ಅತಿ ಹೆಚ್ಚು ಹಸಿರುಮನೆ ಅನಿಲಗಳನ್ನು ಬಿಡುಗಡೆಗೊಳಿಸುವ ಹತ್ತು ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆಯಾದರೂ ಇಲ್ಲಿನ ಜನಸಂಖ್ಯಾ ತಲಾವಾರು ಪ್ರಮಾಣ ನೋಡಿದಾಗ ಇದು ಕಡಿಮೆ ಪ್ರಮಾಣದಲ್ಲಿಯೇ ಇದೆ. ಪ್ರಸ್ತುತ ಇರುವ ಅನಿಲ ಬಿಡುಗಡೆ ಪ್ರಮಾಣವು ಭಾರತದಲ್ಲಿ ವಿಶ್ವದ ತಲಾವಾರು ಬಿಡುಗಡೆಗೊಳ್ಳುವ ಪ್ರಮಾಣಕ್ಕಿಂತ ೬ನೇ ಒಂದು ಭಾಗದಷ್ಟಿದೆ. ಭಾರತದ ರಾಷ್ಟ್ರೀಯ ಹಸಿರುಮನೆ ಅನಿಲ ಬಿಡುಗಡೆಗೊಳ್ಳುವ ಪ್ರಮಾಣದ ಅಂಕಿ ಸಂಖ್ಯೆ ಪಟ್ಟಿಯನ್ನು ರಾಷ್ಟ್ರೀಯ ಭೌತಿಕ ಪ್ರಯೋಗಶಾಲೆ (NPL) ಯು ಏಷಿಯ ಲೀಸ್ಟ್‌-ಕಾಸ್ಟ್‌ಗ್ರೀನ್‌ಹೌಸ್‌ಗ್ಯಾಸ್‌, ಅಬೇಟ್‌ಮೆಂಟ್‌ಸ್ಟ್ರಾಟೆಜಿ (ALGAS) ಪ್ರಾಯೋನೆಯ ಭಾಗವಾಗಿ IPCC ನಿಗದಿಪಡಿಸಿದ ವಿಧಾನದ ಕ್ರಮವನ್ನು ಅನುಸರಿಸಿ ಸಿದ್ಧಪಡಿಸಿದೆ. ಭಾರತದ ಒಟ್ಟು ಇಂಗಾಲದ ಡೈಆಕ್ಸೈಡ್‌ನ ಸಮಾನ ಬಗೆಯ  ಅನಿಲ ಬಿಡುಗಡೆಗಳು ೧೦,೦೧,೩೫೨ ಕಿ.ಗ್ರಾಂ ಎಂದು ಅಂದಾಜು ಮಾಡಲಾಗಿದೆ. ಇದು ವಿಶ್ವದ ಇಂಗಾಲದ ಡೈಆಕ್ಸೈಡ್‌ಗೆ ಸಮಾನ ಬಗೆಯ ಅನಿಲ ಬಿಡುಗಡೆಗಳ ಶೇ.೩ ರಷ್ಟು ಎಂದು ಕಂಡುಬಂದಿದೆ. ಇದನ್ನು ಆಧರಿಸಿ ೧೯೯೦ರಲ್ಲಿನ ತಲಾವಾರು ಇಂಗಾಲದ ಡೈಆಕ್ಸೈಡ್‌ಗೆ ಸಮಾನ ಬಗೆಯ ಅನಿಲ ಬಿಡುಗಡೆ ೧.೧೯೪ ಟನ್‌ಗಳು ಅಥವಾ ೩೨೫ ಕಿ.ಗ್ರಾಂ ಇಂಗಾಲದಷ್ಟು ಎಂದು ಅಂದಾಜು ಮಾಡಲಾಗಿದೆ. ಹೋಲಿಕೆಯಲ್ಲಿ ಜಪಾನ್‌ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ತಲಾವಾರು ಅನಿಲ ಬಿಡುಗಡೆಗಳು ಕ್ರಮವಾಗಿ ೨೪೦೦ ಮತ್ತು ೫೪೦೦ ಕಿ.ಗ್ರಾಂ ಇಂಗಾಲ ಎಂದು ಕಂಡುಬಂದಿದೆ. ಇದಲ್ಲದೆ, ಈ ಪ್ರಾಯೋಜನೆಯಡಿಯಲ್ಲಿ, ಹಸಿರುಮನೆ ಅನಿಲ ಬಿಡುಗಡೆಗಳ ಅಂದಾಜುಗಳಲ್ಲಿ ಅನಿರ್ದಿಷ್ಟ ಬಗೆಯ ಇಳಿತಾಯ, ದುರ್ಬಲಸ್ಥಿತಿಯ ಲೆಕ್ಕಾಚಾರ ಮತ್ತು ಹೊಂದಾಣಿಕೆ ತಂತ್ರಗಳು, ದತ್ತಾಂಶಗಳ ಸಂಗ್ರಹಣಾ ಕೇಂದ್ರದ ಸ್ಥಾಪನೆ, ಉದ್ದೇಶಿತ ಸಂಶೋಧನೆ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಾರಂಭಗಳನ್ನು ನಡೆಸಲಾಗುತ್ತದೆ. ಪರಿಸರ ಮತ್ತು ಅರಣ್ಯ ಸಚಿವಾಲಯವು (MoEF) ಈ ಪ್ರಾಯೋಜನೆಯನ್ನು ಕಾರ್ಯಾಚರಣೆಗೊಳಿಸುವ ಹಾಗೂ ಕಾರ್ಯನಿರ್ವಹಿಸುವ ನಿಯೋಗಿಯಾಗಿದ್ದು ಈ ಸಚಿವಾಲಯವು ಪ್ರಾಯೋಜನೆಯ ವಿವಿಧ ಕಾರ್ಯಗಳನ್ನು ವಿವಿಧ ರಾಷ್ಟ್ರೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಿ ವಹಿಸಿಕೊಟ್ಟಿದೆ.

.೧ ಭಾರತದ ಮೇಲೆ ಹವಾಮಾನ ವೈಪರೀತ್ಯ ಪರಿಣಾಮ

ಹವಾಮಾನ ವೈಪರೀತ್ಯವು ಕೃಷಿಯ ಮೇಲೆ ಬೀರುವ ಪರಿಣಾಮವು ಭವಿಷ್ಯತ್ತಿನಲ್ಲಿ ವಿಶ್ವದಲ್ಲಿನ ಮನುಕುಲದ ಆಹಾರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಪ್ರಧಾನ ಅಂಶಗಳಲ್ಲಿ ಒಂದಾಗಿದೆ. ತಾಪಮಾನ ಮತ್ತು ಮಳೆಬೀಳುವ ಪ್ರಮಾಣಗಳಲ್ಲಿ ವರ್ಷದಿಂದ ವರ್ಷಕ್ಕೆ ಆಗುತ್ತಿರುವ ವ್ಯತ್ಯಾಸಗಳು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಕಂಡುಬರುತ್ತಿವೆ. ನಿರೀಕ್ಷಿಸಿದ ಪ್ರಮಾಣದಲ್ಲಿ ಹವಾಮಾನ ವ್ಯತ್ಯಾಸಗಳು ಉಂಟಾಗುವುದಾದರೆ ಬೆಳೆ ನಷ್ಟಗಳೂ ಸಹ ಹೆಚ್ಚಾಗುವುದು ಖಚಿತವಾಗಿದೆ. ಜಾಗತಿಕ ತಾಪಮಾನ ಏರುವಿಕೆಯು ಸಂಮಿಶ್ರವಾದ ಪರಿಣಾಮವನ್ನು ಹೊಂದಿರುವುದರಿಂದ ವಿವಿಧ ಬೆಳೆಗಳು ವಿವಿಧ ಬಗೆಯಲ್ಲಿ ಪ್ರತಿಕ್ರಿಯಿಸುತ್ತವೆ. ತಂತ್ರಜ್ಞಾನಗಳು ಕಡಿಮೆ ಮಟ್ಟದಲ್ಲಿದ್ದು ಪೀಡೆಗಳು, ರೋಗಗಳು ಮತ್ತು ಕಳೆಗಳು ಬಹುದೊಡ್ಡ ಶ್ರೇಣಿಯಲ್ಲಿ ಕಂಡುಬರುತ್ತಿದ್ದು, ಭೂ ಶಿಥಿಲೀಕರಣ, ಅಸಮ ಬಗೆಯ ಭೂಹಂಚಿಕೆ ಮತ್ತು ಜನಸಂಖ್ಯಾ ಬೆಳವಣಿಗೆಗಳು ತೀವ್ರಗತಿಯಲ್ಲಿ ನಡೆಯುತ್ತಿರುವಾಗ ಉಷ್ಣವಲಯದ ಮೇಲಿನ ಯಾವುದೇ ಬಗೆಯ ಪರಿಣಾಮವೂ ಕೂಡ ಜನರ ಜೀವನಶಯಲಿಯ ಮೇಲೆಯೇ ಪರಿಣಾಮ ಬೀರಬಲ್ಲದಾಗಿದೆ. ಭಾರತ ದೊಡ್ಡ ದೇಶವಾಗಿರುವುದರಿಂದ, ವಿವಿಧ ಬಗೆಯ ಹವಾಮಾನ ಸ್ಥಿತಿಗಳಲ್ಲಿ ವ್ಯಾಪಕರೀತಿಯ ಬದಲಾವಣೆಗಳನ್ನು ಇಲ್ಲಿ ನೋಡಬಹುದಾಗಿದೆ. ಉತ್ತರದ ಭಾಗದಲ್ಲಿ ತೀವ್ರ ಚಳಿಗಾಲ, ದಕ್ಷಿಣದಲ್ಲಿ ಉಷ್ಣತಾಹವಾಮಾನ, ಪಶ್ಚಿಮ ಭಾಗದಲ್ಲಿ ಶುಷ್ಕ ಪ್ರದೇಶಗಳು, ಪೂರ್ವದಲ್ಲಿ ತೇವಾಂಶಭರಿತ ಹವಾಮಾನ, ತೀರಪ್ರದೇಶಗಳಲ್ಲಿ ಸಮುದ್ರದ ಹವಾಮಾನ ಹಾಗೂ ಒಳನಾಡಿನಲ್ಲಿ ಒಣ ಹವಾಮಾನ ಕಂಡುಬರುತ್ತದೆ. ಭಾರತದಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿ ಉತ್ಪಾದಕತೆಯ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿದ್ದು ದೇಶದಲ್ಲಿ ಆಹಾರ ಸುರಕ್ಷತೆಯನ್ನು ಸಾಧಿಸಲು ಶ್ರಮಿಸುತ್ತಿರುವ ಸಂಶೋಧಕರು ಮತ್ತು ಯೋಜನಾಕಾರರಿಗೆ ತಮ್ಮ ಕಾರ್ಯಕುಂಠಿತ ಗೊಳ್ಳುವ ಆತಂಕ ತಲೆದೋರಿದೆ. ೨೦೨೦ರ ಹೊತ್ತಿಗೆ ಭಾರತದಲ್ಲಿ ಆಹಾರ ಧಾನ್ಯಗಳ ಬೇಡಿಕೆ (ಮನುಷ್ಯರು ಮತ್ತು ಜಾನುವಾರುಗಳೂ ಸೇರಿದಂತೆ) ೩೦೦ ಮೆ.ಟನ್‌ಗಳಷ್ಟಾಗಬಹುದು. ಪ್ರತಿವರ್ಷ ಭಾರತದಲ್ಲಿ ಬೀಳುವ ಮುಂಗಾರು ಮಳೆ ಹೆಚ್ಚು ವಿಶಿಷ್ಟತೆಯನ್ನೇನೂ ತೋರುತ್ತಿಲ್ಲವಾದರೂ ಇದರ ಬಗ್ಗೆ ರಾಷ್ಟ್ರೀಯ ಮಾಧ್ಯಮದಲ್ಲಿ ಹೆಚ್ಚಿನ ಆಶಾದಾಯಕ ನಿರೀಕ್ಷೆ ಇರುತ್ತದೆ. ಇದಕ್ಕೆ ಕಾರಣ ದೇಶದಲ್ಲಿನ ಬಹಳಷ್ಟು ರಾಜ್ಯಗಳು ನೀರಾವರಿಗಾಗಿ ಮಳೆಯನ್ನೇ ಆಶ್ರಯಿಸಿವೆ. ಮಳೆ ಬೀಳುವ ಮಾದರಿಯಲ್ಲಿ ಏನೇ ಬದಲಾವಣೆಯಾದರೂ ಅದರ ಪರಿಣಾಮ ಕೃಷಿಯ ಮೇಲೆ ಆತಂಕಕಾರಿಯಾಗಿರುತ್ತದೆ. ತಾಪಮಾನ ಏರುತ್ತಾ ಹೋದಂತೆ, ೨೦೫೦ರ ಹೊತ್ತಿಗೆ ಪಶ್ಚಿಮ ಭಾರತದ ಅರೆ-ಶುಷ್ಕವಲಯಗಳಲ್ಲಿ ಸಾಮಾನ್ಯಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಮಳೆಬೀಳುವ ನಿರೀಕ್ಷೆ ಇದೆ ಹಾಗೂ ಮಧ್ಯಭಾರತದಲ್ಲಿ ಮಳೆಬೀಳುವಿಕೆಯಲ್ಲಿ ಶೇ. ೧೦ ರಿಂದ ೨೦ ರಷ್ಟು ಇಳಿಮುಖವಾಗಲಿದೆ. ೨೦೨೦ರ ಹೊತ್ತಿಗೆ ಹಿಂಗಾರಿನಲ್ಲಿ ೧ ರಿಂದ ೧.೫ ಡಿಗ್ರಿ ಸೆ.ವರೆಗೆ ಉಷ್ಣಾಂಶ ಹೆಚ್ಚಳ ಹಾಗೂ ಮುಂಗಾರಿನಲ್ಲಿ ೦.೮೭ ರಿಂದ ೧.೧೨ ಡಿಗ್ರಿ ಸೆ.ವರೆಗೆ ಉಷ್ಣಾಂಶ ಹೆಚ್ಚಳ ಆಗುವುದಲ್ಲದೆ ಇದರ ಪರಿಣಾಮವಾಗಿ ಮಳೆಬೀಳುವ ಪ್ರಮಾಣದಲ್ಲೂ ವ್ಯತ್ಯಾಸಗಳಾಗಲಿವೆ. ೨೦೮೦ರ ಹೊತ್ತಿಗೆ, ಹಿಂಗಾರಿನಲ್ಲಿ ೪ ರಿಂದ ೬.೩ ಡಿಗ್ರಿ ಸೆ. .ಹಾಗೂ ಮುಂಗಾರಿನಲ್ಲಿ ೨.೯ ರಿಂದ ೪.೬ ಡಿಗ್ರಿ ಸೆ.ವರೆಗೆ ತಾಪಮಾನ ಏರಿಕೆಯನ್ನು ಕಾಣಲಿದ್ದೇವೆ.

ಇತ್ತೀಚೆಗೆ ಉಂಟಾದ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಸಂಭವಿಸಿದ ವಿಕೋಪಗಳಿಂದಾಗಿ ಭಾರತದ ಆಹಾರೋತ್ಪಾದನಾ ಸ್ವಾವಲಂಬನೆ ಮತ್ತು ಅದರ ಸುಸ್ಥಿರತೆಗಳು ಆತಂಕದ ಸ್ಥಿತಿಯಲ್ಲಿವೆ. ಭಾರತದ ಶೇ. ೪೩ ರಷ್ಟು ಭೌಗೋಳಿಕ ಪ್ರದೇಶವು ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಕೃಷಿ ಚಟುವಟಿಕೆಯು ಭಾರತದ ಜಿಡಿಪಿಗೆ ಶೇ. ೩೩ ರಷ್ಟು ಭಾಗಕ್ಕೆ ಕಾರಣವಾಗಿದ್ದು ದೇಶದ ಜನಸಂಖ್ಯೆಯ ಶೇ. ೬೨ರಷ್ಟು  ಭಾಗ ಇದರಲ್ಲಿ ಕಾರ್ಯನಿರತವಾಗಿದೆ. ದೇಶದ ಬೆಳೆ ಪ್ರದೇಶಗಳ ಮೂರನೇ ಒಂದು ಭೂಭಾಗ ಇದರಲ್ಲಿ ಕಾರ್ಯನಿರತವಾಗಿದೆ. ದೇಶದ ಬೆಳೆ ಪ್ರದೇಶಗಳ ಮೂರನೇ ಒಂದು ಭೂಭಾಗ ಮಾತ್ರ ನೀರಾವರಿಯಲ್ಲಿದ್ದು ಮಳೆಯಾಶ್ರಿತ ಕೃಷಿಯೇ ಭಾರತದ ಆರ್ಥಿಕತೆಯ ಕೇಂದ್ರ ಬಿಂದುವಾಗಿದೆ. ಸುಧಾರಿತ ಬೆಳೆ ತಳಿಗಳು ಹಾಗೂ ನೀರಾವರಿ ಪದ್ಧತಿಗಳಲ್ಲಿ ಹೊಸ ತಾಂತ್ರಿಕತೆಗಳು ಪ್ರಚಲಿತಕ್ಕೆ ಬಂದಿರುವುವಾದರೂ ಕೂಡ ಹವಾಮಾನ ಮತ್ತು ವಾಯುಗುಣಗಳು ಭಾರತದ ಕೃಷಿ ಉತ್ಪಾದಕತೆ ಹಾಗೂ ರಾಷ್ಟ್ರೀಯ ಪ್ರಗತಿಯಲ್ಲಿ ಇನ್ನೂ ಸಹ ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಭಾರತದ ವಾರ್ಷಿಕ ಮಳೆ ಪ್ರಮಾಣದ ಮುಕ್ಕಾಲುವಾಸಿ ಭಾಗಕ್ಕೆ ಆಧಾರಮೂಲವಾದ ನೈರುತ್ಯ ಮುಂಗಾರು ಮಳೆಯೇ ರಾಷ್ಟ್ರದ ಬೆಳೆ ಉತ್ಪಾದನೆ ಮತ್ತು ಆರ್ಥಿಕತೆಯನ್ನು ನಿರ್ಣಯಗೊಳಿಸುವ ಮುಖ್ಯ ಅಂಶವಾಗಿದೆ. ಇತ್ತೀಚೆಗೆ ಸಂಭವಿಸುತ್ತಿರುವ ಹವಾಮಾನ ವೈಪರೀತ್ಯಗಳಿಂದಾಗಿ ವರ್ಷ ವರ್ಷಕ್ಕೆ ಮುಂಗಾರು ಮಳೆ ಬೀಳುವಿಕೆಯ ಪ್ರಮಾಣ ಮತ್ತು ಅವಧಿಗಳೆರಡರ ಮೇಲೂ ಪರಿಣಾಮ ಬೀರಿ ವ್ಯತ್ಯಾಸಗಳುಂಟುಮಾಡುತ್ತಿರುವುದು ನೆರೆ, ಪ್ರವಾಹ ಮತ್ತು ಬರಗಾಲಗಳಿಗೆ ಹಾಗೂ ಕೆಲವು ವಿಕೋಪದ ಸ್ಥಿತಿಗಳಿಗೆ ಕಾರಣವಾಗಿ ಬೆಳೆನಷ್ಟ ಮತ್ತು ನೀರಿನ ಕೊರತೆಗಳುಂಟಾಗಿವೆ. ಕಳೆದ ಕೆಲವು ದಶಕಗಳಲ್ಲಿ ಕಂಡುಬಂದಂತೆ ಮಾನವ ಚಟುವಟಿಕೆಗಳು ಹೆಚ್ಚಾದಂತೆಲ್ಲ ವಿಶ್ವದಾದ್ಯಂತ ವಿಶಿಷ್ಟ ಬಗೆಯ ಹವಾಮಾನ ವೈಪರೀತ್ಯಗಳುಂಟಾಗುತ್ತಿವೆ. ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನಗಳಿಂದಾಗಿ ವಾಣಿಜ್ಯ ಪ್ರಾಮುಖ್ಯತೆಯುಳ್ಳ ಸಮುದ್ರದ ಮೀನುಗಳ ಲಭ್ಯತೆ ಮತ್ತು ಅವುಗಳ ಸಂತತಿ ಅಭಿವೃದ್ಧಿ ಪ್ರಕ್ರಿಯೆಗಳು ಕೂಡ ಆತಂಕಕ್ಕೊಳಗಾಗಿದ್ದು ಅವುಗಳ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ.

.೨ ಭಾರತದಲ್ಲಿ ಹವಾಮಾನ ವೈಪರೀತ್ಯದ ಮುನ್ಸೂಚನೆಗಳು

ಭಾರತದ ಉಪಖಂಡದಲ್ಲಿ ಉಂಟಾಗಬಹುದಾದ ಹವಾಮಾನ ವೈಪರೀತ್ಯದ ಮುನ್ಸೂಚನೆಗಳ ಮಾಹಿತಿಯನ್ನು ಕೋಷ್ಟಕ ೧ ರಲ್ಲಿ ಕೊಡಲಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಭಾರತ ಉಪಖಂಡದ ತಾಪಮಾನ ಏರಿಕೆಯು ೨೦೮೦ರ ಹೊತ್ತಿಗೆ ೩.೫ ರಿಂದ ೫.೫ ಡಿಗ್ರಿ ಸೆ. ಶ್ರೇಣಿಯಲ್ಲಿ ಆಯಾ ಪ್ರದೇಶದ ವಾರ್ಷಿಕ ಸರಾಸರಿ ಮೇಲ್ಮೈ ತಾಪಮಾನ ಹೆಚ್ಚಳವನ್ನು ಸೂಚಿಸುತ್ತದೆ. ಈ ಮುನ್ಸೂಚನೆಗಳು ಬೇಸಿಗೆಗಿಂತ ಚಳಿಗಾಲದಲ್ಲಿ ಹೆಚ್ಚಿನ ತಾಪಮಾನ ಹೆಚ್ಚಳವನ್ನು ಸೂಚಿಸುತ್ತವೆ. ಈ ಮೇಲ್ಮೈ ತಾಪಮಾನ ಏರಿಕೆಗಳು ಆಯಾ ಪ್ರಾದೇಶಿಕ ಪರಿಸರಗಳಲ್ಲಿ ಪ್ರಸರನೆಯಾಗುತ್ತಿರುವುದನ್ನು ನೋಡಿದರೆ ೨೦೫೦ರ ಹೊತ್ತಿಗೆ ಉತ್ತರ ಭಾರತದ ಭೂಮೇಲ್ಮೈ ತಾಫಮಾನ ಏರಿಕೆಯಲ್ಲಿ ಸರಾಸರಿ ೩ ಡಿಗ್ರಿ ಸೆ.ನಷ್ಟು ವಾರ್ಷಿಕವಾಗಿ ಹೆಚ್ಚಳವಾಗಲಿದೆ. ಮಳೆಬೀಳುವಿಕೆ ಪ್ರಮಾಣದಲ್ಲಿ ವಾರ್ಷಿಕವಾಗಿ ಶೇ. ೭ ರಿಂದ ೧೦ರಷ್ಟು ಪ್ರಮಾಣದ ಹೆಚ್ಚಳವನ್ನು ನಮ್ಮ ದೇಶದಲ್ಲಿ ೨೦೮೦ರ ಹೊತ್ತಿಗೆ ಕಾಣಬಹುದಾಗಿದೆ.

ಜಲಸಂಪನ್ಮೂಲಗಳು

 

ಹವಾಮಾನ ವೈಪರೀತ್ಯಗಳಿಂದಾಗಿ ನಮ್ಮ ಉಪಖಂಡದಲ್ಲಿನ ಜಲಸಂಪನ್ಮೂಲಗಳು ಹೆಚ್ಚು ಹೆಚ್ಚು ಒತ್ತಡಕ್ಕೆ ಗುರಿಯಾಗಲಿವೆ. ಪ್ರಸ್ತುತ, ದೇಶದ ಸರಾಸರಿ ವಾರ್ಷಿಕ ಮಳೆಪ್ರಮಾಣದಲ್ಲಿ ಮಳೆ ಮತ್ತು ಹಿಮಪಾತವು ಸೇರಿದಂತೆ ಒಟ್ಟಾಗಿ ಸಮುದ್ರಕ್ಕೆ ಹರಿದುಹೋಗುವ ಮೂಲಕ ಶೆ. ೪೫ ಭಾಗಕ್ಕಿಂತ ಹೆಚ್ಚು ನಷ್ಟವಾಗುತ್ತಿದೆ. ಈ ನಷ್ಟವನ್ನು ತಡೆಗಟ್ಟಲು ಮಳೆನೀರನ್ನು ಸಂಗ್ರಹಿಸುವ ಯೋಜನೆಗಳನ್ನು ಅನುಸರಿಸಿ ದೇಶದಲ್ಲಿ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಗಳನ್ನು ಮಳೆಬೀಳುತ್ತಿರುವ ವಾರ್ಷಿಕ ಪ್ರಮಾಣವನ್ನು ಆಧರಿಸಿ ವಿನ್ಯಾಸಗೊಳಿಸುವ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಾಗಿದೆ. ಈ ಯೋಜನೆಗಳು ಯಶಸ್ವಿಯಾಗಬೇಕಾದರೆ, ಮುಂಬರುವ ಹವಾಮಾನ ವೈಪರೀತ್ಯಗಳು ಯಾವ ರೀತಿಯಲ್ಲಿ ನಮ್ಮ ದೇಶದ ನದೀ ತೀರದ ಪ್ರದೇಶಗಳ ಮೇಲೆ ಹಾಗೂ ವಿವಿಧ ಕೃಷಿ ಹವಾಮಾನ ಪ್ರದೇಶಗಳಲ್ಲಿನ ಉಷ್ಣಾಂಶ, ಮಳೆ ತೀವ್ರತೆ, ವಾಯು ಪರಿಸರ ಮತ್ತು ಉಷ್ಣಾಂಶಗಳಲ್ಲಿ ಮಳೆ ಬೀಳುವಿಕೆಯಿಂದ ಉಂಟಾಗುವ ವ್ಯತ್ಯಾಸಗಳು ಮತ್ತು ಆವೀಕರಣದ ಪ್ರಮಾಣಗಳ ಮೇಲೆ ಪರಿಣಾಮ ಬೀರಬಲ್ಲವು ಹಾಗೂ ಅದರಿಂದ ಯಾವ ಬಗೆಯ ವ್ಯತ್ಯಾಸಗಳುಂಟಾಗಬಹುದೆಂಬ ಬಗ್ಗೆ ನಮ್ಮ ಚಿಂತನೆಗಳನ್ನು ಕೇಂದ್ರೀಕರಿಸಬೇಕಾಗಿದೆ.

.೩ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮುಂಗಾರು ಮಳೆ ಮತ್ತು ಆಹಾರ ನಮ್ಮ ಕೈತಪ್ಪಿ ಹೋಗುತ್ತವೆಯೇ?

ಒಂದು ರೀತಿಯಲ್ಲಿ ಜಾಗತಿಕ ತಾಪಮಾನ ಏರುವಿಕೆಯ ಪರಿಣಾಮವಾಗಿ ಮುಂದಿನ ವರ್ಷದ ಜೂನ್‌೧ಕ್ಕೆ ಎಂದಿನಂತೆ ಕೇರಳದ ತೀರ ಪ್ರದೇಶಗಳಲ್ಲಿ ಸುರಿದು ಬೀಳುವ ಮುಂಗಾರು ಮಳೆ ಕಾಣದಂತಾಗುವುದು ಸ್ವಾಗತಾರ್ಹವೇ ಸರಿಯಾದರೂ ಈ ಮಳೆ ಬಾರದಿರುವುದರಿಂದ ಕೆಲವು ಬೆಳೆಗಳೂ ಸಹ ಬೆಳೆಯದಂತಾಗಿ ಮಾರುಕಟ್ಟೆಯಲ್ಲಿ ಅವು ಸಿಗದೇ ಹೋಗುವುದು ದುರಾದೃಷ್ಟವಾಗಬಹುದು. ಭವಿಷ್ಯತ್ತಿನ ಇಂತಹ ಒಂದು ನೋಟವು, ಬ್ರಿಟಿಷ್‌ಅರ್ಥಶಾಸ್ತ್ರಜ್ಞ ಸರ್ ನಿಕೊಲಾಸ್‌ಸ್ಟರ್ನ್‌ಪ್ರಕಾರ ನಮಗೆ ಎಚ್ಚರಿಕೆ ನೀಡುವಂತಿದೆ. ಭಾರತದ ಅತಿದೊಡ್ಡ ಜಲಸಂಪನ್ಮೂಲವಾಗಿರುವ ಮುಂಗಾರು ಮಳೆಯು, ಜಾಗತಿಕ ತಾಪಮಾನದ ಏರುವಿಕೆಯಿಂದ ಹಿಮಾಲಯದಲ್ಲಿ ಉಂಟಾಗುತ್ತಿರುವ ನೀರ್ಗಲ್ಲುಗಳು ಮತ್ತು ಹಿಮದ ಗಡ್ಡೆಗಳ ಕರಗುವಿಕೆಗಳಿಂದಾಗಿ ಆತಂಕದ ಸ್ಥಿತಿಗೆ ಗುರಿಯಾಗಲಿದೆ. ದೇಶದಲ್ಲಿನ ಜಲಾಶಯಗಳು ಮತ್ತು ಅಂತರ್ಜಲ ವ್ಯವಸ್ಥೆಗಳು ತುಂಬಿಕೊಳ್ಳಲು ಪ್ರತಿ ವರ್ಷ ಜೂನ್‌-ಸೆಪ್ಟೆಂಬರ್ ಗಳಲ್ಲಿ ಬರುವ ಮುಂಗಾರು ಮಳೆಯನ್ನೇ ನಾವು ಆಧರಿಸಿದ್ದೇವೆ. ಭಾರತದಲ್ಲಿನ ಒಟ್ಟು ಮಳೆ ಪ್ರಮಾಣದಲ್ಲಿ ಮುಂಗಾರು ಮಳೆಯದೇ ಮುಖ್ಯಭಾಗವಾಗಿದ್ದು ಕುಡಿಯುವ ನೀರು ಮತ್ತು ಇತರ ಫಾರ್ಮ್ ಅಗತ್ಯತೆಗಳನ್ನು ಪೂರೈಸುವ ಮೂಲವಾಗಿದೆ. ಯಾವುದೇ ಬಗೆಯ ಹವಾಮಾನ ವೈಪರೀತ್ಯವೂ ನಮ್ಮ ಫಾರ್ಮ್ ಹುಟ್ಟುವಳಿಯನ್ನೇ ನಾಶಪಡಿಸಬಹುದಾಗಿದೆ. ಮಳೆಪ್ರಮಾಣ ಹೆಚ್ಚಾಗಲಿ ಕಡಿಮೆಯಾಗಲಿ ಇಡೀ ಭಾರತದಲ್ಲಿನ ಬೆಳೆಗಳನ್ನು ಆತಂಕಕ್ಕೀಡುಮಾಡುವುದು ಖಂಡಿತ. ಮುಖ್ಯವಾಗಿ ದೇಶದ ಬಡವರ್ಗವು ಕೃಷಿಯ ಮೇಲೆಯೇ ನಿರ್ದಿಷ್ಟವಾಗಿ ಅವಲಂಬಿಸಿದೆ. ಜನರ ಬಡತನದ ಮೇಲೆ ಇದರ ಪರಿಣಾಮ ತೀವ್ರವಾದುದು. ದೇಶದ ನೀರಾವರಿ ವ್ಯವಸ್ಥೆಯ ನಿರ್ವಹಣೆ ಹಾಗೂ ಮುಂಗಾರು ಮಳೆಯಲ್ಲಿ ಉಂಟಾಗುತ್ತಿರುವ ವ್ಯತ್ಯಾಸಗಳನ್ನು ಗಮನಿಸಿದಾಗ ಇದರಿಂದ ಇಡೀ ದೇಶದ ಜನಸಂಖ್ಯೆಯ ಅತಿದೊಡ್ಡ ಭಾಗವೇ ತೀವ್ರ ಆತಂಕಕ್ಕೆ ಒಳಗಾಗಲಿದೆ. ಆದ್ದರಿಂದಲೇ ಹವಾಮಾನ ವೈಪರೀತ್ಯಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸುವುದು ಅತ್ಯಂತ ಮುಖ್ಯವಾಗಿದೆ. ಸ್ಟರ್ನ್ ಪ್ರಕಾರ, ಅಭಿವೃದ್ಧಿಶೀಲ ರಾಷ್ಟ್ರಗಳು ೨೦೫೦ರ ಹೊತ್ತಿಗೆ ತಲೆದೋರಲಿರುವ ಕ್ಷಾಮಪರಿಸ್ಥಿತಿ, ಹವಳ ದಿಬ್ಬಗಳ ವಿನಾಶ ಹಾಗೂ ನೀರ್ಗಲ್ಲುಗಳು ಕಣ್ಮರೆಯಾಗುತ್ತಿರುವ ಪರಿಸ್ಥಿತಿಗಳನ್ನು ಮನಗಂಡು ತೈಲ ಮತ್ತು ಕಲ್ಲಿದ್ದಲಿನ ಉರಿಯುವಿಕೆಗಳಿಂದ ಬಿಡುಗಡೆಯಾಗುತ್ತಿರುವ ಅನಿಲಗಳನ್ನು ಶೇ. ೬೦ ರಿಂದ ೮೦ ರಷ್ಟು ಕಡ್ಡಾಯವಾಗಿ ಕಡಿಮೆ ಮಾಡಬೇಕಾಗಿದೆ. ಹವಾಮಾನ ವೈಪರೀತ್ಯವು ವಿಶ್ವದ ಒಟ್ಟು ಆಹಾರ ಉತ್ಪನ್ನಗಳ ಇಂದಿನ ಬೆಲೆಯಲ್ಲಿ ೯.೬ ಶತಲಕ್ಷ ಡಾಲರ್ ಅಂದರೆ ಶೇ. ೨೦ ರಷ್ಟು ನಷ್ಟಕ್ಕೆ ಗುರಿಮಾಡಲಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಮುಂಗಾರಿನ ಮಳೆಪ್ರಮಾಣದಲ್ಲಿ ಅನಿರ್ದಿಷ್ಟಬಗೆಯ ವ್ಯತ್ಯಾಸಗಳುಂಟಾಗಿವೆ. ಇದರಿಂದ ನೀರು ನಿರ್ವಹಣೆಯೂ ಸಹ ವ್ಯತ್ಯಾಸಗೊಂಡಿರುತ್ತದೆ. ಈ ವ್ಯತ್ಯಾಸಗಳುಂಟಾದ ಪ್ರದೇಶಗಳಲ್ಲಿ ನೀರಿನ ಪೂರೈಕೆಗೆ ಧಕ್ಕೆಯಾಗಿದ್ದು ಗ್ರಾಮೀಣ ಪ್ರದೇಶಗಳು ನೀರು ಪೂರೈಕೆ ವ್ಯವಸ್ಥೆ ಆತಂಕಕ್ಕೆ ಗುರಿಯಾಗಿದೆ. ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಹೆಚ್ಚು ಸಮರ್ಥಗೊಳಿಸಬೇಕಾಗಿದೆ.

ನಿರೀಕ್ಷಿಸಲಾಗಿರುವ ಹವಾಮಾನ ವೈಪರೀತ್ಯಗಳಲ್ಲಿ ಕೆಲವು ಮಾತ್ರ ಪರಿಸರೀಯವಾಗಿ ಹಾಗೂ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಮೇಲೆ ಉಪಯುಕ್ತ ಹಾಗೂ ಆತಂಕಕಾರಿ ಎರಡೂ ಬಗೆಯ ಪರಿಣಾಮಗಳನ್ನು ಹೊಂದಿರುವವಾದರೂ ಕೂಡ ಹೆಚ್ಚಿನ ವೈಪರೀತ್ಯಗಳು ಹೆಚ್ಚು ಆತಂಕಕಾರಿ ಪರಿಣಾಮಗಳನ್ನೇ ಹೊಂದಿರುತ್ತವೆ. ಭಾರತದಲ್ಲಿ ಉಂಟಾಗಬಹುದಾದ ವೈಪರೀತ್ಯಗಳ ಸೂಚನೆಗಳ ಪ್ರಕಾರ ತಾಪಮಾನ ಏರುವಿಕೆಯು ಹಿಂಗಾರಿಗಿಂತ ಮುಂಗಾರಿನ ಮಳೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹಿಂಗಾರಿನ ಮಳೆಸೂಚನೆ ತೀರ ಅನಿರ್ದಿಷ್ಟವಾಗಿದ್ದು ಮುಂಗಾರಿನ ಮಳೆಯು ಶೆ. ೧೦ ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಳೆ ನಿರ್ವಹಣೆಯ ಹಲವಾರು ಹಂತಗಳು ಉದಾಹರಣೆಗೆ, ರಸಗೊಬ್ಬರ, ನೀರುನಿರ್ವಹಣೆ ಮುಂತ೫ಆದವುಗಳ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳು ಕಾಣುತ್ತವೆ. ಜಲಾನಯನ ಅಭಿವೃದ್ಧಿ ಮೂಲಕ ಮಳೆ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ನೀರಿನ ಲಭ್ಯತೆಯನ್ನು ಹೆಚ್ಚಿಸುವಿಕೆ ಮತ್ತು ನೀರಿನ ಬಳಕೆ ಸಾಮರ್ಥ್ಯ ಹೆಚ್ಚಿಸುವಿಕೆಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ. ನಾವು ಎದುರಿಸುತ್ತಿರುವ ಸಮಸ್ಯೆಯ ಬೃಹತ್ತತೆ ಎಷ್ಟೆಂದರೆ ಎಲ್ಲಕ್ಕೂ ಒಂದು ಸಮಾನ ಪರಿಹಾರ ಇಲ್ಲವಾಗಿದ್ದು ಹಲವು ಬಗೆಯ ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸ್ಥೂಲವಾಗಿ ಈ ಕ್ರಮಗಳನ್ನು ನಾಲ್ಕು ವರ್ಗವಾಗಿ ವಿಂಗಡಿಸಬಹುದು.

ಮೊದಲನೆಯದಾಗಿ, ನಾವು ಬದಲಾವಣೆಗೆ ಹೊಂದಿಕೊಳ್ಳಬಹುದು: ನೆರೆಹಾವಳಿ ಪ್ರದೇಶಗಳಲ್ಲಿ ಕಟ್ಟಡಗಳನ್ನು ಕಟ್ಟುವುದನ್ನು ನಿಲ್ಲಿಸಬೇಕು; ತೀರಪ್ರದೇಶಗಳ ರಕ್ಷಣೆ ಕ್ರಮಗಳು ಮತ್ತು ಪ್ರವಾಹ ಸಂರಕ್ಷಣೆ ಕ್ರಮಗಳ ಬಗ್ಗೆ ಚಿಂತಿಸಲು ಪ್ರಾರಂಭಿಸಬೇಕು, ಅದರಲ್ಲಿ ಕೆಲವು ನೆರೆ ಪೀಡಿತ ಪ್ರದೇಶಗಳನ್ನು ಕೈಬಿಡಲೇಬೇಕಾಗಿದ್ದು ಅಂತಹವುಗಳನ್ನು ಗುರುತಿಸಬೇಕು. ಹಾಲೆಂಡ್‌ನಲ್ಲಿ, ನಾಲ್ಕನೇ ಒಂದು ಭಾಗ ಭೂಪ್ರದೇಶವು ಸಮುದ್ರಮಟ್ಟದಿಂದ ಕೆಳಗಿದ್ದು ಇಲ್ಲಿ ಆಯಾಕಾಲಗಳಲ್ಲಿ ನೆರೆಹಾವಳಿ ಬರುವ ಪ್ರದೇಶಗಳಲ್ಲಿ ತೇಲುವ ಮನೆಗಳನ್ನು ನಿರ್ಮಿಸುವಂತೆ ಈಗಾಗಲೇ ಯೋಜಿಸಲಾಗಿದೆ.

ಎರಡನೆಯದಾಗಿ, ನಾವು ವಿನಾಕಾರಣ ಬಳಸುತ್ತಿರುವ ಹೆಚ್ಚಿನ ಇಂಧನ ಬಳಕೆಗಳನ್ನು ಕಡಿಮೆಮಾಡುವ ಮೂಲಕ ಇಂಗಾಲದ ಡೈಆಕ್ಸೈಡ್‌ನ ಉತ್ಪಾದನೆಯನ್ನು ಕಡಿಮೆಮಾಡಬಹುದು. ಉದಾಹರಣೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಸಂಯುಕ್ತ ರಾಜ್ಯಗಳೆರಡರಲ್ಲೂ ನಡೆಸಲಾಗಿರುವ ಅಧ್ಯಯನಗಳ ಪ್ರಕಾರ, ಅಗತ್ಯ ಜೀವನ ಮಟ್ಟಗಳಿಗೆ ತೊಂದರೆಯಾಗದಂತೆ ನಮ್ಮ ವಸತಿ ಗೃಹಗಳಲ್ಲಿ ಬಳಸುತ್ತಿರುವ ಇಂಧನ ಶಕ್ತಿಗಳಲ್ಲಿ ಅರ್ಧದಷ್ಟು ಉಳಿತಾಯ ಮಾಡುವಂತೆ ವಾಸದ ಮನೆಗಳನ್ನು ವಿನ್ಯಾಸಗೊಳಿಸಬೇಕಾಗಿದೆ.

ಮೂರನೆಯದಾಗಿ, ಪಳೆಯುಳಿಕೆ ಇಂಧನಗಳ ದಹನದಲ್ಲಿ ಬಿಡುಗಡೆಗೊಳ್ಳುವ ಇಂಗಾಲದ ಡೈಆಕ್ಸೈಡ್‌ಅನ್ನು ಮೂಲದಲ್ಲಿಯೇ ಬಂಧಿತಗೊಳಿಸಿ, ಭೂಮಿಯೊಳಗೆ ಅಥವಾ ಸಮುದ್ರದ ಆಳದಲ್ಲಿ ಹೂಳುವುದರಿಂದ ತಟಸ್ಥಗೊಳಿಸಬೇಕಾಗಿದೆ.

ನಾಲ್ಕನೆಯದಾಗಿ, ನಾವು ಹಸಿರುಮನೆ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆಮಾಡದಂತಹ ಹಾಗೂ ಪುನರ್ ನವೀಕರಿಸಬಲ್ಲಂತಹ ಇಂಧನಗಳನ್ನು ಬಳಸಬೇಕು. ಇವುಗಳೆಂದರೆ ಭೂಉಷ್ಣತೆ, ಗಾಳಿ, ತರಂಗ ಮತ್ತು ಜಲಶಕ್ತಿ; ಭೌತಶಾಸ್ತ್ರ ಆಧಾರಿತ ಅಥವಾ ರಸಾಯನಶಾಸ್ತ್ರ ಆಧಾರಿತ ಉಪಕರಣಗಳಿಂದ ಸೌರಶಕ್ತಿ; ವಿಘಟಿಸುವಿಕೆ (fission) ಇದು ಪ್ರಸ್ತುತ ವಿಶ್ವದಲ್ಲಿನ ಒಟ್ಟು ಇಂಧನ ಶಕ್ತಿಯ ಶೇ. ೭ ಭಾಗ ಉತ್ಪಾದನೆ ಮಾಡುತ್ತಿದ್ದು ಇದರಲ್ಲಿನ ಸಮಸ್ಯೆಗಳ ಸಹಿತವಾಗಿಯೂ ಇದು ಮಾಧ್ಯಮಿಕ ಸ್ಥಿತಿಯಲ್ಲಿ ಖಂಡಿತವಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ಸಂಯೋಗತೆ: ಒಂದು ವಾಸ್ತವಿಕ ದೀರ್ಘಾವಧಿ ಸಾಧ್ಯತೆ; ಜೈವಿಕರಾಶಿ ಇದರಲ್ಲಿ ವಾತಾವರಣಕ್ಕೆ ಬಿಡುಗಡೆಯಾಗುವಷ್ಟು ಇಂಗಾಲದ ಡೈಆಕ್ಸೈಡ್‌ಅನ್ನು ಈ ಇಂಧನ ಸಸ್ಯಗಳನ್ನು ಬೆಳೆಸುವಾಗ ಅವು ಅಷ್ಟೇ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ನ್ನು ಬಳಸಿಕೊಂಡಿರುತ್ತವೆ ಎಂದು ಭಾವಿಸಬೇಕು.

.೪ ಹೊಂದಾಣಿಕೆ ಕ್ರಮಗಳು

ಪ್ರವಾಹಗಳಿಗೆ

 • ನಿಯಂತ್ರಿತ ಅಣೆಕಟ್ಟುಗಳನ್ನು ನಿರ್ಮಿಸಿ ನೀರಿನ ಸಂಗ್ರಹಗಳನ್ನು ಹೆಚ್ಚಿಸುವುದು.
 • ನದೀದಂಡೆಗಳನ್ನು ಬಲಪಡಿಸುವುದು
 • ಮುಂಚಿತವಾದ ಎಚ್ಚರಿಕೆ/ಮುನ್ಸೂಚನೆಗಳನ್ನು ಬಿತ್ತರಿಸುವ ವ್ಯವಸ್ಥೆಮಾಡುವಿಕೆ
 • ಸುಧಾರಿತ ಚರಂಡಿ ವ್ಯವಸ್ಥೆ
 • ಉತ್ತಮ ಬೆಳೆ ಮತ್ತು  ಮಣ್ಣು ನಿರ್ವಹಣಾ ವ್ಯವಸ್ಥೆಗಳು
 • ವಿಮೆ
 • ಸಮುದಾಯ ಜಲಾಶಯ ನಿರ್ವಹಣೆ

ಬರಗಾಲಗಳಿಗೆ

 • ಸುಧಾರಿತ ನೀರಾವರಿ ಪದ್ಧತಿಗಳು
 • ಜಲಾಶಯಗಳಲ್ಲಿ ನೀರು ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸುವಿಕೆ
 • ಮಳೆನೀರು ಸಂಗ್ರಹಣಾಗಾರಗಳನ್ನು ನಿರ್ಮಿಸುವಿಕೆ
 • ಬರಗಾಲ ನಿರೋಧಕ ಬೆಳೆಗಳನ್ನು ಬೆಳೆಯುವಿಕೆ
 • ಬರಗಾಲ ಮುನ್ಸೂಚನೆಗಳ ವ್ಯವಸ್ಥೆ ಸುಧಾರಣೆ
 • ಬಿತ್ತನೆ ದಿನಾಂಕಗಳನ್ನು  ಸರಿಹೊಂದಿಸುವಿಕೆ
 • ಹೊದಿಕೆ ಹೊದಿಸುವುದು, ಸಂರಕ್ಷಣೆ, ಇತರ ಮೂಲಗಳಿಂದ ಮಣ್ಣು ನಿರ್ವಹಣೆ.

ನಾವು ಏನು ಮಾಡಬಹುದು?

 • ಅಂತರ-ಬೆಳೆ ಬೆಳೆಯುವಿಕೆ ಮತ್ತು ಸೂಕ್ತ ಬೆಳೆ ಮಾದರಿಗಳು/ಸರದಿ ಬೆಳೆಗಳು/ಭೂಬಳಕೆ ಮೂಲಕ ಬೆಳೆ ವೈವಿಧ್ಯತೆ ಹೆಚ್ಚಿಸಬೇಕು.
 • ವಿಭಿನ್ನ ಬಗೆಯ ಕೃಷಿ-ಹವಾಗುಣಗಳಿಗೆ ಸೂಕ್ತವಾಗುವಂತೆ ಭೂಮಿ/ ನೀರಿನ ಸಂರಕ್ಷಣೆಯ ಕೃಷಿ ವಿಧಾನಗಳನ್ನು ಅನುಸರಿಸಬೇಕು.
 • ಜೀವಿನಾಶಕಗಳು/ ರಸಾಯನಿಕಗಳನ್ನು ಸಮತೋಲವಾಗಿ ಬಳಸಬೇಕು
 • ಮಣ್ಣಿನಲ್ಲಿ ಇಂಗಾಲ ಸ್ಥಿರೀಕರಣ ಹೆಚ್ಚಿಸಲು ಆಳ-ಬೇರು ಬಿಡುವ ಬೆಳೆಗಳನ್ನು ಬೆಳೆಯುವುದರಿಂದ ಇಂಗಾಲದ ಗುರುತುಗಳನ್ನು ಕಡಿಮೆಮಾಡಬಹುದು.
 • ನೀರನ್ನು ನ್ಯಾಯಪೂರ್ಣವಾಗಿ ಬಳಸಬೇಕು; ಒಂದು ಘಟಕ ನೀರಿಗೆ / ಹೆಚ್ಚಿನ ಬೆಳೆ (SRI ಅಥವಾ ಅರೆ ನೀರಾವರಿ ಬತ್ತದ ಬೆಳೆ ವಿಧಾನವನ್ನು ಬತ್ತದ ಏಕಸಾಕಣೆ ವಿಧಾನಕ್ಕೆ ಬದಲಾಗಿ ಅನುಸರಿಸಬೇಕು)
 • ಇಂಗಾಲದ ಆಘಾತಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡಬೇಕು.
 • ಸಣ್ಣಪ್ರಮಾಣದ ಹವಾಮಾನ ಅವಲೋಕನಾಲಯಗಳನ್ನು ತಮ್ಮ ಹಳ್ಳಿಗಳಲ್ಲಿ ಸ್ಥಾಪಿಸಿಕೊಳ್ಳುವಂತೆ ರೈತರ ಗುಂಪುಗಳಿಗೆ ಶಿಕ್ಷಣ ನೀಡಬೇಕು.
 • ಮಣ್ಣಿನ ರಸಗುಣದ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಮಣ್ಣಿನ – ಆರೋಗ್ಯದ ಕಾರ್ಡುಗಳನ್ನು ಬಳಕೆಮಾಡುವುದನ್ನು ಅನುಸರಣೆ ಮಾಡಬೇಕು.