ಭಾರತ ದೇಶದ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಉಜ್ವಲ ವೃತ್ತಿ ಗಾಯಕರಲ್ಲಿ ದಿವಂಗತ ಪಂಡಿತ ಬಸವರಾಜ ರಾಜಗುರು ಒಬ್ಬರು. ಅವರು ಭಾರತ ಉಪಖಂಡದಲ್ಲೆಲ್ಲ ತಮ್ಮ ಶಾಸ್ತ್ರೀಯ ಸಂಗೀತವನ್ನು ಪ್ರಚಾರ ಪಡಿಸಿ ಭಾರತ ದೇಶದ ಅತ್ಯುನ್ನತವಾದ ನಾಗರಿಕ ಪ್ರಶಸ್ತಿಗಳನ್ನು ಪಡೆದು ಅಜರಾಮರರಾಗಿದ್ದಾರೆ. ಇಂಥಹ ಮಹಾನ್‌ಗಾಯಕ ಸಾಧಿಸಿದ ಸಂಗೀತ ಸಾಧನೆ, ಅದಕ್ಕಾಗಿ ಅವರು ಪಟ್ಟ ಪರಿಶ್ರಮ, ಮಾನಸಿಕ ಯಾತನೆ, ಸಾಮಾಜಿಕ ಸಂಚಲನ ಮುಂತಾದವುಗಳ ವಿವರವನ್ನಿಲ್ಲಿ ನೀಡಲಾಗಿದೆ.

ಹಿಂದಿನ ಅಧ್ಯಾಯದಲ್ಲಿ ನಿರೂಪಿಸಿದಂತೆ ಬಸವರಾಜ ರಾಜಗುರು ಅವರು ಕುಂದಗೋಳ ತಾಲೂಕಿನ ಎಲಿವಾಳದಲ್ಲಿ ಜನಿಸಿದರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡ ರಾಜಗುರು ಅವರಿಗೆ ತಂದೆ ಮಹಾಂತಸ್ವಾಮಿ ಆರೈಕೆ ಮಾಡುತ್ತ ತಮ್ಮ ಪಿಟೀಲು ವಿದ್ಯೆಯ ಜ್ಞಾನದೊಂದಿಗೆ ಮಕ್ಕಳಿಬ್ಬರಿಗೆ ಸಂಗೀತ ಶಿಕ್ಷಣವನ್ನು ನೀಡಿದರು. ಮಗ ಬಸವರಾಜನಂತೂ ಸಂಗೀತದಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿರಲು, ತಂದೆ ಮಹಾಂತ ಸ್ವಾಮಿಗಳು ಅವನನ್ನು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಶಿಕ್ಷಣಕ್ಕಾಗಿ ಒಪ್ಪಿಸುತ್ತಾರೆ. ಮೂರುಸಾವಿರ ಮಠಕ್ಕೆ ಬರುತ್ತಿದ್ದ ಸಂಗೀತ ವಿದ್ವಾನ್‌ಪಂಚಾಕ್ಷರಿ ಗವಾಯಿಗಳು ಬಸವರಾಜರಿಗೆ ಸಂಗೀತವನ್ನು ಕಲಿಸಲು ಆರಂಭಿಸುತ್ತಾರೆ. ಈಗ ರಾಜಗುರು ಅವರ ಭವಿಷ್ಯವೇ ಬದಲಾಗುತ್ತದೆ.

ಈ ಘಟನೆ ನಡೆದದ್ದು ೧೯೩೦ ರಲ್ಲಿ. ಆ ವರ್ಷದ ಜೂನ ತಿಂಗಳಲ್ಲಿ ಪಂಚಾಕ್ಷರಿ ಗವಾಯಿಗಳವರು ರಾಜಗುರು ಅವರನ್ನು ತಮ್ಮ ೬೦ ಜನ ವಿದ್ಯಾರ್ಥಿಗಳೊಂದಿಗೆ ಶಿವಯೋಗ ಮಂದಿರಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವರಿಗೆಲ್ಲ ಶಿಸ್ತು, ಸಂಯಮ, ನೀತಿ-ನಿಯಮಗಳನ್ನು, ಪೂಜಾ ಪುನಸ್ಕಾರಗಳನ್ನು ಕಲಿಸಲಾಗುತ್ತದೆ. ಬಸವರಾಜ ಗವಾಯಿಗಲು ವಿದ್ಯಾರ್ಥಿಗಳಿಗೆಲ್ಲ ಬೆಳಗಿನ ನಾಲ್ಕು ಘಂಟೆಯಿಂದ ಎಂಟು ಘಂಟೆಯವರೆಗೆ, ಮಧ್ಯಾಹ್ನ ನಾಲ್ಕು ಘಂಠೆಯಿಂದ ಸಂಜೆ ಏಳು ಘಮಟೆಯವರೆಗೆ ಸಂಗೀತಾಭ್ಯಾಸವನ್ನು ಮಾಡಿಸುತ್ತಾರೆ. ಪಂ. ರಾಜಗುರು ಅವರು ಸಂಗೀತದ ಕಛೇರಿಗಳನ್ನು ನೀಡಲು ಆರಂಭಿಸುತ್ತಾರೆ. ಅವರು ಹೈದರಾಬಾದಿನ ನಿಜಾಮರ ಮುಂದೆ ಕೊಪ್ಪಳದಲ್ಲಿ ಸಂಗೀತ ಕಛೇರಿಯನ್ನು ನೀಡಿ ಜನಮನ್ನಣೆಗೆ ಪಾತ್ರರಾಗುತ್ತಾರೆ.

ಪಂಡಿತ ರಾಜಗುರು ಅವರು ಪಂಡಿತ ಪಂಚಾಕ್ಷರಿ ಗವಾಯಿಗಳ ಶ್ರೀ ಕುಮಾರೇಶ್ವರ ನಾಟಕ ಸಂಘದಲ್ಲಿ ಅನೇಕ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ಅವರದು ಮೋಹಕವಾದ ಮುಖ ಹಾಗೂ ಮಧುರವಾದ ಧ್ವನಿ. ಆದ್ದರಿಂದ ಅವರು ವಹಿಸಿದ್ದ ಸ್ತ್ರೀ ಪಾತ್ರಗಳಿಗೆ ಕಳೆ ತುಂಬುತ್ತಿತ್ತು. ಬಸವರಾಜರು ಯೋಗಿಗಳ ಪಾತ್ರವನ್ನು ವಹಿಸುತ್ತಿದ್ದರು. ‘ಸತಿ ಸುಕನ್ಯಾ’, ‘ಸಿದ್ಧರಾಮೇಶ್ವರ’, ಹಾಗೂ ‘ರಾಜಶೇಖರ ವಿಳಾಸ’ಗಳಲ್ಲಿ ಬಸವರಾಜರು ವಹಿಸಿದ ಸಿರಘನ ಪಾತ್ರ ತುಂಬಾ ಚೆನ್ನಾಗಿತ್ತು. ಅವರು ಅಲ್ಲಿ ಶಂಕರರಾಗದಲ್ಲಿ ಹಾಡುತ್ತಿದ್ದರು:

ಶಂಕರನೇ ಸಾಕ್ಷಾತ್‌ಓಂಕಾರನೇ
ಕನಸಿನೊಳಗೆ ಬಂದು
ಸೊನ್ನಲಾಪುರಕ್ಕೆ ಪೋಗೆಂದಾ

ಈ ಗೀತೆಯು ಅತ್ಯಂತ ಜನಪ್ರಿಯವಾಗಿತ್ತೆನ್ನಬೇಕು.

ಬಸವರಾಜರು ರಂಗ ಗೀತೆಗಳನ್ನು ಹಾಡುವಲ್ಲಿ ನಿಸ್ಸಿಮರು. ಅವರು ಪಂಚಾಕ್ಷರಿ ಗವಾಯಿಗಳ ನಾಟಕ ಕಂಪನಿಯಲ್ಲಿದ್ದುದರಿಂದ ಇದೆಲ್ಲ ಸಾಧ್ಯವಾಯಿತು. ಬಸವರಾಜರು ಕನ್ನಡ ರಂಗಗೀತೆಗಳಲ್ಲದೆ ಮರಾಠಿ ರಂಗಗೀತೆಗಳನ್ನು ಹಾಡುತ್ತಿದ್ದರು. ಅಂತಹ ಒಂದು ಉದಾಹರಣೆ ಈ ಕೆಳಗೆ ಇದೆ:

ದೆ ಹಾತಾ ಶರಣಗತಾ
ಚಂದ್ರಿಕಾ ಹಿ ಜಣು
ಮಿತ ಭಾಷಣಿ

ಅಂದು ಈ ಹಾಡುಗಳು ಬಹು ಜನಪ್ರಿಯವಾಗಿದ್ದವು. ಏಕೆಂದರೆ ಈ ಹಾಡುಗಳನ್ನು ಅಂದಿನ ನಾಯಕರಾದ ಪಂಡಿತ ದೀನನಾಥ ನಾರಾಯಣ ಬುವಾ ಹಾಗೂ ಕೇಶವರಾವ್‌ರು ಹಾಡುತ್ತಿದ್ದರು. ನಂತರ ಅವರು ಈ ಸಂಗೀತ ಪ್ರಕಾರವನ್ನು ಬಳಸಿಕೊಂಡು ರಾಷ್ಟ್ರೀಯ ಗಾಯಕರಾದರು. ಹಾನಗಲ್ಲ ಕುಮಾರ ಸ್ವಾಮಿಗಳ ಪ್ರೇರಣೆಯಿಂದ ಪಂಚಾಕ್ಷರಿ ಗವಾಯಿಗಳು ಆರಂಭಿಸಿದ ಶ್ರೀ ಕುಮಾರೇಶ್ವರ ನಾಟಕ ಮಂಡಳಿ ಅಂದು ಅದ್ಭುತ ಕೆಲಸವನ್ನು ಮಾಡಿತು. ಅದರಲ್ಲಿ ಪ್ರಮುಖ ನಾಯಕ ನಟ ಗಾಯಕರಾಗಿದ್ದ ರಾಜಗುರು ಅವರು ನಾಟ್ಯಗೀತೆಗಳನ್ನು ಬಳಸಿಕೊಳ್ಳುವುದರ ಮೂಲಕ ತಮ್ಮ ಹಿಂದುಸ್ತಾನಿ ಸಂಗೀತವನ್ನು ಗಟ್ಟಿ ಮಾಡಿಕೊಂಡರು.

ಎಲ್ಲ ಮಾರ್ಗ ಸಂಗೀತಕ್ಕು ದೇಶಿ ಸಂಗೀತವೇ ಬುನಾದಿಯಾಗಿದೆ. ಉದಾಹರಣೆಗೆ ಶಾಸ್ತ್ರೀಯ ಸಂಗೀತವು ಜಾನಪದ ಸಂಗೀತದ ಮೇಲೆ ನಿಂತಿದೆ. ಪ್ರಸ್ತುತ ಸಂದರ್ಭದಲ್ಲಿ ಪಂ. ರಾಜಗುರು ಅವರು ತಂದೆ ಕಲಿಸಿದ ಸಂಗೀತ ಪಾಠಗಳನ್ನು ತಮಗೆ ಸಂಸ್ಕಾರವಾಗಿ ಬಳಸಿಕೊಂಡರು. ಮುಂದೆ ಅವರು ಶ್ರೀ ವಾಮನರಾವ್‌ಮಾಸ್ತರರ ನಾಟಕ ಕಂಪನಿಯಲ್ಲಿದ್ದಾಗ ಮರಾಠಿ ಸಂಗೀತ ಪ್ರಭಾವದ ರಂಗಗೀತೆಗಳನ್ನು ಫಲಪ್ರದವಾಗಿ ಬಳಸಿಕೊಂಡರು. ತದನಂತರ ಅವರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಯವರ ಶಿಷ್ಯರಾಗಿ, ಅವರ ನಾಟಕ ಕಂಪನಿಯಲ್ಲಿ ಗಾಯಕ ನಟರಾಗಿ ಬಹಳಷ್ಟು ತಾಲೀಮು ಪಡೆದರು. ಪಂಚಾಕ್ಷರಿ ಗವಾಯಿಗಳವರು ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳ ಪರಮ ಶಿಷ್ಯಂದಿರಾಗಿ ಮೈಸೂರಿನಲ್ಲಿ, ನಂತರ ಉಸ್ತಾದ ವಹೀದಖಾನರ ಗರಡಿಯಲ್ಲಿ, ಅಷ್ಟೇ ಅಲ್ಲ ಗ್ವಾಲಿಯರ ಘರಾಣೆಯ ಪಂಡಿತ ನಿಲಕಂಠ ಬುವಾ (ಮಿರಜಕರ) ಅವರಿಂದ ಶಾಸ್ತ್ರೀಯ ಸಂಗೀತವನ್ನು ಕಲಿತ್ತಿದ್ದರು. ಪಂಚಾಕ್ಷರಿ ಗವಾಯಿಗಳು ಪಂ. ರಮಕೃಷ್ಣ ಬುವಾ ವಝೆ, ಶ್ರೀ ಬಾಬುರಾವ ರಾಣೆ ನಂತರ ಉಸ್ತಾದ ಇನಾಯತ್‌ಹುಸೇನ ಖಾನರ ಬಳಿ ಸಂಗೀತ ಅಧ್ಯಯನ ಮಾಡಿದ್ದರು. ಪಂಚಾಕ್ಷರಿ ಗವಾಯಿಗಳು ವಾದ್ಯ ಸಂಗೀತದಲ್ಲೂ ಪಳಗಿದವರು. ಅನೇಕರು ಹೇಳುವಂತೆ ಪಂ.ಬಸವರಾಜ ರಾಜಗುರು ಅವರು ಗಾಯನ ನೀಡುತ್ತಿದ್ದಾಗ ಪಂಚಾಕ್ಷರಿ ಗವಾಯಿಗಳೆ ತಬಲಾ ಬಾರಿಸುತ್ತಿದ್ದರು. ಪುಟ್ಟರಾಜ ಗವಾಯಿಗಳು ಹಾರ್ಮೊನಿಯಂ ಸಾಥಿ ನೀಡುತ್ತಿದ್ದರು. ಹೀಗೆ ಉಭಯಗಾನ ವಿಶಾರದರೂ, ಪಂಡಿತರೂ ಆದ ಪಂ. ಪಂಚಾಕ್ಷರಿ ಗವಾಯಿಗಳವರ ಬಲಿ ದಶಕಗಳವರೆಗೆ ಸಂಗೀತ ಸಾಧನೆ ಗೈದ ಪಂ. ರಾಜಗುರು ಅವರು ಧನ್ಯರಾಗಿದ್ದರು.

ಬಸವರಾಜ ರಾಜಗುರು ಅವರ ಸಂಗೀತ ಸಾಧನೆ ಇಷ್ಟಕ್ಕೆ ನಿಲ್ಲಲಿಲ್ಲ. ಅವರು ಹೆಚ್ಚಿನ ಸಂಗೀತ ಅಧ್ಯಯನಕ್ಕಾಗಿ ಕಿರಾಣಾ ಘರಾಣಾದ ಸುಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರಿಂದ ಸಂಗೀತದ ಸೂಕ್ಷ್ಮ ಅಂಶಗಳಾದ ಮುರ್ಕಿಮೀಂಡ ಕಿರಣಾ ಘರಾಣೆಯ ಅಂಶಗಳನ್ನು ಕಲಿತರು.

ಹಿಂದೂಸ್ತಾನಿ ಸಂಗೀತವೂ ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದ್ದು ಅದಕ್ಕೆ ತನ್ನದೆಯಾದ ಹುಟ್ಟು, ಬೆಳವಣಿಗೆ ಹಾಗೂ ಆಂತರಿಕ ರಚನೆಗಳಿವೆ. ಹಿಂದೂಸ್ತಾನಿ ಸಂಗೀತವು ಪರ್ಷಿಯಾದಿಂದ ಬಂದ ಮುಸಲ್ಮಾನ ಕಲಾವಿದರ ಸೊತ್ತಾಗಿದ್ದು ಅದರಲ್ಲಿ ಮುಸ್ಲೀಂ ಒಳನೋಟಗಳಿವೆ. ಹಿಂದೂಸ್ತಾನಿ ಸಂಗೀತವು ಹಿಂದೂ ಸಂಸ್ಕೃತಿಯೊಂದಿಗೆ ಘರ್ಷಿಸಿ ಭಾರತದ ಸಂಗೀತವೇ ಆದದ್ದು ವಿಶೇಷ . ಹತ್ತನೇ ಶತಮಾನದಿಂದ ದೆಹಲಿಯನ್ನು ಆಳಿದ ಮುಸಲ್ಮಾನರು ಹಿಂದೂಸ್ತಾನಿ ಸಂಗೀತವನ್ನು ಬೆಳಸಿದರು. ಹದಿನೈದನೇ ಶತಮಾನದಿಂದ ಭಾರತವನ್ನು ಆಳಿದ ಮೊಘಲರ ಕಾಲದಲ್ಲಿ ಈ ಸಂಗೀತ ಉಚ್ಛ್ರಾಯ ಸ್ಥಿತಿಯನ್ನು ಕಂಡಿತು. ಮಧ್ಯಯುಗದ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಬೆಳಸಿದ ತಾನಸೇ ನ ಹಾಗೂ ಅಮೀರ ಖುಶ್ರು ಅವರ ಹೆಸರನ್ನು ಕೇಳದವರಾರು?

ಹಿಂದೂಸ್ತಾನಿ ಸಂಗೀತದಲ್ಲಿ ಒಂದು ವಿಶೇಷವಾದ ರಚನಾ ಶಾಸ್ತ್ರವಿದೆ. ಅಲ್ಲಿ ಘರಾಣೆಗಳು ಬರುತ್ತವೆ. ಘರಾಣೆಗಳು ಅಂದರೆ ಸಂಗೀತ ಶೈಲಿಯ ಮನೆತನಗಳು. ಈ ಸಂಗೀತ ಮನೆತನಗಳನ್ನು ಶ್ರೇಷ್ಠ ಸಂಗೀತಗಾರರು ಕನಿಷ್ಠ ಮೂರು ತಲೆಮಾರಿನವರೆಗೆ ಬೆಳೆಸಿರುತ್ತಾರೆ. ಘರಾಣೆಗಳಲ್ಲಿ ಧ್ವನಿ ಉತ್ಪಾದನಾ ರೀತಿ, ಆಂತರಿಕ ರಚನೆ, ನಿರ್ಬಂಧ ಹಾಗೂ ಶುದ್ಧತೆ, ಬಂಧೀಶ ಮತ್ತು ಶೈಲಿ ಮುಂತಾದ ರಚನಾತ್ಮಕ ಅಂಶಗಳಿವೆ.

ಪಂ. ಬಸವರಾಜ ರಾಜಗುರು ಅವರು ಅನುಸರಿಸಿದ ಘರಾಣೆಗಳು:

ಉತ್ತರ ಕರ್ನಾಟಕದ ಧಾರವಾಡ ಹಾಗೂ ಗದಗಗಳು ಸಂಗೀತಕ್ಕಾಗಿ ಪ್ರಸಿದ್ಧವಾಗಿವೆ. ಈ ಎರಡು ಜಿಲ್ಲೆಗಳಲ್ಲಿ ಶಾಸ್ತ್ರೀಯ ಸಂಗೀತಗಾರರು ಹುಟ್ಟಿಕೊಂಡರು. ಹೆಸರಾಂತ ಹಿಂದುಸ್ತಾನಿ ಗಾಯಕರಾದ ಪಂ . ಮಲ್ಲಿಕಾರ್ಜುನ ಮನ್ಸೂರ, ಪಂ.ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್‌ಮುಂತಾದವರು ಈ ಜಿಲ್ಲೆಯವರು. ಹಳೆ ತಲೆಮಾರಿನ ಉತ್ತಮ ಗಾಯಕರಾದ ಗಾನಯೋಗಿ ಪಂಚಾಕ್ಷರಿ ಗವಾಯಿ, ಸವಾಯಿ ಗಂಧರ್ವ, ಪಂ. ಪುಟ್ಟರಾಜ ಗವಾಯಿಗಳು ಇದೇ ಭಾಗದವರು . ಇನ್ನೊರ್ವ ಖ್ಯಾತ ಗಾಯಕ ಕುಮಾರ ಗಂಧರ್ವರು ಪಕ್ಕದ ಬೆಳಗಾವಿ ಜಿಲ್ಲೆಯವರು. ಈ ಶ್ರೇಷ್ಠ ಹಿಂದೂಸ್ತಾನಿ ಸಂಗೀತ ಪರಂಪರೆಯ ಈಗಲೂ ಮುಂದುವರೆದಿದ್ದು ಅದೀಗ ಕಾರವಾರ ಜಿಲ್ಲೆಯನ್ನು ಆವರಿಸಿದೆ. ಇದೇ ಭಾಗದಲ್ಲಿಂದು ಅನೇಕ ಸಂಗೀತ ದಿಗ್ಗಜರು ಶ್ರೇಷ್ಠವಾಗಿದ್ದು ಅವರಲ್ಲಿ ಶ್ರೀಮತಿ ಶಾರದಾ ಹಾನಗಲ್‌, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ,  ಪಂ.ರಾಜಶೇಖರ ಮನ್ಸೂರ, ಪಂ. ಚಂದ್ರಶೇಖರ ಪುರಾಣಿಕಮಠ ಮುಂತಾದವರು ಪ್ರಮುಖರು.

ಗ್ವಾಲಿಯರ ಘರಾಣೆ:

ಸಂಗೀತದ ದೃಷ್ಟಿಯಿಂದ ಸಿರಿಸಂಪದವಾಗಿರುವ ಈ ಭಾಗದಲ್ಲಿ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಬಡತನವಿತ್ತು. ಅಂದು ಇಲ್ಲಿ ಅಲ್ಪಸ್ವಲ್ಪ ಕರ್ನಾಟಕ ಸಂಗೀತ ಕಂಡು ಬರುತ್ತಿತ್ತು. ೧೯೩೦-೪೦ರ ಸುಮಾರಿಗೆ ಈ ಮೇಲೆ ನಮೂದಿಸಿದ ಹಿರಿಯ ಸಂಗೀತಗಾರರು ಅದೇ ಕಲಿಕೆಯ ಹಂತದಲ್ಲಿದ್ದರು. ಅದೇ ತಾನೇ ಪಂಚಾಕ್ಷರಿ ಗವಾಯಿಗಳಂತವರು ಬಸವರಾಜರಂತಹ ಶಿಷ್ಯರನ್ನು ಕಟ್ಟಿಕೊಂಡು ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದರು. ಹತ್ತಿರದ ಮಹಾರಾಷ್ಟ್ರದ ಮುಂಬೈ, ಪುಣೆಗಳು ಅವರಿಗೆ ಸಂಗೀತದ ಬೆಳಕನ್ನು ನೀಡುತ್ತಿದ್ದವು. ಅಲ್ಲಿಂದ ದೊಡ್ಡ-ದೊಡ್ಡ ಶಾಸ್ತ್ರೀಯ ಸಂಗೀತಗಾರರು ಧಾರವಾಡಕ್ಕೆ ಬಂದು ಹೋಗುತ್ತಿದ್ದರು. ಅಲ್ಲಿ ಇಲ್ಲಿ ಅವರ ಸಂಗೀತ ಕಛೇರಿಗಳು ಜರುಗುತ್ತಿದ್ದವು. ಇಲ್ಲಿ ಮೊದಲು ಪ್ರಾರಂಭವಾದ ಸಂಗೀತ ಪರಂಪರೆ ಎಂದರೆ ಗ್ವಾಲಿಯರ ಘರಾಣೆಯದು. ಗಾಯನಾಚಾರ್ಯ ಬಾಳಕೃಷ್ಣ ಬುವಾ ಈಚಲಕರಂಜಿಕರ, ಪಂ. ನೀಲಕಂಠ ಬುವಾ ಮಿರಜಕರ (ಆಲೂರಮಠ), ಪಂ. ರಾಮಕೃಷ್ಣ ಬುವಾ ಮುಂತಾದವರು ಬಂದು ಧಾರವಾಡದಲ್ಲಿ ಸಂಗೀತ ಕಛೇರಿ ನೀಡುತ್ತಿದ್ದರು.

ಇಂತಹ ಸಂಧರ್ಭಗಳನ್ನು ಬಳಸಿಕೊಂಡು ಇಲ್ಲಿಯ ಸಂಗೀತಗಾರರು ಸಂಗೀತ ತರಬೇತಿಯನ್ನು ಪಡೆಯುತ್ತಿದ್ದರು. ಈ ಎಲ್ಲ ಮಹನೀಯರು ಗ್ವಾಲಿಯರ ಘರಾಣೆಯವರಾಗಿದ್ದರು. ಪಂಡಿತ ರಾಮಕೃಷ್ಣ ಬುವಾ ವಝೆ ಹಾಗೂ ಪಂ. ಶಿವರಾಮ ಬುವಾ ವಝೆಯವರು ಬೆಳಗಾವಿಯಲ್ಲಿ ನೆಲೆ ನಿಂತಾಗ ಈ ಭಾಗದ ಸಂಗೀತಗಾರರಿಗೆ ಆದ ಹರ್ಷ ಅಷ್ಟಿಷ್ಟಲ್ಲ. ಪಂ. ಗುರುರಾವ್‌ದೇಶಪಾಂಡೆಯವರು ಈ ದಿಗ್ಗಜರ ಗರಡಿಯಲ್ಲಿಯೇ ಬೆಳೆದು ಗ್ವಾಲಿಯರ ಘರಾಣೆಯ ಸಂಗೀತ ಪರಂಪರೆಯನ್ನು ಈ ಭಾಗದಲ್ಲಿ ಪ್ರಚಾರಪಡಿಸಿದರು. ಅಂದು ಬಾಲ ನಟರಾಗಿದ್ದ ಮಲ್ಲಿಕಾರ್ಜುನ ಮನ್ಸೂರರು ಹಾಡಿನ ಕಡೆಗೆ ತೋರಿದ ಬಲವನ್ನು ಗಮನಿಸಿದ ಪಂ. ನೀಲಕಂಠ ಬುವಾ ಅವರು ಮನ್ಸೂರರನ್ನು ಮಿರಜಿಗೆ ಕರೆದುಕೊಂಡು ಹೋಗಿ ಅವರಿಗೆ ಗ್ವಾಲಿಯರ ಘರಾಣೆಯ ಸಂಗೀತವನ್ನು ಧಾರೆಯೆರೆದರು. ಮುಂದೆ ಪಾಂಡಿತ್ಯ ಪೂರ್ಣ ಗಾಯಕ ಮಲ್ಲಿಕಾರ್ಜುನ ಮನ್ಸೂರರು ಸಂಗೀತ ಸಾಮ್ರಾಟ ಅಲ್ಲಾದಿಯಾಖಾನ ಸಾಹೇಬರ ಮಗ ಉಸ್ತಾದ ಮಂಜಿಖಾನ ಸಾಹೇಬರ ಶಿಷ್ಯರಾಗಿ ಘರಾಣೆಗಳ ಘರಾಣೆಯಾದ ಜೈಪೂರ ಘರಾಣೆಯನ್ನು ಕಲಿತು ಧಾರವಾಡದಲ್ಲಿ ಆ ಘರಾಣೆಯನ್ನು ಬೆಳೆಸಿದರು. ಪಂ. ದೇಶಪಾಂಡೆಯವರ ಸಮಕಾಲೀನರಾದ ದಿ. ನಾರಾಯಣಾಚಾರ ದಂಡಾಪೂರರು ಬಾಲಕೃಷ್ಣ ಬುವಾ ಈಚಲಕರಂಜಿಕರರಿಂದ ಸಂಗೀತವನ್ನು ಕಲಿತು ಧಾರವಾಡದಲ್ಲಿ ಧರ್ಮಾರ್ಥ ಸಂಗೀತ ಪಾಠ ಶಾಲೆಯನ್ನು ನಡೆಸಿ ಕೃತಾರ್ಥರಾದರು. ಈಗ ಅವರ ಮಗ ಶೇಷಗಿರಿ ದಂಡಾಪೂರರು ಆ ಪರಂಪರೆಯನ್ನು ಮುಂದುವರೆಸಿಕೊಂಡು ನಡೆದಿದ್ದಾರೆ. ಪಂ. ದೇಶಪಾಂಡೆಯವರ ಅಗ್ರಗಣ್ಯ ಶಿಷ್ಯಂದಿರಲ್ಲಿ ಪಂ. ನಾರಾಯಣರಾವ ಮುಜುಂದಾರ, ದಿವಂಗತ ಲೋಣಕಡೆ, ವಿನಾಯಕ ತೊರವಿ, ಲತಾ ನಾಡಿಗೇರ ಹಾಗೂ ಡಾ. ನಂದಾ ಎಂ. ಪಾಟೀಲರು ಅಗ್ರಗಣ್ಯರು. ದಿವಗಂತ ನಾರಾಯಣಾಚಾರ್ಯ ದಂಡಾಪುರರ ಶಿಷ್ಯರಲ್ಲಿ ಆರ್.ಪಿ. ಹೂಗಾರ, ಶೇಷಗಿರಿ ದಂಡಾಪುರ,  ಸುಧೀಂದ್ರ ದಂಡಾಪುರರು ಪ್ರಮುಖರು. ಉತ್ತರ ಕರ್ನಾಟಕದಲ್ಲಿ ಗ್ವಾಲಿಯರ ಘರಾಣೆಯು ಪ್ರವರ್ಧಮಾನಕ್ಕೆ ಬರಲು ಕಾರಣರಾದ ಪ್ರಮುಖರಲ್ಲಿ ಪಂ. ಪಂಚಾಕ್ಷರಿ ಗವಾಯಿಗಳೊಬ್ಬರು. ಹಾನಗಲ್ಲ ಕುಮಾರ ಸ್ವಾಮಿಗಳ ಶಿಷ್ಯ ಪಂ. ಪಂಚಾಕ್ಷರಿ ಗವಾಯಿಗಳು ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮವನ್ನು ತೆರೆದು ಸಂಗೀತ ಪರಂಪರೆಯನ್ನು ಆರಂಭಿಸಿದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳ ಮಾರ್ಗದರ್ಶನದಲ್ಲಿ ಬೆಳೆದ, ನಾಡಿನ ಖ್ಯಾತ ಕಲಾವಿದರಲ್ಲಿ ಮೃತ್ಯುಂಜಯ ಬುವಾ, ಪಂ. ಸಿದ್ಧರಾಮಜಂಬಲದಿನ್ನಿ, ಪಂ.ಲಿಂಗರಾಜ ಬುವಾ ಎರಗುಪ್ಪಿ, ಪಂ.ಗುರುಬಸವಾಚಾರ್ಯರು ಖ್ಯಾತನಾಮರಾಗಿದ್ದಾರೆ. ಇವರಲ್ಲಿ ಪಂ. ಬಸವರಾಜ ರಾಜಗುರು ಅವರು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ. ಲಿಂಗೈಕ್ಯ ಪಂಚಾಕ್ಷರಿ ಗವಾಯಿಗಳ ನಂತರ ಅವರ ಶಿಷ್ಯ ಪುಟ್ಟರಾಜ ಗವಾಯಿಗಳು ಖ್ಯಾತ ಸಂಗೀತಗಾರರಾಗಿ ಅನೇಕ ಸಂಗೀತಗಾರರನ್ನು ಬೆಳೆಸಿದ್ದಾರೆ, ಅವರ ಶಿಷ್ಯಂದಿರರಲ್ಲಿ ಶ್ರೀ ಸೋಮನಾಥ ಮರಡೂರ, ಶ್ರೀ ವೆಂಕಟೇಶಕುಮಾರ, ಶ್ರೀಹನುಮಂತ ಸಿಂಗ ಹಾನಗಲ್‌, ಶ್ರೀ ಡಿ. ಕುಮಾರದಾಸರು ಪ್ರಮುಖರು. ದಿವಂಗತ ಪಂಚಾಕ್ಷರಿ ಗವಾಯಿಗಳ ಶಿಷ್ಯ ಪಂ. ಬಸವರಾಜ ರಾಜಗುರು ಅವರು ಧಾರವಾಡದಲ್ಲಿ ನೆಲೆ ನಿಂತು ಶ್ರೀ ಗಣಪತಿ ಭಟ್ಟ, ಶ್ರೀ ಪರಮೇಶ್ವರ ಹೆಗಡೆ, ಶ್ರೀ ಶ್ರೀಪಾದ ಹೆಗಡೆ, ಶ್ರೀ ಶಾಂತಾರಾಮ ಹೆಗಡೆ, ಶ್ರೀಮತಿ ಪೂರ್ಣಿಮಾ ಭಟ್ಟ, ಶ್ರೀಮತಿ ಸಂಗೀತಾ ಕಟ್ಟಿ (ಕುಲಕರ್ಣಿ), ನಚಿಕೇತ ಶರ್ಮಾ ಎಂಬ ಶಿಷ್ಯಂದಿರರನ್ನು ತಯಾರಿಸಿದರು. ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯರಲ್ಲಿ ಅರ್ಜುನ ಸಾ ನಾಕೋಡರು ಒಬ್ಬರಾಗಿದ್ದು ಅವರ ಮನೆತನವು ಸಂಗೀತಗಾರರ ಮನೆತನವಾಗಿದೆ.

ಪಂ. ಶಂಕರ ದಿಕ್ಷಿತ ಜಂತಲಿಯವರು ಗ್ವಾಲಿಯರ ಪರಂಪರೆಯವರಾಗಿದ್ದಾರೆ. ಗಾಯನಾಚಾರ್ಯ ಬಾಲಕೃಷ್ಣ ಬುವಾ ಇಚಲಕರಂಜಿಕರ ಅವರ ಶಿಷ್ಯ ಉಮಾ ಮಹೇಶ್ವರ ಬುವಾ ಅವರು ಅವರ ಶಿಷ್ಯರಾದ ಸಹೋದರರು ಬೆಳಗಾವಿಯಲ್ಲಿ ಸಂಗೀತ ಶಾಲೆಗಳನ್ನು ತೆರೆದು ಗ್ವಾಲಿಯರ ಘರಾಣೆಯ ಕಲಿಕೆಗೆ ಸಹಕರಿಸಿದರು. ನರಗುಂದದ ಪಂ. ಸದುಬುವಾ ಹಾಗೂ ಪಂ. ದತ್ತು ಬುವಾರವರು ಮೂಲತ ಉತ್ತರ ಪ್ರದೇಶದವರಾಗಿದ್ದು ಗ್ವಾಲಿಯರ ಸಂಗೀತವನ್ನು ಕಲಿಸಿದ್ದಾರೆ.

ಹೀಗೆ ಗ್ವಾಲಿಯರ ಘರಾಣೆಯು ಹಿಂದೂಸ್ತಾನಿ ಸಂಗೀತದ ಮೂಲ ಘರಾಣೆಯಾಗಿದ್ದು ಅದು ಸರಳವು, ಜನಪ್ರಿಯವು ಆಗಿದೆ . ಈ ಘರಾಣೆಯಿಂದ ಮುಂದೆ ಅನೇಕ ಘರಾಣೆಗಳು ಹುಟ್ಟಿಕೊಂಡು ಹಿಂದೂಸ್ತಾನಿ ಸಂಗೀತ ಬೆಳೆಯಿತು.

ಕಿರಾಣ ಘರಾಣೆ:

ಹಿಂದುಸ್ತಾನಿ ಸಂಗೀತದ ಘರಾಣೆಗಳಲ್ಲಿ ಕಿರಾಣ ಘರಾಣೆಯು ಒಂದು. ಪಂ. ಉಸ್ತಾದ ಅಬ್ದುಲ್‌ಕರೀಂಖಾನ್‌ರು ಈ ಘರಾಣೇಯನ್ನು ಉತ್ತರ ಕರ್ನಾಟಕದಲ್ಲಿ ಪರಿಚಯಿಸಿದರು. ಅವರು ತಮ್ಮ ಸಂಚಾರಿ ಬೋಧನೆಯ ಕಾಲದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ತಂಗುತ್ತಿದ್ದರಿಂದ, ಇಲ್ಲಿ ಅವರಿಗೆ ಅನೇಕ ಶಿಷ್ಯಂದಿರರಿದ್ದರು. ಕರೀಂಖಾನರ ಸಂಗೀತದಿಂದ ಆಕರ್ಷಿತರಾದ ಕುಂದಗೋಳದ ರಾಮರಾಯರು ಅಬ್ದುಲ್‌ಕರಿಮರ ಶಿಷ್ಯರಾಗಿ ಸವಾಯಿ ಗಂಧರ್ವರೆಂಬ ಹೆಸರಿನಲ್ಲಿ ಪ್ರಖ್ಯಾತರಾದರು. ಸವಾಯಿ ಗಂಧರ್ವರ ಪ್ರಖ್ಯಾತ ಶಿಷ್ಯರೇ ಗಂಗೂಬಾಯಿ ಹಾನಗಲ್ಲರು. ಅಂತಹ ಡಾ ಹಾನಗಲ್ಲರು ಕರ್ನಾಟಕದ ಏಕಮೇವ ಕಿರಾಣಾ ಘರಾಣದ ಗಾಯಕಿಯಾಗಿ ಜಗತ್‌ಪ್ರಸಿದ್ಧಿಯನ್ನು ಪಡೆದಿದ್ದಾರೆ.  ಡಾ. ಹಾನಗಲ್ಲರಿಗೆ ದೊಡ್ಡ ಶಿಷ್ಯ ಬಳಗವೆ ಇದೆ. ಅವರ ಮಗಳು ಕೃಷ್ಣಾ ಹಾನಗಲ್ಲ, ಸುಲಭಾ ಡಂಬಳ, ನಾಗನಾಥ ಒಡೆಯರ ಅವರೆಲ್ಲ ಡಾ. ಗಂಗೂಬಾಯಿಯವರ ಶಿಷ್ಯರಾಗಿದ್ದಾರೆ.

ಕಿರಾಣಾ ಘರಾಣಾದ ಇನ್ನೊರ್ವ ಗಾಯಕರೆಂದರೆ ಡಾ. ಭೀಮಶೇನ ಜೋಷಿಯವರು. ಅವರು ಮಹಾರಾಷ್ಟ್ರದಲ್ಲಿ ಉಳಿದರು. ಅವರ ಶಿಷ್ಯ ಮಾಧವ ಗುಡಿ ಮುಂತಾದವರು ಧಾರವಾಡದಲ್ಲಿ ಉಳಿದು ಕಿರಾಣಾ ಸಂಪ್ರದಾಯವನ್ನು ಮುಂದುವರೆಸಿಕೊಂಡು ನಡೆದಿದ್ದಾರೆ. ಇದೇ ಘರಾಣೆಯ ಇತರ ಕಲಾವಿದರಲ್ಲಿ ರಾಮದುರ್ಗದ ವೆಂಕಣ್ಣ, ಕೃಷ್ಣಾಭಾಯಿ, ಪಕ್ಕೀರಪ್ಪಾ ಕುಂದಗೋಳ, ಶ್ರೀಮತಿ ದೊಡ್ಡ ಕಮಲಾಬಾಯಿ ಮುಂತಾದವರು ಪ್ರಮುಖರಾಗಿದ್ದಾರೆ. ಇದೇ ರೀತಿ ಪಂ. ಗಣಪತಿರಾವ ಗುರವ ಹಾಗೂ ಅವರ ಮಗ ಸಂಗಮೇಶ್ವರ ಗುರವ ಕಿರಾಣ ಘರಾಣದಲ್ಲಿ ಸಾಕಷ್ಟು ಬೆಳೆದಿದ್ದಾರೆ. ಬೆಳಗಾವಿಯಲ್ಲಿರುವ ಪಂ.ಎ.ವ್ಹಿ. ಕಗಲಕರ ಹಾಗೂ ಪಂ.ಆರ್.ಎನ್‌. ಜೋಶಿಯವರು ಅನೇಕ ಜನ ಶಿಷ್ಯಂದಿರನ್ನು ತಯಾರಿಸುತ್ತಿದ್ದಾರೆ . ಬಾಗಲಕೋಟೆಯ ಶ್ರೀಮತಿ ಪ್ಯಾರಭಾಯಿ ಬೀಳಗಿ ಹಾಗೂ ಸುಶೀಲಾಬಾಯಿ ಅಮ್ಮಿನಗಡರು ಕಿರಾಣಾ ಘರಾಣೆಯ ಅನುಯಾಯಿಗಳು.

ಪಂಡಿತ ರಾಜಗುರು ಅವರ ಹಿಂದೂಸ್ಥಾನಿ ಸಂಗೀತದ ಶಿಕ್ಷಣ ನಡೆದದ್ದು ಮುಖ್ಯವಾಗಿ ಪಂ. ಪಂಚಾಕ್ಷರಿ ಗವಾಯಿಗಳ ಹತ್ತಿರವೆ. ಅವರು ಹೇಳಿಕೊಟ್ಟ ಸ್ವರದ ಅಭ್ಯಾಸ, ರಾಗ ಬಂಧೀಶಗಳ ಅಧ್ಯಯನ, ಚೀಜುಗಳು ಸಂಗ್ರಹಣೆ ಅಪೂರ್ವವಾದುದು. ಅವರು ಪಂಚಾಕ್ಷರಿ ಗವಾಯಿಗಳ ನಾಟಕ ಕಂಪನಿಯಲ್ಲಿ ಅನೇಕ ವರ್ಷಗಳವರೆಗೆ ಹಾಡಿ ಸಂಗೀತದಲ್ಲಿ ದಕ್ಷತೆಯನ್ನು ಗಳಸಿಕೊಂಡರು. ಅಂದು ಬಹು ಜನಪ್ರಿಯವಾಗಿದ್ದ ಮರಾಠಿ ರಂಗಗೀತೆಗಳನ್ನು ಅವರು ಹಾಡುತ್ತಿದ್ದರು. ನಂತರ ಅವರು ಆಗಾಗ ಪಂಚಾಕ್ಷರಿ ಗವಾಯಿಗಳ ಹತ್ತಿರ ಬರುತ್ತಿದ್ದ ನೀಲಕಂಠ ಬುವಾರಂತವರಿಂದ ಕಲಿತದ್ದು ಬಹಳಷ್ಟಿದೆ. ಮುಂದೆ ಅವರು ಪಂಚಾಕ್ಷರಿ ಗವಾಯಿಗಳನ್ನು ಬಿಟ್ಟು ಪುಣೆ-ಮುಂಬೈಗೆ ಹೋಗಿ ನೆಲೆ ನಿಂತಾಗ, ಅನಂತರ ಧಾರವಾಡದಲ್ಲಿ ಖಾಯಂ ಆಗಿ ವಾಸಿಸತೊಡಗಿದಾಗ, ಅನೇಕ ಗುರುಗಳ ಹತ್ತಿರ ಕಲಿತ್ತಿದ್ದಾರೆ. ಅಂತಹ ಕೆಲವು ಗುರುಗಳಲ್ಲಿ ನೀಲಕಂಠಬುವಾ, ಸುರೇಶಬಾಬು ಮಾನೆ,  ಗೋವಿಂದರಾವ್‌ಠೆಂಬೆ ಹಾಗೂ ವಹಿದಖಾನರು ಪ್ರಮುಖರು. ಇದರಿಂದಾಗಿ ರಾಜಗುರು ಅವರ ಹಿಂದೂಸ್ತಾನಿ ಸಂಗೀತದಲ್ಲಿ ಆದ ಒಂದು ಬದಲಾವಣೆ ಎಂದರೆ ಅವರು ಪಂಚಾಕ್ಷರಿ ಗವಾಯಿಗಳಿಂದ ಕಲಿತ ಗ್ವಾಲಿಯರ ಘರಾಣೆಯೊಂದಿಗೆ, ಕಿರಾಣ ಹಾಗೂ ಪತಿಯಾಲಾ ಘರಾಣೆಗಳ ಅನೇಕ ಉಪಯುಕ್ತ ಅಂಶಗಳನ್ನು ಕರಗತ ಮಾಡಿಕೊಂಡರು. ಈ ಎಲ್ಲ ಘರಾಣೆಗೆ ನೇರವಾದ ಪರಿಣಾಮವೆಂದರೆ ಅವರ ಸಂಗೀತ ವೈವಿಧ್ಯಮಯವಾಯ್ತು. ಅವರ ಸಂಗೀತದಲ್ಲಿ ಒಂದು ತರದ ವಝನ ಬಂದಿತು. ನಂತರ ರಾಜಗುರು ಅವರು ದೇಶ ವಿದೇಶಗಳಲ್ಲಿ ಸಂಚಾರ ಮಾಡುತ್ತಿರುವಾಗ, ಅಲ್ಲೆಲ್ಲ ದೊರೆತ ದೂರದ ಗಾಯಕರಿಂದ ಹೊಸದನ್ನು ಕಲಿತು ತಮ್ಮ ಸಂಗೀತವನ್ನು ಶ್ರೀಮಂತಗೊಳಿಸಿಕೊಂಡರು.