ಕಟ್ಟಿಯ ಹಿಂದೆ ಗಕ್ಕೆನ್ನೊವೇನಮ್ಮ
ಎತ್ತಿನ ಕೊರಳಗಲ ಹುರಿಗೆಜ್ಜೆ | ನಾಗವ್ವನ
ಕೇಳಬಂದವರೆ ದಿಳ್ಳಿದೊರೆಗಳು

ಏರಿಯ ಹಿಂದೆ ಬೋರಾಡೋವೇನಮ್ಮ
ಹೋರಿಕೊರಳಗಲ ಹುರಿಗೆಜ್ಜೆ | ನಾಗವ್ವನ
ಕೇಳ ಬಂದವರೆ ದಿಳ್ಳಿ ದೊರೆಗಳು

ಉಪ್ಪರಿಗೆ ಮುಂದೆ ಹರಳು ಕೇರುವ ಹೆಣ್ಣ
ಸಿರಿವಂತರ ಮನೆಗೆ ಕೊಡಿರಯ್ಯ | ನವಿಲೂರ
ಹರಳು ಹೇರಾಡೋ ಮಗನೀಗೆ

ಮಾಳಿಗೆ ಮನೆಮುಂದೆ ಮುತ್ತು ಕೇರುವ ಹೆಣ್ಣು
ಬಿತ್ತಾರಿ ನಮಗೆ ಕೊಡಿರಯ್ಯ | ನವಿಲೂರು
ಮುತ್ತು ಹೇರಾಡೊ ಮಗನೀಗೆ

ಒಪ್ಪ ಬಂದ ತಂಗಿ ಅಟ್ಟುಣ್ಣಕ್ಹೋಗ್ಯವಳೆ
ಪಟ್ಟ ಸಾಲಾಗೆ ಅವರಣ್ಣ | ಕೂತುಗಂಡು
ಕುಟ್ಟುಣ್ಣೊ ತಂಗಿ ನಾವು ಕೊಡಲಾರೊ

ಚಿಕ್ಕದು ನಮ್ಮ ಹೆಣ್ಣು ಸೀರೆ ಉಡಲರಿಯದು
ಬಟ್ಟಲು ಬೆಳಗೋದ ಕಲಿಯದು | ನವಿಲೂರ
ಗೌಡರಿಗೆ ಹೆಣ್ಣು ನಾವು ಕೊಡಲಾರೊ

ಅರಿಯಾದು ನಮ್ಮ ಹೆಣ್ಣು ಅರಿವೆ ಉಡಲರಿಯದು
ಹರಿವಾಣ ಬೆಳಗೋದೆ ಕಲಿಯದು | ನವಿಲೂರ
ದೊರೆಗಳಿಗೆ ಹೆಣ್ಣ ನಾವು ಕೊಡಲಾರೊ

ಹಟ್ಟಿಗೆ ಬಳೆಬಂದೊ ತೊಟ್ಟುಕೊಳ್ಳೆ ನಾಗವ್ವ
ಬಟ್ಟುಳದಾಗ್ಹೊನ್ನ ಅಳಕೊಳೆ | ನವಿಲೂರ
ಬಟ್ಟುಮುತ್ತಿನಂಥ ಬಳೆಯ ತೊಡುಬಾರೆ

ಬೀದಿಗೆ ಬಳೆಬಂದೊ ತೊಟ್ಟುಕೊಳ್ಳೆ ನಾಗವ್ವ
ತಂಬಿಗೇಲ್ಹೊನ್ನ ಅಳಕೊಡೆ | ನವಿಲೂರ
ಬಟ್ಟುಮುತ್ತಿನಂಥ ಬಳೆಯ ತೊಡಬಾರೆ

ಬಳೆಯ ತೊಡುವಾಗ ಬಲಗಡೆ ಸೀತವರ‍್ಯಾರೆ
ಬಳೆಗಾರ ಶೆಟ್ಟಿ ಬಿಡುಕೈಯ | ನಾಗವ್ವನ
ಅರಬಳೆಗೆ ಲಗುನ ಒದಗ್ಯವೆ

ಬಳೆಯ ತೊಡುವಾಗ ಬೆಕ್ಕೆರಡು ಸೀತಾವು
ಬಳೆಗಾರ ಶೆಟ್ಟಿ ಬಿಡುಕೈಯ | ನಾಗವ್ವನ
ಅರಬಳಿಗೆ ಲಗುನ ಒದಗ್ಯಾವು

ಶೆಟ್ಟಿ ಮೊಲ್ಲೆಗೆರೆಯ ಬಟ್ಟಬಂಡೆಯ ಮೇಲೆ
ಆರುಖಂಡುಗ ಬತ್ತ ಡರಡವೆ | ನಾಗವ್ವಗೆ
ನಿಸ್ಪ್ರೇಗೆ ಲಗುನ ಒದಗ್ಯಾವೆ

ರಾಯಮೊಲ್ಲೆ ಗೆರೆಯ ಬೋರೆಂಬರೆಯ ಮೇಲೆ
ಹತ್ತು ಖಂಡುಗ ಬತ್ತ ಹರಡ್ಯವೆ | ನಾಗವ್ವಗೆ
ನಾರಿಗೆ ಲಗುನ ಒದಗ್ಯವೆ

ಕಂಚಿನ ಬಟ್ಟಲಿಗೆ ಮಿಂಚೆಣ್ಣೆ ಹುಯ್ಕೊಂಡು
ಕೆಂಚ ಚಿಂದಯ್ಗೆ ಉಗುರೆಣ್ಣೆ | ಆಗುವಾಗ
ತಂಗೆ ಚೆಲುವಮ್ಮ ಸುಳಿದಳು

ತಂಗೆ ಚೆಲುವಮ್ಮ ಸುಳಿದು ಏನಂದಳು
ಬೇಡಾರು ನಮ್ಮಾಡ ಹೊಡೆದಾರು

ಎದ್ದನೆ ಚಿಂದಯ್ಯ ಬೆದರಿ ಬಿದ್ದೋನಂಗೆ
ಗೆಜ್ಜೆಯ ಬಿಲ್ಲ ಹಿಡಕೊಂಡು | ಮೂಡಲಗಿರಿಗೆ
ಹೋದಾನೊ ಸೀಗೆ ಮೆಳೆದಾಟಿ

ಕಟ್ಟಿದ ಕಂಕಣ ಇಕ್ಕಿದ ಸೆರಗೆಣ್ಣೆ
ಅಪರಂಜಿ ಬಿಲ್ಲು ಬಲಗೈಲಿ | ಹಿಡಕೊಂಡು
ಸೀಗೆಯ ದಾಟಿ ನಡೆದನು – ಚಿಂದಯ್ಯ
ಬೇಡರ ದಂಡನೆಲ್ಲ ಕಡಿದಾನೆ

ತುರುಕರ ಭಾಷೇಲಿ ದನಿಯೆತ್ತಿ ಕರೆದನು
ತುರುಮಂದಿಗಾರ ನಿಲುಗಾರ | ಚಿಂದಯ್ಯ
ಆಡಾಡನೆಲ್ಲ ಕರೆದನು

ಬೇಡರ ದಂಡೆಲ್ಲ ಒಬ್ಬನೆ ಕಡಿದನು
ನೀರ ತತ್ತಾ ಹೋಗೆ ಕಿರುದಂಗೆ

ಗೊಲ್ಲರ ಭಾಷೇಲಿ ಕೊರಳಿಡಿದಾಡ ಕರೆದು
ಬೇಲಿಯ ಒಳಗೆ ನಿಲಗರೆದು | ಎಣಿಸ್ಯಾನೆ
ಕುಂಟಾಡಿನ ಮರಿಯ ಸುಳುವಿಲ್ಲ

ಹೋಗೋದು ಹೊರ ಊರು ಬರುವೋದು ಬೇರೆ ಊರು
ನಾಗಸಂಪಿಗೆ ನಡುವೇಲಿ ಬರುವಾಗ
ಆಡಿನಣ್ಣಯ್ಗೆ ತಲೆನೋವು

ಮುಂಗೋಳಿ ಕೂಗಿತು ಮೂಡು ಕೆಂಪೇರಿತು
ಸೀಗೆಯ ಮೆಳೆಯಲ್ಲಿ ಮಲಗವನೆ | ಚಿಂದಯ್ಯ
ಹಾಳು ಬೇಡರು ಅವನ ಕಡಿದರು

ಬಾಳೆಯ ಗಿಡದಡಿ ಬಾಲಾಗೆ ಗುಂಡಿತೆಗೆದು
ಬಾಳಗೇಡಿ ನಾಗವ್ವನ ಬಳಗವೆ | ಬಂದಳುವಾಗ
ಬಾಳೆ ಚಪ್ಪರವೆ ನೆರಳಾದೊ

ಇಂಬೆಯ ಮರದಡಿ ರೆಂಬೆ ನೆಲಕುರಿದಳು
ನಾರಿ ನಾಗವ್ವನ ಬಳಗವೇ | ಬಂದಳುವಾಗ
ಇಂಬೆ ಚಪ್ಪರವೆ ನೆರಳಾದೆ

ಹಸುವಿನ ಹಾಲಕೊಡಿ ಹಸುವಿನ ಬೆಣ್ಣೆ ಕೊಡಿ
ಹಸುವಿನ ಹಾಲಕೊಡಿ | ಚಿಂದಯ್ನ
ಮದುವಾದ ಋಣಕೆ ಬಿಡುತೀನಿ

ಕಿಚ್ಚಿಗೆ ಸೌದೆ ಹೊರುವ ಎತ್ತಿನ ಚೆಂದನೋಡಿ
ಕತ್ತಿಗೆ ಚೆಲ್ಲವೆ ಹುರಿಗೆಜ್ಜೆ | ಹೂಮಾಲೆ
ಬಂದಾವು ನಾಗವ್ನ ಎದೆಗುಂಡು

ಕೊಂಡಾಕೆ ಸೌದೆ ಹೊರುವ ಕೋಣನ ಚೆಂದನೋಡಿ
ಕೋಡಿಗೆ ಚೆಲ್ಲವೆ ಹುರಿಗೆಜ್ಜೆ | ಹೂಮಾಲೆ
ಆದಾವು ನಾಗವ್ನ ಎದೆಗುಂಡು

ಕೊಂಡದಲ್ಲಿರುವ ಕೆಂಡದ ಚವಲೀಯ
ತಕ್ಕೊಂಡು ಬಾರ‍್ಹೆಣ್ಣೆ ಇದುರೀಗೆ | ನಾಗವ್ವನ
ಗಂಡನ ಮನೆಗೆ ಕಳುವೋನ

ಕಿಚ್ಚಿನಾಗಿರುವ ಕುಚ್ಚಿನ ಚವರೀಯ
ತಕ್ಕೊಂಡು ಬಾರ‍್ಹೆಣ್ಣೆ ಇದುರೀಗೆ | ನಾಗವ್ವನ
ಅತ್ತೆಯ ಮನೆಗೆ ಕಳುವೋನ

ಮಾವಿನ ಕೊನೆ ಬಂದು ಮೂಡ್ಲಾಗಿ ನಿಂತವೆ
ಮಾವ ನಿನ್ನೊಡಲು ಉರಿಯಾದೆ | ನೀನು ತಂದ
ಮಾಣಿಕವು ಕೊಂಡ ಹೋಗುವಾಗ

ಅತ್ತೀಯ ಕೊನೆಬಂದು ಹಟ್ಯಾಗೆ ನಿಂದಾವೆ
ಅತ್ತೆ ನಿನ್ನೊಡಲು ಉರಿಯದೇ | ನೀನು ತಂದ
ಮುತ್ತೈದೆ ಕೊಂಡ ಹೊಗುವಾಗ

ಕಿಚ್ಚಿನ ಸುತ್ತ ನುಚ್ಚಕ್ಕಿ ಹಸೆಹುಯ್ದು
ಮುತ್ತೀನ ಕಳಸ ನಡುವಿರಿಸಿ | ನಾಗವ್ವನ
ಕಿಚ್ಚಿಗೆ ಧಾರೆ ಎರೆದರು

ಕೊಂಡದಸುತ್ತ ಕೆಂಡದ ಹಸೆಹುಯ್ದು
ಬಂಗಾರದ ಕಳಸ ನಡುವಿರಿಸಿ | ನಾಗವ್ವನ
ಕೊಂಡಕೆ ಧಾರೆ ಎರೆದಾರು

ಅತ್ತಿತ್ತ ನೋಡ್ಯಾಳೆ ಹತ್ತ್ಯಾಳೆ ಸತಿ ಕಲ್ಲ
ಹತ್ತೀರ ಬರುತಾರೆ ಅವರಪ್ಪ | ತಾಯಮ್ಮ
ನೂರ ಕಟ್ಟೇನು ಇರುಮಗಳೆ

ನೀ ನೂರ ಕೊಟ್ಟರೆ ನನ್ನ ಕೊಪ್ಪಿನ ಬೆಲೆಯಿಲ್ಲ
ಅತ್ತೆಯ ಮಗನೆ ಚಿಂದಯ್ಯ (ನಾ) ಕುಟ್ಟೆ
ನಾ ಹತ್ತೋದೆ ಲೇಸು ಒಡಗಿಚ್ಚ

ಆಗೀಗ ನೋಡ್ಯಾಳೆ ಹತ್ತ್ಯಾಳೆ ಸತಿ ಕಲ್ಲ
ದೂರ ಬರುತಾಳೆ ಅವರವ್ವ | ಅಕ್ಕಯ್ಯ
ಹೊನ್ನು ಕೊಟ್ಟೇನು ಇರುಮಗಳೆ

ನೀ ಹೊನ್ನುಕೊಟ್ಟರೆ ನನ್ನ ವಾಲೆಯ ಬೆಲೆಯಿಲ್ಲ
ಮಾವನ ಮಗನೆ ಚಿಂದಯ್ಯ | (ನಾ) ಕುಟ್ಟೆ
ನಾ ಹತ್ತೋದೆ ಲೇಸು ಒಡಗಿಚ್ಚ

ಹೆಣ್ಣೀಗೆ ಮಣ್ಣುಬಿದ್ದೊ ಕಣ್ಣಿಗೆ ಸೆತ್ತೆ ಬಿದ್ದೊ
ಸಣ್ಣಸೀರೆಮ್ಯಾಲೆ ಕಿಡಿಬಿದ್ದೊ | ನಾಗವ್ವನ
ಹೆಣೆಗಂಟು ನಲುಗಿ ಉರಿದ್ಹೋದೊ*      ನಾಗವ್ವ : ಪರಮಶಿವಯ್ಯ ಜೀ.ಶಂ.; ಜಾನಪದ ಖಂಡ ಕಾವ್ಯಗಳು, ಶಾರದಾ ಮಂದಿರ, ಮೈಸೂರು – ೧೯೬೮ ಪು.ಸಂ. ೨೫-೩೨.