ಹೊಸಬಂಡಿ ಮೇಲೆ ಹಸುವಿನ ಗೊಬ್ರತಂದೆ
ಹಸಿರ ಭೂದೇವಿ ಹಾಕ್ತೇನೆ ನನ ತಾಯವ್ವ
ಹಸಿದ ಕಂದಯ್ನ ಕಾಯವ್ವ

ಹೂಡೋದು ಹೊಸ ಎತ್ತು ಹೂಡ್ಯಾನು ಹೊಸಮಗ
ಕೂಗು ಕೇಳಮ್ಮ ಭೂದೇವಿ ನಿನಮಗ
ಸೆರಗು ಕಟ್ಟವನೆ ದುಡಿಯೋಕೆ

ಭೂದೇವಿ ನೀಡವ್ವ ಭಾರಿ ಪೈರಾಗಲವ್ವ
ಬಡವನ ಹರಕೆ ಕೇಳವ್ವ ಭೂಮಿತಾಯಿ
ನಿನ್ಗೆ ಜೋಡಿ ಹಣ್ಕಾಯಿ ಹೊಡಿಸೇನು

ಮಾರುದ್ದ ಪೈರಾಗಲಿ ಮೊಳುದುದ್ದ ತೆನೆಯಾಗಲಿ
ಬಡವನ ಮನೆಗೆ ಸಿರಿಬರಲಿ ಭೂಮಿತಾಯಿ
ಕಂದಯ್ನ ಹಸಿವು ಇಂಗೋಗ್ಲಿ

ಭೂಮಿತಾಯಿ ಬಸುರಾಗಿ ಹಸುರುಡಗೆ ಉಟ್ಕೊಂಡು
ಮೊಸರು ಅನ್ನಕೆ ಬ್ರಮಿಸಾಳೆ
ಆ ಊರ ಗೌಡನು ಕರಸವನೆ ಹೆಸವಂತರ
ಮಾಡೀಸನಾಗ ಮೊಸರನ್ನ-ಹಸಿರು ವನದಾಗೆ ಎರಚಾನೊ

ಹನ್ನೆರಡು ಎತ್ತಿನ ಬಾರಿ ಹೊನ್ನೆ ಗಂಬದ ಮೇಟಿ
ಚಿನ್ನದ ಕೊಂಬೀನ ಬಸವಣ್ಣ ತುಳಿದ್ಯಾವೊ
ಚೆನ್ನಿಗನಣ್ಣಯ್ನ ಕಳದಲ್ಲಿ