೆಗಳನ್ನು ಒಡ್ಡಿದಂತಾಗಿ ಹರಿವಿನ ವೇಗವು ತಗ್ಗುತ್ತದೆ.
 • ಬೆಳೆ ಕೊಯ್ಲಾದ ನಂತರ ಬಂದ ಮಳೆಯಿಂದ ಭೂಮಿಯು ಹಸಿಯಾಯಿತೆಂದರೆ ಉಳುಮೆ ಮಾಡಿ ಹೆಂಟೆಗಳನ್ನು ಹಾಗೆಯೇ ಇರಗೊಡಬೇಕು. ಹೀಗೆ ಮಾಡುವುದರಿಂದ ಉಳುಮೆಯ ನಂತರ ಬಂದ ಮಳೆಯ ನೀರು ಹರಿದು ಹೋಗದೇ ಮಣ್ಣಿನಲ್ಲಿಯೇ ಇಂಗಲು ಆಸ್ಪದವುಂಟಾಗುತ್ತದೆ.
 • ಪ್ರತಿವರ್ಷವೂ ೧೨ರಿಂದ ೧೫ ಸೆಂ.ಮೀ. ಆಳದವರೆಗೆ ಉಳುಮೆ ಮಾಡಬೇಕು. ಮಣ್ಣಿನ ಕೆಳಸ್ತರವು ಗಟ್ಟಿಯಾಗಿದ್ದರೆ ಉಳುಮೆಯ ಆಳವನ್ನು ಹೆಚ್ಚಿಸಿ ಗಟ್ಟಿಯಾಗಿರುವ ಸ್ತರವನ್ನು ಸಡಿಲಗೊಳಿಸಬೇಕು.
 • ಬೆಳೆಗಳ ಕೂಳೆ, ಮುಸುಕಿನ ಜೋಳದ ಒಣಗಿದ ದಂಟು, ಕಸ ಕಡ್ಡಿಗಳು ಮತ್ತು ಇತರ ಸಾವಯವ ಪದಾರ್ಥಗಳನ್ನು ಮಣ್ಣಿನ ಮೇಲ್ಭಾಗದಲ್ಲಿ ಹರಡಬೇಕು. ಇಂತಹ ಆಚ್ಛಾದನೆಯಿಂದ ಮಣ್ಣಿನಲ್ಲಿರುವ ಆರ್ದ್ರತೆಯು ಆವಿಯಾಗುವ ಕ್ರಿಯೆಯನ್ನು ಕಡಿಮೆ ಮಾಡಿದಂತೆ ಆಗುತ್ತದೆಯಲ್ಲದೆ ಮುಂದಿನ ದಿನಗಳಲ್ಲಿ ಬೀಳುವ ಮಳೆಯ ನೀರು ಮಣ್ಣಿನೊಳಗೆ ಇಂಗಲು ಅನುಕೂಲವುಂಟಾಗುತ್ತದೆ. ಇದಲ್ಲದೇ ಮಣ್ಣಿನೊಳಗಿನ ಸಾವಯವ ಪದಾರ್ಥದ ಪ್ರಮಾಣವೂ ಹೆಚ್ಚುತ್ತದೆ.
 • ಎರಡು ಬದುಗಳ ಅಂತರವು ೩೦ ಮೀ.ಗಳಿಗಿಂತ ಹೆಚ್ಚಾಗಿದ್ದಲ್ಲಿ, ಪ್ರತಿ ೧೨ರಿಂದ ೧೫ ಮೀ.ಗಳಿಗೆ ಒಂದರಂತೆ ೦.೨ ಚ.ಮೀ. ಗಾತ್ರದ ಸಣ್ಣಸಣ್ಣ ಬದುಗಳನ್ನು ನಿರ್ಮಿಸಬೇಕು. ಈ ಬದುಗಳ ಮೇಲೆ “ಖಸ್‌”(ವಾಳ) ಹುಲ್ಲು ಅಥವಾ ಸ್ಟಾಯ್ಲೋಝೂಂಥಸ್‌ಅಥವಾ ಸುಬಾಬುಲ್‌ಸಸಿಗಳನ್ನು ನೆಡಬೇಕು. ಸುಬಾಬುಲ್‌ಬೆಳಸಿದರೆ ಗಿಡಗಳು ೧೫ ಸೆಂ.ಮೀ.ಗಿಂತ ಹೆಚ್ಚು ಎತ್ತರ ಬೆಳೆಯದಂತೆ ಕತ್ತರಿಸುತ್ತಿರಬೇಕು.
 • ಆಳವಾಗಿರುವ ಮಣ್ಣಿನಲ್ಲಿ ೧೨ರಿಂದ ೧೫ ಮೀ. ಅಗಲದ ಪಟ್ಟಿಯನ್ನು ಮಾಡಿ ಸುತ್ತಲೂ ಸುಮಾರು ೨೦ರಿಂದ ೨೫ ಸೆಂ.ಮೀ. ಎತ್ತರೆದ ಬೋದುಗಳನ್ನು ನಿರ್ಮಿಸಬೇಕು. ಪಟ್ಟಿಯ ಉದ್ದವನ್ನು ೧೫೦ ಮೀ.ಗಳವರೆಗೂ ಇಡಬಹುದು. ಪಟ್ಟಿಗಳನ್ನು ಅಗಲದ ಗುಂಟ ಮಟ್ಟಮಾಡಬೇಕು. ಉದ್ದದ ದಿಕ್ಕಿನಲ್ಲಿ ಶೇಕಡಾ ೦.೨ರಿಂದ ೦.೪ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು. ಭೂಮಿಯನ್ನು ಮಟ್ಟ ಮಾಡುವಾಗ ೧೫ ಸೆಂ.ಮೀ. ಗಿಂತ ಹೆಚ್ಚು ಅಗೆಯುವ ಪ್ರಸಂಗವು ಬರದಂತೆ ಪಟ್ಟಿಯ ಅಗಲವನ್ನು ನಿರ್ಧರಿಸಬೇಕು. ಇದೊಂದು ಭೂಮಿಯ ಶಾಶ್ವತವಾದ ಸುಧಾರಣೆ. ಮಳೆಯ ನೀರು, ಹೆಚ್ಚಿನ ಪ್ರಮಾಣದಲ್ಲಿ ಭೂಮಿಯೊಳಗೆ ಇಂಗಲು ಅನುಕೂಲವಾಗಿ ಬೆಳೆಯ ಇಳುವರಿಯು ಉತ್ತಮಗೊಳ್ಳುತ್ತದೆ. ಕಡಮೆ ಮಳೆ ಆದ ವರ್ಷಗಳಲ್ಲಂತೂ ಪಟ್ಟೆಯನ್ನು ಮಾಡಿದ ಭೂಮಿಯಲ್ಲಿ ಇತರೆಲ್ಲ ಪ್ರದೇಶಗಳಿಗಿಂತ ಎದ್ದು ಕಾಣುವಷ್ಟು ಅಧಿಕ ಇಳುವರಿಯು ದೊರೆಯುತ್ತದೆ.
 • ಸಾಲುಗಳ ಅಂತರವು ಹೆಚ್ಚಾಗಿರುವ ಮುಸುಕಿನ ಜೋಳ, ತೊಗರಿ, ಔಡಲ ಮುಂತಾದ ಬೆಳೆಗಳಲ್ಲಿ ಪ್ರತಿ ಎರಡು ಸಾಲುಗಳ ಮಧ್ಯದಲ್ಲಿ ಶೇಕಡಾ ೦.೨ರಿಂದ ೦.೪ ಇಳಿಜಾರು ಇರುವ ಕಾಲುವೆಗಳನ್ನು ನಿರ್ಮಿಸಬೇಕು. ಕಡಿಮೆ ಅಂತರದ ಸಾಲುಗಳಿರುವ ರಾಗಿ, ನೆಲಗಡಲೆಗಳಂತಹ ಬೆಳೆಗಳಲ್ಲಿ, ಪ್ರತಿ ೩ ಮೀ.ಗಳಿಗೆ ಒಂದರಂತೆ ೪೦ ಸೆಂ.ಮೀ. ಅಗಲ ಮತ್ತು ೨೦ ಸೆಂ.ಮೀ. ಆಳದ ಕಾಲುವೆಗಳನ್ನು ನಿರ್ಮಿಸಬೇಕು. ಹೀಗೆ ಮಾಡುವುದರಿಂದ, ಹರಿದು ಹೋಗುವ ನೀರಿಗೆ ತಡೆಯುಂಟಾಗಿ, ಹೆಚ್ಚು ನೀರು ಮಣ್ಣಿನಲ್ಲಿ ಇಂಗಲು ಸಾಧ್ಯವಾಗುತ್ತದೆ.

ಹೆಚ್ಚಾದ ನೀರಿನ ಸಂಗ್ರಹ ಮತ್ತು ಬಳಕೆ

 • ಮಳೆ ನೀರು ಮಣ್ಣಿನಲ್ಲಿ ಇಂಗಿದ ಮೇಲೂ ಸ್ವಲ್ಪ ಭಾಗವು ಹರಿದು ಹೋಗುವುದು ಸಾಮಾನ್ಯ. ಈ ನೀರನ್ನು ಸಂಗ್ರಹಿಸಲು ಹೊಂಡಗಳನ್ನು ನಿರ್ಮಿಸಬೇಕು.
 • ವಾರ್ಷಿಕ ಮಳೆ ಸುಮಾರು ೭೫೦ ಮಿ.ಮೀ. ಬೀಳುವ ಮತ್ತು ಅದರ ಶೇಕಡಾ ೨೦ ರಿಂದ ೨೫ರಷ್ಟು ನೀರು ಹರಿದು ಹೋಗುವ ಪ್ರದೇಶದಲ್ಲಿ, ಪ್ರತಿ ಹೆಕ್ಟೇರಿನಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು ೨೫೦ ಘನ ಮೀ. ಅಳತೆಯ ಒಂದು ಹೊಂಡವು ಸಾಕಾಗುತ್ತದೆ.

ನಾಲ್ಕು ಹೆಕ್ಟೇರು ಪ್ರದೇಶದಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು ೧೫ x ೧೫ ಮೀ. ತಳಭಾಗವಿರುವ ಮತ್ತು ೨೫ x ೨೫ ಮೀ. ಮೇಲ್ಭಾಗವಿರುವ ೩ ಮೀಟರು ಆಲದ ಕೃಷಿ ಹೊಂಡವು ಬೇಕಾಗುತ್ತದೆ.

 • ಮರಳಿನ ಪ್ರಾಬಲ್ಯವಿರುವ ಕೆಂಪು ಮಣ್ಣಿನಲ್ಲಿ ನಿರ್ಮಿಸಿದ ಕೃಷಿ ಹೊಂಡದಿಂದ ನೀರು ಬಸಿದು ಹೋಗಿ ನಷ್ಟವಾಗುತ್ತದೆ. ಇಂತಹ ನಷ್ಟವು ಮೊದಲಿನ ೨-೩ ವರ್ಷಗಳಲ್ಲಿ ಅತಿ ಹೆಚ್ಚೆನ್ನಬಹುದು. ಈ ನಷ್ಟವನ್ನು ತಪ್ಪಿಸಲು, ಹೊಂಡದ ತಳಭಾಗವನ್ನು ಮತ್ತು ನಾಲ್ಕೂ ಪಕ್ಕೆಗಳನ್ನು ಒಂದು ಭಾಗ ಸಿಮೆಂಟ್ ಮತ್ತು ಎಂಟು ಭಾಗ ಮರಳಿನ ಮಿಶ್ರಣದಿಂದ ಸುಮಾರು ಐದು ಸೆಂ.ಮೀ. ದಪ್ಪದಷ್ಟು ಲೇಪಿಸಬಹುದು.
 • ಬೆಳೆಗೆ ನೀರಿನ ಕೊರತೆಯಾದಾಗ ಹೊಂಡದಲ್ಲಿ ಸಂಗ್ರಹವಾದ ನೀರನ್ನು ಬೆಳೆಗಳಿಗೆ ಪೂರೈಸಬಹುದು. ಹೊಂಡಕ್ಕೆ ಹರಿದು ಬಂದ ಪ್ರದೇಶದ ೧/೪-೧/೩ ಭಾಗದಷ್ಟು ಬೆಳೆಯು ಪ್ರದೇಶಕ್ಕೆ ನೀರನ್ನು ಪೂರೈಸಲು ಸಾಧ್ಯವೆಂದು ಕಂಡು ಬಂದಿದೆ.
 • ಬೆಳೆಗಳಿಗೆ ಒಂದು ಅಥವಾ ಎರಡು ಬಾರಿ ನೀರು ಪೂರೈಸಲು ಸಾಧ್ಯವಾದರೆ ಇಳುವರಿಯು ೨-೩ ಪಟ್ಟು ಅಧಿಕಗೊಳ್ಳುವುದೆಂದು ತಿಳಿದು ಬಂದಿದೆ.

ಬೆಳೆಗಳು ಮತ್ತು ಬೆಳೆ ಪದ್ಧತಿಗಳು

. ಒಂದು ಬೆಳೆ ಪದ್ಧತಿ

 • ರಾಗಿಯು ಈ ಭಾಗದ ಮುಖ್ಯ ಬೆಳೆ
 • ರಾಗಿಯೊಡನೆ ಮಿಶ್ರ ಬೆಳೆಗಳಾಗಿ ಬೆಳೆಯುವ ಇತರ ಸಾಂಪ್ರದಾಯಕ ಬೆಳೆಗಳೆಂದರೆ ಆವರೆ, ಜೋಳ, ತೊಗರಿ, ಗುರೆಳ್ಳು ಎಳ್ಳು ಇತ್ಯಾದಿಗಳು.
 • ಅಲಸಂದಿ, ಮುಸುಕಿನ ಜೋಳ, ಸೂರ್ಯಕಾಂತಿ, ಸೇಂಗಾ ಇತ್ಯಾದಿಗಳು ಇತ್ತೀಚೆಗೆ ಪ್ರಚಲಿತಗೊಂಡ ಹೊಸಬೆಳೆಗಳು.

ಮಣ್ಣು ಹಸಿ ಇರುವಾಗಲೇ ಬೀಜ ಮೊಳಕೆಯೊಡೆದು, ಬೆಳೆದು, ಅಭಿವೃದ್ಧಿಗೊಂಡು ಆರ್ದ್ರತೆಯು ಕಡಿಮೆಯಾಗುವುದರೊಳಗೆ ಬೆಳೆಯು ಮಾಗುವಂತಿರಬೇಕು. ಆದ್ದರಿಂದ ಮಳೆಗಾಲದ ಅವಧಿ, ಮಳೆಯ ಪ್ರಮಾಣ ಮತ್ತು ಮಣ್ಣಿನಲ್ಲಿ ಸಂಗ್ರಹಗೊಳ್ಳುವ ನೀರು ಇತ್ಯಾದಿಗಳನ್ನು ಪರಿಗಣಿಸಿ ಬೆಳೆಗಳನ್ನು ಮತ್ತು ಅವುಗಳ ತಳಿಗಳನ್ನು ಆರಿಸಬೇಕು. ಮಳೆಗಾಲದ ಸ್ಥಿತಿಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರಗಳನ್ನು ಕೈಗೊಳ್ಳಬೇಕು.

. ಮಿಶ್ರ ಬೆಳೆ ಪದ್ಧತಿಗಳು: ಒಂದೇ ಬೆಳೆಯನ್ನು ಬೆಳೆಯುವುದಕ್ಕಿಂತ ಮಿಶ್ರ ಬೆಳೆಗಳ ಪದ್ಧತಿಯು ಪ್ರಶಸ್ತವೆನ್ನಬಹುದು. ಸರಿಯಾದ ಮಿಶ್ರ ಬೆಳೆಗಳ ಪದ್ಧತಿಯನ್ನು ಅನುಸರಿಸಿದರೆ ಅಧಿಕ ಆದಾಯವು ದೊರೆಯುತ್ತದೆ. ಆಕಸ್ಮಾತ್ ಒಂದು ಬೆಳೆಯು ಕಾರಣಾಂತರಗಳಿಂದ ನಷ್ಟಗೊಂಡರೂ ಅದರ ಸಹ ಬೆಳೆಯಿಂದ ಸ್ವಲ್ಪವಾದರೂ ಆದಾಯವು ದೊರೆಯುವ ಸಂಭವವಿದೆ. ಈ ಭಾಗಕ್ಕೆ ಪ್ರಯೋಜನಕಾರಿ ಆಗಬಲ್ಲ ಕೆಲವು ಮಿಶ್ರ ಬೆಳೆ ಪದ್ಧತಿಗಳು ಕೆಳಗಿನಂತಿವೆ:

i. ರಾಗಿ+ತೊಗರಿ (. ಸಾಲುಗಳ ಪ್ರಮಾಣದಲ್ಲಿ): ಮೇ ಅಥವಾ ಜೂನ್ ತಿಂಗಳಲ್ಲಿ ತೊಗರಿಯನ್ನು ೩.೩ ಮೀ.ಗಳ ಅಂತರದಲ್ಲಿ, ೬೦ ಸೆಂ.ಮೀ. ಜೋಡು ಸಾಲುಗಳಲ್ಲಿ ಶೇಕಡಾ ೦.೨-೦.೪ರ ಇಳಿಜಾರನ್ನಿಟ್ಟು ಬಿತ್ತಬೇಕು. ಜುಲೈ ಅಥವಾ ಆಗಸ್ಟ್‌ತಿಂಗಳಿನಲ್ಲಿ ಎರಡು ಜೋಡಿ ಸಾಲು ತೊಗರಿಗಳ ಮಧ್ಯೆ ರಾಗಿಯನ್ನು ಬಿತ್ತಬೇಕು. ಇಲ್ಲವೇ ಸಸಿಗಳನ್ನು ನೆಡಬೇಕು. ಎರಡು ತೊಗರಿ ಸಾಲುಗಳ ಮಧ್ಯೆ ಕಾಲುವೆಯನ್ನು ನಿರ್ಮಿಸಬೇಕು. ಇದರಿಂದ ಮಳೆಯ ನೀರು ಅಧಿಕ ಪ್ರಮಾಣದಲ್ಲಿ ಮಣ್ಣಿನಲ್ಲಿ ಇಂಗುತ್ತದೆ.

ii. ತೊಗರಿ+ಮುಸುಕಿನ ಜೋಳ (. ಸಾಲುಗಳ ಪ್ರಮಾಣದಲ್ಲಿ): ಜುಲೈ ತಿಂಗಳಿಲ್ಲಿ ೩೭.೫ ಸೆಂ.ಮೀ. ಅಂತರವನ್ನಿಟ್ಟು, ಒಂದು ಸಾಲು ತೊಗರಿ ಮತ್ತೊಂದು ಸಾಲು ಮುಸುಕಿನ ಜೋಳ ಬಿತ್ತಬೇಕು. ಉತ್ತಮ ಮಳೆ ಒಂದು ವರ್ಷ ಎರಡೂ ಬೆಳೆಗಳು ಸರಿಯಾಗಿ ಬೆಳೆದು ಅಪೇಕ್ಷಿತ ಇಳುವರಿಯನ್ನು ಕೊಡುತ್ತವೆ. ಮಳೆಯ ಪ್ರಮಾಣವು ಕಡಿಮೆಯಾದ ವರ್ಷ ಬಿತ್ತಿದ ೬೫ ದಿನಗಳ ನಂತರ ಮುಸುಕಿನ ಜೋಳವನ್ನು ಕತ್ತರಿಸಿ ದನಗಳ ಮೇವಿಗೆ ಉಪಯೋಗಿಸಿ ತೊಗರಿಯೊಂದನ್ನೇ ಬೆಳೆಯಲು ಬಿಡಬೇಕು.

iii. ಸೇಂಗಾ (ನೆಲಗಡಲೆ) + ತೊಗರಿ (. ಸಾಲುಗಳ ಪ್ರಮಾಣದಲ್ಲಿ): ಜೂನ್‌ಅಥವಾ ಜುಲೈ ತಿಂಗಳಿನಲ್ಲಿ ತೊಗರಿಯನ್ನು ಜೋಡು ಸಾಲುಗಳಲ್ಲಿ ಬಿತ್ತಬೇಕು. ಜೋಡಿಗಳ ಮಧ್ಯದಲ್ಲಿ ಸೇಂಗಾ ಬಿತ್ತಬೇಕು. ಎರಡು ಸಾಲು ತೊಗರಿಗಳ ಮಧ್ಯದಲ್ಲಿ ಕಾಲುವೆಯನ್ನು ನಿರ್ಮಿಸಬೇಕು.

iv. ಜೋಳ+ತೊಗರಿ (. ಸಾಲುಗಳ ಪ್ರಮಾಣದಲ್ಲಿ): ಜೋಳ ಮತ್ತು ತೊಗರಿಗಳನ್ನು ೨:೧ ಸಾಲುಗಳ ಪ್ರಮಾಣದಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬಿತ್ತಬೇಕು. ಜೋಳದ ಕೊಯ್ಲಾದ ನಂತರ ಮಣ್ಣಿನಲ್ಲಿ ಉಳಿದಿರುವ ಆರ್ದ್ರತೆಯನ್ನು ಉಪಯೋಗಿಸಿಕೊಂಡು ತೊಗರಿಯು ಮಾಗುತ್ತದೆ.

v. ಎಳ್ಳು+ತೊಗರಿ (೧೦: ಅಥವಾ : ಸಾಲುಗಳು ಪ್ರಮಾಣದಲ್ಲಿ): ಎಳ್ಳು ಮತ್ತು ತೊಗರಿ ಬೆಳೆಗಳನ್ನು ಏಪ್ರಿಲ್ ತಿಂಗಳಿನಲ್ಲಿ ಬಿತ್ತಬೇಕು. ಎಳ್ಳಿನ ಬೆಳೆ ಕೊಯ್ಲಾದ ನಂತರ ತೊಗರಿ ಸಾಲುಗಳ ಮಧ್ಯದಲ್ಲಿ ರಾಗಿ ಪೈರು ನಾಟಿ ಮಾಡಬಹುದು ಇಲ್ಲವೇ ಹುರುಳಿಯನ್ನು ಬಿತ್ತಬಹುದು. ಆದರೆ ಎಳ್ಳು ಮತ್ತು ತೊಗರಿಗಳನ್ನು ೩:೧ ಸಾಲುಗಳ ಅಂತರದಲ್ಲಿ ಬಿತ್ತಿದರೆ ಎಳ್ಳಿನ ಬೆಳೆಯ ನಂತರ ಇತರೆ ಬೆಳೆಗಳನ್ನು ಬೆಳೆಯಲಾಗುವುದಿಲ್ಲ.

vi. ರಾಗಿ+ಸೋಯಾ ಅವರೆ (: ಸಾಲುಗಳ ಪ್ರಮಾಣದಲ್ಲಿ): ಎರಡು ಸಾಲುಗಳಲ್ಲಿ ೪೫ ಸೆಂ.ಮೀ. ಅಂತರವನ್ನಿಟ್ಟು ರಾಗಿಯನ್ನು ಬಿತ್ತಬೇಕು. ಪ್ರತಿ ಎರಡು ರಾಗಿ ಸಾಲುಗಳ ಮಧ್ಯದಲ್ಲಿ ಒಂದು ಸಾಲು ಸೋಯಾ ಅವರೆಯನ್ನು ಬಿತ್ತಬೇಕು. ಎರಡೂ ಬೆಳೆಗಳು ಒಂದೇ ಸಮಯಕ್ಕೆ ಕೊಯ್ಲಿಗೆ ಬರುತ್ತವೆ.

vii. ತೊಗರಿ+ಇತರ ಬೇಳೆಕಾಳು ಬೆಳೆಗಳು: ಜುಲೈ ತಿಂಗಳಿನಲ್ಲಿ ತೊಗರಿಯನ್ನು ಬಿತ್ತಿ, ತೊಗರಿ ಸಾಲುಗಳ ಮಧ್ಯದಲ್ಲಿ ಉದ್ದು, ಅಲಸಂದೆ, ಸೋಯಾ, ಆವರೆ ಇತ್ಯಾದಿಗಳಲ್ಲಿ ಯಾವುದಾದರೊಂದು ಬೆಳೆಯ ಒಂದು ಸಾಲನ್ನು ಬಿತ್ತಬಹುದು.

viii. ಇತರ ಮಿಶ್ರ ಬೆಳೆಗಳು: ಮುಂಗಾರು ಹಂಗಾಮಿನಲ್ಲಿ, ಇತರ ಕೆಲ ಮಿಶ್ರ ಬೆಳೆಗಳನ್ನು ಬೆಳೆಯಬಹುದು. ಉದಾಹರಣೆಗೆ ಔಡಲ+ಸೇಂಗಾ (೧.೮ ಸಾಲುಗಳ ಪ್ರಮಾಣದಲ್ಲಿ) ಅಥವಾ ಹುರುಳಿ+ಗುರೆಳ್ಳು (ಹುಚ್ಚೆಳ್ಳು) ಮಿಶ್ರಣವನ್ನು (೮.೨ ಸಾಲುಗಳ ಪ್ರಮಾಣದಲ್ಲಿ) ಇತ್ಯಾದಿಗಳನ್ನು ಬೆಳೆಯಬಹುದು.

. ಎರಡು ಬೆಳೆ ಪದ್ದತಿಗಳು: ವರ್ಷದಲ್ಲಿ ೪-೫ ತಿಂಗಳು ಮಾತ್ರ ಮಳೆ ಬೀಳುವ ಪ್ರದೇಶಗಳಲ್ಲಿ ಮೇಲೆ ಹೇಳಿದ ಬೆಳೆಗಳ ಪದ್ಧತಿಯಲ್ಲಿ ಅನುಕೂಲವೆನಿಸಿದವುಗಳನ್ನು ಬೆಳೆಯಬಹುದು. ಆಳವಾದ ಮಣ್ಣಿರುವ ಮತ್ತು ೫ ರಿಂದ ೭ ತಿಂಗಳುಗಳವರೆಗೆ ಮಳೆ ಬೀಳುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯಲು ಸಾಧ್ಯವಿದೆ. ಪ್ರಯೋಜನಕಾರಿ ಎನಿಸಿದ ಕೆಲವು ಎರಡು ಬೆಳೆ ಪದ್ಧತಿಗಳು ಕೆಳಗಿನಂತಿವೆ:

..

ಮೊದಲನೆಯ ಬೆಳೆ

ಎರಡನೆಯ ಬೆಳೆ

ಬೆಳೆಯ ಹೆಸರು

ಬಿತ್ತುವ ಸಮಯ

ಬೆಳೆಯ ಹೆಸರು

ಬಿತ್ತುವ ಸಮಯ

೧. ಅಲಸಂದೆ ಏಪ್ರಿಲ್-ಮೇ ರಾಗಿ ಆಗಸ್ಟ್‌
೨. ಎಳ್ಳು ಏಪ್ರಿಲ್ ಹುರುಳಿ ಅಥವಾ ನಾಟಿ ರಾಗಿ ಆಗಸ್ಟ್
೩. ಸೇಂಗಾ ಮೇ ನಾಟಿ ರಾಗಿ ಸೆಪ್ಟೆಂಬರ್
೪. ಜೋಳ ಏಪ್ರಿಲ್ ಹುರುಳಿ ಅಥವಾ ನಾಟಿ ರಾಗಿ ಆಗಸ್ಟ್

ಮಣ್ಣಿನ ಫಲವತ್ತತೆಯ ನಿರ್ವಹಣೆ: ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಮಣ್ಣಿನ ಫಲವತ್ತತೆಯು ಉತ್ತಮಗೊಳ್ಳುತ್ತದೆಯಲ್ಲದೆ ಬೆಳೆಗಳಿಂದ ಅಧಿಕ ಇಳುವರಿಯನ್ನೂ ನಿರೀಕ್ಷಿಸಬಹುದು.

 • ಸಾಧ್ಯವಾದಷ್ಟು ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಇದರಿಂದ ಸಸ್ಯ ಪೋಷಕಾಂಶಗಳ ಪೂರೈಕೆಯಾಗುತ್ತದೆಯಲ್ಲದೆ ಮಣ್ಣಿನ ಜಲಧಾರಣಾ ಸಾಮರ್ಥ್ಯವೂ ಅಧಿಕಗೊಳ್ಳುತ್ತದೆ. ಮಳೆಯ ನಂತರ ಮಣ್ಣು ಒಣಗಿದರೆ ಮೇಲ್ಮಣ್ಣಿನಲ್ಲಿ ಹೆಪ್ಪುಗಟ್ಟುವುದನ್ನು ಸಾವಯವ ಪದಾರ್ಥವು ತಡೆಯುತ್ತದೆ.
 • ಆಮ್ಲಯುತ ಮಣ್ಣಿಗೆ ಸೂಕ್ತ ಪ್ರಮಾಣದಲ್ಲಿ ಸುಣ್ಣವನ್ನು ಪೂರೈಸಬೇಕು.
 • ಸೂಕ್ತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಪೂರೈಸುವುದರಿಂದ ಬೆಳೆಯ ಇಳುವರಿಯು ಅಧಿಕಗೊಂಡು ನೀರಿನ ಸಮರ್ಥ ಬಳಕೆಯಾಗುತ್ತದೆ.
 • ಸೇಂಗಾ ಬೆಳೆಗೆ ಜಿಪ್ಸಂ ಪೂರೈಸುವುದರಿಂದ ಇಳುವರಿಯು ಹೆಚ್ಚುತ್ತದೆಯಲ್ಲದೇ ಸೇಂಗಾ ಬೀಜದಲ್ಲಿಯ ಎಣ್ಣೆಯ ಪ್ರಮಾಣವೂ ಅಧಿಕಗೊಳ್ಳುತ್ತದೆ.
 • ಸೇಂಗಾ ಮತ್ತು ಬೇಳೆಕಾಳು ವರ್ಗಕ್ಕೆ ಸೇರಿದ ಬೆಳೆಗಳ ಬೀಜವನ್ನು ಸಂಬಂಧಿಸಿದ ರೈಝೋಬಿಯಂ ಜೈವಿಕ ಗೊಬ್ಬರದಿಂದ ಉಪಚರಿಸಬೇಕು.
 • ರಾಸಾಯನಿಕ ಗೊಬ್ಬರಗಳನ್ನು, ಮಣ್ಣಿನ ಮೇಲೆ ಚೆಲ್ಲಬಾರದು (ಬೀರಬಾರದು). ಬೀಜ ಮತ್ತು ರಾಸಾಯನಿಕ ಗೊಬ್ಬರಗಳನ್ನು ಏಕಕಾಲಕ್ಕೆ ಬಿತ್ತುವ ಸಂಯುಕ್ತ ಕೂರಿಗೆಯಿಂದ ನಿಯಮಿತ ಆಳದಲ್ಲಿ ಬೀಳುವಂತೆ ಮಾಡಬೇಕು.
 • ಮರಳಿನ ಪ್ರಾಬಲ್ಯವಿರುವ ಮಣ್ಣಿನಲ್ಲಿರುವ ಬೆಳೆಗಳಿಗೆ ಸಾರಜನಕವನ್ನು ಒದಗಿಸುವ ರಾಸಾಯನಿಕ ಗೊಬ್ಬರವನ್ನು ಒಂದೇ ಕಂತಿನಲ್ಲಿ ಪೂರೈಸಿದರೆ ಅದು ನೀರಿನೊಡನೆ ಬಸಿದು ಹೋಗಿ ಬಹುಭಾಗವು ಬೆಳೆಗೆ ದೊರೆಯದಿರಬಹುದು. ಆದ್ದರಿಂದ ಈ ಗೊಬ್ಬರವನ್ನು ೨-೩ ಕಂತುಗಳಲ್ಲಿ ಪೂರೈಸುವುದು ಉತ್ತಮ.
 • ಸಾರಜನಕವನ್ನು ಮೇಲು ಗೊಬ್ಬರವಾಗಿ ಬೆಳೆಗೆ ಪೂರೈಸುವಾಗ ಮಣ್ಣಿನಲ್ಲಿ ಸಾಕಷ್ಟು ಆರ್ದ್ರತೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
 • ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸಿದಾಗ ಮುಖ್ಯ ಬೆಳೆಗೆ ಕೊಡಬೇಕೆಂದಿರುವ ಮೊದಲ ಕಂತಿನ ಗೊಬ್ಬರವನ್ನು ಎರಡೂ ಬೆಳೆಗಳಿಗೆ ಸಿಗುವಂತೆ ಹಂಚಬೇಕು. ಸಾರಜನಕವನ್ನು ಮೇಲು ಗೊಬ್ಬರವಾಗಿ ಪೂರೈಸುವಾಗ ಅದನ್ನು ಗಾಳಿಯಿಂದ ಸಾರಜನಕವನ್ನು ಸ್ಥಿರೀಕರಿಸಲಾದ ಬೆಳೆಗೆ ಒದಗಿಸಬೇಕು.

ಅಧಿಕ ಇಳಿಜಾರಿನ ಭೂಮಿಯಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆ: ಇಲ್ಲಿಯವರೆಗೆ ವಿವರಿಸಿದ ವಿವಿಧ ಭೂ ರಚನೆಗಳು ಮತ್ತು ಕೃಷಿ ವಿಧಾನಗಳು ಅತಿ ಇಳಿಜಾರಿನ ಭೂಮಿಯಲ್ಲಿ ನೀರು ಮತ್ತು ಮಣ್ಣನ್ನು ಸಂರಕ್ಷಿಸಲು ಪರಿಣಾಮಕಾರಿಯಾಗಲಾರವು. ಇಂತಹ ಪರಿಸ್ಥಿತಿಯಲ್ಲಿ ಭೂ-ಜಲ ಸಂರಕ್ಷಣೆ ಮಾಡಲು ಭೂಮಿಯನ್ನು ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದ ಪ್ರಮುಖ ವಿವರಗಳು ಕೆಳಗಿನಂತಿವೆ:

ಭೂ ರಚನೆಯನ್ನು ಎರಡು ಪ್ರಕಾರಗಳಲ್ಲಿ ವಿಂಗಡಿಸಬಹುದು.

i. ಬಹು ವೇಗದಿಂದ ಹರಿದು ಬರುವ ನೀರನ್ನು ತಡೆದು, ಮಣ್ಣನ್ನು ಕೊಚ್ಚಿಕೊಂಡು ಹೋಗುವ ಸಾಮರ್ಥ್ಯವನ್ನು ಕುಗ್ಗಿಸಿ, ಮಂದಗತಿಯಿಂದ ನೀರನ್ನು ಹೊರಗೆ ಕಳುಹಿಸುವ ರಚನೆಗಳು (Interception and Disposal type).

ii. ಬಹುವೇಗದಿಂದ ಹರಿದು ಬರುವ ನೀರನ್ನು ತಡೆದು ಸ್ಥಳದಲ್ಲಿಯೇ ನೀರು ಇಂಗುವಂತೆ ಪ್ರೇರೇಪಿಸುವ ಭೂ ರಚನೆ (Interception and Absorption type).

ವಿಶಾಲ ಕಾಲುವೆಯ ಭೂ ರಚನೆ: ಭೂ ಪ್ರದೇಶದಲ್ಲಿ ವಿಶಾಲವಾದ ಆದರೆ ಅತಿ ಕಡಿಮೆ ಆಳದ (೩೦ ರಿಂದ ೪೦ ಸೆಂ.ಮೀ. ಆಳದ) ಕಾಲುವೆಗಳನ್ನು ನಿರ್ಮಿಸಬೇಕು. ಪಾರ್ಶ್ವಗಳ ಇಳಿಜಾರು ಅತಿ ಕಡಿಮೆಯಿರಬೇಕು. ಕಾಲುವೆಗಳಿಗೂ ಅತಿ ಕಡಿಮೆ ಪ್ರಮಾಣದ ಇಳಿಜಾರನ್ನು ಕೊಡಬೇಕು. ಈ ರೀತಿ ಮಾಡುವುದರಿಂದ ಹೆಚ್ಚಾದ ನೀರು ನಿಧಾನವಾಗಿ ಹರಿದು ಹೋಗಿ, ಭೂ ಪ್ರದೇಶದಿಂದ ಹೊರ ಬೀಳುತ್ತದೆ. ಕಾಲುವೆಯ ತುದಿಗೆ ಹುಲ್ಲನ್ನು ಬೆಳೆಸಿ ನೀರಿನಿಂದ ಭೂ ಪ್ರದೇಶಕ್ಕೆ ಅಪಾಯವಾಗದಂತೆ ಮಾಡಬೇಕು.

ಭೂಮಿಯ ಇಳಿಜಾರು ಶೇಕಡಾ ೧೦ ರಿಂದ ೧೨ರಷ್ಟು ಇರುವಲ್ಲಿ ಈ ರಚನೆಯು ಪ್ರಯೋಜನಕಾರಿ.

ಮೆಟ್ಟಿಲಿನ ಆಕಾರದ ಭೂ ರಚನೆ (Bench Terrace): ಭೂಮಿಯ ಇಳಿಜಾರು ಶೇಕಡಾ ೨೦ಕ್ಕಿಂತ ಅಧಿಕವಾಗಿರುವಲ್ಲಿ ಈ ಬಗೆಯ ಭೂ ರಚನೆಯು ಪ್ರಯೋಜನಕಾರಿ. ಭೂ ಪ್ರದೇಶವನ್ನು ಇಳಿಜಾರಿಗೆ ಅಡ್ಡವಾಗಿ ಸಣ್ಣಸಣ್ಣ ಪಟ್ಟಿಗಳನ್ನಾಗಿ ಗುರುತು ಮಾಡಿಕೊಳ್ಳಬೇಕು. ಪ್ರತಿಯೊಂದು ಪಟ್ಟಿಯನ್ನು ಪ್ರತ್ಯೇಕವಾಗಿ ಮಟ್ಟ ಮಾಡಬೇಕು. ಕೆಳಗಿನ ಪಟ್ಟಿಯು ತನ್ನ ಮೇಲಿನ ಪಟ್ಟಿಗಿಂತ ಕೆಲವು ಸೆಂ.ಮೀ.ಗಳ ಅಂತರದಲ್ಲಿರುತ್ತದೆ. ಹೀಗಾಗಿ ಇಡೀ ಭೂ ರಚನೆಯನ್ನು ವೀಕ್ಷಿಸಿದಾಗ ಒಂದರ ಕೆಳಗೊಂದು ಮೆಟ್ಟಿಲುಗಳಿರುವಂತೆ ಕಾಣುತ್ತದೆ. ಭೂಮಿಯ ಸ್ವರೂಪದ ಮೇಲಿಂದ ಪಟ್ಟಿಯ ಅಗಲವನ್ನು ನಿರ್ಧರಿಸಬೇಕು.

ಮೇಲೆ ಸೂಚಿಸಿದ ಭೂ ರಚನೆಯನ್ನು ೩ ರೀತಿಯಿಂದ ಮಾಡಬಹುದು.

i. ಸಂಪೂರ್ಣ ಮಟ್ಟವಾಗಿರುವ ರಚನೆ: ಪ್ರತಿ ಪಟ್ಟಿಯನ್ನು ಸ್ವಲ್ಪವೂ ಇಳಿಜಾರು ಇರದಂತೆ ಮಟ್ಟಮಾಡಬೇಕು. ನೀರು ಅತಿ ಬೇಗನೆ ಇಂಗುವ, ಆಳವಾದ ಮಣ್ಣಿರುವ ಮತ್ತು ವಾರ್ಷಿಕ ಸರಾಸರಿ ಮಳೆಯು ೭೫೦ ರಿಂದ ೯೦೦ ಮಿ.ಮೀ. ಆಗುವ ಪ್ರದೇಶಗಳಿಗೆ ಈ ಬಗೆಯ ರಚನೆಯು ಉತ್ತಮವೆಂದು ಕಂಡು ಬಂದಿದೆ. ಪ್ರತಿ ಪಟ್ಟಿಯ ಹೊರ ಅಂಚಿನಲ್ಲಿ ಸಣ್ಣ ಬೋದನ್ನು ನಿರ್ಮಿಸಬೇಕು.

ii. ಹೊರಬದಿಗೆ ಇಳಿಜಾರಿನ ರಚನೆ: ಈ ಪ್ರಕಾರದ ರಚನೆಯಲ್ಲಿ ಮಟ್ಟ ಮಾಡುವಾಗ ಪಟ್ಟಿಯ ಹೊರ ದಿಕ್ಕಿನಲ್ಲಿ ಸ್ವಲ್ಪ ಇಳಿಜಾರನ್ನು ಇಡಬೇಕು ಮತ್ತು ಹೊರ ಅಂಚಿನಲ್ಲಿ ಸಣ್ಣ ಬೋದನ್ನು ನಿರ್ಮಿಸಬೇಕು. ಕಡಿಮೆ ಮಳೆ ಬೀಳುವ ಮಧ್ಯಮ ಆಳದ ಮಣ್ಣಿನಲ್ಲಿ ಈ ರಚನೆಯು ಪ್ರಯೋಜನಕಾರಿ ಎನಿಸಿದೆ.

iii. ಒಳದಿಕ್ಕಿಗೆ ಇಳಿಜಾರಿನ ರಚನೆ: ಹೆಚ್ಚಿನ ಮಳೆ ಬೀಳುವ ಹಾಗೂ ಸುಲಭವಾಗಿ ನೀರು ಇಂಗದ ಮಣ್ಣಿರುವ ಪ್ರದೇಶದಲ್ಲಿ ಈ ಪ್ರಕಾರದ ರಚನೆಯನ್ನು ನಿರ್ಮಿಸಬೇಕು. ಭೂಮಿಯನ್ನು ಮಟ್ಟ ಮಾಡುವಾಗ ಪಟ್ಟಿಯ ಹೊರಭಾಗದಿಂದ ಒಳದಿಕ್ಕಿನಲ್ಲಿ ಸ್ವಲ್ಪ ಇಳಿಜಾರನ್ನಿಡಬೇಕು. ಹೀಗೆ ಮಾಡುವುದರಿಂದ ಪಟ್ಟಿಯಲ್ಲಿ ನೀರು ನಿಲ್ಲುತ್ತದೆ. ಹೆಚ್ಚಾದ ನೀರು ಅತಿ ಕಡಿಮೆ ವೇಗದಿಂದ ಹರಿದು ಪಟ್ಟಿಯಿಂದ ಹೊರಗೆ ಹೋಗುವಂತೆ ವ್ಯವಸ್ಥೆಯನ್ನು ಮಾಡಬೇಕು. ನೀರು ಹೊರ ಬೀಳುವಲ್ಲಿ ಹುಲ್ಲಿನ ಒಡ್ಡನ್ನು ನಿರ್ಮಿಸಬೇಕು.