ಉತ್ತರ ಕನ್ನಡ ಜಿಲ್ಲೆಯಲ್ಲಿರುವಷ್ಟು ಜಲಪಾತಗಳು ಭಾರತದ ಮತ್ತಾವ ಜಿಲ್ಲೆಯಲ್ಲಿಯೂ ಇಲ್ಲ. ಚಿಕ್ಕ ಪುಟ್ಟ ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಗೋಚರಿಸುವ ಜಲಪಾತಗಳು ನೂರಾರು! ಯಲ್ಲಾಪುರ ತಾಲೂಕು ಒಂದರಲ್ಲೆ ಹೆಸರಿಸಬಹುದಾದ ಹದಿನೆಂಟು ಜಲಪಾತಗಳಿವೆ. ಅನೇಕ ಜಲಪಾತಗಳನ್ನು ಕಾಣಬೇಕಾದರೆ ದಟ್ಟಕಾಡಿನಲ್ಲಿ ಕಾಲ್ನಡೆಯಲ್ಲಿ ದುರ್ಗಮದಾರಿ ಕ್ರಮಿಸಬೇಕಾಗಿದೆ. ಹಿರಿದಾದ ಪ್ರೇಕ್ಷಣೀಯವೆಂದು ಪ್ರಸಿದ್ಧವಾದ ಕೆಲವುಗಳನ್ನು ನಿವೇದಿಸಲಾಗಿದೆ.

ಜೋಗದ ಜಲಪಾತ : “ಮಾನವನಾಗಿ ಹುಟ್ಟದ ಮೇಲೆ ಏನೇನ ಕಂಡಿ? ಸಾಯೋದ್ರೊಳಗೆ ಕಾಣಬೇಕೊಮ್ಮೆ ಜೋಗದ ಗುಂಡಿ” ಎಂಬ ಹಾಡು ಜನಜನಿತವಾಗಿದೆ. ಗೇರಸೊಪ್ಪೆ ದಭದಭೆ ಎಂದೂ ಇದಕ್ಕೆ ಹೆಸರಿದೆ. ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿ ಈ ಜಲಪಾತವಿದ್ದು ಶರಾವತಿ ನದಿಯೂ ೨೫೨ ಮಿಟರ ಎತ್ತರದಿಂದ ೧೧೭ ಮಿಟರ ಆಳದ ಹೊಂಡದಲ್ಲಿ ಧುಮುಕುತ್ತದೆ. ವೀರ, ಭೀಭತ್ಸ, ಶೃಂಗಾರ, ಶಾಂತರಸಗಳೇ ಪ್ರವಹಿಸುವಂತೆ ರಾಜ-ಅಬ್ಬರ-ಬಾಣ-ರಾಣಿ (ಗೌರವನಿತೆ) ಎಂಬ ನಾಲ್ಕು ವಾಹಿನಿಗಳಾಗಿ ಕೆಳಗುರುಳುವಾಗಿನ ರಮ್ಯನೋಟದಿಂದ ನಯನ ಪಾವನವಾಗುವದು. ರಾಜನ ಗಾಂಭೀರ್ಯ, ಅಬ್ಬರದ ಆರ್ಭಟ, ಬಾಣದ ಹನಿಯ ಹಾರುವಿಕೆಯಲ್ಲಿ ಕಂಗೊಳಿಸುವ ಹಲವು ಕಾಮನಬಿಲ್ಲುಗಳ ಮಾಟ, ಗೌರವನಿತೆಯ ನೀರು ನೊರೆನೊರೆಯಂತೆ ಹಾಲಿನಂತೆ ನಯವಾಗಿ ಇಳಿವ ನೋಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವದು. ಅಮೇರಿಕೆಯ ನೈಗೆರಾ ಜಲಪಾತದ ಅಗಲ ಹೆಚ್ಚಿದ್ದರೂ ಕೇವಲ ೧೬೪ ಅಡಿ ಆಳಕ್ಕೆ ಧೂಮಕುವದು. ಯುರೋಪಿನ ಎವಾ‌ನ್‌ಸನ್ (೧೨೦೦ ಅಡಿ) ಮತ್ತು ಕೆರೊಸೂಲಿ (೨೪೦೦ ಅಡಿ) ಎತ್ತರವಾಗಿದ್ದರೂ ಅವುಗಳ ಪ್ರವಾಹ ಅತಿ ಕಡಿಮೆಯಾದ್ದರಿಂದ ಅವು ಜೋಗ ಜಲಪಾತದಷ್ಟು ಸುಂದರವಾಗಿಲ್ಲ. ಜೋಗದ ಸುತ್ತಲಿನ ಕಂದರ-ಪರಿಸರ ಸುಂದರ. ಜಲಪಾತದ ಎರಡು ದಂಡೆಗಳಲ್ಲು ಪ್ರವಾಸಿಮಂದಿರಗಳಿವೆ. ಮಳೆಗಾಲದಲ್ಲಿ ಗೇರಸೊಪ್ಪೆ ಧಬಧಬೆಯ ದರ್ಶನ ಮರೆಯಲಾಗದ ಅನುಭವ, ಕಣಿವೆಯ ತುಂಬೆಲ್ಲ ಮೋಡ ಕವಿದು ಕಣ್ಣು ಮುಚ್ಚಾಲೆಯಾಡುವ ಜಲಪಾತ ತುಂಬಿ ಹರಿಯುವ ದೃಶ್ಯ ಅದ್ಭುತ. ಸುತ್ತಲು ಮೇಘಾವೃತ ವರ್ತುಲ. ಕ್ಷಣದಲ್ಲಿ ಜೋಗ ಅದೃಶ್ಯ. ನಾವು ಭೂಮಿಯಲ್ಲಿರುವೆವೆ? ಆಕಾಶದಲ್ಲಿರುವೆವೆ? ಎನ್ನುತ್ತಿರುವಂತೆ ಮತ್ತೆ ಮೋಡ ಸರಿದು ಹೊಗೆ ಹರಿದು ಜೋಗದರ್ಶನ! ಅಪೂರ್ವ ಅನುಭವ!

ಹೊಳೆಯ ಬೀಳುವಿಕೆಯಲ್ಲಿ ಬೆಳಕನ್ನು ನೀಡುವ ಜೋಗದ ಜ್ಯೋತಿ ರಾಜ್ಯ-ನೆರೆ ರಾಜ್ಯಗಳನ್ನು ಇಂದು ಬೆಳಗುತ್ತಿದೆ. ಹತ್ತಿರವೆ ಇರುವ ಲಿಂಗನಮಕ್ಕಿ ಆಣೆಕಟ್ಟು-ಪ್ರೊಜೆಕ್ಟಗಳು ಮತ್ತು ಮಹಾತ್ಮಾಗಾಂಧಿ ಹೈಡ್ರೊ-ಇಲೆಕ್ಟ್ರಿಕ್ ವರ್ಕ್ಸಗಳ ತಾಣಗಳನ್ನು ಸಂದರ್ಶಿಸಿದಲ್ಲಿ ವೈಜ್ಞಾನಿಕ ಹಾಗು ಶೈಕ್ಷಣಿಕ ದೃಷ್ಟಿಯಿಂದ ತುಂಬಾ ಪ್ರಯೋಜನವಾಗುವದು. ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ಬಸ್ಸು-ಟ್ಯಾಕ್ಸಿಗಳಿವೆ; ಹೊಟೇಲುಗಳಿವೆ. ಶಿರಸಿ, ಸಿದ್ದಾಪುರ ಸಾಗರ, ಶಿವಮೊಗ್ಗಾಗಳ ಮೂಲಕ ಜೋಗನ್ನು ತಲುಪಬಹುದು. ರೈಲಿನಲ್ಲಿ ಹೋಗಿ ನೋಡುವುದಾದಲ್ಲಿ ತಾಳಗುಪ್ಪಾ ಸ್ಟೇಶನ್ ಅತಿ ಸಮೀಪದಲ್ಲಿದೆ.

ಮಾಗೋಡ ಜಲಪಾತ : ಯಲ್ಲಾಪುರದಿಂದ ೨೦ ಕಿ.ಮಿ. ದೂರದಲ್ಲಿ ಗಂಗಾವಳಿ ನದಿಯು ೧೮೦ ಮೀಟರ ಎತ್ತರದಿಂದ ಅವಳಿ-ಜವಳಿ ಮತ್ತು ಮುಕ್ತಪಾಣಿ ಮೂರು ಕವಲುಗಳಾಗಿ ಧುಮುಕುತ್ತದೆ. ಸುಂದರವಾದ ಈ ಜಲಪಾತಕ್ಕೆ ಹೋಗುವದಾರಿ ಹಾಗು ವೀಕ್ಷಿಸುವ ನೆಲೆ ಕೆಲದಿನ ಹಿಂದನವರೆಗೂ ದುರ್ಗಮವಾಗಿಯೆ ಇತ್ತು. ಈಗ ಇಲ್ಲಿ ಒಂದು ಪ್ರವಾಸಿಮಂದಿರ ನಿರ್ಮಿಸಿದ್ದಾರೆ. ಬಸ್ಸಿನ ದಾರಿಯಾಗಿದೆ. ಹೊಲತಿಕೋಟೆ ಎಂಬ ಚಕ್ರವ್ಯೂಹಾಕೃತಿಯಲ್ಲಿ ಕಟ್ಟಲ್ಪಟ್ಟ ಕೋಟೆಯ ಮೂರು ದಿಕ್ಕಿಗೆ ನದಿ ಆವರಿಸಿದೆ. ಸಂಶೋಧನೆ ನಡೆಸಿದಲ್ಲಿ ಈ ವಿಶಿಷ್ಟ ಕೋಟೆಯ ಸಾಂಸ್ಕೃತಿಕ ಮಹತ್ವದ ಅರಿವು ಆದೀತು. ಸೋಂದೆಯ ಅರಸನು ಹೊಲತಿಜಾತಿಯ ಹುಡುಗಿಯನ್ನು ಮೆಚ್ಚಿ ಈ ಕೋಟೆಯನ್ನು ಕಟ್ಟಿಸಿ ಅವಳಿಗೆ ವಾಸಿಸಲು ಅನುವು ಮಾಡಿಕೊಟ್ಟನೆಂಬ ಪ್ರತೀತಿ ಇದೆ. ಅದರಿಂದ ಈ ಕೋಟೆಗೆ ಹೊಲತಿಕೋಟೆ ಎಂಬ ಹೆಸರು. ಹಾಗೆಯೆ ಮಾಗೋಡ ಜಲಪಾತಕ್ಕೂ “ಹೊಲತಿಜಲಪಾತ” ಎಂಬ ಹೆಸರು ಪ್ರಸಿದ್ಧವಾಗಿದೆ. ಮಾಗೋಡುಜಲಪಾತ ಹಾಗು ಕೋಟೆ ಎರಡೂ ಸೇರಿ ಪ್ರವಾಸಿಗರನ್ನು ತಮ್ಮೆಡೆಗೆ ಸೆಳೆಯುವವು.

ಲಾಲಗುಳಿ ಜಲಪಾತ : ಯಲ್ಲಾಪುರದ ಉತ್ತರಕ್ಕೆ ೧೫ ಕಿ.ಮಿ. ಅಂತರದಲ್ಲಿ ಲಾಲುಗುಳಿ ಹಳ್ಳಿಯ ಬಳಿ ತಟ್ಟಿಹಳ್ಳವು ಕಾಳಿನದಿಗೆ ಸೇರುವ ಸ್ಥಳದಲ್ಲಿ ಅನೇಕ ಹಂತದಲ್ಲಿ ಮೆಟ್ಟಲಿಂದ ಮೆಟ್ಟಿಲಿಗೆ ಹಾರುತ್ತ ಒಟ್ಟು ೯೧ ಮೀಟರದ ಆಳದ ಮಾಲಾಜಲಪಾತವನ್ನು ಸೃಷ್ಟಿಸಿದೆ. ಜಲಪಾತದ ದೃಶ್ಯ ವಿಶಿಷ್ಟ ರೀತಿಯ ರಮ್ಯತೆಯನ್ನು ಪ್ರದರ್ಶಿಸುತ್ತದೆ. ಮನಕ್ಕೆ ಮುದನೀಡುತ್ತದೆ. ಎತ್ತರದ ಗುಡ್ಡದಮೇಲೆ ಕೋಟೆಯಾಕಾರದ ನೆಲೆಯಿದ್ದು ಅಲ್ಲಿಯ ಹನುಮಂತನ ಮುರ್ತಿ ಆರು ಅಡಿ ಎತ್ತರವಿದೆ. ಕೋಟೆಯ ನೆತ್ತಿಯಲ್ಲಿ ನಿಂತು ಕಾಳಿನದಿ ಕಣಿವೆಯಲ್ಲಿ ಹರಿದು ಹೋಗುವ ಐದಾರು ಕಿಲೋಮಿಟರ ದೂರದ ದೃಶ್ಯವನ್ನು ನೋಡಿ ನಲಿಯಬಹುದು. ಸೋಂದೆಯ ಅರಸರು ಅಪರಾಧಿಗಳನ್ನು ಈ ಶಿಖರಕ್ಕೆ ಎಳೆತಂದು ಮೇಲಿಂದ ಕೆಳಗುರುಳಿಸಿ ಕೊಲ್ಲುತ್ತಿದ್ದರಂತೆ.

ಉಂಚಳ್ಳಿ ಜಲಪಾತ : ಸುಂದರವಾದ ಈ ಜಲಪಾತದ ತಟಕ್ಕೆ ಹೋಗಲು ಇನ್ನೂ ಸರಿಯಾದ ದಾರಿಯಾಗಿಲ್ಲ. ಸಿದ್ದಾಪುರದಿಂದ ೩೫ ಕಿ.ಮಿ. ದೂರದಲ್ಲಿ ಉಂಚಳ್ಳಿ ಇದೆ. ಸಿದ್ದಾಪುರ ಕೋಲ್‌ಶಿರಸಿ ಹೆಗ್ಗರಣಿ ಮಾರ್ಗವಾಗಿ ಉಂಚಳ್ಳಿಯನ್ನು ತಲುಪಬಹುದು. ಅಘನಾಶಿನಿ ನದಿಯು ೧೧೬ ಮೀಟರ ಆಳದಲ್ಲಿ ಬೆಳ್ಳಿಯ ರಥದಂತೆ ಕಂಗೊಳಿಸುತ್ತದೆ. ವಿರುದ್ಧ ದಿಕ್ಕಿನಲ್ಲಿ ಸುಮಾರು ೧.೫ ಕಿ.ಮಿ. ಕೆಳಗಿಳಿದು ನೋಡಿದಾಗ ಮೊದಲು ಹೊಳೆ ಅಗಲವಾಗಿ ಬಿದ್ದು ನಂತರ ಕಂದರದಲ್ಲಿ ಜಾರುವದು. ಕಂದರದಲ್ಲಿ ಬೀಳುವಾಗ ಬಹಳ ದೊಡ್ಡ ಶಬ್ದವಾಗುವದು. ಈ ಸಪ್ಪಳವು ಬಹುದೂರದವರೆಗೂ ಕೇಳುವದರಿಂದ ಈ ಜಲಪಾತಕ್ಕೆ “ಕೆಪ್ಪ-ಜೋಗು” ಎಂದೂ ಕರೆಯುವರು. ಸಮೃದ್ಧವಾದ ಹಸಿರಡವಿಯಿಂದ ಆವೃತ್ತವಾದದ್ದರಿಂದ ಈ ಜಲಪಾತದ ಸೌಂದರ್ಯ ಹೆಚ್ಚಿದೆ. ೧೮೪೫ ರಲ್ಲಿ ಬ್ರಿಟೀಶ್ ಕಲೆಕ್ಟರನಾದ ಲುಶಿಂಗಟನ್ ಎಂಬುವನು ಜಲಪಾತದ ನೋಟಕ್ಕೆ ಒಲಿದು ಸದಾ ಅಲ್ಲಿಗೆ ಹೋಗುತ್ತಿದ್ದುದರಿಂದ ಈ ಜಲಪಾತದ ಪ್ರಸಿದ್ಧಿ ಹೆಚ್ಚಿ “ಲುಶಿಂಗಟನ್ ಜಲಪಾತ”ವೆಂತಲೂ ಕರೆಸಿಕೊಳ್ಳುತ್ತಿತ್ತು.

ಶವಗಂಗೆ ತಡಸಲು : ನಿಸರ್ಗ ರಮಣೀಯ ಸ್ಥಳಗಳಲ್ಲಿ ಶಿವಗಂಗೆ ಜಲಪಾತವೂ ಒಂದು. ಶಿರಸಿಯಿಂದ ೨೨ ಕಿ.ಮಿ. ದೂರ ಮೆಣಶಿ ಸೀಮೆಯಲ್ಲಿ ಗಣೇಶಪಾಲ ಹೊಳೆಯು ೭೪ ಮೀಟರ ಆಳದವರೆಗೆ ಎರಡು ಮೆಟ್ಟಲಾಗಿ ಬೀಳುವ ಪರಿ ತುಂಬಾ ಸೊಗಸು. ನೀರು ಬೀಳುವ ಇಕ್ಕೆಲದಲ್ಲಿ ಕರಿಕಲ್ಲಿನ ಗೋಡೆಗಳಂತೆ ಅಖಂಡ ಶಿಲೆಗಳಿದ್ದು ಎದುರುಗಡೆಯ ಬಂಡೆಗಳಲ್ಲಿ ಜೋಗಿಯೊಬ್ಬನ ಚಿತ್ರ, ಪಕ್ಷಿ ಕುದುರೆ ಹಾಗೂ ಶಿಲಾಲೇಖಗಳು ಕೆತ್ತಲ್ಪಟ್ಟಿವೆ. ಕೆಳಗೆ ಮಡುವಿನಲ್ಲಿ ಗಣೇಶ, ಶಿವ ಗಂಗೆಯರ ಮೂರ್ತಿಗಳಿವೆಯಂತೆ. ಗಣೇಶ ಪಾಲ ಹೊಳೆಯಿಂದಾದ ಈ ಧಬಧಬೆಗೆ ಗಣೇಶ ಧಬಧಬೆಯೆಂದೂ ಕರೆಯುವರು.

ಬುರಡೆ ಜೋಗು : ಸಿದ್ದಾಪುರದಿಂದ ದೊಡ್ಮನೆ ಮಾರ್ಗವಾಗಿ ಕುಮಟೆಗೆ ಹೋಗುವ ಮಾರ್ಗದಲ್ಲಿ ಇಳಿಮನೆ ಗ್ರಾಮದಿಂದ ನಾಲ್ಕು ಕಿಲೋಮೀಟರ ಕ್ರಮಿಸಿದರೆ ಇಳಿಮನೆ ಹೊಳೆಯು ಸುಮಾರು ೬೦ ಮೀಟರ ಕೆಳಗುರುಳಿ ನಂತರ ಎರಡು ಕವಲಾಗಿ ಮತ್ತೆ ೪೫ ಮೀಟರ ಹಾರಿ ಸುಂದರ ಜಲಪಾತವನ್ನುಂಟು ಮಾಡಿದೆ.

ದೇವ್ಕಾರ ಜಲಪಾತ : ಯಲ್ಲಾಪುರದಿಂದ ಕಳಚೆ ಕೊಡಸಳ್ಳಿ ಮಾರ್ಗವಾಗಿ ೪೦ ಕಿ.ಮೀ. ದೂರದಲ್ಲಿ ಪ್ರಕೃತಿರಮ್ಯ ಪರಿಸರ, ಗಗನ ಚುಂಬಿತ ವೃಕ್ಷಗಳು, ಪಕ್ಷಿಪ್ರಾಣಿಸಂಕುಲದ ನೆರೆಯಲ್ಲಿ ನಡೆಯುತ್ತ ಹೋಗಿ ದೇವ್ಕಾರ ಜಲಪಾತವನ್ನು ನೋಡಿದಾಗ ಆದ ಆಯಾಸವೆಲ್ಲ ಮಾಯವಾಗುವದು. ಈ ಜಲಪಾತವನ್ನು ನೋಡಲು ಡಿಸೆಂಬರ-ಜನವರಿ ತಿಂಗಳುಗಳು ಸರಿಯಾದ ಸಮಯ. ಹಾಲಿನಂತೆ ಧುಮುಕುವ ತಡಸಲು ನಯನ ಮನೋಹರ.

ದಬ್ಬೆಸಾಲ ಜಲಪಾತ : ಸಾತೊಡ್ಡಿ ಜಲಪಾತವೆಂತಲೂ ಹೆಸರಿರುವ ಈ ಸ್ಥಳಕ್ಕೆ ಯಲ್ಲಾಪುರದಿಂದ ಬಸ್ಸಿನ ಸೌಕರ್ಯವಿದೆ. ಯಲ್ಲಾಪುರದಲ್ಲಿ ಹುಟ್ಟಿದ ಕಳ್ಳರ ಮನೆ ಹಳ್ಳವೇ ಮುಂದೆ ದಬ್ಬೆಸಾಲ ಹೊಳೆಯಾಗಿ ದಬ್ಬೆಸಾಲಿನಲ್ಲಿ ೩೨ ಮೀಟರ ಎತ್ತರದಿಂದ ಎರಡುಹಂತದಲ್ಲಿ ಧುಮುಕಿದ ವರ್ಷವಿಡೀ ವೀಕ್ಷಿಸಬಹುದಾದ ರಮಣೀಯ ಜಲಪಾತವಿದು. ಹತ್ತಿರದ ಗಣೇಶಪಾಲ ಹಳ್ಳಿಯಲ್ಲಿ ಪ್ರವಾಸಿಮಂದಿರವಿದೆ. ಕಾರವಾರದಿಂದ ೬೫ ಕಿ.ಮೀ. ಕ್ರಮಿಸಿ ಈ ಸ್ಥಳಕ್ಕೆ ಬರಬಹುದು.

ಅಂಬೆಹೊಳೆ ಜಲಪಾತ : ಯಲ್ಲಾಪುರದಿಂದ ವಜ್ರಹಳ್ಳಿಗೆ ಹೋಗಿ ಮುಂದೆ ೩ ಕಿ.ಮೀ. ಕ್ರಮಿಸಿದರೆ ದಟ್ಟ ಕಾಡಿನ ನಡುವೆ ಅಂಬೆಹೊಳೆ ಎರಡು ಸುಂದರವಾದ (ಜವಳಿ) ಜಲಪಾತವನ್ನು ನಿರ್ಮಿಸಿದೆ. ಸುಮಾರು ೨೦೦ ಮೀಟರ ಎತ್ತರದಿಂದ ಬೀಳುತ್ತಿರುವ ಜಲಪಾತದ ಬಳಿ ಮನೆಯಾಕಾರದಲ್ಲಿ ಮಾಡುಮಾಡಿದ ಕಲ್ಲು ಬಂಡೆಗಳು ಇವೆ. ಕರಡಿ ಗುಹೆ, ಬಾವುಲಿ ಗುಹೆಗಳು ಇಲ್ಲಿವೆ.

ಹಸೆಹಳ್ಳ ಜಲಪಾತ : ಶಿರಸಿಯಿಂದ ೪೦ ಕಿ.ಮಿ. ದೂರದಲ್ಲಿ ಮತ್ತಿಘಟ್ಟದ ಬಳಿ ಸುಂದರವಾದ ಪರಿಸರದಲ್ಲಿ ಸದಾಕಾಲ ಹರಿಯುವ ಹಸೆಹಳ್ಳವು ೬೪ ಮೀಟರ ಎತ್ತರದಿಂದ ಕಣಿವೆಯಲ್ಲಿ ಬಿದ್ದು ಗಂಗಾವಳಿ ನದಿಯನ್ನು ಕೂಡುತ್ತದೆ. ಈ ಜಲಪಾತಕ್ಕೆ ಹೆಗಡೆಕಟ್ಟಾ-ದೇವನಹಳ್ಳಿಯಿಂದ ಮುಂಡಗನ ಮನೆಯವರೆಗೆ ಕಾರಿನಲ್ಲಿ ಹೋಗಿ ಮುಂದೆ ೫ ಕಿ.ಮೀ. ಅಡವಿಯಲ್ಲಿ ನಡೆಯಬೇಕು. ಸರಿಯಾದ ಸಂಚಾರ ವ್ಯವಸ್ಥೆಯಾದರೆ ಇದೊಂದು ಉತ್ತಮ ಪ್ರವಾಸಿತಾಣವಾಗಬಲ್ಲುದು.

ಸುಸುಬ್ಬಿ ಜಲಪಾತ : ಶಿರಸಿಯಿಂದ ವಾನಳ್ಳಿ-ಕಕ್ಕಳ್ಳಿ ಮಾರ್ಗವಾಗಿ ಮುಂದೆ ೫ ಕಿ.ಮೀ. ನಡೆದರೆ ಕಕ್ಕಳ್ಳಿ ಹಳ್ಳ (ಬಿಳಿಹೊಳೆ) ೧೧ ಮೀಟರ ಎತ್ತರದಿಂದ ಸದಾ ಹಸಿರಾಗಿರುವ ಗುಡ್ಡದ ಇಳುಕಲಿನಲ್ಲಿ ಧುಮುಕುವ ದೃಶ್ಯ ಉತ್ಕೃಷ್ಟವಾಗಿದೆ. ಶಿರಸಿಯಿಂದ ಸುಮಾರು ೩೦ ಕಿ.ಮೀ. ಅಂತರದಲ್ಲಿ ಈ ಜಲಪಾತವಿದೆ.

ವಿಂಚೊಳ್ಳಿ ಜಲಪಾತ : ಹಳಿಯಾಳದಿಂದ ೩೮ ಕಿ.ಮೀ. ದೂರದಲ್ಲಿ ದಟ್ಟಕಾಡುಗಳ ನಡುವೆ ಈ ವರೆಗೂ ಸರಿ ರಸ್ತೆಯಿಲ್ಲದ ಒಂದು ಸುಂದರ ವಿಹಾರಕ್ಷೇತ್ರ ಈ ವಿಂಚೊಳ್ಳಿ ಜಲಪಾತ ಕಾಳಿನದಿಯು ಇಳಿಜಾರಿನಲ್ಲಿ ರಭಸದಿಂದ ಹರಿದು ನೀರಿನ ನೊರೆಯನ್ನು ಉಕ್ಕಿಸಿ ಜಾರು ಜಲಪಾತವಾಗಿ ಹರಿದಿದೆ. ಘಟ್ಟವನ್ನು ೩೦೦ ಮೀಟರ ಕೆಳಗಿಳಿದು ಹೋಗಿ ಈ ನೀರಿನ ಇಳಿಜಾರನ್ನು ವೀಕ್ಷಿಸಿ ಆನಂದಿಸಬೇಕು.

ಅಣಶಿ ಜಲಪಾತ : ಅಣಶಿ ಬಳಿ ಸುಮಾರು ೪೫ ಮೀಟರ ಎತ್ತರದಿಂದ ರಭಸದಿಂದ ಮಳೆಗಾಲದಲ್ಲಿ ಮಾತ್ರ ಗೋಚರಿಸುವ ಈ ಜಲಪಾತ ಸುಂದರವಾಗಿದೆ.

ಮಲೆಮನೆ ಜಲಪಾತ : ದೊಡ್ಡಮನೆಯಿಂದ ೪ ಕಿ.ಮೀ. ಕಾಡುದಾರಿ ಸಾಗಿದರೆ ಮಳೆಗಾಲದಲ್ಲಿ ೨೩೦ ಮೀಟರ ಎತ್ತರದಿಂದ ಬೀಳುವ ಭವ್ಯ ಬುರುಗಿನ ಮಲೆಮನೆ ಜಲಪಾತವು ಮನವನ್ನು ಮಂತ್ರಮುಗ್ಧವಾಗಿಸುವದು. ಈ ರೀತಿಯಲ್ಲಿ ಜೂನದಿಂದ ಡಿಸೆಂಬರದ ವರೆಗೆ ಕಂಗೊಳಿಸುವ ಅನೇಕ ಹಿರಿ ಕಿರಿ ಜಲಪಾತಗಳನ್ನು ಬೆಟ್ಟದ ಸಾಲುಗಳಲ್ಲಿ ಜಿಲ್ಲೆಯ ತುಂಬ ಕಾಣಬಹುದು.