ರಾಜ್ಯದಲ್ಲಿರುವ ಕುರಿ ತಳಿಗಳಲ್ಲಿ ಪ್ರತಿ ಕುರಿ ವಾರ್ಷಿಕ ಸರಾಸರಿ ೪೦೦ ರಿಂದ ೬೦೦ ಗ್ರಾಂ ಉಣ್ಣೆ ನೀಡುತ್ತದೆ. ಈ ಉಣ್ಣೆಯು ಅತಿ ಒರಟಾಗಿದ್ದು, ಕಂಬಳಿ ತಯಾರಿಕೆಗೆ ಯೋಗ್ಯವಾಗಿದೆ. ರಾಜ್ಯದ ಕೆಲವು ಪ್ರಮುಖ ಕುರಿತಳಿಗಳು ಈ ಮುಂದಿನಂತಿವೆ:
೧. ಡೆಕ್ಕನಿ ತಳಿ
ತಳಿ ಸಾಂದ್ರತೆ ಯಥೇಚ್ಛವಾಗಿರುವ ಜಿಲ್ಲೆಗಳು ಬೆಳಗಾಂ, ಬಿಜಾಪುರ, ಧಾರವಾಡ, ಹಾವೇರಿ, ಗದಗ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಯ ಕೆಲವು ಭಾಗಗಳು. ಈ ತಳಿಯನ್ನು ಯಥೇಚ್ಛವಾಗಿ ದಕ್ಷಿಣ ಪ್ರಸ್ಥಭೂಮಿಯಲ್ಲಿ ಸಾಕಲಾಗುತ್ತಿದೆಯಾದ್ದರಿಂದ ಇದಕ್ಕೆ ‘ಡೆಕ್ಕನಿ’ ತಳಿ ಎಂದು ಹೆಸರಿಡಲಾಗಿದೆ.
೪. ಬನ್ನೂರು (ಬಂಡೂರು) ತಳಿ
ಈ ತಳಿ ಸಾಂದ್ರತೆ ಯಥೇಚ್ಛವಾಗಿರುವ ಜಿಲ್ಲೆಗಳು ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಭಾಗಗಳು. ಈ ತಳಿಯ ಮೂಲ ಸ್ಥಳ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಎಂಬ ಗ್ರಾಮವಾಗಿದ್ದು, ಈ ಗ್ರಾಮವು ಬನ್ನೂರಿಗೂ ಹತ್ತಿರವಿರುವುದರಿಂದ ಈ ತಳಿಯನ್ನು ಬನ್ನೂರು ಅಥವಾ ಬಂಡೂರು ಎಂದೂ ಸಹ ಕರೆಯಲಾಗುತ್ತದೆ.
ಅ) ತಳಿಗಳ ವರ್ಗೀಕರಣ
ಮುಖ್ಯವಾಗಿ ಕುರಿಗಳ ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ಕುರಿಗಳನ್ನು ವಿವಿಧ ತಳಿ ವರ್ಗಗಳಾಗಿ ವಿಂಗಡಿಸಲಾಗಿದೆ.
೧. ಉಣ್ಣೆ ತಳಿಗಳು: ಇದನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದನೆಯದು ಉತ್ತಮ ಉಣ್ಣೆಯ ತಳಿಗಳು ಹಾಗೂ ಎರಡನೆಯದು ಕಾರ್ಪೆಟ್ ಉಣ್ಣೆಯ ತಳಿಗಳು. ಮೊದಲನೆಯ ತಳಿಗಳನ್ನು ನಮ್ಮ ರಾಜ್ಯದಲ್ಲಿ ಸಾಕಾಣಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವು ವಾಸಿಸುವ ಪ್ರದೇಶದ ಹವಾಗುಣವು ಯಾವಾಗಲೂ ತಂಪಾಗಿರಬೇಕು. ಆದ್ದರಿಂದ ಕರ್ನಾಟಕದಲ್ಲಿ ಕಾರ್ಪೆಟ್ ಉಣ್ಣೆಯ ತಳಿಗಳನ್ನು ಮಾತ್ರ ಸಾಕಬಹುದು. ಈ ತಳಿಗಳಿಂದ ಉತ್ತಮ ಹಾಸುಗಂಬಳಿ ಹಾಗು ಕಂಬಳಿ ಮಾಡಲು ಉಪಯೋಗಿಸಬಹುದಾದ ಉಣ್ಣೆಯು ದೊರೆಯುತ್ತದೆ.
ಅಲ್ಲದೆ ಭಾರತೀಯ ಕುರಿಗಳು ಅತಿ ಕಡಿಮೆ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಉಣ್ಣೆ ಉತ್ಪತ್ತಿ ಮಾಡುತ್ತವೆ. ಉದಾ: ಮಾಲ್ಪುರ, ಚೋಕ್ಲಾ ಮುಂತಾದವು.
೨. ಮಾಂಸದ ತಳಿಗಳು: ಈ ತಳಿಗಳಿಂದ ಉತ್ಕೃಷ್ಟವಾದ ಮಾಂಸ ದೊರೆಯುತ್ತದೆ. ಜೊತೆಗೆ ಕಡಿಮೆ ವಯಸ್ಸಿನಲ್ಲಿ ಕೊಬ್ಬಿ ಬೆಳೆಯುವ ಸಾಮರ್ಥ್ಯ ಪಡೆದಿರುತ್ತದೆ. ಉದಾ: ಬಂಡೂರು ಅಥವಾ ಬನ್ನೂರು, ನೆಲ್ಲೂರು, ದೆಕ್ಕೆನಿ, ಯುಎಎಸ್ ತಳಿ ಇತ್ಯಾದಿ.
೩. ದ್ವಿವಿಧೋದ್ದೇಶ ತಳಿಗಳು: ಇವುಗಳಲ್ಲಿ ಬಹುಪಾಲು ವಿದೇಶಿ ತಳಿಗಳು. ಈ ತಳಿಗಳು ಮಾಂಸ ಹಾಗೂ ಉಣ್ಣೆ ಎರಡರ ಉತ್ಪತ್ತಿಗೂ ಪ್ರಸಿದ್ಧವಾಗಿವೆ.
ಉದಾ: ಕಾರಿಡೇಲ್, ಲೈಸೆಸ್ಟರ್, ರ್ಯಾಂಬುಲೆ ಇತ್ಯಾದಿ.
ಆ) ಕುರಿಗಳ ವಸತಿ
ಕೋಳಿ ಹಾಗೂ ದನಗಳಿಗೆ ಬೇಕಾಗುವಂತಹ ಮನೆಗಳು ಕುರಿಗಳ ಪಾಲನೆಗೆ ಬೇಕಾಗುವುದಿಲ್ಲ. ರೈತರಲ್ಲಿ ದೊರೆಯುವ ಕಾಡು ಮರಗಳಿಂದ ತೆಂಗಿನ ಇಲ್ಲವೆ ಅಡಿಕೆ ಗರಿಗಳನ್ನು ಉಪಯೋಗಿಸಿ ಕುರಿಗಳಿಗಾಗಿ ವಸತಿಯನ್ನು ನಿರ್ಮಿಸಬಹುದು. ಕುರಿ ರೊಪ್ಪದ ಸುತ್ತಲೂ ಬಲವಾದ ಬೇಲಿ ನಿರ್ಮಿಸಿ, ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಬೇಕು. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕುರಿ ಮಂದೆಗಳನ್ನು ರಾತ್ರಿಯ ವೇಳೆಯಲ್ಲಿ ಗೊಬ್ಬರಕ್ಕೋಸ್ಕರ ಹೊಲಗಳಲ್ಲಿ ಕೂಡಿ ಹಾಕುತ್ತಾರೆ. ಈ ಸಮಯದಲ್ಲಿ ಸುತ್ತಲೂ ತಡಿಕೆ ಇಲ್ಲವೆ ಬಲೆ ಹಾಕುತ್ತಾರೆ.
ಮರಿಗಳು ತಾಯಿಯ ಜೊತೆಯಲ್ಲೆಯೇ ಓಡಾಡಿಕೊಂಡು ಬಾಯಾರಿದಾಗ ಹಾಲು ಕುಡಿದುಕೊಂಡು ಬೆಳೆಯಬೇಕಾದ್ದು ವೈಜ್ಞಾನಿಕವಾದರೂ ಸಹ ಮೇವನ್ನು ಅರಸಿ ತುಂಬಾ ದೂರ ದೂರದ ಪ್ರದೇಶದಲ್ಲಿ ತಿರುಗಾಡ ಬೇಕಾಗುವುದರಿಂದ ಅವುಗಳನ್ನು ರೊಪ್ಪದಲ್ಲಿಯೇ ಬಿಟ್ಟು ಮೇವು ಹಾಕಿ ಅಥವಾ ಕೈ ತಿನಿಸು ಕೊಟ್ಟು ಮೇಯಿಸುತ್ತಾ ಸಂಜೆ ತಾಯಿ ಕುರಿಯಿಂದ ಮೊಲೆಯೂಡಿಸುತ್ತಾರೆ.
ಇ) ಕುರಿ ಸಂವರ್ಧನೆಯಲ್ಲಿ ಪಾಲಿಸಬೇಕಾದ ಕ್ರಮಗಳು
೧. ಸಂವರ್ಧನೆಯಲ್ಲಿ ಉಪಯೋಗಿಸುವಂತಹ ಆಯ್ದ ಬೀಜದ ಟಗರು ಮತ್ತು ಹೆಣ್ಣು ಕುರಿಗಳು ಒಂದೇ ವಂಶಾವಳಿಗೆ ಸೇರಿರಬಾರದು.
೨. ಹೆಣ್ಣು ಕುರಿಗಳು ಕಿರಿಯ ವಯಸ್ಸಿನಲ್ಲಿ ಪ್ರಾಯಕ್ಕೆ ಬಂದರೂ ಸಹ ಅವುಗಳ ಗಾತ್ರ ಮತ್ತು ಮೈ ಕಟ್ಟನ್ನು ಪರಿಗಣಿಸಿ ಟಗರಿನೊಂದಿಗೆ ಸಂಕರಣೆಗೆ ಬಿಡಬೇಕು.
೩. ೨೫ ರಿಂದ ೩೦ ಹೆಣ್ಣು ಕುರಿಗಳಿಗೆ ಬೀಜದ ಒಂದು ಟಗರು ಸಾಕಾಗುವುದು.
೪. ಬೀಜದ ಟಗರನ್ನು ಯಾವಾಗಲೂ ಹಿಂಡಿನಲ್ಲಿ ಬಿಡಬಾರದು. ಅದನ್ನು ಪ್ರತ್ಯೇಕವಾಗಿಟ್ಟು ಸಂಜೆ ವೇಳೆ ಇಲ್ಲವೇ ಮುಂಜಾನೆಯ ಸಮಯದಲ್ಲಿ ಬೆದೆಗೆ ಬಂದಿರುವ ಕುರಿಯೊಡನೆ ಸಂವರ್ಧನೆಗಾಗಿ ಬಿಡುವುದು ಬಹಳ ಸೂಕ್ತವಾಗಿರುತ್ತದೆ.
೫. ಗರ್ಭಧಾರಣೆಯಾದ ನಂತರ ಹೆಣ್ಣು ಕುರಿಯು ೧೪೫-೧೫೦ ದಿನಗಳ ಅಂತರದಲ್ಲಿ ಮರಿ ಹಾಕುತ್ತದೆ.
೬. ಮರಿ ಹಾಕಿದ ನಂತರ ಕುರಿಗಳು ಮತ್ತೆ ೨ ರಿಂದ ೩ ತಿಂಗಳ ಅವಧಿಯಲ್ಲಿ ಮರು ಬೆದೆಗೆ ಬರುತ್ತದೆ. ಈ ಸಮಯದಲ್ಲಿ ಕುರಿ ಪಾಲಕರು ಜಾಗೃತರಾಗಿದ್ದು, ಕುರಿಗಳಿಗೆ ಗರ್ಭ ಕಟ್ಟಿಸಬೇಕು.
೭. ಕುರಿಗಳು ಗರ್ಭಧರಿಸುವ ಕಾಲ ಮಾರ್ಚನಿಂದ ಏಪ್ರಿಲ್ ತಿಂಗಳು ಇಲ್ಲವೆ ಸೆಪ್ಟೆಂಬರ್ನಿಂದ ಅಕ್ಟೋಬರ್ ತಿಂಗಳು. ಈ ಸಮಯದಲ್ಲಿ ಕುರಿಗಳು ಗರ್ಭ ಕಟ್ಟಿದರೆ ಅಗಸ್ಟ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೂ ಹಾಗೂ ಫೆಬ್ರವರಿ ತಿಂಗಳಿಂದ ಮಾರ್ಚ್ ತಿಂಗಳವರೆಗೂ ಮರಿಹಾಕುವುವು. ಸಾಮಾನ್ಯವಾಗಿ ಅಗಸ್ಟ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೂ ಕುರಿಗಳು ಈಯುವುವು.
೮. ಕುರಿಗಳಿಂದ ಪ್ರತಿ ವರ್ಷ ಎರಡು ಸಾರಿ ಮರಿ ಹಾಕುವುದನ್ನು ನಿರೀಕ್ಷಿಸುವುದು ಕಷ್ಟ. ಆದರೆ ೨ ವರ್ಷಗಳ ಅವಧಿಯಲ್ಲಿ ೩ ಬಾರಿ ಮರಿಯನ್ನು ಪಡೆಯಬಹುದು.
ಈ) ಗರ್ಭಧರಿಸಿದ ಕುರಿಗಳ ಪಾಲನೆ
ಗರ್ಭ ಧರಿಸಿದ ಕುರಿಗಳನ್ನು ಮಿಕ್ಕುಳಿದ ಕುರಿಗಳಿಂದ ಬೇರ್ಪಡಿಸಿ. ಸಾಕಬೇಕು. ಬೀಜದ ಟಗರನ್ನು ಗರ್ಭಧರಿಸಿದ ಕುರಿಗಳಿಂದ ಕುರಿಗಳಿರುವ ಹಿಂಡಿನೊಡನೆ ಬಿಡಬಾರದು. ಗರ್ಭಧರಿಸಿದ ಕುರಿಗಳಿಗೆ ಒಳ್ಳೆಯ ಹಸಿರು ಮೇವು ಇಲ್ಲವೇ ಹಸಿರು ಎಲೆಗಳನ್ನು ತಿನ್ನುವಷ್ಟು ಕೊಡಬೇಕು. ದಿನಕ್ಕೆ ೨೦೦ ರಿಂದ ೩೦೦ ಗ್ರಾಂ ಸಮತೋಲ ಆಹಾರವನ್ನು ತಪ್ಪದೆ ಕೊಡಬೇಕು. ಗರ್ಭ ಧರಿಸಿದ ಕುರಿಗಳನ್ನು ಈಯುವ ತನಕ ಬೇರೆಯಾಗಿ ಇಡುವುದು ಒಳ್ಳೆಯದು. ಈಯುವ ಕಾಲದಲ್ಲಿ ಕಷ್ಟವೇನಾದರೂ ಸಂಭವಿಸಿದರೆ ಪರಿಣಿತ ಪಶುವೈದ್ಯರಿಂದ ಪರೀಕ್ಷಿಸಿ ಸುಲಭವಾಗಿ ಈಯಿಸುವುದಕ್ಕೆ ಅನುಕೂಲ ಮಾಡಿಸಬೇಕು.
ಉ) ಮರಿಗಳ ಪಾಲನೆ ಮತ್ತು ಪೋಷಣೆ
೧. ಹುಟ್ಟಿದ ಮರಿಗಳಿಗೆ ತಪ್ಪದೆ ಗಿಣ್ಣಿನ ಹಾಲನ್ನು ಕುಡಿಸಬೇಕು. ಒಂದು ಪಕ್ಷ ತಾಯಿಯಿಂದ ಹಾಲು ಬರದಿದ್ದರೆ ಪಶುವೈದ್ಯರಿಂದ ಆಕ್ಸಿಟೋಸಿನ್ ಹಾರ್ಮೋನನ್ನು ಸೂಜಿಯ ಮೂಲಕ ಹಾಕಿಸಬೇಕು. ಈ ಕ್ರಮ ಅನುಸರಿಸಿದರೂ ಹಾಲು ಬರದಿದ್ದರೆ ಬೇರೆ ಕುರಿಯಿಂದ ಕರೆದ ಗಿಣ್ಣಿನ ಹಾಲು ಇಲ್ಲವೇ ಬಿಳಿ ಹಾಲನ್ನು ತಪ್ಪದೇ ಮರಿಗಳಿಗೆ ಕುಡಿಸಬೇಕು. ಮರಿಯ ಹೊಕ್ಕುಳ ಬಳಿ ಸ್ವಲ್ಪ ಟಿಂಚರ್ ಐಯೋಡಿನ್ ಹಚ್ಚಿದರೆ ಧೂಳಿನ ಮೂಲಕ ಸೂಕ್ಷ್ಮ ರೋಗಾಣುಗಳು ಸೇರಿ ತೊಂದರೆ ಆಗುವುದು ತಪ್ಪುವುದು.
೨. ಕೆಲವು ತಾಯಿ ಕುರಿಗಳಲ್ಲಿ ಹಾಲಿನ ಕೊರತೆ ಇರುವುದು. ಅಂತಹ ಸಮಯದಲ್ಲಿ ಹಸುವಿನ ಹಾಲನ್ನು ಸಮಭಾಗ ನೀರಿನಲ್ಲಿ ಬೆರೆಸಿ ಬೆಚ್ಚಗೆ ಮಾಡಿ ಶೀಷೆಗಳನ್ನು ಉಪಯೋಗಿಸಿ ಕುಡಿಸಬಹುದು.
೩. ಕೆಲವು ವೇಳೆ ತಾಯಿ ಕುರಿಗಳು ಯಾವುದೋ ಕಾರಣದಿಂದ ಸತ್ತು ಹೋದರೆ ಅನಾಥ ಮರಿಗಳನ್ನು ಸಾಕು ತಾಯಿ ಕುರಿಯ ಬಳಿ ಬಿಡಬಹುದು. ಸಾಕು ತಾಯಿ ಕುರಿಯ ಹಾಲನ್ನು ಅನಾಥ ಮರಿಗಳ ಬೆನ್ನ ಮೇಲೆ ಸವರಿದರೆ ಅದು ಮರಿಗಳನ್ನು ಮೂಸಿದಾಗ ತನ್ನ ಹಾಲಿನ ವಾಸನೆ ಹಿಡಿದು ಅನಾಥ ಮರಿಗಳನ್ನು ಹಾಲು ಕುಡಿಯಲು ಬಿಡುವುದು.
೪. ಎರಡು ವಾರಗಳ ವಯಸ್ಸಿನಲ್ಲೇ ಮರಿಗಳ ಮುಂದೆ ಹುಲ್ಲು ಮತ್ತು ಹುಲ್ಲಿನ ಕುಚ್ಚುಗಳನ್ನು ಕಟ್ಟಿ ಮೇಯುವ ರೂಡಿ ಮಾಡಿಸಬೇಕು. ಸಣ್ಣ ಬೋನಿನಂತಹ ಗೂಡುಗಳಲ್ಲಿ ಬಾಣಲೆಗಳಲ್ಲಿ ಕೈ ತಿಂಡಿಯನ್ನಿಟ್ಟು ಮರಿಗಳು ಹೋಗುವಷ್ಟು ಸಣ್ಣ ಬಾಗಿಲುಗಳಿಟ್ಟರೆ ಮರಿಗಳು ಮಾತ್ರ ಒಳಗೆ ಹೋಗಿ ನಿಧಾನವಾಗಿ ಕೈ ತಿಂಡಿಯನ್ನು ತಿಂದು ವೇಗವಾಗಿ ಬೆಳವಣಿಗೆ ಹೊಂದುತ್ತವೆ.
ಮರಿಗಳಿಗೆ ಕೊಡುವ ಕೈ ತಿಂಡಿಯನ್ನು ಈ ಕೆಳಕಂಡ ಪದಾರ್ಥಗಳನ್ನು ಉಪಯೋಗಿಸಿ ತಯಾರಿಸಬಹುದು.
ಪದಾರ್ಥಗಳು | ಶೇಕಡಾ ಭಾಗ |
೧. ಮೆಕ್ಕೆ ಜೋಳದ ನುಚ್ಚು | ೪೦ |
೨. ಗೋಧಿಯ ತವುಡು | ೨೦ |
೩. ಲಿನ್ ಸೀಡ್ ಮೀಲ್ | ೧೦ |
೪. ಕಡ್ಲೆಕಾಯಿ ಹಿಂಡಿ | ೩೦ |
೪-೫ ವಾರಗಳ ಮರಿಗಳಿಗೆ ಕೇವಲ ಮೆಕ್ಕೆ ಜೋಳದ ನುಚ್ಚನ್ನು ಮಾತ್ರ ನೀಡಿದರೆ ಸಾಕು ೧೨ ರಿಂದ ೧೪ ವಾರದ (೩ ತಿಂಗಳ ವಯಸ್ಸಿನಲ್ಲಿ) ವಯಸ್ಸಿನ ಮರಿಗಳನ್ನು ತಾಯಿ ಹಾಲು ಬಿಡಿಸಿ ತಾಯಿ ಕುರಿಗಳ ಮಂದೆಯಿಂದ ದೂರ ಇಟ್ಟು ಸಾಕಬೇಕು.
೫. ಹುಟ್ಟಿದ ಎರಡನೇ ವಾರದಲ್ಲಿ ಮರಿಗಳಿಗೆ ತಪ್ಪದೇ ಜಂತು ಹುಳು ಬಾಧೆ ತಡೆಗಟ್ಟಲು ಜಂತು ನಾಶಕ ಔಷಧಿಯನ್ನು ಕುಡಿಸಬೇಕು. ಅನಂತರ ಪ್ರತಿ ಮೂರು ತಿಂಗಳಿಗೊಮ್ಮೆ ಈ ಔಷಧಿಯನ್ನು ಕುಡಿಸಬೇಕು. ಗರ್ಭಧರಿಸಿದ ಕುರಿಗಳಿಗೆ ಈ ಔಷಧಿ ಕುಡಿಸದಂತೆ ಎಚ್ಚರ ವಹಿಸಬೇಕು.
೬. ಚೆನ್ನಾಗಿ ಕೊಬ್ಬಿ ಬೆಳೆಸಿದ ಮರಿಗಳು ೬ ತಿಂಗಳ ಅವಧಿಯಲ್ಲಿ ಸುಮಾರು ೧೮ ರಿಂದ ೨೦ ಕಿ.ಗ್ರಾಂ ತೂಗುತ್ತವೆ. ಈ ವಯಸ್ಸಿನಲ್ಲಿ ಬೀಜದ ಟಗರು ಹಾಗೂ ತಾಯಿ ಕುರಿಯಾಗುವಂತಹ ಮರಿಗಳನ್ನು ಆಯ್ಕೆ ಮಾಡಿಕೊಂಡು ಬೆಳಸಬೇಕು. ತಾಯಿ ಕುರಿಗಳಾಗಲು ಆಯ್ದ ಹೆಣ್ಣು ಮರಿಗಳನ್ನು ಒಳ್ಳೆಯ ಮೇವು ನೀಡಿ ಸಾಕಿ ಶರೀರ ತೂಕವನ್ನು ಮೊದಲಿನಿಂದಲೂ ಹೆಚ್ಚಿಸುತ್ತಾ ಹೋದರೆ ಬೇಗನೆ ಬೆದೆಗೆ ಬರುತ್ತವೆ. ಚೆನ್ನಾಗಿ ಸಾಕಿದ ಮರಿಗಳು ಒಂದು ವರ್ಷ ವಯಸ್ಸಿನಲ್ಲಿಯೇ ಬೆದೆಗೆ ಬಂದು ತಮ್ಮ ಮೊದಲ ಮರಿಯನ್ನು ೨ ವರ್ಷದ ಒಳಗಿನ ವಯಸ್ಸಿನಲ್ಲಿಯೇ ಕೊಡುವುವು.
೭. ಟಗರು ಮರಿಗಳನ್ನು ಮಾಂಸಕ್ಕಾಗಿ ಮಾರುವ ಇಚ್ಚೆಯಿದ್ದರೆ ೭-೧೪ ದಿವಸಗಳ ವಯಸ್ಸಿನಲ್ಲಿಯೇ ಬೀಜ ತೆಗೆದು ಸಾಕಿದರೆ ಒಳೆಯ ದರ ಸಿಗುವುದು ಏಕೆಂದರೆ ಬೀಜರಹಿತ ಮರಿಗಳ ಬೆಳೆವಣಿಗೆ ಬೀಜದ ಟಗರುಗಳಿಗಿಂತ ವೇಗವಾಗಿರುವುದೆಂದು ವೈಜ್ಞಾನಿಕವಾಗಿ ತಿಳಿದು ಬಂದಿದೆ,
ಕುರಿಗಳಿಗೆ ಆಹಾರ ಪೂರೈಕೆ
ದೇಹದಲ್ಲಿ ನಡೆಯಿವಂತಹ ದೈನಂದಿನ ಜೈವಿಕ ರಾಸಾಯನಿಕ ಕ್ರಿಯೆಗಳಿಗೆ, ದೇಹದ ಬೆಳವಣಿಗೆಗೆ, ಸಂತಾನೋತ್ಪತ್ತಿಗೆ ಹಾಗೂ ಉತ್ಪತ್ತಿಗೆ ಆಹಾರ ಅತಿ ಮುಖ್ಯ. ನಮ್ಮ ರೈತರು ಇಂದೂ ಸಹ ಪ್ರತ್ಯೇಕವಾಗಿ ಮೇವಿನ ಬೆಳೆಗಳನ್ನು ಬೆಳೆಯುತ್ತಿಲ್ಲ. ಆದರೆ ವಿದೇಶಗಳಲ್ಲಿ ಕುರಿಗಳ ಆಹಾರಕ್ಕೋಸ್ಕರ ಹುಲ್ಲುಗಾವಲುಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಉತ್ಕೃಷ್ಟ ಮೇವಿನ ಬೆಳೆಗಳನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಕುರಿಗಳಿಗೆ ಕೊಡವ ಆಹಾರವು ಎರಡು ವಿಧವಾದುದು:
೧. ಸ್ಥೂಲ ಆಹಾರ ಮತ್ತು ೨. ಉತ್ಪಾದನಾ ಆಹಾರ
ಸ್ಥೂಲ ಆಹಾರ
ಈ ಆಹಾರವು ದೇಹದ ರಚನಾತ್ಮಕ ಕ್ರಿಯೆಗಳಿಗೆ ಹಾಗೂ ದೈನಂದಿನ ಚಟುವಟಿಕೆಗೆ ಅತಿ ಮುಖ್ಯ. ಕುರಿಗಳು ಹುಲ್ಲುಗಾವಲು ಬೆಟ್ಟಗುಡ್ಡಗಳ ತಪ್ಪಲುಗಳು ಮತ್ತು ಗೋಮಾಳದಲ್ಲಿ ಬೆಳೆಯುವ ಮೇವು ಬೆಳೆಗಳ ಕಟಾವಿನ ನಂತರ ಉಳಿಯುವ ಕೂಳೆ ಮೇವು ಹೊಲಗದ್ದೆಗಳಲ್ಲಿ ಬೆಳೆಯುವ ಕಸ ಕಳೆ ಹಾಗೂ ಮರಗಿಡಗಳ ಎಲೆಗಳನ್ನು ತಿಂದು ಈ ಸ್ಥೂಲ ಆಹಾರ ಪೋರೈಸಿಕೊಳ್ಳುತ್ತವೆ.
ಉತ್ಪಾದನಾ ಆಹಾರ
ಹೆಚ್ಚು ಶಕ್ತಿಯ ಪೌಷ್ಟಿಕ ಮತ್ತು ಸಸಾರಜನಕಯುಕ್ತ ಆಹಾರವು ಕುರಿಗಳ ಬೆಳವಣಿಗೆ, ಸಂತನೋತ್ಪತ್ತಿ ಮತ್ತು ಉತ್ಪತ್ತಿಗೆ ಅತಿ ಅವಶ್ಯಕ. ಇದನ್ನು ಸಮತೋಲ ಆಹಾರದಿಂದ ಪೂರೈಸಬೇಕಾಗುತ್ತದೆ. ಬೆಳೆಯುವ ಮರಿಗಳಿಗೆ ಹಾಗು ಬೀಜದ ಟಗರಿಗೆ ಕೆಲವು ವೇಳೆ ಹುರುಳಿ ನುಚ್ಚು ಶೇಂಗಾ ಹಿಂಡಿ ಇಲ್ಲವೇ ಹತ್ತಿ ಕಾಳನ್ನು ಕೊಡುತ್ತಾರೆ. ರೈತರು ಈ ಸಮತೋಲ ಆಹಾರವನ್ನು ತಾವು ಬೆಳೆಯುವ ದವಸ-ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳಿಂದ ತಯಾರಿಸಿಕೊಳ್ಳಬಹುದು.
ನಮ್ಮ ದೇಶದಲ್ಲಿ ಕುರಿಯಗಳನ್ನು ಹುಲ್ಲುಗಾವಲು ಇಲ್ಲವೇ ಹಳ್ಳ-ಕೊಳ್ಳ, ಕೆರೆದಂಡೆ, ಕಾಲುವೆ, ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ ಬೆಳೆಗ್ಗೆಯಿಂದ ಸಾಯಂಕಾಲದವರೆಗೆ ಮೇಯಿಸುತ್ತಾರೆ ಹಾಗೂ ಎಳೆಯ ಮರಿಗಳಿಗೆ ಚಿಗರು ಹುಲ್ಲು, ಬೋರೆ, ಜಾಲಿ ಇಲ್ಲವೇ ಬೇಲದ ಕಾಯಿ, ಸೊಪ್ಪು ಮತ್ತು ಕಾಯಿಗಳನ್ನು ಕೊಟ್ಟು ಸಾಕುತ್ತಾರೆ.
ಕುರಿಗಳಿಗೆ ನೀರಿನ ಪೂರೈಕೆ
ಕುರಿಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿರುವುದಿಲ್ಲ. ಕುರಿಗಳು ಪದೇ ಪದೇ ನೀರನ್ನು ಕುಡಿಯುವುದಿಲ್ಲ. ದಿನದಲ್ಲಿ ಒಂದು ಬಾರಿ ಮಾತ್ರ ತಿಳಿಯಾದ ಮತ್ತು ಹರಿಯುವ ನೀರನ್ನು ಕುಡಿಯಲು ಇಷ್ಟಪಡುತ್ತವೆ. ಕೆರೆ ಕುಂಟೆಗಳಲ್ಲಿ ನಿಂತ ನೀರನ್ನು ಸಹ ಕುಡಿಯಲು ಇಷ್ಟಪಡುತ್ತವೆ. ಗೂಡಿನಲ್ಲಿರುವ ಎಳೆಯ ಮರಿಗಳಿಗೂ ಸಹ ಶುದ್ಧ ನೀರನ್ನು ಕೊಡಬೇಕು.
ಕೊನೆಯದಾಗಿ ಕುರಿಗಳನ್ನು ಆರೋಗ್ಯವಾಗಿಡಲು ಕಾಲ ಕಾಲಕ್ಕೆ ಸರಿಯಾಗಿ ರೋಗ ನಿರೋಧಕ ಚುಚ್ಚುಮದ್ದು ಅಥವಾ ಲಸಿಕೆಯನ್ನು ಹಾಗೂ ಜಂತು ನಿವಾರಣಾ ಔಷಧಿಯನ್ನು ಕೊಡಿಸಬೇಕು. ಹೊರ ಮೈ ಮೇಲಿನ ಕೀಟಗಳ ನಿರ್ವಹಣೆಗೋಸ್ಕರ ಆರು ತಿಂಗಳಿಗೊಮ್ಮೆ ಔಷಧದಿಂದ ಕೂಡಿದ ನೀರನ ಸ್ನಾನ ಮಾಡಿಸಬೇಕು (ಡಿಪ್ಪಿಂಗ್).
ಈ ಮೇಲೆ ತಿಳಿಸಿದಂತೆ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಚಾಚೂ ತಪ್ಪದೆ ಪಾಲಿಸಿದರೆ ಕುರಿ ಸಾಕಣೆ ಉಪ ಕಸುಬಿನಲ್ಲಿ ಹೆಚ್ಚಿನ ಲಾಭಪಡೆಯಬಹುದು.
Leave A Comment