ಎಂಭತ್ತು ವರ್ಷಗಳಿಂದ ನಾಡಿನ ಎಲ್ಲ ವಿಶ್ವವಿದ್ಯಾಲಯಗಳ, ಸಂಸ್ಥೆಗಳ ಪ್ರಾಧ್ಯಾಪಕರೂ ಪಂಡಿತರೂ ಇದನ್ನು ತುಂಬಾ ಆಳವಾಗಿ ಅನುಸಂಧಾನಮಾಡಿ ತಮ್ಮ ತಮ್ಮ ಊಹೆಗಳನ್ನು ಮಂಡಿಸಿರುವುದರ ಫಲವಾಗಿ ಗ್ರಂಥದ ಪಾಠನಿರ್ಣಯಕ್ಕೆ ಬಹಳಷ್ಟು ಸಹಾಯ ಸಾಮಗ್ರಿ ಸಿದ್ಧವಾದಂತಾಗಿದೆ. ಆದರೆ ಇಂತಹ ಊಹೆಗಳಲ್ಲಿ ಪ್ರಾಯಿಕವಾಗಿ ನೃಪತುಂಗನು ಈ ಗ್ರಂಥದ ಕರ್ತೃವೋ ಅಥವಾ ಶ್ರೀವಿಜಯನೋ ಅಥವಾ ಕವೀಶ್ವರನೆಂಬಾತನೋ ಎಂದು ಮುಂತಾದ ಚರ್ಚೆಗಳಿಗೆ ಸಾಧಕವಾಗುವಂತೆ ಪೂರ್ವಗ್ರಹಪ್ರೇರಿತವಾದ ಊಹೆಗಳು ಕಾಣಬರುತ್ತವೆ; ಕೇವಲ ಗ್ರಂಥದ ಅನುಪೂರ್ವಿಯ ಗ್ರಹಣೆ, ಅರ್ಥ ದೃಷ್ಟಿ ಮತ್ತು ವ್ಯಾಕರಣಶುದ್ಧಿ ಹಾಗು ಛಂದೋಬದ್ಧತೆಯ ದೃಷ್ಟಿಗಳಿಂದ ನೋಡಿ ಯಥಾಶಕ್ತಿ ಗ್ರಂಥದ ಪಾಠವನ್ನು ನಿಶ್ಚಯಿಸುವ ಒಂದು ನೇರವಾದ ಪ್ರಯತ್ನ ಈ ಸಂಪಾದಕನದು. ಕನ್ನಡನಾಡಿನ ಇತಿಹಾಸ, ಕನ್ನಡ ಸಾಹಿತ್ಯ ಚರಿತ್ರೆ, ವ್ಯಾಕರಣ ಹಾಗು ಲಕ್ಷಣ ಗ್ರಂಥಗಳ ಆಧುನಿಕ ವಿವೇಚನೆಗಳಿಗೆ ಮೀಸಲಾಗಿದ್ದು ಕವಿರಾಜಮಾರ್ಗವನ್ನು ಪ್ರಸ್ತಾಪಿಸುವ ಅಧ್ಯಯನ ಗ್ರಂಥಗಳನ್ನೂ ವಿದ್ವತ್ಪ್ರಬಂಧಗಳನ್ನೂ ಒಟ್ಟು ಪಟ್ಟಿ ಮಾಡಿದರೆ ಎಷ್ಟೋ ಸಾವಿರಾರು ಪುಟಗಳಷ್ಟು ವಿಪುಲ ಸಂಶೋಧನಸಾಮಗ್ರಿ ಇಂದು ಉಪಲಭ್ಯವಿದೆ. ಆದರೆ ನೇರವಾಗಿ ಗ್ರಂಥದ ಎಲ್ಲ ಪದ್ಯಗಳಿಗೂ ಸಹಜವಾದ ಮತ್ತು ಸರಳವಾದ ಒಂದು ಹೊಸಗನ್ನಡ ಅನುವಾದವನ್ನು ಯಾರೂ ಇದುವರೆಗೆ ಒದಗಿಸಿದಂತಿಲ್ಲ. ಇದು ನಿಜಕ್ಕೂ ಎಷ್ಟೊಂದು ಕಷ್ಟಸಾಧ್ಯವೆಂಬುದು ಈ ಲೇಖಕನಿಗೆ ಮನವರಿಕೆಯಾಗದೆ ಇಲ್ಲ. ಅನುವಾದಕ್ಕೆ ತೊಡಗುವ ಮುನ್ನ ಅರ್ಥವೈಶದ್ಯಕ್ಕೆ ಸಾಧಕವಾದ ಗ್ರಂಥಪಾಠದ ನಿರ್ಣಯ ಅಗತ್ಯ. ಅರ್ಥಬಾಧೆಯ ಪ್ರಸಂಗದಲ್ಲಿ ಆದಷ್ಟು ಕಡಿಮೆ ವ್ಯತ್ಯಾಸವಿರುವಂತೆ ಮೂಲಪಾಠವನ್ನು ತಿದ್ದಿ ಪರಿಷ್ಕರಿಸಿಕೊಳ್ಳಬೇಕಾಗುತ್ತದೆ, ಇಲ್ಲದೆ ಅರ್ಥೈಸುವುದನ್ನೇ ಕೈಬಿಡಬೇಕಾಗುತ್ತದೆ. ಇಂತಹ ಪರಿಷ್ಕರಣೆ ಎಲ್ಲಿ ಆಗಿದೆ, ಇದು ಎಷ್ಟು ಯೋಗ್ಯ ಎಂಬುದು ಸ್ಪಷ್ಟವಾಗಿ ಮತ್ತು ಕಣ್ಣೆದುರಿಗೇ ಕಾಣಿಸಬೇಕಾದರೆ ಆಯಾ ಪಾಠಗಳಡಿಯಲ್ಲಿಯೇ ಮಿಕ್ಕ ಪಾಠಾಂತರಗಳೆಲ್ಲ ಲಿಖಿತವಾಗಿರಬೇಕು; ಹಾಗಾದಲ್ಲಿ ಮಾತ್ರ ವಾಚಕರಿಗೆ ತಮಗೆ ಸರಿಗಂಡುದನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಪ್ರಸ್ತುತ ಆವೃತ್ತಿಯಲ್ಲಿ ಈ ಅನುಕ್ರಮವನ್ನು ವ್ಯವಸ್ಥಿತವಾಗಿ ಪುರಸ್ಕರಿಸಲಾಗಿದೆ. ಆದರೆ ಲಿಪಿಕಾರರ ಕೈತಪ್ಪೆಂಬುದು ಸುನಿಶ್ಚಿತವಾದಂತಹ ಅಪಪಾಠಗಳನ್ನು ಮಾತ್ರ ಎಲ್ಲೆಡೆಯಲ್ಲಿಯೂ ನಮೂದಿಸಲು ಹೋಗಿಲ್ಲ. ಹಸ್ತಪ್ರತಿಗಳಲ್ಲಿ ಕಾಣಬರುವ ಪಾಠಾಂತರಗಳನ್ನು ಮಾತ್ರವಲ್ಲದೆ ಮುಳಿಯ ತಿಮ್ಮಪ್ಪಯ್ಯ, ಬಿ. ಎಂ. ಶ್ರೀಕಂಠಯ್ಯ ಮುಂತಾದ ವಿದ್ವಾಂಸರು ಸೂಚಿಸಿರುವ ಪಾಠಗಳನ್ನೂ ಯಥೋಚಿತವಾಗಿ ನಿರ್ದೇಶಿಸಲಾಗಿದೆ. ಈ ಸಂಪಾದಕನಿಗೆ ಇನ್ನೂ ಸಂತೃಪ್ತಿಯಿಲ್ಲವೆಂದರೂ, ಕೆಲವೆಡೆಗಳಲ್ಲಿಯೇ ಆಗಲಿ ಇಲ್ಲಿ ಇದಂಪ್ರಥಮವಾಗಿ ಸೂಚಿತವಾಗಿರುವ ಪರಿಷ್ಕರಣಗಳು ಮೂಲಾರ್ಥಕ್ಕೆ ಹೆಚ್ಚಿನ ಸಾರ್ಥಕ್ಯವನ್ನು ನೀಡಿಯಾವೆಂದುಕೊಂಡಿದ್ದಾನೆ. *ನೋಡಿ- M ೬೬, ೮೭, ೮೮, ೮೯, ೧೦೪, ೧೧೨, ೧೨೮, ೧೩೬, ೧೪೭, ೧೪೮; MM ೫೪, ೯೯, ೧೫೩, ೧೫೪; MMM ೮೧, ೮೨, ೧೩೮, ೧೪೮, ೧೫೮, ೧೬೯, ೧೭೭, ೧೯೮, ೨೧೦, ೨೨೪, ೨೨೫, ೨೨೬*

ಕೆಲವು ವೃತ್ತಗಳನ್ನೇ ಲಿಪಿಕಾರರು ತಪ್ಪಾಗಿ ಗೀತಿಕೆಯೆಂದು ಭ್ರಮಿಸಿರುವುದೂ ಉಂಟು, MMM ೨೨೪ ರಂತೆ. ಅವು ಅಪ್ರಸಿದ್ಧ ವೃತ್ತಗಳಾದಾಗ ಪತ್ತೆ ಹತ್ತುವುದೂ ಕಷ್ಟವೇ. ಆದರೆ MMM ೨೨೪ ರಂತೆ ಎಲ್ಲ ಗೀತಿಕೆಗಳನ್ನೂ ತಿದ್ದಿ ಪರಿಷ್ಕರಿಸಲು ಬಾರದು. ಏಕೆಂದರೆ ಗ್ರಂಥದಲ್ಲಿರುವ ಒಟ್ಟು ೨೨ ಗೀತಿಕೆಗಳಲ್ಲಿ (M=4+MM=13+MMM=5) ಜಯಕೀರ್ತಿ ನಾಗವರ್ಮರು ಹೇಳಿರುವ ಗೀತಿಕೆಯ ಲಕ್ಷಣ ಅನ್ವಯಿಸುವ ಪದ್ಯಗಳು ಒಂದೆರಡು ಮಾತ್ರ-MMM ೧೦೮ ಮತ್ತು MMM ೨೧೭. ಡಾ|| ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು ಇವೆರಡನ್ನೂ ಪ್ರಸ್ತಾರ ಹಾಕಿ ಲಕ್ಷಣಾನುಗುಣವಾಗಿರುವುದನ್ನು ವಿವರಿಸಿದ್ದಾರೆ.[5] ಇಲ್ಲಿಯೂ ವಿಷ್ಣುರುದ್ರಗಳ ಬದಲು ಒಮ್ಮೊಮ್ಮೆ ಬ್ರಹ್ಮಗಣ ಬಂದಿರುವುದನ್ನು ಗಮನಿಸಿದ್ದಾರೆ. ಇವುಗಳಲ್ಲೂ ಎರಡನೆಯದು ಎಷ್ಟರಮಟ್ಟಿಗೆ ಕಂದದ ವಿಕೃತ ರೂಪವೋ ಎಂಬ ಸಂದೇಹ ನನಗಿನ್ನೂ ಉಳಿದೇ ಇದೆ. ಏಕೆಂದರೆ ಅವರ ಎರಡನೆಯ ಪಾದ.

ಸಂತತವೊಂದಾಗಿ ಪೇಳ್ದ ಕಾವ್ಯಂ ಧರೆಯೊಳ್

ಸಂಪೂರ್ಣವಾಗಿ ಕಂದದ ಎರಡನೆಯ ಪಾದಲಕ್ಷಣವನ್ನೇ ಪಡೆದಿದೆ. ಹಾಗೆಯೇ ನಾಲ್ಕನೆಯ ಪಾದವನ್ನು ಮೂರನೆಯ ಪಾದದ ಕಡೆಯ ಅಕ್ಷರವಾದ ‘ಕ’ದೊಂದಿಗೆ ಅರ್ಥಾನುಸಾರ ಸೇರಿಸಿ ಓದಿಕೊಂಡರೆ-

ಕಲ್ಪಾಂತಂಬರಮಮೋಘವರ್ಷಯಶಂಬೋಲ್ ||

ಅದೂ ಚಾಚು ತಪ್ಪದೆ ಕಂದದ ನಾಲ್ಕನೆಯ ಪಾದವೆಂದೇ ಒಡೆದುಕಾಣುತ್ತದೆ. ಗೀತಿಕೆಯ ಪಾದಾಂತ್ಯದಲ್ಲಿ

ಸಂತತಿ ಕೆಡದೆ ನಿಲ್ಕುಮಾಕ-

ಎಂದು ಯತಿಯಿಲ್ಲದೆ ಉಳಿಯುವುದೂ ಛಂದಸ್ಸಿಗೆ ಪೋಷಕವೆಂಬಂತಿಲ್ಲ. ಅಲ್ಪ ವ್ಯತ್ಯಾಸದಿಂದ ಇದೊಂದು ಪೂರ್ಣ ಕಂದವೇ ಆಗುತ್ತದೆ; ಈಗಿರುವ ಅರ್ಥಕ್ಲೇಶವೂ ಪರಿಹೃತವಾಗುತ್ತದೆ-

ಇಂತುರೆ ವರ್ಣನೆಯಿಂ

ಸಚಿತತಮೊಂದಾಗಿ ಪೇೞ್ದ ಕಾವ್ಯಂ ಧರೆಯೊಳ್ |

ಸಂತತಿಯಿಂ ನಿಲ್ಕುಂ ಕ

ಲ್ಪಾಂತಂಬರಮೆನಲಮೋಘವರ್ಷಯಶಂಬೋಲ್ ||

 

ಮೂಲದಲ್ಲಿರುವ ‘ಗೀತಿಕೆ’-

 

ಇಂತು ಮಿಕ್ಕ ವರ್ಣನೆಗಳ್

ಸಚಿತತಮೊಂದಾಗಿ ಪೇಳ್ದ ಕಾವ್ಯಂ ಧರೆಯೊಳ್ |

ಸಂತತಿ ಕೆಡದೆ ನಿಲ್ಕುಮಾಕ

ಲ್ಪಾಂತಂಬರಮಮೋಘವರ್ಷಯಶಂಬೋಲ್ || (III ೨೧೮)

ಆದರೆ ಇಷ್ಟು ಮಾರ್ಪಾಟನ್ನೂ ವಿದ್ವಾಂಸರು ಒಪ್ಪುವರೆನ್ನುವ ವಿಶ್ವಾಸವಿಲ್ಲದ್ದರಿಂದ ಈ ಗೀತಿಕೆಯಿರಲಿ, ತುಂಬಾ ನ್ಯೂನಾಕ್ಷರ ಆಧಿಕಾಕ್ಷರಗಳಿರುವ ಮಿಕ್ಕ ಗೀತಿಕೆಗಳನ್ನು ಲಕ್ಷಣಾನುಸಾರ ಮಾರ್ಪಡಿಸುವ ಸಾಹಸವನ್ನು ಕೈಬಿಟ್ಟಿದೆ; ಸಂಪಾದಕನು ಸಲ್ಲದ ಸ್ವಾತಂತ್ರ್ಯವನ್ನು ವಹಿಸಬಾರದೆಂಬ ಪರಿಜ್ಞಾನದಿಂದ.

ಒಮ್ಮೆ ಮಾತ್ರ ಒಂದೇ ಅಕ್ಷರಲೋಪದಿಂದ ಜಯಕೀರ್ತಿ-ನಾಗವರ್ಮರಿಂದ ಉಕ್ತವಾದ ಗೀತಿಕೆಯ ಲಕ್ಷಣ ಸಿದ್ಧಿಸುವಂತಿದ್ದ ಕಾರಣ, ಅರ್ಥಕ್ಕೆ ಬಾಧೆಯ ಬದಲು ಆ ಲೋಪದಿಂದ ಪುಷ್ಟಿಯೇ ಒದಗುವಂತಿದ್ದುದರಿಂದ ಆ ಪರಿಷ್ಕರಣವನ್ನಿಲ್ಲಿ ಮಾಡಲಾಗಿದೆ. ಅದೆಂದರೆ II ೪೬ನೆಯ ಪದ್ಯ-

೧ ರು  ೨ ಬ್ರ  ೩ ಬ್ರ (‘ವಿ’ ಬದಲು)

*ಅ*ೞ*ದು *ಪೀ*ನಂ | *ಮಾ*ರ್ಗ | *ಗ*ತಿ*ಯಂ

೪ ವಿ  ೫ ರು  ೬ ಬ್ರ ೭ ವಿ

*ತ*ೞ*ಸ*ಲ | *ಲಾ*ಗ*ದಾ*ರ್ಗಂ | *ಬ*ಹು*ವಿ | *ಕ*ಲ್ಪ*ದೊಳ್

೧ ರು  ೨ ಬ್ರ ೩ ವಿ

*ಕು*ೞ*ತು | *ಪೂ*ರ್ವ | *ಶಾ*ಸ್ತ್ರ | *ಪ*ದ*ವಿ*ಯಂ

೪ ವಿ  ೫ ಬ್ರ ೬ ಬ್ರ ೭ ರು

*ತೆ*ಱೆ*ದಿ*ರೆ | *ಪೇ*ೞ್ವೆ | *ನಿ*ನಿ*ಸಂ | *ಕ*ನ್ನ*ಡ*ದೊಳ್

ಇಲ್ಲಿ ‘ತಱ*ಸಲಾಗದಾರ್ಗಂ’ ಎಂಬುದಕ್ಕೆ ‘ತಱ*ಸಲಲಾಗದಾರ್ಗಂ’ ಎಂಬ ಅಲ್ಪ ಪರಿಷ್ಕಾರ ವ್ಯಾಕರಣಕ್ಕೂ ಛಂದಸ್ಸಿಗೂ ಹೆಚ್ಚು ಅನುಕೂಲವಾಗುತ್ತದೆ. ಹಾಗೆಯೇ ಇದ್ದರೂ ವಿಷ್ಣುಗಣದ ಬದಲು ಬ್ರಹ್ಮಗಣ ಬಂದು ಲಕ್ಷಣಕ್ಕೆ ಬಾಧಕವೇನೂ ಇಲ್ಲವೆನ್ನಬಹುದು. ಮದ್ರಾಸ್ ಆವೃತ್ತಿಯ ಸಂಪಾದಕರೂ ಪ್ರೊ. ಎಂ. ವಿ. ಸೀತಾರಾಮಯ್ಯನವರೂ ಮೂರನೆಯ ಸಾಲಿನ ಕಡೆಯ ಗಣ ‘ಪದವಿಯಂ’ ಎಂದು ಪಾಠಕರ ಆವೃತ್ತಿಯಲ್ಲಿದ್ದುದನ್ನು ತ್ಯಜಿಸಿ ‘ಪದವಿಧಿಯಂ’ ಎಂದು ಆಯ್ಕೆ ಮಾಡಿರುವುದು ಛಂದಸ್ಸಿಗೆ ಬಾಧಕವಲ್ಲದಿದ್ದರೂ ಅರ್ಥಪುಷ್ಟಿಗೆ ಸಾಧಕವಾಗಿಲ್ಲ. ಅರ್ಥಬಾಧೆಯಿಲ್ಲದಿದ್ದರೆ ಮದ್ರಾಸ್ ಅ ಪ್ರತಿಯ ಪಾಠವೆಂದು ಅದಕ್ಕೆ ಹೆಚ್ಚಿನ ಪುರಸ್ಕಾರ ಸಲ್ಲುತ್ತಿತ್ತು, ಪ್ರಾಚೀನತೆಯ ಕಾರಣದಿಂದ. ಆದರೆ ಇಲ್ಲಿ ‘ಪ್ರಾಸ’ ವಿಚಾರ ಮುಗಿದ ಬಳಿಕ ‘ಮಾರ್ಗ’ ವಿಚಾರಕ್ಕೆ ಪೀಠಿಕೆಯಾಗಿ ಬಂದಿರುವ ಈ ಪದ್ಯದಲ್ಲಿ ‘ಪದವಿಧಿ’ ಅಥವಾ ಪದಸಂಬಂಧಿಯಾದ ವ್ಯಾಕರಣ ನಿಯಮಗಳ (ಹೋಲಿಸಿ-“ಸಮರ್ಥ: ಪದವಿಧಿ:” -ಪಾಣಿನಿಸೂತ್ರ, II.ಜಿ.೧) ಪ್ರಸಕ್ತಿಯಿಲ್ಲ; ಪ್ರಸಕ್ತಿಯಿರುವುದೆಲ್ಲ ಸಮತೆ, ವಿಷಮತೆ, ಮಾಧುರ್ಯ ಮುಂತಾದ ಬಂಧ-ಗುಣಗಳಿಗೆ. ‘ಪೂರ್ವಶಾಸ್ತ್ರ’ದ ಎಂದರೆ ಹಿಂದಿನಿಂದ ಬಂದ ಕಾವ್ಯ ಲಕ್ಷಣಶಾಸ್ತ್ರದ ಪದವಿಯನ್ನು ‘ಕುಱ*ತು’ ಎಂದರೆ ಮಾರ್ಗವನ್ನು ಅನುಲಕ್ಷಿಸಿ ಎಂಬರ್ಥವೇ ಹೆಚ್ಚು ಸಂದರ್ಭೋಚಿತವಾಗುತ್ತದೆ.

ಆದರೆ ಮಿಕ್ಕ ಇಪ್ಪತ್ತು ತಥಾಕಥಿಕ “ಗೀತಿಕೆ”ಗಳಲ್ಲಿ ಹೀಗೆ ಲಕ್ಷಣಾನುಗುಣ್ಯ ಸಮೀಪವಾಗಿಲ್ಲ. ಉದಾಹರಣೆಗೆ ತ್ರುಟಿತವಾಗಿ ಉಪಲಬ್ಧವಿರುವ III ೨೨೬ ನ್ನು ನೋಡಿ :

ಪಾರ್ಥಿವ ಲೋಕನಪ್ಪನೆಂದುಂ ಕವಿ ವರ್ಣಿಕುಂ

ರು ೬ ಬ್ರ ೭ ವಿ

ಸಾರ್ಥಚಯಂ | *ನು*ತ *ಸ | *ರ*ಸ್ವ*ತೀ

೧ ವಿ  ೨ ಬ್ರ ೩ ಬ್ರ

*ತಿ*ರ್ಥಾ*ವ | *ತಾ*ರ | *ನೆ*ಸ*ಕಂ

*    *    *    *

ಇಲ್ಲಿ ಮೂರನೆಯ ಪಾದ ಲಕ್ಷಣಾನುಗುಣವಾಗಿದೆಯೆಂದುಕೊಂಡರೂ, ಎರಡನೆಯ ಪಾದದಲ್ಲಿ ಮೂರೇ ಗಣಗಳಿರುವುದರಿಂದ ಒಂದು ಗಣವೇ ನ್ಯೂನ; ಮೊದಲ ಪಾದದಲ್ಲಿ ಗೀತಿಕೆಯಲ್ಲಿರಬೇಕಾದ ಮೂರು ಗಣಗಳ ಮಿತಿಗೆ ತುಂಬಾ ಮೀರುವಷ್ಟು ಅಧಿಕಾಕ್ಷರಗಳಿವೆ. ಅರ್ಥಕ್ಕೂ ಕ್ಲೇಶವಿದೆ. ‘ಕವಿ ವರ್ಣಿಕುಂ’ ಎಂಬುದು ಹಿಂದಿನಿಂದ ಸೇರಿಸಿದ ಹಾಗೆ ತೊರುತ್ತದೆ. ಇದನ್ನು ಪರಿಸ್ಕರಿಸತೊಡಗಿದರೆ-

ವಿ ಬ್ರ ರು

ಪಾರ್ಥಿವ | ರೂಪ | ಹರಿಯೆನೆ ಕವಿ-

ಬ್ರ  ರು ಬ್ರ  ವಿ

ಸಾರ್ಥಂ  | ಶ್ರೀವಿಜಯ | ನುತ ಸ | ರಸ್ವತೀ

ವಿ ಬ್ರ ರು

ತೀರ್ಥಾವ | ತಾರ | ನೆಸೆವಂ |ಪರ

ಬ್ರ ವಿ ಬ್ರ ಎ

ಮಾರ್ಥಂ | ಕವಿರಾಜ | ಮಾರ್ಗ | ವಿಧಾತ್ರಂ

ಎಂದು ಮುಂತಾಗಿ ಸ್ವಕಲ್ಪನೆ ಸ್ವೇಚ್ಛೆಯಾಗಬಲ್ಲುದು. ಅದನ್ನಿಲ್ಲಿ ಉದ್ದೇಶಪೂರ್ವಕವಾಗಿ ಬಿಡಲಾಗಿದೆ, ಪ್ರೊ. ಎಲ್, ಬಸವರಾಜು ಲಕ್ಷಣಬದ್ಧತೆ ಇವುಗಳಿಗೆಲ್ಲ ಇರಲೇಬೇಕೆಂದು ಸೂಚಿಸಿದ್ದರು.[6] ಇದರಲ್ಲಿ ಅಡಕವಾಗಿರುವ ಮೂಲಭೂತ ಪ್ರಶ್ನೆ ಲಕ್ಷಣಗಳ ಅಜ್ಞತೆ ಅಥವಾ ಅಭಿಜ್ಞತೆಯಲ್ಲ; ಅತಿಸ್ತ*ತ ಮಾರ್ಪಾಟುಗಳ ಯುಕ್ತಾಯುಕ್ತಯೆಂಬುದನ್ನು ಮರೆಯುವಂತಿಲ್ಲ.