ಜನಪದ ಪದ್ಯ ಸಾಹಿತ್ಯದಲ್ಲಿ ಹೆಣ್ಣು ಮಗು:

ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಗಂಡು ಮಗುವಿನಂತೆ ಹೆಣ್ಣು ಬಯಸಿ, ಹಂಬಲಿಸಿ ಪಡೆವ ಮಗುವಲ್ಲ, ‘‘ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ’‘’ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’’ ಎಂಬ ತಾತ್ಸಾರ. ಈ ಪರಿಭಾವನೆಗೆ ಕಾರಣ ವ್ಯವಸ್ಥೆಯ ಅಧೀನದಲ್ಲಿ ಅವಳು ಜೀವನದುದ್ದಕ್ಕೂ ಅನುಭವಿಸಬೇಕಾದ ನೋವು, ಸಂಕಟಗಳು. ಆದರೂ ತಾಯಿಯ ಹೃದಯ ತನ್ನ ಸುಖ ದುಃಖವನ್ನು ಅರ್ಥಮಾಡಿಕೊಳ್ಳಲು, ಅಂತಃಕರಣವನ್ನು ಹಂಚಿಕೊಳ್ಳಲು ಹೆಣ್ಣು ಮಗು ಬೇಕು ಎಂದು ಬಯಸುತ್ತದೆ. ಮಗಳು ತನ್ನ ಕರುಳ ಬಳ್ಳಿಯನ್ನು ಬೆಳೆಸುವವಳು, ಎರಡೂ ಮನೆತನಗಳನ್ನು ಬೆಳಗುವವಳು ಎಂಬ ಅಭಿಮಾನ.

ಹೆಣ್ಣಿದ್ದ ಮನೆಗೆ ಕನ್ನಡಿ ಯಾತಕ್ಕೆ
ಹೆಣ್ಣು ಸಣ್ಣವಳು ಒಳಗಿರಲು | ನನ ಮಗಳು
ಕನ್ನಡಿ ಹಂಗ ಹೊಳೆವಳು

ಎಂದು ತಾಯಿ ಹೆಣ್ಣು ಮಗುವಿನ ಬಗೆಗೆ ತನ್ನ ವಿಶೇಷ ಪ್ರೀತಿ,  ವಾತ್ಸಲ್ಯವನ್ನು ತೋರಿದ್ದಾಳೆ. ಹೆಣ್ಣು ಸಂಸ್ಕೃತಿಯ ಕನ್ನಡಿ; ಅವಳಿಂದ ಮನೆಗೆ ಶೋಭೆ ಎಂಬುದನ್ನು ಗಮನಿಸಬೇಕು.

ಜನಪದ ಮಹಾಭಾರತದ ದ್ರೌಪದಿ, ಶಿಷ್ಟ ಕಾವ್ಯಕ್ಕಿಂತ ಭಿನ್ನಳಾಗಿದ್ದಾಳೆ. ರಾಮಾಯಣದ ಸೀತೆಗಿಂತ ದ್ರೌಪದಿಯ ಕೆಚ್ಚು, ರೊಚ್ಚು ಜನಪದ ಮಹಿಳೆಯರಿಗೆ ವಿಶೇಷವಾಗಿ ಹಿಡಿಸಿದೆ. ಆದ್ದರಿಂದ ಜನಪದ ತಾಯಂದಿರು ದ್ರೌಪದಿಯಂತಹ ಮಗಳಿರಲಿ ಎಂದು ಆಶಿಸಿದ್ದಾರೆ.

ಹತ್ತು ಗಂಡು ಹಡೆದಾರು ಮತ್ತೆ ಬಂಜೆನ್ನುವರು
ದಟ್ಟಿ ಉಡವ ದ್ರೌಪದಿ ಹುಟ್ಟಿದರ | ತಂಗ್ಯಮ್ಮ
ಬಂಜೆಂಬ ಶಬ್ದವ ಅಳಿದಾವೋ

ಎಂದು ಬಯಸುವಲ್ಲಿ ದ್ರೌಪದಿಯ ಶಕ್ತಿ ಸಾಮರ್ಥ್ಯವನ್ನು ಮೆಚ್ಚಿಕೊಂಡಿರುವದು ವಿಶೇಷವಾಗಿದೆ.

‘‘ಹೆಣ್ಣು ಹಡಿಯಲಿ ಬ್ಯಾಡ ಹೆರವರಿಗೆ ಕೊಡಬ್ಯಾಡ’’ ಎಂದು ವ್ಯವಸ್ಥೆಗೆ ಬಲಿಯಾದ ಹೆಣ್ಣಿನಲ್ಲಿ ನೋವು ಸಾಮಾನ್ಯವಾಗಿದ್ದರೂ, ಇದಕ್ಕೆ ಪ್ರತಿರೋಧವಾಗಿ, ಅಪರೂಪವಾಗಿ ಹೆಣ್ಣಾಗಿ ಹುಟ್ಟಿದಕ್ಕೆ ಹೆಮ್ಮೆಪಟ್ಟ ಉದಾಹರಣೆಗಳೂ ಇವೆ.

ಹಚ್ಚಿಕೊಂಡವ್ವಗ ಚೊಚ್ಚಿಲು ಮಗಳಾದೆ
ಬಿಟ್ಟಾಡಿಕೊಳ್ಳುವ ವೈರೀಯ ಮನಿ ಮಲುಂದ
ಬಿಚ್ಚು ಗತ್ತ್ಯಾಗಿ ಹೊಳದೇನ

ಎಂಬ ಆತ್ಮವಿಶ್ವಾಸವನ್ನು, ಎದೆಗಾರಿಕೆಯನ್ನು ತೋರಿದ್ದಾಳೆ.

ಸಮಾಜದಲ್ಲಿ ಹೆಣ್ಣಿಗೆ ಗಂಡನ ಮನೆ ಮುಳ್ಳಿನ ಬೇಲಿ. ಅತ್ತೆ, ಮಾವ, ನಾದಿನಿ, ನೆಗೆಣ್ಣಿ, ಸವತಿ ಎಲ್ಲರೂ ತೊತ್ತಿನಂತೆ ಕಾಣುವವರು, ಹೆದರಿಸುವವರು, ಕಂದನಿಗೆ ಮಲಿಯನ್ನು ಕೊಡಗೊಡರು. ಇಂತಹವರ ಶೋಷಣೆಗೆ ನೊಂದು-

ಅಂಜಿಕಿ ತೋರಿದರ ಅಂಜುವರ ಮಗಳಲ್ಲ
ಮುಂಜಾನದಾಗ ಹುಲಿ ಕರಡಿ ತೋರಿದರ
ಅಂಜಿ ತಿರುಗುವವರ ಸೊಸಿಯಲ್ಲ

ಎಂದು ಸಿಡಿದು ನುಡಿದಿರುವದು ಅಪರೂಪವಾಗಿದೆಯಾದರೂ ಕಂಡು ಬರುತ್ತದೆ. ಪಿತೃ ಪ್ರಧಾನ ವ್ಯವಸ್ಥೆಯ ಜಾನಪದ ಮಹಿಳೆಯ ಪ್ರತಿಭಟನೆ, ಪ್ರತಿಕ್ರಿಯೆ ಈ ಮೇಲಿನಂತಿದ್ದರೆ, ಮಾತೃವಂಶೀಯ ಸಮೂಹ ವ್ಯವಸ್ಥೆಯಲ್ಲಿ ಇದಕ್ಕಿಂತ ಬೇರೆಯಾಗಿರುವದನ್ನು ಕಾಣಬಹುದು.

ತುಳು ನಾಡಿನ ಜನಪದ ಪದ್ಯ ಸಾಹಿತ್ಯದಲ್ಲಿ ಮಾತೃ ವಂಶೀಯ ವ್ಯವಸ್ಥೆಯ ಹೆಣ್ಣಿನ ಮಾದರಿಗಳನ್ನು ನಾವು ಕಾಣಬಹುದು.

ಮಾತೃವಂಶೀಯ ಕುಟುಂಬದಲ್ಲಿ ಮಗ ಕುಲದೀಪಕನಲ್ಲ. ಮಗಳು ಕುಲದೀಪವಾಗಿ ಬೆಳಗುವವಳು. ಆದ್ದರಿಂದ ಮಾತೃಪ್ರಧಾನ ಕುಟುಂಬದ ತಾಯಿ ಹೆಣ್ಣುಮಗುವನ್ನೇ ಬಯಸಿ ಹರಕೆ ಹೊರುತ್ತಾಳೆ.

ಗಂಡು ಸಂತಾನ ಒಂಬತ್ತು ಕೊಡಿ ಸ್ವಾಮಿ
ಒಂಬತ್ತೇಳಿಳಿಗೂ ಕಳಸವು-ಕೈ ಮುಗವಲ್‌
ರಂಬಿ ಒಬ್ಬಳನ್ನು ಕೊಡಿ ಸ್ವಾಮಿ

ಎಂದು ಬೇಡುತ್ತಾಳೆ. ಮತ್ತು ಸಂಪಿಗೆ ತೇರನ್ನು ಎಳೆಸುವ ಹರಕೆಯನ್ನು ಹೊರುತ್ತಾಳೆ. ‘ಚಿನ್ನದ ಕದಿರನಾಂಗೆ’ ಮಗಳನ್ನು ಸಲಹುತ್ತಾಳೆ.

ಇಂತಹ ಕುಟುಂಬದಲ್ಲಿ ಬೆಳೆದ ಮಗಳು ಆತ್ಮ ವಿಶ್ವಾಸ, ಸ್ವಾಭಿಮಾನ, ಗೌರವವನ್ನು ಪಡೆಯುತ್ತಾಳೆ.

ಹೀಗೆ ಬೆಳೆದ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ತಾಯಿ ‘‘ಅತ್ತೀಯ ಮನೆಯಲ್ಲಿ ಮುತ್ತಾಗಿ ಇರಬೇಕು’’, ‘‘ಗಂಜೀಯ ಕುಡಿದರೂ ಗಂಡನ ಮನಿ ಲೇಸು’’, ‘‘ಪತಿಯೇ ದೇವರು’’ ಎಂದು ಬೋಧಿಸುವುದಿಲ್ಲ. ಅವಳಿಗೆ ಏನಾದರೂ ತೊಂದರೆ ಬಂದರೆ ನೇರವಾಗಿ ತವರಿಗೆ ಬಂದು ಬಿಡಬೇಕೆಂದು ತಾಯಿ ಧೈರ್ಯ ತುಂಬಿ ಕಳುಹಿಸುವಳು.

ಅಂದ ಮಾತನ್ನು ಬಂದ್ಹೇಳು ನನ್ಮಗ್ಳೆ
ಆಡದ್ಮಾತನ್ನು ಬಂದ್ಹೇಳು

ಎಂದು ಬೆಂಬಲಿಸಿ ಅವಳನ್ನು ನೋಡಿಕೊಳ್ಳಲು ತಾನಿದ್ದೇನೆಂದು ಭರವಸೆ ನೀಡುತ್ತಾಳೆ. ಗಂಡ-ಹೆಂಡತಿಗೆ ಹೊಂದಿಕೆಯಾಗದಿದ್ದರೆ ಅವನನ್ನು ಕೂಡಲೇ ತೊರೆಯಬೇಕೆಂದು ಹೇಳುತ್ತಾಳೆ.

ಗಂಡನ ಹಿತವೇನು ಕೆಂಡದ ತಂಪೇನು
ಕೊಂಡ ಮಜ್ಜಿಗೆ ರುಚಿಯೇನು, ಎಲೆ ಗಿಳಿಯೆ
ಬಂಡ ಬದುಕಿನ ಫಲವೇನು

ಎಂದ ದಿಟ್ಟತನದಿಂದ ಒಲ್ಲದ ಗಂಡನನ್ನು ನಿರಾಕರಿಸಬೇಕೆನ್ನುತ್ತಾಳೆ. ಪಾತಿವ್ರತ್ಯದಂತಹ ಕಟ್ಟನ್ನು ಮುರಿದು ಜೀವಪರವಾದ ಬದುಕನ್ನು ಸ್ವಾಗತಿಸಿಬೇಕೆನ್ನುವ ಛಲ ಮಾತೃಪ್ರಧಾನ ಕುಟುಂಬದ ಮಹಿಳೆಯದು.

ಒಲ್ಲದ ಮದುವೆಗೆ ಪ್ರತಿಭಟನೆ:

ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮದುವೆ ಸಂದರ್ಭದಲ್ಲಿ ಹೆಣ್ಣಿಗೆ ಆಯ್ಕೆ ಸ್ವಾತಂತ್ಯ್ರವಿಲ್ಲ. ತಂದೆ, ಅಣ್ಣ, ಮನೆಯ ಹಿರಿಯರು ನಿರ್ಣಯಿಸಿದ ಗಂಡನ್ನೇ ಆಕೆ ಮದುವೆಯಾಗಬೇಕು. ಜನಪದ ಸಮಾಜದಲ್ಲಿ ಬಾಲ್ಯವಿವಾಹ ಇಂದಿಗೂ ಸಾಮಾನ್ಯವಾಗಿದೆ. ಲೈಂಗಿಕ ಅರಿವು ಮೂಡುವ ಮೊದಲೇ ಆಕೆ ಪುರುಷನಿಗೆ ಬಲಿಯಾಗುತ್ತಾಳೆ. ಎಷ್ಟೋ ಸಂದರ್ಭಗಳಲ್ಲಿ ಹೆಣ್ಣು ಹನ್ನೆರಡು ವರ್ಷದವಳಿದ್ದರೆ ಮದುವೆಯ ಗಂಡು ನಲವತ್ತು ವರ್ಷದವನಿರುತ್ತಾನೆ. ಹೆಂಡತಿ ಸತ್ತ ಮುದುಕನಿಗೂ ಕಿರಿ ವಯದ ಬಾಲೆಯರನ್ನು ಮದುವೆ ಮಾಡಿಕೊಡುವುದಿದೆ.

ಒಲ್ಲದ ಗಂಡನ್ನು ಮದುವೆಯಾಗಬೇಕಾದ ಸಂದರ್ಭದ ಅಸಹಾಯಕಳಾದ ಬಾಲೆ-

ಚಪ್ಪರ ಬೀಳಲಿ ಹಪ್ಪಳ ಮುರಿಯಲಿ
ಮಿತ್ರರೈರಾಣಿ ಒಡಿಯಾಲಿ

ಎಂದು ಶಪಸಿದ್ದಾಳೆ.

ಬಾಗಿಲದಾಗಿನ ಕುದುರಿ ಕಾಲಮ್ಯಾಲಾಗಲಿ
ಮದುಮಗ ಕಾಳಿಂಗ ಮಡಿಯಲಿ

ಎಂದು ಒಳಗೊಳಗೇ ಅಸಹಾಯಕಳಾಗಿ ಕುದಿಯುತ್ತಾಳೆ. ಹಿರಿಯರ ಒತ್ತಾಯದಿಂದ ಮದುವೆ ನಡೆದೇ ಹೋದಾಗ ದುಃಖ, ಅವಮಾನವನ್ನು ಸಹಿಸದೇ ಹೊಳೆಯಲ್ಲಿ ಮುಳುಗಿ ಸತ್ತು ಹೋದ ಸಂಗತಿ ‘‘ನಿನ ಮಕವು ಸಿಗಲಿಲ್ಲ’’ ಎಂಬ ಕಥನ ಗೀತೆಯಲ್ಲಿ ನಿರೂಪಿತವಾಗಿದೆ.

ಸಾವಿನ ಮೂಲಕ ತೋರಿರುವ ‘‘ಮೌನ’’ ಪ್ರತಿಭಟನೆ ಸಮಾಜಕ್ಕೆ ಚುಚ್ಚುವಂತಿದೆ.

ಅನಿವಾರ್ಯವಾಗಿ ಅಂತಹವನ ಜೊತೆ ಬಾಳುವೆ ಮಾಡಲೇಬೇಕೆಂದು ಹಿರಿಯರು ಬೋಧಿಸಿದಾಗ, ಒತ್ತಾಯಿಸಿದಾಗ ನೊಂದು-

ಇಷ್ಟು ಸಡಗರ ಸೋಯ್ದುಕುಡುಗೋಲಿಗ್ಯಾಕಲಿ
ಅಷ್ಟು ಸಂಪತ್ತೊಯ್ದು ಸುಡುಗಾಡಿಗಿಕ್ಕಲಿ
ಗಂಡಂತ್ರವಾದೀತು ಬಾಲಿಯ ಈ ಜನುಮ
ಎದೆಬಿಚ್ಚಿ ಯಾರಿಗ್ಹೇಳಲಿ ದೇವ
ಕೊಟ್ಟಾರ ಮುದುಕಗ

ಎಂದು ಶಪಿಸಿದ್ದಾಳೆ. ಮದುವೆಯಲ್ಲಿ ಕೊಟ್ಟ ಬಂಗಾರದ ಒಡವೆ ವಸ್ತುಗಳನ್ನಿಡದೆ, ಮುಡಿಬಿಚ್ಚಿ ತನ್ನ ಮೌನ ಪ್ರತಿಭಟನೆಯನ್ನು ವ್ಯಕ್ತಪಡಿಸಿರುವದು ವ್ಯವಸ್ಥೆಯನ್ನು ನಿರಾಕರಣೆ ಮಾಡುವಂತಹದೇ ಆಗಿದೆ.

ಕಿರಕ ಸಾಲಿಯ ಗಿಡವು ನೆಲಕ ಹಬ್ಬಿದರೇನ
ಮುದುಕ ಗಂಡನ ಮದಿವ್ಯಾಗಿ | ಆ ಬಾಲಿ
ಎರಕೊಂಡ ಮುಡಿಯ ಬಿಟ್ಟಾಳ

ಮದಗುಣಕಿ ಗಿಡಾ | ಉದ್ದ ಬೆಳೆದಾರೇನ
ಮುದುಕ ಗಂಡನ ಮದಿವ್ಯಾಗಿ |ಆ ಬಾಲಿ
ಬಂಗಾರ ಇಡವಳ್ಳ

ತನ್ನ ಹೊಸ ಬಾಳಿನ ಕುರಿತು ಹೊಂಗನಸುಗಳನ್ನು ಕಂಡ ಮುಗ್ಧ ಹೆಣ್ಣು ಕನಸುಗಳು ಒಡೆದು, ನುಚ್ಚು ನೂರಾದಾಗ ಮುಡಿಯನ್ನು ಕಟ್ಟಿ ಸಿಂಗರಿಸಿಕೊಳ್ಳದೆ, ಒಡವೆ ಇಟ್ಟುಕೊಳ್ಳದೇ ಪ್ರತಿಭಟಿಸುವದು ಅರ್ಥವತ್ತಾಗಿದೆ. ಮಹಾಭಾರತದ ದ್ರೌಪದಿ, ರಾಮಾಯಣದ ಕೈಕೇಯಿ, ಕೂದಲು ಬಿಚ್ಚಿ, ಆಭರಣಗಳನ್ನು ತ್ಯಜಿಸಿ ತಮಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದನ್ನು ನೆನೆಯಬಹುದು.

ಪುರುಷನ ವಿವಾಹಬಾಹಿರ ಸಂಬಂಧಕ್ಕೆ ಪ್ರತಿಕ್ರಿಯೆ, ಪ್ರತಿಭಟನೆ

ಶೀಲ, ಚಾರಿತ್ಯ್ರ, ಪಾತಿವ್ರತ್ಯದಂತಹ ಕಟ್ಟಳೆಗಳನ್ನು ಮಹಿಳೆಗೆ ಮತ್ರ ವಿಧಿಸಿರುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷನಿಗೆ ಯಾವುದು ನಿರ್ಬಂಧಗಳಿಲ್ಲ. ಅವನ ಸ್ಪೈರ ವೃತ್ತಿಗೂ ಕಡಿವಾಣವಿಲ್ಲ. ನಂಬಿದ ಹೆಣ್ಣಿಗೆ ಕಣ್ಣಿಗೆ ಮಣ್ಣುಹಾಕಿ, ಬೇರೊಂದು ಹೆಣ್ಣಿನೊಡನೆ ಲೈಂಗಿಕ ಸಂಬಂಧ ಹೊಂದಿದರೂ ಸಮಾಜ ಅವನ ನಡತೆಯನ್ನು ಪ್ರಶ್ನಿಸುವುದಿಲ್ಲ ಬದಲಾದ ಹೆಣ್ಣಿಗೇ ಅಪವಾದವನ್ನು ಹೂರಿಸುತ್ತದೆ.

ಇಂತಹ ತಾರತಮ್ಯ (ಅ) ನೀತಿಯನ್ನು ಹೊಂದಿರುವುದರಿಂದ ಸಮಾಜದಲ್ಲಿ ಬಹುಪತ್ನಿತ್ವ, ವೇಶ್ಯಾಪದ್ಧತಿ, ಉಪಪತ್ನಿತ್ವ ಪದ್ಧತಿಗಳು ರೂಢಿಯಲ್ಲಿ ಬಂದಿವೆ. ಇಂತಹ ವ್ಯವಸ್ಥೆಯಲ್ಲಿ ಸಿಕ್ಕ ಹೆಣ್ಣು ಅಸಹಾಯಕಳಾಗಿ, ತೊಳಲಾಡಿ, ಸಹಿಸಲಾರದೇ ಪುರುಷ ನೀತಿ (ಅನೀತಿ)ಯನ್ನು ಪ್ರಶ್ನಿಸಿದ್ದಾಳೆ, ಪ್ರತಿಕ್ರಿಯಿಸಿದ್ದಾಳೆ ಸಿಡಿದು ಹೊರ ಬಂದಿದ್ದಾಳೆ.

ದೇವರೆಂದು ಕಲ್ಪಿಸಿದ ಶಿವನೂ ಸಾಮಾನ್ಯರಂತೆ ಗಂಗೆ -ಗೌರಿ ಇಬ್ಬರನ್ನು ವಿವಾಹವಾಗಿದ್ದಾನೆ. ಗಂಗೆ-ಗೌರಿಯ ಸಂವಾದ ರೂಪದ ಹಾಡುಗಳಲ್ಲಿ ಸವತಿ ಮತ್ಸರ, ಶಿವನ ಮೇಲಿನ ಅಸಮಾಧಾನ ವ್ಯಕ್ತವಾಗಿದೆ. ಸಾಮಾನ್ಯ ಮಾನವನಲ್ಲಿರುವ ಗುಣ ಸ್ವಭಾವಗಳನ್ನು ಶಿವ, ಗೌರಿ, ಗಂಗೆಯರಲ್ಲೂ ಜನಪದರು ಕಂಡಿದ್ದಾರೆ.

ಗಂಗೆಯನ್ನು ಮದುವೆಯಾಗಿ ಕರೆತಂದಾಗ ಗೌರಿಗೆ ಅಸಮಾಧಾನ, ಮತ್ಸರ, ಕೋಪ ಎಲ್ಲವೂ ಸ್ವಾಭಾವಿಕ. ತಾನು ಏನಾದರೂ ನೆಪ ಮಾಡಿ ತೌರಿಗೆ ಹೊರಡಬೇಕೆಂದು ಗೌರಿ ಹೊಂಚು ಹಾಕುತ್ತಾಳೆ. ಒಂದು ದಿನ ನೆಪ ಹುಡುಕಿ ತವರಿಗೆ ಹೋಗಿ ಎಂಟು ದಿನ ಇದ್ದು ಬರುತ್ತೇನೆಂದು ಹೋದವಳು ಎಷ್ಟೋ ದಿನಗಳವರೆಗೆ ಹಿಂತಿರುಗುವುದಿಲ್ಲ. ಶಿವನು ಗೌರಿಯಿಲ್ಲದೇ ಇರಲಾರ. ತಾನೇ ಅವಳನ್ನು ಕರೆತರಲು ಹೋಗುತ್ತಾನೆ. ಕೂಡಲೇ ಅವಳು ತನ್ನೊಂದಿಗೆ ಹೊರಡಬೇಕೆಂದು ಒತ್ತಾಯಿಸುತ್ತಾನೆ. ಆಗ ಗೌರಿ ಹೇಳುವದು ಹೀಗೆ-

ಸಣ್ಣನ್ನ ಶಾವಿಗಿ ಬಸಬಸದ ನೀಡಿದರ
ಸಣ್ಣ ಸಿರಿಗಂಗಿ ಕರದು ಸಕ್ಕರಿ ಬೇಡುಂಡಿ
ಬಲ್ಲಿನ್ಹೋಗು ನಾ ಒಲ್ಲಿನ್ಹೋಗಯ್ಯ
ಹೋಗು ಹೋಗು ನಾ ಒಲ್ಲಿನ್ಹೋಗಯ್ಯ

ಎಂದು ನಿರಾಕರಿಸುತ್ತಾಳೆ. ಶಿವ ಅವಳಿಗೆ ಮತ್ತೇ ಮನ ಒಲಿಸಲು ಪ್ರಯತ್ನಿಸಿದಾಗ ಅವನನ್ನು ಜರಿಯುತ್ತಾಳೆ.

ಹಾಸಿಗಿ ಹಾಸಿದ್ದೆ
ಮಲ್ಲಿಗಿ ಸೊಸಿದ್ದೆ
ಸಣ್ಣ ಸಿರಿಗಂಗಿ ಕರದು
ಮಂಚಕ ಎರವಾದೆ
ಒಲ್ಲಿನ್ಹೋಗು ಒಲ್ಲಿನ್ಹೋಗಯ್ಯ

ಎಂದು ಶಿವನ ವರ್ತನೆಯನ್ನು ಖಂಡಿಸುತ್ತಾಳೆ. ಅವಳ ಅಸಮಾಧಾನ, ಪ್ರತಿಕ್ರಿಯೆ ಗಂಗಿ-ಗೌರಿ ಹಾಡಿನಲ್ಲಿ ವ್ಯಕ್ತವಾಗಿವೆ. ಸಮಾಜದಲ್ಲಿ ವರ್ಣ ತಾರತಮ್ಯವೂ ಇದ್ದೇ ಇದೆ. ಬಿಳಿ ಬಣ್ಣ ಶ್ರೇಷ್ಠ, ಕಪ್ಪು ಬಣ್ಣವನ್ನು ಕನಿಷ್ಠವೆಂಬ ತರತಮ ಭಾವನೆಯಿಂದ ನೋಡಲಾಗುತ್ತದೆ. ಹೆಂಡತಿ ಕಪ್ಪು ಬಣ್ಣದವಳೆಂಬ ನೆಪದಿಂದ ಬೇರೊಂದು ಮದುವೆಯಾಗಬಯಸಿದ ಗಂಡನಿಗೆ-

ಕರಿಯ ಹೆಂಡತಿ ಅಂತ ಕರಿ ಕರಿ ಮಾಡಬ್ಯಾಡ
ಹರಕೊಳ್ಳೊ ನಿನ್ನ ಗುಳದಾಳಿ
ನಾ ರೈತನ ಮಗಳಾಗಿ ಇರತೇನಿ

ಎಂದು ಸ್ವಾವಲಂಬಿಯಾಗಿ, ಆತ್ಮಗೌರವವನ್ನುಳಿಸಿಕೊಂಡು ಬದುಕುತ್ತೇನೆಂದು ಸಿಡಿದು ನುಡಿದಿದ್ದಾಳೆ.

ಬಹುಪತ್ನಿತ್ವವನ್ನು ಪ್ರಶ್ನಿಸಿದ ದಾಖಲೆಗಳು ಜನಪದ ಗೀತೆಗಳಲ್ಲಿವೆ. ಸವತಿಯನ್ನು ತರುತ್ತೇನೆಂದು ಹೇಳಿದ ಗಂಡನಿಗೆ-

ಅಂಗೀ ಮ್ಯಾಲಂಗಿ ಚಂದೆನೋ ನನರಾಯ
ರಂಬಿ ಮ್ಯಾಲ ರಂಬಿ ಪ್ರತಿರಂಬಿ ಬಂದರೆ
ಛಂದೆನೋ ರಾಯಾ ಮನಿಯಾಗ

ಎಂದು ತನ್ನ ಕುಟುಂಬದ ಹಿತರಕ್ಷಣೆಗೆ ಹೆಣ್ಣು ಚಿಂತಿಸಿದ್ದಾಳೆ.

‘‘ಸಾವಿರ ಕೊಟ್ಟರೂ ಸವತಿಯ ಮನಿಬ್ಯಾಡ’’ ಎಂದು ಪ್ರತಿರೋಧಿಸಿದ ಹೆಣ್ಣು ತನ್ನ ಗಂಡ ಸೂಳೆಯೊಡನೆ ಗುಟ್ಟಾಗಿ ಸಂಬಂಧವಿರಿಸಿಕೊಂಡದ್ದನ್ನು ತಿಳಿದಾಗ ತನ್ನ ಮನೆತನ, ಮಾತ್ರವಲ್ಲ ತನ್ನ ಸರ್ವಸ್ವವೂ ನಾಶವಾಯಿತೆಂದು ಭಾವಿಸಿ ಸೂಳಿಯರ ಸಂತತಿಯನ್ನು ಶಪಿಸಿದ್ದಾಳೆ. ವೇಶ್ಯಾ ಪದ್ಧತಿಗೂ ಪುರುಷ ಸಮಾಜವೇ ಕಾರಣವೆಂಬುವ ಪರಿಕಲ್ಪನೆ ಅವರಿಗಿರುವದಿಲ್ಲ.

ಗಾಳಿಗಾಳಿ ಕೇಳೆ ಗಾಳಿ ಮಾಂಕಾಳಿ ಕೇಳೆ
ಸೂಳೇರ ಕೇರಿಯ ಸುಡಬೇಕು
ಜಾಣರ ಕೇರೀಲಿ ಇರಬೇಕು

ಎಂದು ಆಕ್ರೋಶವನ್ನು ತೋರಿದ್ದಾಳೆ.

ಸೂಳೆಗೆ ಹೋದವನು ಏನಾದ ಎಂತಾದ
ಕಾಡು ನಾಯಾದ ಕಪಿಯಾದ ಆ ಮುರುವ
ಸೂಳೆ ಕಾಲಿಗೆ ಕೆರವಾದ

ಹೀಗೆ ಗರತಿಯರು ವೇಶ್ಯಾಪದ್ಧತಿ ನಾಶವಾಗಬೇಕೆಂದು ರೋಷದಿಂದ ಪ್ರತಿಭಟಿಸಿದ್ದಾರೆ. ಸೂಳೆಯ ಸಂಗದಿಂದ ಅವನ ಜೀವನವೇ ಹಾಳಾಗುವದೆಂದು ನುಡಿದಿದ್ದಾರೆ.

ಸತಿಪದ್ಧತಿ/ವೈಧವ್ಯ ನಿರಾಕರಣೆ:

ಹೆಣ್ಣು ಬಾಲ್ಯದಲ್ಲಿ ತಂದೆ, ಯೌವನದಲ್ಲಿ ಗಂಡ, ವೃದ್ಧಾಪ್ಯದಲ್ಲಿ ಮಗನ ರಕ್ಷಣೆಯಲ್ಲಿರಬೇಕೆಂದು ಸಾರಿದ ಧರ್ಮಶಾಸ್ತ್ರಿಗಳು ಅವಳನ್ನು ಸಂಪೂರ್ಣವಾಗಿ ಪುರುಷಾಧೀನಕ್ಕೆ ತಳ್ಳಿದವು.

ಪತಿ ಮರಣ ಹೊಂದಿದರೆ ಅವಳ ಮರುವಿವಾಹಕ್ಕೆ ಅವಕಾಶವಿರಲಿಲ್ಲ. ಆದರೆ ಹೆಂಡತಿ ಸತ್ತರೆ ಕೆಲವೇ ದಿನಗಳಲ್ಲಿ ಗಂಡ ಹಸೆಮಣೆ ಏರಬಹುದು. ಇದು ಪುರುಷ ನೀತಿ!

ವಿಧವೆ ಸಮಾಜದ ದೃಷ್ಟಿಯಲ್ಲಿ ಅಮಂಗಲೆಯಾಗಿ, ಹೆತ್ತವರಿಗೆ ಹೊರೆಯಾಗಿ ಇಲ್ಲವೆ ಗಂಡನ ಮನೆಯವರ ತೊತ್ತಾಗಿ ಕಣ್ಣೀರಿನಲ್ಲೇ ಕೈ ತೊಳೆಯುವಂತೆ ಪುರುಷಾಧಿಕಾರ ಅವಳನ್ನು ಬಂಧನದಲ್ಲಿರಿಸಿತು.

ಶೀಲ, ಪಾತಿವ್ರತ್ಯದಂತಹ ಆದರ್ಶಗಳನ್ನೇ ನಂಬಿದ ಹೆಣ್ಣು ತನ್ನ ಆಸೆ ಆಕಾಂಕ್ಷೆಗಳನ್ನು ಬಲಿ ಕೊಟ್ಟು ವೈಧವ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು.

ಹೆಂಡತಿಯನ್ನು ಪುರುಷನ ವಸ್ತು, ಆಸ್ತಿಯ ಒಂದಂಶವೆಮದು ಪರಿಗಣಿಸಿದ್ದ ಸಮಾಜದಲ್ಲಿ ಗಂಡನ ಚಿತೆಯೊಡನೆ ಹೆಂಡತಿಯನ್ನು ಪಕ್ಕದಲ್ಲಿರಿಸಿ ಸುಡುವ ಸತಿ ಪದ್ಧತಿಯೂ ರೂಢಿಗೆ ಬಂದರಿಬೇಕು. ಗಂಡ ಸತ್ತ ನಂತರ ಕಠೋರ ಸಮಾಜದ ಕ್ರೂರ ನಿಯಮಗಳಿಗೆ ಹೆದರಿ ಸತಿ ಹೋಗುವದೇ ಲೇಸೆಂದು ಹೆಣ್ಣು ಚಿತೆಯೇರಲು ಒಪ್ಪಿಕೊಂಡಿರಬಹುದು. ಹೀಗೆ ಸತಿಯಾದವರನ್ನು ಸಮಾಜ ದೇವಿಯ ಪಟ್ಟಕ್ಕೇರಿಸಿ ಕೊಂಡಾಡಿದ್ದು ಮಾನವತೆಯ ದುರಂತವೇ ಸರಿ.

ಸಾಮಾಜಿಕ ಕೆಳವರ್ಗದ ಜನಾಂಗಗಳಲ್ಲಿ ವಿಧವೆಯರ ವಿವಾಹಕ್ಕೆ ಕಟ್ಟುಪಾಡುಗಳಿಲ್ಲ. ಗಂಡ ಸತ್ತವಳು ‘ಕೂಡಿಕೆ’ ‘ಉಡಿಕೆ’ ಮಾಡಿಕೊಂಡು ಹೊಸ ಸಂಬಂಧವನ್ನು ಸ್ಥಾಪಿಸಬಹುದು. ಇಂತಹ ಅವಕಾಶವಿರುವ ಸಂದರ್ಭದಲ್ಲಿ ವಿಧವೆ ತನ್ನ ನಿರ್ಧಾರವನ್ನು ಧೈರ್ಯದಿಂದ ವ್ಯಕ್ತಪಡಿಸಿದ್ದಾಳೆ.

ಒಪ್ಪತ್ತು ಉಣಲಾರೆ, ನೆತ್ತಿ ಬೋಳಿಸಲಾರೆ
ಬಕ್ಕ ಮುಂಡ್ಯಾಗಿ ಇರಲಾರೆ | ಅತ್ತೆವ್ವ
ನನ್ನ ಶೆಟ್ಟರ ಕೂಡ ಕಳುವವ್ವ

ಎಂದು ಸಂಪ್ರದಾಯದ ಕಟ್ಟಳೆಗಳನ್ನು ಮುರಿದು, ಪರ್ಯಾಯ ವ್ಯವಸ್ಥೆಯನ್ನು ಇಚ್ಛಿಸಿದ ಮಹಿಳೆಯರ ಮಾದರಿಗಳು ಜನಪದ ಸಾಹಿತ್ಯದಲ್ಲಿವೆ.

ಹೆಗ್ಗಿಗೆ ಹೊಯ್ವ ಮಳಿ ಸುಗ್ಗೀಗೆ ಹೊಯ್ಯಲಿ,
ದುಂಡು ಮಲ್ಲಿಗಿ ಚಿಗುರಲಿ ಈ ಊರ
ಗಂಡ ಸತ್ತವರ ಮದುವೀಗೆ

ಎಂದು ಮರುವಿವಾಹವನ್ನು ಹೆಣ್ಣು ಸ್ವಾಗತಿಸಿದ್ದಾಳೆ.

ಪುರುಷ ಪ್ರಧಾನ ವ್ಯವಸ್ಥೆ, ಶಿಷ್ಟ ಸಮಾಜದ ಸಂಪ್ರದಾಯಗಳು, ಧರ್ಮಶಾಸ್ತ್ರಗಳು ಇಂತಹ ವಿಧವಾ ವಿವಾಹವನ್ನು ವಿರೋಧಿಸಿದಾಗ-

ಹೆಣ್ಣಿನ ಕಿಚ್ಹೋಗಿ ಸಂನ್ಯಾಸಿ ಮಠ ಬೆಂದೋ |
ಕನ್ಯೆ ರಾಮರ ಮಠ ಬೆಂದೋ | ಹಾರುವರ
ಪಂಚಾಂಗ ಬೆಂದೋ ಹೊಗೆಯಾದೋ

ಎಂದು ರೊಚ್ಚಿನಿಂದ ಸಂಪ್ರದಾಯಗಳನ್ನು ತನ್ನ ಎದೆ ಬೆಂಕಿಯಲ್ಲಿ ಸುಟ್ಟು ಹಾಕಿದ್ದಾಳೆ.

ಲೈಂಗಿಕ ಕಿರುಕುಳ/ದೌರ್ಜನ್ಯಕ್ಕೆ ಪ್ರತಿಭಟನೆ:

ಹೆಣ್ಣನ್ನು ಪುರುಷನ ಭೋಗವಸ್ತುವಾಗಿ ನೋಡುವ ಸಮಾಜದಲ್ಲಿ; ಕಾಮುಕ ಪುರುಷರಿಂದ ಎಂದಿಗೂ ಅವಳಿಗೆ ಲೈಂಗಿಕ ಕಿರುಕುಳಗಳು ತಪ್ಪಿಲ್ಲ. ಇಂತಹ ಕಿರುಕುಳಗಳು ನಗರದಲ್ಲಿ ಒಂದು ತೆರನಾದರೆ, ಹೊಲಗದ್ದೆಗಳಲ್ಲಿ ದುಡಿಯುವ ಹೆಣ್ಣುಗಳಿಗೆ ಮತ್ತೊಂದು ತೆರನಾಗಿರುತ್ತವೆ. ಜನಪದ ಸಮಾಜದಲ್ಲಿ ಹೆಣ್ಣು ದಿನನಿತ್ಯ ಹೊಲಗದ್ದೆಗಳಲ್ಲಿ, ಕೆರೆ-ಬಾವಿಯ ದಂಡೆಯಲ್ಲಿ ಅನೇಕ ಬಗೆಯಲ್ಲಿ ವಿಕೃತಕ ಕಾಮುಕರ ಲೈಂಗಿಕ ಕಿರುಕುಳಗಳನ್ನು ಸಹಿಸಬೇಕಾಗುತ್ತದೆ. ಪುಂಡರು ಅನೇಕ ರೀತಿಯ ಲೈಂಗಿಕ ಚೇಷ್ಟೆಗಳಿಂದ ಶೃಂಗಾರ ಪದಗಳನ್ನು ಹಾಡು ಹೆಣ್ಣಿನ ಮನ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವಳು ಒಲಿಯದಿದ್ದಾ ಸಮಯ ಸಾಧಿಸಿ ಅತ್ಯಾಚಾರ ಮಾಡಲು ಹಿಂಜರಿಯುವುದಿಲ್ಲ.

ಇಂತಹ ಇಕ್ಕಟ್ಟಿನ ಸನ್ನಿವೇಶಗಳಲ್ಲಿ ಜನಪದ ಹೆಣ್ಣು ಗುಡುಗಿ ಛೀಮಾರಿ ಹಾಕಿ ಅವಮಾನಿಸಿದ ಅಪರೂಪದ ಸಂಗತಿಗಳು ಜನಪದ ಸಾಹಿತ್ಯದಲ್ಲಿ ನಿರೂಪಿತವಾಗಿವೆ.

ಮೂರು ಹಾಡಿನ ಮೂಳ | ಮುಕ್ಕಟ್ಟು ಬರಬ್ಯಾಡ
ಮೂಗೀಗೆ ಕವಡಿ ಪೋಣ್ಸೇನು | ಎಲೆ ಮೂಳ
ಊರಾಗ ನಿನ್ನ ಮೆರಸೀನು

ಹಾಡು ಬರತಾವಂತ ಏರೇರಿ ಬರಬ್ಯಾಡ
ಏರೀದ ಗರ್ವ ಇಳಸೇನು | ಸೊರಟೂರ
ಅಗಸೇಲಿ ನಿನ್ನ ಹುಗಸೇನು

ಎಂದು ಪ್ರತಿಭಟಿಸಿ, ಅವನ ಸೊಕ್ಕು ಮುರಿದು ತನ್ನನ್ನು ತಾನು ಸಂರಕ್ಷಿಸಿಕೊಂಡಂತಹ ಉದಾಹರಣೆಗಳಿವೆ.

‘‘ಸಂಗವ ಮಾಡ್ಯಾಳ ನಿಮ ತಂಗಿ’’ ಹಾಡಿನಲ್ಲಿ ಪರ ಪುರುಷನೊಂದಿಗೆ ಮಾತಾಡಿದ್ದಕ್ಕೆ, ಮದುವೆಯಾದ ತಂಗಿಯ ಮೇಲೆ ಸಂಶಯ ಪಟ್ಟು ಅಣ್ಣನೇ ಅವಳ ಕೊಲೆ ಮಾಡಿದ ಸಂಗತಿ ಇದೆ. ಹೆಣ್ಣಿನ ಶೀಲದ ಬಗೆಗಿರುವ ಅಪನಂಬಿಕೆಯಿಂದ, ದುರಂತವಾದ ಹೆಣ್ಣಿನ ಕಥೆಗಳು ಜನಪದ ಕಾವ್ಯದಲ್ಲಿ ಸಾಕಷ್ಟಿವೆ.

ತನ್ನ ಶೀಲದ ಬಗೆಗೆ ಸದಾ ಎಚ್ಚರದಿಂದಿರಬೇಕಾದ ಹೆಣ್ಣಿನ ಬದುಕು ಖಡ್ಗದ ಮೇಲೆ ನಿಂತಂತೆಯೇ ಸರಿ.

ನೆತ್ತಿಯ ಮೇಲೂ ಪುರುಷನ ಕ್ರೂರ ಸಂಶಯದ ಕತ್ತಿ ತೂಗುತ್ತಲೇ ಇರುತ್ತದೆ. ಸಮಾಜದಲ್ಲಿ ಹೆಣ್ಣು ಈ ಕತ್ತಿಯ ಇರಿತದಿಂದ ತಪ್ಪಿಸಿಕೊಳ್ಳಲು ಎಚ್ಚರದಿಂದಲೇ ಇರಲು ಹೆಣಗುತ್ತಾಳೆ. ಆದರೂ ಅವಳನ್ನು ಸಂಶಯ ದೃಷ್ಟಿಯಿಂದ ನೋಡುವ ಗಂಡುಗಳೇ ಅವಳನ್ನು ದುರಂತಕ್ಕೀಡು ಮಾಡುತ್ತಾರೆ.

‘‘ನೀಲಗಂಗಾ’’ನ ಹಾಡಿನಲ್ಲಿ ತವರಿನಿಂದ ಅವಳನ್ನು ಕರೆದೊಯ್ಯಲು ಬಂದ ಭಾವ, ಕಾಡು ದಾರಿಯಲ್ಲಿ ಅವಳನ್ನು ತಪ್ಪಿಸಿ ಕರೆದೊಯ್ದು ಅತ್ಯಾಚಾರವೆಸಗಿದಾಗ ಹಳ್ಳದ ಮಡುವಿನಲ್ಲಿ ಜಿಗಿದು ತನ್ನನ್ನು ಅಂತ್ಯಗೊಳಿಸಿಕೊಳ್ಳುತ್ತಾಳೆ.

ಇಂತಹ ಅತ್ಯಾಚಾರಗಳು ಅನೇಕ ಸಲ ಕೌಟುಂಬಿಕ ವಲಯದಲ್ಲಿಯೇ ನಡೆಯುತ್ತವೆ. ಈ ಹಿಂಸೆಗಳು ಕುಟುಂಬದಲ್ಲಿ ನಡೆದಾಗ ಹೆಣ್ಣು ಎಷ್ಟೋ ಸಲ ಹೆದರಿ ಬಾಯಿಮುಚ್ಚಿಕೊಂಡು ಬಿಡುತ್ತಾಳೆ. ಕೆಲವು ಸಲ ಮನೆಯವರು ಬಾಯಿ ಮುಚ್ಚುತ್ತಾರೆ. ‘‘ಅಕ್ಕನ ಮನೆಯಲ್ಲಿ ತಂಗಿ’’, ‘‘ಕೆಮ್ಮುಗಲಿಲ್ಲ ಕೆಸರಿಲ್ಲ’’ ಇಂತಹ ಗೀತೆಗಳಲ್ಲಿ ಅಕ್ಕನ ಮನೆಗೆ ಸಹಾಯ ಮಾಡಲು ಬಂದ ತಂಗಿ; ಅಕ್ಕನ ಗಂಡನ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ತನ್ನ ಗಂಡನೇ ತಂಗಿಯ ಬಸಿರಿಗೆ ಕಾರಣವೆಂದು ತಿಳಿದಾಗ ಅಕ್ಕ ತಂಗಿಯ ಭವಿಷ್ಯದ ಬಗೆಗೆ ಚಿಂತಿಸುತ್ತಾಳೆ.

ಕಂದನ ಸಲುವಾಕೆ ತಂಗೀಯ ಕರೆತಂದೆ
ತಂಗ್ಯೆಮ್ಮ ಗೆರಡ ಬಗೆದೆಲ್ಲೊ | ರಾಯರೆ
ಬಂಡು ಮಾಡಲೆ ಸಭಿಯೊಳಗೆ

ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ತಂಗಿಗಾದ ಅನ್ಯಾಯ ಪ್ರತಿಭಟಿಸಿ ನಿಲ್ಲುತ್ತಾಳೆ. ತಂಗಿಯಾದರೂ ಸಮಾಜಕ್ಕೆ ಹೆದರದೆ ಭಾವನಿಗೂ ಹೆದರದೆ-

ಕಕ್ಕೆ ಕಾಯಾದಾಗ ಭಿಕ್ಕೆ ಫಲ ಬಿಟ್ಟಾಗ
ನಾ ಗಂಡು ಮಗನ ಹಡೆದಾಗ-ಭಾವಯ್ಯ
ಆಗ ಪಾಲಿಗೆ ಬರತೀನಿ

ಎಂದು ತನ್ನ ಹಕ್ಕು ಸ್ಥಾಪಿಸಿಯೇ ಅಕ್ಕನ ಮನೆಯಿಂದ ಹೊರಡುತ್ತಾಳೆ. ಇಂತಹ ಹೆಣ್ಣಿನಲ್ಲಿರುವ ಅಂತಃಸತ್ವ ತೋರಿಕೆಯದಲ್ಲ.