ಮಣ್ಣಿನ ಗುಣಧರ್ಮಗಳು: ಮಣ್ಣು ವಟಿಸೋಲ್‌ಗಣಕ್ಕೆ ಸೇರಿದೆ. ಕಪ್ಪು ಎರೆ ಮಣ್ಣು, ಕೆಂಪು ಎರೆ ಗೋಡು ಮತ್ತು ಕೆಂಪು ಮಣ್ಣು ಹೀಗೆ ಮೂರು ಬಗೆಯ ಮಣ್ಣುಗಳು ಇಲ್ಲಿ ಇವೆ. ಈ ಮಣ್ಣುಗಳ ಬಗ್ಗೆ ಪ್ರಮುಖ ವಿವರಗಳು ಕೆಳಗಿನಂತಿವೆ.

) ಕಪ್ಪು ಮಣ್ಣು: ಕಪ್ಪು ಮಣ್ಣನ್ನು ಅದರ ಆಳದ ಆಧಾರದ ಮೇಲೆ ಮೂರು ವರ್ಗಗಳಾಗಿ ಮಾಡಬಹುದು.

i) ಆಳವಾದ ಕಪ್ಪು ಮಣ್ಣು: ಆಳವಾದ ಕಪ್ಪುಮಣ್ಣು ಬಾಗಲಕೋಟೆ, ಬೀಳಗಿ, ತಾಲ್ಲೂಕುಗಳಲ್ಲಿ ಕಂಡು ಬರುತ್ತದೆ. ಈ ಮಣ್ಣಿನ ಕೆಲವು ವೈಶಿಷ್ಟ್ಯಗಳು ಕೆಳಗಿನಂತಿವೆ.

 • ಮಣ್ಣು ೬೦ ಸೆಂ.ಮೀ.ಗಿಂತಲೂ ಆಳವಾಗಿದೆ.
 • ಎರೆಯ ಪ್ರಮಾಣವು ಶೇಕಡಾ ೬೦ರ ಸಮೀಪದಲ್ಲಿದೆ.
 • ಮಣ್ಣಿನೊಳಗೆ ನೀರು ಸುಲಭವಾಗಿ ಇಂಗುವುದಿಲ್ಲ.
 • ಜಲಧಾರಣಾ ಸಾಮರ್ಥ್ಯವು ಅಧಿಕ. ಪ್ರತಿ ೩೦ ಸೆಂ.ಮೀ.ಆಳದ ಮಣ್ಣು ೬ ಸೆಂ.ಮೀ. ನಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು.
 • ಈ ಮಣ್ಣಿನಲ್ಲಿ ಹಿಂಗಾರು ಬೆಳೆಗಳನ್ನು ಬೆಳೆಯುವುದು ಸಾಮಾನ್ಯ.

ii) ಮಧ್ಯಮ ಆಳದ ಕಪ್ಪುಮಣ್ಣು: ವಿಜಾಪುರ, ಬಾಗೇವಾಡಿ, ಸಿಂದಗಿ, ಜಮಖಂಡಿ, ಬಳ್ಳಾರಿ, ಸಿರಗುಪ್ಪ, ಹಗರಿಬೊಮ್ಮನಳ್ಳಿ, ಹೊಸಪೇಟೆ, ಅಥಣಿ, ಸೌದತ್ತಿ, ಲಿಂಗಸುಗೂರು, ಸಿಂಧನೂರು ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ಮಧ್ಯಮ ಆಳದ ಕಪ್ಪು ಮಣ್ಣು ಕಂಡು ಬರುತ್ತದೆ. ಈ ಪ್ರಕಾರದ ಮಣ್ಣಿನ ಗುಣಧರ್ಮಗಳು ಕೆಳಗಿನಂತಿವೆ.

 • ಮಣ್ಣಿನ ಆಳ ೩೦ರಿಂದ ೬೦ ಸೆಂ.ಮೀ.
 • ಎರೆಯ ಪ್ರಮಾಣವು ಶೇಕಡಾ ೫೦ರಷ್ಟಿದೆ.
 • ಮಧ್ಯಮದಿಂದ ಕಡಮೆ ಪ್ರಮಾಣದಲ್ಲಿ ಮಣ್ಣಿನೊಳಗೆ ನೀರು ಇಂಗುತ್ತದೆ.
 • ಜಲಧಾರಣಾ ಸಾಮರ್ಥ್ಯವು ಮಧ್ಯಮ. ಪ್ರತಿ ೩೦ ಸೆಂ.ಮೀ. ಮಣ್ಣು ೫ ಸೆಂ.ಮೀ. ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು.

iii) ಕಡಿಮೆ ಆಳದ ಮಣ್ಣು: ವಿಜಾಪುರ, ಸಿಂದಗಿ ಮತ್ತು ಇಂಡಿ ತಾಲ್ಲೂಕುಗಳಲ್ಲಿ ಕಡಿಮೆ ಆಳದ ಮಣ್ಣು ಸಾಮಾನ್ಯ. ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳ ಕೆಲವು ಪ್ರದೇಶಗಳಲ್ಲಿಯೂ ಈ ಬಗೆಯ ಮಣ್ಣು ಇದೆ. ಈ ಬಗೆಯ ಮಣ್ಣಿನ ಕೆಲವು ವೈಶಿಷ್ಟ್ಯಗಳು ಕೆಳಗಿನಂತಿವೆ.

 • ಮಣ್ಣಿನ ಆಳವು ೩೦ ಸೆಂ.ಮೀ. ಗಿಂತ ಕಡಿಮೆ. ಭೂ ಸವಕಳಿಯಾಗಿ ಮೇಲಿನ ಮಣ್ಣು ಕೊಚ್ಚಿಕೊಂಡು ಹೋಗಿರುವುದರಿಂದ ಮಣ್ಣಿನ ಆಳವು ಕಡಿಮೆಯಾಗಿದೆ.
 • ಎರೆಯ ಪ್ರಮಾಣವು ಶೇಕಡಾ ೪೦ರಷ್ಟಿದೆ.
 • ಮಣ್ಣಿನ ಮೇಲ್ಭಾಗದಲ್ಲಿ, ಸುಣ್ಣದ ಕಾರ್ಬೊನೇಟಿನ ಗಂಟುಗಳು (Lime nodules) ಕಂಡುಬರುತ್ತವೆ.
 • ಮಣ್ಣಿನೊಳಗೆ ನೀರು ಇಂಗುವ ವೇಗ ಮಧ್ಯಮ.
 • ಜಲಧಾರಣಾ ಸಾಮರ್ಥ್ಯವು ಕಡಿಮೆ. ಪ್ರತಿ ೩೦ ಸೆಂ.ಮೀ. ಮಣ್ಣು ೩ರಿಂದ ೪ಸೆಂ.ಮೀ. ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು.

ಮೇಲೆ ವಿವರಿಸಿದ ಕಪ್ಪು ಮಣ್ಣು ಬಸಾಲ್ಟ್‌(Basalt ) ಶಿಲೆಯಿಂದ ನಿರ್ಮಾಣಗೊಂಡಿದೆ. ಮಣ್ಣಿನಲ್ಲಿ ಮೊಂಟ್‌ಮೊರಿಲೋನೈಟ್‌ಖನಿಜದ ಪ್ರಾಬಲ್ಯವಿದೆ. ಮಣ್ಣು ಒಣಗಿತೆಂದರೆ, ಆಳವಾದ ಬಿರುಕುಗಳು ಕಂಡು ಬರುತ್ತವೆ. ನೀರನ್ನು ಮಣ್ಣಿನೊಳಗೆ ಪ್ರವೇಶಿಸಲು ಮತ್ತು ಆಳಕ್ಕೆ ಬಸಿದು ಹೋಗಲು ಬಿಡುವುದಿಲ್ಲ. ಆಮ್ಲ ಕ್ಷಾರ ನಿರ್ದೇಶಕವು (pH ) ೮ಕ್ಕಿಂತ ಅಧಿಕ. ಸಾರಜನಕ ಮತ್ತು ರಂಜಕದ ಪ್ರಮಾಣವು ಕಡಿಮೆ. ಆದರೆ ಕ್ಯಾಲ್ಸಿಯಂ, ಮೇಗ್ನೀಸಿಯಂ ಮತ್ತು ಪೊಟ್ಯಾಸಿಯಂ ಪೋಷಕಗಳು ಸಮೃದ್ಧವಾಗಿವೆ. ಅದರಂತೆಯೇ ಕಬ್ಬಿಣವನ್ನುಳಿದು ಇತರ ಕಿರು ಪೋಷಕಗಳು ಸಾಕಷ್ಟು ಪ್ರಮಾಣದಲ್ಲಿವೆ.

ಆಳವಾದ ಕಪ್ಪು ಮಣ್ಣಿನ ಭೂಮಿ ಸಪಾಟಾಗಿದೆ. ಮಧ್ಯಮ ಆಳದ ಕಪ್ಪು ಮಣ್ಣಿರುವ ಭೂಮಿಯು ಕೆಲಮಟ್ಟಿಗೆ ಇಳಿಜಾರಾಗಿದೆ. ಇಳಿಜಾರಿನ ಪ್ರಮಾಣವು ಶೇಕಡಾ ೩ರವರೆಗೂ ಇರಬಹುದು. ಆದರೆ ಕಡಿಮೆ ಆಳದ ಮಣ್ಣು ಇರುವ ಭೂಮಿಯು ತಗ್ಗು ದಿಣ್ಣೆಗಳಿಂದ ಕೂಡಿರುತ್ತದೆ.

) ಕೆಂಪು ಎರೆ ಮಿಶ್ರಿತ ಗೋಡುಮಣ್ಣು (Red clay loam Soil ): ಈ ಬಗೆಯ ಮಣ್ಣು ಬಳ್ಳಾರಿ, ಮುಂಡರಗಿ ಮತ್ತು ಕೊಪ್ಪಳ ತಾಲ್ಲೂಕುಗಳಲ್ಲಿ ಹೆಚ್ಚಿಗೆ ಕಂಡು ಬರುತ್ತಿದೆಯಾದರೂ ಬಾದಾಮಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಗೋಕಾಕ್, ರಾಮದುರ್ಗ, ಸೌದತ್ತಿ ಮತ್ತು ಹುನಗುಂದ ತಾಲ್ಲೂಕುಗಳ ಕೆಲವು ಭಾಗದಲ್ಲಿಯೂ ಇಂತಹ ಮಣ್ಣು ಇದೆ. ಸಾಮಾನ್ಯವಾಗಿ, ಕಪ್ಪು ಮಣ್ಣಿನ ಜೊತೆಯಲ್ಲಿ ಅಥವಾ ಗುಡ್ಡದ ಸಮೀಪ ಈ ಮಣ್ಣನ್ನು ಕಾಣಬಹುದು. ಭೂಮಿಯ ಇಳಿಜಾರು ಮತ್ತು ಇತರ ಕಾರಣಗಳಿಂದಾಗಿ, ಈ ಮಣ್ಣು ೧೫ ಸೆಂ.ಮೀ. ಆಳದಿಂದ ೧೦೦ ಸೆಂ.ಮೀ. ಆಳದವರೆಗೂ ಇರಬಹುದು.

ಮಣ್ಣನ್ನು ಪ್ರವೇಶಿಸುವ ನೀರಿನ ವೇಗವು ಮಧ್ಯಮದಿಂದ ಉತ್ತಮ ಎನ್ನಬಹುದು. ಆಮ್ಲ-ಕ್ಷಾರ ನಿರ್ದೇಶಕವು (pH ) ೭ರಿಂದ ೭.೫ ಇದೆ. ಸಾರಜನಕ ಮತ್ತು ರಂಜಕದ ಕೊರತೆಯು ಈ ಮಣ್ಣಿನಲ್ಲಿ ಕಂಡು ಬರುತ್ತದೆಯಾದರೂ ಪೊಟ್ಯಾಸಿಯಂ ಪೋಷಕವು ಮಧ್ಯಮ ಪ್ರಮಾಣದಲ್ಲಿದೆ.

) ಕೆಂಪು ಮಣ್ಣು: ಬಾದಾಮಿ, ಹರಪನಹಳ್ಳಿ, ಹಡಗಲಿ, ಕೂಡ್ಲಗಿ, ಸಂಡೂರು, ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿ ಸಾಮಾನ್ಯವಾಗಿ ಕೆಂಪುಮಣ್ಣು ಕಂಡು ಬರುತ್ತದೆ. ಈ ಮಣ್ಣು ಗ್ರಾನೈಟ್‌, ನಿಸ್‌, ಬೆಣಚುಕಲ್ಲು, ಇಲ್ಲವೇ ಮರಳುಕಲ್ಲಿನಿಂದ ನಿರ್ಮಾಣಗೊಂಡಿರುತ್ತದೆ. ಮಣ್ಣಿನ ಆಳವು ಭೂರಚನೆಯ ಮೇಲಿಂದ ಬದಲಾಗುತ್ತದೆ. ಕೆಲವೇ ಸೆಂ.ಮೀ. ಆಳದಿಂದ ಆರಂಭವಾಗಿ ೨ ಮೀ.ವರೆಗೆ ಆಳವಿರುವ ಮಣ್ಣನ್ನು ಕಾಣಬಹುದು. ಮೃದು ಕಲ್ಲಿನ ಚೂರುಗಳಿಂದ ಕೂಡಿರುವ “ಸಿ” ಸ್ತರವು (C horizon ) ಗಟ್ಟಿಯಾಗಿರುತ್ತವೆ.

ಮಣ್ಣಿನ ಆಮ್ಲ ಕ್ಷಾರ ನಿರ್ದೇಶಕವು (pH ) ೬.೫-೭.೫ರ ವರೆಗೆ ಇರುತ್ತದೆ. ಈ ಮಣ್ಣಿನಲ್ಲಿ ಸುಣ್ಣದ ಗಂಟುಗಳಿರುವುದಿಲ್ಲ. ಆದರೆ ಕಬ್ಬಿಣದ ಹರಳುಗಳು ಕಂಡುಬರುತ್ತವೆ. ಮಣ್ಣಿನೊಳಗಿಂದ ನೀರು ಸುಲಭವಾಗಿ ಬಸಿದು ಹೋಗಬಲ್ಲದು. ಜಲಧಾರಣಾ ಸಾಮರ್ಥ್ಯವು ಕಡಮೆ. ಪ್ರತಿ ೩೦ ಸೆಂ.ಮೀ. ಆಳದ ಮಣ್ಣಿನಲ್ಲಿ ೩ ಸೆಂ.ಮೀ. ಆಳದ ನೀರು ಇರಬಲ್ಲದು. ಮಣ್ಣಿನಲ್ಲಿ ಶೇಕಡಾ ೧೫ರಿಂದ ೨೦ ಎರೆಯಿರುತ್ತದೆ. ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಂಗಳ ಕೊರತೆಯೂ ಕಂಡು ಬರುತ್ತದೆ. ಈ ಮಣ್ಣಿನಲ್ಲಿ ಮುಂಗಾರಿ ಬೆಳೆಗಳನ್ನು ಬೆಳೆಯುವುದು ಸಾಮಾನ್ಯ.

ಹರಿದು ಹೋಗುವ ನೀರಿನ ಮತ್ತು ಕೊಚ್ಚಿ ಹೋಗುವ ಮಣ್ಣಿನ ರಕ್ಷಣೆ: ಅತಿ ರಭಸದಿಂದ ಬೀಳುವ ಮಳೆ ಮತ್ತು ನೀರನ್ನು ಶೀಘ್ರ ಗತಿಯಿಂದ ಒಳ ಪ್ರವೇಶಿಸಲು ಬಿಡದ ಮಣ್ಣುಗಳಿಂದಾಗಿ ಮಳೆಯ ನೀರು ಇಳಿಜಾರಿನೊಂದಿಗೆ ಹರಿಯುತ್ತಾ ತನ್ನೊಡನೆ ಫಲವತ್ತಾದ ಮಣ್ಣನ್ನೂ ಕೊಚ್ಚಿಕೊಂಡು ಹೋಗುವ ದೃಶ್ಯವು ಇಲ್ಲಿ ಸಾಮಾನ್ಯ. ಈ ನಷ್ಟವನ್ನು ನಿಲ್ಲಿಸಲು ಅಥವಾ ಅದರ ತೀವ್ರತೆಯನ್ನು ತಗ್ಗಿಸಲು ಪರಿಸ್ಥಿತಿಗನುಗುಣವಾಗಿ ಕೆಳಗಿನ ಭೂ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಳ್ಳಬೇಕು.

i) ಕಡಿಮೆ ಆಳದ ಕಪ್ಪು ಮಣ್ಣಿನಲ್ಲಿ

 •   ಸಮಪಾತಳಿಯ ಬದುಗಳನ್ನು ಇಳಿಜಾರಿಗೆ ಅಡ್ಡವಾಗಿ ೧-೧.೫ ಮೀ. ಲಂಬದ ಅಂತರಕ್ಕೆ ಒಂದರಂತೆ ನಿರ್ಮಿಸಬೇಕು. ಬದುವಿನ ಗಾತ್ರವು ೧-೧.೫ ಚ.ಮೀ. ನಷ್ಟಿರಬೇಕು.
 • ಬದುಗಳನ್ನು ಸಮಪಾತಳಿಯೊಂದಿಗೆ ನಿರ್ಮಿಸಬೇಕು. ಅನಿವಾರ್ಯವೆನಿಸಿದಾಗ ದಿನ್ನೆಯ (Ridge ) ದಿಕ್ಕಿನತ್ತ ೧೫ ಸೆಂ.ಮೀ. ಮತ್ತು ತಗ್ಗಿನ ದಿಕ್ಕಿನತ್ತ ೩೦ ಸೆಂ.ಮೀ. ನಷ್ಟು ಬದುವನ್ನು ಸರಿಸಬಹುದು. ಈ ರೀತಿಯ ಬದಲಾವಣೆಯನ್ನು ಮಾಡಿದಾಗ ಮೇಲ್ಭಾಗದ ಭೂಮಿಯನ್ನು ಸಮಪಾತಳಿಯಾಗುವಂತೆ ಮಟ್ಟಮಾಡಬೇಕು.
 • ಹೆಚ್ಚಾದ ನೀರು ಸುರಕ್ಷಿತವಾಗಿ ಹರಿದು ಹೊರಹೋಗಲು ಅನುಕೂಲವಾಗುವಂತೆ ಪಾತಳಿಗಿಂತ ೧೫ ಸೆಂ.ಮೀ. ಎತ್ತರದಲ್ಲಿ ಒಡ್ಡನ್ನು (Weir ) ನಿರ್ಮಿಸಬೇಕು.
 • ಬದುವಿನ ಮೇಲ್ಭಾಗದ ಎತ್ತರವು ಎಲ್ಲೆಡೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
 • ಬದುಗಳ ಮೇಲೆ ಸೂಕ್ತವಾದ ಹುಲ್ಲನ್ನು ಬೆಳೆಸಿ ಬದುಗಳು ಸ್ಥಿರವಾಗಿರುವಂತೆ ಎಚ್ಚರವಹಿಸಬೇಕು.

ii) ಮಧ್ಯಮ ಆಳದ ಕಪ್ಪು ಮಣ್ಣಿನಲ್ಲಿ (ನೀರು ಮಣ್ಣನ್ನು ಪ್ರವೇಶಿಸುವ ವೇಗವು ತಾಸಿಗೆ ಮಿ.ಮೀ.ಗಿಂತ ಅಧಿಕವಿದ್ದಾಗ)

 • ಮೇಲೆ (i) ರಲ್ಲಿ ಸೂಚಿಸಿದಂತೆ ಬದುಗಳನ್ನು ೧ರಿಂದ ೧.೫ಮೀ. ಲಂಬದ ಅಂತರದಲ್ಲಿ ನಿರ್ಮಿಸಬೇಕು. ಬದುವಿನ ಗಾತ್ರವನ್ನು ೧.೨ರಿಂದ ೧.೫ ಚ.ಮೀ.ನಷ್ಟು ಇಡಬೇಕು.
 • ಎರಡು ಬದುಗಳ ಮಧ್ಯದಲ್ಲಿ, ಬದುವಿನ ಮೇಲ್ಭಾಗದಲ್ಲಿ ಇರುವ ಕ್ಷೇತ್ರವನ್ನು ಮಟ್ಟ ಮಾಡಬೇಕು.
 • ಬದುವಿನ ನಿರ್ಮಾಣಕ್ಕೆ ಅವಶ್ಯವಿರುವ ಮಣ್ಣನ್ನು, ಬದುವಿನ ಕೆಳಭಾಗದಿಂದ ತೆಗೆದುಕೊಳ್ಳಬೇಕು.
 • ಬದುಗಳ ಮೇಲ್ಭಾಗವು ಒಂದೇ ಮಟ್ಟದಲ್ಲಿರುವಂತೆ ಎಚ್ಚರ ವಹಿಸಬೇಕಲ್ಲದೆ ಅವುಗಳ ಮೇಲೆ ಸೂಕ್ತವಾದ ಹುಲ್ಲನ್ನು ಬೆಳೆಸಿ ಬದುಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಮೇಲೆ ಸೂಚಿಸಿದ ಸಮಪಾತಳಿ ಬದುಗಳ ಬದಲು ಸಮಪಾತಳಿ ಬದು ಪಟ್ಟಿಗಳನ್ನು ನಿರ್ಮಿಸಿಕೊಳ್ಳಲೂಬಹುದು.
 • ಇದಕ್ಕಾಗಿ, ಪ್ರತಿ ೦.೩ ಮೀ. ಲಂಬದ ಅಂತರದಲ್ಲಿ ೦.೨೪ ಚ.ಮೀ. ಗಾತ್ರದ ಸಣ್ಣ ಬೋದುಗಳನ್ನು (bunds) ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸಿ ಎರಡು ಬೋದುಗಳ ಮಧ್ಯದಲ್ಲಿರುವ ಭೂ ಪ್ರದೇಶವನ್ನು ಮಟ್ಟ ಮಾಡಬೇಕು.
 • ಭೂ ಪ್ರದೇಶವನ್ನು ಮಟ್ಟ ಮಾಡುವಾಗ ೧೫ ಸೆಂ.ಮೀ. ಗಿಂತ ಹೆಚ್ಚು ಆಳಕ್ಕೆ ಭೂಮಿಯನ್ನು ಅಗೆಯುವಂತಾಗಬಾರದು.
 • ಹೆಚ್ಚಾದ ನೀರು ಪ್ರತಿ ಪಟ್ಟಿಯಿಂದ ಸುರಕ್ಷಿತವಾಗಿ ಹೊರಬೀಳಲು ಸೂಕ್ತ ಒಡ್ಡುಗಳನ್ನು ನಿರ್ಮಿಸಬೇಕು.

ಮೇಲೆ ವಿವರಿಸಿದಂತೆ ಬದುಪಟ್ಟಿಗಳನ್ನು ನಿರ್ಮಿಸಿದರೆ, ಭೂಮಿಯ ಶಾಶ್ವತವಾದ ಅಭಿವೃದ್ಧಿಯಾದಂತಾಗುತ್ತದೆ. ಈ ಕ್ರಮದಿಂದ ಇಳುವಿಯು ಅಧಿಕಗೊಳ್ಳುತ್ತದೆ. ಬದುಗಳು ಸ್ಥಿರವಾಗಿರುವಂತೆ ಮಾಡಲು ಅವುಗಳ ಮೇಲೆ ಸೂಕ್ತವಾದ ಹುಲ್ಲನ್ನು ಬೆಳೆಸಬೇಕು.

iii) ಮಧ್ಯಮ ಆಳದ ಮತ್ತು ಆಳವಾಗಿರುವ ಕಪ್ಪು ಮಣ್ಣಿನಲ್ಲಿ (ನೀರು ಮಣ್ಣನ್ನು ಪ್ರವೇಶಿಸುವ ವೇಗವು ತಾಸಿಗೆ ಮಿ.ಮೀ.ಗಿಂತ ಕಡಿಮೆ ಇದ್ದರೆ)

 • ಸಮಪಾತಳಿಯ ಬದುಪಟ್ಟಿಗಳ ಬದಲು ಮೇಲೆ ಹೇಳಿದ ಅಂತರದಲ್ಲಿ ಮತ್ತು ಅದೇ ಗಾತ್ರದ ಇಳಿಜಾರು ಬದುಪಟ್ಟಿಗಳನ್ನು ನಿರ್ಮಿಸಬಹುದು.
 • ಪಟ್ಟಿಗಳಿಗೆ ಶೇಕಡಾ ೦.೨ರಷ್ಟು ಇಳಿಜಾರನ್ನಿಡಬೇಕು.
 • ಹೆಚ್ಚಾದ ನೀರು ಸುರಕ್ಷಿತವಾಗಿ ಹೊರಹೋಗುವಂತೆ ಮಾಡಲು ಪ್ರತಿ ಪಟ್ಟಿಯ ಕೊನೆಗೆ ಒಡ್ಡನ್ನು ನಿರ್ಮಿಸಬೇಕು.

ಮೇಲಿನದರ ಬದಲು ೦.೮೫ ಚ.ಮೀ. ಗಾತ್ರದ ಇಳಿಜಾರು ಬದುಪಟ್ಟಿಗಳನ್ನೂ ನಿರ್ಮಿಸಬಹುದು.

 • ಎರಡು ಪಟ್ಟಿಗಳ ಮಧ್ಯದ ಲಂಬ ಅಂತರವು ೦.೭೫-೧ ಮೀ. ಇರಬೇಕು.
 • ಬದುಪಟ್ಟಿಗಳನ್ನು ಶೇಕಡಾ ೦.೧-೦.೨ರಷ್ಟು ಇಳಿಜಾರನ್ನಿಟ್ಟು ನಿರ್ಮಿಸಬೇಕು. ಆದರೆ ಈ ರೀತಿಯ ಬದುಪಟ್ಟಿಯನ್ನು ನಿರ್ಮಿಸಿದಾಗ ಪಟ್ಟಿಯ ಮೇಲ್ಭಾಗದ ನಾಲ್ಕನೆ ಒಂದು ಭಾಗದ ಪ್ರದೇಶವನ್ನು ಮಟ್ಟ ಮಾಡಬೇಕಾಗುತ್ತದೆ.
 • ಬೋದುಗಳ ಮೇಲ್ಭಾಗದಲ್ಲಿ ಸೂಕ್ತವಾದ ಹುಲ್ಲನ್ನು ಬೆಳೆಸಬೇಕು. ಇದರಿಂದ ಬೋದುಗಳು ಸ್ಥಿರಗೊಳ್ಳುತ್ತವೆ.
 • ಹೆಚ್ಚಾದ ನೀರು ಸುರಕ್ಷಿತವಾಗಿ ಹೊರಹೋಗಲು ಅನುಕೂಲವಾಗುವಂತೆ ಒಡ್ಡುಗಳನ್ನು ನಿರ್ಮಿಸಬೇಕು.

iv) ಕೆಂಪು ಮಣ್ಣಿನಲ್ಲಿ (ಮಳೆಯ ಪ್ರಮಾಣವು ೬೦೦ ಮಿ.ಮೀ.ಗಿಂತ ಕಡಿಮೆ ಇರುವಲ್ಲಿ)

 • ಕೆಂಪು ಮಣ್ಣಿನಲ್ಲಿ ೦.೫೪ ರಿಂದ ೦.೮೧ ಚ.ಮೀ. ಗಾತ್ರದ ಸಮಪಾತಳಿ ಬದುಗಳನ್ನು ಪ್ರತಿ ೧-೧.೫ ಮೀ. ಲಂಬದ (Perpendicular) ಅಂತರದಲ್ಲಿ ನಿರ್ಮಿಸಬೇಕು.
 • ಬದುವಿನ ಮೇಲ್ಭಾಗವು ಒಂದೇ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು.

v) ಕೆಂಪು ಮಣ್ಣಿನಲ್ಲಿ (ಮಳೆಯ ಪ್ರಮಾಣವು ೬೦೦ ಮಿ.ಮೀ.ಗಿಂತ ಅಧಿಕವಾಗಿರುವಲ್ಲಿ)

 • ಬದುಗಳ ಗಾತ್ರವನ್ನು ೦.೫೪ ರಿಂದ ೦.೮೧ ಚ.ಮೀ.ನಷ್ಟು ಇಟ್ಟು ಇಳಿಜಾರು ಬದುಗಳನ್ನು ಪ್ರತಿ ೧-೧.೫ ಮೀ. ಲಂಬದ ಅಂತರದಲ್ಲಿ ನಿರ್ಮಿಸಬೇಕು.
 • ಬದುವಿನ ಇಳಿಜಾರು ಶೇಕಡಾ ೦.೨ರಿಂದ ೦.೪ ಇರುವಂತೆ ನೋಡಿಕೊಳ್ಳಬೇಕು.
 • ಸಮಪಾತಳಿಗುಂಟ ಇಳಿಜಾರು ಬದುಗಳನ್ನು ನಿರ್ಮಿಸುವುದಾದಲ್ಲಿ ಬದುವಿನ ಮೇಲ್ಭಾಗದಲ್ಲಿ ಕಾಲುವೆಯನ್ನು ಅಗೆದು ಹೊರಬಂದ ಮಣ್ಣಿನಿಂದ ಬದುವನ್ನು ನಿರ್ಮಿಸಬೇಕು. ಈ ಕಾಲುವೆಯನ್ನು ಹುಲ್ಲಿನ ಒಡ್ಡಿಗೆ ಜೋಡಿಸಬೇಕು.

vi) ಆಳವಾದ ಕೆಂಪು ಮಣ್ಣಿನಲ್ಲಿ (ಎಲ್ಲ ಪ್ರಮಾಣದಲ್ಲಿ ಮಳೆ ಇರುವಲ್ಲಿ)

 • ಶೇಕಡಾ ೦.೨ರಿಂದ ೦.೪ರಷ್ಟು ಇಳಿಜಾರನ್ನಿಟ್ಟು ಭೂಮಿಯ ಇಳಿಜಾರಿಗೆ ಅಡ್ಡವಾಗಿ ಇಳಿಜಾರಾದ ಬದುಪಟ್ಟಿಗಳನ್ನು ನಿರ್ಮಿಸಬೇಕು.
 • ಪ್ರತಿ ಬದುಪಟ್ಟಿಯ ಅಗಲವನ್ನು ೧೨-೧೫ ಮೀ. ಮತ್ತು ಉದ್ದವನ್ನು ೧೨೦-೧೫೦ ಮೀ. ಇಡಬೇಕು.
 • ಪಟ್ಟಿಯ ಅಗಲದ ದಿಕ್ಕಿನಲ್ಲಿ ಭೂಮಿಯನ್ನು ಮಟ್ಟಮಾಡಬೇಕು. ಮಟ್ಟವನ್ನು ಮಾಡುವಾಗ ಭೂಮಿಯನ್ನು ೧೫ ಸೆಂ.ಮೀ. ಗಿಂತ ಹೆಚ್ಚು ಆಳವಾಗಿ ಅಗೆಯುವ ಪ್ರಸಂಗವು ಬಾರದ ರೀತಿಯಲ್ಲಿ ಪಟ್ಟಿಯ ಅಗಲವನ್ನು ನಿರ್ಧರಿಸಬೇಕು.
 • ಪಟ್ಟಿಯ ಕೊನೆಗೆ ಹುಲ್ಲಿನ ಒಡ್ಡನ್ನು ನಿರ್ಮಿಸಬೇಕು.

ಇದೊಂದು ಶಾಶ್ವತವಾದ ಭೂಮಿಯ ಅಭಿವೃದ್ಧಿಯಾಗಿದ್ದು ಇಳುವರಿಯನ್ನು ಅಧಿಕಗೊಳಿಸಲು ಉತ್ತಮ ಕ್ರಮವೆನ್ನಬಹದು.

ಬದುಗಳ ಮಧ್ಯದಲ್ಲಿರುವ ಭೂಮಿಯ ನಿರ್ವಹಣೆ: ಕೇವಲ ಬದುಗಳನ್ನು ನಿರ್ವಿಸುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡಬೇಕೆಂಬ ಉದ್ದೇಶವು ಸಂಪೂರ್ಣವಾಗಿ ಸಫಲವಾಗುವುದಿಲ್ಲ. ಸಮಪಾತಳಿಯ ಬದುಗಳನ್ನು ನಿರ್ಮಿಸಿದ್ದಲ್ಲಿ ನೀರು ಹರಿದು ಬಂದು ಬದುವಿನ ಮೇಲ್ಭಾಗದಲ್ಲಿ ನಿಂತು ಅಲ್ಲಿಯ ಭೂಮಿಯು ಚೌಗು ಆಗಬಹುದು. ಇಳಿಜಾರು ಬದುಗಳನ್ನು ನಿರ್ಮಿಸಿದಲ್ಲಿ ನಿರೀಕ್ಷೆಗಿಂತ ಅಧಿಕ ನೀರು ಬದುವಿನೊಂದಿಗೆ ಹರಿದು ಹೋಗಬಹುದು. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕಾರ್ಯವು ಹೆಚ್ಚು ಸಮರ್ಪಕವಾಗಿ ಆಗಬೇಕೆಂದರೆ ಸಾಧ್ಯವಾದಷ್ಟು ಹೆಚ್ಚು ನೀರು ಮಣ್ಣಿನಲ್ಲಿ ಇಂಗುವಂತಾಗಬೇಕು. ಇದಕ್ಕಾಗಿ ಕೈಗೊಳ್ಳಬೇಕಾದ ಕೆಲವು ಕ್ರಮಗಳು ಕೆಳಗಿನಂತಿವೆ.

i) ಎಲ್ಲ ಬಗೆಯ ಮಣ್ಣುಗಳಲ್ಲಿ

 • ಎರಡು ಬದುಗಳ ಮಧ್ಯದ ಭೂಮಿಯಲ್ಲಿ ಕಂಡುಬರುವ ಸಣ್ಣಪುಟ್ಟ ತಗ್ಗು ದಿನ್ನೆಗಳನ್ನು ಹೋಗಲಾಡಿಸಿ, ಭೂಮಿಯನ್ನು ಇಳಿಜಾರಿಗೆ ಅಡ್ಡಲಾಗಿದೆ, ಕೆಲಮಟ್ಟಿಗೆ ಮಟ್ಟಮಾಡಬೇಕು. ಈ ಕ್ರಮದಿಂದ ಮಳೆಯ ನೀರು ಎಲ್ಲಡೆ ಸಮನಾಗಿ ಹರಡಲು ಅನುಕೂಲವುಂಟಾಗುತ್ತದೆಯಲ್ಲದೇ ಕೊರಕಲುಗಳ ನಿರ್ಮಾಣಕ್ಕೆ ತಡೆಯುಂಟಾಗುತ್ತದೆ.
 • ಉಳುಮೆ ಮಾಡುವ, ಕುಂಟೆಯನ್ನು ಹೊಡೆಯುವ, ಬಿತ್ತುವ ಮತ್ತು ಇತರ ಬೇಸಾಯ ಕಾರ್ಯಗಳನ್ನು ಸಮಪಾತಳಿಯೊಂದಿಗೆ ಇಲ್ಲವೇ ಕುಂಜಿ ರೇಖೆಗುಂಟ (Key Line ) ಮಾಡಬೇಕು. ಇದರಿಂದ ಇಳುಕಲಿನೊಡನೆ ಹರಿದುಹೋಗುವ ನೀರಿಗೆ, ಸಣ್ಣ ಸಣ್ಣ ತಡೆಗಳನ್ನು ಒಡ್ಡಿದಂತಾಗಿ ನೀರಿನ ವೇಗವು ತಗ್ಗುತ್ತದೆ.
 • ಉಳುಮೆ ಮಾಡುವ, ಹರಗುವ, ಬಿತ್ತುವ ಮತ್ತು ಇತರ ಬೇಸಾಯ ಕಾರ್ಯಗಳನ್ನು ಸಮಪಾತಗಳಿಗುಂಟ ಇಲ್ಲವೇ ಕುಂಜಿ ರೇಖೆವರೆಗೆ  (Key Line ) ಮಾಡಬೇಕು.
 • ಬೆಳೆಗಳು ಕೊಯ್ಲಾದೊಡನೆ ಉಳುಮೆ ಮಾಡಿ ಹಂಟೆಗಳನ್ನು ಹಾಗೆಯೇ ಬಿಡಬೇಕು. ಮುಂದಿನ ಹಂಗಾಮಿನಲ್ಲಿ ಬರುವ ಮಳೆಯ ನೀರಿಗೆ ಈ ಹೆಂಟೆಗಳಿಂದ ತಡೆಯುಂಟಾಗಿ ನೀರು ಹರಿದು ಹೋಗುವ ಬದಲು ನೆಲದಲ್ಲಿಯೇ ಇಂಗಲು ಆಸ್ಪದವುಂತಾಗುತ್ತದೆ.
 • ಬೆಳೆಗಳ ಕೂಳೆ, ರವದಿ, ಕಸ ಕಡ್ಡಿ ಇತ್ಯಾದಿಗಳನ್ನು ಭೂಮಿಯು ಮೇಲ್ಭಾಗದಲ್ಲಿಯೇ ಹರಡಬೇಕು. ಇಂತಹ ಆಚ್ಛಾದನೆಯಿಂದ ಮಣ್ಣಿನಲ್ಲಿರುವ ಆರ್ದ್ರತೆಯು ಆವಿಯ ರೂಪದಲ್ಲಿ ಹೊರ ಬೀಳುವ ಪ್ರಮಾಣವು ಕಡಿಮೆಯಾಗುತ್ತದೆಯಲ್ಲದೆ ಮುಮಬರುವ ದಿನಗಳಲ್ಲಿ ಬೀಳುವ ಮಳೆಯ ನೀರು ಮಣ್ಣಿನಲ್ಲಿ ಇಂಗಲು ಅನುಕೂಲವುಂಟಾಗುತ್ತದೆ. ಈ ಕ್ರಮದಿಂದ ಮಣ್ಣಿನ ಸಾವಯವ ಪದಾರ್ಥವೂ ಅಧಿಕಗೊಳ್ಳುತ್ತದೆ.

ii) ಹಿಂಗಾರಿ ಬೆಳೆಗಳ ಆಳವಾದ ಕಪ್ಪುಮಣ್ಣಿನಲ್ಲಿ

 • ಚೌಕು ಮಡಿಗಳ ನಿರ್ಮಾಣ: ಭೂ ಪ್ರದೇಶವನ್ನು ಅನುಕೂಲಕ್ಕೆ ತಕ್ಕಂತೆ ಚೌಕು ಮಡಿಗಳನ್ನಾಗಿ ಗುರುತು ಮಾಡಿ, ಪ್ರತಿ ಮಡಿಯ ಸುತ್ತಲೂ ೧೫ರಿಂದ ೨೦ ಸೆಂ.ಮೀ. ಎತ್ತರದ ಬೋದುಗಳನ್ನು ನಿರ್ಮಿಸಬೇಕು. ಮಡಿಯ ಅಳತೆಯನ್ನು ೩೦ ಮೀ. ಉದ್ದ ಮತ್ತು ೩೦ ಮೀ. ಅಗಲ ಇಡಬಹುದು ಅಥವಾ ಬೇರೆ ಆಕಾರದ ಮಡಿಗಳನ್ನು ನಿರ್ಮಿಸಿಕೊಳ್ಳಬಹುದು. ಎತ್ತಿನಿಂದ ಎಳೆಯಬಲ್ಲ ಬದು ನಿರ್ಮಾಪಕ  (Bund Former) ಉಪಕರಣದ ಸಹಾಯದಿಂದ ಮಡಿಗಳ ನಿರ್ಮಾಣವು ಸುಲಭ. ಮಡಿಗಳನ್ನು ಜುಲೈ ತಿಂಗಳಲ್ಲಿ ಸಿದ್ಧಪಡಿಸಬೇಕು. ಮಳೆಗಾಲದ ನೀರು ಈ ಮಡಿಗಳಲ್ಲಿ ಹೆಚ್ಚು ಅವಧಿಯವರೆಗೆ ನಿಲ್ಲುವುದರಿಂದ ಭೂಮಿಯೊಳಗೆ ಇಂಗುವ ನೀರಿನ ಪ್ರಮಾಣವು ಅಧಿಕಗೊಳ್ಳುತ್ತದೆ.

ಭೂಮಿಯ ಇಳಿಜಾರು ಶೇಕಡಾ ೨.೫ಕ್ಕಿಂತ ಕಡಿಮೆ ಇರುವಲ್ಲಿ ಚೌಕುಮಡಿಗಳು ಪ್ರಯೋಜನಕಾರಿ.

 • ತಟ್ಟೆಯಾಕಾರದ ಗುಣೆಗಳು  (Scoops) : ವಿಶಿಷ್ಟ ರೀತಿಯ ಉಪಕರಣದಿಂದ ಅಥವಾ ಡುಮಗುಂಟೆಗೆ ಹಗ್ಗವನ್ನು ಸುತ್ತಿ ಅದರ ಸಹಾಯದಿಂದ ಭೂಮಿಯಲ್ಲಿ ತಟ್ಟೆಯಾಕಾರದ ಸಣ್ಣ ಸಣ್ಣ ಗುಣಿಗಳನ್ನು ಮಾಡಬೇಕು. ಹಲವಾರು ಸಂಖ್ಯೆಯಲ್ಲಿರುವ ಈ ಗುಣಿಗಳಲ್ಲಿ ಮಳೆಯ ನೀರು ಹೆಚ್ಚು ಸಮಯದವರೆಗೆ ನಿಂತಿರುವುದರಿಂದ ಮಣ್ಣಿನಲ್ಲಿ ಇಂಗಲು ಹೆಚ್ಚು ಸಮಯ ದೊರೆಯುತ್ತದೆ. ಒಂದೆರಡು ದೊಡ್ಡ ಮಳೆಯಾದ ನಂತರ ಈ ಗುಣಿಗಳನ್ನು ಪುನಃ ನಿರ್ಮಿಸಬೇಕಾಗುತ್ತದೆ.
 • ಬೋದು ಕಾಲುವೆಗಳು  (Ridges and Furrows) : ಭೂಮಿಯ ಇಳಿಜಾರಿಗೆ ಅಡ್ಡವಾಗಿ ಸ್ವಲ್ಪ ಇಳಿಜಾರನ್ನಿಟ್ಟು, ಬೋದು ಕಾಲುವೆಗಳನ್ನು ನಿರ್ಮಿಸಬೇಕು. ಕಾಲುವೆಗಳಲ್ಲಿ ಪ್ರತಿ ೪ರಿಂದ ೫ ಮೀಟರಿಗೆ ಒಂದರಂತೆ ಮಣ್ಣಿನ ತಡೆಯನ್ನು  (Ridge tying)   ನಿರ್ಮಿಸಬೇಕು. ಈ ತಡೆಗಳು ಬೋದಿಗಿಂತ ಸ್ವಲ್ಪ ಕೆಳಮಟ್ಟದಲ್ಲಿರಬೇಕು. ಇಲ್ಲವಾದರೆ ಹೆಚ್ಚು ನೀರು ಸಂಗ್ರಹಗೊಂಡು ಬೋದುಗಳು ಒಡೆಯಬಹುದು.
 • ಸುಬಾಬುಲ್ ಅಥವಾ ಇತರ ಹುಲ್ಲುಗಳನ್ನು ಬೆಳೆಸುವುದು: ಭೂ ಪ್ರದೇಶದಲ್ಲಿ ಪ್ರತಿ ೧೫ರಿಂದ ೨೦ ಮೀ. ಅಂತರಗಳಲ್ಲಿ, ಇಳಿಜಾರಿಗೆ ಅಡ್ಡವಾಗಿ ಸುಬಾಬುಲ್ ಅಥವಾ ಸೂಕ್ತ ಹುಲ್ಲಿನ ಎರಡು ಸಾಲುಗಳನ್ನು ಬೆಳೆಸಬೇಕು. ಬೆಳೆಯು ೧೫-೨೦ ಸೆಂ.ಮೀ. ಗಿಂತ ಎತ್ತರ ಬೆಳೆಯದಂತೆ ಆಗಿಂದಾಗ್ಗೆ ಕತ್ತರಿಸುತ್ತಿರಬೇಕು. ಬೆಳೆಯ ಈ ಸಾಲುಗಳು ಹರಿಯುವ ನೀರಿಗೆ ತಡೆಯನ್ನೊಡ್ಡಿ ನೀರು ಮತ್ತು ಮಣ್ಣನ್ನು ಸಂರಕ್ಷಿಸುತ್ತವೆ. ಇವು ಒಂದು ರೀತಿಯ ಜೀವಂತ ಬದು ಎಂದೇ ಹೇಳಬಹುದು. ಬೆಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ಮೇವು ದೊರೆಯುತ್ತದೆಯಲ್ಲದೆ ಸುಬಾಬುಲ್‌ನಂತಹ ಬೆಳೆಯು ಮಣ್ಣಿನ ಫಲವತ್ತತೆಯನ್ನು ಉತ್ತಮಗೊಳಿಸುತ್ತದೆ.
 • ಪಟ್ಟಿ ಬೆಳೆ: ಎರಡು ಅಥವಾ ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ನಿರ್ದಿಷ್ಟ ಅಗಲದ ಕ್ಷೇತ್ರಗಳಲ್ಲಿ ಒಂದಾದ ನಮತರ ಒಂದರಂತೆ ಬೆಳೆಯುವ ಪದ್ಧತಿಗೆ ಪಟ್ಟಿ ಬೆಳೆ ಪದ್ಧತಿ ಎನ್ನುತ್ತಾರೆ. ಭೂ ಸವಕಳಿಯನ್ನು ತಡೆಯುವ ಸಾಮರ್ಥ್ಯವಿಲ್ಲದ ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಭೂ ಸವಕಳಿಯನ್ನು ತಡೆಗಟ್ಟುವ ಸಾಮರ್ಥ್ಯವಿರುವ ಸೇಂಗಾ, ಹುರಳಿ ಇತ್ಯಾದಿ ಬೆಳೆಗಳೊಡನೆ ಒಂದಾದ ನಂತರ ಇನ್ನೊಂದು ಬೆಳೆ ಬೆಳೆಯಬೇಕು. ಜೋಳ ಅಥವಾ ಸಜ್ಜೆಯನ್ನು ೨೨ ಮೀ. ಅಗಲದ ಪಟ್ಟಿಯಲ್ಲಿ ಬಿತ್ತಿ ನಂತರ ಸೇಂಗಾ ಬೆಳೆಯನ್ನು ೭.೩ ಮೀ. ಅಗಲದ ಪಟ್ಟಿಯಲ್ಲಿ ಬಿತ್ತುವುದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆಯ ದೃಷ್ಟಿಯಿಂದ ಉತ್ತಮವೆಂದು ಪ್ರಯೋಗಗಳಿಂದ ಕಂಡು ಬಂದಿದೆ. ಪರಿಸ್ಥಿತಿಗೆ ತಕ್ಕಂತೆ ಇದರಲ್ಲಿ ಅವಶ್ಯವೆನಿಸಿದ ಬದಲಾವಣೆಯನ್ನು ಮಾಡಿಕೊಳ್ಳಬಹುದು.

iii) ಕೆಂಪು ಮಣ್ಣಿನಲ್ಲಿ

 • ಸಾಲುಗಳ ಮಧ್ಯದ ಅಂತರವು ಅಧಿಕವಿರುವ ಹತ್ತಿ, ಮುಸುಕಿನಜೋಳ, ತೊಗರಿ, ಔಡಲ (ಹರಳು) ಮೊದಲಾದ ಬೆಳೆಗಳನ್ನು ಶೇಕಡಾ ೦.೨ರಿಂದ ೦.೪ರ ಇಳಿಜಾರಿನ ಬೋದು ಕಾಲುವೆ ಪದ್ಧತಿಯಲ್ಲಿ ಬೆಳೆದರೆ ಹರಿದು ಹೋಗುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಹುದು.
 • ಕಡಿಮೆ ಅಂತರದ ಸಾಲುಗಳಲ್ಲಿ ಬಿತ್ತುವ ಬೆಳೆಗಳಾದ ಸೇಂಗಾ, ಸಜ್ಜೆ ಇತ್ಯಾದಿಗಳಲ್ಲಿ ಪ್ರತಿ ೩ ಮೀಟರು ಅಂತರಕ್ಕೆ ಒಂದು ಕಾಲುವೆಯನ್ನು ನಿರ್ಮಿಸಬೇಕು. ಇದರಿಂದ ನೀರು ಇಂಗಿ, ಹೆಚ್ಚಾದ ನೀರು ಸುರಕ್ಷಿತವಾಗಿ ಹರಿದು ಹೋಗಲು ಅನುಕೂಲವುಂಟಾಗುತ್ತದೆ.

ಮೇಲೆ ವಿವರಿಸಿದ ಮಣ್ಣು ಮತ್ತು ನೀರಿನ ಸಂರಕ್ಷಣಾ ವಿಧಾನಗಳಲ್ಲದೇ ಕೆಳಗಿನ ಎರಡು ಕ್ರಮಗಳೂ ಈ ಉದ್ದೇಶ ಸಾಧನೆಗೆ ವರ್ಟಿಸೋಲ್‌ ಗಣಕ್ಕೆ ಸೇರಿದ ಮಣ್ಣಿನಲ್ಲಿ ಪ್ರಯೋಜನಕಾರಿ ಎನಿಸಿವೆ.

i) ವಿಶಾಲ ತಳದ ಬದುಗಳು  (Broad Based Bunds) : ಬುಡದ ಅಗಲ ೫ರಿಂದ ೮ ಮೀ.ಗಳು, ಎತ್ತರ ೪೫ರಿಂದ ೬೦ಸೆಂ.ಮೀ.ಗಳು ಮತ್ತು ನಿಧಾನವಾಗಿ ಇಳಿಜಾರಾಗುತ್ತಾ ಹೋಗುವ ವಿಶಾಲ ತಳದ ಬದುಗಳು ವರ್ಟಿಸೋಲ್‌ಗಣಕ್ಕೆ ಸೇರಿದ ಮಣ್ಣಿನಲ್ಲಿ ಪ್ರಯೋಜನಕಾರಿ ಎಂದು ಕಂಡುಬಂದಿದೆ. ಈ ಬದುಗಳ ನಿರ್ಮಾಣದಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆಯಾಗುತ್ತದೆಯಲ್ಲದೇ ಬದುವಿಗೆ ಸೂಕ್ತ ಇಳಿಜಾರನ್ನಿಟ್ಟರೆ ಹೆಚ್ಚಾದ ನೀರು ಭೂಮಿಗೆ ಅಪಾಯ ತಟ್ಟದಂತೆ ಹೊರ ಹೋಗಲು ಸಾಧ್ಯವಾಗುತ್ತದೆ. ಬದುವಿನ ಆರಂಭದಿಂದ ಕೊನೆಯವರೆಗೆ ಒಂದೇ ಪ್ರಮಾಣದ ಇಳಿಜಾರನ್ನಿಡಬಹುದು. ಇಲ್ಲವೇ ಇಳಿಜಾರಿನ ಪ್ರಮಾಣವನ್ನು ಅವಶ್ಯ ಕಂಡರೆ ಬದಲಿಸಲೂಬಹುದು. ಬದುಗಳು ವಿಶಾಲವಾಗಿರುವುದರಿಂದ ಎಲ್ಲ ಭಾಗಗಳಲ್ಲಿಯೂ ಬೆಳೆಯನ್ನು ಬೆಳೆಯಲು ಸಾಧ್ಯವಾಗಿ ಇಡೀ ಪ್ರದೇಶದ ಸದುಪಯೋಗವಾಗುತ್ತದೆ.

ii) ಲಂಬ ಆಚ್ಛಾದನೆ  (Vertical Mulch) : ಪ್ರತಿ ೪ರಿಂದ ೬ ಮೀ. ಅಥವಾ ಯೋಗ್ಯವೆನಿಸಿದ ಇತರ ಅಂತರದಲ್ಲಿ, ಇಳಿಜಾರಿಗೆ ಅಡ್ಡವಾಗಿ ಸುಮಾರು ಒಂದು ಮೀ. ಆಳದ ಕಾಲುವೆಯನ್ನು ಅಗೆಯಬೇಕು. ಈ ಕಾಲುವೆಯಲ್ಲಿ ಜೋಳದ ದಂಟು, ಹತ್ತಿ ಕಟ್ಟಿಗೆ, ತೊಗರಿ ಕಟ್ಟಿಗೆ ಇತ್ಯಾದಿ ಸಾವಯವ ವಸ್ತುಗಳನ್ನು ಮೇಲ್ಮುಖವಾಗಿರುವಂತೆ ತುಂಬಬೇಕು. ಈ ಸಾವಯವ ವಸ್ತುಗಳು ನೆಲದಿಂದ ೧೦ರಿಂದ ೧೫ ಸೆಂ.ಮೀ. ಮೇಲೆ ಕಾಣುವಂತಿರಬೇಕು. ಮೇಲ್ಭಾಗದಿಂದ ಹರಿದು ಬರುವ ನೀರು ಈ ಕಾಲುವೆಗಳಲ್ಲಿ ಇಂಗುತ್ತದೆ. ಹೀಗಾಗಿ ಎರಡು ಕಾಲುವೆಗಳ ಮಧ್ಯದಲ್ಲಿರುವ ಬೆಳೆಗಳಿಗೆ ಹೆಚ್ಚು ನೀರಿನ ಪೂರೈಕೆಯಾದಂತಾಗುತ್ತದೆ. ಮಳೆ ಕಡಿಮೆ ಆಗುವ ವರ್ಷಗಳಲ್ಲಿ ಲಂಬ ಆಚ್ಛಾದನೆಯ ಪ್ರಯೋಜನವು ಎದ್ದು ಕಾಣುತ್ತದೆ.

ಹೆಚ್ಚಾಗಿರುವ ನೀರಿನ ಸಂಗ್ರಹ ಮತ್ತು ಬಳಕೆ: ಇಲ್ಲಿಯವರೆಗೆ ವಿವರಿಸಿದ ವಿವಿಧ ವಿಧಾನಗಳನ್ನು ಅನುಸರಿಸಿದರೂ ಮಳೆಯ ನೀರೆಲ್ಲವೂ ಮಣ್ಣಿನಲ್ಲಿ ಇಂಗದೆ ಹೆಚ್ಚಿನ ಭಾಗ ಹರಿದು ಹೊರ ಹೋಗುವ ಸಾಧ್ಯತೆಗಳೇ ಅಧಿಕ. ಹೆಚ್ಚಾದ ಈ ನೀರನ್ನು ಭೂ ಪ್ರದೇಶದ ಹೊರ ಹೋಗಲು ಬಿಡದೇ, ಸೂಕ್ತ ಸ್ಥಳದಲ್ಲಿ ಅಥವಾ ಸ್ಥಳಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ಅವುಗಳಲ್ಲಿ ಸಂಗ್ರಹಿಸಿಟ್ಟರೆ ಮಣ್ಣಿನಲ್ಲಿ ನೀರಿನ ಕೊರತೆಯಾದ ಸಂದರ್ಭಗಳಲ್ಲಿ ಈ ನೀರನ್ನು ಪೂರೈಸಿ ಬೆಳೆಗಳ ಇಳುವರಿಯನ್ನು ಹೆಚ್ಚಿಸಬಹುದು. ನೀರಿನ ಸಂಗ್ರಹಕ್ಕೆ ನಿರ್ಮಿಸಬೇಕಾದ ಕೃಷಿ ಹೊಂಡಗಳ ಬಗ್ಗೆ ಕೆಲವು ಪ್ರಮುಖ ವಿವರಗಳು ಮುಂದಿನಂತಿವೆ:

 • ಕೃಷಿ ಹೊಂಡಗಳನ್ನು ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು. ಸ್ವಾಭಾವಿಕವಾಗಿ ತಗ್ಗಿರುವ ಪ್ರದೇಶದಲ್ಲಿ ಮತ್ತು ಹೊಂಡದ ಕೆಳಭಾಗದ ಪ್ರದೇಶಗಳ ಬೆಳೆಗಳಿಗೆ ಗುರುತ್ವಾಕರ್ಷಣೆಯಿಂದ ಹರಿ ನೀರಾವರಿಯನ್ನು (Gravitational flow)  ಕೊಡಲು ಅನುಕೂಲವಾದ ಸ್ಥಳಕ್ಕೆ ಪ್ರಾಶಸ್ತ್ಯ ಕೊಡಬೇಕು.
 • ಒಂದು ಹೆಕ್ಟೇರು ಭೂಮಿಯಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು ಸುಮಾರು ೧೫೦ ಘನ ಮೀ. ಅಳತೆಯ ಹೊಂಡವು ಬೇಕಾಗುತ್ತದೆ.
 • ಹೊಂಡದ ಆಳವನ್ನು ೨.೫ ಮೀ.ನಿಂದ ೩ ಮೀ. ಇಡಬೇಕು.
 • ಬದಿಯ ಇಳಿಜಾರನ್ನು ೧.೫:೧ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು.
 • ಅವಶ್ಯಕತೆಗೆ ಅನುಗುಣವಾಗಿ ದೊಡ್ಡದೊಡ್ಡ ಹೊಂಡಗಳನ್ನು ನಿರ್ಮಿಸಿಕೊಳ್ಳಬಹುದು. ಆದರೆ ಪ್ರತಿ ೨-೩ ಹೆಕ್ಟೇರು ಭೂಮಿಯಿಂದ ಹರಿದು ಬರುವ ಹೆಚ್ಚಾದ ನೀರಿಗೆ ಒಂದರಂತೆ ಸಣ್ಣ ಸಣ್ಣ ಹೊಂಡಗಳನ್ನು ನಿರ್ಮಿಸಿಕೊಳ್ಳುವುದು ಉತ್ತಮ.
 • ನೀರಿನೊಡನೆ ಬಂದ ರೇವೆಯು ಕೃಷಿ ಹೊಂಡದಲ್ಲಿ ಸಂಗ್ರಹಗೊಳ್ಳುವುದನ್ನು ತಪ್ಪಿಸಲು ಹೊಂಡವನ್ನು ನೀರು ಪ್ರವೇಶಿಸುವುದಕ್ಕಿಂತ ಸ್ವಲ್ಪ ಮೊದಲು ಸೂಕ್ತ ಆಕಾರದ ರೇವೆ ಶೇಖರ ಪೆಟ್ಟಿಗೆಯ (Silt trap) ನಿರ್ಮಾಣ ಮಾಡಬೇಕು.
 • ಕೃಷಿ ಹೊಂಡದ ಏರಿಯು (ಬದುವು) ಕುಸಿಯದೇ ಸ್ಥಿರವಾಗಿರುವಂತೆ ಮಾಡಲು ಹೊಂಡದ ಸುತ್ತ ಹುಲ್ಲು ಮತ್ತು ಗಿಡಗಳನ್ನು (ಹಣ್ಣಿನ ಗಿಡಗಳನ್ನು ಬೆಳೆಸುವುದು ಪ್ರಶಸ್ತ) ಬೆಳೆಸಬೇಕು.
 • ಹೊಂಡದೊಳಗೆ ಸಂಗ್ರಹಗೊಂಡ ನೀರನ್ನು, ನೀರಾವರಿಗೆಂದು ಬಳಸಬಹುದು.
 • ನೀರು ಹರಿದು ಬಂದ ಕ್ಷೇತ್ರದ ೧/೪ ರಿಂದ ೧/೩ ಪ್ರದೇಶಕ್ಕೆ ಎರಡು ಬಾರಿ ನೀರನ್ನು ಪೂರೈಸಬಹುದು.