ಅವಿಭಕ್ತ ಕುಟುಂಬದಲ್ಲಿ ಸೊಸೆಯನ್ನು ನಡೆಸಿಕೊಳ್ಳುವ ರೀತಿಯು ಹೀನಾಯವಾದುದು. ಅತ್ತೀಯ ಮನೆಯಲ್ಲಿ ಹತ್ತೆಂಟು ಬೈಯ್ದುರೂ ನೋವನ್ನು ನುಂಗಿಕೊಂಡು ನಡೆಯಬೇಕೆಂದು ಪರಾಂಪರಗತವಾಗಿ ನಿರ್ಭಂಧಿಸಲಾಗಿದೆ. ‘‘ಉತ್ತಮರ ಮಗಳಾಗಿ’ ಹೆತ್ತವರಿಗೆ ಹೆಸರು ತರದೆ’ ಅತ್ತೆ ಮಾವ ಗಂಡ ನೆಗೆಣ್ಣಿ, ಭಾವ, ಇಷ್ಟಲ್ಲದೆ ‘ಸುತ್ತೇಳು ನೆರೆಗಂಜಿ’ ಬದುಕು ಸಾಗಿಸುವ ಹೆಣ್ಣಿನ ನೇವು ಜನಪದ ಗೀತೆಗಳಲ್ಲಿ ಮಡುಗಟ್ಟಿದೆ.

ಇಂತಹದೇ ನೋವನ್ನು ಅನುಭವಿಸಿ, ಕುಟುಂಬ ವ್ಯವಸ್ಥೆಯನ್ನು ‘‘ಮೌನ’’ವಾಗಿ ಪ್ರತಿರೋಧಿಸಿದ ಹೆಣ್ಣಿನ ಸುತ್ತ ಹರಡಿದ ಒಂದು ಆಚರಣೆ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಬಳಕೆಯಲ್ಲಿದೆ. ಮೇಲ್ವರ್ಗದ ಕುಟುಂಬದ ಸೊಸೆಗೆ ಸಂಬಂಧಿಸಿದೆ.

ಅವಿಭಕ್ತ ಕುಟುಂಬದ ದೊಡ್ಡ ಜಮೀನುದಾರ ಮನೆತನದ ಸೊಸೆಗೆ ಗಂಡು ಮಗುವಾಗುತ್ತದೆ. ಮಗುವಿಗೆ ವರ್ಷವಾಗುವದರೊಳಗೆ ಜಾವಳ (ಚೌಲ) ತೆಗೆಸುವದು ಸಂಪ್ರದಾಯ ಜಾವಳ ತೆಗೆಸುವ ಮೂಹರ್ತ ದಿನ ನಿಶ್ಚಿತವಾಗುತ್ತದೆ. ಮನೆಯ ಹಿರಿಯರು ಊರಲ್ಲಿ ಯಾರನ್ನೂ ಬಿಡದಂತೆ, ಹೊಸ್ತಿಲಿಗೇ ಆತಂತ್ರಣವಿತ್ತು ಬರುತ್ತಾರೆ. ಹೊಸ್ತಿಲಿಗೆ ಆಮಂತ್ರಣ ಕೊಡುವುದೆಂದರೆ ಮನೆಯವರಲ್ಲದೇ ಊರಿಗೆ ಬಂದ ಅತಿಥಿಗಗೆ ಅಂದು ಊರ ಪ್ರಸ್ತ (ಅನ್ನ ಸಂತರ್ಪಣೆ)

ವಿಧಿವತ್ತಾಗಿ ಜಾವಳ ಕಾರ್ಯಕಲಾಪಗಳು ನಡೆಯುತ್ತವೆ. ಮಧ್ಯಾಹ್ನ ಊರಿಗೇ ಊರೇ ಉಂಡು ಸಂತೃಪ್ತಿಯಿಂದ ತೇಗುತ್ತದೆ. ರಾತ್ರಿಯವರೆಗೂ ಬಂದವರೆಲ್ಲ ಉಂಡು ಹೋದರು. ಕೊನೆಯಲ್ಲಿ ಮನೆಯ ಯಜಮಾನ, ಉಳಿದ ಗಂಡಸರು, ಹೆಂಗಸರು ಉಂಡರು. ಆದರೆ ಸೊಸೆಯ ಊಟ ಮಾಡಿದಳೋ ಇಲ್ಲವೋ ಎಂದು ಯಾರೂ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇಡೀ ದಿನ ಕೆಲಸ ಮಾಡಿ, ಅಳುವ ಮಗುವನ್ನು ಸಂಭಾಳಿಸಿ ಹಸಿವು, ಆಯಾಸದಿಂದ ಬಳಲಿದ ಸೊಸೆಗೆ ಅತೀವ ದುಃಖವಾಗುತ್ತದೆ. ಇದೆಂತಹ ಜಲ್ಮ ತನ್ನದು ಎಂದು ನೊಂದು ಅದೇ ಊರಲ್ಲಿದ್ದ ತವರಿಗೆ ಹೋಗುತ್ತಾಳೆ.

ರಾತ್ರಿಯ ಹೊತ್ತಿನಲ್ಲಿ; ಅದೂ ಮನೆಯಲ್ಲಿ ಸಂಭ್ರಮ ತುಂಬಿದ ದಿನ ಮಗಳು ನಡುರಾತ್ರಿಯಲ್ಲಿ ಬಂದದ್ದು ತವರು ಮನೆಯವರಿಗೆ ದಿಗಿಲು ಮುಂಜಾನೆಯಿಂದ ದುಡಿದು, ಹಸಿದು ಬಂದ ಮಗಳ ದುಃಖವನ್ನು ಕೇಳಿದ ಹೆತ್ತವರು ಅಸಹಾಯಕರಾಗಿ, ಆಕೆ ಹೇಗಿದ್ದರೂ ಗಂಡನ ಮನೆಗೆ ಹಿಂತಿರುಗಿ ಹೋಗಲೇ ಬೇಕೆಂದು ಹೇಳುತ್ತಾರೆ.

ಈ ವ್ಯವಸ್ಥೆಯ ಕಟ್ಟುಪಾಡು, ಸಂಪ್ರದಾಯ, ಶಾಸ್ತ್ರಗಳ ಬಗೆಗೆ ರೋಸಿದ ಸೊಸೆ ಅಸಹಾಯಕಳಾಗಿ ಗಂಡನ ಮನೆಗೆ ಮಗುವಿನೊಂದಿಗೆ ಹಿಂತಿರುಗುತ್ತಾಳೆ. ನೆಟ್ಟ ನಡುರಾತ್ರಿ ಮನೆಯ ಮುಂದಿರುವ ವೃಕ್ಷವನ್ನೇ ಪ್ರಾರ್ಥಿಸಿಕೊಳ್ಳುತ್ತಾಳೆ. ಅವಳ ದುಃಖಕ್ಕೆ ಕರಗಿದ ದೇವವೃಕ್ಷದ ಒಡಲು ಬಿರಿದು ಹೋಗುತ್ತದೆ. ಸೊಸೆ ಮಗುವನ್ನು ಬಗಲಲ್ಲಿಟ್ಟುಕೊಂಡೆ ವೃಕ್ಷದ ಒಡಲನ್ನು ಪ್ರವೇಶಿಸುತ್ತಾಳೆ.

ಇತ್ತ ಗಂಡನ ಮನೆಯವರು ಮಲಗುವ ಮುನ್ನ ಜಾವಳ ತೆಗೆಸಿದ ಮೊಮ್ಮಗನನ್ನು ಹುಡುಕುತ್ತಾರೆ. ಮಗುವಿನ ಅಳುವಿಲ್ಲ, ಸುಳಿವಿಲ್ಲ, ಸೊಸೆಯೂ ಇಲ್ಲ. ಮನೆಯ ಹೊರಗೆ ಬಂದು ನೋಡಲು ಮನೆಯ ಎದುರಿಗಿರುವ ವೃಕ್ಷದ ಬಿರಿದ ಒಡಲಿನಿಂದ ಪೈಜಣ ಹಾಕಿದ ಮಗುವಿನ ಹಿಮ್ಮಡಿ, ಸೊಸೆಯ ಸೀರೆಯ ಸೆರಗು ಕಾಣಿಸುತ್ತದೆ. ನಡೆದ ಘಟನೆಯಿಂದ ಎಲ್ಲರಿಗೂ ಸೊಸೆ ನೆನಪಾಗುತ್ತಾಳೆ.

ಸೊಸೆಯನ್ನು ಕಡೆಗಣಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟು, ಅವಳಿಗೆ ಮನ್ನಣೆಯ ಸ್ಥಾನಮಾನವನ್ನು ಕೊಡಬೇಕೆಂದು ನಿರ್ಧರಿಸುತ್ತಾರೆ. ಪ್ರತಿವರುಷ ಹೊಸ್ತಿಲು ಹುಣ್ಣಿಮೆಯ ದಿನ ಮನೆಯ ಸೊಸೆಯಂದಿರಿಗೆ ಮನ್ನಣೆ ಸಲ್ಲಿಸುವ ಸಂಕೇತವಾಗಿ ಸೊಸೇರ ಹಬ್ಬವನ್ನು ಆಚರಿಸುವದು ರೂಢಿಗೆ ಬಂದಿತು. (ಈ ಐತಿಹ್ಯವನ್ನು ನನ್ನ ಅಜ್ಜಿ ಕೋಳಿವಾಡದ ದಿ. ಕೃಷ್ಟಕ್ಕ ಪಾಟೀಲ ಕುಲಕರ್ಣಿ ಹೇಳಿದ್ದಳು). ಈ ಹಬ್ಬದ ಆಚರಣೆಗೆ ಕುಲಧರ್ಮ ವೆಂದು ಹೇಳುತ್ತಾರೆ.

ಈ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿರುವ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಹೆಣ್ಣಿನ ಸ್ಥಾನಮಾನ, ಅವಿಭಕ್ತ ಕುಟುಂಬದ ರೀತಿ, ರಿವಾಜುಗಳು, ದಾಖಲಿತವಾಗಿವೆ.

ಇಂತಹ ಕುಟುಂಬ ವ್ಯವಸ್ಥೆ ಕಟ್ಟುಪಾಡುಗಳ ಅಧೀನದಲ್ಲಿ ಸಿಕ್ಕು ತಾತ್ಸಾರಕ್ಕೊಳಗಾದ ಸೊಸೆ ನೊಂದು, ರೋಸಿ ತನಗೆ ಆಶ್ರಯ ಕೊಡದ ಪಿತೃಪ್ರಧಾನ ವ್ಯವಸ್ಥೆಯ ತವರು ಮನೆಯನ್ನು ನಿರಾಕರಿಸುತ್ತಾಳೆ. ಉಣ್ಣುವ ಹಕ್ಕಿಗೂ ಧಕ್ಕೆ ತಂದ ಅವಿಭಕ್ತ ಕುಟುಂಬದ ರೀತಿ, ಸಂಪ್ರದಾಯಗಳನ್ನು ‘‘ಮೌನ’’ವಾಗಿ ಪ್ರತಿಭಟಿಸಿ ತನ್ನ ಗಂಡನ ಮನೆಯವರಿಗೆ ತಕ್ಕ ಬುದ್ಧಿಕಲಿಸುತ್ತಾಳೆ. ಮತ್ತು ಸುತ್ತಲಿನ ಸಮಾಜದಲ್ಲಿ ಸೊಸೆಯಂದರಿಗೆ ಸಲ್ಲಬೇಕಾದ ಬದುಕಿನ ಹಕ್ಕಿನ ಮನ್ನಣೆಯ ಸ್ಥಾನವನ್ನು ಸ್ಥಾಪಿಸಿ ಆತ್ಮಗೌರವವನ್ನು ಸ್ವಾಭಿಮಾನವನ್ನು ಮೆರೆದಿದ್ದಾಳೆ.

ಶಿರಸಿ ಮಾರೆಮ್ಮ -ಸ್ತ್ರೀ ಶಕ್ತಿ:

ಶಿಷ್ಟಪುರಾಣ, ಮಹಾಕಾವ್ಯಗಳಲ್ಲಿ ಸೀತೆ, ಅಹಲೈ, ದ್ರೌಪದಿಯಂತಹ ಮಹಿಳೆಯರು ಪಾತಿವ್ರತ್ಯದ ಒರೆಗಲ್ಲಿಗೆ ಹಚ್ಚಲ್ಪಟ್ಟವರು. ಜಾನಪದ ದೇವತೆ ಎಲ್ಲಮ್ಮ ಶೋಷಿತ ದೇವತೆ, ಪಾತಿವ್ರತ್ಯವನ್ನು ಶಂಕಿಸಿದ ಪತಿ ಜಮದಗ್ನಿಯ ಕೋಪಕ್ಕೆ ಬಲಿಯಾದವಳು. ಅನೇಕ ರೀತಿಯ ಕಷ್ಟ ಕೋಟಲೆಗಳಿಗೆ ಗುರಿಯಾದವಳು.

ಆದರೆ ಜನಪದ ಸ್ತ್ರೀ ದೇವತೆ ಶಿರಸಿ ಮಾರೆಮ್ಮನ ಕಥೆ ಮಾತ್ರ ಭಿನ್ನವಾಗಿದೆ. ಅನ್ಯಾಯ ಮಾಡಿದ ಗಂಡನಿಗೆ ಸಿಡಿದು ಅವನ ಸಂಹಾರ ಮಾಡಿದ್ದರಿಂದ ಸ್ತ್ರೀ (ಪ್ರತಿಭಟನೆಯ) ಶಕ್ತಿ ದೇವತೆಯಾಗಿದ್ದಾಳೆ.

ಬ್ರಾಹ್ಮಣ ಕನ್ಯೆಯಾಗಿದ್ದ ಇವಳನ್ನು ಸಮಗಾರನೊಬ್ಬ ತಾನು ಬ್ರಾಹ್ಮಣನೆಂದು ನಂಬಿಸಿ ಮದುವೆಯಾಗುತ್ತಾನೆ. ಇವಳಿಗೆ ಒಬ್ಬ ಮಗ ಜನಿಸುತ್ತಾನೆ. ಹಗಲು ಹೊತ್ತಿನಲ್ಲಿ ಮನೆಯಿಂದ ದೂರ ಹೋಗಿ ಚಪ್ಪಲಿ ಹೊಲಿದು ಹಣ ತರುವದು ಇವನ ಕಸುಬು.

ಒಂದು ದಿನ ಮಗನು ಆಡುತ್ತ ಅವನೊಂದಿಗೆ ಹೋಗುತ್ತಾನೆ ಹಿಂತಿರುಗಿ ಬರುವಾಗ ಅವನು ಕೈಯಲ್ಲಿ ಒಂದು ಚರ್ಮದ ತುಂಡನ್ನು ತೆಗೆದುಕೊಂಡು ಬಂದನು. ಇದನ್ನು ಕಂಡ ತಾಯಿ ಚರ್ಮದ ತುಂಡು ಎಲ್ಲಿಯದೆಂದು ಕೇಳಿದಾಗ, ಮಗನು ತನ್ನ ತಂದೆ ಚಪ್ಪಲಿ ಹೊಲಿಯುವಲ್ಲಿಂದ ತಂದುದಾಗಿ ಹೇಳುವನು. ಸತ್ಯ ಸಂಗತಿ ತಿಳಿದ ಮಾರೆಮ್ಮ ಕ್ಷುದ್ರಳಾಗುವಳು. ತನ್ನನ್ನು ವಂಚಿಸಿ ಕುಲ-ಶ ಈಲ ಹಾಳು ಮಾಡಿದವನನ್ನು ಉಳಿಸಬಾರದೆಂದು ಮಚ್ಚು (ಕುಡುಗೋಲು) ಹಿಡಿದು ಗಂಡ ಮತ್ತು ಮಗನನ್ನು ಬೆನ್ನು ಹತ್ತುವಳು. ಗಂಡ ಓಡಿ ಹೋಗಿ ಕೋಣನ ಶರೀರವನ್ನು ಹೋಗುವನು. ಮಗ ಕುರಿಯ ಹೊಟ್ಟೆಯನ್ನು ಸೇರುವನು. ಮಾರಮ್ಮ ಕುರಿಯ ರುಂಡವನ್ನು ಕತ್ತಿರಿಸುವಳು. ಅದರಂತೆಯೇ ಕೋಣನ ತಲೆ ಕಡಿದು ಸೇಡು ತೀರಿಸಿಕೊಳ್ಳುತ್ತಾಳೆ. ಇಂದಿಗೂ ಕಡಿದ ಕೋಣನ ರುಂಡವನ್ನು ಮಾರಿಕಾಂಬೆಯ ಬಲಕ್ಕೆ ಇಟ್ಟು ಅದು ಅವಳ ಗಂಡನೆಂದು ಹೇಳಲಾಗುತ್ತದೆ.

ಜಾನಪದ ಹೆಣ್ಣು ದೇವತೆಗಳನ್ನು ಇಂದಿಗೂ ಜಾತ್ರೆಯ ಸಂದರ್ಭದಲ್ಲಿ ರಾಣಗೇರರು, ಅಸಾದಿಗಳು ಬಯ್ಯುವ ರೂಢಿಯಿದೆ. ಕೆಲವು ದೇವತೆಗಳಿಗೆ ಆಚರಣೆಗಳು ರೂಢಿಯಲ್ಲಿವೆ.

‘‘ಸಮಗಾರ ದೇವರಿಗೆ ಮೆಚ್ಚಿ ಪೆಟ್ಟು’’ ಎಂಬ ಗಾದೆಯ ಹಿನ್ನೆಲೆಯಲ್ಲಿ ಸಮಗಾರನೊಬ್ಬ ಮೇಲ್ವರ್ಗದ ಹೆಣ್ಣೊಬ್ಬಳಿಗೆ ಮೋಸ ಮಾಡಿದ್ದಕ್ಕಾಗಿ ಅವನಿಗೆ ಚಪ್ಪಲಿಯಿಂದ ಹೊಡೆದು ಅವಮಾನಿಸುವ ಕ್ರಿಯೆ ಬಂದಿರಬಹುದು. (ಹೆಚ್ಚಿನ ವಿವರಣೆಗೆ ಡಾ.ಎಂ.ಎಂ. ಕಲಬುರ್ಗಿ ಅವರ ಮಾರ್ಗ ೨ ಪುಟ ೨೮೮ ರಿಂದ ೨೯೧ ನೋಡಿರಿ.)

ಮಾರೆಮ್ಮ ಅನ್ಯಾಯದ ವಿರುದ್ಧ ಪ್ರತಿಭಟಿಸಿದ ಅನ್ಯಾಯಕ್ಕೆ ಕಾರಣನಾದ ವ್ಯಕ್ತಿ ಗಂಡನೇ ಆಗಿದ್ದರೂ ಪಾತಿವ್ರತ್ಯ, ಮುತ್ತೈದೆತನದಂತಹ ಪರಿಕಲ್ಪನೆಗಳನ್ನು ಮುರಿದು ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡ ಸ್ತ್ರೀಶಕ್ತಿಯ ದ್ಯೋತಕವಾಗಿದ್ದಾಳೆ. ಸತ್ಯವನ್ನು ಮೆರೆದು ವಿಜಯವನ್ನು ಸಾಧಿಸಿದ್ದಾಳೆ.

ಜನಪದ ಕಥೆಗಳಲ್ಲಿ ಹೆಣ್ಣಿನ ಬುದ್ಧಿವಂತಿಕೆ:

ಮೌಖಿಕ ಪರಂಪರೆಯಲ್ಲಿ ದೊರೆಯುವ, ದಾಖಲಾಗಿರುವ ಜನಪದ ಕಥೆಗಳಲ್ಲಿ ಸ್ತ್ರೀ ಶಕ್ತಿಯ ಆಶಯಗಳಿವೆ. ಪುರುಷನ ಕಾರ್ಯ ಸಾಧನೆಗೆ ಪ್ರೇರಣೆ ನೀಡುವ, ಕಾರ್ಯ ತಂತ್ರಗಳನ್ನು ಹೂಡುವ ಕ್ರಿಯಾಶೀಲ ಶಕ್ತಿಯಾಗಿ ಆಕೆ ಕತೆಗಳಲ್ಲಿ ಮಹತ್ವದ ಪಾತ್ರವಹಿಸುತ್ತಾಳೆ.

ಕೆಲವು ಕತೆಗಳಲ್ಲಂತೂ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವ ತನ್ನ ಬದುಕನ್ನು ತಾನೇ ಆಯ್ದುಕೊಳ್ಳುವ, ಕಟ್ಟಿಕೊಳ್ಳುವ ಸ್ವತಂತ್ರ ಅಸ್ತಿತ್ವವುಳ್ಳ ವ್ಯಕ್ತಿಯಾಗಿ ಶಕ್ತಿಯಾಗಿ ಜೀವಂತವಾಗುತ್ತಾಳೆ.

ಇಂತಹ ಮೂರು ಕತೆಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಕುಂಬಳಕಾಯಿ ಅಜ್ಜಿ:

ಒಂದೂರಿನಲ್ಲಿ ಒಬ್ಬ ಅಜ್ಜಿ ಇದ್ದಳು. ಅವಳಿಗೆ ಒಬ್ಬ ಮಗಳಿದ್ದಳು. ಅವಳನ್ನು ಹತ್ತಿರದ ಹಳ್ಳಿಗೆ ಲಗ್ನ ಮಾಡಿಕೊಟ್ಟಿದ್ದಳು. ಅಜ್ಜಿಗೆ ವಯಸ್ಸಾಗುತ್ತ ಬಂದಿತು. ಒಂದು ದಿನ ಅಜ್ಜಿಗೆ ಮಗಳನ್ನು ನೋಡಿ ಬರಬೇಕೆಂದು ಮನಸ್ಸಾಯಿತು. ಸಂಜೆ ಹೊತ್ತು ಮಗಳ ಊರಿಗೆ ಹೊರಟಳು. ಕಾಡಿನಲ್ಲಿ ನಡೆದು ಹೋಗಬೇಕು. ದಾರಿಯಲ್ಲಿ ನಡೆಯುತ್ತ ಹೋಗುವಾಗ ಕಾಡು ಪ್ರಾಣಿಗಳಿಗೆ ದೂರದಿಂದ ಮನುಷ್ಯರ ವಾಸನೆ ಬಡಿಯಿತು. ಮೊದಲು ನರಿ ಅಜ್ಜಿಗೆ ಭೆಟ್ಟಿಯಾಯಿತು. ‘ಅಜ್ಜೀ ಅಜ್ಜೀ ಎಲ್ಲಿ ಹೊರಟೆ, ಎಂದು ಅಡ್ಡ ಬಂದಿತು. ಆಗ ಅಜ್ಜೀ ಈಗ ನನ್ನನ್ನು ತಡೀಬ್ಯಾಡ, ನಾನು ಮಗಳ ಮನಿಗೆ ಹೋಗಿ ರೊಟ್ಟೀ ತಿಂದು ಗಟ್ಟಿಯಾಗಿ, ಬ್ಯಾಳಿ ತಿಂದು ಬೆಳ್ಳಗಾಗಿ ಬರತೇನಿ, ಆಗ ನನ್ನ ತಿನ್ನೊವಂತೆ’ ಎಂದಳು.

ಇದೇ ರೀತಿ ಹುಲಿ, ಸಿಂಹದಂತಹ ಕ್ರೂರ ಪ್ರಾಣಿಗಳು ಅವಳನ್ನು ಅಡ್ಡಗಟ್ಟಿ ತಿನ್ನಲು ಮುಂದೆ ಬಂದವು. ಆಗ ಅಜ್ಜಿ ನರಿಗೆ ಹೇಳಿದಂತೆ ಹೇಳಿ ಕಾಡನ್ನು ದಾಟಿ, ಸುರಕ್ಷಿತವಾಗಿ ಮಗಳ ಮನೆಯನ್ನು ಸೇರಿದಳು. ನಡೆದದ್ದನ್ನು ಮಗಳ ಮುಂದೆ ಹೇಳಿದಳು.

ಒಂದು ತಿಂಗಳವರೆಗೆ ಮಗಳ ಮನೆಯಲ್ಲಿದ್ದಳು. ಮಗಳು ಅಜ್ಜಿಯನ್ನು ಚೆನ್ನಾಗಿ ನೋಡಿಕೊಂಡಳು. ಅಜ್ಜಿ ರೊಟ್ಟಿ ತಿಂದು ಗಟ್ಟಿಯಾದಳು. ಬೇಳೆ ತಿಂದು ಬೆಳ್ಳಗಾದಳು. (ಆರೋಗ್ಯವಂತಳಾದಳು) ಕಾಡು ಪ್ರಾಣಿಗಳಿಂದ ತಪ್ಪಿಸಿಕೊಂಡು ಊರು ಮುಟ್ಟುವದು ಹೇಗೆ ಎಂಬ ಚಿಂತೆ ಅಜ್ಜಿಯನ್ನು ಕಾಡತೊಡಗಿತು. ತನ್ನ ಚಿಂತೆಯನ್ನು ಮಗಳಿಗೆ ಹೇಳಿದಳು.

ಅಜ್ಜಿ ಊರಿಗೆ ಹಿಂತಿರುಗುವ ದಿನ ಬಂದೀತು. ಅವಳಿಗೆ ಒಂದು ಉಪಾಯವೂ ಹೊಳೆಯಿತು. ಹಿತ್ತಲ ಬಳ್ಳಿಯಲ್ಲಿ ಒಂದು ದೊಡ್ಡ ಕುಂಬಳಕಾಯಿ ಆಗಿತ್ತು.

ಆ ಕುಂಬಳಕಾಯಿಯಲ್ಲಿ ತನ್ನನ್ನು ಕೂಡಿಸಿಕಳುಹಿಸಬೇಕೆಂದು ಮಗಳಿಗೆ ಹೇಳಿದಳು ಅಜ್ಜಿಗೆ ಬುತ್ತಿ ಕಟ್ಟಿಕೊಟ್ಟು, ಅವಳನ್ನು ಕುಂಬಳಕಾಯಿಯಲ್ಲಿ ಕೂಡಿಸಿ ಒಂದು ಜಾರು ಬಂಡೆಯಿಂದ ಅದನ್ನು ನೂಕಿದಳು. ಅದು ಉರುಳುತ್ತ ಹೊರಟಿತು.

ಕಾಡು ಪ್ರಾಣಿಗಳು ಅಜ್ಜಿಯ ದಾರಿಯನ್ನು ನೋಡುತ್ತಿದ್ದವು. ಉರುಳುತ್ತಿದ್ದ ಕುಂಬಳಕಾಯಿಯನ್ನು ಕುಂಬಳ್ಯಾ ಕುಂಬಳ್ಯಾ ಅಲ್ಲೊಂದು ಮುದುಕಿ ಬರುತ್ತಿದೆಯಾ ಎಂದು ಕೇಳಿದವು. ಕುಂಬಳಕಾಯಿಯಲ್ಲಿದ್ದ ಮುದುಕಿ ಇಲ್ಲಾ, ತದಕಿ ಇಲ್ಲಾ ಸರಿ ಎಂದು ಹೇಳಿ ಪ್ರಾಣಿಗಳಿಂದ ತಪ್ಪಿಸಿಕೊಂಡು ಉರುಳುತ್ತ ಹೊರಟಳು. ಆದರೆ ನರಿಗೆ ಮಾತ್ರ ಸಂಶಯ ಬಂದಿತು. ಕುಂಬಳಕಾಯಿಯಲ್ಲಿ ಅಜ್ಜಿಯೇ ಇರಬೇಕೆಂದು ತರ್ಕಿಸಿತು. ಒಂದು ದೊಡ್ಡ ಕಲ್ಲನ್ನೆತ್ತಿ ಕುಂಬಳಕಾಯಿಗೆ ಹೊಡೆಯಿತು. ಕುಂಬಳಕಾಯಿ ಎರಡು ಹೋಳಾಯಿತು. ಕಾಡಿನಲ್ಲಿದ್ದ ಎಲ್ಲ ಪ್ರಾಣಿಗಳೂ ಮುದುಕಿಯನ್ನು ತಿನ್ನಬೇಕೆಂದು ಜಗಳಾಡತೊಡಗಿದವು. ಆ ಜಗಳದಲ್ಲಿ ಅಜ್ಜಿ ಅವಸರದಿಂದ ತನ್ನ ಮನೆ ಸೇರಿ ಸುಖವಾಗಿ ಜೀವಿಸಿದಳು.

ಈ ಕತೆಯಲ್ಲಿ ಬರುವ ಅಜ್ಜಿ, ಮಗಳು ಎಂತಹ ಗಂಡಾಂತರ ಪರಿಸ್ಥಿತಿಯಲ್ಲಿಯೂ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಬುದ್ಧಿವಂತರೂ ಚತುರರೂ ಆಗಿದ್ದಾರೆ. ಯಾವ ಪುರುಷನ ಸಹಾಯವನ್ನು ಅವರು ಯಾಚಿಸಿಲ್ಲವೆಂಬುದನ್ನು ಗಮನಿಸಬೇಕು. (ನನ್ನ ಬಾಲ್ಯದಲ್ಲಿ ಶಾಲೆಯ ಶಿಕ್ಷಕರಾಗಿದ್ದ ಶ್ರೀ ಕಾಳೆ ಮಾಸ್ತರ ಹೇಳಿದ ಕಥೆ)

ಹೆಣ್ಣು ಗಜ ನಿಂಬೆ ಹಣ್ಣು:

ದಮಸಗೌಡನಿಗೆ ಏಳು ಜನ ಗಂಡುಮಕ್ಕಳು. ಅವರು ವಯಸ್ಸಿಗೆ ಬಂದಾಗ ಗೌಡ ಏಳೂ ಜನ ಮಕ್ಕಳ ಮದುವೆಯನ್ನು ಮಾಡಲು ನಿಶ್ಚಯಿಸುತ್ತಾನೆ.

ಆದರೆ ಕಿರಿಯ ಮಗ ತನಗೆ ಮದುವೆ ಬೇಡ ಎಂದು ಹಟ ಹಿಡಿಯುತ್ತಾನೆ. ಏಕೆಂದರೆ ಅವನು ಒಬ್ಬ ಸೂಳೆಯ ಸಂಗ ಮಾಡಿರುತ್ತಾನೆ.

ಮದುವೆ ದಿನ ಕಿರಿಯವರನು ತಪ್ಪಿಸಿ ಬಿಡುತ್ತಾನೆ. ಆಗ ದಮಸಗೌಡ ಕಿರಿಯವನ ಪಟ್ಟದ ಕತ್ತಿಗೆ ಮಾಲೆ ಹಾಕಲು ಸೊಸೆಗೆ ಹೇಳುತ್ತಾನೆ. ಮದುವೆ ನಡೆದು ಹೋಗುತ್ತದೆ.

ಅವಳು ಮದುವೆಯಾಗಿ ಮನೆಗೆ ಬಂದರೂ ಕಿರಿಯವ ಅವಳನ್ನು ಒಮ್ಮೆಯೂ ಕಣ್ಣೆತ್ತಿ ನೋಡುವದಿಲ್ಲ. ಆದರೂ ಅವಳು ಸಮಾಧಾನದಿಂದ ಮನೆಗೆಲಸ, ಆಕಳು ಸಾಕಿ ಹಾಲು ಹಿಂಡುವದು ಇತ್ಯಾದಿ ಕೆಲಸ ಮಾಡಿಕೊಂಡು ಮನೆಯವರ ಪ್ರೀತಿಯನ್ನು ಗಳಿಸಿಕೊಳ್ಳುತ್ತಾಳೆ.

ಇವಳು ಹಾಲು ಕೊಡಲು ಹೋದಾಗ, ಆ ಊರಿನ ರಾಜಕುಮಾರನ ಕಣ್ಣು ಬೀಳುತ್ತವೆ. ಆಕೆ ತನ್ನವಳಾಗಬೇಕೆಂದು ಹಟ ಹಿಡಿಯುತ್ತಾನೆ. ಆಗ ಒಪ್ಪಿದ ಆಕೆ ಒಂದು ಉಪಾಯ ಮಾಡಿ ಷರತ್ತುಗಳನ್ನು ಹಾಕುವಳು. ಹಾಕಿದ ಷರತ್ತನ್ನು ಒಪ್ಪಿಸಿಕೊಳ್ಳುವುದಾಗಿ ರಾಜಕುಮಾರ ಹೇಳುವನು.

ಅದೇ ಕ್ಷಣದಲ್ಲಿ ತನ್ನ ಕೊರಳ ಮುತ್ತಿನ ಸರವನ್ನು ಜಗ್ಗಿ ಹರಿದು ಬಿಡುವಳು ಸೂರಾದ ಮುತ್ತುಗಳನ್ನು ಆಯ್ದು ಕೊಡುವತನಕ ತನ್ನನ್ನು ಮುಟ್ಟಬಾರದೆಂದು ಹೇಳಿ, ಅವನು ಮುತ್ತುಗಳನ್ನು ಆರಿಸಲು ಬಗ್ಗಿದಾಗ ತಪ್ಪಿಸಿಕೊಂಡು ಓಡಿ ಮನೆ ಸೇರುವಳು.

ಉಪಾಯವಾಗಿ ಗಂಡನ ಸೂಳೆಯ ಮನೆಗೆ ಹಾಲು ಕೊಡಲು ಹೋಗುವಳು. ಇವಳ ಉದ್ದವಾದ ಕೂದಲನ್ನು ನೋಡಿದ ಸೂಳೆ ಆಕರ್ಷಿತಳಾಗುವಳು. ತನಗೂ ಇಂತಹ ಉದ್ದ ಕೂದಲು ಬೇಕೆಂದು, ಅದಕ್ಕೆ ಬೇಕಾದ ಉಪಚಾರವೇನೆಂದು ಕೇಳುವಳು. ಆಗ ಇವಳು ತಲೆಯನ್ನು ಸಂಪೂರ್ಣ ಬೋಳಿಸಿಕೊಂಡು, ಒಂದು ಸೊಪ್ಪಿನ ರಸವನ್ನು ಅರೆದು ಹಚ್ಚಬೇಕೆಂದು ಹೇಳಿದಾಗ ವೇಶ್ಯೆಗೆ ಖುಷಿಯಾಗುವದು. ಬಹುಮಾನ ಏನು ಕೊಡಲಿ ಎಂದಾಗ ಅವಳುಡುವ ಸೀರೆಯನ್ನು ಕೊಡಬೇಕೆಂದು ಸೊಸೆ ಕೇಳುವಳು. ಅವಳು ತನ್ನದೊಂದು ಸೀರೆಯನ್ನು ಕೊಟ್ಟು ಬಿಡುವಳು.

ಮನೆಗೆ ಬಂದ ಸೊಸೆ, ವೇಶ್ಯೆಯ ಕೊಟ್ಟ ಸೀರೆಯನ್ನುಟ್ಟು ಉದ್ದ ಕೂದಲು ಬಿಟ್ಟುಕೊಂಡು, ಓಡಾಡುವಳು. ಇತ್ತ ವೇಶ್ಯೆಯ ಮನೆಗೆ ಹೋದ ಗೌಡನ ಮಗ ತಲೆಬೋಳಿಸಿಕೊಂಡು ವಿರೂಪಗೊಂಡು ತನ್ನ ಪ್ರೇಯಸಿಯನ್ನು ನೋಡಿ ಕುಪಿತನಾಗಿ ಮನೆಗೆ ಬರುವನು.

ಮನೆಯಲ್ಲಿ ಕೂದಲನ್ನು ಹರಡಿಕೊಂಡು, ತನ್ನ ಪ್ರೇಯಸಿ ಉಡುತ್ತಿದ್ದ ಸೀರೆಯನ್ನುಟ್ಟು ಓಡಾಡುತ್ತಿರುವ ಹೆಣ್ಣು ಯಾರು ಇರಬಹುದೆಂದು ಕುತೂಹಲದಿಂದ ನೋಡುವನು. ಆಕೆ ತನ್ನ ಹೆಂಡತಿ ಎಂದು ತಿಳಿದಾಗ, ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳುವನು. (ಹೆಚ್ಚಿನ ವಿವರಣೆಗೆ ನೋಡಿರಿ ಡಾ.ಎಲ್‌.ಆರ್. ಹೆಗಡೆ (ಸಂ). ಜನಪದ ಮತ್ತು ಗಿರಿಜನರ ಕಥೆಗಳು, ಸಾಹಿತ್ಯ ಅಕಾಡೆಮಿ, ೧೯೯೦).

‘‘ಪಾಪಾಸಿನ ಗಂಡ’’ ಎಂಬ ಕತೆಯಲ್ಲಿ ತಾನು ಹೊಡೆದಷ್ಟು ಹೊಡೆಸಿಕೊಳ್ಳುವಾಕೆಯನ್ನು ಮದುವೆಯಾಗುವುದಾಗಿ ಹೇಳಿದ ಗಂಡನನ್ನು ಒಬ್ಬ ಬುದ್ಧಿವಂತೆ ಮದುವೆಯಾಗಲು ಒಪ್ಪುವಳು. ಮದುವೆಯ ಮೊದಲರಾತ್ರಿಯೇ ಹೊಡೆಯ ಬಂದಾಗ ನೀನು ಹಣ ಗಳಿಸಿಕೊಂಡು ಬಾ ಆಗ ಹೊಡೆಸಿಕೊಳ್ಳುತ್ತೇನೆ ಎನ್ನುತ್ತಾಳೆ. ವ್ಯಾಪಾರಕ್ಕೆಂದು ಹೋದ ಆತ ಪಗಡೆ ಆಟದಲ್ಲಿ ಸೋತು ಸೂಳೆಯ ಸೇವಕನಾಗುತ್ತಾನೆ. ಈ ಸುದ್ಧಿ ಗೊತ್ತಾದಾಗ ಅವನ ಹೆಂಡತಿ ಗಂಡು ವೇಷ ಧರಿಸಿ ಸೂಳೆಯನ್ನು ಪಗಡೆ ಆಟದಲ್ಲಿ ಸೋಲಿಸಿ ಸೇವಕರನ್ನು ಓಡಿಸಿ ಬರುತ್ತಾಳೆ. ಮರುವರ್ಷದಲ್ಲಿ ಪಗಡೆ ಆಟದಲ್ಲಿ ಸೂಳೆಯನ್ನು ಸೋಲಿಸಿದವಳು ತನ್ನ ಹೆಂಡತಿ ಎಂದು ತಿಳಿಯದ ಗಂಡ, ಮನೆಗೆ ಬಂದು ನಾನು ಸಂಪಾದಿಸಿ ಬಂದಿದ್ದೇನೆ. ನಿನ್ನನ್ನು ಇಂದು ಚೆನ್ನಾಗಿ ಹೊಡೆಯುತ್ತೇನೆ ಎಂದಾಗ, ಹೆಂಡತಿ ನಡೆದ ಸಂಗತಿಯನ್ನು ತಿಳಿಸುತ್ತಾಳೆ. ತನ್ನ ತಪ್ಪಿನ ಅರಿವಾದ ಅವನು ಹೆಂಡತಿಯನ್ನು ಹೊಡೆಯುವುದನ್ನು ಬಿಟ್ಟು ಕೊಡುತ್ತಾನೆ. ( ಈ ಕತೆಯ ಮಾಹಿತಿ ಡಾ.ಕೆ. ಆರ್.ಸಂಧ್ಯಾ ರೆಡ್ಡಿ ಅವರಿಂದ ಪಡೆದಿದ್ದೇನೆ).

ಇಂತಹ ಹಲವಾರು ಜನಪದ ಕತೆಗಳಲ್ಲಿ ಹೆಣ್ಣಿನ ಬುದ್ಧಿವಂತಿಕೆ, ಚಾಣಾಕ್ಷತನ, ಅವಳು ಅಪಾಯದಿಂದ ಪಾರಾಗಲು ಹೂಡುವ ತಂತ್ರಗಳು ಅವಳ ಸಾಮರ್ಥ್ಯ ಪುರುಷ ಶಕ್ತಿಗೆ ಸವಾಲೆಸೆಯುವಂತಿವೆ.

ಜನಪದ ಗಾದೆಗಳಲ್ಲಿ ಹೆಣ್ಣು:

ಗಾದೆಗಳು ಜನಪದರ ವೇದಗಳು. ಅನುಭವ, ವಿವೇಕ, ಸಾಮಾಜಿಕ ನಿಯಮಗಳು, ನಂಬಿಕೆಗಳು ಗಾದೆ ಮಾತುಗಳಲ್ಲಿ ಹಸೀ ಗೋಡೆಗೆಕ ಹಳ್ಳು ಒಗೆದಂತೆ ಪರಿಣಾಮಕಾರಿಯಾಗಿ ಹರಿದು ಬಂದಿರುತ್ತವೆ. ಸಂಸ್ಕೃತಿಯನ್ನು ಗಾದೆ ಮಾತುಗಳು ಪ್ರತಿಬಿಂಬಿಸುತ್ತವೆ.

ಜನಪದ ಗಾದೆ ಮಾತುಗಳಲ್ಲಿ ಹೆಣ್ಣನ್ನು ಸಾಮಾನ್ಯವಾಗಿ ಪುರುಷಾಧೀನತೆಯ ವ್ಯವಸ್ಥೆಯ ಹಿನ್ನೆಲೆಯಲ್ಲಿಯೇ ನೋಡಲಾಗಿದೆ. ‘‘ಹೆಣ್ಣಿನ ನೆಲೆ ತಿಳಿಯದು’’, ‘‘ತವರಿಗೆ ಮಾತು ತಂದವಳು, ಮಗಳಲ್ಲ’’ ‘‘ತಾಟ್ಗೆತ್ತಿ ಸೊಸೆಯಲ್ಲ’’, ‘‘ಹೆಂಗಸರನ್ನು ನಂಬಬಾರದು’’, ‘‘ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ’’, ‘‘ಹತ್ತು ರುಮಾಲು ಕೂಡಿದ್ರೂ, ಎರಡು ಜಡಿ ಕೂಡುವದಿಲ್ಲ’’, ‘‘ಹೆಂಗಸರ ಬಾಯಿ ಮುಚ್ಚಲು ಸಾಧ್ಯವಿಲ್ಲ’’. ಮುಂತಾಗಿರುವ ಗಾದೆ ಮಾತುಗಳೆಲ್ಲ ಪುರುಷ ಸಮಾಜದಲ್ಲಿ ಸೃಷ್ಟಿಯಾದವು.

ಇವುಗಳಿಗೆ ಪ್ರತಿರೋಧವೆನ್ನುವಂತೆ ‘‘ಗಂಡಸರನ್ನು ನಂಬಬಾರದು’’, ‘‘ಹೆಣ್ಣಿನ ಬುದ್ಧಿ ಮೊಣಕಾಲ ಕೆಳಗಿದ್ರೆ ಗಂಡಸಿನ ಬುದ್ಧಿ ಪಾದದ ಕೆಳಗೆ’’ ‘‘ಒಲಿದರೆ ನಾರಿ ಮುನಿದರೆ ಮಾರಿ’’, ‘‘ಈದ ಹುಲಿಯನ್ನು ಕೆಣಕಬಾರದು’’, ‘‘ಹೆಣ್ಣಿಲ್ಲದ ಮನಿ, ಮನಿ ಅಲ್ಲ’’ ಎನ್ನುವಂತಹ ಗಾದೆ ಮಾತುಗಳು ಹೆಣ್ಣಿನ ಕ್ರಿಯಾ ಶಕ್ತಿಯನ್ನು ಸಾಬೀತುಪಡಿಸುತ್ತವೆ.

ಗಾದೆ ಮಾತುಗಳು ತಾಯಿಗೆ ಉನ್ನತ ಸ್ಥಾನ ಕೊಟ್ಟಿವೆ. ‘ತಾಯಿ ದೇವರು’, ‘‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’’,‘ ‘ರಾಜ್ಯ ಆಳೋ ತಂದೆಗಿಂತ ರಾಗೀ ಬೀಸೋ ತಾಯಿ ಲೇಸು’’,‘‘ನೀರಿಲ್ಲದ ಕೆರಿ, ತಾಯಿ ಇಲ್ಲದ ಮನೆ ಒಂದೇ’’ ಮುಂತಾದ ಗಾದೆ ಮಾತುಗಳು ತಾಯಿಯ ಹಿರಿಮೆಯನ್ನು ಸಾರಿವೆ.

ಪರಕೀಯರ ಆಳ್ವಿಕೆಗೆ ತೋರಿದ ಪ್ರತಿಭಟನೆ:

ಜನಪದ ಹೆಣ್ಣಿನ ಪ್ರಪಂಚ ಕುಟುಂಬ ಹಾಗೂ ಮಾನವ ಸಂಬಂಧಗಳಿಗೆ ಸೀಮಿತವಾದುದು. ಆದರೂ ಕನ್ನಡ ನಾಡಿನ ಜನಪದ ಮಹಿಳೆಯರು ತಮ್ಮ ಕೂಟೆ ಕೊತ್ತಲ ಸಂಸ್ಥಾನ ನಾಡಿನ ರಕ್ಷಣೆಯಲ್ಲಿ ಪಾಲ್ಗೊಂಡಿದ್ದಾರೆ. ಪರದಾಸ್ಯವನ್ನೊಪ್ಪಿಕ್ಕೊಳದ ಅವರ ಸ್ವಾಭಿಮಾನ ಕಿತ್ತೂರ ಚೆನ್ನಮ್ಮನ ಲಾವಣಿ ಮುಂತಾದ ಹಾಡುಗಳಲ್ಲಿ ವ್ಯಕ್ತವಾಗಿದೆ. ಚಿತ್ರದುರ್ಗದ ಕೋಟೆಯನ್ನು ರಕ್ಷಿಸುವಲ್ಲಿ ಮುಂದಾದ ಓನಕೆ ಒಬವ್ವನಂತಹ ಮಹಿಳೆಯನ್ನು ಸ್ಮರಿಸಬೇಕು. ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮನಂತಹವರು ನಾಡ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಆಧುನಿಕ ಕಾಲದಲ್ಲಿ ಗಾಂಧೀಜಿಯವರು ಕರೆಕೊಟ್ಟ ಭಾರತದ ಸ್ವಾತಂತ್ಯ್ರ ಹೋರಾಟದಲ್ಲಿ ಸಾಮಾನ್ಯ ಮಹಿಳೆಯರೂ ತೊಡಗಿಸಿಕೊಂಡು ಆಳರಸರಿಗೆ ತೋರಿದ ಪ್ರತಿಭಟನೆ ಅಸಾಮಾನ್ಯವಾದುದು. ಪ್ರಭಾತ ಫೇರಿಯಲ್ಲಿ ಭಾಗವಹಿಸಿ, ವಿದೇಶಿ ಬಟ್ಟೆಗಳ ನಿಷೇಧ, ಸ್ವದೇಶಿ ಪ್ರಚಾರ, ಜೇಲುವಾಸವನ್ನು ಅನುಭವಿಸಿ ದೇಶಾಭಿಮಾನವನ್ನು ಜನಪದ ಮಹಿಳೆಯರು ಮೆರೆದಿದ್ದಾರೆ.

ಹಳ್ಳಿಹಳ್ಳಿಗೆ ಕಾಳು ಬೀಸುವ ಹೊಸ ಯಂತ್ರಗಳು ಬಂದಾಗ

ಬೀಸುವ ಯಂತ್ರವು
ಮೋಸದ ಯಂತ್ರವು
ಬೀಸುವ ಕಲ್ಲನು ಮರೆತೇವ,
ಕೈಯ ನೂಲಿನ ಅರಿವೆಯ ಮರೇವು

ಎಂದು ಕಾಳಜಿಯನ್ನು ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಕಸ್ತೂರಿ ಬಾಯಿಯವರೇ ಕಮಲಾದೇವಿಯವರೇ
ರಾಟಿಯ ತಿರುವಿದವರೇ ರಾಷ್ಟ್ರವಗೆದಿವವರೇ
ತಪ್ಪದೇ ಸ್ವರಾಜ್ಯವ ಪಡವವರು
ನಾವು ಬಳುವಳಿ ಮಾಡುವವರು

ಎಂಬ ಛಲ, ದೇಶಭಕ್ತಿ, ಸ್ವದೇಶಾಭಿಮಾನವನ್ನು ಮೆರೆದ ಜನಪದ ಮಹಿಳೆಯರ ಕೆಚ್ಚು ಎಂತಹವರಿಗೂ ಸ್ಫೂರ್ತಿದಾಯಕ.