ವಿವಾಹ ಬಾಹಿರ ಪ್ರಣಯ/ಪಾತಿವ್ರತ್ಯ ಉಲ್ಲಂಘನೆ:

ಪುರುಷ ಪ್ರಧಾನ ಸಮಾಜದಲ್ಲಿ ಪಾತಿವ್ರತ್ಯ ಹೆಣ್ಣಿನ ಅತ್ಯಂತ ಶ್ರೇಷ್ಠ ಮೌಲ್ಯವೆಂದು, ಅದನ್ನು ಮೀರಿ ನಡೆದ ಹೆಣ್ಣನ್ನು ಅಪವಿತ್ರಳು, ನೀತಿ ಬಾಹಿರಳೆಂದೂ ತಿರಸ್ಕಾರದಿಂದ ನೋಡಲಾಗುತ್ತದೆ. ಶೀಲ ಪಾವಿತ್ಯ್ರದಂತಹ ಕಟ್ಟುಪಾಡುಗಳನ್ನು ಪ್ರಧಾನ ವ್ಯವಸ್ಥೆ ಹೆಣ್ಣಿಗೆ ಮಾತ್ರ ಹೇರಿದೆ. ಆದರೆ ಗಂಡು ಸ್ವೇಚ್ಛಾಚಾರಿಯಾಗಿದ್ದರೂ ಹೆಂಡತಿ ತನಗೆ ನಿಷ್ಠಳಾಗಿರಬೇಕೆಂದು ಬಯಸುತ್ತಾನೆ. ಪ್ರೇಮ-ಕಾಮದ ನೈಸರ್ಗಿಕ ಆಕರ್ಷಣೆಗೆ ಗಂಡು-ಹೆಣ್ಣು ಒಳಗಾಗುವುದು ಸ್ವಭಾವಿಕ. ಇಂತಹ ಸಂದರ್ಭದಲ್ಲಿ ಹೆಣ್ಣಿಗೆ ಮಾತ್ರ ಅಪವಾದಗಳು. ಮದುವೆಯಾದ ಹೆಣ್ಣಂತೂ ಅನೇಕ ಬಗೆಯ ಅಗ್ನಿದಿವ್ಯಗಳನ್ನು ಸಮಾಜದಲ್ಲಿ ಎದುರಿಸಬೇಕಾಗುತ್ತದೆ.

ಜನಪದ ಕಾವ್ಯದಲ್ಲಿ ಪಾತಿವ್ರತ್ಯದ ಕಟ್ಟುಪಾಡುಗಳನ್ನು ಮುರಿದು ಜೀವಪರವಾದ ಪ್ರೇಮ ಸಂಬಂಧಗಳನ್ನಿರಿಸಿಕೊಂಡ ಸಂಗತಿಗಳು ದಾಖಲಾಗಿವೆ. ದಾಂಪತ್ಯದಲ್ಲಿ ವಿರಸವಿದ್ದಾಗ ಗಂಡ ತನಗೆ ತಕ್ಕವನಲ್ಲ ಎನಿಸಿದಾಗ ಹೆಣ್ಣು ತನ್ನ ಮನಕ್ಕೊಪ್ಪಿದ ಪುರುಷನನ್ನು ಬಯಸಿ ಸ್ನೇಹ ಮಾಡಿದ್ದಾಳೆ. ಸ್ನೇಹ-ಪ್ರೇಮ ಸಂಬಂಧಗಳು ಗುಟ್ಟಾಗಿಯೂ; ಕೆಲವು ಸಲ ಬಹಿರಂಗವಾಗಿಯೂ ನಡೆದಿವೆ.

ಪಂಜರದ ಗಿಣಿ ನಾನು ಬರಲಾರೆ ತಾವಿಲ್ಲ
ದನಿ ತೋರಲಾರೆ ತೆರನಿಲ್ಲ ನನ ಗೆಣೆಯ
ಗಿಣಿಯಾಗಿ ಬಾರೋ ಹೊಸಲೀಗೆ

ಎಂದು ಸೂಚ್ಯವಾಗಿ ಪ್ರಿಯಕರನನ್ನು ಕರೆದಿದ್ದಾಳೆ.

ದನಿ ಹೆಂಗೆ ತೋರಲಿ ಕದ ಹೆಂಗೆ ತರೆಯಾಲಿ
ಮಗ್ಗುಲಲ್ಲವನೆ ಮನೆಪುರುಷ ಎಲೆ ಗೆಣಿಯ
ಮಗ್ಗ್ಯಾಗಿ ಬಾರೋ ತುರುಬೀಗೆ

ಎನ್ನುವಲ್ಲಿ ಅವಳ ಧೈರ್ಯ, ಸದಾ ಅವನು ತನ್ನ ಮುಡಿಯ ಮಲ್ಲಿಗೆಯಾಗಿ ತನ್ನೊಡನೆ ಇರಬೇಕೆನ್ನುವ ಬಯಕೆಯಲ್ಲಿ ಅವರ ಪ್ರೀತಿಯ ಆಳವನ್ನು ಅರಿಯಬಹುದು. ಈ ಪ್ರಣಯಿಗಳು ಸೊಪ್ಪು-ಸೌದೆ ತರುವ ನೆಪ ಹೂಡಿ ಕಾಡಿನಲ್ಲಿ ಒಂದಾಗಲು ಇಚ್ಛಿಸಿದ್ದಾರೆ. ತಮ್ಮ ಪ್ರೇಮ ಸಂಬಂಧ ಬಹಿರಂಗವಾದಲ್ಲಿ ಹೊಳೆಯಲ್ಲಿ ತೇಲಿ ಹೋಗಲು ಮುಂದಾಗಿದ್ದಾರೆ.

ಇಂತಹ ಮತ್ತೊಂದು ಕಥನ ಗೀತೆ ಹೊಸ ಹರೆಯದ ಹೆಣ್ಣಿಗೆ ಗಂಡಿನ ಪ್ರೀತಿ-ಪ್ರೇಮ-ಕಾಮದ ಸೆಳೆತ ಎಷ್ಟೊಂದು ತೀವ್ರವಾದುದು ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸುತ್ತದೆ.

ಪ್ರಾಯದ ಗಂಡು, ಕಿರಿ ವಯಸ್ಸಿನ ಬಾಲೆಯರನ್ನು ಹಿರಿಯರ ಇಚ್ಛೆಯಂತೆ ಮದುವೆಯಾಗುತ್ತಾನೆ. ಹೆಂಡತಿ ಮನೆಗೆ ಬಂದ ಕೆಲದಿನಗಳಲ್ಲಿಯೇ ಬೇಟೆಯ ನೆಪದಿಂದ ಊರು ಬಿಟ್ಟು ಹೋಗುತ್ತಾನೆ. ಅವನಿಲ್ಲದೆ ಕೆಲ ವರ್ಷಗಳು ಕಳೆದು ಹೋಗುತ್ತವೆ. ಮದುವೆಯಾಗಿ ಬಂದ ಬಾಲೆ ಪ್ರಾಯಕ್ಕೆ ಬರುತ್ತಾಳೆ. ತನ್ನ ಗಂಡ ಇಂದಲ್ಲ ನಾಳೆ ಬರಬಹುದೆಂದು ಕಾಯುತ್ತಾಳೆ. ಅವಳ ಆಶೆಗಳು ನುಚ್ಚು ನೂರಾಗುತ್ತವೆ. ವಿರಹ ವ್ಯಥೆಯಲ್ಲಿ ಅತ್ತೆಯ ಮನೆಯಲ್ಲಿ ಕಾಲ ಕಳೆಯುತ್ತಿರುವಾಗ ಅವಳಿಗೆ ರಸಿಕ ಯುವಕನ ಪರಿಚಯವಾಗಿ ಪ್ರೇಮ ಸಂಬಂಧ ಬೆಳೆಯುತ್ತದೆ. ಆ ಪ್ರೇಮ-ಕಾಮದ ಸುಳಿಯಲ್ಲಿ ಸಿಕ್ಕು ತನ್ನ ಗಂಡನನ್ನು ಮರೆಯುತ್ತಾಳೆ.

ಅರಗಿನ ಗುಡ್ಡಕ್ಕೆ ಪುನುಗಿನ ಬೇಟೆಗೆ ಹೋದ ಗಂಡ ಹಿಂತಿರುಗಿ ಬರುತ್ತಾನೆ. ಹೆಂಡತಿಯಾದವಳು ಗಂಡ ಹೊರಗಿನಿಂದ ಬಂದರೆ ಕಾಲಿಗೆ ನೀರುಕೊಟ್ಟು ಆದರಿಸುವದು ಸಂಪ್ರದಾಯ. ಅವನು ಬಂದುದು ಗೊತ್ತಾದರೂ ಅವಳು ಕಾಲಿಗೆ ನೀರು ಕೊಡುವುದಿಲ್ಲ. ಅವಳಿಗೆ ವಂಚನೆ ಮಾಡಿ ಹೋದ ಗಂಡನ ಬಗೆಗೆ ತಿರಸ್ಕಾರವಿದೆ. ಅವಳ ಮನಸ್ಸಿನಲ್ಲಿಯೂ ಗೆಣೆಯನೊಬ್ಬನಿದ್ದಾನೆ. ಆದ್ದರಿಂದ ಆಕೆ ಮೊದಲು ಸಂಪ್ರದಾಯವನ್ನು ನಿರಾಕರಿಸುತ್ತಾಳೆ. ಗಂಡ ಮಾತನಾಡಿಸಿದಾಗ ಮಾತಿಗೆ ಎದುರುತ್ತರ ಕೊಡುತ್ತಾಳೆ. ‘‘ಬಳೆಯ ತೋಳೊಳಗೆ ಒರಗಿದ್ದೆ’’ ಎಂದು ಅವನು ಹೇಳಿದಾಗ ಹೇಸಿದ ಅವಳ ಮನಸ್ಸು ಬಂಡೇಳುತ್ತದೆ.

ನಾ ನಿನ್ನ ತರುವಾಗ ನೀನು ಸಣ್ಣಾವಳಲ್ಲೇ
ಈಗೆಲ್ಲಿ ಕಲಿತೆ ಹೊಸ ಮಾತ | ನನ ರಂಬೆ
ನುಡಿ ಬಿಟ್ಟು ನೀರು ಕೊಡ ಬಾರೆ

ಎಂದು ಅವಳ ಮನ ಒಲಿಸುವ ನಾಟಕವಾಡುತ್ತಾನೆ. ಆಗ

ಹುಟ್ಟಿದ ಮಲ್ಲಿಗೆ ಹುಟ್ಟಿದ್ಹಂಗ ಇರವೋದೇ
ಮತ್ತೊಂದು ಗೇಣು ಬೆಳೆದಾರೆ | ಹೂವರಳಿದರೆ
ಉಗುರಿದ್ದ ಜಾಣ ಬಿಡಿಸಾನೆ

ಎಂದು ಅವನ ಪ್ರಶ್ನೆಗೆ ಅವಳು ಕೊಡುವ ಉತ್ತರ ಮಾರ್ಮಿಕವಾಗಿದೆ. ಪುರುಷ ಸ್ಥಾಪಿಸಿ ಮೌಲ್ಯವನ್ನು ಹುಸಿಗೊಳಿಸಿದ ಹೆಣ್ಣಿನ ಸಹಜ ಬಯಕೆಯ ಒಳಲೋಕವನ್ನು ನಾವು ಗ್ರಹಿಸಬೇಕಾಗಿದೆ.

‘‘ನುಚ್ಚಾಯ್ತು ನೀರ ಹೊಳಿಯಾಗ’’ ಎಂಬಂತಹ ಹಾಡುಗಳಲ್ಲಿ ಗೆಣೆಯ ಸತ್ತು ಹೋದಾಗ, ತನಗಾದ ದುಃಖವನ್ನು ಅತ್ತೆಯ ಮನೆಯಲ್ಲಿ ಬಹಿರಂಗಪಡಿಸಲಾಗದೆ, ಒಡೆದು ಹೋದ ಮಣ್ಣಿನ ಕೊಡದ ನೆಪ ಮಾಡಿ ಶೋಕಿಸುವ ಹೆಣ್ಣಿನ ಪರಿಸ್ಥಿತಿ ಎಂತಹ ಬಿಕ್ಕಟ್ಟಿನದೆಂದು ಊಹಿಸಬಹುದು.

ಬುಡಕಟ್ಟು ಜನಾಂಗಕ್ಕೆ ಸೇರಿದ ‘‘ಮಲೆಯ ಮಾದೇಶ್ವರ’’ನ ಕಾವ್ಯ ಪುರುಷಾಧೀನವನ್ನು ದಾಟಿ, ಪಾತಿವ್ರತ್ಯದ ನಿರ್ಬಂಧಗಳನ್ನು ಮುರಿದು ತಾಯ್ತನಕ್ಕಾಗಿ ಹಂಬಲಿಸಿದ ಹೆಣ್ಣಿನ ತುಡಿತವನ್ನು ಪ್ರಾಮಾಣಿಕವಾಗಿ ದಾಖಲಿಸುತ್ತದೆ.

ಸೋಲಿಗರ ನೀಲಯ್ಯ ಪಶುಪಾಲಕ. ತುಂಬೆ ಸೋಲಿಗನ ದೊಡ್ಡಿಯ ಚೆಂದದ ಹೆಣ್ಣು ಸಂಕಮ್ಮನನ್ನು ಮೆಚ್ಚಿ ಮದುವೆಯಾಗುತ್ತಾನೆ. ಕೂಡು ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬಂದು ನೀಲಯ್ಯ-ಸಂಕಕಮ್ಮ ಬೇರೆ ಗುಡಿಸಲಿನಲ್ಲಿ ವಾಸವಾಗುತ್ತಾರೆ. ಅವರ ಜಾತಿ ಸಂಪ್ರದಾಯದಂತೆ ನೀಲಯ್ಯನಿಗೆ ಬೇಟೆಗೆ ಹೊರಡಲು ಕರೆ ಬರುತ್ತದೆ. ಚಿಕ್ಕ ಪ್ರಾಯದ ಚೆಂದುಳ್ಳಿ ಹೆಂಡತಿ ಸಂಕಮ್ಮನನ್ನು ಒಬ್ಬಳನ್ನೇ ಗುಡಿಸಲಿನಲ್ಲಿ ಬಿಟ್ಟು ಹೋಗಲು ಆತಂಕ. ಅವಳ ಶೀಲ ಸಂರಕ್ಷಣೆಯ ಬಗೆಗೆ ಅವನ ಚಿಂತೆ. ಹೊರಡುವ ಮುನ್ನ ಶೀಲ ಕಾಪಾಡಿಕೊಳ್ಳುವ ಬಗ್ಗೆ ಸಂಕಮ್ಮ ಭರವಸೆ ಕೊಡಬೇಕೆಂದು ಅವಳಲ್ಲಿ ಬಲಗೈ ಭಾಷೆ ಕೇಳುತ್ತಾನೆ. ಒತ್ತಾಯಿಸುತ್ತಾನೆ, ಹಟ ಹಿಡಿಯುತ್ತಾನೆ. ಆದರೆ ಸಂಕಮ್ಮ ಭಾಷೆ ಕೊಡಲು ನಿರಾಕರಿಸುತ್ತಾಳೆ. ಕಾರಣ ವೈಯಕ್ತಿಕ ಸ್ವಾತಂತ್ಯ್ರದ ಪ್ರಶ್ನೆ. ಬೇಟೆಗೆ ಹೋದವನು ಸುರಕ್ಷಿತವಾಗಿ ಹಿಂತಿರುಗಿ ಬರುತ್ತಾನೆಂಬ ಭರವಸೆ ಅವಳಿಗಿಲ್ಲ. ಅವನು ಬರದೇ ಹೋದರೆ ಒಂಟಿಯಾಗಿ ಬದುಕನ್ನು ಕಳೆಯಲು ಅವಳ ಮನಸ್ಸು ಒಪ್ಪದು. ಆದ್ದರಿಂದ ಅವನು ಭಾಷೆಯನ್ನು  ಕೇಳಿದಾಗ ಅವನ ಸ್ವಾರ್ಥದ ಅರಿವಾಗುತ್ತದೆ. ತನ್ನ ಸ್ವಾಭಿಮಾನಕ್ಕೆ, ಆತ್ಮಸಾಕ್ಷಿಗೆ ವಂಚನೆ ಮಾಡಿಕೊಳ್ಳದೇ ಸಂಕಮ್ಮ ಭಾಷೆ ಕೊಡಲು ನಿರಾಕರಿಸಿ-

ನೀನು ಕಟ್ಟಿದ್ದ ತೆರವ ತಕ್ಕಯ್ಯ
ನನ್ನ ಹಟ್ಟಿಂದಾಚೆ ಕಳುವಯ್ಯ
ನಿನ್ನ ದಾರಿಯ ನೀನು ನೋಡಯ್ಯ
ನನ್ನ ದಾರಿಯ ನಾನು ನೋಡ್ತೀನಿ
ನಾನು ಬಲಗೈ ಮುಟ್ಟಿ ಭಾಷೆ ಕೊಡುವಂತ
ಮಗಳಲ್ಲ ಹೋಗೋ ಯಜಮಾನ

ಎಂದು ಪ್ರತಿಭಟಿಸುತ್ತಾಳೆ. ನೀಲಯ್ಯ ಎಷ್ಟೇ ದಿಗ್ಬಂಧನಗಳನ್ನು ಹಾಕಲು ಪ್ರಯತ್ನಿಸಿದರೂ ಸಂಕಮ್ಮ ಅವೆಲ್ಲವನ್ನು ದಾಟಿ ಮಾತೃ ಪ್ರಧಾನ ವ್ಯವಸ್ಥೆಯ ಸ್ತ್ರೀಶಕ್ತಿಯನ್ನು ಮೆರೆಯುತ್ತಾಳೆ. ನೀಲಯ್ಯ ನಿಲ್ಲದಾಗ ಮಾದೇಶ್ವರ ಗುಡಿಲಿಗೆ ಬಂದಾಗ ಅವನಲ್ಲಿ ತಾನಾಗಿಯೇ ಸಂತಾನದ ಬಯಕೆಯನ್ನು ವ್ಯಕ್ತಪಡಿಸಿ ತಾಯ್ತತನಕ್ಕಾಗಿ ತುಡಿಯುತ್ತಾಳೆ. ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿದ ಜೀವಪರವಾದ ಹಂಬಲ ಸಂಕಮ್ಮನ ಬಯಕೆಯ ಮೂಲಕ ವ್ಯಕ್ತವಾಗಿದೆ.

ಜನಪದ ಕಾವ್ಯಗಳಲ್ಲಿ ಸ್ತ್ರೀಪಾತ್ರಗಳು

ಮಹಿಳೆಯರಿಂದಲೇ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಜನಪದ ರಾಮಾಯಣ, ಮಹಾಭಾರತದಂತಹ ಕಾವ್ಯಗಳು ಸ್ತ್ರೀ ಕೇಂದ್ರಿತವಾಗಿರುವದು ಗಮನಾರ್ಹ.

ಸ್ತ್ರೀಕೇಂದ್ರಿತವಾಗಿರುವ ಈ ಕಾವ್ಯಗಳಲ್ಲಿ ಪುರುಷನ ವೀರತ್ವವಾಗಲಿ, ಶ್ರೇಷ್ಠತೆಯಾಗಲಿ ಯಾವುದೇ ಮಹತ್ವ ಪಡೆದುಕೊಳ್ಳದೇ ಸೀತೆ, ಶೂರ್ಪನಖಿ, ದ್ರೌಪದಿ, ಸುಭದ್ರೆಯರು ತಮ್ಮ ಅಂತಃಶಕ್ತಿಯಿಂದ ಪುರುಷ ಸಮಾಜಕ್ಕೆ ಒಡ್ಡುವ ಸವಾಲುಗಳಿಂದ ಗಮನ ಸೆಳೆಯುತ್ತಾರೆ.

ಆರ್ಯ ಸಂಸ್ಕೃತಿಯು ಭಾರತದ ಇತರ ಸಂಸ್ಕೃತಿಗಳ ಮೇಲೆ ದಟ್ಟವಾಗಿ ಪ್ರಭಾವ ಬೀರುತ್ತಾ ಬಂದಿದ್ದು, ಇಂದು ಆರ್ಯ ದ್ರಾವಿಡ ಭೇದವನ್ನು ಗೆರೆ ಎಳೆದು ತೋರಿಸಲು ಸಾಧ್ಯವಾಗದಷ್ಟು ಎರಡೂ ಸೇರಿ ಹೋಗಿವೆ. ಆದರೆ ಹೆಣ್ಣಿನ ವಿಚಾರದಲ್ಲಿ ದ್ರಾವಿಡ ಸಂಸ್ಕೃತಿಯಲ್ಲಿದ್ದ ಇತ್ಯಾತ್ಮಕ ಅಂಶಗಳು; ದುಡಿಯುವ ವರ್ಗದಲ್ಲಿ ಹಾಗೂ ವೈದಿಕ ಸಂಸ್ಕೃತಿಯ ಪ್ರಭಾವಕ್ಕೆ ಹೆಚ್ಚಾಗಿ ತೆರೆದುಕೊಳ್ಳದ ಜನವರ್ಗದಲ್ಲಿ ಇರುವುದನ್ನು ಕಾಣುತ್ತೇವೆ. ಇಂತಹ ಜನರು ರಚಿಸಿದ ಕಾವ್ಯಗಳು ಹೆಣ್ಣಿನ ಗುಣಾತ್ಮಕ ಅಂಶಗಳನ್ನು ತೆರೆದು ತೋರುತ್ತವೆ (ಲೇ. ಡಾ.ಆರ್. ಸುನಂದಮ್ಮ, ಸ್ತ್ರೀ ಕೇಂದ್ರಿತ ಕಾವ್ಯಗಳಾಗಿ ಜನಪದ ರಾಮಾಯಣ ಮಹಾಭಾರತಗಳು. ಪುಸ್ತಕ ಜಾನಪದ ಸಾಹಿತ್ಯದ ಮಹಿಳಾ ಜಗತ್ತು ಪುಟ. ೨೨).

ಶೂರ್ಪನಖಿ

ಶಿಷ್ಟ ರಾಮಾಯಣದಲ್ಲಿ ಶೂರ್ಪನಖಿ ಕಾಮಲುಕ ಹೆಂಗಸಾಗಿ ರಾಮ ಲಕ್ಷಣರನ್ನು ಮೋಹಿಸುತ್ತಾಳೆ. ಅನೇಕ ದುಷ್ಟ ಕಾರ್ಯಗಳಿಗೆ ಅಣ್ಣ ರಾವಣನನ್ನು  ಪ್ರಚೋದಿಸುವ ಹೆಣ್ಣಗಿ ಚಿತ್ರಿತಳಾಗಿದ್ದಾಳೆ.

ಆದರೆ ಜನಪದ ರಾಮಾಯಣದಲ್ಲಿ ಶೂರ್ಪನಖಿ ತನಗೆ ಅವಮಾನ ಮಾಡಿದ ಅಣ್ಣ ರಾವಣನ ಮೇಲೆ ಸೇಡು ತೀರಿಕೊಳ್ಳುವ ಸ್ತ್ರೀ ಶಕ್ತಿಯಾಗಿ ಚಿತ್ರಿತಳಾಗಿದ್ದಾಳೆ.

ಜನಪದ ರಾಮಾಯಣದ ಶೂರ್ಪನಖಿ ಮದುವೆಯಾದ ಹೆಣ್ಣು. ಅವಳ ಗಂಡ ಹಲ್ಲೂರ ಪಾತಾಳ ಲೋಕದ ದೊರೆ. ರಾವಣ ಮೊದಲಿನಿಂದಲೂ ಮಹತ್ವಾಕಾಂಕ್ಷಿ. ದೇವಲೋಕ, ಭೂಲೋಕವನ್ನು ಗೆದ್ದ ರಾವಣ ಪಾತಾಳ ಲೋಕದ ದೊರೆ ಹಲ್ಲೂರ ತನಗೆ ಶರಣಾಗಬೇಕೆಂದು ಬಯಸುತ್ತಾನೆ. ಆದರೆ ಹಲ್ಲೂರ ಇದನ್ನು ನಿರಾಕರಿಸುತ್ತಾನೆ. ಅವಮಾನಿತನಾದ ಮರಣ ಅವನನ್ನು ಕೊಲ್ಲಿಸುತ್ತಾನೆ. ಅಣ್ಣನ ದುಷ್ಟತನದಿಂದ ನೊಂದ ಶೂರ್ಪನಖಿ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾಳೆ. ಇದಕ್ಕಾಗಿ ತನ್ನ ಮಗನನ್ನು ಅಣ್ಣನ (ರಾವಣ) ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಪ್ರಚೋದಿಸುತ್ತಾಳೆ.

ನಿನ್ನಂತ ಶೂರರಿಲ್ಲ
ನಿನ್ನ ಮುಂದೆ ನಿಂತೋರಿಲ್ಲ
ಹತ್ತು ತಲೆ ರಾವ್ಳ
ಅವನೊಪ್ಪಾವ ಮಾಡಬೇಕು.

ಇದು ಮಗನಿಗೆ ಶೂರ್ಪನಖಿಯು ನೀಡುವ ಪ್ರಚೋದನೆ ಮಗನಲ್ಲಿ ಬಿತ್ತುವ ಸೇಡಿನ ಬೀಜ ಮತ್ತು ಧೈರ್ಯ ತಾಯಿಯ ಮಹತ್ವವನ್ನು ಪ್ರತಿನಿಧಿಸುವಂತಿದೆ. ಒಂದು ಪ್ರಸಂಗದಲ್ಲಿ ಇವಳ ಮಗ ‘ಸಣ್ಕುಮಾರ’ ಲಕ್ಷ್ಮಣನಿಂದ ಕೊಲ್ಲಲ್ಪಡುತ್ತಾನೆ. ಹೀಗಾಗಿ ಲಕ್ಷ್ಮಣನನ್ನು ಮೋಹಿಸುವ ಸಂಚು ಹೂಡುತ್ತಾಳೆ. ಅವನು ಅವಳ ಮೊಲೆ, ಮೂಗುಗಳನ್ನು ಕತ್ತಿರಿಸಿದಾಗ ಅವಳು ಲೈಂಗಿಕವಾಗಿ ನಿಷ್ಕ್ರಿಯಳಾಗುವಳು. ಒಟ್ಟು ವೈರಿಗಳನ್ನೆಲ್ಲ ನಾಶ ಮಾಡುವ ಹುನ್ನಾರಿನಲ್ಲಿ ಶೂರ್ಪನಶಿ, ಅಣ್ಣ ರಾವಣನಿಗೆ ಸುಂದರಿಯಾದ ಸೀತೆಯ ಆಮಿಷವನ್ನೊಡ್ಡುತ್ತಾಳೆ. ರಾಮ-ಲಕ್ಷ್ಮಣರ ಸಾಮರ್ಥ್ಯವನ್ನರಿತಿದ್ದ ಆಕೆ ಅಣ್ಣನ ವಿನಾಶಕ್ಕೆ ದಾರಿ ಹುಡುಕುತ್ತಾಳೆ.

ಹೀಗೆ ಈ ಜನಪದ ರಾಮಾಯಣದ ಶೂರ್ಪನಖಿ ತನಗಾದ ಅನ್ಯಾಯಕ್ಕೆ ಹೋರಾಡುವ, ಪ್ರತಿಭಟಿಸುವ ಸ್ತ್ರೀಶಕ್ತಿಯಾಗಿ ಕಂಡು ಬರುತ್ತಾಳೆ.

ಸೀತೆ:

ಶೂರ್ಪನಖಿ, ರಾಮ, ರಾವಣರಿಂದ ಅನೇಕ ಕಷ್ಟ ಪರಂಪರೆಗಳಿಗೆ ಸಿಲುಕಿದ ಸೀತೆ, ರಾಮನೊಡ್ಡುವ ಪರೀಕ್ಷೆಗಳಿಗೆ ಗುರಿಯಾಗಿಯೂ ಕೊನೆಯಲ್ಲಿ ಭೂಮಿ ತಾಯೊಡಲನ್ನು ಪ್ರವೇಶಿಸಿದ್ದು ‘‘ಮೌನ’’ ಪ್ರತಿಭಟನೆಯಾಗಿದೆ.

ಮಹಾಭಾರತದ ದ್ರೌಪದಿ:

ಜನಪದ ಮಹಾಭಾರತದಲ್ಲಿ ದ್ರೌಪದಿಯ ಪಾತ್ರ ಶಿಷ್ಟ ಕಾವ್ಯಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ರಾಮಾಯಣದ ಸೀತೆಯಂತಹ ಪಾತ್ರ ಇವಳದಲ್ಲ. ಜನಪದರು ಇವಳನ್ನು ಬೆಂಕಿಯ ಮಗಳೆಂದು ಕರೆದಿರುವದು ಇವಳ ಹುಟ್ಟು ಗುಣವನ್ನು ಸೂಚಿಸುತ್ತದೆ.

ಬೆಂಕೀಯ ಉಟ್ಟಾಳೆ ಬೆಂಕೀಯ ತೊಟ್ಟಾಳೆ
ನಿಂತ ಛತ್ರಿಯ ನೆರಳಾಗೆ ಹೊಗೆಮೀರಿ ಓಕುಳಿನಾಡಿ
ಕೆಂಚಾರೆ ಮಡದಿ ಕರ್ಣಯ್ಯ

ದ್ರೌಪದಿ ಜನಪದ ಕಾವ್ಯದಲ್ಲಿ ಗಂಡಿನ ಪ್ರತಿಸ್ಪರ್ಧಿ. ತನಗೆ ಬರುವ ವಿಪತ್ತುಗಳನ್ನು ತಾನೇ ನಿವಾರಿಸಿಕೊಳ್ಳುವ ಚಾಲಾಕಿ ಮುತ್ಸದ್ದಿ. ದುರ್ಯ್ಯೋಧನನೊಡನೆ ಲೆತ್ತವಾಡಲು ಇವಳಿಗೆ ಯಾವುದೇ ಹಿಂಜರಿಕೆ ಇಲ್ಲ.

ದುರ್ಯೋಧನನೊಂದಿಗೆ ಪಾಂಡವರು ಜೂಜಿನಲ್ಲಿ ಎಲ್ಲವನ್ನು ಸೋತು, ದ್ರೌಪದಿಯನ್ನು ಪಣಕ್ಕಿಡುತ್ತಾರೆ. ಸರ್ವಸ್ವವನ್ನೂ ಕಳೆದುಕೊಂಡು ಮನೆಗೆ ಬಂದು ಕುಂತಿಗೆ ನಡೆದ ಸಂಗತಿಯನ್ನು ವಿವರಿಸುತ್ತಾರೆ. ದ್ರೌಪದಿಯನ್ನು ಪಣಕ್ಕಿಟ್ಟು ಸೋತದ್ದು ಕುಂತಿಗೆ ಅತೀವ ನೋವನ್ನುಂಟು ಮಾಡುತ್ತದೆ. ಅವಳ ಬದಲಾಗಿ ತನ್ನನ್ನು ಪಣಕ್ಕಿಡಬೇಕಾಗಿತ್ತು ಎಂದು ವಿಷಾದ ಪಡುತ್ತಾಳೆ. ಆಗ ಮಕ್ಕಳು ‘‘ಮುದಿಯಳಾದ ನಿನ್ನ ಕೇಳುವವರ್ಯಾರು’’ ಎನ್ನುತ್ತಾರೆ. ದ್ರೌಪದಿಗೆ ಪರಿಸ್ಥಿತಿಯ ಅರಿವಾಗುತ್ತದೆ.

ತನ್ನನ್ನು ತೊತ್ತಾಗಿಸಿದ ಗಂಡಂದಿರ ಬಗೆಗೆ ರೋಷವುಕ್ಕುತ್ತದೆ. ಅವಳನ್ನು ಕರೆದೊಯ್ಯಲು ಕರ್ಣ ಬಂದಾಗ, ಅವನ ರಥವೇರಲು ನಿರಾಕರಿಸುತ್ತಾಳೆ. ನಡೆದುಕೊಂಡೇ ಅವರಿರುವ ಜಾಗಕ್ಕೆ ಬರುತ್ತಾಳೆ.

ಕೌರವರು ಅನೇಕ ಬಗೆಯಿಂದ ಅವಳನ್ನು ಅವಮಾನಿಸುತ್ತಾರೆ. ದುರ್ಯೋಧನ ಅವಳನ್ನು ಮಂಚಕ್ಕೆ ನಡೆ ಎನ್ನುತ್ತಾನೆ. ಇಂತಹ ಆಪತ್ತಿನಿಂದ ಪಾರಾಗುವ ಮಾರ್ಗವನ್ನು ದ್ರೌಪದಿ ತಾನಾಗಿಯೇ ಕಂಡುಕೊಳ್ಳುತ್ತಾಲೆ. ಯಾರ ರಕ್ಷಣೆಯನ್ನು ಅವಳು ಬಯಸುವದಿಲ್ಲ. ತನ್ನೊಡನೆ ಕೌರವನು ಜೂಜಾಡಿ ಗೆದ್ದರೆ ಅವನ ಇಚ್ಛೆಯನ್ನು ಪೂರೈಸುವದಾಗಿ ಪಣವೊಡ್ಡುತ್ತಾಳೆ.

ದುರ್ಯೋಧನ ದ್ರೌಪದಿಯೊಂದಿಗೆ ಲೆತ್ತವಾಡಲು ಒಪ್ಪಿಕೊಳ್ಳುತ್ತಾನೆ. ಲೆತ್ತದಾಟ ಹಮ್ಮಿನಿಂದಲೇ ನಡೆಯುತ್ತದೆ. ದುರ್ಯೋಧನ ಪಣಕಿಟ್ಟು ಒಂದೊಂದಾಗಿ ಎಲ್ಲವನ್ನು ಸೋಲುತ್ತ ಬರುತ್ತಾನೆ.

ಹಾಕಲಾ ದ್ರವ್ಯಗಳ ನಾ ನಿನ್ನ ನೂಕೇನು ಪಾದದಲ್ಲೇ
ಹಮ್ಮಲಾ ದ್ರವ್ಯಗಳ ನಾ ನಿನ್ನ ಚೆಮ್ಮೆನು ಪಾದದಲ್ಲೇ

ಎನ್ನುವಲ್ಲಿ ಅವಳ ಆತ್ಮವಿಶ್ವಾಸ, ಸೇಡಿಗೆ ಪ್ರತಿ ಸೇಡು ತೀರಿಸಿಕೊಳ್ಳುವ ಅವಳ ಪ್ರವೃತ್ತಿ ಸ್ತ್ರೀ ಶಕ್ತಿ ಸಾಮರ್ಥ್ಯಕ್ಕೆ ಮಾದರಿ. ಆಟ ರಂಗೇರಿದಾಗಲೇ ಗಾಳಿ ಬೀಸಿ ದ್ರೌಪದಿಯ ಸೀರೆ ತುಸು ಸರಿಯುತ್ತದೆ.

ಹದಿನಾರು ಮೊಳದ ಬಾರ್ಕೂರ ಸೀರೆಯ
ಬೋರೆಂಬ ಗಾಳಿ ಬೀಸಿ ಸ್ಯಾಲ ಮಗುಚಾಡೆ
ಸೆಳೆದಾವು ಕೌರವನ ಸತಿ ತೊಡೆ
ಮತ್ತೇರಿ ಸಪುನವ ತೆರೆನಾಗೆ
ಪಗುಡೀಯ ಆಟವಾಡುತ ಸೋತನೆ
ಸತಿ ದ್ರೌಪದಿಗೆ ಗೆಲುವಾಗೆ ನನ್ನ
ಅರಮನೆಯ ಗೌಡಿ ಚಾಕರಿಗೆ ಸನುವಾಗೆ

ದುರ್ಯೋಧನ ಆಟದಲ್ಲಿ ಗೆದ್ದು, ದ್ರೌಪದಿಯನ್ನು ವಶಪಡಿಸಿಕೊಳ್ಳುವ ಸಂಚಿನಲ್ಲಿದ್ದಾಗಲೇ ಗಾಳಿ ಬೀಸಿದ್ದು ಸಮಯ ನೋಡಿ ದ್ರೌಪದಿ ಅವನಿಗೆ ತನ್ನ ತೊಡೆಯನ್ನು ತೋರಿಸಿ, ಅವನ ಮನಸ್ಸನ್ನು ಚಂಚಲಗೊಳಿಸಿದ್ದು, ಅವನು ಆಟದಲ್ಲಿ ಸೋತದ್ದು ಇವೆಲ್ಲವೂ ದ್ರೌಪದಿಯಲ್ಲಿದ್ದ ಚಾಣಾಕ್ಷತನ ಅವಳಲ್ಲಿ ಶಕ್ತಿ, ಸಾಮರ್ಥ್ಯ ಪುರುಷಾಧಿಕಾರಕ್ಕೆ, ತನಗಾದ ಅವಮಾನಕ್ಕೆ ತೋರಿದ ಪ್ರತಿಭಟನೆಯನ್ನು ಎತ್ತಿ ಹಿಡಿಯುತ್ತದೆ.

ಆಟ ನಡೆದಾಗ ಪಗಡೆಯಿಂದಲೇ ಅವನ ಹಣೆ ಒಡೆದು ಚಿಮ್ಮಿದ ರಕ್ತದಲ್ಲಿ ಕೂದಲನ್ನು ಅದ್ದಿ ಮುಡಿ ಕಟ್ಟುತ್ತಾಳೆ. ಯಾವ ಪುರುಷನ ಸಹಾಯವೂ ಅವಳಿಗೆ ಬೇಕಾಗಿಲ್ಲ.

ಒಟ್ಟು ಜನಪದ ಮಹಾಭರತ ದ್ರೌಪದಿಯ ಮಾದರಿ ಶಿಷ್ಟ ಕಾವ್ಯಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಜನಪದ ರಾಮಾಯಣದ ಸೀತೆ ಮೌನವಾಗಿ ಪುರುಷಾಧಿಕಾರವನ್ನು ಪ್ರತಿಭಟಿಸಿದ್ದರೆ, ದ್ರೌಪದಿಯ ಪ್ರತಿಭಟನೆ ಸ್ತ್ರೀಶಕ್ತಿಯ ಪ್ರತೀಕವಾಗಿದೆ.

ಮಂಡ್ಯ, ಮೈಸೂರು, ಜಿಲ್ಲೆಗಳಲ್ಲಿ ಪ್ರಚಲಿತವಾಗಿರುವ ಕೊಂತಿ ಪೂಜೆ, ಆಚರಣೆ ಕುತೂಹಲವನ್ನು ಕೆರಳಿಸುವಂತಿದೆ. ವಿವಾಹ ಪೂರ್ವದಲ್ಲಿಯೇ ಮಗುವನ್ನು ಪಡೆದ ಕುಂತಿ, ವಿವಾಹದ ನಂತರ ಗಂಡನ ಒಪ್ಪಿಗೆಯಿಂದ ನಿಯೋಗ ಪದ್ಧತಿಯ ಮೂಲಕ ಸಂತಾನ ಪಡೆಯುತ್ತಾಳೆ. ಸಮಾಜ ವ್ಯವಸ್ಥೆಯ ಕಟ್ಟಳೆಗಳನ್ನು ಮೀರಿ ಭಿನ್ನವಾದ ರೀತಿಯಲ್ಲಿ ಅವಳು ಸಂತಾನ ಪಡೆದವಳು. ಆದರೂ ಅವಳನ್ನು ಜನಪದರು ಸಂತಾನ ದೇವತೆಯೆಂದು ಮನ್ನಿಸಿ ಪೂಜಿಸುವದು ಚಿಂತನಾರ್ಹವಾಗಿದೆ.

ತುಳುನಾಡಿನ ಸಿರಿ:

ಪಾಡ್ದನಗಳು ತುಳು ಜಾನಪದ ಸಾಹಿತ್ಯದಲ್ಲಿ ದೊರೆಯುವ ವಿಶಿಷ್ಟ ಸಾಹಿತ್ಯ ಪ್ರಕಾರ ಪಾಡ್ದನ ಎಂದರೆ ಹಾಡುವಿಕೆ ಮಾತೃ ಸಂಸ್ಕೃತಿಯ ಮೂಲ ಎಳೆಗಳನ್ನು ಈ ಪಾಡ್ದನಗಳು ಒಳಗೊಂಡಿವೆ. ಈ ಪಾಡ್ದನಗಳ ನಾಯಿಕೆಯರು ಸ್ತ್ರೀಶಕ್ತಿಯನ್ನು ಪ್ರತಿನಿಧಿಸುತ್ತಾರೆ.

‘‘ಸಿರಿ ಸಂದಿ’’ ತುಳು ನಾಡಿನ ಬಂಟ ಜಾತಿಯ ಕುಟುಂಬದ ಸುತ್ತ ಹಬ್ಬಿರುವ ಹಣ್ಣಿನ ಜೀವನದ ಏಳು ಬೀಳುಗಳನ್ನು ನಿರೂಪಿಸುವ ಮಹಾಕಾವ್ಯ ‘‘ಸಿರಿ’’ ಈ ಕಾವ್ಯದ ಕೇಂದ್ರ ಪಾತ್ರ.

ಬೆರ್ಮ ಆಳ್ವ ಸತ್ಯನಾಪುರದ ಯಜಮಾನ ಬಂಟ ಜನಾಂಗಕ್ಕೆ ಸೇರಿದವನು. ಅವನು ಹರಕೆ ಹೊತ್ತು ಪಡೆದ ಮಗಳು ಸಿರಿ.

ಬಸರೂರಿನ ಕಾಂತ ಪುಂಜನೊಂದಿಗೆ ‘‘ಸಿರಿ’’ಯ ಮದುವೆಯಾಗುತ್ತ ಸಿರಿ ಬಸಿರಾದಾಗ ಅವಳಿಗೆಂದು ತಂದ ಶ್ರೀಮಂತದ ಸೀರೆಯನ್ನು ಕಾಂತ ಪುಂಜ ತನ್ನ ವೇಶ್ಯೆಗೆ ಉಡಲು ಒಯ್ದು ಕೊಟ್ಟಿರುತ್ತಾನೆ. ಇದನ್ನು ತಿಳಿದು ಸಿರಿ ಕೆಂಡವಾಗುತ್ತಾಳೆ. ಮತ್ತು ಸೀಮಂತ ಕಾರ್ಯದ ದಿನ ಆ ಸೀರೆಯನ್ನು ಉಡಲು ಹೇಳಿದಾಗ ಸಾರ್ವಜನಿಕವಾಗಿಯೇ ನಿರಾಕರಿಸುತ್ತಾಳೆ. ಅವಮಾನದಿಮದ ನೊಂದು ಗಂಡನಿಗೆ ವಿಚ್ಛೇದನಕ್ಕೆ ಹೇಳಿ ಕಳುಹಿಸುತ್ತಾಳೆ.

ಬೆರ್ಮ ಆಳ್ವ (ಅಜ್ಜ) ತೀರಿಹೋದಾಗ ಪಂಚಾಯಿತಿ ತೀರ್ಮಾನದಂತೆ ಅವಳಿಗೆ ತವರಿನ ಆಸ್ತಿಯಲ್ಲಿಯೂ ಹಕ್ಕು ಉಳಿಯುವದಿಲ್ಲ ಸ್ವಾಭಿಮಾನಯೂ, ಛಲವಾದಿಯೂ ಆಗಿದ್ದ ಸಿರಿ ತನ್ನದೇ ಆದ ದಾರಿಯನ್ನು ಹುಡುಕಿಕೊಳ್ಳಲು ನಿರ್ಧರಿಸುತ್ತಾಳೆ.

ಕತ್ತಿನ ಕರಿಮಣಿ, ಕೈ ಬಳೆ, ಮೂಗುತಿಯನ್ನು ಕಿತ್ತು ಹಾಗೆ ಅರಮನೆಯ ಕಂಬಕ್ಕೆ ಕಟ್ಟುತ್ತಾಳೆ.

““ನಿಮ್ಮ ಹೆಗಲಿಗ ನೊಗ ಇರಿಸಿ, ಕೊರಳಿಗೆ ನೇಗಿಲು ಕಟ್ಟಿ ಯಾವಾಗ ನನ್ನ ಕಾಲ ಬುಡಕ್ಕೆ ಬರುತ್ತಿರೋ, ಯಾವಾಗ ನಿಮಗೆ ಎರಡು ಎತ್ತಿಗೂ ಕಳಸೆ ಬಿತ್ತಿಗೂ (ಭತ್ತ) ಕೊರತೆ ಬರುತ್ತದೋ ಆಗ ನಾವು ನೀವೂ ಜೊತೆಯಾಗೋಣ”” ಎಂದು ರೋಷದಿಂದ ನುಡಿದು, ಗಂಡನನ್ನು ಶಪಿಸಿ ಅವನಿಗೆ ವಿಚ್ಛೇದನ (ಬರ) ಹೇಳುತ್ತಾಳೆ.

ಮಗ ಹುಟ್ಟುತ್ತಾನೆ. ಅವನೇ ಕುಮಾರ ಮಗನೊಡನೆ ಕೆಲ ವರ್ಷ ಅಲೆದಾಡುತ್ತಿರುತವಾಗಲೇ ಅವನ ಪ್ರತಿರೋಧವನ್ನು ಲೆಕ್ಕಿಸದೇ ‘ಕೊಡಸರಾಳ್ವ’ ನನ್ನು ಮರು ಮದುವೆಯಾಗುತ್ತಾಳೆ.

ಸಿರಿ ಪಿತೃ ವ್ಯವಸ್ಥೆಯ ಮೌಲ್ಯಗಳನ್ನು ಮುರಿದು ಪಾತಿವ್ರತ್ಯವ ಕಟ್ಟುಪಾಡುಗಳನ್ನು ಮೀರಿ, ಜೀವಪರವಾದ ಪರ್ಯಾಯ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಸ್ತ್ರೀಶಕ್ತಿಯಾಗಿ ಕಂಡುಬರುತ್ತಾಳೆ. ತನ್ನ ಆತ್ಮಗೌರವವನ್ನುಳಿಸಿಕೊಂಡು, ಪುರುಷ ಸಮಾಜದ ಸಂಘರ್ಷಗಳಿಗೆ ಎದೆಯೊಡ್ಡಿ ನಿಂತು ಸವಾಲೆಸೆಳೆಯುತ್ತಾಳೆ.

ಬಲಜೇವು ಮಾನಿಗ:

ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಮದುವೆಯ ಸಂಬಂಧದಲ್ಲಿ ತೆಗೆ ಕೊಡು (ವಧು ದಕ್ಷಿಣೆ) ವದು ಸಂಪ್ರದಾಯ ಮಾತೃವಂಶೀಯ ಸಂಪ್ರದಾಯದಂತೆ ಬಲ್ಲಾಳ ಮಾನಿಯ ಹಕ್ಕಿನ ಗಂಡ ನಾದ್ದರಿಂದ ತೆರನೀಡದೆ ಧರ್ಮಧಾರೆಯಾಗುತ್ತಾನೆ. ಆದರೆ ತೆರೆ ಕೊಡದೇ ತನ್ನನ್ನು ಮದುವೆಯಾದದ್ದು ತನಗಾದ ಅವಮಾನವೆಂದು ಮಾನಿಗ ಪರಿಭಾವಿಸುತ್ತಾಳೆ. ಬಲ್ಲಾಳನ ಈ ವರ್ತನೆಯನ್ನು ಪ್ರತಿರೋಧಿಸುತ್ತಾಳೆ. ಅವಳ ಸೋದರಮಾವ ಆಕೆ ಕೋರುವ ಸಂಪತ್ತನ್ನು ಕೊಡಲು ಬಂದಾಗ ತನ್ನ ತಾಯಿಯ ವಸ್ತು, ಸಂಪತ್ತು ತನ್ನದೇ ಎಂದು ಪ್ರತಿಪಾದಿಸುತ್ತಾಳೆ ಮತ್ತು ಗಂಡನ ಮನೆಗೆ ಹೋಗಲು ನಿರಾಕರಿಸುತ್ತಾಳೆ. ಆದರೆ ಅಣ್ಣೆ ಕೋರಿಕೆಯ ಮೇರೆಗೆ ಬಲ್ಲಾಳನ ಮನೆಗೆ ಹೋಗುತ್ತಾಳೆ.

ಬಲ್ಲಾಳ ಚನ್ನೆ (ಪಗಡೆ) ಆಡಲು ಆಹ್ವಾನಿಸಿದಾಗ ಆಡಲು ತನಗೆ ಚಿನ್ನದ ಮಣಿ, ಮುತ್ತಿನ ಕಾಯಿ ಆಗಬೇಕು ಎಂದು ಪಥ ಒಡ್ಡುತ್ತಾಳೆ.

ಆಟದಲ್ಲಿ ಬಲ್ಲಾಳ ಸೋತಾಗ ಮಾನಿಗ ಅಪಹಾಸ್ಯ ಮಾಡುತ್ತಾಳೆ. ಕೊನೆಯ ಸುತ್ತಿನಲ್ಲಿ ಬಲ್ಲಾಳ ಆಟದಲ್ಲಿ ಮೋಸದಿಂದ ಮಾನಿಗಳನ್ನು ಸೋಲಿಸುವ ತಂತ್ರ ಮಾಡುತ್ತಾನೆ. ಸಿಟ್ಟಿಗೆದ್ದ ಮಾನಿಗ ಚನ್ನೆಮಣಿ ಒಂದು ಅವನನ್ನು ಪ್ರತಿಭಟಿಸುತ್ತಾಳೆ. ರೋಷಗೊಂಡ ಬಲ್ಲಾಳ ದರ್ಪದಿಂದ ಅವಳನ್ನು ಹೊಡೆಯುತ್ತಾನೆ. ಮಾನಿಗ ಅರಮನೆಯ (ಕುಟುಂಬದ ದಿನಚರಿಗಳನ್ನು ನಿರಾಕರಿಸಿ ತವರಿಗೆ ಹೊರಟು ಛಲ ಹಿಡಿಯುತ್ತಾಳೆ. ಬಲ್ಲಾಳ ತಪ್ಪು ಒಪ್ಪಿಕೊಂಡರೂ ಮಾನಿಗ ತನ್ನ ಸ್ವಾಭಿಮಾನ ಬಿಡುವದಿಲ್ಲ ತವರಿಗೆ ಹೋಗುವಳು. ಮತ್ತೆ ಕೆಲದಿನಗಳಲ್ಲಿ ಬಲ್ಲಾಳ ಸಿಂಗರಿಸಿದ ದಂಡಿಗೆಯೊಂದಿಗೆ ಅವಳನ್ನು ಕರೆಕಳುಹಿಸುತ್ತಾನೆ. ಆದರೆ ಮಾನಿನ ಕರಿಮಣಿ, ಕಾಲುಂಗರ, ಮೂಗುತಿಯನ್ನು ಕಿತ್ತು ಒಂದು ಪೊರಕೆಗೆ ಸೀರೆ ಉಡಿಸಿ ಒಡವೆಗಳನ್ನು ಹಾಕಿ ದಂಡಿಗೆಯಲ್ಲಿಟ್ಟು ಕಳುಹಿಸುತ್ತಾಳೆ.

ತನ್ನ ವಧು ಬಂದಳೆಂದು ಸಂಭ್ರಮದಿಂದ ದಂಡಿಗೆಯ ಬಾಗಿಲನ್ನು ತೆಗೆದ ಬಲ್ಲಾಳನ ಸಿಟ್ಟು ನೆತ್ತಿಗೇರುತ್ತದೆ. ಪುರುಷನ ಅಧಿಕಾರ, ನಿಯಂತ್ರಣದ ಸಂಕೇತಗಳಾದ ಕರಿಮಣಿ ಮೂಗುತಿ, ಕಾಲುಂಗುರಗಳನ್ನು ಕಿತ್ತು ಹಾಕಿದ ಮಾನಿಗ ಈಗ ತನ್ನ ಹೆಂಡತಿಯಾಗಿ ಉಳಿದಿಲ್ಲ ಎಂಬ ವಸ್ತು ಸ್ಥಿತಿಯ ಅರಿವಾಗುತ್ತದೆ.

ಹೆಣ್ಣು ತನ್ನ ಬೀಡಿಗೆ ತಾನಾಗಿ ಬರವಂತಾಗಬೇಕು ಎಂದು ಬಲ್ಲಾಳ ಜುಮಾದಿಗೆ ಹರಕೆ ಹೇಳಿಕೊಳ್ಳುತ್ತಾನೆ. ಶಕ್ತಿ ಪ್ರಯೋಗ ದಿಂದ ಹುಚ್ಚು ಹಿಡಿದ ಮಾನಿಗ ಬಲ್ಲಾಳನ ಅರಮನೆಗೆ ಬರುತ್ತಾಳೆ. ಅರಮನೆಯ ಬಾಗಿಲಲ್ಲಿ ಬಲ್ಲಾಳ ಅವಳನ್ನು ತಡೆಯುತ್ತಾನೆ. ಹೋದ ಸತ್ಯದಿಂದಲೇ ಬಲ್ಲಾಳನ ಹೆಂಡತಿಯಾಗಿ ಒಳಗೆ ಹೋಗು ಎಂದಾಗ ಗಂಡನ ಸ್ವಾರ್ಥ ಕಲುರ್ಷಿತ ವರ್ತನೆಗೆ ಬೇಸತ್ತು ಹೊಸ್ತಿಲು ದಾಟುವಾಗ ಮಾನಿಗ ಸಾವನ್ನು ಬರಮಾಡಿಕೊಳ್ಳುತ್ತಾಳೆ.

ಮಾನಿಗಳ ಸಾವು ಸ್ವಾಭಿಮಾನ, ಆತ್ಮಗೌರವದ ಸತ್ರೀ ಶಕ್ತಿಯ ಪ್ರತಿಭಟನೆಯ ಮಾದರಿಯಾಗಿದೆ. ಸಾವಿನ ಮೂಲಕ ಮಾನಿಗ ತನ್ನ ಗೆಲುವನ್ನು ತೋರಿಸುತ್ತಾಳೆ.

ಇಂತಹ ಸ್ತ್ರೀ ಶಕ್ತಿಯ ಮಾದರಿಗಳು ತುಳು ಪಾಡ್ದನಗಳಲ್ಲಿ ನಿರೂಪಿತವಾಗಿವೆ.